Sunday, October 1, 2023

ವಿನತಿ

Follow Us

  • ಅರ್ಚನಾ ಎಚ್.
    response@134.209.153.225

ದ್ಯಾವ ಮಧುರ ಯಾತನೆಗೆ ಒಳಪಟ್ಟು ಆ ದೇಹ ತಣಿದಿತ್ತೋ! ? ಮಾಸಗಳುರುಳಿ, ಋತುಗಳು ಹೊರಳಿ ಸಂವತ್ಸರಗಳು ದಾರಿ ಸವೆಸಿ, ಸುಖದ ತೃಷೆಯ ಭಾದೆಗೊಳಗಾಗಿ ಒಣಗಿ ಬರಡಾಗಿದ್ದ ಭುವಿಗೆ, ಮೊದಲ ಸ್ಪರ್ಶದ ಹರ್ಷದ ಮಳೆಯ ಹನಿ ಸೋಕಿದಂತೆ, ಉರಿಯೆದೆಯೊಳಗೆ ಬಿಸಿಯಾರಿ ತಣಿದು ಮಣಿದು ಸೋತಂತೆ, ತೃಪ್ತಿಯ ಪ್ರಸನ್ನತೆಯ ಭಾವ ಅವಳಲ್ಲಿ ಮೆತ್ತನೆ ಮನೆ ಮಾಡಿತ್ತು…
ಮೋಡದ ಬೆವರ ವಾಸನೆಯೀಗ ಇಳೆಯ ಮೈಯಲ್ಲಿ ಘಮಿಸಿದಂತೆ….!ಅಷ್ಟು ಸಾಮಿಪ್ಯ…!! ಮತ್ತಷ್ಟು ಸೆಳೆತ….!!
ಭಾವೋದ್ವೇಗಕ್ಕೆ ಮತ್ತೆ ಒಳಗಾಗುವಾಸೆ… ಅವನು ಸುಶ್ರಾವ್ಯವಾಗಿ ಮೀಟಿದ ತಂತಿಗಳನ್ನು ಬೆರಳುಗಳ ಹಿತ ಸ್ಪರ್ಶದಿಂದ ನುಡಿಸಿಕೊಳ್ಳುವಾಸೆ…ಅದೇ ರಾಗ, ತಾಳ, ಲಯ ತಪ್ಪದೆ ತನ್ನದಿಷ್ಟನ್ನೂ ಉಳಿಸಿಕೊಳ್ಳದೆ ಪುನಃ ಪುನಃ ಅರ್ಪಿಸುವ ಬಯಕೆ… ತೀರದ ಬಿಕ್ಕಳಿಕೆ…!
ಬೇಸಿಗೆಯ ಝಳಪು ಸುಡುಬಿಸಿಲಿನೊಂದಿಗೆ ಆಚೆ ಠಿಕಾಣಿ ಹೂಡಿತ್ತು…ಬಿಸಿಲಿನ ಉದ್ಧಟತನಕ್ಕೆ ಅವರುಸಿರ ಬಿಸಿಗಾಳಿ ತಾಕಿ ಮಧ್ಯಾಹ್ನದ ಸೂರ್ಯ ಸುಖಾಸುಮ್ಮನೆ ಸುಡಹತ್ತಿದ್ದ…
ಅವನು ಹಿಡಿದಿದ್ದ ಕುಂಚಕ್ಕೆ ಇವಳ ಕೈಗಳೂ ಜೊತೆಯಾದವು… ಕಾಮನ ಬಿಲ್ಲಿನ ಬಣ್ಣಗಳಷ್ಟನ್ನೂ ಬದುಕಿಗೆ ತುಂಬಿಕೊಳ್ಳುವ ಆಸೆ ಇರ್ವರಲ್ಲೂ…
ಬಿಳಿಯ ಬಣ್ಣದ ವ್ಯಾಮೋಹವೇನಿಲ್ಲ.. ಕೆಂಪು, ಹಸಿರು ನೇರಳೆ, ಕೇಸರಿ, ಕಂದು, ಕಿತ್ತಳೆ ,ನೀಲಿ, ಕಡುನೀಲಿ, ಕಡುಕೆಂಪು, ಹಳದಿ, ಬೂದು, ಪುರುಷರತ್ನ , ಗುಲಾಬಿ, ಕೆನ್ನೇರಳೆ , ಕಪ್ಪು….. ಯಾವುದಾದರೂ ಆಯಿತು.. !ಕುಂಚದಲ್ಲರಳಿದ ಚಿತ್ರ ಸುಂದರವಾಗಿರಬೇಕಷ್ಟೇ ಎನ್ನುವ ಮನೋಧರ್ಮ ಹೊಂದಿದವರು…

***

ವೈಶಾಲಿಗೆ ಹತ್ತು ವರ್ಷದ ಮಗಳಿದ್ದಾಳೆ.. ಆ ಮಗು ಬೆಳೆದದ್ದು ಮುಕ್ಕಾಲು ಭಾಗ ಪಕ್ಕದ ಮನೆಯ ಸುಶೀಲ ಪದ್ಮನಾಭರ ಮನೆಯಲ್ಲೇ..ಮಗು ಹೊಟ್ಟೆಯಲ್ಲಿರುವಾಗಲೇ ಅಪ್ಪನನ್ನು ಕಳೆದುಕೊಂಡಿತ್ತು..ತೌರಿಂದಲೂ ಅಸಡ್ಡೆಗೊಳಗಾಗಿ , ಅತ್ತೆ ಮಾವನ ಕಿರುಕುಳ ತಾಳಲಾರದೆ ಎಂಜಿನಿಯರಿಂಗ್ ಓದಿದ್ದ ಅವಳು ದುಡಿಯಲು ಶುರುಮಾಡಿ ಎಲ್ಲರಿಂದ ದೂರವಾಗಿ, ಯಾರ ಹಂಗಿಲ್ಲದೆ ಬದುಕುತ್ತಿದ್ದಳು….. ಪಕ್ಕದ ಮನೆಯವಳಾದ್ದರಿಂದ ಸುಶೀಲ ಪದ್ಮನಾಭರಿಗೆ ಹಾಗೂ ಅವರ ಒಬ್ಬನೇ ಸುಪುತ್ರ ವಿಕ್ರಾಂತ್ ಗೆ ವೈಶಾಲಿಯ ಮೇಲೆ ಎಲ್ಲಿಲ್ಲದ ಗೌರವ ಪ್ರೀತಿ…

