Saturday, January 23, 2021

ವನವಾಸ

ಪುಂಡರೀಕಾಕ್ಷರಿಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ. ಇದರಿಂದಾಗಿ ಬಹಳ ಸಂಕಷ್ಟಕ್ಕೆ ಸಿಲುಕಿಬಿಟ್ಟರು. ಆಗಲೇ ಕೆಲವು ದೂರ ಕ್ರಮಿಸಿದ್ದ ಗೋಪೀನಾಥರ ಬಳಗಕ್ಕೆ ಪುಂಡರೀಕಾಕ್ಷರು ತಮ್ಮ ಜತೆ ಬರದಿದ್ದುದು ಅರಿವಿಗೆ ಬಂದು ಪುನಃ ತಿರುಗಿ ಬಂದು ದೇವಾಲಯದ ಸುತ್ತೆಲ್ಲ ಹುಡುಕಿದರೂ ಸಿಗದಾದಾಗ ಅವರು ಬೇರೆ ಬಸ್ಸಿನಲ್ಲಿ ಬಂದಾರು ಎಂದುಕೊಳ್ಳುತ್ತ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗದೆ ಅಲ್ಲಿಂದ ಹೊರಟರು. ಪುಂಡರೀಕಾಕ್ಷರು ಕೈಯಲ್ಲಿ ದುಡ್ಡೂ ಇಲ್ಲದೆ, ಎಲ್ಲಿ ಹೋಗುವುದೆಂದು ತಿಳಿಯದೆ, ಪರಭಾಷೆ ತಿಳಿಯದೆ ಈ ತೆಲುಗು ರಾಜ್ಯದಲ್ಲಿ ಯಾರಲ್ಲಿ ಏನು ಕೇಳುವುದೆಂದು ತೋಚದೆ ಅರೆಹುಚ್ಚನಂತಾದರು.
     ಕಥನ     

♦ ವಿಷ್ಣು ಭಟ್, ಹೊಸ್ಮನೆ

newsics.com@gmail.com


 ಪುಂ ಡರೀಕಾಕ್ಷರಿಗೆ ತಿರುಪತಿಗೆ ಹೋಗಬೇಕೆಂಬ ಬಯಕೆ ದಿನೇದಿನೇ ಹೆಚ್ಚುತ್ತಲೇ ಇತ್ತು. ಆದರೆ ವಯಸ್ಸಾದ ನನ್ನನ್ನು ಕರೆದು ಕೊಂಡು ಹೋಗುವವರಾದರೂ ಯಾರು? ಎಂಬ ಪ್ರಶ್ನೆ ಎದುರಾಗಿ ಸುಮ್ಮನಾಗಿಬಿಡುತ್ತಿದ್ದರು. ಒಬ್ಬರೇ ಹೋಗುವ ಧೈರ್ಯ ಇಲ್ಲದಿದ್ದುದರಿಂದ ಊರಿನಲ್ಲಿ ಕಂಡಕಂಡವರಲ್ಲಿ “ಯಾರಾದರೂ ತಿರುಪತಿಗೆ ಹೋಗುವವರಿದ್ದರೆ ಹೇಳಿ, ನಾನೂ ಅವರ ಜತೆ ಬರುತ್ತೇನೆ. ಒಮ್ಮೆ ಅಲ್ಲಿಗೆ ಹೋಗಬೇಕೆಂಬ ಆಸೆ ಇದೆ” ಎಂದು ಹೇಳಿಕೊಂಡಿದ್ದರು. ಆದರೆ ಊರಿನವರು ಪದೇಪದೇ ಅದೇ ಜಪವನ್ನು ಮಾಡುತ್ತಿದ್ದ ಇವರಿಗೆ ಹಿಂದಿನಿಂದ ತಿರುಪತಿ ಪುಂಡರೀಕಾಕ್ಷ ಎಂದು ಕರೆಯುತ್ತಿದ್ದರು. ಇನ್ನು ಕೆಲವರಂತೂ ನಿರ್ಧರಿಸಿದ ಕೆಲಸ ಸಮಯಕ್ಕೆ ಸರಿಯಾಗಿ ಆಗದೇ ಇದ್ದಾಗ ‘ಇದು ಪುಂಡರೀಕಾಕ್ಷ ತಿರುಪತಿಗೆ ಹೋದ ಹಾಗೆ’ ಎಂಬ ಗಾದೆಯನ್ನೇ ಸೃಷ್ಟಿಸಿ ಆಡಿಕೊಳ್ಳುತ್ತಿದ್ದುದು ಮಾತ್ರ ಪುಂಡರೀಕಾಕ್ಷರಿಗೆ ಇವತ್ತಿಗೂ ತಿಳಿದಿಲ್ಲ.
