Thursday, December 2, 2021

ಧನಾತ್ಮಕ ಭಾವ ಮೂಡಿಸುವ ಇಳಾ

Follow Us

♦ ಚಂದ್ರು ಪಿ. ಹಾಸನ್
response@134.209.153.225
newsics.com@gmail.com

ಕಲ ಸದ್ಗುಣಗಳನ್ನು ತನ್ನಲ್ಲಿ ತುಂಬಿಕೊಂಡಿರುವ ಭೂಮಿಯಂತೆ, ಒಂದು ಹೆಣ್ಣಿನ ಕಥೆ ಇಳಾ. ತನ್ನ ತಂದೆಯ ಸಾವಿನಿಂದ ಕೃಷಿ ಜಗತ್ತಿಗೆ ತಿಳಿಯಬೇಕಾದ ಇಳಾ ತಂದೆಯನ್ನು ದೂಷಿಸದೆ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದು ಹಳ್ಳಿಗೇ ಮಾದರಿಯಾದ ಆ ಹೆಣ್ಣಿನ ಕಥೆಯಲ್ಲಿ ಇರುವ ಪಾತ್ರಗಳಲ್ಲಿ ಐದು ಪಾತ್ರಗಳು ನನಗೆ ಅಚ್ಚುಮೆಚ್ಚಾದವು.
ಪ್ರಾರಂಭದಲ್ಲಿ ಬರುವ ವಿಸ್ಮಯ್ ನ ಪಾತ್ರವೂ ಒಂದು ವಿಶೇಷತೆಯನ್ನು ಹೊಂದಿದೆ. ತನ್ನ ವಿಧವೆ ತಾಯಿಯನ್ನು ಮದುವೆಯಾಗಿ ಜೀವನ ಕೊಟ್ಟ ತಂದೆಯ ಪೂರ್ಣ ಪ್ರಮಾಣದ ಪ್ರೀತಿಯಿಂದ ವಂಚಿತನಾಗಿ, ತಾಯಿಯ ಪ್ರೀತಿಯ ನೇರವಾಗಿ ಸಿಗದೆ, ತನ್ನ ತಮ್ಮ ತಂಗಿಯರ ಪ್ರೀತಿಯ ಸವಿಯದೇ ನೊಂದ ಮನಸ್ಸಿನ ಹುಡುಗ ವಿಸ್ಮಯ್. ತನ್ನ ಹಿಂದಿನ ಜೀವನವನ್ನು ಧನಾತ್ಮಕವಾಗಿ ಚಿಂತಿಸಿ ತನ್ನ ಜೀವನ ಕಟ್ಟಿಕೊಂಡು, ನಾಯಕಿಗೆ ಹಿರಿಮೆಯನ್ನು ತಂದುಕೊಟ್ಟು ಅವಳನ್ನು ಪ್ರೀತಿಸಿ, ಆರಾಧಿಸಿ ಆಕೆಯ ಬಾಳಿಗೆ ಆಸರೆಯಾಗುವಂಥದ್ದನ್ನು ಲೇಖಕರು ಬಹಳ ಮಾಧುರ್ಯ ಭಾವದ ಅಕ್ಷರಗಳೊಂದಿಗೆ ರಚಿಸಿದ್ದಾರೆ
ಇನ್ನೂ ನಾಯಕಿಯ ತಾಯಿ, ತನ್ನ ಗಂಡನನ್ನು ಕಳೆದುಕೊಂಡು ಜೀವನದಲ್ಲಿ ಯಾವ ಭಾಗದಲ್ಲೂ ನೆಮ್ಮದಿಯನ್ನು ಕಾಣದವಳು ನೀಲ. ಮಗಳ ಯಶಸ್ಸಿನಿಂದ, ಆಕೆಯ ನೆಮ್ಮದಿಯಿಂದ ತಾನು ತೃಪ್ತಿಯನ್ನು ತಂದುಕೊಂಡು ಮಗಳ ಆಸೆಯಂತೆಯೇ, ಪ್ರತಿಯೊಂದರಲ್ಲಿ ಅವಳಿಗೆ ಆಸರೆಯಾಗಿ ನಿಂತುಕೊಳ್ಳುವ ಸನ್ನಿವೇಶಗಳನ್ನು ಸುಪ್ರಿಯವಾಗಿ ಲೇಖಕರು ಚಿತ್ರಿಸಿದ್ದಾರೆ
