Saturday, May 28, 2022

ಮೊಹರು

Follow Us

  • ದೀಪ್ತಿ

ಹಜವಾಗಿಯೇ ನನ್ನ ಕಣ್ಣಲ್ಲಿ ಅವಳ ಬರುವಿಕೆಯ ಕುರಿತಾದ ನಿರೀಕ್ಷೆ ಇತ್ತು. ಅವಳದ್ದಷ್ಟೇ ಅಲ್ಲ, ಅವಳ ತರಹದ ಹತ್ತಾರು ಜನರು ನಿರೀಕ್ಷೆಯ ಪಟ್ಟಿಯಲ್ಲಿದ್ದರಾದರೂ ಅವಳೆಂದರೆ ನನ್ನ ಅರಿವಿಗೂ ಮೀರಿದ ವಿಶೇಷ ಅಕ್ಕರೆಯೊಂದು ಸಮ್ಮಿಳಿತಗೊಂಡಿತ್ತು. ಬಹುಶ: ಅದು ಆಕೆ ನನ್ನೂರಿನವಳು ಎನ್ನುವ ಕಾರಣಕ್ಕೆ ಇದ್ದಿರಬಹುದು. ಅಷ್ಟೇ ಏಕೆ, ನಾವಿಬ್ಬರೂ ಒಂದೇ ಶಾಲೆಯಲ್ಲಿ ನಾಲ್ಕನೇ ಇಯತ್ತೆಯವರೆಗೆ ಒಟ್ಟಿಗೆ ಓದಿದ ಸಲುಗೆಗೂ ಆಗಿರಬಹುದು. ಆದರೆ, ನಾನು ಎಮ್‍ಎಸ್‍ಡಬ್ಲೂ ಮುಗಿಸಿ ಮೊಟ್ಟ ಮೊದಲಿಗೆ ಸರ್ಕಾರಿ ಆಸ್ಪತ್ರೆಗೆ ಆಪ್ತ ಸಮಾಲೋಚಕಿಯಾಗಿ ಸೇರಿದಾಗ ಬಂದ ಮೊದಲ ಕ್ಲೈಂಟ್ ಆಕೆ ಎನ್ನುವ ಕಾರಣಕ್ಕಾಗಿ ಮಾತ್ರ ಖಂಡಿತ ಅಲ್ಲ ಎಂಬುದಂತೂ ಸತ್ಯ.
ಪ್ರತಿ ಮೂರು ತಿಂಗಳಿಗೊಮ್ಮೆ ಆಕೆ ನಮ್ಮಲ್ಲಿ ತಪಾಸಣೆಗೆ ನಿಯಮಿತವಾಗಿ ಬರುತ್ತಿದ್ದಳು. ಅಷ್ಟೇ ಅಲ್ಲ ಅವಳ ತರಹದ ಅನೇಕ ಸ್ನೇಹಿತೆಯರನ್ನೂ ಕರೆತಂದು ಕೌನ್ಸಿಲಿಂಗ್ ಮಾಡಿಸುತ್ತಿದ್ದಳು. ಅವಳ ‘ಆ’ ಕೆಲಸದ ಬಗ್ಗೆ ನಾನು ಕೇಳುವುದು ನನ್ನ ಕಾರ್ಯವ್ಯಾಪ್ತಿಗೆ ಬರುವುದಿಲ್ಲವಾದರೂ, ಅವಳ ಮೇಲಿನ ಮಮಕಾರದಿಂದ. “ಯಾಕೆ ಇಳಿದೆ” ಎಂದು ಒಮ್ಮೆ ಕೇಳಿದ್ದೆ. ಆದಕ್ಕವಳು ಕಟ್ಟಿಕೊಂಡ ಗಂಡ ಸಾಕಲಾಗದೆ ಓಡಿಹೋದ ಮೇಲೆ ಎಲ್ಲಿ ಇಳಿದರೂ ಗುಂಡಿಗಳೇ ಸಿಕ್ಕ ಕಾರಣಕ್ಕೆ, ಪುಗಸಟ್ಟೆ ಕೆಸರು ಮೈಗೆ ಹಚ್ಚಿಕೊಳ್ಳುವುದಕ್ಕಿಂತ, ಮೂವರು ಮಕ್ಕಳ ಸಲುವಾಗಿ ಕಾಯಂ ಆಗಿ ಗುಂಡಿಯಲ್ಲೇ ಇದ್ದು ಬಿಡೋದೇ ವಾಸಿ ಎನ್ನಿಸಿ ಇಳಿದುಬಿಟ್ಟೆ ಎಂದಿದ್ದಳು.
