Tuesday, April 13, 2021

ಲಾಭ- ನಷ್ಟಗಳ ತಕ್ಕಡಿಯೊಳಿಟ್ಟು ಬದುಕಿನ ಸಂತೋಷ ತೂಗಬಹುದೇ?

♦ ಸ್ಮಿತಾ ಅಮೃತರಾಜ್, ಸಂಪಾಜೆ 
 ಅಂಕಣಕಾರರು 
response@newsics.com 
newsics.com@gmail.com
 
ಲಾಭದ ದೃಷ್ಟಿಯಲ್ಲಿ ಹಸನಾದ ಪೈರಿನ ಗದ್ದೆಗಳೆಲ್ಲಾ ಸೈಟುಗಳಾಗಿ ಮಾರ್ಪಡುವಾಗ, ಚೊಂಬಿನ ನೊರೆಹಾಲು ಮರೆತು ಹ
ಸುಗೂಸುಗಳು ಪ್ಯಾಕೀಟು ಹಾಲು ಬಯಸುವಾಗ, ನೆಲ ಇಂಚಿಂಚೇ ಕರಗಿ ಕಾಂಕ್ರೀಟ್ ಕಟ್ಟಡ ಆಗುವಾಗ, ಪ್ಲಾಸ್ಟಿಕ್‍ನ ಕಬಂಧ ಬಾಹುಗಳಿಂದ ತಪ್ಪಿಸಲು ಸಾಧ್ಯವಾಗದೆ ಒದ್ದಾಡುವಾಗ, ಘೋರ ದುರಂತಗಳು ಸಂಭವಿಸಿದರೂ ಜಾಣ ಕುರುಡರಂತೆ ಜನ ವರ್ತಿಸುವಾಗ ನಿಜಕ್ಕೂ ನನ್ನೊಳಗಿನ ಕವಿತೆ ಬೆಚ್ಚಿ ಬೆದರುತ್ತದೆ. ಎಲ್ಲವನ್ನೂ ಲಾಭ- ನಷ್ಟಗಳ ತಕ್ಕಡಿಯೊಳಗಿಟ್ಟು ಬದುಕಿನ ಸಂತೋಷವನ್ನು ತೂಗಿ ಅಳೆಯಲು ಸಾಧ್ಯವೇ?

                

 ನಾ ನು ಪದವಿ ತರಗತಿಯಲ್ಲಿ ಕಲಿಯುತ್ತಿದ್ದಾಗ ಜತೆಗಿದ್ದ ಗೆಳತಿಯೊಬ್ಬಳು ಬಹುಶಃ ಹೆಚ್ಚು ಕಡಿಮೆ 20 ವರುಷಗಳ ನಂತರ ಯಾರಿಂದಲೋ ನಂಬರು ಪಡೆದು ನನಗೆ ಮೆಸೇಜಿಸಿದ್ದಳು. ನಾನು ಆಕೆಯೊಂದಿಗೆ ಮಾತನಾಡುತ್ತಾ ಗಂಟೆ ಮೂರಾಯಿತು, ಈಗ ನನ್ನ ಹಟ್ಟಿ ಕೆಲಸದ ಸಮಯ. ನಂತರ ಸಿಗುವೆ ಅಂದೆ. ಉಪನ್ಯಾಸಕಿಯಾಗಿರುವ ಆಕೆ ಅಚ್ಚರಿಯಿಂದ ನೀನು ಹಟ್ಟಿ ಕೆಲಸ ಮಾಡುತ್ತೀಯಾ? ನಂಬಲಾಗುತ್ತಿಲ್ಲ ಅಂತ ಉಸುರಿದ್ದಳು. ನೀನು ಉಪನ್ಯಾಸಕಿಯಾಗಿ ನಿಗದಿತ ಸಮಯಕ್ಕೆ ಪಾಠ ಮಾಡುವುದು ಎಷ್ಟು ಮುಖ್ಯ ಮತ್ತು ಅನಿವಾರ್ಯವೋ ಅಂತೆಯೇ ನಾನೊಬ್ಬಳು ಕೃಷಿಕ ಮಹಿಳೆಯಾದ ಕಾರಣ ಇದು ನನಗೆ ಅಷ್ಟೇ ಅನಿವಾರ್ಯ ಅಂತ ಟೈಪಿಸಿ ನಕ್ಕೆ. ಕೃಷಿ ಎಷ್ಟು ಕಷ್ಟದ್ದು ಮತ್ತು ಲಾಭದಾಯಕವಲ್ಲದ್ದು ಅಂತ ಗೊತ್ತಿರುವ ಎಲ್ಲರಿಗೂ ಈ ಕೆಲಸ ಮಾಡುವವರ ಕುರಿತು ಒಂದು ರೀತಿಯ ಸಹಾನುಭೂತಿಯೂ ಅಂತೆಯೇ ತುಸು ಮೂರ್ಖರು ಅನ್ನುವ ಭಾವನೆಯೂ ಇದೆಯೆಂಬುದು ನನ್ನ ಅರಿವಿಗೆ ಬಂದ ವಿಷಯ.
