Monday, November 29, 2021

ದೇವರ ಹುಂಡಿ..!

Follow Us

“ನಾವ್ಯಾರೂ ಆ ಭಗವಂತನನ್ನು ನೋಡಿಲ್ಲ, ಸಾಕ್ಷಾತ್ಕರಿಸಿಕೊಂಡಿಲ್ಲ; ಆದರೆ ಅವನ ಇರವನ್ನು ನಂಬುತ್ತೇವೆ. ನಿತ್ಯ ಆರ್ಚಿಸಿ-ಪೂಜಿಸಿ ಆರಾಧಿಸುತ್ತೇವೆ. ಹಾಗೇ ದೇವರ ಅಸ್ತಿತ್ವವನ್ನು ನಂಬುವ ನಮಗೆ ಆ ದೇವರು ಕೆಲವು ವ್ಯಕ್ತಿಗಳ ಮೂಲಕ ಕಾಣಿಸಿಕೊಳ್ಳುತ್ತಾನೆ. ಅವನ ಅಸ್ತಿತ್ವ ಇರುವುದನ್ನು ದೃಡಿಪಡಿಸುತ್ತಾನೆ..!”
===
* ಮಂಜುನಾಥ ಹಿಲಿಯಾಣ
response@134.209.153.225
newsics.com@gmail.com

‘ಹೇ ಭಗವಂತ.. ನನ್ನ ಕ್ಷಮಿಸ್ಬಿಡು. ನಾನು ಮಾಡ್ಲಿಕ್ಕೆ ಹೊರಟದ್ದು ಮಾನಗೇಡಿ ಕೆಲಸ ಅಂದಳಿ ನಂಗೆ ತಿಳಿದಿದೆ ದೇವ್ರೆ. ಆದ್ರೆ ಆಸ್ಪತ್ರೆಯಲ್ಲಿ ನಿತ್ಯ ನರಕ ಅನುಭವಿಸ್ತಿರೋ ನನ್ನ ಕೂಸನ್ನು ಉಳಿಸ್ಕಂಬುಕೇ ಹೆತ್ತಬ್ಬಿಯಾಗಿ ನಂಗಿದ್ದ ಕೊನೆಯ ದಾರಿ ಇದೇ. ಅದ್ಕೆ ಈ ಹೇಲು ತಿಂಬೊ ಕೆಲಸಕ್ಕೆ ಇಳಿತಿದ್ದಿ. ದೇವರ ಹುಂಡಿಗೆ ಕನ್ನ ಹಾಕೋಕೇ ನಿನ್ನ ಗುಡಿಗೇ ಬಂದಿದ್ದಿ. ಈ ಪಾಪ ನನ್ನ.. ಮುಟ್ಟಲಿ.. ತಟ್ಟಲಿ. ಆದರೆ ಆಸ್ಪತ್ರೆಯಲ್ಲಿ ಮಲಗಿರೋ ನನ್ನ ಮಗಿನಾ ಮಾತ್ರ ಬೇಗ ಹುಷಾರು ಮಾಡು.. ಸೆರಗೊಡ್ಡಿ ನಿನ್ನ ಹತ್ರ ಬೇಡ್ಕಂತಿ..’

ಸುತ್ತೆಲ್ಲ ಕಪ್ಪು ಕವುಚಿ ಮಲಗಿರುವ ನೆಟ್ಟಿರುಳ ನೀರವ ರಾತ್ರಿಯಲಿ ಆ ಊರಿನ ಗ್ರಾಮ ದೇವರ ಗರ್ಭಗುಡಿಯೆದುರು ಕೈಮುಗಿದು ನಿಂತು ಕಲ್ಲು ಕರಗುವಂತೆ ಕಣ್ಣೀರಿಡುತ್ತಿದ್ದಳು ಸೀತಾ. ನಿಯಂತ್ರಿಸಿಕೊಳ್ಳಲೆತ್ನಿಸಿದರೂ ನಿಯಂತ್ರಿಸಲಾಗದ ಅವಳ ಅಳುವಿನ ಬಿಕ್ಕಳಿಕೆ ಆ ಪ್ರಶಾಂತಮಯ ದೇಗುಲದ ಶಾಂತತೆಗೆ ಧಕ್ಕೆ ತರುತ್ತಿತ್ತು.. ಬೆಳಗ್ಗೆ ಅರ್ಚಕರು ಪೂಜೆಗೈದು ಗರ್ಭಗುಡಿಯೊಳಗೆ ಹಚ್ಚಿಟ್ಟ ನಂದಾದೀಪದ ದೇದಿಪ್ಯಮಾನ ಬೆಳಕಿನಲ್ಲಿ ದೇವರು ಜ್ವಾಜಲ್ಯಮಾನನಾಗಿ ಕಂಗೊಳಿಸುತಿದ್ದ. ಸೀತಾಳ ನಡೆ-ನುಡಿಗೆ ಸಾಕ್ಷಿಯಾಗುತ್ತಿದ್ದ.

ಸೀತಾಮತ್ತೆ ಮತ್ತೆ ಉಮ್ಮಳಿಸಿ ಬರುತ್ತಿದ್ದ ಕಣ್ಣೀರನ್ನು ಕಷ್ಟಪಟ್ಟು ನಿಯಂತ್ರಿಸಿಕೊAಡಳು.ಅತ್ತು ಅತ್ತೂ ಕೆಂಡದುಂಡೆಯಾಗಿದ್ದ ಕಣ್ಣುಗಳನ್ನು ಸೆರಗಿನಿಂದ ಒರೆಸಿಕೊಂಡಳು. ದೇವಸ್ಥಾನದ ಕಾಣಿಕೆ ಡಬ್ಬಕ್ಕೆ ಕನ್ನ ಹಾಕುವುದೆಂದೂ ಮನೆಯಲ್ಲೇ ಮನಸ್ಸನ್ನು ಗಟ್ಟಿಗೊಳಿಸಿ ಆ ನೆಟ್ಟಿರುಳಿನಲಿ ಕಳ್ಳಹೆಜ್ಜೆಯನ್ನಿಡುತ್ತಾ ಅವಳು ಸಾಗಿಬಂದಿದ್ದಳು. ಆದರೂ ಗರ್ಭಗುಡಿಯೊಳಗಿನ ದೇವರ ವದನವನ್ನು ನೋಡುವಾಗ ಅವಳೆದೆ ದಿಲ್ಲನೇ ಹೊಡೆದುಕೊಳ್ಳುತ್ತಿತ್ತು.ಅಪರಾಧಿ ಭಾವ ಮೈಮನಸ್ಸುಗಳನ್ನು ತುಂಬಿ ಅವಳನ್ನು ಅಧೀರಳನ್ನಾಗಿಸುತ್ತಿತ್ತು. ಆದರೂ ಅವಳ ನಿರ್ಧಾರ ಬದಲಾಗಲಿಲ್ಲ. ಕಾಣಿಕೆ ಡಬ್ಬಕ್ಕೆ ಕನ್ನ ಕೊರೆಯಲು ಸಿದ್ಧಳಾದಳು.

ಗರ್ಭಗುಡಿಯ ಕಬ್ಬಿಣದ ಸರಳುಗಳ ಕಿಂಡಿಯಲ್ಲಿ ಶೋಭಾಯಮಾನವಾಗಿ ಕಂಗೊಳಿಸುತ್ತಿದ್ದ ಆ ದೇವರಿಗೆ ತಲೆಬಾಗಿ ಕರ ಜೋಡಿಸಿ ಮತ್ತೆ ಮತ್ತೆ ವಂದಿಸಿದಳು. ಕಂಪಿಸುತ್ತಿದ್ದ ಮೈ-ಮನಸ್ಸುಗಳನ್ನು ತಹಬದಿಗೆ ತರುತ್ತಾ ಗರ್ಭಗುಡಿಯೆದುರು ಪ್ರತಿಷ್ಟಾಪಿಸಿದ್ದ ಆಳೆತ್ತರದ ಆ ಕಾಣಿಕೆ ಡಬ್ಬದ ಸಮೀಪ ಸಾಗಿ ಬಂದಳು. ನಿಮಿಷವೂ ತಡಮಾಡ ಮನೆಯಲ್ಲಿ ತಯಾರಿಸಿ ತಂದಿದ್ದ ಕಬ್ಬಿಣದ ಚಿಕ್ಕ ಕಡ್ಡಿಯನ್ನು ಹೊರತೆಗೆದು ದೇವರ ಕಾಣಿಕೆ ಹುಂಡಿಗೆ ಭದ್ರ ಬೇಲಿಯಾಗಿದ್ದ ಅಂಗೈ ಅಗಲದ ಆ ಬೀಗದ ಮುದ್ರೆಯೊಳಗೆ ಮೆಲ್ಲಗೆ ತೂರಿಸಿ ತಿರುಗಿಸಿದಳು. ಒಂದ್ಹತ್ತು ಬಾರಿ ತಿರುಗಿ ಪ್ರಯತ್ನಿಸಿದಳು..ಉಹ್ಹೂಂ! ಬೀಗ ತೆರೆದುಕೊಳ್ಳುವ ಲಕ್ಷಣ ಕಾಣಿಸಲಿಲ್ಲ.

ಸೀತಾಳ ಮುಖದಲ್ಲಿ ಬೆವರು ಟಿಸಿಲ್ಲನೇ ಜಿನುಗಿತು. ಮುಖದಲ್ಲಿ ಆತಂಕ ಒಮ್ಮೆಗೆ ಜಾಸ್ತಿಯಾಯಿತು. ಬಸಿದು ಬರುತ್ತಿದ್ದ ಗಾಢ ಬೆವರನ್ನು ಸೀರೆಯ ಸೆರಗಿನಿಂದ ಒರೆಸಿಕೊಂಡಳು. ಗರ್ಭಗುಡಿಯೊಳಗೆ ರಾರಾಜಿಸುತ್ತಿದ್ದ ದೇವರ ಭವ್ಯ ವಿಗ್ರಹದ ಕಡೆಗೆ ಸಂಕಟದ ನೋಟ ಬೀರಿದಳು. ‘ಕರುಣಾಮಯಿ.. ದಾರಿ ತೋರಿಸು’ ಎಂಬ ಶರಣಾಗತಿ ಆ ಭಾವದಲ್ಲಿತ್ತು. ಒಣಗುತ್ತಿದ್ದ ಗಂಟಲ ಪಸೆಯನ್ನು ನಿವಾರಿಸಿಕೊಳ್ಳಲು ಉಗುಳು ನುಂಗಿದಳು.
ಬೀಗ ಮುದ್ರೆಯನ್ನು ಮಗದೊಮ್ಮೆ ಸೂಕ್ಷ್ಮವಾಗಿ ಗಮನಿಸಿ ನಡುಗುವ ಕೈಗಳಿಂದ ಬೀಗವನ್ನು ಹಿಡಿದು ಕಬ್ಬಿಣದ ಕಡ್ಡಿಯನ್ನು ಇನ್ನೊಮ್ಮೆ ಒಳತೂರಿ ನಿಮಿಷ ಬಿಟ್ಟು ತನ್ನ ರಟ್ಟೆಯ ಶಕ್ತಿಯನ್ನೆಲ್ಲ ವ್ಯಯಿಸಿ ಒಮ್ಮೆಗೆ ಚಳ್ಳನೆ ತಿರುಗಿಸಿದಳು. ಕಳಕ್..ಎಂಬ ನಾದದೊಡನೆ ಬೀಗ ಕಳಚಿಕೊಂಡಿತು. ಅಯ್ಯಮ್ಮ.. ಎಂಬ ಆತಂಕದ ಉದ್ಘಾರ ಅವಳ ನಾಭಿಯಿಂದ ಹೊರಹೊಮ್ಮಿತು. ಕ್ಷಣ ಎದೆ ಧಸಕ್ಕೆಂದಿತು.

ಮುಖದಲ್ಲಿ ಬಸಿದು ಬರುತ್ತಿದ್ದ ಬೆವರನ್ನು ಮತ್ತೆ ಮತ್ತೆ ಒರೆಸಿಕೊಳ್ಳುತ್ತಾ ಸೂಕ್ಷö್ಮವಾಗಿ ಸುತ್ತಲ ಪರಿಸರವನ್ನು ಗಮಿಸಿದಳು ಸೀತಾ.ಅವಳ ಕೆಲಸಕ್ಕೆ ಅಡ್ಡಿಯಾಗುವ ಯಾವ ವಾತವರಣವೂ ಸುತ್ತ-ಮುತ್ತಲ ಪರಿಸರದಲ್ಲಿ ಇಲ್ಲದಿರುವುದನ್ನು ದೃಡಿಪಡಿಸಿಕೊಂಡು ಅತೀ ಜಾಗರೂಕತೆಯಿಂದ ಕಾಣಿಕೆ ಡಬ್ಬದ ಮುಚ್ಚಳ ತೆರೆದಳು.

ಅದು ಊರಿನ ಗ್ರಾಮ ದೇವರ ಭವ್ಯ ಗುಡಿಯಾದ್ದರಿಂದ ಭಗವದ್ಬಕ್ತರು ವರ್ಷವಿಡೀ ಹುಂಡಿಗೆ ಅರ್ಪಿಸಿದ ನೋಟು-ಚಿಲ್ಲರೆಗಳ ರಾಶಿಒಳಗೆ ಭದ್ರವಾಗಿ ಕುಳಿತಿತ್ತು. ಸೀತಾಳಿಗೆ ಕೇಳಿಸುವಷ್ಟು ಜೋರಾಗಿದ್ದ ಎದೆಯ ಢವ ಢವವನ್ನು ತಹಬದಿಗೆ ತರುತ್ತಾ ದೊಡ್ಡ ದೊಡ್ಡ ನೋಟುಗಳನ್ನು ಮಾತ್ರ ಆಯ್ದು ತನ್ನ ಚೀಲದೊಳಗೆ ಸೇರಿಸಿಕೊಂಡಳು. ಚಿಲ್ಲರೆಯನ್ನು ಅಲ್ಲೇ ಬಿಟ್ಟು ಕಾಣಿಕೆ ಡಬ್ಬದ ಮುಚ್ಚಳವನ್ನು ಮೆಲ್ಲಗೆ ಮುಚ್ಚಿ ಕೊಂಡಿ ಕಳಚಿರುವ ಬೀಗವನ್ನು ಮೆಲ್ಲಗೆ ಸಿಕ್ಕಿಸಿದಳು.

ಯಾಕೋ ಗರ್ಭಗುಡಿಯೊಳಗಿನ ದೇವರ ಮುಖವನ್ನು ನೋಡುವ ಧೈರ್ಯ ಮತ್ತೆ ಅವಳಿಗಾಗಲಿಲ್ಲ. ಕಣ್ಣುಮುಚ್ಚಿ ಶಿರವನ್ನು ನೆಲಕ್ಕೆ ತಾಗಿಸಿ ಸಾಷ್ಟಾಂಗ ಪ್ರಣಾಮವನ್ನು ಭಗವಂತನಿಗೆ ಅರ್ಪಿಸಿದಳು. ಬಿರ ಬಿರನೇ ಕಳ್ಳ ಹೆಜ್ಜೆಯನ್ನಿಡುತ್ತಾ ಹೊರ ನಡೆದು ಕಪ್ಪು ಕತ್ತಲಿನಲ್ಲಿ ಕರಗಿ ಮರೆಯಾದಳು.

