Wednesday, July 6, 2022

ಹ್ಯಾಪಿ ಫ್ರೆಂಡ್ ಶಿಪ್ ಡೇ…

Follow Us

ಇಂದು ಸ್ನೇಹಿತರ ದಿನ. ಗೊತ್ತಿಲ್ಲದೆ ನಮ್ಮೊಳಗೊಂದು ಜವಾಬ್ದಾರಿ ಮೂಡಿಸಿದ, ಅರಿವು ಹೆಚ್ಚಿಸಿದ, ಉತ್ಸಾಹ ತುಂಬಿದ, ಗೊಂದಲಗಳಿಗೆ ಅಂತ್ಯ ಹಾಡಿದ, ಕಷ್ಟಕ್ಕೆ ಹೆಗಲಾದ, ಧೈರ್ಯ ನೀಡಿದ ಹತ್ತಾರು ಸ್ನೇಹಿತರು ನೆನಪಾಗುತ್ತಾರೆ. ಸಂಪರ್ಕದಲ್ಲಿರಲಿ ಬಿಡಲಿ ಅವರಿಗೆಲ್ಲ ಹ್ಯಾಪಿ ಫ್ರೆಂಡ್ ಶಿಪ್ ಡೇ.

 

♦ ಸುಮನಾ ಲಕ್ಷ್ಮೀಶ
newsics.com@gmail.com

 

