Thursday, December 7, 2023

ಮೇಷ್ಟ್ರು ಅಡುಗೆ ಮಾಡಿದ ಸುದ್ದಿ ಅಡುಗೆಯಮ್ಮನ ಕಿವಿಗೆ ಬಿದ್ದಾಗ…

Follow Us

* ಹಸಿದ ಮಕ್ಕಳ ಮುಂದೆ ಪಾಠ ಮಾಡಲು ಯಾವ ಶಿಕ್ಷಕನಿಗೆ ಮನಸ್ಸು ಬಂದೀತು?

ಸೋಮು ಕುದರಿಹಾಳ

ಎಂದಿನಂತೆ ಬೆಳಗ್ಗೆ ಶಾಲೆಗೆ ಹೋದ ತಕ್ಷಣ ತರಕಾರಿ ಚೀಲವನ್ನು ಅಡುಗೆ ಕೋಣೆಗೆ ಕೊಟ್ಟು ಕಳಿಸುವುದು ರೂಢಿ. ಅಡುಗೆ ಕೋಣೆ ಕದ ಹಾಕಿತ್ತು. ‘ಯಾಕ್ರೋ ಅಡುಗೆಯಮ್ಮರು ಬಂದಿಲ್ವಾ?’ ಎಂಬ ಪ್ರಶ್ನೆ ಮುಗಿಯುವಷ್ಟರಲ್ಲೇ ‘ಸ್ಟ್ರೈಕ್ ಇದೆ ಅಲ್ವಾ’ ಅನ್ನುವ ಉತ್ತರ ನನ್ನೊಳಗೆ ಹೊಳೆದಿತ್ತು. ಹೀಗೆ ಅಡುಗೆಯವರು ಮುಷ್ಕರ ಹೂಡಿದಾಗಲೆಲ್ಲ ಮಕ್ಕಳಿಗೆ ಸಲ್ಲಬೇಕಾದ ಬಿಸಿಯೂಟ ನಿಲ್ಲಿಸುವಂತಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಮಕ್ಕಳಿಗೆ ಊಟ ಕೊಡಬೇಕೆಂದು ಅಥವಾ ಬುತ್ತಿ ಕಟ್ಟಿಕೊಂಡು ಬರಲು ಮಕ್ಕಳಿಗೆ ತಿಳಿಸಬೇಕೆಂದು ಇಲಾಖೆ ಮುಂಚಿತವಾಗಿಯೇ ತಿಳಿಸಿರುತ್ತದೆ. ನಮ್ಮ ಶಾಲೆಯಿರುವ ಊರು ಒಂದು ಪುಟ್ಟ ಕ್ಯಾಂಪ್. ಇಲ್ಲಿನ ನಿವಾಸಿಗಳೆಲ್ಲರೂ ಆಂಧ್ರ ವಲಸಿಗ ಅಪ್ಪಟ ಶ್ರಮಿಕ ಕೃಷಿ ಕೂಲಿಕಾರರು. ದುಡಿಮೆಯೇ ಬದುಕು. ಬೆಳಗ್ಗೆ ಆರು ಇಲ್ಲವೇ ಏಳು ಗಂಟೆಗೆ ಮನೆ ಬಿಟ್ಟರೆಂದರೆ ಮತ್ತೆ ಮರಳುವುದು ಸಂಜೆ ಅದೇ ಆರು ಏಳರ ಹೊತ್ತಿಗೆ. ಹತ್ತು ಹನ್ನೊಂದು ಗಂಟೆಯ ಹೊತ್ತಿಗೆ ಇಡೀ ಕ್ಯಾಂಪ್ ಹುಡುಕಿದರೆ ನಾಲ್ಕಾರು ಜನ ಸಿಕ್ಕಾರು. ಅವರಲ್ಲಿ ಮನೆ ನೋಡಿಕೊಳ್ಳಲೆಂದು ಇರುವ ಇಬ್ಬರು ಅಜ್ಜಿಯರು ಮತ್ತು ಕೆಲಸ ಮಾಡಲಿಕ್ಕಾಗದ ಗರ್ಭಿಣಿಯರು. ಈ ಹಿಂದಿನ ದಿನ ಮುಷ್ಕರದ ವಿಷಯ ಗೊತ್ತಾಗುವಷ್ಟರಲ್ಲಿಯೇ ಶಾಲೆಗೆ ಬಂದಿದ್ದ ಅಡುಗೆಯಮ್ಮಂದಿರು ‘ಇವತ್ತು ಒಂದಿನ ಮಾಡ್ತೀವಿ ಸರ್ ನಾಳೆ ಬರಲ್ಲ’ ಅಂದಿದ್ರು. ‘ಸರಿ ಆಯ್ತಮ್ಮ, ನಾಳೆ ಯಾರಿಗಾದರೂ ಅಡುಗೆ ಮಾಡೋಕೆ ಹೇಳ್ತೀನಿ’ ಅಂದಿದ್ದೆ.