ಕಾಣಿಕೆ ಡಬ್ಬದಲ್ಲಿ ಕೊಂಡಿ ಕಳಚಿ ನೇತಾಡುತ್ತಿದ್ದ ಬೀಗ ನಾಳೆಗಾಗುವ ಅನಾಹುತವನ್ನು ಲೆಕ್ಕಹಾಕುತಿತ್ತು.!
:
:
:
‘ಅದೇನೋ ತಿಳಿಯ. ಆ ದೇವರಿಗೆ ಬಡವರೆಂದರೆ ಯಾವಾಗಲೂ ಸಸಾರ. ಅವರಿಗೆ ಕಷ್ಟದ ಮೇಲೆ ಕಷ್ಟ ಕೊಟ್ಟು ಚಂದ ನೋಡ್ತಾನೆ. ಬಡವರ ವಿಷಯದಲ್ಲಿ ಕೆಲವೊಮ್ಮೆಕಣ್ಣಿನಲ್ಲಿ ರಕ್ತ ಇಲ್ಲದಷ್ಟು ಕ್ರೂರಿ ಆಗ್ತಾ ಅಂವ’

ಹಳ್ಳಿಯ ಈ ರೂಢಿಗತ ಮಾತು ಸೀತಾಳ ವಿಚಾರದಲ್ಲೂ ದಿಟ. ಕಡುಕಷ್ಟವನ್ನೇ ತನ್ನ ಬದುಕಿನಲ್ಲಿ ಎದುರಿಸಿ ನೊಂದು ಬೆಂದಿರುವ ಬಡ ಜೀವ ಅವಳದ್ದು. ಹದಿನಾರಕ್ಕೆ ಮದುವೆ.. ಇಪ್ಪತ್ತಕ್ಕೆ ವಿಧವೆಯಾದಾಕೆ. ಊರ ಪಟೇಲರ ಮನೆಯ ನಿತ್ಯ ಚಾಕರಿ ಮಾಡುತ್ತಾ, ಮುಸುರೆ ಪಾತ್ರೆ ತೊಳೆಯುತ್ತಾ ಗಂಡ ಬಿಟ್ಟು ಹೋದ ಪುಟ್ಟ ಗುಡಿಸಲಲ್ಲಿ ತನ್ನ ಬದುಕನ್ನು ಕಟ್ಟಿಕೊಂಡವಳು. ತನ್ನ ಬದುಕಿನ ಸಕಲ ಸೌಭಾಗ್ಯ ಮುದ್ದು ಮಗಳು ಜಾನ್ಹವಿಯ ಲಾಲನೆ ಪಾಲನೆಯಲ್ಲಿ ಜೀವನದ ನೆಮ್ಮದಿ ಕಾಣುತ್ತಿದ್ದವಳು. ಪಟೇಲರ ಮನೆಯಲ್ಲಿ ತನಗೆ ಕೊಟ್ಟ ಎರಡು ಇಡ್ಲಿಯಲ್ಲಿ ಒಂದನ್ನು ತಿಂದು ಇನ್ನೊಂದನ್ನು ಸೀರೆಯ ಗಂಟಿನಲಿ ಜತನದಿಂದ ಕಟ್ಟಿಟ್ಟುಕೊಂಡು ಮುದ್ದು ಮಗಳಿಗೆ ತಂದು ತಿನಿಸುತ್ತಿದ್ದವಳು. ಪುಡಿಗಾಸನ್ನು ಒಟ್ಟುಗೂಡಿಸಿ ಮಗಳಿಗೆ ಬಣ್ಣದ ಅಂಗಿ ತೊಡಿಸಿ ಚೆಂದ ನೋಡುತ್ತಿದ್ದಳು. ಊರ ಜಾತ್ರೆಯಲ್ಲಿ ಬಣ್ಣದ ಬಳೆ ತೊಡಿಸಿ, ಐಸ್ ಕಡ್ಡಿ ಚೀಪಿಸಿ ಮಗಳ ಖುಷಿಯಲ್ಲಿ ತನ್ನ ಖುಷಿ ಕಾಣುತಿದ್ದವಳು. ಮಗಳು ಜಾನ್ಹವಿಯ ಲಾಲನೆ-ಪಾಲನೆಯಲ್ಲಿ ಬದುಕಿನ ಖುಷಿ ಕಾಣುತ್ತಾ ಇದ್ದದ್ದುರಲ್ಲೇ ಹಂಚಿ ತಿಂದುಂಡು ಬದುಕಿನ ಸವಿಯನ್ನು ಮೆಲ್ಲುತ್ತಿದ್ದವಳು.

ಮಗಳು ಜಾನ್ಹವಿಗೆ ಮೊನ್ನೆಗೆ ಏಳರ ಹರೆಯ ತುಂಬಿತ್ತಷ್ಟೆ. ಹತ್ತಿರದ ಸರ್ಕಾರಿ ಶಾಲೆಗೆ ತನ್ನ ಮಗಳನ್ನು ಸೇರಿಸಿದ ಸೀತಾ ಮಗಳು ಶಾಲಾ ಸಮವಸ್ತ್ರ ತೊಟ್ಟು ಬ್ಯಾಗನ್ನು ಹೆಗಲಿಗೇರಿಸಿ ಶಾಲೆಗೆ ಹೋಗುವ ಚಂದವನ್ನು ಕಣ್ತುಂಬಿ ನೋಡಿದವಳು.. ಕಪ್ಪು ಸ್ಲೇಟಿನಲ್ಲಿ ಮುದ್ದು ಮಗಳು ಅ..ಆ ಎಂದು ಬರೆಯಲು ಕಲಿತಾಗ ಎದೆಯುಬ್ಬಿ ಜಾಣಗಿತ್ತಿ.. ಎಂದು ಮುದ್ದುಗೈದು ದೃಷ್ಟಿ ತೆಗೆದವಳು.

ಅವತ್ತೊಂದಿನ ಅದೇನಾಯ್ತೋ ಅವಳಿಗೆ ಸಮಾ ತಿಳಿಯ. ಶಾಲೆಯ ಆಟ-ಪಾಠದಲ್ಲಿ ಚುರುಕಾಗಿ ಮನೆಯಲ್ಲೂ ಅಮ್ಮನಿಗೆ ಆಸರೆಯಾಗಿದ್ದ ಕುವರಿ ಜಾನ್ಹವಿ ಕಳೆದ ಕೆಲವು ದಿನಗಳಿಂದ ತೀರಾ ಮಂಕಾಗಿ ಹೋಗಲಾರಂಭಿಸಿದಳು. ತಲೆನೋವೆಂದು ಹಾಸಿಗೆ ಹಿಡಿದ ಬಾಲೆ ಮತ್ತೆ ಮೇಲೇಳುವ ಲಕ್ಷಣ ಕಾಣಿಸಲಿಲ್ಲ. ಒಮ್ಮಿಂದೊಮ್ಮೆಗೆ ಕಾಣಿಸಿಕೊಳ್ಳುವ ಅಸಾದ್ಯ ತಲೆಯ ನೋವನ್ನು ತಡೆಯಲಾಗದೆ ಅಮ್ಮಾ..ಎಂದು ಉಸಿರುಗಟ್ಟಿ ಒರಲಿ ತಲೆಕೂದಲನ್ನು ಕಿತ್ತುಕೊಂಡು ಬೋಧ ತಪ್ಪಿ ಬೀಳಲಾರಂಭಿಸಿದಳು. ಸೀತಾಳ ಜಂಘಾಬಲವೇ ಉಡುಗಿ ಹೋದಂತಾಯ್ತು.

