Sunday, October 1, 2023

ಕೀ ಚೇಂಜ್

Follow Us

  • ಸ್ವಾಮಿ ಪೊನ್ನಾಚಿ

ರಾತ್ರಿ ಸೊಂಟ ತಬ್ಬಲು ಬಂದ ಜಯಂತನನ್ನು ಕೋಪದಿಂದ ಜಾಡಿಸಿ; ಬಿಕ್ಕಳಿಸುತ್ತಾ ಮಲಗಿದ್ದ ದೀಪಾಳಿಗೆ ಎಷ್ಟು ಹೊತ್ತಿಗೆ ನಿದ್ರೆ ಬಂದಿತೋ ತಿಳಿಯದೆ, ಈಗ ದಡಾರನೆ ಎದ್ದು ಗಡಿಯಾರ ನೋಡಿದರೆ ಗಂಟೆ ಎಂಟಾಗಿತ್ತು. ಜಯಂತ ಎದ್ದು ಅದಾಗಲೇ ಕೆಲಸಕ್ಕೆ ಹೊಂಟುಬಿಟ್ಟಿದ್ದ. ಈ ಜಯಂತ ಯಾವಾಗಲೂ ಹೀಗೆಯೇ. ಬೇಗ ಎದ್ದು ತಿಂಡಿ ಮಾಡಿಕೊಟ್ಟರೆ ತೃಪ್ತಿಯಿಂದ ತಿಂದು ಊಟದ ಡಬ್ಬಿಯನ್ನೂ ಕೊಂಡೊಯ್ಯುತ್ತಾನೆ. ಸ್ವಲ್ಪ ಮುನಿಸೇನಾದರೂ ಆಯಿತೋ ಅವನ ಪಾಡಿಗೆ ಅವನು ಎದ್ದು ತಿಂಡಿ ರೆಡಿ ಮಾಡಿಕೊಂಡು ತಿಂದು ಹೊರಟುಬಿಡುತ್ತಾನೆ. ಹೊರಗಡೆ ಸ್ಕೂಲು ವ್ಯಾನಿನ ಹಾರ್ನು. ಪಕ್ಕದ ಮನೆ ಲಲಿತಳ ಅವಳಿ ಮಕ್ಕಳು ಪ್ರಿಲ್ ಒದ್ದುಕೊಂಡು ಸ್ಕೂಲಿಗೆ ಹೊರಡೋದನ್ನ ನೋಡಿದರೆ ಸಾಕು ದೀಪಿಕಾಳ ಕರುಳ್ ಚುರುಕೆನ್ನುತ್ತದೆ. ಮದುವೆಯಾಗಿ ಒಂದೂವರೆ ವರ್ಷವಾದರೂ ಫಲ ಧರಿಸಲಿಲ್ಲ. ಡಾಕ್ಟರ್ ಬಳಿ ವಿಚಾರಿಸುವ ನಡೀರಿ ಎಂದರೆ ಜಯಂತ್ ಈಗ್ಯಾವ ವಯಸ್ಸಾಯ್ತು ಆಗ್ತವೆ ಮಕ್ಕಳು ಎಂದು ಗದರಿಸಿ ಸುಮ್ಮನಾಗಿಸಿಬಿಡುತ್ತಿದ್ದ. ಎಲ್ಲಾ ತಾಯಂದಿರು ಮಕ್ಕಳಿಗೆ ತಿಂಡಿ ತಿನ್ನಿಸಿ ಬಟ್ಟೆ ಹಾಕಿ, ಕೈಲಿ ಬ್ಯಾಗಿಡಿದು ಗೇಟಿನಿಂದ ಆಚೆ ಬಂದು ಮಕ್ಕಳನ್ನು ಮುದ್ದುಗರೆಯುತ್ತಾ ಸ್ಕೂಲು ಬಸ್ಸಿಗಾಗಿ ಕಾಯುತ್ತಿದ್ದರೆ; ತಾನೂ ತನ್ನದೇ ಕನಸಿನ ಲೋಕಕ್ಕೆ ಹೋಗಿಬಿಡುತ್ತಿದ್ದ ದೀಪಿಕಾಳಿಗೆ ಈವತ್ತು ಬೆಳ್ಳಂಬೆಳಗ್ಗೆಯೇ ತಲೆ ಹಿಡಿದುಕೊಂಡು ಬಿಟ್ಟಿತ್ತು. ಬಿಸಿ ಬಿಸಿ ಕಾಪಿ ಇಟ್ಟುಕೊಂಡು ದೊಡ್ಡ ಲೋಟದ ತುಂಬಾ ಗುಟುಕರಿಸಿದವಳಿಗೆ ತಲೆನೋವು ಮತ್ತಷ್ಟು ಜೋರಾಗಿ ರಾತ್ರಿ ನಡೆಸಿದ ಮಾತುಕತೆಯೇ ತಲೆ ತಿನ್ನತೊಡಗಿತ್ತು. ಅದರಿಂದ ಹೊರಬರುವ ಏನೇ ಯೋಚನೆಗಳು ಮಾಡಿದರೂ ಎಲ್ಲಾ ಯೋಚನೆಗಳು ಒಂದಕ್ಕೊಂದು ತಾಳೆ ಹಾಕಿಕೊಂಡು ಮತ್ತದೇ ಮಾತುಕತೆಯ ಸುತ್ತ ಗಿರಕಿ ಹೊಡೆಯುತ್ತಿದ್ದವು. ಹೀಗಾಗಿ ಯೋಚನೆಯನ್ನು ಹತ್ತಿಕ್ಕುವ ಪ್ರಯತ್ನವನ್ನು ಬಿಟ್ಟು ಅದರ ಕುರಿತೇ ಯೋಚಿಸಲು ಶುರುಮಾಡಿದಳು.
