Saturday, December 2, 2023

ಕಣ್ಣಾಮುಚ್ಚೇ ಕಾಡೇ..ಗೂಡೇ!

Follow Us

– ಡಾ.ನಾಗೇಶ್ ಅರಕೇರಿ

ಕೆಲಸದ ಒತ್ತಡ ಹೆಚ್ಚಾಗಿ ತಲೆ ಕೆಟ್ಟು ಕೆರ ಹಿಡಿದಿತ್ತು. ಸಾಕಪ್ಪಾ ಈ ಜೀವನ.. ಕೆಲಸಾನೂ ಬೇಡ ಏನೂ ಬೇಡ ಎಲ್ಲಾದರೂ ಹೋಗಿಬಿಡೋಣ ಅನ್ನೋಷ್ಟು ಜಿಗುಪ್ಸೆ ಬಂದಿತ್ತು. ಅಷ್ಟರಲ್ಲಿ ಫೋನ್ ರಿಂಗಾಯ್ತು, ಶಿವ ಕಾಲ್ ಮಾಡಿದ್ದ.

“ಮಗಾ ಈ ವೀಕೆಂಡ್ ರಂಜಿತಾ ಮನೆಗೆ ಹೋಗೋಣ ಅಂತಾ ಪ್ಲಾನ್ ಮಾಡಿದ್ದೀವಿ ನೀನೂ ಬರ್ತೀಯಾ ನಮ್ ಜೊತೆ?” ಕೇಳಿದ.

“ಯಾವ ರಂಜಿತಾನೋ? ನನಗೆ ಗೊತ್ತಿಲ್ಲ! ಹೀಗೆ ಸಡನ್ನಾಗಿ ಬಾ ಅಂದ್ರೆ !!?”

“ಓಹ್ ಸಾರಿ.. ನಿನಗೆ ರಂಜಿತಾ ಗೊತ್ತಿಲ್ವಲ್ಲ! ಪರವಾಗಿಲ್ಲ ಬಾ ಪರಿಚಯ ಮಾಡಿಸ್ತೀನಿ. ಹರೀಶ ಮತ್ತೆ ಗುರು ಕೂಡ ಬರ್ತಾರೆ. ನೀನು ಬರ್ತಿದ್ದೀಯಾ ಅಷ್ಟೇ. ಶನಿವಾರ ಬೆಳಗ್ಗೆ ಐದೂವರೆ ಘಂಟೆಗೆ ಬಂದು ಪಿಕ್ ಮಾಡ್ತೀನಿ” ಎಂದು. ನನ್ನ ಉತ್ತರಕ್ಕೂ ಕಾಯದೇ ಕಾಲ್ ಕಟ್ ಮಾಡಿದ.

ಒಂದು ಕ್ಷಣ ಶಿವು ಮೇಲೆ ಸಿಟ್ಟು ಬಂತು, ಏನು ಅನ್ಕೊಂಡಿದ್ದಾನೆ ಅವನು? ನನಗೇನು ಕೆಲಸ ಕಾರ್ಯ ಇಲ್ಲವಾ ಹೀಗೆ ಕಾಲ್ ಮಾಡಿ ಕರೆದ ತಕ್ಷಣ ಅವನ ಜೊತೆ ಹೋಗಿ ಬಿಡಬೇಕಂತೆ. ನಾನು ಹೋಗಲ್ಲ ವೀಕೆಂಡ್ ಬೇರೆ ಕೆಲಸದ ಪ್ರೆಶರ್ ಜಾಸ್ತಿ!! ಅಂದುಕೊಂಡೆ…ಮತ್ತೊಮ್ಮೆ ಆಲೋಚಿಸಿದೆ, ಈಗ ತಾನೇ ಜಿಗುಪ್ಸೆ ಬಂದು ಎಲ್ಲಾದರೂ ಹೋಗಿಬಿಡೋಣ ಅಂದುಕೊಂಡಿದ್ನಲ್ಲ! ಪಾಪ ಶಿವು ಕರೆಕ್ಟ್ ಟೈಮಿಗೆ ಕಾಲ್ ಮಾಡಿದ್ದಾನೆ. ಈ ಕೆಲಸ ಹಾಳಾಗಿ ಹೋಗ್ಲಿ ನಾಳೆ ಅವನ ಹೇಳಿದ ಟೈಮಿಗೆ ರೆಡಿ ಆಗಬೇಕು ಅಂದುಕೊಂಡೆ. ಆದರೆ, ಅವನು ಎಲ್ಲಿ ಹೋಗ್ತಿದ್ದೀವಿ ಅಂತ ಹೇಳಲಿಲ್ಲ! ಸುಡುಗಾಡಿಗಾದರೂ ಕರಕೊಂಡು ಹೋಗ್ಲಿ, ಒಟ್ನಲ್ಲಿ ಈ ಹಾಳು ಬೆಂಗಳೂರಿಂದ ಎರಡು ದಿನ ದೂರ ಹೋದ್ರೆ ಸಾಕು.

ಶನಿವಾರ ಬೆಳಗ್ಗೆ ನಾಲ್ಕು ಘಂಟೆಗೇ ಎದ್ದು ರೆಡಿ ಆಗ ತೊಡಗಿದೆ! ಬೇರೆ ದಿನ ಆದ್ರೆ ಎಂಟು ಘಂಟೆ ಆದ್ರೂ ಕಣ್ಣು ಬಿಟ್ಟಿರಲ್ಲ!! ಈ ತರಹ ಎಲ್ಲಾದರೂ ಊರು ಸುತ್ತಕ್ಕೆ ಹೋಗೋದು ಅಂದ್ರೆ ಊರಿಗಿಂತ ಮುಂಚೆ ಎದ್ದು ಬಿಡ್ತೀನಿ..ಐದು ಘಂಟೇಗೆಲ್ಲಾ ರೆಡಿಯಾಗಿ ಶಿವುಗಾಗಿ ಕಾದು ಕುಳಿತೆ. ಐದುವರೆಗೇನೆ ಬರ್ತೀನಿ ಅಂದವನು ಐದೂ ಮುಕ್ಕಾಲಾದ್ರೂ ಆಸಾಮಿ ಪತ್ತೆ ಇಲ್ಲ. ಥೂ ಇವನದು ಯಾವಾಗಲೂ ಇದೇ ಗೋಳು. ಹೇಳಿದ ಟೈಮಿಗೆ ಒಂದು ದಿನಾನೂ ಬಂದಿಲ್ಲ! ಅಂತ ಬೈಕೊಂಡೆ. ನಂದೂ ಯಾವಾಗಲೂ ಇದೇ ಗೋಳು, ಅವನು ಯಾವಾಗಲೂ ಲೇಟಾಗಿ ಬರ್ತಾನೆ ಅಂತ ಗೊತ್ತಿದ್ರೂ ಅವನು ಹೇಳಿದಕ್ಕಿಂತ ಅರ್ದ ಘಂಟೆ ಮುಂಚೇನೆ ರೆಡಿ ಆಗಿ ಕೂರ್ತಿದ್ದೆ… ಹೆಗೋ ಐದು ಐವತ್ತಕ್ಕೆ ಮನೆ ಮುಂದೆ ಕಾರು ಬಂದ ಸದ್ದಾಯಿತು. ಬ್ಯಾಕ್ ಪ್ಯಾಕ್ ಎತ್ತಿಕೊಂಡು ಹೊರಟೆ.

ಶಿವು ಪಕ್ಕದ ಸೀಟಲ್ಲಿ ಅವನ ಗರ್ಲ್ ಫ್ರೆಂಡ್ ಚೈತ್ರ ಕುಳಿತಿದ್ದಳು. ಹಿಂದೆ ಹರೀಶ ಮತ್ತು ರಷ್ಮಿ ಕುಳಿತಿದ್ದರು. ನಾನು ಹರೀಶನ ಪಕ್ಕ ಕೂರುತ್ತಾ..

“ಏನು ಜೋಡಿ ಜೋಡಿಯಾಗಿ ಬಂದಿದ್ದೀರಾ?! ಗುರು ಎಲ್ಲಿ??” ಎಂದು ಕೇಳಿದೆ.

“ಅವನು ಇನ್ನೊಂದು ಕಾರಲ್ಲಿ ಬರ್ತಾನೆ” ಹರೀಶ ಉತ್ತರಿಸಿದ.

“ಯಾಕೆ?”

“ರಮ್ಯ ಆ ಕಾರಲ್ಲಿ ಬರ್ತಿದ್ದಾಳೆ ಅದಕ್ಕೆ” ಎನ್ನುತ್ತಾ ಹರೀಶ ಮತ್ತು ಶಿವ ಜೋರಾಗಿ ನಗತೊಡಗಿದರು.

“ಸರಿ ಇದ್ದೀರಾ ನೀವೆಲ್ಲಾ” ನಾನು ಗೊಣಗಿದೆ.

ಕಾರು ಮುಂದೆ ಹೋಗತ್ತಿತ್ತು, ಕಾರಿನಲ್ಲಿಯೇ ಉಭಯ ಕುಶಲೋಪರಿ ಮುಗಿಯಿತು. ಎಲ್ಲರೂ ಜಾಲಿ ಮಾಡುತ್ತ ಹೋಗುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲಿ ಇನ್ನೊಂದು ಕಾರು ನಿಂತ ಜಾಗಕ್ಕೆ ಬಂದೆವು. ಆ ಕಾರಿನಲ್ಲಿ ಗುರು ಮತ್ತು ರಮ್ಯ ಇದ್ದರು. ಇನ್ನಿಬ್ಬರು ರವಿ ಮತ್ತು ರಂಜಿತಾ. ಶಿವು, ರವಿ ರಂಜಿತಾರನ್ನು ನನಗೆ ಪರಿಚಯಿಸಿದ. ರಂಜಿತಾಳ ಕಣ್ಣುಗಳು ವಿಶಾಲವಾಗಿ ಆಕರ್ಷಕವಾಗಿದ್ದವು. ನಾನಂತೂ ಅವಳ ಕಣ್ಣುಗಳನ್ನು ನೋಡಿ ಅವಳಿಗೆ ಫಿದಾ ಆಗಿಬಿಟ್ಟೆ.

“ಓಹ್ ರಂಜಿತಾ ಇವರೇನಾ?.. ಈಗ ಇವರ ಮನೆಗೆ ಹೋಗ್ತಿರೋದಾ?” ನಾನು ಕೇಳಿದೆ.

“ಹಾ ಹೌದು ಕಣೋ” ಶಿವು ಹೇಳಿದ.

ಒಂದು ಸಣ್ಣ ಟೀ ಬ್ರೇಕಿನ ನಂತರ. ನಮ್ಮ ಪಯಣ ಮುಂದುವರೆಯಿತು. ಮಧ್ಯೆ ಎರಡೂ ಕಾರುಗಳ ರೇಸಿಂಗ್ ಶುರುವಾಯಿತು. ನಮ್ಮ ಕಾರಿನಲ್ಲಿದ್ದ ಚೈತ್ರ ಮತ್ತು ಹರೀಶ ಪುಕ್ಕಲು ಸ್ವಭಾವದವರು. ರೇಸಿಂಗ್ ಎಲ್ಲಾ ಬೇಡ ಪ್ಲೀಸ್ ಎಂದು ಗೋಳಾಡತೊಡಗಿದರು. ಚೈತ್ರ ನನಗೆ ಗೋಗರೆಯತೊಡಗಿದಳು ಪ್ಲೀಸ್ ಶಿವುಗೆ ಹೇಳು. ಅವನು ನಿನ್ನ ಮಾತು ಕೇಳ್ತಾನೆ ಅಂತ. ಹರೀಶ ಹಣೆ ಚಚ್ಚಿಕೊಂಡ. ಯಾಕಂದ್ರೆ ನನ್ನ ಡ್ರೈವಿಂಗ್ ಬಗ್ಗೆ ಹರೀಶನಿಗೆ ಗೊತ್ತಿತ್ತು.

