Thursday, December 9, 2021

ಪೂರ್ಣವಿರಾಮ

Follow Us

* ವಿಷ್ಣು ಭಟ್ ಹೊಸ್ಮನೆ
response@134.209.153.225
vishnubhat.h@gmail.com

ರಾಮಕೃಷ್ಣ ಶರ್ಮರ ಕೈ ನಡುಗುತ್ತಿದೆ.
“ಥತ್..ಇನ್ನು ನನ್ನಿಂದ ಬರೆಯಲಾಗಲಿಕ್ಕಿಲ್ಲ!” ಎನ್ನುತ್ತ ಗಡಿಯಾರದತ್ತ ಕಣ್ಣಾಡಿಸಿದರು. ಗಂಟೆ ಐದು ದಾಟಿತ್ತು. ತಟ್ಟನೆ ಏನೋ ಹೊಳೆದಂತಾಗಿ ಅಂಗಿ ಹಾಕಿಕೊಂಡು ಮನೆಯಿಂದ ಹೊರಬಿದ್ದರು.
ತಮ್ಮ ತೋಟ ದಾಟಿಕೊಂಡು ರಸ್ತೆಗೆ ಕಾಲಿಡುತ್ತಲೇ ಇವರಿಗಾಗಿಯೇ ಕಾಯುತ್ತಿದ್ದ ಆನಂದ ಮಾಸ್ತರರು ಕಣ್ಣಿಗೆ ಬಿದ್ದರು. ಇವರನ್ನು ಕಂಡವರೇ “ಬನ್ನಿ..ಬನ್ನಿ, ಇವತ್ತು ಇಲ್ಲಿಯೇ ಕುಳಿತುಕೊಳ್ಳುವ” ಎಂದು ಕರೆದರು.
ದೊಡ್ಮನೆ ಕಾಮತರ ಹಳೆಮನೆಯನ್ನು ಒಡೆದು ತೆಗೆಯುವಾಗ ತುಂಡರಿಸಲಾಗದೆ ಉಳಿದ ಗಜಗಾತ್ರದ ಕಂಬವನ್ನು ಊರವರೆಲ್ಲ ಸೇರಿ ಕೆಂಚಗಾರಿನ ತಿರುವಿನಲ್ಲಿ ಬಸ್ಸಿಗೆ ಕಾಯುವವರಿಗೆ ಕುಳಿತುಕೊಳ್ಳಲಿಕ್ಕಾದರೂ ಆದೀತು ಎಂದು ತಂದು ರಸ್ತೆಯ ಬದಿಗೆ ಮಲಗಿಸಿಟ್ಟಿದ್ದರು. ಮಳೆಗಾಲದಲ್ಲಿ ಹುಲ್ಲು-ಮುಳ್ಳುಗಳು ಬೆಳೆದು ಅದರ ಮೇಲೆ ಕುಳಿತುಕೊಳ್ಳಲು ಆಗದೇ ಹೋಗುತ್ತಿತ್ತಾದರೂ ಬೇಸಿಗೆಯಲ್ಲಿ ಇದು ತುಂಬಾ ಜನರಿಂದ ಬಳಸಲ್ಪಡುತ್ತಿತ್ತು. ಸೊಪ್ಪಿಗೋ ಸೌದೆಗೋ ಬಸ್ಸಿಗೋ ಅಥವಾ ಸುಮ್ಮನೆ ಹರಟೆ ಹೊಡೆಯಲೋ ಬಂದವರೂ ಕೂಡ ಇದರ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಆನಂದ ಮಾಸ್ತರರಿಗೆ ದೊಡ್ಮನೆ ನಾರಾಯಣ ಕಾಮತರು ಆ ಮನೆಯನ್ನು ಕೆಡವಿದ್ದು ಸರಿಯೆನಿಸಲಿಲ್ಲ. ಯಾಕೆಂದರೆ ಈ ನಾರಾಯಣ ಕಾಮತರು ಹುಟ್ಟುವ ಮೊದಲೇ ರಾಮಕೃಷ್ಣರೂ ಸೇರಿದಂತೆ ಊರಿನ ಹಲವರು ಚಿಕ್ಕವರಿದ್ದಾಗ ಆಟ ಆಡಲೆಂದೇ ಆ ಮನೆಗೆ ಹೋಗುತ್ತಿದ್ದರು. ಅಷ್ಟೊಂದು ವಿಶಾಲವಾದ ಮನೆ ಆ ಊರಲ್ಲಿ ಬೇರೆ ಯಾವುದೂ ಇರಲಿಲ್ಲ. ಹಾಗಾಗಿ ಇವರಿಬ್ಬರೂ ಆ ಮನೆಯನ್ನು ನಿತ್ಯವೂ ನೆನಪು ಮಾಡಿಕೊಳ್ಳುತ್ತಾರೆ. ಮತ್ತು ಹೆಚ್ಚಾಗಿ ಈ ಕಂಬದ ಮೇಲೇಯೇ ಕುಳಿತುಕೊಂಡು ಹರಟೆ ಹೊಡೆಯುತ್ತಿರುತ್ತಾರೆ.
ಅವರ ಪಕ್ಕಕ್ಕೆ ಹೋಗಿ ಕುಳಿತ ಶರ್ಮರು ಯಾವುದೋ ವಿಷಯವನ್ನು ಹೇಳಲೋ ಬೇಡವೋ ಎಂಬ ಯೋಚನೆಯಲ್ಲಿಯೇ ಇದ್ದರು.
“ಶರ್ಮರೇ ಏನಾಯಿತು? ಯಾಕೋ ಸ್ವಲ್ಪ ಕಸಿವಿಸಿಯಾದಂತಿದ್ದೀರಲ್ಲ?”
“ಹೌದು. ನಾನೊಂದು ವಿಚಾರ ಹೇಳಿದ್ದೆನಲ್ಲ, ಕಥೆ ಬರೆಯಬೇಕು ಅಂತ.”
“ಹೌದು.. ಅದನ್ನು ಹೇಳಿ ಕೆಲವು ದಿನವಾಯಿತಲ್ಲ. ಎಲ್ಲಿಯತನಕ ಬಂತು ಕಥೆ?”
“ಈ ಬರೆಯುವ ಕೆಲಸ ತುಂಬಾ ಕಷ್ಟದ ಕೆಲಸ! ನನಗೆ ಈ ವಯಸ್ಸಿನಲ್ಲಿ ಬರೆಯುವ ಹುಚ್ಚು ಯಾಕೆ ಹುಟ್ಟಿತೋ ತಿಳಿಯುತ್ತಿಲ್ಲ. ಆದರೆ ಬರೆದೇ ತೀರುತ್ತೇನೆಂಬ ಹಟದಿಂದ ಬರೆಯುತ್ತಿದ್ದೇನೆ. ಅಲ್ಲಲ್ಲಿ ಅಕ್ಷರಗಳು ತಪ್ಪುತ್ತವೆ. ಅಲ್ಲದೆ ಕೆಲವು ಸಂಗತಿಗಳು ನೆನಪಾಗುವುದೇ ಇಲ್ಲ. ಇನ್ನು ಕೆಲವು ಸಂಗತಿಗಳಂತೂ..” ಎಂದು ಅಲ್ಲಿಗೆ ತಮ್ಮ ಮಾತನ್ನು ನಿಲ್ಲಿಸಿದರು.
