Tuesday, April 13, 2021

ಅಬ್ಬೆ

Dr. Ajith Hareeshi
ಡಾ. ಅಜಿತ್ ಹರೀಶಿ
response@134.209.153.225
newsics.com@gmail.com
ಸಾಂದರ್ಭಿಕ ಕತೆ
ವಿಶ್ವ ಅಮ್ಮಂದಿರ ದಿನ ವಿಶೇಷ

===

ತುತ್ತಿನ ಜತೆ ಅಕ್ಷರ, ಕಲೆ, ನೈತಿಕತೆಯನ್ನು ಬೆರೆಸಿ, ಬೆಳೆಸಿ ಅಬ್ಬೆ ನನ್ನನ್ನು ಲೋಕಕ್ಕೆ ಬಿಟ್ಟಿದ್ದಾಳೆ. ಮನುಷ್ಯತ್ವವನ್ನು ಪೊರೆದವಳು. ಮನೆಯ ಮೊದಲ ಪಾಠಶಾಲೆಯಲ್ಲಿ ಇವಳೇ ಕಲಿಸಿದ ಹೆಜ್ಜೆ ಹೆಜ್ಜೆಯ ಪಾಠ ನಾನು ಅಪ್ಪನಾದ ಮೇಲೂ ಬದುಕಿಗೆ ನಿತ್ಯ ಅನಿವಾರ್ಯವಾದುದು.

ಅಮ್ಮ ಕೂಡ ಒಬ್ಬ ಹೆಂಗಸು ಮತ್ತು ಮನುಷ್ಯಳು. ಹಾಗಾಗಿ ಇವಳಲ್ಲಿ ಆಸೆ, ಪ್ರೀತಿ, ಸಹನೆ, ಉದ್ವೇಗಗಳ ಜೊತೆ ಸಣ್ಣತನ, ದಡ್ಡತನ, ಕೋಪ, ಕಣ್ಣೀರು ಮತ್ತು ಪಶ್ಚಾತ್ತಾಪಗಳೆಲ್ಲ ಇದ್ದಾವೆ ಅಂತ ಈಗೀಗ ನನ್ನ ಪುರುಷತ್ವಕ್ಕೆ ಅರ್ಥವಾಗತೊಡಗಿದೆ.
ಈಕೆ ಇಂದಿಗೂ ಮಗನಿಗೆ ಇಷ್ಟ ಎಂಬ ಕಾರಣಕ್ಕೆ ಕಬ್ಬಿನ ಹಾಲು, ಶೇಂಗಾಬೀಜ, ಅಪ್ಪೇಹುಳಿಗಳನ್ನು ಯಾರ ಕೈಗೂ ಸಿಗದಂತೆ ಎತ್ತಿಡುತ್ತಾಳೆ. ಅವನ್ನು ಸೇವಿಸುವವರೆಗೆ ಬಿಡುವುದಿಲ್ಲ. ಅಂದರೆ, ಇವಳು ನನ್ನನ್ನು ಹಡೆದು ನಾಲ್ಕು ದಶಕಗಳೇ ಕಳೆದರೂ ನಾನಿನ್ನೂ ಇವಳಿಗೆ ಕಂದನಾಗಿದ್ದೇನೆ. ಅದೆಷ್ಟು ನಿರಂತರ ಪ್ರೇಮ ಇವಳದು!

ಕೆಲವೊಮ್ಮೆ ನಾನು ಯಾವುದೋ ಒತ್ತಡದಲ್ಲಿದ್ದಾಗ ಆಯಿಯ ರೇಗುವುದೂ ಉಂಟು. ಆಮೇಲೆ ಬೇಜಾರಾಗುತ್ತದೆ. ಪಶ್ಚಾತ್ತಾಪವಾದಾಗ ಅವಳ ಬಳಿ ನಾನು ಮೌಖಿಕವಾಗಿ ಕ್ಷಮೆ ಕೇಳುವುದಿಲ್ಲ. ಜಗತ್ತಿನ ಬೇರೆ ಯಾವ ವ್ಯಕ್ತಿಯ ಜೊತೆ ಹೀಗೆ ಆಗಿದ್ದರೆ ಕ್ಷಮೆಕೋರಿಕೆ ಎಂಬುದು ಸಂಬಂಧದ ಉಳಿವಿಗೆ ಅನಿವಾರ್ಯವಾಗುತ್ತದೆ.
ಇವಳ ಜೊತೆ ಮಾತ್ರ ಇಂತಹ ಬಾಹ್ಯ ಅಭಿವ್ಯಕ್ತಿಗಳ ಆಡಂಬರವೇ ಇಲ್ಲ. ಇವಳು ನನ್ನ ಸಿಟ್ಟಿಗೆ ನೋಯುವುದಿಲ್ಲ, ಬೇಯುವುದಿಲ್ಲ. ಬದಲಿಗೆ ಪ್ರೀತಿಯೊಂದೆ!
ವಾಸ್ತವವೇನೆಂದರೆ, ನಮ್ಮಿಬ್ಬರ ನಡುವೆ ಮಾತುಕತೆ ಕಡಿಮೆ. ಆದರೆ, ನನ್ನ ನೋವು, ಸೋಲುಗಳು ಈಕೆಗೆ ಅರ್ಥವಾಗಿ ಬಿಡುತ್ತವೆ. ಈ ಮೌನ ಸಂಭಾಷಣೆಯ ಸೇತುವೆಗೆ ನಾನು ಬೆರಗಾಗುತ್ತೇನೆ!

