Saturday, January 28, 2023

ಉದ್ಯೋಗಸ್ಥ ಮಹಿಳೆಯರ ಹಾಡು ಪಾಡು

Follow Us

ದೌರ್ಜನ್ಯವೆಂಬುದು ದೈಹಿಕವಾಗಿರಲೀ, ಮಾನಸಿಕವಾಗಿರಲೀ, ಮೌಖಿಕವಾಗಿರಲೀ ಶತಮಾನಗಳಿಂದ ಮಹಿಳೆ ಬಲಿಯಾಗುತ್ತಿರುವುದು ಮಾತ್ರ ತಪ್ಪಿಲ್ಲ. ಉದ್ಯೋಗಸ್ಥ ಮಹಿಳೆ ಮತ್ತೊಂದು ರೀತಿಯಲ್ಲಿ ಶೋಷಣೆಗೀಡಾಗುತ್ತಿದ್ದಾಳೆ. ಅಬಲೆಯಲ್ಲ, ಸಬಲೆ ಅಂತಾ ಹೇಗೇ ಬಾಯಿ ಬಡಿದುಕೊಂಡರೂ ಅದು ಮನೆಯ ಹೊರಗೆ ಮಾತ್ರ, ಮನೆಯ ಒಳಗೆ ಬಾಯಿಗೆ ಬೀಗ ಬಡಿದುಕೊಂಡು ಇರಬೇಕಾದ ಪರಿಸ್ಥಿತಿ ಎಷ್ಟೋ ಹೆಣ್ಣುಮಕ್ಕಳದು.

===

  • ನಳಿನಿ ಟಿ. ಭೀಮಪ್ಪ, ಧಾರವಾಡ

ಅಂದು ಒಂದು ಸಮಾರಂಭಕ್ಕೆ ಆಮಂತ್ರಣ ನೀಡಲು ದೂರದ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆವು. ಮಳೆಯಲ್ಲಿ ಸಿಕ್ಕಿ ಹಾಕಿಕೊಂಡದ್ದರಿಂದ ಉಡುಗೆ ಅಲಂಕಾರ ಎಲ್ಲಾ ಮಳೆನೀರಿಗೆ ಆಹುತಿಯಾಗಿತ್ತು. ಅವರ ಮನೆಯಲ್ಲಿ ಮುಖ ತೊಳೆದು ರೆಡಿಯಾಗಲು ಕನ್ನಡಿ ಮುಂದೆ ನಿಂತೆ. ಪ್ರತಿಯೊಬ್ಬರ ಮನೆಯಲ್ಲಿನ ಕಂಡುಬಂದಂತೆ ಹೆಣ್ಣುಮಕ್ಕಳ ಕಾಸ್ಮೆಟಿಕ್ಸ್ ನ ಸಂತೆಯ ಸುಳಿವು ಒಂದಿನಿತೂ ಕಾಣಲಿಲ್ಲ. ಒಳಗೆಲ್ಲೋ ಇಟ್ಟಿರಬೇಕು ಎಂದುಕೊಂಡು, ನನ್ನದೇ ವ್ಯಾನಿಟಿ ಬ್ಯಾಗಿನಲ್ಲಿದ್ದ ಮೇಕಪ್ ಮೆತ್ತಿಕೊಂಡು, ಸ್ವಲ್ಪ ಪೌಡರ್‍ಗಾಗಿ ಆಕೆಯನ್ನು ಕೇಳಿದೆ. ಆಕೆ ಪೌಡರ್‍ಗಾಗಿ ಇಡೀ ರೂಮೆಲ್ಲಾ ಜಾಲಾಡಿಬಿಟ್ಟಳು. ನನಗೋ ಆಶ್ಚರ್ಯ. ಅದ್ಯಾಕೆ ಕಳೆದುಹೋಗಿದೆಯೇನೂ ಎಂದು ವಿಚಾರಿಸಿದೆ. ಆಕೆ ‘ಇಲ್ಲ ಅಕ್ಕ, ನಮ್ಮ ಮನೆಯಲ್ಲಿ ಯಾರೂ ಪೌಡರ್ ಹಚ್ಚುವುದಿಲ್ಲ, ಮದುವೆ-ಮುಂಜಿ ಅಂತಾ ಯಾವುದಾದರೂ ಫಂಕ್ಷನ್ ಇದ್ದಾಗ ಮಾತ್ರ ಹಚ್ಚುವುದು, ಹಾಗಾಗಿ ಎಲ್ಲಿ ಹೋಗಿದೆಯೋ ಸಿಗುತ್ತಿಲ್ಲ’ ಎಂದು ಸಪ್ಪೆ ಮೋರೆ ಮಾಡಿದಳು.
ನನಗೆ ತಲೆ ತಿರುಗುವುದೊಂದೇ ಬಾಕಿ ಇತ್ತು. ಈಗಿನ ಕಾಲದಲ್ಲೂ ಹೀಗೂ ಹೆಣ್ಣುಮಕ್ಕಳಿದ್ದಾರೆಯೇ?, ಅದರಲ್ಲೂ ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳು, ತಮ್ಮ ಸೀರೆ, ಅಲಂಕಾರಕ್ಕೇ ಸಂಬಳದ ಬಹುಭಾಗ ಖರ್ಚು ಮಾಡುತ್ತಿರುವಾಗ ಈಕೆ ಬರೀ ಪೌಡರ್ ಕೂಡ ಹಚ್ಚದೆ ಅದು ಹೇಗಪ್ಪಾ ಕೆಲಸಕ್ಕೆ ಹೋಗುತ್ತಾಳೆ ಎನಿಸಿತು. ಮತ್ತೆ ಒಳ್ಳೆಯ ಅನುಕೂಲಸ್ಥರ ಮನೆತನದ ಹುಡುಗಿ. ಸರಳ ಸುಂದರಿ. ಆದರೆ ಮದುವೆಯಾಗಿ ಮಕ್ಕಳಾದ ಮೆಲೆಯೇ ನಾನು ಆಕೆಯನ್ನು ಮತ್ತೆ ನೋಡಿದ್ದು. ಈಗಂತೂ ಆಕೆಯ ಕಡಿಮೆ ರೇಟಿನ ಸೀರೆ, ಸರಿಯಾದ ಆರೈಕೆ ಇಲ್ಲದೆ ಬಂಗು ಬಡಿದಿರುವ ಮುಖ, ಮೂವತ್ತು ವರ್ಷದ ಹೆಣ್ಣು ಹತ್ತು ವರ್ಷ ಹೆಚ್ಚಾದಂತೆ ಬಸವಳಿದಿದ್ದಳು. ಊಟಕ್ಕೆ ನಮ್ಮನ್ನು ಕರೆಯುವ ಹಕ್ಕು ಉಳಿದಿಲ್ಲ ಎಂದು ಅರಿವಾಗಿತ್ತು. ನಾವೇ ಆಕೆಯ ಪರಿವಾರದವರನ್ನು ಊಟಕ್ಕೆ ಹೋಟೆಲ್ಲಿಗೆ ಕರೆದುಕೊಂಡು ಹೋದೆವು. ಆಕೆಯ ಯಜಮಾನರು ನಮ್ಮನ್ನು ಒಂದು ಮಾತೂ ಊಟಕ್ಕೆ ನಿಲ್ಲಿಸಿಕೊಳ್ಳದೆ, ಸಲೀಸಾಗಿ ನಮ್ಮ ಆಮಂತ್ರಣಕ್ಕೆ ಒಪ್ಪಿ, ಒಂದಿನಿತೂ ಸಂಕೋಚ ಪಡದೆ ಹೋಟೆಲ್ಲಿನಲ್ಲಿ ಗಡದ್ದಾಗಿ ಬೇಕುಬೇಕಾದ್ದನ್ನು ತರಿಸಿಕೊಂಡು ಊಟ ಮಾಡಿದರು. ನಮಗೇನೂ ಅದಕ್ಕೆ ಬೇಜಾರಿರಲಿಲ್ಲ, ಆಕೆಯ ಮಕ್ಕಳೂ ಖುಷಿಯಿಂದ, ತೃಪ್ತಿಯಿಂದ ಮನಸಾರೆ ಊಟ ಮಾಡಿದವು. ಆದರೆ ಆಕೆ ಮಾತ್ರ ಮೈಹಿಡಿ ಮಾಡಿಕೊಂಡು ಊಟ ಮಾಡಿದಳು. ವಾಪಾಸ್ ಬರುವಾಗ ಒಂದು ಚೀಟಿಯನ್ನು ನನ್ನ ವ್ಯಾನಿಟಿ ಬ್ಯಾಗಿನಲ್ಲಿ ಹಾಕಿ, ಫೋನ್ ನಂಬರ್ ಕೊಟ್ಟಿದ್ದೇನೆ, ಊರಿಗೆ ಹೋದಮೇಲೆ ಕಾಲ್ ಮಾಡು ಎಂದಳು.
