Tuesday, April 13, 2021

ಕೆಂಪಾದ ಹಾಲು

♦ ನೀತಾ ರಾವ್
response@134.209.153.225
newsics.com@gmail.com

ಸದಣ್ಣನಿಗೆ ಸೇಟಜಿಯ ಎಲ್ಲಾ ಮೊಮ್ಮಕ್ಕಳ ಮೇಲಿನ ಪ್ರೀತಿ ಒಂದು ತೂಕವಾದರೆ, ಈ ಗುಡಿಯಾಳ ಮೇಲಿನ ಪ್ರೀತಿಯದೇ ಒಂದು ತೂಕ. ತನ್ನ ಮನೆಯ ಆಕಳಿನ ಹಾಲು ಕುಡಿದು ಬೆಳೆದ ಹುಡುಗಿ ಎನ್ನುವ ಮಮಕಾರ ಅವನನ್ನು ಪುಟ್ಟ ಹುಡುಗಿಯೊಡನೆ ಬೆಸೆದಿತ್ತು. ಆಗೊಮ್ಮೆ ಈಗೊಮ್ಮೆ ಅದಕ್ಕೆ ಚಾಕಲೇಟು, ಬಿಸ್ಕೀಟು ಒಯ್ದು ಕೊಡುವನು. ಒಮ್ಮೊಮ್ಮೆ ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ತಿರುಗಾಡುವನು. ಗುಡಿಯಾ ಕೂಡ ಸದಣ್ಣ ಬಂದನೆಂದರೆ ಒಳಗಿನಿಂದ ಓಡಿಬರುವುದು, ಅವನ ತೊಡೆಯ ಮೇಲೆ ಕುಳಿತು ಕಿಸೆಯಲ್ಲಿ ಏನಾದರೂ ತಂದಿರುವನೇ ಎಂದು ಕೈಹಾಕುವುದು. ಒಮ್ಮೊಮ್ಮೆ ಅವನ ಕೈಹಿಡಿದುಕೊಂಡು ಹೊರರಸ್ತೆಯ ವರೆಗೂ ಬಂದು ಕಳಿಸಿ ಹೋಗುವುದು. ಮನೆಯ ಹೆಣ್ಣುಮಕ್ಕಳಿಗೂ ಸದಣ್ಣನೆಂದರೆ ಒಂಥರಾ ಮನೆಯ ಮನುಷ್ಯನೇ ಇದ್ದಂತೆ.

===

“ಬ್ಯಾಗ ಬಾರೇ ಮಾದೇವಿ, ನಿನ್ನ ಮಕದ ಛಂದ ಯಾರ ನೋಡ್ತಾರೀಗ? ಎಲ್ಲಾ ಮಂದಿ ಗುಡಿಯಾನ ಅಂದಛಂದ ನೋಡ್ತಾವ್ರೆ”, ತನ್ನ ಫಟಫಟಿಯನ್ನು ಫಟ ಫಟ ಅಂತ ಸ್ಟಾರ್ಟ ಮಾಡುತ್ತ ಅವಸರಿಸಿದ ಸದಣ್ಣ. ಮಾದೇವಿ ಗಡಬಡಿಸಿ ಹವಾಯಿ ಚಪ್ಪಲಿ ಮೆಟ್ಟಿಕೊಂಡು ಓಡಿಬಂದು ಅವನ ಹಿಂದೆ ಕೂತು ಭುಜವನ್ನು ಗಟ್ಟಿ ಹಿಡಿದುಕೊಂಡಳು. ಫಟಫಟಿಯ ಮೇಲಿನ ಅವರ ಅಪರೂಪದ ಜೋಡಿ-ಸವಾರಿ ಗೌಳಿಗರ ಗಲ್ಲಿ ದಾಟಿ ಸೀಮೋಲ್ಲಂಘನ ಮಾಡಿತು.
ಗುಡಿಯಾಳ ಮದುವೆ ಹತ್ತಿರ ಬರುತ್ತಿದ್ದಂತೆ ಅವರಿಬ್ಬರೂ ಗಡಬಡಿಸಿ ಇವತ್ತು ಅವಳಿಗೆ ಬೆಳ್ಳಿಗೆಜ್ಜೆ ಉಡುಗೊರೆ ಕೊಡಬೇಕೆಂದು ಅದರ ಖರೀದಿಗಾಗಿ ಪೇಟೆಗೆ ಹೊರಟಿದ್ದಾರೆ. ಈ ಗುಡಿಯಾ ಅಂದ್ರೆ ಸೇಟಜಿಯ ಮುದ್ದಿನ ಮೊಮ್ಮಗಳು ಮತ್ತು ಸೇಟಜಿ ಅಂದ್ರೆ ದೂರದ ರಾಜಸ್ಥಾನದಿಂದ ಎಂದೋ ಕಾಲದಲ್ಲಿ ಬಂದು ಇಲ್ಲಿ ತಳವೂರಿ ಸೀರೆಗಳ ದೊಡ್ಡ ಬಿಜನೆಸ್ ಮಾಡೋ ಸಾಹುಕಾರರು. ರಾಜಸ್ಥಾನದಿಂದ ಬಂದ ಸೇಟಜಿಗೂ, ಕರ್ನಾಟಕದ ಈ ಜಿಲ್ಲಾಕೇಂದ್ರದಲ್ಲಿ ತನ್ನ ಅಪ್ಪ ಕಟ್ಟಿಸಿದ ಮನೆಯಲ್ಲಿನ ಒಂದು ಭಾಗದಲ್ಲಿ ವಾಸ ಮಾಡಿಕೊಂಡು ಹಾಲು ಮಾರಾಟ ಮಾಡಿಕೊಂಡು ತನ್ನ ಸಂಸಾರದ ಬಂಡಿಯನ್ನು ಎಳೆಯುತ್ತಿರುವ ಸದಣ್ಣನಿಗೂ ಎತ್ತಣ ಸಂಬಂಧ ಎಂದು ನೀವು ಕೇಳಬಹುದು! ಸಂಬಂಧ ಇದೆ, ಅಂತಲೇ ನಾನವರ ಕಥೆ ಹೇಳಲು ಹೊರಟದ್ದು.
