Thursday, December 9, 2021

ಬೈಪಾಸ್ ರಸ್ತೆ

Follow Us

* ದೀಪ್ತಿ ಭದ್ರಾವತಿ
response@134.209.153.225
newsics.com@gmail.com

ತ್ತು ದಿನಗಳ ಕಾಲ ನಡೆಯುವ ಊರ ದೇವಿಯ ಜಾತ್ರೆ ಶುರುವಾಗಿ ಇನ್ನು ಒಂದು ದಿನ ಕಳೆದಿತ್ತಷ್ಟೇ. ಅಷ್ಟರಲ್ಲಿ ಯಾರೂ ಎಣಿಸದ ಅವಘಡವೊಂದು ಅಚಾನಕ್ ಆಗಿ ನಡೆದುಹೋಗಿತ್ತು. ಅದರ ಸಲುವಾಗಿ ತಲೆಬಿಸಿ ಮಾಡಿಕೊಂಡ ಛೇರ್‍ಮನ್ನರು , ಪದೇ ಪದೇ ಕರೆ ಮಾಡಿ ಕಿರಿಕಿರಿ ಕೊಡುತ್ತಿದ್ದ ಪೋಲೀಸರಿಗೆ ಉತ್ತರ ಹೇಳಲಾಗದೆ, ಏನು ಮಾಡಲು ತೋಚದೆ ಊರ ಸಮಸ್ತ ಮಂದಿಯ ಸಭೆ ಕರೆದು ಸಮಸ್ಯೆ ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಇದ್ದ ಕೆಲಸ ಕಾರ್ಯ ಬಿಟ್ಟು ಸಭೆಗೆ ಬಂದಿದ್ದ ಪ್ರತಿಯೊಬ್ಬರಿಗೂ “ಅವನಿಗೆ ಈಗಲೇ ಸಾಯಬೇಕಿತ್ತಾ” ಎನ್ನುವ ಯೋಚನೆಯು ಬಂದು ಕೋಪ ಉಕ್ಕುವಂತಾಗುತ್ತಿತ್ತು. ಮರುಕ್ಷಣವೇ “ಸಾವೇನು ಹೇಳಿಕೇಳಿ ಬರುತ್ತದೆಯಾ” ಎನ್ನುವ ಮಾತು ನೆನಪಾಗಿ ಅವನ ಬಗ್ಗೆ ಅನುಕಂಪವೂ ಮೂಡುತ್ತಿತ್ತು.
ಹಾಗೆ ಹೇಳಬೇಕೆಂದರೆ, ಒಂದು ಕಾಲಕ್ಕೆ ಹಿರೇಮಕ್ಕಿ ಎಂಬ ಕುಗ್ರಾಮಕ್ಕೆ ಬೆಳಕು ಕಾಣುವಂತೆ ಮಾಡಿದವನು ಅವನೇ. ಭದ್ರಾವತಿ ನಗರದಿಂದ ಹತ್ತು ಕಿ.ಮೀ ದೂರದಲ್ಲಿ ಉಂಬ್ಳೇಬೈಲು ಕಾಡಿಗೆ ಹೊಂದಿಕೊಂಡಂತೆ ಇದ್ದ ಪುಟ್ಟ ಊರಿಗೆ ಬದುಕಲು ಕಲಿಸಿದವನು ಅವನೇ.. ಕುರಿ ಮಂದೆಯಂತೆ ಜೀವಿಸುತ್ತಿದ್ದರು ನಾಲ್ಕು ಅಕ್ಷರ ಕಲಿಯುವಂತೆ ಮಾಡಿದವನೂ ಅವನೇ. ಆಚೀಚೆ ಗ್ರಾಮಗಳಿಗೆ ಕೂಲಿಗೆ ಹೋಗಿ, ಮೈ ತುಂಬಾ ದುಡಿದು ಅರ್ಧಂಬರ್ಧ ಸಂಬಳ ಹೆಕ್ಕಿ, ಅರೆ ಹೊಟ್ಟೆ ಉಂಡು ಸೀದಾ ಸಾದಾ ಹಸುಗಳಂತೆ, ಜಗತ್ತಿನ ಅರಿವೇ ಇಲ್ಲದಂತೆ ಇದ್ದವರಿಗೆ “ಪ್ರಪಂಚ ಹೀಗಿದೆ” ಎಂದು ಅರಿವು ಮೂಡಿಸಿದವನೂ ಅವನೇ.. ಹಾಗಂತ ಅವನು ಈ ಊರಿನವನೇನಲ್ಲ, ಎಲ್ಲಿಯವನೋ ಯಾರಿಗೂ ಗೊತ್ತಿಲ್ಲ. ಕೇಳಿದವರಿಗೆಲ್ಲ. ತಾನೊಬ್ಬ “ಮಿಲ್ಟ್ರೀ ಮ್ಯಾನ್, ಹೆಸರು ಮಾದಣ್ಣ” ಎಂದು ಹೇಳಿದ್ದನೇ ಹೊರತು. ಮದುವೆ, ಮಕ್ಕಳು, ತಂದೆ, ತಾಯಿ, ಹೀಗೆ ತನ್ನ ಬಗೆಗಿನ ಸಣ್ಣ ಸುಳಿವನ್ನೂ ನೀಡಿರಲಿಲ್ಲ.. ಕೊನರಲಾಗದ ಗಟ್ಟಿ ಮರದ ತುಂಡಿನಂತಿದ್ದ ಗ್ರಾಮಕ್ಕೆ ವಿದ್ಯುತ್ ಬರಿಸಿದ್ದ. ಕನ್ನಡ ಶಾಲೆ ತರಿಸಿದ್ದ. ಬಾವಿ ಕೊರೆಸಿದ್ದ. ರಸ್ತೆ ಮಾಡಿಸಿದ್ದ. ಯಾರ್ಯಾರದೋ ಕೈಯ್ಯಲ್ಲಿ ಅಡವಿದ್ದ ಊರಿನವರ ಜಮೀನನ್ನು ಹೋರಾಟ, ಪೋಲೀಸ್ ಸ್ಟೇಷ್ಟನ್ ಅಂತೆಲ್ಲ ತಿರುಗಿ, ತಿಂಗಳುಗಟ್ಟಲೆ ಉಪವಾಸ ಕೂತು ಯಾವ್ಯಾವುದೋ ರಾಜಕಾರಣಿಗಳ ಊರಿಗೆ ಕರೆಸಿ ವಾಪಾಸ್ಸು ಕೊಡಿಸಿದ್ದ. ಹೀಗೆ ಗಂಡ ಹೆಂಡಿರ ಜಗಳದಿಂದ ಹಿಡಿದು ಊರಿನ ಅಷ್ಟೂ ವ್ಯಾಜ್ಯಕ್ಕೂ ಸಮಾಧಾನದ ಸಂಧಾನಕಾರನಂತೆ ಬದುಕುತ್ತಿದ್ದ.
