Thursday, February 2, 2023

ಕರುಳ ಬಳ್ಳಿಯೆ ಉರುಳಾಗಿ…

Follow Us

  • ಅಂಬ್ರೀಶ್ ಎಸ್ ಹೈಯ್ಯಾಳ್
    response@134.209.153.225

ಮೊನ್ನೆ ದಸರಾ ಹಬ್ಬಕ್ಕೆ ಬನ್ನಿ ಕೊಡಲು ಶಾಂತಕ್ಕನ ಮನೆ ಒಳ ಹೊಕ್ಕಾಗ ಗಾಡಕತ್ತಲು ಆವರಿಸಿತ್ತು. ಶಾಂತಕ್ಕ ಶಾಂತಕ್ಕ ” ಎಂದು ಎರಡೂ ಮೂರು ಬಾರಿ ಕೂಗಿದಾಗಲೆ “ಬಾರಪ್ಪ ಗುರು ” ಎಂದು ತಡವರಿಸಿ ಎದ್ದಿದ್ದಳು. ಮೂಲೆಲಿ ಹಚ್ಚಿಟ್ಟಿದ್ದ ದೀಪ ಆಗಲೇ ಎಣ್ಣೆ ಹೀರಿಕೊಂಡು ಶಾಂತವಾಗಿತ್ತು. “ನಾವು ನೀವು ಬಂಗಾರಾಗಿರೋಣ ಶಾಂತಕ್ಕ” ಎಂದು ಕಾಲಿಗೊರಗಿದೆ ” ನನ್ನ ಮನಸ್ಸೆ ಕಲ್ಲಿನಂತಾದಾಗ ಯಾವ ಬಂಗಾರ ತೊಗೊಂಡು ಏನು ಮಾಡ್ಲಿಪಾ ಗುರು, ಕುಸುಮ ನನ್ನ ಪಾಲಿಗೆ ಸತ್ತು ಇವತ್ತಿಗೆ ತಿಂಗಳಾಯಿತು ನೋಡು” ಅಂದಾಗ ನನ್ನ ಬಳಿ ಮಾತಿರಲಿಲ್ಲ. ಏನು ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ. ಒಟ್ಟಿನಲ್ಲಿ ಹಬ್ಬಗಳೆಂದರೆ ಸಂಭ್ರಮಗಳಾಗಬೇಕಲ್ಲವೇ? ಇಂತಹ ಸಂಭ್ರಮಗಳು ಜೀವನ ಜಂಜಾಟದ ಕಷ್ಟಕೋಟಲೆಗಳಿಗೆ ಮುಲಾಮು ಆಗಬಹುದು ಮತ್ತು ಆ ಸಂತಸ ಕ್ಷಣಗಳೇ ನಮ್ಮನ್ನು ಸಂತೈಸುತ್ತವೆ. ಆ ಬಗ್ಗೆಯೆ ತಿಂಗಳಾದರು ಚಿಂತಿಸುತ್ತಾ ಕೂತರೆ ಬರುವ ಫಲವಾದರು ಏನೆಂದು ನನಗೆ ಅನಿಸದೆ ಇರಲಿಲ್ಲ. ಇಡೀ ಊರಿಗೆ ಊರೇ ಕುಸುಮ ಓಡಿ ಹೋಗಿರುವ ಸುದ್ದಿ ಗುಲ್ಲಾಗಿರುವಾಗ ನನಗೆ ಗೊತ್ತಿಲ್ಲವೆಂಬಂತೆ ಮುಖವಾಡ ಧರಿಸಿ ನಟನೆ ಮಾಡುವುದು ಸರಿಯೆನಿಸಲಿಲ್ಲ. “ಹೆತ್ತು ಹೊತ್ತು ಸಾಕಿದ ಅವಳಿಗೆ ನಿನ್ನ ಮೇಲೆ ಪ್ರೀತಿಯನ್ನು ದಿಕ್ಕರಿಸಿ ಹೋದ ಮೇಲೆ ನೀನ್ಯಾಕೆ ಅವಳ ಬಗ್ಗೆ ಯೋಚಿಸುತ್ತಾ ಕೊರಗುವೆ” ಎಂದೆ. ಅಷ್ಟಕ್ಕೆ ಸುಮ್ಮನಾದಳು. ಮನೆಯಿಂದ ಹೊರಡುವಾಗ ಶಾಂತಕ್ಕನಿಗೂ ಮತ್ತು ಆ ಮನೆಯ ಮೂಲೆಲಿದ್ದ ಚಿಮಣಿಬುಡ್ಡಿಗು ಅಷ್ಟೇನು ವ್ಯತ್ಯಾಸವೆನಿಸಲಿಲ್ಲ. ದೀಪದೊಳಗಿನ ಬತ್ತಿಯಂತೆ ಕಷ್ಟಗಳನ್ನು ಎಳೆಎಳೆಯಾಗಿ ನುಂಗಿ ಮನೆ ಮಕ್ಕಳಿಗೆ ಬೆಳಕಾದವಳು ಶಾಂತಕ್ಕ. ಹಾಗಂತ ಅವಳಿಗೆ ಇಂತಹ ನೋವುಗಳೆಲ್ಲಾ ಹೊಸದಲ್ಲ. ಅವು ದಾಂಪತ್ಯದಲ್ಲಿ ದಿನನಿತ್ಯದ ಸಂಗಾತಿಯಂತೆ. ಮದುವೆ ನಂತರದ ಬದುಕಿನಲ್ಲಂತು ಸಮಸ್ಯೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ರಮಿಸಿದ್ದಾಳೆ. ಸಾಂತ್ವನ ಹೇಳಿದ್ದಾಳೆ. ಆದರೆ ಮಗಳು ಕುಸುಮ ಯಾವುದೋ ಹುಡುಗನೊಂದಿಗೆ ಓಡಿ ಹೋಗಿದ್ದರೆ ವಯಸ್ಸಿನ ಅನುಗುಣವಾಗಿ ತಿಳಿಯದೇ ಮಾಡಿದ ತಪ್ಪು ಎನ್ನಬಹುದು. ಅಷ್ಟೆ ಆಗಿದ್ದರೆ ಶಾಂತಕ್ಕ ಈ ಮಟ್ಟಿಗೆ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ತಿತಿ ಬಂದೊದಗುತ್ತಿರಲಿಲ್ಲ. ಆದರೆ ಅದಕ್ಕಿಂತ ಘೋರವಾದದ್ದು ಏನೋ ಘಟಿಸಿತ್ತು.