ಸೇಟಜಿಯ ರಾಜಸ್ಥಾನದಲ್ಲಿರುವ ಹುಟ್ಟೂರೂ ಬಿಸಿಲಿನ ಊರೇ, ಮತ್ತೆ ಮರಳಿನ ಧೂಳಿನಿಂದ ತುಂಬಿರುವಂಥದ್ದು. ಬಿರುಬೇಸಿಗೆಯ ರಣಬಿಸಿಲಿನಲ್ಲಿ ಕುಡಿಯುವ ನೀರಿಗಾಗಿ ಐದಾರು ಮೈಲಿ ನಡೆದು ಒಂದೊಂದು ಕೊಡ ನೀರು ತುಂಬಿಸಿಕೊಂಡು ಮನೆಗೆ ಬರುವಷ್ಟರಲ್ಲಿ ಹೈರಾಣಾಗಿ ಹೋಗುತ್ತಿದ್ದ ಹೆಣ್ಣುಮಕ್ಕಳ ಗೋಳನ್ನು ನೋಡಲಾಗದೇ ಸೇಟಜಿಯ ತಂದೆ ಮತ್ತು ಚಿಕ್ಕಪ್ಪ ತಮ್ಮ ಸಂಸಾರವನ್ನೆಲ್ಲ ಕಟ್ಟಿಕೊಂಡು ಗುಳೆ ಹೊರಟು ಕರ್ನಾಟಕಕ್ಕೆ ಬಂದವರು. ತಮ್ಮೂರಿನ ಬಿಸಿಲು, ಧೂಳು ಇರುವ ಊರನ್ನೇ ಆರಿಸಿಕೊಂಡು ಬೀಡು ಬಿಟ್ಟರೂ ಅಲ್ಲಿನಂತೆ ನೀರಿಗಾಗಿ ಅಲೆಯುವ ತಾಪತ್ರಯವಿಲ್ಲದೇ ಹೆಣ್ಣುಮಕ್ಕಳ ಮುಖದಲ್ಲಿ ಮಂದಹಾಸ ಮಿನುಗಿದ್ದನ್ನು ನೋಡಿ ಮರಭೂಮಿಯಲ್ಲಿ ಓಯಾಸಿಸ್ ಕಂಡಷ್ಟು ಸಂತಸಪಟ್ಟು ಈ ಊರಿನಲ್ಲಿಯೇ ಪಟ್ಟುಹಿಡಿದು ವ್ಯಾಪಾರ ಕುದುರಿಸಿದವರು. ಹಾಗೆ ನೋಡಿದರೆ ಎಲ್ಲೇ ಹೋದರೂ ವ್ಯಾಪಾರ ಮಾಡುವುದೆಂದರೆ ಅವರಿಗೆ ನೀರು ಕುಡಿದಷ್ಟೇ ಸುಲಭ. ಹಾಗಾಗಿ ಬಟ್ಟೆ ಅಂಗಡಿ ಚೆನ್ನಾಗಿಯೇ ಬೆಳೆಯಿತು. ಆದರೆ ಅಪ್ಪ ಮತ್ತು ಚಿಕ್ಕಪ್ಪನ ಕಾಲದ ಅಂಗಡಿಗಳು ಸೇಟಜಿಯ ಕಾಲದಲ್ಲಿ ದೊಡ್ಡ ಜವಳಿ ಮಳಿಗೆಗಳಾದವು. ಎರಡು ಮನೆಗಳಾದವು. ಸುತ್ತಮುತ್ತಲಿನ ಹಳ್ಳಿಗಳ ಜನ ಮದುವೆ, ಮುಂಜಿವೆ ಏನೆಲ್ಲ ಸಮಾರಂಭಗಳಿಗೆ ಇವರ ಅಂಗಡಿಯಲ್ಲೇ ವ್ಯಾಪಾರ ಮಾಡುತ್ತಾರೆ. ಯಾವುದೇ ಊರಿನಲ್ಲಿ ವ್ಯಾಪಾರ ಮಾಡಬೇಕೆಂದರೆ ಆ ಊರಿನ ನೆಲದ ಭಾಷೆ ತಮ್ಮ ನಾಲಿಗೆಯ ಮೇಲೆ ನಲಿಯಬೇಕು ಎನ್ನುವ ಸತ್ಯವನ್ನು ಅವರೆಲ್ಲರೂ ಎಂದೋ ಅರಿತವರು. ಹಾಗಾಗಿ ಕನ್ನಡವನ್ನೇ ಮಾತನಾಡುತ್ತ ಬಂದ ಜನರೊಡನೆ ಬೆರೆತು ತಮ್ಮ ವ್ಯಾಪಾರವನ್ನೂ ವೃದ್ಧಿಸಿಕೊಂಡು ಇಲ್ಲಿನವರೇ ಆಗಿ ಬೆರೆತು ಹೋದವರು. ಸೇಟಜಿಯ ಯೌವನದಲ್ಲಿ ರಾಜಸ್ಥಾನದಿಂದಲೇ ಹೆಣ್ಣು ತಂದು ಮದುವೆ ಮಾಡುವ ಪದ್ಧತಿ ಇದ್ದುದರಿಂದ ಸೇಟಜಿ ಮತ್ತವರ ಅಣ್ಣತಮ್ಮಂದಿರ ಮದುವೆಗಳೆಲ್ಲ ರಾಜಸ್ಥಾನದಲ್ಲಿಯೇ ಆದವು. ಆದರೆ ಅವರ ಮಕ್ಕಳ ಕಾಲದಲ್ಲಿ ಈ ತಾಪತ್ರಯವೂ ಇರಲಿಲ್ಲ. ಇವರಂತೆಯೇ ವಲಸೆ ಬಂದು ಇಲ್ಲಿಯೇ ಬೇರೆ ಬೇರೆ ವ್ಯಾಪಾರ-ವ್ಯವಹಾರ ಆರಂಭಿಸಿ ಇಲ್ಲಿಯೇ ಗಟ್ಟಿಯಾಗಿ ಬೇರುಬಿಟ್ಟ ಅನೇಕ ರಾಜಸ್ಥಾನಿ ಕುಟುಂಬಗಳ ಮಕ್ಕಳೂ ಕನ್ನಡ ಕಲಿತು ಇಲ್ಲಿನ ಮಣ್ಣಿನ ವಾಸನೆಯೊಂದಿಗೆ ಬೆರೆತವರು, ಮದುವೆಗಾಗಿ ದೂರದ ರಾಜಸ್ಥಾನದ ವರೆಗೆ ಹೋಗುವ ಮನಸ್ಸು ಮಾಡಲೇ ಇಲ್ಲ. ಇಲ್ಲಿಯೇ ನೂರಿನ್ನೂರು ತಪ್ಪಿದರೆ ಐದುನೂರು ಕಿಲೊಮೀಟರಗಳ ಅಂತರದಲ್ಲಿ ಗಂಡುಹೆಣ್ಣುಗಳ ಕೊಡುಕೊಳ್ಳುವಿಕೆ ನಡೆದು ಅವರ ಮೂಲ ಮನೆಗಳು, ಅವರ ಮನೆದೇವರು, ದೇವಸ್ಥಾನಗಳು ಎಲ್ಲ ವರ್ಷಕ್ಕೊಮ್ಮೆ ಮಾತ್ರ ಪ್ರವಾಸದಂತೆ ಹೋಗಿ ಆಯಾಸ ಕಳೆದುಕೊಂಡು ಬರುವ ತಾಣಗಳಾದವು. ಸೇಟಜಿಯ ಮೂರೂ ಗಂಡುಮಕ್ಕಳಿಗೆ ಇಲ್ಲಿಯೇ ನೆಲೆನಿಂತ ರಾಜಸ್ಥಾನಿ ಕುಟುಂಬಗಳ ಹೆಣ್ಣು ತಂದು, ಇರುವ ಒಬ್ಬಳು ಮಗಳನ್ನು ಇಲ್ಲಿಯೇ ಬೆಂಗಳೂರಲ್ಲಿ ವ್ಯಾಪಾರ ಮಾಡುವ ಮನೆಗೆ ಕೊಟ್ಟು ಮದುವೆಯಾಗಿತ್ತು.