ಹೀಗೆ, ಕೆಲ ವರ್ಷದ ಹಿಂದಿನವರೆಗೂ ಅವನ ಮಾತು ಊರಿನ ಎಲ್ಲೆಡೆ ನಡೆಯುತ್ತಿತ್ತು. ಹಾಗಂದ ಮಾತ್ರಕ್ಕೆ ಅವನು ಊರಿನ ಅಧಿಕಾರಯುತ ಸ್ಥಾನದಲ್ಲಿ ಇದ್ದನೆಂದಾಗಲಿ, ಸಿಕ್ಕಾಪಟ್ಟೆ ಧಮಕಿ ಹಾಕುವ ನಾಯಕನಾಗಲಿ ಆಗಿರಲಿಲ್ಲ. ತನ್ನ ಪಾಡಿಗೆ ತಾನು ಸದಾ ಮೌನಿಯಾಗಿರುತ್ತಿದ್ದ. ತಾನಾಯಿತು ತನ್ನ ಕೋಳಿ ದಂಧೆಯಾಯಿತು ಎಂಬಂತೆ ಬದುಕುತ್ತಿದ್ದ. ಯಾರಾದರೂ ಮಾತನಾಡಿದರೆ ಒಂದೆರಡೆ ಮಾತಿನ ಉತ್ತರ. ಅಷ್ಟಾದರೂ ಆ ಊರಿನ ಜನ ಪ್ರತಿಯೊಂದಕ್ಕೂ ಅವನನ್ನೇ ಅವಲಂಭಿಸಿದ್ದರು. ಕನಸಿನಲ್ಲಿಯೂ ಅವನ ಮಾತನ್ನು ಮೀರುವ ಪ್ರಯತ್ನವನ್ನು ಯಾರೊಬ್ಬರೂ ಮಾಡುತ್ತಿರಲಿಲ್ಲ. ತಮ್ಮ ಪಾಲಿನ ದೇವರು “ಅವನೆಂದೇ” ನಂಬಿದ್ದರು. ಆದರೆ ಕಾಲ ಹಾಗೆ ಉಳಿಯಲಿಲ್ಲ. ಅವನ ವಯೋಮಾನದವರಿಗೆ, ಗ್ರಾಮದ ಹಿರಿಯ ತಲೆಗಳಿಗೆ ಅವನ ಕುರಿತಾಗಿ ಗೌರವ, ಪ್ರೀತಿ ಇತ್ತಾದರೂ, ಹೊಸ ಪೀಳಿಗೆಗೆ ಅವನ ಮಾತು ತುಕ್ಕು ಹಿಡಿದ ತಕ್ಕಡಿಯಂತೆ ಭಾಸವಾಗತೊಡಗಿತ್ತು. ಮೆಲ್ಲಗೆ ಅವನ ಮಾತನ್ನು ಒಬ್ಬೊಬ್ಬರೇ ಮೀರತೊಡಗಿದರು. “ಅದು ಹಂಗಲ್ಲ ಅಜ್ಜಯ್ಯ” ಎನ್ನುತ್ತ ತಮ್ಮದೇ ಸಮಜಾಯಿಸಿ ಕೊಡತೊಡಗಿದರು. ಅವನ ಗಮನಕ್ಕೇ ಬಾರದಂತೆ ಊರಿನ ಒಂದೊಂದೇ ಕೆಲಸಗಳು ಆಗತೊಡಗಿದವು. ಅದು ನಿಧಾನಕ್ಕೆ ಅವನಿಗೂ ತಿಳಿಯತೊಡಗಿತು. ಇಷ್ಟಾದ ಮೇಲೂ ಅವನು ಯಾರೊಬ್ಬರಿಗೂ ಏನನ್ನೂ ಹೇಳಲಿಲ್ಲ. ಸುಮ್ಮನೆ ನಿರ್ಲಿಪ್ತನಾಗತೊಡಗಿದ. ಇದು ಊರಿನ ಹಿರಿಯರಿಗೆ ಬೇಸರ ತಂದಿತಾದರೂ, ಆ ಹೊತ್ತಿಗೆ ಅವರ ತಲೆಗೂದಲು ಬಣ್ಣ ಕಳೆದುಕೊಳ್ಳಲು ಶುರು ಮಾಡಿದ್ದರಿಂದ ಹೆಚ್ಚಿಗೆ ಏನು ಹೇಳಲಾಗದೆ ಮೌನವಹಿಸತೊಡಗಿದರು. ಊರಿನ ಪಂಚಾಯ್ತಿಯವರು ಮಾತ್ರ ಎಲ್ಲ ಸಮಸ್ಯೆಗಳಿಗೆ ಅವನನ್ನು ಹುಡುಕಿ ಬಂದು ಪರಿಹಾರ ಕೇಳಿ ಹೋಗುವಷ್ಟು ಔಪಚಾರಿಕ ಸಂಬಂಧವನ್ನು ಇರಿಸಿಕೊಂಡರು.. ಆದರೆ ದಿನಗಳು ಉರುಳಿದಂತೆ ವರ್ಷಗಳು ಗತಿಸಿದಂತೆ ಮುಖಗಳು ಬದಲಾದಂತೆ ಊರಿನ ಚಿತ್ರಣವೂ ಹಗೂರಾಗಿ ಬದಲಾಗತೊಡಗಿತು.