“ಸುಮ್ನಿರಮ್ಮ ಅವನಿಗಿಂತ ಶಿವುನೇ ವಾಸಿ. ಅವನಿಗೆ ತಲೆ ಕೆಟ್ಟು ಕಾರ್ ಡ್ರೈವ್ ಮಾಡಕ್ಕೆ ಶುರು ಮಾಡಿದ್ರೆ ನಾವೆಲ್ಲಾ ಸೀಟ್ ಮೇಲಿರಲ್ಲ ಗಾಳೀಲಿ ಹಾರಾಡ್ತಾ ಇರ್ತೀವಿ” ಅಂದ.

ಹರೀಶನ ಮಾತಿಗೆ ನಾನು ಮತ್ತು ಶಿವು ನಗುತ್ತ ಹೈಫೈ ಕೊಟ್ಟೆವು. ಹೀಗೆ ರೇಸಿಂಗ್ ಜೊತೆಗೆ ಇಷ್ಟ ಬಂದಲ್ಲಿ ಕಾರು ನಿಲ್ಲಿಸಿ ಸೆಲ್ಫಿ ತೆಗೆದುಕೊಂಡು ಜಾಲಿಯಿಂದ ಸಾಗುತ್ತಿದ್ದೆವು. ಸುಮಾರು ಹತ್ತೂವರೆಗೆ ಚನ್ನರಾಯಪಟ್ಟಣ ತಲುಪಿದ್ದೆವು. ಅಷ್ಟು ಹೊತ್ತಿಗೆ ಎಲ್ಲರ ಹೊಟ್ಟೆ ಚುರುಗುಟ್ಟುತ್ತಿತ್ತು. ಅಲ್ಲಿಯೇ ಸ್ವಲ್ಪ ಮುಂದೆ ‘ಅನಘ’ ರೆಸ್ಟೋರೆಂಟ್ ಕಾಣಿಸಿತು. ಕಾರನ್ನು ಅಲ್ಲಿಯೇ ನಿಲ್ಲಿಸಿದೆವು. ಚುರುಗುಟ್ಟುತ್ತಿರುವ ಹೊಟ್ಟೆಗೆ ಸ್ವಲ್ಪ ಕವಳ ತುಂಬಿಸಿಕೊಳ್ಳತೊಡಗಿದೆವು.

ಹೀಗೆ ಅಲ್ಲಲ್ಲಿ ನಿಲ್ಲಿಸಿ ರಂಜಿತಾಳ ಮನೆ ತಲುಪುವದರಲ್ಲಿ ಮಧ್ಯಾಹ್ನದ ಊಟದ ಸಮಯ ಮೀರಿತ್ತು. ಅಂದಹಾಗೆ ಅವಳ ಮನೆ ಇದ್ದದ್ದು ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ಒಂದರಲ್ಲಿ. ಪಾಪ ಅವಳ ಮನೆಯವರು ಮಧ್ಯಾಹ್ನದ ಊಟಕ್ಕೆ ನಮ್ಮನ್ನು ಕಾದೂ ಕಾದೂ ಸುಸ್ತಾಗಿದ್ದರು. ರಂಜಿತಾಳ ಮನೆಯಲ್ಲಿ ರಸಗವಳ ಸವಿದು ಒಂದು ಸಣ್ಣ ನಿದ್ದೆ ತೆಗೆದೆವು.

ನಂತರ ಎದ್ದು ಎಲ್ಲಾ ಕಾಫಿ ಎಸ್ಟೇಟ್ ನೋಡಲು ಹೊರಟೆವು. ಎಸ್ಟೇಟ್ ಎಲ್ಲ ಸುತ್ತಾಡಿ ಕಂಡ ಕಂಡಲ್ಲಿ ಫೋಟೋ ಸೆಷನ್ ಮಾಡಿ ಮುಗಿಸಿದೆವು. ರಾತ್ರಿ ಊಟ ಮುಗಿಸಿ ಎಲ್ಲರೂ ಔಟ್ ಹೌಸಿಗೆ ಹೋದೆವು. ರಾತ್ರಿ ಮಲಗುವ ಉದ್ದೇಶವಿರಲಿಲ್ಲ! ಮನೆಯಲ್ಲಿಯೇ ಇದ್ದರೆ ರಂಜಿತಾಳ ಮನೆಯವರು ನಮ್ಮನ್ನು ಖಂಡಿತಾ ಹೊಡೆದು ಓಡಿಸುತ್ತಿದ್ದರು! ಅದಕ್ಕೇ ರಂಜಿತಾ, ಮನೆಯಿಂದ ಸ್ವಲ ದೂರದಲ್ಲಿರುವ ಔಟ್ ಹೌಸಿಗೆ ಕರೆದುಕೊಂಡು ಹೋಗಿದ್ದಳು.

ರಾತ್ರಿ ಫೈರ್ ಹಾಕಿ ಅದರ ಸುತ್ತಲೂ ಕ್ಯಾಂಪಿಂಗ್ ಮಾಡುವ ಉದ್ದೇಶವಿತ್ತು. ಆದರೆ, ಔಟ್ ಹೌಸಿನ ಸುತ್ತ ಹಾವುಗಳ ಕಾಟ, ಹೆಚ್ಚಾಗಿದ್ದಿದ್ದರಿಂದ ಆ ಐಡಿಯಾವನ್ನು ಕೈಬಿಡಲಾಯಿತು. ಸರಿ ಕಾರ್ಡ್ಸ ಆಡೋಣ ಅಂದು ಕೊಂಡು ಕಾರ್ಡ್ಸ್ ಶುರು ಮಾಡಿದರು. ಆದರೆ, ನನ್ನನ್ನೂ ಸೇರಿಸಿ ತುಂಬಾ ಜನಕ್ಕೆ ಕಾರ್ಡ್ ಇಷ್ಟ ಇರಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಅದೂ ಬೋರ್ ಆಗತೊಡಗಿತು.

ಹೇಯ್ ನಂಗೊಂದ್ ಐಡಿಯಾ!” ರಷ್ಮಿ ಮಧ್ಯದಲ್ಲಿ ಮಾತಾಡಿದಳು. ಎಲ್ಲರೂ ಕುತೂಹಲದಿಂದ ಅವಳೆಡೆ ನೋಡಿದರು.

“ನಾವೆಲ್ಲಾ ಈಗ ಕಣ್ಣಾ ಮುಚ್ಚಾಲೆ ಆಡಿದ್ರೆ ಹೇಗೆ!?” ಅವಳ ಪ್ರಶ್ನೆಯಲ್ಲಿ ತುಂಬಾ ಎಕ್ಸೈಟಮೆಂಟಿತ್ತು.

“ಕಣ್ಣಾ ಮುಚ್ಚಾಲೆ ಆಡಕ್ಕೆ ನಾವೇನು ಮಕ್ಕಳಾ?” ಹರೀಶ್ ಕಿಂಡಲ್ ಮಾಡಿ ನಕ್ಕ. ಗುರು ಮತ್ತೆ ರವಿ ಸಹ ನಗಾಡಿದರು.

“ಅವಳು ಹೇಳೋದು ಕರೆಕ್ಟ್ ಸದ್ಯಕ್ಕೆ ನಮಗೂ ಕಾರ್ಡ್ಸ್ ಆಡಿ ಬೋರಾಗಿದೆ. ಇದೊಂತರಾ ಚೆನ್ನಾಗಿರುತ್ತೆ .” ಚೈತ್ರಳಿಗೂ ಸಹ ರಷ್ಮಿಯ ಸಲಹೆ ಮೆಚ್ಚುಗೆಯಾಗಿತ್ತು. ಆದರೆ ಹುಡುಗರಿಗೆ ಅದು ಇಷ್ಟವಾಗಲಿಲ್ಲ. ಮಕ್ಕಳಾಟವೆನಿಸಿತು..!! ಬೇಡವೆಂದರು.

“ಈ ಮಕ್ಕಳಾಟವನ್ನು ಥ್ರಿಲ್ಲಿಂಗ್ ಆಗಿ ಮಾಡಲು ನನ್ನ ಹತ್ರ ಒಂದು ಐಡಿಯಾ ಇದೆ” ನಾನು ಕಣ್ಣು ಹೊಡೆದು ಹೇಳಿದೆ.

“ಏನಪ್ಪ ಅದು ನಿನ್ನ ಥ್ರಿಲ್ಲಿಂಗ್ ಐಡಿಯಾ?” ಶಿವು ಹುಬ್ಬು ಹಾರಿಸಿ ಕೇಳಿದ.

“ನಾವು ಕಣ್ಣಾ ಮುಚ್ಚಾಲೆ ಆಡೋಣ ಆದ್ರೆ ಮನೇಲಿ ಇರೋ ಎಲ್ಲಾ ಲೈಟ್ ಆಫ್ ಮಾಡಿ ಕತ್ತಲೇಲಿ ಆಡೋಣ.. ಥ್ರಿಲ್ಲಿಂಗ್ ಆಗಿರುತ್ತೆ..!! ಆದರೆ ಮಾಮೂಲಿ ಕಣ್ಣಮುಚ್ಚಾಲೆ ಅಲ್ಲ, ಬೇರೆ ತರಹ..”

“ಬೇರೆ ತರಹ ಅಂದ್ರೆ?” ರಷ್ಮಿ ಕೇಳಿದಳು.

“ಅಂದ್ರೆ ..ಒಂತರಹ ಕಣ್ಣಾ ಮುಚ್ಚಾಲೆ ಮತ್ತು ಕಳ್ಳ ಪೋಲಿಸ್ ಮಿಕ್ಸ್ ಮಾಡಿರೋ ಆಟ. ನಾವು ಒಂಭತ್ತು ಜನ ಇದ್ದೀವಲ್ಲ! ಸೋ ಒಂಭತ್ತು ಸ್ಮಾಲ್ ಸ್ಮಾಲ್ ಪೇಪರ್ ಚೀಟಿ ಮಾಡೋದು. ಎಂಟು ಚೀಟಿ ಖಾಲಿ ಬಿಟ್ಟು ಒಂದರಲ್ಲಿ ಮಾತ್ರ ‘ಕಳ್ಳ’ ಅಂತ ಬರಿಯೋದು. ಆಮೇಲೆ ಅದನ್ನೆಲ್ಲ ಮಡಚಿ ಕುಲುಕಬೇಕು. ಎಲ್ಲರೂ ಒಂದೊಂದು ಚೀಟಿ ಆಯ್ಕೆ ಮಾಡ್ಕೊಳ್ಳೋದು. ಒಬ್ಬರು ಮಾತ್ರ ಕಳ್ಳ ಆಗಿರ್ತಾರೆ! ಆದರೆ, ಅದನ್ನು ಅವರು ಯಾರಿಗೂ ಹೇಳಬಾರದು. ಆಗ ಯಾರು ಕಳ್ಳ ಅಂತ ಉಳಿದ ಎಂಟು ಜನಕ್ಕೆ ಗೊತ್ತಿರಲ್ಲ. ಒಬ್ಬರು ಹೋಗಿ ಲೈಟ್ ಆಫ್ ಮಾಡೋದು. ಲೈಟ್ ಆಫ್ ಆದ ತಕ್ಷಣ ಎಲ್ಲರೂ ಹೋಗಿ ಬಚ್ಚಿಟ್ಕೋಬೇಕು. ಸ್ವಲ್ಪ ಹೊತ್ತಾದಮೇಲೆ ಶಬ್ದ ಮಾಡದೇನೆ ಕಳ್ಳನನ್ನು ಹುಡುಕಬೇಕು. ಅಂದ್ರೆ ಅಡಗಿರೋರನ್ನು ಹುಡುಕ್ಕೊಂಡು ಹೋಗೋದು, ಆಗ ಯಾರದರೂ ಒಬ್ಬರು ಸಿಕ್ಕಾಗ ಅವರನ್ನು ‘ಕಣ್ಣಾ ಮಚ್ಚೇ?’ ಅಂತ ಕೇಳೋದು. ಎದುರುಗಡೆಯವನು ಕಳ್ಳ ಅಲ್ಲದಿದ್ದರೆ, ಅವರು ‘ಕಾಡೇ ಗೂಡೇ’ ಅಂತ ಉತ್ತರ ಕೊಡ್ತಾರೆ ಅಂದ್ರೆ ಅವನು ಕಳ್ಳ ಅಲ್ಲ ಅಂತ. ಆಗ ಅವರನ್ನು ಬಿಟ್ಟು ಬೇರೆಯವರನ್ನು ಹುಡುಕೋದು. ಹೀಗೆ ಎಲ್ಲರೂ ನಿಶ್ಯಬ್ದವಾಗಿ ಕಳ್ಳನನ್ನು ಹುಡುಕೋದು. ಆದರೆ ಕಳ್ಳ ಮಾತ್ರ ಯಾರಿಗೆ ಸಿಗದ ಹಾಗೆ ಅಡಗಿರುತ್ತಾನೆ.

