Saturday, April 1, 2023

ಮದುವೆಗೂ ಮುನ್ನವೇ…

Follow Us

ಮದುವೆ ದಿನದಿಂದ ದಿನಕ್ಕೆ ಅತ್ಯಂತ ನಾಜೂಕು ವ್ಯವಸ್ಥೆಯಾಗಿ ಬದಲಾಗುತ್ತಿದೆ, ಹಗ್ಗದ ಮೇಲಿನ ನಡಿಗೆಯಂತೆ. ವಿದ್ಯಾವಂತ ಹುಡುಗ-ಹುಡುಗಿಯರು, ಆರ್ಥಿಕವಾಗಿ ಸ್ವಾತಂತ್ರ್ಯವುಳ್ಳವರು, ಅತ್ಯಂತ ಪ್ರೊಗ್ರೆಸ್ಸಿವ್ ವಿಚಾರಧಾರೆಯುಳ್ಳವರು ಎಲ್ಲವೂ ನಿಜ. ಕೊನೆಗೆ ಒಟ್ಟಿಗೆ ಹೊಂದಾಣಿಕೆಯಿಂದ ಬದುಕಲು ಸೋಲುತ್ತಾರೆ. ಎಲ್ಲವೂ ಸರಿಯಾಗಿದ್ದರೆ ಮನಸ್ಸಿಗೆ ಬಹುದೊಡ್ಡ ಊರುಗೋಲಾಗಿ, ಬದುಕಿನಲ್ಲಿ ನೆಮ್ಮದಿ ತುಂಬಬಹುದಾದ ಮದುವೆ ಎನ್ನುವ ವ್ಯವಸ್ಥೆಯನ್ನು ಎದುರಿಸಲು ಹಾಗೂ ಒಂದಿಷ್ಟು ವಾಸ್ತವದ ನೆಲೆಗಟ್ಟಿನಲಿಯೋಚಿಸುವಂತೆ ಸಹಕಾರ ನೀಡಲು ವಿವಾಹಪೂರ್ವ ಕೌನ್ಸೆಲಿಂಗ್ ಖಂಡಿತವಾಗಿ ಸಹಾಯಕ.
* ಸುಮನಾ ಎಲ್.
response@134.209.153.225

