Monday, October 2, 2023

ನೀಲಿ ಕಂಗಳ ಚೆಲುವೆ

Follow Us

  • ಡಾ. ನಾಗೇಶ್ ಅರಕೇರಿ

ತ್ತದೇ ಹುಡುಗಿಯ ಕನಸು! ಪ್ರತಿ ದಿನ ರಾತ್ರಿ ಗಾಢವಾದ ನಿದ್ದೆಯ ಸಮಯದಲ್ಲಿ ಅವಳ ಕನಸು ಬರುತ್ತದೆ. ಆ ಸಮಯ ನನಗೆ ಅತ್ಯಂತ ಹಿತಕಾರವಾದ ಘಳಿಗೆ. ಪ್ರತಿದಿನ ಒಂದೊಂದು ಹೊಸ ಜಾಗದಲ್ಲಿ ಸಿಗುತ್ತಾಳೆ. ಒಂದು ಸಲ ಬೆಟ್ಟದ ತುದಿಯಲ್ಲಿ ಆ ಹುಡುಗಿಯೊಡನೆ ಕುಳಿತು ಸೂರ್ಯೋದಯವನ್ನು ಆಸ್ವಾದಿಸಿದರೆ, ಇನ್ನೊಮ್ಮೆ ಅದಾವುದೋ ಅಜ್ಞಾತ ದ್ವೀಪದ ಸಮುದ್ರ ತೀರದಲ್ಲಿ ಸೂರ್ಯಾಸ್ತ ನೋಡುತ್ತ ಆ ಚೆಲುವೆಯ ಕೈ ಹಿಡಿದು ನಡೆಯುತ್ತಿರುತ್ತೇನೆ. ಮಗದೊಮ್ಮೆ ಪೂರ್ಣಚಂದಿರನ ಬೆಳಕಲ್ಲಿ ವಿಶಾಲವಾದ ಮೈದಾನದಲ್ಲಿ ಹಸಿರುಹುಲ್ಲಿನ ಹಾಸಿಗೆಯ ಮಲಗಿ ಚುಕ್ಕಿಗಳನ್ನು ಎಣಿಸುತ್ತಿರುತ್ತೇವೆ. ಹೀಗೆ ಬರೀ ಪ್ರಣಯ ಭಾವಪ್ರಧಾನತೆಯ ಕನಸುಗಳೇ. ಎಚ್ಚರವಾದಾಗ ಛೇ ಕನಸು ಮುಗಿಯಿತಲ್ಲ ಎನ್ನುವ ಹತಾಶೆ. ಆದರೂ ಪ್ರತಿ ದಿನ ಅವಳ ಕನಸು ಕಾಣಲೆಂದೇ ಮಲಗುತ್ತೇನೆ.

ಬಣ್ಣ ಬಣ್ಣದ ಚಿಟ್ಟೆಯ ರಂಗು ಹೂಗಳ ಮೇಲೆ ಮೂಡುವಂತೆ, ಅವಳ ಸುಂದರವಾದ ಮುಖ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಹಾಗೇ ಇದೆ. ನನಗೆ ಯಾವಾಗಲೂ ಅನಿಸುತ್ತದೆ, ಅವಳು ಬರೀ ಕನಸಲ್ಲಿ ಬಂದು ಮರೆಯಾಗುವ ಹುಡುಗಿಯಲ್ಲವೆಂದು! ಒಂದಲ್ಲ ಒಂದು ದಿನ ಆ ನೀಲಿ ಕಂಗಳ ಚೆಲುವೆ ನನಗೆ ಸಿಗುತ್ತಾಳೆಂಬ ಭರವಸೆಯಿಂದ ಕಾಯುತ್ತಿದ್ದೇನೆ! ಅವಳು ಸಿಕ್ಕಾಗ ಮಾತ್ರ ಆ ಘಳಿಗೆಯನ್ನು ಜಾರಲು ಬಿಡುವುದಿಲ್ಲ. ಹಾಗೆಯೇ ಅವಳನ್ನು ಬಾಹುಬಂಧನದಲ್ಲಿ ಹಿಡಿದಿಟ್ಟುಕೊಳ್ಳುತ್ತೇನೆ.

ನನ್ನ ಸ್ನೇಹಿತರು ಯಾರೂ ಸಿಂಗಲ್ ಆಗಿ ಉಳಿದಿಲ್ಲ. ಕೆಲವರು ಆಗಲೇ ಮದುವೆ ಆದರೆ ಇನ್ನೂ ಕೆಲವರು ಪ್ರೀತಿ ಪ್ರೇಮ ಅನ್ಕೊಂಡು ಓಡಾಡ್ತಿದಾರೆ. ಅವರೆಲ್ಲರೂ ನನಗೆ ಯಾವಾಗಲೂ ಬುದ್ಧಿವಾದ ಹೇಳ್ತಿರ್ತಾರೆ. ಎಂದಿನಂತೆ ಅವತ್ತು ಸಂಜೆ ನಮ್ಮ ಮಾಮೂಲಿ ಜಾಗದಲ್ಲಿ ಸ್ನೇಹಿತರೆಲ್ಲಾ ಸೇರಿದ್ವಿ.

“ಯಾಕೋ ಇನ್ನೂ ಸಿಂಗಲ್ಲಾಗೇ ಇದಿಯಾ? ಕಾಲೇಜಿನಲ್ಲಂತೂ ಯಾವ ಹುಡುಗಿ ಹಿಂದೇನೂ ಹೋಗಿಲ್ಲ! ಇನ್ನೂ ಅದೇ ಡ್ರೀಮ್ ಗರ್ಲ್ ಗುಂಗಲ್ಲೇ ಇದಿಯಾ. ಅವಳು ರಿಯಲ್ ಅಲ್ಲ ಕಣೋ.. ಬೇರೆ ಯಾರನಾದರೂ ಮದುವೆ ಆಗಿ ಖುಷಿಯಿಂದ ಇರು” ಅಂತ ಒಬ್ಬ ಗೆಳೆಯ ಹೇಳಿದ.

ನಾನು ಉತ್ತರಿಸುವ ಮೊದಲೇ ಇನ್ನೊಬ್ಬ ಬಾಯಿ ಹಾಕಿದ್ದ. “ಲೇಯ್ ಇವನನ್ನ ನಂಬಬೇಡ ಕಣೋ. ವರ್ಷ ವರ್ಷಾನೂ ಇವನ ಡ್ರೀಮ್ ಗರ್ಲ್ಸ್ ಚೇಂಜ್ ಆಗ್ತಾರೆ”

“ಯಾಕೋ ಹಂಗಂತಿಯಾ..ಪಾಪ ಈ ಹುಡುಗೀ ಬಗ್ಗೆ ದಿನಾಲೂ ಬಂದು ಹೇಳ್ತಾನೆ.ಆ ಥರ ಕನಸು ಬಂತು, ಈ ಥರ ಕನಸು ಬಂತು ಅಂತ. ತುಂಬಾ ಸಿನ್ಸಿಯರ್ ಆಗಿ ಲವ್ ಮಾಡ್ತಿದ್ದಾನೆ ಅನ್ಸುತ್ತೆ.”

