Thursday, December 9, 2021

ಕಳ್ಳು ಬಳ್ಳಿ

Follow Us

‘ನಿನ್ನ ಮಕ್ಕಳಿಗೆ ಮೀಸೆ ಬಂದ್ರು ನಿನ್ನ ಹೆಂಡ್ತಿ ರೊಟ್ಟಿ ಸುಡೋದು ಕಲ್ತಿಲ್ಲ ನೋಡಪ್ಪ. ಇನ್ನು ಯಾವಾಗ ಕಲಿಬೇಕಂತ ಇದಾಳೊ ಏನೊ’ ಎಂದು ದೀಪಾಳ ಮೇಲೆ ಹುಸಿ ಮುನಿಸು ತೋರಿದ್ದು ಬೂಟಾಟಿಕೆಯೆಂದು ನಾಗಲಕ್ಷ್ಮಿಗೆ ಮನದಟ್ಟಾಗಿ ಅಡುಗೆ ಮನೆಯಲ್ಲಿ ಪಾತ್ರೆನ ಎತ್ತಿ ಕುಕ್ಕಿದ್ದು ದ್ಯಾಮವ್ವನಿಗೆ ಅರ್ಥವಾಗದೆ ಇರಲಿಲ್ಲ.
♦ ಮೋದೂರು ತೇಜ
response@134.209.153.225
newsics.com@gmail.com

ಮಾಗಿಯ ದಿನಗಳು ಮುಗಿಯುತ್ತಾ ಬಂದಿದ್ದರೂ ಚಳಿಯ ಪ್ರತಾಪ ರವೋಟಾದರು ಕಮ್ಮಿಯಾಗಿರಲಿಲ್ಲ. ಅಂತಹ ಚಳಿಯನ್ನು ಲೆಕ್ಕಿಸದೆ, ಸಂಕ್ರಾಂತಿ ಹಬ್ಬದ ನಿಮಿತ್ತ ಭೋಗಿದಿನ ಮಕ್ಕತ್ಲಲ್ಲಿ ಹಿಂದ್ಲೋರು ಮುಂದ್ಲೋರೆಲ್ಲ ದೀಪ ಹಚ್ಚುವ ಹೊತ್ತಿಗೆಲ್ಲ ಗುತ್ನಾಗಿ ಅಡುಗೆ ಮಾಡಿ, ಹೊತ್ತು ಮುಂಚೆ ಊಟ ಮಾಡಿದ ಮೇಲೆ ರಾತ್ರಿಯಿಡೀ ಸಜ್ಜೆರೊಟ್ಟಿ ಸುಡುವ ಸಡಗರಕ್ಕೆ ಊರಿಗೆ ಊರೇ ಸಜ್ಜಾಗುತ್ತಿರುವಾಗ, ದ್ಯಾಮವ್ವನ ಮನಸು ಮಾತ್ರ ಕುದುರುಬಾಟಿನಲ್ಲಿರಲಿಲ್ಲ. ಹೊತ್ತು ವಾಟುವಾಲಿದಾಗಳಿಂದ ನಿಂತಲ್ಲಿ ನಿಲ್ಲದೆ ಹುಲ್ಲನ್ನು ಸಹ ಮೇಯದೆ ಅಗಸಾಟ್ಲು ಪಡುವ ಈಲ್ಯಾದ ಎಮ್ಮೆಯ ಹೆರಿಗೆ ನೋವಿನ ಸಂಕಟ ಅರಿತು ಕಣ್ಣಾಗೆ ಬೆಳಕಿದ್ದಂಗ್ಲೆ ಎರಡೆಮ್ಮೆ ಒಂದು ಕರಾನ ಹೊಡಕೊಂಡು ಬರುವಾಗ, ಕೇರಿಯ ಕೊನೆ ಸೆರಗಿನಲ್ಲಿರುವ ನೀರಿನತೊಟ್ಟಿ ಹತ್ತಿರ ಬರುತ್ತಿದಂಗ್ಲೆ ದೊಡ್ಡಕರ ಎರಡು ತೆಪ್ಪೆ ಸಗಣಿ ಹಾಕಿದ್ದೇ ತಡ ಅದೆಲ್ಲಿ ನೋಡಿಕೊಂಡಿದ್ರೊ ಏನೊ, ಇಬ್ರು ಸಣ್ಣ ಹುಡುಗರು ವಾದಿಬೀದಿಯಲ್ಲಿ ಓಡಿ ಬಂದು ತಲಾಕೊಂದು ತೆಪ್ಪೆ ಸಗಣಿ ಬಾಚಿಕೊಂಡು ಹೋಗಿದ್ದು ಕಂಡು, ನಮ್ಮೂರಲ್ಲಿ ಸಗಣಿಗೂ ಬರ ಬಂತೇನ್ರೊ ಎಂದು ಗದರಿಕೊಳ್ಳುತ್ತಾ, ಹುಡುಗರ ಗದ್ದಲಕ್ಕೆ ಬೆದರಿದ ಎಮ್ಮೆಗಳನ್ನ ಮನೆ ಹತ್ತಿರ ಹೊಡಕೊಂಡು ಬಂದ ದ್ಯಾಮವ್ವನಿಗೆ ಅಂಗಳದಾಗಳ ಕಸ ಅಣಕಿಸುತ್ತಿತ್ತು.
ಧೂಳು ಸಂಜೆ ಹೊತ್ತಾದರೂ ಅಂಗಳದಾಗಳ ಕಸ ಗುಡಿಸ್ದಂಗೆ ಪಕ್ಕದ ಮನೆ ಗುಂಡಮ್ಮನ ಜೊತೆ ಲಲ್ಲೆ ಹೊಡಿತಾ, ಹುರಿಯಕ್ಕಿ ತೊಮಟಕ್ಕೆ ಕಡ್ಲೆಕಾಯಿ ಸುಲಿಯುವ ದ್ಯಾಮವ್ವನ ನಡುವುಲ ಮಗ ಕುಮಾರನ ಹೆಂಡ್ತಿ ನಾಗಲಕ್ಷ್ಮಿ ಹಗಲೆಲ್ಲ ದನಗಳ ಹಿಂದೆ ತಿರುಗಾಡಿ ಮನೆಗೆ ಬಂದ ಅತ್ತೆಗೆ ತಟಕ್ನೆದ್ದು ಬಂದು ಒಂದು ಚೊಂಬು ನೀರು ಕೊಡದೆ ದರ್ಕಾರಿಲ್ದವಳ ಥರ ಕಾಲು ಸಾಸ್ಕೊಂಡು ಕುಕ್ಕಂಡಿದ್ಲು. ಸೊಸೆಯ ಮೇದಾವಂತಿಕೆಯನ್ನು ಕಂಡು ಸಹಿಸಿಕೊಳ್ಳೊಕಾಗದೆ; ‘ನಿಮ್ಮನ್ಯಾರು ಮಕ್ಕುಗುಳ್ಳಿಲ್ವೆ? ಊರುಬಿಟ್ಟು ಓಡಿ ಹೋಗಿರೊ ಊಡ್ದೋಕೋರು ಕೊಂಪೆ ಆಗೈತಲ್ರೊ..’ ಅಂತೇಳಿ ಸೊಸೆ ಮೇಲಿನ ಸಿಟ್ಟನ್ನ ಮೊಮ್ಮಕ್ಕಳ ಕಡೆ ತಿರುಗಿಸಿ; ‘ಮಕ್ಕತ್ಲಾದ್ರು ಮನೆ ಮುಂದಿನ ಕಸ ಗುಡುಸ್ದಂಗೆ ಏನಂತ ನಿರ್ವಾಕ ಇಲ್ದಂಗೆ ಕೆಲಸ ಮಾಡಿದ್ರಪ್ಪ? ನಿಮಗೆ ಏಟಂದ್ರು ನಿಟ್ಟು ಪ್ರಜ್ಞೆಯಿಲ್ಲ ನೋಡು’ ಎಂದು ಬಯ್ಯುತ್ತಾ ಮನೆ ಮಗ್ಲಿಗಿರೊ ವಾರುಜಪ್ರದಡಿಯಲ್ಲಿ ಕರೆಯೊ ಎಮ್ಮೆನ ಮತ್ತು ಕರಾನ ಕಟ್ಟಿ ಹಾಕಿ, ‘ಇವುಕ್ಕೆ ತಬ್ನೋಟು ತಲೆಮೇವು ಹಾಕ್ರಂತ’ ಮೊಮ್ಮಕ್ಕಳಿಗೆ ಹೇಳಿ. ಈಯೋಕೆ ಕುತ್ತವಾಸ ಪಡ್ತಿರೊ ಎಮ್ಮೆನ ಮನೆ ಮುಂದಿನ ಬೇವಿನಮರಕ್ಕೆ ಕಟ್ಟಿ ಹಾಕಿದಳು.