ಇಂಥ ಸೇಟಜಿಯ ತಂದೆ ಕಟ್ಟಿಸಿದ್ದ ದೊಡ್ಡ ಮನೆಯ ಮುಂದೆ ಹಾದುಹೋಗುತ್ತಲೊಮ್ಮೆ ಬಾಯಾರಿ ನಿಂತ ಸದಣ್ಣ ಕುಡಿಯಲು ನೀರು ಕೇಳಿದ. ನೀರಿನ ಬವಣೆಯನ್ನು ಅನುಭವಿಸಿ ಬಲ್ಲ ಸೇಟಜಿಯ ಮನೆಯವರೆಂದೂ ನೀರಿಗೆ ಇಲ್ಲವೆಂದವರಲ್ಲ. ತಮ್ಮ ಅಂಗಡಿಯ ಮುಂದಂತೂ ಪ್ರತೀ ಬೇಸಿಗೆಯಲ್ಲೂ ನೀರಿನ ಹೂಜಿಯೊಂದಿಗೆ ಲೋಟವನ್ನೂ ಇಟ್ಟು ದಾರಿಹೋಕರ ಬಾಯಾರಿಕೆಯನ್ನು ತಣಿಸುವ ಪದ್ಧತಿಯನ್ನು ಎಂದಿನಿಂದಲೋ ನಡೆಸಿಕೊಂಡು ಬಂದಿದ್ದ ಅವರು ಮನೆಗೆ ಬಂದು ನೀರು ಕೇಳಿದವರಿಗೂ ಪ್ರೀತಿಯಿಂದಲೇ ನೀರು ಕೊಡುವವರು. ಆರಾಮ ಕುರ್ಚಿಯ ಮೇಲೆ ಕುಳಿತು ಯಾವದೋ ಪುಸ್ತಕವನ್ನು ಹಿಡಿದುಕೊಂಡಿದ್ದ ಸೇಟಜಿ ಒಳಗೆ ಹೆಣ್ಣುಮಕ್ಕಳಿಗೆ ನೀರು ತರಲು ಕೂಗಿ ಹೇಳಿದರು. ನೀರು ಬರುವ ತನಕ ಆ ದೊಡ್ಡ ಮನೆಯ ದೊಡ್ಡ ಜಗಲಿಕಟ್ಟೆಯನ್ನೇ ಕೌತೂಕದಿಂದ ನೋಡುತ್ತ ಕುಳಿತಿದ್ದ ಸದಣ್ಣ ಒಮ್ಮಿಲೇ “ಸಾವಕಾರ್ರೇ, ನಾನು ಹಾಲು ಮಾರ್ತೇನೆ. ನಿಮಗೆ ಬೇಕಂದ್ರೆ ದಿನಾಲೂ ತಂದುಕೊಡ್ತೇನೆ” ಅಂದ. ಇಷ್ಟು ದೊಡ್ಡ ಮನೆಯಲ್ಲಿ ಜನವೂ ಸಾಕಷ್ಟಿರಬಹುದು ಎಂದು ಅಂದಾಜಿಸಿದ್ದ ಅವನು. “ಎಷ್ಟು ಎಮ್ಮೆ ಇವೆಯೋ ನಿನ್ನ ಹತ್ರ?” ತುಸು ಗತ್ತಿನಲ್ಲೇ ಕೇಳಿದ್ದರು ಸೇಟಜಿ. “ಎರಡೆಮ್ಮೆ ಇವೆ. ಒಳ್ಳೆ ಗಟ್ಟಿ ಹಾಲು, ಒಂದಿನ ತೊಗೊಂಡು ನೋಡಿ” ಎಂದ. “ನಾಳೆಯಿಂದ ಐದು ಲೀಟರ ಹಾಕು, ಕ್ಯಾನು ನಾವೇ ಕೊಡ್ತೇವೆ” ಎಂದು ಒಂದೇ ಮಾತಿನಲ್ಲಿ ಹೇಳಿಬಿಟ್ಟಿದ್ದರು. ಸ್ವತಃ ವ್ಯಾಪಾರಸ್ಥರಾದ ಸೇಟಜಿ ಸುಖಾಸುಮ್ಮನೆ ಜನರನ್ನು ಸಂಶಯಿಸುವವರಲ್ಲ. ಹೀಗೆ ಶುರುವಾದ ಸದಣ್ಣನ ಸೇಟಜಿಯ ಮನೆಯ ಹಾಲಿನ ವ್ಯಾಪಾರ ಕಾಯಂ ಆಗಿ ಮುಂದುವರೆಯಿತು. ಸೇಟಜಿ ದೊಡ್ಡ ಮನಸ್ಸಿನ ದೊಡ್ಡ ವ್ಯಕ್ತಿ. ಸದಣ್ಣ ಬಡವನಾದರೂ ಪ್ರಾಮಾಣಿಕತನಕ್ಕೆ ಅವನಲ್ಲಿ ಬಡತನವಿಲ್ಲ. ಒಂದೇ ಮಾತಿಗೆ ಐದು ಲೀಟರ್ ಹಾಲು ಹಾಕು ಎಂದು ತನಗೆ ವ್ಯಾಪಾರ ಒದಗಿಸಿಕೊಟ್ಟ ಸೇಟಜಿಯ ಮೇಲೆ ಅವನಿಗೇನೋ ಮಾತುಗಳಲ್ಲಿ ವರ್ಣಿಸಲಾಗದ ಭಕ್ತಿ ಮತ್ತು ಪ್ರೀತಿ. ಅವರ ಮನೆಯ ಮೊಮ್ಮಕ್ಕಳೆಲ್ಲ ತನ್ನ ಮನೆಯ ಹಾಲು ಕುಡಿದೇ ದೊಡ್ಡವರಾದರು ಎನ್ನುವ ಅಭಿಮಾನ ಮತ್ತು ಹೆಮ್ಮೆ.
ಸೇಟಜಿಯ ಮೊದಲ ಎರಡು ಮಕ್ಕಳಿಗೂ ಎರಡು ಮತ್ತು ಮೂರು ಗಂಡುಮಕ್ಕಳೇ ಆದವು. ಅದರ ಬಗ್ಗೆ ಅವರಿಗೆಲ್ಲ ಖುಷಿಯೇ. ತಮ್ಮ ಬಿಸಿನೆಸ್ಸನ್ನು ಮುಂದುವರೆಸಿಕೊಂಡು ಹೋಗಲು ಮನೆತುಂಬ ಗಂಡುಮಕ್ಕಳಾಗಲಿ ಎಂತಲೇ ಅವರೆಲ್ಲ ಆಶಿಸುವುದು. ಅದಕ್ಕೆ ತಕ್ಕಂತೆ ಇಡೀ ಮನೆ ಗಂಡುಗೋವಿಗಳಿಂದ ತುಂಬಿಹೋಗಿತ್ತು. ಅವರ ತುಂಟಾಟ, ಊಟ, ಕೆಲಸ ಎಂದು ಮನೆಯ ಹಿರಿಯ ಸೇಟಾಣಿ ಮತ್ತವಳ ಮೂರೂ ಮಂದಿ ಸೊಸೆಯರು ಇಡೀ ದಿನ ಮನೆತುಂಬ ಓಡಾಡಿ ಓಡಾಡಿ ಕೆಲಸ ಮಾಡಿ ದಣಿಯುತ್ತಿದ್ದರು. ಅಂಗಡಿಗಳ ಬಾಗಿಲು ಮುಚ್ಚಿ ಒಬ್ಬಬ್ಬರಾಗಿ ಬರುವ ಗಂಡಸರಿಗೆ ಊಟ ಬಡಿಸಿ ರಾತ್ರಿಯ ಪಾತ್ರೆಗಳನ್ನೆಲ್ಲ ತಪ್ಪದೇ ತೊಳೆದಿಟ್ಟೇ ಅವರು ಮಲಗುವ ಹೊತ್ತಿಗೆ ಅವರ ಗಂಡಂದಿರು ಒಂದು ಝೊಂಪು ನಿದ್ದೆ ತೆಗೆದು ಆಕಳಿಸಿ ತಡವಾಗಿ ಬರುವ ಹೆಂಡಂದಿರನ್ನು ತೆಕ್ಕೆಗೆ ತೆಗೆದುಕೊಳ್ಳುವಷ್ಟರಲ್ಲಿ ನಡುರಾತ್ರಿ ಹನ್ನೆರಡಾಗಿ ಹೋಗಿರುತ್ತಿತ್ತು. ಮತ್ತೆ ಬೆಳಗ್ಗೆ ಆರು ಗಂಟೆಗೇ ಎದ್ದು ಅವರ ನಿತ್ಯದ ಕಾಯಕ ಶುರು. ಒಂದು ದಿನವೂ ತಪ್ಪದೇ ನಡೆಯುವ ಇಂಥ ಚಕ್ರದ ಬದುಕಿನಲ್ಲಿ ಅಪರೂಪದ ಸಂಗತಿಯೊಂದು ಜರುಗಿತು. ಅವರ ಕಿರಿಯ ಸೊಸೆಗೆ ಮುದ್ದಾದ ಹೆಣ್ಣುಮಗುವೊಂದು ಜನಿಸಿದ ಸುದ್ದಿ ಅವಳ ತೌರುಮನೆಯಿಂದ ಸಿಗುತ್ತಲೇ ಇಡೀ ಮನೆ ಮಂದಿ ಪುಳಕಿತರಾಗಿಬಿಟ್ಟರು. ಸೊಸೆಯ ತೌರುಮನೆಯಲ್ಲಿ ಒಂದು ತಿಂಗಳಾದರೂ ಕಳೆದಿತ್ತೋ ಇಲ್ಲವೋ ಓಡಿಹೋಗಿ ಸೊಸೆಯನ್ನೂ ಮಗುವನ್ನೂ ಕರೆದುತಂದು ಬಿಟ್ಟರು. ಗಂಡುಮಕ್ಕಳೇ ಬೇಕೆಂದು ಹಪಹಪಿಸುವ ವ್ಯಾಪಾರಿ ಮನೋಭಾವದ ಕುಟುಂಬದಲ್ಲೂ ಪುಟ್ಟಹೆಣ್ಣು ಮಗು ಸಂತಸದ ಬೆಳದಿಂಗಳನ್ನು ಹರಡಿಬಿಟ್ಟಿತು. ಗಂಡುಹುಡುಗರೆಲ್ಲ ಕಣ್ಣರಳಿಸಿ ಮಗುವಿನ ಪುಟ್ಟಪುಟ್ಟ ಕೈಬೆರಳಗಳನ್ನು ನೋಡುತ್ತ ಮುಟ್ಟಲೋ ಬೇಡವೋ ಎಂದು ಹೆದರುತ್ತ ಅದರ ಸುತ್ತಲೂ ನೆರೆದರೆ ಅಜ್ಜ ಬಂದು ತನ್ನ ನಾಜೂಕಿನ ಮೊಮ್ಮಗಳಿಗೆಲ್ಲಿ ತೊಂದರೆಯಾದೀತೋ ಎಂದು ಗಂಡುಹುಡುಗರನ್ನು ಗದರಿಸಿ ಅಲ್ಲಿಂದ ಓಡಿಸಿಬಿಡುತ್ತಿದ್ದರು. ನಂತರ ಅದರ ಕಮಲದ ದಳದಂಥ ಬೆರಳುಗಳನ್ನು ಕೌತುಕದಿಂದ ಮುಟ್ಟಿನೋಡುವ ಸರದಿ ಅವರದು.
