Wednesday, September 27, 2023

ದುರ್ಗಪ್ಪನ ಬೋಲ್ಡು

Follow Us

* ಸಂತೆಬೆನ್ನೂರು ಫೈಜ್ನಟ್ರಾಜ್
response@134.209.153.225

ಡೀ ರಾತ್ರಿ ಮಲಗಿದಂತೆ ಕೂತಿದ್ದ ದುರ್ಗಪ್ಪನಿಗೆ ತನ್ನ ಕಾಲುಗಳೆರಡೂ ತನ್ನವಲ್ಲ ಅನ್ನಿಸಿತ್ತು.ಅಂಡ ಮೇಲಿನ ನಿಕ್ಕರು ಮೊಳಕಾಲತನಕ ಇಳಿದಿತ್ತು. ಪಂಚೆ ಮರದ ಉದ್ದನೆಯ ಸ್ಟೂಲಿನ ಮೇಲೆ ಅಡ್ಡಾಗಿತ್ತು.ಅಂಗಿ ಮೈ ಮೇಲೆ ಇದ್ದೂ ಇಲ್ಲದಂತಿತ್ತು. ಬಣ್ಣ ಬಣ್ಣದ ಬನಿಯನ್ ನ ತೂತುಗಳು ಇಡೀ ಸ್ಟೇಷನ್ ದರ್ಶನ ಮಾಡಿಸುತ್ತಿದ್ದವು.ಅಲ್ಲಿನ ಕಿತ್ತ ನೆಲ , ಕೈ ಸವರಿ ಸವರಿ ಮಾಸಲಾದ ಗೋಡೆ,ಬೆಂಡಾದ ಸರಳುಗಳು ಒಂದೇ ರಾತ್ರಿಗೆ ಕೈಯಲ್ಲಾಡಿದ ಮಕ್ಕಳಂತೆ ಪರಿಚಯವಾಗಿತ್ತು ದುರ್ಗಪ್ಪನಿಗೆ ! ಬೋಲ್ಡು ಕಿತ್ತುಕೊಂಡು ಬಂದ ಪೊಲೀಸರು ಎತ್ತ ಬಿಸಾಕಿದರೋ ಅನ್ನುವ ಚಿಂತೆಗೆ ದುರ್ಗಪ್ಪ ರಾತ್ರಿ ಮಲಗಿರಲಿಲ್ಲ.ಗುಜರಿ ಜೈನುಲ್ಲಾ ಅಂಗಡಿಯಿಂದ ಸಾಲ ಮಾಡಿ ತಂದ ಕಬ್ಬಿಣದ ಪೈಪು, ತಗಡು ತಂದು ನಾಗಲಿಂಗಾಚಾರ್ ಹತ್ರ ಹದಿನೈದು ರುಪಾಯಿ ಕೊಟ್ಟು ವೆಲ್ಡಿಂಗ್ ಮಾಡಿಸಿ, ಪೇಂಟರ್ ನವೀನನಿಗೆ ನಾಲ್ಕು ಗುಟಕ ಕೊಟ್ಟು ಕರೇ ಬಣ್ಣ ಬಳಿಸಿ ಅದರ ಮೇಲೆ ಬಿಳಿ ಹಳದಿ ಬಣ್ಣ ಮಿಶ್ರ ಮಾಡಿ ಬರೆಸಿದ ಬೋಲ್ಡು ‘ ಅಲ್ಲಿ’ ನೆಟ್ಟಿದ್ದ. ಖಾಜಿಸಾಬರ ರಫೀಕ್ ಹೊಟೇಲ್ ನಿಂದ ಪೊಲೀಸರೇ ಊಟ ತರಿಸಿ ಕೊಟ್ಟಿದ್ದರು.ನವರಂದ್ರ ಉರಿಯುವ ಖಾರ,ದಪ್ಪಕ್ಕಿ ಅನ್ನ ತಿಂದು ಹೊಟ್ಯಾಗ್ಯಲ್ಲ ಬೂಟುಗಾಲಲ್ ಒದ್ದ ಯಾತನೆಯಾಗಿ ಕೂರದೇ,ಮಲಗದೇ ಮುಲುಗುತ್ತಾ ಇದ್ದ ದುರ್ಗಪ್ಪ. ಸಾಯೋನಿಗೆ ಒಂದು ದಾರಿಯಾದ್ರೆ ಬದ್ಕೋನಿಗೆ ಸಾವಿರಾರು ದಾರಿ- ಅನ್ನಂಗೆ ದುಡಿಯೋನು ಸಾವ್ಕಾರ ಆದ್ರೇನು,ಕೂಲಿ ಮಾಡೋನಾದ್ರೇನು ಮುಕ್ಳಿ ಬಗ್ಸಿ ದುಡಿದ್ರೆ ಅನ್ನ ಅನ್ನೋದು ಮೈಯಾಗಳ ಬೆವರಂಗೆ ಕಿತ್ಕಂಡ್ ಬರುತ್ತೆ ಅನ್ನೋದು ದುರ್ಗಪ್ಪನ ವಾದ. ಊರಾಗೊಂದು ಡಿಗ್ರಿ ಕಾಲೇಜು ಶುರುವಾಗಿತ್ತು.ಚನ್ನ ಬಸವೇಶ್ವರ ಪ್ರಥಮ ದರ್ಜೆ ಕಾಲೇಜು- ಅಂತ.ದುರ್ಗದ ಕಡೆಯ ದೋರಪ್ಪ ಸಂಸ್ಥೆ ಅದು. ಸರ್ವೆ ಸೀನಣ್ಣನ ವಠಾರದ ಮಂಗಳೂರು ಹೆಂಚಿನ ಮನೆಗಳಲ್ಲಿ,ಸಗಣಿ ಹಾಕಿ ಸಾರಿಸಿದ ನೆಲದಲ್ಲಿ ಶುರು ಮಾಡಿದ್ರು.ಪಿಯುಸಿ ಕಾಲೇಜಿಗೆ ಹೋಗಿ ಹುಡುಗ ಹುಡುಗಿಯ ಮನವೊಲಿಸಿ ಹತ್ತು ಹದಿನೈದು ವಿದ್ಯಾರ್ಥಿಗಳನ್ನು ಗುಡ್ಡೆ ಹಾಕಿ ಊರಿನ ಹುಡುಗರೇ ಎಂ.ಎ ಮಾಡಿದ ನಾಲ್ಕು ಜನ ಲೆಕ್ಚರರ್,ಒಬ್ಬ ಕ್ಲರ್ಕ್ ಮತ್ತು ಒಬ್ಬನೇ ಒಬ್ಬ ಜವಾನ: ಇವನೇ ಈ ನಮ್ಮ ದುರ್ಗಪ್ಪ!.
ಸುಮಾರು ಹತ್ತು ವರ್ಷಗಳ ಕಾಲ ಇವರೆಲ್ಲಾ ಪುಗಸಟ್ಟೆ ದುಡಿದರೇ ಹೊರತು ಒಂದು ರುಪಾಯಿ ಸಂಬಳ ಸಿಕ್ಕುತ್ತಿರಲಿಲ್ಲ.ಗ್ರಾಂಟ್,ಅಪ್ರೋಲ್ ಏನೂ ಇರದ ಆ ಕಾಲೇಜಿಗೆ ಲೆಕ್ಚರರ್ ಗಳು ಅತಿಥಿಗಳಂತೆ ಹಿಂಗ್ ಬಂದು ಹಂಗ್ ಹೋಗೋರು.ದುರ್ಗಪ್ಪ ಮಾತ್ರ ಇಂದಲ್ಲ ನಾಳೆ ಪರಮೆಂಟ್ ಆಗುತ್ತೆ ಅಂತ ನಿಯತ್ತಿಂದ ಕಸ ಹೊಡಿತಿದ್ದ. ಜೊತೆಗೆ ಪರಿಶಿಷ್ಟ ಜಾತಿಯವರಿಗೆ ಸಿಗುವ ‘ ಚರ್ಮಕಾರ ಕುಟೀರ’ ಪೆಟ್ಟಿಗೆ ಸಿಕ್ಕು ಪಾರ್ಟ್ ಟೈಮ್ ಚಪ್ಪಲಿ ಹೊಲಿದು ಬದುಕ ಬಂಡಿ ಓಡಿಸುತ್ತಿದ್ದ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಂಬಾಕು ತಿಪ್ಪಣ್ಣ ಊರಿನ ಯಾವುದೇ ವಿಚಾರ ಇದ್ರೂ ಪಂಚಾಯತಿ ಮಾಡೋದ್ರಲ್ಲೆ ಬಲು ಫೇಮಸ್ಸು.ಹೊನ್ನಾಳಿ ಹೊಡ್ತ ಅಂತಾರಲ್ಲ ಹಂಗ್ ಈ ಊರಲ್ ತಿಪ್ಪಣ್ಣನ್ ಜಡ್ತ! ಯಾರೇ ವ್ಯಾಜ್ಯ ಮಾಡ್ಕೊಂಡ್ ಸ್ಟೇಷನ್ ಮೆಟ್ಲು ಹತ್ತಿರಲಿ ತನ್ನ ಪಟಾಲಮ್ ಶಿಷ್ಯರಿಂದ ವಾಪಸ್ ಕರೆಸಿ ,ಇಬ್ರಿಗೂ ಕಾನೂನಿನ ತೊಡಕುಗಳನ್ನು ಬೆಚ್ಚಿ ಬೀಳಂಗೆ ಬಿಚ್ಚಿ ಹೇಳಿ, ಏನೋ ಒಂದು ತೀರ್ಪು ನೀಡಿ ಎರಡೂ ಕಡೆಯಿಂದ ಕೀಳೋವಷ್ಟು ಕಿತ್ತು ರೈಟ್ ಹೇಳುವನು.ಬಾಯಿ ತುಂಬಾ ಎಲೆ ಅಡಿಕೆ ,ಅದಕ್ಕಿಂತ ತಂಬಾಕೇ ಹೆಚ್ಚು ತುಂಬಿಕೊಂಡು ಎದುರಿದ್ದವರ ಮಕಕ್ಕೆ ಸಿಡಿವಂತೆ ಬಾಯಿ ಮೇಲೆ ಮಾಡಿ ಮಾತಾಡೋದ್ರಿಂದ ‘ ತಂಬಾಕು ತಿಪ್ಪಣ್ಣ’ ಎಂದೇ ಪರಮ ಖ್ಯಾತಿ. ಅವನ ಕಿವಿಗೆ ಈ ದುರ್ಗಪ್ಪನ ಮ್ಯಾಟರ್ ಬಿದ್ದದ್ದೇ ತಡ ಬಾಯಾಡಿಸಿಕೊಂಡು ಬಿಳಿ ಪಂಚೆ ಎಡಗೈಲಿ ಹಿಡಿದು,ಬಲಗೈಲಿ ಎಡ ಭುಜದ ಮೇಲಿನ ಬಿಳಿ ಟವೆಲ್ ಎಳೆದುಕೊಳ್ಳುತ್ತಾ ಸ್ಟೇಷನ್ ಮೆಟ್ಟಿಲೇರಿ ಬಂದ. ಈಗಾಗಲೇ ಎರಡು ಸಾರಿ ಬಂದು ಹೋಗಿದ್ದನಾದರೂ ಎಸ್ ಐ ಇಲ್ಲದೇ ಪೊಲೀಸರು ಏನೂ ಆಗಲ್ಲ ಅಂದಿದ್ದಕ್ಕೆ ಇದೀಗ ಎಸ್ ಐ ಬಂದ ಸುದ್ದಿ ಕೇಳಿ ಬಂದು ದುರ್ಗನ ತಲೆ ಸವರಿ ಒಳಗಿದ್ದ ಎಸ್ ಐ ಕೊಠಡಿಗೆ ಬಂದು ಕೂತ.
