Monday, April 12, 2021

ಮದುವೆಗೆ ಮುನ್ನ ಸೈನ್ ಥೀಟಾ ಕಷ್ಟ ಕಷ್ಟ, ಬಳಿಕ ಅದೇ ಬೆಸ್ಟೋ ಬೆಸ್ಟು!

♦ ನಂದಿನಿ ವಿಶ್ವನಾಥ ಹೆದ್ದುರ್ಗ
response@newsics.com
newsics.com@gmail.com

 
ಎಲ್ಲ ಸಬ್ಜೆಕ್ಟ್’ನಲ್ಲೂ ಭಾರೀ ಹಾರಾಡುತ್ತಿದ್ದ ನಾನು ಮ್ಯಾತ್ಸ್ ಪಿರಿಯಡ್ ಬಂದಾಗ ಮಾತ್ರ ಚಿಪ್ಪಿಲ್ಲದೇ ಬಚ್ಚಿಟ್ಟುಕೊಳ್ಳುವ‌ ಆಮೆ!ಟ್ರಿಗ್ನಾಮೆಟ್ರಿಯ ಸೈನ್ ಥೀಟಾ ಕಾಸ್ ಥೀಟಾ ನನ್ನ ಪಿಯುಸಿಯಂತಹ ಸೊಗದ ದಿನಗಳನ್ನು ನರಕಕ್ಕೆ ದೂಡಿದ್ದವು. ಇಂತಿಪ್ಪ ನನಗೆ ಮದುವೆ ಮಾಡಿ ಟ್ರಿಗ್ನಾಮೆಟ್ರಿಯಿಂದ ಮುಕ್ತಿ ಕೊಡಿಸ್ತೀನಿ ಅಂದರೆ ಸ್ವರ್ಗ ಮೂರೇ ಗೇಣಿಗೆ ಸಿಗಲಾರದೇ ನೀವೇ ಹೇಳಿ?

          


 ಇದು ನಲ್ವತ್ತು ವರ್ಷದ ಹಿಂದಿನ ಮಾತು.
ಆಗಿನ ಏಕೋಪಧ್ಯಾಯ ಶಾಲೆಯಲ್ಲಿ ಬರ್ತ್ ಸರ್ಟಿಫಿಕೇಟ್ ಆಧಾರದ ಮೇಲೆ ಕೆಜಿ ಕ್ಲಾಸಿಗೆ ಸೇರಿಸುವ ಗೋಜಿರಲಿಲ್ಲ.
ಇನಫ್ಯಾಕ್ಟ್..
ಆಗೆಲ್ಲಾ ಹಳ್ಳಿಯಲ್ಲಿ ಗ್ರಾಮ್ ಕ್ಲಾಸು, ಕೆಜೀ ಕ್ಲಾಸ್ ಇರಲೇ ಇಲ್ಲ…
ಮೊದಲ ಮಣೆ ಒಂದನೆ ಕ್ಲಾಸು.
ಎರಡನೇ ಮಣೆ ಎರಡನೇ ಕ್ಲಾಸು..
ಮೂರನೇ ಮಣೆ ಮೂರನೇ…
ಹೀಗೆ… ಐದರವರೆಗೂ ಇರ್ತಿತ್ತು…
ನಾನು ಅಣ್ಣನಿಗಂಟಿಕೊಂಡೇ ಇದ್ದವಳಾದ್ದರಿಂದ ಅಣ್ಣ ಐದು ವರ್ಷಕ್ಕೆ ಒಂದನೇ ತರಗತಿಗೆ ಸೇರಿದಾಗ ಮೂರು ವರ್ಷದವಳಾದ ನಾನೂ ಅಣ್ಣನ ಜತೆಗೇ ಮೊದಲ ಮಣೆಯಲ್ಲಿ ಕುಳಿತು ಓದಿ.
ಹದಿಮೂರಕ್ಕೆ ಎಸ್ಸೆಸ್ಸೆಲ್ಸಿ ಮುಗಿಸಿ
ಹದಿನೈದಕ್ಕೆ ಪಿಯುಸಿ ಮುಗಿಸಿ
ಹದಿನಾರಕ್ಕೆ ಬಿಎಸ್ಸಿ ಪದವಿಗೆ ಸೇರಿದ್ದೆ.