“ಬೇಸರವಿಲ್ಲವಾ?” ಎಂದಿದ್ದೆ.
“ಹೊಟ್ಟೆಗೆ ಬೇಸರದ ಪರಿಚಯ ಇರುವುದಿಲ್ಲ” ಮಾರ್ಮಿಕವಾಗಿ ನುಡಿದಿದ್ದಳು.
“ಹೋಗಲಿಬಿಡು, ಆದರೆ ಹುಷಾರು, ಕಾಯಿಲೆ ಯಾವ ಗಳಿಗೆಗೂ ಅಂಟಿಕೊಳ್ಳಬಹುದು. ಗಿರಾಕಿಗಳಿಗೆ ಕೊಡು” ಎನ್ನುತ್ತ ರಬ್ಬರಿನ ರೂಪವೊಂದನ್ನು ಕೈಗಿರಿಸಿದ್ದೆ.
“ದುಡ್ಡು ತೆಗೆದುಕೊಂಡ ಮೇಲೆ ನಂಗೆ ಹೇಳೋದು ಕಷ್ಟ. ಹೇಳಿದರೂ ಅವರುಗಳು ಕೇಳೋದಿಲ್ಲ” ಅನುಭವಸ್ಥೆಯಾಗಿ ನುಡಿದಿದ್ದಳು.
“ಆದರೂ ತಿಳಿ ಹೇಳು, ನಾಳೆ ನಿಂಗೆ ತೊಂದರೆಯಾಗಬಾರದು ನೋಡು” ಕನಿಕರ ಉಕ್ಕಿ ಬಂದಿತ್ತು.
“ಅದು ತಿಳಿ ಹೇಳೋ ಸಮಯ ಅಲ್ಲವೇ ಮಹಾರಾಯ್ತಿ, ಅದೂ ಅಲ್ಲದೇ ಮಾರ್ಕೆಟ್ಟಿನಲ್ಲಿ ತುಂಬಾ ಕಾಂಪಿಟೇಷನ್ ಇದೆ. ನಾನು ಉಪದೇಶ ಮಾಡ್ತಾ ಕೂತ್ರೆ, ನನ್ನ ಹತ್ರ ಒಬ್ರೂ ಬರಲ್ಲ. ಆಮೇಲೆ ನೀನು ಕೊಡೊ ರಬ್ಬರಿನ ತುಂಡನ್ನ ನಾನು ಮನೆ ಮನೆಗೆ ಮಾರ್ಬೇಕಾಗುತ್ತೆ ಅಷ್ಟೇ” ಎನ್ನುತ್ತ ಜೋರು ನಕ್ಕಿದ್ದಳು.
“ತಲೆ ನಿಂದು” ನಾನೂ ನಕ್ಕು ಬಿಟ್ಟಿದ್ದೆ.
ಆದರೆ ಪ್ರತಿಬಾರಿ ಆಕೆ ಪರೀಕ್ಷೆಗೆ ಬಂದಾಗಲೂ ನನ್ನ ಜೀವ ಪಟಪಟನೆ ಹೊಡೆದುಕೊಳ್ಳುತ್ತಲೇ ಇರುತ್ತಿತ್ತು. ನೆಗೆಟಿವ್ ರಿಪೋರ್ಟ್ ಬರಲಿ ದೇವರೇ ಎಂದು ಬೇಡುತ್ತಿದ್ದೆ. ಆ ಪ್ರಾರ್ಥನೆ ಅವಳಿಗಷ್ಟೆ ಸೀಮಿತವಾಗಿರದೇ ಹೋದರೂ, ಅವಳ ಮೇಲೆ ಮಮತೆ ಸ್ವಲ್ಪ ಹೆಚ್ಚಿರುತ್ತಿತ್ತು ಎಂಬುದು