ಆಕಸ್ಮಾತ್ ಕಳ್ಳನ ಚೀಟಿ ಇರೋರು ಸಿಕ್ಕಾಗ, ಅವರನ್ನು ‘ಕಣ್ಣಾ ಮಚ್ಚೇ?’ ಅಂತ ಕೇಳಿದಾಗ ಅವರು ಏನೂ ಉತ್ತರ ಕೊಡದೇ ಸುಮ್ಮನಿರಬೇಕು. ಆಗ ಪ್ರಶ್ನೆ ಕೇಳಿದವರು ಕಳ್ಳನ ಬಳಿಯೇ ಕುಳಿತು ಕೊಳ್ಳಬೇಕು. ಬೇರೆಯವರು ಹುಡುಕಿಕೊಂಡು ಬರುವವರೆಗೂ ಅಲ್ಲಿಯೇ ಇರಬೇಕು. ಆಮೇಲೆ ಇನ್ನೊಬ್ಬ ಹುಡುಕಿಕೊಂಡು ಬಂದು ಅವರನ್ನು ‘ಕಣ್ಣಾ ಮಚ್ಚೇ?’ ಅಂತ ಕೇಳ್ತಾರೆ ಆಗ ಇವರು ಸಮ್ಮನಿರಬೇಕು. ಆಗ ಅವನೂ ಸಹ ಅಲ್ಲೇ ಕೂತ್ಕೋಬೇಕು. ಹೀಗೆ ಉಳಿದ ಎಂಟೂ ಜನ ಕಳ್ಳನನ್ನು ಹುಡುಕಿಕೊಂಡು ಬರುವವರೆಗೂ ಆಟ ಮುಂದುವರೆಯುತ್ತೆ. ಟ್ವಿಸ್ಟ್ ಏನಪ್ಪಾ ಅಂದ್ರೆ ಲಾಸ್ಟ್ ಯಾರು ಕಳ್ಳನನ್ನು ಹುಡುಕುತ್ತಾರೋ ಅವರಿಗೆ ಎಲ್ಲರೂ ಸೇರಿ ಒಂದು ಪನಿಶ್ ಮೆಂಟ್ ಕೊಡಬೇಕು. ಇಷ್ಟು ದೊಡ್ಡ ಮನೇಲಿ ಕಳ್ಳನನ್ನು ಹುಡುಕೋದು ಥ್ರಿಲ್ಲಿಂಗ್ ಆಗಿರುತ್ತೆ.” ಎನ್ನುತ್ತ ನಾನು ಆಟದ ನಿಯಮ ಹೇಳಿ ಮುಗಿಸಿದೆ.

“ಒಂಥರಾ ಚೆನ್ನಾಗಿದೆ. ಮಾಮೂಲಿ ಮಕ್ಕಳಾಟ ಕಣ್ಣ ಮುಚ್ಚಾಲೆ ಅಲ್ಲದೇ ಡಿಫರೆಂಟ್ ಆಗಿದೆ. ಅದೂ ಕತ್ತಲೇಲಿ ಥ್ರಿಲ್ಲಿಂಗ್ ಆಗಿರುತ್ತೆ. ನಾನು ಈ ಆಟಕ್ಕೆ ರೆಡಿ” ಗುರು ಹೇಳಿದ. ಶಿವು ರವಿ ಸಹ ಒಪ್ಕೊಂಡ್ರು.

ತಕ್ಷಣ ರಮ್ಯ “ಅಯ್ಯೋ ದೇವ್ರೇ ಈ ಕಾಡಿನ ಮಧ್ಯೆ ಕತ್ತಲೇಲಿ ಅದೂ ಲೈಟ್ ಆಫ್ ಮಾಡಿ ಕಣ್ಣಾ ಮುಚ್ಚಾಲೆನಾ!? ನಾನು ಆಡಲ್ಲಪ್ಪ.. ನಂಗ್ ಭಯ ಆಗುತ್ತೆ. ಬೇಕಾದರೆ ಎಲ್ಲರೂ ಈಗಲೇ ನಂಗೆ ಪನಿಶ್ ಮೆಂಟ್ ಕೊಡಿ” ಅಂದಳು.

“ಹೌದು ಕತ್ತಲೇಲಿ ಬೇಡ ಎಲ್ಲರಿಗೂ ಭಯ ಆಗುತ್ತೆ.” ರಷ್ಮಿ ಸಹ ದನಿಗೂಡಿಸಿದಳು.

“ಏನಂದೇ?? ಭಯಾನಾ? ಕಣ್ಣಾ ಮುಚ್ಚಾಲೆ ಆಟ ಆಡೋಣ ಅಂತ ಹೇಳ್ದೋಳೆ ನೀನು! ಈಗ ಭಯ ಆಗುತ್ತೆ ಅಂದ್ರೆ?! ಅದೆಲ್ಲ ಗೊತ್ತಿಲ್ಲ.. ನಾವೆಲ್ಲರೂ ಕಣ್ಣಾ ಮುಚ್ಚಾಲೇನೆ ಆಡೋಣ ಅದೂ ಲೈಟ್ ಆಫ್ ಮಾಡ್ಕೊಂಡು!” ಹರೀಶ್ ಫುಲ್ ಖುಷಿಯಿಂದ ಹೇಳಿದ.

ಇಷ್ಟೊತ್ತು ಮಕ್ಕಳಾಟ ಅಂದವನು ಈಗ ಸಡನ್ನಾಗಿ ಈ ಆಟ ಆಡಕ್ಕೆ ರೆಡಿಯಾಗಿದ್ದ! ಅವನಷ್ಟೇ ಅಲ್ಲ ಶಿವು, ರವಿ, ಗುರು, ಚೈತ್ರ, ರಂಜಿತಾ ಎಲ್ರೂ ರೆಡಿ ಆದ್ರು, ರಷ್ಮಿ ಮತ್ತೆ ರಮ್ಯಾಳನ್ನು ಬಿಟ್ಟು. ಆದರೆ ಎಲ್ಲರೂ ಸೇರಿ ಅವರಿಬ್ಬರನ್ನು ಬಲವಂತ ಮಾಡಿ ಒಪ್ಪಿಸಿ ಆಟ ಆಡಲು ಶುರು ಮಾಡಿದೆವು. ಒಂದು ಪೇಪರ್ ಕಟ್ ಮಾಡಿ ಒಂಭತ್ತು ಚಿಕ್ಕ ಚೀಟಿಗಳನ್ನು ಮಾಡಿದೆವು. ಒಂದರಲ್ಲಿ ಕಳ್ಳ ಅಂತ ಬರೆದು ಉಳಿದದ್ದನ್ನೆಲ್ಲ ಖಾಲಿ ಬಿಟ್ಟು ಕುಲುಕಿದೆವು. ಎಲ್ಲರೂ ಒಂದು ಚೀಟಿ ಎತ್ತಿಕೊಂಡರು. ನಾನೂ ಒಂದು ಎತ್ತಿಕೊಂಡೆ, ಯಾರಿಗೂ ತೋರಿಸದೇ ತೆಗೆದು ನೋಡಿದೆ, ಖಾಲಿ ಇತ್ತು! ತಕ್ಷಣ ಯಾರೋ ಎದ್ದು ಮೈನ್ ಸ್ವಿಚ್ ಆಫ್ ಮಾಡಿದರು. ತಕ್ಷಣ ಹುಡುಗಿಯರೆಲ್ಲಾ ಕಿಟಾರನೆ ಕಿರುಚಿದರು. ಆಮೇಲೆ ನಗುತ್ತಾ ಕತ್ತಲೆಯಲ್ಲಿ ನಿಶ್ಯಬ್ದವಾಗಿ ಎಲ್ಲರೂ ಅಡಗಿಕೊಳ್ಳಲು ಹೋದರು.

ಸ್ವಲ್ಪ ಸಮಯದ ನಂತರ ಅಲ್ಲೆಲ್ಲೋ ಮೂಲೆಯಲ್ಲಿ ಯಾರೋ ‘ಕಣ್ಣಾ ಮುಚ್ಚೇ’ ಅಂತ ಪಿಸುಗುಟ್ಟಿದರು. ಅದಕ್ಕೆ ‘ಕಾಡೇ ಗೂಡೇ’ ಅಂತ ಪ್ರತ್ಯುತ್ತರವೂ ಬಂತು. ನಾನೂ ನಿಧಾನವಾಗಿ ಕಳ್ಳನನ್ನು ಹುಡುಕತೊಡಗಿದೆ. ಸ್ವಲ್ಪ ಸಮಯದ ನಂತರ ಯಾರೋ ಬಾಗಿಲ ಮರೆಯಲ್ಲಿ ನಿಂತಿದ್ದರು. ಹೋಗಿ ಕೇಳಿದೆ, ಪ್ರತ್ಯುತ್ತರ ಬಂತು. ಮತ್ತೆ ಹುಡುಕಾಟ ಮುಂದುವರೆಯಿತು. ಬೆಡ್ ರೂಮಿನಲ್ಲಿ ಹೋದಾಗ ಮಂಚದ ಮೇಲೆ ಆಗಲೇ ನಾಲ್ಕು ಜನ ಕುಳಿತಿದ್ದರು. ನಾನು “ಕಣ್ಣಾ ಮುಚ್ಚೇ?” ಅಂತ ಕೇಳಿದೆ. ಉತ್ತರ ಬರಲಿಲ್ಲ! ಓಹ್ ಇವರಲ್ಲೇ ಯಾರೋ ಒಬ್ಬರು ಕಳ್ಳರು ಅಂದುಕೊಂಡು ನಾನೂ ಸಹ ಅವರ ಬಳಿಯಲ್ಲಿ ಕುಳಿತೆ. ಸ್ವಲ್ಪ ಹೊತ್ತಿನ ನಂತರ ಮತ್ತೊಬ್ಬರು ಬಂದು ಕೇಳಿದರು, ಉತ್ತರ ಸಿಗಲಿಲ್ಲ ನಮ್ಮ ಬಳಿ ಕುಳಿತರು. ಹೀಗೆ ಒಬ್ಬಬ್ಬರಾಗಿ ಎಲ್ಲರೂ ಬರತೊಡಗಿದರು, ಯಾರಿಗೂ ತಾವು ಕೊನೆಯವರಾಗಬಾರದೆಂದು ಅವಸರದಿಂದ ಬರುತ್ತಿದ್ದರು. ಆಮೇಲೆ ಗುರು ಬಂದು ಕೇಳಿ, ಅವನೂ ನಮ್ಮೊಡನೆ ಕುಳಿತ.

ತುಂಬಾ ಹೊತ್ತಾಯಿತು ಗುರುವಿನ ನಂತರ ಮತ್ತಾರೂ ಬರಲಿಲ್ಲ. ಎಲ್ಲರೂ ಬಂದಿದ್ದಾರೋ ಇಲ್ಲವೋ ಗೊತ್ತಾಗಲಿಲ್ಲ! ಕತ್ತಲೆಯಲ್ಲಿ ಎಷ್ಟು ಜನ ಬಂದಿದ್ದಾರೆಂದು ಎಣಿಸಿರಲಿಲ್ಲ. ಶಿವು ಲೈಟರ್ ಕೊಟ್ಟು ಎಲ್ಲರನ್ನೂ ಕೌಂಟ್ ಮಾಡು ಅಂತ ಹೇಳಿದ. ನಾನು ಎದ್ದು ಕೌಂಟ್ ಮಾಡಿದೆ, ಒಂಭತ್ತು ಜನ ಇದ್ದರು.