ಪಿಯೂಸಿ ಮೈಸೂರಿನಲ್ಲಿ ಮುಗಿಯಿತಾದರೂ ಅಪ್ಪನಿಗೆ ಓಡಾಟ ಕಷ್ಟ ಅಂತ ಬಿಎಸ್ಸಿಗೆ ನಮ್ಮದೇ ಜಿಲ್ಲಾ ಕೇಂದ್ರವಾದ ಹಾಸನಕ್ಕೆ ಸೇರಿಸಿದ್ದರು.
ಪದವಿ ತರಗತಿಗಳು ಆರಂಭವಾಗಿ ಮೂರು ತಿಂಗಳಾಗಿತ್ತಷ್ಟೆ.
ಅಪ್ಪ ಒಂದು ಶುಕ್ರವಾರ ಹಾಸ್ಟೆಲ್ಲಿಗೆ ಬಂದವರು ವಾರ್ಡನ್ ಅಪ್ಪಣೆ ಪಡೆದು ಮನೆಗೆ ಕರೆದುಕೊಂಡು ಹೋದರು.
ಹಾಸ್ಟೆಲ್’ನ ಉಪ್ಪುಕಾರವಿರದ ಊಟಕ್ಕೆ ಬೇಸತ್ತಿದ್ದ ನಾಲಿಗೆ ಅಮ್ಮನ ಅಡುಗೆ ಮನೆ ನೋಡುತ್ತಲೇ ಬಾರಿ ಬಾರಿ ಆ್ಯಕ್ಟೀವ್ ..
ಅದರೂ ಒಳಮನದಲೊಂದು ಅನುಮಾನ..
ಅಪ್ಪ ಯಾಕೆ ಹೀಗೆ ನಾಳೆ ಕ್ಲಾಸಸ್ ಮಿಸ್ ಮಾಡಿಸಿ ಕರ್ಕೊಬಂದಿರಬಹುದು.?
ಓದು, ಪಾಠ, ಪರೀಕ್ಷೆ ಅಂದರೆ ವಿಪರೀತ ಶಿಸ್ತಿನ ಅಪ್ಪ ಕರಕೊಂಡು ಬಂದಿದ್ದಾದರೂ ಯಾವ ಕಾರಣಕ್ಕಾಗಿ?
ರಾತ್ರಿ ಊಟ ಮಾಡೋ ಟೈಮಲ್ಲಿ ಗುಟ್ಟು ಹೊರಬಂತು.
ನಾಳೆ ಗಂಡು ನೋಡಲಿಕ್ಕೆ ಬರತಾರೆ..!
ನನಗಾ…?
ಹುಬ್ಬು ಎತ್ತರಕ್ಕೇರಿ ಮೊಗ ಪ್ರಶ್ನಾರ್ಥಕ ಚಿಹ್ನೆ ..!
ನಾನು ಮದುವೆ ಮಾಡಿಕೊಳುವಷ್ಟು ದೊಡ್ಡವಳಾಗಿದ್ದೀನಾ…?
ಅಯ್ಯಬ್ಬಾ…!!
ಆದರೂ ವಯಸ್ಸಿಗೆ ಸಹಜವಾದ ಕುತೂಹಲ..
ಈಗಿನಂತೆ ಆಗಲೂ
ಮಾಮೂಲು ಹದಿವಯಸ್ಸಿನ ಸಮಸ್ಯೆ.!
ಇನ್ನೊಂದು ಗುಟ್ಟಿದೆ.
ಅಮ್ಮ ನನ್ನ ಕಣ್ಣಿಗೆ ತ್ರಿಲೋಕ ಸುಂದರಿಯಾಗಿ ಕಾಣ್ತಿದ್ದಳು.
ಯಾರಾದರೂ ನನ್ನ ನೋಡಲು ಬಂದವರು ಅಮ್ಮನನ್ನೇ ಹುಡುಗಿ ಅಂತ ಒಪ್ಕೋಬಿಟ್ರೆ…!?
ನಿಜಕ್ಕೂ ಯೋಚಿಸಬೇಕಾದ ವಿಚಾರ ತಾನೇ?