*********

ಶಾಂತಕ್ಕ ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಐದಾರು ವರ್ಷ ಕಳೆದ ಮೇಲೆ ಮುದ್ದಾದ ಎರಡು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಳು. ಮೊದಮೊದಲು ಪ್ರೀತಿ ತೋರಿಸುತಿದ್ದ ಗಂಡನಾದವನು ನಂತರ ತನ್ನ ವರಸೆ ಬದಲಿಸಿದ್ದ. ತವರಿನಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತಿದ್ದ. ನಿತ್ಯ ಕುಡಿದು ಬಂದು ಶಾಂತಕ್ಕನಿಗೆ ದಂಡಿಸುತ್ತಿದ್ದ. ಆ ಎರಡು ಹೆಣ್ಣು ಮಕ್ಕಳ ಬಗೆಗೂ ಗಂಡನಲ್ಲಿ ಅಸಮಾಧಾನವಿತ್ತು. “ಒಂದು ಗಂಡು ಮಗು ಹೆತ್ತಿದ್ರೆ ನಮ್ಮ ವಂಶವಾದರು ಬೆಳಿತಿತ್ತು. ಈ ಹೆಣ್ಣುಮಕ್ಕಳು ನಮ್ಮ ಜೀವನಕ್ಕೆ ಹೊರೆ. ನಿನ್ನಿಂದ ನಾನು ಸಾಕಷ್ಟು ಅನುಭವಿಸಿದ್ದೆನೆ. ನಾನು ಇನ್ನೊಂದು ಮದುವೆ ಆಗ್ತೆನೆ. ನೀನು ಈಗಲೇ ಮನೆ ಬಿಟ್ಟು ತೊಲಗು” ಅನ್ನೊವರೆಗೂ ಮಾತು ಹೋಗಿತ್ತು. ಶಾಂತಕ್ಕನ ಮಂಜುಗಡ್ಡೆಯಂತೆ ಗಟ್ಟಿಯಾಗಿದ್ದ ಹೃದಯ ಕಣ್ಣೀರಿನ ಮೂಲಕ ದಳದಳನೆ ಹರಿದಿತ್ತು. ನಿಂತ ಜಾಗದಲ್ಲಿ ನಿಮಿಷವು ನಿಲ್ಲದೆ ಉಟ್ಟ ಬಟ್ಟೆಯಲಿ ಮನೆ ಬಿಟ್ಟು ಹೊರಟಿದ್ದಳು. ಮಕ್ಕಳೆಂಬುದು ದೇವರ ಇಚ್ಚಾನುಸಾರವಾದದ್ದು. ಆ ಭಗವಂತ ಎಲ್ಲವನ್ನು ಮನುಷ್ಯರಿಗೆ ಆಯ್ಕೆಗೆ ಬಿಟ್ಟಿರಬಹುದು. ಆದರೆ ಎಂತಹ ಮಕ್ಕಳನ್ನು ಪಡೆಯಬೇಕೆನ್ನುವುದು ಅವನ ನಿರ್ದಾರ. ಆ ಬೀಗದ ಕೈ ಮಾತ್ರ ಅವನ ಬಳಿ ಇದೆ. ಅವನು ಮನಸ್ಸು ಮಾಡಿದರೆ ಒಂದು ಹುಲ್ಲು