Monday, November 29, 2021

ಕಪಿಲೆ

Follow Us

‘ಗೌಡ್ರ, ಇಂಥವಕ್ಕೆಲ್ಲ ಹಿಂಗ್ ಅಳ್ಕೊಂತ ಕುಂತ್ರ ಹೆಂಗಂತೀನಿ!? ನೀವ„ ಹಿಂಗ್ ಮಾಡ್ರೆ ಇನ್ನು ನಮ್ಮಂತವ್ರ ಗತಿ ಹೆಂಗ್!? ಸಮಾಧಾನ ತಗೋರಿ… ಈಗ, ನಾ, ಒಂದು ಮಾತು ಹೇಳ್ತೀನಿ, ಕೇಳ್ರಿ… ನಮ್ಮ ಹಾರೀಗೇರಿ ಹನುಮಂದೇವರ ಸೇವಾಕ್ಕ ಒಂದು ಕಪಲಿ ಬಿಡ್ತೀನಂತ ಈಗ್ಲೇ ಹನುಮಂದೇವ್ರ ಮುಂದ ಕೈಮುಗುದ ಬೇಡ್ಕೋರಿ! ನೀವು ಬೇಡ್ಕೊಂಡು ಮೂರು ತಿಂಗ್ಳದಾಗ ರುಕುಮಾಯಿ ಮದಿವಿ ಆಗಿ ಗಂಡನ ಮನಿಗಿ ನಡೀಲಿಕ್ಕೆ ಹೋಗದಿದ್ರ… ನನ್ನ ಕಿವಿ ಕೊಯ್ದು ನಿಮ್ಮ ಪಾದದ ಮ್ಯಾಗ ಇಡ್ತೀನಿ! ಇದು, ಸತ್ಯದ ಮಾತೈತಿ…’
♦ ಕಲ್ಲೇಶ್ ಕುಂಬಾರ್, ಹಾರೂಗೇರಿ
response@134.209.153.225
newsics.com@gmail.com

ಇಂದ್ಯಾಕೊ ಕಪಿಲೆ ಎಂದಿನಂತಿರ್ಲಿಲ್ಲ! ಅದರ ಮಾರಿ ಮ್ಯಾಲಿದ್ದ ಎಂದಿನ ಗೆಲುವಿನ ಕಳೆ ಮಾಯವಾಗಿ, ಅಲ್ಲಿ ನಿರ್ಲಿಪ್ತ ಭಾವವೇ ತುಂಬುಕೊಂಡು ನೋಡುವವರಿಗೆ ಕನಿಕರ ಹುಟ್ಟುವಂತಿತ್ತು. ಆದರೆ, ಕಪಿಲೆಯ ಈ ಥರದ ವರ್ತನೆಗೆ ಕಾರಣವೇನೆಂಬುದು ಮಾತ್ರ ತಿಳಿಯಲಾರದ್ದು.
ಈಗ, ಐದಾರು ದಿನಗಳಿಂದೆ ಕಪಿಲೆ ಡೆಂಗ್ಯೂ ಜ್ವರದಿಂದಾಗಿ ಸತ್ತು ಹೋಗಿದ್ದ ಪೂಜೇರಿ ಸಂಗಪ್ಪನ ಮಣ್ಣು ಮಾಡಿ ಬರಲೆಂದು ಊರವರೊಂದಿಗೆ ಸೇರಿಕೊಂಡು ಗೋರಸ್ಯಾಳದವರೆಗೂ ಹೋಗಿತ್ತು! ಆಗ, ಅಲ್ಲಿ ಸಂಗಪ್ಪನನ್ನು ಹೂಳಲೆಂದು ತೆಗೆದಿದ್ದ ಕುಣಿಯ ಬಳಿ ಬಂದು, ಕುಣಿಯಿಂದ ಹೊರ ತೆಗೆದು ಹಾಕಿದ್ದ ಮಣ್ಣಿನ ವಾಸನೆಯನ್ನು ನೋಡಿದ ಮೇಲೆ ಹಿಂದೆ ಸರಿದು ಜನರ ನಡುಕ ಹೋಗಿ ನಿಂತಿತ್ತು. ಆಮೇಲೆ, ಮಣ್ಣು ಮಾಡುವಾಗಿನ ಕ್ರಿಯೆಗಳೆಲ್ಲವೂ ಮುಗಿದ ಬಳಿಕ ಗೋರಸ್ಯಾಳದಿಂದ ಹೊರಬಂದು ಊರಾಚೆ ಇರೊ ವಿರಕ್ತಮಠದವರೆಗೂ ನಡೆದುಕೊಂಡು ಹೋಗಿ, ಆ ಮಠದ ಆವರಣದ ಹೊರಗಿದ್ದ ನೀರಿನ ಟಾಕಿಯ ನಲ್ಲಿಯಿಂದ ಸುರೀತಿರೊ ನೀರನ್ನು ತನ್ನ ಮೈಮೇಲೆಲ್ಲ ಬೀಳಿಸಿಕೊಂಡು ಸ್ನಾನ ಮಾಡಿದವರಂಗೆ ಮಾಡಿತ್ತು. ನಂತರ, ತುಸು ಹೊತ್ತು ಅಲ್ಲೇ ನಿಂತು ಸುಧಾರಿಸಿಕೊಂಡವರಂಗೆ ಮಾಡಿ, ನಿಧಾನಕೆ ಹೆಜ್ಜೆ ಹಾಕುತ್ತ ಹನುಮಂದೇವರ ಗುಡಿಯ ಆವರಣದಲ್ಲಿ ಗುಡಿಯ ಪಂಚಕಮೀಟಿಯವರು ಅದಕ್ಕೆಂದೇ ನಿರ್ಮಿಸಿದ್ದ ಚಪ್ಪರದಲ್ಲಿ ಸೋತ ಮಾರಿ ಮಾಡಿಕೊಂಡು ಬಂದು ಮಲಗಿತ್ತು. ಆದರೆ, ಆಗ ಮಲಗಿದ್ದ ಕಪಿಲೆ ಜಪ್ಪಯ್ಯ ಎಂದರೂ ಇದುವರೆಗೂ ಮೇಲೆದ್ದಿರ್ಲಿಲ್ಲ!
ಇದೆಲ್ಲ ಒತ್ತಟ್ಟಿಗಿರಲಿ… ದಿನದ ಎರಡ್ಹೊತ್ತು ಹನುಮಂದೇವರ ಪೂಜೆ ಮುಗಿದ ಮೇಲೆ ಅದಕ್ಕೆಂದೇ ಇಡಲಾಗುತ್ತಿದ್ದ ಎಡೆಯನ್ನು ಸಹ ಅದು ಮುಟ್ಟಿರ್ಲಿಲ್ಲ. ಆ ಹೊತ್ತಲ್ಲಿ, ಕಪಿಲೆಗೆ ಸತ್ತು ಹೋದ ಪೂಜೇರಿ ಸಂಗಪ್ಪ ನೆನಪಾಗುತ್ತಿದ್ದನೊ ಏನೋ ಎಂಬಂತೆ ಗರ್ಭಗುಡಿಯಲ್ಲಿರೊ ಹನುಮಂದೇವರ ಮೇಲೆ ದೃಷ್ಟಿ ನೆಟ್ಟುಕೊಂಡು ಹಂಗೇ ಕುಂತಿತ್ತು. ಇದನ್ನೆಲ್ಲ ಕಂಡು ಬೆಳಗೂ-ಸಂಜೆ ಎರಡ್ಹೊತ್ತು ಹನುಮಂದೇವರಿಗೆ ಸನಿ ಮಾಡಿ ಹೋಗಲೆಂದು ಗುಡಿಯತ್ತ ಬರುತ್ತಿದ್ದ ಊರ ಜನರು ಗರ್ಭಗುಡಿಯೊಳಗೆ ಹನುಮಂದೇವರಿಗೆ ಸನಿ ಮಾಡಿ ಹೊರ ಬಂದವರೆ ಕಪಿಲೆಯತ್ತ ಹೋಗಿ, ಕ್ಷಣ ಹೊತ್ತು ಅದರ ಪ್ರೇತಕಳೆ ಹೊತ್ತ ಮಾರಿಯನ್ನು ನೋಡಿ ಮರುಕ ವ್ಯಕ್ತಪಡಿಸಿ ಹೋಗುತ್ತಿದ್ದರು.
ಇಂತಪ್ಪ ಕಪಿಲೆಯ ಈಥರದ ವರ್ತನೆಗೆ ಕಾರಣವೇನೆಂಬುದು ಯಾರೊಬ್ಬರಿಗೂ ತಿಳಿದಿರಲಿಲ್ಲವಾದರೂ ಸಹ ಹನುಮಂದೇವರ ಗುಡಿಯೊಂದಿಗೆ ಒಡನಾಟವನ್ನಿಟ್ಟುಕೊಂಡಿದ್ದ ಊರ ಮುಖಂಡ ರಾಚಪ್ಪಗೌಡನಿಗೆ ಕಪಿಲೆಯ ಈಥರದ ವರ್ತನೆಗೆ ಕಾರಣವೇನೆಂಬುದು ಸೂಕ್ಷ್ಮವಾಗಿ ಅರಿವಿಗೆ ಬಂದಿತ್ತು! ಅಷ್ಟಕ್ಕೂ ರಾಚಪ್ಪಗೌಡನೇ ಈಗ ಐದಾರು ವರ್ಷದ್ಹಿಂದೆ ಹನುಮಂದೇವರ ಸೇವೆಗೆಂದು ಕಪಿಲೆಯನ್ನು ಗುಡಿಯಲ್ಲಿ ತಂದು ಬಿಟ್ಟಿದ್ದ. ಕಪಿಲೆಯನ್ನು ಹನುಮಂದೇವರ ಸೇವೆಗೆ ಬಿಟ್ಟ ಮೇಲೆ ನಿದಾನಕೆ ಗುಡಿಯ ಪರಿಸರಕ್ಕೆ ಹೊಂದಿಕೊಂಡಿದ್ದ ಅದರ ಮಾರಿಯಲ್ಲಿ ಸದಾ ಗೆಲುವಿನ ಕಳೆಯನ್ನೇ ಕಾಣುತ್ತಿದ್ದ ರಾಚಪ್ಪಗೌಡನು ಇದೇ ಮೊದಲ ಸಲ ಎಂಬಂತೆ ಕಪಿಲೆಯ ಮಾರಿಯಲ್ಲಿ ನಿರ್ಲಿಪ್ತ ಭಾವನೆ ತುಂಬಿಕೊಂಡಿರುವುದನ್ನು ಕಂಡಿದ್ದ. ಅದಕ್ಕೇ, ಈ ಐದಾರು ದಿನಗಳಲ್ಲಿ ಆತ ಗುಡಿಯತ್ತ ಹೋದಾಗಲೆಲ್ಲ ಚಪ್ಪರದಲ್ಲಿ ಮಲಗಿದ್ದ ಕಪಿಲೆಯನ್ನು ಕಂಡೊಡನೆಯೇ ಚಿಂತೆಗೆ ಬೀಳುತ್ತಿದ್ದ. ಆತ, ಹೀಗೆ ಚಿಂತೆಗೆ ಬಿದ್ದಾಗಲೆಲ್ಲ ಕಪಿಲೆಯ ವಿಚಾರದಲ್ಲಿ ಈ ಹಿಂದೆ ನಡೆದ ಘಟನೆಗಳು ಕಣ್ಮುಂದೆ ಬರುತ್ತಿದ್ದವು. ಹಾಗೆ, ಆ ಘಟನೆಗಳು ರಾಚಪ್ಪಗೌಡನ ಕಣ್ಮುಂದೆ ಬರುವುದಕ್ಕೆ ಕಾರಣವಿತ್ತು!