ಅವನ ಮಾತಿಗೆ ನಾನು ಮುಗುಳ್ನಕ್ಕೆ. ” ನೋಡು ಕಳ್ಳನ ಥರ ಹೆಂಗೆ ನಗ್ತಿದ್ದಾನೆ ಅಂತ!.. ಮೊದಲು, ಅದ್ಯಾರೋ ರೈಲ್ವೇ ಸ್ಟೇಷನ್ ಅಲ್ಲಿ ಹೂ ಮಾರೋ ‘ಹೂ ಹುಡುಗಿ’ ಅಂತ ಕನವರಿಸುತ್ತಿದ್ದ.. ಆಮೇಲೆ ಪೂರ್ವಿ.. ಊರ್ಮಿಳಾ.. ಪುನರ್ಜನ್ಮ ಅಂತ ಏನೇನೋ ಕನವರಿಸ್ತಿದ್ದ.. ಈಗ ನೀಲಿ ಕಣ್ಣುಗಳ ಹುಡುಗಿ…ಅಯ್ಯೋ ನೀನು.. ನಿನ್ನ ಡ್ರೀಮ್ ಗರ್ಲ್ಸ್ ಎಲ್ಲಾ ಸೂಪರ್ ಕಣೋ”.

“ನಾನೇನ್ ಮಾಡ್ಲಿ ಅವರೆಲ್ಲ ಇನ್ನೇನ್ ಕೈಗೆ ಸಿಗ್ತಾರೆ ಅನ್ನೋವಷ್ಟರಲ್ಲಿ ಮಿಸ್ ಆಗ್ತಾರೆ… ಆದರೆ ಅವರೆನ್ನೆಲ್ಲಾ ನಾನು ಸಿನ್ಸಿಯರಾಗಿ ಇಷ್ಟ ಪಟ್ಟಿದ್ದೆ ಕಣೋ…ಈಗ ಈ ಹುಡುಗೀನಾ ಕೂಡಾ ಹಾನೆಸ್ಟಾಗಿ ಲವ್ ಮಾಡ್ತಿದ್ದೇನೆ.” ನಾನು ಹುಸಿ ಕೋಪದಿಂದ ಹೇಳಿದೆ.

“ಆಯ್ತು ಬಿಡಪ್ಪ ಈ ಹುಡುಗೀ ಆದರೂ ಸಿಗಲಿ..ಮೂರಕ್ಕೆ ಮುಕ್ತಾಯ ಹಾಡಿಬಿಡು.”

ಅವರಿಗೆಲ್ಲ ನನ್ನ ಕನಸಿನ ಹುಡುಗಿಯ ಬಗ್ಗೆ ಗೊತ್ತು. ಆದರೂ ದಿನಾಲು ಸಂಜೆ ಒಟ್ಟಾಗಿ ಕೂತು ನನ್ನ ಕನಸಿನ ಬಗ್ಗೆ ಆಸಕ್ತಿಯಿಂದ ಕೇಳ್ತಾರೆ. ನಾನು ಆ ನೀಲಿ ಕಂಗಳ ಹುಡುಗಿಯ ಚೆಲುವನ್ನು ವಿವರಿಸುವಾಗ ಎಲ್ಲರಿಗೂ ಒಂಥರಾ ಹೊಟ್ಟೆ ಕಿಚ್ಚು. ಅವರು ಕನಸಲ್ಲೂ ಸಹ ಅಂತ ಹುಡುಗಿಯನ್ನ ಕಂಡಿಲ್ಲವಲ್ಲ ಅದಕ್ಕೇ ಅವರಿಗೆ ನನ್ನ ಮೇಲೆ ಹೊಟ್ಟೆ ಕಿಚ್ಚು.

“ಲೋ.. ಅವಳು ಕನಸ್ಸಲ್ಲಿ ಸಿಕ್ಕಾಗ ಅವಳು ಯಾವ ಊರಲ್ಲಿ ಇದಾಳೆ? ಏನು ಹೆಸರು? ಎಲ್ಲಾ ವಿಚಾರಿಸೋದು ತಾನೇ..” ಒಬ್ಬ ಗೆಳೆಯ ಕೇಳಿದ.

“ಅದು ಕನಸು ಕಣೋ! ನನ್ನ ಭಾವನೆಗಳು, ಮಾತುಗಳ ಮೇಲೆ ನನಗೇನಾದರೂ ನಿಯಂತ್ರಣ ಇರುತ್ತಾ? ಮಿಗಿಲಾಗಿ ಕನಸಲ್ಲಿ ನನಗೆ, ಈಗ ನಾನು ಕಾಣ್ತಿರೋದು ಕನಸು, ರಿಯಲ್ ವರ್ಲ್ಡ್ ಬೇರೆ ಇದೆ ಅಂತ ಗೊತ್ತಿರುತ್ತಾ?” ನಗುತ್ತಾ ಹೇಳಿದೆ. ನನ್ನ ಮಾತಿಗೆ ಎಲ್ಲರೂ ನಕ್ಕರು..

ಹೀಗೆಯೇ ನಾನು ಕನಸು ಕಾಣುತ್ತಾ, ನನ್ನ ಕನಸಿನ ಹುಡುಗಿ ನೀಲಿ ಕಂಗಳ ಚೆಲುವೆಗಾಗಿ ಕಾಯುತ್ತಾ ಇದ್ದೆ. ಸಮಯವು ಬಸವನ ಹುಳುವಿನಂತೆ ನಿಧಾನವಾಗಿ ತೆವಳುತ್ತಾ ಸಾಗುತ್ತಿತ್ತು. ಅದೊಂದು ದಿನ ನಾನು ಬಹು ವರ್ಷಗಳಿಂದಲೂ ಹಾತೊರೆಯುತ್ತಿದ್ದ ಸುದ್ದಿಯೊಂದು ನನ್ನ ಕಿವಿಗೆ ಬಿತ್ತು. ದೂರದ ನಾಡಿನಿಂದ ಒಬ್ಬಳು ವಯಸ್ಸಾದ ಮಹಿಳೆಯೊಬ್ಬಳು ತನ್ನ ಸುಂದರವಾದ ಮೊಮ್ಮಗಳೊಡನೆ ನಮ್ಮೂರಿಗೆ ಬಂದಿದ್ದಾಳೆ, ಆ ಹುಡುಗಿಯ ಅಪ್ಪ ಅಮ್ಮ ಅಪಘಾತದಲ್ಲಿ ಸತ್ತು ಹೋಗಿದ್ದರು. ಆ ಹುಡುಗಿಗಿರುವ ಒಬ್ಬಳೇ ಸಂಬಧಿಕಳಾದ ಈ ಅಜ್ಜಿಯೊಡನೆ ವಾಸವಾಗಿದ್ದಾಳೆ. ಆ ಮುದುಕಿಗೆ ಕಣ್ಣು ಕಾಣುವುದಿಲ್ಲ, ಯಾವಾಗಲೂ ಮನೆಯ ಮುಂದೆ ಕುಳಿತಿರುತ್ತಾಳೆ. ಆದರೆ ಆ ಹುಡುಗಿಯ ಕಣ್ಣುಗಳು ಮಾತ್ರ ಬಹಳ ಸುಂದರವಾಗಿವೆ. ಇದುವರೆಗೂ ಆ ಹುಡುಗಿಯನ್ನು ಯಾರೂ ನೋಡಿಲ್ಲ! ಆದರೆ ಅವರ ಮನೆಗೆ ಹಾಲು ಹಾಕುವವನು ಮಾತ್ರ ಆ ಹುಡುಗಿಯ ನೀಲಿ ಕಣ್ಣುಗಳನ್ನು ಗಮನಿಸಿದ್ದನು! ಅವನೇ ಈ ಸುದ್ದಿಯನ್ನು ಊರು ತುಂಬಾ ಡಂಗುರ ಸಾರಿದ್ದ.