ಕಡ್ಡಿಯು ಸಹ ಅಲುಗಾಡುವುದಿಲ್ಲ . ಇದನ್ನು ಅರಿಯದ ಆ ಪೀಡಕ ಗಂಡ ಶಾಂತಕ್ಕನ ಮೇಲೆ ಹರಿಹಾಯುವ ಅವನೆಂತ ನೀಚನಿರಬಹುದು. ಗಂಡನ ಮನೆಯನ್ನ ಬಿಟ್ಟು ಹೊರಟಾಗ ಶಾಂತಕ್ಕ ತವರುಮನೆ ಸೇರಿಕೊಳ್ಳಬೇಕೆಂದರು ಅಲ್ಲಿ ಕೂಡ ಪರಿಸ್ಥಿತಿ ಗಂಭೀರವಾಗಿತ್ತು. ಅವರು ಅಷ್ಟೆ ಹೊಟ್ಟೆ ಬಟ್ಟೆ ಕಟ್ಟಿ ಜೀವನ ನಡೆಸುತಿದ್ದರು. ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಅಲ್ವೆ?ಇನ್ನು ಅತ್ತ ಹೋದರೆ ಮತ್ತೆ ತಂದೆ ತಾಯಿಗೆ ಭಾರವಾಗಬಹುದೆಂಬ ಅಳುಕು ಅವಳಲ್ಲಿತ್ತು. ಹಾಗಾಗಿ ಸ್ವತಂತ್ರವಾಗಿ ಬದುಕುವ ನಿರ್ದಾರಕ್ಕೆ ಬಂದಳು. ಒಂಟಿಯಾಗಿ ಜೀವನ ರಥ ಎಳೆಯುವ ಪಣ ತೊಟ್ಟಿದ್ದಳು. ಆಗ ನಮ್ಮ ಮನೆ ಹತ್ತಿರದಲ್ಲಿಯೆ ಶಾಂತಕ್ಕ ಮನೆ ಬಾಡಿಗೆ ಹಿಡಿದು ಹೊಸ ಸಂಸಾರ ದೂಡುತಿದ್ದಳು. ಗಂಡ ಬಿಟ್ಟ ಒಂಟಿ ಹೆಣ್ಣನ್ನು ಈ ಸಮಾಜ ನೋಡುವ ರೀತಿಯೆ ಬೇರೆ.ಆದರೆ ನಾನಿಲ್ಲದಿದ್ದರೆ ಇವಳಿಗೆ ಜೀವನ ನಡೆಸಲಾಗುವದಿಲ್ಲ ಎನ್ನುವ ಗಂಡನ ಅಹಮ್ಮಿಕೆಯ ವಿರುದ್ದ ಬದುಕಬೇಕೆಂಬ ಬಲ ಅವಳಲ್ಲಿ ದಟ್ಟವಾಗಿತ್ತು. ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಿ ದೊಡ್ಡ ಅಧಿಕಾರಿಯನ್ನಾಗಿ ಮಾಡಬೇಕೆನ್ನುವ ಕನಸಿತ್ತು. ಆದರು ಅವೆಲ್ಲವೂ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ಶಾಂತಕ್ಕ ಉನ್ನತ ಶಿಕ್ಷಣ ಪಡೆದವಳೆನು ಅಲ್ಲ. ಎಲ್ಲವೂ ರಟ್ಟೆಯ ಮೇಲೆ ದುಡಿದು ತಿನ್ನುವ ಪರಿಸ್ಥಿತಿ. ಜೀವನೋಪಾಯಕ್ಕೆ ಏನಾದರು ಒಂದು ಸ್ವಉದ್ಯೋಗ ಮಾಡಲೆಬೇಕಿತ್ತು. ಅವಳು ತವರುಮನೆಯಲ್ಲಿ ಹೊಲಿಗೆ ವಿದ್ಯೆಯನ್ನು ಹೇಗೂ ಕಲಿತಿದ್ದಳು. ಆದ್ದರಿಂದ ತುಸು ಹಣ ನೀಡಿ ಕಂತಿನ ಮೇಲೆ ಹೊಲಿಗೆಯಂತ್ರವನ್ನು ಖರೀದಿಸಿದಳು. ಹೆಣ್ಣುಮಕ್ಕಳ ರವಿಕೆ, ಚೂಡಿದಾರ, ಮಕ್ಕಳ ಪೆಟಿಕೋಟ್ , ಸೀರೆಗಳಿಗೆ ಪಿಕೋ ಪಾಲ್ನಂನಂತ ಕೌಶಲ್ಯ ತರಬೇತಿಯಿದ್ದಿದರಿಂದ ಬದುಕಿಗೆ ಅದೇ ಆದಾರವಾಯಿತು. ಹೇಳಿದ ಸಮಯಕ್ಕೆ ಒಪ್ಪ ಓರಣವಾಗಿ ಅವರು ಹೇಳಿದ ವಿನ್ಯಾಸದಲ್ಲಿ ಹೊಲಿಯುತಿದ್ದರಿಂದ ನೀರಿಕ್ಷೆಯಂತೆ ಅವಳಿಗೆ ಗ್ರಾಹಕರ ಸಂಖ್ಯೆಯು ಹೆಚ್ಚಿತ್ತು. ಜೀವನ ತುಸು ಬದಲಾಯಿತು. ದೈರ್ಯದಿಂದ ಬದುಕುವುದು ಹೇಳಿಕೊಟ್ಟಿತು. ಆದರೂ ಮನೆಬಾಡಿಗೆ, ವಿದ್ಯುತ್ ಬಿಲ್ಲು, ಹಾಲು,ದಿನಸಿ ಪದಾರ್ಥ, ತರಕಾರಿ, ಮಕ್ಕಳ ಸ್ಕೂಲ್ ಫೀಸು ಹೀಗೆ ತಿಂಗಳೆಂಬುದು ದುತ್ತನೆ ಎದುರಾಗಿ ಶಾಂತಕ್ಕ ದುಡಿದಿದ್ದಕ್ಕೂ ಖರ್ಚಿಗೂ ಸರಿಸಮವಾಗಿಬಿಡುತಿತ್ತು. ಮಕ್ಕಳು ವಯಸ್ಸಿಗೆ ಬಂದ ಮೇಲಂತು ಇನ್ನಷ್ಟು ದುಡಿಮೆ ಮತ್ತು ಜವಾಬ್ದಾರಿ ಎರಡು ಹೆಚ್ಚಾಯಿತು. ಮೊದಲ ಮಗಳ ಮದುವೆಗೆ ಶಾಂತಕ್ಕನಿಗೆ ಕಷ್ಟವಾಗಲಿಲ್ಲ. ಏಕೆಂದರೆ ತನ್ನ ತಮ್ಮನಿಗೆ ಮಗಳನ್ನು ದಾರೆಯೆರೆದಿದ್ದರಿಂದ ಅಕ್ಕನ ಪರಿಸ್ಥಿತಿಯನ್ನು ಹತ್ತಿರದಿಂದ ಕಂಡಿದ್ದ ತಮ್ಮ ವರದಕ್ಷಿಣೆ, ವರೋಪಚಾರದ ಬೇಡಿಕೆಯನ್ನಿಡಲಿಲ್ಲ. ಹಾಗಾಗಿ ಶಾಂತಕ್ಕನಿಗೆ ಆ ಒಂದು ಜವಾಬ್ದಾರಿಯ ಹೇಗಲೆರಿದ ಬಾರ ಇಳಿದಿತ್ತು.