** ** **

ಅಪಾರ ದೈವಭಕ್ತನಾಗಿದ್ದ ರಾಚಪ್ಪಗೌಡನಿಗೆ ದೇವರು ದಿಂಡಿರು ಮೇಲೆ ಬಹಳ ನಂಬಿಕೆ ಇತ್ತು. ಆ ನಂಬಿಕೆಯಿಂದಾಗಿಯೇ ಆತ ಪ್ರತೀ ವರ್ಷ ಆಷಾಢ ಮಾಸದಲ್ಲಿ ಪಂಢರಾಪುರಕ್ಕೆ ಕಾಲ್ನಡಿಗೆಯಲ್ಲಿ ಹೋಗಿ ವಿಠಲ-ರುಕುಮಾಯಿಯ ದರ್ಶನ ಮಾಡಿಕೊಂಡು ಬರ್ತಿದ್ದ! ಆಗೆಲ್ಲ, ತನ್ನ ಹೆಣ್ತಿ-ಮಕ್ಳನ್ನೂ ಸಹ ತನ್ನ ಜೊತೆಯಲ್ಲಿ ಕಾಲ್ನಡಿಗೆಯಲ್ಲೇ ಕರೆದುಕೊಂಡು ಹೋಗುತ್ತಿದ್ದ. ಈ ಪರಿಯ ದೈವಭಕ್ತನಾಗಿದ್ದ ರಾಚಪ್ಪಗೌಡನಿಗೆ ಊರಿನ ಆರಾಧ್ಯ ದೈವ ಹನುಮಂದೇವರ ಮೇಲೆ ಅಪಾರ ಭಕ್ತಿ-ನಂಬಿಕೆ ಎರಡೂ ಇದ್ದವು. ಆ ಭಕ್ತಿ ಮತ್ತು ನಂಬಿಕೆಯ ದೆಸೆಯಿಂದಾಗಿಯೇ ಹನುಮಂದೇವರ ಗುಡಿಗೆ ಎರಡೂ ಹೊತ್ತು ಹೋಗಿ ಸನಿ ಮಾಡಿ ಬರ್ತಿದ್ದ. ಅಷ್ಟೇ ಅಲ್ಲ… ತನ್ನ ಇಷ್ಟಾರ್ಥ ನೆರವೇರಲೆಂದು ಗುಡಿಗೆ ಗಂಟೆ, ಜಾಗಟೆ, ಧೂಪಾರತಿ ಮುಂತಾದ ಪೂಜಾ ಸಾಮಾನುಗಳನ್ನೆಲ್ಲ ಕೊಡುವುದಾಗಿ ಬೇಡಿಕೊಂಡು, ತನ್ನ ಇಷ್ಟಾರ್ಥಗಳೆಲ್ಲ ನೆರವೇರಿದಾಗ ತಾನು ಬೇಡಿಕೊಂಡಂತೆ ಅವುಗಳನ್ನೆಲ್ಲ ಕೊಟ್ಟು ಹರಕೆ ತೀರಿಸ್ತಿದ್ದ. ಅಂತೂ ಆತನ ದೈವಭಕ್ತಿ ಮತ್ತು ನಂಬಿಕೆಗೆ ತಕ್ಕಂತೆ ಹನುಮಂದೇವರು ಆತನ ಸಂಸಾರವನ್ನು ಚೆಂದಾಗಿಯೇ ಇಟ್ಟಿದ್ದ. ಒಂದು ರೀತಿಯಲ್ಲಿ ಆತನ ಸಂಸಾರ ನಂದಗೋಕುಲದಂತಿತ್ತು.
ರಾಚಪ್ಪಗೌಡನ ಹೆಂಡತಿ, ಶಾರವ್ವಗೌಡತಿ. ಅವರಿಬ್ಬರದೂ ಶಿವಪಾರ್ವತಿಯರಂಗೆ ಅನುರೂಪವಾದ ಜೋಡಿ. ಅವರಿಗೆ, ಒಬ್ಬನೇ ಮಗ…; ಒಬ್ಬಳೇ ಮಗಳು…! ರಮೇಶ ಮತ್ತು ರುಕುಮಾಯಿ ಅಂತ ಅವರೆಸ್ರು. ರಮೇಶ, ಬಾಗಲಕೋಟೆಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ. ಇನ್ನು, ರುಕುಮಾಯಿ, ಹಾರೀಗೇರಿಯ ಕಾಲೇಜಿನಲ್ಲಿ ಪದವಿ ಮುಗಿಸಿ, ಮುಂದೆ ಓದಲಾಗದೆ ಮನೆಯಲ್ಲಿಯೇ ಇದ್ದಳು. ಆಕೆಗೆ ಅದಾಗಲೇ ಇಪ್ಪತ್ಮೂರು-ಇಪ್ಪತ್ನಾಕು ವರ್ಷ ವಯಸ್ಸಾಗಿದ್ದವು. ಹಿಂಗಾಗಿ ರಾಚಪ್ಪಗೌಡನು ಕಳೆದ ಎರಡ್ಮೂರು ವರ್ಷಗಳಿಂದ ರುಕುಮಾಯಿಗೆ ಗಂಡು ನೋಡುತ್ತಿದ್ದ. ಆಕೆಗೆ ಬೇಗನೆ ಮದಿವಿ ಮಾಡಿ ಮುಗಿಸಿ ಜವಾಬ್ದಾರಿ ಕಳೆದುಕೊಳ್ಳಬೇಕೆಂಬುದು ರಾಚಪ್ಪಗೌಡನ ಆಶೆಯಾಗಿತ್ತು. ಬೆಳೆದು ನಿಂತ ರುಕುಮಾಯಿ ಆತನ ಎದೆ ಮೇಲೆ ಕುಂತಂಗಾಗಿ ಬಿಟ್ಟಿದ್ದಳು. ಅದೇ ಚಿಂತೆಯಾಗಿತ್ತು, ರಾಚಪ್ಪನಿಗೆ! ಆ ಚಿಂತೆಯಿಂದಾಗಿಯೇ ಕೈಕಾಲಿಗೆ ಸವುಡು ಇಲ್ಲದಂಗೆ ಊರೂರು ಸುತ್ತಿ ತನ್ನ ಪರಿಚಯದವರಿಗೆಲ್ಲ ಮಗಳಿಗೊಂದು ವರ ನೋಡಿ ಎಂದು ಕೇಳಿಕೊಂಡು ಬರ್ತಿದ್ದ. ಅವರೂ ಸಹ ಗಂಡು ಹುಡುಕಿ ತಂದು ರುಕುಮಾಯಿಯನ್ನು ತೋರಿಸುತ್ತಿದ್ದರಾದರೂ ಒಮ್ಮೆ ರುಕುಮಾಯಿಯನ್ನು ನೋಡಿ ಹೋದವರು ಮತ್ತೊಮ್ಮೆ ತಿರುಗಿ ಏನೆಂಬುದನ್ನೂ ಸಹ ತಿಳಿಸುತ್ತಿರಲಿಲ್ಲ. ಇದಕ್ಕೆಲ್ಲ ಬೇರೆಯದೆ ಕಾರಣವಿತ್ತು! ರುಕುಮಾಯಿಯು ತನ್ನಪ್ಪನಂಗೆ ಕಪ್ಪಗೆ; ಕುಳ್ಳಗಿದ್ದಳು. ಜತೆಗೆ, ಆಕೆಯ ಒಂದು ಕಣ್ಣು ಮೆಳ್ಳಗಣ್ಣಾಗಿತ್ತು. ಇವೆಲ್ಲ ರುಕುಮಾಯಿಯು ಹಸೆಮಣೆ ಏರುವುದಕ್ಕೆ ಅಡ್ಡಿಪಡಿಸಿದ್ದವು!