“ಅದರಲ್ಲಿ ಎಂತಹ ಕಷ್ಟ? ಅದೂ ನೀವು ಬರೆಯಲು ಹೊರಟಿರುವುದು ನಿಮ್ಮ ಜೀವನ ಚರಿತ್ರೆಯನ್ನಲ್ಲವೇ? ನೆನಪಿಗೆ ಬಂದಷ್ಟನ್ನು ಬರೆದರಾಯಿತು. ಯಾಕೆ ಅರ್ಧಕ್ಕೆ ಮಾತನ್ನು ನಿಲ್ಲಿಸಿದಿರಿ? ನೆನಪಾಗುವ ಸಂಗತಿಗಳು ಏನು ಮಾಡುತ್ತವೆ ನಿಮಗೆ?” ಎಂದು ಕೇಳಿದರು.
“ಕೆಲವಷ್ಟು ತುಂಬಾ ನೋವು ಕೊಡುತ್ತವೆ. ಒಮ್ಮೆ ಯಾವುದೋ ಕೆಟ್ಟಗಳಿಗೆಯಲ್ಲಿ ಸುಖಾಸುಮ್ಮನೆ ನನ್ನ ಬದುಕನ್ನು ಹಾಳು ಮಾಡಿಕೊಂಡೆನೇ ಅಂತಲೂ ಅನ್ನಿಸುತ್ತದೆ. ಇನ್ನೊಮ್ಮೆ ನಾನೇ ಎಲ್ಲರಿಗಿಂತಲೂ ಸುಖಿಯೆಂತಲೂ ಅನ್ನಿಸುತ್ತದೆ. ಬದುಕಿನ ಅವಲೋಕನ ಮಾಡುತ್ತ ಹೋದಂತೆ ಎಷ್ಟೊಂದು ತಪ್ಪುಗಳಿವೆ. ಸರಿಮಾಡಿಬಿಡೋಣವೆಂದರೆ ನಿನ್ನೆಗಳು ಮತ್ತೆ ಬರುವುದಿಲ್ಲವಲ್ಲ!”
“ಆ ಯೋಚನೆಯನ್ನೆಲ್ಲ ಬಿಡಿ. ಒಬ್ಬೊಬ್ಬರ ಬದುಕು ಒಂದೊಂದು ರೀತಿ. ನಾವು ಇನ್ನೊಬ್ಬನನ್ನು ನೋಡಿ ಅವನೇ ಸುಖಿ ಅಂದುಕೊಳ್ಳುತ್ತೇವೆ. ಅದೇ ಸಮಯದಲ್ಲಿ ಆತನೂ ನಮ್ಮನ್ನು ನೋಡಿ ನಾವೇ ಸುಖಿಗಳು ಅಂದುಕೊಳ್ಳುತ್ತಾನೆ. ನನಗನಿಸುವಂತೆ ಈ ಪ್ರಪಂಚದಲ್ಲಿ ಸುಖ ಎಂದರೆ ಯಾವುದೆಂಬುದನ್ನು ಇಲ್ಲಿಯ ತನಕ ಯಾವನೇ ವಿಜ್ಞಾನಿ ಕಂಡುಹಿಡಿದಿಲ್ಲ. ಇದನ್ನೆಲ್ಲ ಚಿಂತಿಸಿ ಏನಾಗಬೇಕಿದೆ? ಎಲ್ಲವನ್ನೂ ನಮೂದಿಸಲು ಬೇಸರವಾದರೆ ನಿಮ್ಮ ಮನಸ್ಸಿಗೆ ಹಿತಕೊಡುವ ಸಂಗತಿಯನ್ನಷ್ಟೇ ಬರೆಯಿರಿ. ಆದರೆ ಬರೆಯುವುದನ್ನು ಮಾತ್ರ ನಿಲ್ಲಿಸಬೇಡಿ.”
“ಬರೆಯುವುದನ್ನು ನಿಲ್ಲಿಸುವುದಿಲ್ಲ. ಆದರೆ ಈಗ ಸಮಸ್ಯೆ ಉಂಟಾಗಿದ್ದು ಈ ಕೈಯಿಂದ.”
“ಏನಾಯಿತು?”
“ಮೊನ್ನೆಯಿಂದ ಕೈ ನಡುಕ ಹೆಚ್ಚಾಗಿದೆ. ಅಕ್ಷರಗಳನ್ನು ಸ್ಪಷ್ಟವಾಗಿ ಬರೆಯಲು ಆಗುತ್ತಿಲ್ಲ. ಅದಕ್ಕೆ ನನಗೆ ಕಸಿವಿಸಿಯಾಗಿರುವುದು. ಇವತ್ತು ಒಂದು ಪದವನ್ನೂ ಸರಿಯಾಗಿ ಬರೆಯಲಾಗದೆ ಹಾಗೇ ಎದ್ದು ಬಂದೆ” ಎಂದರು ಶರ್ಮರು ಬೇಸರದಿಂದ.
“ಅದಕ್ಕೆ ತಲೆಬಿಸಿ ಮಾಡಬೇಡಿ. ನಿಮ್ಮ ಮೊಮ್ಮಗನ ಬಳಿ ಕಂಪ್ಯೂಟರ್ ಇರಬೇಕಲ್ಲ? ಅವನ ಬಳಿ ಟೈಪ್ ಮಾಡಲು ಹೇಳಿ, ಇಲ್ಲವೆನ್ನಲಿಕ್ಕಿಲ್ಲ.”
“ಹೌದು, ಇದು ಒಳ್ಳೆಯ ಉಪಾಯ ನೋಡಿ, ನನಗೆ ಹೊಳೆಯಲೇ ಇಲ್ಲ. ಅವನಿಗೆ ಕನ್ನಡ ಟೈಪಿಂಗ್ ಗೊತ್ತಿದೆ. ನನಗೆ ಸಹಾಯ ಮಾಡಿಯಾನು. ಇದೆಲ್ಲ ನಿಮ್ಮಂತಹ ಮಾಸ್ತರರಿಗಲ್ಲದೆ ನನಗೆಲ್ಲಿ ಹೊಳೆದೀತು?” ಎಂದು ತಮ್ಮ ಸಮಸ್ಯೆ ಬಗೆಹರಿಯಿತೆಂದು ಸಂತಸಪಟ್ಟುಕೊಂಡರು.
“ಸರಿ, ಕತ್ತಲಾಗುತ್ತ ಬಂತು, ಮನೆಯತ್ತ ಹೊರಡೋಣ. ಶರ್ಮರೇ ಕಥೆ ಬೇಗ ಬರೆದು ಮುಗಿಸಿ. ಮುಂದಿನ ವರ್ಷ ನನಗೆ ಕೆಲಸದಿಂದ ನಿವೃತ್ತಿ. ನಾನು ಊರಿಗೆ ಹೋಗುವ ಮೊದಲೇ ಬರೆದು ಮುಗಿಸಿದರೆ ಒಳ್ಳೆಯದು. ನನಗೂ ಓದಬೇಕೆಂಬ ಆಸೆ ಇದೆ” ಎಂದು ಸಣ್ಣಗೆ ನಕ್ಕರು.
“ಖಂಡಿತ. ಪುಸ್ತಕ ಬಿಡುಗಡೆ ನಿಮ್ಮ ಕೈಯಿಂದಲೇ” ಎಂದು ನಗುತ್ತ ಮನೆಯತ್ತ ಹೊರಟರು.