ಒಂದು ವಾರದ ನಂತರ ಊಟದ ಸಮಯದಲ್ಲಿ ಆಕೆಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡೆ. ಅಲ್ವೇ, ಈಗಿನ ಕಾಲದ ಹುಡುಗಿ ನೀನು, ಅದೂ ಕೆಲಸಕ್ಕೆ ಹೋಗುವವಳು, ಹೇಗಿರಬೇಕು ಮಾಡರ್ನ ಆಗಿ, ಒಳ್ಳೆ ಓಬೀರಾಯನ ಕಾಲದಲ್ಲಿ ಇದ್ದ ಹಾಗಿದ್ದೀಯಾ. ಒಂದು ಸ್ಮಾರ್ಟ ಫೋನು ಕೂಡ ಇಲ್ಲ, ದುಡಿದದ್ದನ್ನೆಲ್ಲಾ ಕೂಡಿಟ್ಟು ಏನು ಮಾಡ್ತೀಯಾ, ಜೀವನವನ್ನು ಸ್ವಲ್ಪವಾದರೂ ಎಂಜಾಯ್ ಮಾಡಬೇಕು ಎಂದು ಗದರಿದೆ.
ಎಲ್ಲದಕ್ಕೂ ಪಡೆದು ಬಂದಿರಬೇಕು ಅಕ್ಕಾ. ಇವರಿಗೆ ನನ್ನನ್ನು ಮದುವೆ ಮಾಡಿ ಕೊಟ್ಟಾಗ ಟೆಂಪರರಿ ಕೆಲಸ ಪರ್ಮನೆಂಟ್ ಆಗುತ್ತದೆ ಎಂದುಕೊಂಡಿದ್ದೆವು. ಆದರೆ ಅದಾಗಲೇ ಇಲ್ಲ. ಕೆಲಸ ಬಿಟ್ಟು ಬಿಜಿನೆಸ್ ಮಾಡ್ತೀನಿ ಅಂತಾ ಎಲ್ಲೆಲ್ಲೋ ದುಡ್ಡು ಹಾಕಿ ಕೈಸುಟ್ಟುಕೊಂಡರು. ಈಗ ಮನೆಯಲ್ಲೇ ಇದ್ದಾರೆ. ಪ್ರತಿಯೊಂದಕ್ಕೂ ಈಗ ನನ್ನ ಮೇಲೆ ಹರಿಹಾಯ್ತಾರೆ. ಸರ್ಕಾರಿ ನೌಕರಿಯಲ್ಲಿದ್ದೀಯಾ ಅಂತಾ ಧಿಮಾಕು ಅಂತಾ ಹಂಗಿಸ್ತಾರೆ. ತಿಂಗಳ ಸಂಬಳ ಮೂವತ್ತೈದು ಸಾವಿರ ರೂಪಾಯಿಯಲ್ಲಿ ಒಂದು ರೂಪಾಯಿಯನ್ನೂ ನಾನು ಇಟ್ಟುಕೊಳ್ಳದೆ ಅವರ ಕೈಗೆ ಹಾಕಬೇಕು. ನನ್ನನ್ನು ಆಫೀಸಿಗೆ ಅವರೇ ಬಿಟ್ಟು ಬರುವುದರಿಂದ ಕೈ ಖರ್ಚಿಗೂ ಕೊಡುವುದಿಲ್ಲ. ಪುಣ್ಯಕ್ಕೆ ಪ್ರತಿವರ್ಷ ನನಗೆ ಬರುವ ಹದಿನೈದು ಸಾವಿರ ಬೋನಸ್ ಮಾತ್ರ ನನ್ನ ಸ್ವಂತಕ್ಕಾಗಿ ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಅದರಲ್ಲೇ ನನ್ನ ಸ್ಯಾನಿಟರಿ ಪ್ಯಾಡ್ ನಿಂದ ಹಿಡಿದು ಸೀರೆ, ಬ್ಲೌಸ್ ಪ್ರತಿಯೊಂದಕ್ಕೂ ನಾನು ವರ್ಷಪೂರ್ತಿ ತೂಗಿಸಿಕೊಂಡು ಹೋಗಬೇಕು ಎಂದು ಆಕೆ ಹೇಳುತ್ತಾ ಹೋದಂತೆ ಕಲ್ಲಾಗಿ ಕುಳಿತಿದ್ದೆ.
ಮತ್ತೊಬ್ಬ ಗೆಳತಿಯ ಗೋಳು ಇನ್ನೊಂದು ರೀತಿಯದು. ಪ್ರತಿದಿನ ಕೆಲಸಕ್ಕೆ ಹೋಗಬೇಕೆಂದು ಬೆಳಗ್ಗೆ ಐದು ಗಂಟೆಗೆಲ್ಲಾ ಎದ್ದು ಬೆಳಗಿನ ತಿಂಡಿಯಿಂದ ಹಿಡಿದು, ಮಧ್ಯಾಹ್ನದ ಅಡುಗೆಯವರೆಗೆ ಎಲ್ಲ ರೆಡಿ ಮಾಡಿ, ಮಕ್ಕಳನ್ನು ತಯಾರು ಮಾಡಿ, ಶಾಲೆ ಬಸ್ಸು ಹತ್ತಿಸಿ ಇನ್ನೇನು ನಾನು ಸ್ನಾನಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ, ಅತ್ತೆ, ಮಾವ, ನಾದಿನಿ ಒಬ್ಬೊಬ್ಬರೇ ಎದ್ದು ಬಚ್ಚಲು, ಸಂಡಾಸಿನ ಕದವಿಕ್ಕಿಕೊಳ್ಳುತ್ತಾರೆ. ನಾನು ಬೇರೆ ಕೆಲಸ ಮಾಡಿಕೊಳ್ಳುವಷ್ಟರಲ್ಲಿ ಅವರು ಮುಗಿಸಿಕೊಳ್ಳಬಹುದು, ಅದಾಗುವುದಿಲ್ಲ. ಅವರು ಹೊರ ಬರುವುದನ್ನು ಕಾದು ನಾನು ಸ್ನಾನ, ಪೂಜೆ ಮುಗಿಸಿ ರೆಡಿಯಾಗುವಷ್ಟರಲ್ಲಿ ಆಫೀಸಿನ ಸಮಯವಾಗಿಬಿಡುತ್ತದೆ. ತಿಂಡಿಯನ್ನು ಹಾಗೇ ಒಂದು ಡಬ್ಬಿಗೆ ಹಾಕಿಕೊಂಡು ಆಫೀಸಿನಲ್ಲಿ ಸಮಯ ಸಿಕ್ಕಾಗ ತಿನ್ನುತ್ತೇನೆ. ಮತ್ತೆ ಮಧ್ಯಾಹ್ನ ಊಟಕ್ಕೆ ಬಂದಾಗ ಒಮ್ಮೊಮ್ಮೆ ಅನ್ನದ ಪಾತ್ರೆ ತಳ ಹತ್ತಿರುತ್ತದೆ. ಏನೂ ಹೇಳುವಂತಿಲ್ಲ, ಇರೋ ಅರ್ಧ ಘಂಟೆಯಲ್ಲಿ ಅನ್ನ ಮಾಡಿಕೊಂಡು, ಉಂಡು ಮತ್ತೆ ಓಡುವುದು. ಸಂಜೆ ಬಂದ ಮೇಲೆ ಕೆಲಸಗಳ ಹೊರೆ ಮತ್ತೆ ಕಾದಿರುತ್ತದೆ. ಗಂಡನ ಸಿಡುಕಾಟ, ಮಕ್ಕಳ ಹೋಮ್‍ವರ್ಕ್, ಮರುದಿನದ ಅಡುಗೆಗೆ ತಯಾರು ಮಾಡಿಕೊಳ್ಳುವುದು. ಅತಿಥಿಗಳ ಮುಂದೆ ಅಕ್ಕ-ಪಕ್ಕದವರ ಹತ್ತಿರ ಅತ್ತೆ, ಈ ಕೆಲಸಕ್ಕೆ ಹೋಗೋ ಹುಡುಗಿಯರನ್ನು ಸೊಸೆಯಾಗಿ ತಂದುಕೊಂಡ್ರೆ ಉಪಯೋಗವಿಲ್ಲ ಬಿಡಿ, ಸಾಯೋ ತನಕ ನಮಗೆ ಗೇಯುವುದು ತಪ್ಪುವುದಿಲ್ಲ, ಅಲಂಕಾರ ಮಾಡಿಕೊಂಡು ಮುಂಜಮುಂಜಾನೆ ಹೊರಟ್ರೆ ಸಂಜೆಯ ತನಕ ಅರಾಮು, ವಯಸ್ಸಾದ ನಾವು ನಮ್ಮ ಕೆಲಸಾನೂ ಮಾಡ್ಕೊಂಡು, ಕೆಲಸದವರನ್ನೂ ಇವರ ಮಕ್ಳನ್ನೂ ನೋಡ್ಕೊಂಡು, ಬಂದು ಹೋಗೋರನ್ನೂ ನೋಡ್ಕೋಬೇಕು, ಇದೇನ್ರೀ ಕರ್ಮಾ, ಏನು ದುಡ್ದು ನಮಗಾ ಕೊಡ್ತಾರೆ, ಇವ್ರು ದುಂಡುಗಿಟ್ಟುಕೊಳ್ಳೋಕೆ ನಾವು ಹೆಣಗಬೇಕು ಎಂದು ಸಲೀಸಾಗಿ ಬಾಯಿ ಹರಿಯಬಿಡುತ್ತಾರೆ. ಅನ್ನುವಂತಿಲ್ಲ, ಅನುಭವಿಸುವಂತಿಲ್ಲ. ಇವರ ಮನೆಗಾಗಿಯೇ ತಾನೇ ನಾನೂ ದುಡಿಯುವುದು ಅಂತಾ ಗೊತ್ತಿದ್ದರೂ ನುಂಗಿಕೊಂಡಿರಬೇಕಷ್ಟೆ.
ಇವು ಕೇವಲ ಒಂದೆರಡು ಉದಾಹರಣೆಗಳಷ್ಟೇ. ಕೆಲಸಕ್ಕೆ ಹೋಗುವ ಮಹಿಳೆಯರ ಪಾಡು ಒಬ್ಬರಿಗಿಂತ ಮತ್ತೊಬ್ಬರದು ಭಿನ್ನವಾಗೇನೂ ಇಲ್ಲ. ಎಲ್ಲೋ ಕೆಲ ಮನೆಗಳಲ್ಲಿ ಮಾತ್ರ ಮನೆಯವರ, ಗಂಡನ ಸಹಕಾರ ಇರುತ್ತದೆ. ಇನ್ನು ಗಂಡನ ಕಡೆಯವರ ಪೂಜೆ, ಪುನಸ್ಕಾರ, ಸಮಾರಂಭ, ಮದುವೆ, ಮುಂಜಿ ಏನೇ ಇದ್ದರೂ ಆಫೀಸಿಗೆ ರಜ ಹಾಕಲೇಬೇಕು. ತಮ್ಮ ಕಡೆಯವರದ್ದು ತಪ್ಪಿಸಿದರೂ ಇವರ ಕಡೆಯವರದ್ದು ತಪ್ಪಿಸೋ ಹಾಗಿಲ್ಲ. ಮನೆಗೆ ಯಾರಾದರೂ ಅತಿಥಿಗಳು ಬರುವವರಿದ್ದರೆ, ಇವತ್ತು ರಜಾ ಹಾಕಿಬಿಡಮ್ಮ ಎಂದು ಸಲೀಸಾಗಿ ಹೇಳಿಬಿಡುತ್ತಾರೆ. ಒಮ್ಮೊಮ್ಮೆ ಆಫೀಸಿಗೆ ಹೋದ ಮೇಲೆಯೂ ನಡುವೆ ಮನೆಯಿಂದ ಬುಲಾವ್ ಬಂದಿರುತ್ತದೆ. ಹೋಗಲೇಬೇಕಾದ ಅನಿವಾರ್ಯತೆ. ಆಫೀಸಿನಲ್ಲಿ ಏನೇನು ಒತ್ತಡಗಳಿರುತ್ತವೆಯೋ, ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕೋ, ಯಾವ ಕೆಲಸಗಳು ಡೆಡ್‍ಲೈನ್ ಗೆ ಬಂದು ನಿಂತಿರುತ್ತವೆಯೋ, ತಲೆಯಲ್ಲಿ ಅದೇ ವಿಚಾರಗಳು ಕೊರೆಯುತ್ತಿರುತ್ತವೆ. ಗಂಡಸರಿಗೆ ಗೊತ್ತಾದರೂ ಅದೇನೋ ಅಹಂ. ಇವಳನ್ನು ಕೆಲಸಕ್ಕೆ ಕಳಿಸುತ್ತಿರುವುದೇ ದೊಡ್ಡ ವಿಷಯ ಎನ್ನುವ ಗತ್ತು. ಇನ್ನು ಗಂಡನಿಗಿಂತ ಹೆಚ್ಚು ಓದಿ, ಆತನಿಗಿಂತ ದೊಡ್ಡ ಹುದ್ದೆ, ಹೆಚ್ಚು ಸಂಬಳ ಪಡೆಯುತ್ತಿರುವ ಹೆಣ್ಣುಮಕ್ಕಳ ಗತಿ ಬಹುತೇಕ ಶೋಚನೀಯ.

