Thursday, March 30, 2023

ನೆರೆಹೊರೆ ಸಂಬಂಧದ ಸವಿನೆನಪು

Follow Us

  • ಎನ್ .ಶೈಲಜಾ ಹಾಸನ

ಅಕ್ಕಪಕ್ಕದ ಮನೆಯವರೊಂದಿಗೆ ಅಂದಿನ ದಿನಗಳಲ್ಲಿ ಅಪಾರವಾದ ಬಾಂಧವ್ಯ ಹೊಂದಿ, ಕಷ್ಟ ಸುಖ ಎಲ್ಲದರಲ್ಲೂ ಪರಸ್ಪರ  ಸ್ಪಂದಿಸುವ ಹೃದಯಗಳನ್ನು ಅಂದು ಹೆಚ್ಚು ಹೆಚ್ಚು ಕಾಣಬಹುದಿತ್ತು. ನಾವು ನಮ್ಮ ತಂದೆಯ ಉದ್ಯೋಗ ನಿಮಿತ್ತ ಎಲ್ಲ ಊರುಗಳನ್ನು ಸುತ್ತಿ ಕೊನೆಗೆ ಜಿಲ್ಲಾ ಕೇಂದ್ರಕ್ಕೆ ಬಂದು ನೆಲೆ ನಿಂತೆವು. ನಾವಿದ್ದ ಮನೆ ಒಂದು ವಠಾರದಲ್ಲಿ ಇತ್ತು. ಎಂಟು ಮನೆಗಳಿರುವ ಆ ವಠಾರದಲ್ಲಿ ಇಬ್ಬರು ಒಂದೊಂದು ಸಾಲಿನ ನಾಲ್ಕು ಮನೆಗಳ ಒಡೆಯರಾಗಿದ್ದರು. ವಠಾರವಾದರೂ ಮನೆ ದೊಡ್ಡದಿತ್ತು. ಹತ್ತು ಹದಿನೈದು ಜನ ವಾಸ ಮಾಡಬಹುದಾಗಿತ್ತು. ಒಂದು ರೂಮು, ಎರಡು ದೊಡ್ಡ ಹಾಲು, ಮಹಡಿ ಇತ್ತು.ಮಹಡಿಯೂ ಸಾಕಷ್ಟು ದೊಡ್ಡದಾಗಿತ್ತು. ವಠಾರದಲ್ಲಿ ಕೆಲ ಮನೆಯವರು ಮಹಡಿಯನ್ನು ಹಳ್ಳಿಯಿಂದ ಕಾಲೇಜು ಓದಲು ಬಂದಿರುವ ಹೆಣ್ಣು ಮಕ್ಕಳಿಗೆ ಬಾಡಿಗೆಗೆ ಕೊಟ್ಟಿದ್ದರು. ನಮಗಂತೂ ಮನೆ ಇಷ್ಟವಾಗಿತ್ತು. ಮಧ್ಯಮ ವರ್ಗದ ಎಂಟು ಕುಟುಂಬಗಳು ಅಲ್ಲಿ ವಾಸವಾಗಿದ್ದರು. ಚೆಕ್ಕಿಂಗ್ ಇನ್ಸಪೆಕ್ಟರ್, ಹೈಸ್ಕೂಲ್ ಶಿಕ್ಷಕರು, ಬ್ಯಾಂಕ್ ಉದ್ಯೋಗಿ, ರೆವಿನ್ಯೂ ಇಲಾಖೆಯಲ್ಲಿ ಉದ್ಯೋಗಿ, ಸರ್ಕಾರಿ ಬಸ್ಸು ಚಾಲಕರು ಹೀಗೆ ಹೆಚ್ಚು ಕಡಿಮೆ ಎಲ್ಲಾ ಕುಟುಂಬದ ಯಜಮಾನರುಗಳು ಸರ್ಕಾರಿ ಉದ್ಯೋಗದಲ್ಲಿದ್ದರು. ಒಂದೆರಡು ಮನೆಯವರು ಮಾತ್ರ ಬಿಸಿನೆಸ್ ಮಾಡ್ತಾ ಇದ್ದರು.ಆದರೂ ಎಲ್ಲರೂ ಸಮಾನರಂತೆ ಬದುಕುತ್ತಿದ್ದರು.