ಕೆಲವೇ ದಿನಗಳಲ್ಲಿ ಆ ಹುಡುಗಿಯ ನೀಲಿ ಕಣ್ಣುಗಳ ಸೌಂದರ್ಯದ ಬಗ್ಗೆ ಊರಿನ ಜನರೆಲ್ಲಾ ಚರ್ಚಿಸತೊಡಗಿದರು. ಮೊದಲೇ ಚಿಕ್ಕ ಊರು, ಹಾಗಾಗಿ ಎಲ್ಲರೂ ಆ ಹುಡುಗಿಯನ್ನು ನೋಡಲು ಹಾತೊರೆಯುತಿದ್ದರು. ಕೆಲವು ರೋಡ್ ರೋಮಿಯೋಗಳಂತೂ ಅವಳ ಮನೆಯ ಮುಂದೆ ಆ ಹುಡುಗಿಯ ಒಂದು ಝಲಕ್ಕಿಗೆ ದಿನಕ್ಕೆ ಅದೆಷ್ಟೋ ಬಾರಿ ಗಸ್ತು ಹಾಕಲು ಶುರು ಮಾಡಿದರು. ಆದರೆ ಯಾರ ಕಣ್ಣಿಗೂ ಅವಳು ಬೀಳಲಿಲ್ಲ. ಹೀಗೆ ಆ ಹುಡುಗಿಯ ನೀಲಿ ಕಣ್ಣುಗಳ ಸೌಂದರ್ಯವನ್ನು ಅದಾರೂ ನೋಡದಿದ್ದರೂ ಅದರ ವರ್ಣನೆ ಮಾತ್ರ ಎಲ್ಲಾ ಕಡೆ ಮನೆ ಮಾತಾಗಿತ್ತು. ಅದೊಂದು ದಿನ ನನ್ನ ಕಿವಿಗೂ ಬಿದ್ದಿತು. ನನಗಿಂತ ನನ್ನ ಗೆಳೆಯರಿಗಂತೂ ವರ್ಣಿಸಲಾಗದ ಆನಂದ, ಆಶ್ಚರ್ಯ! ಅವಳು ನನ್ನ ಕನಸಿನ ಹುಡುಗಿಯೇ ಎಂದು ಅವರು ತೀರ್ಮಾನಿಸಿಬಿಟ್ಟಿದ್ದರು.

ಒಂದು ದಿನ ನಾನು ಗಟ್ಟಿ ನಿರ್ಧಾರ ಮಾಡಿ ಅವಳನ್ನು ನೋಡಲು ಅವಳ ಮನೆಗೆ ಹೋದೆ. ಮನೆಯ ಮುಂದೆ ಕಾವಲುಗಾರನಂತೆ ಅಜ್ಜಿಯೊಬ್ಬಳು ಕುರ್ಚಿಯ ಮೇಲೆ ಕುಳಿತಿದ್ದಳು. ತುಂಬಾ ಕೃಶವಾದ, ಬಡಕಲಾಗಿ ಮೂಳೆಯ ಹಂದರದ ಶರೀರ. ಫಕ್ಕನೆ ನೋಡಿದರೆ ಅವಳು ಬದುಕಿದ್ದಾಳೋ ಇಲ್ಲವೋ ಅಂತ ಅನುಮಾನ ಬರುತ್ತೆ. ಅವಳ ಉಸಿರಾಡುವಾಗ ಆಗುವ ಅವಳ ಎದೆಯ ಚಲನೆಯಿಂದ ಖಾತರಿ ಮಾಡಿಕೊಂಡೆ ಅವಳು ಬದುಕಿದ್ದಾಳೆಂದು. ಆ ಅಜ್ಜಿಯ ಎದುರು ಹೋಗಿ ನಿಂತೆ. ಅವಳ ಕಣ್ಣುಗಳು ಬಿಳಿಯಾಗಿದ್ದವು ಬಹುಶಃ ಆಪರೇಶನ್ ಮಾಡಿ ತೆಗೆದಿದ್ದರು ಅನಿಸುತ್ತೆ. ಮನೆ ಮುಂದಿನ ಗಾರ್ಡನ್ ಅಚ್ಚುಕಟ್ಟಾಗಿತ್ತು.

“ಯಾರಪ್ಪ ನೀನು? ಈ ಆಸ್ಪತ್ರೆಗೆ ಹೋದರೆ ವಾಸನೆ ಬರುತ್ತಲ್ಲ, ಹಂಗೆ ಔಷಧಿ ಥರ ವಾಸನೆ ಬರ್ತಿದೆ?” ಆ ಅಜ್ಜಿ ಕೇಳಿದಳು. ಕಣ್ಣು ಕಾಣದಿದ್ದರೂ ಮೂಗು ಚುರುಕಾಗಿತ್ತು.

“ನಾನು ಆಸ್ಪತ್ರೆಯಲ್ಲಿ ಕೆಲಸ ಮಾಡೋದು ಅಜ್ಜಿ, ಅದಕ್ಕೆ ಆ ವಾಸನೆ.” ನಗುತ್ತಾ ಹೇಳಿದೆ.

“ಆಸ್ಪತ್ರೆಯಿಂದ ಬರ್ತಿದ್ದೀಯಾ? ಅದೊಂಥರಾ ಯಮಲೋಕ. ಅಲ್ಲಿರೋ ಡಾಕ್ಟ್ರುಗಳೆಲ್ಲಾ ಯಮಕಿಂಕರರು. ” ಅಜ್ಜಿ ಇದ್ದಕ್ಕಿದ್ದಂತೆ ಕೋಪ ಮಾಡ್ಕೊಂಡ್ಳು.

ನಾನೊಬ್ಬ ಡಾಕ್ಟರ್ ಅಂತ ಹೇಳೋಣ ಅನ್ಕೊಂಡಿದ್ದೆ. ಆಸ್ಪತ್ರೆ ಅಂದಿದ್ದಕ್ಕೇನೆ ಅಜ್ಜಿ ಹಿಂಗೆ ಸಿಟ್ಟಾಗವಳೇ. ನಾನು ಡಾಕ್ಟರ್ ಅಂತ ಹೇಳಿದ್ರೆ ಅಷ್ಟೇ ಒದ್ದು ಓಡಿಸ್ತಾಳೆ ಅಂತ ಸುಮ್ಮನಾದೆ.

“ಸರಿ ಆಸ್ಪತ್ರೆಯಿಂದ ಈಕಡೆ ಯಾಕ ಬಂದೆ? ಯಾರನ್ನಾದರೂ ಯಮಲೋಕಕ್ಕೆ ಕರ್ಕೊಂಡು ಹೋಗಬೇಕಿತ್ತಾ?” ಅಜ್ಜಿ ಕೇಳಿದಳು.

“ಹ್ಹೆ ಹ್ಹೇ…ಹಾಗೇನಿಲ್ಲ ಅಜ್ಜಿ….ಅದು ಸುಮ್ಮನೆ ಈ ಕಡೆ ಹೋಗ್ತಿದ್ನಾ, ನಿಮ್ಮ ಮನೆ ಗಾರ್ಡನ್ ಚೆನ್ನಾಗಿತ್ತು ಅದಕ್ಕೆ ಹತ್ತಿರ ಬಂದು ನೋಡಿದೆ. ನೀವೆನಾ ಅಜ್ಜಿ ಹೂ ಬೆಳೆಸಿದ್ದು.?” ನಾನು ಕೇಳಿದೆ.