ಬೆಳ್ಳಗೆ ತೆಳ್ಳನೆಯ ಮೈಕಟ್ಟು.. !
ಚೈತ್ರ ಮಾಸದ ಹೂಬಿರಿದಂತೆ ಅವಳ ಸೌಂದರ್ಯ.. ವಸಂತದ ಕೋಗಿಲೆಯಂತೆ ಇಂಪಾದ ದನಿ..ಧಮನಿ ಧಮನಿಗಳಲ್ಲೂ ಬಯಕೆ ತುಂಬುವಂತ ಮೈಮಾಟ, ಸಂಜೆರಾಗದಂತವಳ ನಗು, ಕೆನ್ನೆಯೆರಡು ಗುಳಿಗಳು ಕಂದಕಗಳಂತೆ , ಬಿದ್ದರೆ ಉಳಿವಿಲ್ಲ…ಎದ್ದೇಳಲೂ ಸಾಧ್ಯವಿಲ್ಲ..! ಅದೆಷ್ಟು ಮಂದಿ ಇವಳ ಸೌಂದರ್ಯಕ್ಕೆ ಮಾರುಹೋಗಿದ್ದರೋ ಕಾಣೆ…!? ಸಾಲದ್ದಕ್ಕೆ ಐದೂವರೆ ಅಡಿ ಎತ್ತರದ ಬಳುಕುವ ಬಳ್ಳಿಯ ದೇಹ..
ಸುಸಂಸ್ಕೃತ ವಿದ್ಯಾವಂತ ಮಹಿಳೆ ಆಕೆ.. ಎಲ್ಲ ಇದ್ದೂ ಗಂಡನಿರದ ಕೊರಗೊಂದೆ ಆಕೆಯನ್ನು ತೀವ್ರವಾಗಿ ಭಾದಿಸಿದ್ದು…
ಹಾಗೆ ನೋಡಿದರೆ ವಿಕ್ರಾಂತನಿಗೂ ಅವಳಿಗೂ ವಯಸ್ಸಿನ ಅಂತರ ಹತ್ತು ವರ್ಷಗಳದ್ದೇನೋ..ಅವಳನ್ನು ಅಕ್ಕ ಎಂದು ಸಂಭೋದಿಸು ಎಂಬುದು ಸುಶೀಲಾಳ ಆಣತಿ ಆದರೆ ವಿಕ್ರಾಂತ್ ಗದು ಇಷ್ಟವಿರಲಿಲ್ಲ…ಅವನಿಗರಿವಿರದಂತೆ ವೈಶಾಲಿಯನ್ನು ಕಳೆದ ಮೂರು ವರ್ಷಗಳಿಂದ ಬಹುವಾಗಿ ಆರಾಧಿಸುತ್ತಿದ್ದ..ಕನಸಲ್ಲಿ ಎಷ್ಟೋ ಬಾರಿ ಅವಳನ್ನು ಅಪ್ಪಿಕೊಂಡದ್ದಿದೆ.. ನಾಲ್ಕನೇ ಸೆಮಿಸ್ಟರ್ ಎಂಜಿನಿಯರಿಂಗ್ ಓದುತ್ತಿದ್ದ ಅವನಿಗೆ
ನಾನು ವಯಸ್ಸಿನಲ್ಲಿ ಚಿಕ್ಕವನಾದರೇನು? ದುಡಿದು ಅವಳಿಗೊಂದು ಬಾಳು ಕೊಡೋಣ ಅನ್ನೋ ಬಯಕೆ ಮೀಸೆಯೊಡನೆಯೇ ಚಿಗುರೊಡೆಯುತ್ತಿತ್ತು….ಪುಟ್ಟ ವಿನತಿಯನ್ನು ಗಾಡಿಯಲ್ಲಿ ಸುತ್ತಿಸೋದು.. ಚಾಕೊಲೇಟ್ ಕೊಡಿಸೋದು,ಅವಳೊಟ್ಟಿಗೆ ಆಡೋದು..ಒಟ್ಟಿನಲ್ಲಿ ಮಗಳಂತೆ ಮಗುವನ್ನು ಪ್ರೀತಿಸುತ್ತಿದ್ದ..