“ಓಕೆ ಕಣೋ ಎಲ್ಲರೂ ಬಂದಿದ್ದಾರೆ ಒಂಭತ್ತು ಜನ ಇದ್ದೀರಾ” ಎಂದೆ.

ಹಾಗಾದರೆ ಗುರುನೇ ಲಾಸ್ಟ್ ಎಂದು ಅವನಿಗೆ ಪನಿಶ್ ಮೆಂಟ್ ಕೊಟ್ಟೆವು. ಪನಿಶ್ ಮೆಂಟ್ ಎನಪ್ಪಾ ಅಂದ್ರೆ ನಾಳೆ ರಿಟರ್ನ ಹೋಗೋವಾಗ ಎಲ್ಲರಿಗೂ ಹೋಟೆಲ್ ನಲ್ಲಿ ಅವನೇ ತಿಂಡಿ ಕೊಡಿಸಬೇಕು. ಗುರು ತಲೆ ಮೇಲೆ ಕೈ ಹೊತ್ತು ಆಯ್ತು ಎಂದ.

“ಮಗಾ ನೀನು ಆಗಲೇ ಎಷ್ಟು ಜನಾನ ಕೌಂಟ್ ಮಾಡಿದೆ”? ಶಿವು ನನ್ನ ಕೇಳಿದ..

” ಒಂಭತ್ತು ಜನ ಇದ್ರು” ನಾನಂದೆ.

“ನಿನ್ನನ್ನೂ ಸೇರಿಸಿ ಒಂಭತ್ತು ಜನಾನಾ?”

“ಇಲ್ಲ ನನ್ನನ್ನು ಸೇರಿಸಿ ಹತ್ತು ಮಂದಿ” ನಾನು ನಾಲಿಗೆ ಕಚ್ಚಿಕೊಂಡೆ. ನಾವಿರೋದೇ ಒಂಭತ್ತು ಜನ ಅಲ್ವಾ ಅನ್ನಿಸಿತು.

ಶಿವು ಜೋರಾಗಿ ನಗತೊಡಗಿದ “ಲೇಯ್ ಸ್ಕೂಲಲ್ಲಿ ಗಾಂಪರ ಗುಂಪು ಅಂತ ಪಾಠ ಇತ್ತು ನೆನಪಿದಿಯಾ?? ಆಥರ ಆಡ್ತಿದ್ದಿಯಾ ನೀನು” ಅಂತ ಜೋರಾಗಿ ನಕ್ಕ. ಎಲ್ಲರೂ ಅವನ ಮಾತಿಗೆ ಬಿದ್ದು ಬಿದ್ದು ನಗತೊಡಗಿದರು. ಆದರೆ, ನನಗೆ ಕನ್ಫರ್ಮ್ ಇತ್ತು ನಾನು ಒಂಭತ್ತು ಜನರನ್ನು ಎಣಿಸಿದ್ದೆ! ಹಾಗಾದರೆ ಇನ್ನೊಬ್ಬರು ಯಾರು??

ಎಲ್ಲರೂ ನಗುತ್ತಲೇ ಮತ್ತೇ ಆಟ ಶುರುಮಾಡಿದೆವು. ಈ ಸಲ ನನಗೇ ಕಳ್ಳನ ಚೀಟಿ ಸಿಕ್ಕಿತು. ಸಧ್ಯ ಪನಿಶ್ ಮೆಂಟ್ ಇಂದ ಬಚಾವಾದೆ ಎನಿಸಿತು. ಲೈಟ್ ಆಫ್ ಆದಮೇಲೆ ನಾನು ಅಡಗಿಕೊಂಡೆ, ಚೈತ್ರ ಬೇಗನೆ ನನ್ನನ್ನು ಹುಡುಕಿದಳು. ಈ ಸಲ ಆಟ ಬೇಗ ಮುಗಿಯಿತು. ರಷ್ಮಿ ಈ ಸಲ ಕೊನೆಯವಳಾದಳು, ಎಲ್ಲರಿಗೂ ಅವಳು ಕೂಲ್ ಡ್ರಿಂಕ್ಸ್ ಕೊಡುವ ಮಾತಾಯಿತು.

ಗುರುಗೆ ಟಾಯ್ ಲೆಟ್ ಹೋಗಬೇಕಾಗಿದ್ದರಿಂದ ಆಟಕ್ಕೆ ಬ್ರೇಕ್ ಕೊಟ್ಟಿದ್ದೆವು. ಆಗ ರಮ್ಯ ನನ್ನ ಬಳಿ ಬಂದಳು.

“ಆಗಲೇ ನೀನಗೆ ಕಳ್ಳನ ಚೀಟಿ ಸಿಕ್ಕಿದ್ದು ತಾನೆ” ಕೇಳಿದಳು.

“ಹೌದು” ಎಂದೆ.

“ಆಗಲೇ ನೀನು ಫಸ್ಟ್ ಫ್ಲೋರ್ ಅಲ್ಲಿ ಇರೋ ಆ ಬೆಡ್ ರೂಮಿನ ಬೀರುವಲ್ಲಿ ಅಡಗಿಕೊಂಡಿದ್ದೆ ತಾನೆ?” ಎಂದಳು.

“ಇಲ್ಲಪ್ಪ… ಆಗಲಿಂದ ನಾನು ಇಲ್ಲೇ ಸೋಫಾ ಹಿಂದೇನೆ ಅಡಗಿದ್ದೆ” ಎಂದೆ.

“ಹಾಗಾದರೆ, ಆ ಬೀರುವಲ್ಲಿ ಇದ್ದೋರು ಯಾರು? ….. ನಾನು ಕಳ್ಳನನ್ನು ಹುಡುಕಿಕೊಂಡು ಮೇಲಗಡೆ ಬೆಡ್ ರೂಮಿಗೆ ಹೋಗಿದ್ದೆ. ಆ ರೂಮೆಲ್ಲ ಹುಡುಕಿದೆ. ಆಮೇಲೆ ಬೀರು ಕಾಣಿಸಿತು, ಬಹುಶಃ ಒಳಗಡೆ ಯಾರಾದರೂ ಇದಾರಾ ಅಂತ ಓಪನ್ ಮಾಡಿದೆ. ಯಾರೋ ಇದ್ದಾರೆ ಅನ್ನಿಸ್ತು. ‘ಕಣ್ಣಾ ಮುಚ್ಚೇ?’ ಅಂದೆ ಉತ್ತರ ಬರಲಿಲ್ಲ. ಕಳ್ಳ ಅಲ್ಲೇ ಇದ್ದಾನೆ ಅಂತ ಗೊತ್ತಯ್ತು. ಸರಿ ಬೀರುವಿಂದ ಹೊರಗಡೆ ಬಾ ಬೆಡ್ ಮೇಲೆ ಕೂತ್ಕೊಳ್ಳೋಣ ಅಂದೆ. ಆದ್ರೆ ಅವರು ಬರಲಿಲ್ಲ. ಕೈ ಹಿಡಿದು ಎಳೆಯಲು ಹೋದೆ. ಅವರ ಕೈ ಸಿಕ್ತು ತುಂಬಾ ಕೋಲ್ಡ್ ಇತ್ತು.ಹಾಗೆ ಮಕ್ಕಳ ಕೈ ತರಹ ಎಳೇ ಕೈ.. ನನಗ್ಯಾಕೋ ಗಾಬರಿ ಆಯ್ತು! ತಕ್ಷಣ ಮೊಬೈಲ್ ಟಾರ್ಚ್ ಆನ್ ಮಾಡಿ ನೋಡಿದೆ. ಯಾರೂ ಇಲ್ಲ!!! ಬೀರು ಖಾಲಿ ಇತ್ತು!!”

ನಾನು ನಕ್ಕು “ಆಗಲೇ ಕತ್ತಲೇಲಿ ಆಡೋದು ಬೇಡ ಭಯವಾಗುತ್ತೆ ಅಂದಿದ್ದಲ್ಲ! ಅದಕ್ಕೆ ಈಗ ಭಯದಿಂದ ಏನೇನೂ ಕಲ್ಪನೆ ಮಾಡ್ಕೊತ್ತಿದ್ದೀಯಾ ನೀನು” ಎಂದೆ.

“ನಂಗೊತ್ತಿತ್ತು ನೀನು ಹೀಗೆ ಅಂತೀಯಾ ಅಂತ. ಅದಕ್ಕೆ ನಾನು ಯಾರಿಗೂ ಹೇಳಲಿಲ್ಲ. ಹೇಳಿದ್ರೆ ಆಡ್ಕೊಂಡು ನಗ್ತೀರಾ.. ಆಗಲೇ ನೀನು ಒಂಭತ್ತು ಜನಾನ ಕೌಂಟ್ ಮಾಡಿದೆ ಅಂದಲ್ಲ ಅದಕ್ಕೆ ನಿನಗೆ ಹೇಳಿದೆ” ಎಂದಳು.

ಅಷ್ಟರಲ್ಲಿ ಗುರು ಬಾತರೂಮಿಂದ ಬಂದ. ನಾನೂ ರಮ್ಯ ಮಾತಾಡ್ತಾ ಇರೋದು ನೋಡಿದ.

“ಲೇಯ್ ಯಾಕೋ ನನ್ನ ಹುಡುಗಿ ಜೊತೆ ಅದೇನೋ ಪಿಸ ಪಿಸ ಅಂತ ಕಿಸೀತಿದ್ದೀಯಾ” ಅಂದ.

“ಹೌದು…ಗುರು ಪೆದ್ದ ನನ್ಮಗ ಅವನ ಜೊತೆ ಬ್ರೇಕ್ ಅಪ್ ಮಾಡ್ಕೋ ನಾವಿಬ್ರೂ ಜೋಡಿ ಆಗೋಣ ಅಂತ ಹೇಳ್ತಿದ್ದೆ” ಅಂದೆ.

ಎಲ್ಲರೂ ನಗತೊಡಗಿದರು, ಗುರು ನನ್ನನ್ನು ನುಂಗುವ ಹಾಗೇ ಗುರಾಯಿಸುತ್ತಿದ್ದ. ಹಾಗೆಯೇ ಮತ್ತೆ ಆಟ ಶುರು ಮಾಡಿದೆವು. ಆದರೂ ರಮ್ಯ ಹೇಳಿರೋ ವಿಷಯ ನನ್ನ ಮನಸ್ಸನ್ನು ಕೊರೆಯುತ್ತಿತ್ತು. ಆಗಲೇ ನಾನು ಒಬ್ಬ ಹೆಚ್ಚಿನ ವ್ಯಕ್ತಿಯನ್ನು ಕೌಂಟ್ ಮಾಡಿದ್ದೆ. ಈಗ ರಮ್ಯಳಿಗೆ ಈ ಅನುಭವ! ಏನೋ ವಿಷಯ ಇದೆಯಾ ಅನ್ನಿಸಿತು. ಥೂ ಎಲ್ಲಾ ಭ್ರಮೆ ಎಂದು ತಲೆ ಕೊಡವಿದೆ. ಅಷ್ಟರಲ್ಲಿ ಆಟ ಶುರವಾಗಿತ್ತು, ನನ್ನ ಚೀಟಿ ಖಾಲಿ ಇತ್ತು. ಲೈಟ್ ಆಫ್ ಮಾಡಿ ಎಲ್ಲರೂ ಅಡಗಿಕೊಂಡರು.

