ನಾನೂ, ಅವನೂ, ಅವರೂ…

Dr ShubhashreePrasad
♦ ಡಾ. ಶುಭಶ್ರೀ ಪ್ರಸಾದ್ ಮಂಡ್ಯ
[email protected]
[email protected]

 

ಇಂದಿಗೂ ಅವನಿಗೆ ನನ್ನಲ್ಲಿ ಅದೇ ಪ್ರೀತಿ. ಅದೆಷ್ಟೋ ಬಗೆಯಲ್ಲಿ ವ್ಯಕ್ತಪಡಿಸಿದ. ಆದರೆ ನನ್ನ ಕುಟುಂಬಕ್ಕೆ ತೊಂದರೆಯಾಗುವುದು ಅವನಿಗೂ ಬೇಕಿರಲಿಲ್ಲ. ಅವನದು ಸೌಮ್ಯ ಪ್ರೀತಿ. ನನ್ನ ಸಂತೋಷ, ನೆಮ್ಮದಿ ಗೌರವಗಳೇ ಅವನಿಗೆ ಮುಖ್ಯವಾಗಿತ್ತು. ಅವನ ನಿಷ್ಕಲ್ಮಷ ಪ್ರೀತಿಗೆ ನನ್ನ ಮನಸ್ಸು ಸೋಲತೊಡಗಿತು. ಆದರೆ ನನ್ನ ಪತಿಯ ಮೇಲಿನ ಪ್ರೀತಿ ಇನಿತೂ ಕಡಿಮೆಯಾಗಲಿಲ್ಲ. ಪ್ರೀತಿ ಎಷ್ಟು ಮೊಗೆದರೂ ಉಕ್ಕುವ ಶಕ್ತಿಯಲ್ಲವೇ? …
===

ದೇಕೋ ಈಚೆಗೆ ನನ್ನೊಳಗೆ ತಳಮಳ ಹೆಚ್ಚಾಗುತ್ತಲೇ ಇದೆ. ಯಾರೊಂದಿಗೆ ಹೇಳಿಕೊಳ್ಳಲೀ.? ನನಗೆ ನನ್ನವರೆನ್ನುವವರು ಯಾರೂ ಇಲ್ಲ. ಹಾಗಂತ ನಾನೇನು ಅನಾಥೆಯಲ್ಲ. ಅಪ್ಪ ಅಮ್ಮ ಯಾರೋ ಗೊತ್ತಿಲ್ಲ. ನನಗ್ಯಾವ ಧರ್ಮವೂ ಇಲ್ಲ,
ಮನುಷ್ಯಧರ್ಮವೊಂದನ್ನೇ ನಾನು ನಂಬುವುದು. ಈಚೆಗೆ ಆ ನಂಬಿಕೆಯೂ ನದೀಪಾತ್ರದ ಮರಳಿನ ಮನೆಯಾಗಿದೆ.

