‘ಸೀತಾಳೆದಂಡೆಯ ಸದ್ದಿಲ್ಲದ ಕತೆಗಳು’ ಇದು ಹಿರಿಯ ಲೇಖಕಿ, ಪತ್ರಕರ್ತೆ ಭಾರತಿ ಹೆಗಡೆಯವರ ಕಥಾಸಂಕಲನ. ಈ ಕೃತಿ ಹೊರಬರಲು ಕಾರಣವಾದ ಸಂಗತಿ, ಕಥಾಸಂಕಲನ ಕುರಿತಾದ ಮಾಹಿತಿಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಜತೆಗೆ ಕಥಾಸಂಕಲನದಲ್ಲಿನ ‘ಗೋಡೆಯೊಂದಿಗೆ ಮಾತನಾಡುವ ಅವಳು..!’ ಎಂಬ ಕತೆಯೂ ಇಲ್ಲಿದೆ. ಈ ಪುಸ್ತಕ ನಾಳೆ ಅಂದರೆ ಭಾನುವಾರ (ಜ.5) ಬೆಳಗ್ಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಪುಸ್ತಕ ಬಿಡುಗಡೆಗೂ ಮುನ್ನವೇ…
(ಹೊಸ ಪುಸ್ತಕ ಬಿಡುಗಡೆಗೂ ಒಂದು ವಾರ ಮೊದಲು ಇಂತಹ ಬರಹವನ್ನು ಲೇಖಕರು ಬರೆದು newsics.com@gmail.com ಗೆ ಕಳುಹಿಸಿದರೆ ಖುಷಿಯಿಂದ ಪ್ರಕಟಿಸುತ್ತೇವೆ.)
* ================= *
- ಭಾರತಿ ಹೆಗಡೆ
ಲೇಖಕಿ
response@134.209.153.225
“ಅವನು ಇಲ್ಲಿರುವನೇ… ಈ ಕಂಬದಲ್ಲಿಯೂ ಇರುವನೇ..ಇಲ್ಲಿ..ಇಲ್ಲಿ…’ ಎಂದು ಪ್ರತಿ ಕಂಬವನ್ನು ತನ್ನ ಗದೆಯಿಂದ ಒಡೆಯುವ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಬರುವ ಹಿರಣ್ಯಕಶಿಪುವಿನ ಹಾಗೆ, “ಅಲ್ಲಿಯೂ ಇರುವನು ತಂದೆಯೇ’ ಎಂದು ಪ್ರತಿ ಕಂಬದಲ್ಲೂ ಶ್ರೀಹರಿಯನ್ನು ಕಾಣುತ್ತೇನೆಂಬ ಬಲವಾದ ನಂಬಿಕೆಯುಳ್ಳ ಪ್ರಹ್ಲಾದನ ಹಾಗೆ, ಯಾವುದಾದರೂ ಒಂದು ಕಂಬದಲ್ಲಿ ಕಂಬ ಒಡೆದು ಉದ್ಭವಿಸುವ ನರಸಿಂಹನ ಹಾಗೆ ಈ ಮನೆಯ ಗೋಡೆಗಳಲ್ಲೂ ಇಂಥ ಒಂದು ನರಸಿಂಹನ ಥರದ್ದೇನಾದರೂ ಎಂದಾದರೂ ಉದ್ಭವಿಸಬಹುದಾ? ಈ ಮನೆಯ ಗೋಡೆಗಳೊಳಗೆ ಯಾರಾದರೂ ಮನುಷ್ಯರು ಸಿಕ್ಕಿಕೊಂಡಿದ್ದಾರಾ? ಅವರೆಂದಾದರೂ ಗೋಡೆಯೊಡೆದು ಧುತ್ತೆಂದು ಎದುರು ನಿಂತುಬಿಡುತ್ತಾರಾ ಎಂದು ರತ್ನಿಯಂಥ ಪುಟ್ಟ ಹುಡುಗಿಗೆ ಬಲವಾಗಿ ಅನಿಸುವುದಕ್ಕೆ ಕಾರಣಗಳಿದ್ದವು.
ಆ ಮನೆಯ ಅಮ್ಮಮ್ಮ ಗೋಡೆಯೊಂದಿಗೆ ಮಾತನಾಡುತ್ತಿದ್ದಳು. ಅವಳೆಂದೂ ಅಜ್ಜನ ಹತ್ತಿರ ನೇರವಾಗಿ ಮಾತನಾಡಿದ್ದೇ ಇಲ್ಲ. ಮನೆಗೆ ಯಾರಾದ್ರೂ ನೆಂಟರು ಬಂದರೆ ಅಜ್ಜ ಅಲ್ಲಿರುವ ಯಾವುದಾದರೂ ಚಿಕ್ಕ ಮಕ್ಕಳ ಹತ್ತಿರ “ನಿನ್ನ ಅಮ್ಮಮ್ಮಂಗೆ ಹೇಳು, ಚಾ ಮಾಡವಡ ಹೇಳಿ’ ಎಂದರೆ, ಅಮ್ಮಮ್ಮ ಮಾತ್ರ ಗೋಡೆ ಕಡೆ ತಿರುಗಿ “ಚಾ ಬೇಕ ಎಂತದೇನ..’ ಎಂದು ಕೇಳುತ್ತಿದ್ದಳು. ಹೀಗೆ ಚಾ ಬೇಕಾ, ಊಟಕ್ಕೆ ಬನ್ನಿ, ತಿಂಡಿಗೆ ಬನ್ನಿ, ಮಜ್ಜಿಗೆ ಬೇಕಾ ಎಂಬಲ್ಲಿಂದ ಶುರುವಾಗಿ, ತಲೆನೋವಿದ್ದರೆ, ಜ್ವರ ಬಂದರೆ “ಕಷಾಯ ಮಾಡಕ್ಯ ಬರವಾ…’ ಎಂದು ಅವಳು ಕೇಳುತ್ತಿದ್ದುದು ಗೋಡೆಯನ್ನೇ. ಹಾಗೆ ಕೇಳಿದಾಗಲೆಲ್ಲ ಅದು ತನಗೆಯೇ ಎಂದು ಸ್ಪಷ್ಟವಾಗಿ ಅಜ್ಜನಿಗೆ ಮಾತ್ರವಲ್ಲ, ಅವರ ಮಕ್ಕಳು, ಮೊಮ್ಮಕ್ಕಳು, ನೆಂಟರಿಷ್ಟರು, ಆ ಮನೆಯ ಆಳುಕಾಳುಗಳು, ಅಷ್ಟೇ ಏಕೆ, ಊರು ಕೇರಿಯವರಿಗೂ ಗೊತ್ತಿತ್ತು. ಅದೊಂಥರದಲ್ಲಿ ಅವರ ಮನೆಗೆ ಹೆಸರು ಬಂದುಬಿಟ್ಟಿತ್ತು ಮಾತನಾಡುವ ಗೋಡೆ ಮನೆ, ಗೋಡೆ ಅಮ್ಮಮ್ಮ ಎಂದು. ಯಾರಾದರೂ ಅಪರಿಚಿತರು ಬಂದರೆ ಅವರ ಮನೆ ಹುಡುಕುವುದೂ ಕಷ್ಟವೆನಿಸುತ್ತಿರಲಿಲ್ಲ. ಸಮೀಪದ ಯಾರದ್ದೇ ಮನೆಗೆ ಹೋಗಿ ಇಂಥವರ ಮನೆಗೆ ಹೋಗಬೇಕೆಂದು ಹೇಳಿದರೆ, “ಅದೇ ಮಾತನಾಡುವ ಗೋಡೆ ಮನೆಯಾ’ ಎಂದು ಕೇಳುವಷ್ಟು ಅವರ ಮನೆಯ ಗೋಡೆ ಮತ್ತು ಆ ಅಮ್ಮಮ್ಮ ಪ್ರಸಿದ್ಧಿ ಪಡೆದಿದ್ದರು.
ಅವರ ಮನೆಯ ಗೋಡೆಯನ್ನು ಯಾವುದರಿಂದ ಮಾಡಿದ್ದಾರೆ. ಮನುಷ್ಯರ ಮಾತು ಕೇಳುವ ಹಾಗೇನಾದರೂ ವಿಶೇಷ ವಸ್ತುವನ್ನು ಸೇರಿಸಿ ಕಟ್ಟಿದ್ದಾರಾ ಎಂದೆಲ್ಲ ಚಿಕ್ಕವಳಾದ ರತ್ನಿಗೆ ಅನಿಸುತ್ತಿತ್ತು. ಗೋಡೆಗೂ ಅಮ್ಮಮ್ಮನಿಗೂ ಎಷ್ಟು ಸಖ್ಯವೆಂದರೆ, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ತಕ್ಷಣ ಆ ಕೆಲಸ ನಿಲ್ಲಿಸಿ ನಡುಮನೆಯ ಗೋಡೆಯ ಬಳಿ ನಿಂತು ಏನೇನೋ ಹೇಳುವಷ್ಟು ಆ ಗೋಡೆ ಅವಳನ್ನು ಕರೆಯುತ್ತಿತ್ತು. ಅದೆಷ್ಟೇ ಜನರಿರಲಿ, ಅದೆಂಥದ್ದೇ ಸಮಾರಂಭವಿರಲಿ, ಅವನ್ನೆಲ್ಲ ಬಿಟ್ಟೂ ಬೇಕಿದ್ದರೆ ಅವಳು ಗೋಡೆ ಬಳಿ ಹೋಗುವವಳೇ.. ಅಷ್ಟು ಸಖ್ಯ ಅವಳಿಗೂ ಆ ಗೋಡೆಗೂ.
ಸಿದ್ದಾಪುರದಿಂದ ಸ್ವಲ್ಪವೇ ದೂರವಿರುವ, ಗೀಜಗೋಡಿನ ಆ ಅಜ್ಜನ ಮನೆಗೂ ರತ್ನಿಯ ಮನೆಗೂ ಯಾವ ಸಂಬಂಧ ಎಂಬುದು ಖಂಡಿತ ಅವಳಿಗೆ ಗೊತ್ತಿರಲಿಲ್ಲ. ಆದರೆ ಸಂಬಂಧಕ್ಕಿಂತಲೂ ಇಬ್ಬರ ಮನೆಗೂ ನಡಪತ್ತು ಹೆಚ್ಚಾಗಿತ್ತು ಎಂಬುದಕ್ಕೆ ಇಬ್ಬರ ಮನೆಯ ಒಡನಾಟವನ್ನು ನೋಡಿಯೇ ಗೊತ್ತಿತ್ತು. ಆ ಮನೆಯ ಅಜ್ಜ ಸಿದ್ದಾಪುರದಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಗೆ ಬಂದಾಗಲೆಲ್ಲ ಇವರ ಮನೆಗೆ ಭೇಟಿ ನೀಡಿ ಒಂದು ಊಟ ಮಾಡಿಯೇ ಹೋಗುವುದು ವಾಡಿಕೆ. ಹಾಗೆಯೇ ರತ್ನಿಯ ಕುಟುಂಬವೂ ಅವರ ಮನೆಗೆ ಹೋಗಿ ವಾರಗಟ್ಟಲೆ ಉಳಿಯುತ್ತಿದ್ದುದುಂಟು. ಅವರ ಮನೆಯಲ್ಲೂ ನಾಲ್ಕಾರು ಈ ಅಜ್ಜನ ಮೊಮ್ಮಕ್ಕಳು ಇದ್ದಿದ್ದರು. ಹಾಗಾಗಿ ಚಿಕ್ಕವಳಾದ ರತ್ನಿಗೆ ಆಡಲು ಮಕ್ಕಳು ಸಿಕ್ಕು, ಸಿದ್ದಾಪುರದ ಶಾಲೆಗೆ ಹೋಗಿ ಬಂದು ಮಾಡಲೂ ಜನವಿಲ್ಲದ್ದಕ್ಕಾಗಿ ಅಲ್ಲಿಗೆ ಹೋಗಲು ಅವಳಿಗೆ ಖುಷಿಯೇ ಇತ್ತು. ಮುಖ್ಯವಾಗಿ ಅಜ್ಜನ ಮೊಮ್ಮಗಳು ವಾಸಂತಿಯೂ, ರತ್ನಿಯೂ ಒಂದೇ ವಾರಿಗೆಯವರಾಗಿ ಇಬ್ಬರೂ ಗೆಳತಿಯರಾಗಿಬಿಟ್ಟಿದ್ದರು. ಹಾಗಾಗಿ ಶಾಲೆಗೆ ರಜೆ ಇದ್ದಾಗಲೆಲ್ಲ ಅಮ್ಮನೊಂದಿಗೆ ಅವರ ಮನೆಗೆ ಹೋಗುತ್ತಿದ್ದಳು. ಹೀಗೆ ಇಬ್ಬರ ನಡಪತ್ತು ಜಾಸ್ತಿ ಇರುವುದರಿಂದ ಯಾವುದೋ ಹತ್ತಿರದ ಸಂಬಂಧವೇ ಇರಬೇಕು ತಮಗೂ ಅವರಿಗೂ ಎಂದುಕೊಂಡಿದ್ದಳು ರತ್ನಿ. ಆದರೆ ಅವರ ಮನೆಗೆ ಹೋದಾಗಲೆಲ್ಲ ರತ್ನಿಯನ್ನೂ ಸೇರಿಸಿ ಆ ಮನೆಗೆ ಬರುವ ಅನೇಕ ಮಕ್ಕಳಿಗೆ ತುಂಬ ಕುತೂಹಲವಿದ್ದದ್ದು ಅಮ್ಮಮ್ಮ ಮಾತನಾಡುವ ಆ ಗೋಡೆ. ಎಷ್ಟೋ ಸಲ ಆ ಗೋಡೆಗಾಗಿಯೇ ಅವರ ಮನೆಗೆ ಹೋಗುತ್ತಿದ್ದುದೂ ಉಂಟು.
ಜತೆಗೆ ಆ ಅಮ್ಮಮ್ಮನಿಗೊಂದು ವಿಚಿತ್ರ ಕಾಯಿಲೆ ಇತ್ತು. ಅವಳು ಏನಾದರೂ ಕೆಲಸ ಮಾಡುವಾಗ ನಡುನಡುವೆ ಏ…ಏ… ಎಂದು ಕೂಗುತ್ತ ಪದೇಪದೆ ನೆಲ ಕುಟ್ಟುತ್ತಿದ್ದಳು. ಬೆಳಗ್ಗೆ ಹೊಸ್ತಿಲು ಒರೆಸುವಾಗ ಆ ಒರೆಸುವ ಬಟ್ಟೆಯಲ್ಲೇ ಹೊಸ್ತಿಲು ಪಟ್ಟಿಯನ್ನು ಕುಟ್ಟುತ್ತಿದ್ದಳು. ಪಾತ್ರೆ ತೊಳೆಯುವಾಗ ಪಾತ್ರೆ ಉಜ್ಜುತ್ತಿದ್ದ ಹಾಗೆಯೇ ಪಾತ್ರೆಯನ್ನೇ ಏಹ್..ಏಹ್.. ಎನ್ನುತ್ತಾ ಕಲ್ಲಿಗೆ ಕುಟ್ಟುತ್ತಿದ್ದಳು. ಎರಡೂ ಕಡೆ ಹಲ್ಲಿರುವ ಬಾಚಣಿಗೆಯಿಂದ ತಲೆಬಾಚುವಾಗ ತನ್ನ ತಲೆಗೆ ತಾನೇ ಏ..ಏಹ್… ಎಂದು ಶಬ್ದ ಮಾಡುತ್ತ ಕುಟ್ಟಿಕೊಳ್ಳುತ್ತಿದ್ದಳು. ಅರೆ, ಇದ್ಯಾಕೆ ಹೀಗೆ ಎಂದು ಮೊದಮೊದಲು ರತ್ನಿಯಂಥ ಚಿಕ್ಕಮಕ್ಕಳಿಗೆ ಅಷ್ಟೇ ಏಕೆ, ಹೊಸದಾಗಿ ಬಂದ ನೆಂಟರಿಷ್ಟರಿಗೂ ಆಶ್ಚರ್ಯವೂ, ಅವಳು ಕೂಗುವುದು ಒಂಥರದಲ್ಲಿ ಭಯವೂ ಆಗುತ್ತಿತ್ತು.
ಏಳೋ… ಹತ್ತೋ.. ಎಷ್ಟಂಕಣದ ಮನೆಯೆಂದೂ ಗೊತ್ತಾಗದಷ್ಟು ದೊಡ್ಡದಾದ ಆ ಮನೆಯಲ್ಲಿ ಚಿಕ್ಕ ಚಿಕ್ಕ ಕೋಣೆಗಳು ಹೆಚ್ಚಿದ್ದವು. ದೊಡ್ಡದಾದ ಪಾಗಾರ, ನಡುವೆ ಅಂಗಳ, ನಂತರ ಜಗುಲಿ, ಜಗುಲಿ ತುಂಬ ಇರುವ ಮರದ ಕಪ್ಪು ಕಂಬಗಳು, ಹೂವುಗಳ ಚಿತ್ತಾರದ ಕಪ್ಪನೆಯ ಮರದ ಪ್ರಧಾನ ಬಾಗಿಲು, ಬಾಗಿಲಿಗೆ ಹಿತ್ತಾಳೆಯ ಬಳೆಯಾಕಾರದ ದೊಡ್ಡ ಹಿಡಿಕೆ, ಬಾಗಿಲು ತೆರೆದರೆ ಎರಡೂ ಕಡೆ ಏನಿದೆ ಎಂದೂ ಗೊತ್ತಾಗದಷ್ಟು ಕತ್ತಲು ಕೋಣೆ, ಅಂದರೆ ಅದೇ ನಡುಮನೆ, ಅದನ್ನು ದಾಟಿದರೆ ದೇವರ ಮನೆ, ನಂತರ ದೊಡ್ಡದಾದ ಅಡುಗೆ ಮನೆ. ಎಷ್ಟು ದೊಡ್ಡದಿದೆ ಮನೆ, ಇದನ್ನು ಚೊಕ್ಕ ಮಾಡಲೆ ಎಷ್ಟು ಆಳಿದ್ದರೂ ಸಾಲದು ಎಂಬಷ್ಟು ದೊಡ್ಡದಿತ್ತು ಆ ಮನೆ. ಆದರೆ ಆ ಮನೆಯ ಮೊಮ್ಮಕ್ಕಳು ಸೇರಿ ರತ್ನಿಯಂಥ ಅನೇಕ ಹುಡುಗ ಹುಡುಗಿಯರಿಗೆ ಸದಾ ಕುತೂಹಲವಿದ್ದದ್ದು ನಡುಮನೆಯ ಆ ಗೋಡೆ. ದೇವರ ಮನೆಗೆ ತಾಕಿದಂತಿದ್ದ ನಡುಮನೆಯಲ್ಲಿ ನಿಂತು ಗೋಡೆಯ ಕಡೆಗೆ ತಿರುಗಿ ಅಮ್ಮಮ್ಮ ಒಮ್ಮೊಮ್ಮೆ ದೊಡ್ಡದಾಗಿ, ಒಮ್ಮೊಮ್ಮೆ ಒಳಬಾಯಲ್ಲೇನೋ ಮಣಮಣ ಹೇಳುತ್ತಿದ್ದಳು. ಯಾರಿಗಾದರೂ ಶಾಪ ಹಾಕುತ್ತಿದ್ದಳಾ ಎಂದುಕೊಂಡು ಅವಳ ಹಿಂದೆಯೇ ಅಲ್ಲಿ ಹೋಗಿ ನೋಡಿದರೆ, ಅಮ್ಮಮ್ಮ ಏ…ಏ.. ಎಂದು ಇಲ್ಲಿ ನೆಲ ಕುಟ್ಟುವ ಹಾಗೆಯೇ ಗೋಡೆಯನ್ನೊಮ್ಮೆ ಕುಟ್ಟಿ, ನಿಧಾನಕ್ಕೆ ಗೋಡೆಯನ್ನು ಸವರುತ್ತ ನಿಲ್ಲುತ್ತಿದ್ದಳು. ‘ಚಾ..ಬೇಕಾ ನಿಂಗಕ್ಕಿಗೆ. ರಾಶಿ ಸಾಕಾಗ್ಹೋಯ್ದು ಕಾಣ್ತು ನಿಂಗಕ್ಕಿಗೆ, ಬಿಸಿಲು ಬೇರೆಯಾ. ಪಾಪ, ತ್ವಾಟಕ್ಕೆ ಹೋಗಿ ಕೆಲಸ ಮಾಡಕ್ಯಂಡು ಬಂದು ಸುಸ್ತಾಯ್ದಿ ಕಾಣ್ತು, ಇರಿ, ಯಾಲಕ್ಕಿ ಹಾಕಿ ಚಾ ಮಾಡಕ್ಯ ಬತ್ತಿ ತಡೀರೀ…’ ಎಂದು ಹೇಳುತ್ತಿದ್ದಳು ಅಲ್ಲಿ ಯಾರೋ ಇದ್ದಾರೆಂದುಕೊಂಡು. ‘ತಡೀರಿ.. ಈಗ್ಲೇ ಮಾಡಕ್ಯ ಬತ್ತಿ. ಎಲ್ಲೂ ಹೋಗಡಿ….’ ಎಂದು ಹೇಳಿ ಸೀದಾ ಅಡುಗೆ ಮನೆಗೆ ಬಂದವಳು ಸರಸರನೆ ಚಹಾ ಮಾಡಿಕೊಂಡು, ಮನುಷ್ಯರಿಗೆ ಕುಡಿಸುವ ಹಾಗೆ ತಾನೇ ಚಹಾದ ತಟ್ಟೆ ಎತ್ತಿ “ತಗಳಿ, ಕುಡೀರಿ…’ ಎಂದು ಗೋಡೆಗೆ ಚಹಾವನ್ನು ಸುರಿಯುತ್ತಿದ್ದಳು. ಗೋಡೆಗೆ ಚಹಾ ಬಿದ್ದು, ನೆಲದವರೆಗೂ ಹರಿಯುತ್ತಿತ್ತು. “ಅಯ್ಯೋ… ಚೆಲ್ಕ್ಯಬಿಟ್ರನಾ.. ಥೊ…’ ಎಂದು ಪ್ರೀತಿಯಿಂದ ತನ್ನ ಸೀರೆಯ ಸೆರಗಲ್ಲಿ ಮಕ್ಕಳ ಬಾಯನ್ನು ಒರೆಸುವಂತೆ ಗೋಡೆಯನ್ನು ಒರೆಸುತ್ತಿದ್ದಳು. ಆ ಸಮಯದಲ್ಲಿ ಅಮ್ಮಮ್ಮನಿಗದೆಷ್ಟು ತನ್ಮಯತೆ ಇತ್ತೆಂದರೆ ಒಬ್ಬ ಗಂಡನಿಗೆ ಹೆಂಡತಿ ಪ್ರೀತಿಯಿಂದ ಸೇವೆ ಮಾಡುವಷ್ಟು ತನ್ಮಯತೆ, ಒಂದು ಮಗುವಿಗೆ ತಾಯೊಬ್ಬಳು ಹಾಲು ಕುಡಿಸುವಷ್ಟು ಮಮತೆ, ವಾತ್ಸಲ್ಯ ಎಲ್ಲವೂ ಅಲ್ಲಿದ್ದವು. ಯಾರಿಗಿವಳು ಚಹಾ ಕುಡಿಸುತ್ತಿದ್ದಾಳೆಂದು ಗೋಡೆ ಹತ್ರ ಹೋದರೆ ಅಲ್ಯಾರೂ ಇರುತ್ತಿರಲಿಲ್ಲ. ಅರೆ..ಮತ್ತೆ ಅಮ್ಮಮ್ಮ ಯಾರ ಹತ್ರ ಮಾತಾಡ್ತಿದ್ದಳು… ಯಾರಿಗೆ ಚಹಾ ಕುಡಿಸಿದಳು, ಗೋಡೆಗೇನಾದ್ರೂ ಕಿಟಕಿ ಇದ್ಯಾ, ಕಿಟಕಿಯಿಂದ ಯಾರಾದರೂ ಬಂದು ಮಾಯವಾಗಿ ಹೋದರಾ ಎಂದುಕೊಂಡರೆ ಆ ಗೋಡೆಗೆ ಕಿಟಕಿಯೇ ಇರಲಿಲ್ಲ. ಹಾಗಿದ್ದರೆ ಅಮ್ಮಮ್ಮ ಯಾರ ಹತ್ರ ಹಾಗೆಲ್ಲ ಮಾತನಾಡುತ್ತಿದ್ದಳು? ಯಾಕೆ ಹಾಗೆ ಮಾತನಾಡುತ್ತಿದ್ದಳು?
ವಿಚಿತ್ರವೆಂದರೆ, ಅಮ್ಮಮ್ಮ ಹೀಗೆಲ್ಲ ಮಾಡುವುದು ರತ್ನಿಯಂಥ ಮಕ್ಕಳಿಗೆ ಆಶ್ಚರ್ಯವಾಗುತ್ತಿದ್ದರೆ ಆ ಮನೆಯವರೊಬ್ಬರಿಗೂ ಏನೂ ಅನಿಸುತ್ತಲೇ ಇರಲಿಲ್ಲ. ಅವರೆಲ್ಲ ಇದೊಂದು ಮಾಮೂಲು ಎಂಬಂತೆ ತಮ್ಮ ಪಾಡಿಗೆ ಕೆಲಸದಲ್ಲಿ ತೊಡಗುತ್ತಿದ್ದರು.
ಹೀಗೆಲ್ಲ ಮಾಡುವ ಅಮ್ಮಮ್ಮ ಮೊದಲಿನಿಂದಲೂ ಹೀಗೇನಾ? ಒಮ್ಮೆ ಅಮ್ಮನ ಬಳಿ ಕೇಳಿಯೂಬಿಟ್ಟಿದ್ದಳು ರತ್ನಿ. “ಯಾಕೆ ಅಮ್ಮಮ್ಮ ಹಂಗೆಲ್ಲ ವಿಚಿತ್ರವಾಗಿ ಕೂಗ್ತು, ಮತ್ತು ಗೋಡೆ ಹತ್ರ ಮಾತಾಡ್ತು, ಎಂತಕ್ಕೆ ಅಜ್ಜನ ಹತ್ರ ಮಾತಾಡ್ತಿಲ್ಲೆ? ಆ ಮನೆಯ ಮಕ್ಕಳ ಹತ್ರವೂ ಎಂತಕ್ಕೆ ಮಾತಾಡ್ತಿಲ್ಲೆ…’ ಎಂದೆಲ್ಲ ಕೇಳಿ, ಅಮ್ಮ, “ಅದೆಲ್ಲ ನಿಂಗಕ್ಕೆಲ್ಲ ತಿಳೀತಿಲ್ಲೆ. ನೀ ಸುಮ್ಮಂಗಿರು’ ಎಂದು ಬೈಸಿಕೊಂಡ ಮೇಲೆ ಮತ್ತೆ ಅಮ್ಮನ ಹತ್ರ ಕೇಳುವ ಸಾಹಸ ಮಾಡಿರಲಿಲ್ಲ.
ಇಷ್ಟೆಲ್ಲ ವಿಚಿತ್ರವಾಗಿರುವ, ಅವಜ್ಞೆಗೆ ಕಾರಣವಾಗಿರುವ ಈ ಅಮ್ಮಮ್ಮ ತುಂಬ ಶ್ರೀಮಂತರ ಮನೆಯಿಂದಲೇ ಬಂದವಳು, ಅವಳಿಗೆ ಬೇಕಾದಷ್ಟು ಜಮೀನು, ಬಂಗಾರ ಎಲ್ಲ ಇದೆ, ಇಲ್ಲಿರುವ ಜಮೀನು ಕೂಡ ಅಮ್ಮಮ್ಮಂದೇ, ಅಜ್ಜ ಇಲ್ಲಿ ಮನೆಯಾಳ್ತನಕ್ಕೆ ಬಂದವನು ಎಂದು ಅಮ್ಮನೇ ಒಮ್ಮೆ ಯಾರ ಬಳಿಯೋ ಹೇಳಿದ್ದನ್ನು ಕೇಳಿಸಿಕೊಂಡಿದ್ದಳು ಕೂಡ.
ನಿಜ, ಅವಳ ಪಾಲಿಗೆ ಬಂದ ಒಂದಷ್ಟು ಜಮೀನನ್ನೂ ಅಜ್ಜನೇ ನೋಡಿಕೊಳ್ಳುತ್ತಿದ್ದ. ಕಣ್ಣು ಕುಕ್ಕುವಷ್ಟು ಸುಂದರಿಯಾಗಿದ್ದ ಅಮ್ಮಮ್ಮನಿಗೂ ಕಪ್ಪಗೆ ತೊಳೆದಿಟ್ಟ ಯಜ್ಞೇಶ್ವರನ ಹಾಗಿರುವ ಅಜ್ಜನೊಂದಿಗೆ ಹೇಗೆ ಮದುವೆಯಾಯಿತು ಎಂಬುದೇ ಸೋಜಿಗ. ಗಂಡಸೇನು ಹೇಗಿದ್ದರೂ ನಡೆಯುತ್ತಿತ್ತಲ್ಲ. ಅದೂ ಆ ಕಾಲದಲ್ಲಿ ಹೆಣ್ಣನ್ನು ಕೇಳುವವರಾದರೂ ಯಾರಿದ್ದರು? ಹೀಗೆ ಅಪ್ಪ, ಸೋದರಮಾವ ಎಲ್ಲ ಸೇರಿ ನೋಡಿ ಮಾಡಿದ ಮದುವೆ, ಅಮ್ಮಮ್ಮ ಮಂಟಪದಲ್ಲಿ ಮಾಲೆ ಹಾಕುವಾಗಲೇ ಅಜ್ಜನನ್ನು ನೋಡಿದ್ದು. ಬೆಳ್ಳಗೆ ಸುರಸುಂದರಿಯಾಗಿದ್ದ ಅಮ್ಮಮ್ಮ, ಕಪ್ಪಗೆ ಇದ್ದ ಅಜ್ಜನನ್ನು ನೋಡಿ ಪಾಪ, ಏನೆನಿಸಿತೋ…?
ಅಮ್ಮಮ್ಮ, ‘ನಿನ್ನ ಮದುವೆ ಯಾವಾಗಾತು, ಮದುವೆಗಿಂತ ಮುಂಚೆ ನೀ ಅಜ್ಜನ್ನ ನೋಡಿದ್ಯ’ ಎಂದು ಕೇಳಿದ್ರೆ ‘ಇಲ್ಯಪ್ಪಾ.. ಆಗೆಲ್ಲ ಎಂತ ನೋಡದು’ ಎಂದು ತುಸುವೇ ನಾಚಿಕೊಂಡು ಕೆಲಸದಲ್ಲಿ ಮಗ್ನಳಾಗುತ್ತಿದ್ದಳು. ಹೀಗೆ ಅದೆಷ್ಟನೇ ವಯಸ್ಸು ಎಂದು ತಿಳಿಯದ ವಯಸ್ಸಲ್ಲಿ ಅವಳ ಮದುವೆಯಾಗಿ ಅವಳ ಮನೆಗೆ ಸೇರಿದವನು ಈ ಅಜ್ಜ, ಅಂದರೆ ವೆಂಕಟ್ರಮಣ ಹೆಗಡೆ. ಮದುವೆಯಾದ ಮೇಲೆ ಬಹುಶಃ ಮತ್ತೆಲ್ಲೂ ಅಮ್ಮಮ್ಮ ಹೋಗಿದ್ದು ಸುಳ್ಳು. ಇಡೀ ದಿನ ಮನೆಗೆಲಸ, ಅಜ್ಜ ಮಕ್ಕಳ ಸೇವೆ, ಕೊಟ್ಟಿಗೆ ಕೆಲಸ, ಗದ್ದೆನಾಟಿ, ಕೊನೆಕೊಯ್ಲು ಇವುಗಳಲ್ಲೇ ಸರಿದು ಹೋಗುತ್ತಿತ್ತು ಅವಳ ಬದುಕು.
