Monday, October 2, 2023

‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ಯಲ್ಲಿ ಬಾವಾಜಿ ಕೊಲೆ!

Follow Us

‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ ಬಹು ವರ್ಷಗಳ ನಂತರ ಹಿರಿಯ ಪತ್ರಕರ್ತ, ಲೇಖಕ, ಕಥೆಗಾರ ರಾಜಶೇಖರ ಜೋಗಿನ್ಮನೆ ಅವರಿಂದ ಮೂಡಿಬಂದ ಕಥಾಸಂಕಲನ. ಈ ಕೃತಿ ಹೊರಬರಲು ಕಾರಣವಾದ ಸಂಗತಿ, ಕಥಾಸಂಕಲನ ಕುರಿತಾದ ಮಾಹಿತಿಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಪ್ರತಿಕ್ರಿಯೆ ಬೇಕೇಬೇಕೆಂದು ಪಟ್ಟು ಹಿಡಿದಿದ್ದಾರೆ. ಕಥೆ ಓದಿ ಪ್ರತಿಕ್ರಿಯಿಸಿದರೆ ಅವರಿಗೂ ಖುಷಿ. ‘ಮೊದಲ ರುಚಿ’ಯಾಗಿ ಕಥಾಸಂಕಲನದಲ್ಲಿನ ‘ಬಾವಾಜಿ ಕೊಲೆ’ ನಿಮ್ಮ ಮಂದಿದೆ. ‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ ನಾಳೆ ಅಂದರೆ ಭಾನುವಾರ (ಜ.26) ಬೆಳಗ್ಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಪುಸ್ತಕ ಬಿಡುಗಡೆಗೂ ಮುನ್ನವೇ…
 
(ಹೊಸ ಪುಸ್ತಕ ಬಿಡುಗಡೆಗೂ ವಾರ ಮೊದಲು ಲೇಖಕರು newsics.com@gmail.com ಗೆ ಪುಸ್ತಕ ಕುರಿತಾದ ಮಾಹಿತಿಯನ್ನು ಮುಖಪುಟದ ಚಿತ್ರದೊಂದಿಗೆ ಕಳುಹಿಸಿದರೆ ಖುಷಿಯಿಂದ ಪ್ರಕಟಿಸುತ್ತೇವೆ.)
 
 
* ರಾಜಶೇಖರ ಜೋಗಿನ್ಮನೆ
response@134.209.153.225

ನನ್ನ ಮಾತು…

ಸುಮಾರು ಇಪ್ಪತ್ತು ವರ್ಷಗಳ ನಂತರ ಒಂದಷ್ಟು ಹೊಸ ಕಥೆಗಳ ಮೂಲಕ ನಿಮ್ಮೆದುರು ಬರುತ್ತಿದ್ದೇನೆ.
ಮನುಷ್ಯ ಸಂಬಂಧ, ಕಾಡಿನ ವಿಸ್ಮಯ, ನಿಸರ್ಗ ಮತ್ತು ಮಾನವನ ಸಂಬಂಧ, ಅವೆಲ್ಲದರ ನಡುವಿನ ಜೀವನೋತ್ಸಾಹ ಹೀಗೆ ನನ್ನನ್ನು ಎಂದೋ ಕಾಡಿದ ಸಂಗತಿಗಳು ಇಲ್ಲಿ ಕಥೆಗಳಾಗಿವೆ. ಇಲ್ಲಿನ ಬಹುತೇಕ ಕಥೆಗಳು ಮಲೆನಾಡಿನ ಮಧುರ ಪರಿಸರವನ್ನೇ ಮುಖ್ಯ ಕಚೇರಿಯಾಗಿಸಿಕೊಂಡಿದ್ದರೂ ಅವುಗಳ ಶಾಖೆಗಳು ರಾಜ್ಯಾದ್ಯಂತ ಇವೆ ಎಂಬುದು ನನ್ನ ನಂಬಿಕೆ.
ಮನಸ್ಸಿನೊಳಗೆ ಕಥೆಯ ಎಳೆಯೊಂದು ಸರಿದಾಡತೊಡಗಿದರೆ ಆ ಕಥಾ ಪ್ರಸವ ಆಗುವವರೆಗೆ ಸಮಾಧಾನ ಇರುವುದಿಲ್ಲ. ಅಂಥ ಸಮಾಧಾನಕ್ಕಾಗಿ ಬರೆದ ಕಥೆಗಳಿವು. ಸಮಾಧಾನ ಸಿಕ್ಕಿತಾ ಅಂತ ಕೇಳಿದರೆ ನನ್ನಲ್ಲಿ ಉತ್ತರವಿಲ್ಲ. ಒಂದು ರೀತಿಯಲ್ಲಿ ನನ್ನ ಮಗು ಹೀಗಿರಬೇಕು ಹಾಗಿರಬೇಕು ಅನ್ನೋ ಕನಸು ಕಾಣುವ ಅಪ್ಪ ಅಮ್ಮಂದಿರ ಹಾಗೆಯೇ ಕಥೆಗಾರನ ಸ್ಥಿತಿ ಕೂಡ ಅಂತ ನ‌ನಗನಿಸುತ್ತದೆ. ಮಗು ಹುಟ್ಟಿದ ಮೇಲೆ ಎಷ್ಟೋ ಸಲ, ಕಂಡ ಕನಸಿಗೂ ಆ ಮಗು ರೂಪುಗೊಳ್ಳುವ ರೀತಿಗೂ ಸಂಬಂಧವೇ ಇರೋದಿಲ್ಲ. ಹಾಗೇ ಈ ಕತೆಗಳು ಕೂಡ – ಒಂದೇ ನಮೂನಿ ಇರುವ ಮತ್ತೊಬ್ಬರು ಸಿಗದ ಮನುಷ್ಯರ ಹಾಗೆ. ಪ್ರತಿ ಕಥೆಯೂ ಭಿನ್ನ. ಎಲ್ಲರಿಗೂ ಎಲ್ಲರೂ ಇಷ್ಟವಾಗುವುದಿಲ್ಲ. ಯಾರಿಗೂ ಇಷ್ಟವಾಗದ ಯಾರೂ ಇಲ್ಲ. ಹೀಗಾಗಿ ಇಲ್ಲಿನ ಕಥೆಗಳು ಹೆಚ್ಚು ಓದುಗರಿಗೆ ಇಷ್ಟವಾದರೆ ನಾನು ಧನ್ಯ.
ಆದ್ದರಿಂದ ಪುಸ್ತಕ ತಗೊಳಿ. ಓದಿ. ಇಷ್ಟ ಆಯ್ತು ಅಂದರೆ ಯಾಕೆ ಆಯ್ತು, ಆಗ್ಲಿಲ್ಲ ಅಂದ್ರೆ ಯಾಕೆ ಆಗ್ಲಿಲ್ಲ ಅನ್ನೋದನ್ನೂ ಮುಲಾಜಿಲ್ಲದೆ ಹೇಳಿ.

ಬಾವಾಜಿ ಕೊಲೆ

(‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ ಕಥಾಸಂಕಲನದಲ್ಲಿನ ಒಂದು ಕಥೆ)

