- ವಾಸುದೇವ ನಾಡಿಗ್
response @newsics .com
ಹೆಂಡತಿ ಮತ್ತು ಪುಟ್ಟ ಮಗಳನು ಬಸ್ ಹತ್ತಿಸಲು ಅವನು ಬಂದಿದ್ದ. ಸೀಟ್ ಇದ್ರೆ ಹತ್ತುವೆ ಇಲ್ಲದೇ ಇದ್ರೆ ಮುಂದಿನ ಬಸ್ ಅಂತ ಅವಳ ನಿರ್ಧಾರ ..” ಇಲ್ಲ ಹೇಗಿದ್ರೂ ಹತ್ತಿಬಿಡು, ಯಾರಾದರೂ ಅಡ್ಜಸ್ಟ್ ಮಾಡ್ಕೋತಾರೆ” ಅಂತ ಇವನ ಅವಸರ ಒತ್ತಾಯ…ಎರಡನೆ ಬಸ್ ಕೂಡ ಹಾಗೇ….
” ಪಪ್ಪ ಬೇಡ ಸೀಟ್ ಇಲ್ಲೂ ಇಲ್ಲ” ಅಂತ ಪುಟ್ಟ ಮಗಳು ಕೂಗ್ತಾ ಇದ್ದರೂ ” ಹೇಗೋ ಆಗುತ್ತದೆ ಹತ್ತಿಬಿಡಿ ಇಬ್ರೂ” ಅಂತ ತುಸು ಒತ್ತಾಯದಿಂದಲೇ ಬಸ್ ಹತ್ತಿಸಿಬಿಟ್ಟ….
ಅಳ್ತಾನೆ ಇದ್ದ ಮಗಳ ಜತೆಗೆ ಅವಳೂ ಹೇಗೋ ಬಸ್ ಹತ್ತಿದಳು.. ಮಗಳನು ಹೇಗೋ ಒಬ್ರ ಪಕ್ಕ ಹೊಂದಾಣಿಕೆ ಮಾಡಿ ಕೂರಿಸಿದಳು..ಉಳಿದ ಒಂದೂವರೆ ಗಂಟೆ ನಿಂತೇ ಪ್ರಯಾಣ ಮಾಡಿದಳು..
ನಡುವೆ ಒಮ್ಮೆ ಅವನ ಫೋನ್ ಬಂದಿತ್ತು…
” ಸೀಟ್ ಸಿಕ್ತ? ಅಂತ….
” ಓಕೆ ಆರಾಮಾಗಿ ಕೂತಿದೇವೆ ಯೋಚನೆ ಮಾಡಬೇಡಿ” ಅಂದಳು
” ನಾನು ಹೇಳಿದ್ನಲ ಸೀಟು ಸಿಕ್ಕೆ ಸಿಗುತ್ತೆ ಅಂತ”
“ನಿಜ” ಅಂತ ಇವಳು ಫೋನ್ ಇಟ್ಟಳು
===
ಶೋಧ
ಬಹುಶಃ ಆ ನಾಲ್ಕು ಯುವಕರು ಆ ದಿನ ತೀರಾ ಖಾಲಿ ಇದ್ದರು ಅಂತ ಅನಿಸಿತು. ಆ ನಾಲ್ಕೂ ಜನರ ಮಾತುಕತೆ ಗಮನ 55 /60 ರ ಆಸುಪಾಸಿನ ಒಬ್ಬ ವ್ಯಕ್ತಿಯನು ಕುರಿತೆ ಆಗಿತ್ತು.
ಸಮ ಮಾಡಿಕೊಳ್ಳದ ಅರೆ ಬರೆ ಹಣ್ಣಾದ ಗಡ್ಡ, ಬಾಚಿಕೊಳ್ಳದ ತಲೆಗೂದಲು, ಮಾಸಿದ ಕಾಲರ್ ನ ಅಂಗಿ, ಒಗೆಯದ ಧೂಳು ಹಿಡಿದ ಹಳೆಯ ಜೀನ್ಸ್ ತೊಟ್ಟ ಮ್ಲಾನ ಮುಖದ ಮತ್ತು ತನಗೆ ತಾನೆ ಮಾತಾಡಿ ಕೊಳ್ಳುತ್ತಿದ್ದವನ ಹಾಗೆ ತುಟಿ ಅಲುಗಿಸುತ್ತಿದ್ದ ಆ ವ್ಯಕ್ಯಿ ಟೀ ಅಂಗಡಿಗೆ ಬಂದ ಬಗೆ ಅಗ್ಗದ ಸಿಗರೇಟ್ ಹಚ್ಚಿಕೊಂಡ ಬಗೆ ಎಲ್ಲ ಕಂಡು ಆ ನಾಲ್ವರೂ ಅಂದುಕೊಂಡದ್ದು ಪಕ್ಕಾ ಅವನು ಆತ್ಮಹತ್ಯೆ ಮಾಡಿಕೊಳ್ಳಲೇ ಹೊರಟ ಅಂತ.