ಒಂದು ದಿನ ಪುಂಡರೀಕಾಕ್ಷರ ಹಳೆಯ ಮಿತ್ರ ಗೋಪೀನಾಥರು ತಿರುಪತಿಗೆ ಹೋಗುತ್ತಿರುವುದಾಗಿ ತಿಳಿಸಿದಾಗ ತಾವೂ ಬರುವುದಾಗಿ ಹೇಳಿ ಅವರ ಜತೆ ಹೊರಟರು. ಗೋಪೀನಾಥರು ಬಹಳ ಪ್ರೀತಿಯಿಂದಲೇ “ಸರಿ ಹಾಗಾದರೆ ಬನ್ನಿ ಒಟ್ಟಿಗೆ ಹೋಗಿ ಬರೋಣ” ಎಂದಾಗ ಪುಂಡರೀಕಾಕ್ಷರಿಗೆ ಸ್ವರ್ಗಕ್ಕೇ ಕಾಲಿಟ್ಟಷ್ಟು ಆನಂದವಾಯಿತು. ತಮ್ಮ ಮಹದಾಸೆ ತೀರಿಯೇಬಿಡುತ್ತದೆ ಎಂಬ ಸಂತಸದಲ್ಲಿ ತೇಲಾಡಿದರು. ಮತ್ತು ಊರಲ್ಲೆಲ್ಲ ಹೇಳಿಕೊಂಡು ಬಂದರು. ಊರವರೆಲ್ಲ ಅಂತೂ ನಮಗೆಲ್ಲ ಒಂದು ರಗಳೆ ತಪ್ಪಿತು ಎಂದು ನಿಟ್ಟುಸಿರುಬಿಟ್ಟರು.
ಆ ದಿನ ಬಂದೇಬಿಟ್ಟಿತು. ಗೋಪಿನಾಥರು ಅವರ ಕೆಲ ಬಂಧುಗಳು, ಮಿತ್ರರು ಮತ್ತು ಪುಂಡರೀಕಾಕ್ಷರ ಜತೆಗೆ ತಿರುಪತಿಗೆ ಹೊರಟರು. ಮಧ್ಯವಯಸ್ಸನ್ನು ದಾಟಿದ್ದ ಸರಿಸುಮಾರು ಇಪ್ಪತ್ತು ಮಂದಿ ಆ ಯಾತ್ರೆಯಲ್ಲಿದ್ದರು. ಪುಂಡರೀಕಾಕ್ಷರು ಎಲ್ಲರನ್ನೂ ಪರಿಚಯ ಮಾಡಿಕೊಂಡು ತಾವು ಹಲವು ವರುಷಗಳಿಂದ ತಿರುಪತಿ ಯಾತ್ರೆಯ ಕನಸು ಕಂಡುದರ ಬಗ್ಗೆ ಹೇಳಿಕೊಂಡರು. ಅವರಲ್ಲೊಬ್ಬರು “ಅದಕ್ಕೆಲ್ಲ ಕಾಲ ಕೂಡಿ ಬರಬೇಕು, ಹೋಗುತ್ತೇನೆ ಅಂದುಕೊಂಡ ಕೂಡಲೆ ಎಲ್ಲಿಗೂ ಹೋಗುವುದಕ್ಕಾಗುವುದಿಲ್ಲ” ಎಂದರು. ಅದಕ್ಕೆ ಇನ್ನೊಬ್ಬರು “ದೇವರು ಕರೆಸಿಕೊಂಡಾಗ ಮಾತ್ರ ಹೋಗಲಿಕ್ಕಾಗುವುದು, ಅವನು ಕರೆದಾಗ ನೀವು ಹೋಗುವುದಿಲ್ಲ ಎಂದುಕೊಂಡರೂ ಹೋಗುವ ಪರಿಸ್ಥಿತಿ ತನ್ನಿಂದ ತಾನೇ ಬಂದುಬಿಡುತ್ತದೆ. ನಮ್ಮ ಊರಿಂದ ಎರಡು ಕಿಲೋಮೀಟರ್ ದೂರದಲ್ಲೊಂದು ಈಶ್ವರ ದೇವಾಲಯವಿದೆ. ಅಲ್ಲಿಗೆ ಹೋಗದೆ ಐದು ವರ್ಷವೇ ಕಳೆಯಿತು. ದಿನಾಲೂ ಹೋಗಬೇಕೆಂದುಕೊಳ್ಳುತ್ತೇನಾದರೂ ಇಂದಿಗೂ ಹೋಗಲಿಕ್ಕಾಗಲಿಲ್ಲ ನೋಡಿ” ಎಂದರು. ಪುಂಡರೀಕಾಕ್ಷರು ಎಲ್ಲದಕ್ಕೂ ಗೋಣಾಡಿಸುತ್ತ ತಿರುಪತಿಗೆ ಹೋಗುತ್ತಿರುವ ಸಂತೋಷವನ್ನು ಅನುಭವಿಸುತ್ತಿದ್ದರು.
