Wednesday, July 6, 2022

ಕಂಬನಿ ತರಿಸಿದ ಲಾಕ್ಡೌನ್ ಚಂದ್ರಮತಿ

Follow Us

ಜೀವಂತವಿರುವ ಮಗುವನ್ನು ಹೊತ್ತು ಸಾಗುವುದು ಖುಷಿಯ ಸಂಗತಿ. ಅದೇ ನಿರ್ಜೀವ ಮಗುವನ್ನು ಎತ್ತಿ ಸಾಗುವುದಿದೆಯಲ್ಲ, ಅದರ ಗೋಳು ಹೇಳತೀರದು. ಕಳೆದ ಏಪ್ರಿಲ್ ನಲ್ಲಿ ಬಿಹಾರದ ಜೆಹನಾಬಾದ್’ನಲ್ಲಿ ನಡೆದ ಘಟನೆಯನ್ನು ಕವಿ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ಹಾಗೂ ಷಡಕ್ಷರ ಕವಿಯ ‘ರಾಜಶೇಖರ ವಿಳಾಸ’ದಲ್ಲಿನ ಸನ್ನಿವೇಶಗಳನ್ನು ಹೋಲಿಸಿ ಅಕ್ಷರ ರೂಪಕ್ಕಿಳಿಸಿದ ಹೆತ್ತೊಡಲ ವೇದನೆಯ ಬರಹ.

                  

♦ ಸುಮಾವೀಣಾ, ಹಾಸನ
ಕನ್ನಡ ಉಪನ್ಯಾಸಕಿ
response@newsics.com
newsics.com@gmail.com ಕೋ ವಿಡ್ 19 ವಿಶ್ವಾದ್ಯಂತ ತನ್ನ ರೌದ್ರ ನರ್ತನ ಮಾಡುತ್ತಿದೆ. ಕೊರೋನಾ ರಾಕ್ಷಸನ ಹಬ್ಬುವಿಕೆಯ ಓಘವನ್ನು ತಗ್ಗಿಸಲು ಲಾಕ್ ಡೌನ್ ಘೋಷಿಸಿಬಿಟ್ಟರು. ಆದರೆ ಅದು ಇನ್ನೊಂದು ರೀತಿಯ ಅಪಸವ್ಯವಾಗಿ ಕಾಡಿತು. ಸಾವು- ಬದುಕು ನರಳಾಟ, ಗೋಳಾಟ ಇವುಗಳನ್ನು ನೋಡಲು ಆಗುವುದಿಲ್ಲ. ದುಃಖವಾಗುತ್ತದೆ,ಇದನ್ನೇ ಶೋಕ ಅನ್ನುವುದು. ಕರುಣಾ ರಸದ ಸ್ಥಾಯಿಭಾವವೆ ಶೋಕವಲ್ಲವೇ?
ಪ್ರಸ್ತುತ ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ನನ್ನನ್ನು ತುಂಬಾ ಕಾಡಿದ ಕರುಣಾಜನಕ, ಶೋಕದ ಪ್ರಸಂಗ ಎಂದರೆ ಕಳೆದ ಏಪ್ರಿಲ್ 12ರಂದು ನಡೆದ ಬಿಹಾರದ ಜೆಹನಾಬಾದ್’ನಲ್ಲಿ ನಡೆದ ಘಟನೆ. ಮೂರು ವರ್ಷದ ಮಗು ಅನಾರೋಗ್ಯದಿಂದ ಅಸುನೀಗಿರುತ್ತದೆ. ಕೈಯಲ್ಲಿ ಸತ್ತ ಮಗನ ಶವವನ್ನು ಹಿಡಿದ ಆ ತಾಯಿಯ ಆಕ್ರಂದನ ಮುಗಿಲು ಮುಟ್ಟುವಂತಿರುತ್ತದೆ. ಮಗು ಜೀವಂತವಿದ್ದಾಗ ಇಲ್ಲದೇ ಇರುವ ಆಂಬುಲೆನ್ಸ್ ಈಗ ಬೇಡ ಎನ್ನುತ್ತಾನೆ. ಬಿರು ಬೇಸಿಗೆಯಲ್ಲಿ ಶವ ಹಿಡಿದುಕೊಂಡು ಆ ತಾಯಿ ಹೇಗೆ ನಡೆದಿರಬಹುದು ಊಹಿಸಲೂ ಸಾಧ್ಯವಿಲ್ಲ. ಈ ಘಟನೆ ನನಗೆ ಚಂದ್ರಮತಿ ಮತ್ತು ತಿರುಕೊಳವಿನಾಚಿಯರು ನೆನಪಾದರು.