ಇನ್ನೊಂದು ತಮಾಷೆ ಅಂದ್ರೆ…
ಅಪ್ಪ ನನ್ನ ಬಳಿ ‘ಗಂಡು ನೋಡಲಿಕ್ಕೆ ಬರ್ತಾರೆ’
ಅಂದರೂ
ನಂಗೀಗಲೇ ಮದುವೆ ಬೇಡ ಅಂತ ಒಂದು ಸರಿಯಾದ್ರೂ ಫಿಲ್ಮೀ ಸ್ಟೈಲಲ್ಲೂ ಡೈಲಾಗ್ ಹೊಡಿಲಿಲ್ಲ…
ಹುಟ್ಟಿದಾಗಿಂದ ಹದಿನಾರರವರೆಗೆ
ಹತ್ತು ಹನ್ನೆರಡು ಸಿನಿಮಾ ನೋಡಿದ್ದರೂ ಅದಾವುದೂ ಅಪ್ಪ ಗುಟ್ಟು ಬಿಚ್ಚಿಟ್ಟ ಆ ರಾತ್ರಿ ಉಪಯೋಗಕ್ಕೆ ಬರಲೇ ಇಲ್ಲ..
ಅಥವಾ
ಒಂದಾದರೂ
ಮದುವೆ ಕನಸೂ ಬೀಳಲಿಲ್ಲ…
ಒಂದೇ ಒಂದು ಖುಷಿ..!!!
ಸೈನ್ ಥೀಟಾ, ಕಾಸ್ ಥೀಟಾ ಟ್ಯಾನ್ ಥೀಟಾದಿಂದ ನಾನಿನ್ನು ಮುಕ್ತ.. ಮುಕ್ತ..
ಒಂದು ಮಾತಿದೆ.
ಹೇಳಲೇಬೇಕು.
ನಾನು ಒಂದನೇ ತರಗತಿಯಿಂದ ಹತ್ತರವರೆಗೂ ಬೆಷ್ಟಂದರೆ ಬೆಷ್ಟು ಸ್ಟೂಡಂಟು..
ರೇಂಕೂ ಬೇರೆ.
ಆಗಿನ ಅಲಿಖಿತ ನಿಯಮದಂತೆ ಹತ್ತರಲ್ಲಿ ಫಸ್ಟ್ ಕ್ಲಾಸ್ ಪಾಸಾದವರೆಲ್ಲಾ ಸೈನ್ಸು ತಗೋಬೇಕು. ಸೆಕೆಂಡ್ ಕ್ಲಾಸು ಕಾಮರ್ಸು, ಥರ್ಡು ಆರ್ಟ್ಸ್.
ದುರದೃಷ್ಟವಶಾತ್ ನಾನು ಫರ್ಸ್ಟ್ ಕ್ಲಾಸಲ್ಲೇ ಪಾಸಾಗಿಬಿಟ್ಟೆ.
ಮತ್ತು ನಿಯಮಾನುಸಾರ ಸೈನ್ಸೇ ತಗೊಂಡೆ.
ಉಳಿದ ಎಲ್ಲ ಸಬ್ಜೆಕ್ಟನಲ್ಲೂ ಬಾರಿ ಹಾರಾಡುತ್ತಿದ್ದ ನಾನು ಮ್ಯಾತ್ಸ್ ಪಿರಿಯಡ್ ಬಂದಾಗ ಮಾತ್ರ ಚಿಪ್ಪಿಲ್ಲದೇ ಬಚ್ಚಿಟ್ಟುಕೊಳ್ಳುವ‌ ಆಮೆ.!
ಟ್ರಿಗ್ನಾಮೆಟ್ರಿಯ ಸೈನ್ ಥೀಟಾ ಕಾಸ್ ಥೀಟಾ ನನ್ನ ಪಿಯುಸಿಯಂತಹ ಸೊಗದ ದಿನಗಳನ್ನು ನರಕಕ್ಕೆ ದೂಡಿದ್ದವು.
ಇಂತಿಪ್ಪ ನನಗೆ ಮದುವೆ ಮಾಡಿ ಟ್ರಿಗ್ನಾಮೆಟ್ರಿಯಿಂದ ಮುಕ್ತಿ ಕೊಡಿಸ್ತೀನಿ
ಅಂದರೆ ಸ್ವರ್ಗ ಮೂರೇ ಗೇಣಿಗೆ ಸಿಗಲಾರದೇ ನೀವೇ ಹೇಳಿ?
ಅಂತೂ ನಾಳೆ ಬಂತು.
