Wednesday, May 25, 2022

ಅಡುಗೆ ಮನೆಗಳಲ್ಲಿ ಉರಿಯಲಿವೆ ವಿದ್ಯುತ್ ಒಲೆಗಳು

Follow Us

♦  ಕಡಿಮೆ ದರದ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಹೆಜ್ಜೆ  ♦

ಅಡುಗೆ ಮನೆಯಲ್ಲಿ ವಿದ್ಯುತ್ ಒಲೆ ಉರಿಯುವ ದಿನಗಳು ದೂರವಿಲ್ಲ. ನಗರ ಹಾಗೂ ಗ್ರಾಮೀಣ ಪ್ರದೇಶದ ಬಡವರಿಗೆ ವಿದ್ಯುತ್ ಒಲೆಗಳನ್ನು ಪೂರೈಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಸೌರ ಹಾಗೂ ಪವನ ವಿದ್ಯುತ್ ಮೂಲಕ ವಿದ್ಯುತ್ ಬೇಡಿಕೆಯನ್ನು ಪೂರೈಸುವುದು ಅದರ ಗುರಿ. ಉದ್ದೇಶವೇನೋ ಒಳ್ಳೆಯದೇ, ಆದರೆ ಭಾರತದಂಥ ದೇಶದಲ್ಲಿ ಇದು ಎಷ್ಟರಮಟ್ಟಿಗೆ ಸಫಲವಾಗುತ್ತದೆ ಎನ್ನುವ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.

