Saturday, December 2, 2023

ಗೂಡು

Follow Us

ಅಜಿತ್ ಹೆಗಡೆ

ಗಂಟೆ ಐದೂ ಕಾಲು. ಬೆಂಚಿನ ಮೇಲೆ ಚೆಲ್ಲಿದ್ದ ಒಂದಿಷ್ಟು ಸಕ್ಕರೆ. ಕವಾಯತು ಹೊರಟ ಸೇನೆಯಂತೆ, ಒಂದೊಂದೇ ಸಕ್ಕರೆ ಅಗುಳನ್ನು ಕಚ್ಚಿಕೊಂಡು ಹೋಗುತ್ತಿರುವ ಇರುವೆಯ ಸಾಲು. ಇನ್ನೂ ಸಕ್ಕರೆ ಸಿಗದ ಇರುವೆಗಳ ಧಾವಂತ. ಕಚ್ಚಿಕೊಂಡು ಹೋಗುತ್ತಿರುವ ಇರುವೆಗಳಿಂದ ಸಕ್ಕರೆಯನ್ನು ಕಸಿದುಕೊಳ್ಳಲು ಯಾವುದೇ ಪ್ರಯತ್ನವನ್ನು ಮಾಡದೇ ಸಕ್ಕರೆ ರಾಶಿಯೆಡೆಗೆ ಎದುರುಗಡೆಯಿಂದ ಬರುತ್ತಿರುವ ಮತ್ತೊಂದು ಇರುವೆಯ ಸಾಲು! ಸುಮಾರು ಹತ್ತು ನಿಮಿಷಗಳಿಂದ ತದೇಕಚಿತ್ತಳಾಗಿ ಗಮನಿಸುತ್ತಿದ್ದವಳಿಗೆ ತಟ್ಟನೆ ನೆನಪಾದ ಮಾತು, ‘ಬದುಕು ಮತ್ತು ಬದುಕಲು ಬಿಡು’. ಉಳಿವಿಗಾಗಿ ಹೋರಾಟ ಎಂಬ ಪರಿಕಲ್ಪನೆ ಯಾಕೋ ಸ್ವಲ್ಪ ಮಂಕಾದಂತೆನಿಸಿತು.

‘ಬರೀ ನಾಲ್ಕು ಪರ್ಸೆಂಟ್ ಡಿ.ಎ. ಅನೌನ್ಸ್ ಮಾಡಿದೆ ಗೌರ್ಮೆಂಟು, ಏನುಪಯೋಗ ? ತಥ್’ ಎಂಬ ಸಹೋದ್ಯೋಗಿಯ ಎತ್ತರದ ಹತಾಶೆಯ ಧ್ವನಿಗೆ ಬೆಚ್ಚಿದಂತೆ ಎಚ್ಚೆತ್ತೆ. ಮುಂದಿನ ಹತ್ತು ನಿಮಿಷಗಳ ಚರ್ಚೆ ಕೇವಲ ಡಿ.ಎ. ಸುತ್ತಲೇ ಸುತ್ತುತ್ತಿತ್ತು. ಅಷ್ಟರಲ್ಲಿ ಕಚೇರಿಯ ಸಮಯ ಮುಕ್ತಾಯವಾಗಿತ್ತು.

ಯಾಂತ್ರಿಕವಾಗಿ ಖಾಲಿ ಊಟದ ಡಬ್ಬಿಯನ್ನು ಬ್ಯಾಗಿನೊಳಗೆ ತುರುಕಿ ಇತರರೊಂದಿಗೆ ಹೆಜ್ಜೆ ಹಾಕುತ್ತಿದ್ದಾಗ ತಲೆಯಲ್ಲೊಂದು ಅಡ್ಡ ಯೋಚನೆ. ವರ್ಷಕ್ಕೆ ಎರಡೆರೆಡು ಬಾರಿ ಸಿಗುವ ಡಿ.ಎ. ಗಾಗಿ ಹೊಡೆದಾಡುವ ನಾವು ಒಂದು ಪರ್ಸೆಂಟ್‍ನಷ್ಟಾದರೂ ಹೆಚ್ಚು ಸಮಯ ಕೆಲಸ ಮಾಡುವ ಮನಸ್ಸು ಮಾಡುವುದಿಲ್ಲವೇಕೆ ? ಯೋಚನೆ ಮಾತಿನ ರೂಪ ಪಡೆದರೆ ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತೆಂದು ಹೆದರಿ, ತೆಪ್ಪಗೆ ಸಿಟಿ ಬಸ್‍ಸ್ಟಾಪ್‍ನತ್ತ ಹೆಜ್ಜೆ ಹಾಕತೊಡಗಿದೆ.