‘ನಿಮ್ಮನೆಯಲ್ಲಿ ಯಾರಿದಾರೆ?’ ಅಂತ ಒಬ್ಬೊಬ್ಬರನ್ನೇ ಕೇಳಿದ್ದಾಯ್ತು. ಎಲ್ಲರಿಂದಲೂ ಗೊತ್ತಿರುವ ಉತ್ತರ ‘ಕೆಲಸಕ್ಕೆ ಹೋಗ್ಯಾರ್ರಿ’. ‘ಸರಿ ಇವತ್ತು ಊಟ ಇಲ್ಲ. ಹೆಂಗ್ ಮಾಡ್ತೀರಿ?’ ಅಂತ ಕೇಳಿದ್ದಕ್ಕೆ ‘ಸರ್ ನಾನು ಬೆಳಗ್ಗೆನೂ ಉಂಡಿಲ್ರಿ’ ಎಂಬ ಉತ್ತರಕ್ಕೆ ಸಂಕಟ ಬೀಳದಿರುತ್ತದಾ? ಇದು ಒಂದು ದಿನದ ಮಾತಲ್ಲ. ಹೀಗೆ ಬೆಳಗಿನ ಊಟ ಮಾಡದೇ ಶಾಲೆಗೆ ಬರುವ ದಿನಗಳು ಮತ್ತು ಮಕ್ಕಳು ಹೆಚ್ಚು. ಬಹಳಷ್ಟು ಸಲ ನಮ್ಮ ಶಾಲೆಯ ಪೋಷಕರು ಶಾಲೆಗೆ ಬಂದು ‘ಸಾಲ್ಯಾಗ ಉಣ್ತಾರಲ್ರೀ ಆ ಊಟಾನಾ ನಮ್ಮ ಮಕ್ಕಳಿಗೆ ಹತ್ತೋದು. ಬೆಳಗ್ಗೆ ಅಡುಗೆ ಮಾಡಿಟ್ಟು ಹೋಗಿರ್ತೀವಿ. ಉಂಡ್ರೆ ಉಂಡ್ರು ಬಿಟ್ರೆ ಬಿಟ್ರು. ಇನ್ನು ರಾತ್ರಿ ನಮಗೆ ಜೀವ ಸಾಕಾಗಿರ್ತೈತಿ’ ಅಂದ ಮಾತು ನೆನಪಿಗೆ ಬಂತು. ‘ಹಸಿದ ಮಕ್ಕಳ ಮುಂದೆ ಪಾಠ ಮಾಡಲು ಯಾವ ಶಿಕ್ಷಕನಿಗೆ ಮನಸ್ಸು ಬಂದೀತು?’ ಅನಿವಾರ್ಯವಾಗಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಅಡುಗೆ ಕೋಣೆಗೆ ಹೋಗಿ ಹಾಲು ಕಾಯಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ‘ಸರ್ ನೀವು ಮಾಡ್ತಿರೇನ್ರಿ? ಬ್ಯಾಡ ಬಿಡ್ರಿ. ನಾವು ಮನಿಗೆ ಹೋಗಿ ಬುತ್ತಿ ಕಟ್ಕೆಂಡು ಬರ್ತಿವಿ’ ಅನ್ನಬೇಕೆ? ಮಕ್ಕಳ ಇಂತಹ ಮಾತುಗಳು ಅವರಲ್ಲಿನ ದೊಡ್ಡವರನ್ನು ತೋರಿಸುತ್ತವೆ. ದೊಡ್ಡವರ ಜತೆ ದೊಡ್ಡವರಾಗದಿದ್ದರೆ ಹೇಗೆ ಆಂದುಕೊಂಡು, ‘ಇರಲಿ ಈ ಪಾತ್ರೆಗೆ ನೀರು ಹಾಕು’ ಅಂತ ಹೇಳಿ ಹಾಲು ಕಾಯಿಸಿ ಕೊಟ್ಟೆ. ಆ ಹೊತ್ತಿನ ಸಮಾಧಾನ.