***

ನಾನು ಕಾಲೇಜು ಮುಗಿಸಿ ಮನೆಗೆ ಹೊರಟಿದ್ದೆ…ಮನದಲ್ಲಿ ತುಂಬಿದ್ದ ವೈಶಾಲಿಯ ಬಗೆಗಿನ ಪ್ರೀತಿ ಕಾಳಜಿ ಕಾಲೇಜು ಬಿಟ್ಟೊಡನೆ ಮನೆ ಸೇರುವಂತೆ ಮಾಡುತಿತ್ತು..ಪುಟ್ಟ ವಿನತಿ ನನಗಾಗೇ ಕಾಯುತ್ತಿದ್ದಳು..ನನ್ನ ಸ್ಕೂಟರ್ ಸೌಂಡ್ ಕೇಳಿದೊಡನೆ ಓಡಿ ಬಂದು ಗೇಟ್ ಬಳಿ ನಿಲ್ಲುತ್ತಿದ್ದಳು.. ಒಂದು ರೌಂಡ್ ಹೊಡೆದು ಚಾಕೊಲೇಟ್ ಕೊಡಿಸಿ ಮನೆಗೆ ಬಿಡುವುದು ರೂಢಿಯಾಗಿಬಿಟ್ಟಿತ್ತು…! ನನಗೂ ಆ ಮಗುವಿಗೂ ಸುಮಾರು ಹತ್ತು ವರ್ಷಗಳ ನಂಟು..ಅದೇ ಗುಂಗಿನಲ್ಲಿ ಗಾಡಿಯಲ್ಲಿ ಹೊರಟೆ…ವಿಧಿಯ ಆಟವೇ ಬೇರೆಯಾಗಿತ್ತು..
ವೈಶಾಲಿ ಅವನನ್ನು ಗಟ್ಟಿಯಾಗಿ ತಬ್ಬಿದ್ದಾಳೆ..ಕಣ್ಣುಗಳು ಮಂಜಾದವು..
ಅವನು ಅದನ್ನು ಆಸ್ವಾದಿಸುತ್ತಾ, ಗಾಳಿಗೆ ಹಾರಿ ಬಿಟ್ಟಿದ್ದ ಅವಳ ಕೂದಲು, ಅವನ ಕೆನ್ನೆಗಳನ್ನು ಮುತ್ತಿಕ್ಕುವಾಗ ಅವಳನ್ನೊಮ್ಮೆ ಹಿಂತಿರುಗಿ ನೋಡಿ ತುಂಟನಗೆ ಚೆಲ್ಲಿ ನಿಧಾನವಾಗಿ ಬೈಕ್ ಓಡಿಸುತ್ತಿದ್ದಾನೆ…ಆ ದೃಶ್ಯ ಅರಗಿಸಿಕೊಳ್ಳಲಾರದೇ ಹೋದೆ.. ಮೈ ಕಂಪಿಸಿತು… ಹೃದಯದ ಸಾವಿರ ಆಸೆಗಳನ್ನು ನುಚ್ಚುನೂರು ಮಾಡಿಬಿಟ್ಟವು….!
ಅಷ್ಟೇ ! ಕಣ್ಮುಚ್ಚಿದೆ..!

” ವಿಕ್ರಾಂತ್ ! ಮಗು ಕಣ್ಣು ಬಿಡೋ”! ಅಮ್ಮ ಜೋರಾಗಿ ಅಳೋದು ಕೇಳಿಸುತಿತ್ತು… ಕಷ್ಟ ಪಟ್ಟು ಕಣ್ಣು ಬಿಟ್ಟೆ.. ಅಪ್ಪ ಅಮ್ಮ ವೈಶಾಲಿ, ಜೊತೆಗೆ ಪುಟ್ಟ ವಿನತಿ ಕಣ್ಣೀರಿಡುತ್ತಾ ನಿಂತಿದ್ದಾರೆ… ಕಾಲು ಹೆಣಭಾರವಾಗಿದೆ..ಮಿಸುಕಾಡಿಸಲೂ ಆಗುತ್ತಿಲ್ಲ..ತಲೆ ಎತ್ತೋಣವೆಂದರೆ ಧಿಂ ಅಂತ ಗಿರಕಿ ಹೊಡೆಯುತ್ತಿದೆ…..ಮೈಮೇಲೆ ಕಾರೋ ಲಾರಿಯೋ ಹರಿದುಹೋಗಿದೆಯೇನೋ ಅನ್ನೋವಷ್ಟು ನೋವು, ಜಜ್ಜಿ ಹೋದ ಮಾಂಸಖಂಡಗಳ ಅತೀವ ಯಮಯಾತನೆ..ಗಟ್ಟಿಯಾಗಿ ಕಿರುಚಬೇಕೆನಿಸಿತು..ದೇಹದ ನೋವಿಗಲ್ಲ ಹೃದಯಕ್ಕಾದ ಬೇನೆಗೆ… !
“ಜೋಪಾನವಾಗಿ ಗಾಡಿ ಓಡ್ಸೋದಲ್ವಾಪಾ!? ಕಾಲು ಕೈ ಎರಡೂ ಮುರಿದುಕೊಂಡಿದ್ಯಾ…ವಿಜಯ್ ಹಾಸ್ಪಿಟಲ್ಗೆ ಅಡ್ಮಿಟ್ ಮಾಡಿದ್ದ ನಿನ್ನ… ಇಷ್ಟು ಹೊತ್ತು ಇಲ್ಲೇ ಇದ್ದ ಈಗ ಫೋನ್ ಬಂತು, ಆಚೆ ಹೋದ ತಾಳು ಕರಿತೀನಿ “ಅಂತ ಅಮ್ಮ ನನ್ನ ಗೆಳೆಯನನ್ನು ಕರೆಯಲು ಹೋದ್ಲು..ಇತ್ತ ಅಪ್ಪ ಡಾಕ್ಟರ್ ಗೆ ಹೇಳ್ಬೇಕು ನಿನಗೆ ಪ್ರಜ್ಞೆ ಬಂದಿರೋದು ಮಗು ಅಂತ ಹೋದರು.. ಉಳಿದಿದ್ದು ವೈಶಾಲಿ ಮತ್ತವಳ ಮಗಳು ವಿನತಿ…

” ಸದ್ಯ ತಲೆಗೇನು ಏಟು ಬಿದ್ದಿಲ್ಲ… ಬಿಎಂಟಿಸಿ ಬಸ್ಸಿಗೆ ಡಿಕ್ಕಿ ಹೊಡೆದಿದ್ಯಂತೆ! ಪ್ರಾಣಕ್ಕೇನು ಅಪಾಯವಾಗ್ಲಿಲ್ಲವಲ್ಲ..ಅದೇ ಅದೃಷ್ಟ !” ಅಂದಳು…ವಿನತಿ ” ಮಾಮ ಗೆಟ್ ವೆಲ್ ಸೂನ್ ಬೇಗ ಹುಷಾರಾಗಿ ಮನೆಗೆ ಬನ್ನಿ ” ಅಂದಳು.. ಇಬ್ಬರ ಮುಖದಲ್ಲೂ ದುಃಖವಿತ್ತು….ವಿನತಿಯನ್ನು ನೋಡಿ ದುಃಖ ಒತ್ತರಿಸಿ ಬಂತು..