ಅದು ಪೂರ್ತಿ ಬದಲಾದದ್ದು ಮಾತ್ರ “ಬೈಪಾಸ್ ರಸ್ತೆ” ಎಂಬ ಮಾಯಾಂಗನಿ ಹಿರೇಮಕ್ಕಿಯ ಎದೆಯಲ್ಲಿ ಝೇಂಕಾರ ಎಬ್ಬಿಸಿದ ನಂತರ. ಮೊದಲಿಗೆ ಜಮೀನು, ಮನೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಹಿರೇಮಕ್ಕಿಯ ಜನ ತಕರಾರು ಎಬ್ಬಿಸಿದರು. ಮಾದಣ್ಣನ ನೇತೃತ್ವದಲಿ ಮಕ್ಕಳು ಮರಿಗಳ ಆದಿಯಾಗಿ ವಾರಗಟ್ಟಲೆ ಧರಣಿ ನಡೆಸಿದರು. ಆದರೆ ಆ ನಂತರ ಯಾರೋ ದೊಡ್ಡ ಮನುಷ್ಯರ ಮಧ್ಯಸ್ಥಿಕೆಯಿಂದಾಗಿ ಇದ್ದಕ್ಕಿದ್ದಂತೆ ಧರಣಿಯನ್ನು ನಿಲ್ಲಿಸಲಾಗಿತ್ತು. ಆ ದಿನ ಮಾದಣ್ಣನ ಮಾತಿಗೆ ಮೊತ್ತ ಮೊದಲು ಸಾರ್ವಜನಿಕವಾಗಿ ಸೋಲಾಗಿತ್ತು. ಇನ್ನೂ ಮೀಸೆ ಮೂಡದ ಹೈದನೊಬ್ಬ “ನಿಂಗೆ ಅವೆಲ್ಲ ಗೊತ್ತಾಗಲ್ಲ ಅಜ್ಜಯ್ಯ” ಎನ್ನುತ್ತ ಜಮೀನು, ಮನೆಗಳ ಬದಲಾಗಿ, ತಾನೇ ನಿಂತು ಊರಿನವರಿಗೆ ಸರ್ಕಾರದಿಂದ ಬರಬೇಕಾಗಿದ್ದ ಚೂರು ಪಾರು ಹಣ ದೊರಕಿಸಿಕೊಟ್ಟಿದ್ದ.
ರಸ್ತೆ ಕಾಮಗಾರಿ ಆರಂಭವಾದ ಮೇಲೆ ಊರ ತುಂಬೆಲ್ಲ ಒಂದು ರೀತಿಯ ಸದ್ದು ಓಡಾಡತೊಡಗಿತು.. ಅದು ಓಡಾಡಿದಂತೆಲ್ಲ ಗರ ಬಡಿದಂತಿದ್ದ ಒಂದೊಂದೇ ಮನೆಯ ಬಾಗಿಲುಗಳು ಜಗದ ಜಂಜಾಟವನ್ನು ಸಣ್ಣ ಕಣ್ಣಿನಿಂದ ನೋಡುತ್ತ ಅದರೊಳಗೆ ತಾವೂ ಒಂದಾಗಬೇಕೆಂಬ ತುಡಿತದಲ್ಲಿ ಒದ್ದಾಡತೊಡಗಿದವು. ನಿಧಾನಕ್ಕೆ ಊರ ಬಾಗಿಲಿನಲ್ಲಿ ಚಾ ಪಾನಿಯ ಸಲುವಾಗಿ ಸಣ್ಣಪುಟ್ಟ ಕ್ಯಾಂಟೀನ್‍ಗಳು ಎದ್ದು ನಿಂತವು, ಊಟ ಉಪಚಾರಕ್ಕಾಗಿ ಹೆಂಗಸರು ಮನೆಯ ಒಳಗಿನಿಂದಲೇ ಅಡಿಗೆ ಮಾಡಿಕೊಟ್ಟು ಕೈ ಗಟ್ಟಿ ಮಾಡಿಕೊಳ್ಳತೊಡಗಿದರು. ಬರಿಗೈಯ್ಯಲ್ಲೇ ಜೀವನ ಕಳೆಯುತ್ತಿದ್ದ ಮಂದಿಯ ಕೈಯ್ಯಲ್ಲಿ ಒಂದಿಷ್ಟು ರೊಕ್ಕ ಆಡತೊಡಗಿತು.
“ ಬದುಕು ಹಸನಾಯಿತು” ಎಂದುಕೊಳ್ಳುವಷ್ಟರಲ್ಲಿ. “ರಸ್ತೆ ಕಾಮಗಾರಿ” ತನ್ನ ಕೆಲಸ ಮುಗಿಸಿ ಮುಂದಿನ ಊರಿಗೆ ಕೈ ಬೀಸುತ್ತ ನಡೆದೇ ಬಿಟ್ಟಿತು. ಇತ್ತ ನಾಲಿಗೆಗೆ ರುಚಿ ಹತ್ತಿಸಿಕೊಂಡ ಮಂದಿಗೆ ಸ್ವಲ್ಪ ದಿನ ಏನು ಮಾಡುವುದೆಂದೇ ತೋಚಲಿಲ್ಲ. ಆ ದಿನ ಮಾದಣ್ಣ ಬುದ್ದಿ ಹೇಳುವ ಪ್ರಯತ್ನ ಮಾಡಿದ್ದ “ಈ ಎಲ್ಲವೂ ತಾತ್ಕಾಲಿಕ” ಎಂದಿದ್ದ. ಅಲ್ಲಿನವರಿಗೆ ಅವನು ಹೇಳಿದ್ದು ಸೈ ಎನ್ನಿಸಿ, ಹಳೆಯದೆಲ್ಲವ ಮರೆತು ಮತ್ತೆ ತಮ್ಮ ತಮ್ಮ ಕೆಲಸಕ್ಕೆ ಹೋಗತೊಡಗಿದ್ದರು.