ದೌರ್ಜನ್ಯವೆಂಬುದು ದೈಹಿಕವಾಗಿರಲೀ, ಮಾನಸಿಕವಾಗಿರಲೀ, ಮೌಖಿಕವಾಗಿರಲೀ ಶತಮಾನಗಳಿಂದ ಮಹಿಳೆ ಬಲಿಯಾಗುತ್ತಿರುವುದು ಮಾತ್ರ ತಪ್ಪಿಲ್ಲ. ಉದ್ಯೋಗಸ್ಥ ಮಹಿಳೆ ಮತ್ತೊಂದು ರೀತಿಯಲ್ಲಿ ಶೋಷಣೆಗೀಡಾಗುತ್ತಿದ್ದಾಳೆ. ಅಬಲೆಯಲ್ಲ, ಸಬಲೆ ಅಂತಾ ಹೇಗೇ ಬಾಯಿ ಬಡಿದುಕೊಂಡರೂ ಅದು ಮನೆಯ ಹೊರಗೆ ಮಾತ್ರ, ಮನೆಯ ಒಳಗೆ ಬಾಯಿಗೆ ಬೀಗ ಬಡಿದುಕೊಂಡು ಇರಬೇಕಾದ ಪರಿಸ್ಥಿತಿ ಎಷ್ಟೋ ಹೆಣ್ಣುಮಕ್ಕಳದು. ಎಲ್ಲೋ ಕೆಲವು ಪ್ರತಿಶತ ಹೆಣ್ಣುಮಕ್ಕಳು ಮಾತ್ರ ಎದುರಿಸಿ ನಿಲ್ಲುವ ದಿಟ್ಟತನ ತೋರುತ್ತಾರೆ. ಆದರೆ ಉದ್ಯೋಗಸ್ಥ ಮಹಿಳೆ ತನ್ನ ಆತ್ಮವಿಶ್ವಾಸದಿಂದ ಪ್ರತಿಯೊಂದು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾ ಸಾಗುತ್ತಿರುವುದು ಆಕೆಯ ಹೆಗ್ಗಳಿಕೆ.