ನಾನು ಕಳ್ಳನನ್ನು ಹುಡುಕುತ್ತಾ ಹೊರಟೆ, ಎಷ್ಟು ಹುಡುಕಿದರೂ ಸಿಗಲಿಲ್ಲ. ಸ್ವಲ್ಪ ಬಾತ್ ರೂಮಿಗೆ ಹೋಗಲು ಅರ್ಜೆಂಟ್ ಆಯ್ತು. ಬಾತ್ ರೂಮ್ ಲಾಸ್ಟ್ ಅಲ್ಲಿತ್ತು. ಬಾತ್ ರೂಮಿಗೆ ಹೋಗಿ ಮೂತ್ರ ಬಾಧೆ ಮುಗಿಸಿ ಹೊರ ಬಂದೆ. ಅಲ್ಲಿಯೇ ಬಾತ್ ರೂಮ್ ಪಕ್ಕ ಚಿಕ್ಕ ಸ್ಟೋರ್ ರೂಮ್ ಇತ್ತು. ಅಲ್ಲಿ ಯಾರಾದರೂ ಅಡಗಿದ್ದಾರಾ ಅಂತ ಒಳಗೆ ಹೋದೆ. ಸ್ವಲ್ಪ ಮುಂದೆ ಹೋದಾಗ ಯಾರದೋ ಕಾಲು ತಾಗಿ ಎಡವಿದೆ. ಓಹ್ ಯಾರೋ ಅಡಗಿಕೊಂಡಿದ್ದಾರೆ ಎಂದು ಕೊಂಡೆ.

“ಕಣ್ಣಾ ಮುಚ್ಚೇ” ಎಂದೆ. ಉತ್ತರ ಬರಲಿಲ್ಲ! ಸೋ ಕಳ್ಳ ಸಿಕ್ಕಿ ಬಿದ್ದ ಎಂದು ಅಲ್ಲಿಯೇ ಕುಳಿತೆ. ನನ್ನ ಪಕ್ಕ ಕುಳಿತ ಕಳ್ಳ ಯಾರು ಅಂತ ಗೊತ್ತಾಗಲಿಲ್ಲ! ಹತ್ತಿರ ಸರಿದು ಸ್ಪರ್ಷಿದೆ ಮೃದುವಾದ ನುಣುಪಾದ ತಣ್ಣಗಿನ ಕೈ ಇತ್ತು. ಯಾರೋ ಹುಡುಗಿ ಎಂದು ಕೊಂಡೆ.

“ಯಾರು? ಚೈತ್ರಾ ನಾ? ಇಲ್ಲ ರಮ್ಯಾ ನಾ?” ಎಂದೆ.

ಉತ್ತರ ಬರಲಿಲ್ಲ.

“ರಷ್ಮಿ…?”

ಉಹೂಂ ಉತ್ತರ ಬರಲಿಲ್ಲ.

“ಹಾಗಾದರೆ ರಂಜಿತಾ..”

ರಂಜಿತಾ ಅಂದ ತಕ್ಷಣ ಅವಳು “ಹ್ಮ” ಎಂದು ಸುಮ್ಮನಾದಳು.

ರಂಜಿತಾಳ ಕಣ್ಣುಗಳನ್ನು ನೋಡಿ ಮಾರು ಹೋಗಿದ್ದೆ. ಅವಳ ಜೊತೆ ಮಾತಾಡಲು ಸಮಯ ಸಿಕ್ಕಿರಲಿಲ್ಲ. ಈಗ ಅವಳ ಪಕ್ಕದಲ್ಲಿಯೇ ಕುಳಿತಿದ್ದೆ. ಅಬ್ಬಾ ಬೇರೆಯವರು ಹುಡುಕಿಕೊಂಡು ಬರುವವರೆಗೂ ಇವಳ ಜೊತೆ ಮಾತಾಡೋಣ ಅಂತ ಖುಷಿಯಾಯಿತು.

“ನೀವು ಬೆಂಗಳೂರಲ್ಲಿ ಎಲ್ಲಿ ಕೆಲಸ ಮಾಡ್ಕೊಂಡಿದ್ದೀರಾ?” ಅಂತ ಕೇಳಿದೆ.

ಅವಳು “ಶ್” ಎಂದಳು.

ಆಟದ ರೂಲ್ಸ್ ಪ್ರಕಾರ ಕಳ್ಳನ ಜೊತೆ ಇದ್ದಾಗ ಯಾರೂ ಶಬ್ದ ಮಾಡದೇ ಸುಮ್ಮನಿರಬೇಕು. ಶಬ್ದ ಮಾಡಿದ್ರೆ ಬೇಗ ಸಿಕ್ಕಿಬಿಡ್ತಾರೆ ಅದಕ್ಕೆ. ಸೋ ಈ ರಂಜಿತಾ ಪಕ್ಕಾ ರೂಲ್ಸ್ ಫಾಲೋ ಮಾಡ್ತಿದ್ದಾಳೆ ಎಂದು ಕೊಂಡೆ.

ಆದರೂ ಪದೇ ಪದೇ ಅವಳ ಜೊತೆ ಮಾತಾಡುವ ಬಯಕೆಯಾಗುತ್ತಿತ್ತು.

“ರೀ.. ಏನಾದರೂ ಮಾತಾಡ್ರೀ ಈ ಕತ್ತಲೇಲಿ ಭಯ ಆಗುತ್ತೆ” ಎಂದೆ.

“ಯಾಕೆ ನೀವೆಲ್ಲ ಕತ್ತಲೇಲಿ ಕಣ್ಣಾ ಮುಚ್ಚಾಲೆ ಆಡಕ್ಕೆ ಮುಂಚೆ ಯೋಚಿಸಬೇಕಿತ್ತು! ಈಗ ಭಯ ಆಗುತ್ತೆ ಅಂದ್ರೆ?” ಎಂದಳು.

ನಾನು ನಸು ನಕ್ಕೆ. “ಭಯ ಆದರೂ ಒಂಥರಾ ಥ್ರಿಲ್ಲಿಂಗ್ ಆಗಿರುತ್ತೆ.” ಎಂದೆ.

“ನಿಮಗೊತ್ತಿಲ್ಲ… ಕಣ್ಣಾ ಮುಚ್ಚಾಲೆ ಆಡಿ ಇಲ್ಲಿ ನಾಲ್ಕು ಜನ ಸತ್ತು ಹೋಗಿದ್ದಾರೆ… ಅದಕ್ಕೆ”

“ವ್ಹಾಟ್?? ಯಾವಾಗ??!!” ಭಯ ಮಿಶ್ರಿತ ಅಚ್ಚರಿಯಿಂದ ಕೇಳಿದೆ.

“ಮೂರು ಜನ.. ಈ ಮನೆ ಕೊಳ್ಳುವ ಮೊದಲೇ ಸತ್ತಿದ್ದರು… ”

ನನಗಂತೂ ಅವರು ಹೇಗೆ ಸತ್ರು? ಅದೂ ಕಣ್ಣಾ ಮುಚ್ಚಾಲೆ ಆಡುತ್ತಾ! ಅಂತ ತಿಳಿಯುವ ಕುತೂಹಲವಾಯಿತು.

“ರೀ, ಅವರೆಲ್ಲಾ ಕಣ್ಣಾ ಮುಚ್ಚಾಲೆ ಆಡಬೇಕಾದ್ರೆ ಹೇಗೆ ಸತ್ರು ಅಂತ ಹೇಳ್ತೀರ?” ನಾನು ಕೇಳಿದೆ..

ಅವಳು ನಿಟ್ಟುಸಿರಿನೊಂದಿಗೆ ಹೇಳತೊಡಗಿದಳು

“ಸುಮಾರು ಐವತ್ತು ವರ್ಷಗಳ ಹಿಂದೆ ಈ ಘಟನೆ ನಡೆದಿದ್ದಂತೆ. ನನಗೂ ಇತ್ತೀಚೆಗಷ್ಟೇ ಗೊತ್ತಾಗಿದ್ದು.”

ಮೊದಲು ಒಂದು ಪುಟ್ಟ ಸಂಸಾರ ಈ ಮನೆಯಲ್ಲಿ ವಾಸವಾಗಿತ್ತು. ಗಂಡ, ಹೆಂಡತಿ ಮತ್ತು ಅವರ ಮೂರು ಮಕ್ಕಳು ಇರ್ತಿದ್ರು. ಅದೊಂದು ತುಂಬಾ ಖುಷಿಯಾದ ಸಂಸಾರ, ಆ ತಂದೆ ತಾಯಿ ತಮ್ಮ ಮಕ್ಕಳನ್ನು ಮುದ್ದಾಗಿ ಬೆಳೆಸಿದ್ದರು. ದೊಡ್ಡ ಮಗಳು ಪ್ರೀತಿ ಅವಳು, ತನ್ನ ಹೆಸರಿಗೆ ತಕ್ಕಂತೆ ತನ್ನ ಇಬ್ಬರು ತಮ್ಮಂದಿರು ರೋಹಿತ್ ಮತ್ತು ರೋಹನ್ ರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು.

ತಂದೆತಾಯಿಗಳಿಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು. ಒಮ್ಮೊಮ್ಮೆ ಇಬ್ಬರಿಗೂ ರಾತ್ರಿ ಪಾಳಿ ಇರುತ್ತಿತ್ತು. ಆಗ ಪ್ರೀತಿಯೇ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಳು. ಅಪ್ಪ ಅಮ್ಮನಿಗೆ ರಾತ್ರಿ ಪಾಳಿ ಇದ್ದಾಗ ಮಕ್ಕಳಿಗೆ ಬೇಗ ನಿದ್ದೆ ಬರುತ್ತಿರಲಿಲ್ಲ! ನಿದ್ದೆ ಬರುವವರೆಗೂ ಏನಾದರೂ ಆಟವಾಡಿಕೊಂಡಿರುತ್ತಿದ್ದರು. ಅವರಿಗೆ ತುಂಬಾ ಇಷ್ಟವಾಗುತ್ತಿದ್ದ ಆಟ ಕಣ್ಣಾಮುಚ್ಚಾಲೆ. ಪ್ರೀತಿ ಅವಳ ರೂಮಿನಲ್ಲಿ ಗೋಡೆ ಕಡೆ ಮುಖ ಮಾಡಿ ನಿಂತು, ಎರಡೂ ಕೈಗಳಿಂದ ಕಣ್ಣುಮುಚ್ಚಿಕೊಂಡು.

” ಕಣ್ಣಾ ಮುಚ್ಚೆ ಕಾಡೆ ಗೂಡೆ,
ಉದ್ದಿನ ಮೂಟೆ ಉರುಳೇ ಹೋಯ್ತು.
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ.
ನಿಮ್ಮಯ ಹಕ್ಕಿ ಬಚ್ಚಿಟ್ಕೊಳ್ಳಿ” ಎಂದು ಹಾಡಿ.

ಸ್ವಲ್ಪ ಹೊತ್ತು ಮೌನವಾಗಿ ತಮ್ಮಂದಿರ ಹೆಜ್ಜೆ ಶಬ್ದಗಳನ್ನು ಕೇಳಿಸಿಕೊಳ್ಳುತ್ತಿದ್ದಳು. ಅವರು ಎತ್ತಕಡೆ ಓಡುತ್ತಿದ್ದಾರೆಂದು ತಿಳಿಯಲು. ಆಮೇಲೆ “ಕೂಕಾ?” ಎಂದು ಕೇಳುವಳು. ಅತ್ತಕಡೆಯಿಂದ ಯಾರಾದರೊಬ್ಬರು “ಕೂಕ್” ಎನ್ನುತ್ತಿದ್ದರು. ನಂತರ ಇವಳು ಅವರನ್ನು ಹುಡುಕುತ್ತಾ ಹೋಗುತ್ತಿದ್ದಳು. ಸಾಮಾನ್ಯವಾಗಿ ಅವರು ಯಾವಾಗಲೂ ಎಲ್ಲಿ ಅಡಗುತ್ತಿದ್ದರೋ ಆ ಜಾಗದ ಬಳಿ ಶಬ್ದಮಾಡದೇ ಹೋಗುತ್ತಿದ್ದಳು. ಅವರಿಗೆ ಗೊತ್ತಗದಂತೆ ಅಲ್ಲಿ ಹೋಗಿ “ಬೂ…” ಎಂದು ಹೆದರಿಸುತ್ತಿದ್ದಳು.