ನಮ್ಮದು ಹಳೆಯ ಕಾಲದ ರೈಲ್ವೆ ಡಬ್ಬಿಯಂತಹ ಮನೆ. ಮನೆಯ ಎದುರಿಗಿನ ಬಿದುರಿನ ಕಟಾಂಜನದಿಂದ ಹಿಡಿದು ಬಾವಿಯವರೆಗಿನ ದೂರವೇ ಸುಮಾರು ಐದು ನೂರು ಮೀಟರ್. ಶೌಚಾಲಯಕ್ಕೆ ಹೋಗಬೇಕೆಂದರೆ ಭರ್ತಿ ಒಂದು ಕಿಲೋಮೀಟರ್.
ರಾತ್ರಿಯಾದ ಮೇಲೆ ನನಗೆ ಒಬ್ಬನೇ ಮನೆಯೊಳಗೆ ಓಡಾಡಲು ಮತ್ತು ಶೌಚಾಲಯಕ್ಕೆ ಹೋಗಲು ವಿಪರೀತ ಭಯವಾಗುತ್ತಿತ್ತು. ನಾನು ಇವಳಿಗೆ ದುಂಬಾಲು ಬೀಳುತ್ತಿದ್ದೆ.
ಹೊರಜಗುಲಿಯಲ್ಲಿ ಪಟ್ಟಾಂಗ ಹೊಡೆಯುತ್ತಲೇ ಅಥವಾ ಇಸ್ಪೀಟು ಆಡುತ್ತಲೋ, ಹಿರಿಯರು ನನಗೆ ನೀರು, ಎಲೆ, ಅಡಿಕೆ, ತಂಬಾಕು, ಸುಣ್ಣ ಇತ್ಯಾದಿ ತರಲು ಹೇಳುತ್ತಿದ್ದರು. ಹೀಗೆ ಒಂದು ದಿನ ವೀಳ್ಯದ ಎಲೆಯನ್ನು ಅಪ್ಪ ತರಲು ಹೇಳಿದರು. ಅದನ್ನು ಹಾಳಾಗಬಾರದೆಂದು ಬಾವಿಯೊಳಗೆ ಹಗ್ಗ ಕಟ್ಟಿ ಇಳಿಬಿಟ್ಟಿರುತ್ತಿದ್ದರು. ನನಗೆ ಏಕಾಂಗಿಯಾಗಿ ಅರ್ಧ ಕಿ.ಮೀ. ಜರ್ನಿ. ಮೇಲಿಂದ ಬಾವಿಯೊಳಗೆ ಇಣುಕಿ ನೋಡಿ, ಅಲ್ಲಿಂದ ಎಲೆಯ ಚೀಲವನ್ನು ಎತ್ತಿ ತರಬೇಕು. ಬಾವಿಯಲ್ಲಿ ಬ್ರಹ್ಮರಾಕ್ಷಸ ಇರುತ್ತಾನೆಂಬ ಕಥೆಯನ್ನು ಬೇರೆ ಕೇಳಿದ್ದೆ. ಈ ಕೆಲಸ ಅಸಾಧ್ಯ ಎನಿಸಿತ್ತು. ಇವಳ ಬಳಿ ಹೋಗಿ ವಿಷಯ ಹೇಳಿ ಅಳತೊಡಗಿದೆ.
‘ನೋಡು ಮಗಾ, ದೇವರಿಗೆ ಎಲ್ಲಾ ಕಡೆ ಇರಲಿಕ್ಕೆ ಆಗಲ್ಲ ಅಂತಾನೇ ಅಮ್ಮನ್ನ ಈ ಜಗಕ್ಕೆ ಕಳಿಸಿದ್ದು, ನೀನು ನನ್ನ ಕೈ ಹಿಡಿದುಕೊಂಡು ಹೋಗ್ತಾ ಇದ್ದೀಯಾ ಅಂತ ತಿಳ್ಕೊಂಡು ಹೋಗು, ಹೆದರಿಕೆ ಆದ್ರೆ ಅಮ್ಮ ಅಂತ ಉಚ್ಚಾರ ಮಾಡು ಎಲ್ಲ ಕೆಟ್ಟ ಶಕ್ತಿಗಳೂ ನಾಶವಾಗ್ತವೆ’ ಅಂದಳು. ಅಲ್ಲಿಂದ ಮುಂದೆ ನಾನು ಹೆದರಿಕೆಯೆಂಬ ಕಾರಣಕ್ಕೆ ಯಾವ ಕೆಲಸವನ್ನೂ ಮಾಡದೇ ಬಿಡಲಿಲ್ಲ.

