Friday, March 31, 2023

ಬಂಡಾಯ

Follow Us

* ಅಬ್ಬಾಸ್ ಮೇಲಿನಮನಿ
response@134.209.153.225

ಹಮತ್ ಗಲ್ಲಿಯಲ್ಲಿ ಇಂಥದೊಂದು ಘಟನೆ ಸಂಭವಿಸುವುದೆಂದು, ಅದು ಒಬ್ಬ ಬಡ ಹೆಣ್ಣು ಮಗಳ ಬಂಡಾಯಕ್ಕೂ ಕಾರಣವಾಗಿ ಸೈತಾನ ಮನೋಭಾವದವನ ಐಲುತನವನ್ನು ಜಗಜ್ಜಾಹೀರು ಮಾಡಿ ಈವರೆಗೂ ಅವಜ್ಞೆಗೊಳಗಾಗಿದ್ದ ಮುಸ್ಲಿಂ ಬದುಕಿನ ಒಳಪದರನ್ನು ಜಗತ್ತಿನೆದುರಿಗೆ ತೆರೆದಿಡುವುದೆಂದು ಯಾರೂ ಊಹಿಸಿರಲಿಲ್ಲ. ಜೀವಪುರದಲ್ಲಿ ಉಸಿರಾಡುತ್ತಿರುವ ಜೀವಿಗಳು ಯಾವುದೇ ವರ್ಗದವರಾದರೂ ನಿರುಪದ್ರವಿಗಳೆಂದು ಹೆಸರಾದವರು. ಅದರಲ್ಲೂ ರಹಮತ್ ಗಲ್ಲಿ ಒಂದು ಅನೂಹ್ಯ ಲೋಕ. ಅಲ್ಲಿರುವ ಮಾನವರು ಬದುಕಿನ ಹೋರಾಟದಲ್ಲಿ ಯಾವ ಕೆಲಸವೂ ಮರ್ಯಾದೆಗೇಡು ಅಲ್ಲವೆನ್ನುವಂತೆ ಮಗ್ಗ, ಗ್ಯಾರೇಜು, ಫ್ಯಾಕ್ಟರಿ, ಮಾರ್ಕೆಟ್ಟುಗಳಲ್ಲಿ ನಿರಂತರ ದುಡಿದು ದಾಲ್ ರೋಟಿಯೋ, ಎಗ್, ಚಿಕನ್, ಮಟನ್ ಬಿರಿಯಾನಿಯನ್ನೋ ತಿಂದು, ಈ ದೇಶವನ್ನಾಳಿದ ನವಾಬರ ಗತ್ತು ಗೈರತ್ತುಗಳನ್ನು ತಮ್ಮ ಪೋಷಾಕುಗಳಲ್ಲಿ, ರೀತಿ-ರಿವಾಜು, ಮಾತುಗಳಲ್ಲಿ ಆಗಾಗ ಪ್ರದರ್ಶಿಸುತ್ತ, ಶುಕ್ರವಾರದ ಜುಮ್ಮಾ ನಮಾಜಿಗೆಂದು, ಫಿರ್ದೌಸ್ ಅತ್ತರ್ ಮೈಗೆ ಪೂಸಿಕೊಂಡು ಮಸೀದಿಗಳಲ್ಲಿ ಘಮಘಮಿಸುವುದು ವಾಡಿಕೆ. ಮೌಲಾನಾ ಪ್ರವಚನದಿಂದ ಪ್ರಭಾವಿತರಾಗಿ, ಗೊತ್ತಿದ್ದು ಗೊತ್ತಿಲ್ಲದೆ ತಮ್ಮಿಂದ ಆದ ತಪ್ಪುಗಳಿಗೆ ತೋಬಾ ಮಾಡಿಕೊಂಡು ಜನ್ನತ್ ಕನವರಿಸುವುದನ್ನು ಬಿಟ್ಟರೆ ಲೋಕದ ವಿದ್ಯಮಾನ ಮತ್ತು ತಮ್ಮ ನಡುವೆ ಪರ್ದಾ ಇಳಿಬಿಟ್ಟು, ಏನು ಬಂದರೂ ಅಲ್ಲಾಹ್ ಇದ್ದಾನೆ, ಅವನೇ ಎಲ್ಲಾ ನೋಡಿಕೊಳ್ಳುತ್ತಾನೆ ಅಂತ ಇರುವವರನ್ನು ಜೀವಪುರ ಗಮನಿಸಿಯೂ ಗಮನಿಸದಂತೆ ಇತ್ತು.
ಇದ್ದಕ್ಕಿದ್ದಂತೆ ಒಂದಿನ ಗಲ್ಲಿಯ ಆಯೇಷಾ ಬೇಗಂ ಎಂಬ ಮೂವತ್ತು ಮೂವತ್ತೈದರ ಹೆಣ್ಣುಮಗಳು ರಹಮತ್ ಗಲ್ಲಿಯ ವರ್ಚಸ್ವಿ ಪುರುಷ ರಾಜಾಭಕ್ಷಿಯನ್ನು ಚಪ್ಪಲಿಯಿಂದ ಹೊಡೆದು, ಅವಮಾನಿಸಿದ ಸುದ್ದಿ ಕಿವಿಯಿಂದ ಕಿವಿಗೆ ಹರಡಿ, ಯಾವತ್ತಿಗೂ ಉಸಿರಿಲ್ಲದಂತಿದ್ದ ಮಹಿಳೆಯರ ನಡುವೆ ಇದಾವ ಬಂಡಾಯಗಾರ್ತಿಯ ಉದ್ಭವವಾಯಿತೆಂದು ಜೀವಪುರ ವಿಸ್ಮಯಕ್ಕೊಳಗಾಗಿಬಿಟ್ಟಿತು.
ಎರಡು ಅವಧಿಗೆ ಜಮಾತ್ ಚೇರಮನ್, ಒಮ್ಮೆ ನಗರಸಭಾ ಸದಸ್ಯನಾಗಿ, ರಾಜಕೀಯ ಮಂದಿಯ ಬೆಂಬಲಿಗನಾಗಿ, ಜನರ ಕೆಲಸ ಮಾಡಿಕೊಡುವ ಸಮಾಜ ಸೇವಕನಾಗಿ ಓಡಾಡಿಕೊಂಡಿದ್ದ, ರಸ್ತೆ, ಗಟಾರು, ಪಾಯಖಾನೆ ಕಾಮಗಾರಿಯಲ್ಲಿ ಅಮೇಧ್ಯೆ ಮೇಯ್ದು ಮಹಡಿಮನೆ ಕಟ್ಟಿಸಿಕೊಂಡಿದ್ದ, ತೋರಿಕೆಗೊಂದು ಮಾರ್ಕೆಟ್‍ನಲ್ಲಿ ಫರ್ನಿಚರ್ ಅಂಗಡಿ ನಡೆಸುತ್ತಿದ್ದ, ಶುಭ್ರ ಖಾದಿ ಧರಿಸಿಕೊಂಡು ಎಮ್‍ಎಲ್‍ಎ ಆಗುವ ತೆವಲನ್ನು ಮೆದುಳಿನಲ್ಲಿ ಹೆಪ್ಪುಗಟ್ಟಿಸಿಕೊಂಡು ಪಾಳೆಯಗಾರನಂತೆ ಪೋಜು ನೀಡುತ್ತಿದ್ದ ರಾಜಾಭಕ್ಷಿಯನ್ನು ಎದುರು ಹಾಕಿಕೊಳ್ಳುವ ಶಕ್ತಿ ರಹಮತ್ ಗಲ್ಲಿಯ ಯಾವ ನರಪಿಳ್ಳಿಗೂ ಇರಲಿಲ್ಲವಾಗಿ, ಅವನಿಂದ ಅನ್ಯಾಯಕ್ಕೆ ಒಳಗಾದವರ ನಿಟ್ಟುಸಿರು ಅಲ್ಲಾಹನಿಗೂ ತಾಗುವಂತಿತ್ತು. ಬೆಂಕಿಯಿಂದ ಹುಟ್ಟಿದ ಸೈತಾನನಂತಿದ್ದ ಅವನಿಗೆ ನೆಮ್ಮದಿಯಿಂದ ಇರುವವರನ್ನು ಕಂಡರೆ ಹೊಟ್ಟೆಯುರಿ. ಯಾರಾದರೂ ತನ್ನೆದುರು ಬಾಲ ಬಿಚ್ಚಿದರೊ, ಅವರ ಬಾಲ ಕತ್ತರಿಸುವವರೆಗೂ ಅವನಿಗೆ ಊಟ, ನಿದ್ದೆ ರುಚಿಸದು.