***

ಶರ್ಮರು ಮನೆಗೆ ಬಂದವರೇ “ಪಾರ್ಥ..ಪಾರ್ಥ…” ಎಂದು ಗಟ್ಟಿಯಾಗಿ ಕರೆದರು.
ತನ್ನ ಕೋಣೆಯಲ್ಲಿ ಏನನ್ನೋ ಓದುತ್ತ ಕುಳಿತಿದ್ದ ಪಾರ್ಥಸಾರಥಿ ಅಜ್ಜ ಕರೆಯುತ್ತಿದ್ದುದನ್ನು ಕೇಳಿಸಿಕೊಂಡು ಹೊರಗೆ ಬಂದ.
“ಎಂತಾ ಅಜ್ಜ?”
“ಬಾ ಇಲ್ಲಿ, ನನ್ನ ಕೋಣೆಗೆ ಬಾ, ನಿನ್ನ ಜೊತೆ ಮಾತನಾಡುವುದಕ್ಕಿದೆ.”
“ಸರಿ, ಬಂದೆ”
ಅಜ್ಜ – ಮೊಮ್ಮಗ ಇಬ್ಬರೂ ಕೋಣೆಯೊಳಕ್ಕೆ ಹೋದರು.
“ಬಾ, ಪಾರ್ಥ..”
“ಅಜ್ಜ, ಎಷ್ಟು ಬಾರಿ ಹೇಳಿಲ್ಲ ನಿಮಗೆ? ನನ್ನನ್ನು ಪಾರ್ಥ ಅಂತ ಕರೆಯಬೇಡ. ಪಾರ್ಥಸಾರಥಿ ಅಂತಲೇ ಕರೆಯಬೇಕೆಂದು. ಪಾರ್ಥ ಎಂದರೆ ಅರ್ಜುನ, ಪಾರ್ಥಸಾರಥಿ ಅಂದರೆ ಕೃಷ್ಣ. ಹಾಗಾಗಿ ಪಾರ್ಥಸಾರಥಿ ಅಂತಲೇ ಹೇಳು.” ಎಂದ ಸಿಟ್ಟು ಬಂದವರಂತೆ ನಟಿಸುತ್ತ.
“ಹೆಸರಿನಲ್ಲೇನಿದೆ ಮಗ? ನನ್ನ ಹೆಸರು ರಾಮಕೃಷ್ಣ. ಕೆಲವರು ರಾಮ ಎಂತಲೂ ಇನ್ನು ಕೆಲವರು ಕೃಷ್ಣ ಎಂತಲೂ ಇನ್ನೂ ಕೆಲವರು ಕೇವಲ ಶರ್ಮರೇ ಅಂತಲೂ ಕರೆಯುತ್ತಾರೆ. ಎಲ್ಲರಿಗೂ ಓಗುಡುತ್ತೇನೆ ನಾನು” ಎಂದರು ನಗುತ್ತ.
“ಆದರೂ ನಮಗೆ ಇಂತಹದೇ ಹೆಸರು ಎಂದು ಇಟ್ಟಮೇಲೆ ಹೀಗೆಲ್ಲ ಅರ್ಧಬಂರ್ಧ ಕೆರೆಯುವುದು ನನ್ನನ್ನೇ ಅಂತ ನನಗನಿಸುವುದಿಲ್ಲ. ಹೆಸರನ್ನು ಇದ್ದಹಾಗೇ ಕರೆದರೇ ಚೆಂದ.”
“ಇರಲಿ ಬಿಡು. ನಿನ್ನಿಂದ ನನಗೆ ದೊಡ್ಡದೊಂದು ಸಹಾಯವಾಗಬೇಕು.”
“ಅಂತದ್ದೇನಜ್ಜ..!?”
“ನಾನು ನನ್ನ ಜೀವನಚರಿತ್ರೆ ಬರೆಯುತ್ತಿದ್ದೇನೆ. ನಿನ್ನಿಂದ ಅದನ್ನು ಟೈಪ್ ಮಾಡಿಕೊಡಲಾದಿತೇ? ನನ್ನ ಕೈನಡುಗಿತ್ತಿದೆ. ಇಲ್ಲಿ ನೋಡು ಕೆಲವು ಅಕ್ಷರಗಳು ಏನೆಂಬುದು ನನಗೇ ಗೊತ್ತಾಗುತ್ತಿಲ್ಲ” ಎನ್ನುತ್ತ ತಾವು ಆಗಲೇ ಬರೆದಿದ್ದ ಕಾಗದವನ್ನು ತಂದು ತೋರಿಸಿದರು.
“ಅಜ್ಜ, ಇದದೇನಿದು? ಓದುವುದೇ ಕಷ್ಟ. ಅಲ್ಲದೇ ಇದರಲ್ಲೆಲ್ಲೂ ಪೂರ್ಣವಿರಾಮವೇ ಇಲ್ಲವಲ್ಲ!”
“ಇದೆ, ಪೂರ್ಣವಿರಾಮವಿಲ್ಲದ ವಾಕ್ಯವಿದ್ದೀತೆ?”
“ಆದರೆ, ಇಲ್ಲಿ ಎಲ್ಲ ಕಡೆ ಅಲ್ಪವಿರಾಮ ಮಾತ್ರ ಇದೆ!”
“ಅದೇ, ನನ್ನ ಕೈ ನಡುಗಿ ಎಲ್ಲವೂ ಅಲ್ಪವಿರಾಮ ಚಿಹ್ನೆಯಾಗಿ ಬಿಟ್ಟಿವೆ.”
“ಹೌದಾ, ಹಾಗಾದರೆ ನೀವಿನ್ನು ಕೈಯಿಂದ ಬರೆಯುವುದು ಬೇಡ. ನಾನು ಟೈಪ್ ಮಾಡಿಕೊಡುತ್ತೇನೆ. ಇವತ್ತಿನಿಂದಲೇ ಆರಂಭಿಸುವ, ನೀವು ಹೇಳುತ್ತ ಹೋಗಿ ನಾನು ಬರೆಯುತ್ತ ಹೋಗುತ್ತೇನೆ.”
“ಆದರೆ, ಇದನ್ನು ಯಾರಲ್ಲಿಯೂ ಹೇಳಬಾರದು. ಕಥೆ ಬರೆದು ಮುಗಿದ ಬಳಿಕ ನಾನೇ ಹೇಳುತ್ತೇನೆ.”
“ಆಯಿತು.”
“ನನಗೂ ಕುತೂಹಲವಿದೆ ನನ್ನ ವಯಸ್ಸಿನಲ್ಲಿ ನೀವು ಹೇಗಿದ್ದಿರಬಹುದು? ಎಂಬ ಪ್ರಶ್ನೆ ನನ್ನ ತಲೆಯೊಳಗೆ ಬರುತ್ತಲೇ ಇರುತ್ತದೆ. ಇದಕ್ಕೆಲ್ಲ ಉತ್ತರ ಸಿಗುತ್ತದಲ್ಲ? ಎಂದು ಅಜ್ಜನ ಮುಖ ನೋಡಿದ.
“ಕೆಲವು ಭಾಗವನ್ನು ಅದಾಗಲೇ ಬರೆದಿದ್ದೇನೆ. ಅವನ್ನು ಟೈಪ್ ಮಾಡಿಕೊಡು. ಆ ಮೇಲೆ ಮುಂದಿನ ಭಾಗವನ್ನು ಹೇಳುತ್ತೇನೆ.”
“ಸರಿ.”