ನಾನು ಗಂಡನ್ನು ನೋಡದೆಯೇ ಆಲ್ಝೀಬ್ರಾ, ಅರ್ತಮೇಟಿಕ್’ನ್ನು ಅದಾಗಲೇ ಗುಡಿಸಿ ಜಾಡಿಸಿ ನನ್ನ ಸುತ್ತಲಿಂದ ದೂರ ಬಿಸಾಡಿ ಆಗಿತ್ತು.
ಅಮ್ಮನ ಹತ್ತಿಯ ಗುಲಾಬಿ ಬಣ್ಣದ ಸೀರೆಗೆ ಅಮ್ಮನದ್ದೇ ಬ್ಲೌಸನ್ನು ಪಿನ್ನು ಹಾಕಿ ಚಿಕ್ಕದು ಮಾಡಿ ಉಟ್ಟೆನಾದರೂ ಅಮ್ಮ ಯಾಕೋ ನಂಗಿಂತ ವಿಪರೀತ ಚಂದ ಕಾಣಿಸ್ತಿದಳಲ್ಲಾ ಅನಿಸಿ ಅಸೂಯೆ ಆಗತೊಡಗಿ ಅಮ್ಮಂಗೆ ಸಡನ್ ಶೀತ ಆಗಿ ಮೂಗು ಸೋರಲಪ್ಪಾ ದೇವರೇ ಅಂತ ಬೇಡಿಕೊಂಡಿದ್ದೂ ಆಯ್ತು..
ಮಧ್ಯಾಹ್ನ ಹನ್ನೆರಡೂವರೆಗೆ ಗಂಡಿನವರು ಬಂದರು‌.
ಚಂದದ ಅಂಬಾಸಿಡರ್ ಕಾರು.. ಗಣಿತವನ್ನು ಗುಡಿಸಿ ಹೊರಹಾಕಿದ್ದಕ್ಕೋ ಏನೋ..ನನ್ನ ಮುಖವೂ ಪಳಪಳ ಹೊಳಿತಾ ಇತ್ತು..
ಸಿನೆಮಾದಲ್ಲಿ ತೋರಿಸುವಂತೆ ನಾನೇನು ಇಣುಕಿಗಿಣುಕಿ ನೋಡಲಿಲ್ಲ ಅನ್ನಿ.
ಹುಡುಗನ ಅಪ್ಪ ಬಹಳ ಗಾಂಭೀರ್ಯದಿಂದ ಕುಳಿತು ಅಪ್ಪನೊಡನೆ ಲೋಕಾಭಿರಾಮ ಮಾತಾಡ್ತಿದ್ರು.
ಐದಾರು ನಿಮಿಷದ ನಂತರ ಅಮ್ಮ ನನ್ನ ಕೈಯಲ್ಲಿ ನಾಲ್ಕು ಮಂದಿಗೆ ನಾಲ್ಕು ಥರದ ಲೋಟದಲ್ಲಿ ಜ್ಯೂಸ್ ಹಾಕಿ ಕಳಿಸಿಕೊಟ್ರು..
ನಾನು ಅಮ್ಮನ ಮುಖ ನೋಡಿದೆ.
ದೇವರೇನೂ ನನ್ನ ಮಾತು ಕೇಳಿದ ಹಾಗೆ ಕಾಣಲಿಲ್ಲ..
ಅಮ್ಮನಿಗೆ ಶೀತಗೀತ ಆಗಿರಲಿಲ್ಲ..
ಖುಷಿಯಲಿದ್ದರಿಂದ ಇನ್ನೂ ಚಂದ ಕಾಣ್ತಿದ್ಳು.
ಸಣ್ಣ ಬೇಸರದಲ್ಲಿ ಜ್ಯೂಸ್ ಟ್ರೆ ಹಿಡಿದು ಮೊದಲ ಬಾರಿ ಸೀರೆ ಉಟ್ಟು ತೊಡರು ಹೆಜ್ಜೆ ಹಾಕುತ್ತಾ ತುದಿಯಲ್ಲಿ ಕುಳಿತಿದ್ದ ಅಪ್ಪನೆದಿರು ಟ್ರೇ ಹಿಡಿದೆ..
ಅಪ್ಪ ಮೊದಲು ಅವರಿಗೆ ಕೊಡು ಎನುವಂತೆ ತೋರಿದರು.