ಆದರೆ ಈ ಎಲ್ಲ ವೈಭವದ ನಡುವೆ ನೋವೊಂದು ಕಾಣಿಸಿತು. ಮಗುವಿನ ತಾಯಿಗೆ ಎದೆಹಾಲಿನ ಕೊರತೆ ವಿಪರೀತ ಕಾಡಿತು. ಎರಡು ತಿಂಗಳಿನ ನಂತರ ಹೆಚ್ಚೂಕಡಿಮೆ ಬತ್ತಿಯೇ ಹೋಯಿತು. ಮನೆಯ ಜನ ತಲೆಯ ಮೇಲೆ ಕೈಹೊತ್ತು ಕುಳಿತುಬಿಟ್ಟರು. ಒಂದು ದಿನ ಮುಂಜಾನೆ ಹತ್ತುಗಂಟೆಯ ಸಮಯಕ್ಕೆ ಎಂದಿನಂತೆ ಹಾಲು ಹಾಕಲು ಸದಣ್ಣ ಅವರ ಮನೆಬಾಗಿಲಿಗೆ ಹೋಗಿ ನಿಲ್ಲುವುದಕ್ಕೂ, ಅಳುವ ಮಗುವನ್ನೆತ್ತಿಕೊಂಡು ರಮಿಸುತ್ತ ಅದರ ತಾಯಿ, ಹಿಂದಿನಿಂದ ಅದರ ಅಪ್ಪ, ಅಜ್ಜ, ಅಜ್ಜಿ ರೇಲ್ವೆ ಬೋಗಿಗಳಂತೆ ಒಬ್ಬರ ಹಿಂದೊಬ್ಬರು ಬರುವುದಕ್ಕೂ ಸರಿ ಹೋಯಿತು. ಸದಣ್ಣ ಸಹಜವಾಗಿಯೇ ಸೇಟಜಿಯನ್ನು ಕೇಳಿದ. ತಾಯಿಯ ಹಾಲಿಲ್ಲದೇ ಮಗು ಹೊಟ್ಟೆತುಂಬದೇ ಅಳುತ್ತಿರುವ ವಿಷಯವನ್ನು ತಿಳಿದು ಒಂದೆರಡು ನಿಮಿಷ ಯೋಚಿಸಿದವನೇ “ಸೇಟಜಿ, ನಮ್ಮ ಎಮ್ಮೆಯ ಹಾಲು ಶುದ್ಧವಾಗಿರುತ್ತದೆ. ಅದಕ್ಕೆ ಸಮಸಮ ನೀರು ಬೆರೆಸಿ ಕುದಿಸಿ ಕುಡಿಸಿದರೆ ಮಗುವಿಗೆ ಏನೂ ತೊಂದರೆಯಿಲ್ಲ” ಎಂದ. ಸೇಟಜಿ ಕೂಡ ಒಂದು ನಿಮಿಷ ಸುಮ್ಮನೇ ಯೋಚಿಸಿ, “ಸದಣ್ಣಾ ಒಂದು ಕೆಲಸ ಮಾಡು, ನಾನೇ ದುಡ್ಡು ಕೊಡುತ್ತೇನೆ. ಒಂದೊಳ್ಳೆ ಆಕಳು ಖರೀದಿಸು. ಆಕಳಿನ ತೆಳುವಾದ ಹಾಲು ತಾಯಿಯ ಹಾಲಿನಂತೆಯೇ ಆಗುತ್ತದೆ” ಎಂದು ಹೆಂಡತಿಯ ಕಡೆ ನೋಡಿದರು. ಅವರಿಗೂ ಸೇಟಜಿಯ ಸಲಹೆ ಹಿಡಿಸಿತ್ತು. ಹೀಗೆ ಸದಣ್ಣನ ಮನೆಯ ಆಕಳಿನ ಹಾಲು ಕುಡಿದು ಎಲ್ಲರ ಮುದ್ದಿನ ಹುಡುಗಿ ಗುಡಿಯಾ ಬೆಳೆಯತೊಡಗಿದಳು.
ಸದಣ್ಣನಿಗೆ ಸೇಟಜಿಯ ಎಲ್ಲಾ ಮೊಮ್ಮಕ್ಕಳ ಮೇಲಿನ ಪ್ರೀತಿ ಒಂದು ತೂಕವಾದರೆ, ಈ ಗುಡಿಯಾಳ ಮೇಲಿನ ಪ್ರೀತಿಯದೇ ಒಂದು ತೂಕ. ತನ್ನ ಮನೆಯ ಆಕಳಿನ ಹಾಲು ಕುಡಿದು ಬೆಳೆದ ಹುಡುಗಿ ಎನ್ನುವ ಮಮಕಾರ ಅವನನ್ನು ಪುಟ್ಟ ಹುಡುಗಿಯೊಡನೆ ಬೆಸೆದಿತ್ತು. ಆಗೊಮ್ಮೆ ಈಗೊಮ್ಮೆ ಅದಕ್ಕೆ ಚಾಕಲೇಟು, ಬಿಸ್ಕೀಟು ಒಯ್ದು ಕೊಡುವನು. ಒಮ್ಮೊಮ್ಮೆ ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ತಿರುಗಾಡುವನು. ಗುಡಿಯಾ ಕೂಡ ಸದಣ್ಣ ಬಂದನೆಂದರೆ ಒಳಗಿನಿಂದ ಓಡಿಬರುವುದು, ಅವನ ತೊಡೆಯ ಮೇಲೆ ಕುಳಿತು ಕಿಸೆಯಲ್ಲಿ ಏನಾದರೂ ತಂದಿರುವನೇ ಎಂದು ಕೈಹಾಕುವುದು. ಒಮ್ಮೊಮ್ಮೆ ಅವನ ಕೈಹಿಡಿದುಕೊಂಡು ಹೊರರಸ್ತೆಯ ವರೆಗೂ ಬಂದು ಕಳಿಸಿ ಹೋಗುವುದು. ಮನೆಯ ಹೆಣ್ಣುಮಕ್ಕಳಿಗೂ ಸದಣ್ಣನೆಂದರೆ ಒಂಥರಾ ಮನೆಯ ಮನುಷ್ಯನೇ ಇದ್ದಂತೆ. ಹಾಗಾಗಿ ಆಗಾಗ ಚಹಾ ಕೊಡುವರು, ಅವನ ಮನೆಯ ಸುದ್ದಿಯನ್ನೆಲ್ಲ ಕೇಳಿ ತಿಳಿದುಕೊಳ್ಳುವರು. ಗುಡಿಯಾಗೆ ಚಾಕಲೇಟು ತಂದುಕೊಟ್ಟು ಅವಳ ಹಲ್ಲುಗಳನ್ನು ಹಾಳು ಮಾಡುತ್ತೀ ಎಂದು ರೇಗುವರು. ಸದಣ್ಣನಿಗೂ ಅವರ ಮನೆಯ ವರ್ತನೆ ಸಿಕ್ಕ ಮೇಲೆ ಬೇರೆಯವರ ಮನೆಗೆ ಹೋಗಿ ಹಾಲು ಹಾಕುವುದು ತಪ್ಪಿಯೇಹೋಯಿತು. ಹಾಲು ಹೆಚ್ಚಾದಷ್ಟೂ ಸೇಟಜಿಯ ಮನೆಗೇ ಹಾಕಿದರಾಯಿತು. ಬೆಳೆಯುವ ಮಕ್ಕಳಿದ್ದ ದೊಡ್ಡ ಕೂಡುಕುಟುಂಬದಲ್ಲಿ ಎಷ್ಟು ಹಾಲಿದ್ದರೂ ಬೇಕೇ ಆಗಿತ್ತು. ಮನೆಗೆ ಬಂದು ಹೋಗಿ ಮಾಡುವ ಸಾಕಷ್ಟು ಮಾರ್ವಾಡಿ ಕುಟುಂಬಗಳಿದ್ದವು. ಹೀಗಾಗಿ ಇವರ ಮನೆಯಲ್ಲಿ ಅರ್ಧ ತಾಸು ಕುಳಿತುಕೊಂಡೇ ಹೋಗುವ ರೂಢಿಯಾಗಿತ್ತು ಅವನಿಗೂ.