ನಿತ್ಯವೂ ನನ್ನಲ್ಲಿಗೆ ಬರುವವರಿದ್ದಾರೆ. ತಮ್ಮ ನೋವು ನಲಿವು, ಕಷ್ಟ ಕಾರ್ಪಣ್ಯಗಳು, ಮಾಡಿದ ಪಾಪಗಳನ್ನು ನನ್ನಲ್ಲಿ ಹೇಳಿಕೊಳ್ಳುತ್ತಾರೆ. ನನಗೆ ಕ್ಷಮೆ ಬೇಕು ಎಂದು ಅಂಗಲಾಚುತ್ತಾರೆ. ಆಗೆಲ್ಲ ನನ್ನೊಡನೆ ಅವನೂ ಇರುತ್ತಾನೆ. ನನಗೆ ಮಾತು ಬಾರದು. ಕಣ್ಣು ಕಿವಿ ಬಲು ಚುರುಕು. ನಾ ಹೇಳಲು ಪ್ರಯತ್ನಿಸಿದರೂ ಅವನಿಗೆ ಅರ್ಥವಾಗುತ್ತದೆಂಬ ಭರವಸೆ ನನಗೆ ಇಲ್ಲ. ಹಿಂದೆಲ್ಲ ಅವನು ಪರದೆಯ ಹಿಂದೆ ಕುಳಿತು ನಮ್ಮ ಮಾತುಗಳನ್ನು ಕೇಳುತ್ತಿದ್ದ. ಕಾಲ ಉರುಳಿದಂತೆ ಅವನೂ ತುಸುವೇ ಬದಲಾದ. ಕೆಲವೊಮ್ಮೆ ಕಿಂಡಿಯಲ್ಲಿ ಇಣುಕುತ್ತಾನೆ ಬಂದವರು ಯಾರು ಎಂದು ನೋಡುವ ಕುತೂಹಲವಿರಬೇಕು. ನ್ಯಾಯವಾಗಿ ಅವನಿಗೆ ಕುತೂಹಲ ಇರಬಾರದು, ಯಾವುದೂ ನೆನಪಿರಬಾರದು. ಆ ದೇವರು ಅವನ ನೆನಪನ್ನು ಇನ್ನೂ ಕಿತ್ತುಕೊಂಡಿಲ್ಲವೇಕೆ ಎನ್ನುವ ಕೋಪವೂ ನನಗಿದೆ.
ಕೆಲವೊಮ್ಮೆ ಎಷ್ಟೋ ದಿನಗಳಾದರೂ ಒಬ್ಬರೂ ಬಾರರು. ಆಗೆಲ್ಲ ಈ ಪ್ರಪಂಚದಲ್ಲಿ ಪಾಪ ಮಾಡುವವರು ಕಡಿಮೆಯಾಗಿದ್ದಾರೋ, ಅಥವಾ ಪಾಪವನ್ನು ಒಪ್ಪಿಕೊಳ್ಳುವ ಬುದ್ಧಿ ಕಡಿಮೆಯಾಗಿದೆಯೋ ಎನ್ನುವ ಕನ್ಫ್ಯೂಷನ್ ನನಗೆ..
ನನಗಿನ್ನೂ ನೆನಪಿದೆ:
ಅಂದು ಜೇಮ್ಸ್ ಬಂದಿದ್ದ. ಐವತ್ತರ ಸುಮಾರಿನವನು. ಎಷ್ಟು ಚಂದದ ವ್ಯಕ್ತಿ, ಭಾರೀ ಆಳು… ಕುಗ್ಗಿ, ಕಂದಿಹೋಗಿದ್ದ. ಅವನೇ ಬಾಯಿಬಿಡುವ ತನಕ ನಾ ಕೇಳುವ ಹಾಗಿಲ್ಲ. ಕಾದೆ ಕಾದೆ, ನನ್ನ ಸಹನೆ ಮೀರುವ ಮುನ್ನ ಮೆಲ್ಲನೆ ಬಾಯ್ದೆರೆದ. “ನನ್ನ ಮನೆಯಲ್ಲಿ ನಾನೂ ನನ್ನ ಹೆಂಡತಿ ಇಬ್ಬರೇ. ನಮಗೆ ಮಕ್ಕಳಿರಲಿಲ್ಲ. ಅಳೆದೂ ಸುರಿದೂ ನನ್ನ ಪತ್ನಿ ಜೋನ್ಸ್‍ಳ ದೊಡ್ಡ ಅಕ್ಕನ ಮಗಳನ್ನು ಮನೆಗೆ ಕರೆತಂದು ಸಾಕಲು ತೀರ್ಮಾನಿಸಿದೆವು. ಜೋನ್ಸ್‍ಳ ಅಕ್ಕನ ಮನೆಯಲ್ಲಿ ಬಡತನ ಕಿತ್ತು ತಿನ್ನುತ್ತಿತ್ತು. ಮಕ್ಕಳಿಗೆ ಉಣಲಿಕ್ಕೂ ತತ್ವಾರ. ತನ್ನ ಒಂದು ಮಗುವಾದರೂ ಹೊಟ್ಟೆ ತುಂಬ ಉಂಡು, ಮೈತುಂಬ ತೊಟ್ಟು ನೆಮ್ಮದಿಯ ಬದುಕು ಬದುಕಲಿ ಎಂಬುದು ತಾಯಿಯ ಆಸೆ. ಜತೆಗೆ ತನ್ನ ತಂಗಿಯ ಮನೆ ತಾನೇ? ಎಂದು ಒಪ್ಪಿ ಕಳಿಸಿದಳು. ಒಂದು ಶುಭ ಘಳಿಗೆ ಆ ಪುಟ್ಟ ಕಂದ ನನ್ನ ಮನೆಗೆ ಕಾಲಿಟ್ಟಿತು. ಪುಟಾಣಿ ಮಾರ್ಗರೇಟ್ ತುಂಬ ಚಂದದ ಮಗು. ನನ್ನ ಮನೆ ನಕ್ಕಿದ್ದೇ ಆ ಮಗುವಿನ ನಗುವಿನಿಂದ. ಸೊರಗಿದ್ದ ಮಗು ನಮ್ಮಲ್ಲಿ ಹೊಟ್ಟೆತುಂಬ ಉಂಡು ನೋಡುವವರ ಕಣ್ಣು ತಾಗುವಂತೆ ಬೆಳೆಯಿತು. ಆ ಮಗು ಬಂದು ಸುಮಾರು ಇಪ್ಪತ್ತು ವರ್ಷಗಳೇ ಆದವು. ಚಿಕ್ಕಪ್ಪ ಚಿಕ್ಕಮ್ಮ ಅಂತ ಬಾಯಿತುಂಬ ಕರೆಯುತ್ತ ಮನೆಯ ಬೆಳಕು ಅವಳೇ ಎನಿಸುತ್ತಿತ್ತು. ಕಳೆದ ವರ್ಷ ಕ್ರಿಸ್ಮಸ್ ದಿನ ಬೆಳ್ಳಂಬೆಳ್ಳಗಿನ ಉಡುಪು ಧರಿಸಿ ರಾಜಕುಮಾರಿಯ ಹಾಗೆ ಮಾರ್ಗರೇಟ್ ಮನೆಯ ತುಂಬ ಓಡಾಡುತ್ತಿದ್ದಳು. ಜೋನ್ಸ್ ಗೆಳತಿಯ ಮನೆಗೆ ಕೇಕ್ ಕೊಡಲು ಹೋಗಿದ್ದಳು. ಮೈಕೈ ತುಂಬಿಕೊಂಡು ಅಪ್ಸರೆಯ ಹಾಗೆ ಕಾಣುತ್ತಿದ್ದ ಅವಳನ್ನು ಕಂಡು ಅದೇಕೋ ನನ್ನ ಮನಸ್ಸು ಚಂಚಲವಾಯಿತು. ಚಿಕ್ಕಪ್ಪಾ ನಾ ಹೇಗೆ ಕಾಣುತ್ತಿದ್ದೇನೆ ಅಂತ ಕೇಳಿದ ಅವಳಿಗೆ ಉತ್ತರ ಕೊಡುವ ಬದಲು ಬಾ ಇಲ್ಲಿ ಎಂದು ಕರೆದು ಪಕ್ಕ ಕೂರಿಸಿಕೊಂಡೆ. ನನ್ನ ಕೈ ಅವಳ ಮೈಮೇಲೆಲ್ಲ ಆಡಬಾರದಂತೆ ಆಡಿತು. ಮಾರ್ಗರೇಟ್ ವಯಸ್ಸಿಗೆ ಬಂದಿದ್ದ ಹುಡುಗಿ, ಚುರುಕು, ಬುದ್ಧಿವಂತೆ. ನನ್ನ ಕಣ್ಣಲ್ಲಿ ಕಾಣುತ್ತಿದ್ದ ಕಾಮ ಅವಳಿಗೆ ಅರ್ಥವಾಯಿತು ಎನಿಸುತ್ತೆ. ನಾ ಮುಂದುವರೆಯುವ ಸೂಚನೆ ಕಾಣುತ್ತಿದ್ದ ಹಾಗೆ ಛಂಗನೆ ಜಿಂಕೆಯಂತೆ ನೆಗೆದು ಹೊರಗೆ ಹಾರಿದಳು. ಚಿಕ್ಕಪ್ಪಾ ಚಿಕ್ಕಪ್ಪಾ ಅಂತ ಮುದ್ದುಗರೆಯುತ್ತ ಹೆತ್ತ ಮಗಳಂತೆ ಪ್ರೀತಿಸುತ್ತಿದ್ದ ಮಾರ್ಗರೇಟ್ ಅಂದಿನಿಂದ ನನ್ನ ಮುಖ ನೋಡುತ್ತಿಲ್ಲ. ನಾ ಇರುವ ಕಡೆ ಇರುತ್ತಿಲ್ಲ. ಭಯಗೊಂಡ ಹುಲ್ಲೆಯ ಹಾಗೆ ಮುಖ ಸಪ್ಪಗಾಗಿದೆ. ಅದೇಕೆ ನನಗೆ ಆ ಕ್ಷಣ ದುರ್ಬುದ್ಧಿ ಬಂದಿತೋ ಕಾಣೆ. ಮತ್ತೆಂದೂ ಅಂಥ ಯೋಚನೆಯೂ ಬರಲಿಲ್ಲ.
ಜೋನ್ಸ್‍ಗೆ ಏನೋ ಆಗಿದೆ ಎಂದು ಗೊತ್ತು. ಆದರೇನು ಎಂದು ಗೊತ್ತಿಲ್ಲ. ಒಮ್ಮೆ ‘ರೀ ಯಾಕೋ ಮಗು ಮಂಕಾಗಿದೆ. ಯಾಕೆ ಅಂತ ನಿಮಗೆ ಗೊತ್ತಾ? ಏನಾದ್ರೂ ಲವ್ ಫೇಲ್ಯೂರಾ? ನಿಮ್ಮ ಜತೆ ಸರಿಯಾಗಿ ಮಾತಾಡುತ್ತಿಲ್ಲವಲ್ಲಾ? ನೀವೇನಾದ್ರೂ ಅವಳನ್ನು ಬೈದ್ರಾ?’ ಎಂದು ಕೇಳಿದಳು. ಒಳಗೊಳಗೇ ಪಶ್ಚಾತ್ತಾಪದಿಂದ ಬೇಯುತ್ತಿರುವ ನಾನು ಏನು ಉತ್ತರಿಸಲಿ? ನನ್ನ ತಪ್ಪನ್ನು ನಿಮ್ಮ ಹೊಟ್ಟೆಗೆ ಹಾಕಿಕೊಳ್ಳಿ, ನನ್ನನ್ನು ಕ್ಷಮಿಸಿ. ನನ್ನನ್ನು ಕ್ಷಮಿಸಿ” ಜೇಮ್ಸ್ ಅಳುತ್ತಲೇ ಇದ್ದ. ನನ್ನ ಹಿಂದೆ ಕುಳಿತಿದ್ದ ಅವನು ಎಲ್ಲ ಕೇಳಿಸಿಕೊಂಡು ಎದ್ದುಹೋದ.