ಈ ‘ಬೂ..’ ಶಬ್ದ ಕೇಳಿದಾಗ ತಮ್ಮಂದಿರಿಗೆ ಗೊತ್ತಾಗುತ್ತಿತ್ತು, ಅವಳು ಹತ್ತಿರ ಬರುತ್ತಿದ್ದಾಳೆಂದು. ಒಂದು ವೇಳೆ ಅವಳು ಕೂಗಿದ ಜಾಗದಲ್ಲಿ ಯಾರಾದರೂ ಇದ್ದರೆ, ಅವರು ಒಮ್ಮೊಮ್ಮೆ ಬೆಚ್ಚಿ ಕಿರುಚಿದ್ದರು, ಒಮ್ಮೊಮ್ಮೆ “ಅಕ್ಕಾ…” ಎಂದು ನಗುತ್ತಾ ತಬ್ಬಿಕೊಳ್ಳುತ್ತಿದ್ದರು. ಅವರಿಬ್ಬರೂ ಸೇರಿ ಇನ್ಬೊಬ್ಬನನ್ನು ಹುಡುಕುತ್ತಿದ್ದರು. ಹೀಗೆ ದಣಿವಾಗುವವರಿಗೂ ಇದೇ ಆಟ ಆಡುತ್ತಿದ್ದರು.

ಹೀಗೆಯೇ ಒಂದು ದಿನ ಅಪ್ಪ ಅಮ್ಮ ಬೇರೆ ಊರಿಗೆ ಹೋಗಬೇಕಾಗಿ ಬಂತು. ಬೇಗ ಕೆಲಸ ಮುಗಿದರೆ ರಾತ್ರಿ ಬರುತ್ತೇವೆ, ಇಲ್ಲದಿದ್ದರೆ ನಾಳೆ ಬರುತ್ತೇವೆ ಎಂದು ಹೇಳಿ ಹೋದರು..ಮೂವರು ಮಕ್ಕಳು ಆಟವಾಡಿ ದಣಿವಾಗಿ ಮಲಗಿದ್ದರು. ಆದರೆ ನಿದ್ದೆ ಬಂದಿರಲಿಲ್ಲ! ಪ್ರೀತಿ ಕತೆ ಹೇಳುತ್ತಾ ಕುಳಿತಿದ್ದಳು. ಆಗ ಮೈನ್ ಡೋರ್ ಬೆಲ್ ಶಬ್ದವಾಯಿತು, ಬಹುಶಃ ಊರಿಂದ ಅಪ್ಪ ಅಮ್ಮ ಬಂದ್ರು ಅಂತ ಅನ್ಕೊಂಡ್ರು. ಪ್ರೀತಿ ಬಾಗಿಲು ತೆರೆಯಲು ಎದ್ದಳು. ತಕ್ಷಣ ಏನೋ ನೆನಪಾದಂತೆ ನಿಂತಳು… ತಮ್ಮಂದಿರು ಇನ್ನೂ ಮಲಗಿಲ್ಲ ಅಂತ ಗೊತ್ತಾದ್ರೆ ಅಮ್ಮ ಖಂಡಿತಾ ಬೈತಾರೆ ಅಂದುಕೊಂಡಳು.

“ರೋಹನ್, ರೋಹಿತ್ ನೀವಿನ್ನೂ ಮಲಗಿಲ್ಲ ಅಂತ ನೋಡಿದ್ರೆ ಸುಮ್ನೆ ಅಮ್ಮ ಬೈತಾರೆ! ಬೆಡ್ ಶೀಟ್ ಮುಚ್ಕೊಂಡು ಕಣ್ ಮುಚ್ಕೊಳ್ಳಿ” ಎಂದು ಪ್ರೀತಿ, ತನ್ನ ತಮ್ಮಂದಿರಿಗೆ ಹೇಳಿ ಬಾಗಿಲು ತೆರೆಯಲು ಹೊರಟಳು.

ಇಬ್ಬರೂ ತಮ್ಮಂದಿರು ಅಕ್ಕ ಹೇಳಿದಂತೆ ಬೆಡ್ ಶೀಟ್ ಹೊದ್ದುಕೊಂಡು ಕಣ್ಣು ಮುಚ್ಚಿ ನಿದ್ರಿಸುತ್ತಿರುವಂತೆ ಮಲಗಿದರು. ಸ್ವಲ್ಪ ಹೊತ್ತಿನ ನಂತರ ಬಾಗಿಲು ತೆರೆದ ಸದ್ದು ಆ ಹುಡುಗರಿಗೆ ಕೇಳಿಸಿತು, ಬೇರೆ ಯಾವ ಸದ್ದೂ ಕೇಳಿಸಲಿಲ್ಲ! ಆಮೇಲೆ ಕೆಲವು ಕ್ಷಣಗಳು ಮೌನವಾಗಿಯೇ ಕಳೆದವು.

ತಕ್ಷಣ ಹಾಡು ಕೇಳಿತು,

“ಕಣ್ಣಾ ಮುಚ್ಚೇ…..ಕಾಡೇ ಗೂಡೇ…..

ಇಬ್ಬರು ಹುಡುಗರೂ ಬೆಚ್ಚಿ ನಡುಗಿದರು. ಹಾಡಿದ್ದು ಅಕ್ಕನೇ ಆಗಿದ್ದರೂ ಅವಳ ಧ್ವನಿಯಲ್ಲಿ ಹೆದರಿಕೆಯಿತ್ತು. ಅವಳ ನಡುಗುವ ಧ್ವನಿಕೇಳಿ ಇವರಿಗೂ ನಡುಕ ಬಂದಿತ್ತು. ಆಮೇಲೆ ಮತ್ತೆ ಹಾಡು ಕೇಳಿತು,

“ನಮ್ಮಯ ಹಕ್ಕಿ…… ಬಿಟ್ಟೇ… ಬಿಟ್ವಿ….”

ರೋಹಿತ್ ರೋಹನ್ ಇಬ್ಬರೂ ಭಯದಿಂದ ಮುಖ ಮುಖ ನೋಡಿಕೊಂಡರು.

“ನಿಮ್ಮಯ…. ಹಕ್ಕಿ… ಬಚ್ಚಿಟ್ಕೊಳ್ಳಿ”

“ಅಕ್ಕ ಕಣ್ಣಾ ಮುಚ್ಚಾಲೆ ಆಡ್ಲಿಕ್ಕೆ ಕರೆಯುತ್ತಿದ್ದಾಳೇನೋ” ರೋಹನ್, ರೋಹಿತ್ ಕಿವಿಯಲ್ಲಿ ಪಿಸುಗುಟ್ಟಿದ.

ಅವರಿಗೆ ಏನು ಮಾಡಬೇಕು ಗೊತ್ತಾಗಲಿಲ್ಲ.. ಆಗ ಮತ್ತೆ ಹಾಡು ಕೇಳಿತು!

” ಕಣ್ಣಾ ಮುಚ್ಚೆ ಕಾಡೆ ಗೂಡೆ…”

ನಿಶ್ಯಬ್ದ

“ಉದ್ದಿನ ಮೂಟೆ ಉರುಳೇ ಹೋಯ್ತು.”

ನಿಶ್ಯಬ್ದ

“ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ. ನಿಮ್ಮಯ ಹಕ್ಕಿ ಬಚ್ಚಿಟ್ಕೊಳ್ಳಿ”

ಈ ಸಲ ಹುಡುಗರು ಎದ್ದು ಬಿದ್ದು ತಾವು ಅಡಗಿಕೊಳ್ಳುತ್ತಿದ್ದ ಫೇವರೆಟ್ ಜಾಗಕ್ಕೆ ಓಡಿಹೋದರು. ಅವರು ಬಟ್ಟೆಗಳಿಟ್ಟಿದ್ದ ಬೀರುವಿನಲ್ಲಿ ಹೋಗಿ ಅಡಗಿಕೊಂಡರು. ಆದರೆ, ಯಾವಾಗಲೂ ಅಲ್ಲಿ ಅಡಗಿದರೆ ಅಕ್ಕ ಬೈಯುತ್ತಿದ್ದಳು. ಅಲ್ಲಿ ಅಡಗಿಕೊಂಡರೆ ಆಟವೇ ಆಡುತ್ತಿರಲಿಲ್ಲ. ತುಂಬಾ ದಿನಗಳಿಂದ ಆ ಜಾಗದಲ್ಲಿ ಅಡಗಿಕೊಂಡಿರಲಿಲ್ಲ, ಹಾಗಾಗಿ ಖಂಡಿತಾ ತಮ್ಮನ್ನು ಹುಡುಕಲು ಅಕ್ಕನಿಗೆ ಸಾಧ್ಯವಾಗುವುದಿಲ್ಲ ಎಂದು ಯೋಚಿಸಿ ಅಲ್ಲಿ ಅಡಗಿದ್ದರು.

ಅವರು ಉಸಿರು ಬಿಗಿಹಿಡಿದುಕೊಂಡು ಹೊರಗಿನ ಶಬ್ದಕ್ಕಾಗಿ ಕಾಯ್ದರು. ಹೆಜ್ಜೆಗಳ ಸದ್ದುಕೇಳಿದಂತಾಯಿತು. ಆದರೆ ಹತ್ತಿರ ಬರಲಿಲ್ಲ. ಅವರು ಬಹಳ ಹೊತ್ತಿನ ವರೆಗೂ ಬೀರುವಿನಲ್ಲಿಯೇ ಅಡಗಿ ಕುಳಿತಿದ್ದರು. ಸ್ವಲ್ಪ ಸಮಯದ ನಂತರ ಮತ್ತೆ ಹೆಜ್ಜೆಗಳ ಸದ್ದು ಕೇಳಿಸಿತು, ಆದರೆ ಆ ಹೆಜ್ಜೆಗಳು ನಿಧಾನವಾಗಿ ಕಾಲೆಳೆದುಕೊಂಡು ಬರುತ್ತಿರುವಂತೆ ಸದ್ದಾಗುತ್ತಿತ್ತು.

ಹುಡುಗರು ಅಡಗಿ ಕುಳಿತ ಬೀರುವಿನ ಎದುರು ಒಂದು ಮಂಚವಿತ್ತು. ಆ ಮಂಚದ ಹತ್ತಿರ ಸದ್ದಾಯಿತು.

“ಬೂ…..” ಪ್ರೀತಿ ಕಿರುಚಿದಳು.

ಇಬ್ಬರೂ ಹುಡುಗರು ಕಿರುಚುತ್ತಾ ಬೀರುವಿನಿಂದ ಹೊರಗೆ ನೆಗೆದರು. ಹೊರಗಡೆ ಅವರಿಗೆ ಭೀಕರ ದೃಶ್ಯ ಕಾದಿತ್ತು!

ಮರುದಿನ ಅಪ್ಪ ಅಮ್ಮ ಮನೆಗೆ ಬಂದಾಗ, ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಗಾಬರಿಯಿಂದ ಅವರು ಮನೆಯನ್ನೆಲ್ಲ ಹುಡುಕತೊಡಗಿದರು.

“ಪ್ರೀತಿ……”

“ರೋಹನ್……”

“ರೋಹಿತ್……”

ಎಷ್ಟು ಹುಡುಕಿದರೂ ಯಾರೂ ಸಿಗಲಿಲ್ಲ. ಮಕ್ಕಳ ಬೆಡ್ ರೂಮಿಗೆ ಬಂದು ನೋಡಿದಾಗ. ಅವರ ಹಾಸಿಗೆಯ ಮೇಲೆ ಒಂದು ರಕ್ತಸಿಕ್ತವಾದ ಪತ್ರವಿತ್ತು.