“ಈ ವರ್ಷ ವಿಶ್ವನಾಥನ ಲಗ್ನ ಮಾಡಿಬಿಡಬೇಕು ನಾವೂ”, ಹಿಂದಿನಿಂದ ಮಾದೇವಿ ಜೋರಾಗಿ ಹೇಳಿದಾಗಲೇ ಸದಣ್ಣ ಸೇಟಜಿಯವರ ಮನೆಯ ಆ ಲೋಕದಿಂದ ತನ್ನ ಲೋಕಕ್ಕೆ ಬಂದ. ಅವನ ಈ ಲೋಕದಲ್ಲಿ ಅವನ ಎರಡು ಮಕ್ಕಳಿದ್ದಾರೆ. ಅಪ್ಪ ಕಟ್ಟಿಸಿದ ಮನೆಯನ್ನೇ ಎರಡು ಭಾಗವಾಗಿ ಮಾಡಿ ಒಂದು ಭಾಗದಲ್ಲಿ ಸದಣ್ಣನ ಸಂಸಾರ, ಇನ್ನೊಂದು ಭಾಗದಲ್ಲಿ ಅವನ ಅಣ್ಣನ ಕುಟುಂಬ ಇದ್ದಾರೆ. ಮನೆ ಪಾಲು ಮಾಡುವಾಗ ಅಣ್ಣ ತನ್ನ ಸಂಸಾರ ದೊಡ್ಡದು, ತನಗೊಂದು ಖೋಲಿ ಹೆಚ್ಚಿಗೆ ಬಿಟ್ಟುಕೊಡೆಂದಾಗ ತಕರಾರು ಮಾಡದೇ ಬಿಟ್ಟುಕೊಟ್ಟವ ಸದಣ್ಣ. ಒಳಗೊಳಗೇ ಒಟ ಒಟ ಮಾಡುತ್ತಿದ್ದ ಮಾದೇವಿಯನ್ನು ಬೈದು ಸುಮ್ಮನಿರಿಸಿದ್ದ. ’ನಾವೇನೂ ದುಡಿಯಲಿಲ್ಲ, ಕಟ್ಟಲಿಲ್ಲ. ಏನೋ ದೊಡ್ಡ ಊರಿನಲ್ಲಿ ಅಪ್ಪ ಕಷ್ಟಪಟ್ಟು ಮಾಡಿದ ಮನೆಯೊಂದು ಇರುವುದರಿಂದ ಎಷ್ಟೋ ಅನುಕೂಲವಾಗಿದೆ. ನಾಲ್ಕು ಮಕ್ಕಳಿರುವ ಅಣ್ಣನಿಗೆ ಒಂದು ರೂಮು ಹೆಚ್ಚು ಬಿಟ್ಟುಕೊಟ್ಟರೆ ನಂದಾದರೂ ಹೋಗುವುದೇನು?’ ಎಂದು ಸಮಾಧಾನ ಪಟ್ಟುಕೊಂಡಿದ್ದ. ಇವನಿಗೆ ಹಿರಿಯ ಮಗಳು ಗೌರಿ, ಅವಳ ಬೆನ್ನಮೇಲೆ ಕಿರಿಯ ಮಗ ವಿಶ್ವನಾಥ. ಮೂರು ವರ್ಷಗಳ ಹಿಂದಷ್ಟೇ ಸೇಟಜಿಯ ಹತ್ತಿರವೇ ಸಾಲ ತೆಗೆದುಕೊಂಡು ಗೌರಿಯ ಮದುವೆ ಮಾಡಿ ಮುಗಿಸಿದ್ದ. ಮದುವೆಯ ಜವಳಿ ಖರೀದಿಯೂ ಸೇಟಜಿಯ ಅಂಗಡಿಯಿಂದಲೇ, ಅದೂ ಉದ್ರಿ ಮೇಲೆ. ಹಾಲಿನ ಬಿಲ್ಲಿನಲ್ಲಿ ಅರ್ಧ ದುಡ್ಡು ಮುರಿದುಕೊಳ್ಳುವ ಕರಾರಿನ ಮೇಲೆ ಸಾಲ, ಉದ್ರಿ ಎಲ್ಲಾ. ಇವನು ದುಡಿದು ದುಡಿದು ಕೂಡಿಟ್ಟ ಅಷ್ಟಿಷ್ಟು ಹಣವೂ ಮಗನ ಶಿಕ್ಷಣಕ್ಕೇ ಖರ್ಚಾಗಿತ್ತು. ಪಿಯುಸಿಯಲ್ಲಿ ಒಳ್ಳೆಯ ಮಾರ್ಕು ತೆಗೆದ ಮಗನನ್ನು ಕರೆದುಕೊಂಡು ಸೇಟಜಿಯ ಅಂಗಡಿಗೆ ಹೋದಾಗ ಅತ್ಯಂತ ಖುಷಿ ಪಟ್ಟಿದ್ದರು ಸೇಟಜಿ. “ಎಂಥಾ ಪುಣ್ಯವಂತನಯ್ಯಾ ಸದಣ್ಣಾ ನೀನು. ಒಳ್ಳೆ ಮಗ ಹುಟ್ಟಿದ ನಿನಗೆ. ದುಡ್ಡಿನ ಕಾಳಜಿ ಮಾಡಬೇಡ, ಅವನು ಏನು ಓದುತ್ತಾನೋ ಓದಿಸು, ನಾನು ಸಹಾಯ ಮಾಡುತ್ತೇನೆ” ಎಂದಿದ್ದರು. ಅವರ ಧೈರ್ಯದ ಮೇಲೆಯೇ ಸದಣ್ಣ ಮಗನನ್ನು ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ. ಅವನ ಫೀ, ಹಾಸ್ಟೆಲ್ ಖರ್ಚು ಅನ್ನುತ್ತ ಸದಣ್ಣ ದುಡಿದ ದುಡ್ಡೆಲ್ಲ ಕರಗುತ್ತಿತ್ತು. ಸೇಟಜಿಯ ಕಡೆ ಅವನು ಮಾಡುವ ಸಾಲ ಯಾವತ್ತೂ ತೀರುವುದೇ ಇಲ್ಲವೇನೋ ಎಂದು ಕೆಲವೊಮ್ಮೆ ಅವನಿಗೆ ಭಯವಾಗುತ್ತಿತ್ತು. ಸಾಲವಿಲ್ಲದೇ ತನ್ನ ಬದುಕಿನ ಗಾಲಿ ಮುಂದಕ್ಕೆ ಹೋಗುವುದೇ ಇಲ್ಲವೇನೋ ಎಂದುಕೊಳ್ಳುತ್ತಿದ್ದ. ಆದರೆ ಮಗನ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೇ ಅವನಿಗೆ ಬೆಂಗಳೂರಿನಲ್ಲಿ ಒಳ್ಳೆಯ ಕಂಪನಿಯಲ್ಲಿ ನೌಕರಿ ಸಿಕ್ಕಿ ಎರಡೇ ವರ್ಷಗಳಲ್ಲಿ ಸೇಟಜಿಯ ಅಷ್ಟೂ ಸಾಲವನ್ನು ತೀರಿಸಿಬಿಟ್ಟ. “ಇನ್ನು ಸಾಕು ನಿಮ್ಮ ಹಾಲಿನ ವ್ಯಾಪಾರ, ಬೆಂಗಳೂರಿಗೆ ಬರ್ರಿ” ಎಂದು ಮಗ ಕರೆದರೂ ಇವರಿಗೆ ಹೋಗುವುದಾಗಲಿಲ್ಲ. ” ಅಲ್ಲಿ ಬಂದು ಖಾಲಿ ಕೂಡುವುದು ನಮ್ಮಿಂದಾಗದ ಕೆಲಸ, ಕೈಕಾಲು ಆಡುವ ತನಕ ನಮ್ಮ ಕೆಲಸ ನಾವು ಮಾಡಿಕೊಂಡು ಇರುತ್ತೇವೆ” ಎಂದು ಕೈ ಝಾಡಿಸಿಬಿಟ್ಟರು.