ಚನಾಳ ಮದುವೆ ನಿಗದಿಯಾಗಿತ್ತು. ಹುಡುಗನನ್ನು ವಾರಾಂತ್ಯದಲ್ಲಿ ಸಂಧಿಸುವುದು, ಯಾವಾಗಲಾದರೂ ಒಮ್ಮೆ ಫಿಲಂ ನೋಡುವುದು, ಅಪರೂಪಕ್ಕೊಮ್ಮೆ ಶಾಪಿಂಗ್ ಮಾಡುವುದೆಲ್ಲ ನಡೆದಿತ್ತು. ಎಂದೂ ಗೌರವದ ಗಡಿ ದಾಟದ ಆ ಹುಡುಗ ಅದ್ಯಾವುದೋ ಘಳಿಗೆಯಲ್ಲಿ ರಚನಾಳನ್ನು ಬರಸೆಳೆದು ಮುತ್ತಿಕ್ಕಿಬಿಟ್ಟಿದ್ದ. ರಚನಾಗೆ ಶಾಕ್. ಅಂದಿನಿಂದಲೇ ಚಿಂತಾಕ್ರಾಂತಳಾದಳು. ಮದುವೆ ದಿನಾಂಕ ಸಮೀಪಿಸುತ್ತಿರುವಾಗ ಲವಲವಿಕೆಯಿಂದ ಕೂಡಿರಬೇಕಾಗಿದ್ದ ಆಕೆ ಮಂಕಾದಳು. ಅಮ್ಮನಿಗೆ ಒಂದೆಡೆ ಸಿದ್ಧತೆಯ ಭರಾಟೆಯಾದರೆ ಇನ್ನೊಂದೆಡೆ ರಚನಾ ಯಾಕೋ ಖುಷಿಯಾಗಿಲ್ಲ ಎಂದೆನಿಸುತ್ತಿತ್ತು. ಮಗದೊಂದು ದಿನ ರಚನಾ ನಿಧಾನವಾಗಿ “ಅಮ್ಮ ಈ ಮದುವೆ ಬೇಡ’ ಎಂದಳು. ಈಗ ಅಮ್ಮ ನಿಜಕ್ಕೂ ಕಂಗಾಲು. ಮುಚ್ಚಿಡುವಂಥದ್ದಲ್ಲ, ಹೀಗಾಗಿ, ಪತಿ ಮತ್ತು ಇಬ್ಬರು ಮೈದುನಂದಿರಿಗೆ ಹೇಳಿದರು. ಒಬ್ಬ ಮೈದುನನ ಪತ್ನಿ ಆಪ್ತಸಮಾಲೋಚಕಿ. ಆಕೆ ರಚನಾಳ ಬಳಿ ಆಪ್ತವಾಗಿ ಕುಳಿತುಕೊಂಡು ಮಾತುಕತೆ ನಡೆಸಿದಾಗ ಹೊರಬಂದ ರಚನಾಳ ಯೋಚನಾಲಹರಿಯನ್ನು ನೋಡಿ ಅವರಿಗೆ ಅಳಬೇಕೋ ನಗಬೇಕೋ ಎಂದು ತಿಳಿಯದಾಯ್ತು.
ರಚನಾ ಪದವಿ ಓದುತ್ತಿರುವಾಗ ಆಕೆಯ ಸ್ನೇಹಿತೆಯೊಬ್ಬಳು ಪ್ರೀತಿಯಲ್ಲಿ ಬಿದ್ದು ಅವನ ಜತೆ ಸುತ್ತಾಡುತ್ತಿದ್ದಳು. ಕ್ಲಾಸಿಗೂ ಬರದೆ, ನಗರದಿಂದಾಚೆಗೆ ಅದೆಲ್ಲೋ ಹೋಗುತ್ತಿದ್ದ ಆಕೆಯನ್ನು ರಚನಾ ಪ್ರಶ್ನಿಸಿಯೂ ಇದ್ದಳು. ಕೊನೆಗೊಂದು ದಿನ ದುಗುಡದ ಮುಖ ಹೊತ್ತು ಬಂದ ಸ್ನೇಹಿತೆ ತಾನು ಗರ್ಭಿಣಿಯಾಗಿರುವುದಾಗಿ ಹೇಳಿದಾಗ ಇಬ್ಬರಿಗೂ ಏನು ಮಾಡಬೇಕೆಂಬ ಅರಿವಿರಲಿಲ್ಲ. ಕೊನೆಗೆ, ಆತನೇ ಪರಿಚಯಿಸಿದ ಅದ್ಯಾವುದೋ ವೈದ್ಯರ ಬಳಿಗೆ ಹೋಗಿ ಮಾತ್ರೆಗಳನ್ನು ಪಡೆದು ಬೇಡದ ಗರ್ಭವನ್ನು ಹೊರಹಾಕಿದ್ದಳು ಆ ಸ್ನೇಹಿತೆ. ಆದರೆ, ಆ ಸಮಯದಲ್ಲಿ ಆಕೆ ಅನುಭವಿಸಿದ್ದ ವೇದನೆ, ನೋವು, ಹಿಂಸೆಗಳೆಲ್ಲ ರಚನಾಳನ್ನು ಕಂಗೆಡಿಸಿದ್ದವು. ಹಾಸ್ಟೆಲ್‍ನಲ್ಲಿ ಇರುತ್ತಿದ್ದ ಆಕೆಯನ್ನು ತಮ್ಮ ಮನೆಯಲ್ಲೇ ಕೆಲವು ದಿನಗಳ ಮಟ್ಟಿಗೆ ಉಳಿಸಿಕೊಂಡಿದ್ದಳು. ಸ್ನೇಹಿತೆಯ ಪ್ರೇಮಿಯೂ ಆ ಸಮಯದಲ್ಲಿ ಕೈಕೊಟ್ಟಿದ್ದ. ಪದವಿ ಮುಗಿಯುತ್ತಿದ್ದಂತೆ ಆಕೆಗೆ ಮದುವೆಯಾಗಿತ್ತು, ಬೇರೊಂದು ಊರಿನಲ್ಲಿ. ರಚನಾ ಅದಕ್ಕೇನೂ ಹೋಗಿರಲಿಲ್ಲ. ಅದೊಂದು ಬದುಕಿನ ಅಧ್ಯಾಯ ಮುಗಿದೇ ಹೋಯಿತು ಎಂದುಕೊಂಡಿದ್ದ ರಚನಾಗೆ ತನ್ನನ್ನು ಮದುವೆಯಾಗುವ ಹುಡುಗ ಮುತ್ತಿಕ್ಕಿದಾಗ ಧುತ್ತೆಂದು ಅಂದಿನ ಸನ್ನಿವೇಶಗಳು ಪದೇ ಪದೆ ಕಾಡಲು ಆರಂಭಿಸಿದ್ದವು. ಮದುವೆಯಾಗಿ, ತಾನೂ ಗರ್ಭಿಣಿಯಾಗಿ, ಗರ್ಭಪಾತವಾದರೆ ಅಂಥ ವೇದನೆ ಅನುಭವಿಸಬೇಕು ಎನ್ನುವ ಭಾವನೆ ದಟ್ಟವಾಗತೊಡಗಿತ್ತು.
ಆ ಸಮಯದಲ್ಲಿ ರಚನಾಗೆ ಧೈರ್ಯ ತುಂಬಿದವರು ಆಕೆಯ ಚಿಕ್ಕಮ್ಮ. ಬರೀ ಆಕೆಗಷ್ಟೇ ಅಲ್ಲ, ರಚನಾಳನ್ನು ಮದುವೆಯಾಗುವ ಹುಡುಗನನ್ನೂ ಕರೆಸಿ ಕೂರಿಸಿಕೊಂಡು ಮದುವೆಯ ಬಾಂಧವ್ಯ, ಒಬ್ಬರಿಗೊಬ್ಬರು ಮಾಡಿಕೊಳ್ಳಬೇಕಾದ ಹೊಂದಾಣಿಕೆ, ಮನದಲ್ಲಿ ಮೂಡುವ ಭಾವನೆಗಳನ್ನು ನಿರ್ಭೀತಿಯಿಂದ ಪರಸ್ಪರ ಹೇಳಿಕೊಳ್ಳುವ ಅಗತ್ಯ, ಆ ಮೂಲಕ ಸಂಬಂಧವನ್ನು ಗಟ್ಟಿ ಮಾಡಿಕೊಂಡು ಪರಸ್ಪರ ನಾವಿದ್ದೇವೆ ಎನ್ನುವ ನಂಬುಗೆ ಮೂಡಿಸಿಕೊಳ್ಳುವುದು, ಈಗೋ ಬಲೆಯಲ್ಲಿ ಸಿಕ್ಕಿಕೊಳ್ಳದೆ ಸರಳವಾಗಿರುವುದು, ಗೌರವಿಸಿಕೊಳ್ಳುವುದು, ಪತಿಯ ಹೊರತಾಗಿ ಇತರ ಸಂಬಂಧಗಳ ನಿಭಾವಣೆ ಇತ್ಯಾದಿ ಕೆಲವು ವಾಸ್ತವ ಅಂಶಗಳ ಬಗ್ಗೆ ಅರಿವು ಮೂಡಿಸಿದರು. ರಚನಾ ಈಗ ಸಂಪೂರ್ಣವಾಗಿ ಹಗುರವಾದಳು.
