- ಕಾವ್ಯ ಬೈರಾಗಿ
response@134.209.153.225
“ಅಪ್ಪಯ್ಯ ಇಷ್ಟ್ ಬೇಗ ಮದಿ ಬ್ಯಾಡ..ನಂಗಿಷ್ಟ ಇಲ್ಲ..! ಈಗ ಅಷ್ಟೇ ಓದಿ ಆದ್ದ್.. ನಾನ್ ಜ್ವಾಬ್ ಮಾಡ್ಕ್..! ಅದೆಲ್ಲದಕ್ಕಿಂತ ಹೆಚ್ಚ್..ನಂಗೆ ಮದಿ ಇಷ್ಟ ಇಲ್ಲ..! ನಂಗೆ ಮದಿ ಮಾಡ್ಸುಕ್ ಕಂಡ್ರೆ..ಎತ್ತಾರು ಹ್ವಾತಿರ್ತೆ ಅಷ್ಟೇ.. ನೀವ್ ಎಂಥ ಕಂಡ್ ಮಾಡ್ಕಣಿ..” ಎಂದು ಪ್ರಣತಿ ಅಕ್ಕ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳು.
ಆಕೆಯ ಧ್ವನಿ ಎಂದಿನಂತಿರಲಿಲ್ಲ. ಅವಳ ಮುಖ ಕೆಂಪುಗಟ್ಟಿತ್ತು.
ಅಪ್ಪಯ್ಯ ಎಲೆ ಅಡಿಕೆ ಜಗಿಯುತ್ತಿದ್ದವರು..ತುಟಿಗಳೆರಡನ್ನು ಮುಂದೆ ಮಾಡಿ ವೀಳ್ಯದೆಂಜಲುಗಿದು.. “ಪ್ರಣತಿ… ಎಂಥಾ ಆಯ್ತ್ ಹಂಗಾರೆ.. ನಾನೇನ್ ಜ್ವಾಬ್ ಮಾಡುದ್ ಬ್ಯಾಡ ಅಂದಿನಾ..? ಅಷ್ಟಕ್ಕೂ, ಮದಿ ನಂಗೆ ಇಷ್ಟ ಇಲ್ಲ ಅಂಬುಕೆ ಎಂಥ ಆಯ್ತ ಹಂಗಾರೆ..?” ಎಂದು ರೂಮಿನ ಬಾಗಿಲ ಬಳಿಯಲ್ಲೇ ನಿಂತು, ದಾರಂದಕ್ಕೆ ತನ್ನ ಬಲಗೈಯನ್ನು ಒರಗಿಸಿ, ಎಡಗೈಯಿಂದ ಪಂಚೆ ಮೇಲಕ್ಕೆ ಎತ್ತಿ ಹಿಡಿದು ಕೇಳುತ್ತಿದ್ದ ದೃಶ್ಯ ಇಂದಿಗೂ ನನ್ನ ಕಣ್ಮುಂದೆಯೇ ಇದೆ.
ಅಕ್ಕನ ಉತ್ತರ ಬರಲಿಲ್ಲ.
ಬಿಕ್ಕಿ ಬಿಕ್ಕಿ ಅಳುತ್ತಿದ್ದ ಆರ್ತದನಿ ಮಾತ್ರ ರೂಮಿನ ಬಾಗಿಲನ್ನು ದಾಟಿ ಹೊರ ಬರುತ್ತಿತ್ತು.
“ಅಕ್ಕಾ… ಎಂಥಾ ಆಯ್ತ್, ಮರೆತಿ..? ಹಂಗಾರೆ ನೀನ್ ಮದಿ ಆತಿಲ್ಯಾ..? ವರ್ಷ 25 ಆಯ್ತ್..ಜ್ವಾಬ್ ಜ್ವಾಬ್ ಅಂದೆಳಿ ಮನೆಗೆ 2-3 ವರ್ಷ ಕೂಕಂಡೆ..! ವಯ್ಸಿಗ್ ಬಂದದ್ ಹೆಣ್ ಮನೆಂಗೆ ಕೂಕಂಡ್ರೇ.. ಜನ ಅಪ್ಪಯ್ಯಂಗೆ ಹ್ಯಾಂಗ್ ಮಾತಾಡ್ಕಂತಿಲ್ಲ ಹೇಳ್…ಚೂರ್ ಆಲೋಚ್ನಿ ಮಾಡ್ ಅಕ್ಕಾ..” ನಾನಂದೆ. ಅಪ್ಪಯ್ಯ ನನ್ನನ್ನೇ ನೋಡುತ್ತಿದ್ದರು.