ಅದೇ ಜನಜಂಗುಳಿ. ಗೂಡಂಗಡಿಗಳಲ್ಲಿ ವ್ಯಾಪಾರದ ಭರಾಟೆ. ಹಣ್ಣು ಮಾರುವವರ ತಾರಕಕ್ಕೇರಿದ ಕೂಗು. ಬಸ್ಸೊಂದು ಬಂದ ತಕ್ಷಣ ಮುತ್ತಿದ ಜನ. ಸೀಟಿನಲ್ಲಿ ಕುಳಿತು ಜಗಿದ ಎಲೆ ಅಡಿಕೆಯನ್ನು ಕಿಟಕಿಯಿಂದ ಬಗ್ಗಿ ಪಿಚಕ್ಕನೇ ದೂರಕ್ಕೆ ಹಾರುವಂತೆ ಉಗುಳಿ ಸೆರಗಿನಿಂದ ಬಾಯೊರೆಸಿಕೊಂಡಿತೊಂದು ಅಜ್ಜಿ. ಒಂದು ಕೈಯನ್ನು ಜೇಬಿನಲ್ಲಿ ಇಳಿಬಿಟ್ಟು ಇನ್ನೊಂದು ಕೈಯಿಂದ ತನ್ನ ಕ್ರಾಪನ್ನು ಸರಿಪಡಿಸಿಕೊಳ್ಳುತ್ತಾ ಬಸ್ಸಿನೆಡೆಗೆ ದಾಪುಗಾಲು ಹಾಕುತ್ತಿರುವ ಯುವಕ. ಆತನ ಹಿಂದೆಯೇ ಕಂಕುಳಲ್ಲಿ ಪುಟ್ಟ ಕೂಸೊಂದನ್ನು ಎತ್ತಿಕೊಂಡು ಇನ್ನೊಂದು ಕೈಯಲ್ಲಿ ಏರ್‍ಬ್ಯಾಗ್ ಹಿಡಿದು ಆತನ ಸಮಕ್ಕೆ ಹೆಜ್ಜೆ ಹಾಕಲಾಗದೇ ಏದುಸಿರು ಬಿಡುತ್ತಾ ಬರುತ್ತಿದ್ದ ಹೆಂಗಸು. ಅಂತೂ ಇಂತೂ ಆಕೆ ಕಷ್ಟಪಟ್ಟು ತನ್ನ ಬ್ಯಾಗನ್ನು ಬಸ್ಸಿನೊಳಕ್ಕೆ ಹಾಕಿ ನಂತರ ತಾನೂ ಬಸ್ಸನ್ನೇರಿದಾಗ, ಅಬ್ಬಾ… ಸದ್ಯ ಎಂಬ ನಿಟ್ಟುಸಿರು. ಈ ಚಂದಕ್ಕೆ ಮದುವೆ ಏಕೆ ? ಎಂದು ಕೇಳುವ ಈಗಿನ ಕಾಲದ ಹುಡುಗಿಯರ ಪ್ರಶ್ನೆಯೂ ಸರಿಯಾದದ್ದೇ ಎನಿಸತೊಡಗಿ, ಸಮಾನತೆಯ ಆಶಯ ಇನ್ನೂ ಮರೀಚಿಕೆಯೇ ! ಎಂಬ ಭಾವ ಮನದಲ್ಲಿ ಹಾದು ಹೋಯಿತು.

