Wednesday, September 28, 2022

ಮಗಳು ಮತ್ತು ಕೆಂಪುಮಚ್ಚೆ

Follow Us

ಶುಭಶ್ರೀ ಭಟ್ಟ
response@134.209.153.225
ಅಂದು ಪರಶಿವಯ್ಯನವರು ಕಚೇರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಿ ಬಂದಾಗ ಸ್ವಾಗತಿಸಿದ್ದು ಮುಚ್ಚಿದ ಬಾಗಿಲು. ದಿನವೂ ಅಚ್ಚುಕಟ್ಟಾಗಿ ತಯಾರಾಗಿ ನಗುವ ಮಲ್ಲಿಗೆ ಹೊತ್ತು ಘಮಿಸುತ್ತಿದ್ದ ಪತ್ನಿ ಪಾರ್ವತಿ ಎದುರುಗೊಳ್ಳಲು ಬರಲಿಲ್ಲ ಎಂದಿನಂತೆ. ಅಚ್ಚರಿಗೊಂಡ ಪರಶಿವಯ್ಯ ಮನೆಯೆಲ್ಲಾ ಹುಡುಕಿದರೂ ಪತ್ನಿಯ ಸುಳಿವಿಲ್ಲ. ಹೂದೋಟ-ಕೈದೋಟ, ಅಕ್ಕಪಕ್ಕದ ಮನೆಯೆಲ್ಲಾ ಇಣುಕಿದರೂ ಅವಳು ಕಾಣಸಿಗದಾಗ ಗಾಬರಿಬಿದ್ದರು. ಇನ್ನೇನು ಪಕ್ಕದ ಬೀದಿಯೆಡೆಗೆ ಹುಡುಕಹೊರಟಾಗಲೇ ಕಾಣಿಸಿದಳು ಪಾರ್ವತಿ ದೂರದಲ್ಲಿ. ಸದಾ ಚಿಗರೆಯಂತೆ ಜಿಗಿಯುತ್ತಾ, ಕಣ್ಣಲ್ಲಿ ನವಿಲು ಕುಣಿಸುತ್ತಾ, ಎಲ್ಲರಲ್ಲೂ ಪ್ರೀತಿಯ ಜೀವಸೆಲೆ ತುಂಬುವ ಪಾರ್ವತಿಯಿಂದು ಗರಬಡಿದವರಂತೆ ಮುಲುಗುತ್ತಾ ಬರುತ್ತಿದ್ದಳು. ಪರಶಿವಯ್ಯನವರನ್ನು ನೋಡಿದೊಡನೆ ತೆಕ್ಕೆಬಿದ್ದು, ಜಲಪಾತದ ಅಣೆಕಟ್ಟು ಒಡೆದಂತೆ ಭೋರ್ಗರೆಯತೊಡಗಿದಳು. ಏನನ್ನೂ ಕೇಳದೆ ಸುಮ್ಮನೆ ಅವಳ ಬೆನ್ನು ನೇವರಿಸುತ್ತಾ, ತಲೆ ಸವರುತ್ತಾ ಅವಳನ್ನು ಅನುನಯಿಸತೊಡಗಿದರು ಪರಶಿವಯ್ಯ. ದುಃಖ ತಹಬಂದಿಗೆ ಬಂದಮೇಲೆ ಪಾರ್ವತಿಯನ್ನು ಕುಳ್ಳಿರಿಸಿ, ನೀರು ಕೊಟ್ಟು ಸಮಾಧಾನಿಸಿ ಕೇಳಿದರು-  ‘ಎಂತಾಯ್ತೇ ಪಾತು? ಎಂತಕ್ಕೆ ಹೀಂಗ್ ಅಳುದು? ಯಾರೆಂತಂದ್ರು ನಿಂಗೆ?’. ಅದಕ್ಕವಳು ತನ್ನ ಹನಿತುಂಬಿದ ಕಣ್ಗಳಿಂದ ಅವರನ್ನು ನೋಡಿ ‘ರೀ..ನಾನಿವತ್ತು ಒಂದು ಹೆಣ್ಮಗುನ ಕಂಡೆ, ಹಾಲ್ಮಾರು ಶಂಕ್ರನ ಹೆಣ್ತಿ ಸಂತಿಗ್ ಬಂದಿತ್ತು. ಅದಕ್ಕೂ ನನ್ನ ತರಾನೇ ಕೆನ್ನೆಗುಳಿ ಬೀಳುವಲ್ಲಿ ಕೆಂಪುಮಚ್ಚೆ ಇತ್ತು. ಥೇಟ್ ನಾನು ಸಣ್ಣಕಿದ್ದಾಗ ಇದ್ದಂಗಿತ್ತು. ಮಂಪರಿನಲ್ಲೇ ಹಾಲು ಪಾತ್ರೆ ಒಳಗೆ ಇಟ್ಟು ಬರುವಷ್ಟರಲ್ಲಿ ಅವರಿರಲಿಲ್ಲ. ಅವಳನ್ನು ಹುಡ್ಕ್ತಾಹೋದೆ, ಸಿಗ್ಲಿಲ್ಲ ರೀ..’ ಎನ್ನುತ್ತಾ ಮತ್ತೆ ಬಿಕ್ಕತೊಡಗಿದಳು, ದಶಕಗಳಿಂದ ಹಿಡಿದಿಟ್ಟ ದುಃಖವೆಲ್ಲಾ ಹೊಳೆಯಾಗಿ ಹರಿದಂತಿತ್ತು. ಅದನ್ನು ಕೇಳಿ ಪರಶಿವಯ್ಯನವರು ಸ್ತಬ್ಧರಾಗಿ ನಿಂತಿದ್ದರು. ಇಬ್ಬರೂ ತಮಗರಿವಿಲ್ಲದೆ ನೆನಪಿನ ದೋಣಿಯೇರಿ ತಮ್ಮ ಗತಜೀವನಕ್ಕೆ ಮರಳಿ ಪಯಣಿಸಿದರು.