ಏನಾದರೂ ಆಗಲಿ ಆ ವ್ಯಕ್ತಿ ಯನು ಇವತ್ತು ಬೆನ್ನು ಹತ್ತುವ ನಿರ್ಧಾರ ಮಾಡಿದರು ನಾಲ್ವರೂ
ಒಂದು ಗಂಟೆ ನೋಡೇ ಬಿಡಲು ನಿರ್ಧಾರ. ಅವರ ಮಾತಿನ ನಡುವೆ ಆ ವ್ಯಕ್ತಿ ಯಾವ ಯಾವ ತರಹ ಆತ್ಮಹತ್ಯೆ ಮಾಡಿಕೊಳ್ಳಬಹುದೆಂಬ ಚರ್ಚೆಯೂ ಆಯಿತು.
ಆ ವ್ಯಕ್ತಿ ಹೋದಲೆಲ್ಲ ಹಿಂಬಾಲಿಸಿದರು ಸುಮಾರು ಒಂದೂವರೆ ತಾಸಿನ ಶೋಧ ಕಾರ್ಯ
ಆ ವ್ಯಕ್ತಿ ರೈಲ್ವೆ ನಿಲ್ದಾಣದ ಬಳಿ ಹೋಗುವಾಗ ಈ ನಾಲ್ವರ ಕುತೂಹಲ ಹೆಚ್ಚು ಆಯಿತು
ಅನಾಹುತವನು ತಪ್ಪಿಸಲೆಂದೇ ಹೊರಟ ನಿರ್ಧಾರ.
ಆ ವ್ಯಕ್ತಿಯ ನಡೆ ವೇಗವಾಯಿತು.ಪ್ಲಾಟ್ ಫಾರ್ಮ್ ಆರರ ಬಳಿ ಅವನ ಓಟ. ಯಾವುದಕೆ ತಡವಾಗಿತ್ತೋ? ಆಗ ತಾನೆ ರೈಲೊಂದು ಜನರನು ಇಳಿಸಿಹೋದ ಹಾಗೆ ಖಾಲಿಯಾದ ಜಾಗ.
ಅವನ ವೇಗದ ನಡಿಗೆ
ದೂರದ ಬೆಂಚಲಿ ಮೂವರು ಹೆಣ್ಣುಮಕ್ಕಳು ಕಾಯ್ತಾ ಇದ್ದರು. ಪುಟ್ಟ ಹುಡುಗಿ ಅಜ್ಜ ಅಂತ ಓಡಿ ಬಂದು ಅಪ್ಪಿಕೊಂಡಿತು.ಅದರ ಹಿಂದೆ ಒಬ್ಬ ಯುವತಿ ಅವಳ ಹಿಂದೆ ಇವನ ಸರಿಸಮಾನ ವಯಸ್ಸಿನ ಹೆಂಗಸು.
ಬೆನ್ನು ಹತ್ತಿದ್ದ ನಾಲ್ವರೂ ಹಾಗೆ ನಿಂತಲ್ಲಿಯೇ ನಿಂತಿದ್ದರು.
===
ವಿಠಲ
ಗುರು ತಾನೇ ತಾನಾಗಿ ಹೋಗಿ ಕೇಳಿದ.
ತರಕಾರಿ ಅಂಗಡಿಯ ಆ ತಾಯಿಗೆ. ಪ್ರತಿಸಲ ತರಕಾರಿ ಕೊಳ್ಳುವಾಗಲೂ ಒಂದಿಲ್ಲೊಂದು ರೆಸಿಪಿ ಕಲಿಸಿಕೊಡ್ತಾ ಇದ್ದ ತಾಯಿ.