ಮನೆಗೆಲಸದಲ್ಲಂತೂ ಎತ್ತಿದ ಕೈ ಅಮ್ಮಮ್ಮ. ಅವರ ಮನೆಯ ಸ್ವಚ್ಛತೆ ಎಷ್ಟಿತ್ತೆಂದರೆ, ಅವರ ಮನೆಯ ಕಡವಾರ (ಅಂದರೆ ಮಲೆನಾಡುಗಳಲ್ಲಿ ಪ್ರತಿ ಮನೆಗಳಿಗೂ ಬಚ್ಚಲು ಮತ್ತು ಪಾತ್ರೆ ತೊಳೆದ ನೀರು ಹೋಗಲು ಮಾಡಿಕೊಂಡ ಚರಂಡಿ ವ್ಯವಸ್ಥೆ) ಕೂಡ ನಮ್ಮನೆ ಅಡುಗೆ ಮನೆಗಿಂತಲೂ ಚೊಕ್ಕವಾಗಿರುತ್ತದೆ ಎಂದು ನೆಂಟರಿಷ್ಟರ ಮನೆಯ ಹೆಂಗಸರೆಲ್ಲ ಮಾತನಾಡಿಕೊಳ್ಳುವಷ್ಟು ಅವರ ಮನೆ ಚೊಕ್ಕವಾಗಿರುತ್ತಿತ್ತು. ದೈದುಣ್ಣವಾದ ಅಂಥ ಮನೆಯ ಕಂಬಗಳು, ಕಿಟಕಿ, ಬಾಗಿಲುಗಳೆಲ್ಲ ಅಮ್ಮಮ್ಮನೊಂದಿಗೆ ಪ್ರೀತಿಯಿಂದ ಇದ್ದವೇನೋ… ಅಜ್ಜ ಮಾತ್ರ ಪ್ರೀತಿಯಿಂದಿರಲಿಲ್ಲ. ಹಾಗಾಗಿ ಅವರೊಡನೆ ಮಾತುಕತೆಯೇ ಇರಲಿಲ್ಲ. ಅವರ್ಯಾಕೆ ಮಾತಾಡುತ್ತಿರಲಿಲ್ಲ ಎಂಬುದು ಬಹುತೇಕರಿಗೆ ಗೊತ್ತೂ ಇರಲಿಲ್ಲ. ಹಾಗೆ ನೋಡಿದರೆ ಅಮ್ಮಮ್ಮ ಮೊದಲಿನಿಂದಲೂ ಮಾತು ಸ್ವಲ್ಪ ಕಡಿಮೆಯೇ. ಅಜ್ಜ- ಅಮ್ಮಮ್ಮ ಮಾತನಾಡಿಕೊಳ್ಳದಿದ್ದರೇನಂತೆ. ಮಕ್ಕಳು ಮಾತ್ರ ದಂಡಿಯಾಗಿ ಹುಟ್ಟಿದವು. ಮೂವರು ಹೆಣ್ಣುಮಕ್ಕಳು, ಐದು ಗಂಡುಮಕ್ಕಳ ತಾಯಿಯಾದ ಅಮ್ಮಮ್ಮನಷ್ಟು ಚೆಂದ ಮಕ್ಕಳ್ಯಾರೂ ಇರಲಿಲ್ಲ.
ಹೀಗೆ ಶ್ರೀಮಂತೆ, ಸುಂದರಿ, ಯಾವ ಆಳಿಗೂ ಕಡಿಮೆ ಇರದಂತೆ ಮನೆಗೆಲಸ ಮಾಡುತ್ತಿದ್ದ, ಇಡೀ ಮನೆಯನ್ನು ಪೈಟ್ ಆಗಿಟ್ಟುಕೊಳ್ಳುತ್ತಿದ್ದ ಅಮ್ಮಮ್ಮ ಯಾಕೆ ಗೋಡೆಹತ್ರ ಮಾತನಾಡುತ್ತಿದ್ದಳು. ಯಾಕೆ ನೆಲ ಕುಟ್ಟುತ್ತಿದ್ದಳು. ಯಾಕೆ ತನ್ನ ತಲೆಯನ್ನೇ ಬಾಚಣಿಗೆಯಲ್ಲಿ ಕುಟ್ಟಿಕೊಳ್ಳುತ್ತಿದ್ದಳು? ಅಜ್ಜ ಯಾಕೆ ಅಮ್ಮಮ್ಮನ ಹತ್ರ ಮಾತನಾಡುತ್ತಿರಲಿಲ್ಲ.. ಎಂಬೆಲ್ಲ ಪ್ರಶ್ನೆಗಳು ಏಳುತ್ತಿದ್ದವು ಅಷ್ಟೆ. ಅದನ್ನು ಪ್ರಶ್ನಿಸುವವರಾರೂ ಇರಲಿಲ್ಲ. ತನ್ನದೇ ಆಸ್ತಿಯನ್ನು ಅಜ್ಜನಿಗೆ ಕೊಟ್ಟರೂ ಅಜ್ಜನಿಗೆ ಹೆದರಿಕೊಳ್ಳುತ್ತಿದ್ದಳು.
ಅಜ್ಜ ಎದುರು ಬಂದರೆ ಸಾಕು, ಭಯಬೀಳುತ್ತಿದ್ದಳು. ಆರಡಿ ಎತ್ತರದ ಕಪ್ಪಗೆ ಇದ್ದ ಅಜ್ಜನ ದರ್ಪದ ಮುಂದೆ ಮೂರಡಿಯ ಬೆಳ್ಳಗೆ ಇರುವ ಅಮ್ಮಮ್ಮ ಗುಬ್ಬಚ್ಚಿಯಂತಾಗುತ್ತಿದ್ದಳು. ಬೇಕಾದಷ್ಟು ಆಸ್ತಿಪಾಸ್ತಿ ಇದ್ದ ಆ ಇಡೀ ಆಸ್ತಿಗೆ ಅಮ್ಮಮ್ಮನೇ ಏಕೈಕ ವಾರಸುದಾರಳು. ಅವಳು ಹುಟ್ಟಿ ಸ್ವಲ್ಪ ವರ್ಷಗಳಿಗೇ ಅವಳ ಅಮ್ಮ ತೀರಿಹೋಗಿ, ಅವಳಪ್ಪ ಭವ-ಬಂಧನದಲ್ಲಿ ಆಸಕ್ತಿ ಕಳೆದುಕೊಂಡು ಮೂರು ಹೊತ್ತೂ ದೇವರ ಪೂಜೆ, ದೇವಸ್ಥಾನ, ಮಠ ಎಂದು ಪಾರಮಾರ್ಥಿಕದ ಕಡೆಯೇ ಹೆಚ್ಚು ಒಲವು ತೋರಿ, ಬೆಳೆಯುತ್ತಿದ್ದ ಮಗಳ ಕುರಿತು ಅಷ್ಟಾಗಿ ಯೋಚಿಸಿರಲೇ ಇಲ್ಲ. ಇಂಥ ಹೊತ್ತಲ್ಲೇ ಆ ಮನೆ, ಆಸ್ತಿ, ಒಬ್ಬಳೇ ಮಗಳು, ಗಂಡು ದಿಕ್ಕಿಲ್ಲದ ಆ ಸಂಸಾರಕ್ಕೆ ಕಣ್ಣು ಹಾಕಿದವರಲ್ಲಿ ಅನೇಕರು. ಹಾಗೆ ಕಣ್ಣುಹಾಕಿ, ಅದರಲ್ಲಿ ಯಶಸ್ವಿಯೂ ಆದವನು ಗೀಜಗೋಡಿನ ಪಕ್ಕದ ಊರಿನ ಸಾತೊಡ್ಡಿಯ ವೆಂಕಟ್ರಮಣ ಹೆಗಡೆ. ಎಲ್ಲರೂ ಸ್ನೇಹದಿಂದ ಅವನನ್ನು ವೆಂಕಣ್ಣ ಎಂದೂ, ಅದು ಕಡೆಗೆ ಯಂಕಣ್ಣ ಎಂದಾಗಿ, ಕಡೆಗೆ ವಯಸ್ಸಾಗುತ್ತಿದ್ದ ಹಾಗೇ ಯಂಕಜ್ಜ ಎಂದೇ ಕರೆಯುತ್ತಿದ್ದರು. ಹಾಗೆ ಅವರ ಮನೆಗೆ ಸೇರಿಕೊಂಡು ತನ್ನ ದರ್ಪ, ಬುದ್ಧಿವಂತಿಕೆಯಿಂದ ಇಡೀ ಊರಿಗೇ ಒಬ್ಬ ಪ್ರಭಾವೀ ವ್ಯಕ್ತಿಯಾಗಿ, ಇಡೀ ಮನೆಯ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದರಲ್ಲಿ ಯಾವ ಆಶ್ಚರ್ಯವೂ ಇರಲಿಲ್ಲ.
ಇಂಥ ಯಂಕಣ್ಣ ತುಂಬ ಶಿಸ್ತಿನ ಮನುಷ್ಯ, ಅಷ್ಟೇ ಧೈರ್ಯಶಾಲಿ ಕೂಡ. ಯಾರಿಗೂ ಹೆದರುವ ಪೈಕಿಯಾಗಿರಲಿಲ್ಲ. ಜಮೀನಿನ ತಕರಾರಿನ ವಿಷಯವಾಗಿ ಪಕ್ಕದ ಮನೆ ರಾಂಭಟ್ರ ಬಳಿ ಜಗಳವಾಡಿ, ಕೋರ್ಟಿಗೂ ಹೋಗಿ ಜಮೀನು ತನ್ನ ಪರವೇ ಮಾಡಿಕೊಂಡು ಬಂದಿದ್ದ. ಇದರಿಂದ ಸಿಟ್ಟಿಗೆದ್ದ ಪಕ್ಕದ ಮನೆ ರಾಂಭಟ್ಟ ಮತ್ತವನ ಕಡೆಯವರು ಸೇರಿಕೊಂಡು ಒಂದು ಸಲ ಈ ಯಂಕಣ್ಣ ಅಡಕೆ ತೋಟದಲ್ಲಿ ಓಡಾಡುತ್ತಿದ್ದಾಗ, ತೋಟದ ಎರಡು ಬಣ್ಣದ ನಡುವಿನ ಹೊಂಡ ಕ್ಯಾದಗೆಗೆ ಹಾಕಿ ತುಳಿದುಬಿಟ್ಟಿದ್ದರು. (ಮಲೆನಾಡ ಕಡೆಗಳ ಅಡಕೆ ತೋಟದ ನಡುವಿನ ಉದ್ದನೆಯ ದಿಬ್ಬದ ಮೇಲೆ ಅಡಕೆ ಮರಗಳಿದ್ದು, ಅವುಗಳ ನಡುವಿನ ಕಾಲುವೆಗೆ ಕ್ಯಾದಗೆ ಎಂದೂ, ಆ ದಿಬ್ಬಕ್ಕೆ ಬಣ್ಣ ಎಂದೂ ಕರೆಯುತ್ತಾರೆ) ಅಲ್ಲಿಂದ ಬದುಕಿಬಂದದ್ದೇ ಹೆಚ್ಚು ಈ ಯಂಕಣ್ಣ. ನಂತರ ರಾಂಭಟ್ಟನ ಮೇಲೆ ಪೊಲೀಸಿಗೆ ದೂರು ನೀಡಿ ಅವರನ್ನು ಜೈಲಿಗೆ ಕಳಿಸಿದ್ದ. ಅಷ್ಟರ ನಂತರ ಈ ಯಂಕಣ್ಣನ ಉಸಾಬರಿಯೇ ಬೇಡವೆಂದು ದೂರ ಇಟ್ಟಿದ್ದರು ಊರವರೆಲ್ಲ.
ಇಂಥ ಅಜ್ಜ ಅಮ್ಮಮ್ಮನ ಹತ್ರ ಇವ ಮಾತನಾಡುತ್ತಿರಲಿಲ್ಲವೋ, ಇವನ ಹತ್ತಿರ ಅಮ್ಮಮ್ಮನೇ ಮಾತನಾಡುತ್ತಿರಲಿಲ್ಲವೋ… ಎಂಬುದು ತಿಳಿಯುತ್ತಿರಲಿಲ್ಲ. ಒಟ್ಟಿನಲ್ಲಿ ಇಬ್ಬರೂ ಮಾತನಾಡಿಕೊಳ್ಳುತ್ತಿರಲಿಲ್ಲ ಅಷ್ಟೆ. ಆದರೆ ಅಮ್ಮಮ್ಮ ಗೋಡೆ ಹತ್ತಿರ ಮಾತ್ರ ಗಂಟೆಗಟ್ಟಲೆ ಮಾತನಾಡುತ್ತಿದ್ದಳು.
ಹೀಗೆ ಅಮ್ಮಮ್ಮ ಗೋಡೆ ಹತ್ತಿರ ಮಾತನಾಡುತ್ತ ಆಡುತ್ತ ತುಂಬ ವರ್ಷಗಳು ಕಳೆದುಹೋದವು. ಮಕ್ಕಳೆಲ್ಲ ದೊಡ್ಡವರಾದರು. ಯಂಕಣ್ಣನಿಗೂ ವಯಸ್ಸಾಗಿ, ಬೆನ್ನು ಬಾಗಿ, ಎಲ್ಲರಿಗೂ ಅಜ್ಜನಾಗಿ ಮನೆಯಲ್ಲೇ ಹೆಚ್ಚಿರುತ್ತಿದ್ದ. ಹೀಗಿದ್ದೂ ಅವ ಅಮ್ಮಮ್ಮನ ಹತ್ತಿರ ಮಾತು ಮಾತ್ರ ಆಡುತ್ತಿರಲಿಲ್ಲ. ಈಗೆಲ್ಲ ಮಕ್ಕಳದ್ದೇ ದರ್ಬಾರು. ದೊಡ್ಡ ಮಗ ರಾಮಚಂದ್ರ ಪೌರೋಹಿತ್ಯ ಅದು ಇದು ಎಂದು ಮನೆಯಲ್ಲೇ ಇದ್ದ. ಉಳಿದ ಮಕ್ಕಳು ಬೇರೆ ಬೇರೆ ಕಡೆ ಇದ್ದರು. ಮೂವರು ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದರು. ಇಷ್ಟೆಲ್ಲ ಆದರೂ ಅಮ್ಮಮ್ಮನ ಗೋಡೆ ಸಾಂಗತ್ಯ ಮತ್ತು ನೆಲ ಕುಟ್ಟುವುದು ಮಾತ್ರ ಕಿಂಚಿತ್ತೂ ಕಡಿಮೆಯಾಗಲಿಲ್ಲ.
