* ನಂದಿನಿ ವಿಶ್ವನಾಥ ಹೆದ್ದುರ್ಗ
ಮೇಲೆ ನಿಂತ ಕಾಲಪುರುಷ ಬೇಸ್ತು ಬಿದ್ದಿದ್ದಾನೆ.
ಏನೋ ಮಾಡಲು ಹೋಗಿ ಏನೋ ಆದಂತಿದೆ ಅವನ ಪಾಡು.
ಹೊತ್ತು ಹೋಗಲೆಂದು ಬೊಂಬೆಯಾಟ ಆಡುತ್ತಾ ತಾನೇ ಸೃಷ್ಟಿಸಿದ ತನ್ನದೇ ಮೇರು ಕಲಾಕೃತಿಯನ್ನು ಇನ್ನಿಲ್ಲದಂತೆ ಬುದ್ದಿವಂತನನ್ನಾಗಿಸಿದ್ದು ತನ್ನ ಬುಡಕ್ಕೆ ತಾನೇ ಹಾಕಿಕೊಂಡ ಕೊಡಲಿಪೆಟ್ಟೆಂದು ಗೊತ್ತಾಗಿ ಹೋಗಿದೆ…
ಮಿಂಚಿ ಹೋಯಿತೆ ಕಾಲ..?
ಆತಂಕ…!
ಇಲ್ಲ…ಇನ್ನೊಂದೇ ಒಂದು ಘಳಿಗೆ ಬಾಕಿಯಿರುವಾಗ ಮೇಲೆ ಕುಂತವನಿಗೆ ತನ್ನ ಪರಮೋಚ್ಚ ಸೃಷ್ಟಿಯ ಕೀಲಿಕೈ ತನ್ನ ಬಳಿಯೇ ಇದೆಯೆನ್ನುವುದು ನೆನಪಾಗಿ ,
ಯಾಕೋ ಈ ಪಾತ್ರದ
ಆಟಾಟೋಪ ಅತಿಯಾಯಿತೆಂದು ವೇಗವನ್ನು ತುಸು ಹಿಂದೂಡುವ ಬಯಕೆಯಾಗಿ ಕೀಲಿಯನ್ನು ಒಂದು ಸುತ್ತು, ಒಂದೇ ಸುತ್ತು ಹಿಂದೆ ತಿರುಗಿಸುವ ಮನಸ್ಸು ಮಾಡಿದ್ದಾನೆ..
ಸುಮ್ಮನೆ ಹತ್ತಾರು ವರ್ಷದಲ್ಲಿ ಹೆಚ್ಚಿದ್ದಲ್ಲ ಇದೆಲ್ಲಾ. ಯುಗಗಳೇ ಕಳೆದುಹೋಗಿವೆ..
ತನ್ನ ಪಾತ್ರದ ಪೋಕರಿತನ ಮೇರೆ ಮೀರಿ..
ಏನೆಲ್ಲಾ ಆಗಿಹೋಯಿತು ತನ್ನ ಈ ರಂಗಭೂಮಿಯಲ್ಲಿ.?
ತನ್ನ ಪಾತ್ರಗಳು ಪ್ರತಿದೇವರುಗಳೇ ತಾವೆಂಬಂತೆ ವರ್ತಿಸಿದವು.
ಹುಸಿ ನೈತಿಕತೆಯೇ ಸೊಗಸೆಂದುಕೊಂಡವು .
ಜಗದೆಲ್ಲವೂ ತನ್ನ ಮೋಜಿಗಾಗಿಯೇ ಎಂಬಂತೆ ಬಳಸಿ,
ಧರೆಯ ಝರಿ ತೊರೆ ಗಿರಿಗಳೆನ್ನದೆ ತನ್ನ ಕೊಳಕು ಹೆಜ್ಜೆಯೂರಿದವು.
ಕೈಯಾಡಿಸಿ, ಬಾಯಾಡಿಸಿ ಮೇಯ್ದ ಮೇಲೆ ಎಲ್ಲವನ್ನೂ ಕೊಂದು ತಾನೇ ಪರಮೋಚ್ಚ ಎಂಬಂತೆ ಮೆರೆದ ತನ್ನ ಸೃಷ್ಟಿಯನ್ನು ನೋಡುವುದು ಮೊದಮೊದಲಿಗೆ ಸೊಗಸೆನಿಸಿದರೂ ಬರುಬರುತ್ತಾ ಅತಿಯಾದದ್ದೆಲ್ಲವೂ ಅವನತಿಯನ್ನೇ ಕಾಣುವುದು ಎನಿಸಿ ಇನ್ನೂ ಕಾಯುವುದರಲ್ಲಿ ಅರ್ಥವಿಲ್ಲ ಎಂದುಕೊಂಡೆ ಅವನು ಹೀಗೆ ನಿರ್ಧರಿಸಿದ್ದು.!