‘ಅಲ್ರೀ ನಮ್ಮ ದುರ್ಗನದು ಕ್ರೈಮ್ ಅಲ್ಲ,ಅಫೇನ್ಸ್ ಅಲ್ಲ.ಅಮಾಯಕತನ ಅದು.ದುಡಿಯೋ ದಾರಿ ಗೊತ್ತಿಲ್ಲದೇ,ಬಂಡವಾಳ ಇಲ್ಲದೆ ತನ್ನ ಜಾಗದಲ್ಲಿ ಬರಿ ಒಂದು ಬೋರ್ಡ್ ನೆಟ್ಟಿದ್ಕೆ ಯಾರೋ ಹೇಳಿದ್ರಂತ ಹಿಂಗೆ ದುರ್ಗಪ್ಪನ್ನ ರಾತ್ರಿ ಪೂರಾ ಸ್ಟೇಷನ್ ಒಳಗೆ ಇಟ್ಕಬಹುದ?’ ಕಾನೂನ್ನಾಗೆ ಅದಕ್ಕೆ ಅವಕಾಶ ಐತಾ? ಅಂದ ಒಂದೇ ಉಸಿರಿಗೆ. ಎಸ್ ಐ ಅಷ್ಟೇ ತಣ್ಣಗೆ’ ನೋಡಿ ತಿಪ್ಪಣ್ಣ, ಇದು ಕ್ರೈಮ್ ಅಲ್ದೇ ಹೋದ್ರೂ ತುಂಬಿದ ಬೀದೀಲಿ ಈ ರೀತಿಯ ಬೋರ್ಡ್ ಹಾಕಂಗಿಲ್ಲ, ಕೆಲ ಜನ ರೂಢಿ ಸಂಪ್ರದಾಯ, ಪೂಜೆ ಪುನಸ್ಕಾರ,ಮಡಿ ಮೈಲಿಗೆ ಅಂತ ಬಾಳ್ತಿರ್ತರೆ.ತನ್ನ ಜಾಗ ಅಂತ ಇಂತಹ ಬೋರ್ಡ್ ಹಾಕಬಹುದೇ? ಕಾನೂನು ಮಾಂಸ ಮಾರಾಟಕ್ಕೆ ವಾಸಿಸುವ ಜಾಗದಿಂದ ಮೂವತ್ತು ಮೀಟರ್ ದೂರ ಇರಬೇಕನ್ನುತ್ತೆ.ಗ್ರಾಮ ಪಂಚಾಯತಿ, ಆರೋಗ್ಯ ಇಲಾಖೆ ಮತ್ತು ಪಶು ಆಸ್ಪತ್ರೆ- ಈ ಮೂರರಿಂದ ಪ್ರಾಥಮಿಕ ಅನುಮತಿ ತೆಗೆದುಕೊಳ್ಳಬೇಕೆಂದು ಹೇಳುತ್ತೆ.ಇದನ್ನು ನಿಮ್ಮ ದುರ್ಗಪ್ಪ ಮಾಡಿದ್ದಾನ? ಆರ್ಟಿಕಲ್ ಟ್ವೆಂಟಿ ಒನ್ ಇದನ್ನ ಗಂಭೀರವಾಗಿ ಪರಿಗಣಿಸುತ್ತೆ ಅಂತ ನಿಮಗೂ ಗೊತ್ತು. ತಿಪ್ಪಣ್ಣ ತಂಬಾಕು ಉಗಿದು ಮತ್ತೆ ಬಂದು ಕೂತ. ಕಾನೂನು ಮೀರಿಯೂ ಮಾನವೀಯತೆ ಅಂತ ಒಂದಿದೆಯಲ್ಲ …ಎಂದು ರಾಗ ತೆಗೆದ ತಿಪ್ಪಣ್ಣ.ಅದಕ್ಕಾಗಿಯೇ ಈ ದುರ್ಗಪ್ಪನನ್ನು ಕೇವಲ ವಿಚಾರಣೆಗೆ ಕರೆದಿದ್ದು.ಆ ಶಿವಶಕ್ತಿ ನಗರದ ಕೆಲ ನಿವಾಸಿಗಳು ಬಂದು ಹಿಂಗಿಂಗೆ ಮಕ್ಳು ಮರಿ ಇರೋ ಬೀದಿ,ವ್ರತ- ನಿಯಮದ ಹಿರೀಕರು ಇರೋ ಜಾಗದಲ್ಲಿ ಇಂತಹ ಅನಿಷ್ಟದ ಬೋರ್ಡ್ ಹಾಕಿದ್ದಾನೆ.ಮುಂದೆ ಅದು ಕಾರ್ಯ ರೂಪಕ್ಕೆ ಬಂದ್ರೆ ಊರೇ ರಣರಂಗವಾಗುತ್ತೆ ಕಂಪ್ಲೇಂಟ್ ತಗಳಿ ಅಂತ ಬಂದು ಹೇಳಿದ್ರು.ಅದರಲ್ಲಿ ಸರ್ಪಭೂಷಣ ರಿಟೈರ್ಡ ಮೇಷ್ಟ್ರು ಕೆಂಡಾಮಂಡಲ ಆಗಿ ಎಸ್ ಪಿ ತನಕ ಹೋಗ್ತೀನಿ ಅಂತ ಹಾರಾಡ್ತಿದ್ದಕ್ಕೆ ನಾನೇ ಯಾರು ಆ ಆಸಾಮಿ ಕರ್ ಕೊಂಡು ಬನ್ನಿ ಅಂತ ಕಳಿಸಿದ್ದೆ.ಎಸ್ ಐ ಮಾತಿಗೆ ಅಡ್ಡವಾಗಿ ತಿಪ್ಪಣ್ಣ’ ಅವನ ಹೆಂಡ್ರು ಮಕ್ಳು ರಾತ್ರಿಯೆಲ್ಲಾ ಗೋಳಾಡ್ತ ನಮ್ಮ ಮನೆ ಮೆಟ್ಲು ಮೇಲಿದ್ವು,ನಾ ಎರಡು ಸಾರಿ ಸ್ಟೇಷನ್ ಬಂದ್ ಬಂದ್ ಹೋದೆ ಅಂದ. ದುರ್ಗಪ್ಪ ತಿಪ್ಪಣ್ಣನ್ನ ಒಮ್ಮೆ ಎಸ್ ಐ ನ ಒಮ್ಮೆ ಅಲ್ಲಿಂದಲೇ ಇಣುಕಿ ನೋಡಿದ,ಏನೂ ಅರ್ಥ ಆಗದೇ ಪರ ಪರ ತೊಡೆ ಕೆರಕಂಡು ಸುಮ್ಮನಾದ. ಕರೆಯಲು ಅತ್ತ ಪಿಸಿಗಳು ಹೋದ ತಕ್ಷಣ ಇತ್ತ ದಾವಣಗೆರೆ ಆಫೀಸಿಂದ ಕರೆ ಬಂತು ಹೋದೆ ಬರೋದು ಇಷ್ಟೊತ್ತಾಯ್ತು. ಅಷ್ಟರಲ್ಲಿ ಊರಲ್ಲೆಲ್ಲಾ ದುರ್ಗಪ್ಪ ಅರೆಸ್ಟಾದ ಅಂತ ಪುಕಾರೆದ್ದಿದೆ. ನಾ ದೂರು ತಗಂಡಿಲ್ಲ,ಎಫ್ ಐ ಆರ್ ಕೂಡಾ ಹಾಕಿಲ್ಲ.ದೂರು ಲಿಖಿತವಾಗಿ ತಗಂಡ್ರಲ್ಲವೇ ಮುಂದಿನ ಕತೆ? ಜಸ್ಟ್ ವಿಚಾರಿಸಿ ದಾಖಲೆ ಏನಾದರೂ ಇದೆಯಾ,ಲೈಸೆನ್ಸ್ ಇದೆಯಾ ಅಂತ ಕೇಳಿ ಕಳಿಸಲು ಕರೆತಂದಿದ್ದಷ್ಟೆ!