ಯಾವಾಗ ರುಕುಮಾಯಿಗೆ ಬೇಗನೆ ಮದಿವಿಯಾಗುವುದಿಲ್ಲವೊ ಆಗಲೇ ಚಿಂತೆಗೆ ಬಿದ್ದ ರಾಚಪ್ಪಗೌಡನು ವಿಧಿಯಿಲ್ಲದೇ ಊರಿನ ಆರಾಧ್ಯ ದೈವ ಹನುಮಂದೇವರ ಮೊರೆ ಹೋದ! ಹಂಗೂ ಹಿಂಗೂ ಯೋಚಿಸಿ ಕೊನೆಗೆ, ಅದೊಂದು ದಿನ ರುಕುಮಾಯಿ ಮದಿವಿ ವಿಚಾರದದಲ್ಲಿ ಹನುಮಂದೇವರಲ್ಲಿ ಬೇಡಿಕೊಳ್ಳಲೆಂದು ಗುಡಿಯತ್ತ ಹೋದ. ಆತ ಗುಡಿಯತ್ತ ಹೋದ ಹೊತ್ತಲ್ಲಿ, ಆಗಷ್ಟೇ ಹನುಮಂದೇವರ ಪೂಜೆ ಮುಗಿಸಿ ಮನೆಗೆ ತೆರಳುತ್ತಿದ್ದ ಪೂಜೇರಿ ಸಂಗಪ್ಪ ಎದುರಾದ. ಆಗ ರಾಚಪ್ಪಗೌಡನ ಕಳೆಗುಂದಿದ ಮಾರಿ ಕಂಡು ಪೂಜೇರಿ ಸಂಗಪ್ಪನಿಗೆ ಕೆಡಕೆನಿಸಿತು. ಆ ಕ್ಷಣದಲ್ಲಿ ಆತ ರಾಚಪ್ಪಗೌಡನ ಕಳೆಗುಂದಿದ ಮಾರಿಯನ್ನು ಕಂಡು ಒಳಗೊಳಗೆ ಮರುಗಿದ. ಆ ಮರುಕದಿಂದಾಗಿ, ಆತನ ಮೈದಡವಿ ಸಮಾಧಾನಪಡಿಸುತ್ತ ಪೂಜೇರಿ ಸಂಗಪ್ಪ ವಿಷಯವೇನೆಂದು ಕೇಳಿದ. ಇದರಿಂದಾಗಿ, ಪೂಜೇರಿ ಸಂಗಪ್ಪನ ನಿಷ್ಕಲ್ಮಶವಾದ ಮನಸ್ಸಿನ ಬಗ್ಗೆ ಮೊದಲೇ ಅರಿತಿದ್ದ ರಾಚಪ್ಪಗೌಡನು ಹಿಂದುಮುಂದು ನೋಡದೆಯೇ ರುಕುಮಾಯಿಯ ಮದಿವಿ ವಿಚಾರದಲ್ಲಿ ಬಂದೆರಗುತ್ತಿರುವ ತೊಂದರೆಗಳನ್ನು ಹೇಳಿಕೊಂಡು ಕಣ್ಣಿಗೆ ನೀರು ತಂದನಲ್ಲದೇ, ‘ಮುಂದ್ಹೆಂಗ್ ಮಾಡೂದಂತ ತಿಳೀವಲ್ದಾಗೆದಪ್ಪೊ…’ ಎಂದು ಹಲುಬತೊಡಗಿದ. ಆಗ ಪೂಜೇರಿ ಸಂಗಪ್ಪನು ಕಣ್ಣೀರಿಡುತ್ತಿದ್ದ ಆತನನ್ನು ಮತ್ತೇ ಸಮಾಧಾನಪಡಿಸುತ್ತ, ‘ಗೌಡ್ರ, ಇಂಥವಕ್ಕೆಲ್ಲ ಹಿಂಗ್ ಅಳ್ಕೊಂತ ಕುಂತ್ರ ಹೆಂಗಂತೀನಿ!? ನೀವ„ ಹಿಂಗ್ ಮಾಡ್ರೆ ಇನ್ನು ನಮ್ಮಂತವ್ರ ಗತಿ ಹೆಂಗ್!? ಸಮಾಧಾನ ತಗೋರಿ… ಈಗ, ನಾ, ಒಂದು ಮಾತು ಹೇಳ್ತೀನಿ, ಕೇಳ್ರಿ… ನಮ್ಮ ಹಾರೀಗೇರಿ ಹನುಮಂದೇವರ ಸೇವಾಕ್ಕ ಒಂದು ಕಪಲಿ ಬಿಡ್ತೀನಂತ ಈಗ್ಲೇ ಹನುಮಂದೇವ್ರ ಮುಂದ ಕೈಮುಗುದ ಬೇಡ್ಕೋರಿ! ನೀವು ಬೇಡ್ಕೊಂಡು ಮೂರು ತಿಂಗ್ಳದಾಗ ರುಕುಮಾಯಿ ಮದಿವಿ ಆಗಿ ಗಂಡನ ಮನಿಗಿ ನಡೀಲಿಕ್ಕೆ ಹೋಗದಿದ್ರ… ನನ್ನ ಕಿವಿ ಕೊಯ್ದು ನಿಮ್ಮ ಪಾದದ ಮ್ಯಾಗ ಇಡ್ತೀನಿ! ಇದು, ಸತ್ಯದ ಮಾತೈತಿ…’ ಎಂದ.
ಆಕ್ಷಣದಲ್ಲಿ, ಪೂಜೇರಿ ಸಂಗಪ್ಪ ಅಂದ ಮಾತುಗಳು ರಾಚಪ್ಪಗೌಡನ ಮನಸ್ಸಿಗೆ ಹಿಡಿಸಿದವು. ಇನ್ನೇನೋ ಬೇಡಿಕೊಳ್ಳಬೇಕೆಂದುಕೊಂಡು ಗುಡಿಯತ್ತ ಬಂದಿದ್ದ ರಾಚಪ್ಪಗೌಡನು, ಆತ ಹೇಳಿದಂತೆ ರುಕುಮಾಯಿ ಮದಿವಿಯಾಗಿ ಗಂಡನ ಮನೆಗೆ ಹೋದರೆ ಹನುಮಂದೇವರಿಗೆ ಸೇವಾ ಮಾಡ್ಲಿಕ್ಕೆ ಕಪಲಿಯನ್ನು ಬಿಡುತ್ತೇನೆಂದು ಭಿನ್ನಹಿಸಿಕೊಂಡ.
ಅಚ್ಚರಿಯೆಂದರೆ, ರಾಚಪ್ಪ ಗೌಡನು ಹಾಗೆ ಭಿನ್ನಹಿಸಿಕೊಂಡು ಹೋದ ತಿಂಗಳೊಪ್ಪತ್ತಿನಲ್ಲೇ ದೂರದ ಶಾಮಲಾಪುರದ ಪದವಿ ಕಾಲೇಜೊಂದರರಲ್ಲಿ ಉಪನ್ಯಾಸಕನಾಗಿದ್ದ ಸುಂದರೇಶ್‍ನು ವರದಕ್ಷಿಣೆಯ ಆಶೆಗಾಗಿ ರುಕುಮಾಯಿಯ ರೂಪದ ವಿಚಾರದಲ್ಲಿ ತುಟಿ ಪಿಟ್ಟೆನ್ನದೇ ಆಕೆಯನ್ನು ಮದಿವಿಯಾಗಿ ಜೊತೆಯಲ್ಲೇ ಕರೆದುಕೊಂಡು ಹೋದ! ಸುಂದರೇಶ್‍ನು ಹಾಗೆ ರುಕುಮಾಯಿಯನ್ನು ಕರೆದುಕೊಂಡು ಹೋಗುವಾಗ ರಾಚಪ್ಪಗೌಡನು ಕೊಟ್ಟ ಮಣಗಟ್ಟಲೆ ಬಂಗಾರ, ರೊಕ್ಕ-ರೂಪಾಯಿ ಎಲ್ಲವನ್ನೂ ಜೊತೆಯಲ್ಲೇ ಹೊತ್ತೊಯ್ದ. ಇದು ರಾಚಪ್ಪಗೌಡನಿಗೆ ಸಮಾಧಾನ ತಂದಿತ್ತು. ಈ ಸಮಾಧಾನದಿಂದಾಗಿ, ತನ್ನ ತೋಟದಲ್ಲಿ ಕಟ್ಟಿದ್ದ ‘ಗೌರಿ’ ಎಂಬ ಆಕಳು ಈಯ್ದಿದ್ದ ಏಳೆಂಟು ತಿಂಗಳ ಕರುವನ್ನು ಹನುಮಂದೇವರ ಸೇವೆಗೆಂದು ಗುಡಿಯಲ್ಲಿ ತಂದು ಬಿಟ್ಟಿದ್ದ. ಅದನ್ನು ಗುಡಿಯಲ್ಲಿ ಬಿಡುವ ದಿನ ಹನುಮಂದೇವರಿಗೆ ಎಲೆ ಪೂಜೆ ಕಟ್ಟಿಸಿ, ಊರಿಗೆಲ್ಲ ಹುಗ್ಗಿ ಊಟ ಹಾಕಿಸಿದ್ದ.