ಬಿಸಿಲಿಗೆ ಬಣ್ಣ ಕಳಕೊಂಡ ರಂಗೋಲಿಗೆ ನೀರು ಚುಮುಕುರಿಸಿ ಮನೆ ಮುಂದಿನ ತೆಂಗಿನಮರದ ಬುಡದಲ್ಲಿ ಕೋಳಿಗಳು ಕೆದರಿರುವ ಶಾದ್ರೆನ ದುಂಡುಗು ಮಾಡಿ ಅಂಗಳದಾಗೆ ಹಲ್ಡಿರೊ ಕಸಾನ ಬರಬರಾಂತ ಗುಡಿಸತೊಡಗಿದಳು. ಎಮ್ಮೆಗಳಿಗೆ ತಲೆಮೇವು ಹಾಕಿದ ದ್ಯಾಮವ್ವನ ಮೊಮ್ಮಗ ಮೋಹನ, ಅಜ್ಜಿ ಹತ್ತಿರ ಬಂದು ‘ನಾನೆಲ್ಲ ಗುಡುಸ್ತೀನಿ ಕೊಡಜ್ಜಿ’ ಎಂದಾಗ ಅವನ ಕೈಗೆ ಪೊರಕೆ ಕೊಟ್ಟು ‘ನಿಮ್ಮ ದೊಡಪ್ಪನಿಗೆ ಪೋನ್ ಮಾಡಿದ್ರೆನೊ?’ ಎಂದು ಆಪ್ತವಾಗಿ ಕೇಳಿದಳು. ‘ಕಟ್ಟಿಗೆ ಸಿಗೆವೊಯ್ಯುವಾಗ ಅಪ್ಪಯ್ಯ ಮಾಡಿದ್ದ. ಕೈಮರದ ಹತ್ರ ಬತ್ತಾ ಇದಿವಂತ ದೊಡಪ್ಪ ಹೇಳ್ತು. ಇನ್ನೇನು ಸ್ವಲ್ಪ ಹೊತ್ತಿಗೆ ಬರಬೌದೆಂದು’ ಹೇಳಿ ಮೂಗಿನ್ಯಾಗ ಇಳಿತಿದ್ದ ಗೊಣ್ಣೆನ ಮಗ್ಲಿಗೆ ಮೀಸೆತರ ತೀಡಿಕೊಂಡು ಕಸ ಗುಡಿಸತೊಡಗಿದ.
ಬಹಳ ದಿನಗಳ ನಂತರ ದೊಡ್ಡಮಗನ ಪರಿವಾರ ಬರ್ತಿರೊ ಕುಸಿಯ ಹಸಿ ದ್ಯಾಮವ್ವನ ಕೋಪದ ನೆತ್ತಿಯನ್ನು ತಣ್ಣಗೆ ಮಾಡಿತ್ತು. ಲಗುಬಗೆಯಿಂದ ಓಡಾಡುತ್ತಾ ನೀರೊಲೆಗೆ ಉರಿಹಾಕಿ ಪಾತ್ರೆ ತೊಳಿತಿರೊವಾಗ, ಹೊಟ್ಯಾಗಳ ಕರುನ ಹೊರ ಹಾಕಲು ಹರಸಾಹಸಪಡುವ ಎಮ್ಮೆಯನ್ನು ನೋಡಿದ ಪಕ್ಕದ ಮನೆ ಗುಂಡಮ್ಮನ ಗಂಡ ತಿಮ್ಮಣ್ಣ; ‘ಇದೇನಕ್ಕ. ನಿನ್ನ ಎರಡ್ನೆ ಮಗಳು ಈಟೊಂದು ಹೆರಿಗೆ ನೋವು ತಿಮ್ತಾ ಇದಾಳೆಂದು’ ಕುವ್ವಾಟದ ಮಾತಾಡಿದ.
‘ಯಾರಿಗೂ ಗೊತ್ತಾಗದಂತೆ ಸರುವೊತ್ತಿನಲ್ಲಿ ಸಪ್ಳಿಲ್ದಂಗೆ ಬಂದು ಬಸುರು ಮಾಡೋದು ಗೊತ್ತೈತೆ, ಹೆರಿಗೆ ಮಾಡ್ಸೋದು ಗೊತ್ತಿಲ್ವೇನೊ ಭಡವ. ನನ್ನ ಮಗಳಿಗೆ ಇದು ಮೊದಲನೇ ಸೂಲು. ಸುಸೂತ್ರವಾಗಿ ಹೆರಿಗೆ ಮಾಡಿಸಿದ್ರೆ ಸರಿ. ಇಲ್ಲಾಂದ್ರೆ ಊರು ಮುಂದೆ ಪಂಚಾಯ್ತಿ ಸೇರುಸ್ತೀನೆಂದು’ ದ್ಯಾಮವ್ವ ನಗಸಾರಕ್ಕೆ ಹೇಳಿದ್ದು ಕೇಳಿ ನಿಟ್ಟುಬಿದ್ದ ತಿಮ್ಮಣ್ಣ;
‘ಸುಮ್ನಿರಕ್ಕೊ, ಯಾರಾದ್ರು ಕೇಳಿಸಿಕೊಂಡ್ರೆ ಇದೇ ಬದ್ದ ಅಂದುಕೊಂಡಾರು’ ಅಂತೇಳಿ ಮುಜುಗುಂಪ್ಲು ಪಡುವಾಗ, ‘ನಮ್ಮ ಎಮ್ಮೆ ಗಂಡ ತಿಮ್ಮಣ್ಣ ಮಾಮ’ ಎಂದು ಜೋರಾಗಿ ಎರಡು-ಮೂರು ಸಲ ಹೇಳುತ್ತಾ.. ಅಂಗಳದಲ್ಲಿ ಉಳ್ಳಾಡಿಕೊಂಡು ನಗುವ ಮೋಹನನ ನಗುವಿನಲ್ಲಿ ಅಕ್ಕಪಕ್ಕದ ಮನೆಯವರೆಲ್ಲ ಭಾಗಿಯಾಗಿರುವ ಸಂತಸದ ಗಳಿಗೆಗೆ ದ್ಯಾಮವ್ವನ ದೊಡ್ಡಮಗ ಮಂಜಣ್ಣ, ಆತನ ಹೆಂಡತಿ ಮಕ್ಕಳೂ ಸಾಕ್ಷಿಯಾದರು.
ಪಾತ್ರೆ ತೊಳೆಯುತ್ತಿದ್ದ ದ್ಯಾಮವ್ವ ಅರ್ಧಕ್ಕೆ ಕೈಬಿಟ್ಟು, ದಿಡುಗುಬಡಗ ಎದ್ದು ಮನೆಗೆ ಬಂದ ಮಗ ಸೊಸೆಗೆ ನೀರು ಕೊಟ್ಟು ಪ್ರೀತಿಯಿಂದ ಬರಮಾಡಿಕೊಂಡಳು. ಮಂಜಣ್ಣನ ಮಕ್ಕಳನ್ನು ಕುಮಾರನ ಮಕ್ಕಳು ಆಪ್ತವಾಗಿ ತಬ್ಬಿಕೊಂಡು ಅವರ ಕೈಯಲ್ಲಿದ್ದ ಬ್ಯಾಗ್ ಇಸ್ಕಂಡು ಒಳಗಿಟ್ಟು ಕಾಲಿಗೆ ನೀರು ಕೊಟ್ಟರು. ಇಡೀ ಮನೆ ಕ್ಷಣಕಾಲ ಸಂಭ್ರಮದ ಹೊಳೆಯಲ್ಲಿ ಮೀಯುತ್ತಿರುವಾಗ, ಆ ಹೊಳೆಯ ದಡದಲ್ಲಿದ್ದ ನಾಗಲಕ್ಷ್ಮಿ ಪರಕೀಯಳತೆ ಕುಂತಿದ್ದವಳು ದಿಡುಗ್ನೆದ್ದು, ಸುಲ್ದಿರೊ ಕಡ್ಲೆಬೀಜನ ಒಂದು ಮೊರದಲ್ಲಿ ತುಂಬಿಕೊಂಡು ಒಳಗಡೆ ಹೋದ ಅವಳು, ತನಗೆ ಮಾತ್ರ ಕುಡಿಯೋಕೆ ನೀರು ತಂದುಕೊಟ್ಟಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ ಮಂಜಣ್ಣನಿಗೆ ಸೊಸೆಯ ಮೇದಾವಂತಿಕೆಯನ್ನು ಕಂಡು ತಡೆಯಲಾರದ ಸಿಟ್ಟು ಬಂದಿತ್ತು. ಆದರೆ ಬೆಳಗಾದರೆ ಹಬ್ಬ ಆಗಿರೋದರಿಂದ ಮನೆಗೆ ಬಂದ ತಕ್ಷಣ ಜಗಳ ಮಾಡೋದು ಸರಿಯಲ್ಲ ಎಂದು ಸುಮ್ಮನಾದ.