ಈ ಭೂಮಿಯ ಮೇಲೆ ಜೀವಿಸಿದವರೆಲ್ಲ ಶಾಶ್ವತವಾಗಿ ಇರುವಂಥವರೆ? ಮಕ್ಕಳಾಟದಂತಲ್ಲವೇ ಅವರ ಬದುಕು? ಆಟ ಮುಗಿಸಿ ಹೊರಟು ಹೋಗಲೇ ಬೇಕಲ್ಲ! ಅಂತಿರಲು ಪರಸ್ಪರ ಅಸೂಯೆ ಕಿಚ್ಚಿನಲ್ಲಿ ಬೇಯುವುದೇಕೆ? ಎಲ್ಲರಿಗೂ ಬದುಕುವ ಹಕ್ಕನ್ನು ಪಾಕ್ ಪರವರ್ದಿಗಾರನು ಪ್ರೀತಿಯಿಂದಲೇ ನೀಡಿದ್ದಾನೆ. ಅನ್ನ-ನೀರು-ಗಾಳಿ- ಬೆಳಕು ಒದಗಿಸಿದ್ದಾನೆ. ಮನುಷ್ಯನ ಪಾಲು ಏನಿದೆ ಇದರಲ್ಲಿ? ಇರುವಷ್ಟು ದಿನ ಚಂದಾಗಿ ಇದ್ದು ಹೋಗುವುದಷ್ಟೇ ಅವರ ಕೆಲಸ. ಯಾಕೆ ಒಬ್ಬರಿಗೊಬ್ಬರು ದ್ವೇಷ ಕಕ್ಕುತ್ತಾರೆ? ಉಂಡುಟ್ಟು ಸುಖವಾಗಿದ್ದವರ ಬಗ್ಗೆ ‘ಬದ್ ದುಆ’ ಯಾಕೆ ಯಾಚಿಸುತ್ತಾರೆ? ಇದೆಲ್ಲವೂ ಖುತ್ಬಾ ವೇಳೆಯಲ್ಲಿ ಮೌಲಾನಾ ಅವರು ಮನುಷ್ಯರೆದೆಗೆ ತುಂಬುವ ಪ್ರಯತ್ನ ಮಾಡುತ್ತಿದ್ದರು. ಬಡ್ಡಿ ವ್ಯವಹಾರ, ಬಡವರ ಶೋಷಣೆ, ವ್ಯಭಿಚಾರ, ವ್ಯಾಪಾರದಲ್ಲಿ ಪ್ರಾಮಾಣಿಕತೆ, ಅಕ್ರಮ, ಅವಹೇಳನ, ನಿಂದನೆ, ಮನನೋಯಿಸುವಿಕೆ, ಅನ್ಯಾಯಕ್ಕೆ ಬೆಂಬಲ, ನಟನೆ, ಢಾಂಬಿಕತೆ, ವ್ಯಾಮೋಹ, ಅಧಿಕಾರ ಲಾಲಸೆ, ಅಹಂಭಾವ, ಒಳಿತಿಗೆ ವಿರೋಧ, ಕೆಡುಕಿಗೆ ಪ್ರಚೋದನೆ ನಿಷಿದ್ಧ ಎನ್ನುತ್ತಿದ್ದರು. ಅವರ ಮಾತುಗಳು ರಾಜಾಭಕ್ಷಿಯ ಒಂದು ಕಿವಿಯಲ್ಲಿ ತೂರಿಕೊಂಡು ಮತ್ತೊಂದು ಕಿವಿಯಿಂದ ಹೊರಹೋಗುತ್ತಿದ್ದವು.
ರಹಮತ್ ಗಲ್ಲಿಯಲ್ಲಿ ಯಾರು ಸಾಜೋಗವಂತರು ಇದ್ದಾರೆ? ಎಲ್ಲರೂ ಪುರಾಣ ಕೇಳಿ ಬದನೆ ತಿನ್ನುವವರೇ. ಪಾಪ, ಇಷ್ಟು ಹೇಳಲಿಕ್ಕೆ ಎಂದೆ ಅಲ್ಲವೇ ಮೌಲಾನರ ಗಿಣಿಪಾಠಕ್ಕೆ ಸಂಬಳ ಗೊತ್ತು ಮಾಡಿರುವುದು ಎಂದು ರಾಜಾಭಕ್ಷಿ ತನ್ನ ನಿಷಿದ್ಧ ವ್ಯವಹಾರಗಳನ್ನು ಸಮರ್ಥಿಸಿಕೊಂಡಿದ್ದ. ಮೆಕ್ಯಾನಿಕ್ ಮಕ್ಬೂಲನ ಸಂಸಾರವನ್ನು ಬಡ್ಡಿ-ಚಕ್ರಬಡ್ಡಿಯಲ್ಲಿ ನಿಸ್ಸಾರಗೊಳಿಸಿ ಬರ್ಬಾದು ಮಾಡಿದ್ದು, ಅತ್ತಾರ ಬೂಬುಮಾಳ ಸೊಸೆ ಹಸಿನಾಳಿಗೆ ಕ್ಷುಲ್ಲಕ ಕಾರಣಕ್ಕಾಗಿ ಗಂಡನಿಂದ ತಲಾಕ್ ಕೊಡಿಸಿದ್ದು, ಅನ್ವರಖಾನನ ಸ್ವಂತ ಜಾಗೆಯನ್ನು ಒತ್ತಾಯದಿಂದ ಕಬ್ಜಾ ಮಾಡಿಕೊಂಡು ಮಸೀದೆಯ ಆವರಣ ವಿಸ್ತರಿಸಿದ್ದು, ಮೋಡಕಾ ತುಂಬುತ್ತಿದ್ದ ಮಸ್ತಾನ್ ಧಿಮಾಕಿನವನೆಂದು ಕಳ್ಳಮಾಲಿನ ನೆಪದಲ್ಲಿ ಪೊಲೀಸ್ ಕೇಸು ಹಾಕಿಸಿದ್ದು, ಪಿಂಜಾರ ಅಲ್ಲಿಸಾಬನ ಮಗಳು ನಜ್ಮಾಳನ್ನು ತನ್ನ ಕಾರ್ ಡ್ರೈವರ್‍ನೊಂದಿಗೆ ಓಡಿಸಿ, ಮತ್ತೆ ಕರೆ ತಂದು, ಅರ್ಜಂಟ್ ಶಾದಿ ಮಾಡಿ, ದಂಡದ ಹಣ ತಿಂದದ್ದು, ಬಾಗವಾನ ದಾವಲಬಿಯ ವಿಧವಾ ಪೆನಶನ್ನು, ವಯೋವೃದ್ಧ ಕಾಸೀಮಸಾಬನ ವೃದ್ಧಾಪ್ಯ ವೇತನ ಕಬಳಿಸಿದ್ದು, ನೇಕಾರ ಜಮಾಲನ ಹೆಂಡತಿ ಜರೀನಾಳಿಗೆ ರಾಜಕೀಯ ತೆವಲು ಹುಟ್ಟಿಸಿ, ರಾಜಕೀಯ ಮಂದಿಗೆ ಪರಿಚಯಿಸಿ, ತನ್ನ ಸ್ವಾರ್ಥ ಸಾಧಿಸಿಕೊಂಡದ್ದು ಇಂಥವೇ ಅನೇಕ ಅನಾರ್ಯ ಕೆಲಸಗಳ ಇತಿಹಾಸವನ್ನು ಜನ ತಿಳಿದವರೇ ಆಗಿದ್ದರು.
ಅಲ್ಲಾಹನ ಎದುರು ಇಬ್ಲಿಸನ ಆಟ ಎಷ್ಟು ದಿನಾಂತ ನಡೆಯೋದು?
