Sunday, January 29, 2023

ಕ್ಲಾಸ್ ರೂಮ್ ಕೋಣೆಯೊಳಗಿಂದ…

Follow Us

ದಾದಾಪೀರ್ ಜೈಮನ್
response@134.209.153.225

ಆ ಹುಡುಗ ಮಾರ್ವಾಡಿ ಸಮುದಾಯಕ್ಕೆ ಸೇರಿದವನು. ಸಮುದಾಯವನ್ನು ಇಲ್ಲಿ ಎಳೆದು ತರುವುದು ಖಂಡಿತ ನನ್ನ ಉದ್ದೇಶವಲ್ಲ. ಆದರೆ ರಾಜಸ್ಥಾನ ಮೂಲದವರಾದ ಅವರು ಇಲ್ಲಿ ಉದ್ಯೋಗಕ್ಕಾಗಿ, ಜೀವನಕ್ಕಾಗಿ ಬಂದು ಅಕ್ಕಿಪೇಟೆ, ಚಿಕ್ಕಪೇಟೆ, ಕಾಟನ್ ಪೇಟೆ ಮುಂತಾದ ವಾಣಿಜ್ಯ ಪ್ರಧಾನ ಪ್ರದೇಶಗಳಲ್ಲಿ ವಾಸಿಸಲು ತೊಡಗಿ ಹಲವು ವರುಷಗಳೇ ಕಳೆದಿವೆ. ಅವರ ಮಕ್ಕಳು ಇಲ್ಲಿನ ಶಾಲೆಗಳಲ್ಲಿ ಓದುತ್ತವೆ. ಬೇಸಿಗೆ ರಜೆ ಬಂತೆಂದರೆ ಎರಡೆರಡು ತಿಂಗಳುಗಳು ರಾಜಸ್ಥಾನಕ್ಕೆ ತೆರಳಿ ಅಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿ ಮತ್ತೆ ಜೂನಿಗೆ ಮರಳುತ್ತಾರೆ. ಕೆಲಸ ಕಾರ್ಯ ಅಂತಂದಾಗ ಶುಭಕಾರ್ಯಗಳೂ ಸೇರಿರುತ್ತವೆ. ಶುಭಕಾರ್ಯ ಅಂತಂದಾಗ ಆಫ್ ದಿ ರೆಕಾರ್ಡ್ ಬಾಲ್ಯ ವಿವಾಹಗಳು ಕೂಡ ಸೇರಿರುತ್ತವೆ. ಕೆಲವು ತಿಂಗಳುಗಳ ಹಿಂದೆ ಯಾವುದೋ ರಾಜಕಾರಣಿ ನಮ್ಮನ್ನು ನೀವು ಗೆಲ್ಲಿಸಿದರೆ ನಿಮ್ಮ ಬಾಲ್ಯವಿವಾಹ ಪದ್ಧತಿಯಲ್ಲಿ ನಮ್ಮ ಸರಕಾರ ಮತ್ತು ಪೊಲೀಸ್ ವ್ಯವಸ್ಥೆ ಮೂಗು ತೂರಿಸುವುದಿಲ್ಲ ಎಂದು ಹೇಳಿಕೆ ಕೊಟ್ಟ ನೆನಪು ಇನ್ನು ಹಾಗೆಯೇ ಉಳಿದುಬಿಟ್ಟಿದೆ. ಮನೆಯಲ್ಲಿ ಅಮ್ಮ ಬಾಲಿಕಾ ವಧು, ಪುಟ್ಟ ಗೌರಿ ಮದುವೆ ಇತ್ಯಾದಿ ಧಾರಾವಾಹಿಗಳನ್ನು ನೋಡುತ್ತಿರುವಾಗ ‘ಅಯ್ಯೋ… ಇವಾಗೆಲ್ಲ ಯಾರಮ್ಮ ಚೈಲ್ಡ್ ಮ್ಯಾರೇಜ್ ಮಾಡ್ತಾರೆ. ಸುಮ್ನೆ ಇಂಥವೆಲ್ಲ ಯಾಕ್ ನೋಡ್ತಿ’ ಅಂತೆಲ್ಲ ಗೊಣಗುತ್ತಿದ್ದವನಿಗೆ ಇಲ್ಲಿನ ವಾಸ್ತವತೆ ನೋಡಿ ಎಲ್ಲಿಯೂ ಏನೂ ಬದಲಾಗುತ್ತಲೇ ಇಲ್ಲ ಎಂಬ ನಿರಾಶಾವಾದವನ್ನು ಮನಸಿನೊಳಗೆ ತುಂಬಿಕೊಳ್ಳುತ್ತದೆ. ಇಲ್ಲಿಯ ಗಂಡುಮಕ್ಕಳು ಬಿಡುವಿನ ಅವಧಿಯಲ್ಲಿ ಸ್ನೇಹಿತರ ಕೀಟಲೆಗಾಗಿ ‘ನಿಂದು ಬಿಡಪ್ಪ ಮದುವೆ ಫಿಕ್ಸ್ ಆಗಿಬಿಟ್ಟಿದೆ. ಮುಂದಿನ ವರ್ಷ ಫುಲ್ ಮಜಾ…’ ಎಂದು ರಾಜಾರೋಷವಾಗಿ ಪರಸ್ಪರ ಕಾಲೆಳೆದುಕೊಳ್ಳುತ್ತವೆ. ಮದುವೆ ಫಿಕ್ಸ್ ಆದವನು ಅಥವಾ ಆದವಳು ಒಂದು ನಮೂನೆಯ ವಿಚಿತ್ರವಾದ ಮತ್ತು ಸಹಜವಾದ ತಳಮಳಕ್ಕೆ ಒಳಗಾಗಿ ಮುಖ ಚಿಕ್ಕದುಮಾಡಿಕೊಳ್ಳುತ್ತವೆ. ಬಹುಷಃ ಇದಕ್ಕೆ ನಾನು ಊಹಿಸಿದ ಕಾರಣವಿಷ್ಟೇ; ಶಾಲೆಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬಾಲ್ಯವಿವಾಹ, ವರದಕ್ಷಿಣೆ ಇತ್ಯಾದಿ ಪಿಡುಗುಗಳು ಮತ್ತು ಅವುಗಳನ್ನು ತಡೆಗಟ್ಟುವ ಮಾರ್ಗಗಳು ಇತ್ಯಾದಿಗಳನ್ನು ಕಲಿಯುವ ಮಕ್ಕಳು ನಿಜಜೀವನದಲ್ಲಿ ಅದಕ್ಕೆ ತದ್ವಿರುದ್ಧವಾಗಿ ಬಾಲ್ಯವಿವಾಹಕ್ಕೆ ಒಳಗಾಗಬೇಕಾದ ಪರಿಸ್ಥಿತಿ. ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಗೆ ಇದೆಲ್ಲದರ ಅರಿವಿದ್ದರೂ ಅದು ಅವರಿಗೆ ಸಂಬಂಧವಿಲ್ಲದ ವಿಷಯವೆಂದೊ ಅಥವಾ ಬುದ್ಧಿವಾದ ಹೇಳಲು ಹೋಗಿ ಬ್ಯುಸಿನೆಸ್ ಕೆಡಿಸಿಕೊಳ್ಳುವುದು ಬೇಡವೆಂದೋ, ಸುಖಾಸುಮ್ಮನೆ ಇಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಯಾಕೆಂದೋ ಸುಮ್ಮನಾಗಿಬಿಡುತ್ತಾರೆ. ಇದು ತಾಕಲಾಟಗಳ ಪ್ರಶ್ನೆಯಾಯಿತು. ಕೆಲವು ಹುಡುಗರಿಗೆ ಶಾಲೆಯ ಕಲಿಕೆ ಮತ್ತು ಸಮಾಜದಲ್ಲಿನ ನಡವಳಿಕೆಗಳು ಬೇರೆ ಬೇರೆ ಎಂಬ ಸ್ಪಷ್ಟ ನಿಲುವು ಅದು ಹೇಗೋ ಬಂದುಬಿಟ್ಟಿರುತ್ತದೆ. ಮೊನ್ನೆ ಒಬ್ಬ ಹುಡುಗ ಮಧ್ಯಾಹ್ನದ ಊಟದ ಬಿಡುವಿನ ಅವಧಿಯಲ್ಲಿ ಮಾತನಾಡುತ್ತ ‘ಸರ್… ನಾನು ಹತ್ತನೇ ತರಗತಿ ಪಾಸಾದರೆ ಸಾಕು. ಆಮೇಲೆ ಅಂಗಡಿ ನೋಡಿಕೊಂಡು ಹೋದರೆ ಸಾಕು. ನಮ್ಮ ಮನೆಯಲ್ಲೂ ಯಾರೂ ಮಾರ್ಕ್ ತಗಿಬೇಕು ಅಂತ ಫೋರ್ಸ್ ಮಾಡುವುದಿಲ್ಲ. ಯಾರಾದ್ರೂ ಒಂದೆರಡು ಕೋಟಿ ವರದಕ್ಷಿಣೆ ಕೊಡೊ ಮನೆಯ ಹುಡುಗಿ ನೋಡಿ ಮದ್ವೆಯಾದ್ರೆ ಲೈಫ್ ಸೆಟ್ಲ್. ಮನೇಲಿ ಅದೇ ಪ್ಲಾನ್ ನಡೀತಿದೆ ಸಾರ್. ನಿಮ್ಮ ಮದುವೆ ಯಾವಾಗ ಸಾರ್?’ ಎಂಬ ಕೊನೆಯ ಅಡಿಷನಲ್ ಪ್ರಶ್ನೆಯನ್ನ ಸೇರಿಸಿ ನನ್ನ ಉತ್ತರಕ್ಕಾಗಿ ಕಾದ.