ಮೊನ್ನೆ ನಮ್ಮೂರಿನ ಹಿರಿಯ ಮತ್ತು ಪ್ರಸಿದ್ಧ ಕವಿಯೊಬ್ಬರು ಯಾವುದೋ ವಿಷಯದ ಕುರಿತು ಮಾತನಾಡಲು ನನಗೆ ಕರೆ ಮಾಡಿದ್ದರು. ನಾನು ಹೊರಗೆ ತೋಟಕ್ಕೆ, ಹಟ್ಟಿಗೆ ಹೋಗುವಾಗ ಮೊಬೈಲ್ ಕೊಂಡೊಯ್ಯುವ ಪರಿಪಾಠ ಇಲ್ಲದ ಕಾರಣ ಎಲ್ಲ ಕೆಲಸ ಮುಗಿಸಿ ಮತ್ತೆ ಬಂದು ಮೊಬೈಲ್ ನೋಡಿ ಕರೆ ಮಾಡಿದವರಿಗೆ ಕರೆ ಮಾಡುವುದು ಅಭ್ಯಾಸ. ಫೋನಿನಲ್ಲಿ ಮಿಸ್ಡ್ ಕಾಲ್ ಇದ್ದದ್ದು ನೋಡಿ ನಾನು ತಿರುಗಿ ಆ ಕವಿಗಳಿಗೆ ಕರೆ ಮಾಡಿದೆ. ಮಾತಾಡ್ತಾ ಅವರು ನೀವು ಎಲ್ಲಾದ್ರೂ ಹೋಗಿದ್ರಾ? ಬಿಜಿ ಇದ್ದೀರಾ ಅನ್ಸುತ್ತೆ ಅಂದರು. ಇಲ್ಲ ನಾನು ಹಟ್ಟಿ ಕೆಲಸ ಮಾಡಿ ಹಾಲು ಕರೆದು ಬರುವಾಗ ಇಷ್ಟು ಹೊತ್ತು ಆಗುತ್ತೆ ಅಂದೆ. ಅದಕ್ಕೆ ಅವರೂ ಕೂಡ ನೀವು ಹಟ್ಟಿ ಕೆಲಸ ಮಾಡುತ್ತೀರ? ಯಾರೂ ಆಳುಗಳು ಸಿಗುವುದಿಲ್ಲವಾ ಅಂತ ಆಶ್ಚರ್ಯ ವ್ಯಕ್ತಪಡಿಸಿದರು. ಇಲ್ಲ, ನಾವೇ ಮಾಡುವುದು ಅಂದೆ. ಅವರು ಕೂಡ ಕೃಷಿಕರೇ ಆದ ಕಾರಣ ನಿಮ್ಮಲ್ಲಿ ಹಟ್ಟಿ ಕೆಲಸ ಮಾಡಲು ಕೆಲಸದವರು ಇದ್ದಾರಾ? ಅಂತ ಮರು ಪ್ರಶ್ನಿಸಿದೆ. ನಮ್ಮದು ಹೆಚ್ಚು

ಕಡಿಮೆ ಇದೇ ಕತೆ ಆಗಿತ್ತು ನೋಡಿ, ಅವೊತ್ತು ಕೆಲಸದವರು ಸಿಗುವಾಗ ದನ ಸಾಕುತ್ತಿದ್ದೆವು. ಈಗ ಕೆಲಸದವರ ಅಭಾವವೂ ಜತೆಗೆ ಅವರಿಗೆ ಸಂಬಳ ಕೊಟ್ಟು ದನ ಸಾಕುವುದು ನಷ್ಟದ ಬಾಬ್ತು ಅಂತ ಅನ್ನಿಸಿದ ಮೇಲೆ ಹಟ್ಟಿಯಲ್ಲಿ ಈಗ ದನಗಳೇ ಇಲ್ಲ ಅಂದರು. ಹಾಗಾಗಿ ನಮಗೆ ಈಗ ಕೆಲಸ ಕಡಿಮೆ. ಹೋಗುವಲ್ಲಿ ಬರುವಲ್ಲಿಗೆ ನಿರಾತಂಕವಾಗಿ ಹೋಗಿ ಬರಬಹುದು. ಆ ಕಾರಣದಿಂದಾಗಿಯೇ ನನಗೂ ನನ್ನ ಹೆಂಡತಿಗೂ ಬೆಂಗಳೂರಿನ ಮಗನ ಮನೆಯಲ್ಲಿ ಬಂದು ಒಂದು ವಾರ ನಿಲ್ಲೋಕೆ ಸಾಧ್ಯವಾಯಿತು ಅಂತ ನಕ್ಕರು. ಅದು ನಿಜವೇ. ಹಟ್ಟಿಯಲ್ಲಿ ದನ ಇದ್ದರೆ ಎಲ್ಲಿಗೂ ಆರಾಮದಲ್ಲಿ ಹೋಗಿ ಬರಲು ಸಾಧ್ಯವಿಲ್ಲ. ಈಗ ಯಾವ ಕೃಷಿಕರೊಂದಿಗೆ ಮಾತನಾಡಿದರೂ ಈ ವಿಷಯವೊಂದು ಮಾತಿನ ಮಧ್ಯೆ ಹಾದು ಹೋಗುತ್ತದೆ. ಹೀಗೆ ಮೊನ್ನೆಯೊಬ್ಬರು ಕೃಷಿಕರು ಸಿಕ್ಕಿ ಮಾತಿನ ನಡುವೆ ದನ ಸಾಕುವ ಬವಣೆಗಳನ್ನು ಹೇಳುತ್ತಿದ್ದರು. ದನಕ್ಕೆ ಹುಲ್ಲು ಆಗಬೇಕು, ಹಾಲು ಜಾಸ್ತಿ ಇದ್ದರೆ ಅದನ್ನು ಡೈರಿಗೆ ಕೊಂಡೊಯ್ಯಬೇಕು. ಅದು ಬೆಳಗ್ಗೆ ಏಳು ಗಂಟೆಗೆ ನಿಗದಿತ ಸ್ಥಳಕ್ಕೆ ತಲುಪಿಯಾಗಬೇಕು. ತೋಟಕ್ಕೆ ಗೊಬ್ಬರವೊಂದು ಧಾರಾಳ ಸಿಗುತ್ತದೆ. ಆ ಕಾರಣಕ್ಕೆ ದನ ಸಾಕುತ್ತಿದ್ದೇನೆ ಅಷ್ಟೇ ಅಂದರು. ಪಕ್ಕದ ಮನೆಯ ಹುಡುಗ ಪೇಟೆಯಲ್ಲಿ ಉದ್ಯೋಗದಲ್ಲಿದ್ದು ಕೈತುಂಬ ಸಂಬಳ ಪಡೆಯುತ್ತಿದ್ದವನು ಪೇಟೆಯ ಜೀವನದಿಂದ ರೋಸಿ ಹೋಗಿ ಕೃಷಿ ಕೆಲಸ ಮಾಡಬೇಕೆಂದು ಪೇಟೆ ಬಿಟ್ಟು ಹಳ್ಳಿಗೆ ಬಂದು ಎರಡು ಹಸು ಖರೀದಿಸಿ ಸಾಕಲು ತೊಡಗಿದ. ಯಾವ ಆಳುಗಳನ್ನು ಇಟ್ಟುಕೊಳ್ಳದೆ ಪೂರ್ತಿ ಕೆಲಸ ಅವನೇ ನಿಭಾಯಿಸಿ ಐದು ಲೀಟರ್ ಹಾಲು ಕರೆದು ದಿನಾ 7 ಕಿ.ಮೀ. ಆಚೆ ಇರುವ ಪೇಟೆಗೆ ಸ್ಕೂಟಿಯಲ್ಲಿ ಹೋಗಿ ಹಾಲು ಕೊಟ್ಟು ಬರುತ್ತಿದ್ದ. ಹೇಗೆ ಉಳಿತಾಯ ಆಗುತ್ತಾ? ಅಂತ ಒಂದೊಮ್ಮೆ ಅವನನ್ನು ವಿಚಾರಿಸಿದ್ದೆ. ಕೊನೆಗೆ ಎಲ್ಲಾ ಖರ್ಚು ವೆಚ್ಚಗಳನ್ನ ತುಲನೆ ಮಾಡುವಾಗ ತಿಂಗಳ ಉಳಿತಾಯ ಬರೇ 125 ರೂ. ಅಂತ ನಕ್ಕಿದ್ದ. ಇಷ್ಟೆಲ್ಲಾ ಖರ್ಚು ಮಾಡಿಕೊಂಡು ಯಾಕೆ ದನ ಸಾಕಬೇಕು ಅನ್ನುವುದು ಹೆಚ್ಚಿನವರ ಅಂಬೋಣ. ಡೈರಿಗೆ ಹೋದರೆ ಬೇಕಾದಷ್ಟು ಪ್ಯಾಕೀಟು ಹಾಲು