ಆದರೆ ಆ ಮನೆಯ ಜನಗಳೆಲ್ಲ ತುಂಬ ವಿಚಿತ್ರವಾಗಿದ್ದರು. ಹೆಂಗಸರೆಲ್ಲ ಸಿಕ್ಕಾಪಟ್ಟೆ ಕೆಲಸ ಮಾಡುತ್ತಿದ್ದರು, ಗಂಡಸರೆಲ್ಲ ಆರಾಮವಾಗಿರುತ್ತಿದ್ದರು. ಮನೆಗೆಲಸ ಮಾಡದಿದ್ದವರು ಮನುಷ್ಯರೇ ಅಲ್ಲ ಎಂಬಂತೆ ನೋಡುತ್ತಿದ್ದರು. ಯಾರು ಹೆಚ್ಚು ಕೆಲಸ ಮಾಡುತ್ತಾರೋ ಅವರೆಲ್ಲ ಸಿಕ್ಕಾಪಟ್ಟೆ ಒಳ್ಳೆಯವರಾಗಿಬಿಡುತ್ತಿದ್ದರು. ಮಕ್ಕಳೆಲ್ಲರೂ ಹೆಚ್ಚುಕಮ್ಮಿ ಒಂದೇ ತೆರನಾಗಿದ್ದರು. ಅಜ್ಜನದ್ದೇ ಗುಣ ಲಕ್ಷಣ. ಆದರೆ ಆ ಅಜ್ಜ ಮತ್ತು ಅವನ ಮಕ್ಕಳೆಲ್ಲ ಒಂಥರದ ಚಪ್ಪಹರುಕತನದವರು. ಯಂಕಣ್ಣನಂತೂ ಮೊದಲಿನಿಂದಲೂ ಹೀಗೇ ಎಂದು ಊರವರೆಲ್ಲ ಆಡಿಕೊಳ್ಳುವಷ್ಟರ ಮಟ್ಟಿಗೆ ಅವ ಚಪ್ಪಹರುಕನಾಗಿದ್ದ. ಅದೇ ಥರ ಅವನ ದೊಡ್ಡ ಮಗ ರಾಮಚಂದ್ರನೂ ಇದ್ದ. ಅವರೊಂದಿಗೆ ಹೆಣ್ಣುಮಕ್ಕಳು ಮಾತನಾಡಲು ಮುಜುಗರಪಟ್ಟುಕೊಳ್ಳುತ್ತಿದ್ದರು. ಯಾರಾದರೂ ಮುಟ್ಟಾಗದ ಹೆಣ್ಣುಮಕ್ಕಳು ಬಂದರೆ, ಮುಟ್ಟಾದ ಮೇಲೆ ಹೇಗಿರಬೇಕು, ಏನು ಹಾಕಿಕೊಳ್ಳಬೇಕೆಂದು ಪಕ್ಕದಮನೆಯ ಅತ್ತೆ ಹತ್ರ ಕೇಳಿ ಕಲತ್ಗ ಎಂದೆಲ್ಲ ಅದೇ ದೊಡ್ಡ ತಮಾಶೆಯೆಂಬಂತೆ ಆಡಿಕೊಂಡು ಮಜಾ ತಗೋತಿದ್ದರು. ಆ ಹೆಣ್ಣುಮಕ್ಕಳೆಲ್ಲ ಇಶ್ಶಿಶ್ಶೀ… ಎಂದು ಮುಖ ಸಿಂಡರಿಸಿ ಮತ್ತೆ ಅವರ ಮುಂದೆ ಸುಳಿಯುತ್ತಿರಲಿಲ್ಲ. ಅಜ್ಜ ಮತ್ತು ದೊಡ್ಡ ಮಗ ರಾಮಚಂದ್ರ ಇಬ್ಬರೂ ಪರಸ್ಪರ ಸ್ಪರ್ಧೆಗೆ ಬಿದ್ದವರಂತೆ ಬಂಡ ಹಲುಬುತ್ತಿದ್ದರು. ಒಮ್ಮೆ ಅವರ ಮನೆಯಲ್ಲಿ ಒಂದು ಸಮಾರಾಧನೆಯ ಸಂದರ್ಭದಲ್ಲಿ, ಅದೇ ಊರಿನ ಕೂಸು ಹೈಸ್ಕೂಲಿಗೆ ಹೋಗುತ್ತಿದ್ದ ಜಯಾಳನ್ನು ಪ್ರತ್ಯೇಕವಾಗಿ ಕೂರಿಸಿಕೊಂಡು ಇವ “ಜಯಾ ಕಲ್ತಗಂಡ್ಯ…’ ಎಂದು ನಾಲಿಗೆ ಕಚ್ಚಿ ವಿಚಿತ್ರವಾಗಿ ಅವಳನ್ನೇ ನೋಡುತ್ತ ಕೇಳುತ್ತಿದ್ದ. ಅದಕ್ಕವಳು ಇಶ್ಶಿಇಶ್ಶೀ… ಎಂದು ನಾಚಿಕೊಂಡು ಮುದುಡಿಕೊಂಡಿದ್ದಳು. “ಕಲ್ತಗಳ್ದೇ ಇದ್ರೆ ಹೇಳು, ಆ ಸಾಯಿತ್ರಮಮ್ಮಂಗೆ ಹೇಳ್ತಿ, ಹೇಳ್ಕೊಡು ಹೇಳಿ’ ಎಂದು ಜೋರಾಗಿ ನಗುತ್ತ ಅವಳ ಬೆನ್ನು ಸವರುತ್ತ ಹೇಳಿದ. ಪಕ್ಕದ ಮನೆಯ ಸಾಯಿತ್ರಮ್ಮಮ್ಮ ಗಂಡ ಇಲ್ಲದೆ ವಿಧವೆಯಾಗಿ ಕೆಂಪುಸೀರೆ ಉಟ್ಟುಕೊಂಡು ಸದಾ ಮಡಿ ಮೈಲಿಗೆ ಎಂದಿರುತ್ತಿದ್ದಳು. ಅವಳನ್ನು ತೋರಿಸಿ ಇವ ಏನನ್ನು ಕಲಿ ಎನ್ನುತ್ತಿದ್ದಾನೆ ಇವಳಿಗೆ ಎಂದು ಅಲ್ಲಿದ್ದವರಿಗೆಲ್ಲ ಕುತೂಹಲವಾಗಿ, ಮಧ್ಯಾಹ್ನ ಊಟದ ಸಮಯದಲ್ಲಿ ಮೆಲ್ಲಗೆ ಜಯಾಳ ಹತ್ರ ಪಕ್ಕದಮನೆಯ ಇದೇ ಸಾವಿತ್ರತ್ತೆಯ ಮೊಮ್ಮಗಳು ಸುಮತಿ, “ರಾಮಚಂದ್ರ ಭಾವ ಅದೆಂತದ್ದೋ ಕಲ್ತಗ ಎಂದು ಹೇಳ್ತಿದ್ನಲೇ, ಎಂತದೇ ಅದು’ ಎಂದು ಕೇಳಿದಳು. ಅದಕ್ಕವಳು ಮುಸಿಮುಸಿ ನಕ್ಕೊಂಡು “ಇಶೀ.. ಚಪ್ಹರುಕ ಅವ, ಮುಟ್ಟಾದಾಗ ಕಚ್ಚೆ ಹಾಕ್ಯಂಬುದು ಕಲ್ತಗಂಡ್ಯ ಎಂದು ಜೋಕು ಮಾಡ್ತ, ಪಿರ್ಕಿ ತಂದು, ನಿಂಗ ಎಲ್ಲ ಅವನ ಕೈಗೆ ಸಿಗಡಿ’ ಎಂದು ಬೈದಿದ್ದಳು. ಈ ರೀತಿಯ ಜೋಕು ಊರಿನ ಹೆಣ್ಣುಮಕ್ಕಳಿಗೇನೂ ಹೊಸದಾಗಿರಲಿಲ್ಲ. ಅಪ್ಪ-ಮಗ ಸೇರಿಯೇ ಮಾಡುತ್ತಿದ್ದರು.
ಒಂದು ಸಲ ಅವರ ಮನೆಗೆ ದಿನಾ ಕೆಲಸಕ್ಕೆ ಬರುವ ದೀವರ ಪೈಕಿ ಕೆರೆದೇವಿಗೆ ಎತ್ತು ಹೊತ್ತು ತೊಡೆ ಬಳಿ ಗಾಯವಾಗಿಬಿಟ್ಟಿತ್ತು. ಅದಕ್ಕೆ ಅವಳು ನಾಕು ದಿವಸ ಕೆಲಸಕ್ಕೇ ಬಂದಿರಲಿಲ್ಲ. ಅವಳ ಗಂಡ ದ್ಯಾವ ಬಂದು ಹೆಗಡೇರೆ, ಕೆರೆದೇವಿ ಇವತ್ತು ಕೆಲ್ಸಕ್ಕೆ ಬರಾಕಲ್ರಾ…ಎಂದ. ಅಲ್ಲೇ ಕೊಟ್ಟಿಗೆಗೆ ಹೊರಟಿದ್ದ ರಾಮಚಂದ್ರ ಸ್ವಲ್ಪ ತಡೆದು ನಿಂತು “ಎಂತಕ್ಕಾ ದ್ಯಾವಾ’ ಎಂದು ಕೇಳಿದ. ಅದೂ ಹೆಗಡೇರೇ. ನಿನ್ನಿನಾಗೆ ಬರಕಾರೆ ಎತ್ತು ಹೊತ್ತು ಬಿಡ್ತು ಅಂತೀನಿ. ಕುಂಟ್ಹಾಕ್‍ತೈತಿ, ಅದಿಕ್ಕೆ ಬರಾಕಲ್ಲ ಅದು. ಅದರ ಕೆಲ್ಸ ನಾನೇ ಮಾಡ್ತೀನಿ’ ಎಂದು ಹೇಳಿ ಕೊಟ್ಟಿಗೆ ಕಡೆ ಹೋಗುತ್ತಿರುವವನನ್ನು ತಡೆದ ಅಜ್ಜ, “ಕೆರೆದೇವಿಗೆ ಎಲ್ಲಿ ಪೆಟ್ಟಾಗೈತಾ ದ್ಯಾವ’ ಎಂದು ವಿಚಿತ್ರ ನಗೆಯಲ್ಲಿ ಕೇಳಿದ. ಅದಿಕ್ಕೆ ದ್ಯಾವ, “ತೊಡೆಹತ್ರ ಹೊತ್ತುಬಿಟೈತ್ರಾ…’ ಎಂದು ಹೇಳಿ ಕೊಟ್ಟಿಗೆಯಲ್ಲಿ ಬಿದ್ದ ಶಗಣಿಯನ್ನು ಬಾಚಲು ಹೋದ. ನಾಕು ದಿವಸಗಳ ನಂತರ ಕೆಲಸಕ್ಕೆ ಬಂದ ಕೆರೆದೇವಿಯನ್ನು, ಅಜ್ಜ ಎಲ್ಲರ ಮುಂದೂ “ಕೆರೆದೇವಿ ಗಟ್ಟಾಕಿ ಹೊತ್ತುಬಿಟೈತೆ..ಇಲ್ಲೇ ಹೊತ್ತುಬಿಟ್ಟೈತೇ…’ ಎಂದು ತೊಡೆ ತೋರಿಸಿ ಕೇಳುತ್ತಿದ್ದರೆ ಕೆರೆದೀವಿ “ಸುಮ್ಕಿರ್ರಾ…..’ಎಂದು ಕವಳ ಹಾಕಿದ ಬಾಯನ್ನು ಮತ್ತಷ್ಟು ಅಗಲಿಸಿ ನಾಚಿ ಕೊಟ್ಟಿಗೆ ಕೆಲಸಕ್ಕೆ ಹೋದಳು. ಅಲ್ಲಿದ್ದವರೆಲ್ಲ ಮುಸಿಮುಸಿ ನಗುತ್ತಿದ್ದರು. ಹೀಗೆ ಯಾರಿದ್ದ ಯಾರಿಲ್ಲ ಎಂದು ನೋಡದೆ ಎಲ್ಲರ ಮುಂದೂ ಹೀಗಿದ್ದೇ ಏನಾದರೂ ಪೋಲಿ ಜೋಕು ಹೇಳುತ್ತಾನೆಂದು ಅಜ್ಜನ ಮುಂದೆ ಹೆಣ್ಣುಮಕ್ಕಳು ಬರಲು ಹೆದರಿಕೊಳ್ಳುತ್ತಿದ್ದರು.
ಇಷ್ಟೆಲ್ಲ ಚಪ್ಪಹರಕರಾಗಿರುವ ಅವರ ಮನೆಯಲ್ಲಿ ತುಂಬ ಮಡಿಮಾಡುತ್ತಿದ್ದರು. ಗಂಡಸರಿಗೆ ಪ್ಯಾಂಟು ಶರ್ಟ್ ಕೂಡ ಅಷ್ಟಿದೆಯೋ ಇಲ್ಲವೋ, ಮಡಿ ಪಂಚೆ ಮಾತ್ರ ಮನೆಯ ನಡುಮನೆಯ ನ್ಯಾಲೆಯಲ್ಲಿ ನೇತಾಡುತ್ತಿದ್ದವು. ದಿನಾ ಬೆಳಗ್ಗೆ ಬೇಗ ಸ್ನಾನ ಮಾಡಿ ಮಡಿ ಉಟ್ಟು, ಸಂಧ್ಯಾವಂದನೆ ಮಾಡಿ, ಪೂಜೆ ಮಾಡುವಂಥ ಮಹಾನುಭಾವರ ಬಾಯಲ್ಲಿ ಸದಾ ಇಂಥ ಪದಗಳೇ. ಹೆಣ್ಣುಮಕ್ಕಳೆಂದರೆ ಒಂದೂ ಮಾತನಾಡದೆ, ಮನೆಗೆಲಸ ಮಾಡಿಕೊಂಡು ಯಾರೊಬ್ಬರಿಗೂ ಜವಾಬು ನೀಡದೆ, ಏನನ್ನೂ ಬಯಸದೆ, ಅವರು ತಂದು ಹಾಕಿದ್ದನ್ನು ಬಾಯಿಮುಚ್ಚಿಕೊಂಡು ತಿನ್ನೋ ದನಗಳ ಹಾಗಿದ್ದರೆ ಅವರೆಲ್ಲ ಸಿಕ್ಕಾಪಟ್ಟೆ ಒಳ್ಳೆಯವರು ಎಂದು ತಿಳಿಯುವಂಥವರು. ಇಂಥ ಮಹಾನುಭಾವರಿಗೆ ಅಮ್ಮಮ್ಮನ ಕುರಿತು ಆಕ್ಷೇಪವಿದ್ದದ್ದು ಅವಳ ಕೆಲಸದ ಮೇಲಾಗಿರಲಿಲ್ಲ. ಏ..ಏಹ್..ಎಂದು ನೆಲ ಅಥವಾ ಪಾತ್ರೆ ಕುಟ್ಟುವುದಕ್ಕಾಗಿಯೂ ಆಗಿರಲಿಲ್ಲ. ಬದಲಾಗಿ ಅವಳು ಗೋಡೆಯ ಬಳಿ ಬಂದು ಮುಕ್ತವಾಗಿ ಮಾತನಾಡುವುದಾಗಿತ್ತು.
ಮೊದಮೊದಲು ಈ ಕುರಿತು ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಮಕ್ಕಳೆಲ್ಲ ದೊಡ್ಡವರಾಗುತ್ತಿದ್ದಂತೆ, ಅದರಲ್ಲೂ ಗಂಡುಮಕ್ಕಳು ದೊಡ್ಡವರಾಗುತ್ತಿದ್ದಂತೆ ಅವರಿಗೆ ಅಮ್ಮನ ಈ ನಡವಳಿಕೆ ಆಕ್ಷೇಪಾರ್ಹವಾಗುತ್ತಿದ್ದವು. ಹೇಳಿಕೇಳಿ ಒಬ್ಬ ಹೆಣ್ಣು ಅಷ್ಟು ಮುಕ್ತವಾಗಿ ಹಾಗೆಲ್ಲ ಮಾತನಾಡುವುದೆಂದರೇನು? ಗಂಡಸು ನಾಕು ಜನರ ಮುಂದೆ ಬೇಕಾದರೂ ಪೋಲಿ ಜೋಕು ಹೇಳಿ ಚಪ್ಪರಿಸಿದರೂ ನಡೆದುಬಿಡುತ್ತದೆ. ಆದರೆ ಒಬ್ಬ ಹೆಣ್ಣು ಅದರಲ್ಲೂ ಮದುವೆ ವಯಸ್ಸು ಮೀರಿದ ಮಕ್ಕಳೆದುರಿಗೆಲ್ಲ ಹೀಗೆಲ್ಲ ಮಾತನಾಡುವುದು ಸರಿಯೇ.. ಹೀಗೆ ಇತರ ಮಕ್ಕಳೆಲ್ಲ ಒಳಗೊಳಗೇ ಗೊಣಗಿದರೂ ದೊಡ್ಡ ಮಗ ರಾಮಚಂದ್ರ ಮಾತ್ರ ಎದುರಾಎದುರೇ ಸಿಟ್ಟಿನಿಂದ ಬೈಯುತ್ತಿದ್ದ. ಒಮ್ಮೊಮ್ಮೆ ತಡೆಯಲಾರದೆ ಹೊಡೆದದ್ದೂ ಇದೆ. ಅವಳಿಗೆ ಸಂತೋಷವಾದರೂ, ದುಃಖವಾದರೂ, ಏನಾದರೂ ಘಟನೆ ನಡೆದರೂ ತಕ್ಷಣ ಅವಳು ಗೋಡೆಯೊಂದಿಗೇ ಹೇಳಿಕೊಳ್ಳುತ್ತಿದ್ದಳು, ಒಬ್ಬ ಆಪ್ತ ಗೆಳೆಯನೊಬ್ಬನಿಗೆ ಹೇಳಿಕೊಂಡಂತೆ, ಒಬ್ಬ ಮಮತಾಮಯಿ ತಾಯೊಬ್ಬಳಲ್ಲಿ ಮಗುವೊಂದು ತನ್ನ ಅಳಲನ್ನು ತೋಡಿಕೊಂಡಂತೆ.
