Sunday, March 26, 2023

ಹೊಸಮನೆ

Follow Us

  • ವಿಷ್ಣು ಭಟ್ ಹೊಸ್ಮನೆ

“ರಾಜು ನಿಲ್ಲು.. ನಿಲ್ಲು ರಾಜು” ಮಾದ ಇಡೀ ಊರಿಗೇ ಕೇಳಿಸುವಂತೆ ಕೂಗುತ್ತಿದ್ದರೂ ರಾಜುವಿಗೆ ಕೇಳಿಸುತ್ತಿಲ್ಲ. ಕಾರಣವಿಷ್ಟೆ, ರಾಜುವಿಗೆ ಕಿವಿ ಸ್ವಲ್ಪ ದೂರ. ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದಾಗಿ ಕಿವಿ ಸ್ವಲ್ಪ ಮಂದವಾಗಿತ್ತು. ಮಾದ ಕೂಗುತ್ತ ಓಡಿಬಂದ. ಹತ್ತಿರ ಬಂದು ಮತ್ತೆ “ರಾಜು ನಿಲ್ಲು..” ಎಂದ.
“ಏನು ಮಾದ? ಯಾಕೆ ಇಷ್ಟು ಗಟ್ಟಿ ಬೊಬ್ಬೆ ಹಾಕುವುದು? ಅಲ್ಲಿಂದಲೇ ಕರೆದರೆ ಆಗುತ್ತಿರಲಿಲ್ಲವೇ? ನಾನೇನು ಅಷ್ಟೊಂದು ಕಿವುಡನೇ?” ಎಂದ.
ಬರುತ್ತಿರುವ ನಗುವನ್ನು ತಡೆದುಕೊಳ್ಳುತ್ತ ಮಾದ “ನಾನು ಕೂಗಿದೆ, ಆದರೆ ಗಂಟಲಿನಿಂದ ಸ್ವರ ಸರಿ ಹೊರಡಲೇ ಇಲ್ಲ ನೋಡು, ಹಾಗಾಗಿ ಇಲ್ಲಿಗೆ ಓಡಿ ಬಂದೆ” ಎಂದ ನಗುತ್ತ.
“ಅಂತಾ ಅವಸರದ ಕೆಲಸವೇನಿತ್ತು?”
“ಅಲ್ಲಿ ನೋಡು, ಆ ನದಿಯ ದಡದತ್ತ, ಯಾರೋ ಒಬ್ಬರು ಕುಳಿತಿದ್ದಾರೆ. ಅವರಾರು ಗೊತ್ತಾ?”
“ಗೊತ್ತಿಲ್ಲ..ನೋಡದೆ ಹೇಗೆ ಹೇಳಲಿ?”
“ಬಾ, ಹತ್ತಿರ ಹೋಗಿ ನೋಡುವ.”
ಹತ್ತಿರ ಹೋಗುತ್ತಿದ್ದಂತೆ ರಾಜು ಹೇಳಿದ “ಓಹ್! ಇವರು ನಮ್ಮ ಶಂಖತೀರ್ಥರಲ್ಲವೇ? ನಮ್ಮ ಧ್ಯಾನತೀರ್ಥನ ಅಪ್ಪಯ್ಯ; ನಿನಗೆ ಗುರುತು ಸಿಗಲಿಲ್ಲವೇ?”
“ಗುರುತೇನೋ ಸಿಕ್ಕಿತು. ಆದರೆ ಅವರೇ ಹೌದಾ? ಎಂಬ ಸಂಶಯ ಕಾಡಿದ್ದರಿಂದ ನಿನ್ನನ್ನು ಕರೆದದ್ದು. ಇಷ್ಟಕ್ಕೂ ಅವರ ಕುಟುಂಬ ಬೆಂಗಳೂರನ್ನು ಸೇರಿ ಕೆಲವು ವರ್ಷಗಳೇ ಆಗಿವೆ ನೋಡು. ಅದೂ ಅಲ್ಲದೆ ಅವರ ಮೂಲಮನೆ ಇದ್ದದ್ದು ನದಿಯಾಚೆಯ ಗುಂಡಿಬೈಲಿನಲ್ಲಿ. ಆದರೆ ಇವರೇಕೆ ಗುಂಡಬಾಳಕ್ಕೆ ಬಂದದ್ದು, ಈ ನದಿಯ ಈಚೆ ಯಾಕೆ ಬಂದರು?”
“ಅದಕ್ಕೆ ನನ್ನ ಬಳಿಯೂ ಉತ್ತರವಿಲ್ಲ. ಆದರೆ ನಾನು ಚಿಕ್ಕವನಿದ್ದಾಗ ಕೇಳುತ್ತಿದ್ದ ಮಾತು ನೆನಪಿಗೆ ಬರುತ್ತಿದೆ. ಈ ನದಿಯಲ್ಲೆಲ್ಲೋ ಒಂದು ಈಶ್ವರ ಲಿಂಗವಿದೆಯಂತೆ, ಅದನ್ನು ಶಂಖತೀರ್ಥರು ಪದೇಪದೇ ನೀರಿಂದ ಮೇಲೆತ್ತಿಡುತ್ತಿದ್ದರಂತೆ, ಆದರೂ ಅದು ಮತ್ತೆ ನೀರನಲ್ಲಿ ಮುಳುಗಿ ಹೋಗುತ್ತಿತ್ತಂತೆ. ಮತ್ತೆ ಮೇಲಿಡಲೆಂದೇ ಇಲ್ಲಿಗೆ ಬಂದಿರಬಹುದಾ? ಆದರೆ ಈ ಮಳೆಗಾಲದಲ್ಲಿ ದೋಣಿಯಿಲ್ಲದೆ ಆಚೆ ಸೇರಲು ಸಾಧ್ಯವಿಲ್ಲದಿರುವಾಗ ಆ ಲಿಂಗವನ್ನು ಹುಡುಕಲು ಸಾಧ್ಯವೇನು?”
“ಇಲ್ಲಪ್ಪ, ಹಾಗೇನೂ ಇರಲಿಕ್ಕಿಲ್ಲ. ನೀನು ಹೇಳಿದ ಆ ಲಿಂಗದ ವಿಷಯವನ್ನು ನಾನು ಇವತ್ತೇ ಕೇಳಿದ್ದು. ಅದಕ್ಕಾಗಿ ಬಂದಿರಲಿಕ್ಕಿಲ್ಲ.”
“ಹಾಗಾದರೆ ಆ ಕಡೆಯ ಬಸ್ಸು ಇಲ್ಲದೆ, ಈಚೆಯ ಬಸ್ಸಿನಲ್ಲಿ ಬಂದು ನದಿಯನ್ನು ದಾಟಿ ಹೋಗುವ ಯೋಚನೆಯಿಂದ ಇಲ್ಲಿ ಬಂದಿರಬಹುದಾ?”
“ಹೌದು. ಅದೊಂದು ಸಾಧ್ಯತೆಯಿದೆ. ಬಾ ಮಾತಾಡಿಸಿ ಆಚೆ ಹೋಗುವ ವ್ಯವಸ್ಥೆ ಮಾಡಿಕೊಡುವ.”
“ಹೋಯ್, ಶಂಖತೀರ್ಥರೆ, ಯಾವಾಗ ಬಂದದ್ದು? ಇಲ್ಲೇಕೆ ಕುಳಿತಿದ್ದೀರಿ..?” ಇಬ್ಬರೂ ಅವರ ಸಮೀಪಕ್ಕೆ ಹೋಗಿ ಮಾತಾಡಿಸಿದರು.
“ಯಾರು, ಮಾದನೇನೋ? ನಮ್ಮ ಕೊನೆ ಮಾದೇವನ ಮಗ ಅಲ್ವೇನೋ? ಇನ್ನೊಬ್ಬ ಯಾರು ನೆನಪಾಗ್ತಾ ಇಲ್ಲ.”
“ಹೌದು ನಾನು ಮಾದ. ಅವನು ರಾಜು, ಉಗ್ರಾಣಿ ಸುಬ್ರಾಯನ ಮಗ. ನೀವೀಗ ಎತ್ತ ಹೊರಟಿದ್ದು?”
“ನಾನು ಗುಂಡಬಾಳ ಬಸ್ಸಿಗೆ ಬಂದೆ. ಇಲ್ಲಿ ದೋಣಿ ಸಿಕ್ಕೀತೆಂದು ಕಾದು ಕುಳಿತಿದ್ದೇನೆ, ಈಗ ದೋಣಿ ನಡೆಸುವವರು ಯಾರೂ ಇಲ್ಲವಾ?”