‘ಇರ್ಲಿ ಬಿಡ್ ತಿಲಕ…ಅವ್ಳಿಗ್ ಗೊತ್ತಾತ್’. ಅಪ್ಪಯ್ಯ ನನ್ನ ಬೆನ್ನು ಮೇಲೆ ಕೈಯಿಟ್ಟು ತಲೆ ಅಲ್ಲಾಡಿಸಿದರು, ಅಲ್ಲಿಂದ ಆಚೆಗೆ ಕರೆದುಕೊಂಡು ಹೋದರು.
ಒಮ್ಮೆ ರೂಮಿನತ್ತ ಹಿಂತಿರುಗಿ ನೋಡಿದೆ. ಬಾಗಿಲು ತೆರೆದಿರಲಿಲ್ಲ.
ಅಕ್ಕನ ಬಿಕ್ಕು ನಿಧಾನವಾಗಿ ಕೇಳಿಸುತ್ತಿತ್ತು.
ಎಂದೂ ಅಕ್ಕನ ಬಗ್ಗೆ ಮಾತಾಡಿದವಳಲ್ಲ ನಾನು. ಆ ಕ್ಷಣ ಏನಾಯ್ತೋ ಗೊತ್ತಿಲ್ಲ. ಬೈದ್ಬಿಟ್ಟೆ.
ನೋವು ಆ ಹೊತ್ತಿಗೆ, ನಮ್ಮ ಮನೆಗೆ ಮನರಂಜನೆಯಾಗಿತ್ತು..!
ನಾನೂ ಗೊಡೆಗೊರಗಿ ಅಳುತ್ತಾ ಕುಸಿದು ಬಿದ್ದೆ.
ಅಪ್ಪನೋ, ಹಣೆಗೆ ಕೈಯಿಟ್ಟು ಕುಳಿತು ಮರುಗತೊಡಗಿದ್ದರು.
ಅಮ್ಮನ ಫೋಟೋ ಗೋಡೆಗಂಟಿತ್ತು…!
ನಾನು ಆಗ ಎಮ್‍ಎಸ್‍ಸಿ ಇನ್ ಸೈಕಾಲಜಿ ಮುಗಿಸಿದ್ದಷ್ಟೇ.
ಸರಿಸುಮಾರು ಒಂದು ವಾರ ನನ್ನಕ್ಕ ನನ್ನಲ್ಲಾಗಲಿ, ಅಪ್ಪನÀಲ್ಲಾಗಲಿ ಮಾತಾಡಿಸಲೇ ಇಲ್ಲ. ಕೆಲವು ದಿನಗಳಾದ ಮೇಲೆ ನಾನೇ ಅಕ್ಕನನ್ನು ಮಾತಾಡಿಸಿದೆ. ಮದ್ವೇ ಯಾಕೆ ಬೇಡ ಅಂತ ಹೇಳ್ತಿದ್ದೀಯಾ..? ಅಂತ ಪ್ರಶ್ನಿಸಿದೆ.
ನೋ ರೆಸ್ಪಾನ್ಸ್.
ನನಗೆ ಗೊತ್ತಾಯ್ತು. ಹೀಗೆ ಮಾತಾಡಿದ್ರೆ ರೆಸ್ಪಾನ್ಸ್ ಮಾಡಲ್ಲ ಅಂತ. ಅವಳಿಗೆ ಸರಿಹೋಗುವಂತೆ ಮಾತಾಡುತ್ತಾ, ಮಾತಾಡುತ್ತ ಅವಳ ಒಳಭಾವನೆಯನ್ನ ತಿಳಿದುಕೊಳ್ಳುವುದಕ್ಕೆ ಪ್ರಯತ್ನ ಮಾಡ್ದೆ.
ನನಗೆ ಅಕ್ಕ ಉತ್ತರಿಸಿಸೋದಕ್ಕೆ ಸ್ಟಾರ್ಟ್ ಮಾಡಿದ್ಳು.
