Saturday, April 17, 2021

ಅಸ್ಪೃಶ್ಯರು

♦ ರವಿ ಪಾಟೀಲ್, ಬೆಳಗಾವಿ
response@134.209.153.225
newsics.com@gmail.com
ಕವಿತಾಳೊಂದಿಗೆ ಸಲಿಗೆ ಬೆಳೆದಂತೆಲ್ಲ ಮಾದನಲ್ಲಿ ಅವಳ ಮೇಲೆ ದೈಹಿಕ ವಾಂಛೆ ಮೂಡಲಾರಂಭಿಸಿತು. ವಿಚಿತ್ರವೆಂದರೆ ಅವರಿಬ್ಬರ ಮಧ್ಯದಲ್ಲಿ ಅಂಥ ಸಂಪರ್ಕವೊಂದು ಮರುದಿನವೇ ಏರ್ಪಟ್ಟುಬಿಟ್ಟಿತು. ಕವಿತಾಳಲ್ಲಿ ಅವನಿಗೆ ಅಂತಹ ಸ್ವೇಚ್ಛೆಗೆ ಸಾಕಷ್ಟು ಸಲಿಗೆಗಳೂ ಇದ್ದವು. ಅವಳಿಗೂ ಅವನಲ್ಲಿ ಅಂತಹುದೇ ಆಸಕ್ತಿಯಿತ್ತೆಂಬುದಕ್ಕೆ ಅವಳ ಬಜಾರಿ ನಡುವಳಿಕೆಯೇ ಸಾಕ್ಷಿಯಾಗಿತ್ತು. ಅಂದಹಾಗೆ ಅವರಿಬ್ಬರ ಮಧ್ಯದಲ್ಲಿ ಈ ಕೂಡು-ಕಳ್ಳಾಟವೆಂಬುದು ಮೇಲಿಂದ ಮೇಲೆ ತನ್ನಷ್ಟಕ್ಕೆ ತಾನೇ ಸಾಗಿತು. ವಿಪರ್ಯಾಸವೆಂದರೆ- ಕವಿತಾಳ ಬಗೆಗೆ ಚಿಕ್ಕಪುಟ್ಟ ಸಂಶಯಗಳು ಮೂಡಲಾರಂಭಿಸಿದ ಮೇಲೆ ಅವಳಪ್ಪ ಕಲಗೌಡ ಅವಳನ್ನು ಕಾಲೇಜಿಗೆ ಕಳಿಸುವುದನ್ನೇ ನಿಲ್ಲಿಸಿದ…

             

ಲಗೌಡನ ಮಗಳು ಕವಿತಾಳನ್ನು ಹೊಲೆಯರ ಮಾದ ಕೆಡಿಸಿದನೆಂಬ ಸುದ್ದಿ ಊರತುಂಬಾ ಹಬ್ಬಿ ಇಂದಿಗೆ ಒಂದು ವಾರವಾಗಿತ್ತು. ಹೀಗಾಗಿ ಮಾದನ ಮನೆಯೆಂಬೋ ಮನೆಯು ಸೂತಕದ ಛಾಯೆಯಲ್ಲಿ ಬೆದರುಬೊಂಬೆಯ ಶೇಪಿನಲ್ಲಿ ಗರಬಡಿದುಕೊಂಡು ನಿಂತಿತ್ತು. ಮಾದನ ತಂದೆ ತುಕ್ಕ ಮತ್ತು ತಾಯಿ ಲಶಿಮಿ ಇಬ್ಬರೂ ಮೇಲುಮುದ್ದಿ ಮನೆಯ ತೊಲಿಗಂಬಕ್ಕೆ ತೆಲಿಕೊಟ್ಟು ರೋಧಿಸುತ್ತಿದ್ದರು. ಇತ್ತ ಮಾದನನ್ನು ಮನೆಯಿಂದ ಹೊರಗೆ ಅಟ್ಟಿ ಒಂದು ವಾರವಾಗಿತ್ತು; ತುಡುಗು ಬದುಕಿದ್ದ ಮಾದ ಗೆಳೆಯನಾದ ಲಕ್ಕನ ಮನೆಯಲ್ಲಿ ಎರಡು ದಿನ, ಮಲಕನ ಮನೆಯಲ್ಲಿ ಎರಡು ದಿನ ಎಂಬಂತೆ ಇಡೀ ಹೊಲಗೇರಿಯ ಮನೆಗಳಲ್ಲೆಲ್ಲ ಊಟ, ತಿಂಡಿ, ನೀರು-ನಿಡಿ, ಬಟ್ಟೆ-ಬರೆ ಬದಲಿಸುತ್ತ ತಲೆಮರೆಸಿಕೊಂಡು ಕಾಲ ಕಳೆಯುತ್ತಿದ್ದ.
ಅತ್ತ ಕಲಗೌಡ ಹಗಲು ರಾತ್ರಿಯೆನ್ನದೇ ಮಾದನನ್ನು ಹುಡುಕಿ ಹುಡುಕಿ ಅವನೇನಾದರೂ ಸಿಕ್ಕರೆ ಅವನ ತೆಲೀ ತೆಗೆದು ಬಸ್ಟ್ಯಾಂಡಿನ ಮುಂದುಗಡೆ ಇದ್ದ ಅಗಸೀಬಾಗಿಲಿಗೆ ನೇತುಹಾಕಿ ತಾನೇನೆಂಬುದನ್ನು ತೋರಿಸಿಬಿಡುವ ಆವೇಶ ತುಂಬಿಕೊಂಡಿದ್ದ. ಒಂದು ಬಗೆಯ ಹುಂಬು ಕಲಗೌಡನನ್ನು ಹೊಕ್ಕಂತೆ ಅಂವ ಆತನಿಗಾಗಿ ಶೋಧ ನಡೆಸಿದ್ದ. ಕಲಗೌಡ ಒಂದು ದಿನ ತುಕ್ಕನನ್ನೂ ತನ್ನ ಮನೆಗೆ ಕರೆಯಿಸಿ ಅವನನ್ನು ಥರಥರ ಥಳಿಸಿ ಅವನಿಗೆ ಮಗನಿರುವ ವಿಚಾರ ತಿಳಿಸುವಂತೆ ನಾಯಿಗೆ ಬಡಿಯುವಂತೆ ಬಡದಾ. ತುಕ್ಕನ ಕರುಳು ಗಟ್ಟಿಯಿತ್ತು. ಮಾದನ ಮೇಲಿನ ಅವನ ಮಮಕಾರ ಕಡಿಮೆಯಾಗಿರಲಿಲ್ಲವಾದ್ದರಿಂದ ಆತ ಬಾಯಿ ಬಿಡಲಿಲ್ಲ. ಕಲಗೌಡನ ಮಗಳು ಕವಿತಾ- ‘ತನ್ನ ಮದಿವ್ಯಂಬುದು ಇದ್ದರೆ ಅದು ಮಾದನ ಜೋಡೀನ’- ಅನ್ನುವ ಹಾಗೆ ಪಲಕಾರದಲ್ಲಿ ಮುಖ ಹಾಕಿಕೊಂಡು ಮಲಗಿದ್ದಳು.
ಇನ್ನು ಇಡೀ ಊರಿಗೆ ಊರೇ ಗುಸೂಗುಸೂ ಪಿಸೂಪಿಸೂ ಅಂತಾ ಮಾತಾಡಿದ್ದೇ ಮಾತಾಡಿದ್ದು! ‘ಕಲಗೌಡನ ಮಗಳ್ನ ಹೊಲ್ಯಾರ್ ಮಾದ ಕೆಡಿಸಿದತ್… ಮಾದ್ಯಾ ಏನರ ಸಿಕ್ಕಂದ್ರ ಕಲಗೌಡ ಅವನ ಕಡದ ತುಂಡ ಮಾಡತಾನತ; ಪರಿಸ್ಥಿತಿ ವಟ್ಟರ್ಕ ಮೇಳಿಲ್ಲ; ಯಾವಾಗ ಏನಾಕ್ಕತಿ ಹೇಳಾಕಾಗಾಂಗಿಲ್ಲ- ಭಲೇ ಸುದ್ದಿ ಐತ್ಯಲೇ ಮಗಾ! ಮಾದ್ಯಾನ ಸೊಕ್ಕೂ ಇಳಿತತೀ… ಕಾವೇರಿ ಸೊಕ್ಕೂ ಇಳೀತತಿ; ನೋಡಾಕ್ಯತ್ ತಡೀ ಚೀಜ’- ಎಂದು ಏನೇನೋ ಮಾತನಾಡಿಕೊಳ್ಳತೊಡಗಿತ್ತು.
‘ಹೊಲ್ಯಾರ ಮಾದ್ಯಾನ ಡೌಲ ಬಾಳಾಗೇತಿ ಈಗೀಗ; ಪ್ಯಾಂಟ್ಯಾನಾ, ಶಟ್ರ್ಯಾನಾ, ಶೂಜಾನಾ, ಸೇಂಟ್ಯಾನಾ- ಡಿಎಡ್ ಮಾಡ್ಯಾನಂದ್ರ ಯಾನಾ, ಧಿಮಾಕ ಮಾಡತಾನಂದ್ರ ಯಾನಾ- ಮೂರ ತಿಂಗಳ ಕಬ್ಬಾಕಡದ ಆರ ತಿಂಗಳ ಡೌಲ ಮಾಡತಾನಂದ್ರ ಯಾನಾ’- ಇವೆಲ್ಲಾ ಮಾತುಗಳು ಹೊಲೆಯರ ಮಾದನ ಬಗ್ಗೆ ಅವನ ಸಂಗಡಿಗರು ಆಡಿಕೊಳ್ಳುವ ಮಾತುಗಳಾಗಿದ್ದವು.
ಮಾದ ಶೋಕಿ ಮಾಡುತಿದ್ದುದೇನೋ ನಿಜ! ಆದರೆ ಆತನಲ್ಲಿ ಜಂಭವಿರಲಿಲ್ಲ. ವಯೋಸಹಜ ತೋರಿಕೆಗಳು ಮಾತ್ರ ಅವನಲ್ಲಿದ್ದವು. ಕಠಿಣ ಪರಿಶ್ರಮದಲ್ಲಿ ಓದುವ ಬುದ್ಧಿಜೀವಿಯೂ ಅವನಾಗಿದ್ದ. ಮುಗ್ಧ, ವಯೋಸಹಜ ನಡವಳಿಕೆ- ಎಲ್ಲ ಕಾಲೇಜು ಹುಡುಗ ಹುಡುಗಿಯರಿಗಿರುವ ಹಮ್ಮು-ಬಿಮ್ಮುಗಳೆಲ್ಲಾ ಅವನಲ್ಲೂ ಇದ್ದವು. ಆದರೆ ಅದರಲ್ಲೂ ಒಂದು ಬಗೆಯ ಸಾತ್ವಿಕತೆಯಿತ್ತು. ಓದಿನಲ್ಲಿ ಬುದ್ಧಿವಂತನಾಗಿದ್ದ ಮಾದನ ಬಗ್ಗೆ ಅಸೂಯೆಪಟ್ಟುಕೊಳ್ಳುವ ಗೆಳೆಯರೇ ಹೆಚ್ಚಿಗಿದ್ದರು. ‘ಇನ್ನೇನ್ ಡಿಎಡ್ ಮಾಡಿ ಸಾಲಿಮಾಸ್ತರಾಗಿ ತಿಂಗಳಾ-ತಿಂಗಳಾ ಪಗಾರ್ ತಗೊಂಡ್ ನಮನೆಲ್ಲಾ ಕಿಗ್ಗಳಾಗಿ ಕಾಣತಾನ ಈ ಹಾದರಗಿತ್ತಿ ಮಗಾ’- ಅನ್ನುವ ಉರಿಯಿತ್ತು ಅವನ ಸಂಗಡಿಗರಲ್ಲಿ. ತಾವಂತೂ ತಲೆಕೆಳಗೆ ಮಾಡಿ ಓದಿದರೂ ಪಾಸಾಗುವುದಿಲ್ಲ; ಇಂವ ಮಾತ್ರ ಪಾಸಾಗಿ ನೌಕರಿ ಹಿಡದ ಹಿಡಿತಾನನ್ನೋ ಇಚಾರ ಅವನ ಮೇಲೆ ಅಸೂಯೆ ತಾಳಲು; ಅವನನ್ನು ಹೀಯಾಳಿಸಿ ಅನ್ನಲು ಕಾರಣವಾಗಿತ್ತು- ಆದರೆ ಮಾದ ಇದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೇ ಓದು-ಬರಹ, ಹಾಡು-ಹಂಬಲ, ಹುಡುಗಿ-ಗಿಡುಗಿ, ಸಿನೇಮಾ-ಶೋಕಿ ಎಂದೆಲ್ಲಾ ತನ್ನದೇ ಆದ ಒಂದು ವಿಚಿತ್ರ ಮತ್ತು ಅನೂಹ್ಯ ಬದುಕನ್ನು ಬದುಕಿದ್ದ.
ಆದರೆ ಅದಾವ ಘಳಿಗೆಯಲ್ಲಿ ತನ್ನ ಹಳ್ಳಿಯಿಂದ ತಾಲೂಕು ಕೇಂದ್ರದಲ್ಲಿದ್ದ ಡಿಎಡ್ ಕ್ಲಾಸಿಗೆ ಹೋಗುವಾಗ ಬೆಳಗಿನ ಬಸ್ಸಿನಲ್ಲಿ ಕವಿತಾಳನ್ನು ನೋಡಿಬಿಟ್ಟನೋ ಮಾದ- ಅಂದಿನಿಂದಲೇ ಅವನ ಭಾವಪ್ರಪಂಚ ಬದಲಾಗಿಬಿಟ್ಟಿತ್ತು. ಕವಿತಾ ಹತ್ತುವ ಬಸ್ಸನ್ನೇ ಹತ್ತಲಾರಂಭಿಸಿದ್ದ ಮತ್ತು ಕವಿತಾ ಇಳಿಯುವ ಬಸ್ಸನ್ನೇ ಇಳಿಯಲಾರಂಭಿಸಿದ್ದ. ಮೊದಮೊದಲು ಸಹಜವೆಂಬಂತೆ ಸಾಗಿದ್ದ ಈ ಸಾತತ್ಯ ಬರಬರುತ್ತ ಕ್ರಾಸ್‍ಕನೆಕ್ಶನ್ ಪಡೆದು ಒಂದಕ್ಕೊಂದು ಲಾಗಾಯ್ತು ಪಡೆದುಕೊಳ್ಳಲಾರಂಭಿಸಿತ್ತು.
