- ಪಿ.ಎಸ್. ವೈಲೇಶ ಕೊಡಗು
response@134.209.153.225
ಅತ್ಯಾಚಾರದಂತಹ ನೀಚ ಕಾರ್ಯಕ್ಕೆ ಎನ್‌ಕೌಂಟರ್ ಎಂಬ ಪರಮನೀಚ ಕೃತ್ಯಗಳು ಸರಿಯಾದ ಹಾದಿಯಲ್ಲ. ಅತ್ಯಾಚಾರ ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ಅತಿ ಶೀಘ್ರವಾಗಿ ಕಡಿಮೆ ಸಮಯದೊಳಗೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ನ್ಯಾಯಾಲಯವೇ ಮರಣದಂಡನೆ ವಿಧಿಸಬೇಕಾದ ಅಗತ್ಯವಿದೆ.
===
ಹತ್ತು ಜನ ತಪ್ಪಿತಸ್ಥರು ಕಾನೂನಿನ ಕಪಿಮುಷ್ಟಿಯಿಂದ ತಪ್ಪಿಸಿಕೊಂಡರು ಪರವಾಗಿಲ್ಲ ಒಬ್ಬ ಅಮಾಯಕನಿಗೆ ಶಿಕ್ಷೆಯಾಗಬಾರದು. ಇದು ನಮ್ಮ ದೇಶದ ಕಾನೂನಿನ ಉವಾಚ. ಅದೆಷ್ಟು ಸರಿಯೋ ತಪ್ಪೋ ಅರ್ಥವಾಗದಾಗಿದೆ ಕಾನೂನಿನ ದೃಷ್ಟಿಯಲ್ಲಿ ಎಲ್ಲವೂ ಎಲ್ಲರೂ ಒಂದೇ ಆಗಿರಬೇಕಿತ್ತು ಆದರೆ ಇಲ್ಲಿ ಹಾಗಾಗಿಲ್ಲ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ದುರ್ಬಲವಾದವರಿಗೆ ಒಂದು ನ್ಯಾಯ ಮತ್ತು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಬಲರಾದವರಿಗೆ ಮತ್ತೊಂದು ನ್ಯಾಯ ಅದೆಷ್ಟೋ ಮಂದಿ ಅಮಾಯಕ ಜನರು ತಮ್ಮದಲ್ಲದ ತಪ್ಪಿಗೆ ಇಂದು ಸಹ ಜೈಲಿನಲ್ಲಿ ಕೊಳೆಯುತ್ತಿರುವುದು ಸುಳ್ಳೇನಲ್ಲ. ಹಾಗೆಯೇ ತಪ್ಪುಗಳನ್ನು ಮೇಲಿಂದಮೇಲೆ ಉದ್ದೇಶ ಪೂರ್ವಕವಾಗಿ ಮಾಡಿಯೂ ಸಹ ಏನೂ ಮಾಡದವರಂತೆ ಗೌರವ ಪೂರ್ವಕವಾಗಿ ಜೀವನ ನಡೆಸುತ್ತಿರುವವರಿಗೂ ಕೊರತೆ ಏನಿಲ್ಲ. ಈ ದೇಶದ ಕಾನೂನು ಸರಿಯೇ ಅಥವಾ ದುಬೈನ ಕಾನೂನು ಸರಿಯೇ ಅಮೇರಿಕಾದ ಕಾನೂನು ಸರಿಯೇ ಎಂಬ ವಿಚಾರದಲ್ಲಿ ನಾವ್ಯಾರೂ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಆಯಾ ದೇಶದ ಕಾನೂನು ಅವರವರಿಗೆ ಸರಿ ಮತ್ತು ನ್ಯಾಯಯುತ ಎನಿಸಬಹುದು. ಈ ಜಗತ್ತಿನಲ್ಲಿ ಒಂದೇ ಕಾನೂನು ಕಟ್ಟಳೆ ಇರಲು ಸಾಧ್ಯವಿಲ್ಲ.