ಮತ್ತೊಂದು ದಿನ ರಾಮ ನನ್ನ ಬಳಿ ಬಂದಿದ್ದ. “ಅಪ್ಪ ಸತ್ತ ಮೇಲೆ ಅಮ್ಮನನ್ನು ನೋಡಿಕೊಳ್ಳುವವರು ಯಾರು ಎಂದು ಅಣ್ಣತಮ್ಮಂದಿರ ನಡುವೆ ಕಿತ್ತಾಟ. ಒಂದೊಂದು ತಿಂಗಳು ಒಬ್ಬೊಬ್ಬರ ಮನೆಯಲ್ಲಿ ಎಂದು ಹಿರಿಯರ ಸಮ್ಮುಖದಲ್ಲಿ ಒಪ್ಪಂದವಾಯಿತು. ನಾಲ್ಕು ಗಂಡುಮಕ್ಕಳಿಗೂ ಅಮ್ಮನ ಹೊರೆ ಬೇಕಿರಲಿಲ್ಲ. ಒಂದು ಅಮ್ಮ ಹತ್ತು ಮಕ್ಕಳನ್ನು ಒಂಬತ್ತು ತಿಂಗಳು ಹೊತ್ತು, ಕಣ್ಣ ರೆಪ್ಪೆಯಂತೆ ಕಾಪಾಡಿ ಸುಲಭವಾಗಿ ಸಾಕುತ್ತಾಳೆ. ಅದೇ ಹತ್ತು ಮಕ್ಕಳಿಗೆ ಒಂದು ಅಮ್ಮ ಭಾರವಾಗುತ್ತಾಳಲ್ಲಾ ಹೇಗೆಂದು ಗೊತ್ತಾಗಲಿಲ್ಲ. ಅಪ್ಪನ ಹೆಣ ಚಿತೆಯಲ್ಲಿರುವಾಗಲೇ ಅಪ್ಪ ಉಳಿಸಿಟ್ಟಿದ್ದ ಚೂರು ಪಾರು ನೆಲವನ್ನು ಕಂಡವರ ಪಾಲು ಮಾಡಿ ನಾಲ್ಕು ಭಾಗ ಮಾಡಿಕೊಂಡೆವು. ಅಮ್ಮನ ಕಿವಿಯೋಲೆ ಮೂಗುತಿ ಯಾರ ಪಾಲಾಗುವುದೋ ಎಂಬ ಭಯ ಒಬ್ಬರು ಇನ್ನೊಬ್ಬರ ಮನೆಗೆ ಕಳಿಸುವಾಗ. ಮೂರು ತಿಂಗಳು ತುಂಬಿದ್ದೇ ತಡ ಹೊಸ್ತಿಲು ದಾಟಿಸಿಯೇ ಬಿಡುತ್ತಿದ್ದರು. ನನ್ನ ಮನೆಗೆ ಅಮ್ಮ ಬಂದ ತಿಂಗಳಿಗೆ ನನಗೆ ತುರ್ತು ಹಣ ಬೇಕಿತ್ತು. ಅಮ್ಮನ ಓಲೆಯ ಮೇಲೆ ನನ್ನ ಕಣ್ಣು ಬಿತ್ತು. ಮಲಗಿದ್ದ ಅಮ್ಮನ ಎದುರು ಮುಸುಕುಧಾರಿಯಾಗಿ ಕಿವಿಯೇ ಹರಿದು ರಕ್ತ ಸುರಿಯುವಂತೆ ಓಲೆಯ ಕಿತ್ತು ಓಡಿಹೋದೆ. ಸ್ವಲ್ಪ ಹೊತ್ತಿನಲ್ಲಿ ಹಿಂದಿನ ಬಾಗಿಲಿನಿಂದ ಬಂದು ಮಲಗಿದೆ. ಅದೇ ಕುಂಟು ನೆಪವಾಗಿ ಸಕ್ಕರೆ ಕಾಯಿಲೆಯ ಅಮ್ಮ ಗಾಯ ಮಾಯದೆ ನನ್ನ ಮನೆಯ ಸರದಿಯ ಕೊನೆಯ ದಿನ ನನ್ನ ಮನೆಯಲ್ಲಿಯೇ ಕೊನೆಯುಸಿರೆಳೆದಳು. ಅಮ್ಮನನ್ನು ಬೆಂಕಿಗಿಟ್ಟು ಇಲ್ಲಿಗೆ ಬಂದಿದೀನಿ. ಹೆತ್ತವ್ವನಿಗೆ ದ್ರೋಹ ಬಗೆದು ತಪ್ಪು ಮಾಡಿದೆ, ನಾನೇ ನನ್ನವ್ವನನ್ನು ಕೊಂದೆ, ನಾ ಪಾಪಿ.” ಹೇಳಿ ಅತ್ತ, ಹಲುಬಿದ. ನಾನೇನ ಮಾಡಲಿ. ಕೇಳಿಸಿಕೊಳ್ಳುತ್ತಿದ್ದ ಅವನು ಎದ್ದು ಅವನ ಕೋಣೆಗೆ ಹೋದ.