ದೈವದ ಉಪದ್ರ.. ತಾಯತ ಕಟ್ಟಿಸು ಎಂದು ಸೀತಾಳಿಗೆ ಒಂದಿಷ್ಟು ಮಂದಿ ಬಿಟ್ಟಿ ಸಲಹೆ ನೀಡಿದರು. ಊರ ಮಾರಿಯಮ್ಮನ ಗುಡಿಗೆ ಹೋಗಿ ಪೂಜಾರಿಮಂತ್ರಿಸಿ ಕೊಟ್ಟ ತಾಯತ ಬಳ್ಳಿಯನ್ನು ಮಗಳ ಕೊರಳಿಗೆ ಬಿಗಿದು ನೂರೊಂದು ಹರಕೆ ಕಟ್ಟಿಸಿಕೊಂಡಳು. ಉಹೂಂ.. ಬಾಲೆಯ ಸ್ಥಿತಿ ಮಾತ್ರ ಇನ್ನೂ ಬಿಗಡಾಯಿಸಲಾರಂಭಿಸಿತು..ಜಾನ್ಹವಿ ಕಲಿಯುತ್ತಿದ್ದಸರಕಾರಿ ಶಾಲೆಯ ಮಾಸ್ತರರು ಊರವರಿಂದ ವಿಷಯ ತಿಳಿದು ಹುಡುಗಿಯನ್ನು ನೋಡಲು ಬಂದವರು ಸಮಸ್ಯೆಯ ಗಂಭೀರತೆಯನ್ನು ಅರಿತರು. ತಾವೇ ಮುಂದೆ ನಿಂತು ಸೀತಾಳನ್ನು ಹೊರಡಿಸಿ ಮಣಿಪಾಲದ ದೊಡ್ಡ ಆಸ್ಪತ್ರೆಗೆ ಕರೆತಂದರು.

ಜಾನ್ಹವಿಯನ್ನು ವಿವಿಧ ಪರೀಕ್ಷೆಗೆ ಒಳಪಡಿಸಿದ ಮಣಿಪಾಲದ ವೈದ್ಯರು ಮಗುವಿನ ತಲೆಯಲ್ಲಿ ಗಡ್ಡೆಯೊಂದು ಬೆಳೆದಿರುವುದನ್ನು ಕಂಡುಕೊಂಡರು. ತುರ್ತಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಿ ಗಡ್ಡೆಯನ್ನು ಹೊರತೆಗೆಯಬೇಕು. ಇಲ್ಲದಿದ್ದರೆ ಮಗುವಿನ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಿದರು. ಶಸ್ತ್ರಚಿಕಿತ್ಸೆಗೆ ಐದು ಲಕ್ಷಕ್ಕೂ ಜಾಸ್ತಿ ಖರ್ಚಾಗಬಹುದು ಎಂಬ ಅಂದಾಜು ಲೆಕ್ಕಚಾರವನ್ನು ಸೀತಾಳಿಗೆ ಅರುಹಿ ಒಳನಡೆದರು.

ಬಿಳಿಯುಡುಗೆ ಧರಿಸಿ ಆಚೀಚೆ ಓಡಾಡುವ ಆಸ್ಪತ್ರೆಯ ವೈದ್ಯರನ್ನು, ರೋಗಿಗಳನ್ನು ಬೆರಗಾಗಿ ನೋಡುತ್ತಾ ತಲೆಯ ಮೇಲೊಂದು ಸೆರಗು ಹೊದ್ದು ಆತಂಕದಿಂದ ನಿಂತಿದ್ದ ಸೀತಾ ವೈದ್ಯರು ಹೇಳಿದ ಐದು ಲಕ್ಷದ ಮಾತು ಕೇಳಿ ನಿಂತಲ್ಲೆ ಕುಸಿದು ಹೋದಳು. ಜೀವನದಲ್ಲಿ ಒಂದು ಬಾರಿಯೂ ಐದು ಸಾವಿರ ಹಣವನ್ನೂ ಒಟ್ಟಿಗೆ ನೋಡದ ಹಳ್ಳಿಯ ಬಡಹೆಣ್ಣುಮಗಳು ಆಕೆ. ಇನ್ನೂ ಐದು ಲಕ್ಷ ಹಣವೆಂದರೇ ಎಲ್ಲಿಂದ ಸೇರಿಸಿಯಾಳು? ಸರ್ಕಾರದ ಯಾವೊಂದು ಆರೋಗ್ಯ ಯೋಜನೆಯ ಅರಿವೂ ಅವಳಿಗಿಲ್ಲ, ‘ದಿನಗೂಲಿ-ಸೌಟು ಗಂಜಿ..’ಎಂಬುದಷ್ಟೇ ಅವಳ ಜೀವನ. ಮುಂದೇನು? ದಿಕ್ಕುಗಾಣದೇ ಊರವರ, ಸಂಬಂಧಿಕರ ಮನೆ ಮನೆಗೆ ತೆರಳಿ ಸೆರಗೊಡ್ಡಿ ಯಾಚಿಸಿದಳು. ಅಯ್ಯೊ..ಪಾಪ..ಎಂಬ ಧಾರಾಳ ಕರುಣೆ, ಎಲ್ಲೊ ಒಂದಿಷ್ಟು ಪುಡಿಗಾಸು ಒಟ್ಟುಗೂಡಿತೇ ವಿನಃ ಶಸ್ತ್ರಚಿಕಿತ್ಸೆಗೆ ಬೇಕಾದ ಹಣ ಹೊಂದಲೇ ಇಲ್ಲ. ಒಟ್ಟಾದ ಪುಡಿಗಾಸೂ ಆಸ್ಪತ್ರೆಯಲ್ಲಿ ಮಲಗಿರುವ ಮಗುವಿನ ನಿತ್ಯ ಖರ್ಚಿಗೆ, ಬೆಡ್ಡಿಗೆ, ಮೆಡಿಸಿನ್ನಿಗೆ ಖಾಲಿ ಆಗಿ ಖರ್ಚಾಗಲಾರಂಭಿಸಿತು. ಐದು ಲಕ್ಷವನ್ನು ಎಲ್ಲಿಂದ ಒಟ್ಟುಗೂಡಿಸಲಿ? ಕರುಳ ಕುಡಿಯನ್ನು ಹೇಗೆ ಉಳಿಸಿಕೊಳ್ಳಲಿ? ವ್ಯಥೆ ಸೀತಾಳನ್ನು ಹಗಲಿರುಳೂ ಕಾಡಲಾರಂಭಿಸಿತು.

ತನ್ನ ಬಾಳಬುತ್ತಿಯ ಸರ್ವಸ್ವದಂತಿರುವ ಮುದ್ದು ಕಂದಮ್ಮ ದಿನೇ ದಿನೇ ಸಾವಿಗೆ ಹತ್ತಿರವಾಗುವುದನ್ನು ಸೀತಾ ನೋಡಲಾರಳು. ಹಣ ಹೊಂದಿಸಿದರಷ್ಟೇ ಶಸ್ತ್ರಚಿಕಿತ್ಸೆ..ಇಲ್ಲದಿದ್ದರೆ ಇಲ್ಲ ಎಂಬ ವೈದ್ಯರ ಖಂಡತುಂಡಿನ ಮಾತು ಸೀತಾಳನ್ನು ಮತ್ತೂ ಅಧೀರಳನ್ನಾಗಿಸುತ್ತಿತ್ತು. ಹೇಗಾದರೂ ಸರಿ ತನ್ನ ಮಗುವನ್ನು ಉಳಿಸಿಕೊಳ್ಳಲೇಕೊಳ್ಳಬೇಕು ಎಂಬ ಮಾತೃವಾತ್ಸಲ್ಯ, ಛಲ ಅವಳೊಳಗೆ ಜಾಗೃತವಾಯಿತು. ಎಲ್ಲಿಯಾದರೂ ಕನ್ನ ಹಾಕಿಯಾದರೂ ಸೈ.. ಐದು ಲಕ್ಷ ಒಟ್ಟುಗೂಡಿಸ್ತೇನೆ ಎಂದು ಅವುಡುಗಚ್ಚಿ ತೀರ್ಮಾನಿಸಿದ ಸೀತಾಗಳಿಗೆ ಮುಂದೆ ಗೋಚರಿಸಿದ ಒಂದೇ ದಾರಿ ದೇವಸ್ಥಾನದ ಕಾಣಿಕೆ ಡಬ್ಬಿ.!