ಒಂದು ಒಂದೂವರೆ ವರ್ಷದವರೆಗೆ ಯಾವ ಬದಲಾವಣೆಯೂ ಆಗಲಿಲ್ಲ. ಆದರೆ ಒಂದು ದಿನ ಸ್ವರ್ಗದಿಂದ ಚಂದ್ರನ ತುಂಡುಗಳು ಬಿದ್ದ ಹಾಗೆ. ರಾತ್ರಿಯ ನೀರವದಲ್ಲಿ ಒಂದೊಂದೇ ವಾಹನಗಳು ತಮ್ಮ ಬೆಳ್ಳಿ ಬೆಳಕು ಚೆಲ್ಲುತ್ತ ಹೊರಳಾಡತೊಡಗಿದವು. ಮೊದಲಿಗೆ ಈ ಕುರಿತಾಗಿ ಅಷ್ಟೇನು ಆಸಕ್ತಿ ತೋರದ ಗ್ರಾಮದ ಮಂದಿ ನಿಧಾನಕ್ಕೆ ಅವುಗಳ ಸದ್ದಿಗೆ ತಮ್ಮನ್ನು ಶೃಂಗರಿಸಿಕೊಳ್ಳತೊಡಗಿದರು. ಬೆಂಗಳೂರಿನಿಂದ ವಾಪಾಸ್ಸಾದ ಊರಿನ ಹೈದನೊಬ್ಬ ಮೊದಲ ಬಾರಿಗೆ “ನೈಟ್ ಪಂಜಾಬಿ ಢಾಬಾ” ತೆರೆÀದು “ ಸುಖಾ ರೊಟ್ಟಿ” ಯನ್ನು ಬಡಿದೇಬಿಟ್ಟ. ಅವನು ಹಾಗೆ ಮಾಡಿದ್ದೇ ತಡ ಊರಿನ ಬಹಳಷ್ಟು ಮಂದಿ ಹುಡುಗರು ದಡಬಡಾಯಿಸಿ ಎದ್ದು ಕೂತರು.. ಢಾಬಾದ ಪಕ್ಕದಲ್ಲಿ ಒಂದು ಪಂಕ್ಚರ್ ಅಂಗಡಿ ಶುರುವಾಯಿತು. ನೋಡು ನೋಡುತ್ತಿದ್ದಂತೆ ಪಾನ್ ಬೀಡಾ, ಲಿಂಬು ಸೋಡಾ, ಕಬ್ಬಿನ ಹಾಲು. ಹೀಗೆ ಹತ್ತಾರು ಅಂಗಡಿಗಳು ನಾಯಿ ಕೊಡೆಗಳಂತೆ ತಲೆ ಎತ್ತಿಯೇ ಬಿಟ್ಟವು. ಆವರೆಗೂ ಅಲ್ಲಿ ಇಲ್ಲಿ ಕೆಲಸಕ್ಕೆ ಹೋಗುತ್ತಿದ್ದವರೆಲ್ಲ ತಮ್ಮದೇ ಊರಿನಲ್ಲಿ ಒಂದಲ್ಲ ಒಂದು ವ್ಯವಹಾರಕ್ಕೆ ಶುರುವಿಟ್ಟುಕೊಂಡರು. ಅವರ ಪ್ರಯತ್ನಗಳು ಸುಳ್ಳಾಗಲಿಲ್ಲ. ರಸ್ತೆಯ ಮೇಲೆ ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ವಾಹನಗಳೆಲ್ಲ ಒಮ್ಮೆ ನಿಂತು ನೋಡಿ ಹೋಗತೊಡಗಿದವು. ಮೆಲ್ಲಗೆ ಊರಿನ ಕೆಲವಾರು ಮಂದಿಯ ಕೈಯ್ಯಲ್ಲಿ ರೊಕ್ಕ ಸಲೀಸಾಗಿ ಆಡತೊಡಗಿತು. ಅದು ಅಷ್ಟಕ್ಕೆ ನಿಲ್ಲಲಿಲ್ಲ. ಭದ್ರಾವತಿಯ ಕಾರ್ಖಾನೆಗೆ ಅದಿರು, ಕಬ್ಬಿಣ, ಎಂದೆಲ್ಲ ತುಂಬಿ ತರುವ ಉದ್ದುದ್ದ ಲಾರಿಗಳು ಬಂದು ಬೀಡು ಬಿಡತೊಡಗಿದವು. ಅಂತೆಯೇ ಕಾಗದ ಕಾರ್ಖಾನೆಯಿಂದ ಕಾಗದ ಸಾಗಿಸುವ ಲಾರಿಗಳೂ ಕೂಡ..ಊರ ಒಳ ಬದಿಯಲ್ಲಿ ಒಂದು ರೀತಿಯಾದಂತಹ ಸದ್ದಿಲ್ಲದ ಗದ್ದಲ ಶುರುವಾಯಿತು. ಹಗಲಿಡೀ ಬೀಡು ಬಿಡುತ್ತಿದ್ದ ಲಾರಿವಾಲಾಗಳು ಊರ ಒಳಕ್ಕೂ ಹೆಜ್ಜೆಯೂರಲು ಶುರುವಿಟ್ಟರು. ಊರ ಹೆಣ್ಣು ಮಕ್ಕಳನ್ನು ಕಿಚಾಯಿಸುವುದು, ಸನ್ನೆ ಮಾಡಿ ಕರೆಯುವುದು ಎಲ್ಲದೂ ಆರಂಭವಾಯಿತು. ನಾಲ್ಕಾರು ಹೆಣ್ಣು ಮಕ್ಕಳು ಇದ್ದಕ್ಕಿದ್ದಂತೆ ಕಾಣೆಯೂ ಆದರು. ಇದು ಮಾದಣ್ಣನ ಆದಿಯಾಗಿ ಆ ಊರಿನ ಯಾವ ಹಿರಿಯರಿಗೂ ಸರಿ ಕಾಣಲಿಲ್ಲ.. ಆವರೆಗೂ ಏನೊಂದು ಮಾತನಾಡದ ಮಾದಣ್ಣ ತಾನೇ ಖುದ್ದು ಹೋಗಿ ಪಂಚಾಯ್ತಿ ಛೇರ್‍ಮನ್ನರಲ್ಲಿ ಮನವಿ ಮಾಡಿ ಇದನ್ನೆಲ್ಲ ಹದ್ದುಬಸ್ತಿಗೆ ತರುವಂತೆ ತಿಳಿಸಿದ. ಏನೊಂದು ಪ್ರಯೋಜನವಾಗಲಿಲ್ಲ. ಇನ್ನು ಮೊದ ಮೊದಲಿಗೆ ಮಾದಣ್ಣನ ಜೊತೆ ಕೈಗೂಡಿಸಿದ್ದ ಹಿರಿ ತಲೆಗಳು ದಿನಕಳೆದಂತೆ “ಹೊಟ್ಟೆ ಪಾಡಿಗೆ ಮಾಡಿದ್ರೆ ಏನ್ ತಪ್ಪೈತೆ” ಎನ್ನುತ್ತ ಒಬ್ಬೊಬ್ಬರೇ ಹಿಂದೆ ಸರಿಯತೊಡಗಿದ್ದರು. ಅಲ್ಲದೆ ಊರಿನ ಛೇರ್‍ಮನ್ನರೂ ಕೂಡ “ಊರು ಉದ್ದಾರ ಆಗೋದು ಬ್ಯಾಡೇನಜ್ಜ” ಎನ್ನುತ್ತ ಇವನನ್ನೇ ಸಮಾಧಾನ ಮಾಡಿ ಕಳಿಸಿದ್ದರು. ಆದರೆ ಹಠ ಬಿಡದ ಮಾದಣ್ಣ ಊರಿನ ಒಳಗೆ ಬಂದು ಅಡ್ನಾಡಿ ಲಾರಿ ಡ್ರೈವರ್‍ಗಳನ್ನು ಬೈದು ಓಡಿಸುವ, ಕಾರ್ಯ ಕೈಗೊಂಡ. ಕ್ರಮೇಣ ಅಪರಿಚಿತರು ಊರ ಒಳಗೆÀ ಬರುವುದು ಕಡಿಮೆಯಾಯಿತು..ಆದರೆ ಕಾಕತಾಳೀಯ ಎಂಬಂತೆ ಅದು ಮತ್ತೊಂದು ರಗಳೆಗೆ ಕಾರಣವೂ ಆಯಿತು..ಬೈಪಾಸ್ ರಸ್ತೆಯ ಅಂಚಿನಲ್ಲೇ ಇದ್ದ ಪಕ್ಕದ ಹಳ್ಳಿಯವರು ಕೂಡ ಹಿರೇಮಕ್ಕಿಯವರನ್ನೇ ಅನುಸರಿಸಿ ಡಾಬಾ, ಹೋಟೆಲ್ಲು, ಅಂತೆಲ್ಲ ತೆರೆದು ಕೂತರು. ಅಷ್ಟೇ ಆಗಿದ್ದರೆ ಆಡ್ಡಿ ಇರಲಿಲ್ಲ. ಇವರಿಗಿಂತ ಕಡಿಮೆ ದರದಲ್ಲಿ “ಎಲ್ಲವನ್ನೂ” ಪೂರೈಸುತ್ತ ಹಿರೇಮಕ್ಕಿಯವರ ಜೇಬಿಗೆ ಕತ್ತರಿ ಬೀಳುವಂತೆ ವ್ಯವಹಾರ ನಡೆಸತೊಡಗಿದರು. ಅತ್ತಿ ಕೋಪ ಕೊತ್ತಿ ಮೇಲೆ ಅನ್ನುವ ಹಾಗೆ ಹೀಗೆಲ್ಲ ಆಗುವುದಕ್ಕೆ ಮಾದಣ್ಣನೇ ಕಾರಣ ಎನ್ನುವ ಮಾತು ಊರ ತುಂಬ ಎಗ್ಗಿಲ್ಲದೆ ಅಡ್ಡಾಡತೊಡಗಿತು..
ಒಂದೊಂದೇ ವಹಿವಾಟು ತೆವಳಲು ಶುರು ಮಾಡಿದ ಮೇಲೆ, ಹಿರೇಮಕ್ಕಿಯವರಿಗೆ ಏನು ಮಾಡುವುದೆಂದೇ ತೋಚಲಿಲ್ಲ. ನೂರೆಂಟು ಹೊಸ ಐಡಿಯಾಗಳ ಮಾಡಿ ಕರೆದರೂ ಒಂದೇ ಒಂದು ವಾಹನವೂ ನಿಲ್ಲುವ ಪ್ರಯತ್ನ ಮಾಡಲಿಲ್ಲ. ನಾಲ್ಕೈದು ವರ್ಷ ಸಿಕ್ಕಾಪಟ್ಟೆ ಸಂಪಾದನೆ ಮಾಡಿ ಸುಖ ಎನ್ನುವುದು ಹಲ್ಲಿಗೆ ಹತ್ತಿ ಹೋಗಿದ್ದ ಮಂದಿ,” ಮುಂದೇನು”? ಎಂದು ತೋಚದೆ ಕೂತಿರುವ ಹೊತ್ತಿಗೆ ಆ ಊರಿನ ಹೈದನೊಬ್ಬನಿಗೆ ಖತರ್‍ನಾಕ್ ಉಪಾಯವೊಂದು ಹೊಳೆದೇ ಬಿಟ್ಟಿತು..ಊರಿನಿಂದ ಸ್ವಲ್ಪವೇ ದೂರದಲ್ಲಿದ್ದ ಅಪಾಯಕಾರಿ ತಿರುವೊಂದು ಊರಿನವರ ಪಾಲಿಗೆ ದೇವರಂತೆ ಕಂಡುಬಿಟ್ಟಿತು…ಕೆಲಸವಿಲ್ಲದೆ ಅಲೆಯುತ್ತಿದ್ದ ಏಳೆಂಟು ಯುವಕರ ಗುಂಪು ಆ ತಿರುವಿನಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ರಸ್ತೆ ಮಧ್ಯೆದಲ್ಲಿ ಜೋಡಿಸಿಟ್ಟು ,ಮರಳ ರಾಶಿಯನ್ನು ಸುರಿದು ಅಪಘಾತವಾಗುವುದನ್ನೇ ಕಾಯತೊಡಗಿದರು. ನೆತ್ತರಲ್ಲಿ ಹೊರಳಾಡುವವರನ್ನು ಕರುಣೆಯಿಲ್ಲದೆ ದೋಚತೊಡಗಿದರು.. ಹತ್ತಾರು ಕಾರುಗಳು, ಕಬ್ಬಿಣ ತುಂಬಿದ ಟ್ರಕ್ಕುಗಳು, ದಾಕ್ಷಿ, ಬಾದಾಮಿ,ಗೋಡಂಬಿ ತುಂಬಿದ ಲಾರಿಗಳು.ಪೆಟ್ರೋಲ್, ಸೀಮೆಎಣ್ಣೆ ಟ್ಯಾಂಕರ್‍ಗಳು..