ಎಸ್ ಐ ಇಷ್ಟು ಹೇಳಿ ನೀರು ಕುಡಿದರು.
ಮತ್ತೆ ಮುಂದೆ? ತಿಪ್ಪಣ್ಣ ಕೇಳಿದ.
ಆ ಶಿವ ಶಕ್ತಿ ನಗರದ ಯಾರಾದರೂ ಬಂದು ಒಂದು ಮಾತು ಹೇಳಲಿ.ನಿಮ್ಮೂರು ಮೊದಲೇ ಸೂಕ್ಷ್ಮ. ಬಡಪಾಯಿ ದುರ್ಗಪ್ಪನ ಸ್ಥಿತಿ ನೋಡಿ ಏನಾದರೂ ಮಾಡನ ಅಂತ ಇಲ್ಲೇ ಇರಿಸಿಕೊಂಡಿದ್ದು.ನೋಡನ ಆ ಕಾನೂನು ಜಾಡಿಸೋ ಸರ್ಪಭೂಷಣ ಮೇಷ್ಟ್ರು ಬರಲಿ ಕಾಯೋಣ- ಅಂದ ಎಸ್ ಐ ಮಾತಿಗೆ ಹೌದಾ ಎಂಬಂತೆ ತಿಪ್ಪಣ್ಣ ಮತ್ತೆ ಹೊರ ನಡೆದ. ಇತ್ತ ದುರ್ಗಪ್ಪನ ಹಟ್ಟಿಗೆ ಹಟ್ಟಿಯೇ ಬೆಂಕಿಗೆ ಸಿಕ್ಕ ಬಣವೆಯಾದಂತಾಗಿತ್ತು.ಓದಿದ, ಶಾಲೆ ಬಿಟ್ಟ, ಕಾಲೇಜು ಬಿಟ್ಟ ಹುಡುಗರು ಸೇರಿ’ ಶೋಷಣೆ, ಜಾತೀಯತೆ, ಅಸ್ಪೃಶ್ಯತೆ’ ಅಂತ ಗುಂಪು ಮಾಡಿಕೊಂಡು ಚನ್ನಗಿರಿಯ ದಸಂಸ- ದ ಪದಾಧಿಕಾರಿಗಳಿಗೆ ವಿಷಯ ತಿಳಿಸಿ ಪ್ರತಿಭಟನೆಗೆ ಕರೆಕೊಟ್ಟಿದ್ರು.
ಈ ದುರ್ಗಪ್ಪ ಮಾಂಸ ಮೂಸದ ಜನರ ನಡುವೆ ಸೈಟ್ ಮಾಡಿದ್ದು ಹೇಗೆ ಅನ್ನೋದೆ ಒಂದು ದೊಡ್ಡ ಕತೆ.ದೋರಪ್ಪ ಕಾಲೇಜಲ್ಲಿ ತಿಕ ನೋಯಂಗೆ ದುಡೀತಿದ್ರಲ್ಲ ಲೆಕ್ಚರರ್ಗಳಲ್ಲಿ ಒಂದಿಬ್ಬರಿಗೆ ಸರ್ಕಾರಿ ಪ್ರೈಮರಿ ಮೇಷ್ಟ್ರು ಕೆಲಸ ಸಿಕ್ತಂತ ಬಿಟ್ ಹೋದ್ರು.ಕಾಲೇಜಿಗೆ ಬಾಡಿಗೆ ಕೊಟ್ಟಿದ್ದ ಸರ್ವೆ ಸೀನಣ್ಣ ಹೊಸ ಬಿಲ್ಡಿಂಗ್ ಕಟ್ಟಬೇಕಂತ ಜಾಗ ಖಾಲಿ ಮಾಡಲು ಬೆನ್ನು ಬಿದ್ದಿದ್ದ.ಜ್ಯೂನಿಯರ್ ಲೆಕ್ಚರರ್ ಗಳು ಸೀನಿಯರ್ ಆದ್ರಲ್ಲ ದುರ್ಗಕ್ ಹೋಗಿ ದೋರಪ್ಪನ ಮುಂದೆ ಹಿಂಗಿಂಗೆ ಅಂದಾಗ ಹೆಂಗೋ ಎರಡು ಎಕರೆ ಜಾಗ ಪೊಲೀಸ್ ಕ್ವಾಟ್ರಸ್ ಹಿಂಭಾಗವೇ ಸಿಕ್ತು. ಬರ್ತಾ ಬರ್ತಾ ಮಕ್ಕಳ ಸಂಖ್ಯೆಯೂ ಕಡಿಮೆ ಆಯ್ತು,ಸರ್ಕಾರದ ಕಾಲೇಜೊಂದು ಸ್ಯಾಂಕ್ಷನ್ ಕೂಡ ಆಗಿತ್ತು.ಈ ಕಾಲೇಜು ಅನಂತದೆಡೆಗೆ ವಾಲಿದ್ದರಿಂದ ಕೊನೆಯ ಮೊಳೆ ಹೊಡೆಯಲಾಯಿತು. ಇದ್ದವರು ಆರೇಳು ಜನ .ಮುಂದಿನ ಜೀವನ? ಕಾಲೇಜಿನ ಜಾಗವನ್ನ ಗುಡ್ಡೆ ಮಾಂಸದ ತರಹ ಪಾಲು ಹಾಕೊಂಡ್ರು.ಹಾಗೆ ಈ ದುರ್ಗಪ್ಪನಿಗೆ ಜವಾನ ಅಂತ ಸಿಕ್ಕಿದ್ದೇ ಈ ಸೈಟು ! ಕಲಾತ್ಮಕ ಸಿನಿಮಾದಂತಿದ್ದ ಊರು ಈಗ ಈಸ್ಟಮನ್ ಕಲರ್ ತರ ರಂಗೇರತೊಡಗಿತ್ತು.ಊರೇ ಬೀದಿಯಾಗಿದ್ದ ಕಾಲ ಹೋಗಿ ಒಂದೊಂದು ಊರು ಒಂದೊಂದು ಊರಾಗಿ ಬೆಳೆದಿತ್ತು.
ದುರ್ಗಪ್ಪನಿಗೆ ಸಿಕ್ಕ ಸೈಟಿನ ಸುತ್ತ ಭಾರಿ ಭಾರಿ ಮನೆಗಳೆದ್ದಿದ್ದವು.ಅವನದೊಂದು ಖಾಲಿ ಇತ್ತು. ಮೊದಲಿನಂತೆ ಜನ ಚಪ್ಪಲಿ ಹೊಲಿಸಿಕೊಳ್ಳೋರಿಲ್ಲ,ಪಾಲೀಸು ಹಾಕಿಸೋರಿಲ್ಲ.ಉಂಗುಟ ಕಿತ್ರೂ ಬಿಸಾಕಿ ಆನ್ ಲೈನಲ್ಲೇ ಹೊಸ ಚಪ್ಪಲಿ ತರಿಸಿಕೊಳ್ಳುತ್ತಿದ್ದದ್ದು ದುರ್ಗಪ್ಪನ ಹೊಟ್ಟೆ ಮೇಲೆ ಎರಡನೇ ಬರೆ! ಐಸ್ ಕ್ಯಾಂಡಿ ಅಮೀರ ಊರಲ್ಲಿ ದನದ ಚಾಟಿ ಬುಗುರಿ ಮತ್ತು ದಗಲಬಾಜಿ ಎರಡರಲ್ಲೂ ಎತ್ತಿದ ಕೈ.ಚನ್ನಗಿರಿಗೆ ಹೋಗಿ ಮರದ ಪೆಟ್ಟಿಗೆಯಲ್ಲಿ ಐಸ್ ತುಂಬಿ ತಂದು ಊರು, ಶಾಲೆ ಸುತ್ತಿ ಮಾರಿ ಗುಜರಿ ಸಂಗ್ರಹಿಸಿ ದುಡಿತಿದ್ದ.ದುಡ್ಡಿನ ದಾಹಕ್ ಬಿದ್ದು ಯಾರೋ ಕದ್ದು ತಂದ ಸಾಸಲು ಹಳ್ಳದ ರೈಲ್ವೆ ಸ್ಟೇಷನ್ ನಲ್ ಬಿದ್ದ ಮುರಿದ ರೈಲು ಕಂಬಿ ಖರೀದಿ ಮಾಡಿ ದುಂಡಗಾದ ಹಾಗೆಯೇ ಒಂದೆರಡು ಬಾರಿ ಸಿಕ್ಕು ಜೈಲಿಗೂ ಹೋಗಿಬಂದು ದನದ ವ್ಯಾಪಾರಕ್ಕೆ ನಿಂತಿದ್ದ.ಇಂತಹ ನವರಂಗಿ ಅಮೀರನ ಬಾಲ್ಯದ ಗೆಳೆಯ ದುರ್ಗಪ್ಪ. ಅವನ ಬಡತನ ನೋಡಿಯೇ ಈ ಬೋಲ್ಡಿನ ಐಡಿಯಾ ಮತ್ತು ಹೊಸ ಲೆಕ್ಕಾಚಾರ ಹೇಳಿಕೊಟ್ಟಿದ್ದು.” ಹೇಗೂ ದೊಡ್ಡ ಸೈಟಿದೆ.ಮುಂಭಾಗ ತಗಡಿನ ಶೆಡ್ ಹಾಕು.ಹಿಂದೆ ಆಶ್ರಯ ಮನೆ ಹಾಕಿಸಿಕೊಡ್ತೀನಿ ಕಟ್ಕೊ.ಸಿಂಪಲ್ ವ್ಯಾಪಾರಕ್ಕೆ ದನದ ಮಾಂಸ ಮಾರಾಟ ಮಾಡು.ಬಡಕಲಾದ,ಸಾಯೋ ಸ್ಥಿತಿಯ ದನ ಬರಗಾಲ ಇರೋದ್ರಿಂದ ಸೋವಿಗೆ ಸಿಗ್ತವೆ.ನಿಮ್ಮೋರು ಹೆಂಗೂ ಮಾಂಸಕ್ಕಾಗಿ ಕೆರೆಬಿಳಚಿಗೆ ಹೋಗೋದು ತಪ್ಪುತ್ತೆ.ಚರ್ಮ ಬೇಕಾದ್ರೆ ಮಟನ್ ಬಾಬಣ್ಣ ತಗಂತನೆ, ಅದರಿಂದಲೇ ಅರ್ಧ ದುಡ್ಡು ವಾಪಸ್ ಬರುತ್ತೆ.ದನದ ದುಡ್ಡು ಮಾಂಸ ಮಾರಾಟ ಆದ್ಮೇಲೆ ಕೊಡಂತೆ” ಅಂತ ಆಸೆ ಹುಟ್ಟಿಸಿದ್ದ.