ತಿಲಕ, ನನ್ಗೆ ಗೊತ್ತಿಲ್ಲ. ನನ್ಗೆ ಮದ್ವೆ ಅಂದ್ರೆ ಭಯ. ಸಂಸಾರ, ಸೆಕ್ಸ್ ನನ್ಗೆ ಇಷ್ಟವಿಲ್ಲ. ನಾನು ಹೀಗೆ ತುಂಬಾ ಖುಷಿಯಾಗಿದ್ದೇನೆ. ನನ್ಗೆ ಮದ್ವೆ ಬೇಡ. ಅಕ್ಕ ಹೇಳಿದ್ಲು.
ನನ್ಗೆ ಅದಾಗ್ಲೆ ಗೊತ್ತಾಗಿತ್ತು, ಶೀ ಹ್ಯಾಸ್ ಎರೋಟೋಫೋಬಿಯಾ.
***
ಮಿಸ್ಟರ್ ಚೇತನ್, ಯುವರ್ ವೈಫ್ ಹ್ಯಾಸ್ ಎರೋಟೋಫೋಬಿಯಾ ನಾನಂದೆ.
ಮೇಡಂ, ನನ್ಗೆ ಏನ್ ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ, ನೀವು ಹೇಳ್ತಿರೋದು ನನಗೇನೂ ಅರ್ಥವಾಗ್ತಿಲ್ಲ. ಚೇತನ್ ಹೇಳಿದ್ರು.
ಸಾಮಾನ್ಯವಾಗಿ ಎಲ್ಲರೂ ಎದುರಿಸುವ ಭಯಗಳಲ್ಲಿ ಇದೂ ಕೂಡ ಒಂದು. ಎರೋಟೋಫೋಬಿಯಾ ಅಂದ್ರೆ ನಥಿಂಗ್ ಬಟ್ ಸೆಕ್ಸ್ ಭಯ. ಈ ಭಯ ಇರುವವರು ಮಿಲನ ಕ್ರಿಯೆಗೆ ಸಂಬಂಧಿಸಿದ ಎಲ್ಲಾ ಕ್ರಿಯೆಗಳನ್ನು ನೆಡೆಸಲು ಭಯ ಪಡ್ತಾರೆ. ನನ್ನಕ್ಕನೂ ಹಾಗೆ, ನಿಮ್ಮ ವೈಫ್ ಅವರದ್ದು ಮದ್ವೆ ಆದ್ಮೇಲಿನ ಕಥೆ. ಆದ್ರೇ ನನ್ನಕ್ಕ ಇದೇ ಒಂದೇ ಒಂದು ಭಯಕ್ಕೆ ಮದ್ವೆನೇ ಆಗೋದಿಲ್ಲ ಅಂತ ಕೂತಿದ್ಲು. ನನ್ನಪ್ಪ ಈ ಬಗ್ಗೆ ತುಂಬಾ ಟೆನ್ಸ್ ಆಗಿದ್ರು. ಹೇಳಿಕೇಳಿ ಹಳ್ಳಿಯಲ್ಲಿ ಬೆಳೆದವರು ನಾವು. ಅಲ್ಲಿನ ಜನ ನನ್ನಪ್ಪನ ಬಗ್ಗೆ, ಅಕ್ಕನ ಬಗ್ಗೆ ಬೇರೆ ರೀತಿಯಲ್ಲೇ ಮಾತಾಡೊದಕ್ಕೆ ಸ್ಟಾರ್ಟ್ ಮಾಡಿದ್ರು. ವಿವರಿಸುತ್ತಾ ಹೇಳಿದೆ.
ಚೇತನ್ ತಲೆದೂಗಿಸಿದರು.
ನೋ ನೀಡ್ ಟು ವರಿ. ನಾನಂದೆ.
ಗಟ್ಟಿಕಟ್ಟಿದ ಚೇತನ್ ಮುಖ ಸ್ವಲ್ಪ ಸಡಿಲಗೊಂಡಿತು.
ಮೇಡಂ, ನಾವಿಬ್ರು ಮದ್ವೆ ಆಗಿ ಸರಿಸುಮಾರು ಒಂದು ವರ್ಷ ಆಗ್ತಾ ಬಂತು. ಆದ್ರೂ ಇನ್ನೂ ಕೂಡ ನಾವು ಸೆಕ್ಸ್ ಮಾಡಿಲ್ಲ. ಅವಳನ್ನ ಬಲವಂತ ಮಾಡೋದಕ್ಕೂ ನನಗೆ ಇಷ್ಟವಿಲ್ಲ. ನಾವಿಬ್ರೂ ಇಷ್ಟಪಟ್ಟು ಮದ್ವೆ ಆಗಿದ್ದೇವೆ. ಸೆಕ್ಸ್ ನ್ಯಾಚುರಲ್ ಆಗಿ ಇರೋದು ಅದಕ್ಕೆ ಯಾಕಿಷ್ಟು ಭಯ ಅಂತ ಕೇಳಿದ್ರೆ..ನನಗೆ ಅದರ ಬಗ್ಗೆ ಇಷ್ಟ ಇಲ್ಲ ಅಂತಾನೇ ಹೇಳ್ತಾಳೆ. ಮಗು ಬೇಕು ಅಂತಾಳೆ. ಸೆಕ್ಸ್ ಬೇಡ ಅಂತಾಳೆ. ಚೇತನ್ ಈ ಮೊದಲೇ ಹೇಳಿದ್ದನ್ನು ಮತ್ತೆ ಮತ್ತೆ ಹೇಳ್ತಿದ್ರು.
ಮದ್ವೆ ಆಗಲ್ಲ ಅಂತ ಕೂತಿದ್ದ ನನ್ನ ಅಕ್ಕನನ್ನೇ ಕೌನ್ಸಿಲರ್ ಆಗದೇ ಇರುವಾಗಲೇ ತಿಳಿಹೇಳಿ ಸರಿ ಮಾಡ್ಸಿದ್ದೇನೆ. ಆಗ ಅಕ್ಕನಿಗೆ ಒಂದು ಮಗುವಿದೆ. ಫ್ಯಾಮಿಲಿ ಜತೆ ಸುಖವಾಗಿದ್ದಾಳೆ. ನಿಮ್ಮ ಹೆಂಡತಿಯ ಸಮಸ್ಯೆ ಸರಿ ಮಾಡೋದಕ್ಕೆ ಆಗ್ದೆ ಇರೋ ಸಮಸ್ಯೆ ಅಲ್ಲ ಚೇತನ್. ನಾನು ಹೇಳಿದೆ.
ಓಪನ್ ಆಗಿ ಚೇತನ್ ಎಲ್ಲವನ್ನೂ ವಿವರಿಸುತ್ತಿರುವುದನ್ನು ನಾನು ಗಮನಿಸಿದೆ.
ಬಯಕೆ ಯಾರಿಗಿಲ್ಲ ಹೇಳಿ. ಅಕ್ಕನೂ ನನ್ನಲ್ಲಿ ಹೀಗೆ ಹೇಳ್ತಿದ್ಲು. ಮದ್ವೆ ಆದ್ಮೇಲೂ ಕೂಡ. ಅದೆಷ್ಟೋ ಭಾರಿ ಫೋನ್ ಕಾಲ್ ಮಾಡಿ ‘ತಿಲಕ, ನನಗೆ ಇದೆಲ್ಲಾ ಹಿಂಸೆ ಅನ್ಸುತ್ತೆ, ನನ್ಗೆ ಭಯ ಆಗುತ್ತೆ. ಮಗು ಬೇಕು, ಆದ್ರೆ ಸೆಕ್ಸ್ ಭಯ ಆಗ್ತಿದೆ.’ ಅಂತ ಹೇಳಿಕೊಳ್ಳುತ್ತಿದ್ದಳು.
ಹಾಗೆ ನೋಡೋದಾದ್ರೆ ಇದು ಡಿಫರೆಂಟ್ ಕೇಸ್ ಆದ್ರೂ ಸೇಮ್ ಕೇಸ್ ಅನ್ಸ್ತು.
ಚೇತನ್, ಈ ಸಮಸ್ಯೆ ಸರಿಪಡ್ಸೋದಕ್ಕೆ ಆಗುತ್ತೆ. ಬಟ್ ಸ್ವಲ್ಪ ಟೈಮ್ ತಗೊಳ್ಳುತ್ತೆ. ನೋ ನೀಡ್ ಟು ವರಿ. ನಾನಂದೆ.