ಸುಬ್ರಾಯ ಭಟ್ಟರ ಕೈಯಲ್ಲಿನ ಬೆತ್ತ ನರ್ತಿಸುತ್ತಲೇ ಇತ್ತು. ಅವರ ಕಣ್ಣುಗಳು ಕೆಂಡವಾಗಿದ್ದವು. ಸಿಟ್ಟಿನಿಂದ ಮೈಯೆಲ್ಲ ಕಂಪಿಸುತ್ತಿತ್ತು. ಮಲಗಿದ್ದ ಮಗನ ಕಾಲಿನ ಮೇಲೆ ಮತ್ತೊಮ್ಮೆ ಛಟಿರ್ ಎಂದು ಬಾರಿಸಿದರು. ‘ಹೊಡಿಬ್ಯಾಡಿ…’ ಆತ ಕೂಗಿದ. ಧ್ವನಿ ಆತನದಾಗಿರಲಿಲ್ಲ. ಭಟ್ಟರು ಒಮ್ಮೆ ಆತನ ಮುಖ ದುರುಗುಟ್ಟಿ ನೋಡಿದರು. ‘ಹೊಡಿಬ್ಯಾಡಿ, ಹೇಳ್ತೇನೆ, ನಾನು ಯಾರು ಅಂತ ಹೇಳ್ತೇನೆ’ ನಡುಗುತ್ತಲೇ ಆತ ಹೇಳಿದ. ಆತ ಮಲಗಿಯೇ ಇದ್ದ. ನಿದ್ದೆಯಲ್ಲಿದ್ದವನಂತೆ ಮಾತನಾಡುತ್ತಿದ್ದ.
ಎಂದಿನಂತೆ ಶಾಲೆಯಿಂದ ಬಂದ ಮಹೇಶನ ವರ್ತನೆ ಮಾತ್ರ ಇಂದು ಎಂದಿನಂತಿರಲಿಲ್ಲ. ಬಂದವನೇ ಮನೆಯ ಜಗಲಿಯ ಮೇಲೆ ಮಲಗಿದ್ದ. ಅವನ ಮುಖದಲ್ಲಿ ಬಾಲ್ಯದ ಲಕ್ಷಣಗಳಿರಲಿಲ್ಲ. ತುಂಟ ಕಿರುನಗೆಯಿರಲಿಲ್ಲ. ಅಹಂಕಾರದ ಸೆಳಕೊಂದು ಸುಳಿದಾಡುತ್ತಿತ್ತು. ಸಣ್ಣಗೆ ಗರ್ಜಿಸಿದಂತೆ ಗುರುಗುಡುತ್ತಿದ್ದ. ಆತನಲ್ಲಿ ಮನುಷ್ಯರ ಚಹರೆಗಳು ಕಾಣದಂತಾದಾಗ ಸುಬ್ರಾಯ ಭಟ್ಟರಿಗೆ ಎಲ್ಲ ಅರ್ಥವಾಗಿ ಹೋಗಿತ್ತು. ಅವರು ಮಂತ್ರವನ್ನು ಪಠಿಸತೊಡಗಿದರು. ಏನಾಯಿತು? ಎಂದರು. ಮಗ ಉತ್ತರಿಸಲಿಲ್ಲ. ಮತ್ತೊಮ್ಮೆ ಕೇಳಿದರು. ಆಗಲೂ ಉತ್ತರಿಸದಿದ್ದಾಗ ಮಂತ್ರಿಸಿದ ಬೆತ್ತ ತಂದರು. ಆ ಬೆತ್ತದ ಉರಿ ತಾಳಲಾರದೆ ಮಹೇಶ ಬಾಯಿಬಿಟ್ಟಿದ್ದ.
‘ಯಾರು ನೀನು?’ ಸುಬ್ರಾಯ ಭಟ್ಟರ ಗರ್ಜನೆಗೆ ಆತ ಹೇಳಿದ್ದು ಅದನ್ನು – ಹೊಡಿಬ್ಯಾಡಿ. ಹೇಳ್ತೇನೆ. ಹೇಳತೊಡಗಿದ.
‘ನನ್ನ ಹೆಸರು ಬಾವಾಜಿ’…
‘ಇಲ್ಲಿಗೇಕೆ ಬಂದೆ?’
‘ನಾನು ಎರಡು ನೂರು ವರ್ಷಗಳಿಂದ ಮುಕ್ತಿಯಿಲ್ಲದೇ ಪ್ರೇತವಾಗಿ ಅಂಬೆಗಾರ ಕಾಡಿನಲ್ಲಿ ಅಲೆದಾಡುತ್ತಿರುವೆ. ಕಾಡಿನಂಚಿಗೆ ಬಂದಾಗ ಈ ಹುಡುಗ ಸಿಕ್ಕ. ಅವನಿಂದಲಾದರೂ ಮುಕ್ತಿ ಸಿಗಬಹುದೆಂದು ಅವನೊಳಗೆ ಸೇರಿಕೊಂಡೆ…ಅವನು ನಿಮ್ಮ ಮಗನೆಂದು ಗೊತ್ತಿತ್ತು. ನಿಮ್ಮ ಬಗ್ಗೆ ಊರೆಲ್ಲ ಮಾತನಾಡುತ್ತದೆ. ನೀವು ಪ್ರೇತಗಳಿಗೆಲ್ಲ ಮುಕ್ತಿ ಕೊಡುತ್ತೀರಂತೆ… ನಿಮ್ಮ ಪರೋಪಕಾರ ಗುಣದ ಬಗ್ಗೆ ತುಂಬ ಕೇಳಿದ್ದೇನೆ. ಹಾಗಾಗಿ ನೀವೇನಾದರೂ ಮನಸ್ಸು ಮಾಡಿ ನನಗೆ ಮುಕ್ತಿ ದೊರಕಿಸಬಹುದೆಂಬ ಆಸೆಯಿಂದ ಬಂದೆ…ಹೊಡಿಬ್ಯಾಡಿ ಭಟ್ರೆ…’ ತೀರ ಪರಿಚಿತನಂತೆ ಆತ ಮಾತನಾಡತೊಡಗಿದಾಗ ಭಟ್ಟರು ಸ್ವಲ್ಪಮಟ್ಟಿಗೆ ಮೆತ್ತಗಾದರು.
ಆಯುಷ್ಯ ಮುಗಿಯದೇ ಸತ್ತವರು ಸರಿಯಾದ ಸಂಸ್ಕಾರ ಸಿಗುವವರೆಗೆ ಪ್ರೇತವಾಗಿಯೇ ಅಲೆಯುತ್ತಿರುತ್ತಾರೆ ಎಂಬ ನಂಬಿಕೆ ಬಲವಾಗಿದ್ದ ಕಾಲ ಅದು. ತೀರ ನಾಗರಿಕ ಸಂಪರ್ಕವಿರದ ಮಲೆನಾಡಿನ ಆ ಹಳ್ಳಿಯನ್ನಂತೂ ಅಂಥ ನಂಬಿಕೆಗಳೇ ಆಳುತ್ತಿದ್ದವು. ಆಧುನಿಕ ಮನಸುಗಳಿಗೂ ಸವಾಲೆಸೆಯುವಂಥ ಘಟನೆಗಳು ಮಾಮೂಲಾಗಿದ್ದವು. ಹಳೆಯ ಕಾಲದ ಕಥನ ಕೇಳುವ ಕುತೂಹಲ ಸಹಜವಾದುದರಿಂದ ಆತ ಹೇಳುವುದನ್ನು ಕೇಳಲು ಸುತ್ತ ಸೇರಿದ್ದ ಊರವರೆಲ್ಲ ಉತ್ಸುಕರಾಗಿದ್ದರು. ಕಥೆ ಕೇಳಿಬಿಡೋಣ ಎಂದು ಸುಬ್ರಾಯ ಭಟ್ಟರಿಗೆ ಕೆಲವರು ಹೇಳಿಯೂ ಬಿಟ್ಟರು. ಆತನೋ, ಅದ್ಭುತವಾದ ಕಥೆಯೊಂದನ್ನು ಹೇಳತೊಡಗಿದ…
*
ಅಂದು ಅಮಾವಾಸ್ಯೆ. ಆ ರಾತ್ರಿ ನಾವು ಅಂದರೆ ನಾನು, ಕೇರಳದ ಮಂತ್ರವಾದಿ ಮಣಿಚ್ಚಾತ್ತನ್ ಹಾಗೂ ನನ್ನ ಸಹೋದರ ರಾಮಕುಟ್ಟಿ ಮೂವರೂ ಸೇರಿ ಚಿತ್ರದುರ್ಗದ ಕೋಟೆಯ ಒಂದು ನಿಗೂಢ ಸ್ಥಳದಲ್ಲಿ ಕುಳಿತಿದ್ದೆವು. ನಾನು ಮತ್ತು ನನ್ನಣ್ಣ ತೀರ ಬಡವರು. ನಾವು ಮೂಲತಃ ಕೇರಳದವರು. ಮಲೆಯಾಳಿ ಮಾತನಾಡುತ್ತೇವೆ. ತಂದೆ ತಾಯಿಯನ್ನು ಕಳೆದುಕೊಂಡಿದ್ದೆವು. ಜಮೀನಿಲ್ಲ. ಬದುಕಲು ಬೇರೆ ಮಾರ್ಗಗಳಿರಲಿಲ್ಲ. ಹೀಗಾಗಿ ದುರ್ಗದ ಸನಿಹದಲ್ಲಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೆವು. ಇಂಥ ಒಂದು ದಿನ ಊರ ಸಂತೆಗೆ ಹೋದಾಗ ಮಣಿಚ್ಚಾತ್ತನ್ ಸಿಕ್ಕ. ನಮ್ಮ ಮಾತೃಭಾಷೆ ಮಾತನಾಡುವ ಅವನನ್ನು ನೋಡಿದಾಕ್ಷಣ ನಾವು ಪರವಶರಾದೆವು. ಅವನ ಮಾತುಗಳ ಮೋಡಿಗೆ ಸಿಕ್ಕಿದೆವು. ನಮ್ಮ ಬಡತನದ ವಿವರವನ್ನೆಲ್ಲ ಹೇಳಿ ಅತ್ತೆವು. ಅವನೊಂದು ಭರವಸೆ ಕೊಟ್ಟ. ನೀವು ನನ್ನ ಜೊತೆ ಬರುವುದಾದರೆ ನಿಮ್ಮನ್ನು ಕೋಟ್ಯಧೀಶರನ್ನಾಗಿಸುತ್ತೇನೆ ಎಂದ. ನಮಗೆ ನಂಬಿಕೆ ಇರಲಿಲ್ಲ. ಅವನೇ ಹೇಳಿದ: ‘ನಿಮ್ಮನ್ನೊಮ್ಮೆ ಪರೀಕ್ಷೆ ಮಾಡುವೆ. ಅದರಲ್ಲಿ ಪಾಸಾದರೆ ಇನ್ನು ಮುಂದೆ ನಿಮ್ಮ ಜವಾಬ್ದಾರಿ ನನ್ನದು’ ಎಂದ. ಹೇಗೂ ಹಳ್ಳ ಹಿಡಿದ ಬದುಕು, ಒಪ್ಪಿದೆವು.