ಇಳಾಳ ಅಜ್ಜಿ ಅಂದರೆ ನೀಲಳ ದೊಡ್ಡಮ್ಮ ಅಂಬುಜಮ್ಮ. ತನ್ನ ಭಾವನಿಂದಲೇ, ಆಸ್ತಿಯಿಂದ ವಂಚಿತಳಾಗಿ ಬದುಕುತ್ತಿದ್ದರು. ತ್ಯಾಗಮಯಿ ಆ ವಂಚಕರಿಗೆ ಶಾಪ ಹಾಕದೆ ಜೀವನವನ್ನು ಸಾಗಿಸುತ್ತಾಳೆ. ಭಾವನ ಮಗ ತನ್ನ ಮನೆಯ ಬಾಗಿಲಿಗೆ ಬಂದಾಗ , ವಂಚಕನ ಮಗ ಎಂದಾದರೂ ಅವನ ಔದಾರ್ಯ ಗುಣಗಳಿಗೆ ಕ್ಷಮಿಸಿ ಎಲ್ಲವನ್ನು ಮರೆತು, ಅವನಿಗೆ ನಾಯಕಿಯನ್ನು ಕೊಟ್ಟು ಮದುವೆ ಮಾಡಿ ಅವನ ಜೀವನದ ಶ್ರೇಯೋಭಿಲಾಷಿಯಾಗುವ ಯೋಚನೆ ಮಾಡುತ್ತಾಳೆ. ಈಕೆಯ ಪಾತ್ರದಲ್ಲಿ ಧನಾತ್ಮಕ ಚಿಂತನೆಯನ್ನು ಮೈಗೂಡಿಸಿ ಸ್ತ್ರೀಪಾತ್ರದ ಹಿರಿಮೆಯನ್ನು ದುಪ್ಪಟ್ಟು ಮಾಡುವ ಪ್ರಯತ್ನವೂ ಶ್ಲಾಘನೀಯ!
ಇನ್ನು ಕಥೆಯ ಕೊನೆಯ ಭಾಗದಲ್ಲಿ ಬರುವ ನಿವಾಸ್ ನ ಪಾತ್ರ ಮನಮುಟ್ಟುವಂತಿದೆ. ತನ್ನ ತಂದೆಯಿಂದ, ಅಂಬುಜಮ್ಮ ಕಳೆದುಕೊಂಡ ಎಲ್ಲಾ ಆಸ್ತಿಯನ್ನು ಹಣದ ರೂಪದಲ್ಲಿ ಸಿಗುವಂತೆ ಮಾಡಿ ಚಿಕ್ಕಮ್ಮಳ ಕ್ಷಮೆಗೆ ಯೋಗ್ಯ ಅನಿಸಿಕೊಳ್ಳುವುದರ ಜತೆಗೆ, ನಾಯಕಿಯನ್ನು ಪ್ರೀತಿಸಿ ಮದುವೆಯಾಗಲು ಬಯಸುತ್ತಾನೆ. ಇಳಾ ತನ್ನ ಹಾಗೂ ವಿಸ್ಮಯ್ ನೊಂದಿಗಿನ ಪ್ರೇಮದ ಬಗ್ಗೆ ತಿಳಿಸಿದಾಗ ಚಿಗುರಿದ ಪ್ರೀತಿಯನ್ನು ಅಲ್ಲೇ ನಿಲ್ಲಿಸಿ ಸ್ನೇಹಿತೆ ಇಳಾಳ ಆಸೆಯನ್ನು ಮನೆಯವರಿಗೂ ತಿಳಿಸಿ ಅವರಿಬ್ಬರ ಪ್ರೀತಿಗೆ ಸೇತುವೆಯಾದ ಮಾರ್ಗದರ್ಶಕ ತ್ಯಾಗ ಜೀವಿಯ ಪಾತ್ರವನ್ನು ಬಲು ಅಚ್ಚುಕಟ್ಟಾಗಿ ತಿಳಿಸಿದ್ದಾರೆ