ಬೇಡ ಬೇಡವೆಂದರೂ ಕಣ್ಣುಗಳು ಹಣ್ಣಿನಂಗಡಿಯ ಮುಂದೆ ರಸ್ತೆ ಬದಿಯಲ್ಲಿ ಕುಳಿತ ಆ ಹಣ್ಣು ಹಣ್ಣು ಮುದುಕನ ಕಡೆಗೆ ಹೊರಳಿದ್ದವು. ಕೊಳೆಗಟ್ಟಿದ ತುಂಡು ಪಂಚೆ, ಮಾಸಿಹೋದ ಹಾಫ್ ತೋಳಿನ ಷರಟು, ಸುಮಾರು ಎಪ್ಪತ್ತೈದರ ಆಸುಪಾಸಿನಲ್ಲಿರಬಹುದು. ಅದೇ ಗುಳಿಬಿದ್ದ ನಿರ್ವಿಕಾರವಾದ ಕಣ್ಣುಗಳು. ಯಾರಾದರೂ ತನ್ನ ಬಳಿಗೆ ಬರಬಹುದೆಂಬ ನಿರೀಕ್ಷೆ. ಹಾಸಿಕೊಂಡಿದ್ದ ದೊಡ್ಡ ಗೋಣಿಚೀಲದ ಮುಂಭಾಗವನ್ನು ಮಡಚಿಕೊಂಡು ಅದರ ಮೇಲೆ ತೂಕ ಮಾಡುವ ಹಳೆಯ ಕಾಲದ ದುಂಡನೆಯ ಮಷೀನನ್ನು ಇಟ್ಟುಕೊಂಡು ಜನರೆಡೆಗೆ ಪಿಳಿ ಪಿಳಿ ಕಣ್ಣು ಬಿಡುತ್ತಾ ಕಾಯುವ ಈ ಮುದುಕನನ್ನು ಈಗ್ಗೆ ಸುಮಾರು ದಿನಗಳಿಂದ ಗಮನಿಸುತ್ತ ಬಂದಿದ್ದೇನೆ. ಯಾವಾಗಲಾದರೂ ಒಬ್ಬಿಬ್ಬರು ಈ ತಾತನ ಬಳಿಗೆ ಬಂದು ಆ ಮಷೀನಿನ ಮೇಲೆ ಹತ್ತಿ ನಿಂತಾಗ ಅಜ್ಜ ತನ್ನ ಬಾಗಿದ ಬೆನ್ನನ್ನೇ ಮತ್ತಷ್ಟು ಬಾಗಿಸಿ ಕಣ್ಣು ಕಿರಿದು ಮಾಡಿ, ತೂಕವನ್ನು ಹೇಳಿ, ಅವರು ಕೊಟ್ಟ ಐದು ರೂಪಾಯಿಯನ್ನು ಗೋಣಿಚೀಲದ ಮಡಕೆಯೊಳಗೆ ಹಾಕುವುದು. ಇದು ಈ ತಾತನ ನಿತ್ಯ ಕಾಯಕವಾಗಿತ್ತು.

ಬಸ್ಸು ಹೊರಟ ರಭಸಕ್ಕೆ ಎದ್ದ ಧೂಳಿಗೆ ಅಜ್ಜ ಕೆಮ್ಮಲು ಶುರು ಮಾಡಿದ. ಉಸಿರ ತಿತ್ತಿಯಿಂದ ಎಡೆಬಿಡದೆ ಹತ್ತಿದ ಕೆಮ್ಮಿಗೆ ತಾತ ಆಯಾಸಪಡತೊಡಗಿದ. ಯಾಕೋ ನಾಭಿಯಾಳದಿಂದ ಸಂಕಟ ಇಣುಕಿದಂತಾಯಿತು. ತಕ್ಷಣ ಬ್ಯಾಗಿನಿಂದ ನೀರಿನ ಬಾಟಲಿ ತೆಗೆದು ಅಜ್ಜನಿಗೆ ಕೊಡುವಷ್ಟರಲ್ಲಿ ನನ್ನ ಬಸ್ಸು ಬಂದಿದ್ದು ಕಂಡು, ‘ಅಜ್ಜಾ, ನೀರು ಕುಡಿ ಬಾಟಲಿ ನಾಳೆ ಕೊಡುವಿಯಂತೆ’ ಎನ್ನುತ್ತಾ ಬಸ್ಸಿನೊಳಗೆ ತೂರಿ ನಿಂತಾಗ ಎಂಥದೋ ಒಂದು ಕೃತಜ್ಞತಾ ಭಾವ ಉಂಟಾಗಿತ್ತು.

ಕಾಂಪೌಂಡಿನೊಳಗೆ ಚಪ್ಪಲಿಗಳನ್ನು ಹೇಗೆಂದರಾಗೆ ಬಿಟ್ಟು ಒಳ ಬಂದು, ತೆರೆದೇ ಇದ್ದ ಬಾಗಿಲನ್ನು ಹಾಕಿ, ಸೋಫಾದ ಮೇಲೆ ಒರಗಿ ಕಾಲುಗಳನ್ನು ನನ್ನಿಷ್ಟಕ್ಕೆ ತಕ್ಕಂತೆ ಚಾಚಿದಾಗ ತುಸು ಹಾಯೆನಿಸಿತು. ಅದಾಗಲೇ ಮೇಲಿನ ಬೆಡ್‍ರೂಂನಲ್ಲಿ ಅಪ್ಪ ಮಗನ ಜಗಳ ಜೋರು ದನಿಯಲ್ಲಿ ನಡೆದಿತ್ತು. ರಾತ್ರಿ ಊಟ ಮಾಡುವಾಗ ಅದೇ ರಾಗ, ಅದೇ ಹಾಡು ಎಂಬಂತೆ ಪತಿರಾಯರ ವರಾತ ಶುರುವಾಯಿತು. ನಡೆದಿದ್ದಿಷ್ಟೇ…