ಇದ್ದಕ್ಕಿದ್ದಂತೆ ಪುಣೆಗೆ ಹೋಗಿ ಬರಬೇಕಾಗಿ ಬಂತು. ಗುರುಗೆ ದಿಢೀರ್ ಅಂತ ನೆನಪಾದುದು ತರಕಾರಿಯ
ಆ ತಾಯಿ ಮಾತು. ಅವಳ ಮಗ ವಿಠಲ ಪುಣೆಲಿ ಇರೋ ವಿಷಯ ಮತ್ತು ಯಾವುದೋ ಕಂಪನಿಲಿ ದೊಡ್ಡ ಕೆಲಸದಲಿ ಇರೋ ವಿಷಯವನ್ನು ಹೆಮ್ಮೆಯಿಂದ ಹೇಳ್ತಾ ಇದ್ದುದು.
‘ಅಮ್ಮ ಇವತ್ತು ರಾತ್ರಿ ಪುಣೆಗೆ ಹೊರಟಿದೇನೆ. ವಿಠಲನ ಕಾಣಲ? ಏನಾದರೂ ಹೇಳೋದು ಕೊಡೋದು?’
ಪಟ್ ಅಂತ ಎದ್ದವಳೆ ” ಸಂಜೆ ೫ ಬಾ ಮಗ ಕಂಡು ಹೋಗು ಒಂದಿಷ್ಟು ತಿಂಡಿ ಮಾಡಿಕೊಡುವೆ’ ಅಂದಳು.
ಫೋನ್ ನಂ ಮತ್ತು ತಿಂಡಿ ಬ್ಯಾಗ್ ಪಡೆದು ಹೊರಟ ಗುರು ಪುಣೆಯಲಿ ನಸುಕು ಇಳಿದವನೇ ವಿಠಲನಿಗೆ ಫೋನ್ ಮಾಡಿದ
‘ಇದೀನಿ ಸರ್ ಬಹಳ ಕೆಲಸ ಆಫೀಸಲಿ 8 ಕ್ಕೆ ಸಿಗುವೆ’
ಅಂತ ವಿಳಾಸ ಕೊಟ್ಟ..
ಆದರೂ ಕುತೂಹಲ ತಡೆಯಲು ಆಗದೆ ಗುರು ಒಂದು ತಾಸು ಮುಂಚೆನೆ ಹೋಗಿ ನಿಂತ ಅವನು ಕೊಟ್ಟ ವಿಳಾಸ ದೊಡ್ಡ ಮಾಲ್ ಆಗಿತ್ತು. ಒಳಹೋಗಿ ಫೋನ್
ಮಾಡಿದಾಗ ವಿಠಲ ಕೆಂಪು ಯುನಿಫಾರ್ಮ್ ಧರಿಸಿ..’ ಎಲಿದೀರಿ ಸರ್ ಬಂದೆ ಬಂದೆ’
ಎನ್ನುತ್ತಲೇ ಗುರು ಇದ್ದ ಜಾಗಕೆ ಓಡಿ ಬಂದಿದ್ದ.
ನೆಲಸಾರಿಸುವ ಉದ್ದ ಕೋಲಿನ ಮಾಪ್ ಹಿಡಿದೇ ವಿಠಲ ಗುರುವಿನ ಎದುರು ನಿಂತಿದ್ದ!
===
ಸುಖ
ಮೂರನೇ ಮಹಡಿಯ ನನ್ನ ಫ್ಲಾಟಿನ ಬಾಲ್ಕನಿಲಿ ನಿಂತು ಕೆಳಗೆ ನೋಡಿದರೆ ಕಾಣೋದು ಪ್ರಭು ಜೆಂಟ್ಸ್ ಪಾರ್ಲರ್. ಸೂರ್ಯ ಹುಟ್ಟೋದು ಹೆಚ್ಚು ಕಡಿಮೆ ಆಗಬಹುದೇನೋ ಆದರೆ ರಾಜೇಶ್ ಮತ್ತವನ ಪತ್ನಿ ಮತ್ತು ಪುಟ್ಟ ಮಗಳು
ಈ ಜಾಗದಲಿ ಕಾಣಿಸೋದು ತಡವಾಗೊಲ್ಲ.