ಕಲಗೌಡನ ಒಬ್ಬಳೇ ಒಬ್ಬಳು ಮಗಳಾಗಿದ್ದ ಕವಿತಾ ಥೇಟ್ ಸೇಬಿನಂತೆಯೇ ದುಂಡು ದುಂಡಾಗಿದ್ದಳು. ವೇಲು ಮತ್ತು ಟಾಪನ್ನು ನಿಧಾನಕ್ಕೆ ಸರಿಸಿ ಪುಟಪುಟನೆಂದು ಹೊರಕ್ಕೆ ಕಣ್ಣುಹಾಯಿಸುತ್ತಿದ್ದ ಅವಳ ಬೆಳ್ಳನೆಯ ದುಂಡು ದುಂಡಾದ ಮೊಲೆಗಳು- ಬೆನ್ನು ತಿರುಗಿಸಿದರೆ ನಿಗುರಿ ನಿಲ್ಲುತ್ತಿದ್ದ ಅವಳ ಪೃಷ್ಠಭಾಗ- ಹೊಲೆಯರ ಮಾದನ ನಿದ್ದಿ-ನೀರಡಿಕೆ-ಊಟ ಎಲ್ಲವನ್ನೂ ನುಂಗಿಹಾಕಿದ್ದವು. ಒಂದು ಪ್ರಕಾರದ ಆಂತರಿಕ ಕೆರಳಿಕೆಯೆಂಬುದು ಮಾದನ ಮೈಯಲ್ಲೆಲ್ಲಾ ಕೋರಿಹುಳು ಕಡದ ತಿನಸಿಕದಂತೆ ಹಬ್ಬತೊಡಗಿತ್ತು. ಒಂದು ದಿನ ಗುಲಾಬಿ ಹೂವು ಇನ್ನೊಂದು ದಿನ ಪ್ರೇಮಪತ್ರವನ್ನು ತಲೆದಿಂಬಿಗೆ ಆಣಿಸಿಕೊಂಡು ಮಲಗಲಾರಂಭಿಸಿದ್ದ ಮಾದ. ಓದಿನ ಮೇಲಿನ ಅವನ ಆಸಕ್ತಿ ತಂತಾನೇ ಕಡಿಮೆಯಾಗಿತ್ತು. ಹಾಳಾದ ಹಾಡುಗಳನ್ನು ಬೇರೆ ಕೇಳುತ್ತಾ ಹೊಳಿದಂಡಿಮ್ಯಾಲೆ ಕುಂತು ಕನಸು ಕಾಣಲಿಕ್ಕೆ ಶುರೂಮಾಡಿದ್ದ. ಒಂದು ದಿನ ಬೇಕೆಂದೇ ಅವಳ ಬಳಿಯ ಸೀಟಿನಲ್ಲಿ ಕುಳಿತು ಒಮ್ಮೆ ಹಿಂತಿರುಗಿ ಇಡೀ ಬಸ್ಸನ್ನು ನೋಡಿದ. ತನಗೆ ಪರಿಚಯವಿರುವ ಜನರೇ ಬಸ್ಸಿನಲ್ಲಿರುವುದನ್ನು ಕಂಡು ಹೌಹಾರಿದ. ನಿಧಾನಕ್ಕೆ ಎದ್ದುಬಂದು ಕೊನೆಯ ಸೀಟಿಗೆ ತಲೆ ಆಣಿಸಿದ. ಇದೀಗ ಕಾಲೇಜು ಮೆಟ್ಟಿಲೇರಿದ್ದ ಕವಿತಾ-ಳೆಂಬೋ ಆ ಅಮಾಯಕ ಹುಡುಗಿಗೆ ಹೊರಪ್ರಪಂಚವೇ ಹೊಸದಾಗಿತ್ತು. ಕಾಲೇಜಿಗೆ ಹೋಗುವುದೇ ಒಂದು ಹಬ್ಬವೆಂಬಂತೆ ತಿಳಿದಿದ್ದ ಆಕೆ ಓದಿನಲ್ಲಿ ಹಸಿಹಸಿ ದಡ್ಡಿಯಾಗಿದ್ದಳು. ಮಾದ ಅವಳ ಮುಗ್ಧತೆಯನ್ನೇ ತನ್ನ ಬಂಡವಾಳವಾಗಿಸಿಕೊಂಡು ದಾರಿಯಲ್ಲೆಲ್ಲೋ ಅವಳನ್ನು ತಡೆದುನಿಲ್ಲಿಸಿ- ‘ಅದ್ಯಾನಾಗೇತ್ಯೋ ನನಗ ಗೊತ್ತಿಲ್ಲ… ನಿನ್ನ ನೋಡಿ ನನಗ ಹುಚ್ಚ ಹಿಡದತಿ; ನಾ ನಿನ್ನ ಭಾಳ ಪ್ರೀತಿಸ್ತನಿ. ನಿನ್ನ ಬಿಟ್ಟ ನನಗ ಇರಾಕಾಗುದುಲ್ಲ. ಮದಿವಿ ಅಂತ್ ಆದ್ರ ನಾ ನಿನ್ನ ಆಗತನಿ. ಸತ್ರ ನಿಂಜೊತಿನ ಸಾಯ್ತನಿ. ನಾ ಹೊಲ್ಯಾರಾಂವ ಇದ್ದಿರಬೇಕ ಖರೆ; ಆದರ ಮನಸ ಭಾಳ ಸುದ್ದೈತಿ. ಛಲೂತಾಂಗಿ ಓದತನಿ. ನಿನ್ನ ಮನಸಿನ್ಯಾಗ ಏನೈತಿ ನನಗ ತಿಳಸಬಕ. ನೀ ಹೂಂ ಅಂದ್ರ ನಾ ಬದಕತನಿ- ಇಲ್ಲಂದ್ರ ನೋಡ… ಇಲ್ಲಿ ಬ್ಲೇಡೈತಿ. ಇದರ್ಲೆ ಕೈ ಕೊರಕೊಂಡ ಸಾಯ್ತನಿ’- ಎಂದು ವಿಕ್ಷಿಪ್ತ ಪ್ರೇಮಿಯಂತೆ ತನ್ನ ಪ್ರೇಮಯನ್ನು ಅವಳ ಮುಂದೆ ನಿವೇದಿಸಿಕೊಂಡ.
ಮಾದ ತನ್ನನ್ನು ಹೀಗೆ ದಿನಾ ಕದ್ದು ನೋಡುವುದು ಕವಿತಾಳಿಗೆ ತಿಳಿದೇ ಇತ್ತು. ಹೀಗಾಗಿ ಅವನ ಎಲ್ಲ ಚಟುವಟಿಕೆಗಳನ್ನೂ ಅವಳು ಗಮನಿಸುತ್ತಲೇ ಬಂದಿದ್ದಳು. ಕಳೆದೆರಡು ತಿಂಗಳುಗಳಿಂದ ಒಂದು ಬಗೆಯ ಮುಗ್ಧತೆ ಮತ್ತೊಂದು ಬಗೆಯ ವಿಕ್ಷಿಪ್ತತೆಯಲ್ಲಿ ಬದುಕಿದ್ದ ಮಾದನ ಕಡೆಗೆ ಕವಿತಾ- ಅವನನ್ನು ನೋಡಿದಂದೇ ಆಕರ್ಷಿತಳಾಗಿದ್ದಳು. ಹೀಗಾಗಿ ಮಾದನ ದಾರಿ ಇನ್ನೂ ಸುಲಭವಾಗಿತ್ತು. ಅವರಿಬ್ಬರ ಪ್ರೇಮವೇನೋ ಕುದುರಿತು; ಆದರೆ ಮುಂದಿನ ದಿನಗಳಲ್ಲಿ ಅದು ಬೇರೆಯದೇ ಒಂದು ಆಯಾಮವನ್ನು ಪಡೆದುಕೊಂಡಿತು. ಆದರೆ ಮಾದನಿಗೇನೂ ಇದು ಸೋಜಿಗವೆನ್ನಿಸಲಿಲ್ಲ. ಮಾದನ ಮನೆಯ ಪಕ್ಕದಲ್ಲಿ ವಾಸವಾಗಿದ್ದ ದುರ್ಗಮ್ಮದೇವಿಗೆ ಬಸಿವ್ಯಾಗಿ ಬದುಕಿದ್ದ ಶಿವಿಯ ಮನಿಗೆ ರಾತ್ರ್ಯಾದರೆ ಯಾರ್ಯಾರೋ ಬಂದುಹೋಗುವ ದೃಶ್ಯವನ್ನು ಸಾವಿರಾರು ಸರತಿಯಾದರೂ ನೋಡಿದ್ದ ಮಾದನಿಗೆ ಕವಿತಾಳ ಮೇಲೂ ಅಂಥದೇ ಒಂದು ವಾಂಛೆ ಮೂಡಿತ್ತು. ಅಪ್ಪ-ಅಮ್ಮ ಗುಡ್ಡದೆಲ್ಲಮ್ಮನ ಜಾತ್ರೆಗೆ ಹೋಗಿದ್ದ ಒಂದು ರಾತ್ರಿ ಶಿವಿ ತಾನೇ ಮಾದನ ಮನೆಗೆ ಬಂದು ಮಾದನಿಗೆ ನಿದ್ದೆ ಹತ್ತಿದ ವಿಷಯವನ್ನು ಖಾತ್ರಿಪಡಿಸಿಕೊಂಡು ಅಂವ ಮಲಗಿದ್ದ ಹಾಸಿಗೆಯಲ್ಲಿ ಸೇರಿ ಅವನ ಚಡ್ಡಿಗೆ ಕೈಹಾಕಿದ್ದಳು. ಮಾದ ಆಗ ಸಣ್ಣವನೇನೂ ಆಗಿರಲಿಲ್ಲ. ಆಗ ಅಂವ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದ. ಕಾಮವೆಂಬುದಕ್ಕೆ ಏಜೂ ಇಲ್ಲ ಸೀಮೆ ಸುಡಗಾಡೂ ಇಲ್ಲವೆಂದು ತಿಳಿದಿದ್ದ ಮಾದ ಸಿಕ್ಕಿದ್ದೇ ಅವಕಾಶವೆಂದು ಶಿವಿಯನ್ನು ಜೋರಾಗಿ ತೆಕ್ಕಿಬಡಿದುಕೊಂಡು ಮಲಗಿದ್ದ. ಮೂರ್ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಈ ಘಟನೆ ಮಾದನಿಗೆ ಕವಿತಾಳೊಂದಿಗೆ ಪ್ರೇಮವುಂಟಾದಾಗ ಸಹಜವಾಗೇ ನೆನಪಿಗೆ ಬಂದಿತ್ತು. ಕವಿತಾಳೊಂದಿಗೆ ಸಲಿಗೆ ಬೆಳೆದಂತೆಲ್ಲ ಮಾದನಲ್ಲಿ ಅವಳ ಮೇಲೆ ದೈಹಿಕ ವಾಂಛೆ ಮೂಡಲಾರಂಭಿಸಿತು. ವಿಚಿತ್ರವೆಂದರೆ ಅವರಿಬ್ಬರ ಮಧ್ಯದಲ್ಲಿ ಅಂಥ ಸಂಪರ್ಕವೊಂದು ಮರುದಿನವೇ ಏರ್ಪಟ್ಟುಬಿಟ್ಟಿತು. ಕವಿತಾಳಲ್ಲಿ ಅವನಿಗೆ ಅಂತಹ ಸ್ವೇಚ್ಛೆಗೆ ಸಾಕಷ್ಟು ಸಲಿಗೆಗಳೂ ಇದ್ದವು. ಅವಳಿಗೂ ಅವನಲ್ಲಿ ಅಂತಹುದೇ ಆಸಕ್ತಿಯಿತ್ತೆಂಬುದಕ್ಕೆ ಅವಳ ಬಜಾರಿ ನಡುವಳಿಕೆಯೇ ಸಾಕ್ಷಿಯಾಗಿತ್ತು. ಅಂದಹಾಗೆ ಅವರಿಬ್ಬರ ಮಧ್ಯದಲ್ಲಿ ಈ ಕೂಡು-ಕಳ್ಳಾಟವೆಂಬುದು ಮೇಲಿಂದ ಮೇಲೆ ತನ್ನಷ್ಟಕ್ಕೆ ತಾನೇ ಸಾಗಿತು. ವಿಪರ್ಯಾಸವೆಂದರೆ- ಕವಿತಾಳ ಬಗೆಗೆ ಚಿಕ್ಕಪುಟ್ಟ ಸಂಶಯಗಳು ಮೂಡಲಾರಂಭಿಸಿದ ಮೇಲೆ ಅವಳಪ್ಪ ಕಲಗೌಡ ಅವಳನ್ನು ಕಾಲೇಜಿಗೆ ಕಳಿಸುವುದನ್ನೇ ನಿಲ್ಲಿಸಿದ. ಆದರೆ ಇಂತಹ ಹುಡುಗನೇ ಅವಳ ಜೊತೆಗಿದ್ದಾನೆ- ಪ್ರೀತಿ ಪ್ರೇಮಗಳೆಂಬ ಹುಚ್ಚಾಟಗಳನ್ನು ನಡೆಸುತ್ತಿದ್ದಾನೆ ಎಂಬ ವಿಚಾರ ಮಾತ್ರ ಅವನಿಗೆ ತಿಳಿಯಲಿಲ್ಲ. ಯಾವುದಕ್ಕೂ ಮುನ್ನೆಚ್ಚರಿಕೆಯೆಂಬಂತೆ ಕಲಗೌಡ ಕವಿತಾಳನ್ನು ಕಾಲೇಜಿಗೆ ಕಳಿಸುವುದನ್ನೇ ನಿಲ್ಲಿಸಿಬಿಟ್ಟು ಅವಳನ್ನು ಮನೆಯಲ್ಲೇ ಕೂಡಿಹಾಕಿದ. ಇತ್ತ ಮಾದನಿಗೆ ಕವಿತಾಳನ್ನು ನೋಡದೇ ಇರುವುದು ಸಾಧ್ಯವೇ ಇಲ್ಲವೆನ್ನುವಂತಹ ಪರಿಸ್ಥಿತಿಯುಂಟಾಯಿತು. ಕಾಮವೋ ಪ್ರೇಮವೋ ಅಗೋಚರ ವಾಂಛೆಯೋ ಅವರಿಬ್ಬರ ಮಧ್ಯದಲ್ಲಿ ಒಂದು ಜಿಗುಟು ಜಿಗುಟಾದ ಸಂಬಂಧವನ್ನು ಸೃಷ್ಟಿಸಿಬಿಟ್ಟಿತು. ಅವಳು ಅಲ್ಲೇ ಅಳಲಿಕ್ಕೆ ಆರಂಭಿಸಿದ್ದಳು; ಇವನು ಇಲ್ಲೇ ಅಳಲಿಕ್ಕೆ ಆರಂಭಿಸಿದ್ದ. ವಿಯೋಗಕ್ಕೆ ನಿಜವಾದ ಅರ್ಥವೆಂದರೇನೆಂದು ಅರ್ಥವಾಗತೊಡಗಿತ್ತು ಅವರಿಬ್ಬರಿಗೂ. ಎರಡು-ಮೂರು ದಿನಗಳಾದರೂ ಕವಿತಾ ತನ್ನ ಮನೆಯನ್ನು ಬಿಟ್ಟು ಹೊರಬರುವ ಲಕ್ಷಣಗಳು ತೋರಲಿಲ್ಲ. ಅವಳನ್ನು ನೋಡದೇ ಇರುವುದು ಆಗಲಿಲ್ಲ ಮಾದನಿಗೆ. ಅತ್ತ ಕವಿತಾಳಿಗೆ ತನ್ನ ಗೆಳೆಯನನ್ನು ಯಾವಾಗ ಸಂಧಿಸಲಿ, ಸಂಧಿಸಿ ಮಾತನಾಡಿಸಲಿ ಎಂಬ ಯೋಚನೆಗಳು ಮೂಡಲಾರಂಭಿಸಿದವು.