ಮಾತ್ರ ನಿಜ. ಆದರೆ ನಾನಂದುಕೊಂಡ ಆ ಕ್ಷಣ ಕೇವಲ ಮೂರು ವರ್ಷದಲ್ಲಿ ಬಂದು ನನ್ನೆದುರು ನಿಂತೇಬಿಟ್ಟಿತ್ತು. ಲ್ಯಾಬಿನಿಂದ ಬಂದ ಬ್ಲಡ್ ರಿಪೋರ್ಟ್ ನೋಡಿ ಕುಸಿದಿದ್ದೆ. ಅವಳದ್ದೇ ಐಡಿ ನಂಬರ್ ಹೌದೋ ಅಲ್ಲವೋ ಎಂದು ನಾಲ್ಕೈದು ಬಾರಿ ಪರೀಕ್ಷಿಸಿದ್ದೆ. ಎಲ್ಲವೂ ಸರಿಯಾಗಿತ್ತು. ಎಂತಹ ಕೆಲಸ ಮಾಡಿಕೊಂಡಳು. ಎಷ್ಟು ಹೇಳಿದರೂ ಕೇಳದೇ….. ಕೋಪವು ನನ್ನನ್ನು ಕಿತ್ತು ತಿಂದಿತ್ತು. ಆ ನಂತರ ನನಗೊಂದು ರೀತಿಯ ಹೊಸ ಸಂಕಟ ಶುರುವಾಗಿತ್ತು. ಹೇಗೆ ಹೇಳುವುದು?
ಅತ್ತು ರೋದಿಸುವ. ಮೌನದಲ್ಲೇ ಕಣ್ಣೀರು ಸುರಿಸುವ, ತೀರಾ ಏಕಾಂಗಿತನದಲ್ಲಿ ಒದ್ದಾಡುವ, ಬದುಕು ಬಿಟ್ಟೆದ್ದು ನಡೆಯುವ ಎಲ್ಲ ಉದಾಹರಣೆಗಳು ನನ್ನ ಮುಂದಿದ್ದರೂ ಈಕೆ ಹೇಗೆ ಅದನ್ನು ಸ್ವೀಕರಿಸಿಯಾಳು ಎಂದು ಚಿಂತಿಸಿ ಹೈರಾಣಾಗಿದ್ದೆ. ಅವಳ ಪುಟ್ಟ ಮೂರು ಮಕ್ಕಳು ಪದೇ ಪದೇ ನನ್ನೆದುರಿಗೆ ಬಂದು ನಿಲ್ಲತೊಡಗಿದವು. ನನ್ನ ಸಹನೆಯನ್ನು ಪರೀಕ್ಷಿಸುವವಳಂತೆ ಒಂದು ವಾರವಾದರೂ ಪತ್ತೆ ಇರದ ಆಕೆಯ ಬಗ್ಗೆ ನನಗೆ ತೀರಾ ಕೋಪ ಬಂದಿತ್ತು. ಅವಳ ಫೋನ್ ಕೂಡ ತಾನು ವ್ಯಾಪ್ತಿ ಪ್ರದೇಶದಿಂದ ಹೊರಗಿರುವೆನೆಂದು ಪದೇ ಪದೇ ತಿಳಿಸುತ್ತಲೇ ಇತ್ತು.
ಹತ್ತು ಹದಿನೈದು ದಿನ ಕಳೆದಿರಬೇಕು. ಆಕೆ ಬಂದು ಎದುರು ಕೂತಳು. “ಎಲ್ಲಿಗೆ ಹೋಗಿದ್ದೆ” ಕೋಪ ತಡೆದುಕೊಂಡರೂ ಪ್ರಯೋಜನಕ್ಕೆ ಬಾರಲಿಲ್ಲ. “ಕೆಲಸದ ಮೇಲೆ” ಎಂದಳು ನಿರ್ಲಿಪ್ತವಾಗಿ.
“ಹಾಳಾಗಿ ಹೋಗು” ಶಪಿಸಿದೆ.