* * *
ಪುಂಡರೀಕಾಕ್ಷರು ತಿರುಪತಿಯ ಸನ್ನಿಧಿಯಲ್ಲಿ ದೇವರ ಮೂರ್ತಿಯನ್ನು ಕಂಡು ಕಣ್ತುಂಬಿಸಿಕೊಂಡರು. ‘ಅಂತೂ ತನ್ನ ಬದುಕಿನ ಮಹದಾಸೆ ಕೊನೆಗೂ ನೆರವೇರಿತು’ ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ಹೊರಬರುತ್ತಿರುವಾಗ ಒಮ್ಮೆಲೆ ಬಂದ ಜನ ಸಮೂಹದಿಂದಾಗಿ ಇವರ ಗುಂಪು ಚದುರಿ ಹೋಯಿತು. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಗೋಪೀನಾಥರ ಜತೆಗೆ ಬಂದವರೆಲ್ಲ ಒಂದು ಕಡೆ ಒಟ್ಟಾದರೂ ಪುಂಡರೀಕಾಕ್ಷರು ಮಾತ್ರ ಬರಲಿಲ್ಲ. ಅಲ್ಲಿಂದ ಹೊರಡುವ ಗಡಿಬಿಡಿಯಲ್ಲಿ ಪುಂಡರೀಕಾಕ್ಷರು ಬರದಿದ್ದುದನ್ನು ಗಮನಿಸದೆ ಎಲ್ಲರೂ ತಮ್ಮಷ್ಟಕ್ಕೆ ವಾಹನವನ್ನೇರಿ ಹೊರಟುಬಿಟ್ಟರು.
ಪುಂಡರೀಕಾಕ್ಷರು ಅಕ್ಷರಶಃ ಕಂಗಾಲಾಗಿಬಿಟ್ಟಿದ್ದರು. ಗೋಪೀನಾಥರನ್ನು ಹುಡುಕುತ್ತ ಹುಡುಕುತ್ತ ಯಾವುದೋ ದಾರಿಯಲ್ಲಿ ಹೋಗಿ ಪೇಟೆಯಿಂದ ಬಹುದೂರ ಹೋಗಿಬಿಟ್ಟಿದ್ದರು. ಪುಂಡರೀಕಾಕ್ಷರಿಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ. ಇದರಿಂದಾಗಿ ಬಹಳ ಸಂಕಷ್ಟಕ್ಕೆ ಸಿಲುಕಿಬಿಟ್ಟರು. ಆಗಲೇ ಕೆಲವು ದೂರ ಕ್ರಮಿಸಿದ್ದ ಗೋಪೀನಾಥರ ಬಳಗಕ್ಕೆ ಪುಂಡರೀಕಾಕ್ಷರು ತಮ್ಮ ಜತೆ ಬರದಿದ್ದುದು ಅರಿವಿಗೆ ಬಂದು ಪುನಃ ತಿರುಗಿ ಬಂದು ದೇವಾಲಯದ ಸುತ್ತೆಲ್ಲ ಹುಡುಕಿದರೂ ಸಿಗದಾದಾಗ ಅವರು ಬೇರೆ ಬಸ್ಸಿನಲ್ಲಿ ಬಂದಾರು ಎಂದುಕೊಳ್ಳುತ್ತ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗದೆ ಅಲ್ಲಿಂದ ಹೊರಟರು.