“ದೋಣಿ ಇರುವುದು ಇಲ್ಲಲ್ಲ. ಇನ್ನೂ ಸ್ವಲ್ಪ ಕೆಳಕ್ಕೆ ಹೋಗಬೇಕು. ಆದರೆ ನೀವು ಹೋಗುವುದು ಬೇಡ. ನಾವೇ ಇಲ್ಲಿಗೆ ದೋಣಿಯನ್ನು ತರಿಸುತ್ತೇವೆ. ನಿಮಗೆ ದಾರಿ ನೆನಪಿದೆಯಲ್ಲ? ಓ.. ಅಲ್ಲಿ ಆಚೆ ನೋಡಿ ರಸ್ತೆ, ಅದರಲ್ಲೇ ಹೋಗಿ ಮೊದಲು ಆಚಿಕೇರಿ ನಾಣ್ ಭಟ್ಟರ ಮನೆ, ಆಮೇಲೆ ರಾಜ್ ಭಟ್ರ ಮನೆ ಸಿಗುತ್ತದೆ. ಮುಂದೆ ದೇವಸ್ಥಾನ ಇದೆ.”
“ನಿಲ್ಲಿಸು ಮಾರಾಯ. ನಾನು ಹುಟ್ಟಿಬೆಳೆದ ಊರು. ಯಾರ್ಯಾರ ಮನೆಯ ತೋಟದ ಗಡಿಕಲ್ಲು ಎಲ್ಲಿ ಉಂಟು ಎಂಬುದೂ ಸಹ ನನಗೆ ನೆನಪುಂಟು. ಈಗ ನನಗೆ ಆಚೆ ಸೇರಲು ವ್ಯವಸ್ಥೆ ಮಾಡಿಕೊಡಿ.”
ರಾಜು ಆ ಕೂಡಲೇ ದೀರ್ಘವಾಗಿ ವಿಚಿತ್ರವಾದ ಸ್ವರದಲ್ಲಿ ಮೂರ್ನಾಲ್ಕು ಬಾರಿ “ಕೂ..ಹೂ..ಯ್” ಎಂದು ಕೂಗಿದ.
ಕೆಲವೇ ಸಮಯಕ್ಕೆ ಲಾದ್ರು ತನ್ನ ಸಣ್ಣ ದೋಣಿಯನ್ನು ತಂದ. ಮೂವರೂ ದೋಣಿಯನ್ನೇರಿದರು.
“ಮಾದ, ನಿನ್ನಪ್ಪ ಮತ್ತೆ ರಾಜುವಿನ ಅಪ್ಪ ಎಲ್ಲ ಏನು ಮಾಡುತ್ತಾರೆ?”
“ಎಲ್ಲಾ ಆರಾಮ ಇದ್ದಾರೆ. ನೀವೇಕೆ ಒಬ್ಬರೇ ಬಂದಿದ್ದು? ಧ್ಯಾನತೀರ್ಥರು ಹೇಗಿದ್ದಾರೆ?”
“ಎಲ್ಲರೂ ಸೌಖ್ಯ. ತುಂಬಾ ದಿನಗಳಿಂದ ಊರವರನ್ನೆಲ್ಲ ನೋಡಬೇಕೆಂಬ ಆಸೆಯಾಗುತ್ತಲೇ ಇತ್ತು. ಮಗನಿಗೆ ಹೇಳಿದೆ ಹೋಗಿಬರೋಣ ಎಂದು, ಆದರೆ ಆತನಿಗೆ ರಜೆ ಸಿಗದೆ ಬರಲಿಕ್ಕಾಗಲಿಲ್ಲ. ನನಗೆ ಇನ್ನೂ ಮುಂದೂಡುವ ಮನಸ್ಸಿರಲಿಲ್ಲ. ಕೆಲವರಿಗೆ ನನ್ನ ಹೊಸಮನೆ ಪ್ರವೇಶದ ಆಮಂತ್ರಣ ನಾನೇ ಕೋಡಲಿಕ್ಕಿದೆ. ಅದಕ್ಕೆ ಒಬ್ಬನೇ ಹೊರಟೆ.”
ಶಂಖತೀರ್ಥರ ವ್ಯಕ್ತಿತ್ತ್ವವೇ ಹಾಗೆ. ಯಾವುದನ್ನು ಯಾವತ್ತು ಎಂದು ನಿರ್ಧರಿಸುತ್ತಾರೋ ಅವತ್ತೇ ಆ ಕೆಲಸ ಮಾಡಿಮುಗಿಸುತ್ತಾರೆ. ಹೋಗಲೇಬೇಕೆಂದು ನಿರ್ಧರಿಸಿದ ಮೇಲೆ ತಡಮಾಡುವ ಬುದ್ಧಿ ಅವರದ್ದಲ್ಲ. ಹಾಗಾಗಿ ಊರಿನ ಹಳೆಯ ಮಿತ್ರರನ್ನೆಲ್ಲ ಮಾತಾಡಿಸಿಕೊಂಡು ಹೋಗುವ ಯೋಚನೆಯನ್ನು ‘ಈಗ ಬೇಡ’ ಎಂದ ಮಗನ ಮಾತನ್ನೂ ಮೀರಿ ಕಾರ್ಯಗತಗೊಳಿಸಿಯಾಗಿದೆ.
ದೋಣಿ ಈಚೆ ದಡವನ್ನು ಸೇರಿತು. ಲಾದ್ರುವಿಗೆ ಹಣಕೊಡಲೆಂದು ಕಿಸೆಗೆ ಕೈ ಹಾಕುತ್ತಿದ್ದಂತೆಯೇ ಮಾದ ಮತ್ತು ರಾಜು ದುಡ್ಡುಕೊಡದಂತೆ ಅವರನ್ನು ತಡೆದರು. “ನಿಮ್ಮಿಂದ ತುಂಬಾ ಉಪಕಾರವಾಯ್ತು” ಎಂದು ಹೇಳಿ ಶಂಖತೀರ್ಥರು ಗುಂಡಿಬೈಲಿನ ರಸ್ತೆಯತ್ತ ಹೊರಟರು.
ಬೂಸ್ರ ಗುಡ್ಡೆ ಎಂದು ಊರವರು ಕರೆಯುವ ಪಶ್ಚಿಮಪರ್ವತದ ಪಾದದಲ್ಲಿ ಶ್ರೀ ಗಣಪತಿ ದೇವರ ರಕ್ಷಣೆಯಲ್ಲಿ ನದಿಯೊಂದನ್ನು ತನ್ನ ಸೆರಗಿಗೆ ಅಂಟಿಸಿಕೊಂಡಿರುವ ತಮ್ಮೂರನ್ನು ಒಮ್ಮೆ ಸುತ್ತಲೂ ಕಣ್ಣಾಡಿಸಿ ನೋಡಿದರು. ಹಳ್ಳಿಯಲ್ಲಿ ಇತ್ತೀಚೆಯ ಹತ್ತು ವರ್ಷಗಳಲ್ಲಿ ಆದ ಬದಲಾವಣೆ ಅವರ ಕಣ್ಣಿಗೆ ಬೀಳದೇ ಉಳಿಯಲಿಲ್ಲ. ಗುಂಡಿಬೈಲಿನ ನಡುವಿನಲ್ಲಿ ಅರ್ಧ ಪೇಟೆಯನ್ನು ಆವರಿಸಿದ್ದ ಕೊಸ್ಕಾಯ್ ಮರ ಎಂದೇ ಪ್ರಸಿದ್ಧವಾಗಿದ್ದ ಬೃಹದಾಕಾರದ ಮಾವಿನಮರವನ್ನು ಬುಡಸಮೇತ ಕಡಿದು ರಸ್ತೆ ಮಾಡಿದ್ದನ್ನು ಕಂಡು ಬೇಸರವಾಯಿತು. ಹಿಂದೆ ಆ ಅಷ್ಟಗಲದ ಮಾವಿನಮರದ ನೆರಳಿನಲ್ಲಿ ಮಕ್ಕಳು ಆಡುತ್ತಿದ್ದುದು, ಸಣ್ಣ-ಸಣ್ಣ ಹಣ್ಣುಗಳನ್ನು ಕಲ್ಲು ಹೊಡೆದು ಬೀಳಿಸುತ್ತಿದ್ದುದು, ಹಣ್ಣಿಗೆ ಹೊಡೆದ ಕಲ್ಲು ಆಕಡೆ-ಈಕಡೆ ಅಂಗಡಿ ಮತ್ತು ರಾಜ ಭಟ್ಟರ ಮನೆಯ ಹಂಚಿಗೆ ಬಿದ್ದಾಗ ಅವರಿಂದ ಮಕ್ಕಳು ಬೈಸಿಕೊಳ್ಳುತ್ತಿದ್ದುದು, ಊರಲ್ಲಿ ನಾಟಕ, ಯಕ್ಷಗಾನ, ಚುನಾವಣೆ ಏನೇ ಇದ್ದರೂ ಆ ಮರಕ್ಕೆ ಭಿತ್ತಿಪತ್ರಗಳನ್ನು ಅಂಟಿಸುತ್ತಿದ್ದುದು, ರಾತ್ರಿಯಲ್ಲಿ ನೋಡಿದರೆ ಆ ಮರ ಭಯವನ್ನು ಹುಟ್ಟಿಸುತ್ತಿದ್ದುದು ಎಲ್ಲವೂ ನೆನಪಿಗೆ ಬಂದು ಆ ಮರವಿಲ್ಲದ ಬೋಳು ಜಾಗ ಶಂಖತೀರ್ಥರಿಗೆ ಜಾತ್ರೆಯಲ್ಲಿ ನಿಂತವನು ಏಕಾಂತವನ್ನು ಅನುಭವಿಸಿದಂತೆ ಅನಿಸಿತು. ‘ಕಾಲ-ಕಾರಣ ಎಲ್ಲವನ್ನೂ ಬದಲಾಯಿಸಿ ಬಿಡುತ್ತದೆ, ಅದು ಸಕಾಲವಾಗಿರದಿದ್ದರೂ ಸಕಾರಣವಲ್ಲದಿದ್ದರೂ’ ಎಂದುಕೊಂಡರು.