ಒಂದು ದಿನ ರಾತ್ರಿ ತನ್ನ ಮನೆಯ ಕಾಂಪೌಂಡನ್ನು ಹಾರಿ ಯಾರೋ ಒಳಕ್ಕೆ ಬಂದ ಸದ್ದು ಕೇಳಿದಂತಾಗಿ ಕಲಗೌಡ ಬಾಗಿಲನ್ನು ತೆಗೆದು ಅಂಗಳಕ್ಕೆ ಬಂದು ನಿಂತು ನೋಡಿದ. ಆದರೆ ಆತ ಅದನ್ನು ಕನಸೋ ಇಲ್ಲಾ ಭ್ರಮೆಯೋ ಒಂದೂ ಅರಿಯದೇ ಹಿಂತಿರುಗಿದ. ಸ್ವಲ್ಪ ಸಮಯದ ನಂತರ ಮತ್ತೆ ಏನೋ ಸದ್ದು ಕೇಳಿಸಿದಂತಾಗಿ ಮತ್ತೆ ಕಾಂಪೌಂಡಿಗೆ ಬಂದು ನಿಂತುಕೊಂಡ. ಆಗಲೂ ಏನೂ ಗೋಚರಿಸಲಿಲ್ಲ. ಕನಸೋ ನನಸೋ ಇಲ್ಲಾ ಭ್ರಮೆಯೋ ಒಂದೂ ತೋಚದೇ ತಿರುಗಿ ಮತ್ತೆ ತನ್ನ ಮಲಗುವ ಕೋಣೆಗೆ ಹೋದ. ಯಾವುದು ಭ್ರಮೆಯೋ ಇಲ್ಲಾ ಕನಸೋ ಎಂದು ಕಲಗೌಡನಿಗೆ ಅನ್ನಿಸಿತ್ತೋ ವಾಸ್ತವದಲ್ಲಿ ಅದು ಸತ್ಯವೇ ಆಗಿತ್ತು. ಹೌದು! ಮಾದ ಕಾಂಪೌಂಡು ಹಾರಿ ಕವಿತಾಳು ಮಲಗಿದ್ದ ಕೋಣೆಗೆ ಹೋಗಿ ಗಪ್‍ಚಿಪ್ಪನೆಂದು ಸೇರಿಕೊಂಡಿದ್ದ. ಇತ್ತ ಕಲಗೌಡ ದೀಪವಾರಿಸಿ ಮಲಗುತ್ತಿದ್ದಂತೆ ಅತ್ತ ಏನೋ ಒಂದು ಸದ್ದು ಬಂದುದನ್ನು ಕೇಳಿ ಗಾಬರಿಯಲ್ಲಿ ಎದ್ದುಕುಳಿತ ಕವಿತಾ ಕೋಣೆಯೊಳಗಿನ ಬಲ್ಬನ್ನು ಹಾಕಿ ನೋಡಿದಳು. ಅವಳು ನಿರೀಕ್ಷಿಸಿರಲಿಲ್ಲ. ಅಂದರೆ ಮಾದ ವಿಚಿತ್ರವಾದ, ವಿಕ್ಷಿಪ್ತತೆಯಲ್ಲಿ ಇಂಥ ರಾತ್ರಿಯಲ್ಲಿ ಹೀಗೆ ಬರುತ್ತಾನೆಂದರೆ ಅವಳಿಗೆ ಖಂಡಿತಾ ನಂಬಲಿಕ್ಕಾಗಿರಲಿಲ್ಲ. ಕನಸಿರಬೇಕು ಎಂದುಕೊಂಡಳು. ಮರುಕ್ಷಣವೇ ಮಾದ ತರತರನೆಂದು ನಡುಗುತ್ತಾ ಅವಳನ್ನು ಜೋರಾಗಿ ಬಿಗಿದಪ್ಪಿಕೊಂಡವನೇ ಅವಳನ್ನು ಮುದ್ದಿಸಲಾರಂಭಿಸಿದ. ಕವಿತಾಳ ಕಣ್ಣು ನೀರುಹಾಕಲಾರಂಭಿಸಿದವು. ಅತ್ತ ಮಾದನೂ ಗಳಗಳನೇ ಅಳಲಾರಂಭಿಸಿದ್ದ. ಅಂದು ರಾತ್ರಿ ಮತ್ತೊಂದು ಬಾರಿ ಅವರಿಬ್ಬರ ಮಧ್ಯದಲ್ಲಿ ಕಾಮ ಘಟಿಸಿತು. ಕಾಮದ ಉತ್ಕಟಾವಸ್ಥೆಯಲ್ಲಿದ್ದ ಮಾದ ಮತ್ತು ಕವಿತಾಳಿಗೆ ಇಡಿಯ ಪ್ರಪಂಚವೇ ಕುರುಡಾಗಿ ಕಂಡಿತು. ನಿಧಾನಕ್ಕೆ ಬಾಗಿಲು ಚೊರ್ ಎಂದು ಸದ್ದು ಮಾಡಲಾರಂಭಿಸಿತ್ತು. ಕಲಗೌಡನ ಆಗಮನ ಅದಾಗಲೇ ಆದಂತಿತ್ತು. ಕಣ್ಣಲ್ಲಿ ಕೆಂಡದುಂಡೆಯೊಂದು ಮೂಡಿನಿಂತಿತ್ತು ಕಲಗೌಡನ ಕಣ್ಣುಗಳಲ್ಲಿ. ಎರಡು ಬೆತ್ತಲ-ಎಳೆಯ ದೇಹಗಳು; ಇಡೀ ಲೋಕವೇ ಕತ್ತಲಲ್ಲಿ ಮಲಗಿರುವಾಗ! ಕೈಲಿದ್ದ ಕೋಲನ್ನು ಜೋರಾಗಿ ಬೀಸುತ್ತಾ ಕಲಗೌಡ ಮಾದನ ಬೆನ್ನಿಗೊಂದು ಜೋರಾದ ಏಟನ್ನು ಹಾಕಿದ. ಕಲಗೌಡ ಮಾದನನ್ನು ದನಕ್ಕೆ ಬಡಿದಂತೆ ಬಡಿಯಲು ಆರಂಭಿಸಿದ. ಕಲಗೌಡ ಮತ್ತು ಕವಿತಾಳು ನೋಡುತ್ತಿದ್ದಂತೆ ಮಾದ ಬಟ್ಟೆಗಳನ್ನು ಕೈಯಲ್ಲೇ ಹಿಡಿದುಕೊಂಡು ಕಿಟಕಿಯಿಂದ ಬೆತ್ತಲಾಗಿಯೇ ಹಾರಿ ಕಾಂಪೌಂಡನ್ನೂ ಜಿಗಿದು ಅಂಥ ನಗ್ನಸ್ಥಿತಿಯಲ್ಲೇ ರಸ್ತೆಯುದ್ದಕ್ಕೂ ಓಡಲಾರಂಭಿಸಿದ. ಮಧ್ಯರಾತ್ರಿಯಾಗಿತ್ತಾದ್ದರಿಂದ ಯಾರೂ ತನ್ನನ್ನು ನೋಡಲಿಲ್ಲವೆಂದು ತಿಳಿದಿದ್ದ ಮಾದನನ್ನು ಹನಮದ್ದೇವರ ಗುಡಿ ಮುಂದೆ ಮಲಗಿದ್ದ ಕಾಲು ಭಾಗ ಊರೇ ನೋಡಿತ್ತು. ಅವನ ಎದೆ ಢವಢವ ಎಂದು ಹೊಡೆಯಲಾರಂಭಿಸಿತ್ತು.
*****
ಅಂದಹಾಗೆ ಇದೆಲ್ಲ ಒಂದು ವಾರದ ಹಿಂದೆ ನಡೆದ ಘಟನೆಯಾಯಿತು. ಪ್ರಸ್ತುತ ಕಲಗೌಡ ಮಾದನಿಗಾಗಿ ಶೋಧ ನಡೆಸುತ್ತಿದ್ದು; ಅತ್ತ ಮಾದ ಎರಡು ಗಂಟೆ ಅಲ್ಲಿ ಎರಡು ಗಂಟೆ ಇಲ್ಲಿ ಎಂಬಂತೆ ತಲೆಮರೆಸಿಕೊಂಡು ಬದುಕುತ್ತಿದ್ದ. ಸಾಯಂಕಾಲವಾದರೆ ಎಲ್ಲೋ ಊರ ಒಂದು ಮೂಲೆಯಲ್ಲಿ ತನ್ನ ಗೆಳೆಯರಿಗೋ ಇಲ್ಲಾ ಇನ್ನಾರಿಗೋ ಭೆಟ್ಟಿಯಾಗುತ್ತಿದ್ದನೆಂಬುದನ್ನು ಹೊರತುಪಡಿಸಿದರೆ ಕಳೆದ ವಾರವೊಂದರಿಂದ ಅವನು ಎಲ್ಲಿದ್ದನೋ ಏನು ಮಾಡಿದನೋ ಅವನೇ ಬಲ್ಲ. ಊರಲ್ಲೆಲ್ಲಾ ಕಲಗೌಡ ಬಿಟ್ಟಿದ್ದ ಕಬ್ಬಿನ ಗ್ಯಾಂಗಿನ ಗುಂಪುಗಳು ಓಂದು ರೀತಿಯಲ್ಲಿ ಇಡೀ ಹೊಲಗೇರಿಯ ಸುತ್ತೆಲ್ಲಾ ಗಸ್ತು ತಿರುಗುತ್ತಿದ್ದವು. ತುರ್ತು ಪರಿಸ್ಥಿತಿಯ ಪೋಲೀಸರ ಗಸ್ತಿನಂತೆ ಇದೆಲ್ಲ ನಡೆಯುತ್ತಿತ್ತು.
‘ತಿನ್ನಾಕ ಕೂಳಿಗೂ ಗತಿಯಿಲ್ಲದ ಹೊಲಬೊಬ್ಬ ಈ ಗೌಡನ ಮಗಳ್ನ ಮುಟ್ಟೂಧೈರ್ಯಾ ಮಾಡ್ಯಾನಂದ್ರ ಯಟ್ಟ್ ಸೊಕ್ಕಿರಬ್ಯಾಡಾ ಆ ವುಂಡಿಗಿ ಮಗ್ಗ… ನನ್ನ ಮೆಟ್ಟ ಸಮಾ ನಿಲ್ಲೂ ಹೊಲ್ಯಾ ನನ್ನ ಮಗಳ್ನ ಮುಟ್ಟೂ ಧೈರ್ಯಾ ಮಾಡ್ಯಾನಂದ್ರ ಅವನ ರುಂಡಾ ಮುಂಡಾ ಬ್ಯಾರೆ ಬ್ಯಾರೆ ಆಗಾಕ ಬೇಕು- ಇಲ್ಲಂದ್ರ ನಾ ಕಲಗೌಡ ಅಲ್ಲ. ನನ್ನ ಕಿಮ್ಮತ್ತೇನಾಗಬ್ಯಾಡ ಊರಾಗ. ಇದಕ ಖರೇ ಶಾಸ್ತಿ ಆಗಾಕಬೇಕು’- ಎಂದು ಇಡೀ ಊರಿಗೇ ಸಾರಿದಂತೆ ಮಾತನಾಡುತ್ತಿದ್ದ ಕಲಗೌಡನ ಕರುಳಿಗೂ ನಿಜವಾದ ವೇದನೆಯಾಗಿತ್ತು.
*****
ಹೆತ್ತು ಹದಿನೈದು ದಿನಕ್ಕೆ ಶಿವನ ಪಾದ ಸೇರಿದ್ದ ಗೌಡನ ಹೆಂಡತಿ ಈರಕ್ಕ ಮಗಳ ಜವಾಬ್ದಾರಿಯನ್ನು ಪರೋಕ್ಷವಾಗಿ ಗಂಡನಿಗೆ ವಹಿಸಿಯೇ ಹೋದಂತಿದ್ದಳು. ಎಂದೂ ಗಂಡನಿಚ್ಛೆಯಂತೆ ಬದುಕಿರದಿದ್ದ ಆಕೆಗೆ ಬಂಗಾರದೊಡವೆಗಳೆಂದರೆ ಪಂಚಪ್ರಾಣ! ಒಂದು ರೀತಿಯಲ್ಲಿ ಕಲ್ಲಿನಂತೆ ಮುಖಬಿಗಿದುಕೊಂಡೇ ಸಂಸಾರ ನಡೆಸುತ್ತಿದ್ದ ಆಕೆಯದ್ದು ಯಾವುದಕ್ಕೂ ಕಲ್ಲು-ಕಲ್ಲಾದ ಕಾಠಿಣ್ಯ; ಗಂಟುಹಾಕಿದ ಮುಖ. ಒಂದರ್ಥದಲ್ಲಿ ಆಕೆ ಸತ್ತಾಗ ಕಲಗೌಡನಿಗೆ ಅರ್ಧ ಸಂತೋಷವೇ ಆಗಿತ್ತು. ಅವಳು ತೀರಿಕೊಂಡಾಗ ಮಗಳನ್ನು ತೋಳಿಗೆ ಎತ್ತಿಕೊಂಡಿದ್ದ ಕಲಗೌಡ ಇಲ್ಲಿಯವರೆಗೂ ಇಳಿಸಿಯೇ ಇರಲಿಲ್ಲ. ಅಷ್ಟೆಲ್ಲಾ ಮುದ್ದು ಮತ್ತು ಪ್ರೀತಿಯನ್ನು ಆತ ಅವಳ ಮೇಲೆ ತೋರಿಸಿ ಬೆಳೆಸಿದ್ದ. ಈಗ ದಿಢೀರೆಂದು ಹೀಗಾದರೆ ಯಾವ ತಂದೆಗಾದರೂ ನೋವಾಗದೇ ಇದ್ದೀತೇ? ದಿನದ ಇಪ್ಪತ್ನಾಲ್ಕು ಗಂಟೆಯೂ ದುರಂತವೊಂದನ್ನು ಬೆನ್ನಿಗೆ ಕಟ್ಟಿಕೊಂಡಂತಾಗಿದ್ದ ಕಲಗೌಡ. ಕರುಳೇ ಕಿತ್ತುಬಂದಂತಾಗಿತ್ತು ಆತನಿಗೆ. ಅದರಲ್ಲೂ ಸಂಪ್ರದಾಯಸ್ಥನಾದ ತನ್ನ ಮನೆತನವನ್ನು ಕೀಳುಜಾತಿಯ ಹುಡುಗನೊಬ್ಬ ಹಾಳುಮಾಡುವುದೆಂದರೆ ಎಂಥ ಅವಮಾನವೆಂಬಂತೆ ಕಂಗಾಲಾಗಿದ್ದ ಕಲಗೌಡ. ಮಾದನನ್ನು ಮುಗಿಸಿದರೂ ತನ್ನ ಕೋಪ ಕಡಿಮೆಯಾಗುವುದಿಲ್ಲವೆಂಬಂತೆ ರೋಷ ತುಂಬಿಕೊಂಡು ಮಾದನ ಶಿಕಾರಿಗಾಗಿ ಕಾಯತೊಡಗಿದ್ದ ಆತ.