ಮಗ, ಸೊಸೆ ಜತೆ ಸ್ವಲ್ಪ ಹೊತ್ತು ಕುಶಲೋಪರಿ ನಡೆಸಿದ ದ್ಯಾಮವ್ವ; ‘ಯಾವಾಗ ಹೊಲ್ಟಿದ್ರೊ ಏನೊ. ದೂರಬಾರ ಪ್ರಯಾಣ ಮಾಡಿ ಬಂದಿದೀರ ಜಲ್ದಿ ಅಡುಗೆ ಮಾಡು ಹೋಗಮ್ಮ. ಹುಡುಗ್ರು ಹಸ್ಕಂಡಿರ್ತಾರೆಂದು’ ದೊಡ್ಡ ಸೊಸೆ ದೀಪಾಳಿಗೆ ಹೇಳಿ. ‘ಇಲ್ಗೆ ಹೊತ್ತಾಯ್ತು ಕಣಪ್ಪ ಹಾಲು ಕರೆದಿಲ್ಲ. ಇನ್ನೊಂದು ಎಮ್ಮೆ ಈಯಂಗಿದೆ’ ಅಂತೇಳಿ ನೀರೊಲೆಯಲ್ಲಿ ಬೆಚ್ಚಗಾಗಿರೊ ಬಿಸಿನೀರು ತಗೊಂಡು ಪಾತ್ರೆ ತೊಳೆದಿಟ್ಟ ದ್ಯಾಮವ್ವ. ಹಾಲು ಕರೆಯಲೆಂದು ಮುಸುರೆ ಬಕೀಟಿಗೆ ಗಾಣದ ಹಿಂಡಿನ ನಾಕು ಚಕ್ಕೆ ಹಾಕಿ, ಅದರ ಮೇಲೆ ಹಿಡಿಯೋಟು ತೌಡು ಉದುರಿಸಿ ಎಮ್ಮೆ ಮುಂದಿಟ್ಟು ಕರಾನ ಬಿಟ್ಟಳು. ಅಗಾಇಗಾ ಅನ್ನೋದರೊಳಗೆ ಶೇಪು ಇಳಿಸಿತ್ತು. ಕರಾನ ಒಂದು ಪಕ್ಕಕ್ಕೆ ಕಟ್ಟಿಹಾಕಿ, ಒಂದುವರೆ ಲೀಟರಿನೊಷ್ಟು ಮೂರು ಮೊಲೆಯಲ್ಲಿನ ಹಾಲು ಕರ್ಕೊಂಡು ಇನ್ನೊಂದು ಮೊಲೆಹಾಲ್ನ ಕರುವಿಗೆ ಬಿಟ್ಟ ದ್ಯಾಮವ್ವ, ಸೊಳ್ಳೆಗಳ ಕಾಟದಿಂದ ಎಮ್ಮೆಗಳನ್ನು ಪಾರು ಮಾಡಲು ವಾರುಜಪ್ರದಡಿಯಲ್ಲಿ ಕೆಂಡದ ಮ್ಯಾಕೆ ಊದ್ರ ಉದುರಿಸಿ ಹೊಗೆ ಮಾಡಿದಳು. ಅಷ್ಟೊತ್ತಿಗೆಲ್ಲ ಕೋಳಿಗಳನ್ನು ಒಂದು ದೊಡ್ಡ ಜಲ್ಲೆ ಅಡೇಲಿ ಮುಚ್ಚಿಡುತ್ತಿದ್ದ ಮೋಹನನಿಗೆ; ‘ಎರಡು ಹುಂಜ ಮರದ ಮೇಲೆ ಕುಂತಿದಾವೊ ಎಲ್ವೊ ನೋಡು’ ಎಂದು ಹೇಳಿದಾಗ ತಲೆಯೆತ್ತಿ ನೋಡಿದ ಮೋಹನ, ‘ಅಗಳಜ್ಜಿ ಮರದ ತುದಿಯಲ್ಲೊಂದೈತೆ, ಈ ಕೊಂಬೆ ಮೇಲೊಂದೈತೆಂದು’ ತೋರಿಸಿದ ಮೇಲೆ ನಿರಾಳವಾದ ದ್ಯಾಮವ್ವ; ‘ಹಾಗಾದರೆ ಜಲ್ದಿ ಅದೊಂದು ಸೀರಿಯಲ್ ನೋಡ್ತಾ ಇರ್ತೀನಿ, ಎಮ್ಮೆ ಈಯಂಗಾದಾಗ ನನ್ನನ್ನ ಮಾತಾಡ್ಸು’ ಅಂತೇಳಿ ತನ್ನ ಕೆಲಸ ಎಲ್ಲ ಮುಗಿದ ಮೇಲೆ ಚಳಿಗೆ ಹೆದರಿಕೊಂಡವಳಂತೆ ನಟಿಸುತ್ತಾ ಅಡಿಕೆಲೆ ಮೆಲ್ಲುತ್ತಾ ಸೀರಿಯಲ್ ನೋಡ ತೊಡಗಿದಳು.
ಅಡುಗೆ ಕೋಣೆಗೆ ಬಂದ ದೀಪಾಳ ಕಡೆ ನೋಡಿ, ಬಲವಂತದ ನಗೆ ಸೂಸಿದ ನಾಗಲಕ್ಷ್ಮಿ ತನ್ನ ಪಾಡಿಗೆ ತಾನು ಅಡುಗೆ ಮಾಡುವುದರಲ್ಲಿ ತಲ್ಲೀನಳಾಗಿದ್ದಳು. ಹುಡುಗರೆಲ್ಲ ಹೊರಗಡೆ ಪಡಸಾಲೆಯಲ್ಲಿ ಚಾಪೆ ಹಾಸಿಕೊಂಡು ತಂದ ತಿಂಡಿಯನ್ನು ಒಬ್ಬರಿಗೊಬ್ಬರು ಹಂಚಿಕೊಂಡು ತಿನ್ತಿರೊವಾಗ, ಸುಮ್ನೆ ಕುಂತಿದ್ದ ದೀಪಾಳಿಗೆ ಬೇಸರವೆನಿಸಿ, ರೊಟ್ಟಿ ಸುಡೋಕೆ ಓಜುಮಾಡಿಕೊಂಡ್ರೆ ಜಲ್ದಿ ಆಗ್ತಾವೆಂದು ಭಾವಿಸಿದಳು. ಆದರೆ, ಸೀರಿಯಲ್ ನೋಡುವ ಅತ್ತೆಯನ್ನು ರೊಟ್ಟಿ ಸುಡಲು ಕರೆಯೋದಕ್ಕೆ ಧೈರ್ಯಸಾಲದೆ, ಪಕ್ಕದಮನೆ ಗುಂಡಮ್ಮನ ಗಂಡನ ಜತೆ ಲೋಕಾಭಿರಾಮವಾಗಿ ಮಾತನಾಡುತ್ತ ಕುಂತಿದ್ದ ತನ್ನ ಗಂಡನ ಬಳಿ ಬಂದ ದೀಪ; ‘ನಾವು ರೊಟ್ಟಿ ಸುಡೋದು ನಿಮಗೂ ಹಿಡಿಸಲ್ಲ, ನಿಮ್ಮಮ್ಮನಿಗೂ ಹಿಡಿಸಲ್ಲ. ಅದ್ಕೆ ಅತ್ತೆ ತೆಳ್ಳಗೆ ತಟ್ಟಿಕೊಟ್ರೆ ನಾನೆಲ್ಲ ಸುಡ್ತೀನಿ. ಗುಂಡಕ್ಕನವು ಅರ್ಧಕ್ಕರ್ಧ ರೊಟ್ಟಿ ಸುಡೋದೆ ಆಗೋಯ್ತೆಂಗೊ’ ಎಂದು ಅವಸರಪಡಿಸಿದಳು.
ಮನೆಯಲ್ಲಿನ ಬಿಗುವಿನ ವಾತಾವರಣವನ್ನ ಹಗುರ ಮಾಡಬೇಕೆಂದುಕೊಂಡ ಮಂಜಣ್ಣ, ಸೀರಿಯಲ್ ನೋಡುತ್ತಿರುವ ತಾಯಿ ಬಳಿ ಬಂದು; ‘ಉಗುರು ಮಂದದೋಟು ತೆಳ್ಳಗೆ ಸಜ್ಜೆರೊಟ್ಟಿ ಸುಡೋದು ನಿನಗೆ ಬಿಟ್ರೆ ನಮ್ಮ ಗುಂಪಿನಲ್ಲಿ ಇನ್ಯಾರಿಗೂ ಬರಲ್ಲ ಕಣಮ್ಮ’ ಅಂತೇಳಿ ಪುಸಲಾಯಿಸಿದ.
‘ನಿನ್ನ ಮಕ್ಕಳಿಗೆ ಮೀಸೆ ಬಂದ್ರು ನಿನ್ನ ಹೆಂಡ್ತಿ ರೊಟ್ಟಿ ಸುಡೋದು ಕಲ್ತಿಲ್ಲ ನೋಡಪ್ಪ. ಇನ್ನು ಯಾವಾಗ ಕಲಿಬೇಕಂತ ಇದಾಳೊ ಏನೊ’ ಎಂದು ದೀಪಾಳ ಮೇಲೆ ಹುಸಿ ಮುನಿಸು ತೋರಿದ್ದು ಬೂಟಾಟಿಕೆಯೆಂದು ನಾಗಲಕ್ಷ್ಮಿಗೆ ಮನದಟ್ಟಾಗಿ ಅಡುಗೆ ಮನೆಯಲ್ಲಿ ಪಾತ್ರೆನ ಎತ್ತಿ ಕುಕ್ಕಿದ್ದು ದ್ಯಾಮವ್ವನಿಗೆ ಅರ್ಥವಾಗದೆ ಇರಲಿಲ್ಲ.
‘ಇದೊಂದ್ಸಲ ತೋರಿಸಿಕೊಡಮ್ಮ, ಮುಂದಿನ ಸಂಕ್ರಾಂತಿಗೆ ಅವಳ ಹತ್ತಿರಾನೆ ರೊಟ್ಟಿ ಸುಡುಸ್ತೀನಿ. ಈಗ ಜಲ್ದಿ ಬಾರಮ್ಮ. ಪಕ್ಕದ ಮನೆ ಗುಂಡಮ್ಮ ಅರ್ಧಬುಟ್ಟಿ ರೊಟ್ಟಿ ಸುಟ್ಟಿದಾಳೆಂದು’ ಅವಸರ ಪಡಿಸಿದಾಗ. ಮಗನ ಮಾತು ಮೀರಲಾಗದೆ ಹೊರಗೆದ್ದು ಬಂದ ದ್ಯಾಮವ್ವ, ಮನೆ ಮುಂದೆ ಮೂಡಲಕಡೆ ಹಾಕಿರುವ ವಾರುಜಪ್ರದಡಿಯಲ್ಲಿದ್ದ ಕುಂಬಾರ ಜೋಡಿ ಒಲೆಯ ಮುಂದೆ ಕುಳಿತು, ಅಗಲವಾಗಿರುವ ಸಿಲ್ವರ್ ಬೇಸನ್ನಿನಲ್ಲಿ ಐದು ಸೇರಿನ ಸಜ್ಜೆ ಹಿಟ್ಟನ್ನು ಕಲ್ಸೋಕೆ ಕಷ್ಟವಾಗುತ್ತಂತ ಎರಡು ಭಾಗ ಮಾಡಿ, ರೊಟ್ಟಿ ತಟ್ಟೋಕೆ ಜಿಗುಟು ಬರಲೆಂದು ಸಜ್ಜೆಹಿಟ್ಟಿನ ಕೊಟರೆ ಸೇರಿಸಿ ಹದವಾಗಿ ಕಲಸಿ ಮಿದಿಯತೊಡಗಿದಳು.