***

ರಾಮಕೃಷ್ಣ ಶರ್ಮರ ಅಣ್ಣನ ಮಗನ ಮಗ ಈ ಪಾರ್ಥಸಾರಥಿ. ಪಾರ್ಥಸಾರಥಿ ಹುಟ್ಟುವ ಮೊದಲೇ ಸ್ವಂತ ಅಜ್ಜ, ರಾಮಕೃಷ್ಣ ಶರ್ಮರ ಅಣ್ಣ ವೆಂಕಟರಮಣ ಶರ್ಮರು ತೀರಿಕೊಂಡಿದ್ದರು. ಹಾಗಾಗಿ ರಾಮಕೃಷ್ಣ ಶರ್ಮರೇ ಪಾರ್ಥಸಾರಥಿಯ ನೆಚ್ಚಿನ ಅಜ್ಜ. ಅವರ ತೊಡೆಯಲ್ಲಿಯೇ ಮಲಗೆದ್ದು ಬೆಳೆದ ಪಾರ್ಥಸಾರಥಿಗೆ ಅಜ್ಜ ಯಾವುದೇ ಕೆಲಸವನ್ನು ಹೇಳಿದರೂ ಇಲ್ಲವೆನ್ನದೆ ಮಾಡಿಕೊಡುವಷ್ಟು ಪ್ರೀತಿ. ಈಗ ಅವರ ಜೀವನಚರಿತ್ರೆಯನ್ನು ಟೈಪ್ ಮಾಡಲು ತುಂಬಾ ಸಂತೋಷದಿಂದಲೇ ಒಪ್ಪಿದ್ದಾನೆ. ಅವನಲ್ಲಿದ್ದ ಪುಸ್ತಕಪ್ರೀತಿಯೂ ಇದಕ್ಕೆ ಕಾರಣ. ಅಜ್ಜನ ಜೀವನದ ಕೆಲವು ಸಂಗತಿಗಳು ರೋಮಾಂಚನಕಾರಿಯೂ, ಹಾಸ್ಯಮಯವೂ, ಬದುಕಿನಲ್ಲಿ ತಿಳಿದುಕೊಳ್ಳುವಂತಹದೂ ಆಗಿದ್ದುದರಿಂದ ತನ್ನ ಅಪ್ಪನನ್ನು ಸ್ವಂತ ಖರ್ಚಿನಲ್ಲಿಯಾದರೂ ಈ ಪುಸ್ತಕವನ್ನು ಪ್ರಕಟಿಸಲೇ ಬೇಕೆಂದು ಒಪ್ಪಿಸಿದ್ದ.

ಶರ್ಮರ ಬಾಲ್ಯದಿಂದ ಇಂದಿನವರೆಗಿನ ಘಟನೆಗಳು ಚರಿತ್ರೆಯ ರೂಪದಲ್ಲಿ ದಾಖಲಾಗುತ್ತ ಅದೆಷ್ಟೋ ಪುಟಗಳು ತುಂಬುತ್ತಲೇ ಇದ್ದುವು.