ನನ್ನ ದನಿ ಕಂಪಿಸಿದ್ದು ಆಕೆಯ ಅರಿವಿಗೂ ಬಂದಿರಬೇಕು.
“ಇಲ್ಲ, ಕೊನೆಯ ಮಗನಿಗೆ ಅದೆಂತದೋ ಹೃದಯದ ತೊಂದರೆ ಅಂತೆ, ಅದಕ್ಕೆ ಬೆಂಗಳೂರಿಗೆ ಹೋಗಿದ್ದೆ” ಎಂದಳು.
ಕುಸಿಯುವ ಸರದಿ ನನ್ನದಾಗಿತ್ತು. ಇಂತಹ ಸಮಯದಲ್ಲಿ ಹೇಗೆ ಹೇಳಲಿ, ಹೇಳದೇ ಇದ್ದರೆ ನಾಳೆ ಯಾರಾದರೂ ಮೇಲಿನ ಅಧಿಕಾರಿಗಳು ಬಂದರೆ ಕೆಲಸಕ್ಕೆ ಕುತ್ತು ಬರಬಹುದು. ಅಲ್ಲದೇ ಇವಳು ಬೇರೆ ಇನ್ನೆಲ್ಲಿ ಹೋಗಿ ಇನ್ಯಾರಿಗೆ ಹಚ್ಚುತ್ತಾಳೋ ಮೊದಲೇ ತಡವಾಗಿದೆ, ಆದದ್ದಾಗಲಿ ಹೇಳಿ ಬಿಡುವುದೇ ವಾಸಿ ಎಂದುಕೊಂಡು,
“ನೋಡು ನೀನೀಗ ಸ್ವಲ್ಪ ಹೃದಯ ಗಟ್ಟಿ ಮಾಡಿಕೋ” ಎನ್ನುತ್ತಾ ಹಳೆಯ ಸವಕಲು ಪದಗಳ ವೇದಿಕೆಯೊಂದನ್ನು ಅವಳೆದುರಿಗೆ ಅನಾವರಣಗೊಳಿಸುತ್ತ ಮುಖ ನೋಡಿದೆ.
ಅವಳು “ಮುಂದೆ” ಎನ್ನುವಂತಹ ತಟಸ್ಥ ಭಾವದಲ್ಲಿ ಕೂತಿದ್ದಳು.
“ಈ ಕಾಯಿಲೆಯಿಂದ ಏನೂ ತೊಂದರೆ ಇಲ್ಲ. ಮಾಮೂಲಿಯಂತೆಯೇ ಬದುಕಬಹುದು. ಊಟ, ತಿಂಡಿ ಚನ್ನಾಗಿ ಮಾಡಬೇಕು. ರೆಗ್ಯುಲರ್ ಮಾತ್ರೆ ತಗೋಬೇಕಾಗತ್ತೆ. ಎಲ್ಲ ನಮ್ಮ ನಮ್ಮ ಕೈಯ್ಯಲ್ಲಿದೆ. ಹೀಗೆ ಉರು ಹೊಡೆದಿದ್ದನ್ನು ಹೇಳುತ್ತ ಹೋದೆ..”
ಮಾತೆಲ್ಲ ಮುಗಿದಾದ ಮೇಲೆ,
“ನನಗದೆಲ್ಲ ಗೊತ್ತು” ಎಂದಳು.
“ಗೊತ್ತಾ ಹೇಗೆ” ಅನುಮಾನಿಸಿದೆ.
“ಬಂದಾಗಲೆಲ್ಲ ಕೇಳಿ ಕೇಳಿ” ತೀರಾ ಬೇಸರವಾದವಳಂತೆ ನುಡಿದಳು.
ಮುಂದೇನು ಮಾಡಬೇಕು ಅದನ್ನ ಹೇಳು ಸಾಕು ಎನ್ನುವಂತಿತ್ತು ಅವಳ ಆ ವರ್ತನೆ. ಅವಳ ಆ ಧೈರ್ಯ ನನಗೊಂದು ರೀತಿಯಲ್ಲಿ ನಿರಾಳವೆನ್ನಿಸಿ, ನನ್ನ ಅಧಿಕಾರ ವ್ಯಾಪ್ತಿಯನ್ನು ಬದಿಗಿರಿಸಿ ಸ್ವಲ್ಪ ಸಲಿಗೆಯಿಂದ ಇನ್ನಾದರೂ ಬಿಟ್ಟು ಬಿಡು ಎಂದೆ.
