Tuesday, August 9, 2022

ಕಾಣದ ಕೈ…

Follow Us

ಹೇಗಾದರೂ ದಿನ ಕಳೆಯಬೇಕೆಂಬ ದೃಢ ನಿರ್ಧಾರದಿಂದ ಮಗನಿಗೆ ಸಮಾಧಾನ ಹೇಳಿದಳು. ಉಳಿತಾಯದ ಪುಟ್ಟ ಗಂಟು ಮತ್ತೊಮ್ಮೆ ಸದ್ದಿಲ್ಲದೆ ಕರಗುತ್ತಿತ್ತು. ಮಹಾಮಾರಿಯು ಶಹರದ ತುಂಬ ತೀವ್ರ ಗತಿಯಲ್ಲಿ ಹರಡುತ್ತಿತ್ತು. ಗೌರಿಯ ಆತಂಕ, ಚಿಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಅತ್ತ ಗೋವಿಂದನೂ ಊರಿನಿಂದ ಮರಳಲಾಗದೆ ಚಡಪಡಿಸುತ್ತಿದ್ದ. ಇಂತಹ ಕಳವಳದ ಪರಿಸ್ಥಿತಿಯಲ್ಲಿ ಹಾಗೂ ಹೀಗೂ ಒಂದೂವರೆ ತಿಂಗಳು ಕಳೆದುಹೋಗಿತ್ತು.
===
ಶಶಿಕಲಾ ಹೆಗಡೆ ಮುಂಬೈ
response@134.209.153.225
newsics.com@gmail.com

