ಪರೀಕ್ಷೆ ಸಮಯದಲ್ಲಿಯೇ ಅನೇಕ ಮಕ್ಕಳಿಗೆ ಬೇರೆ ಬೇರೆ ಚಟುವಟಿಕೆಗಳನ್ನು ಮಾಡುವ ಹುಮ್ಮಸ್ಸು ಬರುತ್ತದೆ. ಪೇಂಟಿಂಗೋ, ತಿಂಡಿ ಮಾಡುವುದೋ, ಕೀಬೋರ್ಡ್ ನುಡಿಸುವುದೋ ಏನೋ ಮಾಡಲು ಇಷ್ಟಪಡಬಹುದು. ಓದುವುದರಿಂದ ತಪ್ಪಿಸಿಕೊಳ್ಳಲು ಅವರು ಹಾಗೆ ಮಾಡುತ್ತಾರೆ ಎಂದು ಮೇಲ್ನೋಟಕ್ಕೆ ಅನಿಸಬಹುದಾದರೂ ಇದಕ್ಕೆ ಕಾರಣವಿದ್ದೇ ಇದೆ. ಹೆಚ್ಚು ಸಮಯ ಓದಿದ ದಣಿವನ್ನು ಆರಿಸಿಕೊಳ್ಳಲು ಅವರಿಗೆ ಏನಾದರೊಂದು ಮಾರ್ಗ ಬೇಕಿರುತ್ತದೆ. ದೀರ್ಘ ಸಮಯವಲ್ಲದಿದ್ದರೂ ನಿಗದಿತ ಸಮಯದಲ್ಲಿ ಅಂಥ ಚಟುವಟಿಕೆ ನಡೆಸಲು ಪಾಲಕರೂ ಅವಕಾಶ ನೀಡಬೇಕಾಗುತ್ತದೆ.
==========
* ಸುಮನಾ ಎಲ್.ಜಿ.
response@134.209.153.225
ಎದುರು ಮನೆಯ ಪ್ರಣವ್ ಗೇಟಿನ ಬಳಿ ಬೇಸರದಿಂದ ನಿಂತಿದ್ದ. “ಯಾಕೆ ಪ್ರಣವ್? ಏನಾಯ್ತು? ಬೇಸರದಲ್ಲಿದೀಯ?’ಎಂದೆ. ಕಣ್ಣು, ಮುಖಭಾವನೆಯಲ್ಲೇ ಮನೆಯ ಒಳಗೆ ಸನ್ನೆ ಮಾಡಿದ. ಅರ್ಥವಾಗದೆ “ಏನು, ಯಾರಿದ್ದಾರೆ?’ ಎಂದು ಕೇಳಿದೆ. ಸಣ್ಣಗೆ “ಅಮ್ಮ ಇದಾರೆ, ಮಾತಾಡಿದ್ರೆ ಬೈತಾರೆ’ ಎಂದ. ಆಶ್ಚರ್ಯವಾಯಿತು. ಸುಮ್ಮನೆ ತಲೆಯಾಡಿಸಿ ಬಂದುಬಿಟ್ಟೆ. ಸಂಜೆ ಪುನಃ ಅದೇ ಅವತಾರದಲ್ಲಿ ಪ್ರಣವ್ ಕಾಣಿಸಿಕೊಂಡ. ಈಗ “ಮನೆಗೆ ಬಾರೋ, ನನ್ ಮಗನೂ ಇದ್ದಾನೆ’ಎಂದು ಕರೆದೆ. ಸ್ವಲ್ಪ ಸಮಯದ ಬಳಿಕ ಬಂದ. ಬರುತ್ತಲೇ ಸಂಜೆಯ ಸ್ನ್ಯಾಕ್ಸ್ ಸಿದ್ಧತೆಯಲ್ಲಿದ್ದ ನನ್ನ ಮಗನನ್ನು ನೋಡಿ “ನೀನೇ ಮಾಡ್ಕೊತೀಯೇನೊ? ನಮ್ಮಲ್ಲಿ ಅಮ್ಮ ಮಾಡಿಕೊಡ್ತಾಳೆ. ನಾನೀಗ ಓದೋದ್ ಬಿಟ್ಟು ಬೇರೆ ಏನನ್ನೂ ಮಾಡಬಾರದಂತೆ’ ಎನ್ನುತ್ತ ಸೀದಾ ಅಡುಗೆ ಮನೆಗೇ ಚಿತ್ತೈಸಿದ. ನಾನು ಮತ್ತೆ “ಯಾಕೋ ಪ್ರಣವ, ಬೆಳಗ್ಗೆಯಿಂದಲೂ ಬೇಸರದಲ್ಲಿದ್ದಾಂಗೆ ಕಾಣ್ತೀಯ?’ಎಂದು ಕೇಳಿದೆ. ಅವನು ಹೇಳಿದ್ದುದನ್ನು ಕೇಳಿ ಮನಸೆಲ್ಲ ಕಲಕಿದಂತಾಯಿತು.