ಚಂದ್ರಮತಿ-ಲೋಹಿತಾಶ್ವರ ಹೆಸರನ್ನು ಕೇಳದವರಿಲ್ಲ. ಆದರೆ ತಿರುಕೊಳವಿನಾಚಿ-ಶಂಕರರ ಪರಿಚಯ ಅಷ್ಟಾಗಿ ಇರಲಿಕ್ಕಿಲ್ಲ.
ಅದು ಕನ್ನಡ ಸಾಹಿತ್ಯ ಚರಿತ್ರೆಯ ನಡುಗನ್ನಡ ಕಾಲಘಟ್ಟ. ಈ ಕಾಲಘಟ್ಟದ ಪ್ರಮುಖ ಕವಿ ರಾಘವಾಂಕ. ಕರುಣಾರಸಕ್ಕೇ ಮೀಸಲಿರಿಸಿದ ಹಾಗೆ ಕಾವ್ಯವೊಂದನ್ನು ರಚಿಸಿದ್ದಾನೆ. ಅದು ಷಟ್ಪದಿ ಕಾವ್ಯಗಳ ರಾಜನೆಂಬ ಖ್ಯಾತಿಗೆ ಒಳಗಾಗಿರುವ “ಹರಿಶ್ಚಂದ್ರ ಕಾವ್ಯ”. “ಚಂದ್ರಮತಿಯ ಪ್ರಲಾಪ” ಎಂಬ ಕಾವ್ಯಭಾಗ ಎಂಥ ಭಾವಹೀನರನ್ನೂ ಭಾವುಕರನ್ನಾಗಿ ಮಾಡುತ್ತದೆ. ಹುಲು-ಹುಳ್ಳಿಗಳನ್ನು ತರಲು ಕಾಡಿಗೆ ಹೋಗಿದ್ದ ಮಗ ಇನ್ನೂ ಬಂದಿಲ್ಲವೆಂದು ತನುವನು ಮರೆದು ಹೊರಗನಾಲಿಸಿ ಮಂದಮತಿಯಾಗಿದ್ದ ಚಂದ್ರಮತಿಗೆ ಬಾಲನೊಬ್ಬ ಬಂದು “ನಿನ್ನ ಕಂದನನೊಂದುಗ್ರ ಫಣಿ ತಿಂದು ಜೀವಂಗಳೆದನೆಂದು” ಹೇಳುವಾಗ ಚಂದ್ರಮತಿಯ ಪರಿಸ್ಥಿತಿ ಏನಾಗಿರಬಹುದು? ಊಹೆಗೂ ನಿಲುಕದು. “ಬೇಕಾದಡೀಗ ಹೋಗಲ್ಲದಿರ್ದಡೆ ಬಳಿಕನೇಕ ಭಲ್ಲುಕ, ಜಂಭುಕಂ ಘೂಕ ವೃಕಗಳೆಳೆಯದೆ ಬಿಡವು” ಎಂದಾಗ ಹೆತ್ತ ತಾಯಿಗೆ ಯಾವ ರೀತಿಯ ಆಘಾತ ಉಂಟಾಗಿರಬಹುದು? ಮಗನ ಶವ ಕಾಡು ಪ್ರಾಣಿಗಳ ಪಾಲಾಗುತ್ತದೆ ಎಂದಾಗ ಅವಳ ಒಡಲಿನ ಬೆಂಕಿ ಯಾವ ತೆರನಾಗಿ ಹೊತ್ತಿ ಉರಿದಿರಬಹುದು?