***

ಕುಂಚವನ್ನೇ ಕಸುವು ಮಾಡಿಕೊಂಡು ಬದುಕುತ್ತಿದ್ದ ಗಡ್ಡಧಾರಿ ಅನಿರುದ್ದನ ಮೇಲೆ ಮತ್ಸರ , ಉಮ್ಮಳಿಕೆ ಹೆಚ್ಚುತ್ತಲೇ ಇತ್ತು.. ಎಷ್ಟೋ ಸಲ ಕನಸಿನಲ್ಲಿ ಅನಿರುದ್ದನನ್ನು ಕೊಲ್ಲುವ ಪ್ರಯತ್ನದಲ್ಲಿ ಯಶಸ್ವಿಯಾಗಿ ನಿಟ್ಟುಸಿರು ಬಿಟ್ಟದ್ದುಂಟು…ಅದು ಬರೇ ಕನಸಾಗಿತ್ತಷ್ಟೇ..!! ಸಂಧ್ಯಾವಂದನೆ ಮಾಡುತ್ತಿದ್ದ ಕೈಗಳು ಚೂರಿ ಹಿಡಿಯುವ ಸಾಹಸಕ್ಕೆ ಹೋಗಲಾರವು! ಓದಿನ ಕಡೆ ಗಮನ ಹರಿಸಲು ಹರಸಾಹಸ ಪಟ್ಟರೂ, ಈ ಮನಸ್ಸಿಗೆ ರೂಮಿನ ಕಿಟಕಿಗಳಿಂದ ಕಾಣುತ್ತಿದ್ದ ವೈಶಾಲಿಯ ಮನೆಯ ಬಾಗಿಲ ಕಡೆಗೇ ಲಕ್ಷ್ಯ …ನಿದ್ದೆ ಬರದೆ ವೈಶಾಲಿಯ ಧ್ಯಾನದಲ್ಲೇ ಇದ್ದ ನನಗೆ ಗಂಟೆ ೨ ಬಾರಿಸಿದ್ದು ತಿಳಿಯಲೇ ಇಲ್ಲ… ಕಿಟಕಿಯ ಬಳಿ ಹೋದೆ… ಕತ್ತಲು ಒಳಗೂ ಹೊರಗೂ ಆವರಿಸಿತ್ತು..
“ಇದೇನಾಶ್ಚರ್ಯ!! ವೈಶಾಲಿಯ ಮನೆಯ ಬಾಗಿಲು ತೆರೆದಿದೆ!? “ಮುಂದಿನದೇನೋ ಯೋಚಿಸುವಷ್ಟರಲ್ಲಿ ಅನಿರುದ್ದ ಗಾಡಿ ಅಷ್ಟು ದೂರದಲ್ಲಿ ನಿಲ್ಲಿಸಿ ವೈಶಾಲಿಯ ಮನೆ ಗೇಟ್ ಮೆಲ್ಲಗೆ ತೆರೆದ.. ವೈಶಾಲಿ ಓಡಿ ಬಂದು ಅವನನ್ನು ಗಟ್ಟಿಯಾಗಿ ತಬ್ಬಿದಳು..ನನ್ನೆದೆ ತಾಳ ಹದ್ದುಮೀರಿ ಹೊಡೆಯುತ್ತಿತ್ತು…ಬೀದಿ ದೀಪದ ಬೆಳಕಲ್ಲಿ ಇಬ್ಬರ ತುಟಿಗಳು ಒಂದಾಗಿದ್ದು ಕಂಡಿತು.. ಹರಿದ ನನ್ನ ಹೃದಯ ರಕ್ತಸ್ರಾವದಿಂದ ವಿಲಗುಡುವಷ್ಟು ಯಾತನೆ….! ಎದೆಯ ಮೇಲೆ ಕೈಯಿಟ್ಟುಕೊಂಡೆ.. ಅವನ ಕಾಲ್ಗಳ ಮೇಲೆ ಇವಳ ಕಾಲುಗಳು… ಹಾಗೇ ನಿಧಾನವಾಗಿ ನಡೆಯುತ್ತಾ ಇಬ್ಬರೂ ಒಳಸೇರಿದರು…ಬಾಗಿಲು ಮುಚ್ಚಿತು…. ಭಾರವಾದ ಹೃದಯದಿಂದ ವ್ಯಸ್ತನಾಗಿ ಅಲ್ಲೇ ಕುಸಿದೆ… ಇನ್ನೆಂದೂ ಆ ಕಿಟಕಿಗಳನ್ನು ತೆರೆಯದಂತೆ ನಿರ್ಧರಿಸಿದೆ…! ಹೃದಯದ ಕಿಟಕಿಗಳೂ ನಿರೀಕ್ಷೆಗಳು ಅದರೊಟ್ಟಿಗೆ ಮುಚ್ಚಿಬಿಟ್ಟವು…
***