ಪಾರ್ವತಿಯ ನೆನಪಿನಂಗಳ…
ನನಗೆ ಅಮ್ಮನ್ಯಾರೆಂದು ಅರಿಯುವುದರೊಳಗೆ ಅಮ್ಮನ ಸ್ಥಾನವನ್ನು ಅಪ್ಪ ಅಲಂಕರಿಸಿಯಾಗಿತ್ತು. ಅಮ್ಮನ ಪ್ರೀತಿ-ವಾತ್ಸಲ್ಯದ ಕೊರತೆಯೇ ಬಾರದಂತೆ ಬೆಳೆಸಿದರು ಅಪ್ಪ. ಊರಶಾಲೆಯಲ್ಲಿ ಶಿಸ್ತಿನ ಸುಬ್ಬಣ್ಣ ಮೇಷ್ಟ್ರಾಗಿದ್ದ ಅವರನ್ನು ಎಲ್ಲರೂ ಗೌರವಿಸುವವರಾಗಿದ್ದರು. ಚಿಕ್ಕವಯಸ್ಸಿನಲ್ಲೇ ಹೆಂಡತಿಯನ್ನು ಕಳೆದುಕೊಂಡ ಅವರನ್ನು ಕಂಡರೆ ಎಲ್ಲರಿಗೂ ಮರುಕ. ಆ ಅನುಕಂಪ, ಸೋಗಲಾಡಿತನದ ಪ್ರೀತಿ ಎಲ್ಲವೂ ಅವರ ಸರ್ಕಾರಿ ನೌಕರಿಯ ಮೇಲೋ, ನಮ್ಮಲ್ಲಿದ್ದ ಒಂದಿಷ್ಟು ತೋಟದ ಮೇಲೋ, ಇಲ್ಲಾ ಅಮ್ಮನ ಬಳಿಯಿದ್ದ ಸಾಕಷ್ಟು ಒಡವೆ-ವಸ್ತ್ರದ ಮೇಲೋ ಅರಿಯಲು ಅಶಕ್ತರಾಗಿದ್ದೆವು. ಇದೇ ಕಾರಣಕ್ಕೆ ಹೆಣ್ಣು ಕೊಡಲು ನಾಮುಂದು-ತಾಮುಂದು ಎಂದು ಬರತೊಡಗಿದ ಹೆಸರಿಲ್ಲದ ನೆಂಟರಿಷ್ಟರನ್ನು ದೂರವೇ ಇಟ್ಟಿದ್ದರು ಅಪ್ಪ. ‘ನನ್ನ ಜೀವ-ಜೀವನವೆಲ್ಲಾ ನನ್ನ-ಸಾವಿತ್ರಿಯ ಪ್ರೇಮದ ಕುರುಹಾದ ಪಾರ್ವತಿಗೆ ಮೀಸಲು. ಮರುಮದುವೆಯ ಮಾತೇ ಇಲ್ಲ’ ಎಂದು ಕಡ್ಡಿ-ತುಂಡಾದಂತೆ ಹೇಳಿದಾಗ ಹೆಣ್ಣು ಕೊಡಲು ಬಂದವರೆಲ್ಲಾ ಗೊಣಗಿಕೊಂಡು ತೆರಳಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅಂದಿನಂತೆ ಅಪ್ಪನ ಮೇಲೆ ಪ್ರೀತಿ-ಹೆಮ್ಮೆ-ಗೌರವವೆಲ್ಲಾ ತುಸು ಹೆಚ್ಚಾದದ್ದು ಅರಿವಿಗೆ ಬಂತು. ಅಕ್ಕಪಕ್ಕದವರು, ನೆಂಟರು, ಸ್ನೇಹಿತರೆಲ್ಲಾ ಹೇಳುವಂತೆ ನಾನು ಹೆಸರಿಗೆ ತಕ್ಕಂತೆ ಸುಂದರಿಯಾಗಿದ್ದೆನಂತೆ. ಒಳ್ಳೆ ಕಡೆದಿಟ್ಟ ರೂಪು-ನಿಲುವು, ಎಲ್ಲರನ್ನೂ ಪ್ರೀತಿಸುವ ಮೃದುಹೃದಯಿ. ಶಾಲೆಯಲ್ಲಿ ಮೇಷ್ಟ್ರಾದ ಅಪ್ಪ ಮನೆಗೆಲಸ, ಅಡುಗೆ-ತಿಂಡಿ, ನನ್ನನ್ನು ತಯಾರಿ ಮಾಡುವುದು, ಶಾಲೆಗೆ ತನ್ನೊಡನೆ ಕರೆದೊಯ್ಯುವುದು, ಮನೆಗೆ ಬಂದ್ಮೇಲೂ ವಿಶ್ರಾಂತಿಯಿಲ್ಲದಂತೆ ಮತ್ತೆ ಮನೆಕೆಲಸ, ನಾಳಿನ ಟಿಪ್ಪಣಿ, ಓದುವಿಕೆ… ಹೀಗೆ  ಅಹರ್ನಿಶಿ ದುಡಿಯುವುದು ಕಂಡು ನನಗೆ ಬೇಸರವಾಗುತ್ತಿತ್ತು. ನಾನೂ ಮನೆಗೆಲಸ ಕಲಿತು ಅಪ್ಪನ ಭಾರವನ್ನು ಕಡಿಮೆ ಮಾಡಲು ಎಲ್ಲಾ ಕೆಲಸವನ್ನು ಕಲಿತೆ, ಅಪ್ಪನಿಗರಿವಿಲ್ಲಂತೆ. ಕುಂಟಾಬಿಲ್ಲೆಯಾಡುವ ವಯಸ್ಸಲ್ಲಿ ಸೌಟು ಹಿಡಿದಿದ್ದೆ, ಮೈನೆರೆಯುವ ಮೊದಲೇ ಮನೆಕೆಲಸವನ್ನು ಸರಿದೂಗಿಸಿಕೊಂಡು ಹೋಗುವಷ್ಟು ಪ್ರಬುದ್ಧಳಾಗಿದ್ದೆ. ಕಷ್ಟಪಟ್ಟು ಹತ್ತನೇ ತರಗತಿಯನ್ನು ನಾಲ್ಕನೇ ಬಾರಿ ಪಾಸು ಮಾಡಿದಾಗಲೇ, ಮದುವೆಯ ಪ್ರಸ್ತಾಪ ಶುರುವಾಗಿತ್ತು. ಅಪ್ಪನ ಆಸೆಯಂತೆ ಓದಿದ ವಿದ್ಯೆ ತಲೆಗೆ ಹತ್ತಲಿಲ್ಲ, ಆದರೆ ಜೀವನ ಕೈ ಹಿಡಿದಿತ್ತು.