ಒಡೆಯನಾದವನು ಲೋಹಿತಾಶ್ವನ ಸಾವಿನ ವಿಷಯ ಕೇಳಿ ಸಾಂತ್ವನ ಹೇಳುವ ಬದಲು “ಲೇಸಾಯ್ತು ಮಡಿದಡೆ” ಎನ್ನುತ್ತಾನೆ. “ಭಂಟರನು ಕೊಟ್ಟು ಅರಸಿಸೈ ತಂದೆ” ಎಂದು ಚಂದ್ರಮತಿ ಒರಲಿದರೆ “ನಡುವಿರುಳು ಬಂಟರುಂಟೇ ನಿದ್ದಗೈಯಬೇಕು ಕಾಡದಿರು” ಎಂದುಬಿಡುತ್ತಾನೆ. ಉಳ್ಳವರ ಸಾಮಾಜಿಕ ಮೌಲ್ಯಗಳು ಹೀಗೇನೆ. ಅಂತೂ “ನರಿಗಳೆಳೆಯದ ಮುನ್ನ ದಹಿಸಬೇಡವೇ ತಂದೆ” ಎಂದು ಒಡೆಯನ ಎಲ್ಲ ಷರತ್ತುಗಳಿಗೆ ಬದ್ಧಳಾಗಿ ಮನೆಯಿಂದ ಹೊರಹೊರಟು “ಬಿಟ್ಟತಲೆಯಂ ಬಿಚ್ಚಿದುಡುಗೆಯಂ ಮರೆದು ಗೋಳಿಟ್ಟು” ಎಂದಾಗ ಬಿಹಾರದ ಹೆಣ್ಣುಮಗಳೇ ಕಣ್ಣೆದುರು ಬಂದಳು. ಹಸಿದವನೇ ಬಲ್ಲ ಹಸಿವಿನ ಶೂಲಿ ಸಂಕಟವನ್ನು. ಅನುಭವಿಸಿದವರಿಗೆ ಮಾತ್ರ ಅದರ ತೀವ್ರತೆ ಅರಿವಾಗುತ್ತದೆ.
ಲೋಹಿತಾಶ್ವ ಕಾಡಿನಲ್ಲಿ ಕಾಣದಿದ್ದಾಗ “ಪೇಳಾವ ಠಾವೊಳಕೊಂಡುದಯ್ಯ… ಎನ್ನನೊಲ್ಲದಡೆ ಸಾಯೆಂಬುದೇನುಸುರದಿರಲೇಕೆ“ ಎಂದು ಒರಲುತ್ತಾಳೆ. ಮಗನ ಶವ ಸಿಕ್ಕಿದ ಮೇಲೂ ಇನ್ನೂ ಜೀವವಿದೆ ಎಂದು ಮುಂಡಾಡುತ್ತಾಳೆ, ಮುದ್ದುಗರೆಯುತ್ತಾಳೆ. ಅದು ಹೆತ್ತೊಡಲ ಪ್ರೀತಿ. ಉಸಿರು ಇನ್ನೂ ನಿಂತಿಲ್ಲ ಎಂದು ನಾನಾ ಬಗೆಯ ಪರೀಕ್ಷೆಗಳನ್ನು ಮಾಡುತ್ತಾಳೆ. ಸಮಯ ನೋಡಿ ನನ್ನ ಗೋಣನ್ನು ಕತ್ತರಿಸಿಬಿಟ್ಟೆ, ನಿನಗಾಗಿ ರಾಜ್ಯ ಕೋಶ ಎಲ್ಲ ಹೋದರೂ ಕಡೆಗೆ ಗಂಡ ದೂರವಾದರೂ ಸಹಿಸಿದೆ. ಈಗ ನೀನೆ ಹೀಗಾದರೆ ಇನ್ಯಾರ ಮುಖ ನೋಡಿ ನನ್ನ ದುಃಖ ಮರೆಯಲಿ, ಹರಿಶ್ಚಂದ್ರ ಬಂದು ಕೇಳಿದರೆ, ನಿನ್ನ ಮಗನನ್ನು ಉಗ್ರ ಫಣಿಯೊಂದು ಅಗಿಯಿತು ಎನ್ನಲೇ? ಯಾರನ್ನ ತೋರಿಸಿ ಆ ರಾಯನ ದುಃಖವನ್ನು ಮರೆಯಿಸಲಿ ಎಂದು ಚೀತ್ಕರಿಸುತ್ತಾಳೆ.