ಕಥಾ ನಾಯಕಿಯು ಎಲ್ಲ ಹೆಣ್ಣಿನಂತೆಯೇ ಆಸೆ-ಆಕಾಂಕ್ಷೆಗಳನ್ನು ಇಟ್ಟುಕೊಂಡು ಬೆಳೆದವಳು. ಆದರೆ ಓದಿದರೂ, ಹಳ್ಳಿಯಲ್ಲಿ ಮಾದರಿ ರೈತೆಯಾಗಿ ಜೀವನವನ್ನು ಧೈರ್ಯವಾಗಿ ಹೆದರಿಸುವುದು ಹಾಗೂ ತನ್ನ ಏಳಿಗೆಗೆ ಕಾರಣವಾದ ವಿಸ್ಮಯ್ ಕಥೆ ಕೇಳಿ ನೊಂದ ಜೀವದ ಪ್ರೀತಿಗೆ ಬೀಳುವ ಸನ್ನಿವೇಶಗಳು ಹಾಗೂ ತನ್ನ ಅಜ್ಜಿಯ ಕ್ಷಮಾಗುಣವನ್ನು ನೋಡಿ ಹೆಮ್ಮೆಪಡುವಂಥದ್ದು , ಅಲ್ಲದೆ ತನ್ನ ಜೀವನದ ಬಗ್ಗೆ ಚಿಂತಿಸುತ್ತಾ ತನ್ನ ತಂದೆಯ ಸಾವನ್ನು ಧನಾತ್ಮಕವಾಗಿ ತೆಗೆದುಕೊಂಡು ಯಾರನ್ನೂ ದೂಷಿಸದೆ ಇರುವಂತಹ ಗುಣಗಳನ್ನು ಹೊಂದಿರುವ ಸಹನಾಮೂರ್ತಿ ತ್ಯಾಗಮಯಿ ಗುಣಗಾನ ತುಂಬಾ ಮಾದುರ್ಯ ತುಂಬಿದೆ. ಅಲ್ಲದೆ ತನ್ನ ನೈಜ ಪ್ರೇಮಿಯನ್ನು ಬಿಟ್ಟುಕೊಡದೆ, ತಾಯಿ , ಅಜ್ಜಿಯನ್ನು ನೋಯಿಸದೆ ಸಕಾರಾತ್ಮಕತೆಯಿಂದ ಆಡಂಬರವಿಲ್ಲದೆ ಮದುವೆಯಾದ ಸನ್ನಿವೇಶದ ಚಿತ್ರಣ ತುಂಬಾ ಹೃದಯಸ್ಪರ್ಶಿಯಾಗಿದೆ.
ತನ್ನ ಹಿಂದಿನ ಜೀವನವನ್ನು ಮರೆತು ಧನಾತ್ಮಕ ಚಿಂತನೆಗಳ ಮೂಲಕ ಸಹೃದಯಿ ಎನಿಸಿಕೊಳ್ಳುವ ಪ್ರತಿಯೊಬ್ಬರೂ ಪರಸ್ಪರ ಗೌರವ, ಪರಸ್ಪರ ಹೊಂದಾಣಿಕೆಯಾ ಚಿತ್ರಣವನ್ನು ಚಿತ್ರಿಸಿ ಪ್ರಸ್ತುತ ಸಮಾಜಕ್ಕೆ ಒಬ್ಬ ಹೆಣ್ಣುಮಗಳು ರೈತೆಯಾಗಿ ಪ್ರಶಸ್ತಿಯನ್ನು ಪಡೆದುಕೊಳ್ಳುವ ಮಟ್ಟಿಗೆ ಬೆಳೆಯುತ್ತಾಳೆ ಮತ್ತು ರೈತ ವೃತ್ತಿ ಕೂಡ ಯೋಗ್ಯವಾದದ್ದು ಎಂಬುದನ್ನು ಪರಿಚಯಿಸಲು ಲೇಖಕರು ಉಪಯೋಗಿಸಿರುವ ಪದಗಳು, ಆ ಮಾಧುರ್ಯ ತುಂಬಿದ ಅಕ್ಷರಗಳು ಓದುಗರಿಗೆ ಓದಲು ಆಸಕ್ತಿಯನ್ನು ಮೂಡಿಸುತ್ತದೆ.

ಕಾದಂಬರಿ: ಇಳಾ
ಲೇಖಕರು: ಶೈಲಜ ಹಾಸನ

=======
(‘ಇಳಾ’ ಕಾದಂಬರಿಯ ಆಯ್ದ ಭಾಗ)
♦ ಶೈಲಜ ಹಾಸನ

ಟ್ಟಣಕ್ಕೆ ಹೋಗುವೆನೆಂದು ಕುಣಿಯುತ್ತಿರುವ ತಮ್ಮ ಕುಮಾರ ಕಂಠೀರವ ತಂಗಿಯನ್ನು ನೋಡಿಯಾದರೂ ಬದಲಾಗಲಿ, ಅವಳ ಸಾಧನೆ ಅವನಿಗೆ ಸ್ಫೂರ್ತಿಯಾದೀತೆಂದು ನಿರೀಕ್ಷಿಸಿದ್ದರು ಸುಂದರೇಶ್. ಗಂಡು ಮಗನಾದ ತಮ್ಮ ಮಗನೇ ಕೃಷಿಯಲ್ಲಿ ಆಸಕ್ತಿ ತೋರುತ್ತಿಲ. ತೋಟವೆಂದರೆ…. ತೋಟದ ಕೆಲಸವೆಂದರೆ ಅಸಡ್ಡೆ. ತಾವೇ ಎಲ್ಲವನ್ನು ಹೇಳಿ ಹೇಳಿ ಮಾಡಿಸಬೇಕಿತ್ತು. ಒಂದು ವೇಳೆ ತಾವು ಏನೂ ಹೇಳದಿದ್ದರೆ ಸ್ವಂತ ಬುದ್ಧಿಯಿಂದ ಯಾವ ಕೆಲಸಕ್ಕೂ ಕೈಹಾಕದೆ ಸುಮ್ಮನಿದ್ದುಬಿಡುತ್ತಿದ್ದ ಸುಪುತ್ರನ ಬಗ್ಗೆ ಸುಂದರೇಶರಿಗೆ ಸದಾ ಅಸಮಾಧಾನವೇ. ಇರುವ ಒಬ್ಬ ಮಗ ಆಸ್ತಿಯನ್ನು ನೋಡಿಕೊಳ್ಳದಿದ್ದರೆ ಮತ್ಯಾರು ನೋಡಿಕೊಂಡಾರು? ಹೋಗಲಿ ವಿದ್ಯೆಯಾದರೂ ಚೆನ್ನಾಗಿ ಹತ್ತಿ ಒಂದು ನೌಕರಿ ಸಂಪಾದಿಸುವಷ್ಟು ಬುದ್ಧಿವಂತನಾದನೇ ಅಂದ್ರೆ ಅದೂ ಇಲ್ಲ. ಪಿಯುಸಿಗೆ ಮುಗ್ಗರಿಸಿ ಮನೆ ಸೇರಿದ್ದ.
ಇವನ ಓದಿಗೆ ಅದಾವ ಕೆಲಸ ಸಿಕ್ಕೀತು? ಸ್ವಂತ ಬಂಡವಾಳ ಹೂಡಿ ಗೆಲ್ಲುವಷ್ಟು ಚಾಣಕ್ಷತನವೂ ಇಲ್ಲ, ಇರುವ ಆಸ್ತಿ ನೋಡಿಕೊಳ್ಳುವ ಮನಸ್ಸು ಇಲ್ಲ. ಒಟ್ಟಿನಲ್ಲಿ ದೊಡ್ಡ ತಲೆನೋವಾಗಿದ್ದ. ತನಗೊಬ್ಬನಿಗೆ ಬೇಕಾಗಿದೆ ಆ ಆಸ್ತಿ! ಎಲ್ಲರ ಮನೆಗಳ ಪರಿಸ್ಥಿತಿಯೂ ಹೆಚ್ಚು ಕಡಿಮೆ ಹೀಗೆಯೇ ಇರುವಾಗ ಇಳಾ ಒಬ್ಬಳು ತೋಟದ ಬಗ್ಗೆ, ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದು ಅಚ್ಚರಿ ಹುಟ್ಟಿಸುವಂತಿತ್ತು. ಅಪ್ಪನನ್ನು ಕಳೆದುಕೊಂಡ ದುಃಖದಲ್ಲಿ ಹುಚ್ಚು ಅವೇಶ ಬಂದಿರಬೇಕು. ವ್ಯವಸಾಯದ ಕಷ್ಟ ಸುಖ ಗೂತ್ತಾದರೆ ಮೈಸೂರಿಗೆ ಓಡುತ್ತಾಳೆ ಎಂದೇ ಭಾವಿಸಿದ್ದರು. ಅವಳ ಕೆಲಸಗಳೆಲ್ಲವೂ ಹುಚ್ಚಾಟಗಳೆಂದೇ ತೋರುತ್ತಿತ್ತು.