ಪ್ರಣವ್ 10ನೇ ಕ್ಲಾಸಿನಲ್ಲಿ ಓದುತ್ತಿರುವ ಹುಡುಗ. ಆತ ಹತ್ತನೇ ಕ್ಲಾಸ್ ಎಂಟ್ರಿಯಾಗುತ್ತಿರುವಂತೆಯೇ ಮನೆಯ ಕೇಬಲ್ ಕಟ್ ಆಯ್ತು. ಅವನಿಗೆ ಮ್ಯೂಸಿಕ್ ಅಂದ್ರೆ ಇಷ್ಟ. ಅದನ್ನಾದರೂ ಕೇಳೋಣವೆಂದರೆ ಅಮ್ಮ ಬಿಲ್‍ಕುಲ್ ಅವಕಾಶ ನೀಡೋದಿಲ್ಲ. ಬೇಕಿದ್ದರೆ ಯಾವಾಗಲಾದರೂ ಕರ್ನಾಟಕ ಸಂಗೀತ ಹಾಕಿಕೊಡ್ತಾಳೆ. ಆದರೆ, ಅದು ಅವನಿಗೆ ಇಷ್ಟವಾಗುವುದಿಲ್ಲ. ಫ್ಯೂಷನ್ ಮ್ಯೂಸಿಕ್ ಕೇಳಬೇಕು ಎನ್ನುತ್ತಾನೆ. ಈ ಕಾರಣದಿಂದ ಮನೆಯಲ್ಲಿ ಅಮ್ಮನಿಗೂ ಅವನಿಗೂ ಫೈಟಿಂಗ್ ನಡೆಯುತ್ತಲೇ ಇರುತ್ತದೆ. ಪಕ್ಕದಲ್ಲೇ ಇರುವ ಅಪಾರ್ಟ್‍ಮೆಂಟ್‍ನಲ್ಲಿ ಪ್ರಣವ್ ಸ್ನೇಹಿತರಿದ್ದಾರೆ. ಅವರು ಸಂಜೆ ಕೆಲ ಸಮಯ ಆಟವಾಡುತ್ತಾರೆ. ಮೊದಲೆಲ್ಲ ಅವರೊಂದಿಗೆ ಸೇರಿಕೊಂಡು ಆಟವಾಡ್ತಿದ್ದ ಪ್ರಣವ್ ಹತ್ತನೇ ತರಗತಿಗೆ ಬರುತ್ತಿದ್ದಂತೆ ಅಲ್ಲಿಗೂ ಹೋಗುತ್ತಿಲ್ಲ. ಹೋದರೆ, ಅಮ್ಮ ಆಕಾಶ ಭೂಮಿ ಒಂದು ಮಾಡಿಬಿಡ್ತಾಳಂತೆ. ಅದರಲ್ಲೂ ಈಗ ಜನವರಿ ಶುರುವಾಗ್ತಿದ್ದ ಹಾಗೆ “ಓದೋದೊಂದೇ ನಿನಗೆ ಕೆಲಸ. ಕೂತಲ್ಲಿ, ನಿಂತಲ್ಲಿ ಏನ್ ಬೇಕಿದ್ರೂ ಮಾಡಿಕೊಡ್ತೀನಿ’ ಎಂದು ಅವನಮ್ಮ ಸೇವೆ ಮಾಡೋಕೆ ಸಿದ್ಧವಾಗಿರ್ತಾಳೆ. ಇತ್ತೀಚೆಗಂತೂ ಓದೋದೊಂದನ್ನು ಬಿಟ್ಟು ಏನೆಂದರೆ ಏನೂ ಮಾಡದ ಪ್ರಣವ್‍ಗೆ ತಲೆಚಿಟ್ಟು ಹಿಡಿದು ಹೋಗಿದೆ. ನಮ್ಮ ಮನೆಗೆ ಬರುವಾಗಲೂ ಅಮ್ಮನ ಕಣ್ಣು ತಪ್ಪಿಸಿ ಬಂದಿದ್ದಾನೆ. ಎಷ್ಟೋ ಬಾರಿ ಅವನನ್ನು ರೂಮಿನೊಳಕ್ಕೆ ಕೂಡಿ ಹಾಕಿ “ಓದಿಕೋ’ ಬಾಗಿಲು ಹಾಕುವುದೂ ಇದೆ. ಪ್ರಣವ್‍ಗೆ ಪೇಂಟಿಂಗ್ ಇಷ್ಟ. ಅದನ್ನಾದರೂ ಯಾವಾಗಲಾದರೊಮ್ಮೆ ಮಾಡಲು ಕೂಡ ಅವಕಾಶವಿಲ್ಲ.
ಪ್ರಣವ್ ಮಾತ್ರವಲ್ಲ, ಅನೇಕ ವಿದ್ಯಾರ್ಥಿಗಳ ಸಮಸ್ಯೆಯಿದು. ಓದುವುದೊಂದನ್ನು ಬಿಟ್ಟು ಬೇರೆ ಯಾವುದೇ ಕೆಲಸ ಮಾಡಿದರೂ ಮನೆಯಲ್ಲಿ ಬೈಸಿಕೊಳ್ಳಬೇಕಾದ ಸ್ಥಿತಿ ಅವರಿಗೆ. ಅದರಲ್ಲೂ ಪರೀಕ್ಷೆ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟು. ಒಂದೆರಡು ಅಂಕಗಳಲ್ಲಿ ಬದುಕಿನ ದಿಕ್ಕೇ ಬದಲಾಗುವ ಸಾಧ್ಯತೆ ಹೆಚ್ಚಿರುವ ಈ ದಿನಗಳಲ್ಲಿ ಮಕ್ಕಳು ಚೆನ್ನಾಗಿ ಓದಬೇಕು, ಉತ್ತಮ ಅಂಕ ಗಳಿಸಬೇಕು, ಹಿಂದುಳಿದರೆ ಎಲ್ಲಿ ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಹಿಂದುಳಿದುಬಿಡುತ್ತಾರೋ ಎನ್ನುವ ಆತಂಕ ಪಾಲಕರಿಗೆ ಇರುವುದು ಅತ್ಯಂತ ಸಹಜ. ಇದೇ ಆತಂಕವನ್ನು ಅವರು ಮಕ್ಕಳ ಮೇಲೂ ಹೇರುತ್ತಾರೆ. ಅಲ್ಲದೆ, ಆಸಕ್ತಿಯ ಕೆಲ ಚಟುವಟಿಕೆಗಳನ್ನು ಮಾಡುತ್ತಿದ್ದರೆ ಮಕ್ಕಳು ಖುಷಿಯಾಗಿರುತ್ತಾರೆ, ಅದೇ ಮೂಡಿನಲ್ಲಿ ಚೆನ್ನಾಗಿಯೂ ಓದುತ್ತಾರೆ ಎನ್ನುವುದನ್ನು ಮರೆತುಬಿಡುತ್ತಾರೆ. ಮಕ್ಕಳ ಅದೆಷ್ಟೋ ಸೃಜನಶೀಲ ಚಟುವಟಿಕೆ ಮುದುಡುವುದೇ ಪಾಲಕರಿಂದ ಎಂದರೆ ಅಚ್ಚರಿಯಾಗಬಹುದು.
ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹ ಕೊಡುವಲ್ಲಿ ಸಾಕಷ್ಟು ಮಂದಿ ಪೋಷಕರು ವಿಫಲರಾಗುತ್ತಿದ್ದಾರೆ. ಇಂದಿನ ದಿನಗಳಲ್ಲಿ ಈ ಬಗ್ಗೆ ಸ್ವಲ್ಪವಾದರೂ ಅರಿವು ಬಂದಿದೆಯಾದರೂ, ಇನ್ನೂ ಕೂಡ ಬಹಳಷ್ಟು ಪೋಷಕರು ಮಕ್ಕಳಿಗೆ ಬೇಕಾದ ಪ್ರೋತ್ಸಾಹ ನೀಡುವಲ್ಲಿ, ಉತ್ಸಾಹ ತುಂಬುವಲ್ಲಿ ಯಶಸ್ವಿಯಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ, ಪ್ರೋತ್ಸಾಹದಾಯಕ ವಾತಾವರಣವನ್ನು ಹೇಗೆ ಕಲ್ಪಿಸಿಕೊಡಬೇಕೆಂದೇ ಗೊತ್ತಿರುವುದಿಲ್ಲ. ತಮ್ಮದೇ ಸಂಸಾರದ ಜಂಜಾಟದಲ್ಲಿ ಮುಳುಗಿ ಮಕ್ಕಳನ್ನು ಮರೆತುಬಿಡುತ್ತಾರೆ. ಅವರೇನು ಪ್ರಶ್ನೆ ಕೇಳುತ್ತಾರೋ ಅಷ್ಟಕ್ಕೆ ಉತ್ತರಿಸಿ ಸುಮ್ಮನಾಗುತ್ತಾರೆ. ಮಕ್ಕಳೊಂದಿಗೆ ಆಪ್ತವಾದ ಸಂವಹನ ನಡೆಸುವುದೇ ಇಲ್ಲ. ಅವರ ತಲೆಮಾರಿನ ಪ್ರಪಂಚವನ್ನು ಅರ್ಥೈಸಿಕೊಳ್ಳುವ ಮೂಲಕ ತಮ್ಮ ಮಕ್ಕಳನ್ನು ಅರಿಯುವ ಪ್ರಯತ್ನವನ್ನೂ ಮಾಡುವುದಿಲ್ಲ. ಹೀಗೆ ಮಕ್ಕಳ ಕುರಿತು ಸದಾ ಆತಂಕದಲ್ಲೇ ಇರುವ ಬದಲು ಅವರ ಮೇಲೆ ನಂಬಿಕೆಯಿಟ್ಟು ಸ್ವಲ್ಪ ಉತ್ತೇಜನ ನೀಡಿದರೆ, ಅವರು ತಮ್ಮ ಇಷ್ಟದ ಕೆಲಸಗಳ ಜತೆಗೆ ಓದಿನಲ್ಲೂ ಮುಂದಿರುತ್ತಾರೆ.