ಯಾರು ಬೈದರೂ, ಹೊಡೆದರೂ ಅಮ್ಮಮ್ಮ ಮಾತ್ರ ತನ್ನ ಗೋಡೆಯೊಂದಿಗಿನ ಸಂವಾದವನ್ನು ಬಿಟ್ಟವಳಲ್ಲ. ಒಂದು ಸಲ ಮಟಮಟ ಮಧ್ಯಾಹ್ನ ಅಜ್ಜ ತೋಟದ ಕೆಲಸ ಮುಗಿಸಿ ಬಂದವನು ಉಸ್ಸೆಂದು ಅಲ್ಲೇ ಜಗುಲಿ ಕಟ್ಟೆ ಮೇಲೆ ಕೂತವನು ಸುತ್ತ ನೋಡಿದ. ಯಾರೂ ಕಾಣದ್ದನ್ನು ಕಂಡು, ಜೋರಾಗಿ ಅಮ್ಮಮ್ಮಂಗೆ ಕೇಳಿಸುವ ಹಾಗೆ “ಮಜ್ಜಿಗೆ ಬೇಕು..’ ಎಂದು ಕೂಗಿದ. ತಕ್ಷಣ ಅಮ್ಮಮ್ಮ ಒಂದು ದೊಡ್ಡ ಲೋಟದಲ್ಲಿ ಮಜ್ಜಿಗೆ ತಂದು ಅಜ್ಜನ ಮುಂದೆ ಹಿಡಿದಳು. ಯಾವತ್ತೂ ಹಾಗೆಲ್ಲ ನೇರವಾಗಿ ಅಜ್ಜನಿಗೇ ಕೊಟ್ಟವಳೇ ಅಲ್ಲ, ಯಾರಾದರೂ ಹುಡುಗರ ಕೈಯ್ಯಲ್ಲೇ ಕೊಟ್ಟು ಕಳಿಸುವಳು. ಅವತ್ತು ಯಾರೂ ಇಲ್ಲದ್ದಕ್ಕೇ ಅವಳೇ ತಂದುಕೊಡುವ ಹಾಗಾಯಿತು. ಮಜ್ಜಿಗೆ ತೆಗೆದುಕೊಂಡವನು ತಟ್ಟೆಯಲ್ಲಿ ನೊಣ ಬಿದ್ದು ತೇಲುತ್ತಿದ್ದುದನ್ನು ಕಂಡು ಸಿಟ್ಟುಬಂದು ಅಮ್ಮಮ್ಮನ ಮುಖಕ್ಕೇ ಮಜ್ಜಿಗೆಯನ್ನು ಎರಚಿಬಿಟ್ಟ. ಇದೇನು ಅಮ್ಮಮ್ಮಂಗೆ ಹೊಸತಾಗಿರಲಿಲ್ಲ. ಕೆಲವೊಮ್ಮೆ ಬಿಸಿ ಚಾವನ್ನು ಅವಳ ಮೈಮೇಲೇ ಎರಚಿದ್ದೂ ಇತ್ತು. ಅದಕ್ಕೆ ತಕ್ಷಣ ಬಚ್ಚಲು ಮನೆಗೆ ಹೋಗಿ ಮುಖ ತೊಳೆದುಕೊಂಡು ಬಂದು ಸೀದ ಗೋಡೆಯ ಬಳಿ ಹೋಗಿ ಗೋಡೆಗೆ ತನ್ನ ಕೆನ್ನೆಯನ್ನು ತುಂಬ ಹೊತ್ತು ಉಜ್ಜುತ್ತ ನಿಂತಳು. ಅಲ್ಲಿಯೇ ಇದ್ದ ರತ್ನಿ ಪಾಪ ಎಂಬಂತೆ ನೋಡುತ್ತ ನಿಂತರೆ ರಾಮಚಂದ್ರ ಮಾತ್ರ “ಸಾಕು ನಡಿ.. ಊಟಕ್ಕೆ ಹೊತ್ತಾತು. ಇನ್ನೂ ಅಡುಗ್ಯಾಯ್ದಿಲ್ಲೆ. ನೈವೇದ್ಯಕ್ಕೆ ಅನ್ನ ಆಗವು, ಸ್ನಾನ ಮಾಡಕ್ಯಂಡು ಅನ್ನಕ್ಕಿಡು’ ಎಂದು ಆದೇಶ ಮಾಡಿದಂತೆ ಹೇಳಿದ. ಅಮ್ಮಮ್ಮ ಗೋಡೆಗೆ ಉಜ್ಜಿದ್ದರಿಂದ ಕೆಂಪಗಾಗಿರುವ ತನ್ನ ಕೆನ್ನೆಯನ್ನು ತಾನೇ ಸವರಿಕೊಳ್ಳುತ್ತ ನಿಧಾನಕ್ಕೆ ಹೋದಳು. ಅನ್ನವನ್ನು ನೈವೇದ್ಯಕ್ಕಿಟ್ಟು, ಎಲ್ಲರಿಗೂ ಬಡಿಸಿ ತಾನೂ ಬಡಿಸಿದ ಮೇಲೆ ಎಂದಿನಂತೆ ಕೋಣೆಗೆ ಹೋಗಿ ಮಲಗುವವಳು ಅವತ್ತು ಮಲಗಲೇ ಇಲ್ಲ. ಬದಲಾಗಿ ಗೋಡೆ ಬಳಿ ಹೋಗಿ ತುಂಬ ಹೊತ್ತು ಗೋಡೆಗೆ ಕೆನ್ನೆಯನ್ನು ಉಜ್ಜುತ್ತಾ ಅಲ್ಲಿಯೇ ನಿಂತಿದ್ದಳು.
ಒಂದು ಸಲವಂತೂ ಸರಿಯಾಗಿ ನೆನಪಿದೆ ಅವಳಿಗೆ. ಅದು ಚೌತಿ ಹಬ್ಬದ ಸಮಯ. ಹಬ್ಬಕ್ಕೆ ಹದಿನೈದು ದಿವಸಕ್ಕಿಂತ ಮುಂಚೆಯೇ ಬಹುತೇಕರ ಮನೆಗಳಲ್ಲಿ ಗಣಪತಿ ಕೂರಿಸುವ ಸಂಭ್ರಮ. ಅದಕ್ಕೆ ಮಂಟಪ ತಯಾರಿಸಬೇಕು, ಗಣಪತಿಯನ್ನು ತರಿಸಬೇಕು, ಚಕ್ಕುಲಿ, ಎಳ್ಳುಂಡೆ, ಹೊದ್ಲುಂಡೆ, ಅರಳುಂಡೆ, ಎಲ್ಲವೂ ಆಗಬೇಕು. ಅದಕ್ಕೂ ಮುನ್ನ ಇಡೀ ಮನೆಯನ್ನು ಚೊಕ್ಕಟಮಾಡಿ, ಗಣಪತಿಯನ್ನು ಇಡಲು ಒಂದು ಮಂಟಪ ತಯಾರಿಸಬೇಕು. ಮಲೆನಾಡಿನಲ್ಲಿ ಚೌತಿ ಹಬ್ಬವೆಂದರೆ ಹಾಗೆ, ಊರಿಗೆ ಊರೇ ಹಬ್ಬದಲ್ಲಿ ತೊಡಗಿಕೊಳ್ಳುತ್ತದೆ. ಪ್ರತಿ ಮನೆಯಲ್ಲೂ ಗಣಪತಿ ತರುತ್ತಾರೆ. ಹಬ್ಬ ಇರುವ ಒಂದು ತಿಂಗಳಿಗೆ ಮೊದಲೇ ಚಕ್ಕುಲಿ ಕಂಬಳವೆಂದು ಮಾಡುತ್ತಾರೆ. ಒಂದು ಮನೆಯಲ್ಲಿ ಚಕ್ಕುಲಿ ಕಂಬಳ ಮಾಡುತ್ತಾರೆಂದರೆ ಊರ ಹೆಂಗಸರೆಲ್ಲ ಅವರ ಮನೆಗೆ ಹೋಗಿ ಚಕ್ಕುಲಿ ಮಾಡಿಕೊಡುತ್ತಾರೆ. ಮಾರನೇದಿನ ಮತ್ತೊಂದು ಮನೆಯಲ್ಲಿ. “ನಾಳೆ ಎಮ್ಮನೇಲಿ ಚಕ್ಲಿ ಕಂಬ್ಳ. ಬರ್ರೇ…’ ಎಂದು ಈ ಹೆಂಗಸರಿಗೆ ಊರ ಹೆಂಗಸರು ಕರೆದುಹೋಗುತ್ತಾರೆ. ಅಂದರೆ ಆಗೆಲ್ಲ ಡಬ್ಬಗಟ್ಟಲೆ ಚಕ್ಕುಲಿ ಮಾಡಿಟ್ಟು ತಿಂಗಳಾನುಗಟ್ಟಲೆ ಶೇಖರಿಸಿಡುತ್ತಿದ್ದರು. ಹಾಗಾಗಿಯೇ ಚಕ್ಕುಲಿ ಕಂಬಳ ಎಂದರೆ ಇಡೀ ಊರವರ ಸಹಕಾರವಿರುತ್ತಿತ್ತು. ಅವತ್ತು ಯಂಕಜ್ಜನ ಮನೆಯಲ್ಲಿ ಚಕ್ಕುಲಿ ಕಂಬಳ ನಡೆಯುತ್ತಿತ್ತು. ಆಗ ಯಂಕಜ್ಜ ಮನೆಯವರಿಗೆಲ್ಲ ಹೊಸ ಬಟ್ಟೆ ತಂದಿದ್ದ. ಅಮ್ಮಮ್ಮಂಗೂ ಒಂದು ಸೀರೆ ತಂದು, ‘ಏ..ನಿನ್ನ ಅಮ್ಮಮ್ಮಂಗೆ ಕೊಡು’ ಎಂದು ಅಲ್ಲಿಯೇ ಆಡಿಕೊಂಡಿದ್ದ ಮೊಮ್ಮಗಳಿಗೆ ಕೊಟ್ಟ. ಅಡುಗೆ ಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದ ಅಮ್ಮಮ್ಮ ಸೀರೆ ಕೊಟ್ಟ ತಕ್ಷಣವೇ ಗಬಕ್ಕನೆ ಕಸಿದುಕೊಂಡು ಕೋಣೆಗೆ ಹೋದಳು. ನೇರಳೆ ಬಣ್ಣದ, ಜರಿಯಂಚಿನ ಆ ಸೀರೆಯನ್ನು ಆ ಕ್ಷಣವೇ ಅಮ್ಮಮ್ಮ ಸಂಭ್ರಮದಿಂದ ಉಟ್ಟಳು. ಇಷ್ಟೆಲ್ಲ ಸಂಭ್ರಮದಿಂದ ಸೀರೆ ಉಟ್ಟುಕೊಂಡು ಅಮ್ಮಮ್ಮ ಅಜ್ಜನೆದುರಿಗೆ ಬಂದು ನಿಲ್ಲುತ್ತಾಳೆಂದು ಭಾವಿಸಿದರೆ ಎಲ್ಲರೂ ನೋಡನೋಡುತ್ತಿದ್ದ ಹಾಗೇ ಅವಳು ಹೋದದ್ದು ಸೀದ ನಡುಮನೆಗೆ. ಮೊದಲೇ ಬೆಳ್ಳಗೆ ಚೆಂದುಳ್ಳಿ ಚೆಲುವೆಯಾಗಿದ್ದ ಅವಳು ಆ ನೀಲಿ ಸೀರೆಯಲ್ಲಿ ದೇವತೆಯ ಹಾಗೆ ಕಾಣುತ್ತಿದ್ದಳು. ನೇರಳೆ ಬಣ್ಣದ ಸೀರೆ ಉಟ್ಟು, ತಲೆಗೂದಲನ್ನು ಗಂಟು ಹಾಕಿಕೊಂಡು ಮೇಲೊಂದು ಕೆಂಪಗಿನ ಅಬ್ಬಲಿಗೆ ಹೂವಿನ ದಂಡೆಯನ್ನು ಗಂಟಿನ ಸುತ್ತವೂ ಕಟ್ಟಿ, ಕಿವಿಗೆರಡು ಬಿಳಿ-ಕೆಂಪು ಹರಳುಗಳ ಬೆಂಡೋಲೆ, ಅದರ ಮೇಲೆ ಬಂಗಾರದಿಂದ ಕಟ್ಟಿದ ಮುತ್ತಿನ ಬುಗುಡಿ, ಮೂಗಿಗೆರಡು ಅಕ್ಕ ತಂಗಿಯರಹಾಗಿರುವ ಹೊಳೆವ ಹರಳಿನ ಮೂಗುಬೊಟ್ಟು, ಕತ್ತಲ್ಲಿರುವ ಎರಡೆಳೆ ಅವಲಕ್ಕಿ ಸರ, ಕೈಗೆರೆಡು ಬಂಗಾರದ ಪಾಟಲಿ, ಗಾಜಿನ ಬಳೆಯ ಜೊತೆಗೆ ಪಾಟಲಿ ಮತ್ತು ಮಗೆಕಾಯಿ ಬೀಜ ಮಾಟದ ಮತ್ತೆರಡು ಬಳೆ, ಎಲ್ಲವೂ ನೇರಳೆ ಸೀರೆಯ ಮೇಲೆ ಫಳಕ್ಕನೆ ಹೊಳೆದು ಅಮ್ಮಮ್ಮ ನವರಾತ್ರಿಯಲ್ಲಿ ಹೂವು ಬಂಗಾರಗಳಿಂದ ಅಲಂಕರಿಸಿಕೊಂಡು ಪೂಜೆಗೆ ಸಿದ್ಧಗೊಂಡಿರುವ ಥೇಟು ಅಮ್ನೋರ ಹಾಗೆಯೇ ಕಾಣುತ್ತಿದ್ದಳು. ಹೀಗೆ ಅಲಂಕರಿಸಿಕೊಂಡ ಅಮ್ಮಮ್ಮ ಗೋಡೆ ಹತ್ರ ಹೋಗಿ ನಿಂತು ಸೀರೆನೆಲ್ಲ ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತ ‘ಹ್ಯಾಂಗ್ ಕಾಣ್ತೀ..ಆನು…’ ಎಂದು ಕೇಳಿದಳು. ಅಲ್ಲಿಂದ ಉತ್ತರ ಬರುತ್ತೋ ಇಲ್ಲವೋ ಸಂಬಂಧವಿಲ್ಲದವಳ ಹಾಗೆ ತಾನೇ ಉತ್ತರಿಸುತ್ತಿದ್ದಳು. “ಅದೇ, ಅವತ್ತು ಮದುವೆಯಾದಾಗ ಒಂದು ಸೀರೆ ತಂದುಕೊಟ್ಟಿದ್ರಲೀ, ಕಡೀಗೆ ಮಾಣಿ ಹುಟ್ಟಿದ ಮೇಲೆ ಇನ್ನೊಂದು ತಂದುಕೊಟ್ಟಿದ್ರಲೀ, ಅದಕ್ಕಿಂತ್ಲೂ ಇದು ಚೊಲೋ ಇದ್ದು’ ಎಂದು ಹಿಂದೆಮುಂದೆ ಸೀರೆ ನೆರಿಗೆ ಸರಿ ಮಾಡಿಕೊಳ್ಳುತ್ತ ಮಾತನಾಡುತ್ತ ನಾಚಿಕೊಳ್ಳುತ್ತಿದ್ದಳು. ಮುಖ ಕೆಳಗೆ ಹಾಕಿಕೊಂಡು ನಾಚಿಕೊಂಡೇ ಏನನ್ನೋ ಹೇಳುತ್ತಿದ್ದಳು. ಅಲ್ಲೇನಾದರೂ ಕನ್ನಡಿ ಇತ್ತಾ ಎಂದೆನಿಸುವಷ್ಟು ತಲ್ಲೀನಳಾಗಿದ್ದಳು ಅವಳು. ಅವಳನ್ನೇ ಹಿಂಬಾಲಿಸಿಕೊಂಡು ಹೋಗಿ ಹಣಕಿ ಹಾಕಿ ನೋಡುತ್ತಿದ್ದ ರತ್ನಿಯಂಥ ನಾಲ್ಕಾರು ಹುಡುಗಿಯರಿಗೆ ಇದು ತುಂಬ ವಿಚಿತ್ರವೆನಿಸಿ ತಡೆಯಲಾಗದೇ ಕಡೆಗೆ ಸೀದಾ ಅಮ್ಮಮ್ಮನ ಕಡೇ ಮಗಳು ಶರಾವತಿಯ ಬಳಿ ರತ್ನಿ ಮತ್ತು ಅಜ್ಜನ ಮೊಮ್ಮಗಳು ವಾಸಂತಿ ಇಬ್ಬರೂ ಸೇರಿ ಕೇಳಿಯೇಬಿಟ್ಟರು, ಅಮ್ಮಮ್ಮ ಯಾಕೆ ಹೀಗೆಲ್ಲ ಮಾಡುತ್ತಾಳೆಂದು. ತಕ್ಷಣ ಅವರ ಬಾಯಿಮುಚ್ಚಿಸಿ, “ತಂಗಿ ನಿಂಗಕ್ಕಿದೆಲ್ಲ ಗೊತ್ತಾಗ್ತಿಲ್ಲೆ, ನಿಂಗ ಇನ್ನೂ ಸಣ್ಣರು. ನಡೀರಿ ಇಲ್ಲಿಂದ’ ಎಂದು ಜೋರು ಮಾಡಿ ಕಳಿಸಿದಳು.
ಹೀಗೆ ದಿನೇದಿನೆ ಕುತೂಹಲಕ್ಕೆ ಕಾರಣವಾದ ಅಮ್ಮಮ್ಮನ ವರ್ತನೆ ಒಮ್ಮೆ ವಿಕೋಪಕ್ಕೆ ಹೋಗುವಂಥ ಸಂದರ್ಭ ಬಂದುಬಿಟ್ಟಿತು. ಅದು ಅಜ್ಜನ ಕಿರಿಯ ಮಗ ಸದಾನಂದನ ಮದುವೆಯ ಹೊಸತು. ಅವ ನೌಕರಿಗೆಂದು ಶಿರಸಿಯಲ್ಲಿರುತ್ತಿದ್ದ. ದೊಡ್ಡಹಬ್ಬದಲ್ಲಿ ಹೊಸಹಬ್ಬವೆಂದು ಊರಗೆ ಬಂದಿದ್ದರು. ಅವನ ನೆಂಟರಿಷ್ಟರೂ ಸೇರಿದ್ದರು. ಆಗ ಹಿರಿಯ ಮಗ ರಾಮಚಂದ್ರನೂ ಮನೆಯಲ್ಲೇ ಇದ್ದ. ಆದರೆ ಅವ ಮದುವೆಗೂ ಮುಂಚೆ ಮನೆಯಲ್ಲಿರುವುದೇ ಅಪರೂಪವಾಗಿತ್ತು. ಅವ ಮಾತ್ರವಲ್ಲ, “ಯಂಕಜ್ಜನೂ ಪ್ರಾಯಗಾಲದಲ್ಲಿ ಹೀಗೇ ಮನೆಯಲ್ಲಿ ಇರುತ್ತಿರಲೇ ಇಲ್ಲ, ಮನೆಯಲ್ಲಿ ಹೆಂಡತಿ ಒಬ್ಬಳನ್ನೇ ಬಿಟ್ಟುಬಿಟ್ಟು ಹಡಬಿಟ್ಟಿ ತಿರಗಲೇ ಹೋಗ್ತಿದ್ದ, ಇಲ್ಲಿ ಹೆಂಡತಿ ಕೂಸು ಗಂಡಂಗೆ ಕಾಯ್ಕಕ್ಯಂಡೇ ಇರ್ತಿತ್ತು ಪಾಪ. ಆಗ ಅಪ್ಪನ ಸರದಿ, ಈಗ ಮಗನ ಸರದಿ ಅಷ್ಟೇಯ…’ ಎಂದು ಪಕ್ಕದ ಮನೆ ಸಾತತ್ತೆ ಆಗಾಗ ಹೇಳುತ್ತಿದ್ದದು ಕಿವಿಮೇಲೆ ಬಿದ್ದಿತ್ತು. ಅದಕ್ಕೆ ಸರಿಯಾಗಿ ಮದುವೆಯಾದ ಮೇಲೆ ಕೆಲವು ದಿನಗಳ ಮಟ್ಟಿಗಾದರೂ ರಾಮಚಂದ್ರ ಮನೆಯಲ್ಲೇ ಇದ್ದ. ಹೊಸ ಹೆಂಡತಿ, ಹೊಸ ಸಂಬಂಧ. ಎಲ್ಲವೂ ಹೊಸತು.. ಆ ಹೆಂಡತಿಗೂ ಅಮ್ಮಮ್ಮನ ಈ ಹವ್ಯಾಸಗಳೆಲ್ಲ ಹೊಸತು. ಮೊದಮೊದಲು ಅಮ್ಮಮ್ಮ ನೆಲ ಕುಟ್ಟುವುದು, ತಲೆಗೆ ಬಾಚಣಿಗೆಯಿಂದಲೇ ಕುಟ್ಟಿಕೊಳ್ಳುವುದೆಲ್ಲ ವಿಚಿತ್ರವೆನಿಸುತ್ತಿತ್ತು ಅವಳಿಗೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಅವಳು ಗೋಡೆಯ ಬಳಿ ಹೋಗಿ ನಿಂತು ಗೋಡೆಯನ್ನು ಸವರುತ್ತ ಪ್ರೀತಿಯಿಂದ ಮಾತನಾಡುವುದೆಲ್ಲ ನೋಡಿ ಆಘಾತಕ್ಕೊಳಗಾಗಿ ಗಂಡನ ಬಳಿ ಕೇಳಿಯೂಬಿಟ್ಟಿದ್ದಳು. ಅತ್ತೆ ಯಾಕೆ ಹಾಗೆಲ್ಲ ನಡೆದುಕೊಳ್ಳುತ್ತಾಳೆಂದು. “ಅವಳಿಗೆ ಮಳ್ಳು ಅದಕ್ಕೆ…’ ಎಂದು ಸಿಡುಕಿನಿಂದ ಹೇಳಿದ್ದ. ಅದನ್ನು ಕೇಳಿಸಿಕೊಂಡು ಪೆಚ್ಚುಮೋರೆ ಹಾಕಿ ಒಳನಡೆದಿದ್ದಳು.
ಅವತ್ತು ಅವರ ಮನೆಯಲ್ಲಿ ವಾರ್ಷಿಕ ಪೂಜೆ. ಕಿರಿಯ ಮಗನ ಹೆಂಡತಿಯ ಕಡೆಯ ನೆಂಟರು ಸೇರಿದಂತೆ ಹೊಸ ಹಳೆ ನೆಂಟರು ಎಂದು ತುಂಬ ಜನ ಸೇರಿದ್ದರು. ಕೊಟ್ಟಿಗೆ ಕೆಲಸ ಮುಗಿಸಿ ಬಂದ ರಾಮಚಂದ್ರ ತಿಂಡಿ ತಿಂದು ಇನ್ನೇನು ಸ್ನಾನಕ್ಕೆ ಹೋಗುವವನು ಒಳಬಂದು ನೋಡುತ್ತಾನೆ. ಅವತ್ತೂ ಚೆಂದವಾಗಿ ಅಲಂಕರಿಸಿಕೊಂಡ ಅಮ್ಮಮ್ಮ ಗೋಡೆಯನ್ನು ಸವರುತ್ತ ತುಂಬ ರಮ್ಯವಾಗಿ ಮಾತನಾಡುತ್ತಿದ್ದಳು. ಸುತ್ತಲಿನವರ ಪರಿವೆಯೇ ಇಲ್ಲದವಳಂತೆ. ನೆಂಟರಿಷ್ಟರೆಲ್ಲ ಅವಾಕ್ಕಾಗಿ ಅಮ್ಮಮ್ಮನನ್ನೇ ನೋಡಹತ್ತಿದ್ದರು. ಯಾವುದೋ ಪವಾಡ ಅಲ್ಲಿ ನಡೆಯುತ್ತಿದೆಯೆಂಬಂತೆ. ಅದನ್ನು ನೋಡಿ ಎಲ್ಲಿತ್ತೋ ಸಿಟ್ಟು ರಾಮಚಂದ್ರನಿಗೆ, “ಬಾ.. ಇಲ್ಲಿ.. ನೀನು ಇಪ್ಪದು ಇಲ್ಲಲ್ಲ… ಬ್ಯಾರೆನೇ ಜಾಗ ಇದ್ದು ಅದಕ್ಕೆ…’ ಎಂದು ಅವಳ ಕೈ ಹಿಡಿದು ದರದರನೆ ಎಳೆದುಕೊಂಡು ಹೋದ. ಸೀದಾ ಅವಳನ್ನು ಮನೆಯ ಹಿಂಬದಿಯ ಕೊಟ್ಟಿಗೆಯಾಚೆಗಿನ ಒಂದು ಸಣ್ಣ ಗುಡಿಸಲಿನಲ್ಲಿ ಕೂಡಿಹಾಕಿ, “ಒಂದೆರಡು ದಿವಸ ಇಲ್ಲೇ ಬಿದ್ದಿರು, ಬುದ್ಧಿ ಬತ್ತು ನಿಂಗೆ..’ ಎಂದು ಬಾಗಿಲು ಜಡಿದು ಬಂದ. ಹಾಗೆ ಅವಳನ್ನು ಎಳೆದೊಯ್ಯುವಾಗ ಮೌನವಾಗಿ, ತಿರುತಿರುಗಿ ಅಜ್ಜನನ್ನು ನೋಡಿದಳು ಅಮ್ಮಮ್ಮ. ಆದರೆ ಅಜ್ಜ ಸುಮ್ಮನೆ ನೋಡುತ್ತ ನಿಂತಿದ್ದ ಅಷ್ಟೇ. ಎಲ್ಲರೂ ಹಾಗೇ ನೋಡುತ್ತಿದ್ದರು ಈ ದೃಶ್ಯವನ್ನು. ಮನುಷ್ಯ ಪ್ರಪಂಚದಿಂದಲೇ ಅವಳನ್ನು ದೂರ ತಳ್ಳುತ್ತಿರುವಂತೆ ಭಾಸವಾಗುತ್ತಿತ್ತು.
ಎದುರಿಗೆ ಕೊಟ್ಟಿಗೆ, ಬಾವಿಕಟ್ಟೆ, ಹಿಂದುಗಡೆ ದೊಡ್ಡ ಗುಡ್ಡ, ಅದರ ಮೇಲೆ ದಟ್ಟ ಕಾಡು. ಗುಡ್ಡದ ಅಂಚಿಗೆ ಅಂಟಿಕೊಂಡಂತೆ ಇದ್ದ ಆ ಸೊಂಗೆ ಮುಚ್ಚಿದ ಗುಡಿಸಲಲ್ಲಿ ಕರೆಂಟಿರಲಿಲ್ಲ. ಹಗರದಬ್ಬೆ ತಟ್ಟಿಯಿಂದ ಕಟ್ಟಿದಂತಹ ಒಂದು ಗುಡಿಸಲು. ಅಲ್ಲಿ ಗೋಡೆಗಳೇ ಇರಲಿಲ್ಲ. ಹಾಗಾಗಿ ಅಮ್ಮಮ್ಮ ಅಲ್ಲೇನು ಮಾಡುತ್ತಾಳೆ, ಹಗರದಬ್ಬೆಯ ತಟ್ಟಿಯನ್ನೇ ಗೋಡೆಯೆಂದು ತಿಳಿದು ಅದನ್ನೇ ಪ್ರೀತಿ ಮಾಡುತ್ತಾಳಾ ಎಂದು ತಿಳಿದರೆ ಅದು ತಪ್ಪಾಗಿತ್ತು. ಅಮ್ಮಮ್ಮ ಅವತ್ತು ಹಗಲೆಲ್ಲ ಸುಮ್ಮನಿದ್ದರೂ ರಾತ್ರಿಯಿಂದಲೇ ಜೋರು ಶಬ್ದ ಮಾಡುತ್ತ ನೆಲ ಕುಟ್ಟುವುದು ಜಾಸ್ತಿಯಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಎಂದಿಗೂ ಅವಳ ಬಾಯಲ್ಲಿ ಬರದ ಪದಗಳೆಲ್ಲ ಬರುತ್ತಿದ್ದವು, “ರಂಡೆ, ಮುಂಡೆ, ಹಲ್ಕಟ್ ರಂಡೆ, ಬೋಸುಡಿಕೆ…’ ಹೀಗೆ ಮನುಷ್ಯ ಮಾತ್ರದವರಿಂದ ಏನೇನು ಪದಗಳು ಬರಲು ಸಾಧ್ಯವೋ ಅವೆಲ್ಲವೂ ನುಗ್ಗುತ್ತಿದ್ದವು. “ಏ..ಬೋಸುಡೀ…ಎನ್ನ ಗಂಡನ್ನ ಮರುಳು ಮಾಡತ್ಯನೇ… ಎನ್ನ ಸಂಸಾರ ಹಾಳಮಾಡತ್ಯನೇ ಹಲ್ಕಟ್ಟ ರಂಡೇ…ಎನ್ನ ಬಂಗಾರ ಬೇಕನೇ ನಿಂಗೆ…’ ಎಂದು ಕೂಗುತ್ತಿದ್ದಳು. ಸ್ವಲ್ಪ ಹೊತ್ತು ಬಿಟ್ಟು, “ಎನ್ನ ಟೀಕೀ ಸರ ಎಲ್ಹೋತೇ…ನೀನೇ ಹಾಕ್ಯಂಡಿದ್ದೆ ಅಲ್ದನೇ…’ ಎಂದು ಕೂಗಿದಳು ಮತ್ತೊಮ್ಮೆ. ಆದರೆ ಹೀಗೆ ಬೈದರೂ.. ನಡುನಡುವೆ “ಏ ಸಾವಿತ್ರಿ…ಬಚ್ಚಲು ಮನೆನ ಕತ್ತಕಡಿಯಿಂದ್ಲೇ ತರಿಯೇ, ಇಲ್ದಿದ್ರೆ ಹಮಾಸ್ಲುಗಟ್ಯಗ್ಯತ್ತು… ಅಡುಗೆ ಮನೆ ಒಲೆನ ಸರಿಯಾಗಿ ಒರಸಗ್ಯಳಿ, ನಿನ್ನಜ್ಜಂಗೆ ಯಾಲಕ್ಕಿ ಹಾಕಿದ ಚಾ ನೇ ಆಗವು ಅದ್ನೇ ಮಾಡಿಕೊಡಿ…’ ಹೀಗೆ ಕುಳಿತಲ್ಲಿಯೇ ಸೊಸೆಗೆ ಆದೇಶ ನೀಡುತ್ತಿದ್ದಳು. “ಸುಮ್ಮಂಗಿರತ್ಯಾ ಇಲ್ಯಾ’ ಎಂದು ಮಗ ಜೋರು ಮಾಡಿದರೂ ಅಮ್ಮಮ್ಮ ಕೂಗುವುದೇನೂ ನಿಲ್ಲಿಸಲಿಲ್ಲ.
ಆದರೆ ವಿಚಿತ್ರವೆಂದರೆ ಅವಳನ್ನು ಹಾಗೆ ಗುಡಿಸಲಿಗೆ ನೂಕಿದ ಮೇಲೆ ಅಜ್ಜನೂ ಸ್ವಲ್ಪ ಮಂಕಾದಂತೆನಿಸಿತು. ಚಾ ಬೇಕೆಂದು ಯಾರೊಡನೆಯೂ ಕೇಳುತ್ತಿರಲಿಲ್ಲ. ಬೇಕೆಂದರೆ ತಾನೇ ಹೋಗಿ ಮಾಡಿಕೊಂಡು ಕುಡಿಯುತ್ತಿದ್ದ. ಸೊಸೆ ಮಾಡಿಕೊಡುತ್ತೇನೆಂದರೂ ಅವಳನ್ನು ಲೆಕ್ಕಿಸದೇ ತಾನೇ ಮಾಡಿಕೊಳ್ಳುತ್ತಿದ್ದ. ಯಾಕೋ ಅಜ್ಜ ತುಂಬ ಜೀರಾದ ಹಾಗೆ ಅನಿಸುತ್ತಿತ್ತು. ಅದೇ ಹೊತ್ತಲ್ಲಿ ಇಲ್ಲಿ ಅಮ್ಮಮ್ಮ ಇಲ್ಲದೆ ಗೋಡೆಯೂ ಮೌನವಾಗಿ ಅಳುತ್ತಿದ್ದಂತೆ ಭಾಸವಾಗುತ್ತಿತ್ತು. ಈಗ ಗೋಡೆ ಹೇಗಿರಬಹುದು ಎಂದು ರತ್ನಿ ಹೋಗಿ ನಿಂತು ನೋಡುತ್ತಿದ್ದಳು. ಹೀಗೇ ಸ್ವಲ್ಪ ದಿನ ಮುಂದುವರಿಯಿತು. ಅಮ್ಮಮ್ಮನ ಈ ಕೂಗಾಟ ಮತ್ತು ಆದೇಶಿಸುವುದೆರಡನ್ನೂ ನಿಲ್ಲಿಸಿರಲಿಲ್ಲ. “ಅತ್ತೇರನ್ನು ಒಳಗೆ ಕರ್ಕಂಡು ಬನ್ನೀ…’ ಎಂದು ರಾಮಚಂದ್ರನ ಹೆಂಡತಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವ ಇರಲಿಲ್ಲ.
ಇಷ್ಟೆಲ್ಲ ಆದರೂ ಯಂಕಜ್ಜ ಒಂದೂ ಮಾತನಾಡಲಿಲ್ಲ. ಮಾತೇನೋ ಆಡಲಿಲ್ಲ. ಆದರೆ ದಿನೇ ದಿನೇ ಕ್ಷೀಣವಾಗುತ್ತಿದ್ದ. ಆದರೆ…ಅದೇನಾಯಿತೋ.. ಒಂದಿನ ಸಿದ್ದಾಪುರದ ಸಂತೆಗೆಂದು ಹೋದ ಅಜ್ಜ ಸೀದಾ ಮನೆಗೆ ಬಂದವನೇ ಹಿಂದುಗಡೆ ಹೋಗಿ ಗುಡಿಸಲ ಬಾಗಿಲು ತೆರೆದು ಅಮ್ಮಮ್ಮನ ಕೈಹಿಡಿದು ಮನೆ ಒಳಗೆ ಕರೆದುಕೊಂಡು ಬಂದುಬಿಟ್ಟ ಎಲ್ಲರೂ ನೋಡುತ್ತಿದ್ದಂತೆ. ಸ್ವತಃ ರಾಮಚಂದ್ರ ನೋಡುತ್ತಿದ್ದರೂ ಅಪ್ಪನ ಆ ಹೊತ್ತಿನ ಧೈರ್ಯಕ್ಕೆ ಏನೂ ಹೇಳಲಾರದವನಂತೆ ನಿಂತಿದ್ದ. ಅಜ್ಜ ಅಮ್ಮಮ್ಮನ್ನು ಒಳಗೆ ಕರೆದುಕೊಂಡು ಬಂದವನೇ ಬಚ್ಚಲು ಮನೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡು ಎಂದು ಅವಳ ಸೀರೆ, ಟವಲು ಎಲ್ಲ ಅವನೇ ತಂದುಕೊಟ್ಟ. ಎಲ್ಲರೂ ಅವಾಕ್ಕಾಗಿ ನೋಡುತ್ತ ನಿಂತರು ಈ ದೃಶ್ಯವನ್ನು ಯಾವುದೋ ಪವಾಡವೇ ಸಂಭವಿಸಿದಂತೆ.