ಬಬಿತಾ ಬಂದ ದಿನ ನನಗೆ ನೆನಪಿದೆ. ಅರವತ್ತು ವರ್ಷಗಳಾಗಿರಬೇಕು ಈ ಘಟನೆ ನಡೆದು. ಎಂಥಾ ಚೆಲುವೆಯಾಕೆ… ಮತ್ತೊಮ್ಮೆ ತಿರುಗಿ ನೋಡುವಂತಹ ಸೌಂದರ್ಯ. ಬಹುಶಃ ಅವಕಾಶ ಸಿಕ್ಕಿದ್ದರೆ ಮಿಸ್ ವರ್ಲ್ಡ್ ಆಗುತ್ತಿದ್ದಳೇನೋ. ಅದಿರಲಿ ಆಕೆಯ ದುಃಖ ಏನೆಂದು ಹೇಳುತ್ತೇನೆ: “ದೇವಾ ನಾ ತಪ್ಪು ಮಾಡಿದ್ದೇನೆ. ನನ್ನನ್ನು ಕ್ಷಮಿಸು. ಎರಡು ವರ್ಷಗಳಿಂದ ಕೊರಗೀ ಕೊರಗೀ ನಿತ್ಯವೂ ಸಾಯುತ್ತಿದ್ದೇನೆ. ನನ್ನ ಪಾಪವನ್ನು ಮನ್ನಿಸು. ನಾ ಹದಿನೆಂಟರಲ್ಲಿದ್ದಾಗ ಒಂದು ಹುಡುಗನ ನಗುವಿಗೆ ಮನಸೋತಿದ್ದೆ. ಅವನಿಗೂ ಇಷ್ಟವಿತ್ತು. ನಾವೆಂದೂ ಪ್ರೀತಿ ಪ್ರೇಮದ ಬಗ್ಗೆ ಮಾತನಾಡಿರಲಿಲ್ಲ. ಕಣ್ಣನೋಟದ ವಿನಿಮಯವಷ್ಟೇ. ಮನೆಯವರು ನೋಡಿದ ಹುಡುಗನ ಜತೆ ಮದುವೆಯಾಯಿತು. ಎರಡು ವರ್ಷಗಳಾದರೂ ಮಕ್ಕಳಾಗಲಿಲ್ಲ. ಅತ್ತೆ ನನ್ನ ಗಂಡನಿಗೆ ಮತ್ತೊಂದು ಮದುವೆ ಮಾಡುವ ಯೋಚನೆಯಲ್ಲಿದ್ದರು. ಪ್ರೀತಿಯಿಂದ ಕಂಡ ಗಂಡನನ್ನು ಬಿಟ್ಟುಕೊಡಲು ನನಗೆ ಇಷ್ಟವಿರಲಿಲ್ಲ. ನಾವಿಬ್ಬರೂ ವೈದ್ಯರ ಬಳಿ ಪರೀಕ್ಷೆಗೆ ಹೋದೆವು. ಹದಿಹರಯದಲ್ಲಿ ನನ್ನ ಮನ ಕದ್ದಿದ್ದ ಹುಡುಗನೇ ಡಾಕ್ಟರು. ಪರೀಕ್ಷೆಯ ಫಲಿತಾಂಶ ಪಡೆಯಲು ಮರುದಿನ ನಾನೊಬ್ಬಳೇ ಹೋದೆ. ನನ್ನಲ್ಲೇನೂ ತೊಂದರೆಯಿರಲಿಲ್ಲ. ಪತಿಯ ತೊಂದರೆಯನ್ನು ಹೇಳಿ ಅವರಿಗೆ ನೋವು ಕೊಡಲು ಮನಸ್ಸಿರಲಿಲ್ಲ. ಮಕ್ಕಳಾಗುತ್ತದಂತೆ ಎಂದಷ್ಟೇ ಹೇಳಿದೆ.
ಆ ನನ್ನ ಹುಡುಗನ ಜತೆ ಮಾತನಾಡಿ ಮನಸ್ಸು ಗೊಂದಲಕ್ಕೆ ಬಿದ್ದಿತ್ತು. ಇಂದಿಗೂ ಅವನು ನನ್ನ ನೆನಪಿನಲ್ಲಿಯೇ ಮದುವೆಯೂ ಆಗದೆ ಇದ್ದಾನೆಂಬ ವಿಷಯ ನನ್ನನ್ನು ವಿಚಲಿತಳನ್ನಾಗಿಸಿತ್ತು.
ಇಂದಿಗೂ ಅವನಿಗೆ ನನ್ನಲ್ಲಿ ಅದೇ ಪ್ರೀತಿ. ಅದೆಷ್ಟೋ ಬಗೆಯಲ್ಲಿ ವ್ಯಕ್ತಪಡಿಸಿದ. ಆದರೆ ನನ್ನ ಕುಟುಂಬಕ್ಕೆ ತೊಂದರೆಯಾಗುವುದು ಅವನಿಗೂ ಬೇಕಿರಲಿಲ್ಲ. ಅವನದು ಸೌಮ್ಯ ಪ್ರೀತಿ. ನನ್ನ ಸಂತೋಷ, ನೆಮ್ಮದಿ ಗೌರವಗಳೇ ಅವನಿಗೆ ಮುಖ್ಯವಾಗಿತ್ತು. ಅವನ ನಿಷ್ಕಲ್ಮಷ ಪ್ರೀತಿಗೆ ನನ್ನ ಮನಸ್ಸು ಸೋಲತೊಡಗಿತು. ಆದರೆ ನನ್ನ ಪತಿಯ ಮೇಲಿನ ಪ್ರೀತಿ ಇನಿತೂ ಕಡಿಮೆಯಾಗಲಿಲ್ಲ. ಪ್ರೀತಿ ಎಷ್ಟು ಮೊಗೆದರೂ ಉಕ್ಕುವ ಶಕ್ತಿಯಲ್ಲವೇ?
ತನ್ನ ಮಗನಿಗೆ ಮರುಮದುವೆಯ ಅತ್ತೆಯ ವರಾತ ಹೆಚ್ಚಾದಂತೆ ನಾ ಮತ್ತೆ ಮತ್ತೆ ಯೋಚಿಸಿದೆ.
ಗಂಡನನ್ನು ಬಿಟ್ಟು ಬದುಕುವ ಶಕ್ತಿ ನನಗಿರಲಿಲ್ಲ. ಆ ನಗೆಮೊಗದ ಹುಡುಗನ ಪ್ರೀತಿಗೆ ಸೋತು ಅವನ ಮಗುವನ್ನು ನನ್ನ ಒಡಲಲ್ಲಿ ಹೊತ್ತುಕೊಂಡೆ. ನಗೆಮೊಗದ ಹುಡುಗನಿಗೆ ಧನ್ಯತೆ, ಊರುಬಿಟ್ಟು ಹೊರಟುಹೋದ. ನನ್ನ ಪತಿ, ಅತ್ತೆ ಈಗ ತುಂಬು ಸಂತೋಷಿಗಳು. ಆದರೆ ನಾನು ಮಾಡಿದ್ದು ಒಮ್ಮೊಮ್ಮೆ ತಪ್ಪೆಂದು ಅನಿಸುತ್ತೆ. ಇನ್ನೊಮ್ಮೆ ನನ್ನ ಪ್ರೀತಿಸುವ ಜೀವಗಳಿಗೆ ಸಂತೋಷ ಇತ್ತೆ ಎಂದು ತೃಪ್ತಿ. ತಪ್ಪು ಮಾಡಿದ್ದರೆ ಕ್ಷಮಿಸು” ಎಂದು ಗೋಗರೆದು ಹೋದಳು.
ನನ್ನ ಹಿಂದೆ ಕೂತು ಕೇಳಿಸಿಕೊಳ್ಳುತ್ತಿದ್ದ ಅವನು ಮರುದಿನ ನನ್ನ ಮುಂದೆ ಬಂದು ತನ್ನ ತಪ್ಪೊಪ್ಪಿಕೊಂಡ. ಹಿಂದಿನ ದಿನ ನೋಡಿದ ಬಬಿತಾಳ ಸೌಂದರ್ಯಕ್ಕೆ ಮನಸೋತು ಅವಳನ್ನು ಬಯಸಿ ಕೋರಿದನಂತೆ. ಆಕೆ ನೊಂದು ಬುದ್ಧಿ ಹೇಳಿ ವಾಪಸ್ಸು ಕಳಿಸಿದಳಂತೆ. ಮೋಹಕ್ಕೆ ಯಾರೂ ಹೊರತಲ್ಲ.

ಹಿಂದೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಆದ ತಪ್ಪಿಗೆ ಪಶ್ಚಾತ್ತಾಪದಿಂದ ನೊಂದು ಬೆಂದು ತಪ್ಪೊಪ್ಪಿಕೊಳ್ಳುತ್ತಿದ್ದರು. ಮತ್ತೆಂದೂ ತಪ್ಪು ಮಾಡದಂತೆ ಕಾಪಾಡು ಎಂದು ಬೇಡುತ್ತಿದ್ದರು. ಪಶ್ಚಾತ್ತಾಪದಿಂದ ಮಾತ್ರ ತಪ್ಪೊಪ್ಪಿಕೊಳ್ಳಬೇಕು ಬದಲಿಗೆ ಈಗ ಅವ್ಯಕ್ತ ಭಯದಿಂದ ಗಂಟಲ ಶಬ್ದದಿಂದ ತಪ್ಪೊಪ್ಪಿಕೊಂಡು ಹಳೆಯ ಪಾಪವ ಕಳೆದುಕೊಂಡು ಖಾಲಿಯಾದ ಲೋಟಕ್ಕೆ ಮತ್ತೆ ನೀರು ತುಂಬುವಂತೆ ರಹದಾರಿ ಪಡೆದರೇನೋ ಎಂದು ಮತ್ತೊಂದು ತಪ್ಪಿಗೆ ತಯಾರಾಗುತ್ತಾರೆ. ಮತ್ತೇಕೆ ನಾನಿರಬೇಕು?