ಯಾವುದೆ ಅಡೆತಡೆಗಳಿಲ್ಲದ ಮೊದಲ ಪರೀಕ್ಷೆಯಲ್ಲಿ ಪಾಸಾಗಿದ್ದೆ, ನೋಡಲು ಬಂದ ಪರಶಿವಯ್ಯನವರಿಗೆ ಅಂದೇ ಮಾಡಿಕೊಂಡು ಹೋಗಬೇಕೆಂಬಷ್ಟು ಹುಚ್ಚು ಹಿಡಿಸಿದ್ದೆ. ಆದರೆ ಅವರಮ್ಮ ಮಂಕಾಳಮ್ಮನವರು ಹಿಂದಿನ ಶಾಸ್ತ್ರ ಸಂಪ್ರದಾಯ, ಜಾತಕದಲ್ಲಿ ನಂಬಿಕೆಯಿಟ್ಟವರು. ಅವರಾಸೆಯಂತೆ ಶುಭ ಮಹೂರ್ತದಲ್ಲಿ ಪರಶಿವಯ್ಯನವರ ಮಡದಿಯಾಗಿ ಹೊಸ ಜೀವನಕ್ಕೆ ಕಾಲಿರಿಸಿದೆ. ಅಪ್ಪನ ನೆನಪಲ್ಲಿ ಆಗೊಮ್ಮೆ-ಈಗೊಮ್ಮೆ ಅಳುವಂತಾದಾಗ, ಜೀವದಂತೆ ಪ್ರೀತಿಸುವ ಗಂಡನಿಗೆ ಅವೆಲ್ಲವನ್ನೂ ಮರೆಸುವ ಶಕ್ತಿಯಿತ್ತು. ಅತ್ತೆಯ ಅತಿಯಾದ ಮಡಿವಂತಿಕೆ ಶಾಸ್ತ್ರವನ್ನು ಹೊರತು ಪಡಿಸಿದರೆ, ಅಮ್ಮನನುಭವ ಕಟ್ಟಿಕೊಡುವ ಮಮತೆ-ವಾತ್ಸಲ್ಯ ನನ್ನ ಮೇಲೆ. ಹೀಗೆ ಮತ್ತೊಂದು ಹೊಸಜೀವನ ಸುಂದರವಾಗಿಯೇ ಶುರುವಾಗಿತ್ತು.
ಮೊದಲ ಹಬ್ಬಕ್ಕೆ ತವರಿಗೆ ಬಂದಾಗ ನನಗೆ ಖುಶಿಯಾಗುವ ಮೊದಲೇ ಸಂಕಟ ಶುರುವಾಗಿತ್ತು. ಮುದ್ದು ಮಗಳ ಬಿಟ್ಟಿದ್ದಿದ್ದಕ್ಕೋ, ಒಂಟಿತನವನ್ನು ಸಹಿಸಲಾಗದೆಯೋ ಅಪ್ಪ ಮೂಳೆಯ ರಾಶಿಯಂತಾಗಿ ಹಾಸಿಗೆ ಹಿಡಿದು ಬಿಟ್ಟಿದ್ದರು. ನವದಾಂಪತ್ಯಕ್ಕೆ ಅಡ್ಡಿಯಾಗಬಾರದೆಂದು ಅವರ ಖಾಯಿಲೆಯ ವಿಷಯ ನನ್ನೆಡೆಗೆ ತಲುಪಕೊಡಲಿಲ್ಲ. ನಾವೆಲ್ಲ ಬಂದು ಸಡಗರದಿಂದ ಹಬ್ಬದಾಚರಣೆ ಮಾಡುವುದನ್ನು ನೋಡುತ್ತಲೇ ಕಣ್ಮುಚ್ಚಿದರು ಅಪ್ಪ. ಅಮ್ಮನಂತಿದ್ದ ಅಪ್ಪನನ್ನು ಕಳೆದುಕೊಂಡು ದುಃಖಿಸುತ್ತಿರುವಾಗಲೇ, ನನ್ನವರಿಗೆ ದೂರದೂರು ಮಂಡ್ಯದಲ್ಲಿನ ಒಂದು ಹಳ್ಳಿಗೆ ವರ್ಗವಾದ ಸುದ್ದಿ. ತವರಿನ ತೋಟ-ಮನೆಯನ್ನು ಮಾರಲಿಚ್ಛಿಸದೆ ಅದನ್ನು ನೋಡಿಕೊಳ್ಳಲು ಮಲೆನಾಡಿನ ಹಳ್ಳಿಯಿಂದ ಬಡದಂಪತಿಗಳನ್ನು ನೇಮಿಸಿದ್ದಾಯ್ತು.
ಅಪ್ಪ ತೀರಿಹೋದ ದುಃಖಕ್ಕೆ ಕಣ್ಣೀರು ಹಾಕಲು ಸಮಯವಿಲ್ಲದಂತೆ ಹೊಸ ಊರು-ಹೊಸ ಮನೆಗೆ ಮೈಮನಸ್ಸನ್ನು ಒಗ್ಗಿಸಿಕೊಳ್ಳಲು ಹೆಣಗಾಡುತ್ತಿದ್ದೆ. ಕರಾವಳಿ ಮಲೆನಾಡಿನಂತಹ ಸುಂದರ ಪರಿಸರದಲ್ಲಿ ಬೆಳೆದು ಬದುಕಿದ ನನಗೆ, ಮಂಡ್ಯದೊಳಗಿನ ಹಳ್ಳಿ ಇಷ್ಟವಾದರೂ, ಜನರ ಒರಟು ಬಾಯಿಗೆ ಗಾಬರಿ ಬೀಳುತ್ತಿದ್ದೆ. ಅವರ ಮಾತಷ್ಟೇ ಒರಟು, ಮನಸ್ಸಲ್ಲವೆಂದು ಅರಿಯಲು ಕೆಲಸಮಯವೇ ಹಿಡಿಯಿತು. ಮತ್ತೆ ಅಪ್ಪನ ತಿಥಿಕಾರ್ಯವೆಲ್ಲಾ ಮುಗಿದು, ವರ್ಷಾಂತಕ ಕಳೆಯುವುದರೊಳಗೆ ನಾನು ಚೊಚ್ಚಲ ಬಸುರಾಗಿದ್ದೆ. ‘ನಿಮ್ಮಪ್ಪನೇ ಹುಟ್ಟಿ ಬರುತ್ತಾರೆ ಕಣೇ’ ಅತ್ತೆಯೆಂದಾಗ ಮನವರಳಿತ್ತು, ಮಗಳಾಗಿ ತೀರಿಸಲಾಗದ ಅಪ್ಪನ ಋಣವ ಅಮ್ಮನಾಗಿ ತೀರಿಸಬಲ್ಲೆನೆಂಬ ಖುಷಿಗೆ. ನನ್ನವರ ಖುಷಿಗಂತೂ ಪಾರವೇ ಇರಲಿಲ್ಲ. ಕಾಲು ನೆಲಕಿಟ್ಟರೆ ಭೂಮಿ ಕಚ್ಚುವುದು, ಎದ್ದು ನಿಂತರೆ ಆಕಾಶ ನೆತ್ತಿಗೆ ತಾಕುವುದೋ ಎಂಬಂತೆ ಬಲು ಮುಚ್ಚಟೆಯಿಂದ ನೋಡಿಕೊಳ್ಳುತ್ತಿದ್ದರು.