ಹಾಗೆ ನೋಡಿದರೆ ಜಯಂತನನ್ನು ತಾನು ಪ್ರೀತಿಸಿ ಮದುವೆಯಾದುದಲ್ಲ. ತಾನು ಪ್ರೀತಿಸಿದ್ದು ತನ್ನದೇ ಊರಿನ ಕೆಳಗಿನ ಕೇರಿಯ ಓದಿನಲ್ಲಿ ಅಸಾದ್ಯ ಬುದ್ದಿವಂತನಾಗಿದ್ದ ಪ್ರೀತಮ್‍ನನ್ನ. ಅವನನ್ನೇ ಮದುವೆಯಾಗಿದ್ದರೆ ಈವತ್ತು ನನಗಿಂತ ದುರ್ಗತಿ ಬರುತ್ತಿರಲಿಲ್ಲವೇನೋ? ಅವನು ಕೆಳಜಾತಿಯವನು, ನಮ್ಮ ಅಂತಸ್ತಿಗೆ ಸರಿಹೊಂದುವುದಿಲ್ಲ, ಅವನನ್ನೇ ಮದುವೆ ಮಾಡಿಕೊಳ್ಳುತ್ತೇನೆಂದು ಹಠ ಹಿಡಿದರೆ ನೇಣುಹಾಕಿಕೊಂಡು ಸಾಯುತ್ತೇವೆ, ಅಂತ ಅಪ್ಪ ಅಮ್ಮ ಹೆದರಿಸಿ ಬ್ಲಾಕುಮೇಲು ಮಾಡಿ ದೂರದ ನೆಂಟರಾದ ಈ ಜಯಂತನಿಗೇ ಕೊಟ್ಟು ಮದುವೆ ಮಾಡಿದ್ದರು. ಸಾಪ್ಟ್‍ವೇರು ಕಂಪನಿಯಲ್ಲಿ ಕೆಲಸ, ಕೈತುಂಬಾ ಸಂಬಳ, ಓಡಾಡೋಕೆ ಕಾರು, ಇರೋಕೆ ಅರಮನೆಯಂಥ ಬಂಗಲೆ, ಹೇಳಿಕೊಳ್ಳೋದಕ್ಕೆ ಮಾತ್ರ ಸ್ವರ್ಗ. ಪ್ರೀತಮ್ ಓದಿದ್ದೂ ಇಂಜಿನಿಯರಿಂಗ್ ತಾನೆ! ಅವನೂ ಜಯಂತ್‍ಗಿಂತ ಹೆಚ್ಚಿನ ಸಂಬಳವನ್ನೇ ತರುತ್ತಿರುತ್ತಾನೆ. ಇವನಿಗಿಂತಲೂ ಬುದ್ಧಿವಂತ. ಅವನನ್ನು ಮದುವೆಯಾಗಿದಿದ್ದರೂ ಚೆನ್ನಾಗಿರಬಹುದಿತ್ತಲ್ಲವೇ…? ಈ ಕಾಲದಲ್ಲೂ ಜಾತಿಗೀತಿ ಅಂತ ಸಾಯುತ್ತಾವಲ್ಲ! ಈ ದೊಡ್ಡವರು. ದೀಪಿಕಾಳಿಗೆ ಖೇದವೆನ್ನಿಸಿತು. ಬೆಳಗ್ಗಿಂದ ಒಂದೇ ಸಮನೆ ಪ್ರೀತಮ್ ನೆನಪಿಗೆ ಬಂದು ಕಾಡಿಸುತ್ತಿದ್ದ. ಎಲ್ಲಿರುವನೋ? ಹೇಗಿರುವನೋ? ತಾನು ಹೀಗೆ ಯೋಚಿಸುತ್ತಿರುವುದು ತಪ್ಪೆನಿಸಿದರೂ ಅದರಲ್ಲಿ ತಪ್ಪೇನಿದೆ? ಈ ಜಯಂತ್ ಆಡಿ ಹೋದ ಮಾತುಗಳಿಗೆ ಹೋಲಿಸಿಕೊಂಡರೆ ಅವನು ನೂರುಪಾಲು ಮೇಲು! ಯಾವತ್ತೂ ಬೇರೆಯವರ ಎದರು ಬಿಟ್ಟು ಕೊಡುತ್ತಿರಲಿಲ್ಲ ನನ್ನನ್ನು. ನನ್ನಿಂದಾಗಿ ಪಾಪ ಯಾವಾಗಲೂ ಅವನೇ ನೋವುಣ್ಣುತ್ತಿದ್ದ. ಯಾರಾದರೂ ನನ್ನನ್ನು ಹೀಯಾಳಿಸಿದರೆ ಅವರ ಕತೆ ಅಷ್ಟೇ!? ಎಲ್ಲಿಯ ಪ್ರೀತಮ್? ಎಲ್ಲಿಯ ಜಯಂತ್…? ಕೊನೇಪಕ್ಷ ತನ್ನನ್ನು ಹೆಂಡತಿಯಿರಲಿ ಒಂದು ಹೆಣ್ಣಾಗಿಯೂ ಕೂಡ ಜಯಂತ್ ನೋಡಲಿಲ್ಲ. ಹೆಣ್ಣಿನ ಭಾವನೆಯನ್ನಂತೂ ಅರ್ಥಮಾಡಿಕೊಂಡ ಮನಿಷ್ಯನೇ ಅಲ್ಲ. ಅದೆಂತದೋ ಕೀಯಂತೆ,ಚೇಂಜಂತೆ, ಕೀ ಸಿಕ್ಕ ಕಾರಿನವನೊಂದಿಗೆ ಒಂದು ರಾತ್ರಿ ಮಲಗಬೇಕಂತೆ! ಥೂ ಅಸಹ್ಯ…! ಹೆಂಡತಿಯನ್ನು ಸೂಳೆಯಾಗಿಸುವ ದರಿದ್ರ ಮನಸ್ಥಿತಿ. ಇದೇನ್ರಿ ನೀವು ಮಾತಾಡ್ತಿರೋದು ಮರ್ಯಾದಸ್ಥರು ಮಾಡೋ ಕೆಲಸವಾ ಇದು ?ನಾಚಿಕೆಯಾಗುದಿಲ್ವಾ ಎಂದರೆ ಅದರಲ್ಲಿ ತಪ್ಪೇನಿದೆ? ಒಂದೇ ವಸ್ತು ಬಳಸಿ ಬೇಜಾರಾದರೆ ಮತ್ತೊಂದು ವಸ್ತುಕೊಂಡು ಕೊಳ್ಳುವುದಿಲ್ಲವೇ…? ನಾನೇನು ದಿನಾ ಮಲಗು ಅಂದೆನಾ? ತಿಂಗಳಲ್ಲಿ ಒಂದು ದಿನ ತಾನೆ…ಕಳ್ಕೋಳ್ಳೋದು ಏನಿದೆ? ಅಡ್ಜೆಸ್ಟ್ ಮಾಡಿಕೊಂಡರಾಯಿತು. ಅವರ ಹೆಂಡತಿಯರ ಜತೆ ನಾನೂ ಮಲಗುತ್ತೇನಲ್ಲ…! ತಪ್ಪೇನು…? ಅನ್ನುತ್ತಾನೆ. ಸಂಬಂಧದ ಬೆಲೆ ಗೊತ್ತಿಲ್ಲದ ಮೂಢ, ಮನುಷ್ಯ ಸಂಬಂಧವನ್ನು ವಸ್ತುಗಳಿಗೆ ಹೋಲಿಸುತ್ತಾನೆ. ಕತ್ತೆ ದುಡಿದಂತೆ ದುಡಿಯುವ, ದುಡ್ಡು, ಶೋಕಿಯಷ್ಟೇ ಗೊತ್ತಿರುವ ಈ ಕಾರ್ಪೋರೇಟ್ ಮಂದಿಗೆ ನಮ್ಮಂಥ ಹಳ್ಳೀಲಿ ಹುಟ್ಟಿ ಬೆಳೆದವರ ಭಾವನೆಗಳು ಹೇಗೆ ಅರ್ಥವಾಗಬೇಕು? ಇವನಿಗಿಂತ ಸಂಸಾರ ಸಾಗಿಸಲು ಹೆಂಡತಿಯರನ್ನು ಸೂಳೆಯರಾಗಿ ಮಾಡುವ ಗಂಡಸರೇ ಎಷ್ಟೋ ಪಾಲು ಮೇಲು. ಅವರದ್ದು ಹೊಟ್ಟೆಪಾಡು. ಇವರದ್ದು ತಿರುಪೆಶೋಕಿ. ಹೆಂಡತಿಯನ್ನು ಹೀಗೆ ಚೇಂಜ್ ಮಡಿಕೊಳ್ಳುವುದು ಈ ವಲಯದಲ್ಲಿ ಅವರಿಗೆ ಕಾಮನ್ ಅಂತೆ. ಅದೂ ಅಲ್ಲದೆ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಬೇರೆಯವರ ಬಳಿ ಮಲಗಿದರೆ ಬೇಗ ಮಕ್ಕಳಾಗುತ್ತವಂತೆ! ಅಂದರೆ ಇವನಿಗೆ ಮಕ್ಕಳುಟ್ಟಿಸುವ ಗಂಡಸ್ತನ ಇಲ್ಲ ಎಂಬುದನ್ನು