ಕಾಲನೊಬ್ಬನೇ ಬದಲಾವಣೆಯ ಹೆಜ್ಜೆ ಗುರುತನ್ನು ದಾಖಲಿಸುವ ಗುಪ್ತಲೆಕ್ಕಿಗ.
‘ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೋಳ್’ ಎನ್ನುವಂತೆ ಎಲ್ಲರೂ ಒಂದಲ್ಲ ಒಂದು ಸಲ ನನ್ನಲ್ಲಿಗೆ ಬರಲೇಬೇಕು ಎನ್ನುವ ಅಹಮಿಕೆಯೂ ಆಗಾಗ ನನ್ನಲ್ಲಿ ಮೊಳೆಯುತ್ತದೆ. ಮರದ ತುಂಡು ನಾ. ನನಗೇ ಅಹಮಿಕೆ ಮೊಳೆದರೆ ಇನ್ನು ಮನುಷ್ಯರ ಗತಿಯೇನು? ಜನ ಬರುವುದು ನನಗಾಗಿ ಅಲ್ಲ. ನನ್ನ ಹಿಂದಿರುವ ದೈವಕ್ಕಾಗಿ. ನಾನು ಒಂದು ನೆಪ ಅಷ್ಟೇ. ಆಗ ನಾನೂ ನನ್ನಲ್ಲಿಯೇ ತಲೆಬಾಗಿ ತಪ್ಪೆಂದು ಹೇಳಿಕೊಳ್ಳುತ್ತೇನೆ.