“ಬಿಟ್ಟು?” ಹರಿತವಾಗಿ ಪ್ರಶ್ನಿಸಿದಳು.
“ಬೇರೆ ಏನನ್ನಾದರೂ” ಅಳುಕಿನಿಂದಲೇ ಹೇಳಿದೆ.
“ಅದೀಗÀ ಸಾಧ್ಯವಿಲ್ಲ” ನೇರ ಉತ್ತರಿಸಿದಳು.
“ನಿನ್ನ ಆರೋಗ್ಯ” ಕಳವಳಗೊಂಡವಳಂತೆ ಪ್ರಶ್ನಿಸಿದೆ. ಮನಸ್ಸಿನಲ್ಲಿ ಈಕೆ ಮತ್ತೆ ಇನ್ನೆಷ್ಟು ಜನಕ್ಕೆ ವೈರಸ್ ದಾಟಿಸಲಿದ್ದಾಳೋ ಎಂಬ ಭಯವಿತ್ತು.
“ನೀನೇ ಹೇಳಿದೆಯಲ್ಲ ಏನೂ ಆಗಲ್ಲ ಅಂತ” ನಸುನಕ್ಕಳು.
ಆದರೂ… ರಿಪೋರ್ಟಿನ ಹಾಳೆಯನ್ನು ಆಕೆಯ ಕೈಗಿತ್ತೆ. ಸ್ವಲ್ಪ ಹೊತ್ತು ಮೌನವಾಗಿ ಅದನ್ನು ನೋಡಿ
“ಯಾರಿಗೂ ಹೇಳಲ್ಲ ತಾನೆ” ಎನ್ನುತ್ತಾ ಕೈಯ್ಯನ್ನು ಬಲವಾಗಿ ಹಿಡಿದುಕೊಂಡಳು.
ಅವಳ ನಿಟ್ಟುರಿಸಿರನ್ನು ಜೊತೆಗಿಟ್ಟುಕೊಂಡು ಹೊರ ಬಂದ ಅವಳ ಮಾತು ಒಂದು ಕ್ಷಣ ನನ್ನನ್ನು ಕಲಕಿತು.
“ಅನುಮಾನವೇ” ಅವಳ ಕೈಯ್ಯನ್ನು ಮೆಲ್ಲ ಸವರಿದೆ.
“ಇಲ್ಲ” ಎನ್ನುವಂತೆ ತಲೆಯಾಡಿಸಿ
“ತಪ್ಪು ತಿಳ್ಕೋಬೇಡ, ಈ ಮೂರು ಕಾಸಿನ ಹಾಳೆಯನ್ನ ನಾನು ಹೊರಗೆ ತಗೊಂಡು ಹೋದ್ರೆ ನನ್ನ ಮಕ್ಕಳನ್ನ ಸಾಕೋದು ಕಷ್ಟ ಆಗತ್ತೆ” ಎನ್ನುತ್ತ ಸಣ್ಣದಾಗಿ ಹರಿದು ಅಲ್ಲೇ ಇದ್ದ ಕಸದಬುಟ್ಟಿಯಲ್ಲಿ ಬಿಸಾಡಿದಳು. ಅವಳಿಂದ ಆ ವರ್ತನೆಯನ್ನು ನಿರೀಕ್ಷಿಸದ ನಾನು ಮಾತು ಕಳೆದುಕೊಂಡೆ.
“ಯಾಕೆ ಹಾಗೆ ನೋಡುತ್ತಿದ್ದಿ, ಎಲ್ಲಿ ನಿನ್ನ ಇಲಾಖೆಯ ರಬ್ಬರ್ ಆಯುಧಗಳನ್ನ ಕೊಡು ನೋಡೋಣ” ಎಂದು ನಗುತ್ತಾ ಕಾಂಡೋಮ್ ಪಾಕೇಟ್‍ಗಳಿಗಾಗಿ ಕೈ ಚಾಚಿದಳು.