ಪುಂಡರೀಕಾಕ್ಷರು ಕೈಯಲ್ಲಿ ದುಡ್ಡೂ ಇಲ್ಲದೆ, ಎಲ್ಲಿ ಹೋಗುವುದೆಂದು ತಿಳಿಯದೆ, ಪರಭಾಷೆ ತಿಳಿಯದೆ ಈ ತೆಲುಗು ರಾಜ್ಯದಲ್ಲಿ ಯಾರಲ್ಲಿ ಏನು ಕೇಳುವುದೆಂದು ತೋಚದೆ ಅರೆಹುಚ್ಚನಂತಾದರು. ತಿಂಗಳು ಕಾಲ ಭಿಕ್ಷೆ ಬೇಡಿ ಹೊಟ್ಟೆಗೊಂದಿಷ್ಟು ಏನಾದರೂ ತಿಂದು ಬಸ್ ಸ್ಟಾಂಡುಗಳಲ್ಲಿ ಮಲಗೆದ್ದು ಕಾಲ ಕಳೆದರು. “ದೇವರೇ ನನಗೆ ಯಾಕಿಂಥ ಕಷ್ಟ ಕೊಟ್ಟೆ, ನಿನ್ನನ್ನು ನೋಡಲು ಬಂದಿದ್ದೇ ತಪ್ಪಾಗಿ ಹೋಯಿತೆ? ಗೋಪೀನಾಥನೂ ನನ್ನ ಹುಡುಕುವ ಪ್ರಯತ್ನ ಮಾಡದೆ ಹೋಗಿಬಿಟ್ಟನೆ? ಯಾವ ಜನ್ಮದ ಪಾಪಕರ್ಮದಿಂದಾಗಿ ನನಗೆ ಈ ಶಿಕ್ಷೆಯೋ? ಎಂದು ಪರಿತಪಿಸಿದರು. ಮೂರು ತಿಂಗಳುಗಳು ಹೀಗೇ ಕಳೆದವು. ಸ್ನಾನವಿಲ್ಲದ ದೇಹ, ಬಿಳಿಗಡ್ಡ ಉದ್ದುದ್ದವಾಗಿ ಬೆಳೆದು, ತಲೆಯ ಕೂದಲೆಲ್ಲ ಕೆದರಿಕೊಂಡು ಪುಂಡರೀಕಾಕ್ಷರು ಅಕ್ಷರಶಃ ಹುಚ್ಚನಂತಾಗಿ ಊರಿಗೆ ಹೋಗುವ ಆಸೆಯನ್ನೇ ಬಿಟ್ಟಿದ್ದರು. ಅದೊಂದು ದಿನ ಇವರು ಕನ್ನಡದಲ್ಲಿ ಬೇಡುತ್ತಿರುವುದನ್ನು ನೋಡಿದ ಕನ್ನಡದ ಬಸ್ ಕಂಡಕ್ಟರ್ ಇವರಲ್ಲಿ ಎಲ್ಲಾ ವಿಚಾರಗಳನ್ನು ತಿಳಿದು ಪುಂಡರೀಕಾಕ್ಷರ ಊರಿಗೆ ತಲುಪಲು ಬೇಕಾದಷ್ಟು ಹಣವನ್ನೂ ಕೊಟ್ಟು ಬಸ್ಸು ಹತ್ತಿಸಿಬಿಟ್ಟ. ಅಲ್ಲದೆ ಮತ್ತೆ ಈ ರೀತಿ ತೊಂದರೆಗೊಳಗಾಗದಿರಲೆಂದು ತೆಲಗು ಮತ್ತು ಇಂಗ್ಲೀಷಿನಲ್ಲಿ ಪುಂಡರೀಕಾಕ್ಷರ ವಿವರವನ್ನು ಒಂದು ಕಾಗದದಲ್ಲಿ ಬರೆದು ಅವರ ಅಂಗಿಯ ಕಿಸೆಯಲ್ಲಿಟ್ಟ. ಆತನ ಸಹಾಯಕ್ಕೆ ಕಣ್ತುಂಬಿಕೊಂಡು ಕೈ ಮುಗಿದ ಪುಂಡರೀಕಾಕ್ಷರು ನಿರಾಳರಾಗಿ ಬಸ್ಸು ಹತ್ತಿ ಕುಳಿತರು. ಇತ್ತ ಊರಿಗೆ ಬಂದ ಗೋಪೀನಾಥರು ಪುಂಡರೀಕಾಕ್ಷರು ಕಾಣೆಯಾಗಿದ್ದಾರೆಂದು ಪೋಲೀಸ್ ಕಂಪ್ಲೆಂಟ್ ಕೊಟ್ಟು, ಸಾರ್ವಜನಿಕ ಸ್ಥಳಗಳಲ್ಲಿ ಫೋಟೋ ಸಮೇತ ಭಿತ್ತಿಪತ್ರವನ್ನು ಅಂಟಿಸಿದ್ದರು.