** ** **

ರಾಚಪ್ಪಗೌಡನು ಐದಾರು ತಿಂಗಳ ಕರುವನ್ನು ಹನುಮಂದೇವರ ಸೇವೆಗೆಂದು ಗುಡಿಯಲ್ಲಿ ತಂದು ಬಿಟ್ಟು ಹೋದ ಹೊಸದರಲ್ಲಿ ಅದು, ತನ್ನವ್ವ ‘ಗೌರಿ’ಯ ನೆನಪಾದ ಕೂಡಲೇ ಆಕೆಯನ್ನು ಹುಡುಕಿಕೊಂಡು ರಾಚಪ್ಪಗೌಡನ ತೋಟದತ್ತ ಹೋಗಿ, ‘ಗೌರಿ’ ಆಕಳಿನ ಮುಂದೆ, ‘ಅಂಬಾ„…’ ಎಂದು ರೋದಿಸುತ್ತ ನಿಂತು ಬಿಡುತ್ತಿತ್ತು. ಆಗ, ಅದು ರೋದಿಸುವುದನ್ನು ಕಂಡು ಇತ್ತ ಗೂಟಕ್ಕೆ ಕಟ್ಟಿದ ‘ಗೌರಿ’ ಆಕಳು ಕೂಡ ನಿಂತಲ್ಲೇ ತನ್ನ ಕಾಲುಗಳನ್ನು ಕಿತ್ತಿಡುತ್ತ, ನಡುನಡುಕ ಗೂಟಕ್ಕೆ ಕಟ್ಟಿದ ಹಗ್ಗವನ್ನು ಕಿತ್ತುಕೊಳ್ಳುವುದಕ್ಕೆ ಪ್ರಯತ್ನಿಸುತ್ತ ತನ್ನ ಕರುಳ ಸಂಕಟವನ್ನು ವ್ಯಕ್ತಪಡಿಸುತ್ತಿತ್ತು. ಆಗೆಲ್ಲ, ಇದನ್ನು ದೂರದಲ್ಲಿ ನೋಡುತ್ತ ನಿಂತಿರುತ್ತಿದ್ದ ರಾಚಪ್ಪಗೌಡನಿಗೆ ಆಕ್ಷಣದಲ್ಲಿ ಸಿಟ್ಟು ಉಕ್ಕೇರಿ ಬರಲು ದಡದಡನೆ ಹೆಜ್ಜೆ ಹಾಕುತ್ತ ‘ಗೌರಿ’ ಆಕಳಿನತ್ತ ಬಂದು, ಎಮ್ಮೆಯ ಕೊರಳಿಗೆ ಕಟ್ಟುವ ಲಳ್ಳಾಗುದ್ದಿಯಿಂದ ಎರಡೇಟು ಹಾಕಿದವನೆ ಕರುವಿನ ಕೊರಳಿಗೆ ಹಗ್ಗ ಹಚ್ಚಿ, ದರದರನೆ ಎಳೆತಂದು ಹನುಮಂದೇವರ ಗುಡಿಯಲ್ಲಿ ಬಿಟ್ಟು ಹೋಗುತ್ತಿದ್ದ. ಹಂಗೇ, ಆತ ಹೋಗುವಾಗ ಗುಡಿಯಲ್ಲೇ ಇರುತ್ತಿದ್ದ ಪೂಜೇರಿ ಸಂಗಪ್ಪನಿಗೆ, ‘ಲೇ, ಸಂಗಪ್ಪ… ಕಪಲಿ, ನಮ್ಮ ತೋಟದ ಕಡಿಗಿ ಬರದಂಗ ನೋಡ್ಕೊರಪ್ಪೊ…’ ಎಂದು ಕೂಗಿ ಹೇಳುತ್ತಿದ್ದ. ಆಗ, ಆ ಮಾತಿಗೆ ಪೂಜೇರಿ ಸಂಗಪ್ಪ ನಕ್ಕು ಸುಮ್ಮನಾಗುತ್ತಿದ್ದ.
ಆದರೆ, ಪದೆ ಪದೆ ಕಪಿಲೆಯು ತನ್ನವ್ವ ‘ಗೌರಿ’ ಆಕಳನ್ನು ಹುಡುಕಿಕೊಂಡು ರಾಚಪ್ಪಗೌಡನ ತೋಟದತ್ತ ಹೋಗತೊಡಗಿದಾಗ ಪೂಜೇರಿ ಸಂಗಪ್ಪನು ವಿಧಿಯಿಲ್ಲದೇ ಕಪಿಲೆಯ ಮೇಲೆ ಒಂದು ಕಣ್ಣಿಡತೊಡಗಿದ. ಕಪಿಲೆ ಎಲ್ಲೇ ಹೋಗಲಿ… ಅದು ಬೇಗನೆ ಗುಡಿಯತ್ತ ಬರದೇ ಇದ್ದಾಗಲೆಲ್ಲ ಅದನ್ನು ಹುಡುಕಿಕೊಂಡು ಹೋಗಿ, ಹಗ್ಗ ಹಚ್ಚಿ ಗುಡಿಯತ್ತ ಕರೆತರುತ್ತಿದ್ದ. ಬಳಿಕ, ಅದರ ಹಣೆಯ ಮೇಲೆಲ್ಲ ಕೈಯಾಡಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದ. ಜೊತೆಗೆ, ಅದಕ್ಕೆ ಹಸಿವಾಗಿದೆಯೆಂದುಕೊಂಡು, ಹನುಮಂದೇವರಿಗೆಂದು ಜನರು ತರುತ್ತಿದ್ದ ಎಡೆಯನ್ನು ತಂದು ಅದಕ್ಕೆ ತಿನ್ನಿಸುತ್ತಿದ್ದ. ಹಂಗೇ ವಾರದಲ್ಲಿ ಒಂದೆರಡು ಬಾರಿ ವಿರಕ್ತಮಠದ ಆವರಣದ ಹೊರಗಿರೊ ನೀರಿನ ಟಾಕಿಯಿಂದ ಕೊಡದಲ್ಲಿ ನೀರು ತಂದು ಅದರ ಮೈತೊಳೆಯುತ್ತಿದ್ದ. ಅಷ್ಟಲ್ಲದೇ ಗುಡಿಯ ಪಂಚಕಮೀಟಿಯವರಿಗೆ ಹೇಳಿಸಿ ಅದರ ಆಸರೆಗೆಂದು ಗುಡಿಯ ಆವರಣದ ಒಂದು ಮೂಲೆಯಲ್ಲಿ ಚಪ್ಪರ ಹಾಕಿಸಿದ್ದ. ಹೀಗೆ, ಪೂಜೇರಿ ಸಂಗಪ್ಪನು ದಿನವೂ ತಪ್ಪದೇ ಕಪಿಲೆಯ ಆರೈಕೆಯನ್ನು ಒಂದು ವ್ರತದಂತೆ ಮಾಡುತ್ತ ಬಂದ. ಈ ಕಾರಣವಾಗಿ, ಕಪಿಲೆಯು ಮುಂದಿನ ದಿನಗಳಲ್ಲಿ ಆತನನ್ನು ತುಂಬಾ ಹಚ್ಚಿಕೊಂಡು ಬಿಟ್ಟಿತು. ಅದು ಪೂಜೇರಿ ಸಂಗಪ್ಪನನ್ನು ಕಂಡರೆ ಸಾಕು… ಚಂಗನೆ ಜಿಗಿದು ಅವನತ್ತ ಬಂದು, ತನ್ನ ಮಾರಿಯನ್ನು ಆತನ ಮೈಗೆ ತಾಕಿಸಿ ಪ್ರೀತಿ ವ್ಯಕ್ತಪಡಿಸುತ್ತಿತ್ತು. ಕ್ರಮೇಣ ಕಪಿಲೆಯು ಪೂಜೇರಿ ಸಂಗಪ್ಪನನ್ನು ಅದೆಷ್ಟು ಹಚ್ಚಿಕೊಂಡಿತೆಂದರೆ ಆತ ಒಂದು ದಿನದ ಮಟ್ಟಿಗಷ್ಟೇ ಗುಡಿಯತ್ತ ಬರದಿದ್ದರೂ ಸಾಕು ಪೂಜೇರಿ ಸಂಗಪ್ಪನನ್ನು ಹುಡುಕಿಕೊಂಡು ಮನೆಯವರೆಗೂ ಹೋಗುತ್ತಿತ್ತು. ಈತನ ಮೇಲಿನ ಪ್ರೀತಿಯ ನಡುಕ ತನ್ನವ್ವ ‘ಗೌರಿ’ ಆಕಳನ್ನೂ ಸಹ ಅದು ಮರ್ತು ಬಿಟ್ಟಿತು! ಅದರಂತೆ ಇತ್ತ ‘ಗೌರಿ’ ಆಕಳು ಮತ್ತೊಂದು ಕರುವನ್ನು ಹಾಕಿತ್ತಾದ್ದರಿಂದ ಅದೂ ಸಹ ಕಪಿಲೆಯನ್ನು ಮರ್ತು ಕುಂತಿತು! ಈ ಮಧ್ಯ, ಪೂಜೇರಿ ಸಂಗಪ್ಪ ಮತ್ತು ಕಪಿಲೆ ನಡುಕಿದ್ದ ಪ್ರೀತಿ, ವಾತ್ಸಲ್ಯ, ಮಮಕಾರ- ಇವೆಲ್ಲ ಮಾತ್ರ ಹನುಮಂತದೇವರ ಗುಡಿಯಲ್ಲಿ ಹಚ್ಚಿಟ್ಟಿರೊ ಜ್ಯೋತಿಯಂತೆ ಸದಾ ಬೆಳಗುತ್ತಿದ್ದವು.
ಆದರೆ, ಈ ನಡುಕ ಕಪಿಲೆಯ ವಿಚಾರದಲ್ಲಿ ವಿಧಿ ಬೇರೆಯದೇ ಆಟ ಹೂಡಿತ್ತು!