ನೂತನವಾಗಿ ನಿರ್ಮಿಸಿದ ಗಣಪತಿಯ ದೇವಾಲಯಕ್ಕೆ ಹೋಗಬೇಕೆಂದಿನಿಸಿತು. ಆದರೆ ಅಲ್ಲಿ ಜನಗಳು ಓಡಾಡುತ್ತಿದ್ದರೂ ದೇವಾಲಯದ ಬಾಗಿಲು ತೆರೆದಿದ್ದರೂ ಇವರಿಗೆ ಬಾಗಿಲು ಮುಚ್ಚಿದಂತೆ ಕಂಡದ್ದರಿಂದ ಅಲ್ಲಿಯೇ ನಿಂತರು.
“ಹೋಯ್, ಶಂಖತೀರ್ಥರು ಯಾವಾಗ ಬಂದಿದ್ದು? ಹೇಗಿದ್ದೀರಿ?” ಎಂದು ಶಂಕರ ಭಟ್ಟರು ಗುರುತಿಸಿ ಮಾತನಾಡಿಸಿದಾಗ ಶಂಖತೀರ್ಥರಿಗೆ ಊರಿಗೆ ಬಂದದ್ದು ಸಾರ್ಥಕವಾಯಿತೆಂದೆನಿಸಿತು.
“ನಾನು ಈಗಷ್ಟೆ ಬಂದೆ. ನೀವು ಆರೋಗ್ಯವಾ? ದೂರ ಹೊರಟ ಹಾಗಿದೆ?”
“ಹೌದು. ನಾವೆಲ್ಲ ಸೇರಿ ಬಿಳಗಿ ಬೆಟ್ಟಕ್ಕೆ ಹೋಗುವುದೆಂದು ತೀರ್ಮಾನಿಸಿದ್ದೇವೆ. ಅಲ್ಲೊಂದು ಹೊಸದಾಗಿ ಶಿವನ ದೇವಸ್ಥಾನ ಆಗಿದೆ. ಇವತ್ತೆಲ್ಲ ಹೋಗುತ್ತೇವೆ. ಹಾಗಾಗಿ ನಿಮಗೆ ಊರಲ್ಲಿ ಮಾತಿಗೆ ಯಾರೂ ಸಿಗುವುದಿಲ್ಲ. ನೀವೂ ನಮ್ಮ ಜೊತೆಗೆ ಬನ್ನಿ. ಹೋಗಿ ಬರೋಣ. ಈಗ ಕುಮಟೆಗೆ ಹೋಗಿ ಹೋಗುವ ಕೆಲಸ ಇಲ್ಲ. ಇಲ್ಲಿಯೇ ಹೊಸದಾಗಿ ಬಿಳಗಿಗೆ ಸೇರಿಸುವ ರಸ್ತೆಯಾಗಿದೆ. ಬಸ್ಸಿನ ವ್ಯವಸ್ಥೆ ಮಾಡಿದ್ದೇವೆ. ಆಸನ ಕಾಲಿ ಉಂಟು ಬಂದು ಬಿಡಿ” ಎನ್ನುತ್ತಿದ್ದಂತೆ ಅವರ ಓರಗೆಯರೆಲ್ಲರೂ ಅಂದರೆ ಶಂಭು ಗೌಡರು, ತಿಮ್ಮಪ್ಪ, ಕೆಂಚಗಾರ ಬಾಳ ಭಟ್ಟರು, ಗುಂಡಬಾಳ ಹನುಮಂತ ಕಾಮತರು, ನರಸಿಂಹ ಹೆಗಡೆಯವರು, ದೇವರಮಕ್ಕಿ ಹೆಗಡೆಯವರು, ಕೆಕ್ಕಾರು ಕೇಶವ ಭಟ್ಟರು, ಮಂಜು ಭಟ್ಟರು, ಹಂದಿಮೂಲೆ ಷಣ್ಮುಖ ಹೆಗಡೆಯವರು, ಮಾಬ್ಲ ನಾಯ್ಕರು, ಮಾದೇವಮ್ಮ, ಸಾವಿತ್ರಮ್ಮ, ರಾಮಭಟ್ಟ ದಂಪತಿ, ಮೊದಲಾದವರು ಒಬ್ಬೊಬ್ಬರಾಗಿ ಬಂದು ಸೇರಿದರು. ಆಕಸ್ಮಿಕವಾಗಿ ಭೇಟಿಯಾದ ಶಂಖತೀರ್ಥರನ್ನು ನೋಡಿ ಆನಂದಪಟ್ಟುಕೊಂಡು, ಕುಶಲೋಪರಿ ವಿಚಾರಿಸಿ ತಮ್ಮ ಜೊತೆಗೆ ಬರಲೇಬೇಕೆಂದು ಹಟ ಹಿಡಿದರು. ಶಂಖತೀರ್ಥರು ಮರುಮಾತಾಡಾದೆ ಅವರ ಜೊತೆ ಹೊರಟರು.