ಪುಂಡರೀಕಾಕ್ಷರಿದ್ದ ಬಸ್ಸು ದುರ್ಗಮವಾದ ಕಾಡು ಹಾದಿಯಲ್ಲಿ ಸಾಗುತ್ತಿದ್ದಾಗ ಆಯತಪ್ಪಿ ಕಾಡಿನ ಇಳಿಜಾರಿನಲ್ಲಿ ಬಿದ್ದುಬಿಟ್ಟಿತು. ಬಸ್ಸಿನಲ್ಲಿದ್ದವರಲ್ಲಿ ಕೆಲವರು ಅಲ್ಲಿಯೇ ಮೃತಪಟ್ಟರೆ ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದರು.
* * *
ಬಸ್ಸು ಬಿದ್ದ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವರನ್ನೂ ಸತ್ತವರನ್ನೂ ಕಂಡು ಭಯಬಿದ್ದ ಪುಂಡರೀಕಾಕ್ಷರು ಅಲ್ಲಿಂದ ಕೂಡಲೆ ಹೊರಡಬೇಕೆಂದುಕೊಂಡು ರಸ್ತೆಯತ್ತ ನಡೆಯಲಾರಂಭಿಸಿದರು. ಮೊದಲೇ ಹೆದರಿದ್ದ ಪುಂಡರೀಕಾಕ್ಷರಿಗೆ ಹಾದಿ ತಪ್ಪಿ ಹೋಯಿತು. ಕಾಡಿನ ಮಧ್ಯೆ ಅಲೆಯುತ್ತ ದಾರಿ ಕಾಣದೆ ಸಂಜೆಯಾಗುತ್ತಿದ್ದಂತೆ ಕಂಗಾಲಾಗಿ ಹೋದರು. ಏನು ಮಾಡುವುದೆಂದು ತೋಚದೆ ಮುಂದೆ ಮುಂದೆ ಹೋಗುತ್ತಿದ್ದಂತೆ ಅವರಿಗೆ ದೂರದಲ್ಲೊಂದು ಪಾಳುಬಿದ್ದ ಕುಟೀರ ಕಾಣಿಸಿತು. ಆ ಪಾಳುಬಿದ್ದ ಕುಟೀರವನ್ನು ತಲುಪುವ ಹೊತ್ತಿಗೆ ಹುಣ್ಣಿಮೆಯ ಬೆಳದಿಂಗಳು ಕಾಡಿನ ಮರಗಳ ಮಧ್ಯೆ ಇಳಿದು ನೆಲದಲ್ಲಿ ಹರಡಿಕೊಂಡಿತ್ತು. ಕುಟೀರಕ್ಕೆ ಬಂದವರಿಗೆ ಏನೋ ಸಮಾಧಾನವಾದಂತೆ ಅನಿಸಿತು. ಯಾವುದೇ ಕಾಡುಪ್ರಾಣಿಯ ಭಯವೂ ಇಲ್ಲಿ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡು ಈ ರಾತ್ರಿ ಇಲ್ಲೇ ಕಳೆಯುವುದು ಒಳಿತೆಂದುಕೊಂಡರು. ತೊರೆಯೊಂದರಲ್ಲಿ ನೀರು ಹರಿಯುವ ಸದ್ದು ಅವರ ಕಿವಿಗೆ ಬೀಳುತ್ತಿದ್ದಂತೆ ಹಸಿವಿನಿಂದ ಬಳಲುತ್ತಿದ್ದ ಪುಂಡರೀಕಾಕ್ಷರಿಗೆ ಬಾಯಾರಿಕೆ ಇನ್ನೂ ಹೆಚ್ಚಿತು. ಕುಟೀರದ ಹಿಂಬದಿಯೇ ಇದ್ದ ಆ ತೊರೆಗೆ ಹೋಗಿ ಬೊಗಸೆಯಲ್ಲಿ ಬೇಕಾದಷ್ಟು ನೀರು ಕುಡಿದು ಕುಟೀರದೊಳಕ್ಕೆ ಹೋದರು. ‘ನನ್ನ ಬದುಕಿನಲ್ಲಿ ಏನೆಲ್ಲ ನಡೆದು ಹೋಯಿತು, ಇವತ್ತು ಈ ಕಾಡಿನ ಮಧ್ಯೆ ಯಾರೋ ಯಾವಾಗಲೋ ಕಟ್ಟಿದ್ದ ಕುಟೀರದಲ್ಲಿ ಮಲಗೇಳುವ ಸಂದರ್ಭವೂ ಬಂದಿತೆಂದರೆ ಇದರ ಅರ್ಥವಾದರೂ ಏನು? ಹಿಂದೆ ತ್ರೇತಾಯುಗದಲ್ಲಿ ರಾಮನೇ ವನವಾಸ ಮಾಡಿದ್ದನಂತೆ, ಇಂದು ಇದು ನನಗೆ ವನವಾಸ’ ಎಂದು ಯೋಚಿಸುತ್ತ ಕುಳಿತವರಿಗೆ ನಿದ್ದೆ ಆವರಿಸಿ ಅಲ್ಲಿಯೇ ಮಲಗಿದರು.