‘ಸ್ಟೇಜ್ ಫಿಯರ್’ ಮತ್ತು ಸಂಕೋಚ ತುಸು ಹೆಚ್ಚೇ ಇರುವ ಸ್ವಭಾವ ನನ್ನದಾಗಿತ್ತು.
ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬಗಳಿದ್ದಾಗ ಜ್ವರ, ಭೇದಿಗಳೆಲ್ಲಾ ಆವರಿಸುತ್ತಿದ್ದವು. ಹೀಗಿರುವಾಗ ಒಮ್ಮೆ, ನನ್ನೂರಿನಿಂದ ಐದು ಕಿ.ಮೀ. ದೂರದ ಊರೊಂದರಲ್ಲಿ ಎನ್.ಎಸ್.ಎಸ್. ಶಿಬಿರ ಏರ್ಪಡಿಸಿದ್ದರು. ಮತ್ತು ನಮಗೆಲ್ಲಾ ಕಡ್ಡಾಯವಾಗಿ ಹಾಜರಿರಲೇಬೇಕೆಂದು ಫರ್ಮಾನು ಹೊರಡಿಸಿದ್ದರು. ಕರಗುಂದ ಸರ್ ಎಂಬುವವರು ಎನ್.ಎಸ್.ಎಸ್. ಆಫೀಸರ್, ತುಂಬಾ ಸ್ಟ್ರಿಕ್ಟು. ಅಷ್ಟೇ ಅಂತಃಕರಣದ ವ್ಯಕ್ತಿ ಕೂಡಾ.

ಹಗಲೆಲ್ಲಾ ಸ್ವಚ್ಛತಾ ಕಾರ್ಯಕ್ರಮ. ಹಿರಿಯರ (ಸಂಪನ್ಮೂಲವ್ಯಕ್ತಿಗಳ) ಭಾಷಣಗಳೆಲ್ಲಾ ಮುಗಿದವು. ‘ರಾತ್ರಿ ಊಟ ಆದ್ಮೇಲೆ ಮೈದಾನದಲ್ಲಿ ಟಾರ್ಪಾಲು ಹಾಕಿ ಎಲ್ಲರನ್ನೂ ಕುಳ್ಳಿರಿಸಿ ಒಂದೊಂದು ಚೀಟಿ ಎತ್ತಿಕೊಳ್ಳಲು ಕೊಟ್ಟರು ಕರಗುಂದ ಸರ್.
ನನಗೆ ಬಂದ ವಿಷಯ ‘ಪ್ರೇಮ ವಿವಾಹ’. ನನ್ನ ಸರದಿ ಬಂದಾಗ ಕರೆದರು. ಹೋಗಲಿಲ್ಲ ಗಟ್ಟಿ ಕೂತೆ. ಗದರಿದರು. ಅಲ್ಲೇ ನಿಂತು ಓದು ಎಂದರು. ಊಹೂಂ, ಸರಿ ಕುಳಿತುಕೊಂಡೆ. ಓದು ಅಂದರು ಸಾಧ್ಯವಿಲ್ಲ ಕ್ಷಮಿಸಿ ಬಿಡಿ ಅಂದೆ.
“ಇವತ್ತು ಬಿಡ್ತೀನಿ, ನಾಳೆ ಬೇಕಾದರೆ ಮೊದಲೇ ಹಾಳೆಲ್ಲಿ ಬರೆದುಕೊಂಡು ಬಂದು ಓದಬೇಕು” ಅಂತ ಜಡ್ಜ್ ಮೆಂಟ್ ಕೊಟ್ಟುಬಿಟ್ಟರು.

ರಾತ್ರಿ ಎಲ್ಲರೂ ಮಲಗಿದ ಮೇಲೆ ಆ ಶಾಲೆಯಿಂದ ಹೊರಬಂದು ನೋಡಿದೆ. ಎಲ್ಲಾ ಕಡೆ ಆಳೆತ್ತರದ ಕಾಂಪೌಂಡು. ಎದುರಿಗೆ ದೊಡ್ಡಗೇಟಿಗೆ ಬೀಗ ಹಾಕಿದ್ದರು.
ಮಧ್ಯರಾತ್ರಿಯ ಹೊತ್ತಿಗೆ ಕಂಪೌಂಡ್ ಹಾರಿ, ಮುಖ್ಯರಸ್ತೆ ಸಿಗುವವರೆಗೆ ಹಿಂದಕ್ಕೂ ಸಹ ತಿರುಗಿ ನೋಡದೇ ಓಡತೊಡಗಿದ್ದೆ. ಅಲ್ಲಿ ಲಾರಿಯೊಂದು ಸಿಕ್ಕು ನಮ್ಮೂರ ಬಸ್ ಸ್ಟ್ಯಾಂಡ್ ತಲುಪಿ, ಅಲ್ಲಿಂದ ಮತ್ತೆ ಒಬ್ಬನೇ ಓಡತೊಡಗಿದ್ದೆ. ಮನೆಯವರೆಗೆ ಈ ಓಟ ಒಂಥರಾ ಧೈರ್ಯ ಕೊಟ್ಟಿದ್ದು ನಿಜ.
ಆಗೆಲ್ಲಾ ಬಾಗಿಲಿಗೆ ಅಗುಳಿ ಹಾಕಿ ಮಲಗುವ ಅಭ್ಯಾಸ ನಮ್ಮ ಊರುಗಳಲ್ಲಿ ಇರಲಿಲ್ಲ. ಹೋಗಿ ಜಗುಲಿಯ ಸೋಫಾದ ಮೇಲೆ ನಿದ್ರಿಸಿದ್ದೆ.