newsics.com
Feature Desk

 ಅ ಡುಗೆಮನೆ ಎನ್ನುವುದು ಪ್ರತಿ ಮನೆಯ ಪ್ರಮುಖ ಭಾಗ. ಮನೆಯ ಸರ್ವರ ಆರೋಗ್ಯ ಕಾಯುವ ಮೂಲ ಸ್ಥಾನವೇ ಅಡುಗೆ ಮನೆ ಎಂದರೆ ತಪ್ಪಾಗಲಾರದು. ಇಂಥ ಪ್ರಮುಖ ಸ್ಥಾನದಲ್ಲಿ ಮಹಿಳೆಯರು ಮೊದಲಿನಿಂದಲೂ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಉರುವಲು ಅಥವಾ ಇಂದಿನ ದಿನಗಳಲ್ಲಿ ಎಲ್ಪಿಜಿಯ ವ್ಯವಸ್ಥೆ ಮಾಡಿಕೊಳ್ಳುವುದು ಅವರದ್ದೇ ಕೆಲಸ. ಈ ನಿಟ್ಟಿನಲ್ಲಿ ಬಡ ಮಹಿಳೆಯರಿಗೆ ನೆರವಾಗಿರುವುದು ಪ್ರಧಾನಮಂತ್ರಿ ಉಜ್ವಲಾ ಯೋಜನೆ.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲಾ ಯೋಜನೆ ಮುಖಾಂತರ ಕೋಟ್ಯಂತರ ಬಡವರಿಗೆ ಎಲ್ಪಿಜಿ ಸಂಪರ್ಕ ನೀಡುವ ಮೂಲಕ ಒಂದು ಹಂತದ ಕ್ರಾಂತಿಯನ್ನು ಮಾಡಲಾಗಿದೆ. ಆದರೆ, ಇಷ್ಟಕ್ಕೇ ಸುಮ್ಮನಾಗಲು ಯಾವುದೇ ಜನಪರ ಸರ್ಕಾರ ಸಿದ್ಧವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಗರ ಹಾಗೂ ಗ್ರಾಮೀಣ ಪ್ರದೇಶದ ಬಡವರಿಗೆ ಇಂಡಕ್ಷನ್ ಸ್ಟೋವ್ ಗಳನ್ನು ನೀಡುವ ಉದ್ದೇಶ ಹೊಂದಿದೆ.
ಯೋಜನೆಯೇನೋ ಚೆನ್ನಾಗಿದೆ, ಆದರೆ ಎಷ್ಟರಮಟ್ಟಿಗೆ ಈ ಯೋಜನೆ ಸಫಲವಾಗುವುದೋ ಗೊತ್ತಿಲ್ಲ. ಏಕೆಂದರೆ, ನಮ್ಮ ದೇಶದಲ್ಲಿ ಈಗಾಗಲೇ ಸಾಕಷ್ಟು ವಿದ್ಯುತ್ ಕೊರತೆಯಿದೆ. ಬೇಡಿಕೆ ಇರುವಷ್ಟು ವಿದ್ಯುತ್ ಪೂರೈಸಲು, ದಿನದ ಇಪ್ಪತ್ತ್ನಾಲ್ಕು ಗಂಟೆಯೂ ನಿರಂತರವಾಗಿ ವಿದ್ಯುತ್ ಪೂರೈಸುವುದು ಇಂದಿನ ಮಟ್ಟಿಗೆ ಅಸಾಧ್ಯವೇ ಸರಿ. ಈ ಹಂತದಲ್ಲಿ ಬಡವರಿಗೆ ವಿದ್ಯುತ್ ಒಲೆಗಳನ್ನು ನೀಡಲು ಹೊರಟಿರುವುದು ಆಗದ ಕೆಲಸಕ್ಕೆ ಕೈಹಾಕಲು ಹೊರಟಂತಿದೆ.
ವಿದ್ಯುತ್ ಭಾರತದ ಭವಿಷ್ಯ…
ಇತ್ತೀಚೆಗೆ, ಕೇಂದ್ರ ವಿದ್ಯುತ್ ಮತ್ತು ಮರುಬಳಕೆ ಇಂಧನಗಳ ಸಚಿವ ರಾಜ್ ಕುಮಾರ್ ಸಿಂಗ್ ಈ ಕುರಿತು ವಿಚಾರ ಹಂಚಿಕೊಂಡಿದ್ದಾರೆ. ‘ಬಡವರಿಗೆ ಕಡಿಮೆ ವೆಚ್ಚದ ಇಂಧನ ಪೂರೈಸುವುದು ಸರ್ಕಾರದ ಕರ್ತವ್ಯ’ ಎಂಬುದಾಗಿ ಮಾತನಾಡಿದ್ದಾರೆ. ಇದಕ್ಕೆ ಬೇಕಾಗುವ ಇಂಧನವನ್ನು ಪವನ ಹಾಗೂ ಸೌರವಿದ್ಯುತ್ ಯೋಜನೆಗಳಿಗೆ ಉತ್ತೇಜನ ನೀಡುವ ಕುರಿತಾಗಿಯೂ ಹೇಳಿದ್ದಾರೆ. ‘ವಿದ್ಯುತ್ ಭಾರತದ ಭವಿಷ್ಯ. ಮೂಲ ಸೌಕರ್ಯಗಳನ್ನು ವಿದ್ಯುತ್ತನ್ನು ಅವಲಂಬಿಸಿಯೇ ಮಾಡಬೇಕಿದೆ. ಇದರಿಂದ ದೇಶದ ಆರ್ಥಿಕತೆಯೂ ಅಭಿವೃದ್ಧಿಯ ಹಾದಿಯಲ್ಲಿ ಸಾಗಲಿದೆ’ ಎಂದಿದ್ದಾರೆ.
ಪವನ ಮತ್ತು ಸೌರ ಯೋಜನೆಗಳ ಮೂಲಕ ಉತ್ಪಾದಿಸಲಾಗುವ ವಿದ್ಯುತ್ತನ್ನು ದಿನಪೂರ್ತಿ ಪೂರೈಕೆ ಮಾಡುವ ಮೂಲಕ ವಿದ್ಯುತ್ ದರವನ್ನು ಕಡಿಮೆಗೊಳಿಸುವ ಉದ್ದೇಶವಿದೆ. 2022ರೊಳಗೆ ಭಾರತ ಶುದ್ಧ ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರಲಿದೆ. ವಿಶ್ವದಲ್ಲೇ ಅತಿದೊಡ್ಡ ಶುದ್ಧ ಇಂಧನ ಉತ್ಪಾದನಾ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ. ಸುಮಾರು 175 ಗಿಗಾವ್ಯಾಟ್ ಶುದ್ಧ ಇಂಧನ ಉತ್ಪಾದಿಸುವ ಗುರಿ ಹೊಂದಲಾಗಿದೆ. ಜಾಗತಿಕ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಬದ್ಧವಾಗಿರುವ ಭಾರತ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣುತ್ತಿದೆ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ಒಲೆಗಳನ್ನು ವಿತರಿಸುವ ನಿರ್ಧಾರಕ್ಕೆ ಬಂದಿದೆ.
ಅಲ್ಪ ವೆಚ್ಚದ ಇಂಧನ…
‘ದಿನದಿನದ ಬಳಕೆಗೆ ಅಲ್ಪ ವೆಚ್ಚದ ಇಂಧನ ಪೂರೈಕೆ ಮಾಡುವ ಮೂಲಕ, ಅಡುಗೆಗೂ ವಿದ್ಯುತ್ ಬಳಸುವಂತೆ ಮಾಡುವುದು ಕೇಂದ್ರದ ಗುರಿಯಾಗಿದೆ’ ಎಂದು ಎನ್ ಟಿಪಿಸಿ ತನ್ನ ಹೇಳಿಕೆಯಲ್ಲೂ ತಿಳಿಸಿದೆ.
ಸೌರ ಮತ್ತು ಪವನ ವಿದ್ಯುತ್ ಬಲ ಹೆಚ್ಚಿದಾಗ ಪಳೆಯುಳಿಕೆ ಇಂಧನಗಳ ಆಮದು ಕಡಿಮೆಯಾಗುತ್ತದೆ. ಹಾಗೂ ದೇಶದ ವಿದ್ಯುತ್ ಸ್ಥಾವರಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಅಡುಗೆಗೆ ವಿದ್ಯುತ್ ಬಳಕೆ ಮಾಡಿದರೆ ಭಾರತದ ತಲಾ ವಿದ್ಯುತ್ ಬಳಕೆಯ ಪ್ರಮಾಣವೂ ಏರಿಕೆಯಾಗುತ್ತದೆ. ಈಗ ಪ್ರಸ್ತುತ ಭಾರತದ ತಲಾ ವಿದ್ಯುತ್ ಬಳಕೆ 1,200 ಕಿಲೋವ್ಯಾಟ್ ಇದೆ. ಪ್ರಪಂಚದಲ್ಲೇ ಅತಿ ಕಡಿಮೆ ತಲಾ ವಿದ್ಯುತ್ ಬಳಕೆ ಹೊಂದಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ.
ಸ್ವಾವಲಂಬನೆ ಸಾಧಿಸುವ ಗುರಿ…
ಭಾರತ ಪ್ರಸ್ತುತ ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದು ರಾಷ್ಟ್ರವಾಗಿದ್ದು, 2019ನೇ ಸಾಲಿನಲ್ಲಿ ಸುಮಾರು 8 ಲಕ್ಷ ಕೋಟಿ ರೂ.ಗಳಷ್ಟು ಮೌಲ್ಯದ ಕಚ್ಚಾತೈಲವನ್ನು ಆಮದು ಮಾಡಿಕೊಂಡಿದೆ. ಪ್ರತಿವರ್ಷ ಕಚ್ಚಾತೈಲದ ದರ ಏರಿಕೆಯಾಗುತ್ತಲೇ ಸಾಗುತ್ತದೆ. ಹೀಗಾಗಿ, ವಾರ್ಷಿಕವಾಗಿ ಭಾರತದ ಕಚ್ಚಾತೈಲ ಆಮದು ದರ ಸುಮಾರು 10 ಸಾವಿರ ಕೋಟಿ ರೂ.ಗಳಷ್ಟು ಏರಿಕೆಯಾಗುತ್ತಲೇ ನಡೆದಿದೆ.
ಈ ಎಲ್ಲ ಕಾರಣಗಳಿಂದ ಶುದ್ಧ ಇಂಧನ ಬಳಕೆಗೆ ಉತ್ತೇಜನ ನೀಡುವುದು ಸರ್ಕಾರದ ಗುರಿಯಾಗಿದೆ. ಇದರಿಂದ ಮನೆಯ ಅಡುಗೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವ ಜತೆಗೆ, ದೇಶೀಯವಾಗಿಯೇ ವಿದ್ಯುತ್ ಉತ್ಪಾದನೆ ಮಾಡಿ ಸ್ವಾವಲಂಬನೆ ಸಾಧಿಸುವ ಗುರಿಯೂ ಅಡಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಮನೆಮನೆಗಳಲ್ಲಿ ವಿದ್ಯುತ್ ಒಲೆಗಳು ಅಡುಗೆಮನೆಯಲ್ಲಿ ರಾರಾಜಿಸಲಿವೆ.