ಊರ ಒಂದಂಚಿಗೆ ಹೊಲಗೇರಿಯಿದ್ದರೆ ಅದರ ಇನ್ನೊಂದು ಅಂಚಿಗೆ ಮಾಧ್ಯಮಿಕ ಶಾಲೆಯಿತ್ತು. ಅವೆರಡರ ಮಧ್ಯದಲ್ಲಿ ಒಂದು ಕಾಲುದಾರಿಯಿತ್ತು. ಆ ಕಾಲುದಾರಿಯ ಮೂಲಕ ಕತ್ತಲಾಗುವ ಹೊತ್ತಿನಲ್ಲಿ ಬೈಲುಕಡೆಗೆಂದು ಹೊರಟಿದ್ದ ಮಾದನ ಮೇಲೆ ಒಂದು ಇಳಿಸಂಜಿಗೆ ಗೌಡ ಬಿಟ್ಟಿದ್ದ ಗುಂಪೊಂದರಿಂದ ದಾಳಿ ನಡೆಯಿತು. ಮಾದನ ಅದೃಷ್ಟ-ಅದು ಹೇಗೋ ನಸುಗತ್ತಲಲ್ಲಿ ತಪ್ಪಿಸಿಕೊಂಡ ಆತ ಕೈಲಿದ್ದ ತಂಬಿಗೆಯನ್ನು ನೀರ ಸಮೇತ ಅವರ ಮೇಲೆಯೇ ಎಸೆದು ಪಕ್ಕದಲ್ಲೇ ಬೆಳೆದುನಿಂತಿದ್ದ ಕಬ್ಬಿನಪಡದಲ್ಲಿ ನುಸುಳಿ ತನ್ನ ಜೀವವನ್ನು ಉಳಿಸಿಕೊಂಡ. ಓಡಿ ಓಡಿ ಕೊನೆಗೂ ಕಬ್ಬಿನ ಪಡದ ಸಂದಿಯೊಂದರಲ್ಲಿ ಮೌನವಾಗಿ ಕುಳಿತುಬಿಟ್ಟ. ಬಹಳ ಗಂಟೆಯವರೆಗೂ ಕಬ್ಬಿನ ಪಡದಲ್ಲಿ ಅವರು ಆತನಿಗಾಗಿ ಶೋಧಮಾಡುತ್ತಿದ್ದುದರ ಸದ್ದು ಸರಸರ ಎಂದು ಎಲ್ಲ ದಿಕ್ಕುಗಳಿಂದಲೂ ಕೇಳಿಸುತ್ತಿತ್ತು. ಈ ನಡುವೆ ಮಂಡೆಗಾಲೂರಿ ಕುಳಿತಿದ್ದ ಮಾದನಿಗೆ ಕವಿತಾಳ ನೆನಪೂ ಒತ್ತರಿಸಿ ಬಂತು. ಅವಳನ್ನು ನೋಡುವ; ನೋಡಿ ಮುದ್ದಾಡುವ ಆಸೆ ಆವರಿಸಿಕೊಂಡಿತು. ‘ಅವಳಿಗಾಗಿ ಇಷ್ಟೆಲ್ಲಾ ಕಷ್ಟಪಡುತ್ತಿದ್ದೇನೆಂದರೆ ಖಂಡಿತಾ ಅವಳ ಕೈಯನ್ನು ತಾನು ಬಿಡಬಾರದು’ಎಂದು ತನ್ನೊಳಗೇ ಒಂದು ಶಪಥ ಮಾಡಿಕೊಂಡವನಂತೆ ಹಲ್ಲನ್ನು ವಟ್ಟುಹಿಡಿದುಕೊಂಡು ಅದೇ ಕಬ್ಬಿನ ಪಡದಲ್ಲಿ ಗಟ್ಟಿಯಾಗಿ ಕುಳಿತುಬಿಟ್ಟ. ರಾತ್ರಿ ಎರಡು ಗಂಟೆಯವರೆಗೂ ಕೂತಲ್ಲಿಂದ ಕದಲಲಿಲ್ಲ ಆತ. ಬೈಲುಕಡೆಗೆ ಹೋಗುವ ಜಾಗ ಊರ ಹೊಲಗೇರಿಯಲ್ಲಿದ್ದ ನೂರೈವತ್ತು ಮನೆಗಳ ಸಮಸ್ತ ಆಸ್ತಿ ಅಂದರೆ ಎಲ್ಲ ಒಂದೂವರೆ ಎಕರೆ ಜಾಗ ಸ್ಮಶಾನಕ್ಕೆಂದು ಬಿಡಲ್ಪಟ್ಟಿತ್ತು. ಹೂಳುವುದೂ, ಹೇಲುವುದೂ ಎಲ್ಲದಕ್ಕೂ ಅದೇ ಭೂಮಿ ಬಳಕೆಯಲ್ಲಿತ್ತು. ನೂರೈವತ್ತು ಕುಟುಂಬಗಳಿಗೆ ಮೂರೂವರೆ ಎಕರೆ ಭೂಮಿಯನ್ನು ಪಾಲುಮಾಡುವುದಾದರೂ ಹೇಗೆಂದು ಅದನ್ನು ಸ್ಮಶಾನದಂತೆ ಹೇಲುಗೇರಿಯಂತೆ ಬಳಸಿಕೊಳ್ಳುವಂತೆ ನಿರ್ಧರಿಸಲಾಗಿತ್ತು ಪಂಚಾಯ್ತಿಯಲ್ಲಿ. ಸಂಬಂಧ-ಸನ್ನಿವೇಶಗಳು ಕೆಲವೊಮ್ಮೆ ಇಷ್ಟೆಲ್ಲಾ ಸಂಕೀರ್ಣವಾಗಿರುತ್ತವಾ ಎಂದುಕೊಳ್ಳತೊಡಗಿದ ಮಾದ. ‘ವಾರದಿಂದ ತನ್ನ ಹುಡುಗಿಯ ಮುಖವನ್ನು ನೋಡದ, ಅಪ್ಪ-ಅಮ್ಮರ ಮಾರಿಯನ್ನೂ ನೋಡದ, ಕಾಲೇಜಿಗೂ ಹೋಗದ, ಯಾರಿಗೂ ಭೆಟ್ಟಿಯಾಗದ ಸನ್ನಿವೇಶವೊಂದನ್ನು ತಾನು ಸೃಷ್ಟಿಸಿಕೊಂಡಿದ್ದು ನಿಜಕ್ಕೂ ಯಾತಕ್ಕಾಗಿ? ಯಾರಿಗಾಗಿ? ಕವಿತಾ! ಹೌದು! ಕವಿತಾ! ಆ ನಕ್ಷತ್ರಕ್ಕಾಗಿಯೇ ಅಲ್ಲವೇ ತಾನಿಷ್ಟು ಸಂದಿಗ್ಧಗಳನ್ನು ಎದುರುಹಾಕಿಕೊಂಡಿರುವುದು…’ ‘ಬಾಳುತ್ತೇನೆ… ಇದೇ ಜನರ ಮಧ್ಯೆ… ಕವಿತಾಳಿಗೆ ತಾಳಿಕಟ್ಟಿ… ಇದೇ ಊರಿನಲ್ಲಿ… ಬದುಕುತ್ತೇನೆ… ಅದಾವ ಕಷ್ಟಗಳು ಬರುತ್ತಾವೋ ನೋಡೋಣ… ಅದಾರು ಎದುರು ಬರುತ್ತಾರೋ ನೋಡೋಣ… ಇಪ್ಪತ್ತೊಂದನೆಯ ಶತಮಾನ. ಅಂತರ್ಜಾತಿ ವಿವಾಹಕ್ಕೆ ಸರ್ಕಾರದ ಮಾನ್ಯತೆ; ಮುಕ್ತ ಸೌಲಭ್ಯಗಳಿವೆ; ಹೋಗ್ತೇನೆ… ಕೋರ್ಟಿಗೆ… ಕಚೇರಿಗೆ… ರಿಜಿಸ್ಟರ್ ಮ್ಯಾರೇಜ್ ಆಫೀಸಿಗೆ… ಮದುವೆಯಂತಾ ಆದರೆ ಅದು ಕವಿತಾಳ ಜೊತೆಗೇ… ಇದು ನಿಶ್ಚಯ… ನಿಶ್ಚಯ…’ ತನ್ನೊಳಗೇ ಗಟ್ಟಿ ನಿರ್ಧಾರವೊಂದನ್ನು ಮಾಡಿಕೊಂಡು ಕೈಕಾಲು ಅಲುಗಾಡಿಸದೇ ರಾತ್ರಿ ಎರಡು ಗಂಟೆಗಳವರೆಗೂ ಹಾಗೇ ಕುಳಿತುಕೊಂಡ ಮಾದ. ಇನ್ನೇನು ಹೊತ್ತು ಮೂಡುವ ಸಮಯ- ಕೋಳಿ ಕೂಗುವ ಸಮಯ… ಸಮಯ ನೋಡಿಕೊಂಡ… ನಾಲ್ಕು ಗಂಟೆ ಬಡಿಯುತ್ತಿತ್ತು. ದಿಕ್ಕು ತೋಚಲಿಲ್ಲ. ಎಲ್ಲಿಗೆ ಹೋಗುವುದು… ಮನೆಗೋ… ಗೆಳೆಯರ ಮನೆಗೋ… ಇನ್ನಾರ ಮನೆಗೆ? ಹಲ್ಲುಜ್ಜುವ ಬ್ರಶ್ಶೆಲ್ಲಿ? ತಾನು ದಿನಾ ತೊಡುವ ಬಟ್ಟೆ ಈಗ ಅದಾರ ಮನೆಯಲ್ಲಿ? ತನ್ನ ಬನಿಯನ್ನು, ಶರ್ಟು, ಪ್ಯಾಂಟು… ಎಲ್ಲ… ಎಲ್ಲ… ಎಲ್ಲಿ ಹೋದವು? ಎಲ್ಲೆಂದು ಅವುಗಳನ್ನು ಹುಡುಕುವುದು? ಇಷ್ಟಕ್ಕೂ ತನ್ನ ಆತ್ಮಸಾಕ್ಷಿಯನ್ನೇ ಹುಡುಕಬೇಕಲ್ಲ ಈಗ? ಎಲ್ಲಿ? ಎಲ್ಲದು? ಕಳೆದ ವಾರವೊಂದರಿಂದ ತಾನು ಎಲ್ಲಿ ಬದುಕುತ್ತಿರುವುದು? ಯಾರ ಮನೆಯಲ್ಲಿ? ಎಲ್ಲಿ ತನ್ನ ಓದುವ ಪರಿಕರಗಳು, ಪುಸ್ತಕ, ಬ್ಯಾಗು, ಲಗೇಜು, ಸೇಂಟ್‍ಬಾಟಲ್… ಹುಚ್ಚು… ಹುಚ್ಚು ಹಿಡಿದಂತಾಯಿತು ಮಾದನಿಗೆ. ನಿನ್ನೆ ಸ್ನಾನ ಮಾಡಿದ್ದು ಯಾರ ಮನೆಯಲ್ಲಿ? ಬಹುಶಃ ಟವಲ್ಲು, ಬ್ರಶ್ಶು, ಪೇಸ್ಟು, ನಿಕ್ಕರು, ಬನಿಯನ್ನು ಒಬ್ಬರ ಮನೆಯಲ್ಲಿ? ಪುಸ್ತಕ ಪರಿಕರಗಳು ಇನ್ನೊಬ್ಬರ ಮನೆಯಲ್ಲಿ? ಊಟ ತಿಂಡಿ ಇನ್ನೆಲ್ಲ ಎಲ್ಲಿ ಗತಿಯೋ? ಶಿವಶಿವಾ? ಕಣ್ಣೆದುರೇ ಇರುವ ಅಪ್ಪ-ಅಮ್ಮರನ್ನು ನೋಡುವಂತಿಲ್ಲ. ನಿನ್ನೆ ಯಾರೋ ಜೇಬಿನಿಂದ ದುಡ್ಡು ಕದ್ದಿದ್ದಾರೆ… ಲಕ್ಯಾನೇ ಆ ಕೆಲಸ ಮಾಡಿರಬೇಕು. ಫ್ಯಾಂಟಸಿಯ ಬದುಕೆಂದರೆ ಇದೇ ಇರಬೇಕು? ಸಿನೇಮಾ ನಾಯಕನಿಗೂ ತನ್ನ ಬದುಕಿಗೂ ಒಂಚೂರೂ ವ್ಯತ್ಯಾಸ ಕಾಣಲಿಲ್ಲ ಮಾದನಿಗೆ.
ಅತ್ತ ಮಾದನ ತಂದೆ-ತಾಯಿ, ನೆಂಟರಿಷ್ಟರು ಎದೆಎದೆ ಬಡಿದುಕೊಂಡು ಮಗನ ಸ್ಥಿತಿಯನ್ನೂ ನೋಡದೇ ಅತ್ತ ಗೌಡನಿಗೂ ಅವಿಧೇಯರಾಗದಂತೆ ಹಾಳುಹೊಟ್ಟೆಯಲ್ಲಿ ರಾತ್ರಿಯಿಡೀ ಗೋಳಿಡುತ್ತಾ ಕೂತುಬಿಟ್ಟರು.
ಕವಿತಾ ಕಲಗೌಡನ ಮಾತನ್ನೂ ಕೇಳದೇ ಗೂಡಮುಸುಕು ಹಾಕಿಕೊಂಡು ಊಟ-ನೀರಡಿಕೆಗಳನ್ನೆಲ್ಲಾ ತೊರೆದು ಹಾಸಿಗೆಯಲ್ಲಿ ಮಲಗಿಬಿಟ್ಟಳು. ಗೌಡನ ಮಾತು, ಆಜ್ಞೆ, ಆಕ್ರೋಶಗಳಿಗೆ ಕ್ಯಾರೇ ಎನ್ನಲಿಲ್ಲ ಆಕೆ. ಗೌಡ ತನ್ನ ಹಸಿಸಿಟ್ಟನ್ನು ತನ್ನೊಳಗೇ ಹುದುಗಿಕೊಳ್ಳಲು ಯತ್ನಿಸಿದ. ಗೌಡ ಎಷ್ಟು ಕೋಪಿಷ್ಟನೋ ಅಷ್ಟೇ ತಾಯಿಗರುಳಿನ ಗಂಡಸೂ ಆಗಿದ್ದ. ಒಂದರ್ಥದಲ್ಲಿ ಯಾರೂ ತನ್ನ ಮಾತೇ ಕೇಳುತ್ತಿಲ್ಲವಲ್ಲ ಎನ್ನಿಸತೊಡಗಿತ್ತು ಆತನಿಗೆ. ಮನೆಯಲ್ಲಿ ದನಕರುಗಳನ್ನು ನೋಡಿಕೊಳ್ಳುತ್ತಿದ್ದ ಕೆಂಚ ಕೂಡ ತನಗೆ ಇದಿರು ವಾದಿಸುತ್ತಿದ್ದಾನಲ್ಲಾ ಎನ್ನಿಸತೊಡಗಿತು ಆತನಿಗೆ. ಹೆತ್ತಕೂಸೇ ತನ್ನ ಮಾತು ಕೇಳುತ್ತಿಲ್ಲವೆಂದಮೇಲೆ ಅವನಿಗಂದಾದರೂ ಏನು! ಮೂರ್ಖತನ. ಸುಮ್ಮನಿರುವುದೇ ಲೇಸು ಎಂದುಕೊಂಡ. ನಾಲ್ಕು ದಿನಗಳಿಂದ ಊಟ, ನಿದಿರೆ ಎಲ್ಲವನ್ನೂ ಬಿಟ್ಟಿದ್ದ ಗೌಡ ಒಳಗಿಂದೊಳಗೇ ಉರಿ ಉರಿ ಉರಿಯುತ್ತಿದ್ದ. ಅತ್ತ ಮಾದನೇನಾದರೂ ಸಿಕ್ಕರೆ ಅವನ ಜನ್ಮಜಾಲಾಡಿಬಿಡುವ ಯೋಚನೆ ಒಂದೆಡೆಯಾದರೆ ಇನ್ನೊಂದೆಡೆಗೆ ಮಗಳ ಮೇಲಿನ ಮಮಕಾರ! ಓಣಿಯಲ್ಲಿ ಯಾರೋ ಆಡಿಕೊಳ್ಳುವ ಮಾತುಗಳು ಕಲಗೌಡನ ಕಿವಿಗೆ ರಪರಪನೇ ಹೊಡೆಯಲಾರಂಭಿಸಿದ್ದವು.
‘ಮಗಳ್ನ ಮಾದಗ ಕೊಟ್ಟ ಮದಿವಿಮಾಡ್ರ್ಯ ಏನಾಕ್ಕೈತಿ… ನಾಲ್ಕದಿನ ಊರಮಂದಿ ಮಾತಾಡ್ತಾರು; ಆಮ್ಯಾಕ ಸುಮ್ಮಾಕ್ಕಾರು; ಈಗ್ಯಾನ ರಗಡಮಂದಿ ಓಡಿಹೋಗಿ ಮದಿವ್ಯಾಗುದುಲ್ಲನ… ಹೊಲ್ಯಾರಾದ್ರ ಯಾನಾ? ಗೌಡ್ರಾದ್ರ ಯಾನಾ? ಅವರೂ ಮನಶ್ಯಾರಲಾ? ಅವರೇನ ಮ್ಯಾಲಿಂದ ಬಿದ್ದಿರ್ತಾರನ… ಅವರೂ ಅಲ್ಲೀದ ಬಂದಿರತಾರಲಾ?’
‘ಯೇ! ಹುಚ್ಚ್ಯದದ್ಯನ… ಗೌಡ್ರ ಲಿಂಗಾ ಕಟ್ಟತಾರ; ಹೊಲೇರ್ನ ಮುಟ್ಸಗೊಂಡ್ರ ಮೈಲಿಗ್ಯಾಕ್ಕತಿ; ಇನ್ನ ಮದಿವಿ ಶಾಸ್ತ್ರ-ಅಂದ್ರ-ಜಾತ್ಯಾಂದ ಹೊರಗಾಕ್ಕಾರ್ ಗೌಡನ… ಹೊಲ್ಯಾ… ಹೊಲ್ಯಾನಕಿತ ಕಡಿಮ್ಯಾಗಿ ಬದಕಬೇಕ್ಕಾಕತಿ ಗೌಡ; ಯಟ್ಟ ಆದ್ರೂ ಜಾತಿ-ಜಾತೀನ… ಸುಮ್ಮ ಮಾಡಿಲ್ಲವನ…ಸಾವಿರಾರ ವರ್ಸಗೊಳ ಇತಿಹಾಸದಾವವಕ…ಸಂಪ್ರದಾಯದಾವ… ಆಚಾರದಾವ… ಹುಚ್ಚಾಟನಕೊಂಡದದ್ಯನ… ಊರ… ಊರ ಬಿಡಸ್ತಾರ ಐನಾರ-ಸ್ವಾಮಿಗೋಳ ಕೂಡಿ… ಗೌಡನ; ಶಾಸ್ತ್ರದ ಪ್ರಕಾರ ಲಿಂಗಾಕಿತ್ತ ಜ್ಯಾತ್ಯಾಂದ ಹೊರಗ್ಹಾಕ್ಕಾರ… ಅದ್ಯಾನ್ಯಾನೋ ಶಾಸ್ತ್ರದಾವ… ನಂಗೇನ್ ಪಕ್ಕಾ ಗೊತ್ತಿಲ್ಲ.. ಆದರೂ ಗೌಡನ ಜಲಮಾ ಸುದ್ದಾಗುದುಲ್ಲ… ಯಲ್ಲಾ ಶಿವನ ಮ್ಯಾಗ ಬಿಟ್ಟದತಿ… ಅವರವರ ಕತ್ತೀ ಅವರ ಹೊಡೀಬೇಕ್… ಹಣಿಬರದಾಗಿದ್ದಾಂಗಾಕ್ಕತಿ… ಶಟ್ಟಿತಾಯಿ ಬರದದ್ದ ತಪ್ಪಸಾಕಾಗುದುಲ್ಲ…’
-ಗೌಡನಿಗೆ ದಿಕ್ಕುತೋಚದಂತಾಯಿತು.