ಖರೀದಿಸಬಹುದು. ಯಾಕೆ ಇಷ್ಟೆಲ್ಲಾ ರಗಳೆ ಅಂತ ನನ್ನಲ್ಲಿ ಬಹಳ ಜನ ಹೇಳುತ್ತಾರೆ. ಎಲ್ಲರೂ ದನ ಸಾಕುವುದು ಬಿಟ್ಟರೆ ಪ್ಯಾಕೀಟು ಹಾಲು ಎಲ್ಲಿಂದ ಬರುತ್ತೆ ಮುಂದೆ ಅಂತ ನಾನು ಮರು ಪ್ರಶ್ನಿಸುತ್ತೇನೆ. ಅದರಾಚೆಗೆ ಯಾರೂ ಯೋಚಿಸಲು ಹೋಗುವುದಿಲ್ಲ. ಎಲ್ಲರಿಗೂ ವರ್ತಮಾನ ನೆಮ್ಮದಿಯಲ್ಲಿ ಕಳೆದರೆ ಮುಗಿಯಿತು. ನಮ್ಮ ಹಳ್ಳಿಗಳ ಕಡೆಗೆ ಬಂದರೆ ಹೆಚ್ಚಿನವರ ಮನೆ ಪಕ್ಕಗಳಲ್ಲಿ ಇರುವ ದೊಡ್ಡ ದೊಡ್ಡ ದನದ ಕಲ್ಲು ಹಾಸಿನ ಸಿಮೆಂಟು ಹಟ್ಟಿಗಳು ಈಗ ಅನಗತ್ಯ ಸಾಮಾನು ಪೇರಿಸಿಡುವ ಗೋಡೌನೋ, ಸೌದೆ ಕೊಟ್ಟಿಗೆಯೋ ಆಗಿ ಉಳಿದಿದೆ. ನನ್ನಲ್ಲೂ ತುಂಬಾ ಜನ ಪ್ರಶ್ನಿಸುತ್ತಾರೆ, ಯಾವಾಗ ನೋಡಿದರೂ ಹಟ್ಟಿ ಕೆಲಸ ಉಂಟು ಅಂತ ಎಲ್ಲೂ ಬರೋದಿಕ್ಕೆ ನುಣುಚಿಕೊಳ್ಳುತ್ತೀಯ ಅವುಗಳನ್ನೆಲ್ಲಾ ಮಾರಬಾರದಾ ಅಂತ. ದಿನಾ ಕುಡಿಯುವ ಪರಿಶುದ್ಧ ಹಾಲು, ಸಿಗುವ ಬೆಣ್ಣೆ, ತುಪ್ಪ, ಹಟ್ಟಿಗೆ ಸೆಗಣಿ, ಗಂಜಲದಿಂದ ಇಂಧನ… ಇದರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನಾವು ಸೌದೆ ತರದೆ ದಶಕಗಳೇ ಸಂದು ಹೋದವು. ನಮಗೆ ಹಟ್ಟಿಯಿಂದ ಇದು ಕೂಡ ಒಂದು ಪ್ರಯೋಜನವೇ. ಎಲ್ಲರೂ ಇದೇ ರೀತಿ ಯೋಚಿಸಿದರೆ ಜನರ ಯೋಚನಾಕ್ರಮ ಬದಲಾಗಿ, ಕೆಲಸದವರ ಕೂಲಿ ಕಡಿಮೆ ಕೂಡ ಆಗಬಹುದು. ಎಲ್ಲವನ್ನೂ ಲಾಭದ ತಕ್ಕಡಿಯಲ್ಲಿ ತೂಗುವುದು ಸರಿಯೇ? ಮೊನ್ನೆ ಮೊನ್ನೆ ಪತ್ರಿಕೆಯಲ್ಲಿ ಓದಿದ ನೆನಪು. ಆಸ್ಟ್ರೇಲಿಯಾದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಒಂಟೆಗಳನ್ನ ನೀರು ಒದಗಿಸುವುದು ಕಷ್ಟ ಅಂತ ಅವುಗಳನ್ನೆಲ್ಲ ಒಮ್ಮೆಗೇ ಸಮಾಧಿ ಮಾಡಿಬಿಟ್ಟರಂತೆ. ಎದೆ ಝಲ್ಲೆನ್ನಿಸುತ್ತದೆ. ಯಾವ ಹಂತಕ್ಕೆ ನಾವು ಬಂದು ತಲುಪಿದ್ದೇವೆ ಎಂದು. ಹಸಿ ಮಣ್ಣುಗಳೆಲ್ಲಾ ಕಾಂಕ್ರೀಟು ಹಾಸು ಹೊದೆಯುವಾಗ ನೀರು ಇಂಗುವುದು, ಹಸಿರು ಮೊಳಕೆಯೊಡೆಯುವುದು ಹೇಗೆ? ಮೇವು ದಕ್ಕುವುದು ಹೇಗೆ? ಇದು ನನ್ನನ್ನು ನಿರಂತರ ಕಾಡುವ ಪ್ರಶ್ನೆ. ಇನ್ನು ಕೆಲವರ ಕೆಲವರ ಪ್ರಶ್ನೆಗಳು ನೀವು ಕವಿತೆ, ಲೇಖನ ಅಂತ ಬರೀತಾ ಇರ್ತೀರಲ್ಲ, ನಿಮಗೆ ಅದಕ್ಕೆಲ್ಲಾ ಸಮಯ ಉಂಟಾ? ವೇಸ್ಟ್ ಅಲ್ಲವಾ ಅವೆಲ್ಲಾ ಅಂತ. ಎಲ್ಲವನ್ನೂ ಲಾಭ ನಷ್ಟಗಳ ತಕ್ಕಡಿಯೊಳಗೆ ಇಟ್ಟು ಬದುಕಿನ ಸಂತೋಷವನ್ನು ತೂಗಿ ಅಳೆಯಲು ಸಾಧ್ಯವೇ?
ಲಾಭದ ದೃಷ್ಟಿಯಲ್ಲಿ ಹಸನಾದ ಪೈರಿನ ಗದ್ದೆಗಳೆಲ್ಲಾ ಸೈಟುಗಳಾಗಿ ಮಾರ್ಪಡುವಾಗ, ಚೊಂಬಿನ ನೊರೆಹಾಲು ಮರೆತು ಹಸುಗೂಸುಗಳು ಪ್ಯಾಕೀಟು ಹಾಲು ಬಯಸುವಾಗ, ನೆಲ ಇಂಚಿಂಚೇ ಕರಗಿ ಕಾಂಕ್ರೀಟ್ ಕಟ್ಟಡ ಆಗುವಾಗ, ಪ್ಲಾಸ್ಟಿಕ್‍ನ ಕಬಂಧ ಬಾಹುಗಳಿಂದ ತಪ್ಪಿಸಲು ಸಾಧ್ಯವಾಗದೆ ಒದ್ದಾಡುವಾಗ, ಘೋರ ದುರಂತಗಳು ಸಂಭವಿಸಿದರೂ ಜಾಣ ಕುರುಡರಂತೆ ಜನ ವರ್ತಿಸುವಾಗ ನಿಜಕ್ಕೂ ನನ್ನೊಳಗಿನ ಕವಿತೆ ಬೆಚ್ಚಿ ಬೆದರುತ್ತದೆ. ಯಾರು ಏನೂ ಮಾಡಲಾಗದೇ ಇರುವ ಈ ಸಂದರ್ಭದಲ್ಲಿ ಬರಹ ಕೊಡುವ ಸಮಾಧಾನವನ್ನು ಯಾರಿಗಾದರೂ ಬಗೆದು ತೋರಿಸಲು ಸಾಧ್ಯವಾ? ಯಾಕೆ ಬರೆಯೋದು? ಕೆಲಸವಿಲ್ಲವಾ ಅಂತ ಯಾರಾದರೂ ನನ್ನಲ್ಲಿ ಪ್ರಶ್ನಿಸಿದರೆ ನಿಜಕ್ಕೂ ನನ್ನಲ್ಲಿ ಉತ್ತರವಿಲ್ಲ. ಮನಸು ಬರಡಾಗದೇ ಇದ್ದರೆ ಸುತ್ತಮುತ್ತ ಹಸಿರು ಉಕ್ಕಬಹುದು.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!