ಎರಡನೇ ಹೆಜ್ಜೆ ಇಡುವಷ್ಟರಲ್ಲಿ ಒಂದು ಲೋಟದ ಭಾರ ಇಳಿಕೆ ಆಗುವುದರ ಖುಷಿಯಲಿದ್ದ ನಂಗೆ ಅಪ್ಪ ಹಾಗೇ ಹೇಳಿದ್ದು ಕೋಪ ಬಂದಿತಾದರೂ ಮುಂದೆ ಬಿಳಿ ಶರ್ಟು ಕಪ್ಪು ಪ್ಯಾಂಟು ಧರಿಸಿದ್ದ ಕಪ್ಪಗಿನವರ ಮುಂದೆ ಟ್ರೆ ಹಿಡಿದೆ. ಅವರೂ ನನ್ನ ನೋಡಿದರಾದರೂ ನಾನೇನು ಅಷ್ಟು ಆಸ್ಥೆ ವಹಿಸಿ ನೋಡಲಿಲ್ಲ.
ಆಮೇಲೆ….
ಹುಡುಗನ ಅಪ್ಪ..
ಅವರು ತಮ್ಮ ಕನ್ನಡಕ ತುಸು ಕೆಳಗೆ ಸರಿಸಿ ಒಮ್ಮೆ ನೋಡಿ.,
ಆಮೇಲೆ ಕನ್ನಡಕದೊಳಗಿಂದ‌ ಮತ್ತೆ ನೋಡಿದರು.
ಪಾಪ..ತಮ್ಮ ಮನೆಯ ಸೊಸೆಯಾಗಬೇಕಾದ ಹುಡುಗಿ ಹೇಗಿದಾಳೆ ಅಂತ ನೋಡ್ತಿದ್ದಾರೆ. ನೋಡಬೇಕಾದ್ದೇ.
ಆದರೆ
ಕೊನೆಯಲ್ಲಿ ನೀಲಿ ಶರ್ಟಿನ ಬೆಳ್ಳನೆಯ ಎತ್ತರವಾದ ಹುಡುಗ ಕೂತಿದ್ರು. ಸಹಜವಾಗಿ ನೋಡಿ ಜ್ಯೂಸ್ ಲೋಟ ಕೈಗೆ ತೆಗೆದುಕೊಂಡರು.
ನಾನೂ ನೋಡಿದೆ.
ಅಬ್ಬಾ…ಚಂದ ಇದಾರೆ …!
ಓಹೋ ಓಹೋ…ಆಹಾಆಹಾ….!
ಖುಷಿಯೋ ಖುಷಿ…!
ಟ್ಯಾನ್ ತೀಟಾಕ್ಕೆ ಟಾಟಾ ಹೇಳಿ
ಇಂಥ ಚಲುವನ ಹೆಂಡತಿಯಾಗುವುದೂ ಅದೃಷ್ಟವೇ ತಾನೇ..?
ಕೆನ್ನೆ ಕೆಂಪಾಗಿಸಿಕೊಂಡು ಒಳಬಂದವಳಿಗೆ
ಕಾಲು ನೆಲದ ಮೇಲೆ ಇರಲೇ ಇಲ್ಲ…
ನನ್ನ ನೋಡಲು ಬಂದ ಮೊದಲ ಗಂಡೇ ಎಂಥ ಚಲುವ..!
ಒಪ್ಪಿಕೊಳ್ಳದೇ ಇರಲು ನಾನ್ಯಾತರಲ್ಲಿ ಕಡಿಮೆ.?
ಮತ್ತೆ ಕನ್ನಡಿ ನೋಡಿಕೊಂಡೆ.
ಮೊದಲ ಬಾರಿಗೆ ನಾನು ಅಮ್ಮನಿಗಿಂತ ಚಲುವೆ ಅಂತ ಅನಿಸಿತು.
ಊಟ ಮುಗಿದು ಮತ್ತೆ ಹತ್ತು ನಿಮಿಷ ಮಾತಾಡ್ತಿದ್ರು ಜಗುಲಿಯಲ್ಲಿ‌.
ಆಗಲೇ ತಿಳಿದಿದ್ದು…
ಬೆಳ್ಳಗಿನ, ಎತ್ತರದ, ನೀಲಿ ಅಂಗಿಯವ ಹುಡುಗನ ಗೆಳೆಯ.