ಹಾಗೆ ಆ ಆಸೆಯ ಬಾಲ ಹಿಡಿದು ಹೊರಟ ದುರ್ಗಪ್ಪ ಸೈಟಲ್ಲಿದ್ದ ಕಸ ಕಡ್ಡಿ, ಗಿಡ ಗಂಟೆ ತೆಗೆದು,ಕಸ ಗುಡಿಸಿ ಅಂಗೈ ತರ ಕ್ಲೀನ್ ಮಾಡಿದ.ಬೀದಿ ಜನ ನಿಂತು ನೋಡಿದರು. ಸರ್ಪಭೂಷಣ ಮೇಷ್ಟ್ರುಬಂದು ‘ ಏನ್ಲ ದುರ್ಗಾ,ಸೈಟ್ ಮಾರ್ತಿಯೇನಲಾ,ಒಳ್ಳೇ ರೇಟ್ ಕೊಡಿಸ್ತೀನಿ’ ಅಂದ್ರು’ ಇಲ್ಲಾ ಸಾ ಮಾರಿ ಏನ್ ಮಾಡನ,ಮನೆ ಕಟ್ತೀನಿ,ಇಲ್ಲೇ ಏನಾರ ಯಾಪಾರ ಮಾಡ್ತೀನಿ’ ಅಂದ ದುರ್ಗಪ್ಪನ ಮಾತಿಗೆ ‘ ಅಲ್ಲೋ ದುರ್ಗಪ್ಪ ನಿಮ್ಮಟ್ಟಿ ಬಿಟ್ಟು,ನಿಮ್ಮ ಜನ ಬಿಟ್ಟು ಇಲ್ ಇರ್ತಿಯ? ಇಲ್ಲಿ ಬರೀ ಸ್ವಾಮ್ಯಾರು,ಲಿಂಗ್ವಂತ್ರು ಇರಾದು.ಅದೂ ಅಲ್ಲದೇ ಇಲ್ಲಿ ನಾಗಮುದ್ರೆ ಕಲ್ಲಿದೆ,ತಿನ್ನುಣ್ಣೋ ಜನಕ್ ಆಗಿ ಬರಲ್ಲ ಸುಮ್ಮನೆ ಸೈಟ್ ಮಾರ್ಕಂಡು ಹಟ್ಯಾಗೇ ಅರಾಮಾಗಿರು’ ಅಂದರು. ದುರ್ಗಪ್ಪ ಅಷ್ಟೇ ಶಾಂತವಾಗಿ ‘ ಇರಲಿ ಬಿಡಿ ಸಾ ನೀವೂ ಮನುಸ್ರು,ನಾವೂ ಮನುಸ್ರುನೆ! ಉಣ್ಣೋ ವಿಚಾರ ಯಾಕ ಬೇಕ್ ಸಾ? ನಿಮಗ್ ಬೇಕಾದ್ ನೀವುಣ್ಣಿ,ನಮಗ್ ಬೇಕಾದ್ ನಾವುಣ್ತೀವಿ.ಅಷ್ಟಕ್ಕೂ ಹೊಟ್ಟೆ ನಮ್ದಲ್ವಾ? ನಂಗೆ ಹಟ್ಯಾಗೇನೂ ಇಲ್ಲ ಅಂತ ಇಲ್ಲಿಗ್ ಬಂದಿದ್ದು.ನನ್ ಜಾಗದಾಗೆ ನಾನಿದ್ರೆ ಯಾರೇನ್ ಮಾಡ್ಯಾರು?’ ಅಂತ ಅನ್ನುತ್ತಲೇ ರೋಡಿಗೆ ಎದುರಾಗಿ ಎರಡು ಕಂಬಿ ನೆಡುವಷ್ಟು ಗುಂಡಿ ತಗೆದು ಹೆಗಲಿಗೆ ಹಾರೆ ಅದಕ್ಕೆ ಸಲಕೆ ಸಿಗಿಸಿ ಪುಟ್ಟಿ ಕೈಲಿಡಿದು ಹಟ್ಟಿ ಕಡೆ ನಡೆದೇ ಬಿಟ್ಟ!
ಮೇಷ್ಟ್ರು ಮೆದುಳಲ್ಲಿ ಏಳೆಡೆ ಸರ್ಪ ತಲೆ ಎತ್ತಿ ಬಿಟ್ಟಿತ್ತು! ಚನ್ನಗಿರಿ ಸಮೀಪದ ನಲ್ಲೂರಿಂದ ವರ್ಗವಾಗಿ ಬಂದು ಇದೇ ಊರಲ್ಲಿ ಮದುವೆ ಆಗಿ ಇಲ್ಲೇ ಝಾಂಡಾ. ಹೆಂಡತಿ ಕಡೆಯಿಂದ ಒಂದಿಷ್ಟು ಜಮೀನು ಸಿಕ್ಕು ರಿಟೈರ್ ಆದಮೇಲೆ ಪ್ರಗತಿಪರ ರೈತ,ಹೆಗಲಿಗೆ ಹಸಿರು ಟವಲ್ ಸದಾ.ಕಾಲೇಜಿನ ಆ ಸೈಟುಗಳಲ್ಲಿ ಮೊದಲು ಕೊಂಡವನೀತ.ಕ್ರಮೇಣ ತನ್ನವರಿಗೇ, ಜಾತಿಬಾಂಧವರಿಗೇ ಸೈಟು ಕೊಡಿಸುತ್ತಾ ಬಂದ.ಅವರಿವರು ಬಂದ್ರೆ ನಾಗಮುದ್ರೆ ಕಲ್ಲಿನ ಬಟ್ಟೆ ಹಾವು ಬಿಟ್ಟು ಓಡಿಸುತ್ತಿದ್ದ.ತನ್ನವರ ಸಭೆಗಳಿದ್ದರೆ ರಾಜಕೀಯ ಮುಖಂಡರು ಬಂದರೆ ಇಡೀ ಬೀದಿ ನಮ್ಮವರದೇ ಎಂಬ ಜಾತಿಯ ಬೀಜಗಳನ್ನು ಅವರ ಕೈಲಿಟ್ಟು ಕಳಿಸುತ್ತಿದ್ದ.ಆದರೆ ದುರ್ಗಪ್ಪನ ಪಾಲಿನ ಸೈಟಿಗೆ ಮಾತ್ರ ಉಂಡೆ ನಾಮ ತಿಕ್ಕಲು ದಾರಿ ಕಾಣದೇ ಸೋತಿದ್ದ. ‘ಅಪ್ಪಟ ವೀರ ಶೈವರ ಶಿವ ಶಕ್ತಿ ನಗರ’ ಎಂಬ ಬೋರ್ಡ್, ಬ್ಯಾನರ್ ಚಂದಾ ಎತ್ತಿ ಬೀದಿಯ ಆರಂಭಕ್ಕೂ ಕೊನೆಗೂ ಕಟ್ಟಸಿದ್ದ.ಪಕ್ಕದ ಬೀದಿಯ ನಾಯಕರ ಹುಡುಗರು ಬಂದು ಎಲ್ಲಾ ಕಿತ್ತು ಹಾಕಿ ಅಮ್ಮ ಅಕ್ಕನ್ನ ಎಣಿಸಿ ಹೋಗಿದ್ದರು.ಆದರೂ ಅಲ್ಲಲ್ಲಿ ಮನೆ ಮುಂದಿನ ಕಟ್ಟೆಗಳಲ್ಲಿ ಶಿವ ಶಕ್ತಿ ನಗರ ಎಂಬ ಗುರುತಿತ್ತು.ಅಂದಿನಿಂದ ಹೆಡೆ ತುಳಿದ ಹಾವಾದ ಸರ್ಪಭೂಷಣ ಮಸಲತ್ತು ಮಾಡ್ತಾ ” ನಮ್ಮ ಬೀದಿ ನಮ್ಮ ಜನ” ಎಂಬ ಆಂಧೋಲನ ಒಳಗೊಳಗೆ ಜಾರಿಯಲ್ಲಿಟ್ಟಿದ್ದ. ದುರ್ಗಪ್ಪನ ಮಾತುಗಳು ಮೇಷ್ಟ್ರು ತಲೇಲಿ ಗುಂಗೆ ಹುಳವಾಗಿದ್ದವು.ಎಷ್ಟೋ ರಾತ್ರಿ ನಿದ್ದೆ ಇಲ್ಲದೇ ಆ ಖಾಲಿ ಸೈಟೇ ನೋಡ್ತಾ ನಿಲ್ತಿದ್ದ. ಒಂದು ದಿನ ಬೆಳ್ ಬೆಳಿಗ್ಗೆ ಸೈಟಿನೆಡೆ ನೋಡಿದರೆ ಬೋರ್ಡೊಂದು ಮಲ್ಲಿಗೆ ಹಾರದೊಂದಿಗೆ ಎದ್ದು ನಿಂತಿತ್ತು.