ಗೌರಿ ಕಳೆದೆರಡು ದಿನಗಳಿಂದ ಮನೆಯ ಸಾಮಾನುಗಳನ್ನು ಸ್ವಲ್ಪ ಸ್ವಲ್ಪವಾಗಿ ಕಟ್ಟಲು ಪ್ರಾರಂಭಿಸಿದ್ದಳು. ಖುಷಿಯೋ ಬೇಸರವೋ ಅವಳಿಗೇ ಅರಿವಾಗದಂತಹ ಭಾವ ಮನದಲ್ಲಿ ತುಂಬಿತ್ತು. ಅವಳ ವಠಾರದ ಹೆಚ್ಚಿನ ಜನರೆಲ್ಲ ಗಂಟುಮೂಟೆ ಕಟ್ಟಿಕೊಂಡು ನಡೆದಕೊಂಡಾದರೂ ಊರನ್ನು ಸೇರುತ್ತೇವೆ ಎಂಬ ಛಲದಿಂದ, ಬಲದಿಂದ ಹೊರಟುಬಿಟ್ಟಿದ್ದರು.
ಕೊರೋನಾ ಎಂಬ ಮಹಾಮಾರಿ ತನ್ನ ಕರಾಳಹಸ್ತವನ್ನು ಜಗತ್ತಿನಾದ್ಯಂತ ಪಸರಿಸಿತ್ತು. ಅದನ್ನು ತಡೆಗಟ್ಟಲು ಜನರು ಅನಾವಶ್ಯಕವಾಗಿ ಹೊರಗೆ ಹೋಗಬಾರದು, ಮನೆಯೊಳಗೇ ಇರಬೇಕೆಂಬ ಸಂದೇಶವನ್ನು ಪ್ರಧಾನಮಂತ್ರಿ ನೀಡಿದ್ದರು. ದಿನಗೂಲಿ ಕೆಲಸ ಮಾಡುವ ಗೌರಿ ಹಾಗೂ ಅವಳ ವಠಾರದವರು ಇಂತಹ ಕಠಿಣ ಪರಿಸ್ಥಿತಿ ಎದುರಾದಾಗ ಕಂಗಾಲಾಗಿದ್ದರು. ನಾಲ್ಕಾರು ದಿನ ಮನೆಯಲ್ಲಿರುವ ಸಾಮಾನುಗಳನ್ನು, ಕೈಯಲ್ಲಿರುವ ಪುಡಿಗಾಸನ್ನು ಬಳಸಿಕೊಂಡು ಹೊಟ್ಟೆ ತುಂಬಿಸಿಕೊಂಡಿದ್ದಾಯಿತು.
ಕೆಲಸವಿಲ್ಲದೇ ಮನೆಯಲ್ಲಿ ಕುಳಿತವರಿಗಾಗಿ ಅಗತ್ಯದ ಸಾಮಾನುಗಳನ್ನು ಉಚಿತವಾಗಿ ಹಂಚುತ್ತಿದ್ದಾರೆ ಎಂಬ ಸುದ್ದಿ ತಿಳಿದು ಅವಳ ಅಕ್ಕ ಪಕ್ಕದ ಮನೆಯವರು ಸಾಲಿನಲ್ಲಿ ನಿಂತು ಅಂತಹ ಸಾಮಾನುಗಳನ್ನು ತಂದಿದ್ದರು. ಮೊದಲಿನಿಂದಲೂ ಸ್ವಲ್ಪ ಹೆಚ್ಚೇ ಎನಿಸುವಷ್ಟು ಸ್ವಾಭಿಮಾನಿಯಾದ ಗೌರಿಗೆ ಉಚಿತವಾದ ಸಾಮಾನುಗಳಿಗೆ ಕೈಯ್ಯೊಡ್ಡುವ ಮನಸ್ಸಾಗಲಿಲ್ಲ. ಅತ್ಯಂತ ಕಷ್ಟದ ದಿನಗಳಲ್ಲೂ ಯಾರೆದುರೂ ಕೈ ಚಾಚದೇ ಪರಿಶ್ರಮದಿಂದ ಜೀವನ ಸಾಗಿಸಿಕೊಂಡು ಬಂದ ಹೆಮ್ಮೆ, ಅಭಿಮಾನ ಅವಳದ್ದು.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಗೌರಿ, ಗೋವಿಂದನ ಜತೆ ವಿವಾಹವಾಗಿ ಹಳ್ಳಿಯಿಂದ ಪಟ್ಟಣಕ್ಕೆ ಬಂದಿದ್ದಳು.
ಕಾಯಕವೇ ಕೈಲಾಸ ಎಂದು ನಂಬಿದ ಶ್ರಮಜೀವಿ ಪತಿಯೊಂದಿಗೆ ತಾನೂ ಕೈ ಜೋಡಿಸಿದ್ದಳು. ಕಟ್ಟಡದ ಕೆಲಸವಾಗಲೀ ರಸ್ತೆಯ ಕೆಲಸವಾಗಲೀ ಯಾವುದಕ್ಕೂ ಬೇಸರವಿಲ್ಲ. ದುಡಿದು ಉಣ್ಣುವವರಿಗೆ ಕೆಲಸದಲ್ಲಿ ಮೇಲು ಕೀಳೇನು ಎಂಬ ತತ್ವ ಅವಳದ್ದು. ಅಂತಹ ಕೆಲಸಗಾರರ ಕೇರಿಯಲ್ಲಿಯೇ ಪುಟ್ಟ ಬಾಡಿಗೆ ಮನೆಯೊಂದರಲ್ಲಿ ಸಂಸಾರ ಪ್ರಾರಂಭವಾಯಿತು. ಹಿತಮಿತವಾದ ಖರ್ಚಿನೊಂದಿಗೆ ಸಂಸಾರ ಸಾಗಿಸುತ್ತ ಮುಂಬರುವ ಸುಂದರ ದಿನಗಳ ಸಲುವಾಗಿ ಪುಟ್ಟ ಪುಟ್ಟ ಮೊತ್ತವನ್ನು ಒಟ್ಟುಗೂಡಿಸಿ ಇಡುತ್ತಿದ್ದಳು ಗೌರಿ. ಆದರೆ ಮದುವೆಯಾಗಿ ಐದಾರು ವರ್ಷಗಳಾದರೂ ಸುಂದರ ದಿನಗಳ ಕನಸು ನನಸಾಗದೇ ಇದ್ದಾಗ ಪತಿ ಪತ್ನಿಗೆ ಚಿಂತೆ, ಬೇಸರ ಕಾಡಿತ್ತು. ವೈದ್ಯಕೀಯ ಸಲಹೆ, ದೇವರಲ್ಲಿ ಹರಕೆ… ಎಲ್ಲದರ ಪರಿಣಾಮವೋ ಎಂಬಂತೆ ಚೆಂದದ ಕಂದನೊಬ್ಬ ಜನಿಸಿದ. ಆದರೆ ಹುಟ್ಟುವಾಗಲೇ ಆತ ವಿಕಲಾಂಗನೆಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿದ್ದ. ಅದೃಷ್ಟದ ಆಟದ ಮುಂದೆ ದಂಪತಿ ಒಮ್ಮೆ ತತ್ತರಿಸಿದರೂ ಕೈಚೆಲ್ಲಿ ಕೂರದೇ ಮಗುವಿನ ಉಪಚಾರದಲ್ಲಿ ತೊಡಗಿದರು. ಮಗುವನ್ನು ಹೊತ್ತು ತಿರುಗದ ಆಸ್ಪತ್ರೆಯಿಲ್ಲ. ಮೊರೆ ಹೋಗದ ದೇವರಿಲ್ಲ. ಮಾನ‌ಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ಗೌರಿ ಮತ್ತು ಗೋವಿಂದ ತತ್ತರಿಸಿ ಹೋಗಿದ್ದರು. ಮಗುವನ್ನು ಮನೆಯಲ್ಲಿ ಬಿಟ್ಟು ಗೌರಿ ಕೆಲಸಕ್ಕೆ ಹೋಗುವಂತಿರಲಿಲ್ಲ. ಉಳಿತಾಯದ ಪುಟ್ಟ ಗಂಟು ಮಗುವಿನ ಔಷಧೋಪಚಾರಕ್ಕೆ ನೀರಿನಂತೆ ಕರಗಿಹೋಗಿತ್ತು.
ಆದರೆ, ಇವರು ಪಟ್ಟ ಶ್ರಮ ನೀರಿನಲ್ಲಿ ಮಾಡಿದ ಹೋಮದಂತೆ ವ್ಯರ್ಥವಾಗಲಿಲ್ಲ. ತನ್ನ ಐದನೆಯ ವರ್ಷಕ್ಕೆ ಮಗು ಕಷ್ಟಪಟ್ಟು ಹೆಜ್ಜೆ ಹಾಕಲು ಪ್ರಾರಂಭಿಸಿತು. ನಿಧಾನವಾಗಿ ಅಪ್ಫ ಅಮ್ಮನ ಕೈ ಹಿಡಿದು ನಡೆದಾಡಲು ಕಲಿಯಿತು. ಅಪ್ಪ ಅಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ. ಹಲವು ಕಡೆ ಪ್ರಯತ್ನಿಸಿ ಮಗುವನ್ನು ಶಾಲೆಗೂ ಸೇರಿಸಿದ್ದಾಯಿತು. ನಿಧಾನವಾಗಿ ಸಂಸಾರದ ಗಾಡಿ ಹಳಿಯ ಮೇಲೆ ಚಲಿಸಲಾರಂಭಿಸಿತ್ತು. ಗೌರಿ ಮತ್ತೊಮ್ಮೆ ಕೆಲಸಕ್ಕೆ ಹೋಗುವ ಧೈರ್ಯ ಮಾಡಿದ್ದಳು. ಪಕ್ಕದ ಮನೆಯ ಗಂಗಮ್ಮ ಮಗುವನ್ನು ಶಾಲೆಯಿಂದ ಕರೆದುಕೊಂಡು ಬಂದು ನೋಡಿಕೊಳ್ಳುವ ಜವಾಬ್ದಾರಿಯನ್ನು ಖುಷಿಯಿಂದ ಒಪ್ಪಿಕೊಂಡಿದ್ದಳು. ಮಗನೂ ಓದಿನಲ್ಲಿ ಆಸಕ್ತಿ ತೋರುತ್ತಾ ಪ್ರತಿ ವರ್ಷ ಒಳ್ಳೆಯ ಅಂಕಗಳೊಂದಿಗೆ ತೇರ್ಗಡೆ ಹೊಂದುತ್ತಾ ಮುಂದುವರಿಯುತ್ತಿದ್ಧ. ಒಳ್ಳೆಯ ಗುಣ, ಸ್ವಭಾವಗಳು ಅವನ ಅಂಗವೈಕಲ್ಯತೆಯನ್ನು ಮರೆಸುವಂತಿದ್ಧವು. ಮಗನ ಅಂಗವೈಕಲ್ಯತೆಯೆಂಬ ಶಾಪವೂ ಕೆಲವೊಮ್ಮೆ ಗೌರಿಗೆ ವರವಾಗಿ ಕಾಣುತ್ತಿತ್ತು. ಗಂಡ ಗೋವಿಂದ ಕೇರಿಯ ಉಳಿದ ಗಂಡಸರಂತೆ ಸಂಜೆಯಾದೊಡನೆ ಕುಡಿದು ಬರುತ್ತಿರಲಿಲ್ಲ. ಅಕ್ಕಪಕ್ಕದ ಮನೆಗಳಿಂದ ಏರುರಾತ್ರಿಯವರೆಗೂ ಕೇಳಿಬರುವ ಜಗಳ, ಹೊಡೆದಾಟದ ಗದ್ದಲಗಳನ್ನು ಕೇಳುವಾಗ ಗೌರಿಗೆ ತನ್ನ ಪರಿಸ್ಥಿತಿಯ ಬಗೆಗೆ ಸಮಾಧಾನ. ಗೋವಿಂದ ತನ್ನ ಸಂಬಳವನ್ನೆಲ್ಲಾ ಮಡದಿಯ ಕೈಗೆ ಹಾಕಿ ನಿರಾಳನಾಗಿಬಿಡುತ್ತಿದ್ದ. ವಾರಕ್ಕೊಮ್ಮೆ ಮಾತ್ರ ತನ್ನ ಗೆಳೆಯರ ಜತೆ ಕುಡಿದು ಬಂದು ಗದ್ದಲ ಮಾಡದೇ ಸುಮ್ಮನೆ ಮಲಗಿಬಿಡುತ್ತಿದ್ದ. ಗಂಡನಿಗೆ ಇಂತಹ ಒಳ್ಳೆಯ ಗುಣ, ಮಗನ ಮೇಲಿನ ಕಾಳಜಿಯಿಂದ ಬಂದಿದೆ ಎಂದು ಗೌರಿಯ ನಂಬಿಕೆ. ಅದೇನೇ ಇದ್ದರೂ ಈ ವಿಷಯದಲ್ಲಿ ಅವಳು ಅದೃಷ್ಟವಂತೆ. ಕಾಣದ ಕೈಯ್ಯೊಂದು ಅವಳ ಬಾಳಿನಲ್ಲಿ ಒಳ್ಳೆಯ ದಿನಗಳನ್ನು ಹೊತ್ತು ತಂದಿತ್ತು.
ಕೊರೋನಾ ದಾಳಿಯಿಂದಾಗಿ ಲಾಕ್ ಡೌನ್ ಪ್ರಾರಂಭವಾಗುವ ನಾಲ್ಕಾರು ದಿನಗಳ ಮೊದಲು ಗೋವಿಂದ ಅಣ್ಣನ ಮಗಳ ಮದುವೆಯ ಸಲುವಾಗಿ ಊರಿಗೆ ತೆರಳಿದ್ದ. ಮಗನ ಪರೀಕ್ಷೆಯು ಹತ್ತಿರ ಬರುತ್ತಿರುವುದರಿಂದ ಗೌರಿ ಪಟ್ಟಣದಲ್ಲಿಯೇ ಉಳಿಯುವುದು ಅನಿವಾರ್ಯ ವಾಯಿತು. ಬಸ್ಸು, ಟ್ರೈನ್ಗಳ ಸಂಚಾರ ರದ್ದಾಗಿದ್ದರಿಂದ ಮದುವೆ ಮುಗಿದ ಮೇಲೆಯೂ ಗೋವಿಂದ ಊರಿನಲ್ಲಿಯೇ ಇರಬೇಕಾಯಿತು. ಲಾಕ್ ಡೌನ್ ಮುಂದುವರಿಯುತ್ತಾ ಹೋದಂತೆ ಗೌರಿಯ ವಠಾರದ ಜನರೆಲ್ಲಾ ಗಂಟು ಮೂಟೆ ಕಟ್ಟಿಕೊಂಡು ಊರಿನತ್ತ ಮುಖ ಮಾಡಿದರು. ತಮ್ಮೊಡನೆ ಹೊರಡಲು ಗೌರಿಯನ್ನು ಒತ್ತಾಯಿಸಿದ್ದರೂ ತನ್ನ ಮಗನನ್ನು ನಡೆಸಿಕೊಂಡು ಹೋಗಲಾರದ ಅಸಹಾಯಕತೆ ಅವಳನ್ನು ಕಾಡಿತ್ತು. ಗೆಳೆಯರೆಲ್ಲಾ ತನ್ನತ್ತ ಕೈಬೀಸಿ ಹೊರಟಾಗ ಮಗನ ಕಣ್ಣಲ್ಲಿ ನೀರೂರಿದ್ದನ್ನು ಕಂಡು ಗೌರಿಗೆ ಕರುಳಲ್ಲಿ ಕತ್ತರಿಯಾಡಿಸಿದಂತಹ ನೋವು.