“ಏಯ್ ಕಳ್ಳ ನೀನು…ನೀನ್ಯಾಕೆ ಬಂದಿದ್ದೀಯಾ ಅಂತ ನಂಗೊತ್ತು..ನಿನ್ನಂಥ ಎಷ್ಟು ಯುವಕರು ಬಂದು ಹೋಗ್ತಿದ್ದಾರೆ. ನಿಮ್ಮ ಎಲ್ರಿಗೂ ಹೇಳೋದು ಒಂದೇ ಮಾತು. ಅವಳು ಹೊರಗೆ ಬರಲ್ಲ! ನಿಮ್ಮಂತಹ ಪೋಲಿಗಳಿಗೆ ಅವಳನ್ನು ನೋಡಲಿಕ್ಕೆ ಬಿಡೋದಿಲ್ಲ”

ಆ ಅಜ್ಜಿಯ ನೇರವಾದ ನಿಷ್ಠುರ ಮಾತುಗಳಿಗೆ ನಾನು ಅವಕ್ಕಾದೆ. ಏನಪ್ಪಾ ಮುದುಕಿ ತುಂಬಾ ಘಾಟಿ ಇದಾಳೆ ಅನ್ಕೊಂಡೆ. ಯಾವುದೋ ಖಾಯಿಲೆ ಬಂದು ಈಗಲೋ ಆಗಲೋ ಅನ್ನೋ ಥರ ಇದಾಳೆ, ಎಷ್ಟು ಸೊಕ್ಕು ಅನಿಸಿತು. ಆದರೂ ಪಾಪ ಇಬ್ಬರೇ ಇದಾರೆ! ಈಗಿನ ಕಾಲದಲ್ಲಿ ವಯಸ್ಸಿಗೆ ಬಂದ ಹುಡುಗಿಯನ್ನು ದುರುಳರಿಂದ ಕಾಪಾಡಿಕೊಳ್ಳಬೇಕಲ್ವಾ! ಅದೂ ಅಷ್ಟೊಂದು ಸುಂದರ ಹುಡುಗಿಯನ್ನು ಕಣ್ಣಿಲ್ಲದೇ ಕಾಯಬೇಕು. ಹಾಗಾಗಿ ಅಜ್ಜಿಯ ಈ ವರ್ತನೆಯಲ್ಲಿ ತಪ್ಪಿಲ್ಲಾ ಅನ್ನಿಸಿತು.

“ಅಜ್ಜಿ ನಾನು ಎಲ್ಲರಂತೆ ಅಲ್ಲ. ನಾನು ತುಂಬಾ ಒಳ್ಳೇ ಹುಡುಗ……”

“ಅಯ್ಯೋ ಆ ತಿಕ್ಲು ಪ್ರಥಮ್ ಕೂಡ ಹಂಗೇ ಹೇಳ್ತಾನೆ ಒಳ್ಳೇ ಹುಡುಗ ಪ್ರಥಮ್ ಅಂತ” ಅಜ್ಜಿ ನನ್ನ ಮಾತನ್ನು ತುಂಡರಿಸಿ ಡೈಲಾಗ್ ಬೇರೆ ಹೇಳಿದಳು

“ಅದು ಹಾಗಲ್ಲ ಅಜ್ಜಿ. ನನಗನ್ನಿಸುತ್ತೆ..ನಿಮ್ಮ ಮೊಮ್ಮಗಳು ನನಗೆ ಪರಿಚಯ ಇದಾಳೆ. ಅವಳು ನನ್ನ ನೋಡಿದರೆ, ಖಂಡಿತಾ ನನ್ನ ಗುರುತು ಹಿಡೀತಾಳೆ.” ಅಂದೆ.

ಅದಕ್ಕೆ ಆ ಅಜ್ಜಿ ಗಹಗಹಿಸಿ ನಗತೊಡಗಿದಳು. ಉಸಿರಾಡಲು ಕಷ್ಟವಾದರೂ ಅವಳ ನಗು ನಿಲ್ಲಲಿಲ್ಲ. ಆಮೇಲೆ ಕಷ್ಟಪಟ್ಟು ಸುಧಾರಿಸಿಕೊಂಡು, ” ನೋಡಪ್ಪಾ, ನಾನು ಅವಳ ಅಜ್ಜಿ ಅಲ್ಲ! ನಾನು ಅವಳ ದೊಡ್ಡಮ್ಮ. ಅವಳು ನನ್ನ ತಂಗೀ ಮಗಳು. ಪಾಪ ಅವರ ಅಪ್ಪ ಅಮ್ಮ ತೀರಿ ಹೋಗಿದ್ದಾರೆ. ನನ್ನ ತಲೇ ಮೇಲೆ ಒಂದು ಜವಾಬ್ದಾರಿ ಇದೆ. ಅವಳನ್ನ ನಾನು ಒಂದು ಸಂಸ್ಕಾರವಂತ ಕುಟುಂಬಕ್ಕೆ ಸೊಸೆಯಾಗಿ ಕಳಿಸೋ ಉದ್ದೇಶ ಇದೆ. ನಮ್ಮ ಪಾಡಿಗೆ ನಮ್ಮನ್ನು ಬಿಡು. ಈಗಿನ ಹುಡುಗರ ಬಗ್ಗೆ ನಂಗೊತ್ತು. ಈ ಲವ್ವು ಗಿವ್ವು ಅಂತ ಪಾಪದ ಅಮಾಯಕ ಹುಡುಗೀರ ತಲೆ ಹಾಳು ಮಾಡ್ತಾರೆ. ದಯವಿಟ್ಟು ಇಲ್ಲಿಂದ ಹೊರಟು ಹೋಗು” ಅಂತ ಸಿಟ್ಟಲ್ಲಿ ಹೇಳಿದಳು.

ನನಗೆ ಒಂದು ಕ್ಷಣ ಮಾತೇ ಹೊರಡಲಿಲ್ಲ. ನನ್ನ ಪರಿಸ್ಥಿತಿಯನ್ನು ಅವಳಿಗೆ ಹೇಗೆ ವಿವರಿಸಬೇಕು ಎಂದು ನನಗೆ ಅರ್ಥವಾಗಲಿಲ್ಲ. ಬರೀ ಕನಸಲ್ಲಿ ಅವಳನ್ನ ನೋಡಿ ಇಷ್ಟು ವರ್ಷ ಅವಳಿಗಾಗೇ ಕಾದು ಕುಳಿತಿದ್ದೇನೆ. ಅವಳೂ ನನಗೆ ಕಾಯುತ್ತಿರಬೇಕೆಂದು ನಂಬಿದ್ದೇನೆ. ನನ್ನ ಕನಸಿನ ಬಗ್ಗೆ ಹೇಳಿದರೆ ಈ ಅಜ್ಜಿ ನಕ್ಕು ಬಿಡುತ್ತಾಳೆ. ನಾನೇ ಏನೋ ಕಥೆ ಕಟ್ಟುತ್ತಿದ್ದೇನೆ ಎಂದೂ ಹೇಳಬಹುದು. ಹಾಗಾಗಿ ನನ್ನ ಕನಸಿನ ಬಗ್ಗೆ ಮಾತಾಡಲಿಲ್ಲ.

ನಾನು ಯಾವುದೇ ದಾರಿ ಕಾಣದೇ ಅಲ್ಲಿಂದ ಹೋಗಲು ನಿರ್ಧರಿಸಿದೆ. “ಅಜ್ಜಿ…ನೀವು ಹೇಳಿದಂತೆ, ನಾನು ಹೀಗೆ ಇದ್ದಕ್ಕಿದ್ದಂತೆ ಬಂದು ನಿನ್ನ ಮೊಮ್ಮಗಳನ್ನು ನೋಡಬೇಕು ಅಂತ ಹೇಳಿದ್ದು ಸರಿಯಾದ ವರ್ತನೆ ಅಲ್ಲ, ಆದರೆ ನನಗೆ ಬೇರೆ ದಾರಿ ಗೊತ್ತಿಲ್ಲ. ಪರವಾಗಿಲ್ಲ ನಾಳೆ ನಾನು ಪುನಃ ಬರುವೆ, ಇದೇ ಸಮಯಕ್ಕೆ ಬರ್ತೀನಿ. ಅವಳನ್ನು ನೋಡುವ ಆಸೆಯಿಂದ ಬರ್ತೀನಿ . ಬರೀ ನಾಳೆ ಮಾತ್ರ ಅಲ್ಲ, ನಾಡಿದ್ದು.. ಆಚೆ ನಾಡಿದ್ದು.. ನಿಮಗೆ ನಾನೊಬ್ಬ ಪೋಲಿ ಅಲ್ಲ ಒಳ್ಳೆಯ ಹುಡುಗ ಅನ್ನಿಸಿ ನಿಮ್ಮ ಮಗಳನ್ನ ನೀವಾಗಿಯೇ ನನಗೆ ಪರಿಚಯ ಮಾಡಿಸುವವರೆಗೂ ನಾನು ಬರುತ್ತಿರುತ್ತೇನೆ.” ಎಂದು ಅಲ್ಲಿಂದ ಹೊರಟೆ.