ಮನೆಗೆ ಕರೆದೊಯ್ದ. ಅದು ಮನೆಯೆಂದರೆ ಮನೆಯಲ್ಲ. ಕ್ಷುದ್ರ ದೇವತೆಗಳ ಆವಾಸ ಸ್ಥಾನ. ಅಲ್ಲಿ ಬಲಿಗಳು ನಡೆದ ಕುರುಹುಗಳಿದ್ದವು. ಅದಾವುದೋ ಮೂರ್ತಿಗೆ ರಕ್ತದ ಅಭಿಷೇಕ ಆಗಷ್ಟೇ ನಡೆದಂತಿತ್ತು. ಜೊತೆಗೇ ಒಣ ರಕ್ತದ ಕಮಟು ವಾಸನೆ ಮೂಗಿಗೆ ರಾಚುತ್ತಿತ್ತು. ನಾವು ಹೋಗುತ್ತಿದ್ದಂತೆ ಕರ್ಪೂರ ಹೊತ್ತಿಸಿದ. ಊದುಬತ್ತಿ ಬೆಳಗಿದ. ಕಮಟು ವಾಸನೆ ಈ ಸುವಾಸನೆ ಸೇರಿ ಅಲ್ಲೊಂದು ಹೊಸ ವಾಸನೆ ಶುರುವಾಯಿತು. ‘ನಿಮ್ಮಿಬ್ಬರಲ್ಲಿ ಯಾರಿಗಾದರೂ ಅಂಜನ ತಾಗುತ್ತಾ ನೋಡಬೇಕು’ ಅಂದ. ಆಯಿತು ಎಂದೆವು. ಅದೇನೋ ಗಂಧ, ಚಂದನ, ಕಾಡಿಗೆ ಇತ್ಯಾದಿ ತಂದ. ನಾನು ಚಿಕ್ಕವನು ತಾನೆ? ನನ್ನ ಕಣ್ಣಿಗೆ ಕಾಡಿಗೆ ಹಚ್ಚಿದ. ಎಡ ಅಂಗೈ ಮೇಲೆ ಗೋಲವಾಗಿ ಚಿತ್ತಾರ ಮೂಡಿಸಿದ. ಬಲ ತೋರು ಬೆರಳನ್ನು ಹಣೆಗೆ ಇಟ್ಟುಕೊಂಡು ಕೈಯನ್ನು ನೋಡುವಂತೆ ಹೇಳಿದ. ಏಕಾಗ್ರತೆಯ ಪಾಠಗಳಾದವು. ಕೈಯಲ್ಲಿ ಏನಾದರೂ ಕಾಣುತ್ತಾ ಎಂದು ಕೇಳಿದ. ಮೊದಲಬಾರಿ ಏನೂ ಕಾಣಲಿಲ್ಲ. ಎರಡನೇ ಬಾರಿ ಕೇಳುವ ಹೊತ್ತಿಗೆ ಅಂಗೈಯಲ್ಲಿ ಜ್ಯೋತಿ ಹಿಡಿದ ಆಂಜನೇಯ ಕಾಣತೊಡಗಿದ. ಅದನ್ನು ಹೇಳಿದೆ. ಆತನಿಗೆ ಖುಷಿಯಾಯಿತು. ಮತ್ತೆ ಅಂಜನದಿಂದ ನನ್ನನ್ನು ವಾಪಸ್ ಕರೆತಂದ. ಆಗ ಆತ ಹೇಳಿದ ಮಾತುಗಳಿವು:
‘ಇತಿಹಾಸ ಹೇಳುವ ಕೋಟೆಗಳೆಂದರೆ ರಾಜ ಮಹಾರಾಜರ ನಿಧಿಯ ಭಂಡಾರವೂ ಆಗಿರುತ್ತದೆ. ರಾಜರು ಹೋದರು. ಅವರ ಸಂಪತ್ತೆಲ್ಲ ಯಾಕೆ ಭೂಮಿಯೊಳಗೆ ಕೊಳೆಯಬೇಕು ಹೇಳಿ? ನಿನಗೆ ಅಂಜನ ತಾಗುತ್ತದೆ. ಆ ಮೂಲಕ ಈ ರಾಜ್ಯದ ಯಾವ ಕೋಟೆಯಲ್ಲಿ ನಿಧಿ ಇದೆಯೆಂದು ತಿಳಿದುಕೊಳ್ಳೋಣ. ಅಲ್ಲಿ ಹೋಗಿ ಅವನ್ನು ಹುಡುಕಿ ತೆಗೆಯೋಣ. ಬದುಕನ್ನು ಬಂಗಾರ ಮಾಡಿಕೊಳ್ಳೋಣ’ ಎಂದ. ಆತನ ಯೋಜನೆಗೆ ಒಪ್ಪಿ ಆ ದಿನ ನಾವು ಚಿತ್ರದುರ್ಗದ ಕೋಟೆಗೆ ಬಂದೆವು. ಅಲ್ಲಿ ಕುಳಿತು ರಾಜ್ಯದ ಯಾವ ಮೂಲೆಯಲ್ಲಿರುವ ಕೋಟೆಯಲ್ಲಿ ನಿಧಿ ಇದೆ ಎಂದು ಪತ್ತೆಹಚ್ಚುವುದು ನಮ್ಮ ಗುರಿಯಾಗಿತ್ತು.
‘ನೀನು ಸುಳ್ಳು ಹೇಳುತ್ತಿಲ್ಲ ತಾನೆ?’ ಸುಬ್ರಾಯ ಭಟ್ಟರ ಅನುಮಾನವನ್ನು ಬಗೆಹರಿಸುವಂತೆ ಆತ ‘ಖಂಡಿತ ಇಲ್ಲ, ನಡೆದ ಘಟನೆ ಇಲ್ಲದಿದ್ದರೆ ಹೀಗೆಲ್ಲ ಕಥೆ ಕಟ್ಟುವುದು ಸಾಧ್ಯವಾ? ಸುಮ್ಮನೇ ಕೇಳಿ’ ಎಂದ. ಸುಬ್ರಾಯ ಭಟ್ಟರು ಹಾಗೆ ಕೇಳುವುದಕ್ಕೂ ಕಾರಣವಿತ್ತು. ಒಮ್ಮೆ ಅವರೇ ಅದನ್ನು ವಿವರಿಸಿದ್ದರು ಕೂಡ. ಈ ಪ್ರೇತಗಳಿಗೆ ಆಕಾರವಿಲ್ಲ. ಅವು ಕಣ್ಣಿಗೆ ಕಾಣುವುದಿಲ್ಲ. ಯಾರದೋ ಒಬ್ಬರ ದೇಹದೊಳಗೆ ಸೇರಿಕೊಂಡು, ಆ ದೇಹವನ್ನು ಬಳಸಿಕೊಂಡು ವ್ಯವಹರಿಸುತ್ತವೆ. ಹೀಗಾಗಿ ಅದು ಆ ದೇಹದೊಳಗಿರುವಷ್ಟು ಹೊತ್ತು ದೇಹಕ್ಕೆ ದಂಡಿಸಿದರೆ ಪ್ರೇತಕ್ಕೆ ಉರಿಯಾಗುತ್ತದೆ ಹೊರತೂ ಜೀವಂತ ವ್ಯಕ್ತಿಗಲ್ಲ. ಆಕಸ್ಮಾತ್ ಹೊಡೆದಾಗ ಪ್ರೇತ ಹೋಗಿಬಿಟ್ಟಿದ್ದರೆ ಪಾಪ, ಈ ಬಡ ಜೀವ ಪೆಟ್ಟು ತಿನ್ನಬೇಕಾಗುತ್ತದೆ. ಎಷ್ಟೋ ಸಲ ಯಾರದೋ ದೇಹ ಸೇರಿಕೊಂಡು ಕೆಟ್ಟ ಕೆಲಸವನ್ನೆಲ್ಲ ಮಾಡಿ ನಂತರ ಅವೆಲ್ಲವನ್ನೂ ಇವನ ತಲೆಗೆ ಕಟ್ಟಿ ಅವು ಹೊರಟುಹೋಗಿಬಿಡುತ್ತವೆ ಎಂದಿದ್ದರು. ಹಿಂದೊಮ್ಮೆ ಹೀಗೆಯೇ ಬಂದ ಪ್ರೇತವೊಂದು ಹೊಡೆತಕ್ಕೆ ಹೆದರಿ ‘ಹೋಗುತ್ತೇನೆ’ ಎಂದು ಹೇಳಿ ಮತ್ತೊಂದು ಅರ್ಧ ಗಂಟೆಗೆ ಹಿಂತಿರುಗಿ ಬಂದಿತ್ತಂತೆ. ಕೊನೆಗೆ ಮತ್ತಷ್ಟು