ನೋಡಿದ ಮೇಷ್ಟ್ರಿಗೆ ಮುಕ್ಳೆಲ್ಲಾ ಉರಿದು ಹೋಯಿತು! ಎದ್ ಎದ್ದವನೇ ಹತ್ತಿರ ಹೋಗಿ ನೋಡಿದ ಅದರಲ್ಲಿನ ಅಕ್ಷರಗಳೇ ಕೆರಳಿಸುವಂತಿದ್ದವು ದನದ ಮಾಂಸದ ಮಾರಾಟ ಕೇಂದ್ರ! ದುರ್ಗಪ್ಪನ ಈ ಬೋಲ್ಡು ಆ ಕೇರಿಗೇನು ಇಡೀ ಊರಿಗೆ ಸಂಚಲನ ಮೂಡಿಸಿತ್ತು.ದುರ್ಗಪ್ಪನಿಗೆ ಇದರ ಅರಿವಿಲ್ಲದೇ ಐಸ್ ಕ್ಯಾಂಡಿ ಅಮೀರನಿಗೆ ಮರದ ಕೊಲ್ಡು,ಚಾಕು, ಮಚ್ಚು ತರಲು ಹೇಳಿದ್ದ.ತಾತ್ಕಾಲಿಕವಾಗಿ ದಿಮ್ಮನೆ ತೊಲೆ ಹಾಕಿ ಗುಡಿಸಿಲಿನಾಕಾರ ತೆಂಗಿನ ಗರಿ ಶೆಡ್ ಹಾಕಿದ್ದ.ಬೋಲ್ಡು ಹಾಕಿದ ದಿನವೇ ಶಿವ ಶಕ್ತಿ ನಗರದ ಕೆಲವರು ಹಟ್ಟಿಗ್ ಬಂದು ಧಮ್ಕಿ ಹಾಕಿ ಬೋರ್ಡ್ ತಗೆಯಲು ವಾರ್ನಿಂಗ್ ಕೊಟ್ಟಿದ್ದರು.ಅದರಲ್ಲಿ ಸರ್ಪಭೂಷಣನ ಮಗ ಇದ್ದ. ಯೂತ್ ಲೀಡರ್,ನೀಲಿ ಬಣ್ಣದ ದೇಶಭಕ್ತರ ಗುಂಪು ಕಟ್ಟಿ ಹೈಸ್ಕೂಲ್ ಮೈದಾನದಲ್ಲಿ ದಿನಾ ಬೆಳಿಗ್ಗೆ ಮೀಟಿಂಗ್ ಸೇರಿ ಮಸಲತ್ತು ಮಾಡೋರು.ತಾಲೂಕ್ ಪಂಚಾಯತಿ ಸದಸ್ಯ ಭೀಮಣ್ಣ ನೋಡಿ” ಭೋಸುಡಿ ಮಕ್ಳಾ,ಊರು ತಣ್ಣಗೈತೆ ನೀವು ದೇಶ,ಭಾಷೆ ಜಾತಿ ಅಂತ ಕಡ್ಡಿ ಗೀರ್ತೀರ,ಇನ್ನೊಂದ್ ಸಲ ಇಲ್ಯಾವನರ ಮಿಟಿಂಗ್ ಮಾಡಿದ್ರೆ ಮೆಟ್ ಹರಿತವೆ” ಅಂತ ಅಂದಾಗ ಓಡಿದ್ರು.ಅಂತಾವನೀಗ ಮಾದ್ರಟ್ಟಿಗೆ ಬಂದು ಅವಾಜ್ ಹಾಕಿ ಹೋಗಿದ್ದ.
ದುರ್ಗಪ್ಪನಿಂದಾಗಿ ನಮಗೆಲ್ಲಾ ಊರಾಗೆ ಮಾಂಸ ಸಿಗುತ್ತೆ ಅಂತ ಹಟ್ಟಿ ಜನ ಬಲು ಕುಸಿಯಾಗಿದ್ರು.ಆದರೆ ವಾತಾವರಣ ಹಿಂಗ್ ಉಲ್ಟಾ ಹೊಡೆಯುತ್ತೆ ಅಂತ ಗೊತ್ತಿರಲಿಲ್ಲ.ಆದರೂ ಹಟ್ಟಿ ಜನ ದುರ್ಗಪ್ಪನ ಕುಮ್ಮಕ್ಕಿಗೆ ನಿಂತ್ರು.
ಗುಜರಿ ಜೈನುಲ್ಲನ ಬಳಿ ಸಾಲ ಮಾಡಿ ಕಂಬಿ,ತಗಡು, ವೆಲ್ಡಿಂಗು,ಬಣ್ಣ,ಕಾಂಕ್ರೀಟ್ ಅಂತ ಒಂದುವರೆ ಸಾವಿರ ರುಪಾಯಿ ದುರ್ಗಪ್ಪ ಕಳ್ಕಂಡಿದ್ದ.ತನ್ನ ಚರ್ಮದ ಪೆಟ್ಟಿಗೆ ಮೊಹರಂ ಹಬ್ಬದಲ್ಲಿ ಹುಲಿ ವೇಷ ಹಾಕೋ ಸೋಮಣ್ಣನಿಗೆ ಗಿರವಿ ಇಡ್ತಿನಿ ಅಂದಿದ್ದ.ಅದರ ಹಣ ಬಂದ ಕೂಡಲೇ ಗುಜರಿ ಜೈನುಲ್ಲಗೆ ಕೊಡುವ ಮಾತಾಗಿತ್ತು.ಬೇರೆ ಊರಿಂದ ಬಂದ ಈ ಮೇಷ್ಟ್ರು ನನ್ಮಗ ಇಷ್ಟು ನಿಗಿರಾಡ್ತನಂತ ನಾಯಕರ ಹುಡುಗರೂ ದುರ್ಗಪ್ಪನಿಗೆ ಸಪೋರ್ಟ್ ಮಾಡಿ’ ಯಾವಾಗ ಕೊಯ್ತಿಯ,ಪಾಲಾ,ಕೆಜಿ ಲೆಕ್ಕನಾ ಅಂತ ಶಿವ ಶಕ್ತಿ ನಗರದ ಬೀದಿಗೇ ಕೇಳುವಂತೆ ಅಬ್ಬರಿಸುತ್ತಿದ್ದರು.
ಬೋಲ್ಡು ನಿಂತಾಗಿನಿಂದ ಆ ಬೀದಿಯ ಜನ ಅಂಗಳದ ಬಾಗಿಲೇ ಹೆಚ್ಚಾಗಿ ತೆಗೆಯುತ್ತಿರಲಿಲ್ಲ.ಈ ಐಸ್ ಕ್ಯಾಂಡಿ ಅಮೀರ ಚಾಟಿ ಬುಗುರಿ ಮಾಡೋ ಆರಂಭದಲ್ಲಿ ಕದ್ದು ಮುಚ್ಚಿ ಊರ ಹಿಂದೆ ಕೋಟೆ ಏರಿಯಾದಲ್ಲಿ ಸಾಬ್ರಿಗಾಗಿ ದನ ಕೊಯ್ದು ಪಾಲು ಹಾಕಿ ಮಾರ್ತಿದ್ದ. ಅದು ಊರಿಗೆ ಗೊತ್ತಿತ್ತು .ಯಾರೂ ಏನೂ ರಾಗ ತೆಗೆದಿರಲಿಲ್ಲ.ಆದರೆ ಮಡಿವಂತಿಕೆ ಮೆತ್ಕಂಡಿದ್ದ ಸರ್ಪಭೂಷಣ ಒಂದಿಷ್ಟು ಹುಡುಗರನ್ನ ಕಟ್ಕೊಂಡು ಗೋ ರಕ್ಷಣೆ ಅಂತ ಅಟ್ಯಾಕ್ ಮಾಡಿ ಸ್ಟೇಷನ್ ಗೆ ಹಾಕಿಸಿದ್ದ.ಎರಡು ಸಾವಿರದ ಮಾಂಸಕ್ಕೆ ಇಪ್ಪತ್ತು ಸಾವಿರ ಲಂಚ ಕೊಟ್ಟು ಹೊರಬಂದಿದ್ದ ಅಮೀರ.
ಅದೇ ರಚ್ಚಿಗೆ ದುರ್ಗಪ್ಪನ ಹೆಗಲ ಮೇಲೆ ಬಂದೂಕ ಇಟ್ಟು ಸರ್ಪಭೂಷಣನೆಡೆ ಗುರಿಯಿಟ್ಟಿದ್ದ. ಶಾಲೆಗೆ ಹೋಗೋ ಹುಡುಗರೆಲ್ಲಾ” ಶಿವ ಶಕ್ತಿ ನಗರ,ಮಾಂಸದ ನಗರ” ಅಂತ ಹಾಡು ಕಟ್ಟಿ ಹಾಡ್ತಿದ್ರು.