ಈಗ ಮುಂದಿನ ಸವಾಲೆಂದರೆ ಕುಸುಮಳಿಗೆ ತನ್ನ ಪರಿಸ್ಥಿತಿ ಬರದಂತೆ ಅವಳಿಗೆ ಒಂದೊಳ್ಳೆ ಶಿಕ್ಷಣ ನೀಡಿ ಮದುವೆ ಮಾಡಿ ಗಂಡನ ಮನೆಗೆ ಕಳಿಸುವುದು. ಅದಕ್ಕಾಗಿ ಮತ್ತೊಷ್ಟು ಹೊಲಿಗೆ ಯಂತ್ರದ ಪೆಡಲ್ ತುಳಿಯುವುದು ಅನಿವಾರ್ಯವಾಗಿತ್ತು. ಕೊನೆ ಮಗಳಾಗಿದ್ದ ಕುಸುಮಳಿಗೆ ಅಕ್ಕನಿಗಿಂತ ಹೆಚ್ಚಿನ ಪ್ರೀತಿ ದಕ್ಕಿತು. ಶಾಂತಕ್ಕ ಕೂಡ ಅವಳನ್ನು ಹೂವಿನಂತೆ ಬೆಳೆಸಿದ್ದಳು. ಆ ಒಂದು ದಿನ ಮಾತ್ರ ಕುಸುಮಳಿಗೆ ಅದೇಕೊ ವೀಪರಿತ ಜ್ವರ. ಇಡೀ ಮೈ ಬೆಂಕಿಯಂತೆ ಸುಡುತಿತ್ತು. ಊರಿನಲ್ಲಿರುವ ಆಸ್ಪತ್ರೆಗೆ ಕರೆದೊಯ್ದಳಾದರು ಆ ವೈದ್ಯರು ಜ್ವರ ತೀವ್ರವಾಗಿವೆ ನಗರದ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿಯೆಂದು ಸಲಹೆಯಿತ್ತರು. ಅಂತಹ ದವಾಖಾನೆಯ ಚಿಕಿತ್ಸೆಗೆ ಹೆಚ್ಚಿನ ಮೊತ್ತದ ಹಣ ಬೇಕಾಗುತ್ತದೆ. ಅಷ್ಟೊಂದು ಹಣ ಶಾಂತಕ್ಕ ಎಲ್ಲಿಂದ ತಂದಾಳು.? ಚಿಂತೆ ಶುರುವಾಯಿತು. ಹೇಗೊ ಕೊನೆಗೆ ಅವರಿವರ ಬಳಿ ಅಂಗಲಾಚಿ ಬೇಡಿ ಪುಡಿಗಾಸು ಹೊಂದಿಸಿದಳು. ಆದರೆ ದೇವರು ಶಾಂತಕ್ಕನ ಪಾಲಿಗಿದ್ದ. ಕುಸುಮಳಿಗೆ ಡೆಂಗ್ಯೂನಂತ ಮಾರಣಾಂತಿಕ ಜ್ವರ ಬಂದೊದಗಿದ್ದರು ಅದರಿಂದ ಪಾರಾಗಿದ್ದಳು. ಇನ್ನು ಯಾವುದೇ ಅಪಾಯವಿಲ್ಲವೆಂದು ವೈದ್ಯರೇ ಹೇಳಿ ಮನೆಗೆ ಕಳೀಸಿದಾಗ ನಿಟ್ಟುಸಿರು ಬಿಟ್ಟಿದ್ದಳು. ಜೀವನದ ಅದೆಷ್ಟೆ ಕಷ್ಟ ಸುಖಗಳಿದ್ದರು ಕಾಲ ಅದ್ಯಾವುದಕ್ಕೂ ಕಾಯುತ್ತಾ ಕೂರುವುದಿಲ್ಲ ಅದು ತನ್ನ ಪಾಲಿನ ಕೆಲಸ ಮಾಡುತಿರುತ್ತದೆ. ಕಾಲಚಕ್ರ ಉರುಳಿದಂತೆ ಕುಸುಮ ಮದುವೆ ವಯಸ್ಸಿಗೆ ಬಂದಿದ್ದಳು. ಪದವಿಯು ಪೂರ್ಣವಾಗಿತ್ತು. ಹಾಗಾಗಿ ಇದುವರೆಗೂ ಶ್ರಮದಿಂದ ದುಡಿದು ಕುಡಿಟ್ಟಿದ್ದ ಹಣವಿತ್ತು. ಅಷ್ಟು ಸಾಲದೆ ಕೆಲವೊಂದಿಷ್ಟು ಸಾಲ ತೆಗೆದುಕೊಂಡಳು. ಪರಿಚಯಸ್ತರಲ್ಲಿ ಒಳ್ಳೆ ಸಂಬಂಧದಲ್ಲಿ ಮದುವೆಯೂ ನಡೆದು ಹೋಯಿತು. ಶಾಂತಕ್ಕನ ತನ್ನ ಜವಾಬ್ದಾರಿಗಳೆಲ್ಲ ಕಳೆದಂತಾಗಿ ಒಂದು ಕ್ಷಣ ನಿರಮ್ಮಳಾದಳು. ಮಕ್ಕಳು ಅವರವರ ಗಂಡನ ಮನೆಯಲ್ಲಿ ಸುಖವಾಗಿದ್ದರೆ ಸಾಕು ಎಂಬುದು ಅವಳ ಅಂಬೋಣ. ತಿಂಗಳು ಕಳೆದಿರಲಿಲ್ಲ. ಕುಸುಮಳ ಗಂಡನ ಮನೆಯಿಂದ ಕಹಿಸುದ್ದಿ. ಅವಳು ಯಾರೋ ತಾನು ಪ್ರೀತಿಸಿದ ಹುಡುಗನೊಂದಿಗೆ ಓಡಿಹೋಗಿದ್ದಾಳೆಂಬ ಸಹಿಸಲ ಸಾದ್ಯವಾಗದ ನೋವನ್ನು ಶಾಂತಕ್ಕನಿಗೆ ಅರಗಿಸಿಕೊಳ್ಳಲಾಗಲಿಲ್ಲ. ಅವಳಿಗೆ ಒಂದು ಕ್ಷಣ ಶಾಕ್ ಹೊಡೆದಂತಾಯಿತು. ನಂಬಲಾಗಲಿಲ್ಲ. ತಾನು ನಿಂತ ನೆಲವೇ ಕುಸಿದಂತಾಯಿತು. ದುಃಖ ಉಮ್ಮಳಿಸಿ ಬಂತು. ಕುಸುಮ ಹೀಗೆ ಮಾಡುತ್ತಾಳೆಂಬುದು ಅವಳು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಅವಳ ಮೇಲೆ ಇನ್ನಿಲ್ಲದ ಕೋಪ ಬಂತು. ಇಷ್ಟು ದಿನ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ಶ್ರಮಕ್ಕೆ ತಕ್ಕ ಪಾಠವನ್ನೆ ಕಲಿಸಿದ್ದಳು. ಇಪ್ಪತ್ತು ವರ್ಷ ಒಂದು ಸಣ್ಣ ದೂಳಿನ ಕಣವು ತಾಗದಂತೆ ಸಾಕಿದವಳಿಗಿಂತ ನಿನ್ನೆ ಮೊನ್ನೆ ಬಂದವನು ಹೆಚ್ಚೆನೆಸಿದನಾ.? ಪ್ರೀತಿಯಿಂದ ಇಷ್ಟೂದ್ದಕ್ಕೆ ಬೆಳೆಸಿದ ನನ್ನ ಕಷ್ಟ ಪಡಿಪಾಟಿಲು ಅವಳಿಗೆ ಅರ್ಥವಾಗಲೇ ಇಲ್ಲವಾ,? ತಾನೊಬ್ಬ ಹುಡುಗನನ್ನು ಪ್ರೀತಿಸುತಿದ್ಧೆನೆಂದು ಮದುವೆಗೆ ಮುಂಚೆ ಹೇಳಿದ್ದರೆ ನಾನು ಖುದ್ದು ಎದುರು ನಿಂತು ಮದುವೆ ಮಾಡುತಿದ್ದೆನೆಂದು ಬಾವುಕಳಾದಳು. ಇದೇ ವಿಷಯವನ್ನು ಮುಂದಿಟ್ಟುಕೊಂಡೆ ಊರಜನ ಅಣಕಿಸತೊಡಗಿದರು. ಹೋದಬಂದಕಡೆಯಲ್ಲ ” ಕುಸುಮ ಎಲ್ಲಿದಾಳೆ, ಯಾವ ಹುಡುಗನ ಜೊತೆ ಹೋಗಿದ್ದಾಳೆ” ಅಂತೆಲ್ಲಾ ಕೇಳಿ ಮನ ಚುಚ್ಚುವ ಮಾತನಾಡಲು ಶುರು ಮಾಡಿದ್ದರು. ಊರ ಜನರ ಬಟ್ಟೆ ಹೊಲಿದು ಮಾನ ಮುಚ್ಚುತಿದ್ದ ಶಾಂತಕ್ಕನ ಮರ್ಯಾದೆಯೆ ಈಗ ಊರ ಹೆಬ್ಬಾಗಿಲಾಗಿದೆಯಲ್ಲಾ ಎಂದು ಕುಹಕವಾಡತೊಡಗಿದರು. ಇದರ ಜೊತೆಗೆ ಮದುವೆಗೆ ಮಾಡಿದ ಸಾಲ ಹಾಗೆ ಇತ್ತು. ಸಾಲಗಾರರು ಪ್ರತಿದಿನ ಮನೆ ಬಾಗಿಲಿಗೆ ಬಂದು ದುಡ್ಡು ಕೊಡಿಯೆಂದು ಪೀಡಿಸತೊಡಗಿದರು. ಇದರೆಲ್ಲರಿಂದ ಶಾಂತಕ್ಕನಿಗೆ ಅವಮಾನವಾಗಿ ರೋಸಿಹೋಗಿದ್ದಳು. ಕುಸುಮ ಮಾಡಿದ ಮೋಸ ಎದೆಯಲ್ಲಿ ಕುದಿಯುತಿತ್ತು. ಜೀವನವೇ ಜಿಗುಪ್ಸೆಯೆನಿಸತೊಡಗಿತು.