ಬಸ್ಸಿನಲ್ಲಿ ಎಲ್ಲರೂ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು. ಜೀವನದ ಸಿಹಿ-ಕಹಿ ಘಟನೆಗಳನ್ನು ಹಂಚಿಕೊಂಡರು. ಶಂಖತೀರ್ಥರು ಊರನ್ನು ಬಿಟ್ಟು ಬೆಂಗಳೂರಿನಂತಹ ಮಹಾನಗರದಲ್ಲಿ ವಾಸಿಸುತ್ತಿದ್ದರಿಂದ ಅವರ ಅನುಭವಗಳು ಎಲ್ಲರಿಗೂ ಹೊಸದಾಗಿ ಕಂಡವು. ಊರಲ್ಲಿ ಹಂಡೆಗಟ್ಟಲೆ ನೀರನ್ನು ಒಬ್ಬರೇ ಸ್ನಾನ ಮಾಡಿ ಮುಗಿಸುತ್ತಿದ್ದವರು ಬೆಂಗಳೂರಿನಲ್ಲಿ ಒಂದು ಹಂಡೆಯಷ್ಟು ನೀರನ್ನು ನಾಲ್ಕು ಜನ ಎರಡು ದಿನಕ್ಕೆ ಬಳಸುವುದನ್ನು ಹೇಳಿದಾಗ ಎಲ್ಲರೂ ಬಿಟ್ಟಕಣ್ಣು ಬಿಟ್ಟಂತೆ ನೋಡಿದರು. ಜೋರಾಗಿ ಮಾತಾಡುತ್ತ, ನಗುತ್ತ, ಬೊಬ್ಬೆ ಹೊಡೆಯುತ್ತ ಬಸ್ಸು ಘಾಟಿಯಲ್ಲಿ ಸಾಗುತ್ತಿರುವಾಗ ಒಮ್ಮೆ ನಿಯಂತ್ರಣ ತಪ್ಪಿ ನಿಂತಿತು. ಡ್ರೈವರ್ ಕೆಳಗಿಳಿದು ಬಂದು ನೋಡಿದ. ಟಯರ್ ಪಂಚರಾಗಿದೆ. ಇನ್ನೊಂದು ಟೈರನ್ನು ಮರೆತು ಬಂದಿದ್ದ. ರಿಪೇರಿಯವನಿಗೆ ಹೇಳಿ, “ಇನ್ನೊಂದು ಗಂಟೆಯಲ್ಲಿ ಗಾಡಿ ಸರಿಯಾಗುತ್ತದೆ. ನನ್ನ ಮಿತ್ರ ಬರುತ್ತಾನೆ ಈಗ. ಅಲ್ಲಿಯ ವರೆಗೆ ನೀವೆಲ್ಲ ಇಲ್ಲಿಯೇ ವಿಶ್ರಾಂತಿ ಪಡೆಯಿರಿ” ಎಂದು ವಿನಂತಿಸಿಕೊಂಡ. ಎಲ್ಲರೂ ನಿಧಾನವಾಗಿ ಕಾಡಿನೊಳಗೆ ಕಾಲಿಟ್ಟರು. ಊಟದ ಸಾಮಗ್ರಿ ಸಮೇತ ಬಂದುದರಿಂದ, ಅದಾಗಲೆ ಗಂಟೆ ಹನ್ನೆರಡು ದಾಟುತ್ತಿದ್ದುದರಿಂದ ಕೆಲವರು ಎಲ್ಲರೂ ಸೇರಿ ಇಲ್ಲಿಯೇ ಅಡಿಗೆ ಮಾಡಿ ಊಟ ಮಾಡಿಯೇ ಹೊರಡುವ ನಿರ್ಧಾರಕ್ಕೆ ಬಂದರು. ಕೆಲವರು ನಾವು ದೇವರನ್ನು ನೋಡದೆ ಊಟ ಮಾಡುವುದಿಲ್ಲ ಎಂದು ಗಟ್ಟಿಯಾಗಿ ನಿರ್ಧರಿಸಿದರು. ಶಂಭು ಗೌಡರು ಅಲ್ಲಿಯೇ ಹರಿಯುತ್ತಿದ್ದ ತೊರೆಯೊಂದರಲ್ಲಿ ಶುದ್ಧವಾದ ನೀರಿರುವುದನ್ನು ಕಂಡು ಹಿಡಿದುಬಿಟ್ಟಿದ್ದರು. ನೀರು ಎನ್ನುತ್ತಲೇ ಶಂಖತೀರ್ಥರಿಗೆ ತಾನು ಸ್ನಾನ ಮಾಡದೇ ಇರುವುದು ನೆನಪಾಗಿ ಕೂಡಲೇ ಆ ತೊರೆಗೆ ಹೋಗಿ ಸ್ನಾನ ಮಾಡಿದರು.
ಎಲ್ಲರೂ ಸೇರಿ ಕುಳಿತು ಹರಟೆ ಹೊಡೆಯುತ್ತ ಊಟಮಾಡಿದರು. ಶಂಖತೀರ್ಥರನ್ನು ಹೊಸ ನೆಂಟರಂತೆ ಒತ್ತಾಯಿಸಿ ಬಡಿಸಿದರು. ಮೊದಲು ಊಟ ಬೇಡವೆಂದವರಲ್ಲಿ ಕೆಲವರು ಅಡಿಗೆಯ ಪರಿಮಳಕ್ಕೆ ಸೋತು ಊಟ ಮಾಡಿದರು. ಶಂಖತೀರ್ಥರು “ಇದು ನನ್ನ ಬದುಕಿನಲ್ಲಿ ಆನಂದದ ಕೊನೆಯ ಕ್ಷಣವಿರಬಹುದು. ಮತ್ತೊಮ್ಮೆ ಇಲ್ಲಿಗೆ ಬರುತ್ತೀನೋ ಇಲ್ಲವೋ ಗೊತ್ತಿಲ್ಲ” ಎಂದು ಗದ್ಗದಿತರಾದರು.