ಸ್ವಲ್ಪ ಹೊತ್ತು ಮಿದ್ದ ನಂತರ, ಕೈಸೋಲು ಬಂದಂತಾಗಿದ್ದರಿಂದ; ‘ನನಗೆ ಸಗುತಿ ಸಾಲ್ದು ನೀನೆ ಚೆನ್ನಾಗಿ ಮಿದಿಯಪ್ಪ’ ಅಂತೇಳಿ ಮಗನ ಮುಂದಕ್ಕೆ ಬೇಸನ್ನು ತಳ್ಳಿದ ದ್ಯಾಮವ್ವ; ಒಳಗೆ ದೇವ ಮೂಲೆಯಲ್ಲಿರೊ ಗೋಣಿ ಚೀಲದಲ್ಲಿ ನೆಲ್ಲುಹುಲ್ಲು ತುರುಕಿ ಸೀತಾಫಲ ಹಣ್ಣು ಮಾಗಿ ಹಾಕಿದ್ದೆ. ಅದರಲ್ಲಿ ಹಣ್ಣಾಗಿರೋವ್ನ ಆರಿಸಿ ತಂದು ಹುಡುಗರಿಗೆ ಕೊಡಮ್ಮ. ನಿಮಗೆ ಪ್ಯಾಟೇಲಿ ಅವೆಲ್ಲ ಎಲ್ಲಿ ಸಿಗಾನ? ಹಂಗೆನೆ ನೀವು ಬತ್ತೀರಂತ ಮೊನ್ನೆ ಸಜ್ಜೆ ನೆನೆಹಾಕಿ, ನಿನ್ನೆ ಮೊಳಕೆ ಕಟ್ಟಿದ್ದೆ. ಅವಂದ್ರೆ ನಿನ್ನ ಗಂಡನಿಗೆ ಬಾಳಾ ಇಷ್ಟ. ಸಣ್ಣ ಬಟ್ಲಲ್ಲಿ ಸಜ್ಜೆ ಮೊಳಕೆಹಾಕಿ, ಅದರ ಮೇಲೊಂದು ಚೂರು ಬೆಲ್ಲದ ತುಂಡು ಇಟ್ಕೊಡಮ್ಮ’ ಎಂದು ದೀಪಾಳಿಗೆ ಹೇಳಿದಾಗ, ಆಕೆಗೆ ಅತ್ತೆ ಮೇಲಿನ ಅಭಿಮಾನ ಇನ್ನೂ ಹೆಚ್ಚಾಯಿತು. ಊರಿಗೆ ರಾಜನಾದರು ತಾಯಿಗೆ ಮಾತ್ರ ಮಗ ಎಂದು ದೊಡ್ಡೋರು ಅಷ್ಟಿಲ್ದೆ ಹೇಳಿಲ್ಲ. ಇಷ್ಟು ವರ್ಷಗಳಾದರೂ ಮಗನ ಇಷ್ಟಗಳ ಬಗ್ಗೆ ನೆನಪಿಟ್ಟುಕೊಂಡು ಅದನ್ನ ಕಾಪಿಟ್ಟುಕೊಂಡು ಬಂದಿರುವ ತಾಯಿ ಪ್ರೀತಿ ಮಿಗಿಲೆನಿಸಿದಾಗ, ಎರಡು ವರ್ಷಗಳ ಹಿಂದೆ ತೀರಿಕೊಂಡ ತನ್ನವ್ವ ನೆನಪಾಗಿ ದೀಪಾಳ ಕಂಗಳು ಸದ್ದು ಮಾಡದೆ ಒದ್ದೆಯಾಗಿದ್ದವು.
ಅಷ್ಟೇ ಅಲ್ದೆ, ಮುಳ್ಳಕ್ಕಿ ತಳಿನೇ ಇಲ್ದಿರೋವಾಗ, ಅದರ ಭತ್ತಾನ ಪತ್ತೆ ಮಾಡಿ ಬೇರೆಯವರ ಗದ್ದೆ ತೋಟದಲ್ಲಿ ಒಂದು ಮಡಿಯಷ್ಟು ಹಸನು ಮಾಡಿಸಿ, ಸಸಿ ನಾಟಿ ಮಾಡಿಸಿದ್ದಳು. ಕಳೆಕಾಸೆ ತೆಗೆಸಿದ ಮೇಲೆ ಬೆಳೆದ ಎರಡು ಪಲ್ಲ ಭತ್ತದಲ್ಲಿ ಹೊಲದವರಿಗೊಂದು ಪಲ್ಲಕೊಟ್ಟು, ತನ್ನ ಪಾಲಿನ ಒಂದು ಚೀಲ ಭತ್ತವನ್ನು ಒಣಗಿಸಿ ಮುಂದಿನ ವರ್ಷಕ್ಕೆ ಬೀಜಕ್ಕೆ ಬೇಕಾಗುವಷ್ಟು ಬಚ್ಚಿಟ್ಟು ಉಳಿದ ಭತ್ತಾನ ಜಿನ್ನ ಮಾಡಿಸಿದ್ದಳು. ನಾಳೆ ಮಗ ಬರ್ತಾನೆ ಅನ್ನೋದು ಖಾತ್ರಿಯಾದ ಮೇಲೆ ಉಳ್ಳಿಕಾಳು ಉರಿದು ಅದನ್ನು ಬೇಳೆ ಮಾಡಿ, ಹಸನು ಮಾಡಿರೊ ಮುಳ್ಳಕ್ಕಿಗೆ ಉಳ್ಳಿಕಾಳಿನ ಬೇಳೆ ಬೆರೆಸಿ, ಕುಶಲೋಪರಿ ಮಾತಾಡುತ್ತಾ ಕುಳಿತಿರುವಾಗ ಮಗನಿಗೆ ಇಷ್ಟವೆಂದು ನೀಡಿದ್ದನ್ನು ನೋಡಿ ಆ ಕ್ಷಣದಲ್ಲಿ ಅದೇನು ಮಹಾ ಎನಿಸಿದ ದೀಪಾಳಿಗೆ ತದನಂತರ ಅತ್ತೆಯ ಮನಸ್ಸು ಅರ್ಥವಾಗಿತ್ತು. ಅದೆಲ್ಲವನ್ನೂ ಗೇನಿಸಿಕೊಂಡು ಸೀತಾಫಲ ಹಣ್ಣು, ಸಜ್ಜೆ ಮೊಳಕೆಯನ್ನು ಗಂಡನಿಗೂ ಹುಡುಗರಿಗೂ ತಂದು ಕೊಟ್ಟಳು.
‘ಹಿಟ್ಟು ಮಿದ್ದ ಮೇಲೆ ಸ್ವಲ್ಪ ಹೊತ್ತು ಅಳ್ಳಿ ಬಿಡಬೇಕು. ಅಷ್ಟೊತ್ತಿಗೆ ಉಪ್ಪುನೀರು ಸವರಿರೊ ಬಿಳಿ ಜೋಳ ಇದಾವೆ. ಅವೊಂದಿಷ್ಟು ತಕಬಾರಮ್ಮ. ಪೇಡ್ಲು ಹುರ್ದು ಕೊಡ್ತೀನೆಂದು’ ಒಲೆ ಮೇಲೆ ಹಂಚು ಇಡ್ತಾ ಹೇಳಿದ ಅತ್ತೆಯ ಮಾತಿಗೆ ಮುಗುಳ್ನಕ್ಕ ದೀಪ; ‘ಸಾಕು ಬಿಡತ್ತೆ, ಬಂದಾಗಳಿಂದ ಪುರುಸೊತ್ತು ಇಲ್ದಂಗೆ ಹುರಿದ ಶೇಂಗಾ, ಮುಳ್ಳಕ್ಕಿಯಲ್ಲಿ ಬೆರೆಸಿಕೊಟ್ಟ ಉಳ್ಳಿಕಾಳು, ಸಜ್ಜೆ ಮೊಳಕೆ, ಸೀತಾಫಲ ಹಣ್ಣು ತಿಂದಿದಾರೆ. ಸಾಲ್ದೆಂಬಂತೆ ಈಗ ಜೋಳದ ಪೇಡ್ಲು ಹುರಿದು ಕೊಟ್ರೆ, ಹೊಟ್ಟೆಗಿನ ಕೆಟ್ಟೀತೆಂದು’ ಹೇಳುತ್ತಲೇ ಅತ್ತೆಯ ಪ್ರತಿಕ್ರಿಯೆಗೆ ಕಾಯದೆ ಜೋಳ ತರಲು ಒಳಗೆ ಹೋದಳು.
