Monday, March 1, 2021

ಕೊರೋನಾ ಹೆಚ್ಚಳಕ್ಕೆ ಹವಾಮಾನ ಬದಲಾವಣೆ ಲಿಂಕ್

ಹವಾಮಾನ ಬದಲಾವಣೆಗೂ ವಿಶ್ವದಲ್ಲಿ ಉದಯವಾಗುವ ನಾನಾ ಸಮಸ್ಯೆಗಳಿಗೂ ನೇರವಾದ ಸಂಬಂಧವಿದೆ. ಜಗತ್ತಿನಲ್ಲಿ ಏನೇ ಬದಲಾವಣೆಯಾದರೂ ಅದರ ನೇರ ಪರಿಣಾಮವುಂಟಾಗುವುದು ಜೀವಸಂಕುಲದ ಮೇಲೆ. ಕಳೆದೊಂದು ವರ್ಷದಿಂದ ಜನರನ್ನು ಕಂಗೆಡಿಸಿರುವ ಸಾರ್ಸ್-ಕೋವಿಡ್ ವೈರಸ್ ಹೆಚ್ಚಳಕ್ಕೂ ಹವಾಮಾನ ಬದಲಾವಣೆಯ ಹಿನ್ನೆಲೆ ಇದೆಯೆಂದು ಇದೀಗ ಹೇಳಲಾಗುತ್ತಿದೆ.