“ಹಾಗೆಲ್ಲ ಬೇಜಾರು ಮಾಡಬೇಡಿ. ನೀವು ನಮ್ಮೊಂದಿಗೇ ಇದ್ದುಬಿಡಿ. ಮತ್ತೆ ತಿರುಗಿಹೋಗುವುದೇ ಬೇಡ” ಎಂದರು ಕೆಲವರು. ಅಷ್ಟೊತ್ತಿಗೆ ಡ್ರೈವರ್ “ಬಸ್ಸು ರೀಪೇರಿಯಾಯಿತು, ಬನ್ನಿ ಹೊರಡೋಣ” ಎಂದು ಕೂಗಿದ.
***
ದೇವಸ್ಥಾನ ಹತ್ತಿರ ಬಂತೆಂದು ಡ್ರೈವರ್ ಗಾಡಿ ನಿಲ್ಲಿಸಿದ.
ಎಲ್ಲರೂ ‘ಎಷ್ಟು ಅದ್ಭುತವಾಗಿದೆ ದೇವಾಲಯ’ ಎನ್ನುತ್ತ ಮುಂದಕ್ಕೆ ನಡೆದರು. ಆದರೆ ಶಂಖತೀರ್ಥರು ಮಾತ್ರ ನಿಂತಲ್ಲಿಯೇ ನಿಂತಿದ್ದರು. ಅವರಿಗೆ ಅಲ್ಲಿ ಯಾವುದೇ ದೇವಸ್ಥಾನ ಕಾಣಿಸುತ್ತಿಲ್ಲ. ‘ತಮಗೆ ಕಣ್ಣೇ ಕಾಣಿಸುತ್ತಿಲ್ಲವೇ? ಆದರೆ ನನ್ನ ಜೊತೆ ಬಂದವರೆಲ್ಲ ಕಾಣಿಸುತ್ತಿರುವರಲ್ಲ! ದೇವಸ್ಥಾನವೇಕೆ ಕಾಣಿಸುತ್ತಿಲ್ಲ?’ ಎಂದುಕೊಂಡರು.
ಶಂಕರ ಭಟ್ಟರು “ಶಂಖತೀರ್ಥರೇ ಬನ್ನಿ. ಅಲ್ಲಿಯೇ ಏಕೆ ನಿಂತು ಬಿಟ್ಟಿರಿ? ಒಳಕ್ಕೆ ಬನ್ನಿ” ಎಂದು ದೇವಾಲಯದ ಬಾಗಲಿನಲ್ಲಿ ನಿಂತು ಕರೆದರು.
ಶಂಕರ ಭಟ್ಟರಿದ್ದ ಕಡೆಗೆ ಶಂಖತೀರ್ಥರು ನಿಧಾನವಾಗಿ ನಡೆದುಕೊಂಡು ಹೋದರು. ಆದರೆ ಅವರಿಗೆ ಎಲ್ಲೂ ದೇವಾಲಯವಾಗಲೀ ದೇವರ ಗರ್ಭಗುಡಿಯಾಗಲೀ ಕಾಣಲೇ ಇಲ್ಲ. ಹುಡುಕುತ್ತಲೇ ಇದ್ದಾರೆ. ನನಗೇನಾಗಿದೆ ಎಂಬ ಭಯ ಅವರನ್ನು ಆವರಿಸತೊಡಗಿತು. ಎಲ್ಲರೂ ಇವರನ್ನು ಬಿಟ್ಟು ಬಹುದೂರ ಸಾಗಿದ್ದರು. ನದಿಯ ನೀರಿನ ಸದ್ದು ಶಂಖತೀರ್ಥರಿಗೆ ಕೇಳಿಸಿತು. ಅಲ್ಲೆ ಎಡಕ್ಕೆ ತಿರುಗಿ ನೋಡಿದರು. ನದಿ ಕಾಣಿಸಿತು. ‘ಇದೇ ನದಿ ಹರಿದು ನನ್ನೂರಿಗೆ ಹೋಗುತ್ತದೆ’ ಎಂದುಕೊಂಡು ಹತ್ತಿರಕ್ಕೆ ಹೋದರು. ನದಿಯ ನೀರಲ್ಲಿ ಕಾಲು-ಮುಖ ತೊಳೆದು ಬರುತ್ತಿದ್ದಂತೆ ಅವರಿಗೆ ವಿಶಾಲವಾದ ಜಾಗದಲ್ಲಿ ಈಶ್ವರ ಲಿಂಗ ಕಾಣಿಸಿತು. ಹತ್ತಿರಕ್ಕೆ ಹೋಗಿ ನೋಡಿದರು. “ಹಾಂ! ಇದೇ ಲಿಂಗ, ನಮ್ಮೂರಿನಲ್ಲಿ ನದಿಯನಲ್ಲಿ ಇದ್ದದ್ದು. ನಾನು ಆಗಾಗ ಮೇಲೆತ್ತಿ ಇಡುತ್ತಿದ್ದೆ. ಮರುದಿನವಾಗುವುದರೊಳಗೇ ಮತ್ತೆ ನೀರಿನಾಳದಲ್ಲಿರುತ್ತಿದ್ದ ಶಿವ. ಆದರೆ ಇಲ್ಲಿ ದೇವಾಲಯವಿಲ್ಲವಲ್ಲ?” ಎಂದುಕೊಳ್ಳುತ್ತಿರುವಾಗ ತನ್ನಜೊತೆ ಬಂದವರಾರೂ ಕಾಣದೆ ಹೋದಾಗ ಶಂಖತೀರ್ಥರಿಗೆ ಗಾಬರಿಯಾಯಿತು. ಎಲ್ಲರೂ ನನ್ನನ್ನು ಮರೆತು ಹೋದರೆಂದುಕೊಳ್ಳುತ್ತ ಎಲ್ಲರ ಹೆಸರನ್ನು ಹೇಳಿ ಕೂಗಿ ಕರೆದರು. ತಿರುಗಿ ಯಾರಿಂದಲೂ ಪ್ರತ್ಯುತ್ತರ ಬಾರದಾದಾಗ ಇನ್ನೂ ಹೆದರಿಕೆಯಾಯಿತು. ಸೂರ್ಯ ಮುಳುಗುವ ಹೊತ್ತು ಸನಿಹವಾಗಿತ್ತು. ಈಗ ಶಂಖತೀರ್ಥರು ನಿಜವಾಗಿಯೂ ಏನು ಮಾಡಬೇಕಂದು ತೋಚದೆ ಉಡುಗಿಹೋದರು. ಹತ್ತಿರದಲ್ಲೆಲ್ಲೂ ಮನೆಯೂ ಇರಲಿಲ್ಲ. ದಟ್ಟಕಾಡು, ಹರಿವ ನದಿ, ಆ ಶಿವಲಿಂಗ ಬಿಟ್ಟರೆ ಶಂಖತೀರ್ಥರು ಮಾತ್ರ. ಶಂಖತೀರ್ಥರು ‘ಎಲ್ಲಾ ನನ್ನನ್ನು ಮರೆತು ಹೋಗಿದ್ದಾರೆ. ಬಂದದ್ದೆಲ್ಲ ಬರಲಿ ಈ ಹರನ ದಯೆಯೊಂದಿರಲಿ’ ಎಂದುಕೊಳ್ಳುತ್ತ ಆ ಶಿವಲಿಂಗವನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಬೆಟ್ಟವನ್ನು ಇಳಿದರು. ದಾರಿತಪ್ಪಬಾರದೆಂದು ನದಿಗುಂಟವೇ ನಡೆದರು. ಎಷ್ಟು ನಡೆದರೋ? ಮಧ್ಯದಲ್ಲಿ ಎಲ್ಲಿ ಮಲಗಿದರೋ ಗೊತ್ತಿಲ್ಲ. ಬೆಳಗಿನ ಜಾವದಲ್ಲಿ ಆ ನದಿಗೆ ಹಾಕಿದ್ದ ಕಾಲು ಸಂಕ ಅವರ ಕಣ್ಣಿಗೆ ಬಿತ್ತು. ಅದರಿಂದ ಆಚೆ ದಾಟಲು ಮುಂದಾದರು. ಆಚೆ ದಡದ ಹತ್ತಿರ ಹೋಗುತ್ತಿದ್ದಂತೆ ದೇಹ ವಾಲಿ ಶಿವಲಿಂಗ ಸಮೇತ ನದಿಗೆ ಬಿದ್ದುಬಿಟ್ಟರು. ಶಂಖತೀರ್ಥರು ನೀರಲ್ಲಿ ಮುಳುಗೆದ್ದು ಸ್ವಲ್ಪದೂರಕ್ಕೆ ಸಾಗಿ ಮರದ ತುಂಡೊಂದರ ಸಹಾಯದಿಂದ ದಡ ಸೇರಿದರು. ತುಂಬಾ ಸುಸ್ತಾಗಿ ಅಲ್ಲಿಯೇ ಬಿದ್ದಿದ್ದ ಮರವೊಂದಕ್ಕೊರಗಿ ಮಲಗಿಬಿಟ್ಟರು. ಅವರಿಗೆ ಎಚ್ಚರಾಗುವಾಗ ಮಾದ ಮತ್ತು ರಾಜು ಇದಿರಿಗಿದ್ದರು.
“ಇಲ್ಲಿಗೆ ಹೇಗೆ ಬಂದಿರಿ? ನೀವು ನೀರಿನಲ್ಲಿ ಬಿದ್ದಿರಾ?” ಎಂದು ಕೇಳಿದ್ದಕ್ಕೆ ನಡೆದುದ್ದೆಲ್ಲವನ್ನೂ ಹೇಳದೆ “ಕಾಲು ಜಾರಿ ಬಿದ್ದಿದ್ದೆ” ಎಂದರು. ಶಿವಲಿಂಗ ಎಲ್ಲಿ ಕೈತಪ್ಪಿತೆಂಬ ಪ್ರಶ್ನೆ ಉದ್ಭವಿಸಿತಾದರೂ ಅದನ್ನು ಇವರಿಬ್ಬರಿಗೆ ಹೇಳಲಿಲ್ಲ.
“ಹೌದಾ ..ಛೆ!. ನೀವು ಗುಂಡಿಬೈಲಿಗೆ ಹೋದವರಲ್ಲವಾ? ಇಷ್ಟು ಬೆಳಿಗ್ಗೆ ಯಾಕೆ ಇಲ್ಲಿಗೆ ಬಂದದ್ದು?”
“ಹೌದು. ನಾನು ನಿನ್ನೆಯೇ ಹೊರಡಬೇಕಿತ್ತು. ಈ ಕಡೆಯ ಬಸ್ಸು ಬೇಗ ಇದೆಯಲ್ಲ ಹಾಗಾಗಿ ಈಚೆ ಬಂದೆ. ನಾನು ಹೊರಡುತ್ತೇನೆ. ನಾಡಿದ್ದು ನಾವು ಹೊಸ ಮನೆ ಪ್ರವೇಶ ಮಾಡುತ್ತಿದ್ದೇವೆ. ಬೆಂಗಳೂರಿನ ಮೀನಾಕ್ಷಿ ದೇವಸ್ಥಾನದ ಹತ್ತಿರ. ನೀವಿಬ್ಬರೂ ಬನ್ನಿ. ನನ್ನ ಮಗ ಧ್ಯಾನತೀರ್ಥ ನೀವು ಬರಲೇ ಬೇಕೆಂದು ಹೇಳಿದ್ದಾನೆ. ಆಮಂತ್ರಣ ಪತ್ರ ಇಲ್ಲ. ಎಲ್ಲ ಖಾಲಿಯಾಯಿತು. ಆದರೆ ಮುದ್ದಾಂ ಬರಲೇಬೇಕು” ಎಂದು ಹೇಳಿ ರಸ್ತೆಯ ದಾರಿ ಹಿಡಿದು ಹೋಗಿಬಿಟ್ಟರು.
ಮಾದ “ನಿಲ್ಲಿ, ಶಂಖತೀರ್ಥರೇ..” ಎಂದು ಕೂಗಿದ ಆದರೆ ಅವರು ತಿರುಗಿ ನೋಡಲೂ ಇಲ್ಲ; ನಿಲ್ಲಲೂ ಇಲ್ಲ.
***
ರಾಜುವಿಗೆ ಒಮ್ಮೆ ಬೆಂಗಳೂರು ನೋಡಬೇಕೆಂಬ ಆಸೆ ಇತ್ತು. ಹೇಗಾದರೂ ಮಳೆಗಾಲ ಕೆಲಸ ಕಮ್ಮಿ, ಧ್ಯಾನತೀರ್ಥ ನಮ್ಮ ಬಾಲ್ಯದ ಗೆಳೆಯನಲ್ಲವೇ? ಹೋಗಿಬರೋಣವೆಂದು ಮಾದನನ್ನು ಹಟಮಾಡಿ ಒಪ್ಪಿಸಿದ.