“ನಾನು ನಿನ್ನೆ ರಾತ್ರಿ ನಿಮ್ಮ ಮಕ್ಕಳ ಜೊತೆಗೆ ಅವರಿಗಷ್ಟವಾದ ಕಣ್ಣಾಮುಚ್ಚಾಲೆ ಆಟ ಆಡಿದೆ.”

ಎಂದು ಬರೆದಿತ್ತು.

ಅದನ್ನು ಓದಿ ತಾಯಿ ಭಯದಿಂದ ಅಳತೊಡಗಿದರು. ಆತಂಕದಿಂದ ಮನೆಯನ್ನೆಲ್ಲಾ ಹುಡುಕಿದರು. ಕೊನೆಗೆ ಮಕ್ಕಳು ಸಿಗದೇ ಪೋಲಿಸ್ ಸ್ಟೇಷನ್ ಅಲ್ಲಿ ಕಂಪ್ಲೈಂಟ್ ಕೊಟ್ಟರು. ಪೋಲಿಸರು ಬಂದು ಸ್ಥಳ ಪರಿಶೀಲನೆ ಮಾಡಿ ವಿವರ ಪಡೆದುಕೊಂಡು ಮಕ್ಕಳನ್ನು ಹುಡುಕಿಕೊಡುವ ಭರವಸೆ ಕೊಟ್ಟು ಹೋದರು..

ಎರಡು ದಿನಗಳ ನಂತರ ಮನೆಯಲ್ಲಿ ಕೊಳೆತ ವಾಸನೆ ಬರತೊಡಗಿತು. ಭಯ ಮತ್ತು ಸಂದೇಹಗಳಿಂದ ಮನೆಯೆಲ್ಲಾ ಹುಡುಕಿದಾಗ ಮಕ್ಕಳ ಬೆಡ್ ರೂಮಿನ ಬೀರುವಿನಿಂದ ವಾಸನೆ ಬರುತ್ತಿತ್ತು. ಬಟ್ಟೆಗಳ ಮಧ್ಯ ಹುಡುಕಿದಾಗ ರೋಹನ್ ಮತ್ತೆ ರೋಹಿತ್ ಶವ ಸಿಕ್ಕಿತು! ಅವರಿಬ್ಬರ ಕಣ್ಣುಗಳ ರೆಪ್ಪೆಗಳನ್ನು ಹೊಲಿಯಲಾಗತ್ತು!!

ಅದೇ ವಾಸನೆ ಜಾಡು ಹಿಡಿದು ಹುಡುಕಿದಾಗ, ಈಗ ಕುಳಿತಿದ್ದೀವಲ್ಕ ಈ ಹಳೆಯ ಸ್ಟೋರ್ ರೂಮಿನ ಕಪಾಟಿನಲ್ಲಿರುವ ಪ್ರೀತಿಯ ಶವ ಸಿಕ್ಕಿತು! ಅವಳ ಕಣ್ಣುಗಳನ್ನೂ ಸಹ ಹೊಲಿಯಲಾಗಿತ್ತು!!

ಆಮೇಲೆ ದುಃಖದಿಂದ ಮಕ್ಕಳ ಅಂತ್ಯ ಸಂಸ್ಕಾರ ನೆರವೇರಿಸಿದರು.

ಹಲವಾರು ತಿಂಗಳುಗಳ ನಂತರ ಪೋಲಿಸರು ಒಬ್ಬ ಟೈಲರ್ ನನ್ನು ಬಂಧಿಸಿದರು. ಅವನು ತಾನು ಮಾಡಿದ ಕೊಲೆಗಳನ್ನು ಒಪ್ಪಿಕೊಂಡ. ಆಮೇಲೆ ಅವನಿಗೆ ಜೀವಾವಧಿ ಶಿಕ್ಷೆ ಕೊಟ್ಟರು. ಜೈಲಿನಲ್ಲಿ ಕೊಡುತ್ತಿದ್ದ ಪೋಲಿಸರ ಚಿತ್ರಹಿಂಸೆ ತಾಳದೇ ಆ ಟೈಲರ್ ಒಂದು ರಾತ್ರಿ ಜೈಲಿನ ವೆಂಟಿಲೇಟರ್ ಗೆ ತನ್ನ ಪ್ಯಾಂಟಿನ ಸಹಾಯದಿಂದ ನೇಣು ಹಾಕಿಕೊಂಡು ಮೃತಪಟ್ಟ…”

ಅವಳು ಹೇಳುತ್ತಿದ್ದ ಕಥೆಯನ್ನು ನಾನು ಭಯಾಶ್ಚರ್ಯಗಳಿಂದ ಕೇಳಿಸಿಕೊಳ್ಳುತ್ತಿದ್ದೆ.

“ಈಗಲೂ ಒಮ್ಮೊಮ್ಮೆ ಈ ಮನೆಯಲ್ಲಿ, ಯಾರೋ ಹುಡುಗಿ ಪಿಸು ಧ್ವನಿಯಲ್ಲಿ, ಕಣ್ಣಾ ಮುಚ್ಚೇ ಕಾಡೇ ಗೂಡೆ… ಅಂತ ಹಾಡಿದ ಹಾಗೆ ಕೇಳಿಸುತ್ತದೆ…….”

ಅಷ್ಟರಲ್ಲಿ ಯಾರೋ “ಕಣ್ಣಾ ಮುಚ್ಚೇ” ಎಂದು ಪಿಸುಧ್ವನಿಯಲ್ಲಿ ಹೇಳಿದರು. ನನ್ನ ಎದೆ ಒಡೆದಂತಾಗಿ ಬೆಚ್ಚಿ ಬಿದ್ದೆ. ಭಯದಿಂದ ಗಂಟಲು ಕಟ್ಟಿತ್ತು..

ಮತ್ತೆ ಆ ಧ್ವನಿ “ಕಣ್ಣಾ ಮಚ್ಚೇ!!” ಅಂತ ಕೇಳಿತು. ಈ ಸಲ ನಾನು ಆ ಧ್ವನಿಯನ್ನು ಗುರುತಿಸಿದೆ. ಅದು ರಮ್ಯಾಳ ಧ್ವನಿ. ಮತ್ತಾರೂ ಉತ್ತರಿಸಲಿಲ್ಲ.. ರಮ್ಯಾ ನನ್ನ ಬಳಿ ಬಂದು ಕುಳಿತಳು.

“ನಾಗೇಶ್ ನಾ?” ರಮ್ಯ ಪಿಸು ಗುಟ್ಟಿದಳು.

“ಹೌದು ರೀ ನಾನೇ” ಎಂದೆ.

“ಕಳ್ಳ ಯಾರು?” ಎಂದು ರಮ್ಯಾ ಕೇಳಿದಳು.

“ರಂಜಿತಾ.. ” ಇಲ್ಲೇ ನನ್ನ ಪಕ್ಕದಲ್ಲಿ ಕುಳಿತಿದ್ದಾರೆ ಎಂದೆ.

“ಅಲ್ಲ ನಾನು ಶ್ವೇತಾ” ಎಂದು ಉತ್ತರ ಬಂದಿತು.

“ಮನೆಯಲ್ಲಿ ಶ್ವೇತಾ ಅಂತಾರಲ್ವ?” ರಮ್ಯ ನಗುತ್ತಾ ಕೇಳಿದಳು.

ರಂಜಿತಾ ಹೂಂ ಎಂದಳು. ರಮ್ಯ ನಗುತ್ತಾ “ನನಗೂ ಎರಡು ಹೆಸರಿದೆ” ಸೇಮ್ ಪಿಂಚ್ ಎನ್ನುತ್ತಾ ಬಗ್ಗಿ ರಂಜಿತಾಳನ್ನು ಜಿಗುಟಿದಳು. ರಮ್ಯ ಬೆಚ್ಚಿ ಕೈ ಹಿಂದೆ ತೆಗೆದುಕೊಂಡಳು.

“ಅಯ್ಯೋ ಏನ್ರೀ ಇದು.. ಪಾಪ ರಂಜಿತಾಗೆ ಜಿಗುಟಿಬಿಟ್ಟು ನೀವು ಬೆಚ್ಚಿ ಬೀಳ್ತೀರಲ್ಲ!” ಎಂದೆ ನಗುತ್ತಾ.

ರಮ್ಯಾ ನನ್ನ ಕಿವಿಯ ಹತ್ತಿರ ಬಂದು ಪಿಸುಗುಟ್ಟಿದಳು. “ನಾನು ಆಗಲೇ ಬೀರುವಿನಲ್ಲಿ ಮುಟ್ಟಿದ್ದ ಕೈ ಇದೇ ಥರ ತುಂಬಾ ಕೋಲ್ಡ್ ಇತ್ತು!”

ಅಷ್ಟರಲ್ಲಿ ನಮ್ಮ ಮುಖಕ್ಕೆ ಟಾರ್ಚ್ ಬಿತ್ತು. ನನ್ನ ಕಿವಿಯ ಬಳಿ ಇದ್ದ ರಮ್ಯ ಹೆದರಿ ಹಿಂದೆ ಸರಿದಳು.

“ನೀವಿಬ್ರೂ ಏನ್ ಮಾಡ್ತಿದ್ದೀರಾ ಇಲ್ಲಿ?” ಗುರುವಿನ ಧ್ವನಿ .

“ಮೊದಲು ಟಾರ್ಚ್ ಆಫ್ ಮಾಡು” ನಾನು ಮುಖಕ್ಕೆ ಕೈ ಅಡ್ಡ ಇಟ್ಟುಕೊಂಡು ಹೇಳಿದೆ. ಅಷ್ಟರಲ್ಲಿ ಯಾರೋ ಲೈಟ್ ಆನ್ ಮಾಡಿದರು ಮನೆಯೆಲ್ಲಾ ಝಗ್ ಎಂದು ಬೆಳಕಾಯಿತು. ಗುರು ನನ್ನ ಕಡೆ ಸಿಟ್ಟಿನಿಂದ ನೋಡುತ್ತಿದ್ದ. ಹಿಂದೆಯೇ ಶಿವು ಬಂದ.

“ಏಯ್ ನಾಗೇಶ್.. ರಮ್ಯಾ ಏನೋ ಮಾಡ್ತಿದ್ದೀರಾ ಯಾಕೆ ಇಷ್ಟೊತ್ತಾಯ್ತು ಬಂದಿಲ್ಲ. ನೀವಿಬ್ರೂ ಲಾಸ್ಟ್ ಈಗ ಇಬ್ರೂ ಏನಾದರೂ ಪಾರ್ಟಿ ಕೊಡಿಸಬೇಕು…” ಎಂದು ಶಿವು ಹೇಳಿದ.

“ಆಹಾ..ಯಾಕೇ….ನೀವ್ಯಾರೂ ಕಳ್ಳನನ್ನು ಹುಡಕೇ ಇಲ್ಲ.. ಕಳ್ಳ ಇಲ್ಲೇ ಇದ್ದಾರೆ ನಮ್ಮ ಮೂರು ಜನರಲ್ಲಿ.” ಎಂದೆ.

“ಹೂಂ ರಂಜಿತಾನೇ ಕಳ್ಳಿ..ಕೇಳಿ ಬೇಕಾದ್ರೆ ಅವಳನ್ನ” ರಮ್ಯ ಧ್ವನಿಗೂಡಿಸಿದಳು.

ನಾನು ರಂಜಿತಾ ಕುಳಿತಕಡೆ ತಿರುಗಿದೆ… ಅಚ್ಚರಿಯಾಯಿತು!! ಅಲ್ಲಿ ಯಾರೂ ಇಲ್ಲ!! ನಾನು ಬೆಚ್ಚಿ ರಮ್ಯಾಳ ಮುಖ ನೋಡಿದೆ. ಅವಳೂ ಭಯದಿಂದ ಬಿಳುಚಿಕೊಂಡಿದ್ದಳು.