ಒಂದು ಸಂತೋಷದ ಸುದ್ಧಿಯನ್ನೂ ಯಾರೂ ನನಗೆ ಹೇಳಿಲ್ಲ ಎನ್ನುವ ಕೊರಗು ಆಗಾಗ ಕಾಡುವುದಿದೆ. ನನ್ನ ಬಳಿ ಬರೀ ನೋವು, ತಪ್ಪುಗಳ ಮೂಟೆಯನ್ನೇ ಹೊತ್ತು ಬರುತ್ತಾರೆ. ಹಗುರಾಗಿ ಹೋಗುತ್ತಾರೆ. ಅವುಗಳನ್ನೆಲ್ಲ ನಾನು ಹೊತ್ತು ಬದುಕಬೇಕು. ಬಹುಶಃ ಅದಕ್ಕೇ ನನ್ನನ್ನು ಕನ್ಫೆಷನ್ ಬಾಕ್ಸ್ ಅಂತಾನೇ ಕರೆಯೋದು. ಎಷ್ಟಾದರೂ ಹೆಣ್ಣಲ್ಲವೇ ನಾನು? ಎಲ್ಲ ಗುಟ್ಟುಗಳನ್ನು ನೋವುಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ನಗಬೇಕು.

ನನಗೂ ಸುಮಾರು ಇನ್ನೂರು ವರ್ಷ ವಯಸ್ಸಾಗಿದೆ. ಆದರೂ ನನಗೇಕೆ ಈ ಅಗಾಧ ನೆನಪಿನ ಶಕ್ತಿಯೋ ಕಾಣೆ. ಕೇಳಿದ್ದೆಲ್ಲ, ಕಂಡದ್ದೆಲ್ಲ ನನ್ನಲ್ಲಿ ದಾಖಲಾಗಿದೆ. ಇಂಥ ಸಾವಿರಾರು ನೋವುಗಳು, ಸಂಕಟಗಳು ನನ್ನ ಒಡಲಿನಲ್ಲಿ ಅಡಗಿವೆ. ಎಲ್ಲವನ್ನೂ ಒಟ್ಟಿಗೆ ನಿಮಗೆ ಹೇಳುವುದಾದರೂ ಹೇಗೆ? ಹೀಗೇ ನಿಮಗೆ ಬಿಡುವಾದಾಗ ಕೆಲವನ್ನು ಹೇಳಲೇ..?