ಮೇಲಿನ ಮಹಡಿಯ ಟಾಯ್ಲೆಟ್ ರೂಮಿನಲ್ಲಿರುವ ಕಮೋಡ್ ನೇರಕ್ಕೆ ಇರುವ ಕಿಟಕಿಗೆ, ಮೇಲಿನಿಂದ ಮುಚ್ಚುವ ಬಾಗಿಲು ಕೂರಿಸಿದ್ದು, ಅದನ್ನು ಅರ್ಧ ತೆರೆಯಲಾಗಿದೆ. ನಡುವಿನ ಗ್ಯಾಪಿನಲ್ಲಿ ಗುಬ್ಬಿಗಳೆರಡು ಸುಮಾರು ಆರು ತಿಂಗಳಿನಿಂದ ಗೂಡು ಕಟ್ಟಿಕೊಂಡು ವಾಸವಾಗಿವೆ. ಅವು ತಮ್ಮ ಕೊಕ್ಕಿನಿಂದ ಒಂದೊಂದೇ ಹುಲ್ಲುಗರಿಯನ್ನು ತಂದು ಈ ಗೂಡು ನಿರ್ಮಿಸಿದ ಪರಿ ನಿಜಕ್ಕೂ ಸೋಜಿಗದ್ದು. ಹದಿನೈದು ದಿನಗಳ ಅವಧಿಯಲ್ಲಿ ಅವುಗಳ ಗೂಡು ಸಂಪೂರ್ಣವಾಗಿ ನಿರ್ಮಾಣಗೊಂಡಿತ್ತು. ಮಧ್ಯದ ಕೆಲವು ದಿನಗಳಲ್ಲಿ ಅವುಗಳ ಸುದ್ಧಿಯೇ ಇರಲಿಲ್ಲ. ಮೊದಮೊದಲು ನಾವು ಟಾಯ್ಲೆಟ್‍ನ ಒಳಗೆ ಹೋದ ತಕ್ಷಣ ಎರಡೂ ಗುಬ್ಬಿಗಳೂ ಬೆಚ್ಚಿ ಹಾರಿ ಹೋಗುತ್ತಿದ್ದವು. ಒಮ್ಮೆಯಂತೂ ನಾನು ಒಳಗೆ ಹೋದ ತಕ್ಷಣ ಬೆದರಿದ ಒಂದು ಗುಬ್ಬಿ ಹೊರಕ್ಕೆ ಹಾರುವ ಬದಲು, ಕೋಣೆಯೊಳಕ್ಕೆ ಬಂದು, ದಾರಿ ಕಾಣದಂತಾಗಿ, ಪರದಾಡಿದ್ದನ್ನು ಕಂಡು ನಾನೇ ರೂಮಿನಿಂದ ಹೊರಬಂದು ಬಾಗಿಲು ಹಾಕಿಕೊಂಡು ಎಷ್ಟೋ ಹೊತ್ತಿನ ನಂತರ ಗುಬ್ಬಿ ಪುನಃ ಗೂಡು ಸೇರಿತ್ತು. ಹೆಚ್ಚಾಗಿ ನಾನೊಬ್ಬಳೇ ಬಳಸುವ ಆ ಟಾಯ್ಲೆಟ್‍ನಲ್ಲಿ ಕ್ರಮೇಣ ನನಗೂ ಆ ಗುಬ್ಬಿಗಳಿಗೂ ನಡುವೆ ಒಂದು ಬಗೆಯ ರಾಜಿ ಏರ್ಪಟ್ಟು, ಇತ್ತೀಚೆಗೆ ನಾನು ಟಾಯ್ಲೆಟ್ ಬಳಸುವಾಗ ಅವು ಹೆದರಿ ಹಾರಿ ಹೋಗದೇ ಗೂಡಿನಲ್ಲಿಯೇ ಕೂರುತ್ತಿದ್ದವು. ಒಮ್ಮೊಮ್ಮೆ ಅವುಗಳೆದುರಿಗೆ ಟಾಯ್ಲೆಟ್ ಬಳಸಲು ಸಂಕೋಚವೆನಿಸಿ, ಮರುಕ್ಷಣ ನನ್ನ ಹುಚ್ಚು ಕಲ್ಪನೆ ನನಗೇ ನಗು ತರಿಸುತ್ತಿತ್ತು.

