Saturday, November 27, 2021

ಲಾಕ್ ಡೌನ್ ದಿನಗಳು

Follow Us

ಧುತ್ತನೆ ನೆನಪಾಗುವ ಹಳೆಯ ವಿಷಯಗಳು, ಕಳೆದುಹೋದ ಬಾಂಧವ್ಯಗಳು, ಚಿಗುರಿಕೊಂಡ ನಂಟುಗಳು ಎಲ್ಲವನ್ನೂ ಒಂದು ರೀತಿಯ ಹದ ಪಾಕದಲ್ಲಿ ನೋಡಲಾರಂಭಿಸುತ್ತೇವೆ. ಅಸ್ಪೃಶ್ಯತೆಯ ಕಟುತ್ವ, ಗೃಹಬಂಧಿಗಳ ಅಳಲು, ಮುಚ್ಚಿದ ಬಾಗಿಲುಗಳ ಹಿಂದಿರಬಹುದಾದ ಚಡಪಡಿಕೆ, ನರಳಿಕೆ, ಅಂತೆಯೇ ಸಾಂತ್ವನ ಹೀಗೆ ಚರಿತ್ರೆಯ ಹಬೆಯಾಡುವ ಸತ್ಯಗಳ ಬಗ್ಗೆ ಯೋಚಿಸಲಾರಂಭಿಸುತ್ತೇವೆ.