ಅವರ ಮನಸ್ಸಿನಲ್ಲಿದ್ದ ರಾಮನ ವನವಾಸದ ಸಂಗತಿಗಳೆಲ್ಲ ಕನಸಾಗಿ ಕಣ್ಣು ಕಟ್ಟಿದವು. ಸ್ವತಃ ಶ್ರೀರಾಮನೇ ಸೀತೆ ಮತ್ತು ಲಕ್ಷ್ಮಣರೊಡನೆ ಅವರೆದುರು ನಿಂತಿದ್ದ. ಪುಂಡರೀಕಾಕ್ಷರು ತನ್ನ ಜನ್ಮ ಪಾವನವಾಯಿತೆನ್ನುತ್ತ ಉದ್ದಂಡ ನಮಸ್ಕರಿಸಿ ನಿಂತರು. ಅವರು ಮೂವರೂ ಆಶೀರ್ವದಿಸಿದರು. ಆ ಕುಟೀರವನ್ನು ತೋರಿಸುತ್ತ ರಾಮನೆಂದ “ಇದು ತ್ರೇತೆಯಲ್ಲಿ ನಾವು ಮೂವರೂ ವಾಸವಿದ್ದ ಸ್ಥಳ. ಲಕ್ಷ್ಮಣನೇ ಇದನ್ನು ಮಾಡಿದ್ದು. ಕೆಲವೊಮ್ಮೆ ಸೀತೆಯೊಬ್ಬಳೇ ಇಲ್ಲಿರುತ್ತಿದ್ದ ಕಾರಣ ಕಾಡುಪ್ರಾಣಿಗಳು ಇತ್ತ ಬಾರದಂತೆ ನಾನು ನಿರ್ಬಂಧಿಸಿದ್ದೇನೆ. ಹಾಗಾಗಿ ಇಲ್ಲಿ ನಿನಗೆ ಕಾಡುಪ್ರಾಣಿಗಳಿಂದ ತೊಂದರೆಯಾಗದು. ನೀನು ಭಯಪಡಬೇಡ. ಹಿಂದೆ ತ್ರೇತಾಯುಗದಲ್ಲಿ ನನ್ನ ಆಸ್ಥಾನ ಸೇವಕರಲ್ಲಿ ಒಬ್ಬನಾಗಿದ್ದವ ನೀನು. ನನ್ನ ಸೀತೆಯ ಬಗ್ಗೆ ಅನುಮಾನದ ಮಾತುಗಳನ್ನಾಡಿ ಸೀತೆಯನ್ನು ನಾನು ಕಾಡಿಗಟ್ಟಲು ಪರೋಕ್ಷವಾಗಿ ಕಾರಣನಾದವರಲ್ಲಿ ನೀನೂ ಒಬ್ಬನಾಗಿದ್ದೆ. ಅವಳು ಕಾಡಿನಲ್ಲಿ ಅನುಭವಿಸಿದ ನೋವು ಪಾಪವಾಗಿ ಸುತ್ತಿಕೊಂಡು ಈ ಜನ್ಮದಲ್ಲಿ ನಿನ್ನನ್ನು ಈ ರೀತಿ ಕಾಡುತ್ತಿದೆ. ಆದರೆ ಯಾವಾಗ ನೀನು ಈ ಕುಟೀರದೊಳಗೆ ಕಾಲಿಟ್ಟೆಯೋ ಆಗಲೇ ನಿನ್ನೆಲ್ಲ ಪಾಪಗಳೂ ಪರಿಹಾರವಾದವು. ಇಂದಿಲ್ಲಿ ಮಲಗೆದ್ದು ನಾಳೆ ಆ ಪೂರ್ವದ ಕಡೆ ಹೋದ ಕಾಲುದಾರಿಯಲ್ಲಿ ಹೋಗು ನೇರವಾಗಿ ನಿನ್ನ ಮನೆಯನ್ನು ತಲುಪಬಹುದು” ಎಂದು ಮೂವರೂ ಆಶೀರ್ವದಿಸಿ ಮಾಯವಾದರು. ಪುಂಡರೀಕಾಕ್ಷರಿಗೆ ತಟ್ಟನೆ ಎಚ್ಚರಾಯಿತು. ಆಗಿನ್ನೂ ಪೂರ್ವದಿಂದ ಬೆಳಕು ನಿಧಾನವಾಗಿ ಹರಿಯತೊಡಗಿತ್ತು. ‘ಈ ಕಲಿಯುಗದಲ್ಲಿ ನಾನೆಷ್ಟು ಪುಣ್ಯವಂತ! ಶ್ರೀರಾಮನ ದರ್ಶನ ಯಾರಿಗೂ ದೊರೆಯದು. ನನ್ನ ಜನ್ಮ ಇವತ್ತಿಗೆ ಪಾವನವಾಯಿತು. ಇನ್ನು ಸತ್ತರೂ ಚಿಂತೆಯಿಲ್ಲ’ ಎಂದುಕೊಂಡು ಅಲ್ಲಿಂದ ಹೊರಡಲನುವಾದರು. ಕನಸಿನಲ್ಲಿ ಶ್ರೀರಾಮ ತೋರಿಸಿದ ದಾರಿ ಪೂರ್ವದಿಕ್ಕಿನಲ್ಲಿದ್ದುದನ್ನು ಕಂಡು ಚಕಿತರಾದರು. ಇವೆಲ್ಲವನ್ನೂ ತನ್ನ ಊರಿನಲ್ಲಿ ಹೇಳಿಕೊಳ್ಳಬೇಕೆಂದು ಆ ದಾರಿಯಲ್ಲಿ ಹೊರಟು ರಸ್ತೆಯನ್ನು ಸೇರಿದರು. ಕೈಯಲ್ಲಿ ದುಡ್ಡಿಲ್ಲದೆ ಹೇಗೆ ಹೋಗುವುದೆಂಬುದು ತೊಚದೇ ಇದ್ದಾಗ ಯಾತ್ರಿಕರ ಬಸ್ಸೊಂದು ಬಂತು. ಅದಕ್ಕೆ ಕೈ ಅಡ್ಡ ಮಾಡಿ ತನ್ನೆಲ್ಲ ಸಂಗತಿಗಳನ್ನು ವಿವರಿಸಿ, ತಾನು ಹೋಗಬೇಕಾದ ಸ್ಥಳವನ್ನು ಹೇಳಿ ಸಹಾಯ ಕೇಳಿದಾಗ ಆ ಯಾತ್ರಿಕರು ‘ನಿಮ್ಮಂಥವರ ಸೇವೆ ಮಾಡುವುದು ನಮ್ಮ ಪುಣ್ಯ, ನಮ್ಮ ಜತೆಗೆ ಬನ್ನಿ’ ಎಂದು ಅವರನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗಲು ಒಪ್ಪಿದರು. ಪುಂಡರೀಕಾಕ್ಷರು ಅವರ ಸಹಾಯಕ್ಕೆ ವಂದನೆಗಳನ್ನು ಸಲ್ಲಿಸಿ ಬಸ್ಸನ್ನೇರಿ ಊರಿನತ್ತ ಪ್ರಯಾಣಿಸಿದರು. ಮುಖ್ಯರಸ್ತೆಯ ತಿರುವಿನಲ್ಲಿ ಇಳಿದುಕೊಂಡ ಪುಂಡರೀಕಾಕ್ಷರು ಮನೆಯನ್ನು ತಲುಪಲು ಒಳರಸ್ತೆಯಲ್ಲಿ ಎರಡು ಕಿಲೋಮೀಟರುಗಳಷ್ಟು ದೂರ ನಡೆಯಬೇಕಾಗಿತ್ತು. ನಡೆಯುತ್ತ ನಡೆಯುತ್ತ ಮುಂದೆ ಸಾಗುತ್ತಿದ್ದಂತೆ ಅಲ್ಲಲ್ಲಿ ಪುಂಡರೀಕಾಕ್ಷರ ಫೋಟೋ ಸಮೇತವಾಗಿ ಕಳೆದುಹೋಗಿದ್ದಾರೆ ಎಂಬ ಭಿತ್ತಿಪತ್ರಗಳು ಕಾಣಿಸಿದವು. ‘ನಮ್ಮವರು ನನ್ನನ್ನು ಹುಡುಕಲು ತಂಬಾ ಪ್ರಯತ್ನಿಸಿದ್ದಾರೆ ಪಾಪ’ ಎಂದುಕೊಳ್ಳುತ್ತ ಮುಂದೆ ನಡೆದು ಊರನ್ನು ತಲುಪಿದರು.