ಸಲೂನಿನ ಅಂಗಳ ಕಸ ಗುಡಿಸಿ ನೀರು ಹಾಕಿ ಒಮ್ಮೆ ಕನ್ನಡಿ ಕುರ್ಚಿಗಳನೆಲ್ಲ ಪಾರ್ವತಿ ಒರೆಸಿಕೊಡುವ ವರೆಗೂ ೨ ವರ್ಷದ ಮಗಳು ರತ್ನ ರಾಜೇಶನ ತೋಳಲಿ.
ಸಲೂನಿನ ಎದುರಿನ ಕಿರಾಣಿ ಅಂಗಡಿಯ ಅಂಗಳದ ಮೂಲೇಲಿ ಈಗ ಪಾರ್ವತಿ ಯ ತರಕಾರಿ ಮಾರಾಟ ಅಣಿ ಗೊಳಿಸಬೇಕು. ಮೂಟೆ ಗಳನು ಸುರಿದು ತರಕಾರಿ ಗುಂಪು ಮಾಡಿ ತಯಾರಿ ಮಾಡಿಕೊಡುವ ಹೊಣೆ ರಾಜೇಶದು. ಅಪ್ಪನ ಸಲೂನು, ಅಮ್ಮ ನ ತರಕಾರಿ ಹರಹಿನ ಮಧ್ಯೆದ ಬೀದಿ ದಾಟುತ್ತಾ ಓಡಾಡಿಕೊಂಡು ಇರುವ ಕಂದ ರತ್ನ.
ಸದಾ ಎದುರು ಬದಿರೆ ಇರುವ ಅಪ್ಪ ಅಮ್ಮ ಕಾಣಿಸ್ತಾ ಇರೊ ಬಗ್ಗೆ ರತ್ನ ಗೆ ಸದಾ ಖುಷಿ.
ನಾನು ಪತ್ರಿಕೆಯ ವರದಿ ಎಲ್ಲ ಸಿದ್ದಪಡಿಸಿ ಮನೆಗೆ ಬರೋ ಹೊತ್ಗೆ ನಡುರಾತ್ರಿ ಎರಡು. ಟೇಬಲ್ ಮೇಲೆ hot box ಊಟ ರೆಡಿ ಮಾಡಿ ಬೀಗ ಹಾಕಿ ಕೊಂಡು ಮಲಗಿ ಬಿಡುವ ಇವಳ ಕಾಲೇಜು ಕೆಲಸ ಆರಂಭ ಆಗುವ ಹೊತ್ಗೆ ನನ್ನ ನಿದ್ದೆ.
ಮತ್ತೆ hot box ಲಿ ತಿಂಡಿ..
ಇವಳ ರಾತ್ರಿ ನನಗೆ ಹಗಲು..
ನನ್ನ ಹಗಲು ಇವಳಿಗೆ ರಾತ್ರಿ..
ಸುಮ್ನೆ ಊಟ ಮಾಡಿಕೊಂಡು ಮಲಗೋಕೆ ಒಂದು ಜಾಗ ಅಷ್ಟೆ ಮನೆ.ಇನ್ನೂ ಹುಟ್ಟದ ಮಗ ಮಗಳ ಬಗ್ಗೆ ಯೋಚಿಸಲೂ ಸಮಯ ಇಲ್ಲ.
ಭಾನುವಾರ ಮಾತ್ರ ಬಿಡುವು. ನಾನೂ ಇವಳೂ ಬಾಲ್ಕನೀಲಿ ನಿಂತು ನೋಡುವಾಗ ರಾಜೇಶ್, ಪಾರ್ವತಿ ಮತ್ತು ರತ್ನ ಮೂವರೂ ಸುಖದ ಅರ್ಥವನು ವಿವರಿಸಿದಂತಾಗುತ್ತದೆ.
===
ಗುಲಾಬಿ
ಸಾವಿರ ಸಾವಿರ ಸಲ ಯೋಚಿಸಿದ್ದ ಮುನಿಸ್ವಾಮಿ.