** ** **

ಈಗ, ವಾರ ಹತ್ತು ದಿನಗಳಿಂದ ಪೂಜೇರಿ ಸಂಗಪ್ಪನ ಮೈಯಲ್ಲಿ ಆರಾಮ ಇರ್ಲಿಲ್ಲ! ಆತ ಥಂಡಿ-ಉರಿ ಬಂದು ಮನೆಯಲ್ಲಿ ಹಾಸುಗೆ ಹಾಸಿಕೊಂಡು ಮಲಗಿ ಬಿಟ್ಟಿದ್ದ. ಹೀಗೆ, ತನ್ನ ಮೈಯಲ್ಲಿ ಆರಾಮ ತಪ್ಪಿದ ಮೇಲೆ ಸುಣಗಾರ ಡಾಕ್ಟರನಿಗೆ ತೋರಿಸಿ, ಸೂಜಿ-ಗುಳಗಿ ಮಾಡಿಕೊಂಡಿದ್ದನಾದರೂ ಸಹ ಥಂಡಿ-ಉರಿ ಮಾತ್ರ ಕಮ್ಮೀ ಆಗಿರ್ಲಿಲ್ಲ. ಹಿಂಗಾಗಿ, ಆತ ಬೆಳಗೂ-ಸಂಜೆ ಹನುಮಂದೇವರ ಪೂಜೆ ಮಾಡಲು ಗುಡಿಯತ್ತ ಬಂದಿರ್ಲಿಲ್ಲ. ಆತನ ಬದಲಿಗೆ ಮಗ, ಶಿವಣ್ಣನೇ ಬರ್ತಿದ್ದ. ಇದರಿಂದಾಗಿ, ಆಗಿನಿಂದಲೂ ಗುಡಿಯ ಆವರಣದಲ್ಲಿ ಪೂಜೇರಿ ಸಂಗಪ್ಪನ ಮಾರಿ ಕಪಿಲೆಯ ಕಣ್ಣಿಗೆ ಕಂಡಿರ್ಲಿಲ್ಲ! ಇದು, ಕಪಿಲೆಗೆ ಯಕ್ಷ ಪ್ರಶ್ನೆಯಾಗಿ ಕಾಡತೊಡಗಿತು. ಅದಕ್ಕೇ, ಅದು ಏಳೆಂಟು ದಿನದ ಹಿಂದೆ ಪೂಜೇರಿ ಸಂಗಪ್ಪನ ಮನೆಯವರೆಗೂ ಆತನನ್ನು ಹುಡುಕಿಕೊಂಡು ಹೋಗಿತ್ತು. ಆಗ, ಅಲ್ಲಿ ಆತನನ್ನು ನೋಡಲೆಂದು ಮನೆಗೆ ಜನರು ಬಂದು ಹೋಗುವುದನ್ನು ಕಂಡು ಕಪಿಲೆಗೆ ಅಚ್ಚರಿಯಾಗಲು ಬಾಗಿಲೊಳಗೆ ಬಂದು ಇಣುಕಿ ನೋಡಿತು. ಆಗಲೇ, ಪೂಜೇರಿ ಸಂಗಪ್ಪನು ಪಡಸಾಲೆಯಲ್ಲಿ ಹಾಸಿದ್ದ ಕೌದಿಯ ಮೇಲೆ ಚಾದರ ಹೊದ್ದುಕೊಂಡು ದಯನೀಯ ಸ್ಥಿತಿಯಲ್ಲಿ ಮಲಗಿರುವುದನ್ನು ಕಂಡು ಅದು ಒಳಗೊಳಗೆ ಸಂಕಟಪಟ್ಟಿತು. ಆ ಸಂಕಟದಿಂದಾಗಿ, ಅಲ್ಲಿ ಹೆಚ್ಚು ಹೊತ್ತು ನಿಲ್ಲಲಾಗದೆ ದುಗುಡ ತುಂಬಿದ ಮಾರಿಯನ್ನು ಹೊತ್ತುಕೊಂಡು ಗುಡಿಯತ್ತ ಬಂದು ಚಪ್ಪರದಲ್ಲಿ ಮಲಗಿಕೊಂಡಿತ್ತು. ಅಂದು ಮಲಗಿದ್ದ ಕಪಿಲೆ ಮುಂದಿನ ಎರಡ್ಮೂರು ದಿನಗಳವರೆಗೆ ಪೂಜೇರಿ ಸಂಗಪ್ಪನ ಮಗ, ಶಿವಣ್ಣ ನೀಡಿದ ಎಡೆಯನ್ನೂ ಸಹ ಮುಟ್ಟದೆ ಗರ್ಭಗುಡಿಯೊಳಗಿರೊ ಹನುಮಂದೇವರನ್ನು ನೆದರಿಟ್ಟು ನೋಡುತ್ತ ಮಲಗೇ ಬಿಟ್ಟಿತ್ತು!
ಆದರೆ, ಆ ಎರಡ್ಮೂರು ದಿನಗಳಲ್ಲಿ ಇತ್ತ ಪೂಜೇರಿ ಸಂಗಪ್ಪನು ಥಂಡಿ-ಉರಿಯಿಂದ ಬಳಲಿ ಬಳಲಿ ಬೆಂಡಾಗಿ ಹೋಗಿದ್ದ. ಇದರಿಂದಾಗಿ, ಆತನ ತ್ರಾಸನ್ನು ತಮ್ಮ ಕಣ್ಣಿಂದ ನೋಡಲಾಗದ ಮನೆಯವರು ಒಂದು ಜೀಪು ಮಾಡಿಕೊಂಡು ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ತೆಗೆದುಕೊಂಡು ಹೋದರು. ಆದರೆ, ಹೋಗುವಾಗ ಜೀವಂತವಾಗಿ ಹೋಗಿದ್ದ ಪೂಜೇರಿ ಸಂಗಪ್ಪನ ರಕ್ತ, ಕಾಲ್ಮಡಿ, ಕಫ, ಎದೆದು ಎಕ್ಸರೇ… ಅಂತ ಅಲ್ಲಿನ ತಜ್ಞ ವೈದ್ಯರು ಪರೀಕ್ಷೆ ಮಾಡಿ ನೋಡಿದಾಗ ಆತ ಡೆಂಗ್ಯೂ ಜ್ವರದಿಂದ ಬಳಲುತ್ತಿರುವುದು ಗೊತ್ತಾಗುವಷ್ಟರಲ್ಲಿ ತೀರ ತಡವಾಗಿ ಹೋಗಿತ್ತು. ಹಿಂಗಾಗಿ, ಆತ ಬೆಳಗಾವಿಯ ಸಿವಿಲ್ ಆಸ್ಪತ್ರೆಯನ್ನು ಸೇರಿದ ಮರುದಿನದ ಹಗಲನ್ನು ಕಾಣದೇ ಹೆಣವಾಗಿ ಅದೇ ಜೀಪಿನಲ್ಲಿ ಮರಳಿ ಹಾರೀಗೇರಿಗೆ ಬಂದ! ಆದರೆ, ಆತ ಹೀಗೆ ಹೆಣವಾಗಿ ಬಂದದ್ದು ಮಾತ್ರ ಕಪಿಲೆಯನ್ನು ಕಂಗೆಡಿಸಿಬಿಟ್ಟಿತು!