ಆ ವಠಾರಕ್ಕೆ ಹೋದಾಗ ನಮಗೆ ಮೊದಲು ಪರಿಚಯವಾದರು ನಮ್ಮ ಪಕ್ಕದ ಮನೆಯವರು. ಆ ಮನೆಯಲ್ಲಿ ಅಮ್ಮ ಇಬ್ಬರು ಗಂಡು ಮಕ್ಕಳಾದ ಶಂಕರಣ್ಣ, ಬಾಬಣ್ಣ ಮತ್ತು ರಮಕ್ಕ. ಅವರ ಅಪ್ಪ ಉದ್ಯೋಗ ನಿಮಿತ್ತ ಬಾಂಬೆಯಲ್ಲಿ ಇದ್ದರು. ಮತ್ತು ಮತ್ತೊಬ್ಬ ಅಕ್ಕ ಪದ್ಮಕ್ಕ ಕೂಡಾ ಬಾಂಬೆಯಲ್ಲಿದ್ದರು. ರಮಕ್ಕ ನಮಗೆ ಟ್ಯೂಷನ್ ಮಾಡ್ತಾ ಇದ್ದರು. ರಮಕ್ಕ ಅವರ ಅಮ್ಮನಿಗೆ ಕೂದಲು ಬೆಳ್ಳಗೆ ಕಾಣ್ತಾ ಇದ್ದುದರಿಂದಲೊ ಏನೊ ಮಕ್ಕಳೆಲ್ಲ ಅವರನ್ನು ಅಜ್ಜಿ ಅಂತ ಕರೆಯುತ್ತಿದ್ದರು. ಹಾಗಾಗಿ ನಾವು ಕೂಡಾ ಅಜ್ಜಿ ಅಂತಾನೇ ಕರೆಯುತ್ತಿದ್ದೆವು. ಅಜ್ಜಿ ಸದಾ ಮಂಚದ ಮೇಲೆ ಕುಳಿತಿರುತ್ತಿದ್ದರು. ಮಹಡಿ ಮೇಲಿನಿಂದ ಬಿದ್ದುದ್ದರಿಂದ ಸೊಂಟಕ್ಕೆ ತುಂಬಾ ಪೆಟ್ಟು ಬಿದ್ದು ಓಡಾಡಲು ಆಗುತ್ತಿರಲಿಲ್ಲವಂತೆ. ಹಾಗಾಗಿ ಒಂದೇ ಕಡೆ ಕುಳಿತು ಕೊಂಡಿರುತ್ತಿದ್ದರು. ರಮಕ್ಕ ನಮಗೆ ಚೆನ್ನಾಗಿ ಪಾಠಮಾಡುತ್ತಾ ಇದ್ದರು.ಅವರು ಹೊರಗೆ ಹೋಗುವಾಗ ಯಾವಾಗಲೂ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅದಕ್ಕೆ ನನ್ನನ್ನು ಅವರ ಬಾಲ ಅಂತ ಸದಾ ನನ್ನ ಪ್ರಚಂಡ ಸಹೋದರರು ಆಡಿಕೊಳ್ಳುತ್ತಿದ್ದರು.ಅವರ ಮನೆಯಲ್ಲಿ ದಸರ ಹಬ್ಬದಲ್ಲಿ ಬೊಂಬೆ ಇಡುತ್ತಿರುತ್ತಿದ್ದರು.ಆ ಮನೆಯಲ್ಲಿ ಮತ್ತು ಅವರ ಎದುರು ಮನೆಯಲ್ಲಿ ಬೊಂಬೆ ಇರುತ್ತಿದ್ದರು. ಪ್ರತಿದಿನ ಬೊಂಬೆಯ ಆರತಿಗೆ ವಠಾರದ ಎಲ್ಲಾ ಮಕ್ಕಳನ್ನು ಕರೆಯುತ್ತಿದ್ದರು. ಬಣ್ಣ ಬಣ್ಣದ, ತರಹಾವರಿ ಗೊಂಬೆಗಳನ್ನು ನೋಡಲು ತುಂಬಾ ಖುಷಿಯಾಗುತ್ತಿತ್ತು. ಆರತಿ ಮಾಡಿ ಬೊಂಬೆ ಬಾಗಿಣ ಅಂತ ತರಾವರಿ ತಿಂಡಿ ಕೊಡುತ್ತಿದ್ದರು. ಕೊಡುಬಳೆ, ನಿಪ್ಪಟ್ಟು, ಕೊಬ್ಬರಿ ಮಿಠಾಯಿ ಹೀಗೆ ಒಂಬತ್ತು ದಿನವೂ ನಮಗೆಲ್ಲ ತಿಂಡಿಗಳ ಸುಗ್ಗಿ.ಹಾಗಾಗಿಯೇ ಈ ಹಬ್ಬಕ್ಕಾಗಿ ಕಾಯುತ್ತಿದ್ದೆವು. ದಸರಾ ರಜೆ ಮಜದ ಜತೆ, ಈ ಬೊಂಬೆ ಹಬ್ಬದ ಸಡಗರ,ಕೊನೆ ದಿನ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಉತ್ಸವ. ಅದನ್ನು ನೋಡಲು ಖುಷಿಯೋ ಖುಷಿ. ವಠಾರದ ಮಕ್ಕಳು,ದೊಡ್ಡವರು ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡು ಬನ್ನಿ ಕಡಿದ ಮೇಲೆ ಬನ್ನಿ ತೆಗೆದು ಕೊಂಡು ಪರಸ್ಪರ ಬನ್ನಿ ಕೊಟ್ಟು ಸ್ನೇಹ ವಿಶ್ವಾಸ ಹೆಚ್ಚಿಸಿಕೊಳ್ಳುತ್ತಿದ್ದರು.
ಸಂಕ್ರಾಂತಿ ಹಬ್ಬದಲ್ಲಿ ನನಗೆ ರಮಕ್ಕ ಅಲಂಕಾರ ಮಾಡಿ ಕೊಡುತ್ತಿದ್ದರು. ಅಮ್ಮನ ರೇಷ್ಮೆ ಸೀರೆಯನ್ನು ಲಂಗದಂತೆ ಉಡಿಸಿ ರೇಷ್ಮೆ ಲಂಗದಂತೆಯೇ ಕಾಣುವಂತೆ ಮಾಡುತ್ತಿದ್ದರು. ಆನಂತರ ಅವರ ಜೊತೆ ಎಳ್ಳು ಬೀರಲು ಹೋಗುತ್ತಿದ್ದೆವು. ದಾರಿಯಲ್ಲಿ ಕಾಲೇಜು ಹುಡುಗರು, ಕಾಲೇಜು ಮುಗಿಸಿದ ಹುಡುಗರು, ದಪ್ಪ ದಪ್ಪ ಮೀಸೆ ಬಿಟ್ಟ ಹುಡುಗರು” ನಮಗೆ ಎಳ್ಳು ಬೀರಲ್ವಾ ” ಅಂತ ಕಿಚಾಯಿಸುತ್ತಿದ್ದರು.ಅಕ್ಕ ಅವರು ಎಳ್ಳು ಬೀರಲ್ವಾ ಅಂತಿದ್ದಾರೆ ಕೊಡೋಣ್ವ ಅಂತ ರಮಕ್ಕನಿಗೆ ಕೇಳಿದರೆ ಅವರ ಕಡೆ ನೋಡಬೇಡ,ಕೇಳಿಸಿಕೊಳ್ಳದಂತೆ ಸುಮ್ಮನೇ ಬಾ ಅಂತ ಅಲ್ಲಿಂದ ನನ್ನನ್ನು ಎಳೆದು ಕೊಂಡು ವೇಗವಾಗಿ ನಡೆದು ಬಿಡುತ್ತಿದ್ದರು.
ಒಮ್ಮೆ ಶಾವಂತಿಗೆ ಹೂವಿನ ಕಾಲದಲ್ಲಿ ತುಂಬಾ ಚೆನ್ನಾಗಿರೂ ಶಾವಂತಿಗೆ ಹೂವು ತರಿಸಿಕೊಂಡು ರಮಕ್ಕ ಮತ್ತು ಅಜ್ಜಿ ಪ್ರೀತಿಯಿಂದ ಅವರ ಮನೆಯ ಮಕ್ಕಳಿಗೆ ಮಾಡುವಂತೆ ನನಗೆ ಹೂವಿನ ಜಡೆ ಹಾಕಿ,ನಮ್ಮಮ್ಮನ ರೇಷ್ಮೆ ಸೀರೆಯನ್ನು ಲಂಗದಂತೆ ಉಡಿಸಿ ಚೆನ್ನಾಗಿ ಅಲಂಕಾರ ಮಾಡಿ ಸ್ಟುಡಿಯೋಗೆ ಕರೆದು ಕೊಂಡು ಹೋಗಿ ಫೋಟೊ ಕೂಡ ತೆಗೆಸಿದ್ದು ಇನ್ನೂ ನನ್ನ ಮನದ ಅಂಗಳದಲ್ಲಿ ಹಸಿರಾಗಿವೆ ಉಳಿದು ಕೊಂಡಿದೆ.ಆ ಫೋಟೋ ನನ್ನ ಬಳಿ ಈಗಲೂ ಇದ್ದು ಸವಿನೆನಪುಗಳನ್ನು ನೆನಪಿಸುತ್ತಿದೆ.ಅದೇ ಅಲಂಕಾರದಲ್ಲಿ ಮಧ್ಯಾಹ್ನ ಶಾಲೆಗೆ ಹೋಗಿದ್ದು ,ಶಾಲೆಯಲ್ಲಿ ಎಲ್ಲರೂ ನನ್ನನ್ನು ವಿಶೇಷವಾಗಿ ನೋಡಿುದ್ದು, ಮುಖ್ಯಶಿಕ್ಷಕರು ಆಫೀಸ್ ರೂಮಿಗೆ ಕರೆಸಿ ಇವತ್ತು ನಿನ್ನ ಹುಟ್ಟುಹಬ್ಬನಾ,ಮುದ್ದಾಗಿ ಕಾಣ್ತಾ ಇದ್ದೀಯ ಅಂದಿದ್ದು, ನಮ್ಮ ಮೇಡಂ ಒಬ್ಬರು ಶಾಲೆಗೆಲ್ಲ ಹೀಗೆ ಡ್ರಸ್ ಮಾಡಿಕೊಂಡು ಬರಬಾರದು, ಎಲ್ಲಾ ಮಕ್ಕಳು ನಿನ್ನೆ ನೋಡ್ತಾ ಇದ್ದಾರೆ ಅಂತ ಹೇಳಿದ್ದು ಎಲ್ಲವೂ ಇಂದಿಗೂ ನೆನಪಿದೆ.