ನನ್ನ ಹುಚ್ಚು ಬಸರಿ-ಬಯಕೆಗಳನ್ನು ಇಲ್ಲವೆನ್ನದೆ ನಡೆಸಿಕೊಡುತ್ತಿದ್ದರು ನನ್ನವರು. ಬಗೆ-ಬಗೆಯ ತಿಂಡಿ-ತೀರ್ಥಗಳನ್ನು ಮಾಡಿಕೊಡುತ್ತಾ ಒಳ್ಳೊಳ್ಳೆ ಪುರಾಣ ಕಥೆಗಳನ್ನು ಹೇಳುತ್ತಾ, ದೇವಸ್ಥಾನಗಳಿಗೆ ಕರೆದೊಯ್ದು ಪೂಜೆ ಮಾಡಿಸುತ್ತಿದ್ದ ಅತ್ತೆ, ಇತ್ತೀಚಿಗೆ ಯಾಕೋ ಮಂಕಾಗಿದ್ದರು. ನಾನೂ-ಇವರು ಅವರ ಮನದ ದುಗುಡ ತಿಳಿಯಲು ಪ್ರಯತ್ನಿಸಿ ಸೋತಿದ್ದೆವು. ಆದರೆ ಕಾರಣವನ್ನು ಮಾತ್ರ ಅತ್ತೆ ಯಾರ ಬಳಿಯೂ ಬಾಯಿಬಿಡಲಿಲ್ಲ. ಸೀಮಂತ ಕಾರ್ಯಕ್ರಮ ಮುಗಿಸಿ ಮಲಗಿದವಳಿಗೆ ತವರಿನ ನೆನಪಾಗಿ ಬಿಕ್ಕಳಿಕೆ. ಅಪ್ಪ-ಅಮ್ಮನಿದ್ದರೆ ಎನ್ನುವ ಭಾವವೇ ಕೆನ್ನೆ ತೋಯಿಸಿತ್ತು. ಕ್ಷಣವಷ್ಟೇ ಕಿಬ್ಬೊಟ್ಟೆಯಲ್ಲಿ ನೋವು ಒತ್ತರಿಸಿಕೊಂಡು ಬಂದು ಚೀತ್ಕರಿಸಿದೆ. ಓಡಿ ಬಂದ ಅತ್ತೆ ‘ನೀರು ಹೋಗಲು ಶುರುವಾಗಿದೆ, ಇಷ್ಟು ಬೇಗ ನೋವು ಶುರುವಾಗಿದ್ದು ಒಳ್ಳೆಯದಲ್ಲ, ಬೇಗ ಆಸ್ಪತ್ರೆಗೆ ಹೋಗೊಣ’ ಎಂದು ಹೇಳಿದ ಅಸ್ಪಷ್ಟ ನೆನಪು..
ಕಣ್ತೆರೆದಾಗ ಆದಾಗಲೇ ವಾರ ಕಳೆದಿತ್ತು, ಮುಗುಳುನಗುತ್ತಾ ಕುಳಿತಿದ್ದ ಪತಿ ಕೆನ್ನೆಗೊತ್ತಿದ ಸಿಹಿಯೂ ರುಚಿಸಲಿಲ್ಲ. ‘ಮಗುವೆಲ್ಲಿ?’ ಕಣ್ಣಲ್ಲಾಗಲೇ ಗಂಗೆ ತುಳುಕಲು ಸಿದ್ಧಳಾಗಿ ನಿಂತಿದ್ದಳು, ಮನಸ್ಸಲ್ಲೆನೋ ಸಣ್ಣ ಶಂಕೆ. ನಿಧಾನಕ್ಕೆ ಎದ್ದು ಕುಳಿತವಳಿಗೆ, ಮಡಿಲಲ್ಲಿ ಅತ್ತೆಯಿಟ್ಟಿದ್ದು ಮಾಂಸದ ಮುದ್ದೆಯಂತಿದ್ದ ಗೊಂಬೆಯಂತಿಹ ಮಗು. ‘ನಾನು ಹೇಳಿದಂತೆ ಹುಟ್ಟಿದ್ದು ನಿಮ್ಮಪ್ಪನೇ?’ ಅತ್ತೆಯೆಂದಾಗ ಖುಷಿಯಿಂದ ಅದನ್ನು ಎದೆಗಪ್ಪಿಕೊಂಡೆ. ಹೇಳಲಾಗದ ಆನಂದ, ಕಣ್ಣೀರುಕ್ಕಿಸುತ್ತಿದ್ದವಳನ್ನು ಗದರಿದ ಅತ್ತೆ, ಮಗುವನ್ನು ಬಿಡಿಸಿಕೊಂಡು ಮಲಗಲು ಹೇಳಿದರು. ಮಗುವಿಗೇ ಹಾಲು ಕುಡಿಸಲೂ ಬಿಡದ್ದಕ್ಕೆ ಬೇಸರ ಮಾಡಿಕೊಂಡ ನನಗೆ ಇವರು ಹೇಳಿದ್ದಿಷ್ಟೇ ‘ಅವಧಿಗೂ ಮುಂಚೆ ಹುಟ್ಟಿದ ಮಗು, ನಂಜಾಗಬಹುದು. ಮತ್ತೆ ಕುಡಿಸುವಂತೆ, ನೀ ಆರಾಮು ತಕಾ ಪಾತು.. ‘ ಔಷಧದ ಮಂಪರಿಗೋ, ಮಗು ಕಂಡ ಸಮಾಧಾನಕ್ಕೋ ನಿದ್ರೆಯಾವರಿಸಿದ್ದೇ ತಿಳಿಯಲಿಲ್ಲ. ತಿಂಗಳುಗಳ ಕಾಲ ಆಸ್ಪತ್ರೆಯಿಂದ ಮರಳಿ ಮನೆಗೆ ಬಂದಿದ್ದು ನಾವು ಮೂವರು ಮತ್ತೆ ಖಾಲಿ ತೊಟ್ಟಿಲು. ಮಗುವಿಗೆ ಸಾಯುವಂತದ್ದೇನಾಯ್ತು ಅಂತ ಇಂದಿನವರೆಗೂ ಯಾರೂ ಹೇಳಲಿಲ್ಲ. ಇದೇ ಕೊರಗಿನಲ್ಲಿ ಅತ್ತೆಯೂ ಇಲ್ಲವಾದರು.