ಸೀತಾ ಮನೆಮಾಡಿಕೊಂಡಿರುವ ಸಮೀಪವೇ ಊರಿನ ಬಹುಜನ ನಂಬಿರುವ ಗ್ರಾಮ ದೇವರ ಭವ್ಯ ಆಲಯ ತಲೆಎತ್ತಿ ನಿಂತಿತ್ತು. ವಾರ್ಷಿಕ ಜಾತ್ರೆಗೆ ಇನ್ನೆರಡು ವಾರಗಳು ಬಾಕಿ ಇರುವುದೂ, ವರ್ಷಪೂರ್ತಿ ಭಕ್ತರು ಕಾಣಿಕೆಯಾಗಿ ಹುಂಡಿಗೆ ಅರ್ಪಿಸಿದ ಹಣ ಕಾಣಿಗೆ ಡಬ್ಬದಲ್ಲಿ ಒಟ್ಟುಗೂಡಿರುವುದು ಸೀತಾಳಿಗೆ ತಿಳಿದ ವಿಷಯ. ವರ್ಷವೂ ಜಾತ್ರೆ ಸಮಯದಲ್ಲಿ ಕಾಣಿಕೆ ಡಬ್ಬವನ್ನು ತೆರೆದು ಭಕ್ತರು ಭಗವಂತನಿಗೆ ಅರ್ಪಿಸಿದ ಹಣದಿಂದ ವೈಭವದಿಂದ ಜಾತ್ರೆಯನ್ನು ಊರವರು ನಡೆಸುವುದು ಅದೇ ಊರಿನವಳಾದ ಸೀತಾಳಿಗೆ ಗೊತ್ತಿದ್ದ ವಿಷಯವೇ. ಹಾಗಾಗಿಯೇ ಮುದ್ದು ಮಗಳ ಶಸ್ತ್ರಚಿಕಿತ್ಸೆಗೆ ಬೇಕಾಗಿ ಕಾಣಿಕೆ ಡಬ್ಬಕ್ಕೆ ಸೀತಾ ಕನ್ನವಿಕ್ಕಿದಳು..ರಾತ್ರೋ ರಾತ್ರಿ ದೇವರ ಹುಂಡಿಯನ್ನು ಲೂಟಿಗೈದು ಪರಾರಿಯಾದಳು.
:
:
:
ತಿಂಗಳೊಂದು ಕಳೆಯಿತು. ಸೀತಾ ಐದು ಲಕ್ಷ ಹಣವನ್ನು ಆಸ್ಪತ್ರೆಯಲ್ಲಿ ಕಟ್ಟುತ್ತಿದ್ದಂತೆಯೇ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನೆಡೆಸಿ ಮಗುವಿನ ತಲೆಯಲ್ಲಿದ್ದ ಗೆಡ್ಡೆಯನ್ನು ಹೊರತೆಗೆದರು. ಎರಡು ವಾರ ಆಸ್ಪತ್ರೆಯಲ್ಲಿರಿಸಿ ನಿತ್ಯ ತೆಗೆದುಕೊಳ್ಳಬೇಕಾದ ಜೌಷಧವನ್ನು ಸೂಚಿಸಿ ಮನೆಗೆ ಕಳುಹಿಸಿದರು. ಬಾಲೆ ಜಾನ್ಹವಿ ಮೆಲ್ಲಗೆ ಚೇತರಿಸಿಕೊಳ್ಳಲಾರಂಭಿಸಿದಳು.

ಕಾಣಿಕೆ ಡಬ್ಬ ಕಳವಾಗಿ, ಊರಿನಲ್ಲಿ ಗಲಾಟೆ ಎದ್ದು, ಕಳ್ಳರಿಗಾಗಿ ಶೋಧ ನಡೆದು ಯಾವುದಾದರೂ ಮೂಲದಿಂದ ತಾನು ಸಿಕ್ಕಿಬಿದ್ದು ಪೋಲಿಸರ ಅತಿಥಿಯಾಗುತ್ತೇನೆ ಎಂದು ಹಲವು ಬಾರಿ ಯೋಚಿಸಿ ಮಾನಸಿಕವಾಗಿ ಜೈಲುವಾಸ ಅನುಭವಿಸಲು ಸೀತಾ ಸಿದ್ಧಳಾಗಿಯೇ ಆಸ್ಪತ್ರೆಯಿಂದ ಮನೆಗೆ ಬಂದಿದ್ದಳು. ಮಗು ಆರಾಮಾವಾಯ್ತಲ್ಲ..ತಾನು ಜೈಲು ಪಾಲಾದರೂ ಸೈ ಎಂಬ ಗಟ್ಟಿಚಿತ್ತವನ್ನು ಅವಳಾಗಲೇ ತಳೆದಾಗಿತ್ತು.

ಆದರೆ ಸೀತಾಳ ಎಣಿಕೆಯೇ ತಲೆಕೆಳಾಗಂದAತೇ ಊರಿಗೆ ಊರೇ ಶಾಂತವಾಗಿ ಇದ್ದಿತ್ತು. ಯಾರೊಬ್ಬರ ಬಾಯಲ್ಲೂ ಕಾಣಿಕೆ ಹುಂಡಿ ಕಳವಾದ ಬಗ್ಗೆ ಮಾತಿಲ್ಲ. ಕಳೆದ ವಾರ ಊರ ಜಾತ್ರೆ ಯಶಸ್ವಿಯಾಗಿ ನಡೆದು ಸಾವಿರಾರು ಭಗವಧ್ಬಕ್ತರು ದೇವರ ದರ್ಶನಗೈದು, ಅನ್ನ ಪ್ರಸಾದ ಸ್ವಿಕರಿಸಿದ ಕತೆಯನ್ನು ಎಲ್ಲರೂ ಹೇಳಿದರು.

‘ಅರೇ..ಇದೇನಾಗಿರಬಹುದು. ಪವಾಡವೇನಾದರೂ ಸಂಭವಿಸಿರಬಹುದೇ?’ ಎಂಬ ದಿಗಿಲು ಸೀತಾಳನ್ನು ಮೆಲ್ಲಗೆ ಕಾಡಲಾರಂಭಿhttp://kannada.indiatyping.com/ಸಿತು. ಇಲ್ಲದಿದ್ದರೆ ತಾನು ದೇವರ ಹುಂಡಿಯಲ್ಲಿದ್ದ ಅಷ್ಟೂ ಹಣ ಕದ್ದಿದ್ದೇನೆ, ಬೀಗದ ಕೊಂಡಿ ಕಳಚಿ ನೇತಾಡುತ್ತಿತ್ತು.. ಮಾರನೆಯೆ ದಿನವೇ ಊರಿಡೀ ಗಲಾಟೆ ಎದ್ದು ಕಳ್ಳರಿಗಾಗಿ ಶೋಧ ನಡೆಯಬೇಕಿತ್ತು. ಆದರೆ ಯಾರೊಬ್ಬರ ಬಾಯಲ್ಲೂ ಕಳ್ಳತನದ ವಿಚಾರವಿಲ್ಲ, ಏನಾಗಿರಬಹುದು? ಎಂಬ ಭಯ, ಕುತೂಹಲ, ಅಪರಾಧಿತನ ಸೀತಾಳನ್ನು ಕಾಡಲಾರಂಭಿಸಿತು.