ಕಾಣದ ಕಣವೊಂದನ್ನು ಅವನೇ ಕಳುಹಿದನೋ ಅಥವಾ ತನ್ನ ಪಾತ್ರದಿಂದಲೇ ಸೃಷ್ಟಿಸಿದನೋ ಅದು ಅವನಿಗೂ ಗೊತ್ತಾಗುತ್ತಿಲ್ಲ.
ಅಂತೂ ಜಗತ್ತು ತನ್ನ ಸುತ್ತಲೇ ಸುತ್ತುತ್ತಿದೆಯೆಂದು ಭ್ರಮಿಸಿದೂರಿಂದ ಆಟ ಪ್ರಾರಂಭಿಸಿದ.
ತಾನು ಸೃಷ್ಟಿಸಿದ ಪಾತ್ರ ತನ್ನ ಕೆಲಸ ಮಾಡಿಕೊಂಡಿರದೆ ಸೃಷ್ಟಿ ಸ್ಥಿತಿ ಲಯವೆಂಬ ತನ್ನ ಮೂಲ ಕೆಲಸಕ್ಕೇ ಮೂಗು ತೂರಿಸಲು ಬಂದದ್ದು ಕಂಡೂ ಸುಮ್ಮನೆ ಕುಂತರೆ ತನ್ನ ಅಸ್ತಿತ್ವಕ್ಕೇ ಕುತ್ತು ಎಂದರಿತು ಕೀಲಿ ಹಾಕಿ ಹಿಂದೆ ತಿರುಗಿಸಿದ್ದೇ ತಡ..!!
ಎಲ್ಲೆಡೆ ಹಾಹಾಕಾರ.
ತಾನುಳಿಯಬೇಕೆಂಬಾ ಮಮಕಾರ,
ಒಮ್ಮೆ ಈ ಸಂಕಷ್ಟದಿಂದ ಪಾರುಗಣಿಸೋ ಎಂಬ ಚೀತ್ಕಾರ,
ತುಸುತುಸುವೇ ಕರಗತೊಡಗಿದ ಅಹಂಕಾರ..
ತಾನಿಲ್ಲಿ ಏನೂ ಅಲ್ಲವೆನ್ನುವ ಸತ್ಯದ ಸಾಕಾರ…
ಸೂತ್ರಧಾರಿಗೆ ತನ್ನ ದಾಳ ಸರಿಯಾಗಿ ಉರುಳಿ,ಎಲ್ಲಾ ಸುಸೂತ್ರವಾಗುತ್ತಿರುವ ಕುರಿತು ಹೆಮ್ಮೆ.
ತನ್ನ ಪಾತ್ರಗಳ ಒಳಸೆಲೆಯನ್ನೇ ಹಣಿದು ನಿಂತಲ್ಲಿ ಕುಂತಲ್ಲಿ ಮರಣದ ಮಹಾ ನವಮಿ ನಡೆಸತೊಡಗಿದ.!
ಋಣವಿನ್ನು ಬಾಕಿಯಿರುವಲ್ಲಿ ಹೊಣೆಗಾರಿಕೆ ಮೆರೆದು ಮರಣದ ಭಯ ಹುಟ್ಟಿಸಿದ.!
ಸದಾ ಸಂಚಿಗಾಗಿಯೇ ಹಾತೊರೆಯುತ್ತಿದ್ದ ಪಂಚೆಂದ್ರಿಯಗಳನ್ನು ಮಟ್ಟ ಹಾಕಿದ.!
ತುಸುವಾದರೂ ಹದವಾಗಬಹುದೆಂಬಾ ಬಯಕೆಯಲಿ ಬದುಕನ್ನೇ ಬೇಗೆಯಾಗಿಸಿದ.