ಪಡಸಾಲೆಯಲ್ಲಿ ಚಾಪೆ ಹಾಸಿಕೊಂಡು ಕುವ್ವಾಟ ಆಡ್ತ, ಹಣ್ಣನ್ನು ಹಂಚಿಕೊಂಡು ತಿನ್ನುವ ಮೊಮ್ಮಕ್ಕಳನ್ನು ಕಂಡು ದ್ಯಾಮವ್ವನ ಕಂಗಳು ಒದ್ದೆಯಾಗಿದ್ದವು. ಹುಟ್ತ ಅಣ್ಣ ತಮ್ಮಂದಿರು, ಬೆಳಿತಾ ಬೆಳಿತಾ ದಾಯಾದಿಗಳಾಗ್ತಾರೆ ಎನ್ನುವಂತಿದ್ದರೆ, ಈ ಮಕ್ಕಳು ಬೆಳಿಯೋದೆ ಬೇಡವೆನಿಸಿತ್ತು. ಮಗು ಮನಸ್ಸಿನ ಮುಗ್ದತೆಯನ್ನ ಮನುಷ್ಯ ಕೊನೆತನಕ ಯಾಕೆ ಉಳಿಸಿಕೊಳ್ಳಲ್ವೊ ಏನೊ? ದೊಡ್ಡವರಾಗಿ ಬೆಳೆದಂತೆಲ್ಲಾ ಸಣ್ತನನ ಬೆಳೆಸಿಕೊಳ್ಳೋದು ಬಹುಶಃ ಮನುಷ್ಯ ಒಬ್ನೆ ಏನೊ! ಎಂದುಕೊಂಡ ದ್ಯಾಮವ್ವ ಇರೋ ಮೂವರು ಮಕ್ಕಳು ಮೂರು ಲೋಕ ಎಂಬಂತಿರುವುದನ್ನು ನೆನಪಿಸಿಕೊಂಡು ಮರುಕ ಪಟ್ಟಿದ್ದಳು.
‘ನಿನ್ನ ತಮ್ಮನ್ನ ವಿಚಾರಿಸಿದೆಯೇನಪ್ಪ? ಮನೇಲಿ ನಾನು ಉಸಿರು ಬಿಡಂಗಿಲ್ಲ. ಹುಡುಗರಿಗೆ ಯಾತ್ತೂ ಹೆಳಂಗಿಲ್ಲ. ಗಂಡನ ಸಪೋಟು ಐತಂತ ನಾಗಿ ಬಾಳಾ ಉದ್ವೇರಿದಾಳೆ. ಬಂದಾಗಳಿಂದ ನೀನೆ ನೋಡ್ತೀಯಲ್ಲ. ಗಂಡನಿಗೆ ಅದೇನು ಮಂಕುಬೂದಿ ಎರಚಿದಾಳೊ ಏನೊ? ಅವಳು ಹೇಳಿದ ಮಾತಿಗೆ ಉಗುಳು ದಾಟಲ್ಲ. ಐದು ಸೇರಿನ ಸಜ್ಜೆರೊಟ್ಟಿ ಸುಡಾದಂದ್ರೆ ಸುಮ್ನೆ ಮಾತಲ್ಲ. ಇರೊ ಬರೊ ಗ್ಯಾಸೆಲ್ಲಾ ಖಾಲಿಯಾಗುತ್ತೆ. ಅಣ್ಣನ ಮೇಲೆ ಆಟೊಂದು ಅಕ್ರೆ ಇದ್ರೆ ಒಂದು ಹೊರೆ ಕಟ್ಟಿಗೆ ತಂದಾಕಂತ ಹೇಳಿದ್ದಕ್ಕೆ ತಲೆಯಾಡ್ಸಿ, ನಿನ್ನೆದಿನ ದಿಮ್ನಾಗಿ ಒಂದು ಹೊರೆ ಕಟ್ಟಿಗೆ ತಂದಾಕಿದ್ನೆ ವಿನಾ, ಯಾಕೆ? ನಮ್ಮಣ್ಣನಿಗಿಂತ ಗ್ಯಾಸ್ ಹೆಚ್ಚಾಯ್ತೇನೆ? ಖಾಲಿಯಾದ್ರೆ ತರೋನು ನಾನು. ನಿನಗೇನು ತೊಂದ್ರೆ, ಹೇಳಿದಷ್ಟು ಮಾಡು ಅಂತ ಒಂದು ಮಾತೂ ಹೇಳ್ಳಿಲ್ಲ. ಅಷ್ಟರ ಮಟ್ಟಿಗೆ ಗಂಡನ್ನ ಹಿಡಿದಲ್ಲಿಟ್ಕೊಂಡಿದಾಳೆ. ಇದ್ನ ಹಿಂಗೆ ಸಡ್ಲ ಬಿಟ್ರೆ, ಈ ಮನೇಲಿ ನಾನು ಮೂರು ಕಾಸಿಗೆ ಬೆಲೆ ಇಲ್ದೊಳಾಗ್ತೀನಿ. ಮಟ್ಸವಾಗಿ ಮಾಡಿಕೊಂಡು ತಿನ್ನಂಗಿದ್ರೆ ಮನೇಲಿ ಇರ್ಲಿ. ಇಲ್ಲಾಂದ್ರೆ ಇಷ್ಟು ದಿನ ಅಡಿವುಟ್ಟಿಗೆ ಬಾಳಿದಂಗೆ ಬಾಳ್ಳಿ’ ಎಂದು ಮಗನ ಮುಂದೆ ಕಣ್ಣೀರು ಹಾಕ್ತ ಮನೆಯಲ್ಲಿ ಓನೂಡಿಯಾಗಿ ಇಲ್ಲದಿರುವ ಕುಮಾರನ ಅಸಡ್ಡೆ ಮಾತುಗಳು, ಅವನ ಹೆಂಡತಿಯ ದೌಲತ್ತಿನ ಬಗ್ಗೆ ಹೇಳಿದಳು.
ಬಾಧೆಪಡುವ ಅವ್ವನ ಕಡೆ ಒಂದು ಸಲ ಕನಿಕರದಿಂದ ನೋಡಿದ ಮಂಜಣ್ಣನಿಗೆ, ಇತ್ತೀಚಿಗೆ ಬಹಳ ಸೊರಗಿರುವಂತೆ ಕಂಡಳು. ಸೊಸೆ ಸರಿಯಾಗಿ ಆರೈಕೆ ಮಾಡ್ತಿಲ್ಲ ಅನ್ನೋದಕ್ಕೆ ದ್ಯಾಮವ್ವನ ಮಾಸಿದ ತಲೆ. ಉಪ್ಪು ಅಡರಿದ ಜಾಕೀಟು ಸಾಕ್ಷಿ ಹೇಳುತ್ತಿದ್ದವು.
‘ನಾವು ಬರುವಾಗ ಬಸ್‍ಸ್ಟಾಂಡಲ್ಲಿ ಕುಂತಿದ್ದ, ಬಂದ ತಕ್ಷಣ ಪಂಚಾಯಿತಿ ನಡೆಸಬಾರದೆಂದು ಸುಮ್ನಾದೆ. ಬರ್ಲಿ ತಡಿಯಮ್ಮ ವಿಚಾರಿಸ್ತೀನಿ. ನಿನಗೆ ನಾನು ಬಹಳ ಸಲ ಹೇಳ್ದೆ, ಒಂದೇ ಹತ್ರ ಇದ್ರೆ ಸದರ ಆಗ್ತೀಯ ನನ್ನ ಹತ್ರ ಸ್ವಲ್ಪ ದಿನ. ಯಶವಂತನ ಹತ್ರ ಸ್ವಲ್ಪ ದಿನ ಇದ್ರೆ ಇವರಿಗು ನಿನ್ನ ಬೆಲೆ ಗೊತ್ತಾಗುತ್ತೆ. ನಾಕುದಿನ ಕಣ್ಮರೆಗಿರಮ್ಮ ಅಂದ್ರೆ ನೀನು ಕೇಳಲ್ಲ. ಮಾತೆತ್ತಿದ್ದರೆ ಸಾಕು; ನನ್ನ ಗಂಡ ಬಾಳಿ ಬದುಕಿದ ಮನೆ ಬಿಟ್ಟು ಬರಲ್ಲಾಂತ ಹೇಳ್ತಿಯ. ಇವರಿಗೆ ಅದೇ ಸದರ ಆಗೋಗಿದೆಯೆಂದು’ ಮಂಜಣ್ಣ ಸ್ವಲ್ಪ ಅಸಮಧಾನದಿಂದ ಹೇಳಿದಾಗ. ಇದರಲ್ಲಿ ನಂದೇನು ತಪ್ಪಿದೆಯಪ್ಪ? ಎಂಬ ಭಾವನೆಯಲ್ಲಿ ಮಗನ ಮುಖ ನೋಡಿದ ದ್ಯಾಮವ್ವನ ಕಣ್ಣಮುಂದೆ ಆ ಇಸಗಳಿಗೆ ಸುಳಿದು ಹೋಯಿತು.