ಮತ್ತಷ್ಟು ಸುದ್ದಿಗಳು

Latest News

ರಾಜಸ್ಥಾನ ತಂಡವನ್ನು ಮಣಿಸಿ ಫೈನಲ್ಸ್ ಗೆ ಎಂಟ್ರಿಕೊಟ್ಟ ಗುಜರಾತ್

newsics.com ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ 2022ರ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು 7 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿ ಫೈನಲ್ಸ್...

ಬಸ್ ನಿಲ್ದಾಣದಲ್ಲಿ ಮಗು ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್ : ತನಿಖೆಯಲ್ಲಿ ಬಯಲಾಯ್ತು ಅಕ್ರಮ ಸಂಬಂಧದ ಅಸಲಿಯತ್ತು

newsics.com ಮೈಸೂರು: ಕಳೆದ 15 ದಿನಗಳ ಹಿಂದೆ ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಯುವಕನ ಕೈಗೆ ಮಗುವನ್ನು ಕೊಟ್ಟು ಪರಾರಿಯಾದ ಪ್ರಕರಣ ಇದೀಗ ಹೊಸ ತಿರುವನ್ನೇ ಪಡೆದುಕೊಂಡಿದೆ. ಇದೀಗ ಆ ಮಗು ಆತನದ್ದೇ ಎಂದು...

ಪ್ರವಾಸಿಗರನ್ನು ಸ್ಕೂಬಾ ಡೈವಿಂಗ್ ಗೆ ಹೊತ್ತೊಯ್ದ ದೋಣಿ ಮುಳುಗಡೆ; ಇಬ್ಬರು ಸಾವು

newsics.com ಮಹಾರಾಷ್ಟ್ರ: ಸ್ಕೂಬಾ ಡೈವಿಂಗ್ ವೇಳೆ 20 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೇ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಾರಾಷ್ಟ್ರದ...
- Advertisement -
error: Content is protected !!