ಈ ಎಲ್ಲ ಜಂಜಡಗಳ ಮಧ್ಯೆ ಮೆಲ್ಲಮೆಲ್ಲನೇ ಅರಳುತ್ತ ಗುಡಿಯಾ ಎಂಬ ಪುಟ್ಟ ಬೊಂಬೆ ಯುವತಿಯಾಗಿಬಿಟ್ಟಿದ್ದಳು. ಅವಳು ಕಾಲೇಜಿಗೆ ಹೋಗಿ ಡಿಗ್ರಿ ಪಡೆಯುವ ಹೊತ್ತಿಗೆ ಅವಳ ಮೂರು ಜನ ಅಣ್ಣಂದಿರ ಮದುವೆಯಾಗಿ ಅತ್ತಿಗೆಯರೂ ಬಂದಿದ್ದಾರೆ. ಇಬ್ಬರು ಹುಡುಗರು ಮಾತ್ರ ಹೆಚ್ಚಿನ ಓದನ್ನು ಪುರೈಸಿ ಕೆಲಸದ ಮೇಲೆ ಬೇರೆ ಊರುಗಳಿಗೆ ಹೋಗಿದ್ದಾರೆ. ಸರಕಾರಿ ನೌಕರಿ ಅಥವಾ ಕಂಪನಿಯ ಕೆಲಸಗಳೆಂದರೆ ಸೇಟಜಿಯವರಿಗಾಗಲಿ, ಅವರ ಸಮುದಾಯದ ಇತರರಿಗಾಗಲಿ ಅಷ್ಟೇನೂ ಮರ್ಯಾದೆಯೇನಿಲ್ಲ. ಇನ್ನೊಬ್ಬರ ಹತ್ತಿರ ದುಡಿಯುತ್ತ ಕಡಿಮೆ ಸಂಬಳ ತರುವ ಇಂಥ ನೌಕರಿಗಳನ್ನು ಮಾಡುವುದಕ್ಕಿಂತ ಸಣ್ಣದೊಂದು ಕಿರಾಣಿ ಅಂಗಡಿ ಹಾಕುವುದು ಕೂಡ ಹೆಚ್ಚು ಲಾಭದಾಯಕವಾದದ್ದು ಎಂದೇ ಅವರ ತರ್ಕ. ಆದರೆ ಕಲಿತ ಮೇಲೆ ಹುಡುಗರು ಕೇಳಲಿಲ್ಲ. ಅವರಿಗೂ ಮದುವೆಯ ವಯಸ್ಸು. ಆದರೆ ಅದಕ್ಕೂ ಮುನ್ನ ಗುಡಿಯಾಳ ಮದುವೆ ಮಾಡಿಬಿಡಬೇಕೆನ್ನುವುದು ಸೇಟಜಿಯವರ ಇರಾದೆ. ಅದಕ್ಕೆ ತಕ್ಕಂತೆ ಬೆಂಗಳೂರಿನಲ್ಲಿರುವ ಅವರ ಮಗಳು ಒಂದೊಳ್ಳೆ ನೆಂಟಸ್ತನ ಕುದುರಿಸಿದ್ದಾಳೆ. ಚಿನ್ನದ ವ್ಯಾಪಾರಿ ಮಳಿಗೆಯನ್ನಿಟ್ಟುಕೊಂಡ ಮನೆತನದ ಕಲಿತ ಹುಡುಗ. ಆದರೂ ತಂದೆಯೊಡನೆ ವ್ಯಾಪಾರವನ್ನೇ ನೋಡಿಕೊಳ್ಳುತ್ತಾನೆ. ಈ ಸಂಬಂಧ ಎಲ್ಲರಿಗೂ ಒಪ್ಪಿಗೆಯಾಗಿ ನೋಡನೋಡುತ್ತಲೇ ಹೂ ಎತ್ತಿದಷ್ಟು ಹಗುರವಾಗಿ ನಿಶ್ಚಯ ಕಾರ್ಯಕ್ರಮವೂ ಆಗಿ ಹೋಯಿತು. ಇದೀಗ ಮನೆಯಲ್ಲಿ ಮದುವೆಯ ತಯಾರಿಯ ಸಡಗರವೋ ಸಡಗರ. ಯಾರಿಗೂ ಒಂದು ನಿಮಿಷ ಬಿಡುವೆಂಬುದಿಲ್ಲ. ಚಿನ್ನ, ಬೆಳ್ಳಿ, ಜವಳಿ ಎಂದೆಲ್ಲ ಖರೀದಿಗಳು, ಉಡುಗೊರೆಯ ಸಾಮಾನು, ಸೀರೆಗಳು ಎಂದೆಲ್ಲ ಹೆಂಗಸರಿಗೆ ಓಡಾಡುವುದೇ ಆಯ್ತು. ಮನೆಯೆಲ್ಲ ಖುಷಿಯಿಂದ ತುಂಬಿ ಹೋಗಿತ್ತು. ಅಪರೂಪಕ್ಕೆ ಹೆಣ್ಣುಮಗಳ ಮದುವೆ ಬೇರೆ!