ಊರಿನ ಕೆಲವು ಜನಗಳು ಗುಂಪಾಗಿ ಎಲ್ಲಿಗೋ ಹೊರಟುದನ್ನು ಕಂಡು ಆಶ್ಚರ್ಯವಾಯಿತು. ಎಲ್ಲರೂ ಊರು ಬಿಡುತ್ತಿದ್ದಾರೆಯೇ? ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ಉದ್ಭವಿಸಿತು. ಒಮ್ಮೆ ಹೋಗಿ ಮಾತಾಡಿಸೋಣ ಎಂದುಕೊಂಡರಾದರೂ ಹುಚ್ಚನಂತೆ ಕಾಣುವ ನನ್ನ ಈ ರೂಪದಿಂದಾಗಿ ಯಾರೂ ನನ್ನನ್ನು ಗುರುತಿಸಲಾರರು ಎಂದು ಆದಷ್ಟು ಆ ಜನಗಳ ಕಣ್ಣು ತಪ್ಪಿಸಿ ಮನೆಗೆ ಬಂದರು. ಮನೆಗೆ ಬಂದು ನೋಡಿದರೆ ಮನೆಯಲ್ಲೂ ಯಾರೂ ಇರಲಿಲ್ಲ. ಅವರೆಲ್ಲರ ಜತೆ ನಮ್ಮ ಮನೆಯವರೂ ಹೊರಟಿದ್ದಾರೆಯೇ ಎಂಬ ಅನುಮಾನ ಮೂಡಿ ಅಲ್ಲಿಂದ ನೇರವಾಗಿ ಮತ್ತೆ ಆ ಜನರ ಗುಂಪು ಹೊರಟ ಕಡೆಗೆ ಬಂದರು. ಆಗಲೇ ಅವರೆಲ್ಲ ಊರಿನ ಸ್ಮಶಾನದಲ್ಲಿ ಸೇರಿದ್ದರು. ಊರಿನಲ್ಲಿ ಯಾರು ಸತ್ತಿರುವರೆಂಬ ಪ್ರಶ್ನೆ ಬಹುವಾಗಿ ಕಾಡಿ ಅಲ್ಲಿ ಸೇರಿದ್ದ ಎಲ್ಲರ ನಡುವೆ ತೂರಿಕೊಂಡು ಎದುರು ಬರುವ ಹೊತ್ತಿಗೆ ಅಣ್ಣನ ಮಗ ಶ್ರೀರಾಮ ಧಗಧಗನೆ ಉರಿಯುತ್ತಿರುವ ಬೆಂಕಿಯ ಕೊಳ್ಳಿಯಿಂದ ಚಿತೆಯ ಮೇಲೆ ಮಲಗಿಸಿದ್ದ ತಮ್ಮ ಶರೀರಕ್ಕೆ ಬೆಂಕಿ ಇಡುತ್ತಿದ್ದ!

ಮತ್ತಷ್ಟು ಸುದ್ದಿಗಳು

Latest News

ಒಂದೇ ದಿನ 14,256 ಜನರಿಗೆ ಕೊರೋನಾ ಸೋಂಕು,152 ಮಂದಿ ಸಾವು

Newsics.com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಮುಂದುವರಿದಿದೆ.ಕಳೆದ  24 ಗಂಟೆಯಲ್ಲಿ  14, 256 ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.39,684 ಕ್ಕೆ...

ಪ್ರತಿಭಟನಾ ನಿರತ ರೈತರ ಹತ್ಯೆಗೆ ಸಂಚು: ಆರೋಪಿ ಬಂಧನ

Newsics.com ನವದೆಹಲಿ: ಕೇಂದ್ರದ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ರಕ್ತಪಾತ ಹರಿಸಲು ಸಂಚು ಹೂಡಿದ್ದ ಆರೋಪಿಯನ್ನು ರೈತರು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯ ಹೆಸರು...

ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಬರ್ಬರ ಹತ್ಯೆ

Newsics.com ಪಾಟ್ನ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅತ್ಯಂತ ದಾರುಣ ಕೃತ್ಯ ನಡೆದಿದೆ. ಮನೆಯೊಂದಕ್ಕೆ ದಾಳಿ ನಡೆಸಿದ ದುಷ್ಕರ್ಮಿಗಳು 15 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ. ಕತ್ತಿಯಿಂದ ಕಡಿದು ಈ ಹತ್ಯೆ ಮಾಡಲಾಗಿದೆ. ಮೃತಪಟ್ಟ ಬಾಲಕಿಯನ್ನು  ಅಂಶು...
- Advertisement -
error: Content is protected !!