“ಏಯ್ ಕಳ್ರಾ ಸುಳ್ಳು ಹೇಳಬೇಡಿ ಇಬ್ರೇ ಇದ್ದೀರಾ ಇಲ್ಲಿ.. ನಿಮ್ಮ ಜೊತೆ ಕಳ್ಳ ಇದ್ದಾನೆ ಅಂತ ಹೇಳ್ತೀರಾ… ಇಬ್ರೇ ಏನೋ ಗೋಲ್ ಮಾಡ್ತಿದ್ದೀರಾ” ಶಿವು ಕಣ್ಣು ಹೊಡೆಯುತ್ತಾ ಹೇಳಿದ.

“ಏಯ್ ಯಾಕೋ..ನನ್ನ ಹುಡುಗಿ ಮೇಲೆ ಕಣ್ ಹಾಕಿದ್ದೀಯಾ..? ನಾನು ಟಾರ್ಚ್ ಬಿಟ್ಟಾಗ ನೋಡಿದೆ ಇಬ್ರೂ ಕಿಸ್ ಮಾಡ್ತಾ ಇದ್ರಿ.. ಈಗ ನಿಮ್ಮ ಜೊತೆ ರಂಜಿತಾ ಇದ್ದಳು ಅಂತ ಸುಳ್ಳು ಬೇರೆ ಹೇಳ್ತೀರಾ..ರಂಜಿತಾ ಅಲ್ಲಿ ಹೊರಗಡೆ ಕೂತಿದ್ದಾಳೆ.. ರವಿ ಹತ್ರ, ಅವನು ಕಳ್ಳ. ಎಲ್ಲಾ ನಿಮಗೋಸ್ಕರ ಕಾಯ್ತಿದ್ದರೆ ನೀವು ಇಲ್ಲಿ ಕದ್ದು ರೋಮ್ಯಾನ್ಸ್ ಮಾಡ್ತಿದ್ದೀರಾ…” ಎಂದು ಸಿಟ್ಟಿನಿಂದ ಗುರು ಹೊರಟು ಹೋದ.

ನಾನು ರಮ್ಯ ಭಯದಿಂದ ಇನ್ನೂ ಹೊರ ಬಂದಿರಲಿಲ್ಲ. ನಮ್ಮಿಬ್ಬರಿಗೂ ಗೊತ್ತಿತ್ತು. ನಮ್ಮ ಜೊತೆ ಒಬ್ಬಳು ಹುಡುಗಿ ಇದ್ದಳು ಅಂತ..ನಾವಿಬ್ಬರೂ ಅವಳನ್ನು ಸ್ಪರ್ಶಿಸಿದ್ದೆವು.

ನಾವಿಬ್ಬರೂ ಎದ್ದು ಹೊರಗಡೆ ಹೋದೆವು.. ಹಾಲಿನಲ್ಲಿ ಎಲ್ಲರೂ ನಮ್ಮನ್ನು ಕಾಯುತ್ತಿದ್ದರು. ಎಲ್ಲರೂ ನಮ್ಮನ್ನು ವಿಚಿತ್ರವಾಗಿ ನೋಡುತ್ತಿದ್ದರು. ರಮ್ಯ ಗುರುವಿನ ಹತ್ತಿರ ಹೋಗಿ ಅವನನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದಳು. ನಾನು ರಂಜಿತಾಳನ್ನು ನೋಡಿದೆ. ಅವಳು ನಾನೇನೋ ಮಹಾಪಾಪ ಮಾಡಿದಂತೆ ನನ್ನನ್ನು ತಿರಸ್ಕಾರದಿಂದ ನೋಡುತ್ತಿದ್ದಳು. ನಾನು ನೇರವಾಗಿ ಅವಳಿ ಬಳಿ ಹೋದೆ.

“ರೀ ನೀವು ನಮ್ಮ ಜೊತೆ ಇದ್ರಿ ತಾನೆ.. ಗುರೂಗೆ ಹೇಳಿ, ಅವನು ನನ್ನನ್ನು ಮಿಸ್ಟೇಕ್ ಮಾಡಿಕೊಂಡಿದ್ದಾನೆ.” ಎಂದೆ.

“ನಾನಾ??? ನಾನ್ಯಾಕೆ ಅಲ್ಲಿ ಬರಲಿ?? ನಾನು ಅಲ್ಲಿ ಇರಲಿಲ್ಲ” ರಂಜಿತಾ ಹೇಳಿದಳು..

“ಸುಳ್ಳು ಹೇಳಬೇಡಿ ರಂಜಿತಾ…ಈ ಮನೇಲಿ ಮೂರು ಜನ ಮಕ್ಕಳು..ಅಲ್ಲ ನಾಲ್ಕು ಜನ ಕಣ್ಣಾ ಮುಚ್ಚಾಲೆ ಆಡಿ ಸತ್ತಿದ್ದಾರೆ ಅಂತ ಹೇಳಿದ್ರಿ.” ಎಂದೆ.

ನನ್ನ ಮಾತು ಕೇಳಿ ರಂಜಿತಾಳ ಮುಖ ಬಿಳಿಚಿಕೊಂಡಿತು. “ಅದು….ಅದು ಇಲ್ಲಿ ನಾಲ್ಕು ಜನ ಸತ್ತಿರೋದು ನಿಮಗೆ ಹೇಗೆ ಗೊತ್ತಾಯ್ತು??” ಭಯದಿಂದ ಕೇಳಿದಳು..

“ನೀವೆ ಹೇಳಿದ್ರಲ್ಲಿ ಆ ಸ್ಟೋರ್ ರೂಮಲ್ಲಿ ಕೂತ್ಕೊಂಡು.”

“ಆ ಸ್ಟೋರ್ ರೂಮ್ ಬೀಗ ಹಾಕಿತ್ತಲ್ಲ?? ಹೇಗೆ ತೆರೆಯಿತು?” ಅವಳ ಧ್ವನಿ ನಡುಗುತ್ತಿತ್ತು..

“ಅಯ್ಯೋ ನೀವು ಈಗ ನಮ್ಮನ್ನ ಆಟ ಆಡಿಸಬೇಡಿ.. ನಾನು ಒಳಗಡೆ ಬರೋ ಮುಂಚೆ ನೀವೆ ಕೂತಿದ್ರಿ.. ನಿಮ್ಮ ಮನೇಲಿ ನಿಮ್ಮನ್ನು ಶ್ವೇತಾ ಅಂತ ಕರೀತಾರೆ ಅಂತಾನೂ ಹೇಳಿದ್ರಿ.”

ನನ್ನ ಮಾತು ಕೇಳಿ ರಂಜಿತಾ ಕುಸಿದು ಕುಳಿತಳು. ಭಯದಿಂದ ನೀರು ಕೇಳಿದಳು. ಎಲ್ಲರೂ ಅಚ್ಚರಿಯಿಂದ ಅವಳ ಬಳಿ ಬಂದರು..

“ಹೋದ ವರ್ಷ ನಾನು ನನ್ ಫ್ರೆಂಡ್ಸ ಕಣ್ಣಾ ಮುಚ್ಚಾಲೆ ಆಡಬೇಕಾದ್ರೆ.. ನನ್ನ ಫ್ರೆಂಡ್ ಶ್ವೇತಾ ಆ ರೂಮಲ್ಲಿ ಹೋಗಿ ಅಡಗಿಕೊಂಡಿದ್ದಳು. ತುಂಬಾ ಹೊತ್ತಾದ ಮೇಲೆ ಅವಳು ಯಾರಿಗೂ ಸಿಗಲಿಲ್ಲ. ಬಹಳ ಹೊತ್ತಿನ ನಂತರ ಅವಳೇ ನಡುಗುತ್ತಾ ಹೊರ ಬಂದಳು. ಆಮೇಲೆ ಏನಾಯ್ತು ಅಂತ ನಾವು ಕೇಳಿದಾಗ. ಅವಳು ಹೆದರುತ್ತಾ,…ಅಲ್ಲಿ ಒಬ್ಬಳು ಹುಡುಗಿ ಕುಳಿತಿದ್ದಳು ಪ್ರೀತಿ ಅಂತ, ಅವಳು ತನ್ನ ತಮ್ಮಂದಿರ ಕಥೆ ಹೇಳಿದಳು. ಎಂದಳು. ಆಮೇಲೆ ನಾವೆಲ್ಲ ಹೆದರಿ ಓಡಿ ಹೋದೆವು. ಮರುದಿನ ಶ್ವೇತಾಳಿಗೆ ಚಳಿ ಜ್ವರ ಬಂದಿತು! ಎಷ್ಟು ಆಸ್ಪತ್ರೆಗೆ ತೋರಿಸಿದರೂ ವಾಸಿಯಾಗಲಿಲ್ಲ! ಮೂರು ದಿನಗಳ ನಂತರ ಜ್ವರ ಜಾಸ್ತಿಯಾಗಿ ” ಕಣ್ಣಾ ಮುಚ್ಚೆ ಕಾಡೇ ಗೂಡೇ” ಅಂತ ಕನವರಿಸುತ್ತಾ ಪ್ರಾಣ ಬಿಟ್ಟಳು”

ರಂಜಿತಾ ಹೇಳಿದ್ದನ್ನು ಕೇಳಿ ನನ್ನ ಎದೆ ಝಲ್ ಎಂದಿತು. ನಾನು ರಮ್ಯಳನ್ನು ನೋಡಿದೆ ಅವಳು ಹೆದರಿ ನಡುಗುತ್ತಿದ್ದಳು. ಅಂದರೆ ನಾನು ಕೂತು ಮಾತಾಡಿದ್ದು ಶ್ವೇತಾಳ ಆತ್ಮದ ಜೊತೆಯಾ!! ನನ್ನ ತಲೆ ತಿರುಗತೊಡಗಿತು..

ಮತ್ತಷ್ಟು ಸುದ್ದಿಗಳು

vertical

Latest News

ಖಾಸಗಿ ಡೇರಿಗಳ ಹಾಲು ಕಲಬೆರಕೆ, ವಿಷಕಾರಿ: FSSAI ವರದಿಯಲ್ಲಿ ಬಹಿರಂಗ

newsics.com ಬೆಂಗಳೂರು: ರಾಜ್ಯದ ಮಾರುಕಟ್ಟೆಗೆ ಪೂರೈಕೆಯಾಗುವ ಬಹುತೇಕ ಖಾಸಗಿ ಬ್ರ್ಯಾಂಡ್‌'ಗಳ ಹಾಲಿನಲ್ಲಿ ವಿಷಕಾರಿ ರಾಸಾಯನಿಕಗಳಿವೆ ಮತ್ತು ಆ ಹಾಲು ಕಲಬೆರಕೆಯಾಗಿದೆ ಎಂಬ ಸಂಗತಿ FSSAI ಪರೀಕ್ಷೆಯಲ್ಲಿ ದೃಢಪಟ್ಟಿದೆ. ಜತೆಗೆ,...

ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನಕ್ಕೆ ಅವಮಾನ: ಟ್ರಕ್‌’ಗೆ ತಾವೇ ಲಗೇಜ್‌ ಲೋಡ್‌ ಮಾಡಿದ ಆಟಗಾರರು

newsics.com ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸಕ್ಕೆ ತೆರಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್ ಅನ್ನು ತಾವೇ ಟ್ರಕ್ ತುಂಬುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಪಾಕಿಸ್ತಾನದಿಂದ ತಂದಿರುವ ತಮ್ಮ ಕಿಟ್ ಗಳು...

ರಾಜ್ಯದ 36 ಲಕ್ಷ ಮತದಾರರಿಗೆ ಚುನಾವಣಾ ಆಯೋಗ ನೋಟಿಸ್

newsics.com ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರಿರುವ ಅಥವಾ ಹೆಸರು ನಕಲು ಮಾಡಿರುವ 36 ಲಕ್ಷ ಮತದಾರರಿಗೆ ರಾಜ್ಯ ಚುನಾವಣಾ ಆಯೋಗವು ಭಾರತೀಯ ಅಂಚೆ ಮೂಲಕ ನೋಟಿಸ್ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದೆ. ಹೆಚ್ಚುವರಿಯಾಗಿ, ಮುಂದಿನ...
- Advertisement -
error: Content is protected !!