ಮತ್ತಷ್ಟು ಸುದ್ದಿಗಳು

Latest News

ರಾಜಧಾನಿಯಲ್ಲಿ ಡೆಂಗ್ಯೂ ಆತಂಕ : 15 ದಿನಗಳಲ್ಲಿ 80 ಪ್ರಕರಣ ಪತ್ತೆ

newsics.com ಬೆಂಗಳೂರು :ರಾಜಧಾನಿ ಬೆಂಗಳೂರಿನಲ್ಲಿ ಕೇವಲ 15 ದಿನಗಳ ಅಂತರದಲ್ಲಿ 80 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಅಲರ್ಟ್ ಆಗಿದ್ದು...

ಏರ್ಪೋರ್ಟ್ನ ಪರದೆಗಳ ಮೇಲೆ ನೀಲಿ ಚಿತ್ರ ಪ್ರದರ್ಶಿಸಿದ ಹ್ಯಾಕರ್ಸ್!

newsics.com ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿರುವ ವಿಮಾನ ನಿಲ್ದಾಣವನ್ನು ಹ್ಯಾಕ್ ಮಾಡಿದ ಕಿಡಿಗೇಡಿಗಳು ವಿಮಾನ ನಿಲ್ದಾಣದ ಪರದೆಗಳ ಮೇಲೆ ಪೋರ್ನ್ ವಿಡಿಯೋಗಳನ್ನು ಪ್ರದರ್ಶಿಸಿದ್ದಾರೆ. ಬ್ರೆಜಿಲ್ನ ಏರ್ಪೋರ್ಟ್ ಆಪರೇಟರ್ ಆಗಿರುವ ಇನ್ಫ್ರಾರೋ ಮಾನಿಟರ್‌ಗಳಲ್ಲಿ ಖಾಸಗಿ ಕಂಪನಿಗಳ ಜಾಹೀರಾತುಗಳನ್ನು...

ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಎಫ್ಐಆರ್

newsics.com ಮಂಡ್ಯ : ದಕ್ಷಿಣ ಪದವಿಧರರ ಕ್ಷೇತ್ರದ ಚುನಾವಣೆ ಸಂಬಂಧ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿರುವ ಆರೋಪ ಎದುರಿಸುತ್ತಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹಾಗೂ ಬಿಜೆಪಿ ಅಭ್ಯರ್ಥಿ ಎಂ.ವಿ ರವಿಶಂಕರ್ ವಿರುದ್ಧ...
- Advertisement -
error: Content is protected !!