ಬೆಳಗ್ಗೆ ಶುರುವಾಯ್ತಲ್ಲ ವಿಚಾರಣೆ. ಯಾಕೋ ಅಲ್ಲಿಂದ ಓಡಿಬಂದ್ಯಾ! ಹೊರಹಾಕಿದರಾ?
ಅಮ್ಮ ಒಳಗೆ ಕರೆದಳು ‘ಮೊದಲು ಸ್ನಾನ ಮಾಡು ಹೋಗು’ ಅಂದಳು.
ಸ್ನಾನ ಮಾಡಿ ಬಂದವನಿಗೆ ಹೊಸ ಬಟ್ಟೆ ಹಾಕಿಕೊಳ್ಳಲು ಹೇಳಿ, ಕ್ಯಾಂಪಿನ ಜಾಗಕ್ಕೆ ಕರೆದುಕೊಂಡು ಹೊರಟಳು.
‘ಮಗಾ ಸರ್ ಮುಂದೆ ನಿಂತು ರಾತ್ರಿ ಮಲಗಿದ ನಂತರ ಈಗ ಹೊರಡುವವರೆಗಿನ ಎಲ್ಲಾ ಕಥೆ ಹೇಳು’ ಅಂದಳು.
ಅಲ್ಲಿಗೆ ಹೋದೆವು. ಸರ್ ಮುಂದೆ ನಡೆದ ಎಲ್ಲವನ್ನು ಬಿಡದೆ ಹೇಳಿದೆ. ಬಹುಶಃ ಅಮ್ಮ ಪಕ್ಕಕ್ಕೆ ಇರುವ ಧೈರ್ಯದಿಂದ ಸರ್ ಮತ್ತೆ ಕ್ಯಾಂಪಿಗೆ ಕರೆದುಕೊಳ್ಳಲು ಒಪ್ಪಿಕೊಂಡರು. ‘ಆದರೆ ಒಂದೇ ಕಂಡೀಶನ್. ನನ್ನ ಮುಂದೆ ಹೇಳಿದ್ದಷ್ಟನ್ನೂ ಸ್ವಚ್ಛತಾಕಾರ್ಯ ಮಾಡುತ್ತಿರುವವರ ಮುಂದೂ ಹೇಳಬೇಕು’
ಇದಾದ ನಂತರ ಹಲವು ಆಶುಭಾಷಣ, ಚರ್ಚಾಸ್ಪರ್ಧೆಗಳಲ್ಲಿ ಬಹುಮಾನಗಳನ್ನೂ ಪಡೆದೆ !