ಹೇಗಾದರೂ ದಿನ ಕಳೆಯಬೇಕೆಂಬ ದೃಢ ನಿರ್ಧಾರದಿಂದ ಮಗನಿಗೆ ಸಮಾಧಾನ ಹೇಳಿದಳು. ಉಳಿತಾಯದ ಪುಟ್ಟ ಗಂಟು ಮತ್ತೊಮ್ಮೆ ಸದ್ದಿಲ್ಲದೆ ಕರಗುತ್ತಿತ್ತು. ಮಹಾಮಾರಿಯು ಶಹರದ ತುಂಬ ತೀವ್ರ ಗತಿಯಲ್ಲಿ ಹರಡುತ್ತಿತ್ತು. ಗೌರಿಯ ಆತಂಕ, ಚಿಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಅತ್ತ ಗೋವಿಂದನೂ ಊರಿನಿಂದ ಮರಳಲಾಗದೇ ಚಡಪಡಿಸುತ್ತಿದ್ದ. ಇಂತಹ ಕಳವಳದ ಪರಿಸ್ಥಿತಿಯಲ್ಲಿ ಹಾಗೂ ಹೀಗೂ ಒಂದೂವರೆ ತಿಂಗಳು ಕಳೆದುಹೋಗಿತ್ತು. ಈ ಮಧ್ಯೆ, ತನ್ನ ಮನೆಯ ಹತ್ತಿರದಿಂದಲೇ ಕೆಲವು ಬಸ್ಸುಗಳು ಊರಿನತ್ತ ತೆರಳಲಿರುವ ಸುದ್ದಿ ಗೌರಿಗೆ ಆಶಾಕಿರಣವಾಗಿ ಕಂಡಿತ್ತು. ತನ್ನ ಹಾಗೂ ಮಗನ ಹೆಸರಿನಲ್ಲಿ ಸೀಟುಗಳನ್ನು ಬುಕ್ ಮಾಡಿದ್ದಳು. ಆ ರಾತ್ರಿ ಪಟ್ಟಣದಲ್ಲಿ ಕಳೆಯುತ್ತಿರುವ ಕೊನೆಯ ರಾತ್ರಿಯಾಗಿತ್ತು. ಒಮ್ಮೆ ಊರಿಗೆ ಹೋದಮೇಲೆ ಕೆಲಸ ಹುಡುಕಿಕೊಂಡು ಅಲ್ಲಿಯೇ ನೆಲೆಯೂರುವ ನಿರ್ಧಾರ ಮಾಡುತ್ತಿದ್ದಳು. ಆದರೆ ಹೆಚ್ಚಿನ ಜನರೆಲ್ಲ ಶಹರದಿಂದ ಹಳ್ಳಿಗೆ ಮರಳಿದ್ದರು. ಹಳ್ಳಿಯಲ್ಲಿಯೂ ಕೆಲಸ ಸಿಗುವ ಭರವಸೆಯೂ ಗೌರಿಗೆ ಕಾಣುತ್ತಿರಲಿಲ್ಲ. ತನ್ನ ಬದುಕನ್ನು ರೂಪಿಸಿದ ಪಟ್ಟಣವನ್ನು ಬಿಟ್ಟು ಹೋಗುವ ನೋವು ಅವಳನ್ನು ಕಾಡುತ್ತಿತ್ತು. ಹಳೆಯ ನೆನಪುಗಳ ದೋಣಿಯಲ್ಲಿ ತೇಲುತ್ತಿರುವ ಗೌರಿಗೆ ನಿದ್ದೆ ಬರುವಂತಿರಲಿಲ್ಲ. ಪಕ್ಕದಲ್ಲಿಯೇ ಮಲಗಿದ್ದ ಅವಳ ಮಗನಿಗೂ ಊರಿಗೆ ಹೋಗುವ ಉತ್ಸಾಹದ ಜತೆಗೆ ಅಪ್ಪನನ್ನು ಕಾಣುವೆನೆಂಬ ಸಂಭ್ರಮವೂ ಸೇರಿ ನಿದ್ದೆ ಬಂದಂತಿರಲಿಲ್ಲ. ಅಷ್ಟರಲ್ಲಿ ಗೌರಿಯ ಮೊಬೈಲ್ ರಿಂಗಣಿಸಿತು. ಅತ್ತಲಿಂದ ಗೌರಿ ಯಾವಾಗಲೂ ಕೆಲಸ ಮಾಡಲು ಹೋಗುವ ಬಿಲ್ಡಿಂಗ್ ಮೇಸ್ತ್ರಿಯ ಧ್ವನಿ. “ನಾಳೆಯಿಂದ ಬಿಲ್ಡಿಂಗ್ ಕೆಲಸ ಶುರುವಾಗ್ತಾ ಇದೆ. ನಿನ್ನ ಗಂಡಂಗೆ ಫೋನ್ ಮಾಡಿದ್ರೆ ದರಿದ್ರದವ ತಗೊಳ್ತಾನೆ ಇಲ್ಲ. ತುಂಬಾ ದಿನಗಳ ನಂತ್ರ ಸಾರಾಯಿ ಸಿಗ್ತು ಅಂತ ಕುತ್ತಿಗೆವರೆಗೆ ಕುಡ್ದು ಮಲ್ಗಿದಾನೋ ಏನು? ನಾಳೆಯಿಂದ ನೀವಿಬ್ರೂ ಕೆಲ್ಸಕ್ ಬನ್ನಿ” ಎಂದ. ಆ ಸರಿ ರಾತ್ರಿಯಲ್ಲೂ ದೂರದಿಂದ “ಗಗನವು ಎಲ್ಲೋ, ಭೂಮಿಯು ಎಲ್ಲೋ’ ಹಾಡು ಕೇಳಿ ಬಂದಂತಾಯಿತು ಗೌರಿಗೆ.