ಊರಿಂದೂರಿಗೆ,ರಾಜ್ಯದಿಂದ ರಾಜ್ಯಕ್ಕೆ ,ದೇಶದಿಂದ ದೇಶಕ್ಕೆ ಅಷ್ಟೇ ಏಕೆ..
ಇಡೀ ಭೂಮಂಡಲಕ್ಕೇ ತಾನು ಊದಿದ ಚರಮದ ವಾಲಗ ಕೇಳುವಂತೆ ಮಾಡಿ ,ಕೇಳಿದವರ ಜೋಳದ ಪಾಳಿಯೂ ಮುಗಿವಂತೆ ಮಾಡುವಲ್ಲಿ ಯಶಸ್ವಿಯಾಗಿ
” ಆಹಾ…! ನನ್ನ ಕೈ ಚಳಕವೇ” ಎನ್ನುತ್ತಾ ತೃಪ್ತಿಯ ನಗೆ ನಕ್ಕ.
ಇನ್ನು ತನ್ನ ಪಾತ್ರಗಳ ಸ್ವಾರ್ಥ ಅಳಿಯುವ,
ಧೂರ್ತತನ ದೂರಾಗುವ,
ಅಹಮ್ಮು ಕಳೆಯುವ ಕುರಿತು ಯೋಚಿಸಿ ಸಂಭ್ರಮಿಸಿದ.
ಒಮ್ಮೆ ನೋಡಿದರೆ ಇದು ಅವನ ಅಹಮ್ಮೂ ಅನಿಸುವುದಿಲ್ಲವೇ.?
ಇರಲಿ..
ಜಗದ ಹೊಗೆ, ಹೊದರುಗಳೆಲ್ಲ ಇನ್ನು ಮುಂದೆ ಅಳಿದು ತಾನು ಇಲ್ಲಿಂದಲೇ ಇಣುಕಿ ಅತಳ ವಿತಳ ರಸಾತಳಗಳ ಸಮಾಚಾರ ತಿಳಿಯುವುದಕ್ಕೆ ‘ಯಾರಲ್ಲಿ…?’ ಎನ್ನುತ್ತಾ ಎಲ್ಲವನ್ನೂ ಇಲ್ಲಿಂದಲೇ ನಿಭಾಯಿಸಬಹುದೆಂದುಕೊಂಡು ತನ್ನ ಪೂರ್ವದ ವೈಭವ ಮರುಕಳಿಸುವ ಕನಸು ಕಂಡ.
ಮರಣ ಮತ್ತು ಅನಾರೋಗ್ಯ ಕಲಿಸದ ಪಾಠವೆನಿದೆ ಲೋಕದಲ್ಲಿ ಎಂದುಕೊಳ್ಳುತ್ತಾ ಒಂದು ಘಳಿಗೆ ವಿಶ್ರಮಿಸುವ ಆಸೆಗೆ ಆದಿಶೇಷನ ಮೇಲೇರಿದ.
‘ಭುಸ್…!!!’
ಜೋಲಿ ಆಡಿ, ಲಾಲಿ ಹೇಳಿ ಮಲಗಿಸಬೇಕಿದ್ದವ ತನ್ನ ಮೂಗು ಮುಸುಡಿಗಳಿಂದೆಲ್ಲಾ ವಿಷ ಕಕ್ಕುತ್ತಿದ್ದಾನೆ…!
ಅದೂ ತಾನಿಲ್ಲಿ ತುಸು ಹೊತ್ತು ವಿರಮಿಸಲು ಬಂದದ್ದು ಎಂದು ಅರಿವಾದ ಮೇಲೂ..!
ಬೆಚ್ಚಿದ ಒಮ್ಮೆಗೆ..
ಎಲ್ಲೊ ತಪ್ಪಿದೆ ನಾನು ಎನ್ನುತ್ತಾ ಕೆಳಗೆ ನೋಡಿದರೆ ತಾನು ಪಾಠ ಕಲಿಸಿದೆ ಎಂದುಕೊಂಡ ತನ್ನ ಪಾತ್ರಗಳೆಲ್ಲವೂ ಹಿಂದೆಂದೂ ಇಲ್ಲದ ಅಸ್ಪೃಶ್ಯತೆಯ ಕನ್ನಡಕ ತೊಟ್ಟು ತನ್ನ ಸುತ್ತನ್ನೂ ನೋಡುತ್ತಿದ್ದಾವೆ..!