ಸದಣ್ಣನಿಗೂ ಗುಡಿಯಾಳ ಮದುವೆಯೆಂದು ಖುಷಿಯೋ ಖುಷಿ. ಆದರೆ ಅವಳಿನ್ನು ಈ ಊರು ಬಿಟ್ಟು ಬೆಂಗಳೂರು ಸೇರುವವಳು ಎನ್ನುವ ನೋವು ಬೇರೆ. ಎರಡೂ ರೀತಿಯ ಮಿಶ್ರ ಭಾವನೆಗಳಿಂದ ತಲ್ಲಣಗೊಂಡಿದ್ದ ಸದಣ್ಣನಿಗೆ ಗುಡಿಯಾಳ ಮದುವೆಗೆ ಉಡುಗೊರೆಯೇನು ಕೊಡುವುದು ಎಂದು ಕೇಳಿ ಇನ್ನೊಂದು ಸಮಸ್ಯೆಯನ್ನು ತಂದಿಟ್ಟಳು ಮಾದೇವಿ. ಸೇಟಜಿಯ ಉಳಿದ ಮೊಮ್ಮಕ್ಕಳ ಮದುವೆಯಲ್ಲಿ ಇಂಥ ಪ್ರಶ್ನೆಯೇ ಕಾಡಿರಲಿಲ್ಲ ಅವನಿಗೆ. ದೊಡ್ಡವರ ಮನೆಯ ಮದುವೆ. ನನ್ನಂಥವರು ಏನು ಕೊಡುವುದು? ಕೊಟ್ಟರೂ ಎಲ್ಲ ಇರುವ ಅವರಿಗದೊಂದು ಲೆಕ್ಕವೇ? ಹಾಗಂತ ಏನೂ ಕೊಡದೇ ಇರುವುದಾದರೂ ಹೇಗೆ? ಚಿಕ್ಕವಳಿದ್ದಾಗಿನಿಂದ ಸದಣ್ಣ ಬರುತ್ತಾನೆಂದರೆ ಏನಾದರೂ ತರುತ್ತಾನೆಂದು ಆಸೆಗಣ್ಣಿನಿಂದ ಕಾಯುತ್ತ ನಿಲ್ಲುತ್ತಿದ್ದ ಪುಟ್ಟ ಹುಡುಗಿಯ ಪ್ರತಿಮೆ ಅವನ ಮನಸ್ಸಿನಲ್ಲಿ ಸ್ಥಾಪಿತವಾಗಿಬಿಟ್ಟಿತ್ತು. ಹಾಗಾಗಿ ಅವಳಿಗಾಗಿ ಏನಾದರೊಂದು ವಿಶೇಷ ಉಡುಗೊರೆಯನ್ನೇ ಕೊಡಬೇಕೆಂದು ಇಬ್ಬರೂ ಯೋಚಿಸಿದರು. ಸೇಟಜಿ ತಮ್ಮ ಎಲ್ಲಾ ಅಗತ್ಯಗಳನ್ನು ಒಮ್ಮೆಯೂ ಇಲ್ಲವೆನ್ನದೇ ಪೂರೈಸಿದವರು. ಅವರಿಗೊಂದು ಕೃತಜ್ಞತೆ ತೋರಲು ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೆ ಯಾವಾಗ ಬರುವುದು? ಇಬ್ಬರ ಮಧ್ಯೆ ಸಾಕಷ್ಟು ವಾದ-ವಿವಾದವಾಯಿತು. ಸೀರೆ ಎಂದರೆ ಅವರದೇ ದೊಡ್ಡ ಜವಳಿ ಅಂಗಡಿಯೇ ಇದೆ, ನಾವೇನು ಸೀರೆ ಕೊಟ್ಟೇವು ತಗಿ ಎಂದಳು ಮಾದೇವಿ. ಪಾತ್ರೆ-ಪಗಡ ಎಂದು ಅವಳು ಹೇಳಿದನ್ನು ಇವನು ತೆಗೆದುಹಾಕಿಬಿಟ್ಟ. ಕೊನೆಗೆ ಈಗಿನ ಮಕ್ಕಳಿಗೇನು ಬೇಕೆನ್ನುವುದು ತಮ್ಮಂಥ ಅನಪಢ, ಗವಾರರಿಗೆಲ್ಲಿ ತಿಳಿಯುತ್ತದೆ, ಮಗಳು ಗೌರಿಗಾದರೆ ಕಲ್ಪನೆಯಿರಬಹುದು ಎಂದು ಇಬ್ಬರೂ ಸಹಮತಿಸಿ ಅವಳಿಗೆ ಫೋನು ಮಾಡಿದರು. ಅವಳು ಒಂದಿಷ್ಟು ವಿಚಾರ ಮಾಡಿ “ಬೆಳ್ಳಿಯ ಕಾಲ್ಗೆಜ್ಜೆ ಕೊಡಿರಿ, ಒಂದು ಬಿಟ್ಟು ನಾಲ್ಕಿದ್ದರೂ ಈಗಿನ ಹುಡುಗಿಯರು ಬೇರೆ ಬೇರೆ ಪ್ಯಾಟರ್ನ ಗೆಜ್ಜೆ ತೊಡುತ್ತಾರೆ” ಎಂದದ್ದು ಇಬ್ಬರಿಗೂ ಒಪ್ಪಿಗೆಯಾಯ್ತು. ಅದು ತಮಗೂ ಭಾರವಲ್ಲ, ಸದಣ್ಣ ಕೊಟ್ಟಿದ್ದೆಂದರೆ ಗುಡಿಯಾಳಿಗೂ ಇಷ್ಟವಾಗಬಹುದು ಎಂದೆಲ್ಲ ಯೋಚಿಸಿ ಕೊನೆಗೆ ಇವತ್ತು ಪೇಟೆಗೆ ಹೊರಟಿದ್ದರು. ಸದಾ ಕಿಕ್ಕಿರಿದು ತುಂಬಿರುವ ಕಿರಿದಾದ ಪೇಟೆಯ ಓಣಿಯಲ್ಲಿ ಅವರು ಅಪರೂಪಕ್ಕೊಮ್ಮೆ ಬರುವ ಬೆಳ್ಳಿ-ಬಂಗಾರದ ಆಭರಣಗಳ ಅಂಗಡಿಯಿದೆ. ಅಲ್ಲಿ ಒಂದು ಜೋಡು ಗೆಜ್ಜೆ ಖರೀದಿಸಿ ನೇರವಾಗಿ ಸೇಟಜಿಯವರ ಮನೆಗೆ ಹೋಗುವುದು, ತಮ್ಮ ಪದ್ಧತಿಯಂತೆ ಹುಡುಗಿಗೆ ಗೆಜ್ಜೆ ಉಡುಗೊರೆ ಕೊಟ್ಟು ಇದೇ ಸಮಯದಲ್ಲಿ ಅರಿಸಿನ ಕುಂಕುಮವಿಟ್ಟು ಗುಡಿಯಾಳ ತಾಯಿ ಮತ್ತು ಅಜ್ಜಿಗೂ ಒಂದೊಂದು ರವಿಕೆ ಖಣವನ್ನು ಕೊಟ್ಟುಬಿಡುವುದು. ಕೊನೆಗೆ ಮದುವೆಯ ಸಾವಿರಾರು ಜನರ ಗದ್ದಲದಲ್ಲಿ ನಮ್ಮಂಥವರಿಗೆಲ್ಲ ಅವಕಾಶವೇ ಆಗುವುದಿಲ್ಲ ಎಂದೆಲ್ಲ ಯೋಚಿಸಿಯೇ ಹೊರಟಿದ್ದರು. ಜೊತೆಗೆ ಸಂಜೆಯ ವೇಳೆಯೂ ಈಗ ಕೊಡುತ್ತಿದ್ದ ಹಾಲಿನ ಕ್ಯಾನನ್ನೂ ಬೈಕಿಗೆ ತೂಗಿಸಿಕೊಂಡೇ ಸದಣ್ಣ ಕುಳಿತಿದ್ದರೆ ಹಿಂದೆ ತನ್ನ ಚೀಲದಲ್ಲಿ ಅರಿಸಿನ ಕುಂಕುಮದ ಕರಡಿಗೆ ಮತ್ತು ರವಿಕೆ ಖಣಗಳನ್ನು ಹಾಕಿಕೊಂಡು ಮಾದೇವಿ ಕುಳಿತಿದ್ದಳು.
ಸದಣ್ಣನ ಫಟಫಟಿ ಫಡಫಡ ಶಬ್ದ ಮಾಡುತ್ತಾ ಆಭರಣಗಳ ಅಂಗಡಿಯಿಂದ ಒಂದಿಷ್ಟು ದೂರವೇ ನಿಂತು ಅದರಿಂದ ಇಬ್ಬರೂ ಇಳಿದರು. ಅಂಗಡಿಯಲ್ಲಿ ಸಾಕಷ್ಟು ನಮೂನೆಯ ಗೆಜ್ಜೆಗಳನ್ನು ನೋಡಿ ಇದರಲ್ಲಿ ಯಾವುದು ನಮ್ಮ ನಾಜೂಕು ಹುಡುಗಿ ಗುಡಿಯಾಳ ಕಾಲುಗಳಿಗೆ ಒಪ್ಪಬಹುದು ಎಂದೆಲ್ಲ ತರ್ಕ ಮಾಡಿ, ಮಾತಾಡಿ, ರೇಟಿನ ಬಗ್ಗೆ ಚೌಕಾಶಿ ಮಾಡಿ ಅಂತೂ ಒಂದು ಜೋಡು ಗೆಜ್ಜೆ ಆರಿಸಿ ಕೊಂಡುಕೊಂಡರು.