ನಾನು ಬುದ್ಧಿಬಲ್ಲವನಾಗುವ ಮೊದಲೇ ಆಯಿಗೆ ಅಸ್ತಮಾ ಕಾಡುತ್ತಿತ್ತು. ನಮ್ಮದು ಸುತ್ತಲೂ ಹೊಳೆಗಳು ಹರಿಯುವ ದ್ವೀಪದಂತಹ ಹಳ್ಳಿ. ಆಗೆಲ್ಲಾ ಬ್ರಿಡ್ಜುಗಳಿರಲಿಲ್ಲ. ವಾಹನ ಸಂಪರ್ಕ ಕೂಡಾ ಕಡಿಮೆಯಿತ್ತು. ಆಯಿಗೆ ಅಸ್ತಮಾ ತೀವ್ರವಾಗುತ್ತಿದ್ದುದು ಅಪರಾತ್ರಿಯಲ್ಲಿಯೇ. ಡಾಕ್ಟರ್ ಬರುವವರೆಗೆ ಅಥವಾ ಕೆಲವೊಮ್ಮೆ ಕುಳಿತೇ ಬೆಳಗು ಮಾಡುತ್ತಿದ್ದಳು. ನಾನು ಇವಳ ತೊಡೆಯ ಮೇಲೆ ಮಲಗಿರುತ್ತಿದ್ದೆ. ಅಮ್ಮನಿಗೆ ಆರಾಮಿಲ್ಲ ಅಂತ ಗೊತ್ತಿದ್ದರೂ ಆಟದ ಆಯಾಸದಿಂದ ನಿದ್ರೆಗೆ ಜಾರಿ ಬಿಡುತ್ತಿದ್ದೆ. ಅಂತಹ ಎಳೆವೆಯನ್ನು ಹೊತ್ತೇ, ತನ್ನ ಕಷ್ಟಗಳ ಅವಡುಗಚ್ಚಿ ಹೇಗೆ ಸಹಿಸುತ್ತಿದ್ದಳು ಎಂಬುದೇ ನನಗೆ ಇಂದೂ ಬಗೆಹರಿಯದ ಪ್ರಶ್ನೆ!
ನಮ್ಮದು ಅಡಿಕೆ ತೋಟ ಮತ್ತು ಭತ್ತದ ಗದ್ದೆಗಳು ಇದ್ದುದರಿಂದ, ಸೀಸನ್‍ಗಳಲ್ಲಿ ಕೃಷಿಕಾರ್ಮಿಕರು ಮನೆಗೆ ಬರುತ್ತಿದ್ದರು. ರಾತ್ರಿಯಿಡೀ ನಿದ್ದೆಯಿಲ್ಲದ ಆಯಿ ಬೆಳಗ್ಗೆ ನಮಗೆ, ಅವರಿಗೆ ಚಹಾ-ತಿಂಡಿ, ಮಧ್ಯಾಹ್ನ ಅಡುಗೆ ಮಾಡಿ ಹಾಕುವುದನ್ನು ಯಾವತ್ತೂ ತಪ್ಪಿಸಲಿಲ್ಲ. ವೈದ್ಯಕೀಯವಾಗಿ ಶ್ವಾಸಕೋಶದ ತೊಂದರೆ ಇದ್ದಾಗ ದೇಹಕ್ಕೆ ಪ್ರಾಣಶಕ್ತಿಯ ಹರಿವು ಕುಂದುತ್ತದೆ. ಅಂದರೆ ಆಕ್ಸಿಜನ್ ಪೂರೈಕೆ ಕುಗ್ಗುತ್ತದೆ. ಜೀವಕೋಶಗಳ ಕೆಲಸ ಸ್ಥಗಿತಗೊಂಡು ನಿತ್ರಾಣವಾಗುತ್ತದೆ. ನಿದ್ರೆ ಈ ಜೀವಕೋಶಗಳ ಪುನರ್ ನಿರ್ಮಾಣ, ಪುನರ್ಜೀವನಕ್ಕೆ ಕಾರಣ. ನಿದ್ರೆಯಲ್ಲಿ ನಮ್ಮೆಲ್ಲರ ಸಂಪೂರ್ಣ ಮನೋದೈಹಿಕ ಪೋಷಣೆ ನಡೆಯುತ್ತದೆ ಎಂಬುದು ವೈದ್ಯಕೀಯವಾಗಿಯೂ, ಅನುಭವದಿಂದಲೂ ದಕ್ಕುವ ಸತ್ಯ. ನಿದ್ರಾವ್ಯತ್ಯಯದಿಂದ ನಮಗಾಗುವ ನೋವಿನ ತೀವ್ರತೆ ಹೆಚ್ಚುತ್ತದೆ. ಅಂದರೆ ದೇಹದಲ್ಲಿ ಅಂಗಾಂಶಗಳು ಸೊರಗುತ್ತವೆ, ಸವಕಳಿ ಹೆಚ್ಚುತ್ತದೆ. ಚೈತನ್ಯ ಕುಗ್ಗುತ್ತದೆ. ಈ ರೀತಿಯ ಆರೋಗ್ಯ, ನಿದ್ರೆಯ ವೈಪರೀತ್ಯವಿದ್ದಾಗಲೂ ನನ್ನ ಆಯಿ ಗೊಣಗಾಡದೆ ನಮ್ಮ ಆರೈಕೆ ಮಾಡುತ್ತಿದ್ದಳು. ಆಂತರಿಕ ಮಾತೃಶಕ್ತಿಗೆ ನಾನೆಷ್ಟು ಪದಗಳಲ್ಲಿ ಬರೆದರೂ ಮುಗಿಯದ ವಿಷಯವಾಗುತ್ತದೆ.

ಸೈಲಂಟಾಗಿ ಹಿಂಡಿ ಹಿಪ್ಪೆ ಮಾಡುವ ಅಸ್ತಮಾ ಕಣ್ಣಿಗೆ ಕಾಣುವ ರೋಗವಲ್ಲ. ಹಾಗಾಗಿ ನನ್ನಜ್ಜಿಗೆ ಸೊಸೆ ಬೇಕಂತಲೇ ನಾಟಕ ಮಾಡುತ್ತಾಳೆ ಎಂಬ ಅನುಮಾನ ಕಾಡುತ್ತಿತ್ತೇನೋ. ಅದಕ್ಕಾಗಿ ಮನೆಯಲ್ಲಿ ಅಪ್ಪನೆದುರು ಕಂಪ್ಲೆಂಟ್ ಮಾಡುತ್ತಿದ್ದರು ಅಜ್ಜಿ. ಇಂತಹ ಅಭದ್ರ, ಅಸಹಕಾರ, ಅಪ್ರಿಯ ಮನೆಯ ವಾತಾವರಣದಲ್ಲೂ ಇವಳು ಆಕ್ಷೇಪ ಎತ್ತುತ್ತಿರಲಿಲ್ಲ. ಅದೆಂತಹ ಸಹನೆ ಇವಳದು!