ಈ ಎಲ್ಲಾ ಪ್ರಕ್ರಿಯೆಗಳ ನಡುವೆ ಉಂಟಾಗುತ್ತಿದ್ದ ಸಮಸ್ಯೆಯೆಂದರೆ ಗೂಡಿನಿಂದ ಪ್ರತಿದಿನವೂ ಹುಲ್ಲುಗರಿಗಳು ಕಮೋಡ್‍ನೊಳಗೆ ಬೀಳುತ್ತಿದ್ದು ಕಮೋಡ್ ಕಟ್ಟಿಕೊಂಡರೇ ಎಂಬ ಭಯ ನನ್ನವರ ಮನದಲ್ಲಿ ಮನೆ ಮಾಡಿತ್ತು. ಇದೇ ಕಾರಣಕ್ಕೆ ಪ್ರತಿದಿನವೂ ಆ ಗೂಡನ್ನು ತೆಗೆದುಬಿಡುವಂತೆ ಒತ್ತಾಯಿಸುತ್ತಿದ್ದರು. ಆದರೆ ಗೂಡನ್ನು ಕಿತ್ತು ಗುಬ್ಬಿಗಳನ್ನು ಅನಾಥರನ್ನಾಗಿಸುವುದು ಸುತರಾಂ ಸಾಧ್ಯವಿಲ್ಲವೆನ್ನುವುದು ನನ್ನ ದೃಢನಿರ್ಧಾರವಾಗಿತ್ತು.

ಮತ್ತದೇ ವಿಷಯ ಪ್ರಸ್ತಾಪಿಸುತ್ತಾ ಅವರು ‘ನಾಳೆ ಆ ಗುಬ್ಬಿ ಗೂಡನ್ನು ನಾನೇ ಕಿತ್ತೆಸೆಯುತ್ತೇನೆ’ ಎಂದಾಗಲಂತೂ ನನ್ನ ಪಿತ್ತ ನೆತ್ತಿಗೇರಿತು. ಅರೆ, ಹೀಗೇಕೆ ? ಈ ಭೂಮಿಯೆಂಬ ಸುವಿಶಾಲ ಗೋಲದಲ್ಲಿ ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ. ತನ್ನದೆನ್ನುವ ಒಂದು ಸಣ್ಣ ವಸ್ತುವನ್ನೂ ಕಳೆದುಕೊಳ್ಳಲಿಚ್ಛಿಸದ ಮನುಷ್ಯ ತನ್ನಂತಹುದೇ ಇನ್ನೊಂದು ಜೀವಿಯ ನೆಲೆಯನ್ನು ಧ್ವಂಸ ಮಾಡುವುದು ಯಾವ ನ್ಯಾಯ ? ತನ್ನದಲ್ಲದ ಭೂಮಿಗಾಗಿ ಬಡಿದಾಡಿ, ನೆತ್ತರ ಕೋಡಿ ಹರಿಸಿದ ಯುದ್ಧಗಳಿಂದಲೂ ನಾವು ಪಾಠ ಕಲಿತಿಲ್ಲವೆಂದರೆ ಹೇಗೆ ? ಇದು ದುರ್ಬಲರ ಮೇಲೆ ನಡೆಯುವ ದೌರ್ಜನ್ಯವಲ್ಲವೇ ? ಆ ಗುಬ್ಬಿಗಳ ಗೂಡನ್ನು ಕಿತ್ತೆಸೆದರೆ, ಅವು ನ್ಯಾಯಕ್ಕಾಗಿ ನಮ್ಮೊಂದಿಗೆ ಹೋರಾಡಬಲ್ಲವೇ ? ಚಿಂತಿಸುತ್ತಾ ತಲೆ ಸಿಡಿದಂತಾಗಿ ಕೊನೆಗೊಮ್ಮೆ ಕೂಗಿಯೇ ಬಿಟ್ಟೆ, “ಯಾರಾದರೂ ಆ ಗುಬ್ಬಿಗೂಡನ್ನು ಮುಟ್ಟಿದರೆ ನಾನು ಸುಮ್ಮನಿರುವುದಿಲ್ಲ…” ನನ್ನನ್ನೊಂದು ವಿಚಿತ್ರ ಪ್ರಾಣಿ ಎಂಬಂತೆ ನೋಡಿ ಮಲಗಲು ಹೊರಟರು ಅಪ್ಪ ಮತ್ತು ಮಗ ಇಬ್ಬರೂ.