ರಮಕ್ಕನ ಮನೆಯಲ್ಲಿ ಅವರೆ ಕಾಯಿ ರೊಟ್ಟಿ ಮಾಡಿದಾಗ ನನಗಿಷ್ಟ ಅಂತ ಮರೆಯದೆ ನನಗೆ ಕೊಡುತ್ತಿದ್ದರು.
ನಾವು ಪ್ರತಿದಿನ ಶಾಲೆಯಿಂದ ಬಂದು ಏನಾದರು ತಿಂಡಿ ತಿಂದು ಕಾಫಿ ಕುಡಿದು ಆಟ ಆಡಲು ಹೋಗಿಬಿಡುತ್ತಿದ್ದೆವು.ಏಳು ಗಂಟೆಯ ಒಳಗೆ ಮನೆಗೆ ಬಂದು ಓದಲು ಕಡ್ಡಾಯವಾಗಿ ಕುಳಿತು ಕೊಳ್ಳ ಬೇಕಿತ್ತು.ಮನೆಗೆ ಬಂದು ಕೈ ಕಾಲು ಮುಖ ತೊಳೆದು,ದೇವರ ಮನೆಗೆ ಹೋಗಿ ಹಣೆಗೆ ಮೂರು ಬೆರಳಿನಿಂದ ವಿಭೂತಿ ಪಟ್ಟೆ ಹಾಕಿ ,ದೇವರಿಗೆ ನಮಸ್ಕರಿಸಿ ಅಮ್ಮ ಅಪ್ಪನ ಕಾಲಿಗೆ ನಮಸ್ಕಾರ ಮಾಡಿ ಪಕ್ಕದ ಮನೆಗೆ ಟ್ಯೂಷನ್ ಹೇಳಿಸಿ ಕೊಳ್ಳಲು ಹೋಗುತ್ತಿದ್ದೆವು.ನನ್ನನ್ನು ನೋಡಿದ ಕೂಡಲೇ ಬಾಬಣ್ಣ ಅಕ್ಕಮಹಾದೇವಿ ಬಂದಳು ಅಂತ ರೇಗಿಸುತ್ತಿದ್ದರು.ಬೆಳಿಗ್ಗೆ ಸಂಜೆ ನನ್ನ ಹಣೆಯಲ್ಲಿ ಯಾವಾಗಲೂ ವಿಭೂತಿಯ ಪಟ್ಟಿ ಇರುತ್ತಿತ್ತು.ಹಾಗಾಗಿ ವಠಾರದಲ್ಲಿ ಎಲ್ಲರೂ ಕೂಡ ಹಾಗೆ ಕರೆಯುತ್ತಿದ್ದರು.ನನಗೂ ಆಗ ನಮ್ಮ ತಂದೆಯಂತೆ ದೇವರಲ್ಲಿ ವಿಪರೀತ ಭಕ್ತಿ ಇತ್ತು. ಪ್ರತಿದಿನ ಬೆಳಗ್ಗೆ ಎದ್ದು ಮುಖ ತೊಳೆದು ವಿಭೂತಿ ಧರಿಸಿ, ದೇವರಿಗೆ ಕೈ ಮುಗಿದು ಮುಂದಿನ ಕೆಲಸ ಮಾಡಬೇಕಿತ್ತು. ಸಂಜೆ ಓದಲು ಕೂರುವ ಮೊದಲು ಕೈ ಕಾಲು ಮುಖ ತೊಳೆದು ವಿಭೂತಿ ಧರಿಸಿ ದೇವರಿಗೆ ಕೈ ಮುಗಿದು ಹಿರಿಯರಿಗೆ ನಮಸ್ಕರಿಸಿ ಓದಲು ಕುಳಿತುಕೊಳ್ಳಲು ಕಲಿಸಿದ್ದರು. ನನ್ನ ಹಣೆತುಂಬಾ ಇರುವ ವಿಭೂತಿ ಪಟ್ಟಿ ನೋಡಿ ನಮ್ಮ ನೆರೆ ಹೊರೆಯ ಮನೆಯವರು ನನಗೆ ಅಕ್ಕಮಹಾದೇವಿ ಬಿರುದು ನೀಡಿದ್ದರು. ಹಾಗೆ ಕರೆದಾಗ ನನಗೂ ಖುಷಿಯಾಗುತ್ತಿತ್ತು.ಹೀಗೆ ಅನೇಕ ಸವಿ ನೆನಪುಗಳು ಈಗಲೂ ನನ್ನ ಕಾಡುತ್ತವೆ, ಖುಷಿ ನೀಡುತ್ತದೆ.