ಅಮ್ಮನ ಹಾಲು ಕುಡಿದ ತೇವವೇ ಆರಿಲ್ಲ. ತೋಟವನ್ನೇನು ಮಾಡಿಸುತ್ತಾಳೆ ಎಂದೇ ಉಡಾಫೆ ತೋರಿದ್ದರು. ದುಡ್ಡನ್ನೆಲ್ಲ ಹುಡಿ ಮಾಡಿಬಿಡುತ್ತಾಳೋ, ಅಪ್ಪನಂತೆ ಮತ್ತೆ ಸಾಲದಲ್ಲಿ ಮುಳುಗಿ ಹೋಗುವಂತೆ ಮಾಡಿಬಿಡುತ್ತಾಳೋ ಎಂಬ ಆತಂಕದಿಂದಲೇ ನೋಡುತ್ತಿದ್ದರು. ಏನಾದರೂ ಹೇಳಿದರೆ ತಂದೆ ಇಲ್ಲದ ಮಗು ಎಲ್ಲಿ ನೊಂದುಕೊಳ್ಳುತ್ತದೊ ಎಂದು ನಿಯಂತ್ರಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಅಪ್ಪನಂತಲ್ಲ ಮಗಳು– ಬುದ್ಧಿವಂತೆ, ಮೌನವಾಗಿಯೇ ಸಾಧಿಸುತ್ತಾಳೇನೋ ಎನಿಸಿದರೂ, ವ್ಯವಸಾಯ ನಂಬಿಕೊಂಡು ಕಷ್ಟ ಪಡುತ್ತಿರುವವರನ್ನು ಕಂಡಾಗ, ಹಾಲುಗಲ್ಲದ ಹುಡುಗಿ ಓದಿಕೊಂಡು ಇರುವುದು ಬಿಟ್ಟು ಇದೇನು ಮಾಡುತ್ತಾಳೋ ಎಂದು ಅಪನಂಬಿಕೆಯಿಂದ ಇರುವಾಗ ಇದೇನು ಸಾಹಸ ಮಾಡಿ ಬಿಟ್ಟಳು. ಅಷ್ಟೊಂದು ಧೈರ್ಯ. ಮುನ್ನುಗ್ಗುವ ಎದೆಗಾರಿಕೆ, ಕೆಲಸಗಳಿಗೆ ಅಂಜದೆ, ಹಿಡಿದದ್ದನ್ನು ಸಾಧಿಸುವ ಛಲ ತೋರಿಸಿ ಗೆದ್ದೇಬಿಟ್ಟಳು. ಮನೆಯ ಹೆಸರನ್ನು ಎತ್ತರಕ್ಕೇರಿಸಿಬಿಟ್ಟಿಳು. ಭಾಷಣದಲ್ಲಿಯೂ ತಮ್ಮನ ಮಗಳನ್ನು ಕೊಂಡಾಡಿದರು. ಹುಟ್ಟಿದರೆ ಇಂತಹ ಮಕ್ಕಳು ಹುಟ್ಟಬೇಕು. ಇಲ್ಲದಿದ್ದರೆ ಮಕ್ಕಳೇ ಬೇಡ ಎಂದು ಮಗನ ಮೇಲಿದ್ದ ಅಸಹಾಯಕತೆಯನ್ನು ಕಕ್ಕಿದರು.
ಒಟ್ಟಿನಲ್ಲಿ ಅಪರೂಪಕ್ಕೆ ಒಂದು ಒಳ್ಳೆಯ ಕಾರ್ಯಕ್ರಮ ನಡೆದು ಎಲ್ಲರೂ ಇಳಾಳನ್ನು ಗುರ್ತಿಸುವಂತಾಯಿತು. ಈ ಸನ್ಮಾನ ಹಾಗೂ ಪ್ರಶಸ್ತಿಯಿಂದ ಇಳಾಳ ಮೇಲಿದ್ದ ಜವಾಬ್ದಾರಿ ಮತ್ತಷ್ಟು ಹೆಚ್ಚಾಯಿತು. ಮುಂದಿನ ಸಾಧನೆಗಳಿಗೆ ಸ್ಫೂರ್ತಿಯೂ ಆಯಿತು. ಕೃಷಿಗೆ ತನ್ನನ್ನು ಮೀಸಲಾಗಿಡುವ ನಿರ್ಧಾರ ಮತ್ತಷ್ಟು ಗಟ್ಟಿಯಾಯಿತು. ಹೇಗೊ ಏನೋ ಎಂಬ ಆತಂಕದ ಹೊರೆ ಕಳಚಿ ನಿರಾಳ ಭಾವ ಮೂಡಿ, ಮತ್ತಷ್ಟು ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿತು.