ಆಫೀಸಿನ ಕೆಲಸದ ಮೇಲೆ ಮುಂಬೈಗೆ ಹೋಗಿದ್ದ ನನಗೆ ಪ್ರತಿಷ್ಠಿತ ಹೋಟೆಲ್ನಲ್ಲಿ ತಂಗಲು ವ್ಯವಸ್ಥೆ ಮಾಡಿಕೊಡಲಾಗಿತ್ತು…ಹೊಸ ಪ್ರಾಜೆಕ್ಟ್ ಮಾತುಕತೆಗೆ ನಮ್ಮ ಕಂಪೆನಿಯ ಪ್ರತಿನಿಧಿಯಾಗಿ ನನ್ನನ್ನು ಕಳುಹಿಸಲಾಗಿತ್ತು…
ಜವಾಬ್ದಾರಿ , ಒತ್ತಡ ಹೆಚ್ಚಾಗಿದ್ದ ಕಾರಣ ಹೊಸದಾಗಿ ಮದುವೆಯಾಗಿದ್ದ ಊರ್ಮಿಳಾಳನ್ನು ಬೆಂಗಳೂರಿನಲ್ಲೇ ಬಿಟ್ಟುಬರಬೇಕಾಗಿ ಬಂತು…ನಾನು ತಂಗಿದ್ದ ಲಾಡ್ಜ್ ವೈಭವೋಪೇತವಾಗಿತ್ತು… ಅವಳನ್ನು ಇಲ್ಲಿ ಕರೆದುಕೊಂಡು ಬಂದಿದ್ದರೆ ಎಷ್ಟು ಚೆನ್ನಾಗಿರೋದು!? ಅನ್ನಿಸಿತು…ಒಬ್ಬನೇ ಅಂದಿನ ಕೆಲಸ ಮುಗಿಸಿ ಹಂಸತೂಲಿಕದಂತಿದ್ದ ಹಾಸಿಗೆಗೆ ಒರಗಿದಾಗ ಊರ್ಮಿಳಾಳ ಈ ಮಿಸ್ಸಿಂಗ್ ಯೂ ಮೆಸೇಜ್ಗಳು , ಚುಂಬನದ ಎಮೋಜಿಗಳು ಮೈ ಜುಂ ಎನಿಸಿದವು… ಅಷ್ಟರಲ್ಲೇ ಇಂಟರ್ಕಾಮ್ ರಿಂಗಣಿಸಿತು…
ಎರಡು ದಿನದಿಂದ ಬಿಡುವಿಲ್ಲದೆ ಕೆಲಸದ ಮೇಲಿದ್ದ ಕಾರಣ ನನ್ನ ರೂಮಿನ ಸ್ವಚ್ಚತಾ ಕಾರ್ಯ ಮಾಡಲು ಅವರಿಗೆ ನನ್ನಿಂದ ಅನುಮತಿ ಸಿಕ್ಕಿರಲಿಲ್ಲ…ಇಂದು ಸ್ವಲ್ಪ ಬೇಗ ಬಂದಿದ್ದೆ… ಹಾಸಿಗೆ ಮೇಲೆ ಹರಡಿದ್ದ ನನ್ನ ಬಟ್ಟೆಗಳನ್ನು ಎತ್ತಿಟ್ಟೆ… ವ್ಯಾಕ್ಯೂಮ್ ಕ್ಲೀನರ್ ಹಿಡಿದು ಹುಡುಗ ಬಂದ..ನಾನು ಬಾಲ್ಕಾನಿಯಲ್ಲಿ ನಿಂತೆ…ಅಷ್ಟರಲ್ಲೇ ಕೆಂಪನೆಯ ಬಕ್ಕೆಟ್ಟಿನಲ್ಲಿ ಲೈಸಾಲ್, ಹಾರ್ಪಿಕ್, ಕ್ಲೀನಿಂಗ್ ಬ್ರಷ್ ಗಳನ್ನು ಹಿಡಿದು ಹದಿನಾರರ ಹುಡುಗಿ ಬಂದಳು… ನಿಂತ ನೆಲ ಒಮ್ಮೆಲೇ ನಡುಗಿದಂತಾಯ್ತು… ಬಾಲ್ಕಾನಿಯಲ್ಲಿದ್ದ ನನ್ನನ್ನು ಆಕೆ ಗಮನಿಸಿದಂತೆ ಕಾಣಲಿಲ್ಲ… ರೂಮ್ ಕ್ಲೀನ್ ಮಾಡುತ್ತಿದ್ದ ಹುಡುಗನ ಜೊತೆ ಏನೋ ಸಂಭಾಷಣೆ ನಡೆಸುತ್ತಿದ್ದಳು…ಕಾಲಲ್ಲಿ ಕಾಲುಂಗುರವಿತ್ತು..ಕತ್ತಲ್ಲಿ ಕರಿಮಣಿ! ಇದು ಇದು…?!

“ಆಂಟಿ ನಾನು ಮದುವೆಯಾಗ್ತಿದ್ದೇನೆ…” ವೈಶಾಲಿ ಅಮ್ಮನಿಗೆ ಹೇಳುತ್ತಿದ್ದಳು… ರೂಮಿನಲ್ಲಿ ಚಿಲಕ ಜಡಿದು ಓದುತ್ತಿದ್ದ ಕಿವಿಗಳು ಅವಳ ಮಾತು ಕೇಳಿದ್ದೆ ಬೆಚ್ಚಿ ಬಿದ್ದವು..
” ಎಷ್ಟು ವರ್ಷ ಒಂಟಿಯಾಗಿರಲಿ ಮುಂದೆ ನನಗೂ ಆಶ್ರಯ ಬೇಕಲ್ಲಾ ! ನೀವು ಇಷ್ಟು ವರ್ಷ ಅದನ್ನೇ ಹೇಳಿದ್ದಿರಿ… ನನ್ನವರು ಅಂತ ಯಾರು ಇಲ್ಲ ನನಗೆ… ನೀವೇ ಬಂದು ತಂದೆ ತಾಯಿ ಸ್ಥಾನದಲ್ಲಿ ಮದುವೆ ಮಾಡಿಸಿ ” ಅಂದಳು..
“ತುಂಬಾ ಒಳ್ಳೇದಮ್ಮಾ! ಲವ್ ಮ್ಯಾರೀಜ್ ನಾ? ಹುಡುಗ ಏನು ಮಾಡ್ತಾನೆ!? ” ಅಮ್ಮ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಳು…
“ಆಂಟಿ ಅವರಿಗೆ ಸರಿಯಾದ ಜಾಬ್ ಇಲ್ಲ… ಮದುವೆಯಾದ ಮೇಲೆ ಮುಂಬೈಗೆ ಹೋಗ್ತೀವಿ…ಅಲ್ಲಿ ಅವರ ತಂದೆ ತಾಯಿ ಇದಾರಂತೆ ಅಲ್ಲೇ ನಾನು ಯಾವ್ದಾದ್ರು ಕಂಪನಿಗೆ ಸೇರ್ತಿನಿ…ತುಂಬಾ ಒಳ್ಳೆಯವರು… ವಿನತಿ ಅಪ್ಪ ಇದ್ದಿದ್ರೂ ಈ ರೀತಿ ನೋಡ್ಕೊತಾ ಇರಲಿಲ್ಲವೇನೋ ಅಷ್ಟು ಮುದ್ದು ಮಾಡ್ತಾರೆ ವಿನತಿನಾ….
ಅವಳಿಗೂ ಇಷ್ಟ ಅವರಂದ್ರೆ…. ಅನಿರುಧ್ ಅಂತಾ ಆರ್ಟಿಸ್ಟ್… ಮುಂಬೈಗೆ ಹೋದ ಮೇಲೆ ಆರ್ಟ್ ಸ್ಕೂಲ್ ಮಾಡೋ ಪ್ಲಾನ್ ಇದೆ… ” ಅಂತೆಲ್ಲಾ ಹೇಳುತ್ತಿದ್ದಳು

“ಆಯ್ತಮ್ಮಾ ತವರು ಮನೆ ರೇಷ್ಮೆ ಸೀರೆ ನಾವೇ ಕೊಡ್ತೀವಿ..
ನಮಗೂ ಹೆಣ್ಣು ಮಕ್ಕಳು ಇಲ್ಲ… ನಾಳೆ ಬಾ ಸೆಲೆಕ್ಷನ್ ಗೆ ಹೋಗೋಣ..
ಮದುವೆ ಯಾವಾಗ!? ಈ ಮನೆ ಏನು ಮಾಡ್ತೀಯಾ?” ಅಮ್ಮ ಕೇಳುತ್ತಿದ್ದಳು..

“ಮಾರೋಣ ಅಂದುಕೊಂಡಿದೀವಿ… ಮುಂಬೈನಲ್ಲೇ ಸೆಟಲ್ ಆಗೋ ಪ್ಲಾನ್ ಇದೆ.. ಮುಂದಿನ ತಿಂಗಳು ವಿನತಿಗೂ ಎಕ್ಸಾಮ್ಸ್ ಮುಗಿಯುತ್ತೆ..ಟಿಸಿ ತಗೊಳೋಕು ಸರಿ ಹೋಗುತ್ತೆ ಅದಕ್ಕೆ ಏಪ್ರಿಲ್ ೧೮ ಮದುವೆ ಆಂಟಿ.. ಸಿಂಪಲ್ ಆಗಿ ದೇವಸ್ಥಾನದಲ್ಲಿ ಆಗೋಣ ಅಂನ್ಕೊಡಿದೀವಿ…”
ಬಕ್ಕೆಟ್ ಹಿಡಿದು ಬಂದಿದ್ದ ವಿನತಿಯನ್ನೇ ಹೋಲುವ ಕೆಲಸದವಳನ್ನು ನೋಡಿ, ವಿಕ್ರಾಂತ್ ನ
ಸ್ಮೃತಿ ಪಟಲದಲ್ಲಿ ವೈಶಾಲಿಯ ಮಾತುಗಳು ತಟ್ಟನೆ ಕೋಲ್ಮಿಂಚಿನಂತೆ ಸರಿದವು..