ಅಕ್ಕಿ, ಗೋಧಿಯ ಆಟೋಗಳು.. ದಿನಕ್ಕೊಂದು ವಾಹನಗಳು ಮಗುಚಿ ಬೀಳತೊಡಗಿ, ಅಪಫಾತ ಎನ್ನುವುದು ಆ ವಲಯದಲ್ಲಿ ಸಾಮಾನ್ಯವಾಗತೊಡಗಿತು. ಸಿಕ್ಕ ವಸ್ತುಗಳನ್ನು ಊರ ಮಂದಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಹಂಚಿಕೊಳ್ಳತೊಡಗಿದರು. ಇದು ಬಹಳಷ್ಟು ತಿಂಗಳವರೆಗೆ ಮಾದಣ್ಣನಿಗೆ ಗೊತ್ತೇ ಆಗಲಿಲ್ಲ. ಗೊತ್ತಾದ ದಿನ ಅವ ಸಿಕ್ಕಾಪಟ್ಟೆ ನೊಂದುಕೊಂಡಿದ್ದ. ಹತಾಶೆಯಲ್ಲಿ “ಪೋಲೀಸರಿಗೆ ತಿಳಿಸುತ್ತೇನೆಂದು” ಕೂಗಾಡಿದ್ದ. ಆಗಲೂ ಸಹ ಅಲ್ಲಿಯ ಜನ ಕ್ಯಾರೆ ಎಂದಿರಲಿಲ್ಲ. ಬದಲಾಗಿ “ನೀ ಏನಾರಾ ಪೋಲೀಸ್‍ನೊರ್ ಅತ್ರ ಓದ್ರೆ ಇವೆಲ್ಲ ನಿಂದೆ ಚಿತಾವಣೆ ಅಂತ ಏಳ್ತೀವಿ” ಎಂದು ಧಮಕಿ ಹಾಕಿದ್ದರು. ಅವನು ಅಸಹಾಯಕನಾಗಿದ್ದ. ಎಲ್ಲಿಗೆ ಹೋಗುವುದು ಯಾರಲ್ಲಿ ಹೇಳುವುದು. ಹೇಗೆ ಈ ಅನಾಚಾರವನ್ನು ನಿಲ್ಲಿಸುವುದು ಎಂದು ಗೊತ್ತಾಗದೆ ಹಗಲುರಾತ್ರಿ ಒದ್ದಾಡಿ ಸುಮ್ಮನಾಗಿದ್ದ. ಆದರೆ ಊರಿನ ಪಡ್ಡೆಗಳು ಜಾತ್ರೆ ಶುರುವಾದ ರಾತ್ರಿ ತನ್ನದೇ ಕೋಳಿಗಳ ಕದ್ದೊಯ್ದು ತಿಂದಾಗ ಮಾತ್ರ ಅವನಿಗೆ ತಡೆದುಕೊಳ್ಳುವುದು ಸಾಧ್ಯವಾಗಿರಲಿಲ್ಲ.” ಈ ಎಲ್ಲವನ್ನು ನಿಲ್ಲಿಸಲೇಬೇಕು” ಎಂದು ಹಠತೊಟ್ಟು ನಡು ರಾತ್ರಿಯಲ್ಲಿ ಪೇಟೆಯಲ್ಲಿದ್ದ ಪೋಲೀಸ್ ಸ್ಟೇಷನ್ನಿಗೆ ಸೈಕಲ್ಲಿನಲ್ಲಿ ಹೊರಟಿದ್ದ..
———-/—————
“ಈಗೇನ್ ಮಾಡದು” ಛೇರ್‍ಮನ್ನರು ಗಂಭೀರವಾಗಿ ಕೇಳಿದರು
ಜಾತ್ರೆಯ ಜೋಶಿನಲ್ಲಿದ್ದ ಹೈದನೊಬ್ಬ ತುಸು ಕೋಪದಲ್ಲೇ “ಮಾಡೋದೇನೈತೆ ಊರ ಹೊರಗೆ ದಫನ್ ಮಾಡೋದು,” ಏಕ್ ಮಾರ್ ದೋ ತುಕಡಾ ಎಂಬಂತೆ ನುಡಿದ..ಅವನ ಮಾತಿಗೆ ಅಲ್ಲಿದ್ದ ಪಡ್ಡೆಗಳು “ಹೌದು ಹೌದು “ಶೃತಿ ಸೇರಿಸಿದರು.
ಆ ಮಾತು ಅಲ್ಲಿದ್ದ ಹಿರಿಯ ತಲೆಗಳಿಗೆ ಸರಿ ಕಾಣಲಿಲ್ಲ..ಸ್ವಲ್ಪ ಗಟ್ಟಿ ಸ್ವರದಲ್ಲಿ “ಅದು ಹೆಂಗಾಯ್ತದೆ, ಊರ ಹಿರಿಕ ಅವ್ನು ಈ ಹಳ್ಳಿಗೋಸ್ಕರ ದುಡಿದವ್ನೆ” ತಕರಾರು ಎತ್ತಿದರು..
ತಮ್ಮ ಮಾತಿಗೆ ಹೀಗೊಂದು ತಡೆ ಬರಬಹುದು ಎಂಬ ನಿರೀಕ್ಷೆಯಿಲ್ಲದ ಹೈದರಿಗೆ ಇರುಸುಮುರುಸಾದಂತೆ ಅನ್ನಿಸಿ, ದನಿ ಮತ್ತಷ್ಟು ಏರಿಸಿದರು..”ಹೂಂ ದುಡ್‍ದವ್ನೇ ದುಡ್‍ದವ್ನೇ, ಅದುಕ್ಕೆ ನಮ್ ಮೇಲೆ ಕಂಪ್ಲೇಟ್ ಕೊಡಕ್ಕೆ ಹೋಗಿದ್ನೇನೋ..ಬದುಕಿದ್ದಿದ್ರೆ ಇಷ್ಟು ಹೊತ್ತಿಗೆ ಪೋಲೀಸ್ನೋರು ಬಂದಿರೋರು” ಪಟ್ಟು ಬಿಡದೆ ಹೇಳಿದರು..
ತಾವೇನು ಕಡಿಮೆ ಎಂಬಂತೆ ಮಾತಿಗಿಳಿದ ಹಿರಿಯರೂ ಕೂಡ “ನೀವು ಅವ್ನು ಸಾಕಿದ್ ಕೋಳಿ ಕದ್ಕಂಡು ಬಂದುದ್ದು ತೆಪ್ಪಲ್ವಾ” ಮರು ಸವಾಲು ಹಾಕಿದರು..