ಹೀಗೆ ಒಪ್ಪಿಕೊಳ್ಳುತ್ತಿದ್ದಾನೆ ಅಂತಾಯಿತು. ಥೂ ಅನಿಷ್ಟ ಗಂಡು ಜಾತಿಯೇ. ಒಪ್ಪಿದರೆ ಸುಖವಾಗಿ ನೋಡಿಕೊಳ್ಳುತ್ತಾನಂತೆ. ಇಲ್ಲದಿದ್ದರೆ ಡೈವೋರ್ಸ್ ನೀಡುತ್ತಾನಂತೆ. ಸಾರ್ಥಕವಾಯಿತು ಬದುಕು…! ಇಂಥಾ ಮಹಾನ್ ಗಂಡಸರನ್ನು ಕಟ್ಟಿಕೊಳ್ಳುವ ಹೆಣ್ಣು ಮಕ್ಕಳದು. ತಲೆ ಸಿಡಿಯತೊಡಗಿತು. ತಿಂಡಿ ತಿನ್ನದೇ ಹಾಗೇ ಹಾಸಿಗೆಯಲ್ಲೇ ಬಿದ್ದುಕೊಂಡಿದ್ದವಳಿಗೆ ಗಂಟೆ ಹನ್ನೊಂದು ಒಡೆದದ್ದು ಕೇಳಿ ಎದೆ ಡವಗುಟ್ಟತೊಡಗಿತು. ಇಷ್ಟು ದಿನ ಎಷ್ಟು ಬೇಗ ಸಂಜೆಯಾಗುವುದೋ? ಎಂದು ಕಾತರದಿಂದ ಕಾಯುತ್ತಿದ್ದವಳಿಗೆ, ಇಷ್ಟು ಬೇಗ ಕಾಲ ಓಡಿತೊಡಗಿದುದು ನೋಡಿ ದಿಗಿಲು ಬಡಿದಂತಾಯಿತು. ಸಂಜೆ ಆಗುವ ಅನಾಹುತವನ್ನು ನೆನೆದು, ಓಡಿ ಬಿಡಲೇ ತವರಿಗೆ ಎನ್ನಿಸಿತಾದರೂ… ಈಗ ತಾನೆ ಓದುತ್ತಿರುವ ತಮ್ಮ, ಹೊಲದಲ್ಲಿ ಬಿಡುವಿಲ್ಲದೆ ದುಡಿಯುತ್ತಿರುವ ಅಪ್ಪನ ಬಡತನ ನೆನೆದು ಸಂಕಟಕ್ಕಿಟ್ಟುಕೊಂಡಿತು. ಈ ಗಂಡಸರ ಜಾತಿಯೇ ಇಷ್ಟು! ಹೆಂಡತಿಯ ತವರು ಮನೆಗೆ ಅಷ್ಟೋ ಇಷ್ಟೋ ಸಹಾಯ ಮಾಡಿ ಗ್ರೇಟು ಅನ್ನಿಸಿಕೊಂಡು ಬಿಡುತ್ತಾರೆ. ನಾವೋ… ಅವರು ತವರಿಗೆ ಕೊಟ್ಟ ನಾಕು ಕಾಸಿನ ಎಂಜಲು ಋಣಕ್ಕೆ ನಾಯಿಗಿಂತ ಒಂದು ಕೈ ಮೇಲಾಗೇ ನಿಯತ್ತಿನ ದಾಸಿಯಾಗಿಬಿಟ್ಟಿರುತ್ತೇವೆ. ಒಂದು ಒಳ್ಳೇ ನಿರ್ಧಾರವನ್ನೂ ತೆಗೆದುಕೊಳ್ಳಲಾಗುವುದಿಲ್ಲ. ಹಿಂಸೆ ಎನ್ನಿಸಿತು. ನೋಡಿಯೇ ಬಿಡುವಾ ನಾನೋ…? ಅವರೋ…? ಅದ್ಯಾವ ಗಂಡಸು ಈವತ್ತು ಸೆರಗೆಳೆಯುತ್ತಾನೋ ನೋಡಿಬಿಡುತ್ತೇನೆ. ನನ್ನನ್ನಿರಲಿ ಇನ್ಯಾವ ಹೆಂಗಸನ್ನೂ ಬಯಸಬಾರದು. ಹಾಗೆ ಮಾಡುತ್ತೇನೆ ಎಂದು ಮನಸ್ಸಿನಲ್ಲಿ ಏನು ಮಾಡಬಹುದೆಂದು ಅದಾಗಲೇ ನಾಲ್ಕೈದು ಪ್ಲಾನುಗಳನ್ನು ಮಾಡಿಟ್ಟುಕೊಂಡಿದ್ದಳು. ಒಂದು ಉಪಾಯ ಫಲಿಸದಿದ್ದರೆ ಮತ್ತೊಂದು