ಏಟು ತಿಂದ ಮೇಲೆ ಹೋಗುತ್ತೇನೆ ಎಂದಿತು. ನೀನು ಹೋದುದಕ್ಕೆ ಸಾಕ್ಷಿಯೇನು ಎಂದು ಭಟ್ಟರು ಕೇಳಿದ್ದರು. ಅಲ್ಲಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಮರವೊಂದರ ರೆಂಬೆಯನ್ನು ಮುರಿದು ಹಾಕಿ ಹೋಗುವುದಾಗಿ ಭರವಸೆ ನೀಡಿತ್ತು. ಅಲ್ಲಿದ್ದವರೆಲ್ಲ ಅದು ಹೇಳಿದ ಮರದೆಡೆಗೆ ಓಡಿದ್ದರು. ಅದು ಹೇಳಿದಂತೆ ಮರದ ರೆಂಬೆಯೊಂದು ಮುರಿದು ಬಿತ್ತಂತೆ. ಆ ನಂತರ ಆ ಪ್ರೇತ ವಾಪಸ್ ಬಂದಿರಲಿಲ್ಲ. ಹೀಗಾಗಿ ಸುಳ್ಳು ಹೇಳುವ ಚಾಳಿ ಇರುವ ಪ್ರೇತಗಳನ್ನು ಭಟ್ಟರು ಹದಪೆಟ್ಟಿಗೆ ನಂಬುತ್ತಿರಲಿಲ್ಲ.
‘ಸರಿ, ಹೇಳು… ನಿಧಿ ಸಿಕ್ತಾ?’ ಕೇಳಿದರು.
ಇಲ್ಲ.. ಅಲ್ಲಂತೂ ಇರಲಿಲ್ಲ. ರಾಜ್ಯದ ಹಲವಾರು ಕೋಟೆಗಳ ಚಿತ್ರಣ ನನ್ನ ಕೈಯಲ್ಲಿ ಕಾಣುತ್ತಿತ್ತು. ರಾತ್ರಿ ಮೂರು ಗಂಟೆಯವರೆಗೆ ಹುಡುಕಿದರೂ ಎಲ್ಲೂ ನಿಧಿ ಕಾಣಲಿಲ್ಲ. ಕೊನೆಗೊಮ್ಮೆ ಉತ್ತರಕನ್ನಡದ ಮೂಲೆಯಲ್ಲಿರುವ ನಾಗೂರು ಕೋಟೆಯ ಚಿತ್ರಣ ಅಂಗೈಯಲ್ಲಿ ಬರತೊಡಗಿತು. ಆಹಾ… ವಜ್ರ ವೈಢೂರ್ಯಗಳ ರಾಶಿ… ಅಲ್ಲೊಂದು ಮಹಿಷಾಸುರ ಮರ್ದಿನಿ ಮೂರ್ತಿ. ಅಪ್ಪಟ ಚಿನ್ನದಲ್ಲಿಯೇ ಮಾಡಿದ್ದು. ಅಪಾರ ನಿಧಿ ಇದೆಯೆಂದು ತಿಳಿದಾಗ ನಾವೆಲ್ಲ ಖುಷಿಯಾದೆವು. ಇಡೀ ಕೋಟೆಯನ್ನು ವೀಕ್ಷಿಸಿದೆವು. ಎಲ್ಲವೂ ನನ್ನ ಅಂಗೈಯಲ್ಲಿ ಕಾಣುತ್ತಿತ್ತು. ಅಂತೂ ನಮ್ಮ ಪ್ರಯತ್ನ ವಿಫಲವಾಗಲಿಲ್ಲ ಅನಿಸಿತು. ಖುಷಿಯಾದ ಮಣಿಚ್ಚಾತ್ತನ್ ನನಗೆ ಹಾಕಿದ ಅಂಜನ ತೆಗೆಯುವ ಪ್ರಕ್ರಿಯೆ ಶುರು ಮಾಡಿದ. ಹೋದ ದಾರಿಯಲ್ಲಿಯೇ ಹಿಂದಿರುಗಬೇಕು. ಸ್ವಲ್ಪ ತಪ್ಪಿದರೂ ನನ್ನ ಜೀವಕ್ಕೇ ಅಪಾಯವಂತೆ. ಹೀಗಾಗಿ ಆಂಜನೇಯ ದಾರಿ ತೋರಿಸಿದ ಹಾಗೆ ನಾನು ಕುಳಿತಲ್ಲಿಯೇ ಹೇಗೆ ಸಾಗಿದ್ದೆನೋ ಹಾಗೆಯೇ ಹಿಂದಿರುಗಿ ಬಂದೆ. ಈಗ ಎಲ್ಲೂ ನಿಲ್ಲಬೇಕಾಗಿರಲಿಲ್ಲ. ಹೀಗಾಗಿ ಬೆಳಗಿನ ಜಾವ ಮೂರು ಗಂಟೆಗೆ ನನ್ನ ಅಂಜನ ಲೋಕದಿಂದ ಹೊರಬಂದೆ. ಮೂವರೂ ದುರ್ಗದ ಕೋಟೆಯಿಂದ ಮನೆಗೆ ಬಂದೆವು. ನಾಗೂರಿಗೆ ಹೊರಡಲು ಮಾನಸಿಕವಾಗಿ ಸಿದ್ಧರಾದೆವು.
ಈ ನಾಗೂರು ನಿಮ್ಮದೇ ಸಮೀಪದ ಊರು. ಇಲ್ಲಿ ಹಿಂದೆ ರಾಜರ ಆಡಳಿತವಿತ್ತಂತೆ. ಗೌಡಾಳಿಕೆಗೆ ಒಳಪಟ್ಟ ಪ್ರದೇಶ. ಅದಾವುದೋ ಅರಸರ ಮಾಂಡಳಿಕರು ಇಲ್ಲಿ ಆಳುತ್ತಿದ್ದರಂತೆ. ಆ ಸ್ಥಳದ ಇತಿಹಾಸವನ್ನೆಲ್ಲ ಮಣಿಚ್ಚಾತ್ತನ್ ಹುಡುಕಿದ. ಹೋಗುವ ಮಾರ್ಗ ಗುರುತು ಮಾಡಿಕೊಂಡ. ಅದಕ್ಕೆ ಯಾವ್ಯಾವುದೋ ದಿನ ಆಗುವುದಿಲ್ಲ. ಅಂಥ ದಿನದ ಹುಡುಕಾಟ ಶುರುವಾಯಿತು. ಅಂತೂ ನಿಧಿ ತೆಗೆಯುವ ಮೂಹೂರ್ತ ನಿಕ್ಕಿಯಾಯಿತು. ಎರಡು ದಿನದ ನಂತರ ಬರುವೆ ಎಂದು ಹೋಗಿದ್ದ ಮಣಿಚ್ಚಾತ್ತನ್ ಬರುವಾಗ ಮತ್ತಿಬ್ಬರನ್ನು ಕರೆತಂದ. ಅವರು ಹಾರೆ, ಪಿಕಾಸಿ, ಕೊಡಲಿ ಮೊದಲಾದ ಸಲಕರಣೆಗಳೊಂದಿಗೆ ಬಂದಿದ್ದರು. ‘ನನ್ನದೇ ಜನ, ಇದೆಲ್ಲ ಯಾರಿಗೂ ಗೊತ್ತಾಗಬಾರದು ನೋಡಿ, ಅದಕ್ಕೇ ನಂಬಿಗಸ್ಥರನ್ನೇ ಕರೆಸಿಕೊಂಡಿದ್ದೇನೆ’ ಎಂದು ನಮ್ಮ ಅನುಮಾನ ನಿವಾರಿಸಿದ. ಎಂಟು ದಿನ ಮುಂಚೆಯೇ ನಾವು ನಾಗೂರಿಗೆ ಬಂದೆವು. ಊರಿಗೆ ಬಂದುದು, ನಾವು ಕೋಟೆ ಸೇರಿಕೊಂಡುದನ್ನು ರಹಸ್ಯವಾಗಿಟ್ಟಿದ್ದೆವು. ಯಾರಿಗೂ ತಿಳಿಯಬಾರದೆಂಬ ಕಾರಣಕ್ಕೆ ರಾತ್ರಿ ಹೊತ್ತಿನಲ್ಲಿಯೇ ನಮ್ಮ ಓಡಾಟ ನಡೆದಿತ್ತು. ಆ ಕೋಟೆಯ ಹತ್ತಿರ ಮನೆಗಳಿರಲಿಲ್ಲ. ನೀವೂ ನೋಡಿರಬಹುದು ಊರಾಚೆಯ ಗುಡ್ಡದ ಹಾದಿಯಲ್ಲಿ ಕೋಟೆಗೆ ಹೋಗಬೇಕು. ಅಲ್ಲಿ ಅರಣ್ಯ ಆಗಲೇ ಬೆಳೆದಿತ್ತು. ಈಗಂತೂ ಅದು ಸಂಪೂರ್ಣ ಕಾಡೇ ಆಗಿರಬಹುದು. ನಾನು ಹೇಳುತ್ತಿರುವುದು ಇನ್ನೂರು ವರ್ಷಗಳ ಹಿಂದಿನ ಕಥೆ, ನೆನಪಿರಲಿ. ಆಗ ಕೋಟೆ ತೀರ ಶಿಥಿಲಗೊಂಡಿರಲಿಲ್ಲ. ಅದರ ಅವಶೇಷಗಳು ಸ್ಪಷ್ಟವಾಗಿದ್ದವು. ಕೋಟೆಯ ಹೊರಗೋಡೆಯ ಪಕ್ಕ ಬಿಡಾರ ಹೂಡಿದೆವು. ಬಿಡಾರವೆಂದರೆ ಮರದ ನೆರಳಲ್ಲಿ ಒಲೆ ಹೂಡಿದ್ದು ಅಷ್ಟೇ. ಅಲ್ಲೇ ನಮ್ಮ ಅಡುಗೆ, ಊಟ ನಡೆಯಿತು. ಪ್ರತಿದಿನ ಕೋಟೆಯನ್ನು ಸುತ್ತಿದೆವು. ಕೋಟೆಯ ಮೆಟ್ಟಿಲೇರಿ ಒಳಗೆ ಹೋದರೆ ಎದುರಾಗುವುದು ವಿಶಾಲ ಮೈದಾನ. ಸೈನಿಕರಿಗೆ ಕುದುರೆ ಸವಾರಿ ತರಬೇತಿ ಅಲ್ಲಿಯೇ ನಡೆಯುತ್ತಿದ್ದಿರಬೇಕು. ಇದು ರಾಜನ ದರ್ಬಾರು, ಇದು ಸಭಾಂಗಣ, ಇದು ಅಂತಃಪುರ, ಇದು ಕುದುರೆ ಲಾಯ, ಇದು ಆನೆಗಳ ಬಿಡದಿ ಎಂದೆಲ್ಲ ಗುರುತಿಸುತ್ತ ಹೋದೆವು.