ಇಂಜಿನಿಯರಿಂಗ್ ಮುಗಿದು ಕೆಲಸ ಮಾಡ್ತಿದ್ದಾನೆ. ಸದ್ಯದಲ್ಲೇ ವಿದೇಶಕ್ಕೂ ಹೋಗುವವನಿದ್ದಾನೆ.
ಅಪ್ಪನ ಪಕ್ಕ ಕುಳಿತಿದ್ದ ಕಪ್ಪು ಬಣ್ಣದವನೇ ಮದುವೆ ಹುಡುಗ..
ಕಪ್ಪನ್ನು ಹೇಗಾದರೂ ಸರ್ಫನಲ್ಲಿ ತೊಳೆಯಬಹುದು.
ಅದಲ್ಲ ವಿಷಯ.
ಆದರೆ ಹುಡುಗ ನನ್ನಷ್ಟೇ ಎತ್ತರ.
ನಾನು ನೋಡಿರುವ ಅಪ್ಪ, ಚಿಕ್ಕಪ್ಪ, ದೊಡ್ಡಪ್ಪಗಳೆಲ್ಲಾ ತಮ್ಮ ತಮ್ಮ ಹೆಂಡಿರಿಗಿಂತ ಬಹಳ ಬಹಳ ಎತ್ತರ
ಚಿಕ್ಕಂದಿನಿಂದ ಗಂಡ ಅಂದರೆ ಎತ್ತರದವ ಅಂತಲೇ ತಿಳಿದಿದ್ದವಳು ನಾನು.
ಹಾಗಿದ್ದಾಗ
ನನ್ನಷ್ಟೇ ಎತ್ತರದವನನ್ನು ಹುಡುಗ, ನನ್ನ ಗಂಡ ಅಂತ ಹೇಗೆ ಒಪ್ಪಿಕೊಳ್ಳಲಿ..?
ಅಷ್ಟರಲ್ಲಾಗಲೇ ಹುಡುಗನ ತಂದೆ ನಮಗೆ ಹುಡುಗಿ ಒಪ್ಪಿಗೆ ಆಗಿದ್ದಾಳೆ. ನೀವೂ ಒಮ್ಮೆ ನಮ್ಮ ಮನೆಗೆ ಬಂದು ಹೋಗಿ ಅಂತಿದ್ರು.
ಮದುವೆ ಮಾಡಿಕೊಳ್ಳಬೇಕಾಗಿದ್ದ ನಾನು ಮಾತ್ರ ಹುಡುಗನ ಎತ್ತರದ ಸಮಸ್ಯೆಯನ್ನು ಜಾಗತಿಕ ಮಟ್ಟದ್ದಾಗಿಸಿಕೊಂಡು ಹೊಯ್ದಾಡುತಿದ್ದೆ..
ಟ್ರಿಗ್ನಾಮೆಟ್ರಿಯೋ…?
ಕಡಿಮೆ ಎತ್ತರದ ಗಂಡನೋ..?
ಅಳೆದು ತೂಗಿ ಇಳುಕಿ ಹೊತ್ತು ಕೊನೆಗೂ ತೀಟಾಕ್ಕಿಂತ ಮದುವೆಯೇ ಓಕೆ ಎನಿಸಿ ಓಕೆ ಕೊಟ್ಟೆ ಅಂದರೆ ಸುಳ್ಳಾದೀತು..
ಮದುವೆ ಒಪ್ಪಿಗೆಯಾ ಅಂತ ಯಾರೂ ನನ್ನ ಕೇಳಲಿಲ್ಲ.
ನಾನೂ ಗಣಿತ ಕಷ್ಟ ಆಗ್ತಿದೆ ಅಂತ ಯಾರಲ್ಲೂ
ಹೇಳಲಿಲ್ಲ.

ಅಂತೂ ಇಂತೂ ಹದಿನಾರಕ್ಕೇ ಮದುವೆ ಆಗಿ ಸಂಸಾರ ಭಾರ ಹೊತ್ತ ಮೇಲೆ ಜ್ಞಾನೋದಯ ಆಯ್ತು..
“ಟ್ರಿಗ್ನಾಮೆಟ್ರಿ ಬಹಳ ಬಹಳ ಸುಲಭ…!”

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!