ಎಲ್ಲರತ್ತ ಅನುಕಂಪದ ಚಿತ್ತ ಹರಿಸುವ ನನಗೆ ಯಜಮಾನರು ಮತ್ತು ಮಗನ ಮೇಲೆ ಆ ಕ್ಷಣ ಕೂಗಾಡಿದ್ದು ಸರಿಯೆನಿಸಲಿಲ್ಲ. ಆ ಚಿಂತೆಯಲ್ಲೇ ಕಣ್ಣಿಗೆ ನಿದ್ದೆಯೂ ಹತ್ತಲಿಲ್ಲ. ಇನ್ನೊಮ್ಮೆ ಈ ತರಹ ವರ್ತಿಸಬಾರದು ಎಂಬ ದೃಢ ನಿರ್ಧಾರ ಮಾಡಿದೆ. ಯಾವುದೋ ಜಾವದಲ್ಲಿ ಒಂದು ತೂಕಡಿಕೆ ಸವರಿಕೊಂಡು ಹೋಯಿತು.

ಮರುದಿನ ಯಥಾಪ್ರಕಾರ ಬೆಳಗಿನ ಕೆಲಸ ಕಾರ್ಯಗಳನ್ನೆಲ್ಲಾ ಮುಗಿಸಿ ಕಚೇರಿ ತಲುಪಿದಾಗ ಹತ್ತು ಗಂಟೆಯಾಗಿತ್ತು. ಎಂದಿಗಿಂತ ಹೆಚ್ಚಿದ್ದ ಕೆಲಸದ ಒತ್ತಡದಲ್ಲಿ ನನ್ನ ಸ್ವಂತ ಆಲೋಚನೆಗಳಿಗೆ ಸಮಯವೇ ಇಲ್ಲದಂತಾಗಿತ್ತು. ಸಂಜೆ ಬಸ್ ಸ್ಟಾಪ್ ತಲುಪಿದ ತಕ್ಷಣ ಅನಾಯಾಸವಾಗಿ ನನ್ನ ದೃಷ್ಟಿ, ತೂಕದ ಮಷೀನ್ನಿನ ಅಜ್ಜನ ಕಡೆಗೆ ಹೋಯಿತು. ಮತ್ತದೇ ನಿರ್ಲಿಪ್ತ ಭಾವದಿಂದ ಹೋಗಿ ಬರುವ ಜನರೆಡೆಗೆ ದಿಟ್ಟಿಸುತ್ತಾ ಕುಳಿತಿದ್ದ ಅಜ್ಜ. ತಕ್ಷಣ ಆತನನ್ನು ಮಾತನಾಡಿಸಬೇಕೆಂಬ ಆಲೋಚನೆ ಹೊಳೆದು, ತಡಮಾಡದೇ ಅಜ್ಜನ ಬಳಿ ಹೋಗಿ ತೂಕ ನೋಡುವ ನೆಪದಲ್ಲಿ ಐದು ರೂ. ಕೊಟ್ಟು ಮಷೀನಿನ ಮೇಲೆ ನಿಂತೆ. ಬಾಗಿ ನೋಡಿದ ಅಜ್ಜ, ತುಸು ಹೆಚ್ಚೇ ಇದ್ದ ನನ್ನ ತೂಕವನ್ನು ಹೇಳಿ ತನ್ನ ಬೊಚ್ಚು ಬಾಯಗಲಿಸಿ ನಕ್ಕ. ಇದೇ ಸಮಯ ಎಂದುಕೊಂಡು ಅಜ್ಜನನ್ನು ಮಾತಿಗೆಳೆದಾಗ, ಅಜ್ಜ ಹೇಳಿದ್ದಿಷ್ಟು ;