ಈ ಕಾರ್ಯಕ್ರಮ ಬೇಡವಾಗಿತ್ತು. ವಿಸ್ಮಯ್ ಯಾಕೀಂತ ಕಾರ್ಯಕ್ರಮ ಹಮ್ಮಿಕೊಂಡರು? ಹೇಗೊ ನಾಲ್ಕು ಜನರ ಮಧ್ಯ ಕಾಣದಂತಿರಲು ಬಯಸುತ್ತಿದ್ದ. ಆದರೆ ಕಾಣುವಂತಾಯಿತು. ಇದೆಲ್ಲ ಬೇಕಿತ್ತೆ? ತನ್ನನ್ನ ಪ್ರಶ್ನಿಸಿಕೊಂಡಳು. ವಿಸ್ಮಯ್ ಉಪಕಾರದ ಹೊರೆ ಹೊರಿಸಿದ್ದಾರೆ. ಮೊದಲು ಅಮ್ಮನಿಗೆ, ಈಗ ನನಗೆ, ಮನಸ್ಸು ಸಮಾಧಾನ ಹೊಂದಲೇ ಇಲ್ಲ. ಮನೆಗೆ ಬಂದರೂ ಅದೇ ಭಾವ ಕಾಡುತ್ತಿತ್ತು. ಅಂಬುಜಮ್ಮ ‘ಎಷ್ಟು ಜನರ ದೃಷ್ಟಿ ತಗುಲಿದೆಯೊ, ದೃಷ್ಟಿ ತೆಗಿತೀನಿ ತಾಳು’ ಅಂತ ಇಳಾಳನ್ನು ಕೂರಿಸಿ ಮೆಣಸಿನಕಾಯಿ ನಿವಾಳಿಸಿ ಒಲೆಗೆ ಎಸೆದರು. ಅದು ಚಟಪಟ ಅಂತ ಸದ್ದು ಮಾಡಿದಾಗ ‘ನೋಡಿದೆಯಾ ಎಷ್ಟೊಂದು ದೃಷ್ಟಿ ಆಗಿದೆ’ ಅಂತ ಹೇಳಿ ಸಂಭ್ರಮಿಸಿದರು. ‘ಥೂ ಏನಜ್ಜಿ ಇದೆಲ್ಲ. ನಾನೇನು ಮಗುನಾ ದೃಷ್ಟಿಯಾಗೋಕೆ…’ ರೇಗಿದಳು.
ವಿಸ್ಮಯನ ಉಪಕಾರ ಹೊರೆ ಹೆಚ್ಚಾಗುತ್ತಿದೆ ಎಂದು ಇಳಾಳಿಗೆ ಭಾಸವಾಗತೊಡಗಿತು. ತನಗಾಗಿ ಕಾರ್ಯಕ್ರಮ ಆಯೋಜಿಸುವ ಅಗತ್ಯವಿರಲಿಲ್ಲ. ಅನಾವಶ್ಶಕವಾಗಿ ಖರ್ಚು ಮಾಡುವುದೇನಿತ್ತು. ಯಾಕಾಗಿ ಹೀಗೆ ಮಾಡಿದನು. ಇದೆಲ್ಲ ತನಗೆ ಇಷ್ಟವಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಅವನಿಗೆ ತಿಳಿಸಬೇಕು. ತಾನೇನು ಪರೋಪಕಾರ ಮಾಡಿಲ್ಲ. ಬೇರೆಯವರಿಗಾಗಿ ದುಡಿದಿಲ್ಲ, ದೇಶಕ್ಕೇನಾದರೂ ಕೊಡುಗೆ ಕೊಡುವಂತಹ ಕೆಲಸ ಮಾಡಿಲ್ಲ. ಸಮಾಜ ಸೇವೆಯಂತೂ ನಾನು ಮಾಡಿಯೇ ಇಲ್ಲ. ನಾನು ಮಾಡಿರುವುದು ನನಗಾಗಿ, ನನ್ನ ನೆಮ್ಮದಿಗಾಗಿ ನಮ್ಮ ಮನೆಯ ಸಂಕಷ್ಟ ತೀರಿಸುವ ಸಲುವಾಗಿ, ಅಪ್ಪನಿಂದಾದ ಆಘಾತದಿಂದ ಹೊರ ಬಂದು ನಾನು ನಾನಾಗಿಯೇ ಬದುಕಬೇಕೆಂದು, ಒಂದು ಕಡೆ ಅವಕಾಶ ಮುಚ್ಚಿಹೋದರೆ ಮತ್ತೊಂದು ಕಡೆ ಅವಕಾಶ ಇರುತ್ತದೆ ಎಂದು ತೋರಿಸುವ ಉದ್ದೇಶದಿಂದ, ಅಪ್ಪ ಸೋತಲ್ಲಿ ತಾನು ಗೆಲ್ಲಬೇಕು ಎಂಬ ಛಲದಿಂದ ಕಷ್ಟಪಟ್ಟೆ. ದೈವದ ಸಹಾಯ ನನಗಿತ್ತು. ಮೊದಲೇ ನೊಂದಿರುವ ನಾನು ಮತ್ತಷ್ಟು ನೋಯಬಾರದೆಂಬ ಉದ್ದೇಶದಿಂದಲೇ ನನ್ನ ಮೊದಲ ಪ್ರಯತ್ನ ಯಶಸ್ವಿಯಾಗಿರಬೇಕು. ಹಾಗಾಗಿ ಕೃಷಿ ಸಾಧನೆ ಪ್ರಶಸ್ತಿ ದೊರಕಿದೆ. ಅದರಲ್ಲಿ ಏನಿದೆ ಹೆಚ್ಚುಗಾರಿಕೆ, ಆ ಸನ್ಮಾನ ಸ್ವೀಕರಿಸುವಾಗ ನಾಚಿಕೆಯಿಂದ ಕುಗ್ಗಿಹೋಗುವಂತಾಗಿತ್ತು. ಅದೆಷ್ಟು ಇರಿಸು ಮುರಿಸು ಉಂಟಾಗಿತ್ತು. ಇದೆಲ್ಲ ಬೇಕಿತ್ತೆ? ವಿಸ್ಮಯ್ ಒಳ್ಳೆ ದೃಷ್ಟಿಯಿಂದಲೇ ಮಾಡಿರಬಹುದು. ಅದಕ್ಕಾಗಿ ತಾನು ಕೃತಜ್ಞಳಾಗಿರಬೇಕಾದುದು ಧರ್ಮವೇ, ಆದರೆ ಇಂತಹುದೆಲ್ಲ ತನಗೆ ಇಷ್ಟವಾಗುವುದಿಲ್ಲ ಎಂದು ವಿಸ್ಮಯನಿಗೆ ಸ್ಪಷ್ಟಪಡಿಸಬೇಕು. ಬೆಳಗ್ಗೆ ಜಾಗಿಂಗ್‌ಗೆಂದು ಶಾಲಾ ತೋಟದಲ್ಲಿರುತ್ತಾನೆ. ಅಲ್ಲಿಗೆ ಹೋಗಿ ಮಾತನಾಡಬೇಕೆಂದು ನಿಶ್ಚಯಿಸಿಕೊಂಡಾಗಲೆ ಇಳಾಗೆ ನಿರಾಳವಾದದ್ದು.
ಬೆಳಗ್ಗೆ ಬೇಗ ಎದ್ದು, ಸ್ವೆಟರ್ ಏರಿಸಿಕೊಂಡು ಶಾಲೆಯ ತೋಟದಲ್ಲಿ ಅವನಿಗಾಗಿ ಕಾಯುತ್ತ ನಿಂತಳು. ಅಲ್ಲಿನ ಪ್ರಕೃತಿ ರಮಣೀಯವಾಗಿದ್ದರೂ ಆಸ್ವಾದಿಸುವ ಮನಸ್ಸಿರಲಿಲ್ಲ. ಎಷ್ಟು ಹೊತ್ತಾದರೂ ವಿಸ್ಮಯ್ ಕಾಣಿಸದೆ ಇದ್ದಾಗ ಅವನ ಮನೆಯತ್ತ ಹೆಜ್ಜೆ ಹಾಕಿದಳು. ಶಾಲೆಯ ಸ್ವಲ್ಪ ದೂರದಲ್ಲಿ ರೆಸಾರ್ಟಿಗೆ ಹೊಂದಿ ಕೊಂಡಂತೆ ವಿಸ್ಮಯನ ಮನೆ ಇತ್ತು. ಮನೆಯೆಂದರೆ ಅದೊಂದು ರೂಮ್ ಎಂದೇ ಹೇಳಬಹುದಿತ್ತು. ತಾತ್ಕಾಲಿಕವಾಗಿ ಕಟ್ಟಿದ ಪುಟ್ಟ ಮನೆ. ಒಂದು ರೂಮ್, ಅಡುಗೆಮನೆ, ಬಚ್ಚಲು ಇತ್ತು. ಕಟ್ಟುವಾಗ ನೋಡಿದ್ದಳಷ್ಟೆ. ಕಟ್ಟಿ ವಿಸ್ಮಯ ವಾಸ ಮಾಡಲು ಪ್ರಾರಂಭಿಸಿದ ಮೇಲೆ ಆತ್ತ ಹೋಗಿರಲೇ ಇಲ್ಲ. ದಾರಿಯಲ್ಲಿ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ಅತ್ತ ನಡೆಯುತ್ತಿದ್ದಳು. ಮನೆಯ ಹತ್ತಿರ ಬಂದರೂ ಅವನ ಸುಳಿವಿಲ್ಲ, ಮನೆಯೊಳಗೆ ಹೋಗಲು ಸಂಕೋಚವೆನಿಸಿ ವಾಪಸ್ಸು ಹೋಗಿಬಿಡಬೇಕು ಎಂದುಕೊಳ್ಳುವಷ್ಟರಲ್ಲಿ ವಿಸ್ಮಯ ಹೊರಗೆ ಕಾಣಿಸಿದ. ಇಳಾಳನ್ನು ನೋಡಿ ಅಚ್ಚರಿಪಡುತ್ತ–
‘ಆರೇ, ಇಳಾ ನೀವಿಲ್ಲಿ, ಇಷ್ಟು ದೂರ, ವಾಕಿಂಗ್ ಬಂದಿದ್ರಾ?’ ಪ್ರಶ್ನೆ ಕೇಳಿ ಅವನೇ ಉತ್ತರವನ್ನು ಹೇಳಿಬಿಟ್ಟಾಗ, ನಿಮ್ಮನ್ನೆ ಹುಡುಕಿಕೊಂಡು ಬಂದೆ ಎಂದು ಹೇಳಲಾರದೆ, ಯಾವುದೇ ಸುಳ್ಳನ್ನು ಹೇಳಲಾರದೆ ಸುಮ್ಮನೆ ನಕ್ಕಳು.

