ಪುಲ್ವಾಮಾ ದಾಳಿಗೆ ಇಂದು ಎರಡು ವರ್ಷ. ದೇಶವಾಸಿಗಳು ದಾಳಿಯನ್ನು ಸ್ಮರಿಸಿಕೊಂಡು ದುರ್ಘಟನೆಯಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ “ಪುಲ್ವಾಮಾ ಅಟ್ಯಾಕ್’ ಟ್ರೆಂಡ್ ಆಗಿದ್ದು, “ಎಂದಿಗೂ ಮರೆಯುವುದಿಲ್ಲ, ಎಂದಿಗೂ ಕ್ಷಮಿಸುವುದಿಲ್ಲ’ ಎನ್ನುವ ವಾಕ್ಯಗಳು ದೇಶದ ಮನಸ್ಥಿತಿಯನ್ನು ಬಿಂಬಿಸುತ್ತಿವೆ.
ಪುಲ್ವಾಮಾ ದುರ್ಘಟನೆಗೆ ಎರಡು ವರ್ಷ
newsics.com Features Desk
2019 , ಫೆಬ್ರವರಿ 14. ದೇಶಕ್ಕೆ ದೇಶವೇ ಮಧ್ಯಾಹ್ನದ ಊಟವನ್ನೋ, ನಿದ್ದೆಯನ್ನೋ ಮುಗಿಸಿ ಎದ್ದು ನಿರಾಳವಾಗಿದ್ದ ಸಮಯದಲ್ಲಿ ಅತ್ತ ಕಾಶ್ಮೀರದ ಆವಂತಿಪುರದ ಬಳಿ ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರ ದಾಳಿ ನಡೆದಿತ್ತು. 2500ಕ್ಕೂ ಅಧಿಕ ಸಂಖ್ಯೆಯ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ 78 ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ನೋಡುನೋಡುತ್ತಿರುವಂತೆಯೇ ಯೋಧರಿದ್ದ ಒಂದು ಬಸ್ ಗೆ ಮಾರುತಿ ಇಕೋ ಕಾರೊಂದು ಬಂದು ಗುದ್ದಿತು. ಅಷ್ಟೆ, ಬಸ್ ಕ್ಷಣಾರ್ಧದಲ್ಲಿ ಸ್ಫೋಟಗೊಂಡು ಅದರಲ್ಲಿದ್ದ ಎಲ್ಲ 40 ಯೋಧರು ಹುತಾತ್ಮರಾದರು. ಸ್ಫೋಟಕಗಳನ್ನು ಹೊಂದಿದ್ದ ಕಾರಿನಲ್ಲಿ ಬಂದ ಭಯೋತ್ಪಾದಕರು ಆತ್ಮಾಹುತಿ ದಾಳಿ ನಡೆಸಿದ್ದರು. ಕಾಶ್ಮೀರದ ರಕ್ತಸಿಕ್ತ ಇತಿಹಾಸದಲ್ಲಿ ಮೂವತ್ತು ವರ್ಷಗಳ ಬಳಿಕ ನಡೆದ ಭಯಾನಕ ದಾಳಿ ಇದಾಗಿತ್ತು.
ಫೆಬ್ರವರಿ 14. ಇಡೀ ವಿಶ್ವ ಪ್ರೇಮಿಗಳ ದಿನದ ಅಂಗವಾಗಿ ನಲಿಯುತ್ತದೆ. ಭಾರತದಂಥ ಸಾಂಪ್ರದಾಯಿಕ ದೇಶದಲ್ಲೂ ನೇರವಾಗಿಯೋ, ಪರೋಕ್ಷವಾಗಿಯೋ ಜನರು ಪ್ರೇಮಿಗಳ ದಿನವನ್ನು ಸ್ಮರಿಸಿಕೊಳ್ಳುತ್ತಾರೆ. ಒಂದಿಷ್ಟು ವಿನೋದ ಮಾಡಿಕೊಳ್ಳುವುದೂ ಸಾಮಾನ್ಯ. ಆದರೆ, ಇದನ್ನೂ ಮೀರಿಸಿದ ನೋವಿನ ಭಾವ ಅದೆಷ್ಟು ತೀವ್ರವಾಗಿದೆ ಎಂದರೆ, ಇಂದು ಟ್ವಿಟರ್ ನಲ್ಲಿ ಪುಲ್ವಾಮಾ ದಾಳಿಯ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ದೇಶಕ್ಕೆ ದೇಶವೇ ಮಡಿದ ಯೋಧರಿಗಾಗಿ ಕಂಬನಿ ಮಿಡಿಯುತ್ತಿದೆ.