ಮತ್ತೆ ನಮಗೆ ಮಕ್ಕಳೇ ಆಗಲಿಲ್ಲ. ಮಕ್ಕಳಾಗಲು ಸಾಧ್ಯವೇ ಇಲ್ಲವೆಂಬ ಸತ್ಯವು ತುಂಬಾ ವರ್ಷಗಳ ನಂತರ ನನಗೆ ತಿಳಿಯಿತು. ಬದುಕಲು ನನ್ನವರನ್ನು ಬಿಟ್ಟರೆ ಮತ್ಯಾವ ಕಾರಣವೂ ನನಗುಳಿದಿರಲಿಲ್ಲ. ಒಂದು ಶಾಲೆಯನ್ನೇ ದತ್ತು ತೆಗೆದುಕೊಂಡು ಅವರಿಗೆ ಉತ್ತಮ ಜೀವನ ಕಟ್ಟಿಕೊಡುತ್ತಿದ್ದ ಸಮಾಧಾನವಿದ್ದರೂ, ಹುಟ್ಟಿದ ಮಗು ಇಲ್ಲವಾದ ಕೊರಗು ಮರೆಯಾಗಲೇ ಇಲ್ಲ. ಆದರೂ ನನ್ನವರಿಗೆ ದುಃಖ ಕೊಡಬಾರದೆಂದು ಖುಷಿಯಾಗಿರುವ ಪ್ರಯತ್ನದ ನಡುವೆಯೇ ಬಿರುಗಾಳಿಯಂತೆ ಬಂದ ಆ ಮಚ್ಚೆಯ ಹುಡುಗಿ ಮನವನ್ನು ಅಲ್ಲೋಲಕಲ್ಲೋಲ ಮಾಡಿದ್ದಾಳೆ. ಅವಳ್ಯಾರೋ? ನನಗ್ಯಾಕೆ ಅವಳಲ್ಲಿ ಇಷ್ಟು ಆಸಕ್ತಿಯೋ ಗೊತ್ತಿಲ್ಲ.
ಪರಶಿವಯ್ಯನವರ ನೆನಪಿನಂಗಳ…
ಚೊಚ್ಚಲು ಬಸುರಿಯಾಗಿದ್ದ ಪಾತುವಿಗೆ ಹೆರಿಗೆ ನೋವು ಕಾಣಿಸಿಕೊಂಡಾಕ್ಷಣ ಕೈಕಾಲೇ ಆಡಲಿಲ್ಲ. ಅವಳ ಕಣ್ಣಲ್ಲಿ ನೀರಿನ ಪಸೆಯನ್ನು ಕಾಣಲು ಇಚ್ಛೆಪಡದ ನನಗೆ, ಅವಳು ಕಿಬ್ಬೊಟ್ಟೆ ನೋವಿನಿಂದ ನರಳಿ ನರಳಿ ಪ್ರಜ್ಞೆ ತಪ್ಪಿದ್ದು ಮಾತ್ರ ಸಹಿಸಲಾಗಲಿಲ್ಲ. ಅವಳನ್ನು ದಾಖಲಿಸಿಕೊಂಡ ವೈದ್ಯರು ಹೇಳಿದ್ದಿಷ್ಟೇ ‘ತುಂಬಾ ಕ್ಲಿಷ್ಟಕರವಾದ ಕೇಸಿದು, ಗರ್ಭಕೋಶವನ್ನು ತೆಗೆಯಬೇಕಾಗೂ ಬರಬಹುದು. ಯಾವುದಕ್ಕೂ ಆಸ್ಪತ್ರೆಯ ನಿಯಮದಂತೆ ಕಾಗದಪತ್ರಗಳಿಗೆಲ್ಲಾ ಸಹಿ ಮಾಡಿಬಿಡಿ’. ಜೀವವೇ ಕೈಗೆ ಬಂದಂತಾಗಿತ್ತು. ಅಮ್ಮನ ಬಳಿಕ ನಾನು ಬಹುವಾಗಿ ಪ್ರೀತಿಸಿದ ಹೆಣ್ಣೀಕೆ. ಅವಳನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಇಚ್ಛಿಸದೆ ಆಸ್ಪತ್ರೆಯವರು ತೋರಿಸಿದಲ್ಲೆಲ್ಲಾ ಸಹಿಹಾಕಿದ್ದೆ ಮೌನವಾಗಿ.
ಬಲುಕಷ್ಟದಿಂದ ಮುದ್ದಾದ ಹೆಣ್ಣು ಮಗುವಿಗೆ ಜನ್ಮಕೊಟ್ಟಳು ಪಾತು. ಅವಧಿಗೂ ಮುಂಚೆ ಹುಟ್ಟಿದ ಮಗುವಾದ್ದರಿಂದ ನಮಗ್ಯಾರಿಗೂ ಪ್ರವೇಶವಿರಲಿಲ್ಲ. ಅಮ್ಮನಂತೂ ದೇವಸ್ಥಾನ, ಮನೆ, ಶುದ್ಧಿ, ಅಕ್ಕಸಾಲಿಗನೆಂದೆಲ್ಲಾ ಓಡಾಡುತ್ತಿದ್ದಳು. ನಾನು ಮಾತ್ರ ಪಾತುವನ್ನು-ಮಗಳನ್ನು ನೋಡಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಆದರೆ ಬಂದೆರಗಿದ್ದು ಮಾತ್ರ ‘ಬಿಳಿಕಾಮಾಲೆ’ಯಿಂದ ಮಗುವನ್ನು ಬದುಕಿಸಲಾಗಲಿಲ್ಲವೆಂಬ ಬರಸಿಡಿಲು. ಅದನ್ನು ಅರಗಿಸಿಕೊಳ್ಳಲಾಗದೆ ನಾನು-ಅಮ್ಮ ದಹಿಸಿಹೋದೆವು. ಇದ್ಯಾವುದರ ಪರಿವೆಯಿಲ್ಲದೆ ಮಲಗಿದ್ದಳು ಪಾತು. ವಾರಗಳ ನಂತರ ಪ್ರಜ್ಞೆಗೆ ಮರಳಿದ ಪಾತುವಿಗೆ ಆಘಾತವಾಗಬಾರದೆಂದು ವೈದ್ಯರ ಸಲಹೆಯ ಮೇರೆಗೆ ಬೇರೊಬ್ಬರ ಮಗುವನ್ನು ತೋರಿಸಿ ನಿಭಾಯಿಸಿದ್ದಾಯ್ತು. ಹಾಲುಣಿಸುತ್ತೆನೆಂದವಳಿಗೆ ನಂಜಿನ ಕಥೆ ಕಟ್ಟಿ ನಂಬಿಸುವಾಗ, ಗಂಟಲೊಳಗೆ ಬಿಕ್ಕು ಹೊಂಚಿಹಾಕಿ ಕುಂತಿತ್ತು ಕಳ್ಳಬೆಕ್ಕಂತೆ.