ಅವತ್ತು ಫಜ್ರ್ ನಮಾಜಿಗೆ ಹೊರಟ ರಾಜಾಭಕ್ಷಿ, ಮನೆಯ ಅಂಗಳದ ಕಸ ಹೊಡೆಯುತ್ತಿದ್ದ ಆಯೇಷಾಬೇಗಂಳನ್ನು ನೋಡಿ ಜೋರಾಗಿ ಕೆಮ್ಮಿದ್ದ. ಅವನ ಕಾಮ ಚಪಲದ ಕೆಮ್ಮಿನ ಧ್ವನಿ ಕೇಳಿ ಮೈ ಉರಿಸಿಕೊಂಡ ಆಯೇಷಾ ಮುಖ ಎತ್ತುವುದರೊಳಗೆ ರಾಜಾಭಕ್ಷಿ ಮರೆಯಾಗಿದ್ದ. ಅವನ ಇಂಥ ಕೆಮ್ಮು ಮತ್ತು ಓರೆನೋಟಗಳನ್ನು ಆಕೆ ಆಗಾಗ ಗಮನಿಸಿಯಾಗಿತ್ತು. ರಾಜಾಭಕ್ಷಿಯ ಮನೆಯೆದುರಿನ ಪಕ್ಕದ ತಗಡಿನ ಮನೆಯೇ ರಫೀಕನದು. ಆಯೇಷಾಳ ಗಂಡ ಅವನು. ರೆಹಮಾನಬಿಯ ಒಬ್ಬನೆ ಮಗ. ಕಾರ್ ಚಾಲಕನಾಗಿ, ಸರ್ಕಾರಿ ಇಲಾಖೆಯೊಂದರಲ್ಲಿ ಹಂಗಾಮಿ ಕೆಲಸದಲ್ಲಿದ್ದ. ಆಯೇಷಾ ರೆಹಮಾನಬಿಯ ಅಣ್ಣನÀ ಮಗಳು. ಪಿಯುಸಿ ಪಾಸು ಮಾಡುತ್ತಿರುವಂತೆ ಅವಳ ನಿಕಾಹ್ ರಫೀಕನೊಂದಿಗೆ ಜರುಗಿತ್ತು. ಸಂಸಾರ ತೂಗಿಸಲು ಆಯೇಷಾ ಗಲ್ಲಿಯ ಮಕ್ಕಳಿಗೆ ಇಂಗ್ಲಿಷ್, ಗಣಿತ, ವಿಜ್ಞಾನ ಮನೆಪಾಠ ಮಾಡುತ್ತಿದ್ದಳು.
ಹಾಲು ಬಣ್ಣದ ಚೆಲುವೆ ಆಯೇಷಾ, ನವನೀತದ ಮನಸ್ಸಿನವಳು. ಆಕೆಯ ಸೌಂದರ್ಯ ರಾಜಾಭಕ್ಷಿಯ ಕಣ್ಣು ಕುಕ್ಕಿತ್ತು. ಯಾವುದಾವುದೋ ನೆಪಕ್ಕೆಂಬಂತೆ ಅವನು ಆಕೆಯನ್ನು ಮಾತಿಗೆಳೆಯಲು ಯತ್ನಿಸುತ್ತಿದ್ದ. ಅವಳ ಮಗ ರಶೀದನನ್ನು ಕೂಗಿ ಚಾಕ್ಲೇಟ್ ಕೊಡುತ್ತಿದ್ದ. ಅವನೊಂದಿಗೆ ಗಂಭೀರವಾಗಿ ವರ್ತಿಸುತ್ತಿದ್ದ ಆಯೇಷಾ ಅವನನ್ನು ಭಯ್ಯಾ ಎಂದೇ ಸಂಬೋಧಿಸುತ್ತಿದ್ದಳು. ಒಮ್ಮೆ ರಫೀಕನೊಂದಿಗೆ ಮನೆಗೆ ಬಂದಾಗ ಸಹಜವಾಗಿ ಸಲಾಮ್ ಹೇಳಿ ಚಹಾ ಮಾಡಿ ಕೊಟ್ಟಿದ್ದಳು. ಅವಳ ಟ್ಯೂಷನ್ ಬಗ್ಗೆ ಹೊಗಳುತ್ತಲೆ ತನ್ನ ಕಾಕ ದೃಷ್ಟಿಯನ್ನು ಆಕೆಯ ಎದೆ ಮೇಲೆ ಹರಡಿದ್ದ. ನಂತರದ ದಿನಗಳಲ್ಲಿ ಈ ಮರ್ಯಾದಾ ಪುರುಷೋತ್ತಮನ ಒಳತೋಟಿಗಳು ಗಲ್ಲಿಯ ಹೆಂಗಸರಿಂದ ತಿಳಿದು ಆಯೇಷಾ ಹುಷಾರಿಯಾಗಿಯೇ ಇದ್ದಳು.
ರಹಮತ್ ಗಲ್ಲಿಯಲ್ಲಿ ಎರಡು ಕಡೆಗೆ ಬೋರ್ ನೀರಿನ ವ್ಯವಸ್ಥೆ ಇತ್ತು. ಸರದಿಯ ಮೇಲೆ ನೀರು ತುಂಬಿಕೊಳ್ಳುವುದು ರೂಢಿ. ಆಯೇಷಾ ಕೂಡ ಅಲ್ಲಿಂದಲೆ ನೀರು ತರುತ್ತಿದ್ದಳು. ಆ ದಿನ ಏಕಾಏಕಿ ಮನೆಗೆ ಬಂದ ರಾಜಾಭಕ್ಷಿ, ರಫೀಕನನ್ನು ಉದ್ದೇಶಿಸಿ ‘ನಮ್ಮ ಮನೆಯ ನಲ್ಲಿಯ ನೀರು ಹರಿದು ಹೋಗುವುದು. ಆಯೇಷಾ ಆಪಾ, ಇನ್ಮೇಲೆ ಇಲ್ಲೆ ನೀರು ತುಂಬಿಕೊಳ್ಳಲಿ. ಹಣವೇನೂ ಬೇಡ’ ಅಂತ ಉದಾರತನ ವ್ಯಕ್ತಪಡಿಸಿದ್ದ. ಈ ಉದಾರತೆಯ ಒಳಸುಳಿಯನ್ನು ತಟ್ಟನೆ ಗುರುತಿಸಿಕೊಂಡ ಆಯೇಷಾ ‘ಭಯ್ಯಾ, ಬೋರಿನ ನೀರು ನಮಗ ಸಾಕಷ್ಟು ಸಿಗುವದು’ ಅಂತ ನಯವಾಗಿ ನಿರಾಕರಿಸಿದ್ದಳು. ಇವಳು ಎಷ್ಟು ಚಂದ ಇದ್ದಾಳೋ, ಇವಳ ಗಮಿಂಡಿನೂ ಅಷ್ಟ ಚಂದ! ಎಂದು ಸ್ವಗತವಾಗಿ ಅಂದುಕೊಂಡು ಹೋಗಿದ್ದ ರಾಜಾಭಕ್ಷಿ.
ಮುಂದೊಂದು ದಿನ ಬೋರು ಬಂದಾಗಿ ನೀರಿಗೆ ತಾಪತ್ರಯ ಒದಗಿತು. ಆಯೇಷಾ ಈಗ ನೀರಿಗೆ ದೈನೇಸಿ ಬಿಡುತ್ತಾಳೆಂದು ರಾಜಾಭಕ್ಷಿ ಕಾದಿದ್ದ. ಆಕೆ ಅಲ್ಲಿ ಇಲ್ಲಿ ತಿರುಗಾಡಿ ನೀರು ತಂದಿದ್ದಳು. ರಾಜಾಭಕ್ಷಿ ಬೇಕಂತಲೆ ಬೋರು ಬಂದು ಮಾಡಿಸಿದ್ದರ ಸುಳಿವು ತಿಳಿದು ಆಯೇಷಾ ಗಲ್ಲಿಯ ಹೆಣ್ಣುಮಕ್ಕಳನ್ನು ಜಮೆ ಮಾಡಿಕೊಂಡು, ನಗರಸಭೆಯೆದುರು ಖಾಲಿ ಕೊಡಗಳ ಪ್ರದರ್ಶನ ಮಾಡಿ ಅಧಿಕಾರಿಗಳ ಗಮನ ಸೆಳೆದದ್ದೆ, ಬೋರು ತುರ್ತಾಗಿ ರಿಪೇರಿಯಾಗಿತ್ತು. ಗಲ್ಲಿಯ ಹೆಣ್ಣುಮಕ್ಕಳಿಗೆ ಆಯೇಷಾಳ ಶಕ್ತಿಯ ಅರಿವು ಆಗಿ, ಹೊಸ ಗರಿಗಳು ಪಲ್ಲವಿಸಿದ್ದವು. ತಮ್ಮ ಮನೆಯ ಗಂಡಸರನ್ನು ಮತ್ತು ಜಮಾತನ್ನು ಏಕಕಾಲಕ್ಕೆ ನಿರ್ಲಕ್ಷಿಸಿದ ಹೆಂಗಸರ ಧೋರಣೆ ಬಿಲ್‍ಕುಲ್ ಇಷ್ಟ ಬರದಾಗಿ, ಇದಕ್ಕೆಲ್ಲಾ ಆಯೇಷಾಳ ಮಂಕುಬುದ್ಧಿ ಕಾರಣವೆಂದು ರಾಜಾಭಕ್ಷಿ ಮೈ ಉರಿದಿತ್ತು.