===

♦ ಜಯಶ್ರೀ ಬಿ. ಕದ್ರಿ
response@134.209.153.225
newsics.com@gmail.com

ಹೆಚ್ಚು ಕಡಿಮೆ ಒಂದು ತಿಂಗಳಿನ ಗೃಹ ಬಂಧನಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಕೊರೋನಾ ಮಹಾ ಮಾರಿ ನಿಧಾನವಾಗಿಯಾದರೂ ಹಿಮ್ಮೆಟ್ಟುತ್ತಿರುವ ಲಕ್ಷಣಗಳಿವೆ. ಕೊರೋನಾದಿಂದಾದ ಪ್ರಯೋಜನವೆಂದರೆ ನಾವು ಮಿತವ್ಯಯವನ್ನು ರೂಢಿಸಿಕೊಂಡದ್ದು. ಯಾಕೆ ಬದುಕುತ್ತೇವೆ? ನಮ್ಮ ಜೀವನದ ಆದ್ಯತೆಗಳೇನು? ಈ ರೀತಿ ತಾತ್ವಿಕವಾಗಿ ಯೋಚಿಸಲಾರಂಭಿಸುತ್ತೇವೆ. ಧುತ್ತನೆ ನೆನಪಾಗುವ ಹಳೆಯ ವಿಷಯಗಳು, ಕಳೆದುಹೋದ ಬಾಂಧವ್ಯಗಳು, ಚಿಗುರಿಕೊಂಡ ನಂಟುಗಳು ಎಲ್ಲವನ್ನೂ ಒಂದು ರೀತಿಯ ಹದ ಪಾಕದಲ್ಲಿ ನೋಡಲಾರಂಭಿಸುತ್ತೇವೆ. ಅಸ್ಪೃಶ್ಯತೆಯ ಕಟುತ್ವ, ಗೃಹಬಂಧಿಗಳ ಅಳಲು, ಮುಚ್ಚಿದ ಬಾಗಿಲುಗಳ ಹಿಂದಿರಬಹುದಾದ ಚಡಪಡಿಕೆ, ನರಳಿಕೆ, ಅಂತೆಯೇ ಸಾಂತ್ವನ ಹೀಗೆ ಚರಿತ್ರೆಯ ಹಬೆಯಾಡುವ ಸತ್ಯಗಳ ಬಗ್ಗೆ ಯೋಚಿಸಲಾರಂಭಿಸುತ್ತೇವೆ.
ಚರಿತ್ರೆಯ ಪುಟಗಳಲ್ಲಿ ಯುದ್ಧ ಕಾಲದಲ್ಲಿ ಅನಿವಾರ್ಯವಾಗಿ ಮನೆಯಲ್ಲಿಯೇ ಉಳಿದುಕೊಳ್ಳಬೇಕಾಗಿದ್ದಾಗ ಅವರು ಹೇಗೆ ಬದುಕಿದ್ದಿರಬಹುದು? ಅವರು ಸಾವಿಗೆ, ಅನಿಶ್ಚಿತತೆಗೆ ಮುಖಾಮುಖಿಯಾಗಿದ್ದು ಹೇಗೆ? ಅವರನ್ನು ಕೊನೆಯ ತನಕ ಬದುಕಿಸಿದ ಆಶಾ ಭಾವ ಯಾವುದಿರಬಹುದು? ನೇಮಿ ಚಂದ್ರ ಅವರ ‘ಯಾದ್ ವಶೇಮ್’, ಆನ್ನೆ ಫ್ರಾಂಕ್ ಅವರ ‘ಡೈರಿ ಎ ಲಿಟ್ಲ್ ಗರ್ಲ್’ ನೆನಪಾಗುತ್ತಾಳೆ. ಹಾಗೆ ನೋಡಿದರೆ ಈ ರೀತಿಯ ಸಂಧಿ ಕಾಲದಲ್ಲಿಯೇ ನಮ್ಮೊಳಗಿನ ಬಂಧಗಳ ಗಟ್ಟಿತನ, ನಮ್ಮದಾದ ಪ್ರೀತಿ, ಸ್ನೇಹ, ವಾತ್ಸಲ್ಯಗಳು ಗೊತ್ತಾಗುವುದಂತೆ. ನಮ್ಮೊಳಗಿನ ಆಧ್ಯಾತ್ಮದ ಸೆಳಕುಗಳು, ಮನದ ಪದರುಗಳು, ಅಂತರಂಗದ ಕಣ್ಣು ತೆರೆಯುವ ಸಮಯ ಕೂಡ. ಅಬೋಧ ಮಗುವೊಂದರ ಕಣ್ಣ ರೆಪ್ಪೆಯಲ್ಲಿನ ಅಶ್ರು ಬಿಂದುವಿನಂತೆ, ಎಲ್ಲರ ತುದಿ ಬೆರಳಿಗಂಟಿರುವ ದುಃಖದ ಸ್ಪರ್ಶದಂತೆ, ಲೋಕದ ಹೃದಯ ತಂತಿ ಮೀಟುವ ಕಾಲ ಇದು. ಈ ಸಂಧಿ ಕಾಲದಲ್ಲಿ ನಮ್ಮನ್ನು ಪೆÇರೆಯಬಹುದಾದದ್ದು ನಮ್ಮ ಹವ್ಯಾಸಗಳು, ಪುಸ್ತಕಗಳು. ಸಂಗಿತ, ಸಾಹಿತ್ಯ, ದೇವರಲ್ಲೋ, ಇನ್ನಾವುದೋ ಜಗತ್ತನ್ನು ಕಾಯುವ ಶಕ್ತಿಯಲ್ಲಿ ನಂಬಿಕೆ.