‘ಅಕಸ್ಮಾತ್ ಆ ಹುಡುಗಿ ವರದಕ್ಷಿಣೆ ಕೊಡಲಿಲ್ಲ ಅಂತಿಟ್ಟುಕೊಳ್ಳಪ್ಪಾ… ಆಗೇನು ಮಾಡುತ್ತಿ?’ ಎಂದು ಕೇಳಿದೆ.
‘ಅಯ್ಯೋ… ಕಾಟ ಕೊಟ್ಟರೆ ಆಯ್ತು. ಬರಬೇಕಾದ್ದು ಬಂದೆ ಬರತ್ತೆ’ ಎಂದು ಸಹಜವಾಗಿ ಸಿದ್ಧ ಉತ್ತರದಂತೆ, ಇದು ನಡೆಯುವುದು ಹೀಗೆಯೇ ಎನ್ನುವಂತೆ ಉತ್ತರ ಕೊಟ್ಟು ಕಿಲಕಿಲ ನಗುತ್ತ ತರಗತಿಯಿಂದ ಹೊರನಡೆದ.

ಒಂದು ಕ್ಷಣ ನನಗೆ ಅರಗಿಸಿಕೊಳ್ಳಲಾಗಲಿಲ್ಲ. ಒಬ್ಬ ಹತ್ತನೇ ತರಗತಿಯಲ್ಲಿ ಓದುವ ರಾಜಸ್ಥಾನಿ ಮಾರ್ವಾಡಿ ಹುಡುಗ ಅತ್ಯಂತ ಸ್ಪಷ್ಟವಾಗಿ ಈ ರೀತಿ ಮಾತನಾಡುತ್ತಿರುವುದು ನನಗೆ ಎಲ್ಲೋ ಆಳದಲ್ಲಿ ಭಯ ಹುಟ್ಟಿಸಿತು. ಮಕ್ಕಳು ಇತ್ತೀಚಿಗೆ ದಿನದ ಹತ್ತು ತಾಸು ಶಾಲೆಯಲ್ಲೇ ಕಳೆಯುತ್ತವೆ. ಎಂಟು ತಾಸು ನಿದ್ದೆ ಅಂತಿಟ್ಟುಕೊಳ್ಳೋಣ, ಇನ್ನು ಊಟ, ಟೀವಿ, ತಯಾರಾಗುವುದು ಇತ್ಯಾದಿಗಳಿಗೆ ಮೂರು ತಾಸು ತೆಗೆದರೂ ದಿನದಲ್ಲಿ ಇನ್ನುಳಿದದ್ದು ಮೂರೆ ತಾಸು. ಮನೆಯಲ್ಲಿ ಕಳೆಯುವ ಯಾವ ಹೊತ್ತಿನಲ್ಲಿ ಮಕ್ಕಳು ಇವನ್ನೆಲ್ಲ ಕಲಿತುಕೊಳ್ಳುತ್ತವೆ. ಇವನ್ನೆಲ್ಲ ವ್ಯವಸ್ಥಿತವಾಗಿ ಪೋಷಕರ ಕೃಪಾಪೋಷಿತವಾಗಿ ತಲೆಯಲ್ಲಿ ತುಂಬಲಾಗುತ್ತಿದೆಯಾ? ಅಥವಾ ನಡಾವಳಿಗಳು ಆನುಷಂಗಿಕವಾಗಿ ಮಕ್ಕಳ ಮನಸ್ಸನ್ನು ಆವರಿಸಿಕೊಳ್ಳುತ್ತದೆಯಾ? ಹಾಗಾದರೆ ಶಾಲೆಯ ಪಠ್ಯಗಳು, ಬೋಧನೆ ಎಲ್ಲಿ, ಯಾಕೆ ಮತ್ತು ಹೇಗೆ ಸೋಲುತ್ತಿವೆ. ಎಲ್ಲರೂ ಹೇಳುವಂತೆ ಕಲಿಯುವುದೆಲ್ಲ ಕೇವಲ ಪುಸ್ತಕದ ಬದನೆಕಾಯಿಯ?