ಹೀಗಿರುವಾಗಲೇ ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿದ್ದ ನನ್ನ ಅಣ್ಣ, ಜೇನುನೊಣ ಕಡಿದು ಅಕಾಲಿಕವಾಗಿ ಇಹಲೋಕ ತ್ಯಜಿಸಿದ. ನಾವೆಲ್ಲರೂ ಅತ್ತೆವು, ಆಯಿ ಅಳಲಿಲ್ಲ. ಭೂಮಿ ಬಾಯ್ತೆರೆದು ನುಂಗಿ ಬಿಡಲಿ ಅಂತ ಅನ್ನಿಸುವಂತೆ ಕುಳಿತಿದ್ದಳು. ತನ್ನದೇ ರಕ್ತ, ಮಾಂಸ, ಉಸಿರಾದ ಮಗನ ಸಾವಿಗೂ ಕರಗದ ಜೀವ! ಆದರೆ, ಅಸ್ತಮಾ, ಅತ್ತೆಯೊಂದಿಗಿನ ಮನಸ್ತಾಪ, ಅಣ್ಣನ ಸಾವುಗಳಿಂದ ಆಯಿ ಒಳಗೇ ಕುಸಿದಿದ್ದಳೇನೋ. ನಮ್ಮ ಅರಿವಿಗೆ ಬಾರದಂತೆ ‘ಖಿನ್ನತೆ’ಗೆ ಜಾರಿದ್ದಳು. ರೋಗವನ್ನು ಕುಟುಂಬ ವೈದ್ಯರು ಗುರುತಿಸುವುದರೊಳಗಾಗಿ ಅದು ಉಲ್ಬಣಿಸಿತ್ತು. ಮಾನಸಿಕ ವ್ಯಾಧಿಗೆ ಔಷಧ ಅನಿವಾರ್ಯವಾಗಿತ್ತು. ಮನೋವೈದ್ಯರ ಭೇಟಿ ನಿಯಮಿತವಾಯ್ತು.

ಇವೆಲ್ಲವುಗಳ ಮಧ್ಯೆ ನಾನು ಆಯುರ್ವೇದ ವೈದ್ಯ ಪದವಿಯನ್ನು ಗಳಿಸಿ, ಒಂದಿಷ್ಟು ದಿನ ಬೆಂಗಳೂರಿನಲ್ಲಿ ಅನುಭವ ಪಡೆದು, ಹುಟ್ಟಿದ ಊರಿನಲ್ಲಿಯೇ ವೃತ್ತಿಯನ್ನು ಆರಂಭಿಸಲು ನಿರ್ಧರಿಸಿ ಮನೆಗೆ ವಾಪಸ್ಸಾದೆ. ಇದ್ದ ಒಬ್ಬ ನನ್ನನ್ನು ಹಲವು ವರ್ಷಗಳು ದೂರವಿಡಬೇಕಾದಾಗ ಅದೆಂತಹ ತ್ಯಾಗ ಮಾಡಿದ್ದಳು!
ನನಗೆ ಮದುವೆಯಾಯ್ತು. ಹೆಂಡತಿ ಮನೆಯ ಜವಾಬ್ದಾರಿಯನ್ನು ನಿರ್ವಹಿಸತೊಡಗಿದಳು. ನಮಗೆ ಮಗ ಹುಟ್ಟಿದ. ಒಂದಿಷ್ಟು ಸಂತಸದ ಕ್ಷಣಗಳಿಂದ ಕೆಲವು ಕಾಲ ಆಯಿ ಸಂತೃಪ್ತಿಯಿಂದ ಇದ್ದಳು ಎಂಬುದು ನನ್ನ ಸಮಾಧಾನಕ್ಕೆ ಕಾರಣವಾಗಿತ್ತು.
ನಾನು ಊರಿಗೆ ಬಂದು ಕ್ಲಿನಿಕ್ ಆರಂಭಿಸಿದ ಮೇಲೆ, ಅವಳಿಗೆ ಆಗಾಗ ರಕ್ತದೊತ್ತಡ ಮತ್ತು ಸಿಹಿಮೂತ್ರ ರೋಗದ ಕುರಿತು ರಕ್ತಪರೀಕ್ಷೆ ಮಾಡುತ್ತಿದ್ದೆ. ಎಲ್ಲವೂ ಸರಿಯಾಗಿತ್ತು.