ಅಯ್ಯೋ!? ನಾನೇಕೆ ಮರೆತಿದ್ದೆ.. ಇಲ್ಲೇ ಇರೋದಲ್ವಾ ವೈಶಾಲಿ! ಹಾಗದರೆ ಇವಳು!?
ಹೌದು ! ಇದು ವಿನತಿಯೇ!!! ಆಗ ಇವಳಿಗೆ ೧೦ ವರ್ಷ ಈಗ‌ ೧೭ ವರ್ಷ ಇರಬಹುದು ಸಂಪೂರ್ಣ ಬದಲಾಗಿದ್ದಾಳೆ… ಎಷ್ಟು
ಬೆಳ್ಳಗೆ ಮುದ್ದಾಗಿದ್ದಳು ..! ಅದೇ ಮುಖ! ಬಹುವಾಗಿ ಬಳಲಿದ ಕಣ್ಣುಗಳು! ಅವಳಲ್ಲದಿದ್ದರೆ!? ನೋಡೋಣ ಎಂದು ಸಂಶಯದಲ್ಲೇ ಬಾಲ್ಕಾನಿಯಿಂದ ರೂಮಿನ ಒಳನಡೆದೆ… ನನ್ನನ್ನು ನೋಡಿದವಳೇ ಗಾಬರಿಯಾಗಿಬಿಟ್ಟಳು…. ಬಕೆಟ್ ಕೆಳಗೆ ಬಿತ್ತು…. ಅಂಕಲ್ ! ಅಂತಾ ಓಡಿ‌ಬಂದು ಮಗುವಿನ ಹಾಗೆ ತಬ್ಬಿದಳು…. ಒಂದೇ ಸಮನೆ ಅಳಲು ಶುರುಮಾಡಿದಳು…ಅವಳ ತಲೆಯನ್ನೊಮ್ಮೆ ನೇವರಿಸುತ್ತಾ ಸಮಾಧಾನಿಸಲು ಯತ್ನಿಸಿದೆ…ಉಸಿರುಕಟ್ಟಿಸಿಕೊಂಡು ಅಳುತ್ತಿದ್ದಳು…. ನನಗೂ ಗಾಬರಿಯಾಯ್ತು…
“ವಿನು ಪುಟ್ಟ ಇದೇನು ನಿನ್ನ ಅವಸ್ಥೆ!?? ಮದುವೆಯಾಗಿದ್ದೀಯಾ? ಅಮ್ಮ ಎಲ್ಲಿ !? ಮದುವೆಯಾಗಿ ಹೋದ ನಿಮ್ಮಮ್ಮ ಇಷ್ಟು ವರ್ಷವಾದರೂ ಒಮ್ಮೆಯೂ ನಮಗೆ ಫೋನ್ ಮಾಡಿಲ್ಲ… ಏನಾಗಿದೆ ನಿಮಗೆ!? ಸಮಾಧಾನ ಮಾಡಿಕೋ! ” ನನ್ಯಾವ ಮಾತುಗಳಿಗೂ ಆಕೆ ಉತ್ತರಿಸುವ ಪರಿಸ್ಥಿತಿಯಲ್ಲಿರಲಿಲ್ಲ..
ನೆಲ ಕ್ಲೀನ್ ಮಾಡ್ತಿದ್ದ ಕ್ಲೀನರ್ ಬಾಯ್ ಪೆಚ್ಚಾಗಿ ನಿಂತಿದ್ದ… ನನಗೂ ಒಂದು ಕ್ಷಣ ಎಲ್ಲಾ ಸ್ಥಬ್ದವಾದಂತೆನಿಸಿತು… ವಿನತಿಯನ್ನು ನಿಧಾನವಾಗಿ ಹಾಸಿಗೆ ಮೇಲೆ ಕುಳ್ಳಿರಿಸಿ ಅಲ್ಲೇ ಇದ್ದ ಜಗ್ ನಿಂದ ಲೋಟಕ್ಕೆ ನೀರನ್ನು ವರ್ಗಾಯಿಸಿ ಕುಡಿಯಲು ಕೊಟ್ಟೆ…

“ನಿಮಗಿವಳು ಗೊತ್ತಾ?” ಅವನು ನನ್ನನ್ನು ಪ್ರಶ್ನಿಸಿದ..
“ಹೌದಪ್ಪಾ ಗೊತ್ತು…ಬೆಂಗಳೂರಿನಲ್ಲಿ ಇದ್ದಾಗ ನಮ್ಮನೇಲೆ ಬೆಳೆದ ಕೂಸಿದು… ಇವಳೇಕೆ ಈ ಕೆಲಸ ಮಾಡ್ತಿದ್ದಾಳೆ ದಯವಿಟ್ಟು ಹೇಳು” ಎಂದೆ
“ಈಕೆಯ ಗಂಡ ಚಿತ್ರ ಬರೀತಾನೆ.. ಇವರಮ್ಮನ ಆಸ್ತಿ ಲಪಟಾಯಿಸಿ ಆಕೆನಾ ಕೊಂದನಂತೆ… ಇವಳಿಗೆ ಒಂದು ವರ್ಷದ ಮಗುವಿದೆ… ಇಲ್ಲಿ ೩ ವರ್ಷದಿಂದ ಕೆಲಸ ಮಾಡ್ತಿದ್ದಾಳೆ ” ಅಂದ… ಕ್ಲೀನರ್ ಬಾಯ್ ನ ಮಾತು ಕೇಳಿ
ಎದೆ ನಡುಗಿಹೋಯ್ತು…