ಮತ್ತೆ ತಡ ಮಾಡಲಿಲ್ಲ.. ಅಂದು ಮಧ್ಯಾಹ್ನದ ಮಟ ಮಟ ಬಿಸಿಲಲ್ಲಿ ಮೆಟ್ಟನ್ನು ಮೆಟ್ಟಿ ನಿಂತವಳೆ ಕಳ್ಳ ಹೆಜ್ಜೆ ಇಡುತ್ತಾ ದೇವಸ್ಥಾನಕ್ಕೆ ಮೆಲ್ಲಗೆ ಸಾಗಿಬಂದಳು. ಹೊತ್ತು ನೆತ್ತಿಯನ್ನೇರಿದ್ದರಿಂದ ಭಕ್ತರೆಲ್ಲ ದೇವರ ದರ್ಶನಗೈದು ಅದಾಗಲೇ ತೆರಳಿದ್ದರು. ದೇವಳದ ಅರ್ಚಕ ಶೇಷ ಭಟ್ಟರು ಮಾತ್ರ ಮಂತ್ರ ಪಠಿಸುತ್ತಾ ಶ್ರದ್ದಾ ಭಕ್ತಿಯಿಂದ ದೇವರ ಸೇವೆಯಲ್ಲಿ ಇನ್ನೂ ನಿರತರಾಗಿದ್ದರು.

ಢವ ಢವ ಎನ್ನುತ್ತಿದ್ದ ತನ್ನೆದೆಯನ್ನು ತಹಬದಿಗೆ ತರುತ್ತಾ ಬಾಲಹೆಜ್ಜೆಯಿಡುತ್ತಾ ದೇವಸ್ಥಾನದ ಒಳಗೆ ಬಂದ ಸೀತಾ ಢಣ್..ಎಂದು ಮೂರು ಬಾರಿ ಗಂಟೆ ಬಾರಿಸಳು.ಮೂರು ಸುತ್ತು ಪ್ರದಕ್ಷಿಣೆ ಬಂದು ಸಾಷ್ಟಾಂಗ ಪ್ರಣಾಮಗೈದು ಮೆಲ್ಲಗೆ ತನ್ನ ದೃಷ್ಟಿಯನ್ನು ಕಾಣಿಗೆ ಡಬ್ಬದೆಡೆಗೆ ಹಾಯಿಸಿದಳು.

ಸೀತಾಳಿಗೆ ತನ್ನ ಕಣ್ಣನ್ನು ತಾನೇ ನಂಬಲಾಗಲಿಲ್ಲ. ತಾನು ಆವತ್ತು ಬೀಗದ ಮುದ್ರೆಯನ್ನು ಒಡೆದು ಹಣವನ್ನು ಲೂಟಿ ಗೈದಿದ್ದಳು.ಆದರೆ ಅದರ ಚಿಕ್ಕ ಕುರುಹು ಹೊರಪ್ರಪಂಚಕ್ಕೆ ಗೋಚರಿಸದ ಹಾಗೇ ಅದೇ ತೆರನಾದ ಬೀಗ ಕಾಣಿಕೆ ಡಬ್ಬವನ್ನು ಭದ್ರವಾಗಿ ಬಂದಿಸಿ ನೆಗೆಯಾಡುತ್ತಿತ್ತು.ಸೀತಾ ಬೆರಗು ಕಂಗಳಿAದ ಹತ್ತಾರು ಬಾರಿ ಪರೀಕ್ಷಿಸಿದಳು.ಹುಂಡಿ ಕನ್ನಗೈದ ಚಿಕ್ಕ ಕುರುಹು ಅಲ್ಲಿಲ್ಲ.

‘ಹಾಗಾದರೇ ಪವಾಡ ನಡೆದಿರುವುದು ಹೌದೇಯಾ? ದೇವರು ಇರುವುದು ನಿಜವೇ’ ಎಂಬ ದೃಡನಿಶ್ಚಯಕ್ಕೆ ಬಂದವಳ ಹಾಗೇ ಸೀತಾ ಕೈಮುಗಿದು ತಲೆಬಾಗಿ ಮತ್ತೆ ಮತ್ತೆ ಭಗವಂತನಿಗೆ ವಂದಿಸಿದಳು.

ದೇವರ ಪೂಜಾ ಕೈಂಕರ್ಯದಲ್ಲಿ ನಿರತವಾಗಿದ್ದ ಶೇಷ ಭಟ್ಟರು ಜನಿವಾರ ಸರಿಪಡಿಸಿಕೊಂಡು ಹೊರಬಂದರು. ಸೀತಾಳನ್ನು ನೋಡಿ ಮುಗುಳ್ನಗೆ ಬೀರಿ ಮಾತಿಗೆಳೆದರು

‘ಹೌದೇನಾ ಸೀತಾ.. ಮಗಳಿಗೆ ಮಣಿಪಾಲದಲ್ಲಿ ಆಪರೇಶನ್ನು ಆಯ್ತಂತಲ್ಲ..ಹೇಗಿದ್ದಾಳೆ ಈಗ’

‘ಈಗ ಅಡ್ಡಿಲ್ಲಾ ಅಯ್ಯಗಳೆ, ದಿನಾ ದಿನಾ ಸುಧಾರಿಸ್ಕಂತ ಇತ್ತು ನನ್ನ ಮಗು. ಸರಿ ಓಡಾಡೋಕೆ ಮೂರು ತಿಂಗಳು ಬೇಕು ಅಂದಿದ್ರು ಡಾಕ್ಟ್ರು..ಅಡಿಲ್ಲಾ ಈಗ..ಎಲ್ಲ ದೇವರ ಕೃಪೆ’

‘ಹೌದಾ ಸೀತಾ.. ನಮಗೂ ವಿಷಯ ಕೇಳಿ ಬಾರೀ ಬ್ಯಾಜರಾಗಿತ್ತು. ಆದರೆ ಮಗು ಆರಾಮಾಯ್ತು ಅಂದಿಯಲ್ಲ.. ಅದು ಖುಷಿ. ನಂಬಿದವರನ್ನು ದೇವರು ಯಾವತ್ತೂ ಕೈಬಿಡುವುದಿಲ್ಲ.. ದಾರಿ ತೋರಿಸ್ತಾ. ಸ್ವಲ್ಪ ದಿನಾ ಮಗಳನ್ನ ಜಾಗೃತಿ ಮಾಡ್ಕೋ.. ಹೆಣ್ಣನ್ನು ಬಿಸಿಲಲ್ಲಿ ಸೊಕ್ಕುಕೇ ಬಿಡಬೇಡ..ಆಗದಾ’

‘ಆಯ್ತು ಅಯ್ಯಗಳೆ’ ಎನ್ನುತ್ತಾ ಸೀತಾ ಬಾಗಿ ವಂದಿಸಿದಳು.. ಶೇಷ ಭಟ್ಟರು ಶುಭ ಹಾರೈಸಿ ಗರ್ಭಗುಡಿಯೊಳಗೆ ಮತ್ತೆ ನಡೆದರು.