ಮೂರು ತಿಂಗಳ ಹಿಂದೆ ಒಂದು ದಿನ ಮಧ್ಯಾಹ್ನದ ಹೊತ್ತು ಉಂಡಮೇಲೆ ತಟ್ಟೆ ತೊಳೆಯದೆ ತ್ಯಾವದ ಕೈನ ಕುಂಡೆಗೆ ಒರೆಸಿಕೊಳ್ಳುತ್ತಾ ಬ್ಯಾಟ್ ಹಿಡ್ಕೊಂಡು ಆಟಾಡೋಕೆ ಹೊರಟ ಮೊಮ್ಮಗನನ್ನು ಬಯ್ದಿದ್ದಕ್ಕೆ ಶುರುವಾದ ಅತ್ತೆ ಸೊಸೆ ಜಗಳ ವಿಕೋಪಕ್ಕೆ ತಿರುಗಿ ಒಬ್ಬರ ಮುಂದಾಲು ಕೂದ್ಲು ಒಬ್ಬರು ಹಿಡ್ಕೊಂಡು ರಾಕಿಡ್ಲಾಡಿ ತಲಾ ನಾಲ್ಕೇಟು ಗಟ್ಟಿಸಿಕೊಳ್ಳುವ ಮಟ್ಟದವರೆಗೂ ಮುಟ್ಟಿ ಪರ್ಯಾವಸನವಾಗಿತ್ತು. ಕೆಲಸದಿಂದ ಮನೆಗೆ ಬರುವ ಗಂಡನಿಗೆ ಪೋನ್ ಮಾಡಿ, ಅತ್ತೆ ಬಯ್ಯುವ ನೀಸು ಕೇಳಿಸಿದ್ದರಿಂದ ಪೂರ್ವಾಪರ ವಿಚಾರಿಸದೆ ಉರ್ನ ಊದಿಕೊಂಡು, ಸೆಮ್ನ ಸೆಡಕೊಂಡು ಬಂದ ಕುಮಾರ ತಾಯಿ ಮೇಲೆನೆ ಕೈ ಮಾಡಿದ್ದು ದ್ಯಾಮವ್ವನ ಮೈದುನರಿಗೆ ಅರಗಿಸಿಕೊಳ್ಳಲಾಗಲಿಲ್ಲ. ಚಿಗದೊಡ್ಡಪ್ಪನ ಮಕ್ಕಳು, ಮೈದುನರೆಲ್ಲ ಬಂದು ಕುಮಾರ, ಅವನ ಹೆಂಡತಿಯನ್ನು ಬಯ್ದಿದ್ದಲ್ಲದೆ ಹೊಡೆಯಲು ಊಕರಿಸಿದ್ದರು. ಆ ಕೋಪದಲ್ಲಿ ತನ್ನ ಮೇಲೆ ಕೈ ಮಾಡಿದೋರು ಈ ಮನೇಲಿ ಅರಗೀಸು ಇರಂಗಿಲ್ಲ ಅಂತೇಳಿ ದ್ಯಾಮವ್ವ, ಮಗ ಸೊಸೆನ ಹೊರ ಹಾಕಿದ್ದರಿಂದ ಆಗಿಂದಾಗಲೆ ನಾಗಲಕ್ಷ್ಮಿ ತನ್ನ ಗಂಡ ಮಕ್ಕಳನ್ನು ಕರಕೊಂಡು ತವರು ಮನೆಗೆ ಹೋಗಿದ್ಲು. ಆ ರಾದ್ದಾಂತ ಶಿವಮೊಗ್ಗದಲ್ಲಿ ಲೆಕ್ಚರರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜಣ್ಣನ ಕಿವಿಯವರೆಗೂ ಮುಟ್ಟಿತ್ತು.
ತನ್ನ ತಾಯಿ ಮೇಲೆ ಕೈ ಮಾಡಿರುವ ನಾಗಲಕ್ಷ್ಮಿ ಮೇಲೆ ಮಂಜಣ್ಣನಿಗೆ ಮೊದಲು ಸಹಜವಾಗಿ ಸಿಟ್ಟು ಬಂದಿತ್ತು. ಆದರೆ ಕುಮಾರ್ ಪೋನ್ ಮಾಡಿ, ತನ್ನನ್ನು ಮನೆಯಿಂದ ಹೊರ ಹಾಕಿದ ವಿಚಾರ ಹೇಳಿ ಕಣ್ಣೀರು ಹಾಕಿದ್ದರಿಂದ ಅಣ್ಣನ ಮನಸು ಕರಗಿತ್ತಾದರೂ ‘ಅಮ್ಮನ ಮೇಲೆ ಕೈ ಮಾಡುವಷ್ಟು ನಿನ್ನ ಹೆಂಡ್ತಿ ಉದ್ವೇರಿದಾಳೇನೊ?’ ಎಂದು ಗದರಿದ್ದ. ‘ನಾನು ಹೊಡಿಲೇ ಇಲ್ಲ ಮಾವ’ ಎಂದು ಮೇಲುದನಿಯಲ್ಲಿ ಹೇಳಿದ ಸೊಸೆಯ ಮಾತು ಮಂಜಣ್ಣನ ಕೋಪವನ್ನು ಅಣಗಿಸಿತ್ತು. ‘ನೆಂಟರ ಅಧೀನದಲ್ಲಿದ್ರೆ ಅವನು ತಮಾನ ಹೆಂಡ್ತಿಗೆ ಸದರ ಆಗ್ತಾನೆ ಕಣಮ್ಮ. ಆಗ ಅದ್ನೂ ನಾವೇ ನೋಡ ಬೇಕಾಗುತ್ತೆ. ನಾನೆಲ್ಲ ಅವನಿಗೆ ಬುದ್ದಿ ಹೇಳಿದೀನಿ. ಹಿಂದಿನದೆಲ್ಲ ಮರ್ತು ಸುಮ್ಕಿದ್ದು ಬಿಡಮ್ಮ’ ಎಂದು ತಾಯಿಗೆ ಸಮಾಧಾನ ಹೇಳಿ ಸಂಧಾನ ಮಾಡಿಸಿದ್ದರಿಂದ ಸಂಕ್ರಾಂತಿ ಹಬ್ಬ ಒಂದುವಾರ ಇದೆಯೆನ್ನುವಾಗ ಕುಮಾರನ ಸಂಸಾರ ಮತ್ತೆ ಮನೆ ಸೇರಿಕೊಂಡಿತ್ತು.
ನಾಗಲಕ್ಷ್ಮಿ ಮೊದಲು ಹೀಗಿರಲಿಲ್ಲ ಎನ್ನುವುದು ಮಂಜಣ್ಣನಿಗೂ ಮನವರಿಕೆಯಾಗಿತ್ತು. ಯಶವಂತನ ಮದುವೆಯಾದ ಮೇಲೆ ಅವನ ಹೆಂಡ್ತಿ ಕಲ್ಪನ ಒಂದು ದಿನವೂ ಗಂಡನ ಮನೆಯಲ್ಲಿ ಕಾಪರ ಮಾಡದೆ, ಅತ್ತೆಯ ಆರೈಕೆ ಮಾಡದೆ ಇರುವುದು ನಾಗಲಕ್ಷ್ಮಿಯ ದೌಲತ್ತಿಗೆ ಪುಷ್ಟಿ ಕೊಟ್ಟಂತಾಗಿತ್ತು. ತವರಿನ ಕಡೆಯ ಹತ್ತಿರದ ಸಂಬಂಧವೆಂದು, ಅವರ ಕುಟುಂಬದವರು ನೌಕರಿದಾರರು, ಆಪತ್ಕಾಲದಲ್ಲಿ ನನ್ನ ಮಗನಿಗೆ ಆಸ್ಕಾರ ಆಗ್ತಾರೆಂಬ ಲೆಕ್ಕಾಚಾರದಲ್ಲಿ ದ್ಯಾಮವ್ವ ಹಟಮಾಡಿ ಯಶವಂತನಿಗೆ ಆ ಸಂಬಂಧವನ್ನು ಕುದುರಿಸಿದ್ದಳು. ಆದರೆ ಮನೆ ನೋಡಲು ಬಂದ ದಿನವೇ ಆಸ್ತಿಯ ಬಗ್ಗೆ ವಿಚಾರಿಸಿದ್ದು, ಮಂಜಣ್ಣನ ಇಂಟರ್‍ಕ್ಯಾಸ್ಟ್ ಮ್ಯಾರೇಜ್ ಬಗ್ಗೆ ಕೊಂಕು ನುಡಿಗಳಾಡಿದ್ದು ಗೊತ್ತಾಗಿ, ತಣ್ಣೀರನ್ನು ಆರಿಸಿಕೊಂಡು ಕುಡಿಯುವ ಅಂತಹ ನಾಜೂಕಿನ ನೆಂಟರು ನಮ್ಮ ಕುಟುಂಬಕ್ಕೆ ಸರಿ ಹೋಗಲ್ಲಮ್ಮ ಎಂದು ಮಂಜಣ್ಣ ಹೇಳಿದರೂ ಕೇಳದೆ, ದ್ವಾಮವ್ವನೆ ಮುಂದೆ ನಿಂತು ಮದುವೆ ಮಾಡಿದ್ದಳು.
ಖಾಸಗಿ ಕಂಪನಿಯಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುವ ಯಶವಂತನಿಗೆ ನೆಂಟರ ಸಹಕಾರ ಆರಂಭದಲ್ಲಿ ಖುಷಿ ನೀಡಿತ್ತು. ಆದರೆ ಹೊಸ ಹೊಸದಾಗಿ ನನ್ನ ಗಂಡ ಕಸ ಗುಡಿಸಿದ್ರೆ, ಬರ್ತಾಬರ್ತಾ ಬಾರಿಕೋಲು ತಗಂಡ ಅಮ್ಮಂಗೆ ಮಗಳ ಕುತ್ತಿಗೆಗೆ ತಾಳಿ ಬೀಳೋವವರೆಗು ಬಾಯಲ್ಲಿ ಬೆಲ್ಲ ಕರಗೊ ಮಾತಾಡಿ, ನಂತರ ಅಹಂಕಾರದ ಅಸಲಿ ರೂಪ ತೋರಿಸುತ್ತಾ ದಿನಪರ್ತೆ ಮೇಲೆ ಅವನನ್ನೆ ಅಸಡ್ಡೆ ಮಾಡಿದಾಗ, ಹಿಂದಿರುಗಿ ಬರಲಾರದಷ್ಟು ದೂರ ಅವನ ಬಾಳ ದಾರಿ ಸಾಗಿ ಹೋಗಿತ್ತು. ಅದನ್ನ ತಾಯಿ ಬಳಿ ಹೇಳಿಕೊಂಡು ಕಣ್ಣೀರು ಹಾಕ್ತ; ‘ನಾವು ಪಡೊ ಕಷ್ಟ ನಮ್ಮ ಮಕ್ಕಳು ಪಡಬಾರದಂತ ನೀನು, ಅಪ್ಪ ಕಂಡೋರು ಕಷ್ಟ ಮಾಡಿ ಬೆಳೆಸಿದ್ರಿ. ಈ ಮುಪ್ಪಿನ ಕಾಲದಲ್ಲಿ ಇಲ್ದಿರೊ ಅಪ್ಪನಿಗಂತೊ ಬೇಡ, ಇರೊ ನಿನಗೂ ಒಂದು ತುತ್ತು ಅನ್ನ ಹಾಕೊ ಯೋಗ್ಯತೆ ಇಲ್ದಂಗಾಗಿದೆ ಕಣಮ್ಮ. ಈ ಪಾಪಿನ ಕ್ಷಮಿಸು ಬಿಡು’ ಅಂತೇಳಿ ತಾಯಿ ತೊಡೆಮೇಲೆ ತಲೆಯಿಟ್ಟು ಬಿಕ್ಕಳಿಸಿದ್ದ.