ಶಂಖತೀರ್ಥರು ಹೇಳಿದ ವಿಳಾಸಕ್ಕೆ ಮಾದ ಮತ್ತು ರಾಜು ಬಂದಿದ್ದರು. ಗುಂಡಿಬೈಲಿನಿಂದ ಕೆಲವರು ಬಂದಿರುವುದು ಕಂಡಿತು. ಶಂಖತೀರ್ಥರು ಎಲ್ಲಿಯೂ ಕಾಣಿಸಲಿಲ್ಲ. ಮಾದ ಮತ್ತು ರಾಜುವಿಗೆ “ಶಂಖತೀರ್ಥರೆಲ್ಲಿ?” ಎಂಬ ಪ್ರಶ್ನೆ ಮೂಡಿ ಅಲ್ಲೆ ನಿಂತಿದ್ದ ಚಿಕ್ಕಾಣಿ ಮಾಬ್ಲೇಶನನ್ನು ಕರೆದು “ಶಂಖತೀರ್ಥರನ್ನು ಕಂಡಿರೇನು?” ಎಂದಾಗ ಮಾಬ್ಲೇಶ ಇವರಿಬ್ಬರನ್ನೂ ವಿಕಾರವಾಗಿ ನೋಡಿದ. ಒಂದು ಕ್ಷಣ ನಾವು ಕೇಳಿದ್ದೇ ತಪ್ಪು ಎಂಬಂತೆ ದುರಾಯಿಸುತ್ತಿರುವ ಮಾಬ್ಲೇಶನನ್ನು ಇವರೂ ತೀಕ್ಷ್ಣವಾಗಿ ನೋಡಿದರು.
ಮಾಬ್ಲೇಶ ಮುಖ ಊದಿಸಿಕೊಂಡು ಹೇಳಿದ “ಇನ್ನೆಲ್ಲಿ ಕಾಣುವುದಕ್ಕೆ? ಸತ್ತು ಸ್ವರ್ಗ ಸೇರಿಯಾಗಿದೆ. ಇವತ್ತು ವೈಕುಂಠ ಸಮಾರಾಧನೆ.”