ಹಿಂದಿನಿಂದ ಆ ಅಜ್ಜಿಯ.. ಅಲ್ಲ ಆ ಘಾಟಿ ಮುದುಕಿಯ ನಗು ಕೇಳುತ್ತಿತ್ತು. ನನ್ನ ಲವ್ ಸ್ಟೋರಿಗೆ ಅವಳೇ ವಿಲನ್ ಆಗಿದ್ದಳು.

ಮರುದಿನ ಸೂರ್ಯಾಸ್ತದ ಸಮಯದಲ್ಲಿ ಹಕ್ಕಿಗಳೆಲ್ಲಾ ಗೂಡಿಗೆ ಮರಳೋ ಹೊತ್ತಲ್ಲಿ, ಆ ಸೂರ್ಯ ಕೂಡ ತನ್ನ ಪ್ರಕಾಶವನ್ನು ಕಡಿಮೆ ಮಾಡಿ ತನ್ನ ಡ್ಯೂಟಿ ಮುಗಿಸಿ ಮಲಗಲು ಸಿದ್ಧವಾಗುತ್ತಿದ್ದ. ಆಗ ನಾನು ಆ ಹುಡುಗಿಯ ಮನೆಗೆ ಹೋದೆ. ಈ ಸಲ ಅಜ್ಜಿಯ ಎದುರಗಡೆ ಒಂದು ಖಾಲಿ ಕುರ್ಚಿ ಇತ್ತು. ನಾನು ಹೋಗಿ ಅದರ ಬಳಿ ನಿಂತೊಡನೆ, ಅಜ್ಜಿ ಕುರ್ಚಿಯನ್ನು ತಟ್ಟಿ ಕುಳಿತುಕೊಳ್ಳುವಂತೆ ಸನ್ನೆ ಮಾಡಿದಳು.

“ನಾನು ಬರ್ತೀನಿ ಅಂತ ಗೊತ್ತಿತ್ತಾ ಅಜ್ಜಿ?” ಅಚ್ಚರಿಯಿಂದ ಕೇಳಿದೆ.

” ಅಯ್ಯೋ ನಿಮ್ಮಂತಹ ಹುಡುಗರು ಅಷ್ಟು ಬೇಗ ಸೋಲು ಒಪ್ಪಕೊಳ್ಳಲ್ಲ ಅಂತ ಗೊತ್ತಪ್ಪ. ನನಗೂ ಟೈಮ್ ಪಾಸ್ ಆಗುತ್ತಲ್ಲಾ ಅದಕ್ಕೆ ಚೇರ್ ಬೇರೆ ಹಾಕಿ ಕಾಯ್ಕೊಂಡ್ ಕೂತಿದ್ದೀನಿ.”

ಅಜ್ಜಿಯ ಮಾತು ಇವತ್ತು ಸ್ವಲ್ಪ ಮೃದುವಾಗಿತ್ತು. ನಿನ್ನೆಯ ಘಾಟಿ ಮುದುಕಿ ಇವಳೇನಾ ಅನ್ನಿಸಿತು. ಹಾಗೆ ಕತ್ತಲಾಗೋವರೆಗೂ ಅವಳೊಡನೆ ಹರಟೆ ಹೊಡೆದೆ. ಇವತ್ತೂ ನನ್ನ ಡ್ರೀಮ್ ಗರ್ಲ್ ನೋಡುವ ಭಾಗ್ಯ ನನ್ನದಾಗಲಿಲ್ಲ. ನಿರಾಸೆಯಿಂದ ಮನೆಗೆ ಹೊರಟೆ. ಹೀಗೆ ಎಷ್ಟೋ ದಿನಗಳು ಕಳೆದವು, ನನಗೆ ನೀಲಿ ಕಂಗಳ ಚೆಲುವೆಯನ್ನು ಭೇಟಿಯಾಗುವ ಕಾಲ ಇನ್ನೂ ಕೂಡಿ ಬಂದಿರಲಿಲ್ಲ. ಆದರೂ ಪ್ರತಿ ದಿನ ಬರುತ್ತಿದ್ದೆ, ಯಾಕೆಂದರೆ ಅವಳು ನಾನು ಅಜ್ಜಿಯೊಡನೆ ಆಡುವ ಮಾತುಗಳನ್ನು ಕೇಳಿಸಿಕೊಳ್ಳಬಹುದು. ಒಂದು ದಿನ ಅವಳಾಗೇ ಹೊರಗೆ ಬರುತ್ತಾಳೆ ಎನ್ನುವ ಭರವಸೆಯಿಂದ ಪ್ರತಿದಿನವೂ ಹೋಗುತ್ತಿದ್ದೆ. ಅದರ ಜೊತೆಗೆ ನನಗೂ ಒಂದೊಂದು ಸಲ ಅಜ್ಜಿಯೊಡನೆ ಹರಟೆ ಹೊಡೆಯುವದು ತುಂಬಾ ಖುಷಿ ಕೊಡುತ್ತಿತ್ತು. ಕೆಲವೊಮ್ಮೆ ನನಗೇ ಅನುಮಾನ ಬರುತ್ತಿತ್ತು, ನಾನು ನನ್ನ ಡ್ರೀಮ್ ಗರ್ಲ್ ನಾ ನೋಡಲಿಕ್ಕೆ ಹೋಗ್ತೀನಾ ಅಥವಾ ಆ ಮುದುಕಿಯೊಡನೆ ಮಾತಾಡಲು ಹೋಗ್ತಿದ್ದೀನಾ ಅಂತ. ಆ ಅಜ್ಜಿ ತುಂಬಾ ಒಳ್ಳೆಯವಳು ತನ್ನ ಯೌವ್ವನದ ದಿನಗಳ ಬಗ್ಗೆ ನನ್ನೊಡನೆ ಹಂಚಿಕೊಳ್ಳುತ್ತಿದ್ದಳು. ಅವಳು ಪೇಂಟಿಂಗ್ ಸಹ ಮಾಡ್ತಿದ್ಳಂತೆ. ಹೀಗೆ ನಾವಿಬ್ಬರೂ ಒಂಥರ ಒಳ್ಳೆಯ ಗೆಳೆಯರಾದೆವು.

ಕೆಲವೊಮ್ಮೆ ನನಗೆ ಆ ವಯಸ್ಸಾದ ಜೀವದ ಪ್ರತಿ ಉಸಿರಿನಲ್ಲೂ ಮರಣವು ಕಾದು ಕುಳಿತಿದಿಯೇನೋ ಅನ್ನೋ ಭಾವನೆ ಬರುತ್ತಿತ್ತು. ಕೆಲವೊಮ್ಮೆ ನನಗೆ ಅವಳು ಕಣ್ಣುಗಳನ್ನು ಹೇಗೆ ಕಳೆದುಕೊಂಡಳು ಎಂದು ಕೇಳುವ ಬಯಕೆಯಾಗುತ್ತಿತ್ತು. ಆದರೆ ಹಳೆಯದನ್ನು ಕೆದಕಿ ಯಾಕೆ ಅವಳಿಗೆ ಬೇಸರ ಮಾಡುವದು ಎಂದೆಣಿಸಿ ಸುಮ್ಮನಾಗುತ್ತಿದ್ದೆ.