“ಕದ್ದಂಗೆ ಎಂಗಾಯ್ತು, ನೂರಾರು ಕೋಳಿ ಮಡಿಕಂಡು, ಜಾತ್ರೆಗೆ ಕೊಯ್ಯಕ್ಕೆ ನಾಲ್ಕು ಕೋಳಿ ಕೊಡು ಅಂತ ನಿಯತ್ತಾಗಿ ಕೇಳುದ್ರೆ, ಕೊಡಲ್ಲ ಅಂದ ಅದುಕ್ಕೆ ಎತ್ತಾಕ್ಕಂಡು ಬಂದ್ವಿ” ತಮ್ಮ ತಪ್ಪನ್ನು ತೇಪೆ ಹಾಕಿಕೊಂಡರು. ಮಾತಿಗೆ ಮಾತು ಬೆಳೆಯತೊಡಗಿತು.. ಮಾತು ಅಡ್ಡ ದಾರಿ ಹಿಡಿಯುತ್ತಿರುವುದ ಕಂಡು, ಊರ ದೇವಸ್ಥಾನದ ಭಟ್ಟರು ಎಲ್ಲರನ್ನೂ ಸಮಾಧಾನಿಸುವ ನಿಟ್ಟಿನಲ್ಲಿ “ಶುಭ ನಡೀವಾಗ ಯಾರೇ ಸತ್ರು ಹೆಣ ಊರಿನ ಒಳಗೆ ತರಬಾರದು ಅನ್ನೋ ನಿಯಮ ನಡ್ಕಂಡು ಬರ್ತಿದೆ. ಹಾಗೊಂದು ವೇಳೆ ತರಲೇಬೇಕು ಅಂದ್ರೆ ಜಾತ್ರೆ ನಿಲ್ಲಿಸಿ, ದೇವಿಯನ್ನು ಊರ ಬಾಗಿಲಿನ ಹೊರಗೆ ಇಡಬೇಕಾಗತ್ತೆ. ಆದ್ರೆ ಅದು ಸರಿ ಅಲ್ಲ. ವರ್ಷಕ್ಕೊಂದು ಸರ್ತಿ ಮಾಡೋ ಜಾತ್ರೆ ನಿಲ್ಲಿಸಬಾರದು, ಒಂದು ಸರ್ತಿ ದೇವಿಗೆ ಕೋಪ ಬಂತು ಅಂದ್ರೆ, ಊರಿಗೆ ಒಳ್ಳೆದಾಗಲ್ಲ. ಈಗ ಹೇಗಿದ್ರು ಮಾದಣ್ಣನ ಹೆಣ ಆಸ್ಪತ್ರೆಯಲ್ಲಿದೆ. ಇನ್ನು ಅವ್ನು ಸಂಬಂಧಿಕ್ರು ಯಾರೋ ಏನೋ ಗೊತ್ತಿಲ್ಲ. ಅದಕ್ಕೆ ಯಾರಾದ್ರೂ ಒಂದಿಬ್ರು ಸೇರಿ ಊರ ಹೊರಗೆ ದಫನ್ ಮಾಡಿದರಾಯ್ತು” ಎನ್ನುತ್ತ ತಮ್ಮ ಮಾತು ಅಲ್ಲಿನವರ ಮನಸ್ಸಿಗೆ ನಾಟಿತೋ ಇಲ್ಲವೋ ಎನ್ನುವ ಪ್ರಶ್ನಾರ್ಥಕ ಚಿಹ್ನೆಯಲ್ಲಿ ಕೂತವರ ನೋಡಿದರು..
ಈ ವಿಷಯ ಅಲ್ಲಿದ್ದ ಎಲ್ಲರಿಗೂ ತಿಳಿದಿತ್ತಾದರೂ ಭಟ್ಟರು ಹೇಳಿದ ಮೇಲೆ ನೆನಪಾದವರಂತೆ ಹೌದೌದು ಎನ್ನುತ್ತ ತಲೆಯಾಡಿಸಿದರು.. ಆದರೆ ಮಾದಣ್ಣನ ಸರಿ ವಯಸ್ಸಿನ ಒಂದಿಬ್ಬರು ಮಾತ್ರ ಇದಕ್ಕೆ ಒಪ್ಪಲಿಲ್ಲ. “ಜೀವ ತೇಯ್ದವನೆ ಅವನು” ಈಗ ಬೀದಿ ಹೆಣ ಮಾಡೋದು ಬ್ಯಾಡ. ಊರ ದೇವಿಗೆ ತಪ್ಪು ಕಾಣಿಕೆ ಕಟ್ಟಿ ಜಾತ್ರೆ ನಿಲ್ಸುದ್ರಾಯ್ತು. ಅದೇನು ಮುಂದಿನ ವರ್ಷ ಮತ್ತೆ ಬತ್ತದೆ” ಎನ್ನುತ್ತ ಇಡಿಯ ಸಭೆಗೆ ಮನವಿ ಮಾಡಿದರು..
ಈ ಮಾತನ್ನು ಕೇಳಿದ್ದೇ ತಡ ಇಡೀ ಸಭೆಯಲ್ಲಿ ಗದ್ದಲ ಶುರುವಾಯಿತು.. ಹಿರಿಯರು ಸಣ್ಣ ದನಿಯಲ್ಲಿಯೇ “ಹಂಗೆ ಮಾಡಬೌದು” ಎಂದರೆ ಯುವಕರು “ಸಾಧ್ಯವೇ ಇಲ್ಲ” ಎನ್ನುತ್ತ ಎದ್ದು ಹೋಗಲು ಶುರು ಮಾಡಿದರು.. ಇನ್ನು ತಾನು ಸುಮ್ಮನಿದ್ದರೆ ಸರಿಯಲ್ಲವೆಂದು ಅರಿತ ಛೇರ್‍ಮನ್ನರು, “ಯಾರೂ ಬ್ಯಾಸ್ರೆ ಮಾಡ್ಕೋ ಕೂಡದು, ಸಮಸ್ಯೆ ಬಂದು ಕೂತೈತೆ, ಇಬ್ರೂ ಹೇಳದ್ರಲ್ಲೂ ದಿಟ ಐತೆ, ಅದುಕ್ಕೆ ಭಟ್ಟರು ಹೇಳಿದ ಹಂಗೆ, ಯಾರಾನಾ ಜವಾಬ್ದಾರಿ ತಕಂಡು ಊರ ಒರಗೆ ದಫನ್ ಮಾಡ್ರಿ.. ಜಾತ್ರೆ ಪಾಡಿಗೆ ಜಾತ್ರೆ ನಡೀಲಿ.” ಎನ್ನುವ ನಿರ್ಣಯ ಮುಂದಿಟ್ಟರು..
ಅಲ್ಲಿದ್ದ ಪ್ರತಿಯೊಬ್ಬರು ಒಬ್ಬರ ಮುಖ ಮತ್ತೊಬ್ಬರು ನೋಡತೊಡಗಿದರು. ಹತ್ತು ನಿಮಿಷಗಳು ಕಳೆದರೂ ಯಾರೊಬ್ಬರೂ ಮುಂದೆ ಬರಲಿಲ್ಲ.. ಕೂತಿದ್ದ ಹಿರಿಯರು ತಮ್ಮ ಮನೆಯ ಸದಸ್ಯರ ಕಡೆಗೆ ಅಸಹಾಯಕರಾಗಿ ನೋಡತೊಡಗಿದರು. ಕೊನೆಗೆ ಧೈರ್ಯ ಮಾಡಿದ ಹಣ್ಣು ಮುದುಕನೊಬ್ಬ “ದಫನ್ ಮಾಡ್ದೋರೆ ಕಾರ್ಯ ಮಾಡ್‍ಬೇಕಾಯ್ತದ” ಎನ್ನುವ ವಾಸ್ತವದ ಪ್ರಶ್ನೆಯೊಂದನ್ನು ಇರಿಸಿ, ಸಭೆಯನ್ನು ನೋಡತೊಡಗಿದ..