***

“ಅಜ್ಜ, ನೀವ್ಯಾಕೆ ಮದುವೆಯಾಗಲಿಲ್ಲ?” ಪಾರ್ಥಸಾರಥಿ ಈ ಪ್ರಶ್ನೆಯನ್ನು ಕೇಳಲೋ ಬೇಡವೋ ಎಂದುಕೊಳ್ಳುತ್ತಲೇ ಕೇಳಿದ. ಯಾಕೆಂದರೆ ಅಜ್ಜನ ಜೀವನಚರಿತ್ರೆಯ ಬರವಣಿಗೆ ಮುಗಿಯುತ್ತ ಬಂದರೂ ಎಲ್ಲಿಯೂ ಅಜ್ಜ ಯಾಕೆ ಬ್ರಹ್ಮಚಾರಿಯಾಗಿಯೇ ಇದ್ದುದು ಎಂಬುದರ ಬಗ್ಗೆ ಹೇಳಿಲ್ಲವಲ್ಲ ಎಂದೆನಿಸಿ ಈ ಪ್ರಶ್ನೆಯನ್ನು ಅಜ್ಜನ ಮುಂದಿಟ್ಟಿದ್ದ.
ಶರ್ಮರು ನಗುತ್ತ “ಅದೆಲ್ಲ ಬೇಡ. ನನಗೆ ಮದುವೆಯ ಯೋಗ ಇರಲಿಲ್ಲ, ಆಗಲಿಲ್ಲ ಅಷ್ಟೆ” ಎಂದು ಹಾರಿಕೆಯ ಉತ್ತರಕೊಟ್ಟರು.
“ಇಲ್ಲ, ನೀವು ಹೇಳಲೇಬೇಕು. ಯೋಗವಿರಲಿಲ್ಲ, ಅದರಿಂದಾಗಿಯೇ ಆಗಲಿಲ್ಲ ಎಂಬುದನ್ನು ನಾನು ನಂಬುವುದಿಲ್ಲ. ಯೋಗವೇ ಇಲ್ಲ ಎಂದು ಸುಮ್ಮನೇ ಕುಳಿತಿದ್ದಿರೇನು? ಆ ಪ್ರಯತ್ನವನ್ನಾದರ ಇಲ್ಲಿ ಬರೆಯಬೇಕಲ್ಲ. ನಿಮಗೆ ಮದುವೆಯಾಗದೇ ಇರುವ ಬಗೆಗಿನ ಅನಿಸಿಕೆಯಾದರೂ ಬರೆಯಲೇ ಬೇಕು. ನನ್ನ ಬಳಿ ಸುಳ್ಳು ಹೇಳಬೇಡಿ” ಎಂದ ಕೋಪದಿಂದ.
“ಆ ವಿಷಯ ಬೇಡ ಎಂಬುದು ನನ್ನ ನಿರ್ಧಾರವಾಗಿತ್ತು. ಹಾಗಾಗಿ ಹೇಳಲಿಲ್ಲ.”
“ಇದರಲ್ಲಿ ಸೇರಿಸಬೇಕೋ ಬೇಡವೋ ಎಂಬುದು ನಿಮಗೆ ಬಿಟ್ಟದ್ದು, ಆದರೆ ನನಗಾದರೂ ಹೇಳಬಾರದೇ?”
“ಏನೂ ಇಲ್ಲ ಮಗ, ನಾನೊಬ್ಬಳನ್ನು ಮದುವೆಯಾಗಬೇಕೆಂದು ಆಸೆ ಪಟ್ಟಿದ್ದೆ, ಆದರೆ ಅವಳು ಸಿಗಲಿಲ್ಲ. ಮತ್ತೆ ಮದುವೆಯ ಬಯಕೆ ನನ್ನಲ್ಲಿ ಹುಟ್ಟಲಿಲ್ಲ. ಹಾಗೇ ಉಳಿದುಬಿಟ್ಟೆ.”
“ಅಷ್ಟು ಪ್ರೀತಿಯಿದ್ದ ಮೇಲೆ ಮುತ್ತಜ್ಜನಿಗೆ ಹೇಳಿದ್ದರೆ ಮಾಡಿಸುತ್ತಿರಲಿಲ್ಲವೇ? ಅಥವಾ ಹುಡುಗಿಯ ಮನೆಯಲ್ಲಿ ಒಪ್ಪಲಿಲ್ಲವೇ?”
“ಅದೆಲ್ಲ ಬೇಡ, ಬಿಡು.”
“ಇಲ್ಲ, ನೀವು ಅದನ್ನು ಹೇಳಲೇಬೇಕು. ನಿಮ್ಮ ಪ್ರೀತಿ ಹೇಗಾಯಿತು? ಹುಡುಗಿಯೂ ಒಪ್ಪಿದ್ದಳಾ? ಪ್ರೀತಿಸಿದವರು ದೂರವಾದದ್ದು ಯಾಕೆ? ಎಲ್ಲವನ್ನೂ ವಿವರವಾಗಿ ನನಗೆ ಹೇಳಿ” ಎಂದು ಪಾರ್ಥಸಾರಥಿ ಹಟಹಿಡಿದ.
“ನಮ್ಮ ಮಾವ ಈಶ್ವರ ಶಾಸ್ತ್ರಿಗಳ ನೆಂಟರೊಬ್ಬರ ಮನೆಯ ಹುಡುಗನ ಉಪನಯನಕ್ಕೆ ಹೋದಾಗ ಅ ಹುಡುಗಿಯನ್ನು ಕಂಡದ್ದು. ಅವಳ ಕಣ್ಣುಗಳ ಸೌಂದರ್ಯಕ್ಕೆ ನಾನು ಸೋತು ಹೋದೆ. ಆಕೆ ನನ್ನನ್ನು ಮೂರೋ ನಾಲ್ಕೋ ಬಾರಿ ನೋಡಿದ್ದಿರಬಹುದು. ಆದರೆ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆನಿಂತುಬಿಟ್ಟಳು. ಅದೆಂಥ ಹೊಳೆಯುವ ಕಣ್ಣುಗಳು. ಅವಳ ಕಣ್ಣುಗಳೇ ಅವಳ ಹೃದಯ ಸೌಂದರ್ಯವನ್ನು ಬಿಚ್ಚಿಟ್ಟಿದ್ದವು. ಎಂದಿಗೂ ಮರೆಯಲಾಗದು”
“ಹೌದಾ..ಅಜ್ಜ..ನೀವು ಆಕೆಗೆ ನಿಮ್ಮ ಪ್ರೀತಿಯನ್ನು ಹೇಳಿಕೊಂಡರೇನು?’ ಎಂದ ಕುತೂಹಲದಿಂದ.
“ಇಲ್ಲಪ್ಪ, ಆಗ ಈಗಿನ ಕಾಲದಂತಲ್ಲ ಇಷ್ಟವಾದ ಕೂಡಲೇ ಹುಡುಗಿಗೆ ಹೇಳುವುದಕ್ಕೆ. ನಾನು ಮನಸಾರೆ ಪ್ರೀತಿಸಿದೆ. ಆಕೆ ಪ್ರೀತಿಸುತ್ತಿದ್ದಳೋ ಇಲ್ಲವೋ ಗೊತ್ತಿಲ್ಲ. ನನ್ನನ್ನೇ ಆಕೆ ನೋಡಿದ್ದೋ ಆ ಜನರ ಮಧ್ಯೆ ತಪ್ಪಿ ನನ್ನಡೆಗೆ ಆಕೆಯ ಕಣ್ಣುಗಳು ಹೊರಳಿದ್ದೋ ಎಂಬುದು ಇವತ್ತಿಗೂ ಪ್ರಶ್ನೆಯಾಗಿಯೇ ಉಳಿದಿದೆ.”
“ಇದೆಂತಹ ಪ್ರೀತಿ ಅಜ್ಜ? ನಿಮ್ಮ ಪ್ರೀತಿ ಅವಳಿಗೆ ಗೊತ್ತಿಲ್ಲವೆಂದಾದ ಮೇಲೆ ನೀವು ಬೇರೆ ಮದುವೆಯಾಗಬಹುದಿತ್ತು. ಮದುವೆಗೆ ಪ್ರಯತ್ನವನ್ನೂ ಮಾಡಿಲ್ಲವೇ?”
“ಪ್ರಯತ್ನ ಮಾಡಿದ್ದೆ. ಆದರೆ ಫಲಿಸಲಿಲ್ಲ!”
“ಅಂದರೆ!?”
“ನನ್ನ ಅಪ್ಪಯ್ಯನಿಗೆ ಈ ಹುಡುಗಿಯ ವಿಷಯ ಹೇಳಿದ್ದೆ. ಅದಕ್ಕೆ ಆತ ನೀನು ತೆಂಗಿನ ಮರಹತ್ತುವುದನ್ನು ಕಲಿಯದ ಹೊರತು ಮದುವೆ ಮಾಡಿಸವುದಿಲ್ಲ ಎಂದುಬಿಟ್ಟ” ಎಂದರು ಗಂಭೀರವಾಗಿ.
“ಮದುವೆಗೂ ತೆಂಗಿನಮರ ಹತ್ತುವುದಕ್ಕೂ ಏನು ಸಂಬಂಧ?” ಎಂದು ನಕ್ಕುಬಿಟ್ಟ.