ಮತ್ತಷ್ಟು ಸುದ್ದಿಗಳು

vertical

Latest News

ಇಂದು 36 ಉಪಗ್ರಹಗಳ ಉಡಾವಣೆ: ಕ್ಷಣಗಣನೆ ಆರಂಭ ಎಂದ ಇಸ್ರೋ

newsics.com ಶ್ರೀಹರಿಕೋಟಾ: ಇಸ್ರೊ ಸಹೋದ್ಯೋಗಿಗಳ ಜತೆ ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಭಾನುವಾರ ಬೆಳಗ್ಗೆ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. 36 ಉಪಗ್ರಹಗಳನ್ನು ಎಲ್‌ವಿಎಂ3–ಎಂ3/ಒನ್‌ವೆಬ್‌ ಇಂಡಿಯಾ–2 ಮಿಷನ್‌ನಲ್ಲಿ ಉಡಾವಣೆ...

ಸರ್ ಎಂ.ವಿ. ಜನ್ಮಸ್ಥಳಕ್ಕೆ ಬಂದಿರುವುದು ನನ್ನ ಸೌಭಾಗ್ಯ: ಮೋದಿ

newsics.com ಬೆಂಗಳೂರು: ಆಧುನಿಕ ಭಾರತಕ್ಕೆ ಮಾದರಿಯಾಗಿರುವ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಹುಟ್ಟಿದ ಪುಣ್ಯಭೂಮಿ ಚಿಕ್ಕಬಳ್ಳಾಪುರಕ್ಕೆ ಇಂದು ನಾನು ಬಂದಿರುವುದು ನನ್ನ ಸೌಭಾಗ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಚಿಕ್ಕಬಳ್ಳಾಪುರದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ...

ಕಾಸರಕೋಡು ಕಡಲತೀರದಲ್ಲಿ ಅಪರೂಪದ ‘ಗಿಟಾರ್ ಫಿಶ್’ ಪತ್ತೆ

newsics.com ಕೇರಳ: ಕಾಸರಕೋಡು ಕಡಲತೀರದಲ್ಲಿ ಅಪರೂಪದ 'ಗಿಟಾರ್ ಫಿಶ್' ಪತ್ತೆಯಾಗಿದೆ. ಕಡಲತೀರದಲ್ಲಿ ಮೀನು ಬಿದ್ದಿರುವುದು ಕಂಡು ಬಂದಿದ್ದು. ಈ ಹಿಂದೆ ಇಂತಹ ಮೀನನನ್ನು ಎಲ್ಲಿಯೂ ನೋಡಿರಲಿಲ್ಲ ಎಂದು ಕಾಸರಕೋಡಿನ ಇಕೋ ಬೀಚ್‌ನ ವ್ಯವಸ್ಥಾಪಕ ವಿನೋದ್ ಎಸ್...
- Advertisement -
error: Content is protected !!