ರಾಜರ ಕಾಲದಲ್ಲಿ ಇರುತ್ತಿದ್ದ ದ್ವಾರಪಾಲಕರು, ಕಾವಲುಗಾರರು ಯಾರೂ ಇರಲಿಲ್ಲ. ಅಲ್ಲಲ್ಲಿ ಜೇನು ಗೂಡುಗಳಿದ್ದುದನ್ನು ಬಿಟ್ಟರೆ ಅಪಾಯಕಾರಿಯಂಥ ಯಾವುದೂ ಕಾಣಿಸಲಿಲ್ಲ. ಕಾಡು ಪ್ರಾಣಿಗಳೂ ಕೋಟೆಯನ್ನು ಬಹುಶಃ ಪ್ರವೇಶಿಸುತ್ತಿರಲಿಲ್ಲ ಅಥವಾ ಮನುಷ್ಯರ ಇರವನ್ನು ಗಮನಿಸಿ ನಾವಿದ್ದಷ್ಟು ದಿನ ಆ ಕಡೆ ಬರಲಿಲ್ಲ. ಆ ಕೋಟೆಯ ವೈಭವದ ದಿನಗಳು ಹೇಗಿದ್ದಿರಬಹುದೆಂದು ಊಹಿಸಿದರೇ ರೋಮಾಂಚನವಾಗುತ್ತಿತ್ತು. ಏನಿಲ್ಲವೆಂದರೂ ಸುಮಾರು ಹತ್ತು ಎಕರೆಯಷ್ಟು ವಿಸ್ತೀರ್ಣದ ಕೋಟೆಯದು. ಅದಕ್ಕೆ ಎಂಟು ದ್ವಾರಗಳಿವೆ. ಕೋಟೆ ಸುತ್ತಲೂ ಆಳವಾದ ಕಂದಕಗಳು, ಎತ್ತರದ ಗೋಡೆೆಗಳು, ಬುರುಜುಗಳಿದ್ದವು. ಅರ್ಧ ವರ್ತುಲಾಕಾರದ ಅಗಸೆ ಬಾಗಿಲಿತ್ತು. ಕೋಟೆಯೊಳಗೆ ಎರಡು ಆಳವಾದ ಬಾವಿಗಳಿದ್ದವು. ಬಾವಿಗಳಿಗೆ ಇಳಿಯಲು ಚಕ್ರಾಕಾರದ ಮೆಟ್ಟಿಲುಗಳಿದ್ದವು. ಆ ಮೆಟ್ಟಿಲಿಳಿದು ಅಲ್ಲಿ ಬೆತ್ತಲೆಯಾಗಿ ಸ್ನಾನ ಮಾಡಿದರೂ ಮೇಲಿಂದ ಯಾರಿಗೂ ಕಾಣುವಂತಿರಲಿಲ್ಲ. ಬಹುಶಃ ರಾಣಿಯ ಸ್ನಾನದ ಬಾವಿ ಅದಾಗಿರಬೇಕು. ಅಲ್ಲೊಂದು ಪೂಜಾ ಮಂದಿರ. ಅದು ಪುಟ್ಟ ದೇವಾಲಯವೇ ಆಗಿತ್ತು. ಅದೊಂದು ಶ್ರೀಮಂತ ರಾಜನ ಕೋಟೆಯೆಂಬುದು ನಮಗೆ ಖಾತ್ರಿಯಾಯಿತು. ನಾವು ಕೋಟೆಯ ಇಂಚಿಂಚನ್ನೂ ಬಿಡದೆ ಕಣ್ತುಂಬಿಕೊಂಡೆವು. ಆದರೆ ನಿಧಿ ಎಲ್ಲಿದೆ ಎನ್ನುವುದನ್ನು ಗುರುತಿಸುವುದು ಕಷ್ಟವಾಯಿತು. ಏಕೆಂದರೆ ಧನ ಧಾನ್ಯ ಸಂಗ್ರಹದ ಕೊಠಡಿಯೇನೋ ಕಂಡಿತ್ತು. ಆದರೆ ಅಂಜನ ಹಚ್ಚಿದಾಗ ಕಂಡ ವಜ್ರ, ವೈಢೂರ್ಯಗಳು ಇರುವ ಜಾಗ ಪತ್ತೆಯಾಗಿರಲಿಲ್ಲ. ಅದಕ್ಕಾಗಿಯೇ ಬಂದ ಮೇಲೆ ಹುಡುಕದಿರಲಾದೀತೆ? ಮಣಿಚ್ಚಾತ್ತನ್ ನನಗೆ ಮತ್ತೆ ಅಂಜನ ಹಾಕಿದ. ಸ್ಥಳ ಪತ್ತೆಯಾಯಿತು. ಅದು ಎಲ್ಲಿತ್ತೆಂದರೆ ರಾಜನ ಸಿಂಹಾಸನವಿದ್ದ ಜಾಗದ ಹಿಂಬದಿಯ ನೆಲಮಾಳಿಗೆಯಲ್ಲಿ. ಅದು ಬೇಕೆಂದರೆ ನಾವು ಸಿಂಹಾಸನವಿದ್ದ ಸ್ಥಳವನ್ನು ಅಗೆದು, ಅಲ್ಲಿದ್ದ ಕಲ್ಲು ಚಪ್ಪಡಿಯನ್ನು ತೆಗೆದು ಪ್ರವೇಶಿಸಬೇಕಿತ್ತು.
ಕೊನೆಗೂ ಆ ದಿನ ಬಂತು. ಮುಸ್ಸಂಜೆಯಿಂದಲೇ ಕಾರ್ಯಾಚರಣೆ ಶುರುವಾದವು. ನನ್ನಣ್ಣ ಹೊರಗಡೆ ಕಾವಲು ಕಾಯುತ್ತಿದ್ದ. ನಾನು ಅಂಜನದ ಮೋಡಿಗೆ ಒಳಗಾಗಿದ್ದೆ. ನಾನು ಹೇಳುವ ಸಂಗತಿಗಳ ಆಧಾರದ ಮೇಲೆ ಮಣಿಚ್ಚಾತ್ತನ್ ಕೆಲಸಗಾರರಿಗೆ ನಿರ್ದೇಶಿಸುತ್ತಿದ್ದ. ಅವರು ಮೊದಲು ಕಲ್ಲುಗಳನ್ನು ಕಿತ್ತರು. ಮೊದಲು ಅಲ್ಲೊಂದು ತಾಮ್ರದ ಬಿಂದಿಗೆ ಗೋಚರಿಸಿತು. ಆದರೆ ಅದರ ಸುತ್ತ ಹಾವುಗಳಿದ್ದವು. ನಾನದನ್ನು ಹೇಳಿದೆ. ಮಣಿಚ್ಚಾತ್ತನ್ ಅದನ್ನು ತನ್ನ ಮಂತ್ರದಿಂದಲೇ ನಿವಾರಿಸಿದ. ಇದಕ್ಕೆ ತಡೆ ಹಾಕುವುದು ಎನ್ನುತ್ತಾರೆ. ಹಾವುಗಳು ಮಾಯವಾದವು. ಬಿಂದಿಗೆ ಎತ್ತಿ ಬದಿಗಿರಿಸಿ ಉತ್ಖನನ ಮುಂದುವರಿಯಿತು. ಈ ಸಲ ಗೋಚರಿಸಿದ್ದು ಚಿನ್ನದ ನಾಣ್ಯಗಳಿರುವ ಕೊಪ್ಪರಿಗೆ. ಅದನ್ನು ಎತ್ತಲು ಹೋದರೆ ಚೇಳುಗಳು ದಾಳಿಯಿಡುತ್ತಿದ್ದವು. ಮಣಿಚ್ಚಾತ್ತನ್ ಮಂತ್ರಶಕ್ತಿಗೆ ಆ ಚೇಳುಗಳನ್ನೂ ನಿವಾರಿಸುವ ಶಕ್ತಿಯಿತ್ತು. ಹರಸಾಹಸ ಪಟ್ಟು ಕೊಪ್ಪರಿಗೆಯನ್ನೂ ಎತ್ತಿದರು. ಆ ಇಬ್ಬರು ಕೆಲಸಗಾರರು ಅದೆಂಥ ದೈತ್ಯರಾಗಿದ್ದರೆಂದರೆ ನಾಣ್ಯದ ಕೊಪ್ಪರಿಗೆಯನ್ನು ಅನಾಮತ್ತಾಗಿ ಎತ್ತಿ ಮೇಲಕ್ಕೆ ತಂದುಬಿಟ್ಟರು. ನಿಮಗಿದೆಲ್ಲ ತಮಾಷೆಯೆನಿಸಬಹುದು… ತಾಮ್ರದ ಬಿಂದಿಗೆಯ ಬೆಳ್ಳಿ ನಾಣ್ಯಗಳು, ಕೊಪ್ಪರಿಗೆಯ ಚಿನ್ನದ ನಾಣ್ಯಗಳನ್ನು ಪಡೆದು ನಾವು ಹೊರಟುಬಿಡಬಹುದಿತ್ತು. ಅದನ್ನು ನಾವು ಹೇಳಿದೆವು ಕೂಡ. ಆದರೆ ದುರಾಸೆ ನೋಡಿ, ನಮ್ಮ ಮಣಿಚ್ಚಾತ್ತನ್‌ಗೆ ಅದಾವ ಮಾಯೆ ಬಡಿದಿತ್ತೋ, ಮಹಿಷಾಸುರ ಮರ್ದಿನಿ ವಿಗ್ರಹ ಎತ್ತಲೇಬೇಕೆಂಬ ಛಲ ಬಲವಾಗಿತ್ತು. ಅದನ್ನೊಂದು ಮಾಡಲು ಹೋಗಿರದಿದ್ದರೆ…. ನಾನು ಪ್ರೇತವಾಗಿ ಅಲೆಯಬೇಕಾಗಿರಲಿಲ್ಲ….ಅತಂತ್ರ ಬಾಳು ಬದುಕಬೇಕಾಗಿರಲಿಲ್ಲ.