ಅದೊಂದು ದಿನ ರಕ್ತದಲ್ಲಿ ಶುಗರ್ ಜಾಸ್ತಿಯಾಯ್ತು. ಕೆಲವೇ ದಿನಗಳಲ್ಲಿ ಬಿ.ಪಿ. ಜೊತೆಯಾಯ್ತು. ‘ಈಗ ಅವೆಲ್ಲಾ ಕಾಮನ್ ಅಂತಲ್ಲಾ’ ಎಂದು ಅಮ್ಮ ನನಗೇ ಸಮಾಧಾನ ಮಾಡಿದಳು. ಒಂದು ಹಿಡಿ ಮಾತ್ರೆಗಳನ್ನು ತಿನ್ನುವುದಕ್ಕೆ ಆಯಿ ಎಂದೂ ಬೇಸರಿಸಿಕೊಳ್ಳಲಿಲ್ಲ.
ಆದರೆ, ವಿಧಿ ಆಕೆಯ ಮೇಲಿನ ಪ್ರಹಾರವನ್ನು ನಿಲ್ಲಿಸಿರಲಿಲ್ಲ. ಆವತ್ತು ಬೆಳಗ್ಗೆ ಬಲಿಪಾಡ್ಯಮಿ. ‘ಮಗಾ, ಯಾಕೋ ಎದೆಯ ಎಡಭಾಗ ಮತ್ತು ಎಡಗೈ ನೋಯುತ್ತಿದೆ’ ಎಂದಳು. ಒಮ್ಮೆ ಜನರಲ್ ಚೆಕ್‍ಅಪ್ ಮಾಡಿದೆ. ಯಾಕೋ ಸಮಾಧಾನವಾಗದೇ ತಜ್ಞವೈದ್ಯರಲ್ಲಿ ಅವಳನ್ನು ಕರೆದೊಯ್ದೆ. ಅವರು ಎಲ್ಲಾ ಫಿಸಿಕಲ್ ಪರೀಕ್ಷೆಗಳನ್ನೂ ಮಾಡಿ, ನನ್ನ ಮುಖ ನೋಡಿ ಏನೂ ಮಾತನಾಡದೆ ಎಫ್.ಎನ್.ಎ.ಸಿ. ಪರೀಕ್ಷೆಗೆ ಬರೆದುಕೊಟ್ಟರು.
ಮೂರು ದಿನಗಳಲ್ಲಿ ಪರೀಕ್ಷೆಯ ರಿಸಲ್ಟ್ ಬಂದಿತ್ತು. ಅದು ‘ಸ್ತನದಕ್ಯಾನ್ಸರ್’! ತಡಮಾಡದೇ ಮಂಗಳೂರಿಗೆ ಕರೆದೊಯ್ದೆವು. ಅಲ್ಲಿಯ ಶಸ್ತ್ರಚಿಕಿತ್ಸಕರು ಬೈಯಾಪ್ಸಿ ಮಾಡಿ ಕನ್ಫರ್ಮ್ ಮಾಡಿಕೊಂಡರು. ಮೂರನೇ ಸ್ಟೇಜ್ ಎಂದು ನಮಗೆ ತಿಳಿಯಪಡಿಸಿದರು. ಮತ್ತು ಅದೇ ವಾರದಲ್ಲಿ ನನಗೆ ‘ಅಮೃತ’ವನ್ನು ನೀಡಿದ ಒಂದು ಸ್ತನವನ್ನು ಪೂರ್ತಿ ತೆಗೆದುಹಾಕಿದರು. ಸ್ತನವನ್ನು ತೆಗೆಯುವ ವಿಷಯವನ್ನು ತಿಳಿದಾಗ ಅಮ್ಮ ಆಘಾತಕ್ಕೆ ಒಳಗಾಗಬಾರದೆಂದು, ಮನದಟ್ಟು ಮಾಡಲು ಕೌನ್ಸೆಲಿಂಗ್ ತಜ್ಞರು ಬಂದಿದ್ದರು. ಅವರು ನನ್ನ ತಾಯಿಯ ಸ್ಥಿತಪ್ರಜ್ಞತೆಯನ್ನು ನೋಡಿ ಬೆರಗಾದರು.
ಅವರು ಕೃತಕ ಸ್ತನದ ಕುರಿತು ಹೇಳಿದಾಗ ಆಯಿ ನಸುನಕ್ಕು ‘ಕೊಟ್ಟವನೇ ಕಿತ್ತುಕೊಂಡಿದಾನೆ, ಮತ್ಯಾಕೆ ಇವೆಲ್ಲಾ’ ಅಂದರು. ಆದರೆ, ಆ ‘ಅಮೃತಕಲಶ’ವನ್ನು ಕತ್ತರಿಸುವುದು ನೆನೆದಾಗ ನನ್ನ ಕರುಳಿನಲ್ಲಿ ಕಿವುಚಿದಂತಹ ಅನುಭವವಾಯ್ತು.
ಕಿಮೋಥೆರಪಿ ಕೊಡುವಾಗ ರಕ್ತನಾಳಗಳು, ಉಗುರು ಎಲ್ಲಾ ಕಪ್ಪು ಬಣ್ಣಕ್ಕೆ ತಿರುಗಿದ್ದವು. ಕೂದಲು ಉದುರತೊಡಗಿತು. ಚರ್ಮಕಿತ್ತು ಬರತೊಡಗಿತ್ತು. ಆದರೂ, ಅಮ್ಮ ಒಂದು ದಿವಸವೂ ಕೊರಗಲಿಲ್ಲ, ಎದೆಗುಂದಲಿಲ್ಲ. ಆಮೇಲೆ, ರೇಡಿಯೋ ಥೆರಪಿಯಾಗಿ ಹೊಸ ಉತ್ಸಾಹದಿಂದ ಆಸ್ಪತ್ರೆಯಿಂದ ಬಿಡುಗಡೆಯಾದರು.