ಪ್ರತಿ ಮುಜಾನೆ ಸೂರ್ಯ ಹುಟ್ಟುವ ಹೊತ್ತಿಗಾಗಲೆಲ್ಲಾ ಅಂಗಳಕ್ಕೆ ನೀರು ಚೆಲ್ಲಿ ಚಂದದ ರಂಗೋಲಿ ಬಿಡಿಸುತಿದ್ದಳು ಶಾಂತಕ್ಕ. ಆದರೆ ಇವತ್ತು ಇನ್ನು ಬಾಗಿಲು ತೆರೆದಿರಲಿಲ್ಲ. ಬಡಿದು ಎಚ್ಚರಿಸಲು ನೋಡಿದೆ ತೆರೆಯಲಿಲ್ಲ. ನನಗೆ ಭಯವಾಯಿತು. ಅನುಮಾನ ಶುರುವಾಯಿತು. ಓಣಿಯ ಒಂದಾಲ್ಕು ಜನರಿಗೆ ಸುದ್ದಿ ತಿಳಿಸಿದೆ. ಅವರು ಬಂದು ಬಾಗಿಲು ಮುರಿದರು. ಒಳಗೆ ಹೋದೊಡನೆ ನನ್ನಿಂದ ನೋಡಲಾಗಲಿಲ್ಲ. ಕಣ್ಣೀರು ನನಗೆ ತಿಳಿಯದೇ ಹರಿಯತೊಡಗಿತು. ಶಾಂತಕ್ಕನ ದೇಹ ಮೇಲಿನ ಫ್ಯಾನಿಗೆ ನೇತಾಡುತಿತ್ತು. ಕಣ್ಣಿಗೆ ಕತ್ತಲಾವರಿಸಿ ಅಲ್ಲಿಯೆ ಕುಸಿದು ಬಿದ್ದೆ.

ಮತ್ತಷ್ಟು ಸುದ್ದಿಗಳು

vertical

Latest News

ಅಮಿತ್ ಶಾ ಭೇಟಿ ಮಾಡಲು ದೆಹಲಿಗೆ ಹೊರಟ ರಮೇಶ್ ಜಾರಕಿಹೊಳಿ

newsics.com ಬೆಂಗಳೂರು: ಸಿ ಡಿ ಹಗರಣ ಕುರಿತಂತೆ ಸಿಬಿಐ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈ ಸಂಬಂಧ ದೆಹಲಿಗೆ ಪ್ರಯಾಣ...

ಭಯೋತ್ಪಾದಕರ ಜತೆ ನಂಟು ಆರೋಪ: ಎನ್ ಐ ಎ ಯಿಂದ ಕೇರಳದ ಪತ್ರಕರ್ತರ ವಿಚಾರಣೆ

newsics.com ತಿರುವನಂತಪುರಂ: ಭಯೋತ್ಪಾದಕ ಸಂಘಟನೆಗಳ ಜತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಆಧಾರದಲ್ಲಿ ರಾಷ್ಟ್ರೀಯ ತನಿಖಾ ದಳ ಕೇರಳದ ಎಂಟು ಪತ್ರಕರ್ತರನ್ನು ವಿಚಾರಣೆಗೆ ಗುರಿಪಡಿಸಿದೆ ಎಂದು ವರದಿಯಾಗಿದೆ. ಇದರಲ್ಲಿ ಮಹಿಳಾ ಪತ್ರಕರ್ತರೊಬ್ಬರು ಕೂಡ ಸೇರಿದ್ದಾರೆ ಎಂದು...

ಜಿಮ್ ಡಂಬಲ್ಸ್ ನಿಂದ ಹೊಡೆದು ಪತ್ನಿಯ ಕೊಲೆ ಮಾಡಿದ ಪತಿ

newsics.com ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಭೀಕರ ಕೊಲೆ ನಡೆದಿದೆ. ಪತಿ ಪತ್ನಿಯನ್ನು ಡಂಬಲ್ಸ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ರಾಮ ಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ವರದಿಯಾಗಿದೆ. ಮೃತಪಟ್ಟವರನ್ನು ಲಿದಿಯಾ(44)...
- Advertisement -
error: Content is protected !!