ಅಸ್ಪತ್ರೆಯಿಂದ ಪಾತುವೇನೋ ಮನೆಗೆ ಬಂದಳು ಹುಷಾರಾಗಿ. ಆದರೆ ಅವಳು ಕೇಳುವ ಪ್ರಶ್ನೆಗೆ ಉತ್ತರವಿಲ್ಲದೆ ನಾವು ಬಿಳುಚಿಕೊಳ್ಳುತ್ತಿದ್ದೆವು. ಪಾರ್ವತಿಯನ್ನು ಸುಧಾರಿಸುತ್ತಲೇ ಅಮ್ಮನನ್ನೂ ಗಮನಿಸುತ್ತಿದ್ದೆ. ಇತ್ತೀಚೆಗೆ ತುಂಬಾ ಮಂಕಾಗಿದ್ದಳು. ಒಮ್ಮೊಮ್ಮೆ ಮೌನ, ಒಮ್ಮೆಲೇ ಅಳು, ಒಮ್ಮೊಮ್ಮೆ ತನಗೆ ತಾನೇ ಹೊಡೆದುಕೊಳ್ಳುವ ಪರಿ, ಮೊದಲಿಗೆ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಹೀಗಾಡುತ್ತಿದ್ದಾಳೆಂದುಕೊಂಡೆ. ಆದರೆ ಬರಬರುತ್ತಾ ಇವೆಲ್ಲಾ ತೀರ ಅಸಹಜ ಅನಿಸತೊಡಗಿದಾಗ, ಅಮ್ಮನನ್ನು ಕರೆದುಕೊಂಡು ಸಮೀಪದ ದೇವಸ್ಥಾನಕ್ಕೆ ಹೊರಟೆ. ಅರ್ಚನೆಯ ನೆಪಮಾಡಿಕೊಂಡು. ಪೂಜೆ ಮುಗಿಸಿ ದೇವಸ್ಥಾನದ ಹೊರಗೆ ತೆಂಗಿನಮರದ ಕೆಳಗಿನ ಕಲ್ಲುಬೆಂಚಿನ ಮೇಲೆ ಕುಳಿತಾಗಲೂ ಅಮ್ಮ ಮೌನಿಯಾಗಿದ್ದಳು. ‘ಅಮ್ಮಾ! ಏನಾಯ್ತು? ಯಾಕಿಂಗ್ ವಿಚಿತ್ರವಾಗಿ ನಡ್ಕೋತಿದ್ಯಾ?’ ಎಂದೆ. ಇದನ್ನೇ ಕಾಯುತ್ತಿದ್ದವಳಂತೆ ಬಿಕ್ಕಳಿಸಿ ಅಳತೊಡಗಿದಳು. ಕ್ಷಣಕಾಲ ಗಾಬರಿಯಾದರೂ, ಅತ್ತಾದರೂ ದುಃಖ ಹೊರಗೆ ಬರಲೆಂದು ಸುಮ್ಮನಾದೆ. ‘ಮಗಾ!ಪರಶಿ.. ನಾನು ಶಾಸ್ತ್ರದ ಹೆಸರಲ್ಲಿ ಪಾತುಗೆ-ನಿಂಗೆ ತುಂಬಾ ಅನ್ಯಾಯ ಮಾಡ್ಬಿಟ್ಟೆ ಕಣೋ. ಮಗುವಿನ ನಕ್ಷತ್ರ ಸರಿಯಿಲ್ಲ, ಅದರಿಂದ ನಮ್ಮ ಕುಟುಂಬವೇ ನಾಶವಾಗುತ್ತೆ ಅನ್ನೋ ಜ್ಯೋತಿಷಿಗಳ ಮಾತು ಕೇಳಿ, ನರ್ಸಿನ ಸಹಾಯ ತಕ್ಕೊಂಡು ಅದ್ಲಿ-ಬದ್ಲಿ ಮಾಡ್ದ್ನೋ. ಗ್ರಾಚಾರ ನೋಡೊ ಮಗುಗೇ ಹೀಗಾಯ್ತು… ಪಾತು ಅಂತೂ’ ಮುಂದೆ ಬಾರದೇ ಅಮ್ಮ ಮತ್ತೆ ಬಿಕ್ಕಳಿಸತೊಡಗಿದಳು. ಅಮ್ಮನ ಮಾತಿಗೆ ತಲೆ ಸಹಸ್ರ ಹೋಳಾಗಿ ಸಿಡಿಯತೊಡಗಿತ್ತು. ಅಮ್ಮನ ಮೇಲೆ-ಅವಳ ಮೂಢನಂಬಿಕೆಯ ದುರುಪಯೋಗಪಡಿಸಿಕೊಂಡ ಶಾಸ್ತ್ರದ ಮೆಲೆ ಕಂಡರಿಯದ ಕೋಪವುಕ್ಕಿ ಬಂದಿತ್ತು. ಆದರೂ ನನ್ನ ಮಗುವೆಲ್ಲೋ ಬದುಕಿದೆಯೆಂಬ ಭಾವವೇ ಖುಷಿಕೊಡ್ತು. ಅಮ್ಮ ಹೇಳಿದ ಕೆಂಪುಮಚ್ಚೆ ಗುರುತು ಹಿಡಿದು ಹುಡುಕದ ಜಾಗವಿಲ್ಲ, ತಿರುಗದ ಊರಿಲ್ಲ, ಆದರೂ ನನ್ನ ಮಗಳು ಸಿಗಲೇ ಇಲ್ಲ. ಇತ್ತ ಪಶ್ಚಾತ್ತಾಪದ ಕೊರಗಿನಲ್ಲಿ ಅಮ್ಮನೂ ಇಲ್ಲವಾದಳು. ಎಲ್ಲರನ್ನೂ ಕಳೆದುಕೊಂಡು ಅನಾಥಪ್ರಜ್ಞೆಯಿಂದ ನರಳುತ್ತಿದ್ದ ಪಾತುವಿಗೆ ವಿಷಯ ತಿಳಿಸಲಾಗದೆ ಒದ್ದಾಡುತ್ತಿದ್ದೆ.