ದಿನಗಳು ಉರುಳಿದಂತೆ ಹಲವಾರು ಜನ ಆ ನೀಲಿ ಕಂಗಳ ಚೆಲವೆಯನ್ನು ನೋಡಿದ್ದು ನನಗೆ ಕಿವಿಗೆ ಬೀಳುತ್ತಿತ್ತು. ಅವಳು ಮಾರ್ಕೆಟ್ಟಿಗೆ ಹೋದಾಗ ಹಲವರು ಅವಳನ್ನು ನೋಡಿದ್ದರು. ಅವರೆಲ್ಲರೂ ಅವಳ ಸೌಂದರ್ಯದ ಬಗ್ಗೆ ವರ್ಣಿಸುತ್ತಿದ್ದರು. ಅಷ್ಟೇ ಏಕೆ ನನ್ನ ಕೆಲವು ಗೆಳೆಯರೂ ಅವಳನ್ನು ನೋಡಿದ್ದರು! ಅವರೂ ಸಹ ಅವಳ ಆಕರ್ಷಣೀಯ ಕಣ್ಣುಗಳ ಬಗ್ಗೆ ನನ್ನ ಬಳಿ ಹೇಳುವಾಗ ನಾನು ಕಷ್ಟಪಟ್ಟು ನನ್ನ ಭಾವನೆಗಳನ್ನು ಅದುಮಿಟ್ಟುಕೊಳ್ಳುತ್ತಿದ್ದೆ. ದುರಾದೃಷ್ಟವಶಾತ್ ಆ ನನ್ನ ನೀಲಿ ಕಂಗಳ ಚೆಲುವೆ ಇನ್ನೂ ನನ್ನ ಕಣ್ಣಿಗೆ ಬಿದ್ದಿರಲಿಲ್ಲ.

ಅದೊಂದು ದಿನ ಸಂಜೆ ಎಂದಿನಂತೆ ಆ ಅಜ್ಜಿಯೊಡನೆ ಮಾತಾಡುತ್ತಿದ್ದೆ.

“ಲೋ ಹುಡುಗಾ, ಈ ಜಗತ್ನಲ್ಲಿ ಪ್ರೀತಿಗಿಂತ ಆಳವಾದ ಮತ್ತು ಸಮ್ಮೋಹಕವಾದ ಭಾವನೆಗಳು ತುಂಬಾ ಇದಾವೆ. ಆದರೆ ಪ್ರೀತಿಯ ಎದುರು ಆ ಎಲ್ಲ ಭಾವನೆಗಳು ಬಲಹೀನ ಅನ್ಸುತ್ತೆ. ಪ್ರೀತಿಯಲ್ಲಿ ಇರೋ ನೆಮ್ಮದಿ ಬೇರೆಲ್ಲೂ ಸಿಗೋದಿಲ್ಲ.” ಅಜ್ಜಿ ನಿಟ್ಟುಸಿರು ಬಿಡುತ್ತಾ ತನ್ನ ಮಾತನ್ನು ಮುಂದುವರೆಸಿದಳು. “ಅದರಲ್ಲೂ ಪ್ರೀತಿಗೋಸ್ಕರ ಕಾಯೋದಿದೆಯಲ್ಲಾ ಅದರಲ್ಲಿ ಇರೋ ಸುಖ ಅನುಭವಿಸಿದವರಿಗೇ ಗೊತ್ತು.” ಅಜ್ಜಿಯ ಮಾತಿನಲ್ಲಿ ಅದೇನೋ ಹತಾಶೆ, ಸಂತೋಷ ಎರಡೂ ಇದ್ದವು.

“ಯಾಕಜ್ಜೀ ನೀನು ನಿನ್ನ ಪ್ರೀತಿಗಾಗಿ ಕಾದಿದ್ದಾ?” ನಾನು ತಮಾಷೆಯಾಗಿ ಕೇಳಿದೆ.

“ಹೌದು ಕಣೋ ಇನ್ನೂ ಕಾಯ್ತಾನೇ ಇದೀನಿ” ಒಂಥರ ಹೆಮ್ಮೆಯಿಂದ ಹೇಳಿದಳು.

ಆ ಅಜ್ಜಿಯ ಮಾತು ಕೇಳಿ, ನನ್ನ ಭಾವನೆಗಳನ್ನು ತಡೆ ಹಿಡಿಯಲಾಗಲಿಲ್ಲ. ನನ್ನ ಕನಸುಗಳ ಬಗ್ಗೆ ಅಜ್ಜಿಗೆ ಇನ್ನೂ ಹೇಳಿರಲಿಲ್ಲವಲ್ಲ ಈ ಮುಸ್ಸಂಜೆ ವೇಳೇಲಿ ಹೇಳಬೇಕೆನ್ನಿಸಿತು. ನನ್ನ ಕನಸುಗಳ ಬಗ್ಗೆ, ನನ್ನ ನೀಲಿ ಕಣ್ಣುಗಳ ಚೆಲುವೆಯ ಬಗ್ಗೆ, ಅವಳನ್ನ ಕಾಣುವ ಹಂಬಲದ ಬಗ್ಗೆ, ಅವಳಿಗಾಗಿ ನನ್ನೆದೆ ಗೂಡಲ್ಲಿ ಬಚ್ಚಿಟ್ಟುಕೊಂಡ ಪ್ರೀತಿಯ ಬಗ್ಗೆ ಎಲ್ಲಾ ಅಜ್ಜಿಯ ಎದುರು ಹೇಳಿದೆ. ನಾನು ನನ್ನ ಮಾತುಗಳನ್ನು ಮುಗಿಸಿದಾಗ ಆಗಸದಲ್ಲಿ ಸೂರ್ಯ ಮುಳುಗಿ, ಹೊಂಬಣ್ಣದ ಛಾಯೆ ಉಳಿದಿತ್ತು. ಅದೇಕೋ ಹಕ್ಕಿಗಳು ತಮ್ಮ ಕಲರವವನ್ನು ನಿಲ್ಲಿಸಿದ್ದಾವೆ ಅನಿಸಿತು. ಇಡೀ ಜಗತ್ತೇ ನನ್ನ ಕಥೆ ಕೇಳಿ ಮೌನವಾಯಿತು ಎನ್ನುವ ಅನುಭವವಾಯಿತು. ಅಚ್ಚರಿಯಿಂದ ತಲೆ ಆಕಡೆ ಈಕಡೆ ತಿರುಗಿಸಿ ನೋಡಿದೆ, ಬಹುಶಃ ಕತ್ತಲಾಗಿದ್ದರಿಂದ ಎಲ್ಲಾ ಸೈಲೆಂಟ್ ಆಗಿದೆ ಅಂದುಕೊಂಡೆ. ತಿರುಗಿ ಅಜ್ಜಿಯ ಕಡೆ ನೀಡಿದಾಗ ಅಜ್ಜಿ ಅಳುತ್ತಿದ್ದಳು!