ಹರಿಶ್ಚಂದ್ರ ಕಾವ್ಯದ ಹಾಗೆ ಪುತ್ರ ಶೋಕವನ್ನು ಅನುಭವಿಸುವ ವಸ್ತುವುಳ್ಳ ಇನ್ನೊಂದು ಕನ್ನಡ ಸಾಹಿತ್ಯ ಚರಿತ್ರೆಯ ಚಂಪೂ ಕಾವ್ಯ ಷಡಕ್ಷರ ಕವಿಯ “ರಾಜಶೇಖರ ವಿಳಾಸ.” ಇದರಲ್ಲಿ ಬರುವ 13ನೇ ಆಶ್ವಾಸದ ತಿರುಕೊಳವಿನಾಚಿಯ ಪ್ರಸಂಗ. ಈ ಕಾವ್ಯ ಕಂದ ಪದ್ಯದಲ್ಲಿದೆ. ಕತೆಯಲ್ಲಿ ಚೋಲಮಂಡಲಾಧಿಪತಿ ಸತ್ಯೇಂದ್ರಚೋಳ ಹಾಗೂ ಅಮೃತಮತಿ ಮಹಾದೇವಿಯರಿಗೆ ರಾಜಶೇಖರನೆಂಬ ಮಗ ಇರುತ್ತಾನೆ. ಇವನ ಸ್ನೇಹಿತ ಮಿತವಚನ, ಅಂದರೆ ಮಂತ್ರಿಯ ಮಗ. ಇಬ್ಬರೂ ಸ್ನೇಹಿತರು ಆತ್ಮವೊಂದೇ ದೇಹ ಬೇರೆ ಎಂಬಂತೆ ಇರುತ್ತಾರೆ. ಸಿಂಧೂರಾಜ ಕಾಣಿಕೆಯಾಗಿ ಕುದುರೆಗಳನ್ನು ನೀಡಿರುತ್ತಾನೆ. ಅಂಥ ಕುದುರೆಗಳ ಸವಾರಿಗೆ ಹೋದ ಪ್ರಾಣ ಸ್ನೇಹಿತರಿಂದ ಅನಾಹುತವೊಂದು ಸಂಭವಿಸುತ್ತದೆ. ಮಿತವಚನನ ಕುದುರೆ ತುಳಿತಕ್ಕೆ ಸಿಕ್ಕಿ ಶಿವಭಕ್ತೆ ತಿರುಕೊಳವಿನಾಚಿಯ ಮಗ ಶಂಕರ ಸಾಯುತ್ತಾನೆ.
ಶಂಕರ ಐದು ವರ್ಷದ ಮಗು. ಏನೋ ಸದ್ದಾಗುತ್ತದೆಯಲ್ಲಾ ಎಂದು ರಸ್ತೆ ಬದಿಗೆ ಬಂದು ನಿಂತಿರುತ್ತಾನೆ. ಅಮ್ಮ ನೀರಿಗೆ ಹೋಗಿರುತ್ತಾರೆ. ನೂಕುನುಗ್ಗಲಿನಲ್ಲಿ ಸಿಕ್ಕಿ ನೆಲಕ್ಕೆ ಬೀಳುತ್ತಾನೆ. ಗಾಬರಿಯಿಂದ ಕಂಗೆಟ್ಟು ದಾರಿ ತೋಚದೆ ತನ್ನ ತಾಯಿಯನ್ನು ಕರೆ ಕರೆದು ಅಳುತ್ತಾ ಇನ್ನೇನು ಎದ್ದೇಳುವಷ್ಟರಲ್ಲಿ ಮಂತ್ರಿಪುತ್ರನ ಖುರಪುಟದ ಬೀಸಿನಿಂದ ಶಂಕರನ ತಲೆ ಕತ್ತರಿಸಿ ಹೋಗುತ್ತದೆ. ರಾಜಶೇಖರ ಬಿದ್ದಿದ್ದ ಮಗುವನ್ನು ನೋಡಿ ನಿಲ್ಲಿಸುತ್ತಾನೆ. ಸ್ನೇಹಿತನಿಗೆ ತಿಳಿಸುವಷ್ಟರಲ್ಲಿ ಮಿತವಚನನ ಕುದುರೆಯ ಕಾಲಿಗೆ ಸಿಲುಕಿ ಶಂಕರನ ಕೊರಳಿನಿಂದ ರಕ್ತ ಚಿಲ್ಲನೆ ಚಿಮ್ಮುತ್ತದೆ. ಇಬ್ಬರೂ ಸ್ನೇಹಿತರು ಪ್ರಾಯಶ್ಚಿತ್ತ ಎಂಬಂತೆ ಶಿವ ಪೂಜೆಯಲ್ಲಿ ನಿರತರಾಗುತ್ತೇವೆ ಎಂದು ಹೋಗುತ್ತಾರೆ.