ಮತ್ತಷ್ಟು ಸುದ್ದಿಗಳು

vertical

Latest News

ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್!

newsics.com ಬಿಹಾರ: ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್. ಈ ಡಿಜಿಟಲ್ ಯುಗದಲ್ಲಿ ಯಾವುದೂ ಅಸಾಧ್ಯವಲ್ಲ ಎಂದೇ ಹೇಳಬಹುದು. ಬಿಹಾರದ 13 ವರ್ಷದ ಪ್ರತ್ಯೂಷ್ ಎಂಬ...

ಸಂಸದ ಸ್ಥಾನ ಕಸಿದುಕೊಂಡ ಕೋಲಾರಕ್ಕೆ ಮತ್ತೆ ರಾಹುಲ್‌ ಗಾಂಧಿ

newsics.com ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 2019ರ ಲೋಕಸಭೆ  ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ತಾವು ಮಾಡಿದ ಭಾಷಣಕ್ಕೆ ಮಾನನಷ್ಟ ಮೊಕದ್ದಮೆ ಗುರಿಯಾಗಿದ್ದು, ಸದ್ಯ ಸಂಸತ್‌ ಸದಸ್ಯತ್ವ ಸ್ಥಾನದಿಂದಲೇ ಅನರ್ಹಗೊಂಡಿದ್ದಾರೆ. ಈಗ ಕರ್ನಾಟಕ ವಿಧಾನಸಭಾ ಚುನಾವಣೆ...

ಈ ಬಾರಿ ಕಾಂಗ್ರೆಸ್​ಗೆ 115ಕ್ಕೂ ಹೆಚ್ಚು ಸ್ಥಾನ, BJPಗೆ 68 :ಎಬಿಪಿಸಿ ಓಟರ್ ಸಮೀಕ್ಷೆ

newsics.com ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ 115ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಜೆಡಿಎಸ್ 23 ಸ್ಥಾನಗಳನ್ನು ಪಡೆಯಬಹುದು  ಎಂದು ಎಬಿಪಿ ಸಿಓಟರ್ ಸಮೀಕ್ಷೆ ಬುಧವಾರ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್...
- Advertisement -
error: Content is protected !!