ಮತ್ತಷ್ಟು ಸುದ್ದಿಗಳು

Latest News

ಸಿಲಿಂಡರ್ ಸ್ಫೋಟಗೊಂಡು 4 ತಿಂಗಳ ಮಗು ಸಾವು

newsics.com ಮುಂಬೈ: ಸಿಲಿಂಡರ್ ಸ್ಫೋಟದಿಂದ 4 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮುಂಬೈನ ವರ್ಲಿಯಲ್ಲಿರುವ ಬಿಡಿಡಿ ಚಾಲ್‌ ನಲ್ಲಿ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ನಾಲ್ಕು ತಿಂಗಳ ಮಗುವಿಗೆ ತೀವ್ರ...

ಒಮಿಕ್ರಾನ್ ಪತ್ತೆ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ: ಡಾ. ಅಶ್ವತ್ಥ ನಾರಾಯಣ

newsics.com ಬೆಂಗಳೂರು: ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಸಚಿವ ಡಾ. ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸರಕಾರ ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದ್ದಾರೆ. ಇಬ್ಬರ ಸಂಪರ್ಕಿತರನ್ನು...

‘ಮಾನ್ಯವರ್‌’ ಬಟ್ಟೆ ಮಳಿಗೆಯಲ್ಲಿ ಅಗ್ನಿ ದುರಂತ

newsics.com ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿರುವ 'ಮಾನ್ಯವರ್‌' ಬಟ್ಟೆ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಅಗ್ನಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ 'ಮಾನ್ಯವರ್‌' ಬಟ್ಟೆ ಮಳಿಗೆಯಿದ್ದು, ಶಾರ್ಟ್‌ಸರ್ಕ್ಯೂಟ್‌ನಿಂದ...
- Advertisement -
error: Content is protected !!