ಸೇರಿದ್ದ ಜನರೆಲ್ಲಾ ಸತ್ಯೇಂದ್ರ ಚೋಳ ಬಾಲವಧೆಯನ್ನು ಸಹಿಸುವವನಲ್ಲ ಎಂದು ಮಾತನಾಡಿಕೊಳ್ಳುತ್ತಾರೆ. ತಿರುಕೊಳವಿನಾಚಿ ಮನೆಯಲ್ಲಿ ಮಗ ಇಲ್ಲದೆ ಇರುವುದನ್ನು ನೋಡಿ “ಎಲ್ಲಿ ಹೋಗಿರಬಹುದು?” ಎಂದು ಗಾಬರಿಯಾಗಿ ಬೀದಿಯಲ್ಲಿ ಹುಡುಕುತ್ತಾ “ ಹಾ ಮಗನೆ, ಹಾ ಮನೋಜ್ಞನೆ, ಹಾ ಮುದ್ದು ಮಗ ಹಾ ಮಧುರವಾಣಿ” ಎಂದು ಕರೆಯುತ್ತಾ ಬರುತ್ತಾಳೆ.
ಇತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ರುಂಡ, ಮುಂಡಗಳನ್ನು ನೋಡಿದ ಜನರೆಲ್ಲಾ, ಯಾರ ಮಗ ಹೀಗಾಗಿದ್ದಾನಲ್ಲ ಎಂದು ರೋದಿಸುತ್ತಿರುವಾಗ ಜನರ ಗುಂಪನ್ನು ಸೀಳಿಕೊಂಡು ತಿರುಕೊಳವಿನಾಚಿ ಹೋಗುತ್ತಾಳೆ. ವೈಹಾಳಿಯ ದಾಳಿಗೆ ಮಗನ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ. ಆಕೆಯ ಎದೆ ನುಚ್ಚುನೂರಾಗುತ್ತದೆ. ಆ ಮಗನ ಶವವನ್ನು ಕಂಡ ಕೂಡಲೆ ತಿರುಕೊಳವಿನಾಚಿ ಕಾಡ್ಗಿಚ್ಚನ್ನು ನೋಡಿದ ಜಿಂಕೆಯಂತೆ, ಹದ್ದು ಮೇಲೇರಿ ಬಂದ ಹಾವಿನಂತಾಗುತ್ತಾಳೆ. ತನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಹಾಳಾದೆ ಎಂದು ಗೋಳಿಡುತ್ತಾಳೆ.
ತನ್ನ ಮಗನ ಕಳೇಬರವನ್ನು ಎತ್ತಿಕೊಂಡ ತಿರುಕೊಳವಿನಾಚಿ ಬೇರೆ ಬೇರೆಯಾಗಿದ್ದ ಮಗನ ರುಂಡ ಮುಂಡವನ್ನು ಅಂಟಿಸಿ ನೋಡುತ್ತಾಳೆ. ಯಾವ ಹೆತ್ತವರಿಗೂ ಬರಬಾರದ ಸಂಕಟ ಇದು. “ಪಸಿದೆಯೆಲೆ ಕಂದ ಬತ್ತಿತು, ಸರಿವರೆಯದ ಮಕ್ಕಳ್ ಶಂಕರನೆಲ್ಲಿ ಎಂದರೆ ಏನೆನ್ನಲಿ? ಅರಸನ ಹಯಕ್ಕೆ ಆಹುತಿಯಾಗಿ ಹೋದ ಎನ್ನಲೇ? ನೀನಾಡಿದೆಡೆಗಳಂ ಸುತ ನೀನೊರಗಿದ ಪಾಸುವಂ, ನೀನುಂಡ ತಾಣವನ್ನು ಇನ್ನು ಹೇಗೆ ನೋಡಲಿ” ಎಂದು ಅರಚುತ್ತಾಳೆ. ಬೀದಿಯಲ್ಲಿ ಬಿದ್ದು ಹೊರಳಾಡುತ್ತಾಳೆ. ರಾಜ ಹಾಗೂ ಮಂತ್ರಿಮಗನ ದರ್ಪಕ್ಕೆ ಇಲ್ಲಿ ಶಂಕರ ಸಾವನ್ನಪ್ಪುತ್ತಾನೆ.