ಅಂಡಡಿಯಿಂದ ಬಂದ ಗಾಳಿ ಎದುರಿದ್ದವನ ಮೂಗಿಗೆ ಬಡಿಯಲ್ವಾ? ಸ್ಟೇಷನ್ ಗೂ ಸುದ್ದಿ ತಾಕಿತ್ತು.ಬರಿ ಬೋರ್ಡ್ ತಾನೇ? ಯಾರಾದರೂ ದೂರು ಕೊಡಲಿ ವಿಚಾರಿಸೋಣಂತೆ,ಹೊಗೆ ಆಡ್ತಾ ಇರಲಿ ಬೆಂಕಿ ಹತ್ತಿದ ಮೇಲೆ ಫೈರಿಂಜನ್ ಕರ್ಸನಂತೆ ಅಂದ್ಕೊಂಡು ಸುಮ್ನಾದ್ರು. ದೊಡ್ಡೋರತ್ರ ಮೇಷ್ಟ್ರು ದೂರು ಒಯ್ದ. ಅವರು ತಿಪ್ಪೆ ಸಾರಿಸಿ ‘ ಹೋಗ್ರಿ ಕಂಪ್ಲೇಂಟ್ ಕೊಡಿ’ ಅಂತ ರಾಗ ಎಳದ್ರು.
ಏನಂತ ಕೊಡನ? ಮೇಷ್ಟ್ರು ತಲೆ ಕೆರೆದು ಕೊಂಡ.
ಹಿಂಗಿಂಗೆ ನಮ್ಮ ಬೀದಿನ ಪಾಪಿಷ್ಟ ಹಾಳು ಮಾಡಿದ್ದಾನೆ,ಅನಿಷ್ಟ ಮಾರ್ತಾನಂತೆ,ನಾವೆಂಗ್ ಇರಾದು,ಗೋ ಮೂತ್ರ ಹಾಕಿ ಕ್ಲೀನ್ ಮಾಡಿ ಕೊಡಿ ಅನ್ರಿ ಹೋಗ್ರಿ ಅಂದ್ರು. ಜೊತೆಯಲ್ಲಿ ಬರ್ರಿ ಅಂದ್ರೆ ಯಾರೂ ಬರಲಿಲ್ಲ.ಅವರಲ್ಲಿ ಅರ್ಧ ಜನ ದುರ್ಗಪ್ಪನ ಹಟ್ಯಾಗೆ ಕತ್ಲಾದ್ಮೇಲೆ ಉಂಡೆದ್ದು ಹಲ್ಲ ಸಂದೀಲಿ ಕಡ್ಡಿ ಆಡಿಸಿರೋರೆ; ಹೆಂಗ್ ಬಂದಾರು? ಸರ್ಪಭೂಷಣ ಒಬ್ಬನೇ ಹೋಗೋದೇನಂತ ಮಗ ಮತ್ತು ಅವನ ಪುಡಾರಿ ಪಟಾಲಮ್ ಜೊತೆಯಲ್ಲಿ ಹೋಗಿ ಇರೋದನ್ ಹೇಳಿ ಆದಷ್ಟು ಬೇಗ ಅ್ಯಕ್ಷನ್ ತಗಳಿ ,ಇಲ್ಲಾಂದ್ರೆ ಮೇಲಿನ್ ತಂಕ್ ಹೋಗ್ತೀನಿ ಅಂತ ಧಮಕಿ ಹಾಕಿ ಬಂದವನೇ ಸೀದಾ ಮನೆಗೂ ಹೇಳದೆ ಮಗನತ್ರ ಕಸಪಸ ಅಂದು ಮಿನಿ ಜ್ಯೋತಿ ಬಸ್ ಹತ್ತಿ ಎತ್ತಲೋ ಹೋಗಿಬಿಟ್ಟ!
ಸಣ್ಣೂರು ಮತ್ತೆಲ್ಲಿಯ ಉಸಾಬರಿ, ಜಾತೀಯತೆಗೆ ತಿರುಗಿದರೆ ಕಷ್ಟ ಅಂತ ಇಬ್ಬರು ಪಿಸಿಗಳಿಗೆ ಅದ್ಯಾರು ದೊಡ್ಡ ಮನುಷ್ಯ ಕರ್ಕಂಡ್ ಬನ್ನಿ ಅಂತ ಎಸ್ ಐ ಕಳಿಸಿದ್ದರು.
ಡ್ರೆಸ್ನಲ್ಲೇ ಹೋದ ಪಿಸಿಗಳು ಹಟ್ಟಿತವ ಹೋದ್ರೆ ಸೈಟ್ನಾಗಿದಾನೆ ಅಂದ್ರು.ಅಲ್ಲಿಗೆ ಹೋದ್ರೆ ದುರ್ಗಪ್ಪ ಇಳೆ ಬಿದ್ದ ತೆಂಗಿನ ಗರಿಗಳನ್ನ ಕುಡುಗೋಲಿಂದ ಕೊಯ್ದು ಬಿಸಾಕ್ತಿದ್ದ.ಎಸ್ ಐ ಕರೀತಾರೆ ಬಾರ ದುರ್ಗ ಅನ್ನೋ ಮಾತಿಗೆ ಅದುರಿ ಬಿದ್ದ ದುರ್ಗಪ್ಪ’ ಯಾಕೆ ಏನು’ ಅಂತ ತೊದಲಿದ. ಅಲ್ಲಿಗೆ ನಡಿ ಗೊತ್ತಾಗುತ್ತೆ ಅಂದ್ರು.ಗುಡಿಸಲಿನ ಸೂರಕಟ್ಟಲ್ಲಿ ಕುಡುಗೋಲು ಬಚ್ಚಿಟ್ಟು ಪಂಚೆ ಕೊಡವಿ ಮುಂದೆ ನಡೆದ. ಅದರಲ್ಲಿ ಒಬ್ಬ ಪಿಸಿ ನಲ್ಲೂರು ಮೂಲದವ, ಮೇಷ್ಟ್ಇಗೆ ಧೂರದ ನಂಟ. ಹಮಾಲಿ ಮಾಡೋ ಸಲಾಮ್ ಸಾಬ್ ನ ಕರೆಸಿ ದುರ್ಗಪ್ಪನ ಬೋಲ್ಡು ಕಿತ್ತು ಸ್ಟೇಷನ್ ಕಾಂಪೌಂಡ್ ಮೂಲೆಗೆ ಬಿಸಾಕಿಸಿದ್ದ. ಆಗಲೇ ಸಂಜೆ.ದುರ್ಗಪ್ಪ ಬರುವಷ್ಟರಲ್ಲಿ ಎಸ್‌ ಐ ದಾವಣಗೆರೆ ಎಸ್ ಪಿ ಆಫೀಸಿನ ಬುಲಾವಿಗೆ ಹೋಗಿಯಾಗಿತ್ತು. ಬಂದಿದ್ದೇ ಮರುದಿನ ಮದ್ಯಾಹ್ನ.ಅಲ್ಲಿವರೆಗೆ ದುರ್ಗಪ್ಪ ಪೊಲೀಸರ ಸಖ್ಯದಲ್ಲಿದ್ದ. ಅಷ್ಟರಲ್ಲಿ ಬರಿ ಒಂದೇ ಒಂದು ರಾತ್ರಿಗೆ ದುರ್ಗಪ್ಪ ಊರು ತುಂಬಾ ಹಳೇ ಹೀರೋನಷ್ಟು ಸುದ್ದಿಯಾಗಿ ಫೇಮಸ್ಸಾಗಿದ್ದ.ಮೊನ್ನೆ ಮೊನ್ನೆ ವರದಿಗಾರನಾಗಿದ್ದ ಊರಿನ ಕಿರಣ್ ಈ ಸುದ್ದಿ ರಾಜ್ಯವ್ಯಾಪಿ ಆಗಂಗೆ ಬರೆದಿದ್ದ.ಒಂದೆರಡು ಲೋಕಲ್ ಜಿಲ್ಲಾ ಚಾನಲ್ ಬಂದು ಹಟ್ಟಿ, ಸೈಟು ಶೂಟ್ ಮಾಡಿ ಜಿಲ್ಲಾಧಿಕಾರಿತನಕ ಗುಲ್ಲೆದ್ದಿತ್ತು.ಹಟ್ಟಿ ಜನ ಸರ್ಪಭೂಷಣ ನ ವಿರುದ್ಧ ಮುಷ್ಕರ, ಮಾಡ್ತಾ ಕೂಗಾಡಿ ಸೈಟಲ್ಲೇ ಮಾಂಸ- ಮುದ್ದೆ ಮಾಡಿ ತಿಂದ್ರು.ದಲಿತರ ಶೋಷಣೆ, ಸವರ್ಣಿಯರ ಅಟ್ಟಹಾಸ,ಆಹಾರ ಪದ್ದತಿ ಪ್ರಶ್ನಿಸಿ ಘೆರಾವ್,ಅಮಾಯಕ ದುರ್ಗಪ್ಪನಿಗೆ ನ್ಯಾಯ ಕೊಡಿ ಎಂಬ ಸಿಂಗಲ್ ಲೈನ್ ನ್ಯೂಸ್ ಟಿವಿಗಳಲ್ಲೂ ನೀರ ಮೇಲಿನ ಗುಳ್ಳೆತರ ಬಂದ್ ಬಂದ್ ಹೋದ್ವು!