ಮರುದಿನ ರಫೀಕನನ್ನು ಜಮಾತ್ ಬುಲಾವ್ ಮಾಡಿ ‘ಗಲ್ಲಿಯಲ್ಲಿ ಜಮಾತ್ ಇನ್ನೂ ಸತ್ತಿಲ್ಲ. ನಿನ್ನ ಹೆಂಡತಿಗೆ ಬುದ್ಧಿ ಹೇಳು’ ಎಂದು ಎಚ್ಚರಿಸಿತು. ‘ಆಯೇಷಾ, ನೀವು ಮಾಡಬೇಕಾದ ಕೆಲಸವನ್ನು ಮಾಡಿದ್ದಾಳೆ’ ಎಂದು ರಫೀಕ್ ಜಮಾತಿನ ಮೆಂಬರ್ ಮುರುಗಿ ಮೈನುನನ್ನು ತಿವಿದು ಬಂದಿದ್ದ.
ಇದಾದ ಕೆಲವೇ ದಿನಗಳಲ್ಲಿ ತಾಡಪತ್ರಿ ಇಮಾಮಸಾಬನ ಸೊಸೆ ಶಬನಮ್‍ಳಿಗೆ ಅವಳ ಗಂಡ ನಜೀರ್ ತಲಾಕ್ ಕೊಟ್ಟದ್ದು ಗಲ್ಲಿಯಲ್ಲಿ ಗಂಭೀರ ಸುದ್ಧಿಯಾಗಿ ಪರಿಣಮಿಸಿತು. ತಲಾಕಕ್ಕೆ ಕಾರಣವೆಂದರೆ, ನಸುಕಿನಲ್ಲಿ ಬಿಂಕದಕಟ್ಟಿ ಬಷೀರಸಾಬನ ಮಗ ಮಲೀಕ್, ಶಬನಮ್‍ಳಿಗೆ ನೀರಿನ ಕೊಡ ಹೊರಿಸಿದ್ದು. ಇದನ್ನು ನೋಡಿದ್ದ ಅವಳ ನಾದಿನಿ ಬಸೀರಾ ಮನೆಗೆ ಬಂದು, ತಾಯಿಗೆ ಇದನ್ನು ಉಪ್ಪು ಖಾರ ಹಚ್ಚಿ ಹೇಳಿದ್ದೇ, ಪೀರಮಾ ಆಕಾಶ ಭೂಮಿ ಒಂದು ಮಾಡಿ ಇಡೀ ದಿನ ಸೊಸೆಯನ್ನು ಗೋಳು ಹೊಯ್ದುಕೊಂಡು, ಮಗನನ್ನು ಪ್ರಚೋದಿಸಿ ಅವನಿಂದ ಮೂರು ತಲಾಕ್ ಹೇಳಿಸಿದಳೆಂದು, ಜಮಾತ್ ಇದನ್ನು ತುರ್ತಾಗಿ ಕಬೂಲಿ ಮಾಡಿತೆಂದು ತಿಳಿದ ಜನ ಅಸಮಾಧಾನಕ್ಕೆ ಒಳಗಾದರು.
ತಲಾಕ್ ಒಳಮರ್ಮವೇ ಬೇರೆಯಾಗಿತ್ತು. ಶಬನಮ್ ಲಿಂಗಸಗೂರು ಕಡೆಯ ಹುಡುಗಿ. ಮಲತಾಯಿ ಧೂರ್ತತನದಲ್ಲಿ ನಲುಗಿದವಳು. ಹತ್ತನೆಯ ತರಗತಿ ಪಾಸು ಮಾಡಿ, ಮುಂದೆ ಓದುವ ಆಸೆಯಲ್ಲಿದ್ದ ಹುಡುಗಿಯ ಮದುವೆಯನ್ನು ಅವಳ ತಂದೆ ಫಕ್ರುಸಾಬ, ನಜೀರನೊಂದಿಗೆ ಮಾಡಿದ್ದ. ಈ ಸಂ¨ಂಧ ಕುದುರಿಸಿದ್ದು ರಾಜಾಭಕ್ಷಿ. ಇಮಾಮಸಾಬ ಸಾಯೊ ಮುಂಚೆ ಅವನ ಇಬ್ಬರು ಹೆಣ್ಣುಮಕ್ಕಳ ನಿಕಾಹ್ ನೆರವೇರಿಸಿದವನು ಅವನೇ. ಪೀರಮಾ ಅವನನ್ನು ಮನೆಯ ದೇವರೆಂದೆ ಬಗೆದಂತಿತ್ತು. ಇನ್ನೂ ಆಳಕ್ಕಿಳಿದು ಹೇಳುವದಾದರೆ ಪೀರಮಾನ ಎರಡನೆ ಮಗಳು ಬಸೀರಾ ಚೆಲ್ಲು ಚೆಲ್ಲಾದ ಹೆಂಗಸು. ತನ್ನ ತಾರುಣ್ಯದ ತುಡಿತವನ್ನು ಆಕೆ ರಾಜಾಭಕ್ಷಿಯೊಂದಿಗೆ ಮಜವಾಗಿ ಅನುಭವಿಸಿ, ಒಲ್ಲದ ಮನಸ್ಸಿನಿಂದ ಜಾಫರನೊಂದಿಗೆ ಮದುವೆಯಾಗಿ, ಅವನ ಮುಗ್ಧತೆಯನ್ನು ಧಾರಾಳವಾಗಿ ದುರುಯೋಗಪಡಿಸಿಕೊಂಡು ಪದೆಪದೆ ತವರಿಗೆ ಬಂದು ತನ್ನ ದರಬಾರು ನಡೆಸುತ್ತಿದ್ದಳು. ಅವಳ ಚೈನಿಬಾಜಿಗೆ ರಾಜಾಭಕ್ಷಿ ಸಾಕಷ್ಟು ಹಣ ಕೊಡುತ್ತಿದ್ದ. ಅವರಿಬ್ಬರ ಸಂಬಂಧ ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯುವಂತಿತ್ತು. ಶಬನಮ್‍ಳಿಗೂ ಇದು ಗೊತ್ತಾಗಿತ್ತು. ತಾಯಿ-ಮಗಳು ಅವಳನ್ನು ಎಚ್ಚರಿಸಿದ್ದರು. ನಜೀರ್ ಒಳ್ಳೆಯ ಹುಡುಗ. ಗ್ಯಾರೇಜನಲ್ಲಿ ಕೆಲಸ ಮಾಡುತ್ತಿದ್ದ. ಹೆಂಡತಿಯೆಂದರೆ ಜೀವ. ಗಂಡ-ಹೆಂಡತಿ ಸರಸ ಸಲ್ಲಾಪ ಕಂಡರೆ ಪೀರಮಾಳಿಗೆ ಅಸಹನೆ. ಬರಿ ಕೆಲಸ ಎನ್ನುವಳು. ತಾಯಿ-ಮಗಳು ಚಾಡಿ ಹೇಳುವರು. ನಜೀರ ಹೆಂಡತಿಗೆ ದೂಸರಿ ಆಡುತ್ತಿರಲಿಲ್ಲ. ಅವಳು ಗಂಡನಿಗೆ ಮಾಟ ಮಾಡಿಸಿದ್ದಾಳೆಂದು ಪೀರಮಾ, ಬಸೀರಾ ನಂಜು ಕಾರುತ್ತಿದ್ದರು.
ನೆರೆಯ ಹೆಂಗಸರು ‘ಮಗಳನ್ನ ಇನ್ನು ಎಷ್ಟು ದಿನಾ ಮನಿಯಾಗ ಇಟ್ಗೊಂಡು ಕೂಡ್ತಿ, ಗಂಡನ ಮನಿಗೆ ಕಳಿಸಬೇಕಿಲ್ಲ’ ಎಂದರೆ ಪೀರಮಾ, ‘ಅಳಿಯಾಗ ಸ್ಕೂಟರ್ ಬೇಕಂತ’ ಎಂದು ಗಂಡನ ಮನೆಯವರ ಆಸೆಬುರುಕುತನವನ್ನು ಕಥೆ ಮಾಡಿ ಹೇಳುತ್ತಿದ್ದಳು. ಮಗಳು ರಾಜಾಭಕ್ಷಿಯನ್ನು ಬಿಟ್ಟು ಹೋಗುವುದಿಲ್ಲ ಎಂಬ ವಾಸ್ತವವನ್ನು ಆಕೆ ಮುಚ್ಚಿಡುತ್ತಿದ್ದಳು. ಮಗಳ ಮುಂದಿನ ಬದುಕನ್ನು ಯೋಚಿಸಿ ಒಮ್ಮೊಮ್ಮೆ ಆಕೆಗೆ ದಿಗಿಲಾಗುತ್ತಿತ್ತು. ಆಕಸ್ಮಾತ ಮಗಳೊಂದಿಗೆ ವಾದಕ್ಕಿಳಿದರೆ ಬಸೀರಾ, ‘ನಿನ್ನ ಸೊಸಿ ಒಂದು ಲಕ್ಷ ರೂಪಾಯಿ ತರತಾಳ ಅಂದಿ. ಒಂದು ಬೋಕಿ ಚೂರೂ ತರಲಿಲ್ಲ. ಈಕಿ ಕಾಲ್ಗುಣದಿಂದ ನನ್ನ ಜಿಂದಗಿ ಹಾಳಾತು’ ಅಂತ ಲಟಿಕೆ ಮುರಿದಿದ್ದಳು. ಶಬನಮ್ ‘ಕುಣಿಯಾಕ ಬರಲಾರದವರಿಗೆ ನೆಲಾ ಡೊಂಕು ಕಾಣತೈತಿ’ ಎಂದಿದ್ದಕ್ಕೆ ತಾಯಿ ಮಗಳ ಒಡಲಲ್ಲಿ ಬಾಂಬು ಸ್ಫೋಟಿಸಿತ್ತು. ‘ಈಗ ಸೀದಾ ಊರಿಗೆ ಹೋಗಿ ಲಕ್ಷ ರೂಪಾಯಿ ವರದಕ್ಷಿಣೆ ಇಸ್ಗೊಂಡು ಬಾ. ಇಲ್ಲಂದ್ರ ನಿನ್ಗ ತಲಾಕ್ ಕೊಡಿಸಿ ನಜೀರಗ ಕೈತುಂಬ ರೊಕ್ಕ, ಮೈತುಂಬ ಬಂಗಾರ ದಾಗೀನ ತರುವಾಕಿ ಕೂಡ ಶಾದಿ ಮಾಡ್ತಿನಿ’ ಅಂತ ಉದರದಲ್ಲಿನ ಮಸಲತ್ತು ಬಯಲು ಮಾಡಿದ್ದಳು ಪೀರಮಾ.