ಕೊನೆಗೊಂದು ದಿನ ಈ ಊರನ್ನೇ ಬಿಟ್ಟು ಬೆಂಗಳೂರಿಗೆ ಬಂದಿದ್ದಾಯ್ತು. ಹೊಸ ಜನ-ಹೊಸ ಜಾಗದ ಬದಲಾವಣೆಯಿಂದ ಪಾತು ಸ್ವಲ್ಪ ಗೆಲುವಾದಳು. ಪ್ರಸ್ತುತ ಪರಿಸ್ಥಿತಿಯೇ ನಿಜವಾದುದೆಂದು ನಂಬಿ ಬದುಕಹೊರಟ ತಾಯಿಹೃದಯವನ್ನು ಕಲಕಲಿಚ್ಛಿಸದೇ ನಾನೂ ಸುಮ್ಮನಾಗಿದ್ದೆ. ಆದರೂ ಕಚೇರಿ ಕೆಲಸದ ನೆಪಮಾಡಿಕೊಂಡು ಸುತ್ತಲಿನ ಊರೆಲ್ಲಾ ತಿರುಗಿ, ಅಲ್ಲಿನ ಅನಾಥಾಶ್ರಮ, ದೇವಸ್ಥಾನ, ಗುಡಿ ಗಲ್ಲಿಯೆಲ್ಲಾ ತಿರುಗಿದರೂ ಸಿಕ್ಕಿರಲಿಲ್ಲ ನನ್ನ ಮಗಳು. ಆದರೆ ಈಗ ಧುತ್ತೆಂದು ಪ್ರತ್ಯಕ್ಷಳಾಗಿದ್ದಾಳೆ. ಅವಳಿಗಾದರೂ ಹಾಲುಮಾರುವ ಶಂಕ್ರನ ಮನೆಗೆ ಹೋಗಬೇಕೆಂದು ನಿಶ್ಚಯಿಸಿದೊಡನೆ ಮನ ಹೋಯ್ದಾಡುವುದ ನಿಲ್ಲಿಸಿ ಶಾಂತವಾಯ್ತು.
*******
ಪಾರ್ವತಿಯ ಬಿಕ್ಕುವಿಕೆ-ಪರಶಿವಯ್ಯನವರ ನಿಟ್ಟುಸಿರು… ಇವೆರಡು ದಂಪತಿಯ ನೆನಪಿನಾಳದಿಂದ ಹೊರಬಂದುವೆಂದು ಸಾರುತ್ತಿದ್ದವು. ಮರುದಿನ ಬೆಳಗ್ಗೆ ಸೂರ್ಯ-ಭೂಮಿಯನ್ನು ಮುತ್ತಿಕ್ಕುವುದರೊಳಗಾಗಿ ಪಾರ್ವತಿ-ಪರಶಿವಯ್ಯನವರು ಶಂಕ್ರನ ಮನೆಬಾಗಿಲಲ್ಲಿದ್ದರು. ದಂಪತಿಗಳಿಬ್ಬರನ್ನೂ ಒಟ್ಟಿಗೇ ನೋಡಿದ ಶಂಕ್ರನಿಗೆ ಗಾಬರಿ ‘ಏನಾಯ್ತ್ರಾ? ನಿನ್ನೆ ಹಾಕುಂದ ಹಾಲು ಚೊಲೊ ಇರ್ನಿಲ್ರಾ?’ ಎಂದು ಬಡಬಡಿಸುತ್ತಿರುವಾಗಲೇ, ಶಂಕ್ರನ ಹೆಂಡತಿಯೊಡನೆ ಬಂದು ನಿಂತಳು ಅವಳು, ಅದೇ ಕೆಂಪುಮಚ್ಚೆಯೊಂದಿಗೆ. ‘ಕಣ್ಣರಿಯದ್ದು ಕರುಳರಿಯಿತು’ ಎಂಬಂತೆ ಅವಳನ್ನು ನೋಡಿದೊಡನೆ ಪಾರ್ವತಿಗೆ ತನ್ನನ್ನು ತಾನು ಹದಿವಯಸ್ಸಲ್ಲಿ ಕಂಡಂತಾಗಿ ಕಣ್ತುಂಬಿ ಬಂತು. ಪರಶಿವಯ್ಯನವರಿಗೆ ಖುಷಿಯಿಂದ ಕುಣಿದಾಡುವಂತಾದರೂ ಸುಧಾರಿಸಿಕೊಂಡು ‘ಶಂಕ್ರಾ ಗಾಬರಿ ಬೀಳಬೇಡ. ಇನ್ನೊಂದು ಲೀಟರು ಜಾಸ್ತಿ ಹಾಲು ಬೇಕಿತ್ತು’ ಎಂದು ಮಾತು ಬದಲಿಸುತ್ತಾ, ‘ಅಂದಾಂಗೆ ಇವಳ್ಯಾರು ಹೊಸ ಹುಡುಗಿ? ನಿನ್ನ ಮಗಳಾ?’ ಎಂದು ನಯವಾಗಿ ಕೇಳಿದರು. ‘ನಮ್ಗೆ ಮಗಳಂಗೆ ಒಡೆಯಾ. ಇವಳ ದೂರದ ಸಂಬಂಧಿಕರೊಬ್ಬರ ಮಗಳು. ಇವಳಮ್ಮನ ಕುಟುಂಬವೇ ಕಸುಬುಗಾರರ ಕುಟುಂಬ, ಬಂಗಾರದಂಥ ಮಗ್ಳು ತನ್ನಾಂಗಾಗುದು ಬ್ಯಾಡ ಅಂದ್ಕಂಡು ನಮ್ಮತ್ರ ಬಿಟ್ಟಳು. ನಮ್ಮ ಮಗಳ ಜತೆ ಇವಳ್ಗೊಂತುತ್ತು ಗಂಜಿ ಹಾಕುದು ಕಷ್ಟವಲ್ಲಾಂತ ಕರ್ಕೊಂಬಂದ್ವಿ’ ಕೊನೆಯ ಮಾತುಗಳನ್ನು ಮೆಲುವಾಗಿ ಉತ್ತರವಿತ್ತ ಶಂಕ್ರನ ಮಾತಿಗೆ ದಂಪತಿಗಳಿಬ್ಬರೂ ಬವಳಿ ಬಂದು ಬೀಳಲಿಲ್ಲವಷ್ಟೇ. ಮತ್ತೊಂದು ಮಾತಾಡದೆ ಮನೆಗೆ ಮರಳಿದರು.