ನಮ್ಮ ದೇಶದ ಕಾನೂನಿನಲ್ಲಿ ಅಪರಾಧದ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ದಾರಿಗಳನ್ನು ನಮ್ಮ ವಕೀಲ ವೃತ್ತಿಯ ಕೆಲವು ಮಿತ್ರರು ಕಂಡು ಕೊಂಡಿದ್ದಾರೆ ಎಂಬುದು ಸುಳ್ಳಲ್ಲ. ಮತ್ತು ಕೇವಲ ಧನ ಸಂಪಾದನೆಯ ಉದ್ದೇಶ ಮಾತ್ರ ಇವರದಾಗಿದೆ ಅದೆಷ್ಟೋ ವಕೀಲರು ನ್ಯಾಯಸಮ್ಮತವಾದ ರೀತಿಯಲ್ಲಿ ಇಲ್ಲ ಎಂಬ ಕಾರಣದಿಂದಾಗಿ ಕೈ ಚೆಲ್ಲಿದ ಪ್ರಕರಣಗಳನ್ನು ಆಯ್ದುಕೊಂಡು ವಾದ ಮಂಡಿಸಿದ ವಕೀಲ ಮಿತ್ರರು ನಮ್ಮ ನಡುವೆ ಇದ್ದಾರೆ ಎಂಬುದನ್ನು ನಾವೆಲ್ಲರೂ ಬಲ್ಲೆವು. ಅಂತೆಯೇ ಭಂಡ ಬದುಕಿಗಾಗಿ ಅಪರಾಧವನ್ನೇ ತಮ್ಮ ವೃತ್ರಿಯಾಗಿಸಿಕೊಂಡವರು ನಮ್ಮ ನ್ಯಾಯಾಂಗದ ಒಳತಿರುಳನ್ನು ಮತ್ತು ತಪ್ಪಿಸಿಕೊಳ್ಳುವ ಲೂಪ್ ಹೋಲ್‌ಗಳನ್ನು ಅತ್ಯಂತ ಸ್ಪಷ್ಟವಾಗಿ ಅರಿತಿದ್ದಾರೆ ಎಂದರೆ ತಪ್ಪಾಗಲಾರದು.
ಇಂತಹ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ಪಶು ವೈದ್ಯೆಯ ಅಮಾನುಷ ಅತ್ಯಾಚಾರ ಮತ್ತು ಹತ್ಯೆ ಖಂಡಿತವಾಗಿಯೂ ಸರಿಯಲ್ಲ. ಕಾನೂನು ಕಟ್ಟಳೆಗಳ ಹಿಡಿತದಿಂದ ಪಾರಾಗುವುದು ಕೂಡ ಈ ದ್ರೋಹಿಗಳಿಗೆ ದೊಡ್ಡ ವಿಶೇಷೇನಲ್ಲ. ನಮ್ಮ ಕಣ್ಣ ಮುಂದೆ ಅನ್ನಾವೋ ಪ್ರಕರಣ ಇದಕ್ಕೆ ಸಾಕ್ಷಿ ಅಲ್ಲವೇ. ಇಂದು ಹೈದರಾಬಾದ್‌ನಲ್ಲಿ ನಡೆದ ಕೃತ್ಯಕ್ಕೆ ಪ್ರತಿ ಕೃತ್ಯ ಎಂಬಂತೆ ನಡೆದ ಎನ್‌ಕೌಂಟರ್ ಸಹ ನೈಜವಲ್ಲ ಎಂಬುವವರಿಗೇನೂ ಕೊರತೆಯಿಲ್ಲ. ಎನ್‌ಕೌಂಟರ್ ಅನ್ನು ನಿಂದಿಸುವವರಿಗೆ ಅಥವಾ ಅವರ ಮಕ್ಕಳಿಗೆ ಈ ರೀತಿಯಲ್ಲಿ ನಡೆದಿದ್ದರೆ ಗೊತ್ತಾಗುತ್ತಿತ್ತು ಎಂಬವರಿಗೂ ಕೊರತೆ ಇಲ್ಲ.