ಮತ್ತಷ್ಟು ಸುದ್ದಿಗಳು

vertical

Latest News

ಥೈಲ್ಯಾಂಡ್‌ನಲ್ಲಿ ಜಾಲಿ ಮೂಡ್‌ನಲ್ಲಿ ಬಿಗ್‌ ಬಾಸ್‌ ಅಮೂಲ್ಯ

newsics.com ಬೆಂಗಳೂರು: ಕಮಲಿ ಸೀರಿಯಲ್ ನಲ್ಲಿ ರಂಜಿಸಿ, ಬಳಿಕ ಬಿಗ್ ಬಾಸ್‌ನಲ್ಲಿ ಸಖತ್ ಸದ್ದು ಮಾಡಿದ ಮುದ್ದು ಹುಡುಗಿ ಅಮೂಲ್ಯ ಗೌಡ, ಸದ್ಯ ಜಾಲಿ ಮೂಡ್ ನಲ್ಲಿದ್ದಾರೆ. ಈ...

ಟಿ20 ಸರಣಿ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸೋಲು

newsics.com ರಾಂಚಿ: ಟಿ20 ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲನುಭವಿಸಿದೆ. ರಾಂಚಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪ್ರವಾಸಿ ತಂಡ ನ್ಯೂಜಿಲೆಂಡ್ 21 ರನ್‌ಗಳ ಜಯ ದಾಖಲಿಸಿದೆ. ಟಾಸ್‌ ಗೆದ್ದ ಭಾರತ ನ್ಯೂಜಿಲೆಂಡ್‌ಗೆ...

55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ

newsics.com ದೆಹಲಿ: 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ ವಿಧಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ವಿಮಾನವೊಂದರ ಬಗ್ಗೆ ನಾಗರಿಕ ವಿಮಾನಯಾನ ನಿಯಂತ್ರಕ...
- Advertisement -
error: Content is protected !!