ಬದುಕಿನಲ್ಲಿ ಎಚಿತೆಂತಹದ್ದೋ ಸಮಸ್ಯೆಗಳನ್ನು ಕಂಡಿರುವವರಿಗೆ ರಚನಾಳದ್ದೇನು ಮಹಾ ಸಮಸ್ಯೆ ಎನಿಸಬಹುದು. ಆದರೆ, ಇಂಥ ಅವ್ಯಕ್ತ ಭಯಗಳೇ ಮುಂದೆ ಸಂಸಾರಕ್ಕೆ ಧಕ್ಕೆ ತರುತ್ತ ಹೋಗಬಹುದು. ಯಾರೊಂದಿಗೂ ಹೇಳಿಕೊಳ್ಳಲಾಗದೆ ಒದ್ದಾಡುವಂತೆ ಮಾಡಬಹುದು. ಇದಕ್ಕೆಲ್ಲ ಮುಖ್ಯವಾದ ಕಾರಣ ಇಂದಿನ ಹೆಚ್ಚಿನ ಯುವಪೀಳಿಗೆ ವಿಭಕ್ತ ಕುಟುಂಬದಲ್ಲಿ ಬೆಳೆದಿರುವುದು. ಕೂಡುಕುಟುಂಬದಲ್ಲಿ ಬೆಳೆದವರು ನೋಡುತ್ತ ನೋಡುತ್ತ ಸಂಬಂಧಗಳ ಕುರಿತಾಗಿ ಮನೆಯಲ್ಲೇ ಅನೇಕ ಪಾಠಗಳನ್ನು ಕಲಿತಿರುತ್ತಾರೆ. ಅನೇಕ ಹೆರಿಗೆ, ಸಾವು ನೋವುಗಳನ್ನು, ಜನರ ಹುಳುಕು-ಪಳುಕು ಮನಸ್ಥಿತಿಗಳನ್ನು ಕಂಡಿರುತ್ತಾರೆ. ಆದರೆ, ವಿಭಕ್ತ ಕುಟುಂಬಕ್ಕೆ ಅನೇಕ ಸವಾಲುಗಳಿರುತ್ತವೆ. ಅವರು ಎಲ್ಲ ಮಾದರಿಗಳನ್ನೂ ಮನೆಯಲ್ಲೇ ನಿರ್ಮಿಸಿಕೊಡಲು ಸಾಧ್ಯವಾಗುವುದಿಲ್ಲ. ಸೀಮಿತ ಸುರಕ್ಷಿತ ಚೌಕಟ್ಟಿನಲ್ಲಿ ಮಕ್ಕಳು ಬೆಳೆಯುತ್ತಾರೆ. ಅಷ್ಟೇ ಏಕೆ? ವ್ಯಕ್ತಿಕೇಂದ್ರಿತ ಮನೋಭಾವ, ಶ್ರೇಷ್ಠತೆ, ಈಗೋ ಸಮಸ್ಯೆ ಹೆಚ್ಚಲು ಕೂಡ ವಿಭಕ್ತ ಕುಟುಂಬಗಳೇ ಇಂದು ಕಾರಣವಾಗುತ್ತಿವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪರಿಸ್ಥಿತಿ ಹೀಗಿರುವಾಗ ಮದುವೆ ಎನ್ನುವುದು ಬಹುದೊಡ್ಡ ಸಮಸ್ಯೆ ಎಂಬಂತೆ ಭಾಸವಾಗುವುದರಲ್ಲಿ ಅಚ್ಚರಿಯಿಲ್ಲ. ಅದಕ್ಕೆ ಪೂರಕವಾಗಿ ಹತ್ತಿರದ ನೆಂಟರಿಷ್ಟರು, ಸ್ನೇಹಿತರು ಕೂಡ “ಮದುವೆನಾ? ಸರಿಹೋಯ್ತು, ಇನ್ನು ನೀನು ನಮ್ಮ ಕೈಗೆ ಸಿಕ್ಕ ಹಾಗೆ’ ಎಂದೋ, “ನಿನ್ನ ಸ್ವಾತಂತ್ರ್ಯ ಇವತ್ತಿಗೆ ಮುಗಿಯಿತು’ ಎಂದೋ ಕಮೆಂಟ್ ಮಾಡಿ ಅಂಥದ್ದೊಂದು ಭಾವನೆಯನ್ನು ತಲೆಯಲ್ಲಿ ತುಂಬಿಬಿಡುತ್ತಾರೆ. “ಅದು ಹೇಗೆ ನನ್ನ ಸ್ವಾತಂತ್ರ್ಯ ಹೋಗುತ್ತದೆ? ನೋಡಿಯೇಬಿಡೋಣ’ ಎಂದು ನಿರ್ಧರಿಸಿಕೊಳ್ಳುವ ಹುಡುಗಿ ಮದುವೆಯಾದ ಬಳಿಕ ಪತಿ ಹೇಳುವ ಅಥವಾ ಅವನ ಮನೆಯವರು ಹೇಳುವ ಪ್ರತಿ ಮಾತಿನಲ್ಲೂ ಈ ಸ್ವಾತಂತ್ರ್ಯಹರಣವನ್ನೇ ಯೋಚಿಸಲಾರಳೇ?, ಯೋಚಿಸಬೇಕಾದ ವಿಚಾರ.