ಹನ್ನೆರಡು ಗಂಟೆ ಆಗಿತ್ತು. ಮಧ್ಯಾಹ್ನದ ಊಟ ತಯಾರಿಸಬೇಕಲ್ಲ? ಮತ್ತೆ ಇಬ್ಬರು ಹುಡುಗರನ್ನು ಕರೆದುಕೊಂಡು ಅಡುಗೆ ಕೋಣೆಯಲ್ಲಿದ್ದ ತರಕಾರಿ ತಗೊಂಡು ಸಿದ್ಧತೆ ಮಾಡಿಕೊಳ್ಳುವಾಗ ‘ನಿಮಗೆ ಅಡುಗೆ ಮಾಡಾಕ ಬರುತ್ತೇನ್ರಿ?’ ಅಂದ ಒಂದನೇ ಕ್ಲಾಸಿನ ಹುಡುಗನ ಕಣ್ಣಲ್ಲಿ ಅಚ್ಚರಿ. ಯಾವ ವಿದ್ಯಾರ್ಥಿಗಳು ಶಿಕ್ಷಕರಿಂದ ಕೆಲಸ ಮಾಡಿಸಲಾರರು. ಅವರಿಗೆ ಬಂದಂತೆ ಕ್ಯಾರೆಟ್, ಬೀಟ್‍ರೂಟ್, ಈರುಳ್ಳಿ, ಟ್ಯೋಮ್ಯಾಟೊ, ಮೆಣಸಿನಕಾಯಿ ಹೆಚ್ಚಿಕೊಟ್ಟರು. ಹತ್ತು ವರ್ಷಗಳ ಬ್ಯಾಚುಲರ್ ಜೀವನವನ್ನು ಮರಳಿ ನೆನಪಿಸಿಕೊಂಡು ಪಲಾವ್ ಮಾಡಲು ಅಣಿಯಾದೆ. ‘ಅನ್ನ ಸಾರು ಮಾಡಲ್ಲೇನ್ರಿ?’ ಅಂತಾ ಕೇಳಿದ್ಲು ಮೂರನೇ ಕ್ಲಾಸ್ ಶೋಭಾ. ‘ಇಲ್ಲ’ ಅನ್ನುತ್ತಲೇ ಅಡುಗೆ ಮನೆಯಲ್ಲಿದ್ದ ಬೆಳ್ಳುಳ್ಳಿ, ಸಾಂಬಾರ್ ಪುಡಿ, ಖಾರದ ಪುಡಿ ಎಲ್ಲಾ ಹಾಕಿದೆ. ಉಪ್ಪು ಹಾಕುವಾಗ ಕೈ ತಡವರಿಸಿತು. ಅಂತೂ ಅಡುಗೆ ರೆಡಿ ಆಯ್ತು. ಅಷ್ಟೊತ್ತಿಗೆ ಯಾರು ಹೋಗಿ ಹೇಳಿದ್ರೋ ಏನೋ ಅಡುಗೆಯಮ್ಮ ಶಾಲೆಗೆ ಬಂದು ‘ಕರೆಯಾಕ್ ಕಳಿಸಿದ್ರ ಬರ್ತಿದ್ದಿಲ್ಲೇನ್ರಿ ಸಾರ್? ನೀವ್ಯಾಕ್ ಕೈಸುಟ್ಕನಾಕ ಹೋದ್ರಿ? ಟ್ರೈಕ್ ಮಾಡಾರ್ ಮಾಡ್ಲಿ ನಾಳಿಂದ ನಾ ಬಂದು ಅಡಿಗಿ ಮಾಡ್ತೀನಿ. ನಿಮ್ಮ ಕೈಯಿಂದ ಅಡಿಗಿ ಮಾಡಿಸ್ಬೇಕೇನ್ರಿ ನಾವು’ ಎಂದು ಒಂದೇ ಉಸಿರಿನಲ್ಲಿ ಮಾತನಾಡುತ್ತಾ ಕಣ್ಣೀರು ಒರೆಸಿಕೊಂಡರು. ‘ಹಾಗಲ್ಲಮ್ಮ ಅಲ್ಲಿ ಎಲ್ಲರೂ ಮುಷ್ಕರ ಹೂಡಿದಾರೆ ನೀವು ಅವರಿಗೆ ಸಪೋರ್ಟ್ ಮಾಡಬೇಕು ಅಲ್ವಾ?’ ಅಂತ ಕೇಳಿದೆ. ಅವರೊಳಗಿನ ಮಾನವೀಯತೆಗೆ ಕರುಣೆಗೆ ಗೌರವಕ್ಕೆ ನನ್ನಿಂದ ಇಷ್ಟನ್ನು ಬಿಟ್ಟು ಏನೂ ಕೊಡಲಾಗದು. ಮಕ್ಕಳಿಗೆ ಊಟಕ್ಕೆ ಬಡಿಸಿ ಪಾತ್ರೆ ತೊಳೆದಿಟ್ಟು ಅಡುಗೆ ಕೋಣೆ ಸ್ವಚ್ಛ ಮಾಡಿ ‘ನಾಳೆ ಬರ್ತೀನ್ರಿ ಸಾರ್’ ಅಂದು ಹೋದರು. ಎಲ್ಲಾ ಶಾಳೆಗಳಲ್ಲಿ ಇದೇ ಪರಿಸ್ಥತಿ. ಬೇರೆಯವರು ಯಾರೂ ಬಂದು ಅಡುಗೆ ಮಾಡುವುದಿಲ್ಲ. ಶಿಕ್ಷಕರೇ ಮಾಡಬೇಕು. ಎಲ್ಲಾ ಮಕ್ಕಳು ಬುತ್ತಿ ತರುವುದೂ ಇಲ್ಲ.
ಎರಡು ದಿನಗಳಿಂದ ಬಿಸಿಯೂಟದ ಅಡುಗೆ ಸಿಬ್ಬಂದಿಯವರು ‘ಕನಿಷ್ಠ ವೇತನ’ವನ್ನಾದರೂ ಮುಂಜೂರು ಮಾಡಬೇಕೆಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನ್ನ ನೀರಿಲ್ಲದೆ ಶೌಚ ಸ್ನಾನಾದಿಗಳ ಸಮಸ್ಯೆಯಿಂzಲೂ ಮುಷ್ಕರ ಆರಂಭಿಸಿದ್ದಾರೆ. ಕೆಲವರು ಅಸ್ವಸ್ಥರಾಗಿ ಸ್ಪತ್ರೆ ಸೇರಿದ್ದಾರೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದು ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಅದರ ನೇರ ಬಿಸಿ ಯಾರಿಗೆ ತಟ್ಟಿದೆಯೋ ಬಿಟ್ಟಿದೆಯೋ ಆದರೆ ರಾಜ್ಯದಲ್ಲಿರುವ ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಮತ್ತು ಅಲ್ಲಿನ ಶಿಕ್ಷಕರಿಗೆ ನೇರವಾಗಿ ತಾಕಿದೆ. ಈ ವಿಷಯದಲ್ಲಿ ಅಡುಗೆ ಸಿಬ್ಬಂದಿ ಶಿಕ್ಷಣ ಇಲಾಖೆಯ ನೌಕರರೂ ಅಲ್ಲ. ಅಕ್ಷರ ದಾಸೋಹದ ಅಡಿಯಲ್ಲಿ ಬರುವ ನೌಕರರೂ ಅಲ್ಲ. ಒಂದು ಶಾಲೆಯಲ್ಲಿ ಮಕ್ಕಳಿಗೆ ಅನ್ನ ಒದಗಿಸುವ ದಿನಗೂಲಿ ನೌಕರರಿದ್ದಂತೆ. ಅವರ ವೇತನ ಮಾತ್ರ. ಕೂಲಿ ಕಾರ್ಮಿಕರಿಗಿಂತಲೂ ಅಜಗಜಾಂತರ ವ್ಯತ್ಯಾಸ. ಹೊಲಗದ್ದೆಗಳಲ್ಲಿ ಕೆಲಸ ಮಾಡುವವರು ತಿಂಗಳಿಗೆ ಆರರಿಂದ ಎಂಟು ಸಾವಿರ ರೂಪಾಯಿ ಹಣ ಪಡೆಯುತ್ತಾರೆ. ಆದರೆ ಅಡುಗೆಯವರ ಮಾಸಿಕ ವೇತನ/ಗೌರವಧನ ಸಾವಿರದ ಎಂಟು ನೂರರಿಂದ ಎರಡು ಸಾವಿರ ಅಷ್ಟೇ.