“ಮಧ್ಯರಾತ್ರಿಯಲ್ಲಿ ಒಂಟಿ ಮಹಿಳೆಯರು ಸ್ವತಂತ್ರವಾಗಿ ಯಾರ ಭಯವೂ ಇಲ್ಲದೇ ತಿರುಗಾಡುವಂತಹ ದಿನ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂದು ಕರೆಯಲಾಗುತ್ತದೆ” ಎಂದು ಅಂದಿನ ದಿನಗಳಲ್ಲಿ ಮಹಾತ್ಮ ಗಾಂಧಿಯವರು ಹೇಳಿದ್ದರು. ಇಂದು ಮಹಿಳೆಯರು ಮನೆಯೊಳಗೆ ಸಹ ಸುರಕ್ಷಿತರಲ್ಲ ಎನ್ನಬಹುದು. ಹಾಗೆಯೇ ಮಹಿಳೆಯರು ಕೇವಲ ಮನೆಯಲ್ಲಿ ತಮ್ಮ ಗಂಡ ಮಕ್ಕಳು ಸಂಸಾರ ಎಂದು ಕುಳಿತುಕೊಳ್ಳುವ ಕಾಲ ಕೂಡ ಇದಲ್ಲ. ಬೆಂಗಳೂರಿನಂತಹ ನಗರ ಜೀವನ ಶೈಲಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವವರು ಮಾತ್ರವಲ್ಲ ಚಿಕ್ಕ ಪುಟ್ಟ ಪಟ್ಟಣಗಳಲ್ಲಿ ಸಹ ಸಂಸಾರ ನೌಕೆ ಸಾಗಿಸಲು ಅಥವಾ ಸ್ವಾಯತ್ತತೆಯಿಂದ ಬಾಳ್ವೆ ಮಾಡಲು ದುಡಿಯುವ ಅನಿವಾರ್ಯತೆ ಇದೆ. “ಉದ್ಯೋಗಂ ಪುರುಷ ಲಕ್ಷಣಂ ಎಂಬುದನ್ನು ಉದ್ಯೋಗಂ ಜೀವನ ಲಕ್ಷಣಂ” ಎನ್ನುವಷ್ಟರ ಮಟ್ಟಿಗೆ ಇಂದು ಗಂಡು ಹೆಣ್ಣು ಎಂಬ ಭೇಧ ಭಾವವಿಲ್ಲದೇ ದುಡಿಯುವುದು ಅನಿವಾರ್ಯವಾಗಿದೆ. ಹಾಗೆ ದುಡಿಯಲು ತೆರಳಿದ ಮಹಿಳೆಯರಿಗೆ ಕೇವಲ ಹಗಲು ಪಾಳಿ ಮಾತ್ರ ದೊರೆಯುತ್ತದೆ ಎಂಬ ನಂಬಿಕೆ ಕೂಡ ಇಲ್ಲ. ಏಕೆಂದರೆ ಆಡಳಿತ ವರ್ಗಗಳು ಸಹ ಇಂದು ನೌಕರ ವರ್ಗವನ್ನು ಗಂಡು ಹೆಣ್ಣು ಎಂಬ ದೃಷ್ಟಿಯಿಂದ ನೋಡದೇ ಕೇವಲ ನೌಕರರು ಎಂದಷ್ಟೇ ನೋಡುವಂತಹ ಪರಿಸ್ಥಿತಿಯನ್ನು ನಾವು ಕಾಣಬಹುದು. ಪುರುಷ ನೌಕರರ ಅಲಭ್ಯತೆಯ ಸಮಯದಲ್ಲಿ ಮಹಿಳೆಯರು ಕೂಡ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ.
ಹಾಗೆಯೇ ಹಗಲು ಹೊತ್ತಿನಲ್ಲಿ ದುಡಿಯಲು ತೆರಳುವ ಮಹಿಳೆಯರು ಕೂಡ ಸುರಕ್ಷಿತವಾಗಿ ಇದ್ದಾರೆ ಎಂಬ ಎಂಬ ನಂಬಿಕೆಯೇನು ನಮಗೆ ಬೇಡ. ಇಲ್ಲಿಯೂ ಕೂಡ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಅಲ್ಲಗಳೆಯಲಾಗದು. ಮುಖ್ಯವಾಗಿ ಆಗಬೇಕಾಗಿರುವುದು ಮಹಿಳೆಯರ ದುಡಿಯುವ ಸಮಯವಲ್ಲ. ದುಡಿಯುವ ಮಹಿಳೆಯರು ಮಾತ್ರವಲ್ಲದೆ ಎಲ್ಲ ಮಹಿಳೆಯರನ್ನು