- ಅರ್ಚನಾ ಎಚ್.
ಜೀವ ಬೇರು
ಉಪವನದ ಮರಗಳೆಲ್ಲಾ ಮುದಿಯಾಗಿದ್ದವು..ನಿಗಿ ನಿಗಿ ಬಿಸಿಲಿಗೆ ಒಣಗಿ ಎಲೆಯುದುರಿ ಕಟ್ಟಿಗೆಯಂತಾಗಿತ್ತು.. ಉಪವನಕ್ಕೂ ಆ ಮುದುಕನಿಗೂ ಬಹಳ ಹಳೆಯ ನಂಟು..ಮನೆ ಎದುರಿಗೇ ಇದ್ದ ಕಾರಣ , ಅವನು ಬಹುಕಾಲ ಅಲ್ಲೇ ವಿರಮಿಸಿದ್ದನು..,ಅಷ್ಟೇ ಯಾಕೆ? ಮೂರು ತಲೆ ಮಾರುಗಳ ಆಟ ಊಟ ಪಾಠವೂ ಅಲ್ಲೇ ಸಾಗಿತ್ತು..ಅಂದು ಬೆಳಗು ಮರಗಳನ್ನು ಹಿಟ್ಯಾಚಿ ಬುಡಮೇಲು ಮಾಡಲು ಸಜ್ಜಾಗಿತ್ತು.. ಇತ್ತ ಮುದುಕನ ಜೀವಬೇರು ದೇಹದಿಂದ ಕೀಳಲ್ಪಟ್ಟಿತು…
***
ಅನುಕೂಲವಾದಿ
ಕಂಪನಿ ಕೆಲಸದಲ್ಲಿದ್ದ ಸ್ಫುರದ್ರೂಪಿಯಾದ ಅವನು ಹೆಣ್ಣು ಸಿಗದೆ ಕೊನೆಗೆ ಐದನೇ ತರಗತಿ ನಪಾಸಾಗಿದ್ದ ಕೃಷ್ಣ ವರ್ಣೆ ಸ್ವಾತಿಯನ್ನು ಮದುವೆಯಾದ.. ವಿದ್ಯಾರ್ಹತೆ ಇಲ್ಲದವಳೆಂದು ಅಡಿಗಡಿಗೂ ಹಂಗಿಸಿ ಅವಳ ಮನ ನೋಯಿಸುತ್ತಿದ್ದ…ಈಗವನು ಅಂಗವಿಕಲ..ಮೊನ್ನೆ ಆದ ಸಿಲಿಂಡರ್ ಸ್ಫೋಟದಲ್ಲಿ ಅವನ ಇಡೀ ದೇಹ ಸುಟ್ಟು ಕರಕಲಾಗಿದೆ…ಕಾಲುಗಳೆರಡೂ ಸ್ವಾಧೀನ ಕಳೆದುಕೊಂಡಿವೆ…ಕೂಡಿಟ್ಟ ಹಣವನ್ನೆಲ್ಲಾ ಚಿಕಿತ್ಸೆಗೆ ಭರಿಸಿಯಾಯ್ತು..ಈಗವಳು ಏಳೆಂಟು ಮನೆ ಕೆಲಸ ಮಾಡುತ್ತಾ ಅವನ ಹೊಟ್ಟೆ ಹೊರೆಯುತ್ತಿದ್ದಾಳೆ.. ಅವಳೆಂದರೆ ಅವನಿಗೀಗ ಅಗಾಧ ಪ್ರೀತಿ…! ಮತ್ತವಳಿಗೆ ಅವನು ಅನುಕೂಲವಾದಿಯಂತೆ ಕಾಣುತ್ತಾನೆ..!
***
ವಿಧಿ
ಕುಡಿದ ಅಮಲಿನಲ್ಲಿ ಅಂಧರಂತೆ ಅವರು, ಮಧ್ಯರಾತ್ರಿ ಕೆಲಸ ಮುಗಿಸಿ ಆಟೋದಲ್ಲಿ ಬರುತ್ತಿದ್ದ ಅವಳನ್ನು, ಅಡ್ಡಗಟ್ಟಿ, ಸಾಮೂಹಿಕ ಅತ್ಯಾಚಾರವೆಸಗಿ ಪರಾರಿಯಾಗಿದ್ದರು.. ಇತ್ತ ಮೂರು ದಿನವಾದರೂ ತಂಗಿ ಮನೆಗೆ ಬಾರದಿರುವುದು ಅವನ ತಲೆ ಕೆಡಿಸಿತ್ತು.. “ಅಣ್ಣಾ ಬಿಟ್ಟು ಬಿಡು ಕಾಪಾಡು” ಎನ್ನುವ ಶಬ್ಧಗಳು ಕಿವಿಗಪ್ಪಳಿಸುತ್ತಲೇ ಇದ್ದವು..ಹುಚ್ಚನಂತೆ ಅಂದು ರಾತ್ರಿ ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿದ..
ನಗರದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಹೆಣ ಬಿದ್ದಿತ್ತು. ಅತ್ಯಾಚಾರವೆಸಗಿದ್ದ ಮಹಿಳೆ ತಂಗಿಯೇ ಆಗಿದ್ದರೆ ಎಂಬ ಸಂದೇಹದಿಂದ ಹೆಣದ ಮೇಲೆ ಮೊಬೈಲ್ ಟಾರ್ಚ್ ಬಿಟ್ಟ.. ಬೆತ್ತಲಾಗಿದ್ದ ಅವಳ ದೇಹ ರಕ್ತಸಿಕ್ತವಾಗಿ ಮಲಗಿತ್ತು.. ಕಿಟಾರನೆ ಕಿರುಚಿದ.. ತಂಗಿಯ ಹೆಣಕ್ಕೆ ತನ್ನಂಗಿ ಹೊದೆಸಿದ..ಕಂಡ ಗಂಡಸರನ್ನೆಲ್ಲಾ ಕೊಲ್ಲಲು ಹೊರಟ ಅವನೀಗ ನಿಮಾನ್ಸ್ ನ ಅತಿಥಿ..
***
ಭರವಸೆ
ಅವನು ಹರೆಯದಲ್ಲೇ ಮಾರಣಾಂತಿಕ ರೋಗದಿಂದ ಬಳಲುತ್ತಿದ್ದ..ಕ್ಯಾನ್ಸರ್ ಖಾಯಿಲೆ ಅವನ ಭರವಸೆಯ ಮಹಾನದಿಯನ್ನು ಇಡಿಯಾಗಿ ಆಪೋಶಿಸಿತ್ತು..ಹೇಗೂ ಸಾಯುವೆ, ಸಾಯುವ ಮುನ್ನ ಆಶಾಹೀನರ ಬಾಳಿಗೆ ಭರವಸೆ ಹೊಸ ಆಶಯಗಳನ್ನು ತುಂಬುವ ಕೈಂಕರ್ಯಕ್ಕೆ ನಿಂತ..ಬೀದಿನಾಟಕಗಳಿಂದ ಲಕ್ಷಾಂತರ ಹೃದಯಗಳ ಮನಗೆದ್ದ..ಬದುಕುವ ಭರವಸೆ, ಪ್ರೇರಣೆ , ಜನರ ಅಭಿಮಾನ, ಹಾಗೂ ಪ್ರೇಮವೇ ಅವನ ರೋಗಕ್ಕೆ ಔಷಧಿಯಾಗಿ ಪರಿಣಮಿಸಿತ್ತು.. ಈಗವನಿಗೆ ತೆರೆನೆರೆ ಮುಪ್ಪು..ಮಕ್ಕಳು ಮೊಮ್ಮಕ್ಕಳೊಟ್ಟಿಗೆ ನೆಮ್ಮದಿಯ ಬಾಳ್ವೆ ನಡೆಸುತ್ತಿದ್ದಾನೆ..
***
ಪಾಪಪ್ರಜ್ಞೆ
ಭ್ರೂಣಹತ್ಯೆ ಮಹಾಪಾಪವೆಂದು ತಿಳಿದಿದ್ದರೂ ಅವಳು ಗಂಡ, ಅತ್ತೆ, ಮಾವನ ಒತ್ತಾಯಕ್ಕೆ ಮಣಿದು, ಕಳೆದ ಏಳು ವರ್ಷಗಳಲ್ಲಿ ಮೂರು ಬಾರಿ ಗರ್ಭಪಾತ ಮಾಡಿಸಿಕೊಡಿಸಿಕೊಳ್ಳುವ ಘೋರಕೃತ್ಯಕ್ಕೆ ಕೈಹಾಕಿದ್ದಳು.. ಚೊಚ್ಚಲ ಹೆಣ್ಣುಮಗಳಿಗೀಗ ಹತ್ತು ವರ್ಷ.. ವಂಶೋದ್ದಾರಕ, ಮುಕ್ತಿ, ಸದ್ಗತಿಯ ಸೋಗು ಅವರ ತಲೆ
ಹೊಕ್ಕಿತ್ತು..ಮತ್ತೀಗ ಆಕೆ ಐದು ತಿಂಗಳ ಬಸುರಿ.. ಐದನೇ ಭ್ರೂಣವೂ ಹೆಣ್ಣಂತೆ!..ಅದನ್ನೂ ತೆಗೆಸೆನ್ನುತ್ತಾ ಪಟ್ಟು ಹಿಡಿದ ಮನೆಮಂದಿ..!! ಮನೆತುಂಬಾ ಗೆಜ್ಜೆಸದ್ದು! ಬಾಗಿಲ ಹಿಂದೆ ಅಮ್ಮಾ ಎನ್ನುವ ಧ್ವನಿ..ಅವಳಿಗಷ್ಟೇ ಕೇಳಿಸುವುದು..ಹುಚ್ಚು ಹುಚ್ಚಾಗಿ ಕಿರುಚುವಳು..ಗೊಂಬೆ ಹಿಡಿದು ಹಾಲೂಡಿಸಲು ಪ್ರಯತ್ನಿಸುವಳು..ದೆವ್ವದ ಕಾಟವೆಂದು ಹೆದರಿ ಮನೆ ಬಿಟ್ಟರು..ಹೊಸ ಮನೆಯೂ ಇದಕ್ಕೆ ಹೊರತಾಗಿಲ್ಲ..ಹೋಮ ಹವನ ಯಂತ್ರ ಮಂತ್ರದ ಮೊರೆಹೋದರು..ಅಸಲಿಗೆ ಹೆಣ್ಣು ಭ್ರೂಣಗಳನ್ನು ಕೊಂದ ಪಾಪಪ್ರಜ್ಞೆ ಅವರನ್ನು ಮತಿಹೀನರನ್ನಾಗಿಸಿದೆ..
***