ಇದೆ ಸಮಯಕ್ಕೆ ನನಗೆ ರಾಮಕೃಷ್ಣ ಪರಮಹಂಸರ ಜೀವನದಲ್ಲಿ ನಡೆದಿದೆ ಎನ್ನಲಾದ ಬೆಲ್ಲದ ಕಥೆ ನೆನಪಿಗೆ ಬರುತ್ತಿದೆ. ರಾಮಕೃಷ್ಣ ಪರಮಹಂಸರ ಬಳಿಗೆ ಒಬ್ಬ ತಾಯಿ ತನ್ನ ಮಗನನ್ನು ಕರೆದುಕೊಂಡು ಬಂದು ಜಾಸ್ತಿ ಬೆಲ್ಲ ತಿನ್ನುವುದನ್ನು ಬಿಡಲು ಹೇಳುವಂತೆ ಕೋರಿಕೊಂಡಳಂತೆ. ಪರಮಹಂಸರು ಆ ತಾಯಿಗೆ ಮುಂದಿನ ವಾರ ಬರುವುದಾಗಿ ಹೇಳಿದರಂತೆ. ಮುಂದಿನವಾರ ಹೋದಾಗ ಅದರ ಮುಂದಿನವಾರ ಬರುವಂತೆ ಹೇಳಿ ಹೀಗೆಯೇ ಮೂರು ಸಾರಿ ತಿರುಗಿಸಿ ಕೊನೆಯ ಬಾರಿ ಮಗುವನ್ನು ಬಳಿಗೆಳೆದುಕೊಂಡು ‘ಮಗೂ ಅತಿಯಾದ ಬೆಲ್ಲ ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇನ್ಮೇಲೆ ಅಷ್ಟು ಬೆಲ್ಲ ತಿನ್ನಬಾರದು’ ಅಂದರಂತೆ. ಆ ತಾಯಿಗೆ ಕೋಪಬಂದು ಇಷ್ಟನ್ನು ಮೊದಲಬಾರಿಯೇ ಹೇಳಬಹುದಿತ್ತಲ್ಲ ಎಂದದ್ದಕ್ಕೆ ‘ನಾನೂ ಬೆಲ್ಲ ತಿನ್ನುವುದು ಬಿಡಬೇಕಿತ್ತಲ್ಲಮ್ಮ…!’ ಎಂದರಂತೆ. ನಾವು ನುಡಿದಂತೆ ನಡೆದುಕೊಂಡು ಆಡಿದ ಸರಳ ಶಬ್ದಗಳಿಗೆ ಮಾತ್ರ ಸಮಾಜ ಬದಲಿಸುವಂತ ಶಕ್ತಿಯಿರಬೇಕು. ಸಮಾಜ ಸೋಲುತ್ತಿರುವುದು ಶಕ್ತಿಯಿರದ ಪುಂಖಾನುಪುಂಖ ಮಾತುಗಳಿಂದಲೇ ಎನ್ನುವುದರಲ್ಲಿ ನಿಜಾಂಶ ಇಲ್ಲದೆ ಇಲ್ಲ.

ಮತ್ತಷ್ಟು ಸುದ್ದಿಗಳು

vertical

Latest News

ಪಠಾಣ್ ಸಿನಿಮಾ ಗೆಲುವಿನ ಹಿಂದೆ ಐಎಸ್ಐ ಕೈವಾಡವಿದೆ : ಕಂಗನಾ ರಣಾವತ್

Newsics. Com ಮುಂಬೈ: ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಎಲ್ಲ ಅಡೆತಡೆಗಳನ್ನು ನೂಕಿಕೊಂಡು ರಿಲೀಸ್ ಆದ...

ಪೇಪರ್ ಡ್ರೆಸ್ ಧರಿಸಿ ಸಖತ್ ಹಾಟ್ ಅವತಾರದಲ್ಲಿ ನಿವೇದಿತಾ ಗೌಡ

Newsics.Com ಬೆಂಗಳೂರು: ನಿವೇದಿತಾ ಗೌಡ ಹೊಸ ಅವತಾರದಲ್ಲಿ ಬಂದಿದ್ದಾರೆ. ಈ ಹೊಸ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಕಪ್ಪು ಬಣ್ಣದ...

100ನೇ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಲೊಗೊ, ಜಿಂಗಲ್ ಆಹ್ವಾ-ಒಟ್ಟು 1.11 ಲಕ್ಷ ಬಹುಮಾನ

Newsics.Com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ನ 100ನೇ ಆವೃತ್ತಿಗಾಗಿ ವಿಶೇಷ ವಿನ್ಯಾಸದ ಲೊಗೊ ಹಾಗೂ ಜಿಂಗಲ್ಗಳನ್ನು...
- Advertisement -
error: Content is protected !!