ಪ್ಲಾನು ಮಾಡುವುದೆಂದು ಯೋಜನೆಗಳನ್ನು ಸರಿಮಾಡಿಟ್ಟುಕೊಂಡಿದ್ದಳು. ಈ ಮನುಷ್ಯ ನನಗೆ ಡಿವೋರ್ಸ್ ನೀಡಿ ಮತ್ತೊಬ್ಬಳನ್ನು ಕಟ್ಟಿಕೊಂಡರೂ ಇದೇ ಕೆಲಸ ತಾನೆ ಮಾಡುವುದು! ನಾನೇ ಎಷ್ಟು ಪರಿಪರಿಯಾಗಿ ತಿಳಿ ಹೇಳಿದರೂ ಒಪ್ಪದ ಗಂಡಸು ಮತ್ತೊಬ್ಬಳ ಮಾತು ಕೇಳುವನೇ..? ಉಹೂಂ… ಸಾಧ್ಯವಿಲ್ಲ. ಈವತ್ತು ಹೇಗಾದರೂ ಮಾಡಿ ಇವನಿಗೆ ಮಾತ್ರವಲ್ಲ; ಇವನ ಜತೆ ಇರುವ ಆ ಕಂತ್ರಿ ನಾಯಿಗಳಿಗೂ ಸರಿಯಾಗೇ ಬುದ್ದಿಕಲಿಸಬೇಕೆಂದುಕೊಂಡಳು. ಪಾಪ… ಪ್ರೀತಮ್ ನನ್ನನ್ನು ಎಷ್ಟು ಪ್ರೀತಿಸುತ್ತಿದ್ದ. ಅವನನ್ನು ಮದುವೆಯಾಗಿದ್ದರೆ ದೇವತೆಯಂತೆ ನೋಡಿಕೊಳ್ಳುತ್ತಿದ್ದ. ಅಪ್ಪ ಅಮ್ಮನ ಮಾತು ಕೇಳಿ ತಪ್ಪು ಮಾಡಿಬಿಟ್ಟೆ ಎನ್ನಿಸಿತು. ಈವತ್ತು ಇಷ್ಟೆಲ್ಲಾ ಅನುಭವಿಸೋ ಬದಲು ಆವತ್ತು ಅವನೊಂದಿಗೆ ಓಡಿ ಹೋಗಿದ್ದರೂ ಚೆನ್ನಾಗಿರಬಹುದಿತ್ತು. ಸ್ವಲ್ಪ ದಿನ ಅಪ್ಪ ಅಮ್ಮ ನೊಂದುಕೊಳ್ಳುತ್ತಿದ್ದರು. ಆಮೇಲೆ ಎಲ್ಲಾ ಸರಿ ಹೋಗೋದು. ಎಷ್ಟು ಜನ ಹೀಗೆ ಓಡಿ ಹೋಗಿ ಚೆನ್ನಾಗಿಲ್ಲ ಹೇಳಿ. ಅಧ್ಬುತವಾಗಿ ಬದುಕುತ್ತಿದ್ದಾರೆ. ಈ ತರಹ ಸಭ್ಯಸ್ಥರ ಮುಖವಾಡ ಹಾಕಿಕೊಂಡು ಮಾಡಬಾರದೆಲ್ಲ ಮಾಡಿಸುವ ಇವರಿಗಿಂತ; ಆ ಜೀವನವೇ ಮೇಲು ಅನ್ನಿಸಿತು. ಇನ್ನು ಎಷ್ಟು ಯೋಚಿಸಿ ಏನು ಪ್ರಯೋಜನವೆಂದು ಎದ್ದು ಮನೆ ಕೆಲಸವೆಲ್ಲ ಮುಗಿಸಿ ಸ್ನಾನ ಮಡಿ ಮಾಡಿಕೊಂಡು ಸಿದ್ಧವಾಗಿ ಜಯಂತ್ ಬರುವುದನ್ನೇ ಕಾದು ಕುಂತಳು. ಬೇಜಾರಿನಲ್ಲಿ ಟೀವಿ ಆನ್ ಮಾಡಿದವಳಿಗೆ “ ಬಾನಿನಲ್ಲಿ ಒಂಟಿತಾರೆ… ಸೋನೆ ಸುರಿವಾ ಇರುಳಾ ಮೋರೆ… ಕತ್ತಲಲ್ಲಿ ಕುಳಿತು ಮುಳುಗೇ… ಬಿಕ್ಕುತಿಹಳು ಯಾರೋ ನೀರೆ… ಎಲ್ಲಿ ಜಾರಿತೋ… ಮನವು… ಭಾವಗೀತೆ ಯಾರೋ ಹಾಡುತ್ತಿದ್ದುದ ನೋಡಿ ರೋಸಿ ಹೋಗಿ ಟೀವಿ ಆಫ್ ಮಾಡಿದಳು.