ನಾವು ನೋಡುವ ದೃಷ್ಟಿ ಬದಲಾಗಬೇಕಿದೆ. “ಕಾಮಾತುರಾಣಾಂ ನ ಭಯಂ ನ ಲಜ್ಜಾ” ಎನ್ನುವುದು ಒಂದು ಮಾತು. ಅದರಂತೆ ಒಂದು ಹೆಣ್ಣನ್ನು ಕಂಡಾಗ ಕಾಮದ ದೃಷ್ಟಿಯಿಂದ ನೋಡಿದಾಗ ಮಾತ್ರ ಹೈದರಾಬಾದ್‌ನಲ್ಲಿ ನಡೆದ ಮತ್ತು ಇನ್ನೊಂದು ಕಡೆ ನಡೆಯುತ್ತಿರುವ ಅತ್ಯಾಚಾರ ಮತ್ತು ಹತ್ಯೆಯಂಥ ಹೀನ ಕೃತ್ಯಗಳು ನಡೆಯುತ್ತವೆ ಎಂದು ಹೇಳಬಹುದು. ಯಾಕೆ ಕೆಲವು ವಿದ್ರೋಹಿಗಳು ಒಂಟಿ ಹೆಣ್ಣನ್ನು ಕಂಡಾಕ್ಷಣ ಭೋಗದ ವಸ್ತು ಎಂದು ಮನಗಾಣುತ್ತಾರೆ ಎಂಬುದು ಅರ್ಥವಾಗದ ವಿಷಯ. ಅತ್ಯಾಚಾರವೆಂಬುದು ಅತ್ಯಂತ ಕಠಿಣ ಶಿಕ್ಷೆಯನ್ನು ಹೊಂದಿರುವ ಅಪರಾಧ ಎಂದು ಅತ್ಯಾಚಾರ ಮಾಡಿದವರಿಗೆ ಅರಿವಿದೆ ಅತ್ಯಾಚಾರ ಮಾಡಿದ ನಂತರ ಆಕೆ ಬದುಕಿ ಉಳಿದರೆ ನಮ್ಮ ಮುಂದಿನ ಜೀವನ ಜೈಲಿನಲ್ಲಿ ಕಳೆಯಬೇಕೆಂಬ ಅರಿವು ಇಲ್ಲದೇ ಹೋದರೆ ಅತ್ಯಾಚಾರ ಮಾಡಿದ ನಂತರ ಆಕೆಯನ್ನು ಜೀವಂತವಾಗಿ ಸುಟ್ಟುಹಾಕುವಂತಹ ಕೆಲಸವನ್ನೂ ಯಾರೂ ಮಾಡಲಾರರು. ಒಂದು ತಪ್ಪನ್ನು ಮುಚ್ಚಲು ಮಾಡುವ ಇನ್ನೊಂದು ತಪ್ಪು ಎಂದು ಕರೆಯಬಹುದಲ್ಲವೇ.
ಹೆಣ್ಣು ಎಂದರೆ ತಾಯಿ ಹೆಂಡತಿ ಮಗಳು ಎಲ್ಲವೂ ಹೌದು. ಅತ್ಯಾಚಾರ ಮಾಡಿದ ಪಾಪಿಗಳಿಗೂ ಕೂಡ ತಾಯಿ ಹೆಂಡತಿ ಇದ್ದರು ಎನ್ನುವ ಮಾತುಗಳು ಕೇಳಿಬರುತ್ತಿವೆ. ಮಕ್ಕಳು ಕೂಡ ಇದ್ದರೋ ಏನೋ ಯಾರಿಗೆ ಗೊತ್ತು. ಅತ್ಯಾಚಾರ ಮಾಡುವ ಸಮಯದಲ್ಲಿ ಅಥವಾ ಒಂಟಿ ಹೆಣ್ಣನ್ನು ಕಂಡಾಗ ಇವರಿಗ್ಯಾಕೆ ತಮ್ಮ ಅಮ್ಮನ ಅಥವಾ ಹೆಂಡತಿ ಮಗಳ ನೆನಪು ಬರಲಿಲ್ಲ. ಒಬ್ಬ ಹೆಣ್ಣು ಇನ್ನೊಂದು ಹೆಣ್ಣಿನ ನೋವನ್ನು ಅರಿತಿರುತ್ತಾಳೆ ಎಂಬುದನ್ನು ನಿರೂಪಿಸುವ ನುಡಿಯಾಡಿದ ಮಾತೆಯ ಮಗನಾಗಿ ತನ್ನ ಹೆಂಡತಿ ಮನೆಯಲ್ಲಿ ಇದ್ದಾಳೆ ನಾವು ಕೂಡ ಸಂಸಾರ ಮಾಡಬೇಕಾಗಿದೆ ಎಂಬುದನ್ನು ಮರೆತು ಕೇವಲ ಕ್ಷಣಿಕ ಸುಖದ ಆಸೆಯಿಂದ ತಾನು ಮಾನ ಪ್ರಾಣ ಕಳೆದುಕೊಂಡು ಅತ್ಯಾಚಾರ ಗೈದು ಜೀವಂತ ಸುಟ್ಟು ಒಂದು ಹೆಣ್ಣಿನ ಬಾಳಿನ ಜೊತೆಗೆ ತನ್ನ ಪತ್ನಿಯ ಬಾಳನ್ನು ಹಾಳುಮಾಡಿದ ಹುಚ್ಚರು ಎನ್ನಬಹುದು.