ಮತ್ತಷ್ಟು ಸುದ್ದಿಗಳು

vertical

Latest News

ಮಹಿಳೆಯರ ಎದುರು ಬೆತ್ತಲಾಗುತ್ತಿದ್ದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ, ಸ್ಥಿತಿ ಗಂಭೀರ

newsics.com ಬೆತುಲ್(ಮಧ್ಯಪ್ರದೇಶ): ಮಹಿಳೆಯರು ಮತ್ತು ಯುವತಿಯರ ಎದುರು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಊರಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಈ‌...

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ. ಕೊರಚ ಮತ್ತು‌ ಕೊರಮ ಸಮುದಾಯದ ಜನರು ನಾಗರ ಪಂಚಮಿ...

ಯಾವುದೇ ಕಾರಣಕ್ಕೂ ಆಧಾರ್ ಒಟಿಪಿ ಶೇರ್ ಮಾಡಬೇಡಿ: ಸರ್ಕಾರದ ಎಚ್ಚರಿಕೆ

newsics.com ಬೆಂಗಳೂರು: ಆಧಾರ್ ಒಟಿಪಿ, ವೈಯಕ್ತಿಕ ಕಾರ್ಡ್ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಸರ್ಕಾರ ಎಚ್ಚರಿಸಿದೆ. ನಿಮ್ಮ ಆಧಾರ್ ಒಟಿಪಿಯನ್ನು ಕೇಳಿ ನಿಮಗೆ ಎಂದಿಗೂ ಕರೆ, SMS ಅಥವಾ ಇಮೇಲ್ ಬರುವುದಿಲ್ಲ ಎಂದು ಆಧಾರ್ ಕಾರ್ಡ್ ಸುರಕ್ಷತೆ...
- Advertisement -
error: Content is protected !!