ಇದರ ಮುಂದಿನ ಭಾಗವೇ ತಲಾಕ್ ಪ್ರಸಂಗ.
ವ್ಯವಸ್ಥೆಯ ಪಾಪ ಮತ್ತು ಪರಿತಾಪದಿಂದ ಸತ್ಯವು ಉಮ್ಮಳಿಸುವ ಸಮಯ…
ಆಯೇಷಾಬೇಗಂ ಹತ್ತಾರು ಮಹಿಳೆಯರೊಂದಿಗೆ ಪೀರಮಾನ ಮನೆಯ ಅಂಗಳದಲ್ಲಿ ಕಾಣಿಸಿಕೊಂಡಳು. ಅವಳನ್ನು ನೋಡಿದ್ದೇ ರಾಜಾಭಕ್ಷಿ ನಖಶಿಖಾಂತ ಉರಿದುಕೊಂಡ. ಅವನನ್ನು ದರಕಾರು ಮಾಡದೆ ಆಯೇಷಾ,
‘ಸಲೀಂ ಚಾಚಾ, ನೀವು ಗಲ್ಲಿಯ ಜಮಾತಿನ ಚೇರಮನ್ನರು. ಇಷ್ಟು ಬೇಗ ಶಬನಮ್‍ಳನ್ನು ಅಪರಾಧಿ ಜಾಗಾದಾಗ ನಿಲ್ಲಿಸಿ, ಅಕಿ ತಲಾಕನ್ನ ಕಬೂಲ್ ಮಾಡಿಸಿದಿರಿ. ಇದು ಯಾವ ನ್ಯಾಯ? ಯಾವ ಧರ್ಮ?’ ಅಂತ ಕೇಳಿದ ಅವಳ ಪ್ರಶ್ನೆ ಸೂಜಿಯ ಮೊನೆಯಾಗಿ ಸಲೀಂಸಾಬರ ಎದೆಯನ್ನು ಚುಚ್ಚಿತು.
‘ಆಯೇಷಾ ಬೇಟಿ, ನಜೀರ ಹೆಂಡತಿಗೆ ತಲಾಕ್ ಹೇಳಿದ್ದಾನೆ. ಇದಕ್ಕೆ ಅವನ ಅಮ್ಮಾ ಮತ್ತು ಬಹೆನ್ ಸಾಕ್ಷಿ ಇದ್ದಾರಲ್ಲ. ಇದರಲ್ಲಿ ನಮ್ಮದೇನಿದೆ? ಎಲ್ಲಾನೂ ಅಲ್ಲಾಹನ ಮರ್ಜಿಯಂತೆ ನಡೆದಿದೆ’ ಎಂದು ದೇಶಾವರಿ ನಗೆ ನಕ್ಕರು ಸಲೀಂಸಾಬ.
‘ಚಾಚಾ, ಓತಿಕಾಟಕ ಬೇಲಿ ಸಾಕ್ಷಿ ಖರೆ ಅಂತೀರಿ? ಧರ್ಮದ ಬಗ್ಗೆ ಬಹಳ ತಿಳ್ಕೊಂಡೋರು ನೀವು. ಶಬನಮ್ ತಪ್ಪು ಮಾಡಿದ್ರ ಶಿಕ್ಷಾ ಆಗಲಿ. ಆದ್ರ ಅಕಿ ಏನೂ ತಪ್ಪು ಮಾಡಿಲ್ಲ. ಯಾಕಂದ್ರ ಅವತ್ತ ಮಲೀಕ್ ಕೊಡಾ ಹೊರಿಸುವಾಗ ನಾವೂ ಮಗ್ಗಲದಾಗ ಇದ್ವಿ. ಶಬನಮ್-ಮಲೀಕ್ ನಡುವ ಅಗೌರವದ ಕೆಲಸ ಏನೂ ನಡೆದಿಲ್ಲ. ಇದೆಲ್ಲಾ ಬಸೀರಾ ಹುಟ್ಟಿಸಿಕೊಂಡು ಹೇಳಿದ್ದು. ಅಕೀನೂ ಒಬ್ಬ ಹೆಣ್ಣಾಗಿ ಮತ್ತೊಂದು ಹೆಣ್ಣಿನ ಜಿಂದಗಿ ಬರ್ಬಾದು ಮಾಡತಾಳಂದ್ರ, ಅಕಿ ಮನುಷ್ಯಾಳ ಅಲ್ಲ ಅಂದಂಗಾತು’
ಆಯೇಷಾಳ ನ್ಯಾಯೋಚಿತ ಮಾತುಗಳು ಕೂಡಿದ ಮಂದಿಯನ್ನು ಆಲೋಚನೆಗೆ ತೊಡಗಿಸಿದವು.
ಕೂಡಲೇ ಜಮಾತಿನ ಗುಂಪಿನಿಂದ ಎದ್ದು ಬಂದ ರಾಜಾಭಕ್ಷಿ ‘ಈಗ ತೌಡು ಕುಟ್ಟುವ ಕೆಲಸ ಬ್ಯಾಡ. ನಜೀರ ಹೆಂಡತಿಗೆ ತಲಾಕ್ ಹೇಳ್ಯಾನ. ಅದರೊಳಗ ಯಾವದ ಬದಲಾವಣೆ ಇಲ್ಲ’ ಎಂದ.
‘ಭಯ್ಯಾ ಇದು ಬಹಳ ಅನ್ಯಾಯ’ ಪ್ರತಿಭಟನೆಯ ಸೊಲ್ಲೆತ್ತಿದಳು ಆಯೇಷಾ.
‘ಕಾಮನಿ ಆದವರ ಕಣ್ಣಿಗೆ ದುನಿಯಾ ಹಳದಿಯಾಗಿ ಕಾಣತೈತಿ’ ವ್ಯಂಗ್ಯವಾಡಿದ ರಾಜಾಭಕ್ಷಿ.
‘ಶಬನಮ್‍ಳಿಗೆ ನಜೀರ ಮನಸಾಕ್ಷಿಯಾಗಿ ತಲಾಕ್ ಕೊಟ್ಟಿಲ್ಲ. ಅವನಿಂದ ಜುಲುಮಿ ಮಾಡಿ ಕೊಡಿಸಲಾಗಿದೆ. ಶಬನಮ್ ಸಂಭಾವಿತ ಹುಡುಗಿ. ತಪ್ಪು ಮಾಡದಿದ್ರೂ ಶಿಕ್ಷಾ ಅನುಭವಿಸಬೇಕೇನು?’ ಆಯೇಷಾ ಕಣ್ಣಗಲಿಸಿದ್ದಳು.