ಸೀತಾಳು ನಿಮಿಷಗಳ ಕಾಲ ಅಯೋಮಯಳಾಗಿ ನಿಂತಳು. ತಾನು ಮಾಡಿರುವ ಘೋರ ಅಪರಾಧವನ್ನು ನಂತರ ನಡೆದಿರುವ ಪವಾಡವನ್ನು ಭಟ್ಟರಿಗೆ ಹೇಳಲೋಬಿಡಲೋ ಎಂಬ ಗೊಂದಲದ ಭಾವದಲ್ಲಿ ಒದ್ದಾಡಲಾರಂಭಿಸಿದಳು.

‘ಏನಾದ್ರೂ ಸೈ.. ನಂಗೆ ಇನ್ನೂ ಮನಸ್ಸೊಳಗೆ ಇಟ್ಕಂಡು ಕೊರಗೂಕೆ ಆತಿಲ್ಲ. ನಾನು ಮಾಡಿರೋ ತಪ್ಪು ಕೆಲಸನ ಭಟ್ಟರ ಹತ್ರ ಹೇಳ್ಕಂತಿ..ಆಗ್ಲೆ ನಂಗೆ ಸಮಾಧಾನ’ ಎಂದು ದೃಢ ನಿಶ್ಚಯ ಹಾಗೇ ಇನ್ನೊದರ್ದ ಗಂಟೇ ಅಲ್ಲೆ ನಿಂತಳು.

ಶೇಷ ಭಟ್ಟರು ತಮ್ಮ ನಿತ್ಯ ಪೂಜೆಯನ್ನು ಮುಗಿಸಿ ಎಂದಿನಂತೆ ಗರ್ಭಗುಡಿಯಿಂದ ಹೊರಬಂದರು..ಕಲ್ಲಿನಂತೆ ನಿಂತಿರುವ ಸೀತಾ, ಅವಳ ಮುಖದಲ್ಲಿ ಏನನ್ನೋ ಹೇಳಲು ಇರುವ ಹಪಹಪಿಕೆ ವಯೋವೃದ್ಧರು, ಜ್ಞಾನವೃದ್ಧರೂ ಆಗಿರುವ ಅವರಿಗೆ ಅರ್ಥ ಆಯ್ತು..ನಗುತ್ತಾ ಕೇಳಿದರು.

‘ಏನಾ ಸೀತಾ.. ಏನಾದ್ರೂ ಹರಕೆ-ಗಿರಕೆ ತೀರಿಸುವುದುಂಟಾ?..ಆವಾಗಿಂದ ಕಲ್ಲಿನಂತೆ ನಿಂತಿದ್ದೀಯಲ್ಲ’

‘ಹರಕೆ ಏನಿಲ್ಲ ಅಯ್ಯಗಳೆ..ನಾನೊಂದು ತಪ್ಪು ಮಾಡಿದ್ದೇನೆ..ನೀವು ಕ್ಷಮಿಸ್ತೇನೆ ಅಂದ್ರೆ ಹೇಳ್ಕಂತಿ’

‘ಕ್ಷಮಿಸ್ಲಿಕ್ಕೆ ನಾನ್ಯಾರು ಸೀತಾ.. ನಮ್ಮೆಲ್ಲರ ತಪ್ಪನ್ನು ಕ್ಷಮಿಸುವನು ಆ ಭಗವಂತ..ನೀನು ಅವನೆದುರು ನಿಂತ್ಕಂಡಿದ್ದೆ.. ಹೇಳ್ಕೊ..ಏನು ತಪ್ಪು ಮಾಡಿದ್ದೀಯಾ?’

ಸೀತಾ ಶೇಷ ಭಟ್ಟರ ಕಾಲಿಗುರುಳಿ ತಾನು ದೇವಸ್ಥಾನದ ಕಾಣಿಕೆ ಡಬ್ಬದ ಬೀಗ ಮುರಿದು ಹಣ ಕದ್ದಿದ್ದು, ಅದರಿಂದಲೇ ಮಗಳ ಶಸ್ತ್ರ ಚಿಕಿತ್ಸೆ ನೆಡೆಸಿದ್ದು, ಆಮೇಲೆ ಪವಾಡವೆಂಬAತೆ ಮುರಿದ ಬೀಗ ಮತ್ತೆ ಮೊದಲಿನಂತಿರುವುದು ಎಲ್ಲವನ್ನೂ ಅರುಹಿದಳು..ಗೋಳೋ ಎಂದು ಅಳಲಾರಂಭಿಸಿದಳು.

ಸೀತಾಳ ಎಲ್ಲ ಮಾತನ್ನು ಮೌನವಾಗಿ ಕೇಳಿಸಿಕೊಂಡ ಶೇಷ ಭಟ್ಟರು ಮುಗಳ್ನಗು ಬೀರಿದರು. ಅಲ್ಲೆ ಗರ್ಭಗುಡಿಯ ಹೊರಭಾಗದಲ್ಲಿ ದೇವಸ್ಥಾನದ ಪೂಜಾಸಾಮಗ್ರಿಗಳ ಶೇಖರಣೆಯ ಕೋಣೆಯ ಪಕ್ಕದಲ್ಲಿದ್ದ ಪುಟ್ಟ ರೂಮಿನ ಒಳಗೆ ಸೀತಾಳನ್ನು ಕರೆತಂದವರು ಕಂಪ್ಯೂಟರ್ ಸ್ಕ್ರೀನ್ ನ ಮುಂದೆ ಕೂರಿಸಿ ಯಾವುದ್ಯಾವುದೋ ಗುಂಡಿ ಒತ್ತಿದರು.

ಸೀತಾ ಕಂಪ್ಯೂಟರ್ ಪರದೆಯ ಮೇಲೆ ಮೂಡಿ ಬರುತ್ತಿದ್ದ ಆ ದೃಶ್ಯವನ್ನು ನೋಡಿ ತನ್ನ ಕಣ್ಣನ್ನು ತಾನೇ ನಂಬಲಾರಳಾದಳು. ತಾನು ಕಾಣಿಕೆ ಡಬ್ಬ ಕಳ್ಳತನ ಗೈದದನ್ನು ಯಾರೂ ನೋಡಿಲ್ಲ ಎಂದು ಅವಳು ಭಾವಿಸಿದ್ದಳೋ ಅದು ಶುದ್ದ ಸುಳ್ಳಾಗಿತ್ತು. ದೇವಸ್ಥಾನದ ಆಯಕಟ್ಟಿನಲ್ಲಿ ಪಿಕ್ಸ್ ಮಾಡಿದ್ದ ಪುಟ್ಟ ಕ್ಯಾಮರಗಳು ಸಿನಿ ದೃಶ್ಯವನ್ನು ಸೆರೆಹಿಡಿದಂತೆ ಸೀತಾಳ ಕಳ್ಳತನವನ್ನು ಸೆರೆಯನ್ನಾಗಿಸಿಟ್ಟುಕೊಂಡಿತ್ತು..

ಹಳ್ಳಿಯ ಹೆಣ್ಣುಮಗಳು ಸೀತಾಳಿಗೆ ಹೀಗೊಂದು ಆಧುನಿಕ ತಂತ್ರಜ್ಞಾನ ದೇವಸ್ಥಾನದಲ್ಲಿ ಇರುವುದು ಗೊತ್ತೆ ಇಲ್ಲ.. ಇಷ್ಟು ಕರಾರುವಕ್ಕಾಗಿ ತಾನೇ ಕದ್ದಿದ್ದೇನೆ ಎಂದು ತಿಳಿದ ಮೇಲೂ ತನ್ನನ್ನೇಕೆ ಬಂದಿಸಲಿಲ್ಲ, ಜೈಲಿಗಟ್ಟಲಿಲ್ಲ ಎಂಬ ಸಂಕಟಭಾವದಿಂದ ಶೇಷ ಭಟ್ಟರ ಕಡೆಗೆ ನೋಡಿದಳು ಸೀತಾ.. ಭಟ್ಟರು ಗಂಭೀರವಾದ ಉಸಿರನ್ನು ಹೊರಚೆಲ್ಲಿ ಸತ್ಯ ನುಡಿದರು.