ಬದುಕಿನ ಅತಿದೊಡ್ಡ ರಿಸ್ಕಿ ನಿರ್ಧಾರವೆಂದರೆ… ಯಾವುದಿರಬಹುದು? ಅದೇ ಮದುವೆ. ಇಂದಿನ ಮದುವೆಗಳಂತೂ ನಿಗದಿಯಾಗಿ ವರ್ಷಗಟ್ಟಲೆ ಆಗಿದ್ದರೂ ಜತೆಯಾಗಿ ಬದುಕಲು ಆರಂಭಿಸಿದ ವಾರದಲ್ಲೇ ಭಿನ್ನಾಭಿಪ್ರಾಯಗಳು ಭುಗಿಲೆದ್ದು, “ಇಷ್ಟೆನಾ?’ ಎನಿಸಿಬಿಡುತ್ತವೆ. ಹೀಗಾಗಿಯೇ ಇವತ್ತು ಅಗತ್ಯವಾಗಿ ವಿವಾಹಪೂರ್ವ ಕೌನ್ಸೆಲಿಂಗ್‍ಗಳು ಅಗತ್ಯವಾಗಿ ಕಾಣಿಸುತ್ತಿವೆ. ಒಂದಿಷ್ಟು ಆಪ್ತಸಮಾಲೋಚನೆ, ಒಂದಿಷ್ಟು ಭರವಸೆ, ಧೈರ್ಯ, ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ಯೋಚಿಸಲು ಅನುವು ಮಾಡಿಕೊಡುವುದು..ಇವೆಲ್ಲ ಮುಂದೆ ಎದುರಾಗುವ ಸವಾಲುಗಳನ್ನು ಎದುರಿಸಲು ಅಲ್ಪವಾದರೂ ನೆರವು ನೀಡುತ್ತವೆ. ಮದುವೆ ನಿಗದಿಯಾದಂದಿನಿಂದಲೂ ರಾಜ-ರಾಣಿಯರಂತೆ ಮೆರೆಯುವ ಗಂಡು ಹೆಣ್ಣಿಗೆ ಏಕಾಏಕಿ ವಾಸ್ತವ ಬದುಕಿಗೆ ಮರಳಿದಾಗ ಪರಸ್ಪರರ ಚಿಕ್ಕಪುಟ್ಟ ಅಭ್ಯಾಸಗಳಿಂದ ಹಿಡಿದು ಬಟ್ಟೆಗೆ ಐರನ್ ಮಾಡುವುದು, ಬೆಳಗ್ಗೆ ಪತಿಗೆ ಟಿಫನ್ ಬಾಕ್ಸ್ ಸಿದ್ಧಪಡಿಸುವುದು, ಆತನ ಕಚೇರಿಯ ಸಮಯಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದು, ಈಕೆಯೂ ಕೆಲಸಕ್ಕೆ ಹೋಗುವವಳಾದರೆ ಇಬ್ಬರದ್ದೂ ಸಮಯ ಹೊಂದಾಣಿಕೆಗಳೇ ಕಿರಿಕಿರಿಯಾಗಿ ಕಾಡುವುದಿದೆ.
ಇತ್ತೀಚೆಗೆ ಹಿರಿಯ ಸ್ನೇಹಿತೆಯೊಬ್ಬರು ಹೇಳುತ್ತಿದ್ದರು, “ವಿವಾಹಪೂರ್ವ ಆಪ್ತಸಮಾಲೋಚನೆ ನಗರದಲ್ಲಿ ಟ್ರೆಂಡ್ ಆಗುತ್ತಿದೆ’ ಎಂದು. ವಿವಾಹದ ಬಗ್ಗೆ ಯುವಜನರಲ್ಲಿ ಮೂಡಿರುವ ಭಯವನ್ನೂ ಇದು ಸೂಚಿಸುತ್ತಿರಬಹುದಲ್ಲವೇ ಎನಿಸಿತು. ಏನೇ ಆಗಲಿ, ಮದುವೆಯಾದ ನಂತರದ ಬದುಕಿನ ಬಗ್ಗೆ ಮಾನಸಿಕವಾಗಿ ಸಿದ್ಧರಾಗಬೇಕಿದ್ದರೆ ಮದುವೆಗೂ ಮುನ್ನ ಆಪ್ತಸಮಾಲೋಚನೆ ಮೂಲಕ ಒಂದಿಷ್ಟು ಸಿದ್ಧತೆ ನಡೆಸುವುದು ಉತ್ತಮವೇ.