ನಿಜಕ್ಕೂ ನಂತರದ ದಿನಗಳಲ್ಲಿ ಅಲ್ಲೊಂದು ಪವಾಡವೇ ನಡೆದುಹೋಯಿತು. ಅದುವರೆಗೆ ಒಂದೇ ಒಂದೂ ಮಾತನಾಡದ ಅಜ್ಜ-ಅಮ್ಮಮ್ಮ ಇಬ್ಬರೂ ಮಾತನಾಡತೊಡಗಿದರು. ಎಲ್ಲಕ್ಕಿಂತ ಮುಖ್ಯವಾಗಿ ಅಮ್ಮಮ್ಮ ಈಗೀಗ ಗೋಡೆ ಬಳಿ ಹೋಗುತ್ತಿರಲಿಲ್ಲ. ಅಜ್ಜನ ಹತ್ತಿರವೇ ಮಾತನಾಡುತ್ತಿದ್ದಳು. ಪ್ರೀತಿಯಿಂದ ಚಹಾ ಮಾಡಿ ತನ್ನ ಕೈಯಾರೆ ಅವನಿಗೆ ತಂದುಕೊಡುತ್ತಿದ್ದಳು. ಹೆಬ್ಬಾಗಿಲ ಕಟ್ಟೆಯ ಮೇಲೆ ಕೂತು ಅಜ್ಜನಿಗೆ ತೊಳೆದು ಮೆತ್ತಗಾಗಿದ್ದ ತಂಬಾಕನ್ನು ತಂದು ಕೈಯಿಂದ ತಿಕ್ಕೀ ತಿಕ್ಕಿ ಮತ್ತಷ್ಟು ಮೆತ್ತಗೆ ಮಾಡಿ, ಎಲೆಗೆ ಸುಣ್ಣ ಹಚ್ಚಿ, ಅಡಕ್ಕೆ ಪುಡಿಮಾಡಿ ಅದರ ಮೇಲೆ ತಂಬಾಕನ್ನು ಇಟ್ಟು, ಎಲೆಯಿಂದ ಸುತ್ತಿ ಅಜ್ಜನ ಬಾಯಿಗಿಟ್ಟರೆ, ಅಜ್ಜ, ಅಂಬಾಡಿ ಎಲೆಗೆ ತುಸುವೇ ಸುಣ್ಣ ಹಚ್ಚಿ ಕವಳ ತಯಾರಿಸಿ ಅಮ್ಮಮ್ಮನ ಬಾಯಿಗಿಡುತ್ತಿದ್ದ. ಈ ಕೌತುಕವನ್ನು ಊರವರೆಲ್ಲ ನೋಡಿ, ಇದೇನಾಯಿತು. ಈಗೇನಾದರೂ ಅಜ್ಜನಿಗೇ ಹುಚ್ಚು ಹಿಡೀತಾ ಮತ್ತೆ.. ಎಂದೆಲ್ಲ ಮಾತನಾಡಿಕೊಳ್ಳುವಷ್ಟು ಅಜ್ಜನಲ್ಲಿ ಬದಲಾವಣೆಗಳಾಗಿದ್ದವು.
ಹೀಗೆ ಬದುಕಿನ ಸಂಜೆಯಲ್ಲಿ ಮಾತನಾಡಿಕೊಳ್ಳುತ್ತಿದ್ದ ಅಜ್ಜ-ಅಮ್ಮಮ್ಮ ಒಂದೇ ದಿವಸ ತೀರಿಹೋಗಿದ್ದು ಮಾತ್ರ ವಿಶೇಷವಾಗಿತ್ತು. ಒಬ್ಬರಿಗೆ ವಯಸ್ಸು 90 ಮತ್ತೊಬ್ಬರಿಗೆ 70 ಆಗಿದ್ದಿರಬಹುದು. ಇನ್ನೂ ವಿಶೇಷವೆಂದರೆ ತಾನು ಸತ್ತ ಮೇಲೆ ಹೆಣ ಸುಡಲು ಬೇಕಾಗುವುದೆಂದು ತನಗೂ, ತನ್ನ ಹೆಂಡತಿಗೂ ಸೇರಿ ಕಟ್ಟಿಗೆ ಕಡಿದು ಒಟ್ಟು ಮಾಡುತ್ತಿದ್ದ ಅಜ್ಜ. ಅದೇ ಕಟ್ಟಿಗೆಯಲ್ಲೇ ತಮ್ಮನ್ನು ಸುಡಬೇಕೆಂದು ಮೊದಲೇ ಮಕ್ಕಳಿಗೆ ಹೇಳಿಯೂ ಬಿಟ್ಟಿದ್ದ. ಮುಖ್ಯವಾಗಿ ದೊಡ್ಡ ಮಗ ರಾಮಚಂದ್ರನಿಗೆ ತಾಕೀತು ಮಾಡಿಟ್ಟಿದ್ದ. “ನಿಂಗ ಯಾರೂ ಎಂಗ್ಳ ದಿನಕರ್ಮ ಮಾಡಲೆ ಎಂತ ತೊಂದ್ರೆನೂ ತಗಂಬ ಅಗತ್ಯ ಇಲ್ಲೆ. ಎಲ್ಲ ಆನೇ ಮಾಡಿಟ್ಟಿಕ್ಕೆ ಹೋಗ್ತಿ. ಎಂಗ್ಳಿಬ್ಬರ ಶ್ರಾದ್ಧವನ್ನೂ ನಿಂಗ ಮಾಡವು ಹೇಳೂ ಇಲ್ಲೆ,’ ಎಂದು ತಮ್ಮಿಬ್ಬರ ದಿನಕರ್ಮಗಳಿಗೆ ಬೇಕಾದಷ್ಟು ದುಡ್ಡು ಮತ್ತು ಕಟ್ಟಿಗೆಯನ್ನು ಕಡಿದು ಒಟ್ಟುಮಾಡಿಟ್ಟುಕೊಂಡಿದ್ದ. ಯಾಕೋ ಗೊತ್ತಿಲ್ಲ. ಅವನೂ ಈ ನಡುವೆ ಮಕ್ಕಳೊಡನೆ ಮಾತನಾಡುತ್ತಿರಲಿಲ್ಲ. ಹಾಗೆ ಕಟ್ಟಿಗೆ ರಾಶಿ ಮಾಡಿಟ್ಟು ಕೆಲವು ತಿಂಗಳುಗಳು ಕಳೆದಿರಬಹುದು. ಅಜ್ಜ ಬೆಳಗ್ಗಿನ ಪೂಜೆ ಮುಗಿಸಿ ತಿಂಡಿಗೆಂದು ಅಡುಗೆ ಒಳಗೆ ಬಂದರೆ ಅಮ್ಮಮ್ಮನ ಸದ್ದಿಲ್ಲ. ಅವಳಿನ್ನೂ ಎದ್ದೇ ಇರಲಿಲ್ಲ. ಯಾವಾಗಲೂ ಅಮ್ಮಮ್ಮನೇ ಮೊದಲು ಎದ್ದು ದೇವರಿಗೆ ಹೂವು, ದೂರ್ವೆ ಕೊಯ್ದು, ಹಾಲು ಕರೆದು, ಚಹಾ ಮಾಡಿ, ಅಜ್ಜನನ್ನು ಎಬ್ಬಿಸಿ ಅವನಿಗೆ ಚಾ ಕೊಡುವುದು ಪದ್ಧತಿ. ಆದರೆ ಅವತ್ತು ಎಷ್ಟು ಹೊತ್ತಾದರೂ ಏಳದಿದ್ದದ್ದು ನೋಡಿ ಅಜ್ಜನೇ ಕೋಣೆಗೆ ಹೋಗಿ ನೋಡಿದರೆ ಇನ್ನೂ ಮಲಗಿಯೇ ಇದ್ದಳು. “ಎಂತ ಇಷ್ಟೊತ್ತು ನಿದ್ದೆ ಮಾಡ್ತಿದ್ಯಲೇ’ ಎಂದು ಎಬ್ಬಿಸಲು ಹೋದರೆ ದೇಹ ತಣ್ಣಗೆ ಕೊರಡಿನಂತೆ ಮಲಗಿತ್ತು.
ಮಕ್ಕಳು, ದೂರದ ನೆಂಟರಿಷ್ಟರೆಲ್ಲ ಬಂದರು, ಅಂಗಳದಲ್ಲಿ ಮಲಗಿಸಿದ ಅಮ್ಮಮ್ಮನ ಹೆಣಕ್ಕೆ ನೀರುಹಾಕಿ ನಿರ್ಲಿಪ್ತವಾಗಿ ಯಂಕಜ್ಜ ನಿಂತ. ತಾನು ಅವಳನ್ನು ನಡೆಸಿಕೊಂಡ ರೀತಿ, ಅವಳು ಪ್ರೀತಿಯಿಂದ ಕೊಟ್ಟ ರಸಗವಳ, ಅವಳ ಕೆಲಸ, ಅವಳ ಆ ಗೋಡೆ ಎಲ್ಲವೂ ನೆನಪಾಗಿ, ಅವತ್ತು ಮೊದಲ ಬಾರಿಗೆ ಯಂಕಜ್ಜನಿಗೂ ಇವಳ್ಯಾಕೆ ಹಾಗೆಲ್ಲ ಗೋಡೆಯೊಂದಿಗೆ ಮಾತನಾಡುತ್ತಿದ್ದಳು ಎಂಬ ಪ್ರಶ್ನೆ ಕಾಡತೊಡಗಿ, ಏನನ್ನೋ ನೆನೆದು ಕಣ್ಣೀರಾದ. ಯಾಕೋ… ಅವಳಿಂದಲೇ ಬಂದ ಈ ಮನೆ, ಈ ಆಸ್ತಿ, ಈ ಬಂಗಾರ, ಈ ವೈಭವವೆಲ್ಲ ಅವಳೊಂದಿಗೇ ಹೋಗುತ್ತಿರುವಂತೆ ಭಾಸವಾಯಿತು. ಹೆಣ ಸುಡಲು ಸೊಡ್ಲೆಗುಡ್ಡೆಗೆ ಬರಲೂ ಇಲ್ಲ. ಮಕ್ಕಳು, ಮೊಮ್ಮಕ್ಕಳು, ನೆಂಟರಿಷ್ಟರೆಲ್ಲ ಸೇರಿ ಅಮ್ಮಮ್ಮನ ಹೆಣವನ್ನು ಸುಟ್ಟು ಮನೆಗೆ ಬರುವಷ್ಟರಲ್ಲಿ ಹೆಬ್ಬಾಗಿಲ ಕಟ್ಟೆಯ ಮೇಲೆ ಕುಳಿತಿದ್ದ ಯಂಕಜ್ಜ ಅಲ್ಲಿಯೇ ಮಲಗಿದ್ದ. ಸ್ನಾನಾತನಾ ಎಂದು ಮಗಳು ಶರಾವತಿ ಮಾತನಾಡಿಸಲು ಬಂದರೆ ಎಲ್ಲಿದ್ದಾನೆ ಅಜ್ಜ, ಪ್ರಾಣ ಹೋಗಿ ಎಷ್ಟೊತ್ತಾಗಿತ್ತೋ… ಅಯ್ಯೋ…ಅಮ್ಮನ ಜತೆ ಅಪ್ಪನೂ ಹೋದ ಎಂದು ಕೂಗಿದಳು ಶರಾವತಿ. ಇದೆಲ್ಲ ಎಲ್ಲರಿಗೂ ಬರುವಂಥ ಸಾವಲ್ಲ. ಪುಣ್ಯಾತ್ಮರು ಇಬ್ರೂ ಎಂದು ಮಾತನಾಡಿಕೊಂಡರು ಜನ.
ಅಜ್ಜ-ಅಮ್ಮಮ್ಮ ಇಬ್ಬರೂ ಹೋದ ಮೇಲೆ ಆ ಮನೆ ಒಂಥರದಲ್ಲಿ ಬಿಕೋ ಎನ್ನುತ್ತಿತ್ತು. ಮನೆ ಬಿಕೋ ಇರುತ್ತಿತ್ತು ಎಂಬುದಕ್ಕಿಂತಲೂ ನಡುಮನೆಯ ಗೋಡೆ ಅನಾಥವಾಗಿದ್ದಂತೆ ಭಾಸವಾಗುತ್ತಿತ್ತು. ಅಮ್ಮಮ್ಮ ಬದುಕಿದ್ದಾಗಲೆಲ್ಲ ಇಷ್ಟೆಲ್ಲ ಮಾತನಾಡುವ ಆ ಮನೆಯ ಗೋಡೆ ಬಿದ್ದುಹೋದರೇನು ಗತಿ ಎಂದೆನಿಸುತ್ತಿತ್ತು. ಒಂದು ಸಲ ಜೋರು ಮಳೆ– ಗಾಳಿ ಬಂದು ಕೊಟ್ಟಿಗೆ ಮನೆಯ ಹಂಚುಗಳೆಲ್ಲ ಹಾರಿಹೋಗಿದ್ದವು. ಕೆಳಗಿನ ಕೇರಿಯ ಮಂಜನ ಮನೆ ಆ ಗಾಳಿ ಮಳೆಯ ರಭಸಕ್ಕೆ ಬಿದ್ದೇ ಹೋಗಿತ್ತು. ಅದೇ ರೀತಿ ಈ ಮನೆಯ ಗೋಡೆಯೂ ಬಿದ್ದು ಹೋದರೆ ಅಮ್ಮಮ್ಮ ಏನು ಮಾಡುತ್ತಾಳೆ. ಅಥವಾ ಮನೆಗಳಿಗೆ ಗೋಡೆಗಳೇ ಇಲ್ಲದಿದ್ದರೆ ಅವಳ ಗತಿ ಏನಾಗುತ್ತಿತ್ತು…? ಎಂದೆಲ್ಲ ಅನಿಸುತ್ತಿತ್ತು. ಆದರೀಗ ಅಮ್ಮಮ್ಮ ಇಲ್ಲ. ಗೋಡೆ ಮಾತ್ರ ಹಾಗೆಯೇ ಇದೆ.
ಇದಾಗಿ ಎಷ್ಟೋ ವರ್ಷಗಳ ನಂತರ ಬಂದ ಸುದ್ದಿ. ಈಗೀಗ ಅಮ್ಮಮ್ಮನ ದೊಡ್ಡ ಸೊಸೆ, ಅಂದರೆ ರಾಮಚಂದ್ರನ ಹೆಂಡತಿಯೂ ಹೀಗೇ ಗೋಡೆ ಬಳಿ ನಿಂತು ಮಾತನಾಡುತ್ತಾಳೆ. ಚಾ ಬೇಕೆಂದರೆ ಗೋಡೆಯ ಹತ್ತಿರವೇ ಕೇಳುತ್ತಾಳೆ. ಅಮ್ಮಮ್ಮನಗಿಂತಲೂ ಜೋರಾಗಿ ಶಬ್ದ ಮಾಡುತ್ತ ನೆಲ ಕುಟ್ಟುತ್ತಾಳೆ ಎಂದು.
….ಅಂದರೆ ಈಗಲೂ ಅಲ್ಲಿ ಗೋಡೆ ಇದೆ!
=====
ಸೀತಾಳೆದಂಡೆಯನ್ನು ಅರಸುತ್ತಾ..
ನನ್ನ ಅತ್ತೆಯೊಬ್ಬಳು ಇದ್ದಾಳೆ. ಭೂಮಿ ತೂಕದ ಹೆಂಗಸು. ಸದಾ ಮನೆಗೆಲಸ, ತೋಟ, ಗದ್ದೆಯ ಕೆಲಸ…ಎಂದು ಕಾಯಕದಲ್ಲೇ ತನ್ನ ಆಯುಷ್ಯವನ್ನು ಕಳೆಯುತ್ತಿರುವವಳು. ಅವಳ ಜಗತ್ತಲ್ಲಿ ಮನುಷ್ಯರು, ಪ್ರಾಣಿ- ಪಕ್ಷಿಗಳೆಲ್ಲ ಒಂದೇ. ಒಮ್ಮೆ ನಾನೂ ಮತ್ತು ನನ್ನ ಅಮ್ಮ ಅವರ ಮನೆಗೆ ಹೋದಾಗ, ‘ರಾಮೂ, ಮೀನತ್ತೆ ಬೈಂದು ಮಾತಾಡ್ಸಿದ್ದೇ’ ಎಂದು ಮುದ್ದುಗರೆದು ಕೇಳುತ್ತಿದ್ದಳು. ಇಲ್ಯಾರು ರಾಮು ಇದ್ದಾರೆಂದು ನೋಡಿದರೆ ಅವರ ಮನೆಯ ನಾಯಿಯದು. ಹಾಗೆಯೇ ಒಂದು ದಿನ ಹಿತ್ತಲ ಕಡೆಯ ಬಟ್ಟೆ ಒಣಗಿಸುವ ಹಗ್ಗದ ಮೇಲೆ ಕೂತಿದ್ದ ಎರಡು ಗುಬ್ಬಚ್ಚಿಗಳು ತಾವು ತಾವೇ ಕಚ್ಚಿಕೊಂಡು ಜಗಳ ಮಾಡಿಕೊಳ್ಳುತ್ತಿದ್ದವು, ‘ಅರೆ, ಎಂತಕ್ಕೇ ಜಗಳ ಮಾಡಕ್ಯತ್ರೇ’ ಎಂದು ಇದೇ ಅತ್ತೆ ಪ್ರೀತಿಯಿಂದ ಕೇಳಿದಳು. ಅಲ್ಲದೇ “ನೋಡು… ಇವತ್ತು ಎಂತಾತು ಗೊತ್ತಿದ್ದಾ..’ ಎಂದು ಆ ಗುಬ್ಬಚ್ಚಿಯ ಬಳಿ ಅಂತರಂಗ ಮಾತನಾಡುವ ಅತ್ತೆಯ ಕುರಿತು, ‘ಅಪ್ಪಾ, ಅತ್ತೆ ಗುಬ್ಬಚ್ಚಿ ಹತ್ರ, ನಾಯಿ ಹತ್ರೆಲ್ಲ ಮಾತಾಡ್ತು’ ಎಂದು ತಮಾಷೆಯ ದಾಟಿಯಲ್ಲೇ ಹೇಳಿದೆ. ‘ಮತ್ತೆಂತ ಮಾಡದೇ, ಮನುಷ್ಯರು ಮಾತಾಡಲು ಸಿಕ್ಕಿದ್ವಿಲ್ಲೆ ಅಂದ್ರೆ ಪ್ರಾಣಿ- ಪಕ್ಷಿಗಳ ಹತ್ರವೇ ಮಾತಾಡದಪಾ’ ಎಂದು ನಗುತ್ತ ಹೇಳಿದ ಅಪ್ಪನ ಮಾತುಗಳನ್ನು ನನಗೆ ಅರಗಿಸಿಕೊಳ್ಳುವ ಶಕ್ತಿ ಆಗಿರಲಿಲ್ಲ.