ಮಹೇಶನ ದೇಹ ಸೇರಿಕೊಂಡಿದ್ದ ಬಾವಾಜಿ ಸುಮ್ಮನಾದ… ಅಳಲು ಶುರು ಮಾಡಿದ. ನಮಗೆಲ್ಲ ಆಗ ಮಹೇಶ ಮರೆತೇಹೋಗಿದ್ದ. ಬಾವಾಜಿಯೇ ಆವರಿಸಿಕೊಂಡಿದ್ದ. ಸುಮಾರು ಮೂವತ್ತೈದು ಜನ ಈ ಕಥೆ ಕೇಳಿಸಿಕೊಳ್ಳುತ್ತಿದ್ದೆವು. ‘ಅದು ಆಗಿಹೋದ ಕಥೆ, ಈಗ ಅತ್ತರೇನು ಬಂತು… ಮುಂದೆ ಹೇಳು’ ಎಂದು ಗುಂಪಿನಲ್ಲಿದ್ದವರೊಬ್ಬರು ಹೇಳಿದರು. ಸುಬ್ರಾಯ ಭಟ್ಟರೇ ಅವರನ್ನು ತಡೆದರು, ‘ಅಳಲು ಬಿಟ್ಟುಬಿಡಿ… ಸಮಾಧಾನ ಮಾಡಿಕೊಂಡು ಮತ್ತೆ ಹೇಳಲಿ…’ ಎಂದರು. ಬಾವಾಜಿ ಸಾವರಿಸಿಕೊಂಡ. ಕಣ್ಣೊರೆಸಿಕೊಂಡ. ನೀರು ಕೊಡಿ ಎಂದ. ‘ನಿಮಗೆಲ್ಲ ಬಾಯಾರಿಕೆಯಾಗುತ್ತಾ?’ ಎಂದರು ಭಟ್ಟರು. ‘ನಾವೂ ನಿಮ್ಮ ಹಾಗೆಯೇ. ದೇಹವೊಂದಿಲ್ಲ ಅಷ್ಟೇ. ನೀವೆಲ್ಲ ನಮಗೆ ಕಾಣುತ್ತೀರಿ. ನಾನು ಮಾತ್ರ ಯಾರಿಗೂ ಕಾಣುವುದಿಲ್ಲ. ನಮಗೆ ಎಲ್ಲೆಂದರಲ್ಲಿ ಹೋಗಲಾಗುವುದಿಲ್ಲ. ದೇವಸ್ಥಾನಗಳ ಹತ್ತಿರ ಹೋದರೆ ದ್ವಾರಪಾಲಕರು ತಡೆಯುತ್ತಾರೆ, ಕೆಲವು ಮಂತ್ರಗಳು ಕಿವಿಗೆ ಬಿದ್ದರೆ ನಮಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಅದು ನಿಮ್ಮ ಬೆತ್ತದ ಉರಿಗಿಂತ ಜೋರಾಗಿರುತ್ತದೆ… ನಮಗೂ ಹಸಿವಾಗುತ್ತದೆ. ಕಲ್ಲುಗಳನ್ನು, ನೋಟುಗಳನ್ನು, ಮರಗಳನ್ನು, ಮರಳನ್ನು ನುಂಗಿ ಸುಧಾರಿಸಿಕೊಳ್ಳುತ್ತೇವೆ. ಹಾಗೇ ನೀರೂ ಬೇಕಾಗುತ್ತದೆ, ಕೊಡಿ…’ ಎಂದ.
ನೀರು – ಅದೂ ಎಷ್ಟು ?ಒಂದು ಕೊಡ – ಕುಡಿದಾದ ಮೇಲೆ ಕಥೆಯತ್ತ ಆತ ಮತ್ತೆ ಹೊರಳಿದ.
ಮಹಿಷಾಸುರ ಮರ್ದಿನಿ ವಿಗ್ರಹ ಇನ್ನೂ ಗೋಚರಿಸಿರಲಿಲ್ಲ. ಅಗೆಯುತ್ತ ಹೋದಾಗ ಪ್ರಖರವಾದ ಬೆಳಕಿನ ಕಿರಣಗಳು ಬಂದವು. ಅದೇನು ನೋಡೆಂದು ಮಣಿಚ್ಚಾತ್ತನ್ ನನಗೆ ಹೇಳಿದ. ಅದು ವಜ್ರದ ಬೆಳಕಾಗಿತ್ತು. ಸಂಪೂರ್ಣ ವಜ್ರದಿಂದಲೇ ಮಾಡಿದ ಕಿರೀಟ ಅದಾಗಿತ್ತು. ಅದನ್ನು ತೆಗೆಯುವಂತೆ ಮಣಿಚ್ಚಾತ್ತನ್ ಆದೇಶಿಸಿದ. ನಾನೇ ನಿಲ್ಲಿ ಎಂದೆ. ಏಕೆಂದರೆ ಅದನ್ನು ಏಳುಹೆಡೆಯ ಸರ್ಪವೊಂದು ಕಾವಲು ಕಾಯುತ್ತಿತ್ತು. ಅದರ ನಾಲಗೆಗಳು ಭೀಕರವಾಗಿದ್ದವು. ಮಣಿಚ್ಚಾತ್ತನ್ ತಡೆ ಹಾಕುವ ಪ್ರಯೋಗ ಮೊದಲ ಬಾರಿಗೆ ವಿಫಲವಾಯಿತು. ಮರಳಿ ಯತ್ನವ ಮಾಡಿದ. ತನ್ನ ಚೀಲದಿಂದ ಅದೇನೋ ಮಗುವಿನಾಕಾರದ ವಸ್ತುವೊಂದನ್ನು ತೆಗೆದು ಬಲಿಕೊಟ್ಟು ರಕ್ತ ಚೆಲ್ಲಿದ. ಸರ್ಪ ಬೆದರಿದಂತೆ ಸರಿದು ಹೋಯಿತು. ಕಿರೀಟವನ್ನೂ ತೆಗೆದು ಕೊಪ್ಪರಿಗೆಯಲ್ಲಿಡಲಾಯಿತು. ಅದನ್ನು ತೆಗೆಯುತ್ತಿದ್ದಂತೆಯೇ ಮಹಿಷಾಸುರ ಮರ್ದಿನಿಯ ಚಿನ್ನದ ಮೂರ್ತಿ ಹೊಳೆಯಲಾರಂಭಿಸಿತು. ಆದರೆ ಅದರ ಸುತ್ತ ವಜ್ರದ ದುಂಬಿಗಳು ಹಾರಾಡುತ್ತಿದ್ದವು. ಅದನ್ನು ಹೇಳುತ್ತಿದ್ದಂತೆಯೇ ಮಣಿಚ್ಚಾತ್ತನ್ ಭಯಗೊಂಡವನಂತೆ ಕಂಡ. ‘ಅದನ್ನು ಮುಟ್ಟಬೇಡಿ’ ಎಂದು ಕೆಲಸಗಾರರಿಗೆ ಕೂಗಿದ. ಅಷ್ಟರಲ್ಲಾಗಲೇ ಹಾರೆಯ ತುದಿ ಮೂರ್ತಿಯನ್ನು ಮುಟ್ಟಿಯಾಗಿತ್ತು. ದುಂಬಿಗಳು ನಮ್ಮತ್ತಲೇ ಬರುತ್ತಿವೆ ಎಂಬುದನ್ನು ತಿಳಿಸಿದೆ. ‘ಎಲ್ಲವನ್ನೂ ಅಲ್ಲೇ ಬಿಟ್ಟು ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಓಡಿ, ಬಚಾವಾಗಿ…’ ಎಂದು ಕೂಗಿದ ಮಣಿಚ್ಚಾತ್ತನ್ ನನ್ನ ಹಣೆಗಿದ್ದ ನನ್ನ ಬೆರಳನ್ನು ಎಳೆದು ಓಡತೊಡಗಿದ. ನಾವು ಹಿಂಬಾಲಿಸಿದೆವು… ವಜ್ರದ ದುಂಬಿಗಳು ನಮ್ಮನ್ನು ಬೆನ್ನಟ್ಟಿದ್ದವು. ಕೆಲಸಗಾರರಿಬ್ಬರು ಸ್ಥಳದಲ್ಲೇ ದುಂಬಿಗಳ ದಾಳಿಗೆ ಸತ್ತಿರಬೇಕು. ಹೊರಗಿದ್ದ ನಮ್ಮಣ್ಣ ಓಡೆಂದು ಹೇಳಿದರೂ ಕೇಳದೇ ಏನೆಂದು ಕೇಳುತ್ತ ನಿಂತಿದ್ದಂತೆಯೇ ದುಂಬಿಗಳು ದಾಳಿ ಮಾಡಿದವು. ಮಣಿಚ್ಚಾತ್ತನ್ ಕೂಡ ನೋಡ ನೋಡುತ್ತಿದ್ದಂತೆಯೇ ಜಾರಿ ಬಿದ್ದವ ಮತ್ತೆ ಏಳಲಿಲ್ಲ. ನಾನು ಅವರೆಲ್ಲರಿಗಿಂತ ಸಣ್ಣವನಾಗಿದ್ದೆ. ಶಕ್ತ್ತಿವಂತನಾಗಿದ್ದೆ…ಆಗ ನನಗೆ ಇಪ್ಪತ್ತು ವರ್ಷವಷ್ಟೆ. ಸುಮಾರು ನಾಲ್ಕೈದು ಕಿಲೋಮೀಟರ್ ಓಡಿದೆ. ಕಲ್ಲು, ಮುಳ್ಳು, ಗಿಡ, ಪೊದೆ ಎಲ್ಲದರ ನಡುವೆ ಗೊತ್ತುಗುರಿಯಿಲ್ಲದೆ ಓಡಿದೆ. ಹಣೆ ಉರಿಯುತ್ತಿತ್ತು. ನಾನು ಬೆರಳನ್ನು ಇಟ್ಟುಕೊಂಡ ಜಾಗ ತೂತಿನಂತೆ ಆಗಿತ್ತು. ಹಣೆ ಅಂಟಿಕೊಂಡಿದ್ದ ಅದನ್ನು ಜೋರಾಗಿ ಎಳೆಎದ ಪರಿಣಾಮ ನಾಮದ ಆಕಾರದಲ್ಲಿ ಹಣೆಯಲ್ಲಿ ಕುಳಿ ಬಿದ್ದಿತ್ತು. ಅದರಿಂದ ರಕ್ತ ಬರತೊಡಗಿತ್ತು. ಕಾಲುಗಳಿಗೂ ಓಡುವಾಗ ಗಾಯಗಳಾದವು. ಜೀವ ಉಳಿಸಿಕೊಳ್ಳುವ ಭರದಲ್ಲಿ ಅದಾವುದೂ ನನಗೆ ಮುಖ್ಯವಾಗಿರಲಿಲ್ಲ. ಓಡುತ್ತಲೇ ಇದ್ದೆ. ದುಂಬಿಗಳ ರಾಶಿ ಕಡಿಮೆಯಾದವು. ಆದರೂ ಎರಡು ದುಂಬಿಗಳು ಹಿಂಬಾಲಿಸಿದ್ದವು. ಅವು ಹೋದವೆಂದು ಭಾಸವಾದಾಗ ಸುಸ್ತಾಗಿ ನಿಂತೆ. ಅಂಬೆಗಾರ ಕಾಡಿನ ತೊರೆಯೊಂದರ ಬಳಿ ನೀರು ಕುಡಿಯಲು ಬಗ್ಗಿದೆ. ಅಷ್ಟೇ… ಆ ದುಂಬಿಗಳು ಅದೆಲ್ಲಿದ್ದವೋ … ಒಮ್ಮೆಲೇ ದಾಳಿ ಮಾಡಿದವು…ನಾನು ಅಕಾಲದಲ್ಲಿ ಜೀವ ಕಳೆದುಕೊಂಡೆ. ಆ ಕಾಡಿನ ಪ್ರೇತವಾಗಿ ಹೋದೆ…
‘ವಜ್ರದ ದುಂಬಿಗಳು ಅಷ್ಟು ಬಲಶಾಲಿಗಳಾ? ಅವುಗಳಿಗೆ ತಡೆ ಹಾಕಲಾಗಲಿಲ್ಲವಾ ನಿಮ್ಮ ಮಂತ್ರವಾದಿಗೆ?’ ಭಟ್ಟರು ಕೇಳಿದರು.
‘ಮಣಿಚ್ಚಾತ್ತನ್ ಈ ಕುರಿತು ಮೊದಲೇ ಹೇಳಿದ್ದ. ವಜ್ರದ ದುಂಬಿಗಳು ಬಂದವೆಂದರೆ ವಿಷ್ಣುವೇ ಬಂದ ಹಾಗೆ. ಅವುಗಳ ಎದುರು ನಮ್ಮ ಆಟ ನಡೆಯುವುದಿಲ್ಲ. ಆಗ ಓಡಿ ಬಚಾವಾಗುವುದೊಂದೇ ದಾರಿ. ಅವು ಕಾಣುತ್ತವೋ ಗಮನಿಸುತ್ತಿರು. ಕಂಡ ತಕ್ಷಣ ನಾವು ಅಲ್ಲಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ ಎಂದಿದ್ದ. ಪಾಪ, ಕೆಲಸಗಾರರು ಕಾರಣವಿಲ್ಲದೆ ಸತ್ತರು. ಅವರೆಲ್ಲ ಎಲ್ಲೆಲ್ಲಿ ಪ್ರೇತಗಳಾಗಿ ನನ್ನ ಹಾಗೆ ಅಲೆಯುತ್ತಿರುವರೋ ಏನೋ….
ಬಾವಾಜಿ ಕ್ಷಣಕಾಲ ಸುಮ್ಮನಾದ. ಹಾವು, ಚೇಳು, ಏಳುಹೆಡೆ ಸರ್ಪ, ವಜ್ರದ ದುಂಬಿಗಳೆಲ್ಲ ಕೆಲಸಗಾರರಿಗೆ ಕಾಣುತ್ತಿರಲಿಲ್ಲ. ಅವು ಇರುವುದು ನನಗೆ ಮಾತ್ರ ತಿಳಿಯುತ್ತಿತ್ತು. ಅಂಜನ ಇಲ್ಲದಿದ್ದರೆ ತಾಮ್ರದ ಬಿಂದಿಗೆ ಸಿಕ್ಕಾಗಲೇ ಹಾವುಗಳು ನಮ್ಮನ್ನು ಸಾಯಿಸಿಬಿಡುತ್ತಿದ್ದವು…
ಬಾವಾಜಿ ಭಟ್ಟರ ಕಡೆಗೆ ನೋಡಿದ. ‘ಇದು ನನ್ನ ಕಥೆ. ಈಗ ಹೇಳಿ ಇನ್ನೂ ಎಷ್ಟು ದಿನ ನಾನು ಹೀಗೆ ಅಲೆಯಬೇಕು? ನನಗೆ ಮುಕ್ತಿ ಯಾವಾಗ?’ ಎಂದ.
ಭಟ್ಟರು ಮುಗುಳ್ನಕ್ಕರು…‘ಇಷ್ಟುದಿನ ಪ್ರೇತವಾಗಿ ಅಲೆದವನು ನೀನಲ್ಲ, ನಿನ್ನೊಳಗಿನ ನಿಧಿಯ ಆಸೆ. ಅದಿಲ್ಲವಾದರೆ ನೀನು ಇದ್ದಷ್ಟು ದಿನ ನೆಮ್ಮದಿಯಿಂದ ಬದುಕುತ್ತಿದ್ದೆ. ಪಾಲಿಗೆ ಬಂದ ಪಂಚಾಮೃತ ಬಿಟ್ಟು ಆಸೆಯ ದಾಸನಾದೆ….ಅದಕ್ಕೀಗ ಪ್ರಾಯಶ್ಚಿತ್ತವನ್ನೂ ಅನುಭವಿಸಿದ್ದೀಯೆ…ಈಗ ನಿನ್ನೊಳಗೆ ಮುಕ್ತಿಯೊಂದನ್ನುಳಿದು ಬೇರೆ ಆಸೆಗಳಿಲ್ಲ…ಹೀಗಾಗಿ ಮುಕ್ತಿ ಕೊಡಬಹುದು. ಅದಕ್ಕೆ ವ್ಯವಸ್ಥೆ ಮಾಡುತ್ತೇನೆ. ಈಗ ಇವನನ್ನು ಬಿಟ್ಟು ಹೊರಡು. ಮುಕ್ತಿ ಸಿಗದಿದ್ದರೆ ಮತ್ತೆ ಬಾ’ ಅಂದರು.
ಬಾವಾಜಿ ಭಟ್ಟರ ಕಾಲಿಗೆ ಬಿದ್ದ. ಮತ್ತೆ ಮೊದಲಿನಂತೆ ಮಲಗಿದ. ಕಣ್ಣೊರೆಸಿಕೊಳ್ಳುತ್ತ, ನಿದ್ದೆಯಿಂದೆದ್ದಂತೆ ಮಹೇಶ ಎದ್ದು ಕುಳಿತು ಸುತ್ತಲೂ ನೋಡಿದ. ಆತನ ಮೈ ಕಂಪಿಸುತ್ತಿತ್ತು. ಭಾರವಾದುದನ್ನೇನೋ ಮೈಯಿಂದ ಕಳಕೊಂಡಂತೆ ಅವನಿಗೆ ಭಾಸವಾಯಿತಂತೆ. ಏನಾಗಿತ್ತು ತನಗೆ ಎಂದು ಕೇಳಿದ. ‘ಏನೂ ಇಲ್ಲ. ಆ ಮೇಲೆ ಹೇಳುತ್ತೇನೆ, ಮೊದಲು ಸ್ನಾನ ಮಾಡಿ ದೇವರಿಗೆ ತುಪ್ಪದ ದೀಪ ಹಚ್ಚಿ ಬಾ’ ಎಂದ ಭಟ್ಟರು ಧ್ಯಾನಸ್ಥರಾದರು…