ಸಂಜೆ ಆರಾಗುತ್ತಿದ್ದ ಹಾಗೆ ಬಾಗಿಲು ದೂಡಿಕೊಂಡು ಒಳಗೆ ಬಂದ ಜಯಂತ, ನಗುತ್ತಲೇ ದೀಪು… ರೆಡಿನಾ…? ಎಂದ. ಸಿನಿಮಾಗೆ ಕರೆದೊಯ್ಯುವ ರೇಂಜಿಗೆ ರೇಡಿನಾ ಅಂತ ಕೇಳುತ್ತಿದ್ದಾನಲ್ಲ. ನಾಚಿಗೆ ಬಿಟ್ಟ ಗಂಡಸೇ ಎಂದು ಮೈ ಉರಿಯುತ್ತಿದ್ದರೂ ತೋರಿಸಿಕೊಳ್ಳದೇ `ಹುಂ’ ಎಂದಳು. ಬಲು ಜಾಣೆ ಎಷ್ಟು ಬೇಗ ಅರ್ಥ ಮಾಡಿಕೊಂಡೇ ಎಂದು ಅವಳ ಕೆನ್ನೆ ಚಿವುಟಿ, ಬಟ್ಟೆ ಬಿಚ್ಚೆಸೆದು ಸ್ನಾನದ ಮನೆಗೆ ಹೋಗಿ ಹತ್ತು ನಿಮಿಷದಲ್ಲೇ ವಾಪಸ್ ಬಂದ. ಅರ್ಧ ಗಂಟೆಯಾದರೂ ಸ್ನಾನ ಮುಗಿಸದಿದ್ದವನು ಇಷ್ಟು ಬೇಗ ಸ್ನಾನ ಮಾಡಿ ಮುಗಿಸಿ ಬಂದನಲ್ಲ! ಎಂಥಾ ಆತುರವಿರಬೇಕು ಕೆಟ್ಟಾ ಕೊಳಕು ಕಾಮದಾಟಕ್ಕೆ ಮನುಷ್ಯನಿಗೆ. ಒಳಗೇ ಕುದಿಯತೊಡಗಿದಳು. ಆತುರಾತುರವಾಗಿ ಬಟ್ಟೆ ಹಾಕಿಕೊಂಡು ಮೈಕೈಗೆಲ್ಲಾ ಸೆಂಟು ಬಡಿದಿಕೊಂಡ ಜಯಂತ್ ಸರಿ ನಡಿ ಎಂದು ಹೂರ ನಡೆದ. ವಧಾಸ್ಥಾನಕ್ಕೆ ಹೊರಡುವ ಕುರಿಯಂತೆ ತಲೆ ತಗ್ಗಿಸಿ ಲಜ್ಜೆಯಿಂದ ಅವಳು ಅವನ ಹಿಂದೆ ಹೆಜ್ಜೆ ಹಾಕಿದಳು.
ವೆಸ್ಟ್ರನ್ ಗಾರ್ಡ್ ಹೋಟೆಲಿನ ವರಾಂಡಕ್ಕೆ ಕಾಲಿಟ್ಟ ಕೂಡಲೇ ದೀಪಿಕಾಳಿಗೆ ನರಕದ ಮೆಟ್ಟಿಲು ತುಳಿದಂತಾಯಿತು. ಸೊಂಟ ಮುಟ್ಟಿ ನೋಡಿಕೊಂಡಳು ಸಮಾಧಾನವಾದಂತೆನಿಸಿತು.ಅಲ್ಲಿಂದ ದಕ್ಷಿಣಕ್ಕೆ ಇರುವ ಒಂದು ರೂಮಿನತ್ತ ಕರೆದೊಯ್ದ. ಆ ರೂಮಿನ ಒಂದು ಕಾರ್ನರಿನ ಮಂದ ಬೆಳಕಿನಲಿ ನಾಲ್ಕೈದು ತನ್ನಂತೆಯೇ ಸಿಂಗಾರ ಮಾಡಿಕೊಂಡು ಕೂತ ಹೆಂಗಸರು ಕಿಲಕಿಲನೆ ನಗುವುದ ಕಂಡ ಜಯಂತ್ ಇವಳನ್ನ ಅತ್ತ ಕರೆದುಕೊಂಡು ಹೋಗಿ, ದಿಸ್ ಇಸ್ ಮೈ ವೈಪ್ ದೀಪಿಕಾ ಅಂತ ಅವರಿಗೆ ಪರಿಚಯ ಮಡಿಕೊಡುವಷ್ಟರಲ್ಲಿ ಅದೇ ಗುಂಪಿನ ಹೆಂಗಸೊಂದು “ ಐ.. ನೋ… ಐ ವಿಲ್ ಮ್ಯಾನೇಜ್, ಯೂ ಮೇ ಗೋ ನೋ… ಕ್ವಿಕ್.. ಡೋಂಡ ಸ್ಟಾಂಡ್ ಇಯರ್” ಎಂದಳು. ಅವನು ದೀಪಿಕಾಳನ್ನು ಅಲ್ಲೇ ಬಿಟ್ಟು ಸರಸರನೆ ಹೆಜ್ಜೆ ಹಾಕಿದನು ರೂಮಿನತ್ತ. ಅಲ್ಲಿ ಹಾಗೆಯೇ. ಒಮ್ಮೆ ಗಂಡಸರು ಕೀ ಹಾಕುವ ಸರದಿ. ಮತ್ತೊಮ್ಮೆ ಹೆಂಗಸರದ್ದು. ಈ ಬಾರಿ ಕೀ ಹಾಕುವ ಸರದಿ ಹೆಂಗಸರದ್ದಾಗಿದ್ದರಿಂದ ಅದಾಗಲೇ ಅವರ ಗಂಡಂದಿರು ತಮ್ಮ ತಮ್ಮ ರೂಮಿನೊಳಗೆ ಹೋಗಿ ಕುಳಿತುಕೊಂಡಿದ್ದರು. ಬೆಪ್ಪನೆ ಭಯದಿಂದ ನೋಡುತ್ತಿದ್ದ ದೀಪಿಕಾಳನ್ನು ಕೈ ಹಿಡಿದು ಪಕ್ಕದ ಖುರ್ಚಿಯಲ್ಲಿ ಕುಳ್ಳಿರಿಸಿಕೊಂಡ ಹೆಂಗಸು `ಯೂ… ಡೋಂಟ್‍ವರಿ, ಮೊದಲು ಹೀಗಾಗುತ್ತೆ. ಆಮೇಲೆ ಅದೆಲ್ಲಾ ಕಾಮನ್ನು ಅನ್ಸುತ್ತೆ. ಚಿಯರ್ ಅಪ್ ಎಂದಳು. ಗಂಡಸರ ಜಾತಿಯನ್ನು ಬೈಕೊಂಡು ಬಂದಿದ್ದ ದೀಪಿಕಾ… ಬೆದೆಗೆ ಬಂದ ನಾಯಿಗಳಂತೆ ಇವರು ಆಡುತ್ತಿರುವುದು ನೋಡಿ ಇನ್ನು ಇವರಿಗೆ ಏನು ತಾನೆ ಹೇಳಲಿ…? ಏನು ಪ್ರಯೋಜನ ಹೇಳಿ…! ಎಂದು ತಲೆ ಮೇಲೆ ಕೈ ಹೊತ್ತು ಯೋಚಿಸುತ್ತಾ ಕುಳಿತಳು. ಎಲ್ಲರೂ ತಮ್ಮ ತಮ್ಮ ಕಾರಿನ ಕೀಗಳನ್ನು ಟೇಬಲ್ ಮೇಲಿಟ್ಟರು.ಏನು ಮಾಡಬೇಕೆಂದು ತೋಚದೆ ಸುಮ್ಮನೆ ಕುಳಿತಿದ್ದ ದೀಪಿಕಾಳ ಕೈಲಿದ್ದ ಕೀಯನ್ನು ಬಲವಂತವಾಗೇ ಕಿತ್ತು ಅದಕ್ಕೊಂದು ನಂಬರ್ ನೀಡಿ ಟೇಬಲ್ಲಿನ ಕೀಗಳೊಂದಿಗೆ ಅದಲು ಬದಲು ಗುಡ್ಡೆ ಹಾಕಿದರು.ಎಲ್ಲರೂ ಅವ್ವ ಅಪ್ಪಚ್ಚಿ ಆಟವಾಡಲು ಕೈ ಮುಂದೆ ಮಾಡುವಂತೆ ಮಾಡಿದಾಗ ದೀಪಿಕಾಳು ಕೂಡ ಹಾಗೇ ಮಾಡಿದಳು.ಅಲ್ಲಿದ್ದ ಒಬ್ಬ ಹೆಂಗಸು ಸ್ಟಾರ್ಟ್ ಎಂದಳು. ಅದೇ ಪಳಗಿದ್ದ ಲೇಡಿಗಳು ತಕ್ಷಣ ಅಲ್ಲಿದ್ದ ಕೀಗಳನ್ನು ತಲೆಗೆ ಒಂದರಂತೆ ತೆಗೆದುಕೊಂಡರು. ಕೊನೆಯಲ್ಲಿ ಉಳಿದ ಒಂದು ಕೀಯನ್ನು ದೀಪಿಕಾಳಿಗೆ ಕೊಟ್ಟು ಅದರಲ್ಲಿದ್ದ ಆರನೇ ನಂಬರಿನ ರೂಮಿಗೆ ಹೋಗುವಂತೆ ಹೇಳಿ ತಾವು ಅತ್ಯಾವಸರವಾಗಿ ತಮ್ಮ ತಮ್ಮ ನಂಬರುಗಳ ರೂಮಿನತ್ತ ನಡೆದರು. “ ಅಯ್ಯೋ ಭಾರತ ದೇಶದ ಹೆಣ್ಣುಮಕ್ಕಳೇ… ನೀವೂ… ಆ ಗಂಡ ಜಾತಿಯಂಗೆ ಆಡುತ್ತೀರಲ್ಲ! ಫಾರೀನ್ ಕಂಟ್ರಿಯಲ್ಲೂ ಕೂಡ ಈ ತರ ಮಾಡುವುದಿಲ್ಲವೇನೋ? ಎಲ್ಲಿಗೆ ಬಂತಪ್ಪ ನಮ್ಮ ಹೆಣ್ಣುಮಕ್ಕಳ ಜೀವನ ಎಂದು ಮರುಕವುಂಟಾಗಿ ಕೀ ತೆಗೆದುಕೊಂಡು ಏನೇನೋ ಯೋಚಿಸುತ್ತಾ ನಿದಾನವಾಗಿ ರೂಂ ನಂಬರ್ ಆರನ್ನು ಹುಡುಕಿಕೊಂಡು ಹೋದಳು.