ಅವಳು ದುಃಖಿಸುತ್ತಲೇ ನನ್ನ ಕೆನ್ನೆಯನ್ನು ಸವರಿದಳು, ಕೃಶವಾದ ತನ್ನ ಎರಡೂ ಕೈಗಳಲ್ಲಿ ನನ್ನ ಮುಖವನ್ನು ಹಿಡಿದು ನನ್ನ ಹಣೆಗೆ ಮುತ್ತಿಕ್ಕಿದಳು. ನನಗೆ ವಿಚಿತ್ರವೆನಿಸಿದರೂ ಅದರಲ್ಲಿ ಪ್ರೀತಿ ತುಂಬಿದ್ದ ಅನುಭೂತಿಯಾಯಿತು. ಅಳುತ್ತಲೇ ನನ್ನ ತಲೆಯನ್ನು ಸವರಿದಳು. ಮತ್ತೆ ನನ್ನ ಕೆನ್ನೆಯನ್ನು ಸವರಿದಳು. ಏದ್ದು ನನ್ನ ಅಪ್ಪಿಕೊಳ್ಳಲು ಪ್ರಯತ್ನಿಸಿದಳು. ನನ್ನ ಪ್ರೀತಿಯ ಕಥೆ ಕೇಳಿ ಅಜ್ಜಿಗೆ ನನ್ನ ಮೇಲೆ ಕರುಣೆ ಬಂದಿರಬೇಕು. ಕೊನೆಗೂ ತನ್ನ ತಂಗಿಯ ಮಗಳಿಗೆ ಒಳ್ಳೆಯ ಜೋಡಿ ಸಿಕ್ಕ ಅಂದು ಕೊಂಡು ಆನಂದ ಭಾಷ್ಪ ಸುರಿಸುತ್ತಿದ್ದಾಳೆ ಅಂದುಕೊಂಡೆ. ಅವಳು ಕಷ್ಟಪಟ್ಟು ಎದ್ದೇಳುತ್ತಿದ್ದರೆ ನಾನು ಅವಳನ್ನು ಅಲ್ಲಿಯೇ ಕೂರಿಸಿ ಹಾಗೆಯೇ ಕುಳಿತಲ್ಲಿಂದಲೇ ಅಪ್ಪಿಕೊಂಡೆ.

“ಲೋ ‘ಕನಸು ಕಂಗಳ ಹುಡುಗಾ’…ಕೊನೆಗೂ ಬಂದೆಯಾ!!” ಅನ್ನುತ್ತಾ ನನ್ನ ಎದೆಯ ಮೇಲೆ ಬಿಕ್ಕಳಿಸಿದಳು. ಅವಳ ಕಣ್ಣೀರಿಗೆ ನನ್ನ ಅರ್ಧ ಅಂಗಿ ಒದ್ದೆಯಾಗಿತ್ತು. ಪಾಪ ಮಗಳಿಗೆ ಸರಿಯಾದ ಜೋಡಿ ಸಿಕ್ಕ ಅಂತ ಸಂತಸಪಡುತ್ತಿದ್ದಾಳೆ ಅಂತ ನಾನೂ ಒಳಗೊಳಗೇ ಖುಷಿಪಟ್ಟೆ.

“ಲೋ ‘ಕನಸು ಕಂಗಳ ಹುಡುಗಾ’, ನಾಳೆ ಸೂರ್ಯೋದಯವಾಗುತ್ತಲೇ ಇಲ್ಲಿಗೆ ಬಾ, ನಿನಗಾಗಿ ನಿನ್ನ ನೀಲಿ ಕಂಗಳ ಕನಸಿನ ಹುಡುಗಿ ಕಾದಿರುತ್ತಾಳೆ” ಎಂದಳು. ನಾನು ಸಂತಸದಿಂದ ಅಜ್ಜಿಯನ್ನು ಬೀಳ್ಕೊಟ್ಟು ಬಂದೆ. ಆದರೆ ಆ ಅಜ್ಜಿ ಯಾಕೆ ನನ್ನನ್ನು ‘ಕನಸು ಕಂಗಳ ಹುಡುಗ’ ಎಂದು ಕರೆದಳು ಎಂದು ಆಲೋಚಿಸಿದೆ. ಬಹುಶಃ ನಾನು ಜಾಸ್ತಿ ಕನಸುಗಳ ಬಗ್ಗೆ ಹೇಳಿದ್ನಲ್ಲಾ ಅದಕ್ಕೆ ಹಾಗೇ ಕರೆದಿರಬೇಕು ಎಂದುಕೊಂಡೆ.

ಮರುದಿನ ಬೆಳಿಗ್ಗೆಯೇ ಎದ್ದು ಜರತಾರಿ ರೇಷ್ಮೆ ಪಂಚೆ ಉಟ್ಟುಕೊಂಡು ಒಳ್ಳೇ ಮದುಮಗನ ತರಹ ರೆಡಿಯಾಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು, ಪ್ರಸಾದದೊಡನೆ ನನ್ನ ನೀಲಿ ಕಂಗಳ ಚೆಲುವೆಯನ್ನು ಕಾಣಲು ಅವಳ ಮನೆಗೆ ಹೋದೆ.

ಅವಳ ಮನೆಯ ಮುಂದೆ ತುಂಬಾ ಜನ ನೆರೆದಿದ್ದರು! ಅಲ್ಲಿನ ಇಡೀ ವಾತಾವರಣ ಶೋಕಾಚರಣೆಯಂತೆ ಮೌನವಾಗಿತ್ತು!! ನನ್ನೆದೆ ಅದೇಕೋ ವೇಗವಾಗಿ ಬಡಿದುಕೊಳ್ಳತೊಡಗಿತು!!! ಅದೇನೋ ಹೇಳಲಾಗದ ತಳಮಳ, ಆತಂಕದಿಂದ ನಿಧಾನವಾಗಿ ನಡೆಯುತ್ತ, ಜನರನ್ನು ಸರಿಸುತ್ತಾ ಮುಂದೆ ಹೋದೆ. ಮನೆಯ ಮುಂದಿನ ಗಾರ್ಡನ್ನಿನಲ್ಲಿ ನಿಶ್ಚೇತಳಾದ ಅಜ್ಜಿಯನ್ನು ಬಿಳಿ ಬಟ್ಟೆಯ ಮೇಲೆ ಮಲಗಿಸಲಾಗಿತ್ತು. ಅವಳ ಮೊಮ್ಮಗಳು, ನನ್ನ ಕನಸಿನ ಹುಡುಗಿ ಅಜ್ಜಿಯ ಎದೆಯ ಮೇಲೆ ಮಲಗಿ ದುಃಖಿಸುತ್ತಿದ್ದಳು. ತುಂಬಾ ಹೊಸ ಮುಖಗಳು ಕಾಣಿಸಿದವು. ಬಹುಶಃ ಅವರ ಸಂಬಂಧಿಗಳಿರಬೇಕು ಎಂದುಕೊಂಡೆ. ನಾನು ಅಜ್ಜಿಯ ಮೃತದೇಹಕ್ಕೆ ಹತ್ತಿರವಾದಂತೆ ಸುತ್ತಲಿನ ಸಂಬಂಧಿಕರಾಡುವ ಮಾತುಗಳು ನನ್ನ ಕಿವಿಗೆ ಬಿದ್ದವು.

“ಪಾಪ ತುಂಬಾ ಒಳ್ಳೆಯವಳು, ಕುಮಾರಿಯಾಗಿಯೇ ಸತ್ತಳು!”

ನಾನು ಆ ಮಾತನ್ನಾಡಿದ ವ್ಯಕ್ತಿಯ ಹತ್ತಿರದಲ್ಲಿದ್ದೆ. ಕುತೂಹಲದಿಂದ ಕೇಳಿದೆ ” ತಂಗಿಯ ಮಗಳನ್ನು ಬೆಳೆಸುವದಕ್ಕಾಗಿ ಈ ಅಜ್ಜಿ ಮದುವೆಯಾಗಲಿಲ್ಲವೇ?”