“ನಗಬೇಡ. ಆಗ ಊಳುವವನೇ ಒಡೆಯ ಕಾನೂನು ಜಾರಿಗೆ ಬಂದ ಸಮಯವಾಗಿತ್ತು. ನಮ್ಮಪ್ಪನ ಹೆಸರಿನಲ್ಲಿದ್ದ ಜಾಗವನ್ನು ಉಳಿಸಿಕೊಳ್ಳಲು ನಾವೇ ಉಳುವವರು ಎಂದು ರೆಕಾರ್ಡ್ ಮಾಡಿಸಿದ ಮೇಲೆ ನಮ್ಮ ಮನೆ ಕೆಲಸಕ್ಕೆ ಬರುವವರ ಸಂಖ್ಯೆ ಕಡಿಮೆಯಾಗುತ್ತ ಹೋಯಿತು. ಆಳಾಗಿದ್ದವರಿಗೆಲ್ಲ ಭೂಮಿ ಸಿಕ್ಕಿದ ಮೇಲೆ ನಮ್ಮಲ್ಲಿಗೆ ಬಂದು ದುಡಿಯುವ ಅನಿವಾರ್ಯತೆಯೂ ಇರಲಿಲ್ಲ. ಹಾಗೊಬ್ಬ ಹೀಗೊಬ್ಬ ನಮ್ಮ ಮನೆಯ ಮೇಲಿನ ಗೌರವದಿಂದ ಕೆಲಸಕ್ಕೆ ಬರುತ್ತಿದ್ದರು. ನಮ್ಮಪ್ಪನಿಗೆ ಈ ಯೋಚನೆ ಎಲ್ಲಿಂದ ಬಂತೋ? ಮನೆ ಮಕ್ಕಳೆಲ್ಲ ಆಳುಗಳು ಮಾಡುತ್ತಿದ್ದ ಕೆಲಸವನ್ನು ಮಾಡಬೇಕೆಂದು ತಾಕೀತು ಹಾಕಿಬಿಟ್ಟ. ನಿನ್ನಜ್ಜ ಅಂದರೆ ನನ್ನಣ್ಣ ಎಲ್ಲವನ್ನೂ ಕಲಿತ. ನಾನೋ ಮೊದಲೇ ಉದಾಸೀನದವನು. ಅಲ್ಲದೆ ಕೊನೆಯವನೆಂದು ಮನೆದೇವರ ಪೂಜೆ, ಪೂಜೆಗೆ ಹೂವು, ತುಳಸಿ ಕೊಯ್ಯುವುದು ಮಾಡಲೇಬೇಕಾದ ನಿತ್ಯಕಾರ್ಯವಾಗಿತ್ತು. ನಾನೂ ಈ ಮರ ಹತ್ತುವುದಕ್ಕಿಂತ ಇದೇ ಒಳ್ಳೆಯದೆಂದು ಇದನ್ನೇ ಮಾಡುತ್ತ ಕಾಲಕಳೆದೆ. ಅಪ್ಪ ಒಂದುದಿನ ಕರೆದು ಹೇಳಿದ ‘ನೋಡು ರಾಮ, ನೀನು ಅಡಿಕೆಮರ-ತೆಂಗಿನಮರ ಹತ್ತುವುದು, ಗೆದ್ದೆ ಉಳುವುದನ್ನು ಕಲಿಯಲೇ ಬೇಕು. ನಾನು ಸಾಯುವ ಮೊದಲೇ ಆಸ್ತಿಯನ್ನು ಹಂಚಿ ಹೋಗುತ್ತೇನೆ. ನಾಳೆ ನಿನ್ನ ಮದುವೆಯ ಅನಂತರ ನೀನು ಮತ್ತು ನಿನ್ನಣ್ಣ ಬೇರೆಬೇರೆ ಮನೆಮಾಡಿ ಉಳಿದುಕೊಂಡರೆ, ನಿನ್ನ ಮನೆ ಕೆಲಸಕ್ಕೆ ಜನವೇ ಸಿಗದೇ ಹೋದರೆ ಹೊಟ್ಟೆಗೇನು ಮಾಡುತ್ತೀಯ? ನಿನಗೆ ಹೆಚ್ಚು ಓದಿಸಿ ಪೇಟೆಯಲ್ಲಿ ಉದ್ಯೋಗ ಕೊಡಿಸುವ ಎಂದರೂ ಓದಿನಲ್ಲೂ ಹಿಂದೆ. ಇನ್ನು ವೇದಾಭ್ಯಾಸ ಮಾಡು ಎಂದು ಶಂಕರ ಭಟ್ಟರ ಬಳಿ ಕಳುಹಿದರೆ ಅದನ್ನೂ ಮುಂದುವರಿಸಲಿಲ್ಲ. ಹೀಗೇ ಇದ್ದರೆ ಯಾವ ಧೈರ್ಯದಿಂದ ನಿನಗೆ ಮುಂದೆ ಮದುವೆ ಮಾಡಿಸಲಿ?’ ಎಂದು ಹೇಳಿದ್ದರು. ಅಪ್ಪನಿಗೆ ವಯಸ್ಸಾಗುತ್ತಿದ್ದಂತೆ ಬುದ್ಧಿಭ್ರಮಣೆಯಾಗಿದೆ ಎಂದು ಈ ಮಾತುಗಳನ್ನು ನಾನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ.” ಎಂದು ಸುಮ್ಮನಾದರು.
“ಮುಂದೆ..”
“ಮುಂದೇನು? ಆ ಹುಡುಗಿಯನ್ನು ಇಷ್ಟಪಟ್ಟಿದ್ದನ್ನು ಅಪ್ಪನಲ್ಲಿ ಹೇಳಿದೆ. ಅವರು ‘ತಾನು ಹೇಳಿದ ಎಲ್ಲ ಕೆಲಸವನ್ನು ಕಲಿಯದೆ ಖಂಡಿತ ನಿನಗೆ ಮದುವೆ ಮಾಡಿಸುವುದಿಲ್ಲ’ ಎಂದು ಹೇಳಿದರು. ಆ ಹುಡುಗಿಯ ಕಣ್ಣುಗಳು ನೆನಪಾದವು. ಅವಳಿಗೋಸ್ಕರವಾದರೂ ಕೆಲಸ ಕಲಿಯಬೇಕ್ದು ನಿರ್ಧರಿಸಿದೆ. ವರ್ಷಾನುಗಟ್ಟಲೇ ಪ್ರಯತ್ನಪಟ್ಟು ತೆಂಗಿನಮರ ಹತ್ತುವುದನ್ನೂ ಕಲಿತೆ. ಅಪ್ಪ ಸಂತೋಷದಿಂದ ನನ್ನ ಮದುವೆ ಮಾಡಿಸಲು ಮುಂದಾದ. ಆದರೆ ಆ ಹುಡುಗಿಗೆ ಆಗಲೇ ಮದುವೆಯಾಗಿತ್ತು” ಎನ್ನುವಾಗ ಶರ್ಮರ ಕಣ್ಣುತುಂಬಿ ಬಂತು.
“ಆಮೇಲೆ ಏನಾಯ್ತು?”
“ಅವಳನ್ನಲ್ಲದೇ ಬೇರೆಯವರನ್ನು ಮದುವೆಯಾಗುವ ಪ್ರಶ್ನೆಯೇ ಇಲ್ಲ ಎಂದು ನಿರ್ಧರಿಸಿದ್ದ ನಾನು ಅದನ್ನು ಅಪ್ಪನಿಗೆ ನೇರವಾಗಿ ಹೇಳಿದೆ. ಆ ದಿನದಿಂದ ಅಪ್ಪ ನನ್ನ ಜೊತೆ ಮಾತನಾಡುವುದನ್ನೇ ನಿಲ್ಲಿಸಿದರು. ಏಕಾಂತವೇ ನನಗೆ ಒಂದು ಬಗೆಯ ಸುಖಕೊಟ್ಟಿತು. ಆಗಾಗ ಅವಳು ಇವತ್ತಿಗೂ ನೆನಪಾಗುತ್ತಾಳೆ. ಜೊತೆಗೆ ಅಪ್ಪನೂ ನೆನಪಾಗುತ್ತಾರೆ. ಎಲ್ಲವೂ ದೇವರಿಟ್ಟ ಹಾಗೆ..” ಎಂದು ಆಕಾಶದತ್ತ ನೋಡಿದರು.
“ಅಜ್ಜ, ಆ ಹುಡುಗಿಯ ಹೆಸರೇನಾಗಿತ್ತು?”
“ಜಾಹ್ನವಿ ಅಂತೆ, ನನಗೆ ಆಮೇಲೆ ಗೊತ್ತಾದದ್ದು. ಈ ಇಳಿ ವಯಸ್ಸಿನಲ್ಲಿ ಇದೆಲ್ಲ ನೆನಪಿಸಿಕೊಂಡು ಏನಾಗುವುದಕ್ಕಿದೆ? ಈ ಸಂಗತಿಯನ್ನು ಇಲ್ಲಿಗೆ ಬಿಡೋಣ.”
“ಇದನ್ನೂ ನಿನ್ನ ಜೀವನಚರಿತ್ರೆಯಲ್ಲಿ ಸೇರಿಸೋಣ..ಪ್ಲೀಸ್.. ಅಜ್ಜ.”
“ನಿನ್ನಿಷ್ಟ.”
“ಅಜ್ಜ, ನಿನಗೆ ನಿಜವಾಗಿಯೂ ತೆಂಗಿನಮರ ಹತ್ತಲು ಬರುತ್ತದೆಯಾ?” ಎಂದು ಕೇಳಿದ ನಗುತ್ತ.
“ಹತ್ತಲು ಬರುತ್ತದೆ, ಆದರೆ ಮರದಿಂದ ಇಳಿಯಲು ಬರುವುದಿಲ್ಲ!” ಎಂದು ನಸುನಕ್ಕರು.