ಅಂದು ಪುಲ್ವಾಮಾ ದಾಳಿಯ ಹೊಣೆ ಹೊತ್ತಿದ್ದು ಪಾಕಿಸ್ತಾನ ಮೂಲದ ಉಗ್ರ ಗುಂಪು ಜೈಶ್-ಎ-ಮೊಹಮ್ಮದ್. ಅಷ್ಟೇ ಅಲ್ಲ, ಆತ್ಮಾಹುತಿ ದಾಳಿಕೋರ ಆದಿಲ್ ಅಹ್ಮದ್ ಎಂಬಾತನ ವಿಡಿಯೋವನ್ನೂ ಬಿಡುಗಡೆ ಮಾಡಿತು. ಘಟನೆಗೆ ಪ್ರತೀಕಾರವಾಗಿ, ಕೆಲವೇ ದಿನಗಳಲ್ಲಿ ಅಂದರೆ ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ವಾಯುದಾಳಿ ನಡೆಸಿ ನೂರಾರು ಉಗ್ರರನ್ನು ನಾಶ ಮಾಡಿತು. ಪುಲ್ವಾಮಾ ದಾಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದಲ್ಲದೆ, ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೂ ಯಾವುದೇ ರಾಷ್ಟ್ರಗಳು ವಿರೋಧ ತೋರಲಿಲ್ಲ. ಪಾಕಿಸ್ತಾನ ಕುರಿತ ಭಾರತದ ನಿಲುವು ಇನ್ನಷ್ಟು ಬಿಗಿಯಾಗಲು ಈ ಘಟನೆಯೊಂದು ಮೈಲಿಗಲ್ಲಾಯಿತು.
ದೇಶವಾಸಿಗಳೆಲ್ಲರೂ ದೇಶ ಕಾಯೋಣ
ಪುಲ್ವಾಮಾ ದಾಳಿಗೆ ಇಂದು ಎರಡು ವರ್ಷ. ದಾಳಿಯಲ್ಲಿ ಮಡಿದ ಯೋಧರನ್ನು ಸ್ಮರಿಸಿಕೊಳ್ಳುವುದರ ಜತೆಗೆ, ಅವರ ಕುಟುಂಬದ ಯೋಗಕ್ಷೇಮದ ಕುರಿತು ಗಮನ ಹರಿಸುವುದೂ ದೇಶದ ನಾಗರಿಕರ ಕರ್ತವ್ಯ. ಇನ್ನೊಂದು ಗಮನಾರ್ಹ ವಿಚಾರವೆಂದರೆ, ಈ ದಾಳಿಗೆ ಸ್ಥಳೀಯ ಪುಲ್ವಾಮಾ ಜನರ ಸಹಕಾರವೂ ಇದ್ದಿದ್ದು ನಂತರ ನಡೆದ ವಿಚಾರಣೆಯಲ್ಲಿ ಬಹಿರಂಗವಾಗಿತ್ತು. ಯೋಧರಷ್ಟೇ ದೇಶ ಕಾಯಲು ಸಾಧ್ಯವಿಲ್ಲ. ಧರ್ಮ, ಸಿದ್ಧಾಂತ, ನಂಬಿಕೆ ಇತ್ಯಾದಿ ಯಾವುದೇ ಕಾರಣಗಳಿಗೂ ನೇರವಾಗಲೀ, ಪರೋಕ್ಷವಾಗಲೀ ದೇಶ ವಿರೋಧಿಗಳೊಂದಿಗೆ ಕೈ ಜೋಡಿಸದೆ ಇರುವುದು, ಇಂಥದ್ದೇನಾದರೂ ನಡೆಯುತ್ತಿರುವ ಕುರಿತು ಚಿಕ್ಕಪುಟ್ಟ ಸಂದೇಹ ಮೂಡಿದರೂ ಆಡಳಿತದ ಗಮನಕ್ಕೆ ತಂದು ದೇಶ ಕಾಯುವ ಕೆಲಸವನ್ನು ಎಲ್ಲ ನಾಗರಿಕರೂ ಮಾಡಬೇಕಿದೆ.