“ವಿನತಿ ಪುಟ್ಟ!! ಅವನು ಹೇಳ್ತಿರೋದು ನಿಜನಾ!? ಆ ಅನಿರುದ್ದ ನೀಚ! ವೈಶಾಲಿಯನ್ನು ಸಾಯಿಸಿದ್ನಾ? ಪೋಲೀಸ್ ಕಂಪ್ಲೆಂಟ್ ಯಾಕೆ ಕೊಟ್ಟಿಲ್ಲ ನೀನು!? ಈಗ ನಿನ್ನ ಮಗು ಎಲ್ಲಿ!? ಕನಸೋ ಭ್ರಮೆಯೋ ಸತ್ಯವೋ ನನ್ನ ತಲೆ ಚಿಟ್ಟು ಹಿಡಿಯುತ್ತಿತ್ತು….
ಎಲ್ಲಾ ಪ್ರಶ್ನೆಗಳಿಗೂ ಒಂದೇ ಉತ್ತರವೆಂಬಂತೆ ” ಹುಂ ಗುಟ್ಟಿದಳು….!!!!! ನನ್ನ ಮೊದಲ ಪ್ರೀತಿ ವೈಶಾಲಿ! ,ನನ್ನ ಮಗುವೆಂಬಂತೆ ಪ್ರೀತಿಸಿದ್ದ ವಿನತಿ!!…ಕೈಕಾಲು ಗಳು ಅದುರಿದವು….ಕೋಪವನ್ನೆಲ್ಲಾ ಮುಷ್ಟಿಗೆ ಒಳಗಿಟ್ಟು ಅಸಹಾಯಕನಂತೆ ಎದುರಿಗಿದ್ದ ಗೋಡೆಗೆ ಗುದ್ದಿದೆ… ಇಲ್ಲಿ ಏನು ನಡೆಯುತ್ತಿದೆ ಅನ್ನೋದರ ಅರಿವಿಲ್ಲದೆ ಕ್ಲೀನರ್ ಬಾಯ್ ಅಲ್ಲಿಂದ ಹೊರಟುಬಿಟ್ಟ..
” ನಿನ್ನ ಗಂಡ ಯಾರು!? ಅನಿರುದ್ದ ಎಲ್ಲಿದಾನೆ? ಹೇಳು ಪುಟ್ಟಾ… ನಾನಿದ್ದೇನೆ ನಿನಗೆ… ಅನಿರುದ್ದನನ್ನು ಜೈಲಿಗೆ ಹಾಕ್ಸೋಣ… ನಿನ್ನ ಮದುವೆ ಕಾನೂನು ಬಾಹಿರ… !ನಿನಗಿನ್ನು ೧೮ ವರ್ಷ ಆಗಿಲ್ಲ… ನಾನು ನಿನ್ನ ಓದಿಸ್ತೀನಿ… ಬೆಂಗಳೂರಿಗೆ ಹೋಗೋಣ …ಹೆದರಬೇಡ ಎಲ್ಲಾ ಹೇಳು…” ಅವಳಲ್ಲಿ ಧೈರ್ಯ ತುಂಬಲು ಯತ್ನಿಸಿದೆ…
ವಿನತಿ ಮತ್ತಷ್ಟು ಅತ್ತಳು…, ಸಾವರಿಸಿಕೊಂಡು
“ಅಂಕಲ್ ಅಪ್ಪನೇ ನನ್ನ ಮದುವೆ ಮಾಡಿಕೊಂಡಿದಾರೆ… ಅಮ್ಮನ್ನ ಬೆಂಕಿಯಲ್ಲಿ ಸುಟ್ಟುಬಿಟ್ರು… ನಾನು ಯಾರಿಗಾದ್ರು ಹೇಳಿದ್ರೆ ನನ್ನೂ ಹಾಗೇ ಸುಡೋದಾಗಿ ಹೆದರಿಸಿದ್ರು… ದಿನಾ ಹೊಡೀತಾರೆ..ನನ್ನ ಮಗುವನ್ನು ಸುಡ್ತೀನಿ ಅಂತಾರೆ… ಅಂಕಲ್ ನನ್ನ ನನ್ಮಗುನಾ ಕರ್ಕೊಂಡು ಹೋಗಿ ಪ್ಲೀಸ್….!ನಾನಿಲ್ಲಿ ಇರಲ್ಲಾ….” ಬಿಕ್ಕಳಿಸಿ ಅತ್ತಳು…

ಏನು!? ಅಪ್ಪಾ ಅಂದ್ರೆ ಆ ಅನಿರುದ್ದನಾ? ಅವನೇ ವಿನತಿಗೆ ಗಂಡನಾ? ಅಯ್ಯೋ ! ಪಾಪಿ ವಿಧಿಯೇ ! ಇದೆಂತಾ ಕ್ರೌರ್ಯ!? ದುರ್ವಿಧಿ…ಕರುಳು ಚುರುಗುಟ್ಟಿತು..
” ಖಂಡಿತ ಕರ್ಕೊಂಡು ಹೋಗ್ತೀನಿ ಪುಟ್ಟಾ …!! ಫಸ್ಟ್ ಪೊಲೀಸರಿಗೆ ಕಾಲ್ ಮಾಡ್ತೇನೆ… ಆಮೇಲೆ ಅವರ ಜತೆಗೆ ಮನೆಗೆ ಹೊಗೋಣ..ಮಗುವನ್ನು ತಗೊಂಡು ಅವನನ್ನು ಜೈಲಿಗೆ ಹಾಕಿಸಿ ಅಮ್ಮನ ಆತ್ಮಕ್ಕೆ ಮುಕ್ತಿ ಕೊಡಿಸೋಣ…. ”
ವಿಕ್ರಾಂತ್ ಪೊಲೀಸರಿಗೆ ರಿಂಗಣಿಸಿದ…

ಮತ್ತಷ್ಟು ಸುದ್ದಿಗಳು

vertical

Latest News

ಹಳ್ಳಕ್ಕೆ ಉರುಳಿದ ಬಸ್: 8‌ ಮಂದಿ‌ ಸಾವು, 25 ಪ್ರಯಾಣಿಕರಿಗೆ ಗಾಯ

newsics.com ಚೆನ್ನೈ: ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿ ಶನಿವಾರ ಪ್ರವಾಸಿ ಬಸ್ ಹಳ್ಳಕ್ಕೆ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು...

ಅಕ್ಟೋಬರ್‌ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಸಾಧ್ಯತೆ!

newsics.com ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಮತ್ತು ಸಾಮಾನ್ಯಕ್ಕಿಂತ ಹೆಚ್ಚು ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ. ತಮಿಳುನಾಡು, ಕರಾವಳಿ...

ಕರ್ನಾಟಕದಲ್ಲಿ ಈ ಬಾರಿ ಶೇ. 25ರಷ್ಟು ಮಳೆಯ ಕೊರತೆ

newsics.com ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಅವಧಿಯಲ್ಲಿ ಈ ವರ್ಷ ಶೇ 25ರಷ್ಟು ಮಳೆ ಕೊರತೆಯಾಗಿದೆ. ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗಿನ ನಾಲ್ಕು ತಿಂಗಳಲ್ಲಿ ಒಟ್ಟು 845 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, 635...
- Advertisement -
error: Content is protected !!