ಅದಾಗಿ ಕೆಲ ಸಮಯದ ನಂತರ ಶಂಕ್ರನ, ಅವರ ಮನೆಯವರೆಲ್ಲರ ಮನವೊಲಿಸಿ ಅವಳನ್ನು ಕಾನೂನಿನ ಪ್ರಕಾರ ‘ಪಲ್ಲವಿ’ಯೆಂದು ನಾಮಕರಣ ಮಾಡಿ ದತ್ತು ತೆಗೆದುಕೊಂಡರು. ತನ್ನ ಮಗಳನ್ನು ಯಾರೋ ದತ್ತು ತೆಗೆದುಕೊಳ್ಳುತ್ತಾರೆಂಬ ವಿಷಯ ತಿಳಿದರೂ ನಮ್ಮನ್ನು ನೋಡಲಿಚ್ಚಿಸದ ಆ ತಾಯಿಯ ನಡೆ ಎಲ್ಲರಿಗೂ ಅಚ್ಚರಿ ತಂದಿತ್ತು. ಮನೆಗೆ ಬಂದ ಒಂದೆರಡು ದಿನ ಮಂಕಾಗಿದ್ದ ಮಗು, ಇವರ ಸ್ವಾರ್ಥವಿಲ್ಲದ ಮಮತೆ-ವಾತ್ಸಲ್ಯಕ್ಕೆ ಸೋತು, ಮನೆಮಗಳಾಗಿದ್ದಳು. ಮುದ್ದಾದ ಮಗುವಿಕೆ ಮರುಜನ್ಮಕೊಟ್ಟ ಸಾರ್ಥಕತೆ ಪಾರ್ವತಿಗಿತ್ತು, ಇತ್ತ ಪರಶಿವಯ್ಯನವರೂ ಬಹುಕಾಲದ ಕೊರಗು ಕಳೆದು ಖುಷಿಯಾಗಿದ್ದರೂ, ಅವರ ಮನದ ಮೂಲೆಯಲ್ಲಿ ‘ಇವಳಮ್ಮನಾರು?’ ಎಂಬ ಪ್ರಶ್ನೆ ಕೊರೆಯುತ್ತಲೇ ಇತ್ತು. ಆದರೆ ಅವರ ಕಳೆದುಹೋದ ಖುಷಿಯನ್ನೆಲ್ಲಾ ಮರಳಿ ಕಟ್ಟಿಕೊಡುವ ಮೂಲಕ, ಪಲ್ಲವಿ ಅವರಿಬ್ಬರ ಜೀವನದ ಜೀವಸೆಲೆಯಾಗಿದ್ದಳು. ಅವಳ ಆಟ-ಪಾಠ-ತುಂಟಾಟದಿಂದ ನಲಿಯುತ್ತಿರಬೇಕಾದರೆ, ಒಂದು ದಿನ ಶಂಕ್ರನೋಡಿ ಬಂದ. ಗಾಬರಿ-ಅಳು ಮಿಶ್ರಿತ ದನಿಯಲ್ಲಿ ಪಲ್ಲವಿಯ ಹೆತ್ತಮ್ಮ ಇನ್ನಿಲ್ಲವಾದುದರ ಬಗ್ಗೆ ತಿಳಿಸಿದ. ಶಾಲೆಗೆ ಹೋಗಿದ್ದ ಪಲ್ಲವಿಯನ್ನು ಲಗುಬಗೆಯಿಂದ ಕರೆದುಕೊಂಡು ಅವರೆಲ್ಲಾ ಹೊರಟರು. ಮೊದಲಿನಿಂದಲೂ ಅಮ್ಮನ ಪ್ರೀತಿಯನ್ನು ಪಡೆಯದ ಪಲ್ಲವಿ ಭಾವನೆಯನ್ನೂ ತೋರಿಸದೆ ನಿರ್ಲಿಪ್ತಳಾಗಿದ್ದಳು. ಆಸ್ಪತ್ರೆಯ ಬಾಗಿಲಲ್ಲಿ ನಿಂತ ಪರಶಿವಯ್ಯನವರಿಗೆ ಎದೆಯಲ್ಲೇನೋ ತಳಮಳ, ಪಾರ್ವತಿಯಲ್ಲೂ ಕಂಡರಿಯದ ಸಂಕಟ. ಅಂತಿಮ ದರ್ಶನಕ್ಕೆಂದು ಚಿರನಿದ್ರೆಗೆ ಜಾರಿದವಳ ಮುಖದ ಹೊದಿಕೆ ಸರಿಸಿದ ಶಂಕ್ರ. ಅವಳ ಮುಖವನ್ನು ಕಂಡೊಡನೆ ಪಾರ್ವತಿ-ಪರಶಿವಯ್ಯರಿಬ್ಬರೂ ಶಿಲೆಯಂತೆ ತಟಸ್ಥರಾದರು, ಕಾರಣ ಅವಳಲ್ಲಿನ ಕೆಂಪುಮಚ್ಚೆ!

ಮತ್ತಷ್ಟು ಸುದ್ದಿಗಳು

vertical

Latest News

ವಾಟ್ಸಾಪ್ ಗ್ರೂಪ್ ನಲ್ಲಿ ಪರಿಚಯ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

newsics.com ಮಂಗಳೂರು: ವಾಟ್ಸಾಪ್ ಗ್ರೂಪ್ ನಲ್ಲಿ ಪರಿಚಯವಾದ ಅಪ್ರಾಪ್ತೆ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಸುಳ್ಯ ತಾಲೂಕು ಉಬರಡ್ಕ ಮಿತ್ತೂರು ನಿವಾಸಿ...

ದೇಶದಲ್ಲಿ ಪಿಎಫ್ಐ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ

newsics.com ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆ ಮೇಲೆ ನಿಷೇಧ ಹೇರಿದೆ. ಐದು ವರ್ಷಕ್ಕೆ ನಿಷೇಧ ಹೇರಲಾಗಿದೆ. ಕೇಂದ್ರ ಗೃಹ ಸಚಿವಾಲಯ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಪಿಎಫ್ಐ ಮತ್ತು ಅದರ ಎಲ್ಲ...

ಅಬಕಾರಿ ನೀತಿ ಪ್ರಕರಣ: ಸಿಬಿಐನಿಂದ ದೆಹಲಿ ಡಿಸಿಎಂ ಆಪ್ತ ರಾಜೇಶ್ ನಾಯರ್ ಬಂಧನ

newsics.com ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಇದೇ ಮೊದಲಾ ಬಾರಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ವಿಜಯ್ ನಾಯರ್‌ನನ್ನು ಸಿಬಿಐ ಬಂಧಿಸಿದೆ. ಓನ್ಲಿ ಮಚ್ ಲೌಡರ್ ಎಂಟರ್‌ಟೈನ್‌ಮೆಂಟ್ ಮತ್ತು ಈವೆಂಟ್ ಮೀಡಿಯಾ ಕಂಪನಿಯ...
- Advertisement -
error: Content is protected !!