        ಜಗತ್ತಿನಾದ್ಯಂತ ಬಾವಲಿ ತಳಿ ಹೆಚ್ಚಳ    
♦ ಪ್ರಮಥ
newsics.com@gmail.com


 ಕೊ ರೋನಾ ಸಾಂಕ್ರಾಮಿಕ ಸೋಂಕಿನ ಪರಿಣಾಮಕ್ಕೆ ಜಗತ್ತು ಸಾಕ್ಷಿಯಾಗಿದೆ. ಜಗತ್ತನ್ನು ಹಲವಾರು ವರ್ಷಗಳಷ್ಟು ಹಿಂದಕ್ಕೆ ತಳ್ಳಿ ಕೊರೋನಾ ಸೋಂಕು ತನ್ನ ಅಟ್ಟಹಾಸ ಮೆರೆದಿದೆ. ಈ ಸಮಯದಲ್ಲಿ ಹವಾಮಾನ ಬದಲಾವಣೆಯೂ ಸೋಂಕು ಹೆಚ್ಚಳವಾಗಲು ಕಾರಣವಾಯಿತು ಎನ್ನುವ ಅಂಶದ ಬಗೆಗೆ ಕೇಂಬ್ರಿಡ್ಜ್ ತಜ್ಞರು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
ಹಸಿರುಮನೆ ಅನಿಲದ ಉತ್ಸರ್ಜನೆಯಿಂದಾಗಿ ಕಳೆದೊಂದು ಶತಮಾನದಲ್ಲಿ ವಿಶ್ವದ ತಾಪಮಾನ ಏರಿಕೆಯಾಗಿದೆ. ಅದರಿಂದಾಗಿ ಅನೇಕ ನೈಸರ್ಗಿಕ ದುರಂತಗಳು ಸಂಭವಿಸಿವೆ. ಹಾಗೆಯೇ, ದಕ್ಷಿಣ ಚೀನಾದಲ್ಲಿ ಮೊದಲು ಕಂಡು ಬಂದ ಕೊರೋನಾ ವೈರಸ್ ಗೂ ತಾಪಮಾನ ಏರಿಕೆಗೂ ಸಂಬಂಧವಿದೆ. ಈ ಕುರಿತು ಸೈನ್ಸ್ ಆಫ್ ದಿ ಟೋಟಲ್ ಎನ್ವಿರಾನ್ ಮೆಂಟ್ ಎನ್ನುವ ನಿಯತಕಾಲಿಕದಲ್ಲಿ ಸಂಶೋಧನಾ ವರದಿಯೊಂದು ಪ್ರಕಟವಾಗಿದೆ.
ಬಾವಲಿ ತಳಿ ಹೆಚ್ಚಳ
ಹವಾಮಾನ ಬದಲಾವಣೆಯಿಂದ ದಕ್ಷಿಣ ಚೀನಾದ ಯುನಾನ್ ಪ್ರಾಂತ್ಯ ಹಾಗೂ ಪಕ್ಕದ ಮ್ಯಾನ್ಮಾರ್, ಲಾವೋಸ್ ಗಳ ಸಸ್ಯವರ್ಗದಲ್ಲಿ ತೀವ್ರತರನಾದ ಬದಲಾವಣೆಯಾಗಿದೆ. ತಾಪಮಾನ ಏರಿಕೆಯ ಜತೆಗೆ, ಸೂರ್ಯರಶ್ಮಿ, ವಾತಾವರಣ, ಕಾರ್ಬನ್ ಡೈಆಕ್ಸೈಡ್ ಗಳಲ್ಲಿ ಆಗುವ ವ್ಯತ್ಯಾಸದಿಂದ ಸಸ್ಯ ಮತ್ತು ಮರಗಳ ಮೇಲೆ ಪರಿಣಾಮವುಂಟಾಗುತ್ತದೆ. ಇದರಿಂದ ಆ ಭಾಗದಲ್ಲಿ ವಾಸಿಸುವ ಪ್ರಾಣಿವರ್ಗ ತಮ್ಮ ನೆಲೆಯನ್ನು ಬದಲಿಸುತ್ತದೆ. ಪ್ರಾಣಿಗಳು ಕುರುಚಲು ಕಾಡಿನಿಂದ ಸವನ್ನಾ ಉಷ್ಣವಲಯಕ್ಕೆ ಮತ್ತು ಎಲೆ ಉದುರಿಸುವ ಕಾಡು ಪ್ರದೇಶಗಳಿಗೆ ತಮ್ಮ ವಾಸಸ್ಥಾನ ಬದಲಿಸುವುದು ಕಂಡುಬಂದಿದೆ. ಇದರ ಪರಿಣಾಮವಾಗಿಯೇ ಅರಣ್ಯಗಳಲ್ಲಿ ಕೆಲವು ಜಾತಿಯ ಬಾವಲಿಗಳು ಏರಿಕೆಯಾಗಿವೆ. ಪ್ರಸ್ತುತ, ಕೊರೋನಾ ವೈರಸ್ ಕಂಡುಬಂದಿದ್ದ ಪ್ರಾಂತ್ಯದಲ್ಲಿ ವಿಭಿನ್ನ ರೀತಿಯ ಬಾವಲಿ ತಳಿಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗಿರುವುದು ಸಹ ಕಂಡುಬಂದಿದೆ. ಅಧ್ಯಯನದ ಪ್ರಕಾರ, ಸುಮಾರು 40 ಜಾತಿಯ ಬಾವಲಿಗಳು ಚೀನಾನ ಯುನಾನ್ ಪ್ರಾಂತ್ಯದಲ್ಲಿ ಹೆಚ್ಚುವರಿಯಾಗಿ ಕಂಡುಬಂದಿವೆ. ಕಳೆದ ಶತಮಾನದಲ್ಲಿ ಈ ವಿದ್ಯಮಾನ ಸಂಭವಿಸಿದ್ದು, ಇದರಿಂದಾಗಿ ಬಾವಲಿಜನ್ಯ 100ಕ್ಕೂ ಅಧಿಕ ಕೊರೋನಾ ವೈರಸ್ ಗಳ ಸೃಷ್ಟಿಯಾಗಿದೆ. ಹೀಗಾಗಿ, ಈ ವಲಯ ಜಾಗತಿಕ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ.
ಜಾಗತಿಕ ಮಟ್ಟದ ಬದಲಾವಣೆ
ಸಾರ್ಸ್-ಕೋವಿಡ್-2 ವೈರಸ್ ನ ಆನುವಂಶೀಯ ದತ್ತಾಂಶದಲ್ಲೂ ಈ ಹಾಟ್ ಸ್ಪಾಟ್ ನ ಲಕ್ಷಣಗಳು ಕಂಡುಬಂದಿವೆ.
ಕೇಂಬ್ರಿಡ್ಜ್ ವಿವಿಯ ಜೂವಾಲಜಿ ವಿಭಾಗದ ಮುಖ್ಯಸ್ಥ ಡಾ. ರಾಬರ್ಟ್ ಬೇಯರ್ ಪ್ರಕಾರ, ಹವಾಮಾನ ಬದಲಾವಣೆಯಿಂದ ಬಾವಲಿಗಳ ವಾಸಸ್ಥಾನ ಬದಲಾಗಿರುವುದು ಚೀನಾದಲ್ಲೊಂದೇ ಅಲ್ಲ. ಜಾಗತಿಕ ಮಟ್ಟದಲ್ಲೇ ಇದು ಸಂಭವಿಸಿದೆ. ಹೀಗಾಗಿಯೇ ಕೊರೋನಾ ವೈರಸ್ ಅತಿ ಶೀಘ್ರದಲ್ಲಿ ಏರಿಕೆಯಾಗಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಅವರು ಸಸ್ಯವರ್ಗದ ಹಂಚಿಕೆಯ ನಕ್ಷೆ ರೂಪಿಸಿದ್ದಾರೆ.