ಸದಣ್ಣ ಸ್ವಲ್ಪ ಮುಂದೆ ನಡೆದು ತನ್ನ ಬೈಕ ಹತ್ತಿರಕ್ಕೆ ಹೋದ, ಮಾದೇವಿ ಗೆಜ್ಜೆ ಹಾಕಿದ ಡಬ್ಬವನ್ನೊಮ್ಮೆ ಮುಟ್ಟಿ ನೋಡಿಕೊಂಡು ನಿಧಾನ ಕಟ್ಟೆಯನ್ನಿಳಿಯುತ್ತಿದ್ದಳು. ಅಷ್ಟರೊಳಗೇ ಧಡ್ -ಧಡ್ ಎನ್ನುವ ಶಬ್ದ! ಏನಾಯಿತು ಎಂದೂ ತಿಳಿಯುತ್ತಿಲ್ಲ ಮಾದೇವಿಗೆ. ಮಣ್ಣು, ಧೂಳು ಅವಳ ಕಣ್ಣು, ಮೂಗು ತುಂಬಿಕೊಂಡು ಕೆಮ್ಮತೊಡಗಿದಂತೇ ಸದಣ್ಣ ಎಲ್ಲಿ ಎನ್ನುವ ಯೋಚನೆ ಬಂತು. ಒಮ್ಮಿಲೇ ಭಯದಿಂದ ಕಟ್ಟೆಯಿಳಿದಳು. ಯಾರ್ಯಾರೋ ನೋವಿನಿಂದ ನರಳುತ್ತಿದ್ದಾರೆ, ಹಾಹಾ ಎಂದು ಕೂಗುತ್ತಿದ್ದಾರೆ, ಓಡುತ್ತಿದ್ದಾರೆ. ಜನನಿಬಿಡ ಚಿಕ್ಕ ಓಣಿಯೊಳಗೆ ಎಲ್ಲೆಂದರಲ್ಲಿ ತುಂಬಿಕೊಂಡಿದ್ದ ಮಂದಿ ಚಿಲ್ಲಾಪಿಲ್ಲಿಯಾಗಿ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಓಡುತ್ತಿದ್ದಾರೆ. ಏನಾಗಿದೆಯೆಂದು ಯಾರಿಗೂ ತಿಳಿಯುತ್ತಿಲ್ಲ. “ಬಾಂಬು, ಆ ಸ್ಕೂಟರನಲ್ಲಿ ಟೈಮ್- ಬಾಂಬು” ಎನ್ನುತ್ತ ಯಾರೋ ಕೈಮಾಡಿದ ಕಡೆ ಮಾದೇವಿ ದಿಕ್ಕೆಟ್ಟು ನೋಡುತ್ತಿದ್ದಾಳೆ. ಅಯ್ಯೋ ಅವಳ ಗಂಡ ಸದಣ್ಣ ಅಲ್ಲಿಯೇ ತನ್ನ ಬೈಕ ನಿಲ್ಲಿಸಿದ್ದ ಎನ್ನುವುದು ನೆನಪಾಗಿ ಥರಥರ ನಡುಗು ಬಂತವಳಿಗೆ. ಹಾಗಾದರೆ ಅವರೆಲ್ಲಿ ಎಂದು ಧೂಳಿನಲ್ಲೇ ಕಣ್ಣು ಚಿವುಟಿ ನೋಡುತ್ತಾಳೆ. ಬಾಂಬು ಇತ್ತೆಂದ ಸ್ಕೂಟರಿನ ಪಕ್ಕದಲ್ಲೇ ಬಿದ್ದವನು ಸದಣ್ಣನೇ ಇರಬಹುದೇ? ಆ ಕಡೆ ಓಡುತ್ತಾಳೆ. ಹಾಲಿನ ಕ್ಯಾನು ನೆಲಕ್ಕೆ ಬಿದ್ದು ಮುಚ್ಚಳ ತೆರೆದು ಹಾಲು ಓಣಿಯ ತುಂಬ ಹರಿಯುತ್ತಿದೆ. ತಲೆ ಕೆಳಗಾಗಿ ಬಿದ್ದವನು ತನ್ನ ಗಂಡನೇ ಎಂದು ತಿಳಿದವಳೇ ಮಾದೇವಿ ಓಡಿಹೋಗಿ ಮುಖ ಮೇಲೆ ಮಾಡುತ್ತಾಳೆ. ಉಸಿರು ಇದೆಯೇ ನೋಡುತ್ತಾಳೆ. ಯಾಕೋ ಅವಳಿಗೆ ವಿಶ್ವಾಸವಾಗುವುದಿಲ್ಲ. ಅವನ ಮುಖ ಕಪ್ಪಿಟ್ಟುಹೋಗಿದೆ, ಕೈ ಮುರಿದು ರಕ್ತ ಹೊರಬರುತ್ತಿದೆ. ಇವಳು ಹಿಡಿಯುತ್ತಿದ್ದಂತೇ ಮತ್ತಷ್ಟು ರಕ್ತ ಹರಿಯಲಾರಂಭಿಸಿದ್ದು ಹಾಲಿನೊಡನೆ ಬೆರೆಯುತ್ತಿದೆ. ಬೆಳ್ಳಗಿದ್ದ ಹಾಲಿನಲ್ಲಿ ರಕ್ತ ಬೆರೆಯುತ್ತ ಬೆರೆಯುತ್ತ ಅದನ್ನೂ ಕೆಂಪಗಾಗಿಸುತ್ತ ಸಾಗುತ್ತಿದೆ. ನಿಧಾನವಾಗಿ ಯಾರ್ಯಾರದೋ ರಕ್ತ ಬಂದು ಹಾಲಿಗೆ ಸೇರುತ್ತಿದೆ. ತನ್ನ ಬಣ್ಣವೇ ಕೆಂಪೇನೋ ಎನ್ನುವಷ್ಟು ಕೆಂಪಗಾಗಿ ಹರಿಯುತ್ತಿರುವ ಹಾಲನ್ನು ನೋಡಿ ಮಾದೇವಿ ಅಲ್ಲಿಯೇ ಕುಸಿದಳು. ಯಾರು, ಯಾಕಾಗಿ ಏನೂ ಪಾಪವನ್ನೇ ಮಾಡದ, ಯಾರಿಗೂ ಕೇಡು ಬಗೆಯದ ತನ್ನ ಗಂಡನನ್ನು ಕೊಂದರು ಎನ್ನುವ ಅವಳ ಮುಗ್ಧ ಮನದ ಪ್ರಶ್ನೆಗೆ ಉತ್ತರ ಕೊಡುವ ಮನುಷ್ಯರಾರೂ ಅಲ್ಲಿ ಕಾಣಲಿಲ್ಲ.

ಮತ್ತಷ್ಟು ಸುದ್ದಿಗಳು

Latest News

ಬೆಂಗಳೂರಿನಲ್ಲಿ 5500 ಕೊರೋನಾ ಸೋಂಕು, ರಾಜ್ಯದಲ್ಲಿ 8778 ಪ್ರಕರಣ, 67 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಯುಗಾದಿ ದಿನದಂದು ಕೂಡ ಕೊರೋನಾ ಅಬ್ಬರ ಮುಂದುವರಿದಿದೆ. ರಾಜ್ಯದಲ್ಲಿ ಹೊಸದಾಗಿ 8778 ಮಂದಿಗೆ ಕೊರೋನಾ ಸೋಂಕು ತಗುಲಿದೆ.  ಬೆಂಗಳೂರಿನಲ್ಲಿ ಹೊಸದಾಗಿ 5500 ಕೊರೋನಾ...

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ ನಿವಾಸಿ 58 ಡಯಾಲಿಸಿಸ್'ಗೆ ಬಂದಿದ್ದ ಮಹಿಳೆಗೆ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...
- Advertisement -
error: Content is protected !!