***

ಎಂಟು ತಿಂಗಳುಗಳೇ ಕಳೆದಿವೆ. ಶರ್ಮರು ಆನಂದ ಮಾಸ್ತರರೊಂದಿಗೆ ತಮ್ಮ ಜೀವನಚರಿತ್ರೆಯ ಬಗ್ಗೆ ಅದು-ಇದು ಚರ್ಚಿಸುತ್ತ, ಪಾರ್ಥಸಾರಥಿಯ ಜೊತೆಗೆ ಕುಳಿತು ದಿನವೂ ಬರೆಯುತ್ತ ಬರೆಯುತ್ತ ಕೊನೆಯ ಹಂತವನ್ನು ತಲುಪಿದ್ದರು.
“ಮಗ, ಇಲ್ಲಿಗೆ ಮುಗಿಯಿತು. ಇನ್ನು ಪ್ರಕಟನೆಗೆ ಕೊಡಬೇಕು.”
ಪಾರ್ಥಸಾರಥಿ ಪ್ರಶ್ನಾರ್ಥಕವಾಗಿ ಅಜ್ಜನನ್ನೇ ನೋಡಿದ.
ಇದನ್ನು ಗಮನಿಸಿದ ಶರ್ಮರು “ಏನಾಯಿತು? ಇಲ್ಲಿಯತನಕ ಬೇಕಾದಷ್ಟು ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದುಕೊಂಡಿದ್ದೀಯಾ. ಈಗ ಮತ್ತೆನಾದರೂ ಪ್ರಶ್ನೆ ಹುಟ್ಟಿತಾ?” ಎಂದರು
“ಹೌದು. ಆನಂದ ಮಾಸ್ತರರು ಇಲ್ಲಿಗೆ ಬಂದು ಹತ್ತು ವರ್ಷಕ್ಕೂ ಹೆಚ್ಚಿಗೆಯಾಯಿತು. ನಿಮಗೆ ತುಂಬಾ ಆತ್ಮೀಯರೂ ಕೂಡ. ನನಗೆ ಗೊತ್ತಿರುವಂತೆ ಒಮ್ಮೆ ಮಾತ್ರ ಅವರ ಮನೆಗೆ ಹೋಗಿದ್ದೀರಿ. ಆದರೆ ಎಲ್ಲರ ಮನೆಗೂ ಆಗಾಗ ಹೋಗಿ ಹರಟೆ ಹೊಡೆದು ಬರುವ ನೀವು ಆನಂದ ಮಾಸ್ತರರ ಮನೆಗೆ ಮಾತ್ರ ಮತ್ತೆ ಹೋದದ್ದಿಲ್ಲ. ಒಮ್ಮೆ ಅವರಿಗೆ ಜ್ವರ ಬಂದು ಮಲಗಿದಾಗಲೂ ನಾವೆಲ್ಲ ಹೋಗಿ ಮಾತನಾಡಿಸಿ ಬಂದರೂ ನೀವು ಅಲ್ಲಿಗೆ ಹೋದವರಲ್ಲ. ಇದು ಯಾಕೆ? ಎಂಬುದು ನನ್ನ ಪ್ರಶ್ನೆ.”
“ಅದನ್ನು ಲೇಖಕರ ಮಾತಿನಲ್ಲಿ ಬರೆಯುತ್ತೇನೆ. ಇಲ್ಲಿ ಅದರ ಅಗತ್ಯವಿಲ್ಲ. ನೀನೂ ಉತ್ತರಕ್ಕಾಗಿ ಅಲ್ಲಿಯತನಕ ಕಾಯಬೇಕು”
“ಸರಿ, ಹಾಗೇ ಮಾಡಿ. ಆದರೆ ಲೇಖಕರ ಮಾತನ್ನು ಟೈಪ್ ಮಾಡುವುದು ಬೇಡ, ಅದು ನಿಮ್ಮ ಹಸ್ತಾಕ್ಷರದಲ್ಲಿಯೇ ಇರಲಿ. ನಿಧಾನವಾಗಿ, ಚೆಂದವಾಗಿ ಬರೆಯಿರಿ” ಎಂದು ತನ್ನ ಪ್ರಶ್ನೆಗೆ ಉತ್ತರ ಸಿಕ್ಕೀತು ಎಂಬ ಭರವಸೆಯೊಂದಿಗೆ ಹೊರಟ.