ಅಜ್ಜ ಈಗೆರಡು ವರ್ಷಗಳ ಹಿಂದೆ ಕೈಗಾಡಿಯಲ್ಲಿ ಮೂಟೆಗಳನ್ನು ಹಾಕಿಕೊಂಡು ಬಸ್ಸುಗಳಿಗೆ ತಲುಪಿಸುವ ಒಬ್ಬ ಕೈಗಾಡಿಯಾತನಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದನಂತೆ. ಅವನು ಕೊಡುವ ಚಿಲ್ಲರೆ ಹಣವನ್ನು ಮನೆಗೆ ಒಯ್ದು ಕೊಟ್ಟಾಗ ಮಾತ್ರ ಸೊಸೆ ಊಟಕ್ಕೆ ಹಾಕುತ್ತಿದ್ದಳಂತೆ. ಆದರೆ ಇತ್ತೀಚೆಗೆ ಗಾಡಿಯವನಿಗೆ ಸಹಾಯ ಮಾಡುವ ಶಕ್ತಿ ಇಲ್ಲದಂತಾಗಿ ಹೊಟ್ಟೆಪಾಡಿಗೆ ದುಡಿಯಲೇಬೇಕಾದ ಅನಿವಾರ್ಯತೆಯಿಂದ ಯಾವುದೋ ಆಸ್ಪತ್ರೆಯವರು ಕೊಟ್ಟ ಹಳೆಯ ತೂಕದ ಮಷೀನನ್ನು ಪಡೆದು ತೂಕ ನೋಡುವ ಕೆಲಸ ಶುರುವಿಟ್ಟುಕೊಂಡನಂತೆ. ಅಜ್ಜನ ಪ್ರಕಾರ ಇಡೀ ದಿನ ಕೂತರೂ ಐವತ್ತು-ನೂರು ರೂಪಾಯಿಗಳ ಸಂಪಾದನೆ ಮಾತ್ರ ಆಗುತ್ತಿದ್ದು, ಅದನ್ನು ಸೊಸೆಯ ಕೈಲಿಟ್ಟು ಅಂದಿನ ಊಟ ಗಳಿಸಿಕೊಳ್ಳುತ್ತಿದ್ದನಂತೆ. ಈ ನಡುವೆ ಉಬ್ಬಸ ಹೆಚ್ಚಾಗಿ ಕೂರಲು ಕಷ್ಟವಾಗುತ್ತಿದೆ ಎಂದು ಹೇಳುವಷ್ಟರಲ್ಲಿ ಅಜ್ಜನ ಕಣ್ಣಂಚು ಒದ್ದೆಯಾಯಿತು. ಒಂದು ಕ್ಷಣ ಕರುಳು ಕಿವುಚಿದಂತಾಗಿ ಸಾವರಿಸಿಕೊಂಡು ಪರ್ಸಿನಿಂದ ಐನೂರರ ನೋಟೊಂದನ್ನು ತೆಗೆದು ಆಸ್ಪತ್ರೆಗೆ ಹೋಗಲು ಹೇಳಿ ಕೊಡಲು ಹೋದೆ. ಆದರೆ ಹಣವನ್ನು ತೆಗೆದುಕೊಳ್ಳಲು ಅಜ್ಜ ನಿರಾಕರಿಸಿದ.

ಜೀವನ ಕೆಲವರೊಂದಿಗೆ ಎಷ್ಟೊಂದು ನಿಷ್ಠುರವಾಗಿ ವರ್ತಿಸುತ್ತದೆಯಲ್ಲವೇ ಎನಿಸಿತು. ಇಲ್ಲಿ ಶೋಷಣೆಗೆ ಒಳಗಾಗುವವರು ಯಾರು ? ಕೇವಲ ಮಹಿಳೆಯರೇ ? ಅಥವ ಪುರುಷರೇ ? ಇಲ್ಲ. ಶೋಷಿತ ವರ್ಗಕ್ಕೆ ಲಿಂಗಬೇಧವಿಲ್ಲ. ಹೆಣ್ಣು, ಗಂಡು, ಪ್ರಾಣಿ, ಪಕ್ಷಿ, ಎಲ್ಲರಲ್ಲೂ ಕೆಲವು ದುರ್ಬಲರು ಶೋಷಣೆಗೆ ಒಳಗಾಗುತ್ತಾರೆ. ಪ್ರತಿಭಟಿಸಲಾಗದ ನಿಸ್ಸಹಾಯಕರ ಮೇಲೆ ಕೆಲವು ಸಬಲರು ದಂಡೆತ್ತಿಹೋಗುತ್ತಾರೆ. ಇದು ಪುರಾಣ ಕಾಲದಿಂದಲೂ ನಡೆದು ಬರುತ್ತಿರುವ ರಿವಾಜು. ಈ ದ್ವಂದ್ವಗಳ ನಡುವೆಯೇ ಆದರ್ಶಗಳು, ಪ್ರಾಮಾಣಿಕತೆಗಳೂ ಅಲ್ಲಲ್ಲಿ ಕಾಣಸಿಗುತ್ತವೆ.