‘ಊರತುಂಬ ಹಡಸಗೋತ ತಿರಗ್ಯಾಡು ಹೆಂಗಸರ ಕೈಲೆ ಅನಸ್ಗೋಳುದಾತ್ಲಾ ತನ್ನ ಜಲ್ಮ್’- ಎಂದು ಖೇದಗೊಂಡ ಗೌಡ. ‘ಇದ ಬಗೀ ಹರ್ಯೂದುಲ್ಲ. ಬೆಳಗಾದರ ಕವಿತಾನ ತುಗೊಂಡ ಊರಬಿಡಬೇಕ್; ಮಾನಿಗೇಡ್ಯಾಗಿ, ಜಾತ್ಯಾಂದ ಹೊರಗಾಗಿ ಬದಕೂಕಿಂತ ಗೊತ್ತಿಲ್ಲದೂರಾಗ ಗೊತ್ತಿಲ್ಲದವರ ಜೋಡಿ ಹೊತ್ತಾಕಿದ್ರ ಮುಗೀತ. ಇಷ್ಟಕ್ಕೂ ನಮ್ಮ ಬದುಕಿನ್ಯಾಗ ಹಿಂಗಿಂಗ ಇರಬೇಕು ಹಿಂಗಿಂಗ ಆಗಬೇಕು ಅಂತೇನಾರ ಬರದತ್ಯನ್… ದೇವರಿಚ್ಛಾಮ್ಯಾಲ ನಡದತಿ ಈ ಬದಕ… ಮ್ಯಾಲ ದೇವರದಾನ; ಯಾವದರ ಒಂದ್ ದಾರೀ ತೋರ್ಸೇ ತೋರಸ್ತಾನ… ಅವ್ವ-ಅಪ್ಪಗ ಹುಟ್ಟಿದವರಿಗ್ಯ ಬಳ್ಳಮಾಡತತೀ ಈ ಜಗ… ಖೊಟ್ಟೇತಿ ಜಗಾ. ಹಾದರಕುಟ್ಟಿದವರ ಕಾಲ ನಡದತಿ. ಹಾಳಾಗು ಕಾಲತಿದ. ನಾಳಿ ಬೆಳಗಾಗೂದ್ರಾಗ ಏನಾರ ಒಂದ್ ನಿರ್ಧಾರ ಮಾಡ್ರ್ಯ ಆತ್; ಏನ್ ಜಗಾವೇನ್ ತೆಲಿಮ್ಯಾಲ್ ಮುರಕೊಂಡ್ ಬಿದ್ದಿಲ್ಲ… ಯಾವ ಅಪ್ಪಗ ಬರಬಾರದಂತಾ ಕೇಡೇನ ತನಗ ಬಂದಿಲ್ಲ; ಈ ಕಾಲಾ, ಮನಸ್ನಾ ಗಟ್ಟೀಮಾಡಿಕೊಂಡ್ರ ಬೆಳ್ಳಕ್ಕಿರೂ ಊರ ಸಿಕ್ಕ ಸಿಗತಾವ. ಹಾಲಿನಂಥಾ ದಿನಗೋಳ್ ಬಂದ ಬರ್ತಾವ. ಈ ಶಾಸ್ತ್ರ-ಧರ್ಮ-ಜಾತಿ ಅಂಬೂದಿರಲಿಲ್ಲಂದ್ರ ಮಗಳ್ನ ಮಾದಗ ಕೊಟ್ಟ ಮದಿವಿ ಮಾಡತಿದ್ನಿ; ಅವರ ಮಾಡಿದ್ದೇನ್ ಮಾ ಅಪರಾದಲ್ಲ; ಸೃಷ್ಟಿನ್ಯಾಗ ಪ್ರೇಮಕ್ಕ ಪಾವಿತ್ರ್ಯ; ಒಟ್ನಾಗ್ ವ್ಯವಸ್ಥಾ ಸರಿಯಿಲ್ಲ; ಯಾವ ಉಂಡಿಗಿ ಮಗಾ ಮಾಡಿದೋ ಈ ಧರ್ಮ-ಜಾತಿಗೋಳ್’- ರಾತ್ರಿಯೆಲ್ಲಾ ಯೋಚಿಸಿಯೇ ಯೋಚಿಸಿದ ಗೌಡ. ಒಂದು ಹಂತಕ್ಕೆ ತನ್ನ ಮಗಳನ್ನು ಮಾದನಿಗೆ ಕೊಟ್ಟು ಮದುವೆ ಮಾಡುವ ಯೋಚನೆಯನ್ನೂ ಮಾಡತೊಡಗಿದ್ದ ಗೌಡ ತೋರಿಕೆಯ ಜಗತ್ತಿಗೆ ಮಾತ್ರ ‘ಅಂವ ಸಿಕ್ರ ಕಡದ ತುಂಡ್ ಮಾಡತನಿ’ ಎಂದೇ ಅನ್ನುತ್ತಿದ್ದ.
ಕವಿತಾ ಕಂಗೆಟ್ಟ ಹೆಣ್ಣಿನಂತೆ ಮಾದನ ಧ್ಯಾನದಲ್ಲಿ ಊಟ-ನಿದ್ದೆ ಎಲ್ಲವನ್ನೂ ಬಿಟ್ಟು ಕೂತಳು. ಅವಳಿಗೆ ಮಾದನ ಮೇಲೆ ಅಸಾಧ್ಯವಾದ ಪ್ರೀತಿ; ಬಯಕೆ. ಒಂದೇ ಒಂದು ಸಲ ಮಾದನನ್ನು ನೋಡಿದರೆ ಸಾಕು; ತನ್ನ ಜನ್ಮ ಸಾರ್ಥಕವಾಗುವುದು. ಈ ಪ್ರೀತಿಗೆ ದೇವರಾದರೂ ಕಣ್ಣು ತೆರೆಯಬಾರದೇ? ಎಲ್ಲಿರಬೇಕು ತನ್ನ ಗೆಳೆಯ? ಏನು ಮಾಡುತ್ತಿರಬೇಕು ತನ್ನ ನಲ್ಲ? ಹೇಗೆ ಬದುಕುತ್ತಿರಬೇಕು ಆತ? ತಾನಿರದೇ? ತನ್ನ ತೋಳಿರದೇ? ಮತ್ತೆ ಯಾವಾಗ ತಾನು ಬಸ್ಸು ಹತ್ತಿ ಕಾಲೇಜಿಗೆ ಹೋಗುವುದು? ಮತ್ತೆ ಯಾವಾಗ ಅಂವ ತನ್ನನ್ನು ಹಿಂದಿನ ಸೀಟಿನಿಂದ ಕದ್ದು ನೋಡುವುದು? ಯಾವಾಗ? ಯಾವಾಗ?’ ಕವಿತಾ ಹಾಗೇ ಕೊರಗಿ ಕೊರಗಿ ತಲೆದಿಂಬಿಗೆ ತಲೆ ಆಣಿಸಿಕೊಂಡು ಮಲಗಿದಳು.
*****
ಇನ್ನು ಹೀಗೇ ಆದರೆ ಬಗೆಹರಿಯುವುದಿಲ್ಲವೆಂದು ನಿರ್ಧರಿಸಿದ ಮಾದನಿಗೆ ಈ ಊರು, ಮನೆ, ಪ್ರೀತಿ, ಜಾತಿ-ಕದ್ದುಮುಚ್ಚಿ ಬದುಕುವ ಬದುಕು ಎಲ್ಲವೂ ರೇಜಿಗೆಯೆನ್ನಿಸತೊಡಗಿತು. ತನಗೊಂದು ಅಸ್ತಿತ್ವವೇ ಇಲ್ಲದೇ ತಾನು ಬದುಕುತ್ತಿರುವ ವೇದನೆಯಾಗತೊಡಗಿತು ಆತನಿಗೆ. ತನ್ನ ಹಳೆಯ ಬದುಕೇ ಚನ್ನಾಗಿತ್ತು. ಅದಷ್ಟೇ ಸಾಕಾಗಿತ್ತು; ಸುಖವಾಗಿತ್ತು. ಶಾಲೆ, ರೂಮು, ಪುಸ್ತಕ, ಬಸ್ಸು, ರ್ಯಾಂಕು. ಮಾಸ್ತರಿಕೆ, ಪಗಾರ, ದೊಡ್ಡಮನೆ, ಕಾರು, ಹೆಂಡ್ತಿ ಮಕ್ಳು, ಸುಖ ಸಂಸಾರ-ಎಂದೆಲ್ಲಾ ಕನಸು ಕಂಡದ್ದು? ಆದರೆ ವಾಸ್ತವ ಮೂರ್ಣ ವಿರುದ್ಧಾರ್ಥಕ. ಈ ಹಾಳು ಸಮಸ್ಯೆಯನ್ನು ಮೆಟ್ಟಿ ತಾನು ಯಾವಾಗ ಡಿಎಡ್ ಮುಗಿಸಿ ಸಾಲೀ ಮಾಸ್ತರನಾಗುವುದು ತನ್ನ ತಂದೆ-ತಾಯಿಗಳನ್ನು ನೋಡಿಕೊಳ್ಳುವುದು ಇತ್ಯಾದಿ… ಇತ್ಯಾದಿ… ಮಾದನಿಗೆ ತನ್ನ ಬದುಕಿನ ಅಸಂಗತತೆಯು ಎದುರುಬಂದು ನಿಂತಂತೆನಿಸಿತು- ಈಗಿರುವುದೇ ಸುಖವೆಂದರೆ ಸಾಕಲ್ಲ… ಈ ಬದುಕಿನ ಮುಂದೆ! ಸುಖವನ್ನು ಅರಸುವುದೇ ಒಂದು ದೊಡ್ಡ ದುರಂತ! ಸುಖವೇ ನೋವಿನ ಮೂಲ! ಬುದ್ಧ ನೆಪ್ಪಿಗೆ ಬಂದ! ನೋವಿನಲ್ಲೇ ಬದುಕಿನ ಪಾಠ. ಇದಕ್ಕೂ ದೊಡ್ಡ ವೇದಾಂತ ತನಗೆ ಖಂಡಿತಾ ಬೇಡವೆನ್ನಿಸತೊಡಗಿತು ಮಾದನಿಗೆ.
ತನ್ನ ಬಟ್ಟೆಬರೆಗಳನ್ನು ಹೇಗೋ ಬ್ಯಾಗಿಗೆ ತುಂಬಿಸಿಕೊಂಡ ಮಾದ ನಾಲ್ಕುದಿನ ಈ ಊರ ಸಹವಾಸವೇ ಬೇಡವೆಂದು ಬೆಂಗಳೂರಿನ ಟ್ರೇನನ್ನು ಹತ್ತಿದ. ಹೀಗೆ ಟ್ರೇನನ್ನು ಹತ್ತುತ್ತಿದ್ದ ಮಾದನನ್ನು ಬೆಳಗಾವಿಯ ಟ್ರೇನು ಇಳಿದುಬರುತ್ತಿದ್ದ ಜಾಡರ ಮಾಯಪ್ಪ ನೋಡಿ ಅದು ಇನ್ನೊಂದು ಸುದ್ದಿಯಾಯಿತು. ಮೊದಲೇ ಆತನ ಬಾಯಿ ಪುಂಗಿಯಂತೆ ಇದ್ದು ಅವನನ್ನು ‘ಪುಂಗೀ ಮಾಯಪ್ಪ’ ಎಂದೇ ಕರೆಯಲಾಗುತ್ತಿತ್ತು. ಊರ ಬಸ್ಟ್ಯಾಂಡಿಗೆ ಬಂದಿದ್ದೇ ಪುಂಗೀ ಮಾಯಪ್ಪ ತನ್ನ ಪುಂಗಿಯನ್ನು ಊದಿಕೊಂಡು ಹೊರಟ. ‘ಕಲಗೌಡನ ಮಗಳ್ನ್ ಕೆಡಿಸಿದ್ನಲ್ಲ… ಹೊಲ್ಯಾರ ಮಾದ್ಯಾ… ಅಂವ ಟ್ರೇನ್‍ಹತ್ತಿ ಊರಬಿಟ್ಟ-’ ಎಂದು ಎರಡು ಬೀಡಿ ಸೇದಿ ತನ್ನ ದಾರಿಗೆ ಸಿಕ್ಕ ಪ್ರತಿಯೊಬ್ಬರಿಗೂ ಈ ವಿಷಯವನ್ನು ತಲುಪಿಸುತ್ತಾ ನಡೆದ. ಹೀಗೆ ಸುದ್ದಿ ಹಬ್ಬುತ್ತಿದ್ದಂತೆ ಊರಲ್ಲೆಲ್ಲಾ ಮತ್ತೆ ಅನೂಹ್ಯ ಗುಸುಗುಸು ಪಿಸುಪಿಸು ಕೇಳಿಬರತೊಡಗಿದವು. ಯಾರೋ ಮಾದ ಗೌಡನಿಗೆ ಹೆದರಿ ಊರಬಿಟ್ಟನೆಂದೂ ಮತ್ಯಾರೋ ಗೌಡ ಮಾದನನ್ನು ಹೆದರಿಸಿ ಊರುಬಿಡಿಸಿದನೆಂದೂ ಹೀಗೆ ಏನೇನೋ ಮಾತುಗಳು ಹಬ್ಬಲಾರಂಭಿಸಿದವು. ಗೌಡನಿಗೆ ಈ ಸುದ್ದಿಯನ್ನು ಕೇಳಿ ಅಷ್ಟೇನೂ ಆಶ್ಚರ್ಯವೆನ್ನಿಸಲಿಲ್ಲ. ಏಕೆಂದರೆ ಈಗಾಗಲೇ ಒಂದು ಬಗೆಯ ಶೂನ್ಯ ಅವನನ್ನು ಆವರಿಸಿಕೊಂಡು ಆತ ಏನನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಮತ್ತು ಮತ್ತಾವ ಸಂಗತಿಗಳೂ ಮತ್ತೆ ತನಗೆ ನೆಮ್ಮದಿಯನ್ನು ನೀಡಲಾರವೆಂದು ಅಂದುಕೊಂಡಿದ್ದ ಆತನಿಗೆ ಇದೇನೂ ಅಷ್ಟು ಸೋಜಿಗವೆನ್ನಿಸಲಿಲ್ಲ. ‘ಹೋದರೇನು? ಬಿಟ್ಟರೇನು? ಎಲ್ಲವೂ ತನಗೆ ಅಪಮಾನವೇ ಅಲ್ಲವೇ? ಒಟ್ಟಾರೇ ಸನ್ನಿವೇಶಗಳೆಲ್ಲವೂ ತನಗೆ ಅವಮಾನವನ್ನೇ ಉಂಟುಮಾಡಲಿಕ್ಕೆ ಕಾದಿವೆÉ?’ ಊರು ತಾನು ಬಿಡಬೇಕಿತ್ತು. ಖರೇವಂದ್ರೆ. ಮಾನವಂತನಾಗಿದ್ದರೆ. ಈ ಹಾಳು ಮಾದನೇಕೆ ಊರುಬಿಟ್ಟ? ಬಿಟ್ಟರಾದರೂ ಏನು? ಬಿಡದಿದ್ದರಾದರೂ ಏನು? ಮಾನಗೆಟ್ಟಾದರೂ ಬದುಕಲೇಬೇಕು? ಬದುಕು! ಬದುಕು ಎಲ್ಲಕ್ಕಿಂತಲೂ ದೊಡ್ಡದು. ಮಾನ ಅವಮಾನ ಬದುಕಿನ ಮುಂದೆ ಕ್ಷುದ್ರ ಸಂಗತಿಗಳು! ಬದುಕು ಯಾವತ್ತಿಗೂ ದೊಡ್ಡದು. ಕಲಗೌಡ-ದಿಕ್ಕು ತಪ್ಪಿದವರಂತಾದ.
ಕಾಲ ತನ್ನ ಕಪಿಮುಷ್ಠಿಯಲ್ಲಿ ಸಾಕಷ್ಟು ಸಂದಿಗ್ಧಗಳನ್ನು ಹುದುಗಿಸಿಟ್ಟುಕೊಂಡು ಸಂದರ್ಭಕ್ಕೆ ತಕ್ಕಂತೆ ಅದರೊಳಗಿನಿಂದ ಒಂದೊಂದನ್ನೇ ಹೊರಕ್ಕೆ ಎಸೆಯುತ್ತಿರುತ್ತದೆ.
ಕಲಗೌಡ ಕವಿತಾಳ ಮುಖವನ್ನು ನೋಡಿ ಮರಾಮರಾ ಮರುಗಲಿಕ್ಕೆ ಶುರುಮಾಡಿದ. ಯಾರಿಗೂ ಗೊತ್ತಾಗದಂತೆ ದೂರದ ಊರುಗಳಿಂದ ಗಂಡುಗಳನ್ನು ನೋಡಲು ಬರಹೇಳಿ ಹೇಗಾದರೂ ಮಾಡಿ ತನ್ನ ಮಗಳಿಗೊಂದು ಮದುವೆಯನ್ನು ಮಾಡಿ ತನ್ನ ಊರಿನಿಂದಲೇ ಅವಳನ್ನು ಹೊರಗಟ್ಟಿಬಿಡಬೇಕೆಂದೂ ಯೋಚಿಸತೊಡಗಿದ. ಆದರೆ ಅವನೊಳಗೇ ಒಂದು ಪಾಪಪ್ರಜ್ಞೆ ಅವನನ್ನು ತನ್ನ ಹತೋಟಿಗೆ ತಂದುಕೊಳ್ಳತೊಡಗಿತು. ಏನು ಮಾಡಿದರೂ ತನ್ನಿಂದ ಅದು ಶಾಧ್ಯವಿಲ್ಲವೆಂಬ ಸತ್ಯ ಅವನಿಗೆ ಅರಿವಾಗತೊಡಗಿತು. ಗೌಡ ಸ್ವಲ್ಪದಿನ ಸುಮ್ಮನಿರುವುದೇ ಒಳ್ಳೆಯದೆಂದುಕೊಂಡ. ಇನ್ನು ಕವಿತಾಳ ಸ್ಥಿತಿಯೂ ಹಾಗೇ ಇತ್ತು. ಲೋಕಪ್ರಜ್ಞೆಯನ್ನೇ ಕಳೆದುಕೊಂಡವಳಂತೆ ಬದುಕಿದ್ದ ಆಕೆಗೆ ಮಾದನನ್ನು ಮರೆಯಲೂ ಆಗದೇ ನೆನೆಯಲೂ ಆಗದೇ ವಿಚಿತ್ರ ವೇದನೆಯಾಗತೊಡಗಿತ್ತು. ಹೇಗಾದರೂ ಮಾಡಿ ತಾನು ಮಾದನನ್ನು ಮರೆತು ಬೇರೊಂದು ಹುಡುಗನೊಂದಿಗೆ ತಾಳಿಕಟ್ಟಿಸಿಕೊಂಡು ಬದುಕು ಬದುಕಿಬಿಡಬೇಕೆಂಬ ಆಕೆಯ ಬಯಕೆ ಕೂಡ ಬರೀ ತೋರಿಕೆಯಂತೆ ಇತ್ತು. ಅದಕ್ಕಿಂತಲೂ ಕ್ರತ್ರಿಮವೆಂಬುದು ಬೇರೇನೂ ಇರಲಕ್ಕಿಲ್ಲವೆಂದುಕೊಂಡು ಸುಮ್ಮನಾದಳು ಆಕೆ.