ಆರನೇ ನಂಬರಿನ ರೂಮಿನ ಎದುರು ನಿಂತವಳಿಗೆ ಎದೆ ಡವಡವ ಎಂದು ಹೊಡೆದುಕೊಳ್ಳತೊಡಗಿತು. ಇಲ್ಲಿಂದ ಓಡಿ ಬಿಡಲೇ ಎನ್ನಿಸಿ, ಎತ್ತ ಹೋಗುವುದು? ಏನು ಮಾಡುವುದು? ಓಡಿ ಹೋಗುವ ಸಮಯವಲ್ಲ ಇದು. ಏನಾದರೊಂದು ಗತಿ ಕಾಣಿಸಿ ಓಡಿಹೋಗುವ ಎಂದು ಯೋಚಿಸಿ ಧೈರ್ಯ ತಂದುಕೊಂಡು ಬಾಗಿಲು ತಟ್ಟಿದಳು. `ಕಮ್ ಇನ್’ ಎಂದಿತು ಒಳಗಿನ ದನಿ. ನಡುಗುವ ಕೈಗಳಿಂದ ಚಿಲಕ ತಳ್ಳಿ ಒಳ ಹೋದವಳು ಹಾಗೆ ಸ್ಥಬ್ಧಳಾಗಿ ನಿಂತುಬಿಟ್ಟಳು. ಇವಳನ್ನು ನಿರೀಕ್ಷಿಸಿರದ ಪ್ರೀತಮ್ ದಡಾರನೆ ಎದ್ದು ನಿಂತು ತಲೆ ತಗ್ಗಿಸಿ ನಿಂತುಕೊಂಡು ಏನು ಮಾತಾಡಬೇಕೆಂದು ತೋಚದೆ ಅದು…ಅದು….ಎಂದು ತೊದಲಲು ಶುರುಮಾಡಿದಾಗ “ಥೂ ದರಿದ್ರ ಗಂಡಸೇ,ನಿನ್ನ ದೇವ್ರು ಅನ್ಕೊಂಡಿದ್ನಲ್ಲೋ.ನೀನು ಅದೇ ಜಾತಿಗೆ ಸೇರ್ಬಿಟಾ? ನಾಚಿಕೆಯಾಗುದಿಲ್ವಾ ನಿಂಗೆ ಈ ಕೆಲಸ ಮಾಡೋದಕ್ಕೆ.ಪಾಪ ಏನೇನೋ ಕನಸಿಟ್ಟುಕೊಂಡು ಮದುವೆ ಆದಳೋ ನಿನ ಹೆಂಡ್ತಿ,ಅಂಥವರನ್ನ ಬೇರೆಯವರಿಗೆ ಒಪ್ಪಿಸ್ತೀರಲ್ಲ!ನಿಮ್ಮಂತೋರ್ನ ಸುಮ್ನೆ ಬಿಡ್ಬಾರ್ದು. ಎಂದು ಸೊಂಟದಲ್ಲಿದ್ದ ಚಾಕುವಿಕೆ ಕೈ ಹಾಕಿದಳು.ಅಷ್ಟೊತ್ತಿಗೆ ಸರಿಯಾಗಿ ಪಕ್ಕದ ರೂಮಿನ ಬಾಗಿಲನ್ನು ದಢಾರನೆ ಒದ್ದುಕೊಂಡು ಈಚೆ ಬಂದ, ಆ ಹೆಣ್ಣುಮಗಳ ಕೈಲಿದ್ದ ಚಾಕುವಿನಿಂದ ರಕ್ತ ತೊಟ್ಟಿಕ್ಕುತಿತ್ತು.ಗಾಬರಿ ಬಿದ್ದು ರೂಮಿನಲ್ಲಿ ಹೋಗಿ ನೋಡಿದರೆ ಜಯಂತ್ ಕುತ್ತಿಗೆಯಿಂದ ಹಸಿ ರಕ್ತ ಕಾರುತಿತ್ತು.
“ ಬಹಳ ದಿನಗಳ ಹಿಂದೆ ಬೆಂಗಳೂರಿನಲ್ಲಿ ಹೀಗೆ ಕೀ ಚೇಂಜ್ ಮಾಡಿಕೊಳ್ಳುವ ಗುಂಪಿನ ಪ್ರಕರಣವೊಂದನ್ನು ಪೋಲೀಸರು ಭೇದಿಸಿ ಬಯಲಿಗೆಳಿದಿದ್ದರು. ಅದರಿಂದ ಪ್ರೇರಿತ ಕಥೆ”.

ಮತ್ತಷ್ಟು ಸುದ್ದಿಗಳು

vertical

Latest News

ಹಳ್ಳಕ್ಕೆ ಉರುಳಿದ ಬಸ್: 8‌ ಮಂದಿ‌ ಸಾವು, 25 ಪ್ರಯಾಣಿಕರಿಗೆ ಗಾಯ

newsics.com ಚೆನ್ನೈ: ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿ ಶನಿವಾರ ಪ್ರವಾಸಿ ಬಸ್ ಹಳ್ಳಕ್ಕೆ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು...

ಅಕ್ಟೋಬರ್‌ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಸಾಧ್ಯತೆ!

newsics.com ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಮತ್ತು ಸಾಮಾನ್ಯಕ್ಕಿಂತ ಹೆಚ್ಚು ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ. ತಮಿಳುನಾಡು, ಕರಾವಳಿ...

ಕರ್ನಾಟಕದಲ್ಲಿ ಈ ಬಾರಿ ಶೇ. 25ರಷ್ಟು ಮಳೆಯ ಕೊರತೆ

newsics.com ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಅವಧಿಯಲ್ಲಿ ಈ ವರ್ಷ ಶೇ 25ರಷ್ಟು ಮಳೆ ಕೊರತೆಯಾಗಿದೆ. ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗಿನ ನಾಲ್ಕು ತಿಂಗಳಲ್ಲಿ ಒಟ್ಟು 845 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, 635...
- Advertisement -
error: Content is protected !!