ಹೀಗೆ, ಪೂಜೇರಿ ಸಂಗಪ್ಪನ ಸಾವಿನಿಂದಾಗಿ ಕಂಗೆಟ್ಟಿದ್ದ ಕಪಿಲೆ, ಚಪ್ಪರದಿಂದ ಎದ್ದು ಹೋಗಿ ಆತನ ಮನೆಯ ಮುಂದೆ ನಿಂತಿತು. ಆಗ, ಹೊರಗೆ ಮನೆ ಮುಂದೆ ಗದಕಟ್ಟು ಕಟ್ಟಿ ಕೂಡ್ರಿಸಿದ್ದ ಪೂಜೇರಿ ಸಂಗಪ್ಪನ ಹೆಣವನ್ನು ಕಂಡು, ದುಃಖ ತಡೆಯಲಾಗದೆ ನೆರೆದ ಜನರ ನಡುಕ ತೂರಿಕೊಂಡು ಮುಂದೆ ಹೋಗಿ ಆತನನ್ನು ಮೂಸಿ ನೋಡಿ ತನ್ನ ಮರುಕ ವ್ಯಕ್ತಪಡಿಸಿತು. ಆಮೇಲೆ, ಅದು ಹಂಗೇ ಹಿಂದೆ ಸರಿದು ಜನರತ್ತ ಬಂದು ನಿಂತಿತು. ಆಕ್ಷಣದಲ್ಲಿ, ಕಪಿಲೆಯ ಈಪರಿಯ ವರ್ತನೆಯನ್ನು ಕಂಡು ನೆರೆದ ಜನರು ಅಚ್ಚರಿಪಟ್ಟರಲ್ಲದೇ ಕಪಿಲೆಯನ್ನು ಮನಸಾರೆ ಕೊಂಡಾಡತೊಡಗಿದರು. ಆಗ, ಅಲ್ಲಿ ಪೂಜೇರಿ ಸಂಗಪ್ಪನ ಸಾವಿನಿಂದ ಉಂಟಾಗಿದ್ದ ದುಃಖದ ಕ್ಷಣಗಳು ಕಪಿಲೆಯ ಹೊಗಳಿಕೆಯ ಕ್ಷಣಗಳಾಗಿ ಮಾರ್ಪಟ್ಟವು!
ಇದರ ನಡುಕ ಪೂಜೇರಿ ಸಂಗಪ್ಪನನ್ನು ಮಣ್ಣು ಮಾಡಲೆಂದು ಗೋರಸ್ಯಾಳಕ್ಕೆ ಹೊತ್ತೊಯ್ಯುವಾಗ ಜನರೊಂದಿಗೆ ಕಪಿಲೆಯೂ ಕೂಡ ಹೆಜ್ಜೆ ಹಾಕಿತು. ಅಲ್ಲದೇ ಗೋರಸ್ಯಾಳದಲ್ಲಿ ಆತನನ್ನು ಮಣ್ಣು ಮಾಡಲೆಂದು ಕುಣಿಯೊಳಗೆ ಇಳಿಸಿದಾಗ, ಮತ್ತೇ ಕುಣಿಯತ್ತ ಹೋಗಿ ಅದರ ಮಣ್ಣ ವಾಸನೆಯನ್ನು ನೋಡಿದ್ದೇ ತಡ ಕಣ್ಣೀರಿಡುತ್ತ ಹಿಂದೆ ಸರಿದು, ಜನರ ನಡುಕ ಬಂದು ನಿಂತಿತು. ಆಗ, ಕೂಡಿದ ಜನರಿಗೆ ಇದೆಲ್ಲ ಅಚ್ಚರಿಯೆನಿಸಿತು. ಕೊನೆಗೂ ಪೂಜೇರಿ ಸಂಗಪ್ಪನನ್ನು ಮಣ್ಣು ಮಾಡಿ ಬರುವಾಗ ಎಲ್ಲರೂ ಕಪಿಲೆಯ ವರ್ತನೆಯನ್ನು ಮತ್ತೆ ಮತ್ತೆ ಕೊಂಡಾಡುತ್ತಲೇ ಮನೆಯತ್ತ ಹೆಜ್ಜೆ ಹಾಕಿದರು.
ಆದರೆ, ಕಪಿಲೆ ಮಾತ್ರ ವಿರಕ್ತಮಠದ ಆವರಣದ ಹೊರಗಿದ್ದ ಟಾಕಿಯತ್ತ ಹೋಗಿ, ಅಲ್ಲಿ ನಲ್ಲಿಯಿಂದ ಸುರಿಯುತ್ತಿದ ನೀರನ್ನು ಮೈಮೇಲೆ ಬೀಳಿಸಿಕೊಂಡು, ಜಳಕ ಮಾಡಿದವರಂಗೆ ಮಾಡಿ ಹನುಮಂದೇವರ ಗುಡಿಯತ್ತ ಬಂದದ್ದೇ ಚಪ್ಪರದಲ್ಲಿ ಪ್ರೇತಕಳೆ ಹೊತ್ತವರಂಗೆ ಮಾರಿ ಮಾಡಿಕೊಂಡು ಮಲಗಿಬಿಟ್ಟಿತ್ತು! ಅಂದು ಮಲಗಿದ್ದ ಕಪಿಲೆ, ತನ್ನಪ್ಪನ ಸಾವಿನ ದುಃಖದ ನಡುಕ ಶಿವಣ್ಣ ಎರಡ್ಹೊತ್ತು ಗುಡಿಯತ್ತ ಬಂದು ಪೂಜೆ ಮುಗಿಸಿಕೊಂಡು ಹೋಗುವಾಗ ಆತ ನೀಡಿದ ಎಡೆಯನ್ನು ಸಹ ಮುಟ್ಟದೇ ಆ ಜಾಗವನ್ನು ಬಿಟ್ಟು ಇದುವರೆಗೂ ಮೇಲೆದ್ದಿರ್ಲಿಲ್ಲ! ಇದು, ಅದೇಕೊ ಏನೋ ರಾಚಪ್ಪಗೌಡನಿಗೆ ಚಿಂತೆಯಾಗಿ ಕಾಡುತ್ತಿತ್ತು. ಆ ಚಿಂತೆಯಿಂದಾಗಿ, ಈಗ ತಿಂಗಳೊಪ್ಪತ್ತಿನಿಂದೆ ತೀರಿಕೊಂಡಿದ್ದ, ಆತನ ತೋಟದಲ್ಲಿ ಕಟ್ಟಿದ್ದ ‘ಗೌರಿ’ ಆಕಳು ಆಗಾಗ ಕಣ್ಮುಂದೆ ಬರುತ್ತಿತ್ತು! ಅದಕ್ಕೇ, ಆತ ಕಪಿಲೆಯನ್ನು ಕಾಣಲೆಂದು ಗುಡಿಯತ್ತ ಹೋಗಿ ಬರಬೇಕೆಂದುಕೊಂಡ.