ಎಲ್ಲವನ್ನೂ ಎಲ್ಲರನ್ನೂ ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ, ಪ್ರೀತಿಸುವ ಲೋಕದ ಕಲ್ಪನೆಯಲ್ಲಿದ್ದ ಸೂತ್ರಧಾರನಿಗೆ ಭಾರಿ ಶಾಕ್.!
ಮತ್ತು ಹೀಗೊಂದು ಕನ್ನಡಕ ತೊಡುವುದೇ ನವನಾಗರಿಕತೆಯ ಪರಮೋಚ್ಚ ಕುರುಹೆಂಬಂತೆ ತನ್ನ ಪಾತ್ರಗಳು ವರ್ತಿಸುತ್ತಿವೆ.!
ತಿಕ್ಕಿತೊಳೆಯುತ್ತಲೆ ಇರುವ ವ್ಯಾಧಿಯೊಂದು ಜಗವ ವ್ಯಾಪಿಸುವ ಮುನ್ಸೂಚನೆ ದೊರೆತಾಗಿದೆ.
ಮಂಗಳ ಗ್ರಹದಲ್ಲಿ ಒಂದು ಬದಲಿ ನೆಲೆ ಹುಡುಕ ಹೊರಟವನನ್ನೂ ಹರಸಿದ ಸೂತ್ರಧಾರನಿಗೆ
ಅಂಗಳಕ್ಕಿಳಿದು ಪಕ್ಕದ ಬೀದಿಗೆ ಹೋಗಿ ಗಾಡಿಯಲ್ಲಿ ಕಾಲು ಕೆಜಿ ತರಕಾರಿ, ಹಾಲು ತರಬೇಕೆನ್ನುವಷ್ಟರಲ್ಲಿ ಪಾತ್ರ ತೋರುವ ಅಸಹನೆಗಳು ಭಯ ಹುಟ್ಟಿಸುತ್ತಿವೆ.
ಬೇಲಿ ದಾಟಿ ಒಳಬಂದ ಮೇಲೆ ತನ್ನ ಜತೆ ಬರಬಹುದಾದ ಅಪರಿಚಿತ ಅತಿಥಿಯ ಬಗ್ಗೆ ಮಾತು ಬಲ್ಲ ಮನುಷ್ಯರೆಲ್ಲರೂ ಆತಂಕಿತರಾಗಿದ್ದಾರೆ.!
ಮನೆಗೆ ಬಂದವರನ್ನು
‘ಏನು ಬಂದಿರಿ ..ಹದುಳವಿದ್ದಿರೇ.?’ ಎನ್ನಬೇಕೆಂದುಕೊಂಡರೂ
‘ಯಾಕೆ ಬಂದಿರಿ..ನಾವು ಸುಖದಿಂದಿರುವುದು ನಿಮಗೆ ಬೇಕಿಲ್ಲವೆ..?’ ಎನ್ನುವ ಹಂತಕ್ಕೆ ತಲುಪಿದ್ದು ಕಂಡು ತನ್ನ ಲೆಕ್ಕಾಚಾರ ಎಲ್ಲಿ ತಪ್ಪಿತೆಂದು ಗೊಂದಲದಲ್ಲಿದ್ದಾನೆ.
ಆದರೂ ..
ಅವ ದೇವರು..
ಲೋಕ ನಿಯಾಮಕ..
ತಾನು ಸೃಷ್ಟಿಸಿದ ಪಾತ್ರದಿಂದಲೇ ಅವನೊಂದು ಪಾಠ ಕಲಿತಿದ್ದಾನಂತೆ.
“ಮುಳ್ಳನ್ನು ಮುಳ್ಳಿನಿಂದಲೇ ಕೀಳು..!”
ಮೇಲೆ ಕುಂತವನಿಗೆ ಈ ಭಾಗಾಕಾರದ ಆಟದಲ್ಲಿ ಶೇ಼ಷ ಶೂನ್ಯವೇ ಆಗಬೇಕೆಂಬ ಆಸೆ ಹುಟ್ಟಿದರೆ…?
ಹುಟ್ಟಿದರೆ…?
ಅವ ಕೀಲಿಯನ್ನು ಇನ್ನೊಮ್ಮೆ ..
ಇನ್ನೊಂದೆರಡೇ ಎರಡು ಸುತ್ತು ಹಿಂದೆ ತಿರುಗಿಸಿದರೆ…?
ಧರೆ…?