ಈ ಸಂದರ್ಭದಲ್ಲಿ ಅಮೆರಿಕದ ಚಿಂತಕ ಥೋರು ಅವರ ‘ವಾಲ್ಡನ್’ ಕೃತಿ ನೆನಪಾಗುತ್ತದೆ. ಎರಡು ವರ್ಷಗಳ ಕಾಲ ಒಂದು ಪ್ರಯೋಗದಂತೆ ಆತ ಒಂದು ಕಾಡಿನಲ್ಲಿ ವಾಲ್ಡನ್ ಎಂಬ ಕೊಳದ ಪಕ್ಕದಲ್ಲಿ ಬಹಳ ಕಡಿಮೆ ಸವಲತ್ತುಗಳೊಂದಿಗೆ ಬದುಕುತ್ತಾನೆ. ಸಹಜವಾಗಿ, ನಿಸರ್ಗದೊಂದಿಗೆ ಒಂದಾಗಿ ಬದುಕಿದ ಈ ವರ್ಷಗಳು ಅವನ ಜೀವನವನ್ನೇ ಬದಲಿಸುವಷ್ಟು ಶಕ್ತವಾಗಿದ್ದವು. ಥೋರು ಪ್ರತಿಪಾದಿಸುವುದೆನೆಂದರೆ ಸಹಜವಾಗಿ, ಸರಳವಾಗಿ ಬದುಕುವುದರಲ್ಲಿಯೇ ಆನಂದ ಇದೆ. ಹೊಸ ಬಟ್ಟೆಗಳು, ಫ್ಯಾಷನ್, ದೊಡ್ಡ ದೊಡ್ಡ ಬಂಗಲೆಗಳು, ಐಷಾರಾಮಿ ಜೀವನ ಇವೆಲ್ಲ ನಿಜವಾಗಿಯೂ ನಮ್ಮ ಬದುಕಿಗೆ ಬೇಕಾಗಿಯೇ ಇಲ್ಲ. ವಾಲ್ಡನ್ ಸರೋವರದ ಪಕ್ಕದ ಪುಟ್ಟ ಕಾಟೇಜಿನಲ್ಲಿ ಆತ ಹಕ್ಕಿಗಳ ಸ್ವರ, ಸರೋವರದ ಅಲೆಗಳ ವಿನ್ಯಾಸ, ಮೊಲ, ಅಳಿಲು ಓಡಾಡುವ ಸದ್ದು, ಸೂರ್ಯ ಉದಯಿಸುವುದನ್ನು, ಮಂಜು ಸರಿಯುವುದನ್ನು, ಕೊಳದ ಮೇಲೆ ಚಳಿಗಾಲದಲ್ಲಿ ಐಸಿನ ಶೀಟ್ ಸರಿಯುವುದನ್ನು, ಮೋಡಗಳು ಬೆಟ್ಟಗಳ ಮೇಲೆ ಇಳಿಯುವುದನ್ನು ಅಂತರಂಗಕ್ಕಿಳಿಸಿಕೊಳ್ಳುತ್ತಾನೆ.
ಹಕ್ಕಿ ಹಾರಿ ಬಂದು ಒಂದು ಮರದಲ್ಲಿ ಕುಳಿತುಕೊಳ್ಳುವುದನ್ನು, ಬೇರೆ ಬೇರೆ ಹಕ್ಕಿಗಳ ಕೂಜನವನ್ನು ಗುರುತಿಸಲಾರಂಭಿಸುತ್ತಾನೆ. ಗಿಡ ಮರಗಳ ಉಸಿರಿನ ಸದ್ದನ್ನು ಗುರುತಿಸುತ್ತಾನೆ. ನಿಧಾನವಾಗಿ ನಿಸರ್ಗದಲ್ಲಿರುವ ಸಾಮರಸ್ಯವನ್ನು, ಸಂಗೀತವನ್ನು ಅರಿತುಕೊಳ್ಳುತ್ತಾನೆ. ಕತ್ತಲೆಯ ಕಪ್ಪನ್ನು, ಮೌನದ ಸದ್ದಿಲ್ಲದಿರುವಿಕೆಯನ್ನು, ಆಕಾಶ, ತಾರೆ, ಸೂರ್ಯ, ಮಳೆಯ ಮೃದುತ್ವ, ರಭಸ, ಗಾಳಿಯ ತಂಪು, ಹಿಮದ ಬಿಳುಪು, ಹೂವಿನ ಸುಗಂಧ, ಹುಲ್ಲುಗಾವಲಿನ ಕಂಪು ಅವನೆದೆಯಲ್ಲಿ ಮೆಲ್ಲನೆ ಇಳಿದು ಬಿಡುತ್ತವೆ. ಸರೋವರದಲ್ಲಿ ತೇಲುವ ಹಕ್ಕಿಗಳು, ಕಿಟಿಕಿಯಲ್ಲಿ ಬಂದು ಆತನೊಂದಿಗೆ ಸಂಭಾಷಿಸುವ ಹಕ್ಕಿ, ತಣ್ಣನೆ ಪಾರದರ್ಶಕವಾಗಿರುವ ನೀರಿನಲ್ಲೇಳುವ ಅಲೆಗಳು, ಮರಗಳ ಸುಗಂಧ, ಪಾರಿವಾಳಗಳು, ಗುಬ್ಬಚ್ಚಿ, ಮರಕುಟಿಕ, ರಾಬಿನ್ ಹಕ್ಕಿ, ಇಲಿ, ಹಸು, ಗೂಬೆ, ಬೆಕ್ಕು ಎಂದೆಲ್ಲ ಆತ ವಿಶ್ವದ ಚೈತನ್ಯವನ್ನು ಬೆರಗಿನಿಂದ ವೀಕ್ಷಿಸಲಾರಂಭಿಸುತ್ತಾನೆ. ಇವನ್ನೆಲ್ಲ ಓದಿದಾಗ ನಮಗೂ ಥೋರುವಿನಂತೆಯೋ, ಫುಕುವೋಕಾನಂತೆಯೋ ಬದುಕಬೇಕೆಂದನಿಸದಿರದು.
‘ಲಾಕ್ ಡೌನ್ ದಿನಗಳು’ ನಾವು ಅಂತರ್ಮುಖಿಗಳಾಗಲು ಸದವಕಾಶ. ಅನಗತ್ಯವಾಗಿ ಮನೆಗೆ ತಂದು ರಾಶಿ ಹಾಕಿದ ಪುಸ್ತಕಗಳು, ಫ್ಯಾಷನ್ ಎಂದೋ, ಸಣ್ಣಗಾದಾಗ ಹಾಕುತ್ತೇವೆಂದೋ, ಸೇಲ್ ನಲ್ಲಿ ಕ|ಡಿಮೆ ದರಕ್ಕೆ ಸಿಕ್ಕಿತೆಂದೋ ಕೂಡಿಟ್ಟ ಬಟ್ಟೆಗಳು, ಎಸೆಯಲು ಮನಸಾಗದೆ ಹಾಗೆಯೇ ಇಟ್ಟ ಇಪ್ಪತ್ತು ವರ್ಷ ಹಳೆಯ ಕ್ಯಾಸೆಟ್ಟುಗಳು, ಡಿ ವಿಡಿಗಳು ಎಲ್ಲವನ್ನೂ ವಿಂಗಡಿಸಿ ಮನೆಯಲ್ಲೊಂದು ಸ್ವಚ್ಛತಾ ಅಭಿಯಾನ ಮಾಡಬಹುದು. ಮನೆ ಮಂದಿಯೆಲ್ಲ ಒಟ್ಟಾಗಿ ಕೂತು ಊಟ ಮಾಡಿ, ಅಡುಗೆ ಮಾಡಿ, ‘ಹಾಗೆಯೇ’ ಹರಟೆ ಹೊಡೆದು ಯಾವ ಕಾಲವಾಗಿತ್ತೋ ಅದಕ್ಕೂ ಈಗ ಸುಸಮಯ. ಹಳೆಯ ಆಲ್ಬಂಗಳನ್ನು ತಿರುವಿ ಕಣ್ಣೀರಾಗಲು, ಆಟೋಗ್ರಾಫ್ ಗಳನ್ನು ನೋಡಿ ನಸು ನಗಲು, ಸುಖಾಸುಮ್ಮನೆ ಆಕಾಶ ನೋಡಿ ತಾರೆಗಳನ್ನು ಎಣಿಸಲು, ನಾಳೆಯ ಕೆಲಸದ ‘ಡೆಡ್ ಲೈನ್’ ಇಲ್ಲದೆ ಕೂಲಾಗಿ ಇರಲೂ ಇದು ಸಕಾಲ. ‘ಟೈಂ ಇದ್ದಿದ್ರೆ ನಾನೂ ಡಯಟ್ ಮಾಡ್ತಿದ್ನಪ್ಪ’ ಎಂದು ಹೇಳುತ್ತಿದ್ದವರನ್ನು ಲಘುವಾಗಿ ಛೇಡಿಸಲೂ ಇದು ಸುಸಂದರ್ಭ.
ಮುಖ್ಯವಾಗಿ ಈ ದಿನಗಳಲ್ಲಿ ನಾವು ರೂಢಿಸಿಕೊಳ್ಳಬೇಕಾಗಿರುವುದು ‘ತಾಳ್ಮೆ’. ನಮ್ಮ ದೈನಂದಿನ ಜೀವನದಲ್ಲಿ ಧಡ ಧಡನೆ ಓಡಾಡಿಯೇ ರೂಢಿ ನಮಗೆ. ಈಗ ಗಕ್ಕನೆ ನಮ್ಮನ್ನು ಹಿಡಿದಿರಿಸಿ ಕಳೆದು ಹೋದ ಬದುಕಿನ ಬಗ್ಗೆ, ಕಾಲ ಪಥದಲ್ಲಿ ಭೇಟಿಯಾದ ಜೀವಗಳ ಬಗ್ಗೆ ಯೋಚಿಸದೆ ಇರಲಾರೆವು. ದೇಶ ‘ಲಾಕ್ ಡೌನ್’ ಆದರೂ ನಾವು, ನಮ್ಮ ಅಂತರಂಗ ಲಾಕ್ ಡೌನ್ ಆಗದಿರುವುದು ಮುಖ್ಯ. ನಮ್ಮ ಸಿ ಎಲ್, ಇ ಎಲ್ ಗೆ ಬಡಿದಾಡುವ ನಾವು