** ** **

ರಾಚಪ್ಪಗೌಡನು ಚಪ್ಪರದಲ್ಲಿ ಮಲಗಿದ್ದ ಕಪಿಲೆಯನ್ನು ಕಾಣಲೆಂದು ಹನುಮಂದೇವರ ಗುಡಿಗೆ ಬಂದಾಗ ಅದಾಗಲೇ ಸಂಜೆಯಾಗಿತ್ತು. ಆಹೊತ್ತಲ್ಲಿ, ಶಿವಣ್ಣನು ಹನುಮಂದೇವರ ಸಂಜೆ ಪೂಜೆ ಮುಗಿಸಿ ಮನೆಯತ್ತ ಹೊರಟು ನಿಂತಿದ್ದ. ಆತ, ರಾಚಪ್ಪಗೌಡನು ಬರುವುದನ್ನು ದೂರದಿಂದಲೇ ನೋಡಿ ಗುಡಿಯ ಆವರಣದೊಳಗೇನೆ ನಿಂತ. ಆಗ, ರಾಚಪ್ಪಗೌಡನು ಅವಸರದಿಂದ ಹೆಜ್ಜೆ ಹಾಕುತ್ತ ಚಪ್ಪರದಲ್ಲಿ ಮಲಗಿದ್ದ ಕಪಿಲೆಯತ್ತ ಬಂದವನೆ ಅದರ ಮೈದಡವಿ ಮರುಕ ವ್ಯಕ್ತಪಡಿಸಲೆಂದು ಮುಂದೆ ಹೋದ. ಆದರೆ, ಕಪಿಲೆಗೆ ಅದೇನನ್ನಿಸಿತೋ ಏನೋ… ರಾಚಪ್ಪಗೌಡನು ತನ್ನ ಮೈಮುಟ್ಟಲೆಂದು ಮುಂದೆ ಬಂದಾಗ ಸರಕ್ಕನೆ ಎದ್ದು ನಿಂತ ಕಪಿಲೆ, ಗೋಣು ಮುಂದೆ ಹಾಕಿ ಕೊಂಬಿನಿಂದ ಆತನ ಹೊಟ್ಟೆಗೆ ಇರಿಯಲು ಹವಣಿಸತೊಡಗಿತು. ಇದರಿಂದಾಗಿ, ಕಕ್ಕಾಬಿಕ್ಕಿಯಾದ ರಾಚಪ್ಪಗೌಡನು ಜೀವಭಯದಿಂದ ದೂರ ಸರಿದು ನಿಂತ. ಆ ಘಳಿಗೆಯಲ್ಲಿ, ಆತ ಕಟಿಕಟಿ ಬೆವೆತು ಹೋಗಿದ್ದ. ಆದರೆ, ಆ ಕ್ಷಣದಲ್ಲಿ ಕಪಿಲೆಯು ಹಾಗೆ ವರ್ತಿಸಿದ್ದಕ್ಕೆ ಕಾರಣವಿತ್ತು.
ಆ ಹೊತ್ತಲ್ಲಿ, ಕಪಿಲೆಗೆ ಒಂದು ತೆರದಲ್ಲಿ ರಾಚಪ್ಪಗೌಡನ ಮೇಲೆ ಸಿಟ್ಟು ಬಂದಿತ್ತು. ಅದನ್ನು ಹನುಮಂದೇವರ ಸೇವೆಗೆಂದು ರಾಚಪ್ಪಗೌಡನು ಗುಡಿಯಲ್ಲಿ ತಂದು ಬಿಟ್ಟ ಹೊಸದರದಲ್ಲಿ ಅದಕ್ಕೆ, ತನ್ನವ್ವ ‘ಗೌರಿ’ ಆಕಳಿನ ನೆನಪಾದಾಗಲೆಲ್ಲ ಆತನ ತೋಟದತ್ತ ಹೋಗುತ್ತಿತ್ತು. ಆಗ, ಅಲ್ಲಿ ‘ಗೌರಿ’ ಆಕಳು ತನ್ನತ್ತ ಬರಲೆಂದು ಗೂಟಕ್ಕೆ ಕಟ್ಟಿದ ಹಗ್ಗವನ್ನು ಕಿತ್ತುಕೊಳ್ಳಲು ಪ್ರಯತ್ನಿಸುವಾಗಲೆಲ್ಲ ದೂರದಲ್ಲಿ ನೋಡುತ್ತ ನಿಂತಿರುತ್ತಿದ್ದ ರಾಚಪ್ಪಗೌಡನು ಓಡಿ ಬಂದು ‘ಗೌರಿ’ ಆಕಳಿಗೆ ಎಮ್ಮೆಯ ಕೊರಳಲ್ಲಿ ಕಟ್ಟುವ ಲಳ್ಳಾಗುದ್ದಿಯಿಂದ ಏಟು ಹಾಕುತ್ತಿದ್ದ. ಆಗೆಲ್ಲ, ಆ ಲಳ್ಳಾಗುದ್ದಿಯ ಏಟು ತಡೆಯಲಾಗದೆ ‘ಗೌರಿ’ ಆಕಳು ವಿಲವಿಲ ಮಾಡುತ್ತ ಕಟ್ಟಿದ ಗೂಟದ ಸುತ್ತಲೂ ಗಿರಕಿ ಹಾಕುತ್ತಿತ್ತು. ಆ ಕ್ಷಣದಲ್ಲಿ, ಇದನ್ನೆಲ್ಲ ನೋಡುತ್ತ ಅಲ್ಲೇ ನಿಂತಿರುತ್ತಿದ್ದ ಕಪಿಲೆಯ ಕಳ್ಳಿಗೆ ಬೆಂಕಿ ಬಿದ್ದಂಗಾಗಿ ಸಂಕಟಪಡುತ್ತಿತ್ತು. ಆ ಸಂಕಟದಿಂದಾಗಿ, ರಾಚಪ್ಪ ಗೌಡನನ್ನು ಎವೆಯಿಕ್ಕದೇ ಸಿಟ್ಟಿನಿಂದ ನೋಡುತ್ತ ನಿಂತು ಬಿಡುತ್ತಿತ್ತು. ಆದರೆ, ವಿಚಿತ್ರವೆಂದರೆ ಆ ಪರಿಯ ಸಿಟ್ಟು ರಾಚಪ್ಪಗೌಡನ ಮೇಲೆ ಕಪಿಲೆಯ ಮನದೊಳಗೆ ಇಂದಿಗೂ ಉಳಿದುಕೊಂಡು ಬಂದಿತ್ತು! ಅದಕ್ಕೇ, ಈಗ ರಾಚಪ್ಪಗೌಡನು ಕಪಿಲೆಯ ಮೈದಡವಿ ಮರುಕ ವ್ಯಕ್ತಪಡಿಸಲೆಂದು ಮುಂದೆ ಬಂದಾಗ ಆತನ ಹೊಟ್ಟೆಗೆ ಇರಿಯಲು ಹವಣಿಸಿತ್ತು. ಆದರೆ, ಕಪಿಲೆಗೆ ಇದು ಸಾಧ್ಯವಾಗದಾದಾಗ ತನ್ನಷ್ಟಕ್ಕೇ ತಾನೇ ಸಂಕಟಪಟ್ಟುಕೊಳ್ಳುತ್ತ ಮತ್ತೇ ತನ್ನ ಜಾಗದಲ್ಲಿ ಮಲಗಿತು. ಆಗಲೇ, ಇದನ್ನೆಲ್ಲ ಶಿವಣ್ಣ ಅಚ್ಚರಿಯಿಂದ ದೂರದಲ್ಲಿ ನಿಂತು ನೋಡುತ್ತಿದ್ದ.
ಕಪಿಲೆಯ ವರ್ತನೆಯಿಂದಾಗಿ ಶಿವಣ್ಣನ ಮುಂದೆ ರಾಚಪ್ಪಗೌಡನಿಗೆ ಅವಮಾನವಾದಂಗಾಯಿತು. ಆತ, ಅಲ್ಲಿ ಹೆಚ್ಚು ಹೊತ್ತು ನಿಲ್ಲದೇ ದಡದಡನೆ ಹೆಜ್ಜೆ ಹಾಕುತ್ತ ಅಲ್ಲಿಂದ ಹೊರಟು ಹೋದ. ಈ ಮಧ್ಯ, ಇತ್ತ ಶಿವಣ್ಣನೂ ಕೂಡ ಮಬ್ಬುಗತ್ತಲು ಆವರಿಸುತ್ತಿತ್ತಾದ್ದರಿಂದ ಅವಸರದಲ್ಲಿ ಮನೆಯತ್ತ ಹೆಜ್ಜೆ ಹಾಕಿದ. ಆದರೆ, ಆ ಮಬ್ಬುಗತ್ತಲಲ್ಲಿ ಚಪ್ಪರದಲ್ಲಿ ಮಲಗಿದ್ದ ಕಪಿಲೆ ಮಾತ್ರ ಬೇರೆಯದೇ ರೀತಿಯಲ್ಲಿ ಯೋಚಿಸುತ್ತಿತ್ತು!