ಈ ಹಿಂದೆ ಸುಮಾರು ಸಲ ಹೋರಾಟ ಮುಷ್ಕರಗಳನ್ನು ಮಾಡಿದುದರ ಫಲವಾಗಿ ನಾನೂರೈವತ್ತು ಮತ್ತು ಆರು ನೂರೈವತ್ತು ಇದ್ದ ವೇತನ ಇಲ್ಲಿಗೆ ಬಂದು ನಿಂತಿದೆ. ಜತೆಗೆ ಕೆಲಸದಲ್ಲಿದ್ದಾಗ ಅಗುವ ಅನಾಹುತಗಳಿಗೆ ಕೆಲವು ಸೌಲಭ್ಯಗಳು ದೊರೆತಿವೆ. ಅದರ ಮುಂದುವರಿದ ಭಾಗವಾಗಿ ಅಡುಗೆ ಸಿಬ್ಬಂದಿ ತನ್ನದೇ ಆದ ಸಂಘಟನೆ ಮಾಡಿಕೊಂಡು ಕೆಲವು ಸಂಘ- ಸಂಸ್ಥೆಗಳ ನೆರವು ಪಡೆದುಕೊಂಡು ಆಗಾಗ ಹೋರಾಟ ನಡೆಸುತ್ತಲೇ ಇರುತ್ತವೆ. ಅವರ ಬೇಡಿಕೆಯಲ್ಲಿ ನ್ಯಾಯವಿದೆ. ತೀರಾ ಎರಡು ಸಾವಿರ ಮಾಸಿಕ ವೇತನದಲ್ಲಿ ಒಂದು ಕುಟುಂಬವನ್ನು ಪೋಷಿಸಿಕೊಂಡು ಹೋಗಲು ಸಾಧ್ಯವೇ? ಅವರ ಕೆಲಸ ಕಡಿಮೆ ಇದೆ, ಅದಕ್ಕಾಗಿ ಅಷ್ಟೇ ವೇತನ ಅನ್ನಬಹುದು. ಆದರೆ ಕೆಲವು ಶಾಲೆಗಳಲ್ಲಿ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಅಂತಹ ಕಡೆ ಪ್ರತಿದಿನವೂ ಅಡುಗೆ ಸಿಬ್ಬಂದಿ ನಾಲ್ಕು ಗಂಟೆಯವರೆಗೂ ಕೆಲಸ ಮಾಡುತ್ತಾರೆ. ಅಡುಗೆ ಮಾಡಿದ ಪಾತ್ರೆಗಳನ್ನು ಶುಚಿಗೊಳಿಸಿಕೊಳ್ಳುವುದರಿಂದ ಹಿಡಿದು ಮರುದಿನದ ಅಡುಗೆ ತಯಾರಿಕೆಗಾಗಿ ಅಕ್ಕಿ ಸ್ವಚ್ಛಗೊಳಿಸಿಕೊಳ್ಳುವ, ಬೇಳೆ ಹಸನು ಮಾಡಿಕೊಳ್ಳುವ ಕೆಲಸ ಮಾಡಿ ಮನೆಗೆ ಹೋಗಲು ಒಬ್ಬ ಶಿಕ್ಷಕರಷ್ಟೆ ಕರ್ತವ್ಯ ಇವರದ್ದೂ ಆಗುತ್ತದೆ. ಬಹಳಷ್ಟು ಅಡುಗೆ ಸಿಬ್ಬಂದಿಯಲ್ಲಿ ವಿಧವೆಯರು, ವಯಸ್ಸಾದ ಜೀವಗಳು ಇರುವುದರಿಂದ ಅವರ ಕುಟುಂಬಕ್ಕೆ ಈ ಮೊತ್ತ ಯಾವುದಕ್ಕೂ ಸಾಲದು. ಅಲ್ಲದೆ ಇವರಂತೆಯೇ ಕೆಲಸ ಮಾಡುವ ಕೆಲವು ಇಲಾಖೆಗಳಲ್ಲಿ ಸಾಮಾನ್ಯವಾಗಿ ವೇತನ ಹೆಚ್ಚಿಗೆ ಇದೆ. ಅವರು ‘ಡಿ’ ದರ್ಜೆ ನೌಕರರಾಗಿ ಕೆಲಸ ಮಾಡುತ್ತಿದ್ದು ಕೆಲವೊಮ್ಮೆ ಅಡುಗೆ ಸಿಬ್ಬಂದಿಯವರಿಗಿಂತಲೂ ಆರಾಮಾಗಿದ್ದಾರೆ.
ಕನಿಷ್ಠ ವೇತನ, ರಜೆ ಸೌಲಭ್ಯ, ಬೇಸಿಗೆ ರಜೆಯಲ್ಲೂ ವೇತನ ಮತ್ತು ಸರಕಾರಿ ಸಿಬ್ಬಂದಿಯಾಗಿ ಪರಿಗಣಿಸುವುದು ಇತ್ಯಾದಿ ನಿರ್ದಿಷ್ಟ ಬೇಡಿಕೆಗಳೊಂದಿಗೆ ಬಿಸಿ ಊಟದ ಸಿಬ್ಬಂದಿ ಹೋರಾಟ ಮಾಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಇಲ್ಲವೇ ಸರಕಾರ ಈ ಹೊರಾಟಕ್ಕೆ ಸ್ಪಂದಿಸಿಬೇಕಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಪೊಲೀಸ್ ವಶಕ್ಕೆ

Newsics.com ಕಲಬುರಗಿ : ಅಪಘಾತವನ್ನು ಕೊಲೆ ಯತ್ನ ಎಂದು ಕಥೆ ಕಟ್ಟಿದ್ದ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ರನ್ನ ನಗರ ಠಾಣೆಯ ಪೊಲೀಸರು ಮತ್ತೆ ವಶಕ್ಕೆ...

ನಂದಿನಿ ಹಾಲಿನ ದರ ಮತ್ತೆ ಏರಿಕೆ..!!

Newsics.com ಬೆಂಗಳೂರು :  ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಹೌದು, ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಚಿಂತನೆ ನಡೆಸಿದೆ. ಈ ಕುರಿತು ಜನವರಿಯಲ್ಲಿ...

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಮೃತ ವೈದ್ಯಳನ್ನು...
- Advertisement -
error: Content is protected !!