‘ನೋಡು ಸೀತಾ.. ನೀನು ಆವತ್ತು ರಾತ್ರಿ ಕಾಣಿಕೆಡಬ್ಬ ಕನ್ನಗೈದು ಮನೆಗೇ ಹೋದೆ. ಮಾರನೇ ದಿನ ನಾನು ಪೂಜೆಗೆಂದು ಬೆಳಿಗ್ಗೆ ಆರುಗಂಟೆಗೆ ದೇವಸ್ಥಾನಕ್ಕೆ ಬಂದುನೋಡಿದ್ರೆ ನೋಡುವುದೇನು? ದೇವಸ್ಥಾನದ ಹುಂಡಿ ಕಳವಾಗಿದೆ. ಇದು ಯಾರ ಕೃತ್ಯ? ಏಕಾಗಿ ಮಾಡಿರಬಹುದು ಎಂಬುದನ್ನು ತಿಳಿಯಲು ದೇವಸ್ಥಾನದ ಸಿಸಿಟಿವಿಯನ್ನು ಪರೀಕ್ಷಿಸಿದೆ.ಕದ್ದ ಕಳ್ಳರು ಹೊರಗಿನವರಲ್ಲ; ನಮ್ಮದೇ ಊರಿನ ಬಡವಳಾದ ನೀನು ಎಂಬ ವಿಷಯ ಗೊತ್ತಾಯ್ತು.ಯಾವ ಕಾರಣಕ್ಕೆ ನೀನು ಕದ್ದಿರಬಹುದು ಎಂದು ತರ್ಕಿಸಿದಾಗ ಮಗಳ ಶಸ್ತçಚಿಕಿತ್ಸೆಗೆ ಎಂಬ ಸತ್ಯ ನನಗೆ ತಿಳಿಯಿತು.ನೀನು ಹುಂಡಿಗೆ ಕನ್ನಗೈದದನ್ನು ಹೊರಜಗತ್ತಿಗೆ ತಿಳಿಸಿ ಬಡವಳಾದ ನಿನ್ನ ಕಳ್ಳಿಯನ್ನಾಗಿಸಿ ಜೈಲಿಗಟ್ಟಲು ನನಗೆ ಮನಸ್ಸೇ ಬರಲಿಲ್ಲ.

‘ಆ ದೇವರು ನನಗೆ ಎಲ್ಲ ಕರುಣಿಸಿದ್ದಾನೆ..ಸದ್ಯಕ್ಕೆ ನಾನು ತಕ್ಕಮಟ್ಟಿಗೆ ಸಿರಿವಂತನೇ. ಅದ್ಕೆ ನೀನು ಕದ್ದ ಹಣದ ಮೌಲ್ಯವನ್ನು ಅಂದಾಜು ಮಾಡಿ ನಾನೇ ಕಾಣಿಕೆ ಡಬ್ಬಕ್ಕೇ ಅದನ್ನು ತುಂಬಿಸಿಹೊಸ ಬೀಗ ತಂದು ಜಡಿದೆ.. ಹೊರಜಗತ್ತಿಗೆ ವಿಷಯ ತಿಳಿಯುದರೊಳಗೆ ಎಲ್ಲವನ್ನು ಮೊದಲಿನಂತಿರಿಸಿ ಸುಮ್ಮನಾದೆ. ಇದು ನಡೆದ ವಿಷಯ. ಇಲ್ಲಿ ಪವಾಡವೇನಿಲ್ಲ ’

ಶೇಷ ಭಟ್ಟರ ಗಂಭೀರ ವಾಣಿಯಿಂದ ಹೊರ ಬಂದ ಕಟು ಸತ್ಯವನ್ನು ಕೇಳಿ ಸೀತಾ ದಿಗ್ಮೂಡಳಾದಳು.ಅಲ್ಲೇ ಭಟ್ಟರ ಕಾಲಿನ ಮೇಲೆ ಉರುಳಿ ಬಿದ್ದು ಕಣ್ಣೀರಿನಿಂದ ಅವರ ಪಾದವನ್ನು ತೊಳೆದಳು.

‘ನೋಡು ಸೀತಾ..ಈ ವಿಷಯವನ್ನು ಇಲ್ಲಿಗೆ ಮರೆತುಬಿಡು..ನೀನು ಮಾಡಿದ್ದು ತಪ್ಪು ಕೆಲಸ ಹೌದೇಯಾ. ಆದರೆ ಆ ತಪ್ಪಿನ ಹಿಂದೆ ಇದ್ದ ಅನಿವಾರ್ಯತೆ, ಅಗತ್ಯತೆ ನಿನ್ನ ತಪ್ಪನ್ನು ಕ್ಷಮಿಸಿಬಿಡ್ತು..ಆ ಭಗವಂತ ನಿನಗೆ ಸದಾ ಒಳ್ಳೆಯದನ್ನು ಮಾಡಲಿ..ಬಾ ಹೋಗುವ’ ಶೇಷ ಭಟ್ಟರು ಸೀತಾಳ ತಲೆನೇವರಿಸಿ ಕರೆತಂದು ಹೊರ ಬಿಟ್ಟರು.

‘ಅಯ್ಯಗಳೇ.. ಈ ಕಲಿಯುದಂಗೇ ದೇವರಿಗೆ ಸೀದಾ ನಮ್ಮತ್ರ ಬಂದು ಸಹಾಯ ಮಾಡೋಕೆ ಆತಿಲ್ಲ ಅಂಬ್ರು.. ಅದ್ಕೆ ದೇವರು ನಿಮ್ಮಂತವರನ್ನು ಸೃಷ್ಟಿ ಮಾಡಿ ನಮ್ಮ ಹತ್ರ ಕಳಿಸ್ತಾ..ಬಡವರ ಕಣ್ಣೀರು ಒರೆಸ್ತಾ.. ದೇವರು ಇರುವುದು ನಿಜ’

ಹೃದಯದಿಂದ ಹೊರಹೊಮ್ಮಿದ ಸೀತಾಳ ಮಾತಿಗೆ ಗರ್ಭಗುಡಿಯ ದೇವರ ತಲೆಯಲ್ಲಿ ವಿರಾಜಮಾನವಾಗಿದ್ದ ಆ ತುಳಸಿದಳ ಮೆಲ್ಲಗೆ ಕೆಳಗುರುಳಿತು. ಪ್ರಸಾದ ರೂಪದಲ್ಲಿ ಭಟ್ಟರು ಅದನ್ನಾಯ್ದು ಸೀತಾಳ ಕೈ ಮೇಲೆ ಚೆಲ್ಲಿ ಹರಸಿದರು.ಸೀತಾ ಆ ತುಳಸಿದಳವನ್ನು ಕಣ್ಣಿಗೊತ್ತಿಕೊಂಡಳು.!

ಮತ್ತಷ್ಟು ಸುದ್ದಿಗಳು

Latest News

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು...

ಒಮಿಕ್ರೋನ್ ಭೀತಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ

newsics.com ನವದೆಹಲಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಒಮಿಕ್ರೋನ್ ಹರಡುವ ಭೀತಿಯ ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಗೈಡ್ ಲೈನ್ಸ್ ಬಿಡುಗಡೆಗೊಳಿಸಿದ್ದು,...

ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ

newsics.com ಬೆಂಗಳೂರು: ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಡಿಸೆಂಬರ್ 27ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 5 ನಗರ ಸಭೆ,...
- Advertisement -
error: Content is protected !!