ಚೀನಾದಲ್ಲೊಂದೇ ಅಲ್ಲ, ಮಧ್ಯ ಆಫ್ರಿಕಾ ಹಾಗೂ ಮಧ್ಯ ಮತ್ತು ದಕ್ಷಿಣ ಅಮೆರಿಕದ ಪ್ರದೇಶಗಳಲ್ಲೂ ಹವಾಮಾನ ಬದಲಾವಣೆಯಿಂದ ಬಾವಲಿ ತಳಿಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದನ್ನು ಈ ಅಧ್ಯಯನ ಗುರುತಿಸಿದೆ.
ತಾಪಮಾನ ಏರಿಕೆಯಿಂದ ವೈರಸ್ ಸಕ್ರಿಯ
ಹವಾಮಾನ ಬದಲಾವಣೆ ಪ್ರಾಣಿವರ್ಗದ ವಾಸಸ್ಥಾನದ ಬದಲಾವಣೆಗೂ ಕಾರಣವಾಗುತ್ತದೆ. ಪ್ರಾಣಿಗಳು ಒಂದು ಪ್ರದೇಶ ಬಿಟ್ಟು ಬೇರೆಲ್ಲೋ ನೆಲೆ ಕಂಡುಕೊಳ್ಳುವುದು ಹವಾಮಾನ ಬದಲಾವಣೆಯ ಅತಿ ಸಾಮಾನ್ಯ ಪರಿಣಾಮಗಳಲ್ಲಿ ಒಂದು. ಇಲ್ಲಿ ಕೇವಲ ಪ್ರದೇಶವೊಂದೇ ಬದಲಾಗುವುದಿಲ್ಲ. ಭಾಗದಲ್ಲಿರುವ ವೈರಸ್ ಗಳು ಇನ್ನಷ್ಟು ಸಕ್ರಿಯವಾಗಲು, ಅಪಾಯಕಾರಿಯಾಗಲು ಸಹ ಕಾರಣವಾಗುತ್ತವೆ ಎಂದು ಈ ಅಧ್ಯಯನ ಹೇಳಿದೆ.
ಅಚ್ಚರಿಯೇನು ಗೊತ್ತೇ?
ವಿಶ್ವದಲ್ಲಿರುವ ಬಾವಲಿಗಳು ಬರೋಬ್ಬರಿ 3 ಸಾವಿರ ಬೇರೆ ಬೇರೆ ರೀತಿಯ ಕೊರೋನಾ ವೈರಸ್ ಗಳನ್ನು ಸೃಷ್ಟಿಸಬಲ್ಲವು. ಪ್ರತಿಯೊಂದು ಬಾವಲಿ 2.7 ಕೊರೋನಾ ವೈರಸ್ ಗಳಿಗೆ ನೆಲೆಯಾಗಬಲ್ಲದು. ಇವುಗಳೆಲ್ಲ ಯಾವುದೇ ಲಕ್ಷಣವಿರದ ಕೊರೋನಾ ವೈರಸ್ ಗಳು. ಆದರೆ, ಇವುಗಳಲ್ಲಿ ಹೆಚ್ಚಿನವು ಮನುಷ್ಯರಿಗೆ ವರ್ಗಾವಣೆಯಾಗುವುದಿಲ್ಲ. ಕೆಲವು ಕೊರೋನಾ ವೈರಸ್ ಗಳು ಮಾತ್ರವೇ ಮನುಷ್ಯನಿಗೂ ಸೋಂಕುಂಟುಮಾಡಬಲ್ಲವು. ಅವುಗಳಲ್ಲಿ ಅತಿ ಮುಖ್ಯವಾದವುಗಳೆಂದರೆ, ಮಧ್ಯಪ್ರಾಚ್ಯ ಉಸಿರಾಟದ ತೊಂದರೆ (ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್-ಎಂಇಆರ್ ಎಸ್) ಕೋವಿಡ್, ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್-ಸಾರ್ಸ್ ಕೋವಿಡ್-1 ಮತ್ತು ಕೋವಿಡ್-2.
ಹವಾಮಾನ ಬದಲಾವಣೆಯಿಂದ ವನ್ಯಜೀವಿಗಳಿಂದ ಉಂಟಾಗುವ ರೋಗಕಾರಕಗಳು ಮನುಷ್ಯನ ಮೇಲೆ ತೀವ್ರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಹವಾಮಾನ ಬದಲಾವಣೆಗೆ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ. ಜಾಗತಿಕ ಉತ್ಸರ್ಜನೆಯನ್ನು ತಕ್ಷಣವೇ ಸ್ಥಗಿತಗೊಳಿಸಲು ಎಲ್ಲ ದೇಶಗಳು ಒಂದಾಗಬೇಕಿದೆ ಎಂದು ಈ ಅಧ್ಯಯನ ಸಲಹೆ ನೀಡಿದೆ.

ಮತ್ತಷ್ಟು ಸುದ್ದಿಗಳು

Latest News

ಕಾಡಾನೆ ಜತೆ ಸೆಲ್ಪಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

newsics.com ರಾಂಚಿ:  ಛತ್ತೀಸ್ ಗಢದಲ್ಲಿ ಕಾಡಾನೆ ಜತೆ ಸೆಲ್ಪಿ ತೆಗೆಯಲು ಯತ್ನಿಸಿದ ಯವಕ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು  ಮನೋಹರ್ ಪಟೇಲ್ ಎಂದು ಗುರುತಿಸಲಾಗಿದೆ. ರಾಯಗಢ...

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷದಿಂದ ಅವರು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...
- Advertisement -
error: Content is protected !!