ದುರ್ಗಪ್ಪನ ಹೆಂಡ್ರು ಮಕ್ಕಳು ಅಳ್ತಾ ಸ್ಟೇಷನ್ ಗೂ ತಂಬಾಕು ತಿಪ್ಪಣ್ಣನ ಮನೆಗೂ ಅಲಿತಿದ್ವು.ಒಂದು ರಾತ್ರಿ ಕಳೆಯೋ ಹೊತ್ತಿಗೆ ರೈತ ಸಂಘ ಒಂದುಕಡೆ,ಚರ್ಮಕಾರ ಕುಟೀರ,ದಸಂಸ ಒಂದು ಕಡೆ ಜಮಾಯಿಸಿ ಬಿಟ್ರು.ಅಲ್ಲಿಂದ- ಇಲ್ಲಿಂದ ಫೋನ್ ಕೇಳಿ ಕೇಳಿ ಎಸ್ ಐ ತಲೆ ಗಿರ್ ಅಂದಿತ್ತು.
ಹೊರ ಹೋಗಿದ್ದ ತಿಪ್ಪಣ್ಣ ಕೊನೆಯ ಸಾರಿ ಎಂಬಂತೆ ಒಳ ಬಂದು ‘ ಹೆಂಗ್ ಮಾಡ್ತೀರ್ ಸಾಹೇಬ್ರೆ…ದುರಗನ್ನ ಬಿಡ್ತಿರೋ,ಇಲ್ಲೋ’ ನೋಡಿ ತಿಪ್ಪಣ್ಣ ,ಇದು ಸಣ್ಣ ಊರು.ಸಣ್ಣ ವಿಚಾರನೂ ಬೇಗ ಹರಡುತ್ತೆ.ದುರ್ಗಪ್ಪ ಅಮಾಯಕ ಅಂತ ನಂಗೂ ಗೊತ್ತು.ಆದರೆ ಅವನ ಹಿಂದಿರುವ ಕೈಗಳು ಮಾಮೂಲಲ್ಲ.ತುಂಬಿದ ಬೀದೀಲಿ ಅಂತಹ ಬೋರ್ಡ್ ಹಾಕಂಗಿಲ್ಲ,ಅದಕ್ಕೆ ಲೈಸೆನ್ಸ್ ಕಡ್ಡಾಯ.ನೆಮ್ಮದಿಯಾಗಿ ಬಾಳುವ ನಾಗರಿಕನ ಹಕ್ಕಿನ ಉಲ್ಲಂಘನೆ ಅದು. ಈಗೀಗ ಗೋಮಾಂಸದ ಬಗ್ಗೆಯೇ ದೇಶದಲ್ಲಿ ಹೊಡೆದಾಟ,ಕೊಲೆಗಳು ನಡೆಯುತ್ತಿರುವಾಗ ಅಣ್ಣತಮ್ಮರ ಹಾಗಿರುವ ಇಂತಹ ಊರುಗಳಲ್ಲೂ ಇದು ಪ್ರವೇಶ ಆಗಬೇಕಾ? ಅಲ್ಲ ಸಾ….ಸರ್ಕಾರನೇ ದನದ ಮಾಂಸ ಮಾರಾಟಕ್ಕೆ ಲೈಸೆನ್ಸ್ ಕೊಡುತ್ತೆ,ಬೀದಿ ಬೀದಿಗಳಲ್ಲಿ ಕೋಳಿ- ಕುರಿ ಅಂಗ್ಡಿ ಇದಾವೆ,ಊರ ಪಕ್ಕ ಕೋಳಿ ವೇಸ್ಟ್‌ ಹಾಕ್ತಾರೆ ಅದನ್ನು ತಿನ್ನೋಕೆ ತೋಳದಂತಹ ನಾಯಿಗಳು. ಅವಕ್ಕೆ ಒಂದು ದಿನ ತಿನ್ನಕ್ ಸಿಗಲಿಲ್ಲ ಅಂದ್ರೆ ಮಕ್ಕಳ ಮೇಲೆ ಮುದುಕರ ಮೇಲೆ ಎಗರಿ ಕಚ್ಚಿದ ಉದಾಹರಣೆ ನಿಮಗ್ಗೊತ್ತಿಲ್ವಾ? ತಿಪ್ಪಣ್ಣ ತುಟಿ ದಡಗಳ ಒರೆಸಿಕೊಳ್ಳುತ್ತಾ ಹೇಳಿದ. ಹೌದ್ರೀ,ಸರ್ಕಾರ ಪರ್ಮಿಷನ್ನೂ ಕೊಡುತ್ತೆ,ನಿಷೇಧನೂ ಹೇರುತ್ತೆ. ಬಾಟ್ಲಿ ಮೇಲೆ,ಸಿಗರೇಟು ಮೇಲೆ’ ಶಾಸನ ವಿಧಿಸಿದ ಎಚ್ಚರಿಕೆ’ ಅಂತ ಇದ್ರೂ ಬಳಸಲ್ವೇ ಹಾಗೆ.ಈಗ ಸಧ್ಯಕ್ಕೆ ದುರ್ಗಪ್ಪನ್ನ ಕರೆದು ಕೊಂಡು ಹೋಗಿ.ಬಂದು ಹಾರಾಡಿ ಹೋದ ಆ ಮೇಷ್ಟ್ರು ಊರು ಬಿಟ್ಟಿದ್ದಾರಂತೆ ಬಂದ್ರೆ ನೀವೇ ಕರ್ಕೊಂಡು ಬನ್ನಿ, ಅದೇನು ಸೆಟ್ಲು ಮಾಡಿ ಅಂತಂದು ಬೆಲ್ ಒತ್ತಿ ಪಿಸಿನ ಕರೆದು ದುರ್ಗಪ್ಪನ್ನ ಕಳಿಸಲು ಹೇಳಿದರು.
ಹೊರ ಬಂದ ದುರ್ಗಪ್ಪ ಏನೋ ಹುಡುಕ್ತಿದ್ದ.ಹೆಂಡತಿ ಮಕ್ಕಳಿದ್ದರೂ ಅವನ ಕಣ್ಣಿಗೆ ಬೇಕಾದ್ದು ದೂರದ ಮೂಲೆಯಲ್ಲಿ ನಜ್ಜುಗುಜ್ಜಾಗಿ ಬಿದ್ದಿತ್ತು’ ದುರ್ಗಪ್ಪನ ಬೋಲ್ಡು’.
ಹೋದವನೇ ಕಂಬಿಗಳ ಹೆಗಲಿಗೇರಿಸಿ ಬೋಲ್ಡು ಹೆಂಡತಿ ತಲಿಗಿಕ್ಕಿ ನಡಿ ಅಂದ!
ಬಿಸಾಕಲೇ ಅದ್ಯಾಕೀಗ ಮತ್ತೆ ಅಂದ ತಿಪ್ಪಣ್ಣನ ಮಾತಿಗೆ’ ಓ..ಗುಜರಿಗೆ ಕೊಟ್ರೆ ಸಾಲನಾದ್ರೂ ಮಾಫಿ ಆಗ್ತದೆ’ ಅಂದು ಯುದ್ಧ ಸೋತ ಸೈನಿಕನಂತೆ ನಡೆದ. ನಡಿತಾನೆ ಹೆಂಡ್ತಿ ಕೇಳಿದಳು ‘ ಪೊಲೀಸರು ಬಹಳ ಹೊಡದ್ರ’ ಇಲ್ಲಪ್ಪ ಅದ್ಯಾಕೋ ಬೋಲ್ಡು ಹಾಕಬೇಡ,ಮಾಂಸ ಮಾರಬೇಡ,ಫಾಸಿಗ್ ಹಾಕ್ತೀವಂದ್ರು ಯಾಕಂತ ಗೊತ್ತಿಲ್ಲ…ಬ್ಯಾಡ ಬಿಡು ಎದಿಗ್ ಒದ್ದಂಗ್ ಎಕ್ಕಡ ಹೊಲಿದೇ ಬದ್ಕನ್ ನಡಿ’ ಅಂದ! ಸರ್ಕಲ್ನಲ್ಲಿ,ಬಸ್ಟ್ಯಾಂಡ್ನಲ್ಲಿ, ಹೊಂಡದತ್ರ,ಶಿವ ಶಕ್ತಿ ನಗರದ ಸುತ್ತಾ ಧಿಕ್ಕಾರ,ಜೈಕಾರ ಜೊತೆ ಜೊತೆಗೆ ಇನ್ನೂ ಕೇಳುತ್ತಿದ್ದವು. ಹಟ್ಟಿ ಕಡೆ ನಡೆದ ದುರ್ಗಪ್ಪನ ಹೆಗಲ ಮೇಲೆ ಗಳದಂತಹ ಕಬ್ಬಿಣದ ಪೈಪುಗಳು,ರೊಟ್ಟಿ ಪುಟ್ಟಿಯಂತೆ ಬೋಲ್ಡು ಹೊತ್ತ ಅವನ ಹೆಂಡತಿ ,ಅಪ್ಪನ ಬೆರಳು ಅಮ್ಮನ ಸೆರಗು ಹಿಡಿದ ಮಕ್ಕಳು ದರ ದರ ನಡೆದವು.