ಒಂದು ಹಂತಕ್ಕೆ ಕವಿತಾ ತನ್ನ ಬದುಕಿನಲ್ಲಿ ಮದುವೆಯನ್ನೇ ಮರೆತುಬಿಡುವುದು ಒಳ್ಳೆಯದೆಂದು ನಿರ್ಧರಿಸಿಕೊಂಡಳು. ತನ್ನ ಪ್ರೀತಿಯ ಹುಡುಗ ಮಾದನನ್ನಂತೂ ತಾನು ಮದುವೆಯಾಗುವುದು ಸಾಧ್ಯವಿಲ್ಲ. ಒಂದೋ… ಹೊರಗೆ ಹೋಗಬೇಕು-ಊರಿನಾಚೆ-ಗಡಿಪಾರಾಗಬೇಕು. ಇಲ್ಲಾ ಓಡಿಹೋಗಿ ಬಾಳಬೇಕು. ಇದರಲ್ಲಿ ಯಾವುದೂ ಸಮಾಜ ಒಪ್ಪಿತವಲ್ಲ. ಮೂಲಕ್ಕೆ ಮಾದನೇ ತನ್ನನ್ನು ಮರೆತು ಊರುಬಿಟ್ಟನಲ್ಲ… ಅವನು ಅಷ್ಟು ಹೇಡಿಯೋ? ಇಲ್ಲಾ ವಿಧಿಯೇ ಅವನನ್ನು ಹಾಗೆ ಮಾಡಿಸಿತೋ? ಕವಿತಾ ಕೊನೆಯ ನಿರ್ಧಾರವೆಂಬಂತೆ ಮಾದನನ್ನು ಮರೆಯಲಿಕ್ಕೆ ಶುರುಮಾಡಿದಳು. ಮದುವೆಯನ್ನೇ ಆಗದಿರುವ ನಿರ್ಧಾರವನ್ನೂ ಮಾಡಿಕೊಂಡಳು. ಹೇಗೋ ಅಪ್ಪನನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಅವನನ್ನು ಅನಾಥನನ್ನಾಗಿ ಬಿಟ್ಟು ತಾನಾದರೂ ಎಲ್ಲಿಗೆ ಹೋಗುವುದು? ಚಿಕ್ಕ ವಯಸ್ಸಿನಲ್ಲೇ ಹೆಂಡತಿಯನ್ನು ಕಳೆದುಕೊಂಡ ಅಪ್ಪನಿಗೆ ಇದ್ದದ್ದಾದರೂ ಯಾರು? ತನ್ನ ಹೊರತು! ತನ್ನನ್ನು ಮಗುವಿನಂತೆ ನೋಡಿಕೊಂಡಿದ್ದ ಆತನಿಗೆ ತಾನು ಸರಿಯಾದ ಶಾಸ್ತಿಯನ್ನು ಮಾಡಿದ್ದಾಗಿದೆ. ಈಗಲಾದರೂ ಆತನ ಸೇವೆ ಮಾಡಿ ತನ್ನ ಪಾಪವನ್ನು ಕಡಿಮೆಮಾಡಿಕೊಳ್ಳಬೇಕು? ಅವನ ಕಣ್ಣಲ್ಲಿ ನೀರು ಬರದ ರೀತಿಯಲ್ಲಿ, ಅವನಿಗೆ ಕೊನೆಗಾಲದಲ್ಲಿ ಅಮ್ಮನಂತೆ; ಅವನನ್ನು ನೋಡಿಕೊಳ್ಳಬೇಕು. ಆಹಾರ, ಅನ್ನ-ಪ್ರೀತಿ ಎಲ್ಲವನ್ನು ಧಾರೆಯೆರೆದು ನೋಡಿಕೊಳ್ಳಬೇಕು. ಅಂದರೆ ಮಾತ್ರ ತನ್ನ ಬದುಕಿಗೆ ಅರ್ಥ; ವ್ಯಾಖ್ಯೆ. ಆದರೆ ಇದೇ ಮನಸ್ಸಿನ ಇನ್ನೊಂದು ಮೂಲೆಯಲ್ಲಿ ಇಣುಕುವ ಆ ಕಳ್ಳನನ್ನು ಕಳ್ಳ ಮಾದನನ್ನು ಮರೆಯುವುದು ಹೇಗೆ? ಮರೆಯುವುದಾದರೂ ಹೇಗೆ?’ ಚಿಂತಾಕ್ರಾಂತಳಾದಳು ಆಕೆ.
*****
ಅತ್ತ ಬೆಂಗಳೂರಿಗೆ ಬಂದ ಮಾದನಿಗೆ ತನ್ನ ಬದುಕಿನ ಯಾವ ಯಾವ ದಿಕ್ಕುಗಳು ಯಾವ ಯಾವ ದಾರಿಗಳು ಎಲ್ಲೆಲ್ಲಿ ಕಳೆದು ಹೋದವೋ ಎಲ್ಲೆಲ್ಲಿ ಅವುಗಳನ್ನು ಹುಡುಕುವುದೋ ತೋಚದಂತಾಯಿತು. ರೈಲ್ವೇಸ್ಟೇಶನ್ನಿನಿಂದ ಹೆಜ್ಜೆಕಿತ್ತಿಡತೊಡಗಿದಂತೆಲ್ಲ ಆತನಿಗೆ ಕವಿತಾಳ ನೆನಪುಗಳು ಒತ್ತರಿಸಿಕೊಂಡು ಬರಹತ್ತಿದವು. ಬದುಕಿನ ಕಟ್ಟಕಡೆಯ ಸಂದಿಗ್ಧದಲ್ಲಿ ತಾನೀಗ ನಿಂತಿರಬೇಕು ಎನ್ನಿಸತೊಡಗಿತು ಆತನಿಗೆ. ಇದೇ ಬೆಂಗಳೂರಿನಲ್ಲಿ ಯಾವ ವಿಳಾಸವೂ ಇಲ್ಲದ ಹಾಗೆ ಬದುಕಿಬಿಡುವ ಆಸೆಯೊಂದು ಚಿಗುರುಪಡೆಯತೊಡಗಿತು ಆತನಲ್ಲಿ. ತನ್ನದೊಂದು ಹಳೆಯ ಬದುಕೇ ಇರಲಿಲ್ಲವೆನ್ನುವಂತೆ ಇಂದಿನಿಂದಲೇ ಹೊಸಪುಟವೊಂದನ್ನು ಹೊರಳಸಿ ಬದುಕಿಬಿಡಬೇಕು. ಹಾಳಾದ್ದು ಕವಿತಾಳ ನೆನಪು ಮಾತ್ರ ತನ್ನಂತರಂಗದಿಂದ ಹೋಗುತ್ತಿಲ್ಲ. ಕಳವಳಗೊಂಡ. ಓಡಿಹೋಗಿ ಕವಿತಾಳನ್ನು ಭೆಟ್ಟಿಯಾಗಲೇ? ಭೆಟ್ಟಿಯಾಗಿ ಬೆಂಗಳೂರಿಗೆ ಕರೆತರಲೇ? ಈ ಬೆಂಗಳೂರಿನಲ್ಲಿ ಅವಳೊಟ್ಟಿಗೆ ಇಡೀ ಬದುಕನ್ನು ಬದುಕಿಬಿಡಲೇ; ಹೇಗೋ ಹಾಳಾಗಿಹೋಗಿದೆ ಬದುಕು! ಇನ್ನಷ್ಟು ಹಾಳುಗೆಡವಿದರಾದರೆ ಸಾಕು; ಸುಖ-ಶಾಂತಿ-ನೆಮ್ಮದಿ-ದೊರಕೀತೇ? ಆತ್ಮ ಸುಟ್ಟುಹೋದೀತು? ಪಾಪಪ್ರಜ್ಞೆ ಕೊಂದುಹಾಕೀತು? ‘ಜಾತಿಗೆಟ್ಟವ’ ‘ಮಾನಗೆಟ್ಟವ’ ಚುಚ್ಚುವ ಮಾತುಗಳನ್ನು ಯಾರಾದರೂ ಆಡಲೇಬೇಕೆ? ತನ್ನಂತರಂಗವೇ ತನ್ನನ್ನು ಹಂಗಿಸಲಿಕ್ಕೆ ಶುರುಹಚ್ಚಿಕೊಂಡರೆ? ಮಾದನಿಗೆ ಅನಿಶ್ಚಿತತೆಯ ಕಟ್ಟಕಡೆಯ ತುದಿಯಲ್ಲಿ ಬಂದುನಿಂತಂತನ್ನಿಸತೊಡಗಿತು. ಅತ್ತ ಹಿಂತಿರುಗಿ ನೋಡಿದರೆ ಬೆಂಗಳೂರಿನ ರಸ್ತೆಗಳುದ್ದಕ್ಕೂ ವಾಹನಗಳ ದಟ್ಟಣೆ ಹೆಚ್ಚುತ್ತಲೇ ಇರುವ ದೃಶ್ಯ ಗೋಚರಿಸತೊಡಗಿತು ಆತನಿಗೆ.
ಬದುಕಿನ ಎಲ್ಲ ಸಾಧ್ಯತೆಗಳು ಮುಚ್ಚಿಹೋದ ಮಾದನಿಗೆ ಸದ್ಯ ವಾಸ್ತವ್ಯಕ್ಕೆಂದು ಅವನ ಗೆಳೆಯರ ಗೂಡು ದೊರೆಯಿತು. ಒಂದು ಚಿಕ್ಕ ಕೋಣೆಯಲ್ಲಿ ಇಬ್ಬರು ವಾಸವಾಗಿದ್ದ ಆ ರೂಮು ಇದ್ದುದು ಇಲೆಕ್ಟ್ರಾನಿಕ್ ಸಿಟಿಯಲ್ಲಿ. ಬೆಂಗಳೂರಿನ ಈ ಹೊಸ ಪ್ರಪಂಚ ಮಾದನ ಹಳೆಯ ನೆನಪುಗಳನ್ನು ಮರೆಸಲಿಕ್ಕೆ ಸಾಧ್ಯವಿತ್ತೇ? ಇಷ್ಟಕ್ಕೂ ಅವನಿಗೆ ಅವು ಹಳೆಯ ನೆನಪುಗಳಾಗಿಬಿಟ್ಟಿದ್ದವೇ? ಖಂಡಿತಾ ಅದು-ಅವನಿಂದ ಸಾಧ್ಯವಾಗದ ಸಂಗತಿಯಾಗಿತ್ತು. ಮತ್ತು ಅದು ಅವನನ್ನು ಇನ್ನೂ ಕೊರೆಯತೊಡಗಿತ್ತು. ಊರಿಗೆ ಹಿಂತಿರುಗಿದರೆ ಗೌಡ ತನ್ನನ್ನು ಉಳಿಸುವುದಿಲ್ಲವೆಂಬ ಇಚಾರ ಸತ್ಯ ಅವನ ಅಂತರಂಗದಲ್ಲಿ ಘೀಳಿಡುತ್ತಿದ್ದರೆ ಕವಿತಾಳ ನೆನಪುಗಳು ಬೇರೆ ಅವನನ್ನು ನಿರ್ವೀರ್ಯನನ್ನಾಗಿಸತೊಡಗಿದ್ದವು. ನಾಲ್ಕುದಿನ ಕಳೆದರೆ ಇದಕ್ಕೊಂದು ಪರಿಹಾರ-ಉಪಾಯ-ದೊರಕೀತು- ತನ್ನ ಬದುಕಿಗೊಂದು ಹೊಸ ತಿರುವು ಸಿಕ್ಕೀತು ಎಂಬ ಹೊಸದೊಂದು ಭ್ರಮೆ ತುಂಬಿಕೊಂಡು ದಿನಗಳನ್ನು ಕಳೆದುನೋಡೋಣ ಎಂಬ ಹಾಳು ನಂಬಿಕೆಗೆ ಕಟಿಬಿದ್ದ ಮಾದ ಕಾಲಕ್ಕೇ ಪಾಟಿಸವಾಲುಗಳನ್ನೆಸೆಯುವ ಹುಂಬಿನ ಆಸರೆಗೆ ಮೊರೆಯಿಡತೊಡಗಿದ.
ಮರುಬೆಳಗಿಗೆ ಇಡೀ ಬೆಂಗಳೂರನ್ನೊಮ್ಮೆ ಕಣ್ಣುತುಂಬಿ ನೋಡಬೇಕೆನಿಸಿದ ಆತನಿಗೆ-ಈ ಬೆಂಗಳೂರು ಮಹಾ ಗೊಂದಲಗಳ, ಮಹಾ ವೈಭವಗಳ, ಮಹಾ ದುರಂತಗಳ ಬೆಂದಕಾಳುಗಳಂತೆ ಕಾಣಿಸತೊಡಗಿತು. ಇಲ್ಲಿಯ ಪ್ರಪಂಚವೇ ಬೇರೆ-ಅಲ್ಲಿಯ-ಹಳ್ಳಿಯ ಪ್ರಪಂಚವೇ ಬೇರೆ-ಇಲ್ಲಿನ ಬೀದಿ-ಬೀದಿಗಳಿಗೂ ಸಾವಿರ ಸಾವಿರ ಕಥೆಗಳಿವೆ-ಇಲ್ಲಿನ ಹಾದಿಹಾದಿಗೂ ದುರಂತಗಳ ಛಾಯೆಯಿದೆ ಎನ್ನುವ ಸತ್ಯ ಅಂದು ಸಂಜೆಯಾಗುವುದರೊಳಗೆ ಕಾಣುಸಿಬಿಟ್ಟಿತು-ಅವನಿಗೆ. ಈ ಊರಿಗೆ ಹೆಸರಿದೆ-ಇಲ್ಲಿನ ಜನರಿಗಲ್ಲ; ಈ ಊರಿಗೆ ಮುಖವಾಡಗಳಿವೆ; ಮುಖಗಳಿಲ್ಲ; ಇಲ್ಲಿ ಬದುಕಿದೆ-ಬರಿಯ ಹೊಟ್ಟೆಪಾಡಿಗಾಗಿ-ಇಲ್ಲಿನ ಗಡಿಯಾರಗಳು-ಕಾಲ ನೋಡಲಿಕ್ಕಲ್ಲ- ಇಲ್ಲಿ ಎಲ್ಲಾ ಇದೆ-ಏನೂ ಇಲ್ಲ-ಏನೂ ಇಲ್ಲ-ಎಲ್ಲಾ ಇದೆ-ರಸ್ತೇ ಬದಿಯಲ್ಲಿ ಕುಡಿದು ಬೀಳಲಿಕ್ಕೆ ಇಲ್ಲಿ ಬಡವನೇ ಆಗಬೇಕಿಲ್ಲ-ನೀತಿಯಂತೂ ಈ ಊರ ಕೊಳಚೆಗಳಲ್ಲಿ ಬಿದ್ದು ಹಲ್ಲುಗಿಂಜುತ್ತಿದೆ-ಅಪಾರ ದುಗುಡವನ್ನು ಹೊತ್ತುಬಂದಿರುವ ತನ್ನ ಬದುಕಿನಲ್ಲಿ ಒಂದಿಷ್ಟಾದರೂ ಈ ಊರಿನಲ್ಲಿ ನೆಮ್ಮದಿ, ಸಂತಸ ದೊರಕೀತೇ? ಎಳೆಎಳೆಯಾಗಿ ಬಿಡಿಸಿನೋಡಿದರೆ ಈ ಊರಿಗೊಂದು ಅರ್ಥವಿದೆಯೇ? ತನ್ನ ಬದುಕಿಗೊಂದು ಅರ್ಥ ಬರಬಹುದೇ… ಈ ಊರಿನಲ್ಲಿ? ಎಲ್ಲ ಎಳೆಗಳನ್ನು ತಡಕಿ-ನೋಡಿಬಿಡಬೇಕು-ಈ ಊರಿಗೆ ಅರ್ಥವಿಲ್ಲವೋ ಇಲ್ಲಾ ತನ್ನ ಮನಸಿನ ದ್ವಂದ್ವಗಳಿಗೆ ಅರ್ಥವಿಲ್ಲವೋ? ಸುಳ್ಳು-ಬರಿಯ ಸುಳ್ಳು-ಯಾವ ನೋವಿಗೆ ಯಾರನ್ನು ಹಳೆಯುವುದು? ನಿರ್ಜೀವ ಊರಿನ ಮೇಲೇಕೆ ತನ್ನ ಸಿಟ್ಟು, ಅಸೂಯೆ. ಕಾರ್ಮೋಡ ಚಾಚಿರುವುದು ತನ್ನ ಮನಸಿಗೇ ಹೊರತು-ಈ ಊರಿಗಲ್ಲ-ಯಾವ ಊರು ಪರಿಪೂರ್ಣ-ಯಾವ ಊರು ಅಪರಿಪೂರ್ಣ-ಮನಸುಗಳ ಹೊರತು; ಸುಖ-ದುಃಖಗಳ ಹೊರತು-ಯಾರ ದುಃಖವನ್ನು ಇಲ್ಲಿ ಇನ್ನಾರಿಗೆ ಹಂಚುವುದು?–ಯಾವ ಕಷ್ಟ; ಆತ್ಮವಿಶ್ವಾಸದ ಎದುರು? ಗಟ್ಟಿ ಮನಸು ಮಾಡಿಕೊಂಡು, ಹಳೆಯ ಹಳಹಳಿಕೆಗಳನ್ನು ನೂಕಿಕೊಂಡು ಸೊಗಸಾದ ಬದುಕನ್ನು ಕಟ್ಟಿಕೊಳ್ಳಬೇಕು? ಈ ಹೊಸ ಊರಿನಲ್ಲಿ-‘ಇಷ್ಟಕ್ಕೂ ಈ ಬದುಕಿಗೆ ದೊಡ್ಡ ನೋವು-ಸಣ್ಣ ನೋವು ಎಂಬುದೆಲ್ಲಾ ಇಲ್ಲವೇ ಇಲ್ಲವಲ್ಲ-ಆತ್ಮಬಲದ ಮುಂದೆ!’