ಹಾದರಾ ಮಾಡೋರನ್ನ ಹಾದರಾ ಮಾಡಿದೋರೆ ಸಮರ್ಥಿಸಬೇಕಲ್ಲ, ಬರೊಬ್ಬರಿ ಐತಿ’ ರಾಜಾಭಕ್ಷಿಯ ಎಲುಬಿಲ್ಲದ ನಾಲಗೆ ಆಡಬಾರದ ಮಾತು ಆಡಿತು. ಒಮ್ಮೆಲೆ ರಕ್ತ ಉಕ್ಕೇರಿಸಿಕೊಂಡ ಆಯೇಷಾ, ‘ತಾಯಿ ಹಾಲು ಕುಡಿದಿದ್ರ, ನಾನು ಹಾದರಾ ಮಾಡಿದ್ದು ತೋರಿಸಿಕೊಡೊ ಬದ್ಮಾಶ್’ ಎಂದು ಚಪ್ಪಲಿ ತೆಗೆದು ಎರಡು ಏಟು ಹಾಕಿದಳು. ಅವಳ ಆವೇಶವನ್ನು ತಮ್ಮೊಳಗೆ ಆಹ್ವಾನಿಸಿಕೊಂಡ ಮಹಿಳೆಯರು ರಾಜಾಭಕ್ಷಿಗೆ ಚಪ್ಪಲಿ ಸೇವೆ ಮಾಡಿದರು. ‘ನಿನ್ನ ಉರುವಣಿಗ್ಯಾಗ ಉಪ್ಪು ತುಂಬಲಿ. ಹೆಂಗಸರೆಲ್ಲ ಹಾದರಾ ಮಾಡೋರಂತ ತಿಳಿದಿಯೋನೊ ಜಮಾದಾರ’ ಅಂತ ರೆಹಮಾನಬಿ ರಾಜಾಭಕ್ಷಿಯ ಒಳಪದರುಗಳನ್ನು ಬಿಚ್ಚಿಟ್ಟಳು. ಉಳಿದ ಹೆಂಗಸರು ಅವನ ಜನ್ಮ ಜಾಲಾಡಿದರು.
ಗಲ್ಲಿಯ ಹೆಂಗಸರು ಹೀಗೆ ತನ್ನ ಮೆದುಳು, ಮನಸ್ಸಿನ ಹುನ್ನಾರಗಳ ರಕ್ತಸಂಚಾರದ ತಂತುಗಳನ್ನು ಕತ್ತರಿಸಿದ ಹಾಗೂ ಮಹಾ ಎಂದು ಭ್ರಮಿಸಿದ್ದ ತನ್ನ ಪೌರುಷವನ್ನು ನಿರ್ವೀರ್ಯಗೊಳಿಸಿದ ಅಘಾತವು ರಾಜಾಭಕ್ಷಿಯನ್ನು ವಿಚಿಲಿತನನ್ನಾಗಿಸಿತ್ತು.
ಇದರಿಂದ ತೀವ್ರ ಅವಮಾನಕ್ಕೊಳಗಾದ ರಾಜಾಭಕ್ಷಿಯ ತಾಯಿ, ತಂಗಿ ಹಾಗೂ ಹೆಂಡತಿ ‘ನಿಮ್ಯಾಲೆ ಪೋಲಿಸ್ ಕಂಪ್ಲೇಟ್ ಕೊಡ್ತೀವಿ’ ಅಂತ ಕೈಮೈ ತಿರುವಿದರೆ, ಪೀರಮಾ, ಬಸೀರಾ ‘ಇವರನ್ನ ಜಮಾತಿನಿಂದ ಹೊರಗ ಹಾಕ್ರಿ’ ಅಂತ ಚೀತ್ಕರಿಸಿದರು.
ಆಯೇಷಾ, ‘ನಮ್ಮನ್ನ ಜೇಲಿಗೆ ಕಳಿಸಿರಿ. ಜಮಾತಿನಿಂದ ಹೊರಗ ಹಾಕ್ರಿ. ಆದ್ರ ಶಬನಮ್‍ಗ ನ್ಯಾಯ ಸಿಗಬೇಕು. ಅವಳಿಗೆ ಕೊಟ್ಟ ತಲಾಕ್ ರದ್ದಾಗಬೇಕು. ಅಲ್ಲಿತನಕ ನಾವು ಈ ಜಾಗಾ ಬಿಟ್ಟು ಏಳುವದಿಲ್ಲ’ ಎಂದು ಕುಳಿತೇ ಬಿಟ್ಟಳು. ಉಳಿದ ಹೆಂಗಸರೂ ಅವಳನ್ನು ಅನುಸರಿಸಿದರು. ಆಯೇಷಾಳ ಹೋರಾಟ ಹುಡುಗಾಟಿಕೆಯದ್ದಲ್ಲ ಎಂಬುದು ಅರಿವಿಗೆ ಬರುತ್ತಲೆ ಗಲ್ಲಿಯ ತರುಣರು ‘ನ್ಯಾಯ ಸಿಗುವವರೆಗೂ ಹೋರಾಟ’ ಎನ್ನುತ್ತ ರಾಜಾಭಕ್ಷಿ ಮತ್ತು ಅವನ ಚೇಲಾಗಳ ವಿರುದ್ಧ ಧಿಕ್ಕಾರ ಕೂಗುತ್ತ ಕುಳಿತೇ ಬಿಟ್ಟರು. ಜನ ಜಾತ್ರೆಯಾಯಿತು.
ಇಂಥ ಬೆಳವಣಿಗೆಯನ್ನು ಎಂದೂ ಕಂಡಿರದ ಜಮಾತ್ ಅಚ್ಚರಿಗೂ, ದಿಗಿಲಿಗೂ ಒಳಗಾಯಿತು. ಚೇರಮನ್ ಸಲೀಂಸಾಬರು ಜಮಾತಿನ ತುರ್ತು ಸಭೆ ಸೇರಿಸಿದರು. ರಾಜಾಭಕ್ಷಿಯ ಚೇಲಾಗಳು, ‘ಆಯೇಷಾ ಸೊಕ್ಕಿನ ಹೆಂಗಸು. ನಮ್ಮ ಗಲ್ಲಿಯ ಮರ್ಯಾದೇನ ಬೀದಿಗೆ ತಂದಾಳ. ಅವಳಿಗೆ ಮರ್ದನಾ ಆಗಲೇಬೇಕು. ಜಮಾತಿನ ಕಿಮ್ಮತ್ತು ಅಂದ್ರ ಎಂಥದ್ದು ಅಂತ ತಿಳಿಬೇಕಂದ್ರ ಅಕಿ ಮ್ಯಾಲೆ ಪೊಲೀಸ್ ಕಂಪ್ಲೇಟ್ ಕೊಡ್ರಿ’ ಎಂದು ಪಟ್ಟು ಹಿಡಿದು ಕುಳಿತರು.
‘ಬೆಂಕಿ ಕಿಡಿಗೆ ಗಾಳಿ ಊದುವದು ಬಹಳ ಸುಲಭ. ಆದ್ರ ಕಿಡಿ ಹೊತ್ಗೊಂಡು ಉರಿಯಾಕ ಹತ್ತೀದ್ರ ಅದರ ಪರಿಣಾಮ ಭಯಂಕರ! ದುಡುಕುವದ್ರೊಳಗ ಅರ್ಥ ಇಲ್ಲ. ಸಮಸ್ಯಾ ಬಗೆಹರಿಸೋದ್ರಾಗ ಶಾಣೆತನ ಐತಿ’ ಸಲೀಂಸಾಬ ಹೇಳಿದರು. ಅವರ ಮಾತನ್ನು ಅನುಮೋದಿಸಿದ ಮೌಲಾನಾ ಅವರು, ‘ಇದು ಅಲ್ಲಾಹನ ಮನಸಿಗೆ ಬರುವ ಮಾತು. ಜನ ಈಗ ಪಟ್ಟು ಹಿಡಿದು ಕುಳಿತಾರಂದ್ರ ಅವರು ಎಚ್ಚರಾಗ್ಯಾರ, ನ್ಯಾಯದ ಪರವಾಗಿದ್ದಾರಂತ ಅರ್ಥ. ನೀವು ನೀಡುವ ಫೈಸಲಾ ಅಲ್ಲಾಹ್ ಮೆಚ್ಗೊಬೇಕು. ನಜೀರ ಜನರ ಮುಂದ ಬರಬೇಕು. ಅಂವಾ ಸತ್ಯ ಹೇಳಬೇಕು’ ಎಂದರು.
‘ಅದನ್ನ ಗಂಭೀರವಾಗಿ ತಗೊಳ್ಳೋದು ಅಗತ್ಯ ಇಲ್ಲ’ ಖಾರದಪುಡಿ ಬಂದ್ಯಾ ಹೇಳಿದ.