ಈಗಲೂ ಪಡ್ಡೆ ಹುಡುಗರ ಬೈಕ್ ರೇಸ್ ಖಯಾಲಿಗೆ, ವ್ಹೀಲಿಂಗ್ ಖಯಾಲಿಗೆ ಬಲಿಯಾಗುವ ರಸ್ತೆಯಲ್ಲಿ ಆಟವಾಡುವ ಮಕ್ಕಳ ಸಂಖ್ಯೆ ಇಲ್ಲದಿಲ್ಲ. ಆದರೆ ಬಿಹಾರದ ಕಂದ ಅಸ್ವಸ್ಥನಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಷ್ಟರಲ್ಲಿ ಇಹಲೋಕ ತ್ಯಜಿಸಿಬಿಡುತ್ತದೆ. ಜೀವದ ಮಗುವನ್ನು ಎತ್ತಿಕೊಳ್ಳುವುದು ಬೇರೆ. ಸತ್ತ ಮಗನನ್ನು ಎತ್ತಿಕೊಂಡು ಬಿಸಿಲಲ್ಲಿ ರೋದಿಸುತ್ತಾ ಆ ಸಂಕಟದಲ್ಲಿ ಹೇಗೆ ಹೆಜ್ಜೆ ಹಾಕಿದ್ದು ಊಹೆಗೆ ನಿಲಕುವುದಿಲ್ಲ. ಈ ಕಾವ್ಯದಲ್ಲಿ ಸತ್ತ ಬಾಲಕ ಮರಳುತ್ತಾನೆ. ಆದರೆ ಕೊರೋನಾದಂಥ ಹೆಮ್ಮಾರಿಯ ಅಟ್ಟಹಾಸದ ಸಲುವಾಗಿ ಬಿಹಾರದ ಬಾಲಕನ ಜೀವಂತಕಾವ್ಯ ಸಮಾಧಿಯಾಗಿದೆ.
ಮಗನನ್ನು ಕಳೆದುಕೊಂಡ ತಾಯಿ ಹೃದಯದ ವೇದನೆ ಎಷ್ಟು ಹೇಳಿದರೂ ಕಡಿಮೆಯೇ. ಈ ಎರಡು ಸನ್ನಿವೇಶಗಳು ಕಾವ್ಯದಲ್ಲಿ ಉಲ್ಲೇಖವಾಗಿರುವಂಥದ್ದು. ಇಲ್ಲಿಯ ತಾಯಿಯರ ಸಂಕಟ ಸಹೃದಯರಲ್ಲಿ ದುಃಖ ತರಿಸುತ್ತದೆ. ಆದರೆ ಕಡೆಗೆ ಸುಖಾಂತ್ಯವಾಗುತ್ತದೆ. ಸತ್ತ ಬಾಲಕರು ಮರಳಿ ಬದುಕುತ್ತಾರೆ. ಆದರೆ ಪ್ರತಿನಿತ್ಯ ಇಂಥ ಮಕ್ಕಳನ್ನು ಕಳೆದುಕೊಂಡು ನಿರಂತರ ದುಃಖವನ್ನು ಅನುಭವಿಸುವ ಅನೇಕ ಪೋಷಕರನ್ನು ನೋಡುತ್ತೇವೆ. ಲಾಕ್ ಡೌನ್ ನಿಂದ ಮಕ್ಕಳಿಗಾಗುತ್ತಿರುವ ಅವಘಡಗಳು ಕಡಿಮೆಯಾಗುತ್ತಿವೆ. ಈಜಲು ಹೋಗಿ ಸಾಯುವುದು. ಕಾರುಗಳ ಒಳಗೆ ಲಾಕ್ ಆಗುವುದು. ತೆರೆದ ಕೊಳವೆ ಬಾವಿಗಳಲ್ಲಿ ಬಿದ್ದು ಸಾಯುವುದು. ಮನೆ ಮುಂದೆ ಇಲ್ಲವೇ ರಸ್ತೆ ಬದಿಯಲ್ಲಿ ನಿಲ್ಲಿಸಿದ ವಾಹನಗಳನ್ನು ಚಾಲೂ ಮಾಡುವಾಗ ಅಕಸ್ಮಾತಾಗಿ ಚಕ್ರಗಳಿಗೆ ಸಿಲುಕಿ ಸಾಯುವುದು, ನೀರಿನ ತೊಟ್ಟಿಗಳಿಗೆ ಬಿದ್ದು ಸಾಯುವುದು. ಹಾವು ಕಚ್ಚಿ ಸಾಯುವುದು… ಹೀಗೆ ಬಗೆ ಬಗೆಯ ಸಾವು.