ತನ್ನನ್ನು ತಾನು ಆತ್ಮಾವಲೋಕನಕ್ಕೆ ಒಡ್ಡಿಕೊಂಡುಬಿಟ್ಟರೆ ಸಾಕಲ್ಲ- ಕಾಲನ ಬಳಿ ಎಲ್ಲದಕ್ಕೂ ಉಪಾಯವಿದೆ; ಪರಿಹಾರವಿದೆ.
ತನ್ನೆಲ್ಲ ದುಃಖಗಳಿಗೆ, ತನ್ನೆಲ್ಲ ಅಸಹಾಯಕತೆಗಳಿಗೆ-ತನ್ನನ್ನು ತಾನೇ ಆತ್ಮವಿಮರ್ಶೆಗೊಡ್ಡಿಕೊಳ್ಳತೊಡಗಿದ ಮಾದ.
ಹಳ್ಳಿಯನ್ನು ಮರೆತುಬಿಡುವುದೇನು ಮಹಾ ಕಷ್ಟವಲ್ಲ; ಪ್ರೀತಿ, ಮಮತೆ, ತ್ಯಾಗದ ಮೂರ್ತಿಯಂತಿರುವ ತನ್ನ ಅವ್ವ-ಅಪ್ಪರನ್ನು ಹೊರತುಮಾಡಿ-ತಾಯಿನೆಲ-ತಾಯಿಪ್ರೀತಿ-ಹುಟ್ಟು ಗೆಳೆಯರು, ಊರು, ಅದರ ಪರಿಸರ, ಪ್ರೈಮರಿ-ಹೈಸ್ಕೂಲು-ಅದರ ಗ್ರೌಂಡು-ಆ ಗ್ರೌಂಡಿನಲ್ಲಿ ಓಡಾಡಿ ಬೆಳೆದ ಆ ಬಾಲ್ಯ-ಆ ಎಲ್ಲ ಚಲ್ಲಾಟ-ಹಸಿಸಿಟ್ಟುಗಳು, ಹುಂಬುಗಳು, ಸಾಹಸ ಪ್ರವೃತ್ತಿಗಳು-ಸೋಲು-ಅದರ ಸೊಗಸು-ಏನಾದರೂ ಹಳ್ಳಿ-ಹಳ್ಳಿಯೇ-ಕಕ್ಕುಲಾತಿಯ ಗೂಡು-ಈ ಶಹರದಲ್ಲೇನಿದೆ ಹಾಳು-ಮೂರ್ತ ಶವಗಳ ಅಲೆದಾಟ-ಯಾವತ್ತಿಗೂ ಕಾಡುವ ತಬ್ಬಲಿತನ, ನೋಟುಗಳ ಕಂತೆ-ಗಾಳಿಯಲ್ಲಿ ತೂರುವಷ್ಟು; ಏನೆಲ್ಲಾ ವ್ಯತ್ಯಾಸಗಳು-ಇಲ್ಲಿಂದ ಅಲ್ಲಿಗೆ. ಎಲ್ಲವನ್ನು ಸರಿದೂಗಿಸುವ ಅವಶ್ಯಕತೆ, ಅಗತ್ಯತೆ, ಅನಿವಾರ್ಯತೆ-ತನಗೇಕೆ ಈಗ? ಸುಖಾಸುಮ್ಮನೇ ತನ್ನ ಮೈಮೇಲೆ ತಾನೇ ಸೆಗಣಿಯೆರಚಿಕೊಳ್ಳುವ ಅಗತ್ಯವಾದರೂ ಏನು? ಇಷ್ಟಕ್ಕೂ;
‘ಕವಿತಾ’- ಏನಿರಬೇಕು ಆ ನಕ್ಷತ್ರದಲ್ಲಿ; ಏನಿರಬೇಕು ಅವಳ ಪ್ರೀತಿಯಲ್ಲಿ. ಎಲ್ಲೂ ಇಲ್ಲದ್ದು-ಇದ್ದಿರಬೇಕು; ಇದ್ದಿರಲೇಬೇಕು; ಈ ಬದುಕಿನೊಟ್ಟಿಗಿನ ಶೋಧ, ಅನುಸಂಧಾನ-ಬದುಕಿನ ಮೂಲಭೂತ ತಾತ್ವಿಕತೆಯೊಂದು ಹುಟ್ಟುವುದೇ ಪ್ರೀತಿಯೆಂಬ ಮಾಯೆಯಿಂದ- ಗಿಬ್ರಾನನಿಗೇನು ಹುಚ್ಚೇ? ಬೋದಿಲೇರನಿಗೇನು ಪೆದ್ದೇ? -ಪ್ರೀತಿ ತಮಾಷೆಯ ವಸ್ತುವಂತೂ ಅಲ್ಲ- ಜಗತ್ತಿನ ಕಾಲು ತತ್ವಜ್ಞಾನ ಹುಟ್ಟಿರುವುದೇ ಈ ಪ್ರೀತಿಯೆಂಬ ಮಾಯೆಯಿಂದ-ಅದರಿಂದುದ್ಭವಿಸುವ ಪ್ರಜ್ಞೆಯಿಂದ…….ಇತಿಹಾಸ ಬೊಬ್ಬೆಯಿಟ್ಟಿದ್ದಾಗಿದೆ….
ಮಾದ ಮಡಿವಾಳದಲ್ಲಿದ್ದ ಬಿಗ್‍ಬಝಾರಿನಲ್ಲಿ ರಿಶಪ್ಶನಿಸ್ಟಾಗಿ ತನ್ನ ವೃತ್ತಿ ಬದುಕನ್ನು ಆರಂಭಿಸಿದ- ತನ್ನ ಇನ್ನಿಬ್ಬರು ಗೆಳೆಯರೂ ಅಲ್ಲೇ ಪಕ್ಕದಲ್ಲಿದ್ದ ಬಾರೆಂಡ್ ರೆಸ್ಟೋರೆಂಟಿನಲ್ಲಿ ಪಿಯಾನೋ ನುಡಿಸುವ ಕೆಲಸ ಮಾಡುತ್ತಿದ್ದರು. ಆತನ ಓದು ಅರ್ಥಾತ್-ಡಿ ಎಡ್ ಅಲ್ಲೇ ಉಳಿದುಹೋಯಿತು.
ಎಲ್ಲಾ ಮರೆತು ಕೆಲಸಕ್ಕೆ ಸೇರಿದ್ದೇನೋ ಸರಿಹೋಯ್ತು. ಆದರೆ ಅವ್ವ-ಅಪ್ಪರ ಮುಖವನ್ನು ಮಾತ್ರ ಅವನಿಂದ ಮರೆಯಲು ಸಾಧ್ಯವಾಗಲಿಲ್ಲ. ಅವ್ವನ ಪ್ರೀತಿಯ ಮುಂದೆ ಯಾವುದು ನಿಲ್ಲಲಿಕ್ಕೆ ಸಾಧ್ಯ? ಚರಿತ್ರೆಯ ಸವಾಲುಗಳು ಇವೆಲ್ಲ…
-“ಮಾದ್ಯಾ ಈ ಊರಾಗ ನಾವಿರೂ ತಕಾ ನೀ ತ್ಯಲೀ ಕೆಡಸಗೋಬ್ಯಾಡ; ನಾವ ಬೇಕಂದ್ರ ಮುಂದನಿಂತ ನಿಮ್ಮಿಬ್ಬರ ಮದಿವಿ ಮಾಡಸ್ತ್ಯು; ನೀವಿಬ್ರೂ ಮೆಚ್ಯೂರದರಿ. ಇಂಥಾದಕೆಲ್ಲ ಕಾನೂನ ಭಾಳ ಸಪೋರ್ಟ್ ಮಾಡತತಿ- ಸಂಘ ಸಂಸ್ಥಾಗೋಳದಾವ- ಒಂದ್ ಫೋನ್ ಹಾಕಿದ್ರ- ಅವರ ನಿಮ್ಮಿಬ್ಬರನೂ ಕರಕೊಂಡ್ ಹೋಗಿ ಟೀವಿ ಪೇಪರದವರ್ನ್ ಕರಿಸಿ ನಿಮ್ಮಿಬ್ಬರ ಮದಿವಿ ಮಾಡಸ್ತಾರ್- ಟಿವಿದಾಗ ವಾರಗಟ್ಲೆ ಇಂಟ್ರ್ಯೂ ಮಾಡತಾರ- ನೀವೇನ್ ಇಬ್ರೂ ಛಲೋ ಕಲತರಿ… ಎಲ್ಲಾ ಬಿಡಿಸಿ ಬಿಡಿಸಿ ಹೇಳ್ರ್ಯ ನಾಕಮಂದಿ ನಿಮ್ಮಿಂದ ತಿಳಕೋತಾರ- ಅಂತರ್ಜಾತಿ ವಿವಾಹ ಅಂದ್ರ ಕಾನೂನ ಎಷ್ಟ ಸರಳ ಅಂತ; ಅವರ ಸಮಸ್ಯೇಕೂ ಪರಿಹಾರ ಸಿಕ್ಕಾಂಗಾಕ್ಕತಿ; ನೀವಿಬ್ರೂ ರೋಲ್ ಮಾಡಲ್ಲೂ ಆಗತರಿ-ನಿಮ್ಮಿಬ್ಬರ ಸಮಸ್ಸೇನೂ ಬಗೀಹರೀತದ- ನಮಗ ಟಿವಿದವರ ಪರಿಚಯ ಭಾಳೈತಿ- ನಮ್ಮ ಕ್ಲಾಸ್ಮೇಟ್ ಶಿವರಾಜ ಅಂತದಾನ-ಅಂವ ಟಿವಿ ಚಾನಲದಾಗ ಕೆಲಸಾ ಮಾಡತಾನ- ಬೇಕಂದ್ರ ಅವನ ಜೊತಿ ಮಾತಾಡ್ತ್ಯೂ ನಾವಿಬ್ಬರೂ-ಏನಂತಿ- ಎಂದು ಗೆಳೆಯರಿಬ್ಬರೂ ಮಾದನಿಗೆ ಕಿವಿಮಾತು ಹೇಳಲು ನೋಡಿದರು.
-ಮಾದ ಅವರ ಮಾತುಗಳಿಗೆ ಹೂಂ ಅನ್ನಲಿಲ್ಲ ಹಾಂ ಅನ್ನಲಿಲ್ಲ- ಸುಮ್ಮನೇ ಗೋಣುಹಾಕಿಕೊಂಡು ಅವರ ಮಾತುಗಳನ್ನು ಕೇಳಿಸಿಕೊಂಡ.
*****
-“ಗೌಡ್ರ ನಾ ಯಟ್ಟ ಆದ್ರೂ ನಿಮ್ಮ ಮನೀ ಹೊಲಬದನಿ; ನೀವ ನಮ್ಮ ಧನ್ಯಾರದರಿ, ನನ್ನ ಮಗಾ ಮಾಡಿದ ತಪ್ಪಿಗಿ ನಾ ಶಿಕ್ಷಾ ಅನಬಗಸ್ತನಿ; ಭಾಳ ಸಿಟ್ಟಿದ್ರ ನಂಗ ನಾಕ ವದೀರಿ- ನೀಂವ ಹಾಕೂ ಚಪ್ಲಿ ಬ್ಯಾರೇ ಅಲ್ಲ ನಾ ಬ್ಯಾರೆ ಅಲ್ಲ- ನೀಯತ್ತಲೇ ದುಡೀತನಿ- ನನ್ನ ಮಗಾ ಮಾದ್ಯಾ ಮಾಡಿದ ತಪ್ಪಿಗಿ ನಾ ಏನ್ ಮಾಡಬಕ ಹೇಳ್ರಿ- ಆದರ ನಮ್ಮ ಮ್ಯಾಲ ಹಿಂಗ ಸಿಟ್ಟಮಾಡಕೋಬ್ಯಾಡ್ರಿ; ನಾ ಏನ್ ತಪ್ಪ ಮಾಡೇನಿ ಹೇಳ್ರಿ; ನನ್ನ ಹ್ಯಾನ್ತಿ ಏನ್ ತಪ್ ಮಾಡೇತಿ ಹೇಳ್ರಿ- ಪಂಚಮಿ ಬಂದ್ರ-ಸಂಕ್ರಾಂತಿ ಬಂದ್ರ ನಿಮ್ಮ ಮನಿಮುಂದ- ಕರ್ಚೀಕಾಯಿ, ಉಂಡೀ ಸಲ್ವಾಗಿ- ಸೆರಗಚಾಚಿ ಕುಂಡಾಕೂ ಯೋಗ್ತಿ ಇಲ್ಲದಾಂಗಾಗೇತಿ ಗೌಡ್ರ; ನಿಮ್ಮ ಹೊಲಬ್ರದೇವ ನಾಂವ; ನಮಗ ಆ ಹಕ್ಕದ- ನಾಂವ ಉಂಡೀ, ಕರ್ಚೀಕಾಯಿಗಿ ಬಂದ ಬರ್ತೇವ- ಅದ್ಯಾಂಗ ನಮನ ಬಿಟ್ಟ ಗೌಡಕೀ ಮಾಡ್ತೀರಿ ನೀಂವ- ಊರಿಂದೂರಿಗಿ ವಸ್ತೀಗ್ಯಂತ ಹ್ವಾದ್ರ ನಿಮ್ಮ ದನಗೋಳ ಹೆಂಡೀ ತಗ್ಯಾಕರೆ ನಾನ ಬೇಕ ಬೇಕ ಗೌಡ್ರ; ನಿಮನ ಬಿಟ್ರ ನಮಗೆಲ್ಲಿ ಅಸ್ತಿತ್ವದ? ಗೌಡ್ರ; ನಿಮ್ಮ ಬೀಡೀಕಟ್ಟಿನ್ಯಾಗ ಯಾಡ್ಡ್ ಬೀಡೀ ಸೇದೂ ಹಕ್ಕಂತೂ ನನಗತಿ; ಮಗಾ ಊರಬಿಟ್ಟು ನಾಕ್ ತಿಂಗಳಾತ್; ನಿಮಗಿನ್ನೇನ್ ಭಯಾ ಬ್ಯಾಡ್ರಿ- ನಮ್ಮ ಪಾಲಿಗ್ಯೂ ಅಂವ ಸತ್ತಂಗ ಖರೇ; ನಾವವನ ಮರತೇವಿ- ಇನ್ನೇನಿದ್ರೂ ನಿಮ್ಮ ರುನಾ ಕಳಕೊಳ್ಳುದೊಂದ್ ನಮಗಿರೂ ಮುಕ್ತೀ; ಆ ಬಸವಣ್ಣ್ಯಾಪ್ಪನ ಮ್ಯಾಲ ಆನೀ ಮಾಡಿ ಹೇಳ್ತನಿ- ಗೌಡ್ರ – ನಮನ ಕೈ ಬಿಡಬ್ಯಾಡ್ರಿ- ಈ ಇಚಾರ ಊರತುಂಬಾ ಹಬ್ಬಿ ನನ್ನ ದಗದಕ ಯಾರೂ ಕರೀವಲ್ರು- ಊರಾಗ ದೊಡ್ಡ ಸೂಲಗಿತ್ತಿ ನನ್ನ ಹ್ಯಾಂತಿ- ಅಕಿನೂ ಯಾರೂ ಹಡ್ಯಾನಕ ಕರೀವಲ್ರ- ಮದಲಾದರ ಅಕಿನ ಕರ್ಯಾಕ ಎತ್ತಾಕಟ್ಟಿ ಗಾಡಿ ಕಳಸ್ತಿದ್ರ್- ಅಕಿ ಹಡ್ಯಾನ ಮಾಡತಾಳಂದ್ರ ಡಾಕ್ಟರಗೋಳೂ ಅಲ್ಲಿ ಸುಳೀತಿರಲಲ್ಲ- ಡಾಕ್ಟರಗೋಳೂ ಅಕಿ ಬರ್ತಾಳಂದ್ರ ಧೈರ್ಯಾದಿಂದ ದವಾಖಾನಿಗಿ ಹೊಳ್ಳಿಹೊಕ್ಕಿದ್ರ್; ಅಕಿಗಿ ಆಯಾರ ಏನ್ ಮಾಡೋರು- ಏನ್ ಕಥೀ- ಸೀರಿ ಕುಬಸ ಕಾಳ ಕಡಿ ಎಲ್ಲಾ ಕೊಟ್ಟ ಕುಂಕಮಾ ಹಚ್ಚಿ ಕಳಸ್ತಿದ್ರ್- ನೊಣ… ನೊಣ… ಬರವಲ್ಲು ಈಗ… ಅಕಿನ ಕರ್ಯಾಕ; ಅಕೇನ್ ತಪ್ಪ ಮಾಡಿದಾಳು- ನೀವ ಹೇಳ್ರಿ… ಗೌಡ್ರ- ಇದರ ಮ್ಯಾಲ ಇನ್ನೇನ್ ಹೇಳಾಕಿಲ್ಲಾ ನಂಗ- ಏನ್ ಹೇಳ್ಬೇಕು ನಾಟವಲ್ತು”-
-ಕಲಗೌಡ ತುಕ್ಕನನ್ನು ತನ್ನ ಹೊಲವನ್ನು ಪಾಲಿನಲ್ಲಿ ಮಾಡಿಕೊಳ್ಳುವಂತೆ ಹೇಳಿ ತನ್ನ ಮನೆಗೆ ಬರಹೇಳಿ ಕಳುಹಿಸಿದಾಗ ಹರ್ಷವುಕ್ಕಿ ಬಂದಂತೆ ಓಡೋಡಿ ಬಂದಿದ್ದ ತುಕ್ಕ ಗೌಡನ ಕುರ್ಚಿಯ ಮುಂದೆ ಮಂಡೆಗಾಲೂರಿ ಕುಳಿತು ಒಂದೇ ಸಮನೇ ಪಟಪಟನೆಂದು ಮಾತನಾಡಲಾರಂಭಿಸಿದ್ದ.