ಅಗಸ್ತ್ಯನಿಗೆ ಈ ವಿಷಯ ಹೇಗೆ ತಿಳಿಸೋದು ಅಂತ! ಆದರೂ ತಿಳಿಸಲೇ ಬೇಕಾದ ವಿಷಯ ಅದರಲೂ ತಾನೆ ತಿಳಿಸಬೇಕಾದ ವಿಷಯ.ತಾನು ತಿಳಿಸದೇ ಇದ್ರೆ ಕೊಂದೇ ಹಾಕ್ತಾನೆ ಅನ್ನೊ ದಿಗಿಲಿಗೆ ಮುನಿಸ್ವಾಮಿ ನಡುಗುತ್ತಲೇ ಫೋನ್ ಮಾಡಿದಾಗ ರಾತ್ರಿ ಹನ್ನೊಂದು..
” ಭಾವಾ ರುಕ್ಮಿಣಿ ಹೋಗಿಬಿಟ್ಟಳು!” ಅಗಸ್ತ್ಯ ಕೂಗ್ತಾನೇ ಇದ್ದ ” ಎಲ್ಲಿ ಯಾವಾಗ ಏಕೆ ಹೇಗೆ ಅಂತ
” ಬೆಬೆಬೆ” ಅಂದ ಮುನಿಸ್ವಾಮಿ..
” ನಾನು ಬರೋದ್ರೊಳಗೆ ನನ್ನ ತಂಗಿ ಹೆಣಾನ ಕದಲಿಸಿದ್ರೆ ಕೊಚ್ಚಿ ಹಾಕ್ತೀನಿ ನಿನ್ನ! ” ಅಂತ ಹೇಳಿ ಫೋನಿಟ್ಟ ಅಗಸ್ತ್ಯ.
ತನ್ನ ಎದೆಪದಕ ಜೀವವಾದ ತಂಗಿನ ಆ ಮನೆಗೆ ಕೊಡೋಕೆ ಅಗಸ್ತ್ಯ ನಿಗೆ ಇಷ ಇರಲಿಲ್ಲ. ಬೇಜವಾಬ್ದಾರಿ ಕುಡುಕ ಬೀದಿನಾಯಿ ಹಾಗಿದ್ದ ಮುನಿಸ್ವಾಮಿ ಬಗ್ಗೆ ನಂಬಿಕೆ ಇರಲಿಲ್ಲ.ಆದರೆ ಬಡತನ ಅಮ್ಮನ ರೋಗ ಅವಳ ಅಂತಿಮ ಹಂಬಲದಂತೆ ರುಕ್ಮಿಣಿ ಯ ಆ ರಕ್ಕಸನ ಜೊತೆ ಮದುವೆ ಮಾಡಲಾಯಿತು. ಅಚಾನಕ್ ಹೊಟ್ಟೆ ನೋವು ಎಂಬ ಕಾರಣಕೆ ಆಸ್ಪತ್ರೆ ಸೇರಿ ಐದು ಗಂಟೆಯೊಳಗೇ ಎರಡು ವರ್ಷದ ಮಗಳು ಗುಲಾಬಿ ಯನು ಬಿಟ್ಟು ರುಕ್ಮಿಣಿ ಹೊರಟೇ ಹೋಗಿದ್ದಳು.
ನಖಶಿಖಾಂತ ಬೆಂಕಿ ಕಟ್ಟಿಕೊಂಡೇ ಮುನಿಸ್ವಾಮಿಯನು ಕೊಚ್ಚಿಹಾಕಲು ಬಂದಂತಿದ್ದ ಅಗಸ್ತ್ಯ ಕೊತ ಕೊತ ಕುದಿಯುತಿದ್ದ…ತಂಗಿ ಸಂಸ್ಕಾರ ಮುಗಿಯಲಿ ಅಂತ ಕಾದಿದ್ದ. ಕೊಚ್ಚಿ ಹಾಕಬೇಕು ಅಂತ ಮುನ್ನುಗ್ಗುವಾಗ
” ಮಾಮಾ” ಅಂತ ಕಂದಮ್ಮ ಗುಲಾಬಿ ಕೂಗಿದಳು..
ಕೊಡಲಿಯನು ಬಿಸಾಕಿದವನೇ ಗುಲಾಬಿಯನು ಎದೆಗೆ ಅಪ್ಪಿಕೊಂಡು ಬಸ್ ಹತ್ತಿ ಹೊರಟೇ ಬಿಟ್ಟ..
===
ಕೊಡೆ
ಕಳೆದ ಎರಡು ವರ್ಷಗಳಲಿ
ತನ್ನ ಜೀವದ ಎರಡು ರೂಪದಂತೆ ಇದ್ದ ಹೆಂಡತಿ ಮತ್ತು ಅಕ್ಕನನು ಕಳೆದುಕೊಂಡಿದ್ದ ಮೂರ್ತಿಗೆ ಮಗಳಿಗೆ ಹೆರಿಗೆಯಾದ ವಿಷಯ ಗೊತ್ತಾಗಿ ದಡಬಡಿಸಿ ಎಂತ ಮಗು ಅಂತ ಕೇಳೋದನೆ ಮರೆತು ನೋಡಲು ಹೊರಟೇ ಬಿಟ್ಟ.
ತಿಪಟೂರಿನು ತಲುಪೋದ್ರಲಿ ಧೋ ಅಂತ ಮಳೆ.
ರಸ್ತೆ ದಾಟಿ ಆ ತಿರುವಿನ ಬಲಬದಿಯೇ ಆಸ್ಪತ್ರೆ ಮೈಯೆಲ್ಲ ಒದ್ದೆ ಮಾಡಿಕೊಂಡೇ ದಾಟಿ ಬಿಟ್ಟ. ಮಗಳು ಕಲ್ಯಾಣಿ ಕುತ್ಗೆಗೆ ತೆಳು ಸ್ಕಾರ್ಫ್ ಕಟ್ಕೊಂಡು ನಿದ್ದೆಗೆ ಜಾರಿದ್ದಳು.
ಪಕ್ಕದಲಿ ಎಳೆ ಹೂ ಎಸಳಂತಹ ಹೆಣ್ಣು ಮಗು.ಎರಡನೇದೂ ಹೆಣ್ಣು ಮಗು!
ಕಲ್ಯಾಣಿ ಎಚ್ಚರ ಆಗಿ ನೋಡಿದಾಗ ಪಕ್ಕದಲ್ಲಿ ಅಪ್ಪ ಕೂತಿದ್ದ.
” ಯಾವಾಗ ಬಂದೆ ಅಪ್ಪ?
ಅಯ್ಯೋ ಮೈಎಲ್ಲ ಒದ್ದೆ..ತಲೆ ಒರೆಸಿಕೊ
ಮೊದಲೇ ನಿನಗೆ ನೆಗಡಿ ಆಗೊಲ್ಲ….ಕೊಡೆ ಇಲ್ವ ಅಪ್ಪ?
” ಇಲ್ಲ ಮಗಳೇ ಹೊರಟಾಗ ಅಲ್ಲಿ ಮಳೆ ಇರಲಿಲ್ಲ”
” ಅಪ್ಪ ಈ ಬಾರಿಯೂ ಹೆಣ್ಣು ಮಗು” ಅಂತ ಕಲ್ಯಾಣಿ ನಕ್ಕಳು
” ಹ್ಮ್ ಮಗಳೇ ಕಳೆದ ಸಲ ನಿನ್ನ ಅಮ್ಮಗೆ ಜನುಮ ಕೊಟ್ಟೆ
ಈಗ ನನ್ನ ಅಕ್ಕನಿಗೇ ಜನುಮ ಕೊಟ್ಟೆ”
ಕಲ್ಯಾಣಿ ಜೋರಾಗಿ ನಕ್ಕಳು
“ಸದ್ಯ ಅಪ್ಪ ಇನ್ಯಾವ ಪ್ರೀತಿ ಪಾತ್ರ
ಹೆಣ್ಣು ಜೀವವೂ ಇಲ್ವಲ್ಲ ಸದ್ಯ ನಿನಗೆ!”
ಮೂರ್ತಿ ಕೂಡಾ ನಕ್ಕ
ಕಲ್ಯಾಣಿ ಮನೆಯಿಂದ ಒಂದು ಕೊಡೆ ತರಿಸಿ ಕೊಟ್ಟಳು
” ಅಪ್ಪ ನೆನೆದುಕೊಂಡು ಹೋಗಬೇಡ” ಅಂತ ಕೂಗಿದಂತೆ ಹೇಳಿದಳು
ಮೂರ್ತಿ ಆಸ್ಪತ್ರೆಯಿಂದ ಹೊರಬಂದ ಮತ್ತೆ ಧೋ ಮಳೆ
ಯಾಕೋ ಕೊಡೆಯನು ಅರಳಿಸಲಿಲ್ಲ