ಇರುವೆಗಳ ಸಹಕಾರ ತತ್ವ ಸಾರ್ವತ್ರೀಕರಣಗೊಳ್ಳುವುದು ಬಹಳವೇ ಕಷ್ಟಸಾಧ್ಯವೆನಿಸತೊಡಗಿತು.
ನಿಧಾನವಾಗಿ ಕಾಲೆಳೆದುಕೊಂಡು ಮನೆ ತಲುಪಿದೊಡನೆ ಓಡುತ್ತಾ ಬಂದ ಮಗ ಒಂದೇ ಉಸಿರಿನಲ್ಲಿ ಹೇಳಲಾರಂಭಿಸಿದ. ‘ಈ ದಿನ ಅಪ್ಪನಿಗೆ ರಜೆ ಇದ್ದಿದ್ದರಿಂದ ಮನೆ ಸ್ವಚ್ಛ ಮಾಡುವಾಗ, ಧೂಳು ಜಾಡಿಸುವ ಕೋಲು ಗುಬ್ಬಿಗೂಡಿಗೆ ಬಡಿದು ಅದು ಕೆಳಗೆ ಬಿತ್ತೆಂದೂ, ಗುಬ್ಬಿಗಳೆರಡೂ ಹಾರಿ ಹೋದದ್ದಾಗಿಯೂ, ಅಪ್ಪನೂ ಇದರಿಂದ ಬೇಸರಗೊಂಡರೆಂದೂ…’

ಮುಂದಿನ ಮಾತುಗಳನ್ನು ಕೇಳಲಾರದೆ ಕುಸಿದು ಕುಳಿತೆ. ಉಳಿವಿಗಾಗಿ ಹೋರಾಟವೇನೋ ನಿಜ. ಆದರೆ ಹೋರಾಡಲು ಬಲವೇ ಇಲ್ಲದಿದ್ದರೆ… ?

ಬಯಲು ಆಲಯದೊಳಗೊ ಆಲಯವು ಬಯಲೊಳಗೊ ಬಯಲು ಆಲಯವೆರಡು ನಯನದೊಳಗೊ ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ..

ಎಫ್. ಎಮ್ ನಲ್ಲಿ ಸಣ್ಣದಾಗಿ ಕನಕದಾಸರ ಕೀರ್ತನೆ ಕೇಳಿ ಬರುತ್ತಿತ್ತು.
***

ಮತ್ತಷ್ಟು ಸುದ್ದಿಗಳು

vertical

Latest News

ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನಕ್ಕೆ ಅವಮಾನ: ಟ್ರಕ್‌’ಗೆ ತಾವೇ ಲಗೇಜ್‌ ಲೋಡ್‌ ಮಾಡಿದ ಆಟಗಾರರು

newsics.com ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸಕ್ಕೆ ತೆರಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್ ಅನ್ನು ತಾವೇ ಟ್ರಕ್ ತುಂಬುತ್ತಿರುವ ವಿಡಿಯೋವೊಂದು ವೈರಲ್...

ರಾಜ್ಯದ 36 ಲಕ್ಷ ಮತದಾರರಿಗೆ ಚುನಾವಣಾ ಆಯೋಗ ನೋಟಿಸ್

newsics.com ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರಿರುವ ಅಥವಾ ಹೆಸರು ನಕಲು ಮಾಡಿರುವ 36 ಲಕ್ಷ ಮತದಾರರಿಗೆ ರಾಜ್ಯ ಚುನಾವಣಾ ಆಯೋಗವು ಭಾರತೀಯ ಅಂಚೆ ಮೂಲಕ ನೋಟಿಸ್ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದೆ. ಹೆಚ್ಚುವರಿಯಾಗಿ, ಮುಂದಿನ...

ಅಸಲಿ ಚಿನ್ನದ ಜಾಗದಲ್ಲಿ ನಕಲಿ ಬಂಗಾರವಿಟ್ಟು ಗ್ರಾಹಕರಿಗೆ ವಂಚಸಿದ ಬ್ಯಾಂಕ್ ಸಿಬ್ಬಂದಿ

newsics.com ಚಿಕ್ಕಮಗಳೂರು: ಗ್ರಾಹಕರಿಗೆ ಬ್ಯಾಂಕ್‌ ಸಿಬ್ಬಂದಿ ಕೋಟ್ಯಂತರ ರೂಪಾಯಿ ವಂಚಿಸಿರುವ ಘಟನೆ ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಡೆದಿದೆ. 6 ಕೋಟಿಗೂ ಅಧಿಕ ಹಣ ದುರುಪಯೋಗದ ಆರೋಪ...
- Advertisement -
error: Content is protected !!