ಇಂದಿನ ವಿಭಜಿತ ಕುಟುಂಬಗಳಲ್ಲಿ ಒಂದೇ ಮಗುವಿರುತ್ತದೆ. ಅಚಾತುರ್ಯಗಳು ಸಂಭವಿಸಿದಾಗ ಬುದ್ಧಿ ಓಡುವುದಿಲ್ಲ. ಏನು ಮಾಡಬೇಕೆಂದು ತೋಚುತ್ತಿರುವುದಿಲ್ಲ. ಅದಕ್ಕೆ ರಾಘವಾಂಕ ತನ್ನ ಕಾವ್ಯದಲ್ಲಿ ‘ಮಗನನ್ನು ಕಾಣದ ಚಂದ್ರಮತಿ ಮಂದಮತಿಯಾಗಿದ್ದಳು’ ಎನ್ನುವುದು. ಅಂಥ ಭಯಂಕರ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕು ಎನ್ನುವ ಅರಿವಿರಬೇಕು . ಮತ್ತು ಸಾಮಾಜಿಕ ಬದ್ಧತೆ ಇರೆಬೇಕು. ಅದಕ್ಕಿಂತ ಮುಖ್ಯವಾಗಿ ಮನುಷ್ಯತ್ವ ಇರಬೇಕು. ಇಲ್ಲವಾದರೆ ಬಿಹಾರದಲ್ಲಿ ನಡೆದ ಮನ ಕಲಕುವ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.

ಮತ್ತಷ್ಟು ಸುದ್ದಿಗಳು

vertical

Latest News

ರಷ್ಯಾ ಕ್ಷಿಪಣಿ ದಾಳಿಗೆ ಬ್ರೆಜಿಲ್ ಮಾಡೆಲ್ ಸಾವು

newsics.com ಮಾಸ್ಕೋ: ಉಕ್ರೇನ್  ವಿರುದ್ಧ ರಷ್ಯಾ ನಡೆಸುತ್ತಿರುವ ಹೋರಾಟದಲ್ಲಿ ಬ್ರೆಜಿಲ್ ನ ರೂಪದರ್ಶಿಯೊಬ್ಬರು ಮೃತಪಟ್ಟಿದ್ದಾರೆ. ಸಾವನ್ನಪ್ಪಿರುವ ರೂಪದರ್ಶಿಯನ್ನು  ಬ್ರೆಜಿಲ್ ನ  ಥಾಲಿತಾ ಡೂ ವಲ್ಲೆ ಎಂದು ಗುರುತಿಸಲಾಗಿದೆ. ಥಾಲಿತಾ  ಉಕ್ರೇನ್...

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ,  ಮೊಹಮ್ಮದ್ ನದೀಂ , ಸಚ್ಚಿಂದ್ರನ್ ಮತ್ತು...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...
- Advertisement -
error: Content is protected !!