ಮರುದಿನ ಸಂಜೆ ದಾಟಿತ್ತು. ತಿಪ್ಪಣ್ಣ, ದಸಂಸ ದವರು ಅಂತ ಐದಾರು ಜನ ದುರ್ಗಪ್ಪನ ಹಟ್ಟಿತವ ಬಂದ್ರು.ಆರೋಗ್ಯ ವಿಚಾರಿಸಿ ಬೆಲ್ಲದ ಚಾ ಕುಡಿದು ಕೂತರು.ದುರ್ಗಪ್ಪ ಎಲ್ಲರ ಮಕ ಮಕ ನೋಡಿದ. ಅವನ ಕಣ್ಣಲ್ಲಿ ಬರೀ ಪ್ರಶ್ನೆಗಳೆ! ಒಂಚೂರು ಬಾಯಿಲ್ಲಿ ಅಂತ ತಿಪ್ಪಣ್ಣನನ್ನ ಹಟ್ಟಿಯಿಂದ ತುಸು ದೂರ ಒಯ್ದು ಕಳ್ಳ ದನೀಲಿ ಹೇಳಿದ” ನಿನ್ನ ಬಿಡಸಾಕೆ ಬಲು ಫಜೀತಿ ಆತಲೆ,ಎಸ್ಐ ಫಾಸಿ ಕೇಸ್ ಜಡಿತೀನಂದ್ರು,ಸೈಟ್ ಜಪ್ತಿ ಮಾಡ್ತೀನಂದ್ರು ನಾವ್ ಬಿಟ್ಟೇವ? ಮೇಲ್ತಂಕ ಹೋಗಿ ಯವಾರ ಮುಗಿಸ್ಕಂಡ್ ನಿನ್ ಹೊರಗ್ ತಂದಿದ್ದು” ಯವಾರ? ಅಂದ ದುರ್ಗಪ್ಪ ಹುಂ ನಪ್ಪ….ಎಸ್ ಐ ಗೆ ಈ ನಿನ್ನೆ ಮೊನ್ನೆ ಊರ ತುಂಬಾ ಸ್ರೈಕು,ಕೂಗಾಟ ಅಂತ ಹುಡುಗ್ರು, ಈಗ ಅಲೌರಲ್ಲ ಅವರು ಎಲ್ರೂ ಬಹಳ ತ್ರಾಸಿಂದ ನ್ಯಾಯ ಕೊಡಿಸಿ ಕರ್ಕಂಡು ಬಂದಿದ್ದು ಅಂದ ತಿಪ್ಪಣ್ಣ ತಂಬಾಕು ಅಂಗೈಲಿ ಉಜ್ತಾ.
ನ್ಯಾಯಾನ? ನಂಗಾ? ಮತ್ತೆ ಅಚ್ಚರಿ ದುರ್ಗಪ್ಪನಿಗೆ ಅಲ್ವಾ ಮತ್ತೆ? ಅದಕ್ಕೆ ರೊಕ್ಕ ಹೋಗೈತೆ ರೊಕ್ಕ- ನಾಟಕದ ಮೇಷ್ಟ್ರು ಶೈಲಿಲಿ ಅಂದ ತಿಪ್ಪಣ್ಣ
ದುಡ್ಡಾ? ಬಿಡಿಸಾಕ?
ಹುಂ… ನೋ ಮಾರಾಯ
ಎಷ್ಟು? ಕಣ್ಣರಳಿಸಿ ಕೇಳಿದ
ಅದೂ ಇದೂ,ಅಲ್ಲಿಂದು ಇಲ್ಲಿಂದು ಎಲ್ಲಾ ಸೇರಿ ಒಂದು ಮೂವತ್ತು- ಮೂವತ್ತೈದು ಸಾವ್ರ ಅಂದ ನಿಧಾನವಾಗಿ ತಿಪ್ಪಣ್ಣ.
ಯಾರ್ ಕೊಡಬೇಕು? ಮತ್ ಪ್ರಶ್ನೆ
ಹಣೆ ಚಚ್ಚಿಕೊಂಡ ತಿಪ್ಪಣ್ಣ. ನೀನಲ್ದೆ ಆ ಲಿಂಗಾತ್ರ ಸರ್ಪಭೂಷಣ ಮೇಷ್ಟ್ರ ಕೊಡ್ತನೆ?
ಯಾರೋ ಎರಡೂ ಕಾಲು ಹಿಡಿದು ಭೂಮಿ ಒಳಕ್ ಎಳದಂಗಾತು ದುರ್ಗಪ್ಪನಿಗೆ
ಯಾವಾಗ್ ಕೊಡಬೇಕು?
ನೀ ನಾಳೆ ನಾಡಿದ್ ಯವಸ್ತೆ ಮಾಡು ನಾ ಇವರಿಗೆಲ್ಲಾ ಮ್ಯಾನೆಜ್ ಮಾಡ್ತೀನಿ,ಇದ್ರಾಗ್ ನಂಗ್ ಒಂದು ಕಾಸೂ ಇಲ್ಲಪ್ಪ ಮಾರಾಯ,ನಿಂಗ್ ಒಳ್ಳೆದಾಗಲಿ ಅಂತ ಆಟೆಯಾ…ಅನ್ನುತ್ತಾ ನಕ್ಕು ತಂಬಾಕು ಬಾಯಿಗೊಗೆದು ನಡೆದ! ಮನೆಗ್ ಬಂದ ದುರ್ಗಪ್ಪ ಗುಡಿಸಲಿಗಾನಿಸಿದ್ದ ಬೋಲ್ಡು ನೋಡಿ ಕಣ್ತುಂಬಿಕೊಂಡ. ಹಸಿವಿಲ್ಲ ಅಂತ ಹೆಂಡತಿ ತಂದ ಮದ್ಯಾಹ್ನ- ದ ಮುದ್ದೆ ಬದನೆಕಾಯಿ ಬಜ್ಜಿ ನೋಡದೇ ಬೇಗ ಮಲಗಿಬಿಟ್ಟ. ರಾತ್ರಿ ಅಷ್ಟೊತ್ತಿಗೆ ಎದ್ದು ನೆರಿಕ್ ಬಚ್ಚಲಿಗೆ ಹೋಗಿ ಬಂದು ಗಂಡ ಮಲಗಿದ್ದ ಜಾಗ ನೋಡಿದಳು ದುರ್ಗಪ್ಪ ಇರಲಿಲ್ಲ.ಚೆಂಬು ತಕಂಡು ಸೋಮನಾಳ್ ಹೊಲಗಳ್ತವ ಹೋಗಿರಬೇಕಂತ ಬರೆ ಮುಕಳಿ ಮೇಲೆ ಮಲಗಿದ್ದ ಚಿಕ್ ಮಗನ ಮೇಲೆ ಹರಕು ಸೀರೆ ಹೊದ್ದಿಸಿ ಅಡ್ಡಾದಳು. ಬೆಳ್ ಬೆಳಿಗ್ಗೆ ಹಟ್ಟಿ ಗದ್ದಲದಲ್ಲಿ ಮುಳಗಿತ್ತು.ಏನೋ ಕೇಕೆ,ಎಲ್ಲೋ ಅಳು.ಹೊರಬಂದು ದುರ್ಗಪ್ಪನ ಹೆಂಡತಿ ಇಣುಕಿದಳು.ಪಿಸಿ ಒಬ್ಬ ಅಲ್ಲಿದ್ದವರ ಹತ್ರ ಏನೇನೋ ಹೇಳ್ತಿದ್ದ.ಅರ್ದಂಬರ್ದ ಕೇಳಿಸಿಕೊಂಡವಳು ಎದೆ ಎದೆ ಬಡಿದು ಕೊಂಡು ಸೈಟಿನ ಕಡೆ ಓಡಿದಳು.ಜನ ಸೇರಿದ್ರು.ಸೀಳಿ ಒಳ ಹೋಗಿ ನೋಡಿ ಕುಸಿದು ಬಿದ್ದಳು .ದುರ್ಗಪ್ಪ ಸೈಟಿನ ಗುಡಿಸಲ ತೊಲೆಯಲ್ಲಿ ತೂಗಾಡ್ತಿದ್ದ.ಕಾಲ ಬಳಿ ಬೋಲ್ಡು ಬೋರಲಾಗಿ ಬಿದ್ದಿತ್ತು!

ಮತ್ತಷ್ಟು ಸುದ್ದಿಗಳು

vertical

Latest News

ಸ್ನೇಹಿತೆ ಜತೆ ದೈಹಿಕ ಸಂಪರ್ಕಕ್ಕೆ ಪ್ರೇಯಸಿ ಒತ್ತಾಯ: ನಿರಾಕರಿಸಿದ ಪ್ರಿಯಕರನ ಮರ್ಮಾಂಗವನ್ನೇ ಕಚ್ಚಿದ ಗೆಳತಿ!

newsics.com ಕಾಸ್ಪುರ: ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ್ದಾಳೆ. ಇಂಥದ್ದೊಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ. ಇಲ್ಲಿನ...

ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್’ಗೆ ಹೃದಯಾಘಾತ!

newsics.com ಮುಂಬೈ: ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್'ಗೆ ಹೃದಯ ಸ್ತಂಭನವಾಗಿದ್ದು, ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜಿಯೋಪ್ಲ್ಯಾಸ್ಟಿ ಮಾಡಿಸಲಾಗಿದೆ. ಶಾನವಾಜ್ ಹುಸೇನ್ ಹೃದಯಾಘಾತದಿಂದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಪ್ಲಾಸ್ಟಿ...

ಮನೆ ನೌಕರರಿಗೆ ಕಿರುಕುಳ ನೀಡುತ್ತಿದ್ದ ಸೇನಾ ಮೇಜರ್, ಆತನ ಪತ್ನಿ ಬಂಧನ!

newsics.com ಅಸ್ಸಾಂ: ಮನೆ ನೌಕರರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸೇನಾ ಮೇಜರ್ ಹಾಗೂ ಆತನ ಪತ್ನಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಅಸ್ಸಾಂನ ದಿಮಾ ಹಸಾವೋ ಜಿಲ್ಲೆಯಲ್ಲಿ ಸೇನಾ ಮೇಜರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು...
- Advertisement -
error: Content is protected !!