ಈ ಎಲ್ಲ ಅರಿವಿದ್ದೂ ಸಹ ಕಾನೂನಿನ ಕರಾಳ ಹಸ್ತದಿಂದ ತಪ್ಪಿಸಿಕೊಳ್ಳಬಹುದು ಎಂದು ತಿಳಿದವರನ್ನು ಎನ್‌ಕೌಂಟರ್ ಮೂಲಕ ಹತ್ಯೆಮಾಡಿರುವುದು ತಪ್ಪು ಎನ್ನಲು ಸಾಧ್ಯವಿಲ್ಲ. ಆದರೆ ಇದು ನಮ್ಮ ದೇಶದ ನ್ಯಾಯ ವಿತರಣಾ ವ್ಯವಸ್ಥೆಯಲ್ಲ ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ಯಾರು ಬೇಕಾದರೂ ಹೇಳಬಹುದು. ಹಾಗೆಂದು ಅವರನ್ನು ಸುಮ್ಮನೆ ಜೈಲಿಗೆ ಹಾಕಿದರೆ ಸಾಮಾನ್ಯ ಪ್ರಕರಣಗಳಲ್ಲಿ ನಡೆಯುವಂತೆ ವಿಚಾರಣೆಯ ನೆಪದಲ್ಲಿ ಕಾಲವನ್ನು ದೂಡುತ್ತಾ ಇರಬಹುದಿತ್ತು. ಮೇಲ್ನೋಟಕ್ಕೆ ತಕ್ಷಣದ ಪರಿಹಾರವೆಂಬಂತೆ ಎನ್‌ಕೌಂಟರ್ ಮಾಡಿ ಮುಗಿಸಿದ್ದಾರೆ. ದೇಶದ ಬಹುತೇಕ ಜನರಿಗೆ ಸಂತಸ ತಂದಿದೆ. ಒಂದಷ್ಟು ಜನರಿಗೆ ಬೇಸರವೂ ಆಗಿದೆ. ಕೆಲವರಿಗೆ ಏನೂ ಅರ್ಥವಾಗದೆ ಅಯೋಮಯವಾದಂತಾಗಿದೆ ಕಾರಣ ಇಷ್ಟೇ. ಈ ಒಂದು ಸನ್ನಿವೇಶದಲ್ಲಿ ನಡೆದ ಎನ್‌ಕೌಂಟರ್ ಎಂಬ ಮಹಾಮಾರಿ ಮುಂದೆ ಯಾವ್ಯಾವ ರೂಪದಲ್ಲಿ ಯಾರ್ಯಾರನ್ನು ಬಲಿ ತೆಗೆದುಕೊಳ್ಳಲಿದೆಯೋ ಎಂಬ ಭಯ ಕಾಡುತ್ತಿದೆ. ಇಂದು ಎನ್‌ಕೌಂಟರ್ ಮಾಡಿದ ಕಾರಣದಿಂದಾಗಿ ಎಲ್ಲರಿಂದ ಹೊಗಳಿಸಿಕೊಳ್ಳುತ್ತಿರುವ ರೂವಾರಿಗಳಿಗೆ ಇನ್ನು ಯಾವ ರೀತಿಯ ಶಿಕ್ಷೆ ಕಾದಿದೆಯೋ ಎಂಬ ಭಯವಾಗುತ್ತಿದೆ. ನಮ್ಮ ದೇಶದ ಹಲವು ಹತ್ತು ಕಾನೂನುಗಳಂತೆ ಈ ಎನ್‌ಕೌಂಟರ್ ಎಂಬುದು ಕೂಡ ದುರ್ಬಳಕೆಯ ಸಾಧ್ಯತೆಯಿರುವ ಕಾರಣ ಕೂಡ ನಮ್ಮನ್ನು ಗಾಬರಿಗೊಳಿಸುತ್ತಿದೆ.