ಹೀಗಿರುವವರಿಗೆ ಸೆಕ್ಸ್ ಬೇಡವೇ ಬೇಡ ಅಂತ ಅರ್ಥ ಅಲ್ಲ. ಸೆಕ್ಸ್ ಅಂತ ಬಂದಾಗ ಮಾತ್ರ ಇದು ಹಿಂಸೆ ಅನ್ಸುತ್ತೆ, ಕಿರಿಕಿರಿ ಅನ್ಸುತ್ತೆ. ಹಗ್ಗಿಂಗ್, ಕಿಸ್ಸಿಂಗ್ ಎಲ್ಲದಕ್ಕೂ ಇಷ್ಟಪಟ್ಟರೂ ಕೂಡ..ಸೆಕ್ಸ್‍ಗೆ ಮಾತ್ರ ಮುಂದಾಗುವುದಿಲ್ಲ. ಈ ಸೆಕ್ಸ್ ಫೀಯರ್‍ನ್ನು ದೂರ ಮಾಡೋದಕ್ಕೆ ಕೆಲವು ಥೆರಪಿಗಳಿವೆ…ಕಾಗ್ನೇಟಿವ್ ಬಿಹೇವಿಯರ್ ಥೆರಪಿ, ಗ್ರೂಪ್ ಥೆರಪಿ, ಎನರ್ಜಿ ಸೈಕಾಲಾಜಿ ಇವೆಲ್ಲಾ ಇವೆ. ಇವೆಲ್ಲಾ ಮಾಡ್ಬೇಕಂದ್ರೆ ನೀವಿಬ್ರು ಜೊತೆಗೆ ಬರ್ಬೇಕು. ನಾನು ಮಾತಾಡ್ಬೇಕು. ಅಂತಂದೆ.
ಹಾ ಮೇಡಂ. ಚೇತನ್ ನನ್ನ ಮಾತಿಗೆ ಒಪ್ಪಿದ್ರು.
ಯಾಕೆ ಹೀಗಿನ ಭಯ ಮೇಡಂ..? ಚೇತನ್ ನನ್ನನ್ನ ಮತ್ತೆ ಪ್ರಶ್ನಿಸಿದ್ರು.
ಚೇತನ್, ಇದಕ್ಕೆ ಪ್ಯಾರಾಫೋಬಿಯಾ ಅಂತಲೂ ಕರೆಯುತ್ತಾರೆ. ಲೈಂಗಿಕ ಸಂಪರ್ಕ ಮಾಡುವುದಕ್ಕೆ ತುಂಬಾ ಭಯ ಪಡ್ತಾರೆ. ಈ ಭಯ ತನ್ನಿಂದ ತಾನಾಗಿಯೇ ಕಲ್ಪಿಸಿಕೊಂಡು ಬಂದಿದ್ದಿರಬಹುದು ಅಥವಾ ಯಾವುದೋ ಘಟನೆಯಿಂದ ಮೆಂಟಲಿ ಡಿಸ್ಟರ್ಬ್ ಆಗಿ ತನ್ನನ್ನು ತಾನೇ ಭಯಕ್ಕೆ ಒಳಪಡಿಸಿಕೊಳ್ಳುವುದು ಹೌದು. ಇಂತವರು ಒಂದು ರೀತಿಯಲ್ಲಿ ಅವ್ಯಕ್ತ ನೋವು ಅನುಭವಿಸುವವರು. ಇನ್ನೊಬ್ಬರನ್ನು ಸ್ಪರ್ಶಿಸುವುದಕ್ಕೂ ಭಯ ಪಡ್ತಾರೆ. ಅಂತಂದೆ.
ಎಸ್ ಮೇಡಂ ಯು ಆರ್ ರೈಟ್…! ಚೇತನ್ ಹೇಳಿದ್ರು.
ಅವರ ಪ್ರತಿಕ್ರಿಯೆಯಲ್ಲಿ ಅನುಭವವನ್ನು ಗಮನಿಸಿದೆ.
ಲೈಫ್ ಪಾರ್ಟ್‍ನರ್‍ಗೆ ತನ್ನ ದೇಹದ ಸ್ಟ್ರಕ್ಚರ್ ಇಷ್ಟವಾಗದೇ ಇರಬಹುದು ಎಂಬ ಭಯವೂ ಕೂಡ ಇರುತ್ತೆ ಚೇತನ್. ಅಂತಂದೆ.