” ಅಯ್ಯೋ ಅಲ್ಲಪ್ಪಾ ಅದೊಂದು ದೊಡ್ಡ ಕಥೆ, ಅವಳು ಅದೇನೋ ತನ್ನ ಕನಸಿನ ಹುಡುಗನಿಗಾಗಿ ಕಾಯುತ್ತಿದ್ದಳಂತೆ, ಅವಳಿಗೆ ದಿನಾಲೂ ಕನಸಲ್ಲಿ ಒಬ್ಬ ಹುಡುಗ ಬರ್ತಿದ್ನಂತೆ…ಆ ‘ಕನಸು ಕಂಗಳ ಹುಡುಗ’ ತನಗಾಗಿ ಕಾದಿದ್ದಾನೆ! ಅವನನ್ನೇ ಮದುವೆಯಾಗುತ್ತೇನೆ ಅಂತ ಕಾದು ಕುಳಿತಿದ್ದಳು. ಪಾಪ ಕೊನೆಗೂ ಮದುವೇ ಆಗದೇ ಅವನನ್ನೇ ಕಾಯುತ್ತಿದ್ದಳು” ಅಂದ.

ಆ ವ್ಯಕ್ತಿಯ ಮಾತುಗಳನ್ನು ಕೇಳಿ ನನ್ನ ಅಂತರಾತ್ಮವೇ ನಲುಗಿ ಹೋಯಿತು! ಗೊಂದಲದಿಂದ ತಿರುಗಿದೆ, ಅಜ್ಜಿಯ ದೇಹದ ಮೇಲೆ ದುಃಖಿಸುತ್ತಿರುವ ಹುಡುಗಿಯ ಹೆಗಲ ಮೇಲೆ ಕೈ ಇಟ್ಟೆ ಅವಳೂ ತಿರುಗಿ ನನ್ನೆಡೆ ನೋಡಿದಳು. ಆಹ್ ಅದೆಂತಹ ಸೌಂದರ್ಯದ ಖಣಿ, ದೇವಲೋಕದ ಅಪ್ಸರೆಯಂತಿದ್ದಳು! ಆ ನೀಲಿ ಕಣ್ಣುಗಳು ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದವು. ಒಂದು ಕ್ಷಣ ಅವಳನ್ನು ನೋಡಿ ನನ್ನ ಹೃದಯ ಕಂಪಿಸಿತು. ಆ ಹುಡುಗಿ ಊರ ಜನರ ವರ್ಣನೆಯಂತೆ ಸೌಂದರ್ಯದ ಗಣಿಯಾಗಿದ್ದಳು. ಆದರೆ ಅವಳು ನನ್ನ ಕನಸಿನ ಹುಡುಗಿಯಲ್ಲ! ಅವಳ ಕಣ್ಣುಗಳೇನೋ ನಾನು ಕನಸಲ್ಲಿ ಕಂಡಂತೇ ಇದ್ದವು. ಆದರೆ ಮುಖ ಅವಳದಲ್ಲ!! ಆ ಹುಡುಗಿ ನನಗೊಂದು ಭಾವಚಿತ್ರವನ್ನು ಕೊಡುತ್ತಾ ಹೇಳಿದಳು ” ಇದು ನನ್ನ ದೊಡ್ಡಮ್ಮ ಬಿಡಿಸಿದ ಪೇಂಟಿಂಗ್ ಇದನ್ನು ನಿನಗೆ ಕೊಡಲು ಹೇಳಿದ್ದಳು”. ನನ್ನ ಕೈಗೆ ಆ ಪೇಂಟಿಂಗ್ ಅನ್ನು ಕೊಟ್ಟು ಆ ಹುಡುಗಿ ಮುಖ ತಿರುಗಿಸಿ ಬಿಕ್ಕಳಿಸತೊಡಗಿದಳು.

ನಾನು ಆ ಪೇಂಟಿಂಗ್ ನೋಡಿದೆ ಅದು ನನ್ನ ನೀಲಿ ಕಂಗಳ ಕನಸಿನ ಹುಡುಗಿಯ ಚಿತ್ರವಾಗಿತ್ತು.

“ಪಾಪ ತನ್ನ ಎರಡೂ ಕಣ್ಣುಗಳನ್ನು ಜೀವದಿಂದಿರುವಾಗಲೇ, ಹುಟ್ಟುಕುರುಡಿಯಾದ ತಂಗಿಯ ಮಗಳಿಗೆ ದಾನ ಮಾಡಿದ್ದಳು” ಯಾರೋ ಹಿಂದಿನಿಂದ ಹೇಳಿ ದುಃಖಿಸಿದರು. ನಾನು ಇನ್ನೊಮ್ಮೆ ಆ ಅಜ್ಜಿಯ ಮುಖವನ್ನು ನೋಡಿದೆ. ಹೌದು ಅವಳೇ ನನ್ನ ಕನಸಿನ ನೀಲಿ ಕಂಗಳ ಚೆಲುವೆ!!! ಆದರೆ ಕಣ್ಣು ಇಲ್ಲದಿದ್ದರಿಂದ ಅವಳನ್ನು ಗುರುತಿಸಲು ಆಗಿರಲಿಲ್ಲ..! ಆ ಪೇಂಟಿಂಗ್ ಹಿಂದೆ ಇನ್ನೊಂದು ಚಿತ್ರವಿತ್ತು. ಅದು ನನ್ನದೇ ಚಿತ್ರ…ಅದರ ಕೆಳಗೆ ಬರೆದಿತ್ತು ‘ನನ್ನ ಕನಸು ಕಂಗಳ ಹುಡುಗನಿಗಾಗಿ, ನಿನ್ನ ನೀಲಿ ಕಂಗಳ ಚೆಲುವೆಯ ಉಡುಗೊರೆ’….

ಮತ್ತಷ್ಟು ಸುದ್ದಿಗಳು

vertical

Latest News

ವಿದ್ಯುತ್ ಲೈನ್ ತಗುಲಿ 5 ಜಾನುವಾರು ಸ್ಥಳದಲ್ಲಿಯೇ ಸಾವು

newsics.com ಕೊಡಗು: ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. ಮತ್ತೂರು ಗ್ರಾಮದ...

Asian Games; ಭಾರತಕ್ಕೆ ಒಂದೇ ದಿನ 15 ಪದಕ

newsics.com ಹ್ಯಾಂಗ್‌ಝೌ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 8ನೇ ದಿನವಾದ ಭಾನುವಾರ ಒಂದೇ ದಿನ 15 ಪದಕ ಬಾಚಿಕೊಂಡಿದೆ. 7ನೇ ದಿನವಾದ ಶನಿವಾರ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನೊಂದಿಗೆ 38 ಪದಕಗಳನ್ನು ಭಾರತ...

ಬೆಂಗಳೂರು ಕಂಬಳ: ಕೋಣಗಳಿಗೆ ಮಂಗಳೂರಿಂದಲೇ ಬರುತ್ತೆ ಕುಡಿಯುವ ನೀರು!

newsics.com ಬೆಂಗಳೂರು: ನವೆಂಬರ್ ತಿಂಗಳ 25 ಮತ್ತು 26ನೇ ತಾರೀಕಿನಂದು ಮೊದಲ ಬಾರಿಗೆ ತುಳುನಾಡಿನ ಗಡಿಯನ್ನು ದಾಟಿ ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯುತ್ತಿದೆ. ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ನೇತೃತ್ವದಲ್ಲಿ ಕಂಬಳ...
- Advertisement -
error: Content is protected !!