ಆದರೂ ನನ್ನೊಳಗೆ ಒಂದು ವಿಚಾರ ಓಡುತ್ತಿದೆ. ತಪ್ಪು ಮಾಡಿದಾಗ ನೋಯಿಸಿದವರಲ್ಲಿ ಕನ್ಫೆಸ್ ಮಾಡಬಾರದೇಕೆ? ಕ್ಷಮೆ ಕೇಳಬಾರದೇಕೆ? ಒಮ್ಮೆ ಕೈಕುಲುಕಬಾರದೇಕೆ? ಒಮ್ಮೆ ನಗಬಾರದೇಕೆ? ಮನುಷ್ಯರು ತಮತಮಗೆ ತಾವೇ ಕನ್ಫೆಷನ್ ಬಾಕ್ಸ್ ಆಗಬಾರದೇಕೆ..?
ನನ್ನ ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ…

ಕಾಯುತ್ತಲೇಏಏಏ ಇದ್ದೇನೆ……

LEAVE A REPLY

Please enter your comment!
Please enter your name here

Read More

ಮುಂಬೈ ಮಣಿಸಿದ ರಾಜಸ್ಥಾನ ರಾಯಲ್ಸ್

newsics.comಅಬುದಾಬಿ: ರಾಜಸ್ಥಾನ ರಾಯಲ್ಸ್ ಐಪಿಎಲ್ ನ 45ನೇ ಪಂದ್ಯದಲ್ಲಿ ಎಂಟು ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.ಆಲ್ ರೌಂಡರ್ ಬೆನ್ ಸ್ಟೋಕ್ಸ್...

ಹಿರಿಯ ನಟ ಸೌಮಿತ್ರ ಚಟರ್ಜಿ ಸ್ಥಿತಿ ಚಿಂತಾಜನಕ

newsics.comಕೋಲ್ಕತ್ತಾ: ಕೊರೋನಾದಿಂದ ಗುಣಮುಖರಾಗಿದ್ದ ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿ ಅವರ ಅರೋಗ್ಯ ಸ್ಥಿತಿ ಮತ್ತೆ  ಗಂಭೀರವಾಗಿದೆ.ಕಳೆದ 24 ಗಂಟೆಗಳಲ್ಲಿ ಅವರ ಪ್ಲೇಟ್‌ಲೆಟ್ ಸಂಖ್ಯೆ ಕುಸಿದಿದೆ. 85 ವರ್ಷದ...

ಐಪಿಎಲ್ 2020: ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ ಪ್ರಕಟ

newsics.comದುಬೈ: ಈ ಬಾರಿಯ ಐಪಿಎಲ್‌ನ ಲೀಗ್‌ ಹಂತದಲ್ಲಿ ಕೇವಲ 10 ಪಂದ್ಯಗಳಷ್ಟೇ ಬಾಕಿಯಿದೆ. ಹಾಗಾಗಿ ಪ್ಲೇಆಫ್ ಹಂತಕ್ಕೇರುವ ಲೆಕ್ಕಾಚಾರ ಎಲ್ಲಾ ತಂಡಗಳಲ್ಲೂ ನಡೆಯುತ್ತಿದೆ.ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳು ನವೆಂಬರ್ 5...

Recent

ಮುಂಬೈ ಮಣಿಸಿದ ರಾಜಸ್ಥಾನ ರಾಯಲ್ಸ್

newsics.comಅಬುದಾಬಿ: ರಾಜಸ್ಥಾನ ರಾಯಲ್ಸ್ ಐಪಿಎಲ್ ನ 45ನೇ ಪಂದ್ಯದಲ್ಲಿ ಎಂಟು ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.ಆಲ್ ರೌಂಡರ್ ಬೆನ್ ಸ್ಟೋಕ್ಸ್...

ಹಿರಿಯ ನಟ ಸೌಮಿತ್ರ ಚಟರ್ಜಿ ಸ್ಥಿತಿ ಚಿಂತಾಜನಕ

newsics.comಕೋಲ್ಕತ್ತಾ: ಕೊರೋನಾದಿಂದ ಗುಣಮುಖರಾಗಿದ್ದ ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿ ಅವರ ಅರೋಗ್ಯ ಸ್ಥಿತಿ ಮತ್ತೆ  ಗಂಭೀರವಾಗಿದೆ.ಕಳೆದ 24 ಗಂಟೆಗಳಲ್ಲಿ ಅವರ ಪ್ಲೇಟ್‌ಲೆಟ್ ಸಂಖ್ಯೆ ಕುಸಿದಿದೆ. 85 ವರ್ಷದ...

ಐಪಿಎಲ್ 2020: ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ ಪ್ರಕಟ

newsics.comದುಬೈ: ಈ ಬಾರಿಯ ಐಪಿಎಲ್‌ನ ಲೀಗ್‌ ಹಂತದಲ್ಲಿ ಕೇವಲ 10 ಪಂದ್ಯಗಳಷ್ಟೇ ಬಾಕಿಯಿದೆ. ಹಾಗಾಗಿ ಪ್ಲೇಆಫ್ ಹಂತಕ್ಕೇರುವ ಲೆಕ್ಕಾಚಾರ ಎಲ್ಲಾ ತಂಡಗಳಲ್ಲೂ ನಡೆಯುತ್ತಿದೆ.ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳು ನವೆಂಬರ್ 5...
error: Content is protected !!