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನದಲ್ಲಿ ಉಸಿರಾಟ ಸ್ಥಗಿತವಾಗಿದ್ದ ಮಗುವಿಗೆ ಮರುಜೀವ ನೀಡಿದ ವೈದ್ಯ, ಐಎಎಸ್ ಅಧಿಕಾರಿ!

newsics.com ನವದೆಹಲಿ: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ವಿಮಾನದಲ್ಲಿದ್ದ ಐಎಎಸ್ ಅಧಿಕಾರಿ ಹಾಗೂ ವೈದ್ಯರೊಬ್ಬರು ಚಿಕಿತ್ಸೆ...

ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಅ.1 ರಿಂದ ಜಾರಿ!

newsics.com ಬೆಂಗಳೂರು: ಐದು ವರ್ಷಗಳ ಬಳಿಕ ರಾಜ್ಯದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲಾಗಿದೆ. ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಭಾನುವಾರದಿಂದ (ಅ.1) ಜಾರಿಯಾಗಿದೆ. ಹೊಸ ದರಗಳ ಪ್ರಕಾರ ದಸ್ತಾವೇಜುಗಳ ನೋಂದಣಿಗೆ ನೋಂದಣಿ ಮತ್ತು ಮುದ್ರಾಂಕ...

ವಿದ್ಯುತ್ ಲೈನ್ ತಗುಲಿ 5 ಜಾನುವಾರು ಸ್ಥಳದಲ್ಲಿಯೇ ಸಾವು

newsics.com ಕೊಡಗು: ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. ಮತ್ತೂರು ಗ್ರಾಮದ ಅಲೇಮಾಡ ನಾಣಯ್ಯ ಅವರು ಶ್ರೀನಿವಾಸ್ ಎಂಬುವರ...
- Advertisement -
error: Content is protected !!