‘ಇದೇ ಕಾಲ ಯಿಂಗೆ ಇರಲ್ಲಪ್ಪ ಅದ್ಕೆಲ್ಲಾ ನೀನ್ಯಾಕೆ ಅಳ್ತಿಯ. ನಂದೇನು ಸಂಪತ್ತು ನೀನೊಂದು ಸುಖವಾಗಿರು. ಮುಂದೊಂದು ದಿನ ನಿನ್ನ ಹೆಂಡ್ತಿಗೂ ಕಳ್ಳುಬಳ್ಳಿಯ ಬೆಲೆ ಗೊತ್ತಾಗುತ್ತೆ. ಅಲ್ಲಿತನಕ ನೀನೇ ಸುಧಾರಿಸಿಕೊಂಡು ಹೋಗಬೇಕೆಂದು’ ದ್ಯಾಮವ್ವ ಮಗನಿಗೆ ಸಮಾಧಾನ ಹೇಳಿ ನಡಾವಳಿಯನ್ನು ಜೀವಂತವಾಗಿಟ್ಟಿದ್ದಳು.
‘ಅತ್ತೆ ಜೋಳ’ ಎಂದು ಸ್ಟೀಲ್ ಬಾಕ್ಸ್‍ನಲ್ಲಿದ್ದ ಜೋಳವನ್ನ ದೀಪ ಅತ್ತೆ ಮುಂದಿಟ್ಟಳು ಏನೇನೊ ಗೇನಿಸಿಕೊಂಡು ಕುಂತಿದ್ದ ಆಕೆ ಕಾದ ಹೆಂಚಿನ ಮೇಲೆ ಹಿಡಿ ಜೋಳ ಹಾಕಿದಾಗ, ಅವು ಪಟಪಟನೆ ಸದ್ದು ಮಾಡ್ತ ಬೆಳ್ಳಗೆ ಅರಳುವಾಗ ಕೆಲವು ಕಾಳು ಸಿಡಿಯುವುದನ್ನು ತಡೆಯಲು ಮಸಿಬಟ್ಟೆ ಹಾಕಿ ಹುರಿಯುತ್ತಿದ್ದಳು. ಒಂದು ವಾಯಿ ಹುರಿದು ಪ್ಲಾಸ್ಟಿಕ್ ಟಬ್‍ನಲ್ಲಿ ಹಾಕಿದಾಗ, ಜೋಳದ ಪೇಡ್ಲು ನೋಡಿ ಚಕಿತಗೊಂಡ ಹುಡುಗರು ಒಲೆ ಮುಂದಕ್ಕೆ ಬಂದು ಕುಳಿತುಕೊಂಡರು. ಅಜ್ಜಿ ಜೋಳ ಹುರಿಯುವುದನ್ನು ನೋಡುತ್ತಾ ಟಬ್‍ನಲ್ಲಿರುವ ಪೇಡ್ಲಿನಲ್ಲಿ ಕೈಯಾಡಿಸುತ್ತಾ ಕುಳಿತವರನ್ನು ಎಬ್ರಿಸಿ ಕಳಿಸಿದ ದೀಪ; ‘ಸಾಕು ಬಿಡತ್ತೆ, ಉಳಿದಿದ್ದು ನಾಳೆ ಹುರಿದರಾಯ್ತು. ಈಗ ರೊಟ್ಟಿ ಸುಡಾನ’ ಎಂದಾಗ ತುಟಿಯಂಚಲ್ಲೆ ನಕ್ಕ ದ್ಯಾಮವ್ವ, ಐದಾರು ವಾಯಿ ಜೋಳ ಹುರಿದ ನಂತರ ಅದನ್ನ ತೆಗೆದಿಟ್ಟು ರೊಟ್ಟಿ ಸುಡಲು ಅಣಿಯಾದಳು. ಮೊರದಲ್ಲಿ ತೆಳ್ಳಗೆ ರೊಟ್ಟಿ ತಟ್ಟಿ ಕೊಟ್ಟಂತೆಲ್ಲ ಅದಕ್ಕೆ ಪೈನಲ್ ಟಚ್ ಎಂಬಂತೆ ದೀಪ ಕರಿ ಎಳ್ಳು, ಒಣಮೆಣಸಿನಕಾಯಿ ಬೀಜ ಉದುರಿಸಿ ತಾನೊಂದು ಸಲ ಕೈಯಾಡ್ಸಿ ರೊಟ್ಟಿ ಸುಡುತ್ತಿದ್ದಳು.
ವರ್ಷಕ್ಕೆರಡು ಸಲ ಬಂದು ಹೋಗೊ ಸೊಸೆ ಮೇಲೆ ತೋರ್ಸೊ ಅಕ್ರೆಯಲ್ಲಿ ಅರೆಪಾವಿನೋಟು ನನ್ನ ಮೇಲೆ ತೋರಿಸಿದ್ರೆ ನಾನ್ಯಾಕೆ ಸಿಡ್ರುಮುಡ್ರು ಅಮ್ತಿದ್ದೆ ಎಂದುಕೊಂಡು, ಮನೇಲಿ ದೀಪ ಓಡಾಡುವಾಗ ಮುಖ ಕಂಡಾಗ ಮಾತ್ರ ನಗಾಡ್ತ, ಒಳಗೊಳಗೆ ಹಲ್ಲು ಮಸೆಯುವ ನಾಗಲಕ್ಷ್ಮಿಗೆ ಕಡಜೀರಿಗೆ ಕಡಿದಿದೆಯೇನೊ ಎಂಬಂತೆ ಮುಖ ಊದಿಸಿಕೊಂಡು ಹುರಿಯಕ್ಕಿ ತೊಮಟಕ್ಕೆ ಶೇಂಗಾ ಬೀಜವನ್ನು ಗ್ಯಾಸ್ ಒಲೆಯಲ್ಲಿ ಹುರಿದುಕೊಳ್ಳುತ್ತಾ ಬೆಲ್ಲದ ಪಾಕ ಕಾಯಿಸಿಕೊಳ್ಳುತ್ತಾ ಒಳಗೇ ಸರಿ ಹೋಗಿದ್ದಳು.
ಎರಡುವರೆ ಸೇರು ಹಿಟ್ಟಿನ ರೊಟ್ಟಿ ಸುಡುವ ಹೊತ್ತಿನ ತನಕ ಎಮ್ಮೆ ಬಾಲದ ಹತ್ತಿರ ತೂಕಡಿಸುತ್ತಾ ಕಾದುಕೊಂಡಿದ್ದ ಮೋಹನ; ‘ಅಜ್ಜೀ… ಎಮ್ಮೆ ಈಯ್ತಾ.. ಇದೆ. ಅಗೊ ತಲೆ ವರಾಕೆ ಚಾಚ್ತು..’ ಎಂದು ಖುಷಿಯಿಂದ ಹೇಳಿ ಮರದ ಬುಡಕ್ಕೆ ಕಟ್ಟಿದ ಹಗ್ಗವನ್ನು ಬಿಚ್ಚಿದ. ಅಗಸಾಟ್ಲು ಪಡ್ತ ಈಯೋದ್ನ ನೋಡಿದ ದ್ಯಾಮವ್ವ, ರೊಟ್ಟಿ ಸುಡೋದು ನಿಲ್ಲಿಸಿ; ‘ಯಂಗೊ ಬಿಡು, ನಿಮ್ಮ ದೊಡಪ್ಪನಿಗೆ ಬಾಳಾ ವರ್ಷಕ್ಕೆ ಗಿಣ್ಣು ತಿನ್ನೊ ಯೋಗ ಕೂಡಿಬಂತು’ ಅಂತೇಳಿ ಹಿಟ್ಟಿನ ಕೈಯನ್ನು ತೊಳಕೊಂಡು ಎಮ್ಮೆ ಹತ್ತಿರ ಬರೋದ್ರೊಳಗೆ ಎಣ್ಣುಗರುವಿಗೆ ಜನ್ಮ ನೀಡಿ ಪ್ರೀತಿಯಿಂದ ಅದರ ಮೈ ನೆಕ್ಕತೊಡಗಿತು.
ಈದಿರೊ ಎಮ್ಮೆ ಸತ್ತೆ ಹಾಕೊ ತನಕ ಇನ್ನೇನು ಕೆಲಸ ಇಲ್ಲಾಂತ, ಉಳಿದಿರೊ ಎರಡುವರೆ ಸೇರು ಹಿಟ್ಟಿನ ರೊಟ್ಟಿ ಸುಡೋಕೆ ಹೊಂದಿಕೊಂಡ ದ್ಯಾಮವ್ವನಿಗೆ ಹತ್ರಬೀಳ ಸರುವೊತ್ತಿನ ತನಕ ಎದ್ದಿದ್ದ ಹುಡುಗರು ಒಬ್ಬರಿಗೊಬ್ಬರು ತಬ್ಬಿಕೊಂಡು ಮಲಗಿದ್ದನ್ನು ನೋಡಿ ಖುಷಿಯೆನಿಸಿತ್ತು. ಆದರೆ ಆ ಖುಷಿಯ ಕರವಸ್ತ್ರದಲ್ಲಿ ನೋವಿನ ಎಳೆಗಳನ್ನು ಸದ್ದಿಲ್ಲದೆ ಸೇರಿಸಿ ಆಗಾಗ ಮುಖಕ್ಕೊಡ್ಡುವಂತೆ ಮಾಡಿರುವ ವಿಧಿಯ ಒಳಸಂಚನ್ನು ಎದುರಿಸುವ ಅದಮ್ಯ ಚೈತನ್ಯ ಉಳಿಸಿಕೊಂಡಿದ್ದ ದ್ಯಾಮವ್ವ ಯಶವಂತನ ನೆಂಟರ ವಿಚಾರದಲ್ಲಿ ಸೋಲೊಪ್ಪಿಕೊಳ್ಳಲು ಸಿದ್ಧಳಿರಲಿಲ್ಲ.
ಮದುವೆಯಾಗಿ ಮೂರು ವರ್ಷಗಳ ನಂತರ ಮೊದಲನೇ ಸಲ ಒಂದೂವರೆ ವರ್ಷದ ಮುದ್ದಾದ ಮಗಳನ್ನು ಕರಕೊಂಡು ಸತಿಯೊಂದಿಗೆ ಊರಿಗೆ ಬರುವ ಯಶವಂತನಿಗಾಗಿ ಎದುರು ನೋಡಿದ ದ್ಯಾಮವ್ವ ಮುಂಗೋಳಿ ಕೂಗುವ ಹೊತ್ತಿಗೆಲ್ಲ ರೊಟ್ಟಿ ಸುಡೋದು ಮುಗಿಸಿದ್ದರಿಂದ ಹುರಿಯಕ್ಕಿ ಹಿಟ್ಟಿಗೆ ಶೇಂಗಾ ಬೀಜ ಸೇರಿಸಿ ಬೆಲ್ಲದ ಪಾಕದಿಂದ ಉಂಡೆ ಮಾಡಿದರು. ‘ಯಂಗೊ ನಿದ್ದೆ ಕೆಟ್ಟಿದೆ. ಇದೇ ಮಕನಾಗಿ ಸಗಣ್ಣೀರು ಹಾಕ್ತೀನೆಂದು’ ಹೇಳಿದ ದೀಪ ಕಸ ಗುಡಿಸಿದ ಮೇಲೆ, ನಾವು ರೊಟ್ಟಿ ಸುಡೊ ದಿಗಿಲಿನಲ್ಲಿರೋವಾಗ, ಯಾವಳನ್ನ ಸಪ್ಳಿಲ್ದಂಗೆ ಬಂದು ಅದನ್ನೂ ಬಾಚಿಕೊಂಡು ಹೋದ್ರೆ, ಆಮೇಲೆ ನಾವು ಅವರಂಗೆ ಓಣಿಗಳಗುಂಟೆ ತಿರುಗಾಡಬೇಕಾಗುತ್ತೆ ತಡಿಯಮ್ಮ ಅಂತೇಳಿ ದ್ಯಾಮವ್ವನೆ ಎದ್ದೋಗಿ ಎಮ್ಮೆ ಕಾಲಡೇಲಿರೊ ನಾಕೈದು ತೆಪ್ಪೆ ಸಗಣಿನ ಒಂದು ಬಕೀಟಿಗೆ ತುಂಬಿಸಿ ಬಚ್ಚಲು ಮನೆಯಲ್ಲಿ ಬಚ್ಚಿಟ್ಟಿದ್ದನ್ನು ತಂದು ಸಗಣಿಕದರು ಕಲಿಸಿಕೊಂಡು ಸಗಣ್ಣೀರು ಹಾಕತೊಡಗಿದಳು. ನಾಗಲಕ್ಷ್ಮಿ ಮುಸುರೆಪಾತ್ರೆ ತೊಳೆಯುತ್ತಿದ್ದಳು. ಇವರ ಅಡಾವುಡಿಯ ಓಡಾಟಕ್ಕೆ ಮಂಜಣ್ಣನಿಗೂ ಎಚ್ಚರವಾಗಿತ್ತು. ಬೆಳಗಾಗ್ತ ಬಂದ್ರು ಎಮ್ಮೆ ಸತ್ತೆ ಹಾಕಲಿಲ್ಲ ಅನ್ನೋ ಸಣ್ಣ ಆತಂಕ ದ್ಯಾಮವ್ವನ ಮನದಲ್ಲಿ ಮಿಸುಗಾಡ್ತಿರೊ ಹೊತ್ತಲ್ಲಿ ಎಮ್ಮ ಸತ್ತೆ ಹಾಕಿತ್ತು. ಅದ್ನೊಂದು ಮಣ್ಣಿನ ಮಡಿಕೆಯಲ್ಲಿ ಹಾಕ್ಕೊಂಡು ನಾಯಿನರಿಗಳಿಗೆ ಸಿಗದಂತೆ ತಿಪ್ಪೆಯಲ್ಲಿ ಹೂತು ಬಂದಿದ್ದಳು.
ಮನೆ ಮುಂದಿದ್ದ ಈದಿರೊ ಎಮ್ಮೆಯನ್ನು ವಚ್ಚೇರ್ಕೆ ಕಟ್ಟಿಹಾಕಿ, ಅದರ ಬೆನ್ನಿಗೆ ಔಡ್ಲೆಣ್ಣೆ ಸವರಿ, ಬಿಸಿ ನೀರಲ್ಲಿ ಮೈ ತೊಳೆಯುವಾಗ, ರಾತ್ರಿ ಜನಿಸಿದ ಎಣ್ಣುಗರ ತಟ್ಟಾಡಿಕೊಂಡು ಎದ್ದು ತಾಯಿ ಹತ್ತಿರ ಬಂದು, ಕೆಚ್ಚಲಿಗೆ ತಾರಡುತ್ತಿತ್ತು. ದೀಪ ದೊಡ್ಡದಾಗಿ ರಂಗೋಲಿ ಹಾಕಿ ಹುಡುಗರ್ನ ಸೇರಿಸಿಕೊಂಡು ಬಣ್ಣ ತುಂಬುವಾಗ, ‘ನಿನ್ನ ತಮ್ಮನಿಗೊಂದು ಪೋನ್ ಮಾಡಿ ಎಲ್ಲಿ ಬರ್ತಾನೆ ಕೇಳಪ್ಪ’ ಎಂದು ದ್ಯಾಮವ್ವ ಹಿರಿಮಗ ಮಂಜಣ್ಣನಿಗೆ ಆಸ್ಥೆಯಿಂದ ಹೇಳಿದಳು. ಎಲ್ಲರು ಉಂಡು ಮಲಗಿದ ಮೇಲೆ ಸಪ್ಳಿಲ್ದಂಗೆ ಬಂದು ಮುಂದ್ಲುಕೋಣೆಯಲ್ಲಿ ಮಲಗಿದ್ದ ಕುಮಾರ, ‘ನಾನು ಈಗ್ತಾನೆ ಮಾಡಿದ್ದೆ ಕಣಮ್ಮ, ನಾಟ್ ರೀಚಬಲ್ ಅಂತ ಬಂತು, ಇಲ್ಲೆಲ್ಲೊ ಹತ್ತಿರದಲ್ಲಿ ಬತ್ತಿರಬೌದು. ಅದ್ಕೆ ಸರಿಯಾಗಿ ಟವರ್ ಸಿಗ್ತಾ ಇಲ್ಲಾಂತ’ ಹೇಳಿದಾಗ ಖುಷಿಗೊಂಡ ದ್ಯಾಮವ್ವ ಎಮ್ಮೆ ಮೈ ತೊಳೆದಿದ್ದಾದ ಮೇಲೆ ಎಳೆಗರುವನ್ನ ತಾಯಿ ಮೊಲೆ ಹತ್ತಿರ ಬಿಟ್ಟು ತಾಯ್ತನದ ಪುಳಕದಿಂದ ನೀರಿನ ಟ್ಯಾಂಕಿನ ಮುಂದೆ ಬರುವ ನೀರಿಗಾಗಿ ಎದುರು ನೋಡುತ್ತಾ ಕುಂತಿದ್ದ ಖಾಲಿ ಕೊಡಗಳ ಹಾಗೆ ಮಗನಿಗಾಗಿ ಎದುರು ನೋಡುತ್ತಿರುವಾಗ ಮೂಡಲು ಕೆಂಪೇರುತ್ತಿತ್ತು.

(ಲೇಖಕರು ತುಮಕೂರು ಜಿಲ್ಲೆ ಮಧುಗಿರಿಯ ಬಡವನಹಳ್ಳಿ ಮೊರಾರ್ಜಿ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರು.)

ಮತ್ತಷ್ಟು ಸುದ್ದಿಗಳು

Latest News

ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ: ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ, ತನಿಖೆಗೆ ಆಗ್ರಹ

newsics.com ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡವಿದೆಯಾ ಎಂಬ ಸಂಶಯವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ದುರಂತವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...
- Advertisement -
error: Content is protected !!