ಅಲ್ಲಿದ್ದವರೆಲ್ಲ “ಅಲ್ವೇ ಮತ್ತೆ” ಒಕ್ಕೊರಲಿನಿಂದ ನುಡಿದರು. ಅವ ಏನೊಂದು ಮಾತನಾಡದೆ ಸುಮ್ಮನೆ ಕೂತ. ಆ ನಂತರ ಮತ್ಯಾರು ಮೇಲೆಳುವ ಪ್ರಯತ್ನ ಮಾಡಲಿಲ್ಲ. ಯಾಕೋ ಸಮಸ್ಯೆ ಬಗೆಹರಿಯುವಂತೆ ಕಾಣದೆ ಇದ್ದಾಗ “ಏನನ್ನಾದರೂ ಬೇಗ ನಿರ್ಧರಿಸಬೇಕು” ಎನ್ನುವ ತರಾತುರಿಯಲ್ಲಿದ್ದ ಛೇರ್‍ಮನ್ನರು,” ಯಾರು ಮಾದಣ್ಣನ ಕಾರ್ಯ ಮಾಡುತ್ತಾರೋ ಅವರಿಗೆ ಮಾದಣ್ಣನ ಅಷ್ಟೂ ಕೋಳಿಗಳು ಸೇರುತ್ತದೆ” ಎಂದುಬಿಟ್ಟರು..
ಅವರು ಹಾಗಂದು ಬಾಯಿ ಮುಚ್ಚುವುದರೊಳಗೆ ದೊಡ್ಡದೊಂದು ಹುಯಿಲೇ ಎದ್ದು ಬಿಟ್ಟಿತು. “ಅದು ಹೆಂಗಾಯ್ತದೆ” ಎನ್ನುತ್ತ ಪ್ರತಿಯೊಬ್ಬರೂ ಛೇರ್‍ಮನ್ನರ ಮೇಲೇರಿ ಹೋದರು..”ಕೋಳಿ ಇಡೀ ಊರಿಗೆ ಸೇರ್‍ಬೇಕು” ಎನ್ನುತ್ತ ಬೊಬ್ಬೆ ಹಾಕತೊಡಗಿದರು. “ಛೇರ್‍ಮನ್ ಡೌನ್ ಡೌನ್ “ ಎಂದು ಕೂಗತೊಡಗಿದರು. ಛೇರ್‍ಮನ್ನರು ಎಷ್ಟೇ ಸಮಜಾಯಿಸಿಕೊಟ್ಟರೂ ಯಾರೊಬ್ಬರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಸಭೆ ಮತ್ತೆ ಗೊಂದಲದ ಗೂಡಾಯಿತು. ಛೇರ್‍ಮನ್ನರು ತಮ್ಮ ಮಾತನ್ನು ಹಿಂತೆಗೆದುಕೊಂಡರು.À” ಏನು ಮಾಡಬೇಕೆಂಬುದನ್ನು” ನೀವೇ ನಿರ್ಣಯಿಸಿ ಎಂದು ಕೈ ಕಟ್ಟಿ ಕೂತರು.. ಸ್ವಲ್ಪ ಹೊತ್ತು ಜೋರು ಜೋರಾಗಿ ವಿಚಾರ ವಿನಿಮಯಗಳು ನಡೆದವು. ಆ ನಂತರ ಎಲ್ಲರನ್ನೂ ಸಮಾಧಾನಿಸುವಂತೆ ಎದ್ದು ನಿಂತ ದಢೂತಿ ದೇಹದ ಮಧ್ಯ ವಯಸ್ಕನೊಬ್ಬ “ಯಾವನ್ದೋ ಸಲುವಾಗಿ ನಾವ್ ನಾವ್ ಒಡ್‍ದಾಡೋದು ಬ್ಯಾಡ, ಅವನೇನು ಈ ಊರ್‍ನವಲ್ಲ. ಎಲ್ಲಿಂದಲೋ ಬಂದು ಸೇರ್ಕಂಡೋನು, ಯಾರೂ ತಲೆಕೆಡ್ಸಿಕಳ್ಳದು ಬ್ಯಾಡ., ಮಾಡಕ್ಕೆ ಬೇಕಾದಷ್ಟು ಕ್ಯಾಮೆ ಅವೆ..ಪೋಲೀಸ್ನೋರ ಅತ್ರ ನಮ್ ಊರ್‍ಗೂ ಅವ್ನಿಗೂ ಏನೂ ಸಂಬಂಧ ಇಲ್ಲ ಅಂದುಬುಟ್ರಾಯ್ತು ಅವರೇ ದಫನ್ ಮಾಡ್ಕತಾರೆ” ಕಡ್ಡಿ ತುಂಡಾದಂತೆ ನುಡಿದುಬಿಟ್ಟ. ಹಿರಿ ತಲೆಗಳ ಬಿಟ್ಟು ಉಳಿಕೆಯವರೆಲ್ಲರೂ “ಅದೇ ಸರಿ, ಅದೇ ಸರಿ” ಎನ್ನುತ್ತ ಗಟ್ಟಿ ದನಿಯಲ್ಲಿ ಅನುಮೋದಿಸಿದರು. “ಅದು ಸರಿಯಲ್ಲ” ಎನ್ನುವ ಸಂದಿಗ್ಧತೆಯಲ್ಲಿದ್ದ ಛೇರ್‍ಮನ್ನರು ಮತ್ತೇನೋ ಹೇಳಲು ಅಣಿಯಾದರು. “ಇನ್ನೇನು ಹೇಳುವುದು ಉಳಿದಿಲ್ಲ” ಎನ್ನುವಂತೆ ಸನ್ನೆ ಮಾಡಿದ ಊರ ಮಂದಿ “ಸಮಸ್ಯೆ ಮುಗಿದ” ಸಂತಸದಲ್ಲಿ ದೇವಿಗೆ ಜೈಕಾರ ಹಾಕುತ್ತ ಹೊರಟೇಬಿಟ್ಟರು..

ಮತ್ತಷ್ಟು ಸುದ್ದಿಗಳು

Latest News

ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ: ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ, ತನಿಖೆಗೆ ಆಗ್ರಹ

newsics.com ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡವಿದೆಯಾ ಎಂಬ ಸಂಶಯವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ದುರಂತವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...
- Advertisement -
error: Content is protected !!