‘ಈಗ ಜಮಾನಾ ಬದಲಾಗೇತಿ. ಪ್ರಗತಿಪರ ಆಲೋಚನಾಕ್ರಮ ಸರ್ವಾಧಿಕಾರಿ ಧೋರಣೆಯನ್ನ ಪ್ರಶ್ನೆ ಮಾಡತೈತಿ. ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಾರಿಗೂ ಇಷ್ಟ ಆಗೋದು. ಅಲ್ಲಿ ವ್ಯತ್ಯಾಸ ಕಂಡು ಬಂದ್ರ ಜನ ಪ್ರತಿಭಟನೆಗೆ ಇಳಿತಾರ. ಹೇಸಿಗೆ ಸಂಗತಿಗಳನ್ನ ಬಯಲಿಗೆ ತರಲು ಹೋರಾಟ ಮಾಡತಾರ. ಆಯೇಷಾಬೇಗಂ ಇದಕೊಂದು ಸಣ್ಣ ಉದಾಹರಣೆ ಅಷ್ಟ‘ ಮೌಲಾನಾ ತಮಗನಿಸಿದ್ದನ್ನು ಗಂಧದಂತೆ ತೀಡಿದರು. ಅದನ್ನು ಆಘ್ರಾಣಿಸದ ಗರಂಮಸಾಲಿ ಗೈಬು.
‘ಅಕಿ ನಮ್ಮ ಧರ್ಮಕ್ಕೆ ದ್ರೋಹ ಮಾಡ್ಯಾಳ. ಗಲ್ಲಿ ಹೆಂಗಸರ, ತರುಣರ ತಲ್ಯಾಗ ಕೆಟ್ಟ ಹುಳಾ ಬಿಟ್ಟು ನಮ್ಮ ವಿರುದ್ಧ ನಿಂತಾಳ. ಅವಳನ್ನ ಅಲ್ಲಾಹ್ ಮೆಚ್ಚುದಿಲ್ಲ ಅಂದ್ರ, ನಾವ್ಯಾಕ ಸಲಾಮ್ ಹೊಡಿಬೇಕು?’ ಅಂತ ಪೊಗರು ವ್ಯಕ್ತಪಡಿಸಿದ.
‘ಇಲ್ಲೆ ಯಾರಿಗೆ ಯಾರೂ ಗುಲಾಮರಲ್ಲ. ಸಲಾಮ್ ಹೊಡಿಬೇಕಾಗಿಲ್ಲ. ನಾವು ಒಬ್ಬರ ರಾಡಿ ತಗಿಯಾಕ ಹ್ವಾದ್ರ, ನಮ್ಮ ರಾಡಿ ಮತ್ತೊಬ್ಬರು ತಗಿತಾರ. ರಾಡಿ ರಮರಾಡಿ ಆಗೋದು ಖರೆ. ಮೊದಲು ನಮ್ಮ ನಮ್ಮ ಮನಸ್ಸು ಶುದ್ಧ ಇಟ್ಟುಕೊಳ್ಳಲು ಪ್ರಯತ್ನಿಸೋಣ’ ಮೌಲಾನಾ ಅವರಾಡಿದ ಮಾತi ಹಿತವೆನಿಸಿ ಸಲೀಂಸಾಬರು ‘ಬಹುತ್ ಖೂಬ ಬಹುತ್ ಖೂಬ!’ ಎಂದು ಉದ್ಗರಿಸಿದರು.
ರಾಜಾಭಕ್ಷಿಯ ಕಟ್ಟಾ ಬೆಂಬಲಿಗನಾದ ಬೆಂಕಿ ಫಯ್ಯಾಜ್ ‘ಮೌಲಾನಾಸಾಹೇಬರ, ಇದು ಮಸೀದಿಯೊಳಗ ಬಯನಾ ಮಾಡಿದಂಗ ಅಲ್ರಿ. ನಜೀರನ ಜಿಂದಗಿ ಸವಾಲೈತಿ. ಅಂವಾ ತಲಾಕ್ ಕೊಟ್ಟಿದ್ದು ಖರೆ. ಜಮಾತು ಫೈಸಲಾ ಮಾಡಿದ್ದೂ ಖರೆ. ಮತ್ಯಾಕ ಕಾರಿಕೊಂಡಿದ್ದನ್ನ ಹೊಟ್ಯಾಗ ಹಾಕೋನುದು?’ ಎಂದ.
‘ನಜೀರ ಗಂಡಸು. ತಲಾಕ್ ಕೊಡುವುದರಿಂದ ಅವನಿಗೆ ನಷ್ಟ ಇಲ್ಲ. ಆದ್ರ ತಲಾಕ್‍ನಿಂದ ಹೆಚ್ಚು ತೊಂದರೆ ಅನುಭವಿಸುವವಳು ಶಬನಮ್. ಅವಳ ನಿಕಾಹ್ ಆಗಿ ಎರಡು ವರ್ಷ ಪೂರ್ತಿ ಗತಿಸಿಲ್ಲ. ತಲಾಕ್‍ಗೆ ಸ್ಪಷ್ಟ ಕಾರಣವೂ ಇಲ್ಲ. ತಲಾಕ್ ಹುಡುಗಾಟದ ವಿಷಯವೇ? ಒಬ್ಬ ಅಮಾಯಕ ಹೆಣ್ಣಿನ ಜಿಂದಗಿಯನ್ನು ನರಕಾಗ್ನಿಗೆ ತಳ್ಳುವುದು ಪಾಪದ ಕೆಲಸ. ಇದು ಅಲ್ಲಾಹ್‍ನಿಗೂ, ದೀನಿಗೂ ಮಾಡುವ ದೋಖಾ. ಇಂತಹ ಸಂದರ್ಭದಲ್ಲಿ ದುಡುಕಿನ ನಿರ್ಧಾರಕ್ಕಿಂತ ವಿವೇಚನೆ, ಮಾರ್ಗ ಸರಿಯಾದುದು ಎಂದರು ಮೌಲಾನಾ.
‘ಮೌಲಾ ಸಾಹೇಬ್ರ, ನಜೀರ್, ಶಬನಮ್‍ಗ ಕೊಟ್ಟ ತಲಾಕ್ ಅಂದರ, ಕಫನ್ ಹೊದ್ದು ಮಲಗಿದ ದೇಹ ಇದ್ದಂಗ. ಅದಕ್ಕ ಮರುಜೀವದ ಅವಕಾಶ ಇಲ್ಲ’ ಬೆಂಕಿ ಫಯಾಜ್ ಗೋರಿ ತೋಡುವ ಮಾತು ಆಡಿದ.
‘ಧರ್ಮದ ವಿಚಾರ ಬ್ಯಾರೆ, ಆಚಾರ ಬ್ಯಾರೆ ಆದ್ರ ಹೀಂಗ ಗೊಂದಲ ಉಂಟಾಗ್ತಾವು. ಸೂಕ್ಷ್ಮದ ಗ್ರಹಿಕೆ ಇಲ್ಲಂದ್ರ ಧರ್ಮ ಯಾರಿಗೂ ಅರ್ಥ ಆಗುದಿಲ್ಲ. ಧರ್ಮ ಒಳ್ಳೇದಕ್ಕದ, ಮನುಷ್ಯನ ಬದುಕಿಗದ, ನಮ್ಮ ಸ್ವಾರ್ಥಕ್ಕಲ್ಲ. ಬ್ಯಾರೆಯವರನ್ನ ಶೋಷಣೆ ಮಾಡುದಕ್ಕೂ ಅಲ್ಲ. ಜಮಾತಿಗೆ ಈ ಪರಿಜ್ಞಾನ ಇಲ್ಲಂದ್ರ ಇಂಥ ತೀರ್ಮಾನಗಳಾಗ್ತಾವು. ನಾವು ಮನುಷ್ಯರು, ತಪ್ಪು ಮಾಡ್ತೀವಿ. ತಿದ್ದಿಕೊಳ್ಳುದ್ರಾಗ ಮನುಷ್ಯತ್ವ ಐತಿ. ನಜೀರ ಜನರ ಮುಂದ ಬರಲಿ’
ಮೌಲಾನಾ ಅವರ ಮಾತನ್ನು ಎಲ್ಲರೂ ಸಮ್ಮತಿಸಿದರು. ಸಭೆ ಬರಖಾಸ್ತುಗೊಂಡಿತು.
ಎಲ್ಲರ ಮನಸುಗಳಲ್ಲಿ ಫೈಸಲಾ ಏನಾಗಬಹುದೆಂಬ ಕುತೂಹಲ. ಆಗಲೆ ತಮ್ಮೂರಿನ ಜಮಾತಿನ ಜನರೊಂದಿಗೆ ಬಂದು ಮುಖ ಬಾಡಿಸಿಕೊಂಡು ನಿಂತಿದ್ದ ಶಬನಮ್‍ಳ ತಂದೆ. ರಾಜಾಭಕ್ಷಿಗೆ ತಲೆಯೆತ್ತುವ ಸ್ಥೈರ್ಯವಿರಲಿಲ್ಲ. ಮೌಲಾನಾಸಾಹೇಬರು ‘ಅಂತಿಮವಾಗಿ ನಜೀರನ ವಿಚಾರ ತಿಳಿದು ಜಮಾತು ಫೈಸಲಾ ಮಾಡುವದು’ ಎಂದರು. ‘ಕುರಿ ಕೇಳಿ ಮಸಾಲಿ ಅರಿತಿರೇನು? ಮತ್ತೇನು ಕೇಳೋದು, ಅದು ಮುಗಿದು ಹೋದ ಕತಿ’ ಎಂದಳು ಪೀರಮಾ.