 ಅ ತ್ತೆ ಮನೆಯಿಂದ ಕಾಲೇಜಿಗೆ ಹೊರಟಿದ್ದೆ. ಬಸ್ಸಿನಲ್ಲಿ ಬಿಳಿ ಚೆಲುವೆಯೊಬ್ಬಳ ಬಳಿ ಸೀಟು ದೊರಕಿತ್ತು. ಆಕೆಯೋ ತನ್ನ ಪ್ರಪಂಚದಲ್ಲಿ ತಾನು ಮುಗುಳ್ನಗುತ್ತ ಕುಳಿತಿದ್ದಳು. ಈ ಪ್ರಪಂಚದಿಂದ ಹೊರತಾಗಿದ್ದೇನೆ ಎಂಬಂತೆ ಒಬ್ಬಳೇ ನಗುತ್ತಿದ್ದ ಅವಳು ಬಸ್ಸಿಳಿದ ಎಷ್ಟು ಹೊತ್ತಾದರೂ ನನ್ನ ಚಿತ್ತದಿಂದ ಮರೆಯಾಗಲಿಲ್ಲ. ಅದಾಗಿ ಎಷ್ಟೋ ದಿನಗಳು ಕಳೆದ ಬಳಿಕ, ಕಾಲೇಜಿನಲ್ಲಿ ಕ್ಲಾಸು ಆರಂಭವಾಗಿತ್ತು. ಮೊದಲ ದಿನದ ಮೊದಲ ಇಂಗ್ಲಿಷ್ ಕ್ಲಾಸಿಗೆ ತಡವಾಗಿ ಬಾಗಿಲ ಬಳಿ ಯಾರೋ ಬಂದು ನಿಂತಾಗ ನೋಡಿದರೆ, ಆಕೆಯೇ. ಕಣ್ಣರಳಿಸುತ್ತ ಅವಳನ್ನು ಬರಮಾಡಿಕೊಂಡೆ. ಬಳಿಕ ಯಾವಾಗ ನಾವು ಮಾತನಾಡಿದೆವೋ, ಯಾವಾಗ ಅವಳು ಪರಿಚಿತಳಾದಳೋ, ಅವಳ ರೂಮಿಗೆ ಎಷ್ಟೆಂದರೆ ಅಷ್ಟೊತ್ತಿಗೆ ನುಗ್ಗುವುದನ್ನು ಯಾವಾಗ ಅಭ್ಯಾಸ ಮಾಡಿಕೊಂಡೆನೋ ಕಾಣೆ. ಒಟ್ಟಿನಲ್ಲಿ ಪದವಿಯ ಮೊದಲ ದಿನವೇ ಗೆಳತಿಯೊಬ್ಬಳನ್ನು ಪಡೆದುಕೊಂಡಿದ್ದೆ.
ಅರಳು ಹುರಿದಂತೆ ಚಟಪಟನೆ ಮಾತನಾಡುತ್ತ ಹೃದಯ ತಟ್ಟಿದಾಕೆ ಮತ್ತೊಬ್ಬಳು. ಅವಳು ಎಲ್ಲರ ಜತೆ ಎಷ್ಟು ಬಿಂದಾಸ್ ಆಗಿರುತ್ತಾಳೆಂಬುದೇ ಸೋಜಿಗವೆನಿಸುತ್ತಿತ್ತು, ಸ್ಪಷ್ಟವಾಗಿ ಮಾತನಾಡಲು ಬರುವುದೇ ಇಲ್ಲವೆಂಬಂತೆ ನನ್ನೊಳಗೇ ಮುದುಡಿಕೊಂಡಿರುತ್ತಿದ್ದ ನನಗೆ ಅವಳೊಂದು ಸ್ಫೂರ್ತಿಯಾದಳು. ಅವಳ ಸಂಗದಲ್ಲಿ ಹರೆಯದ ಉತ್ಸಾಹಕ್ಕೊಂದು ದಿಕ್ಕು ಸಿಕ್ಕಿತು.
ಹೈಸ್ಕೂಲ್’ನಲ್ಲಿ ಒಡನಾಡಿದ್ದ ಶಾಂತವಾಗಿ ಜುಳುಜುಳು ಹರಿಯುವ ಗಂಭೀರ ನದಿಯಂಥ ಸ್ನೇಹಿತೆ ಪಿಯುಸಿಯಲ್ಲೂ ಜತೆಯಾದಾಗ ಸಂತಸಕ್ಕೆ ಪಾರವಿರಲಿಲ್ಲ. ಮೇಲ್ನೋಟಕ್ಕೆ ಆಧುನಿಕ ಜಗತ್ತಿನ ಪ್ರತಿರೂಪದಂತೆ ಕಾಣುತ್ತಿದ್ದ ಮತ್ತೊಬ್ಬ ಮುಗ್ಧ ಮನದಾಕೆ ದಕ್ಕಿದ್ದು ಆಗಲೇ. ಬದುಕಿನ ಬಗೆಗೆ ಅವಳ ಅರಿವು, ಗಂಭೀರ ನೋಟಗಳು ಮತ್ತೊಂದು ರೀತಿಯ ಚಿಂತನೆಗೆ ಹಚ್ಚುತ್ತಿದ್ದುದನ್ನು ಮರೆಯಲು ಸಾಧ್ಯವಿಲ್ಲ. ನಂತರ, ಕಾಲೇಜುಗಳು ಬೇರೆಯಾದರೂ ರಜಾ ದಿನಗಳಲ್ಲಿ ಅವರೊಂದಿಗೆ ಬೆರೆತು ಹಗುರಾಗುವ ಅವಕಾಶವಿದ್ದೇ ಇತ್ತು. ಇನ್ನು, ಆ ಗೆಳೆಯ, ಹೈಸ್ಕೂಲ್’ನಲ್ಲಿ ಒಡನಾಡಿದ್ದು ಒಂದೇ ವರ್ಷವಾದರೂ ಇಂದಿಗೂ ಕಷ್ಟಕ್ಕೆ ಕಿವಿಯಾಗುವ ಹೂ ಮನದಾತ. ಒಂದೇ ಮನೆಯಲ್ಲಿ ಹುಟ್ಟಿ ಬಾಲ್ಯದಲ್ಲಿ ಜಗಳವಾಡಿದರೂ ಬೆಳೆಯುತ್ತ ಬೆಳೆಯುತ್ತ ಸಹೋದರತ್ವಕ್ಕಿಂತ ಸ್ನೇಹವೇ ಹೆಚ್ಚಾಗುತ್ತ ಸಾಗಿದ್ದು ನಿಜವಲ್ಲವೇ? ಹೀಗೆ, ಜೀವನವೆಂಬ ಹೂಬಳ್ಳಿಗೆ ಆಧಾರವಾದ, ಜತೆಯಾದ, ಬೇಕಾದಾಗಲೆಲ್ಲ ಹೆಗಲಾದ ಜೀವಗಳು “ಸ್ನೇಹ’ವೆಂಬ ಹೆಸರನ್ನು ಪಡೆದು ಶಾಶ್ವತವಾಗಿ ನನ್ನೊಂದಿಗಿವೆ.
ಎಲ್ಲರಿಗೂ ಹೀಗೆಯೇ. ಅವರ ಸ್ನೇಹ, ಸ್ನೇಹಿತರೇ ಗ್ರೇಟು. ತಮ್ಮ ಕಾಲವೇ ಅದ್ಭುತ. ನಕ್ಕು ನಲಿದು, ಆ ಸಮಯದ ತಲ್ಲಣಗಳಿಗೆ ಜತೆಯಾಗುತ್ತ ಹೀಗೆ ಬಂದು ಹಾಗೆ ಹೋಗುವ ಸ್ನೇಹಿತರ ಸಂಖ್ಯೆಯೂ ಲೆಕ್ಕವಿರುವುದಿಲ್ಲ. ಆದರೆ, ಕೆಲವರು ಮಾತ್ರವೇ ಸದಾ ಕಾಲ ನಮ್ಮೊಂದಿಗಿರುತ್ತಾರೆ. ಸುಖಕ್ಕೆ ನಗುವಾಗುತ್ತಾರೆ, ಕಷ್ಟಗಳಿಗೆ ನಾನಿದ್ದೇನೆ ಎನ್ನುವ ಭರವಸೆ ತುಂಬುತ್ತಾರೆ. ಬದುಕು ಎಷ್ಟೇ ತಿರುವುಗಳನ್ನು ತೆಗೆದುಕೊಳ್ಳುತ್ತಿದ್ದರೂ ಅವರ ದನಿ ಮಾತ್ರ ನಮ್ಮೊಳಗೆ, ನಮ್ಮ ಸುತ್ತ ಕೇಳುತ್ತಲೇ ಇರುತ್ತದೆ. ಎದೆಯಾಳದಲ್ಲಿ 