ಮತ್ತಷ್ಟು ಸುದ್ದಿಗಳು

vertical

Latest News

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್‌ಗೆ 25 ಸಾವಿರ ದಂಡ

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ  ಮುಖಭಂಗ ಉಂಟಾಗಿದೆ. ಪ್ರಧಾನಿ ಮೋದಿ ಡಿಗ್ರಿ ಸರ್ಟಿಫಿಕೇಟ್‍ಗಳನ್ನು ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಗುಜರಾತ್...

ಕೆಲಸದ ನಡುವೆ ಧಮ್ ಎಳೆಯಲು ಪದೇ ಪದೇ ಬ್ರೇಕ್, 9 ಲಕ್ಷ ರೂಪಾಯಿ ದಂಡ

newsics.com ನವದೆಹಲಿ: ಕೆಲಸದ ನಡುವೆ ಧಮ್ ಎಳೆಯಲು ಬ್ರೇಕ್ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.ನೀವೂ ಹೀಗೆ ಮಾಡುತ್ತಿದ್ದರೆ ಎಚ್ಚರವಾಗಿರುವುದು ಒಳಿತು. ಕೆಲಸದ ನಡುವೆ ಧಮ್ ಎಳೆಯಲು ಪದೇ ಪದೇ ಬ್ರೇಕ್, 9 ಲಕ್ಷ ರೂಪಾಯಿ ದಂಡವನ್ನು ಕಂಪನಿ...

ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ

newsics.com ಬೆಂಗಳೂರು: ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಏಪ್ರಿಲ್ 2, 10, 17, 26 ಮೇ 21 ರಂದು ಐಪಿಎಲ್ ಪಂದ್ಯವಿರುವ...
- Advertisement -
error: Content is protected !!