‘ಸುಳ್ಳಿಗೆ ನೂರು ಮುಖ, ನೂರು ಮನಸು. ಸತ್ಯಕ್ಕೆ ಒಂದೇ ಮುಖ, ಒಂದೇ ಮನಸು. ಪಾಕ್ ಪರವರ್ದಿಗಾರನಾದ ಅಲ್ಲಾಹ್ ಸತ್ಯದ ಪರವಾಗಿರ್ತಾನೆ. ನಜೀರ ಸತ್ಯ ಹೇಳಲಿ’ ಮೌಲಾನಾ ನಜೀರನನ್ನು ಕೂಗಿ ಕರೆದರು.
ನಜೀರ ದುಗುಡದಿಂದಲೆ ಬಂದು ಮೌಲಾನಾ ಸಾಹೇಬರ ಬಳಿ ನಿಂತ.
‘ಸತ್ಯ ನುಡಿಯಲು ನೀನು ಸ್ವತಂತ್ರನಿದ್ದಿ. ನೀನು ನಿನ್ನ ಹೆಂಡತಿಗೆ ತಲಾಕ್ ಹೇಳಿದ್ದು ನಿಜಾನಾ?’ ಮೌಲಾನಾ ಕೇಳಿದರು.
‘ಮಲೀಕನನ್ನು ಕರೆದು ಶಬನಮ್ ಕೊಡ ಹೊರಿಸಿಕೊಂಡಳಂತೆ. ಮಲೀಕ್ ಅವಳನ್ನು ನಕಲಿ ಮಾಡಿದನಂತೆ. ಅವನು ಕೊಡ ಹೊರಿಸುವಾಗ ಶಬನಮ್‍ಳ ಸೊಂಟ, ಗಲ್ಲ ಮುಟ್ಟಿದನಂತೆ ಮನೆÉಗೆ ಬಂದ ಬಸೀರಾ ಆಪಾ ಅಮ್ಮಿಯದು ಹೇಳಿದ್ಲು. ನಾನು ಶಬನಮ್‍ಳಿಗೆ ಏನೂ ಅನ್ನಲಿಲ್ಲ, ಅಮ್ಮಿ ಜೋರುಕಾ ಗುಲಾಮ್ ಆಗಬ್ಯಾಡೋ, ಇಕಿ ನಿನ್ನ ತಲಿಮ್ಯಾಲೆ ಮೆಣಸು ಅರಿತಾಳ, ಈಕಿಗೆ ತಲಾಕ್ ಹೇಳು. ನಿನಗ ಚೊಲೋ ಹುಡುಗಿನ್ನ ತಂದು ಮತ್ತೊಂದು ಶಾದಿ ಮಾಡ್ತೀನಿ ಅಂತ ಪುಸಲಾಯಿಸಿದಳು. ಶಬನಮ್ ಹಾದರಾ ಮಾಡತಾಳ ಅಂತ ಆಪಾ ಬೈದಾಡಿದಳು. ನನ್ನ ತಲೆ ಕೆಟ್ಟಂತಾಗಿ ನಾನು ಹೊರಗೆ ಹೋಗಿ ಸೆರೆ ಕುಡಿದು ಬಂದ್ಯಾ. ನನ್ನ ನೋಡಿ ಶಬನಮ್ ಹೆದರಿದಳು. ಅವಳಿಗೆ ನಾನು ತಲಾಕ್ ಹೇಳಿದ್ದು ಗೊತ್ತಿಲ್ಲ’
‘ಚೆನ್ನಾಗಿ ನೆನಪು ಮಾಡಿಕೊಂಡು ಹೇಳು’
‘ಶಬನಮ್ ಅಳುತ್ತಿದ್ದಳು. ನನ್ನ ಅಮ್ಮಾ ಮತ್ತ ಬಸೀರಾ ಆಪಾ ತಲಾಕ್ … ತಲಾಕ್ ಅಂತಿದ್ರು. ಇವಳಿಗೆ ತಲಾಕ್ ಕೊಡಲು ಒತ್ತಾಯಿಸಿದ್ರು. ನನಗಿಷ್ಟ ಗೊತ್ತು’
‘ಝೂಟ್ ಹೇಳಬ್ಯಾಡೊ ಹರಾಮ್‍ಖೋರ, ಜಹನ್ನಮದಾಗ ಹೋಗಿ ಬೀಳÀತಿ’ ಎಂದು ಪೀರಮಾ ಕೆಟ್ಟ ದನಿಯಲ್ಲಿ ಚೀರಿದಳು. ‘ಮೂರು ಸಲ ತಲಾಕ್ ತಲಾಕ್ ತಲಾಕ್ ಅಂತ ದೊಡ್ಡ ದನಿಯಾಗ ಹೇಳಿದೆಯಲ್ಲೊ. ಈಗ ಉಲ್ಟಾ ಹೊಡಿತಿಯೇನು?’ ಅಂತ ದಬಾಯಿಸಿದಳು ಬಸೀರಾ.
‘ಒಂದು ಸಲ ಇವರು ತಲಾಕ್ ಅಂತ ತೊದಲಿ ನೆಲದ ಮ್ಯಾಲೆ ಉರುಳಿದರು. ನಾನು ಗಾಬರಿಯಿಂದ ಅವರನ್ನ ತಬ್ಬಿಕೊಂಡೆ’ ಶಬನಮ್ ನಡುವೆ ಮಾತಾಡಿದಳು. ನಜೀರ ಥಟ್ಟನೆ ‘ನಮಗ ತಲಾಕ್-ಗಿಲಾಕ್ ಗೊತ್ತಿಲ್ಲರ್ರಿ ಸಾಹೇಬ್ರ. ನನಗ ನನ್ನ ಹೆಂಡತಿ ಶಬನಮ್ ಬೇಕು ಅಷ್ಟ’ ಎಂದ.
‘ಸುಬಾನಲ್ಲಾಹ್ !’ ಹರ್ಷಚಿತ್ತರಾಗಿ ಉದ್ಗರಿಸಿದ್ದರು ಮೌಲಾನಾ.
ತರುಣರು ಉತ್ಸಾಹದಿಂದ ನಜೀರನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಕುಣಿದರು. ಆಯೇಷಾಳತ್ತ ಧಾವಿಸಿ ಬಂದ ಶಬನಮ್ ಅವಳನ್ನು ತಬ್ಬಿಕೊಂಡಳು. ನೆರೆದ ಮಂದಿಯ ಕಣ್ಣುಗಳಲ್ಲಿ ಸಾವಿರ ನಕ್ಷತ್ರಗಳ ಕಾಂತಿ!

ಮತ್ತಷ್ಟು ಸುದ್ದಿಗಳು

vertical

Latest News

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್‌ಗೆ 25 ಸಾವಿರ ದಂಡ

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ  ಮುಖಭಂಗ ಉಂಟಾಗಿದೆ. ಪ್ರಧಾನಿ ಮೋದಿ ಡಿಗ್ರಿ ಸರ್ಟಿಫಿಕೇಟ್‍ಗಳನ್ನು ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಗುಜರಾತ್...

ಕೆಲಸದ ನಡುವೆ ಧಮ್ ಎಳೆಯಲು ಪದೇ ಪದೇ ಬ್ರೇಕ್, 9 ಲಕ್ಷ ರೂಪಾಯಿ ದಂಡ

newsics.com ನವದೆಹಲಿ: ಕೆಲಸದ ನಡುವೆ ಧಮ್ ಎಳೆಯಲು ಬ್ರೇಕ್ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.ನೀವೂ ಹೀಗೆ ಮಾಡುತ್ತಿದ್ದರೆ ಎಚ್ಚರವಾಗಿರುವುದು ಒಳಿತು. ಕೆಲಸದ ನಡುವೆ ಧಮ್ ಎಳೆಯಲು ಪದೇ ಪದೇ ಬ್ರೇಕ್, 9 ಲಕ್ಷ ರೂಪಾಯಿ ದಂಡವನ್ನು ಕಂಪನಿ...

ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ

newsics.com ಬೆಂಗಳೂರು: ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಏಪ್ರಿಲ್ 2, 10, 17, 26 ಮೇ 21 ರಂದು ಐಪಿಎಲ್ ಪಂದ್ಯವಿರುವ...
- Advertisement -
error: Content is protected !!