ಈಗ ಅನಿಸುತ್ತಿದೆ, ಅಲ್ಲೊಬ್ಬಳು ಗುಬ್ಬಚ್ಚಿಯೊಂದಿಗೆ ಮಾತನಾಡುತ್ತಿದ್ದ ಅತ್ತೆ, ಇಲ್ಲೊಬ್ಬಳು ಹಸುವಿನೊಂದಿಗೆ ಮಾತನಾಡುತ್ತಿದ್ದವಳು, ಮತ್ತೊಬ್ಬಳು ಗೋಡೆಯೊಂದಿಗೆ ಮಾತನಾಡುತ್ತಿದ್ದವಳು. ಇಂಥ ಅದೆಷ್ಟು ಹೆಂಗರುಳುಗಳು ಆಗ ತಮ್ಮ ಅಳಲನ್ನು ಕೇಳುವ ಒಂದು ಕಿವಿಗಾಗಿ ಹಾತೊರೆಯುತ್ತಿದ್ದರು ಎಂಬುದಾಗಿ.
ಹಾಗೆ ನೋಡಿದರೆ ನನಗೆ ಇವನ್ನೆಲ್ಲ ಬರೆಯಬೇಕೆಂದೆನಿಸಿರಲಿಲ್ಲ. ಇವೆಲ್ಲ ಒಂದು ಕತೆಯಾಗಿ, ಒಂದು ಬರಹವಾಗಿ, ಇನ್ನೇನೋ ಆಗಿ ಹೀಗೆಲ್ಲ ಒಂದು ರೂಪ ಪಡೆದುಕೊಳ್ಳಬೇಕು ಎಂದೂ ಅನಿಸಿರಲೇ ಇಲ್ಲ. ಬಾಲ್ಯದ ನೆನಪುಗಳ ತುಂಡುಗಳೆಲ್ಲ ಇಲ್ಲಿ ಬಂದು ಕುಳಿತಿವೆಯೆಂಬಂತೆ, ಅಪ್ಪನೇ ಎದುರಿಗೆ ಬಂದು ಹೇಳಿದಂತೆ ಭಾಸವಾಗುತ್ತಿದೆ.
ತನ್ನ ಉದ್ದನೆಯ ದೇಹಕ್ಕೆ ನೀಲಿ ಮಡಿಯುಟ್ಟು, ದೇವಿ ಮಹಾತ್ಮೆ ಪಾರಾಯಣ ಪಠಿಸುತ್ತ, ಗಜಾನನಾ,,,ಎಂದು ಕೈಬಡಿದುಕೊಳ್ಳುತ್ತಿದ್ದ ಅತ್ತೆಯನ್ನು ಸಮಾಧಾನಿಸುತ್ತ ಅವಳ ಹಣೆಗೊಂದು ಕುಂಕುಮವನ್ನಿಡುತ್ತಿದ್ದ ಅಪ್ಪ, ಡೊಳ್ಳುಹೊಟ್ಟೆಯ ಮನುಷ್ಯನೊಬ್ಬನ ಕತೆ ಹೇಳಿ ನಗಿಸಿದ್ದ, ಕಲ್ಲೆಂದು ಭ್ರಮಿಸಿ ಹಾವಿನ ಪಕ್ಕವೇ ತನ್ನ ಜೋಡುಮೆಟ್ಟನ್ನು ಬಿಟ್ಟು, ಅದು ಹರಿದಾಡುತ್ತಿದ್ದಂತೆ ಹಾವೆಂದು ಭಯಗೊಂಡ ಕತೆಗಳು… ಹೀಗೆ ಬಾಲ್ಯದಲ್ಲಿ ಅಪ್ಪ ಹೇಳಿದ ಕತೆಗಳನ್ನು ಕೇಳುತ್ತ ಬೆಳೆದ ನನಗೆ ಕತೆಯೆಂಬುದು ಜೀವಂತ ಘಟನೆಗಳೇ ಆಗಿಬಿಟ್ಟಿದ್ದವು.
ಅಪ್ಪ ಹೇಳುತ್ತಿದ್ದ ಯಕ್ಷಗಾನದ ಕತೆಗಳು, ನಾಟಕ, ಸಾಹಿತ್ಯದ ಕತೆಗಳನ್ನು ಕೇಳುತ್ತ ಬೆಳೆದವಳು ನಾನು. ನನ್ನೆದುರು ಅಮರ ಚಿತ್ರಕತೆಗಳ ಭಂಡಾರವನ್ನೇ ತೆರೆದಿಟ್ಟವನು. ಅದೆಷ್ಟು ಕತೆಗಳು ಅಪ್ಪನ ಬತ್ತಳಿಕೆಯಲ್ಲಿ. ಅಲ್ಲಿ ಜಲದೇವತೆಯಿದ್ದಳು, ಉದ್ದಕ್ಕೆ ಮಿರಿಮಿರಿ ಮಿಂಚುವ ಬಿಳಿಯ ಗಡ್ಡದವನಿದ್ದ, ಬಕಾಸುರನಂತೆ ಊಟ ಮಾಡುವ ಡೊಳ್ಳು ಹೊಟ್ಟೆಯವನಿದ್ದ, ಗಂಡನಿಗೆ ಹೊಡೆಯುವ ಹೆಂಡತಿಯಿದ್ದಳು. ಅದೆಲ್ಲಕ್ಕಿಂತ ಮಲೆನಾಡಿನ ದಟ್ಟ ಕಾನನದ ನಡುವಿನ, ಬೆಟ್ಟದಂಚಿನ ಅದೆಷ್ಟೋ ಒಂಟಿ ಮನೆಗಳ ಹೆಂಗಸರ ಒಂಟಿ ನಿಟ್ಟುಸಿರುಗಳು ಅಲ್ಲಿದ್ದವು. ಅದೆಷ್ಟೋ ಚಿತ್ರವಿಚಿತ್ರ ವ್ಯಕ್ತಿಗಳ ಹುಲು ಪ್ರಲಾಪಗಳಿದ್ದವು.
ಹೀಗೆ ನನ್ನೊಳಗೊಂದು ಕತೆಯ ಹೆಮ್ಮರವನ್ನೇ ನೆಟ್ಟು ಹೋದ ಅಪ್ಪನ ನೆನಪುಗಳಲ್ಲೇ ಕತೆಗಳೆಲ್ಲ ಬೀಜಗಳಂತೆ ಉರುಳುರುಳಿ ಬೀಳುತ್ತಿದ್ದವು. ಅವುಗಳಿಗೊಂದು ಆಕಾರ ಕೊಡಲು ಆಗಿರಲಿಲ್ಲ. ಅವರಿವರ ಬಳಿ ಈ ಕತೆಗಳನ್ನು ಹೇಳುತ್ತಿದ್ದರೆ ಎಷ್ಟು ಚೆಂದದ ಅನುಭವಗಳಿವು, ಇವನ್ನೆಲ್ಲ ಬರಿ ಎಂದು ಹೇಳಿದಾಗಲೂ, ಯಾಕೋ ಇದನ್ನೆಲ್ಲ ಒಂದು ಚೌಕಟ್ಟಿನೊಳಗೆ ಕೂರಿಸುವುದು ನನಗೆ ಕಷ್ಟವೆನಿಸುತ್ತಿತ್ತು. ಹೀಗಿರುವ ದಿನಗಳಲ್ಲೇ ಮತ್ತೆ ಕೆಂಡಸಂಪಿಗೆ ಶುರುವಾಗುತ್ತಿದೆ. ನಿನ್ನ ಊರಿನ ಅನುಭವಗಳನ್ನೆಲ್ಲ ಬರಿ ಎಂದು ಕತೆಗಾರರು ಮತ್ತು ಕೆಂಡಸಂಪಿಗೆಯ ಸಂಪಾದಕÀ ಅಬ್ದುಲ್ ರಶೀದ್ ಅವರು ಹೇಳಿದಾಗ, ಆಯ್ತು ಎಂದು ಒಪ್ಪಿಕೊಂಡರೂ ಬರೆಯಲು ಸಾಕಷ್ಟು ಸಮಯ ತೆಗೆದುಕೊಂಡೆ.
ನಂತರ ಬರೆಯಲು ಶುರು ಮಾಡಿದ ಮೇಲೆ ಒಂದಾದ ಮೇಲೊಂದರಂತೆ ನನ್ನೊಳಗೆ ಕೂತಿದ್ದ ಕತೆಗಳೆಲ್ಲ ಹೊರಬರತೊಡಗಿದವು. ಸಿದ್ದಾಪುರ ಸೀಮೆಯ ಕತೆಗಳು… ಹೆಸರಿನಲ್ಲಿ ಒಟ್ಟು 22 ಕಂತುಗಳನ್ನು ಬರೆದು ಮುಗಿಸಿದೆ. ಈ ಪೈಕಿ ಕತೆ ಸ್ವರೂಪದಲ್ಲಿರುವುದನ್ನು ಮಾತ್ರ ಇಲ್ಲಿ ಇಟ್ಟುಕೊಂಡಿದ್ದೇನೆ. ಉಳಿದ ಕೆಲವು ವ್ಯಕ್ತಿಚಿತ್ರಗಳನ್ನು ಇದರಲ್ಲಿ ಸೇರಿಸಿಲ್ಲ. ಈಗ ಇದು ‘ಸೀತಾಳೆದಂಡೆಯ ಸದ್ದಿಲ್ಲದ ಕತೆಗಳು’ ಹೆಸರಿನಲ್ಲಿ ನಿಮ್ಮ ಮುಂದಿದೆ.
ಯಾರೋ ದಂಡೆಯನ್ನು ನೇಯ್ದಿದ್ದಾರೇನೋ ಎಂದು ಭಾಸವಾಗುವ ಸೀತಾಳೆದಂಡೆ ಅತಿ ಆಕರ್ಷಕವಾದೊಂದು ಆರ್ಕಿಡ್ ಹೂವು. ಮಳೆಗಾಲದಲ್ಲಿ ಮಾತ್ರ ಬಿಡುವ ಸೀತಾಳೆದಂಡೆ ಕಾಡು, ಬೆಟ್ಟಗಳಲ್ಲಿರುವ ಮರಗಳ ಮೇಲೆ ಅರಳುವ ಒಂದು ಪರಾವಲಂಬಿ ಸಸ್ಯ. ತಿಳಿ ನೀಲಿ, ಗುಲಾಬಿ ಬಣ್ಣದಲ್ಲಿ ಸಂಯೋಜನೆಗೊಂಡಿರುವ ಈ ಹೂವು ನೋಡಲು ಸುಂದರವಾಗಿದ್ದು, ಕಾಡಲ್ಲೇ ಬಿಟ್ಟು ಕಾಡಲ್ಲೇ ಬಾಡಿಹೋಗುತ್ತದೆ. ಯಾವೊಬ್ಬ ಹೆಣ್ಣಿನ ಮುಡಿಗೂ ಏರದ ಪುಷ್ಪವಿದು. ಇದಕ್ಕೂ ಇಲ್ಲಿನ ಕತೆಗಳಲ್ಲಿ ಬರುವ ಪಾತ್ರಗಳೂ ಒಂದಕ್ಕೊಂದು ಸಾಮ್ಯವಿದೆ. ಹಾಗಾಗಿ ಈ ಹೆಸರನ್ನೇ ಇಡುವ ಮನಸ್ಸು ಮಾಡಿದೆ.
ಕತೆ ಬರೆಯುವಾಗಿನ ಈ ಲೋಕವೂ ಒಂಥರಾ ಚೆಂದವೆನಿಸಿದ್ದು ಬರೆಯತೊಡಗಿದ ಮೇಲೆಯೇ. ಮತ್ತೊಮ್ಮೆ ಅಪ್ಪಎದ್ದುಬಂದು ನನ್ನೊಳಗೆ ಕತೆ ಹೇಳುತ್ತಿದಂತೆ ಅನಿಸುತ್ತಿತ್ತು. ಈಗಲೂ ಹೇಳುತ್ತೇನೆ. ಇಲ್ಲಿನ ಬಹುತೇಕ ಕತೆಗಳೆಲ್ಲ ಅಪ್ಪನೊಂದಿಗೆ ಬಂದಂಥವು. ಇಲ್ಲಿಅವನಿದ್ದಾನೆ. ನಾನು ಪುಟ್ಟದೊಂದು ಗೊಂಬೆಯಂತೆ ನಿಂತು ನೋಡಿದ್ದೇನೆ. ಇವನ್ನೆಲ್ಲ ಬರೆಯಬೇಕೆಂದು ಎಣಿಸಿಕೊಂಡು ನೋಡಿದವಳಲ್ಲ. ಆದರೆ ಬೆಳೆಯುತ್ತ ಬೆಳೆಯುತ್ತ ಅವೆಲ್ಲ ಚಿತ್ರಪಟಗಳಂತೆ ಅಚ್ಚೊತ್ತಿ ನನ್ನೊಳಗೆ ಹರಿದಾಡುತ್ತಿದ್ದವು. ಇಲ್ಲಿನಎಲ್ಲ ಕತೆಗಳಲ್ಲೂ ಅಪ್ಪನೆಂಬ ನೆರಳು ಹೊಯ್ದಾಡುತ್ತಿದೆ.
ಈ ಕತೆಗಳನ್ನು ಬರೆಯುವಾಗ ನನಗೆ ಗುರುತು ಪರಿಚಯವಿರದ ಅದೆಷ್ಟೋ ನನ್ನೂರಿನ ಜನಗಳೆಲ್ಲ ನನಗೆ ಪರಿಚಯವಾಗುತ್ತ ಹೋದರು. ನಿಮ್ಮ ಕತೆಯನ್ನು ಕೆಂಡ ಸಂಪಿಗೆಯಲ್ಲಿ ಓದುತ್ತಿದ್ದೇವೆ ಎಂದು ಪರಿಚಯವಾದವರು ಕಡೆಕಡೆಗೆ ಯಾವಾಗ ಬರುತ್ತೆ, ಈ ವಾರ ಯಾಕೆ ಬಂದಿಲ್ಲ ಎಂದು ನನ್ನನ್ನು ಪ್ರಶ್ನಿಸುತ್ತಿದ್ದರು. ನಮ್ಮೂರಲ್ಲಿ ಇಂಥ ಅಪರೂಪದ ವ್ಯಕ್ತಿಗಳಿದ್ದಾರೆ, ಇವರ ಕುರಿತು ಬರೆಯಿರಿ ಎಂದೆಲ್ಲ ಅವರೇ ವಿಷಯಗಳನ್ನು ಕೊಡಲು ಶುರುಮಾಡಿದರು. ಇವೆಲ್ಲವೂ ಮತ್ತಷ್ಟು ಬರೆಯಲು ನನ್ನನ್ನು ಹುರುಪುಗೊಳಿಸುತ್ತಿದ್ದವು. ಈಗ ಈ ಎಲ್ಲ ಕಂಡು ಕೇಳಿದ ಕತೆಗಳನ್ನೆಲ್ಲ ಒಟ್ಟು ಸೇರಿಸಿ ಪುಸ್ತಕ ರೂಪದಲ್ಲಿ ಇರಿಸಿದ್ದೇನೆ.