ಬೆರಗು ಕಣ್ಣಿಂದ ನನ್ನನ್ನು ಚೇತನ್ ನೋಡಲಾರಂಭಿಸಿದರು.
ನಿಮ್ಗೇನೂ ನಿಮ್ಮ ಹೆಂಡತಿ ಮೇಲೆ ಅನುಮಾನವಿಲ್ವಲ್ಲ..!? ಪ್ರಶ್ನಿಸಿದೆ.
ತಬ್ಬಿಬ್ಬಾಗಿ, ಇಲ್ಲಾ ಮೇಡಂ… ಅನುಮಾನ ಇದ್ದಿದ್ರೆ ನಿಮ್ಮಲ್ಯಾಕೆ ಬರ್ತಿದ್ದೆ ಮೇಡಂ.. ಖಂಡಿತಾ ಇಲ್ಲ. ಚೇತನ್ ಉತ್ತರಿಸಿದ್ರು.
ಸೊಸೈಟಿಯಲ್ಲಿ ಏನಂದ್ರೇ, ಕಾಮ ಬಯಕೆ ಬಯಸಿ ಹೆಣ್ಣು ತನ್ನ ಗಂಡನಲ್ಲಿ ಬಂದ್ರೆ ಅವಳನ್ನ ಅಸಭ್ಯಳೆಂದು, ಸೆಕ್ಸ್ ನಿರಾಕರಿಸಿದ್ರೆ ಅವಿಧೇಯಳೆಂದು, ಮೋಸ ಮಾಡ್ತಿದ್ದಾಳೆ ಎನ್ನುವ ಹಾಗೆ ಟ್ರೀಟ್ ಮಾಡ್ತಾರೆ. ಆ ಥರದ ಭಾವನೆಗಳೇನೂ ಇಲ್ವಲ್ಲ…! ನಾನು ಚೇತನ್‍ನ್ನು ಮರುಪ್ರಶ್ನಿಸಿದೆ.
ಖಂಡಿತವಾಗಿಯೂ ಇಲ್ಲ ಮೇಡಂ. ನಂಬಿಕೆ ಇಲ್ಲದೇ ಮದ್ವೆ ಆಗ್ತೀನಾ..? ನಾನು ಬಯಸಿದಂತೆ ಅವಳು ‘ಸಹಕರಿಸುವುದು’ ಪ್ರೀತಿ, ಸಂಬಂಧ ಅಲ್ಲ ಎನ್ನುವ ಅರಿವು ಇರುವುದರಿಂದಲೇ ನಿಮ್ಮಲ್ಲಿ ಸೊಲ್ಯುಶನ್ ಕೇಳೋದಕ್ಕೆ ಬಂದಿರೋದಲ್ವಾ ಮೇಡಂ. ಅವಳಿಗಿಷ್ಟವಿಲ್ಲದೇ ಸೇರುವುದು ಅವಳ ಮೇಲೆ ಮಾಡುವ ದಾಳಿ ಅಲ್ವಾ, ಅವಳ ಮನಸ್ಸಿನ ಮೇಲೆ ಮಾಡುವ ದಾಳಿ ಅಲ್ವಾ..? ಅದರ ಬಗ್ಗೆ ಅರಿವಿದೆ ಮೇಡಂ. ಚೇತನ್ ನನ್ನ ಪ್ರಶ್ನೆಗೆ ಪುನಃ ಪ್ರಶ್ನಿಸಿದರು.
ಚೇತನ್ ಮಾತಿನಲ್ಲಿ ಮುಕ್ತತೆ ನನಗೆ ಎದ್ದು ಕಾಣುತ್ತಿತ್ತು. ನಿಮ್ಮಿಬ್ಬರನ್ನೂ ಮಾತಾಡಿಸಬೇಕಂದೆ.
ಸರಿ ಮೇಡಂ. ಖಂಡಿತ ಬರುತ್ತೇವೆ ಎಂದರು.
ಆ ಸಂದರ್ಭದಲ್ಲಿ, ಯಾವ ಕೌನ್ಸಿಲರ್ ಕೂಡ ಬದುಕಿನ ಸಂಬಂಧಗಳ ಬಾಂಧವ್ಯದ ಬಯಕೆ ಪೂರೈಕೆಗಳಿಗೆ ಸಲಹೆ ನೀಡಲಾರ ಎಂದೆನ್ನಿಸಿದ್ದು ನಿಜ.