ಮನೆ ಕೆಲಸದವಳಿಗೆ ಒಂದು ತಿಂಗಳು ಫ್ರೀಯಾಗಿ ಕೊಟ್ಟು ಅವಳ ಮೊಗದಲ್ಲರಳುವ ನಿರಾಳ ನಗುವಿಗೆ, ಕೃತಜ್ನತೆಯ ಸೆಳಕಿಗೆ, ‘ಕೊಡುವ’ ಸಂತೋಷಕ್ಕೆ ಭಾಗಿಯಾಗೋಣ. ಬದುಕು ಶಾಶ್ವತವಲ್ಲ ಎಂಬ ಅರಿವಿರುವ ಕಾರಣದಿಂದಲೇ ಯಾವುದೋ ಕಾರಣಕ್ಕೆ ಮುನಿಸಿಕೊಂಡ ಗೆಳೆಯ ಗೆಳತಿಯರೋ, ಆತ್ಮೀಯರಿಗೋ ಪುಟ್ಟದಾದ ಮೆಸೇಜ್ ಕಳಿಸಿ ರಾಜಿಯಾಗೋಣ. ಆ ಮೂಲಕ ಆ ನಲ್ಮೆಯ ಜೀವಗಳ ಕಣ್ಣ ಬೆಳಕಿಗೆ ಕಾರಣರಾಗೋಣ. ಈ ದಿನಗಳನ್ನೊಂದು ಪಿಕ್ ನಿಕ್ ನಂತೆಯೋ, ಮೈಗಳ್ಳತನದಿಂದಲೋ, ಸಿಡಿಮಿಡಿಯಿಂದಲೋ ಕಳೆಯುವ ಬದಲು ಒಂದೊಂದು ದಿನವೂ ದೇವರಿತ್ತ ವರ ಎಂದು ಚಿಂತನಶೀಲರಾಗಿ ಕಳೆಯೋಣ, ಹೃದಯವಂತರಾಗೋಣ. ‘ಲೋಕಾ ಸಮಸ್ತಾ ಸುಖಿನೋ ಭವಂತು.’

ಮತ್ತಷ್ಟು ಸುದ್ದಿಗಳು

Latest News

ನಕ್ಸಲ್ ಮುಖಂಡ ಮಡ್ವಿ ಭೀಮಾ ಎನ್ ಕೌಂಟರ್

newsics.com ರಾಯ್ ಪುರ: ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಡ್ವಿ ಭೀಮಾ , ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.  ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು...

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ ಮಾಡಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾಕ್ಕೆ ಹಲವು...

ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಎಸ್ಐ ಅಮಾನತು

newsics.com ವಾರಂಗಲ್(ಆಂಧ್ರಪ್ರದೇಶ): ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇಲೆ ಪೊಲೀಸ್ ಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವಾರಂಗಲ್‌ನ ‍ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಕ್ ಶಾಪಿ ಅಮಾನತುಗೊಂಡಿರುವ ಪೊಲೀಸ್ ಅಧಿಕಟರಿ. ನವೆಂಬರ್ 18ರಂದು ವಿವಾಹಿತೆಯ...
- Advertisement -
error: Content is protected !!