ಈಗ ಪೂರಕವಾಗಿ ಹಾರ್ಮೋನ್ ಥೆರಪಿಗೆ ಸಂಬಂಧಪಟ್ಟ ಗುಳಿಗೆಯನ್ನು ಕ್ಯಾನ್ಸರಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳುತ್ತಿದ್ದಾಳೆ. ‘ಅಮೃತಕಲಶ’ವೆಂಬ ಆಯುರ್ವೇದ ಔಷಧಿಯನ್ನು ಪ್ರತಿನಿತ್ಯ ಸೇವಿಸುತ್ತಾಳೆ.
ಶಸ್ತ್ರಚಿಕಿತ್ಸೆಯಾಗಿ ಆರು ವರ್ಷಗಳು ಕಳೆದಿದ್ದು, ಅವಳು ತನ್ನ ಕೆಲಸಗಳನ್ನು ತಾನು ಮಾಡಿಕೊಂಡು ಆರಾಮಾಗಿದ್ದಾಳೆ. ಯಾರಾದರೂ ಸ್ತನದ ಕ್ಯಾನ್ಸರಿನಿಂದ ಬಳಲುವವರಿದ್ದರೆ, ಅಮ್ಮನನ್ನು ಭೇಟಿಯಾಗಿ, ಚರ್ಚಿಸಿ ಅನುಮಾನಗಳನ್ನು ಬಗೆಹರಿಸಿಕೊಂಡು ಮಾನಸಿಕವಾಗಿ ಗಟ್ಟಿಯಾಗಿ ತೆರಳುತ್ತಾರೆ.
ಈ ಮಧ್ಯೆ ಇವಳಿಗೊಮ್ಮೆ ಮಿದುಳುಜ್ವರ ಕಾಡಿ, ಒಂದು ವಾರ ಶಿವಮೊಗ್ಗಾದ ಖ್ಯಾತ ಆಸ್ಪತ್ರೆಯಲ್ಲಿ ‘ಕೋಮಾ’ದಲ್ಲಿದ್ದಳು. ಅಷ್ಟು ದಿನಗಳ ನಂತರ ಎಚ್ಚರವಾದಾಗ ಅಮ್ಮ ಕೇಳಿದ ಪ್ರಶ್ನೆ ‘ಮಗ… ಎಲ್ಲಿ?’. ದುರಾದೃಷ್ಟವಶಾತ್ ಆ ಕ್ಷಣದಲ್ಲಿ ಅಲ್ಲಿ ನಾನಿರಲಿಲ್ಲ. ಅವಳ ಸುಪ್ತಪ್ರಜ್ಞೆಯಲ್ಲಿ ಕೂಡಾ ಕರುಳ ಕುಡಿಯದೇ ಧ್ಯಾನ ನಡೆದಿತ್ತು ಎಂಬುದು ನನ್ನ ಮನೋವಿಜ್ಞಾನದ ಅರಿವು. ಅಮ್ಮನ ಈ ನಿರಂತರ ಪ್ರೀತಿಗೆ ಬೇರೆ ಯಾವ ಪದಗಳೂ ಸಿಕ್ಕುತ್ತಿಲ್ಲ.
ನನ್ನ ಮಗ ಅವನ ತಾಯಿಯ ಮಡಿಲಲ್ಲಿ ನಿದ್ರಿಸುತ್ತಿರುವಾಗ, ಅವಳ ಮುಖದಲ್ಲಿ ಅದೇನೋ ಧನ್ಯತೆ. ಆಗೆಲ್ಲಾ ನನಗನ್ನಿಸುತ್ತದೆ ಮುಂದಿನ ಜನ್ಮ ಎನ್ನುವುದಿದ್ದರೆ, ಆ ಜನ್ಮದಲ್ಲಿ ನೀನು ಏನಾಗ್ತೀಯಾ ಎಂಬ ಆಯ್ಕೆಯನ್ನು ನನಗಿಟ್ಟರೆ, ನನ್ನಆಯ್ಕೆ ‘ಆಯಿ’.

ಏಕೆಂದರೆ ನಾನು ನನ್ನ ಆಯಿಯಿಂದ ಕಲಿತ ಜ್ಞಾನ, ವಿವೇಕ ಮತ್ತು ನೈತಿಕತೆಯನ್ನು ಮುಂದಿನ ತಲೆಮಾರಿಗೆ ಹಂಚಿಯೇ ತೀರಬೇಕಾದ (ಡ್ರೈ ಎಂಪ್ಟಿ) ಋಣಭಾರವಿದೆ. ಇಲ್ಲದಿದ್ದರೆ ನನ್ನ ಆಯಿಯ ಚೈತನ್ಯ ಅಮರವಾಗುವುದಾದರೂ ಹೇಗೆ?

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!