ಧೈರ್ಯ ಮೂಡುತ್ತಲೇ ಇರುತ್ತದೆ. ಎಲ್ಲೋ ಬೆಳೆದ, ಎಲ್ಲೋ ಹುಟ್ಟಿದ, ಸಾಂಸ್ಕೃತಿಕ ಭಿನ್ನತೆಯ ಜೀವಗಳು ಸ್ನೇಹವೆಂಬ ಕೊಂಡಿಯೊಂದಿಗೆ ಜೀವಮಾನದ ಬಾಂಧವ್ಯ ಬೆಸೆಯುವುದು ಈ ನೆಲದ ವಿಸ್ಮಯವಲ್ಲದೆ ಇನ್ನೇನು?
ಇಂದು ಸ್ನೇಹಿತರ ದಿನ. ಭೋರ್ಗರೆದು ಆರ್ಭಟಿಸುವ ಜಲಪಾತದಂಥ ಸ್ನೇಹದ ದಿನಗಳೆಲ್ಲ ಮುಗಿದು, ಶಾಂತವಾಗಿ ಅಂತರಗಂಗೆಯಂತೆ ಅನುದಿನವೂ ಜತೆ ಸಾಗುವ ಸ್ನೇಹಕ್ಕೆ ಏನೆಂದು ವಿಶ್ ಮಾಡುವುದು? ಹೋಲಿಕೆಗಳ ಹಂಗಿಲ್ಲದ, ಬಿಗುಮಾನ, ಈಗೋಗಳಿಲ್ಲದ ಈ ಸುಂದರ ಹೂವಿಗೆ ನಾವಿನ್ನೇನು ಹೇಳಲು ಸಾಧ್ಯವಿದೆ? ಸಿಂಪಲ್ಲಾಗಿ ಹ್ಯಾಪಿ ಫ್ರೆಂಡ್ ಶಿಪ್ ಡೇ ಅನ್ನೋಣ, ಅಷ್ಟೇ ಸಾಕು.
ಸಾಕಷ್ಟು ಸ್ನೇಹಿತರು ಇಂದಿನ ದಿನವನ್ನು ಜತೆಯಾಗಿ ಆಚರಿಸುವ ಸಂಪ್ರದಾಯವನ್ನೂ ಇಟ್ಟುಕೊಂಡಿದ್ದಾರೆ. ಆದರೆ, ಇದು ಕೊರೋನಾ ಕಾಲವಾಗಿರುವುದರಿಂದ ಆಚರಣೆಗಳನ್ನು ದೂರವಿಟ್ಟು, ಗೆಳೆಯ-ಗೆಳತಿಯರಿಗಾಗಿ ಶುಭ ಹಾರೈಸುವುದು ಅತ್ಯುತ್ತಮ ಎಂಬ ಸತ್ಯವೊಂದು ನೆನಪಿರಲಿ.

ಮತ್ತಷ್ಟು ಸುದ್ದಿಗಳು

vertical

Latest News

ನಡು ರಸ್ತೆಯಲ್ಲಿ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ: 1 ಗಂಟೆಗಳ ಸಂಚಾರ ಸ್ಥಗಿತ

newsics.com ಕೇರಳ: ತಮಿಳುನಾಡು - ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್​ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಪರಿಣಾಮ ಸುಮಾರು ಒಂದು...

ವೈಫ್ ಸ್ವ್ಯಾಪಿಂಗ್:ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲು

newsics.com ದೆಹಲಿ: ವೈಫ್ ಸ್ವ್ಯಾಪಿಂಗ್ ಪಾರ್ಟಿಗಳಿಗೆ ಹಾಜರಾಗುವಂತೆ ಪತ್ನಿಯನ್ನು  ಬಲವಂತಾಗಿ ಕರೆದೊಯ್ಯುತ್ತಿದ್ದ  ಗುರುಗ್ರಾಮ್ ಉದ್ಯಮಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯ ಪತ್ನಿ, ತಾನು ನಿರಾಕರಿಸಿದರೆ ತನ್ನ ಪತಿ  ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಲದೇ ರಕ್ಷಣೆಗೆ ಗುರುಗ್ರಾಮ್...

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು...
- Advertisement -
error: Content is protected !!