-ಗೌಡ ಒಂದರ ಮೇಲೊಂದರಂತೆ ಬೀಡಿಗಳನ್ನು ಸೇದುತ್ತಾ ತುಕ್ಕನ ಮಾತುಗಳನ್ನು ಒಂದೇ ಸಮನೇ ಕೇಳುತ್ತಾ ಗಂಟಲುತುಂಬಿಕೊಳ್ಳುತ್ತಿದ್ದ.
-ದಿಕ್ಕುಗೇಡಿಯಾಗಿದ್ದ ಗೌಡನಿಗೆ ಏನು ಮಾತನಾಡಬೇಕೆಂಬುದೇ ತೋಚದಾಯಿತು.
-ಮಾದ ಊರುಬಿಟ್ಟ ನಂತರದ ದಿನಗಳಲ್ಲಿ ಕಲಗೌಡನ ಬದುಕಿನಲ್ಲಿ ನಶ್ವರತೆ ಮೂಡಿತು. ಮೊಟ್ಟಮೊದಲನೆಯದಾಗಿ ಗೌಡ ವಿನಾಕಾರಣವಾಗಿ ತನ್ನ ಹಸೀಸಿಟ್ಟನ್ನು ಇನ್ನೊಬ್ಬರ ಮೇಲೆ ಹಾಕತೊಡಗಿದ್ದ. ಇದರ ಮೊದಲ ಪರಿಣಾಮ ಕೆಂಚನಿಗೆ ತಟ್ಟಿತು. ಕೆಂಚ ಒಂದು ನಸುಕಗೆ ಗೌಡನಿಗೆ ಹೇಳದೇ ಗೌಡನ ಕೊಟ್ಟಿಗೆಯ ಕೆಲಸದಿಂದ ನಿರ್ಗಮಿಸಿದ. ಇನ್ನು ಗೌಡನ ಹೊಲದಲ್ಲಿ ಕಸಾಕೆತ್ತಲು, ಮಡೀಕಟ್ಟಲು- ಅದೂ ಇದೂ ಕೆಲಸಕ್ಕೆಂದು ಬರುತ್ತಿದ್ದ ಕೂಲಿ ಕೆಲಸಗಾರರೂ ದಿನಗಳೆದಂತೆ ಕಾರಣಗಳನ್ನು ಹೇಳಿಕೊಂಡು ಕೆಲಸಕ್ಕೆ ಬರುವುದನ್ನು ನಿಲ್ಲಿಸಿಬಿಟ್ಟರು. ಅದರಲ್ಲಿ ಹೆಚ್ಚಿನವರೆಲ್ಲಾ ದಲಿತ ಕೇರಿಯವರೇ ಆಗಿದ್ದರೆಂಬುದು- ಗೌಡನಿಗೆ ಇನ್ನಷ್ಟು ಉರಿಯನ್ನು ಮುಟ್ಟಿಸಿತು. ಇನ್ನು ಗೌಡನ ಹೊಲವನ್ನು ಚಾರನೇ ಪಾಲಿನಲ್ಲಿ ಮಾಡಿದ್ದ ಮಾದರ ನಿಂಗ ಮತ್ತು ಪರಸ- ಇಬ್ಬರೂ ಗುಟ್ಟಾಗಿ ಪಾಲಿಗೆ ಪಡೆದಿದ್ದ ಹೊಲವನ್ನು ಬಿಟ್ಟುಬಿಟ್ಟು ತಮ್ಮ ತಮ್ಮ ವ್ಯವಹಾರಗಳನ್ನು ಚುಕ್ತಾ ಮಾಡಿಕೊಂಡು ಹೊರಟರು.
-ಈ ಮುಂತಾದ ಎಲ್ಲಾ ಕಾರಣಗಳಿಗಾಗಿಯೇ ಕಲಗೌಡ ತುಕ್ಕನನ್ನು ತನ್ನ ಹೊಲವನ್ನು ಪಾಲಿನಲ್ಲಿ ಮಾಡಿಕೊಳ್ಳುವಂತೆ ಕರೆಕಳುಹಿಸಿದ್ದ.
*****
ಇನ್ನು ಕವಿತಾ ಊರಿನಲ್ಲಿ ಮಾನಗೆಟ್ಟವಳೆಂಬ ಹಣೆಪಟ್ಟಿ ಕಟ್ಟಿಕೊಂಡು-ಗೌಡನಿಗಿದ್ದ ಮಾನ ಮರ್ಯಾದೆಯನ್ನೆಲ್ಲಾ ಹಾಳುಮಾಡಿಬಿಟ್ಟಳೆಂಬ ಆರೋಪ ಹೊತ್ತುಕೊಂಡು ಮದುವೆಯನ್ನೂ ಆಗದೇ ತಂದೆಯ ಸೇವೆಯನ್ನು ಮಾಡಿಕೊಂಡು ಮನೆಯಲ್ಲೇ ಇದ್ದುಬಿಟ್ಟಳು. ಎಂದೂ ಅಡಿಗೆ ಕೆಲಸ ಮಾಡಿರದಿದ್ದ ಆಕೆ ಇದೀಗ ನಸುಕಿಗೇ ಎದ್ದು ಪಟಪಟನೆಂದು ರೊಟ್ಟಿತಟ್ಟುತ್ತಿದ್ದಳು. ಅಂಗಳಕ್ಕೆ ನೀರುಹಾಕಿ, ರಂಗೋಲಿ ಬಿಡಿಸಿ ತಂದೆಗೆ ಸ್ನಾನಕ್ಕೆಂದು ಬಿಸಿನೀರು ಕಾಯಿಸುತ್ತಿದ್ದಳು. ಮನೆಗೆಲಸಗಳನ್ನೆಲ್ಲಾ ಮಾಡಿ ಮುಗಿಸಿಯಾದ ಮೇಲೆ ಓಣಿಯಲ್ಲಿದ್ದ ಮಕ್ಕಳುಗಳನ್ನೆಲ್ಲಾ ಕೂಡಿಸಿಕೊಂಡು ಟ್ಯೂಶನ್ ಹೇಳುತ್ತಿದ್ದಳು. ಆತ್ಮವಿಮರ್ಶೆಗೂ ಕಡಿಮೆಯಿರಲಿಲ್ಲ. ಆಗಾಗ ಮಾದನ ನೆನಪುಗಳು ಅವಳನ್ನು ಕಾಡುತ್ತಿದ್ದವು.
*****
ದಿನಗಳುರುಳಿದವು.
ವರುಷಗಳು ಕಳೆದವು.
ಮಾದ ಊರಕಡೆಗೆ ಹೊರಳಿ ಬರುವ ಯಾವ ಸೂಚನೆಗಳು ಕಾಣದಾಗಿ; ಅವನ ಅವ್ವ ಲಸಮವ್ವ ಮಗನ ಚಿಂತೆಹಚ್ಚಿಕೊಂಡು ಹಾಸಿಗೆ ಹಿಡಿದವಳು ದಮ್ಮನ್ನು ಬೇರೆ ಅಂಟಿಸಿಕೊಂಡು ಒಂದು ದಿನ ಅದೇ ಹಾಸಿಗೆಯಲ್ಲೇ ಕೊನೆಯುಸಿರೆಳೆದಳು. ಹೀಗಾಗಿ ತುಕ್ಕ ಒಂಟಿಯಾಗಿಬಿಟ್ಟಿದ್ದ ಮತ್ತು ತಬ್ಬಲಿಯೂ ಆದ.
ಈಗ ಗೌಡನ ಮಾತಿನಂತೆ ಹೊಲದ ನೆಪ ಮಾಡಿಕೊಂಡು ಗೌಡನ ತೋಟದ ಗುಡಿಸಲಿನಲ್ಲಿ ಬೀಡುಬಿಟ್ಟ ತುಕ್ಕನಿಗೆ ಈಗ ಆ ಗುಡಿಸಲೇ ಅವನಿಗೆ ಶಾಶ್ವತ ತಾಣವಾಯಿತು. ಹೊಲದ ದೇಖರೇಕಿ ನೋಡಿಕೊಂಡು ಅದೇ ಗುಡಿಸಲಿನಲ್ಲಿ ತನ್ನ ಇದ್ದಬಿದ್ದ ಮನೆಯ ಸಾಮಾನು ಮತ್ತು ಸರಂಜಾಮುಗಳನ್ನು ಒಂದೊಂದಾಗಿ ತಂದು ಅವನ್ನು ಅಲ್ಲೇ ಗುಡಿಸಲಿನಲ್ಲಿ ಕೂಡಿಹಾಕಿಕೊಂಡು ಅದನ್ನೇ ತನ್ನ ಶಾಶ್ವತ ತಾಣವನ್ನಾಗಿ ಮಾಡಿಕೊಂಡ.
ಹೀಗಿರುವಾಗ ಕಬ್ಬಿನ ಪೈರನ್ನು ನೋಡುವ ನೆವದಲ್ಲಿ ಗೌಡ ತುಕ್ಕನಿದ್ದ ಗುಡಿಸಲಿಗೆ ಆಗೊಮ್ಮೆ ಈಗೊಮ್ಮೆ ಬುತ್ತಿಕಟ್ಟಿಕೊಂಡು ಬರುತ್ತಿದ್ದ. ಬರಬರುತ್ತ ಆತ ದಿನಂಪ್ರತಿ ಬುತ್ತಿಕಟ್ಟಿಕೊಂಡು ಬರತೊಡಗಿದ.
ಅದೂ ಇದೂ ಮಾತನಾಡುವುದು.
ಒಂದು ಕಟ್ಟು ಬೀಡಿ ಸೇದುವುದು.
ಆಗೊಮ್ಮೆ ಈಗೊಮ್ಮೆ ಮಾತನಾಡುವುದು; ಮಾತು ಬಿಡುವುದು ನಡೆಯಿತು.
‘ಒಮ್ಮೊಮ್ಮೆ ಇಬ್ಬರೂ ಸೇರಿಯೇ ಊಟಮಾಡುತ್ತಿದ್ದರು.’
ಮತ್ತೊಮ್ಮೆ ಕವಿತಾಳೇ ಇಬ್ಬರಿಗೂ ಬುತ್ತಿ ತರುತ್ತಿದ್ದಳು.
ಈಗೀಗ ಕಲಗೌಡನೂ ಸುಳಿವು ಮಾಡಿಕೊಂಡು ಹೊಲದ ಕೆಲಸದಲ್ಲಿ ತುಕ್ಕನಿಗೆ ಕೈಜೋಡಿಸಲಾರಂಭಿಸಿದ.
ಅಲ್ಲಿಂದ ಮತ್ತೆಂದೂ ಮಾದನ ಮಾತೆತ್ತಲಿಲ್ಲ; ಅವರಿಬ್ಬರೂ.
ಇನ್ನು ಬೆಂಗಳೂರಿನಲ್ಲಿದ್ದ ಮಾದನಿಗೆ ಊರಕಡೆಗಿನ ಯಾವ ಆಸ್ಥೆಯೂ ತೋರಗೊಡದಂತೆ ಕಂಡರೂ ಆತನ ಅಂತರಂಗವೊಂದು ಮಾತ್ರ ತನ್ನ ಊರನ್ನು; ಬಂಧುಬಳಗವನ್ನು ನೆಪ್ಪು ಮಾಡಿಕೊಳ್ಳುತ್ತಲೇ ಇತ್ತು. ರಿಶಪ್ಶನಿಷ್ಟು, ಸೇಲ್ಸಮನ್, ಪೇಂಟಿಂಗ್, ಯಾಡ್ ರಿಪೋರ್ಟಿಂಗ್-ಏನೇನೋ ಆಯ್ತು; ಮಾಡಿದ್ದಾಯ್ತು; ಹೊಟ್ಟೆ ಹೊರೆದುಕೊಂಡಿದ್ದಾಯ್ತು; ಆತ್ಮವಿಮರ್ಶೆಯೂ ಆಯ್ತು.
ಬದುಕು ತೋರಿದ ದಾರಿಯೆಡೆಗೆ ಸಾಗಿದ್ದಾಯಿತು.
ವಿಪರ್ಯಾಸವೆಂದರೆ ಅವನ ಅವ್ವ ತೀರಿದ ಸುದ್ದಿಯೂ ಅವನಿಗೆ ತಿಳಿಯಲಿಲ್ಲ.
ಅಲ್ಲದೇ ತನ್ನಪ್ಪ ಗೌಡನ ಹೊಲವನ್ನು ಪಾಲಿಗೆ ಮಾಡಿದ ವಿಚಾರವೂ ಅವನಿಗೆ ತಿಳಿಯಲಿಲ್ಲ.
ಇಡೀ ಊರು, ಬೀದಿ, ಸಂಬಂಧ, ಸಿಟ್ಟು, ಸೆಡವು- ಎಲ್ಲವನ್ನು ತೊರೆದು ಕಲ್ಲುಬಂಡೆಯಂತೆ ಬದುಕುವುದನ್ನು ಅವನು ಅರಗಿಸಿಕೊಂಡ.
ದಿನಗಳೆದಂತೆಲ್ಲಾ ಮಾದನಿಗೆ ತಾನು ಬದುಕಿಗೆಷ್ಟು ನಿಷ್ಠನೋ ಅಷ್ಟು ಬದುಕು ಮಾತ್ರ ತನಗೆ ನಿಷ್ಠವಿಲ್ಲವೆಂಬ ಸತ್ಯ ತಿಳಿಯಲಾರಂಭಿಸಿತು. ಇದಾವ ಅನುಭವವೋ ಅನುಭಾವವೋ ಅಥವಾ ದೈವಿಕ ತಿಳಿವೋ ಅವನಿಗೇ ನಿಗೂಢವಾಗುತ್ತಾ ಸಾಗಿತು.
ಇದನ್ನೇ ಜಗತ್ತು ವಿಧಿ ಎಂದು ಕರೆಯತೊಡಗಿದರೆ ಮಾದ ಮಾತ್ರ ಎಂದೂ ತಾಳ್ಮೆಗೆಡಲಿಕ್ಕೆ ಹೋಗಲಿಲ್ಲ.

ಮತ್ತಷ್ಟು ಸುದ್ದಿಗಳು

Latest News

ಆಮ್ಲಜನಕ‌ ಕೊರತೆ: ಐಸಿಯುನಲ್ಲಿದ್ದ ಮೂವರು ಕೊರೋನಾ ಸೋಂಕಿತರು ಸಾವು

newsics.com ಲಖನೌ (ಉತ್ತರ ಪ್ರದೇಶ): ಆಮ್ಲಜನಕದ ಕೊರತೆಯಿಂದಾಗಿ ಮೂವರು ಕೋವಿಡ್ ರೋಗಿಗಳು ಶನಿವಾರ ಸಾವನ್ನಪ್ಪಿದ್ದಾರೆ. ಮೃತರು ಗೋಮ್ಟಿನಗರದ ಡಾ. ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸಿಯುಗೆ...

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ ಮಾರಾಟದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...
- Advertisement -
error: Content is protected !!