** ** **

ಹನುಮಂದೇವರಿಗೆ ಬೆಳಗಿನ ಪೂಜೆ ಮಾಡಲೆಂದು ಶಿವಣ್ಣ ಗುಡಿಯತ್ತ ಬಂದಾಗ ಕಪಿಲೆ ಚಪ್ಪರದಲ್ಲಿರ್ಲಿಲ್ಲ! ಆಕ್ಷಣದಲ್ಲಿ, ಕಪಿಲೆ ಇಲ್ಲದ್ದನ್ನು ಕಂಡು ಶಿವಣ್ಣನಿಗೆ ಆತಂಕವಾಯಿತು. ಆ ಆತಂಕದಲ್ಲೇ ಆತ ಕಪಿಲೆಯನ್ನು ಅತ್ತಿತ್ತ ಕಣ್ಣಾಡಿಸಿ ನೋಡಿದವರಂಗೆ ಮಾಡಲು ಅದು ಕಾಣದಾದಾಗ, ‘ಕಪಲಿ ಎಲ್ಲೋಗಿರ್ಬೇಕು…!?’ ಎಂದು ಮನದೊಳಗೆ ಅಂದುಕೊಳ್ಳುತ್ತ ಗುಡಿಯೊಳಗೆ ಹೋಗಿ ಹನುಮಂದೇವರ ಪೂಜೆ ಮಾಡತೊಡಗಿದ. ಶಿವಣ್ಣ, ಪೂಜೆಯಲ್ಲಿ ತೊಡಗಿರುವಾಗಲೇ ಇತ್ತ ಹನುಮಂದೇವರಿಗೆ ಸನಿ ಮಾಡಿ ಹೋಗಲೆಂದು ಗುಡಿಯೊಳಗೆ ಬಂದ ರಾಚಪ್ಪಗೌಡನ ಕಣ್ಣಿಗೂ ಸಹ ಚಪ್ಪರದಲ್ಲಿ ಕಪಿಲೆ ಕಾಣಿಸಲಿಲ್ಲ! ಇದರಿಂದಾಗಿ, ಆತ ದಿಗಿಲಿಗೆ ಬಿದ್ದ. ಆದರೂ ಅದನ್ನು ತೋರುಗೊಡದೆ ಗುಡಿಯೊಳಗೆ ಹೋಗಿ ಹನುಮಂದೇವರಿಗೆ ಸನಿ ಮಾಡಿದವನೆ ಗರ್ಭಗುಡಿಯೊಳಗೆ ಪೂಜೆ ನೇರವೇರಿಸುತ್ತಿದ್ದ ಶಿವಣ್ಣನೊಂದಿಗೆ ಕಪಿಲೆಯು ಕಾಣದಿರುವ ವಿಚಾರವಾಗಿ ಮಾತಾಡುತ್ತ ನಿಂತ. ಆತ ಹಾಗೆ ಮಾತಾಡುತ್ತ ನಿಂತ ಹೊತ್ತಲ್ಲೇ ಇತ್ತ ವಾಲಿಕಾರ ರಾಮಪ್ಪ, ‘ಲೇ, ಶಿವಣ್ಣ,… ಊರ ಹೊರಗ ಗೋರಸ್ಯಾಳದಾಗ ನಿಮ್ಮಪ್ಪನ ಗೋರಿ ಮ್ಯಾಲೆ ಕಪಲಿ ಬಿದ್ದು ಜೀವ ಬಿಟ್ಟೈತಿ! ನಾ, ಇದೀಗರೆ ಬೈಲಕಡಿಗೆಂತ ಗೋರಸ್ಯಾಳ ಕಡಿಗಿ ಹೋದಾಗ ಇದನ್ನು ಕಂಡು… ನಿನ್ಗ ಹೇಳ್ಲಿಕ್ಕೆಂತ ಇಲ್ಲಿ ತಂಕ ಬಂದೆ…’ ಎಂದು ಗರ್ಭಗುಡಿಯೊಳಗೆ ಪೂಜೆ ನೆರವೇರಿಸುತ್ತಿದ್ದ ಶಿವಣ್ಣನಿಗೆ ಕೇಳಿಸುವಂತೆ ಅಂದುಕೊಳ್ಳುತ್ತ ಗುಡಿಯ ಆವರಣದೊಳಗೆ ಬಂದು ನಿಂತ!
ಆಗಲೇ, ಆ ಮಾತುಗಳು ಏಕಕಾಲದಲ್ಲಿ ಶಿವಣ್ಣ ಮತ್ತು ರಾಚಪ್ಪಗೌಡನ ಕಿವಿಗೆ ಬೀಳಲು ಅದ ಕೇಳಿಸಿಕೊಂಡು ಅತ್ತ ಶಿವಣ್ಣ, ಅಚ್ಚರಿಪಟ್ಟುಕೊಂಡು ವಾಲಿಕಾರ ರಾಮಪ್ಪನಿಗೆ ಏನೋ ಹೇಳಬೇಕೆಂದುಕೊಂಡು ಹೊರಬಂದು ನಿಂತರೆ, ಇತ್ತ ಆ ಮಾತು ಕೇಳಿ ಬೆಚ್ಚಿಬಿದ್ದ ರಾಚಪ್ಪಗೌಡನ ಕಣ್ಣಿಗೆ ಕತ್ತಲು ಕವಿದಂಗಾಗಿ ಕುಸಿದು ಕುಂತ!

ಮತ್ತಷ್ಟು ಸುದ್ದಿಗಳು

Latest News

ಮಹಿಳಾ ಸಂಸದರೊಂದಿಗೆ ಸೆಲ್ಫಿ ಶೇರ್ ಮಾಡಿ ಲೋಕಸಭೆ ಆಕರ್ಷಕ ಸ್ಥಳ ಎಂದ ಶಶಿ ತರೂರ್, ಕ್ಷಮೆಯಾಚನೆ

newsics.com ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್, ಆರು ಮಹಿಳಾ ಸಂಸದರೊಂದಿಗೆ ತೆಗೆದ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. "ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ?"...

ಭಾರತ – ನ್ಯೂಜಿಲೆಂಡ್ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ

newscis.com ಕಾನ್ಪುರ: ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಮಂದ ಬೆಳಕಿನಿಂದ ಪಂದ್ಯವನ್ನು ನಿಲ್ಲಿಸಬೇಕಾಯಿತು. ನಾಲ್ಕು ವರ್ಷಗಳಲ್ಲಿ ಭಾರತದ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್...

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು ಸಮ್ಮತಿಯ ಲೈಂಗಿಕ ಸಂಬಂಧಗಳ ಅಪರಾಧೀಕರಣದ ಕುರಿತಾದ...
- Advertisement -
error: Content is protected !!