***

“ಅಜ್ಜ, ಲೇಖರ ಮಾತನ್ನು ಇನ್ನೂ ಬರೆದಿಲ್ಲವಾ? ನಾಡಿದ್ದೇ ಪುಸ್ತಕ ಬಿಡುಗಡೆ ಸಮಾರಂಭ. ಒಂದು ಹತ್ತು ಪುಸ್ತಕವನ್ನಾದರೂ ಮಾಡಿಕೊಡಿ ಎಂದಿದ್ದೆ. ಲೇಖಕರ ಮಾತನ್ನು ಬೇರೆಯೇ ಮುದ್ರಿಸಿ ಅಂಟಿಸಿದರಾಯಿತು ಎಂದಿದ್ದೆ. ನೀವು ಇವತ್ತೇ ಬರೆದು ಕೊಡಿ. ನಾಳೆಯೇ ಹತ್ತು ಪುಸ್ತಕವನ್ನು ತಂದು ಬಿಡುಗಡೆಗೆ ಸಿದ್ಧಮಾಡಿಕೊಳ್ಳಬೇಕು” ಎಂದು ದಡಬಡಾಯಿಸಿದ.

“ಸರಿ, ಇವತ್ತು ರಾತ್ರಿ ಕುಳಿತು ಬರೆದು ನಾಳೆ ಕೊಡುತ್ತೇನೆ” ಎಂದು ಶರ್ಮರು ಭರವಸೆ ನೀಡಿದರು.

***

ಮರುದಿನ ಬೆಳಗ್ಗೆ ಪಾರ್ಥಸಾರಥಿ ಅಜ್ಜನ ಕೋಣೆಗೆ ಹೋದ. ಅಜ್ಜ ಬರೆದ ಲೇಖಕರ ಮಾತು ಅಲ್ಲೇ ಟೇಬಲ್ಲಿನ ಮೇಲಿತ್ತು. ಶರ್ಮರು ಇನ್ನೂ ಮಲಗಿಯೇ ಇದ್ದರು.
ಮೊದಲು ತನ್ನ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತ ಅದನ್ನು ಓದಲು ತೊಡಗಿದ.
“ಮೊಮ್ಮಗ ಕೇಳಿದ್ದ ‘ನೀವ್ಯಾಕೆ ಆನಂದ ಮಾಸ್ತರು ತುಂಬಾ ಆತ್ಮೀಯರಾದರೂ ಅವರ ಮನೆಗೆ ಯಾಕೆ ಹೋಗುವುದಿಲ್ಲ?’ ಎಂಬುದಾಗಿ. ಅಲ್ಲಿ ನನಗೊಬ್ಬನಿಗೇ ಗೊತ್ತಿರುವ ಸತ್ಯವಡಗಿದೆ. ಆನಂದ ಮಾಸ್ತರರ ಹೆಂಡತಿ ಬೇರೆ ಯಾರೂ ಅಲ್ಲ; ಅದೇ ನಾನು ಪ್ರೀತಿಸಿದ್ದ ಶುಭ್ರ ಕಣ್ಣಿನ ಚೆಲುವೆ ಜಾಹ್ನವಿ. ಅವಳನ್ನು ನೋಡಿದರೆ ಮತ್ತೆ ಮನಸ್ಸು ಕೆಡುತ್ತದೆಂಬ ಕಾರಣಕ್ಕೆ ಮಾಸ್ತರರ ಮನೆಗೆ ಹೋಗುತ್ತಿಲ್ಲ. ನನ್ನ ಕಥೆಯಲ್ಲಿ ಎಲ್ಲವೂ ಅಲ್ಪವಿರಾಮದಂತಿದೆ ಎಂಬುದು ನನ್ನ ಮೊಮ್ಮಗನ ಮತ್ತೊಂದು ಅಪವಾದ. ನನ್ನ ಬದುಕಿನ ಪ್ರತಿಕ್ಷಣವೂ ಅಲ್ಪವಿರಾಮವೇ. ಪೂರ್ಣವಿರಾಮ ಎಲ್ಲಿಯೂ ಇಲ್ಲ. ಇವತ್ತು ಈ ಕಥೆ ಮುಗಿದಿದೆ. ನಾಳೆಯೇ ಬಿಡುಗಡೆ. ಬಿಡುಗಡೆಯ ಸಂಭ್ರಮ. ಈಗ ಪೂರ್ಣವಿರಾಮವಿಡುವ ಸಮಯ.” ಎಂದು ಬರೆದು ದೊಡ್ಡದಾಗಿ ಪೂರ್ಣವಿರಾಮವನ್ನಿಟ್ಟಿದ್ದರು.

ಮತ್ತಷ್ಟು ಸುದ್ದಿಗಳು

Latest News

ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ: ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ, ತನಿಖೆಗೆ ಆಗ್ರಹ

newsics.com ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡವಿದೆಯಾ ಎಂಬ ಸಂಶಯವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ದುರಂತವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...
- Advertisement -
error: Content is protected !!