Monday, December 11, 2023

ಕನ್ನಡ ವಿಶ್ವಕೋಶದ ಮಜಲುಗಳು

Follow Us

ಮೈಸೂರು ವಿಶ್ವವಿದ್ಯಾಲಯದ ಮಹತ್ವದ ಕನ್ನಡ ವಿಶ್ವಕೋಶ ಯೋಜನೆಯಲ್ಲಿ ಭಾಗಿಯಾಗಿದ್ದ ಶಿಕ್ಷಕರೂ, ವಿಜ್ಞಾನ ಲೇಖಕರೂ, ಪಕ್ಷಿತಜ್ಞರೂ ಆದ ಕೆ.ಎಸ್. ನವೀನ್ ಅವರು ವಿಶೇಷ ನೆನಪುಗಳನ್ನು, ಅನುಭವಗಳನ್ನು ಇಲ್ಲಿ ಕಟ್ಟಿಕೊಡಲಿದ್ದಾರೆ. ಈ ಮೂಲಕ ನವೀನ್ ಅವರು ಅಕ್ಷರಗಳ ಮೂಲಕ ವಿಶ್ವಕೋಶ ಯಾತ್ರೆ ಮಾಡಿಸಲಿದ್ದಾರೆ.

=========

ವಿಶ್ವಕೋಶ ರಸಯಾತ್ರೆ

  • ಕಲ್ಗುಂಡಿ ನವೀನ್
    response@134.209.153.225
    ksn.bird@gmail.com

“ಕನ್ನಡ ವಿಶ್ವಕೋಶ” ಎಂದ ಕೂಡಲೆ ಈ ಯೋಜನೆಯ ಪರಿಚಯವಿರುವವರಿಗೆ, ಅದರಲ್ಲಿ ಭಾಗವಹಿಸಿದವರಿಗೆ ಹಾಗೂ ಓದುಗರಿಗೂ ಸಹ ರೋಮಾಂಚನವಾಗುತ್ತದೆ. ಕುವೆಂಪು ಅವರ ಕನಸಿನ ಕೂಸಾಗಿ, ದೇಜಗೌ ಅವರ ಮಡಿಲಲ್ಲಿ ಬೆಳೆದ ಇದು, ಭಾರತೀಯ ಭಾಷೆಗಳಲ್ಲಿ ಬಂದಿರುವ ಮೊತ್ತಮೊದಲ ವಿಶ್ವಕೋಶಗಳಲ್ಲಿ ಒಂದು. ತಮಿಳು, ಹಿಂದಿ, ಬಂಗಾಲಿ, ಮರಾಠಿ ಇಂತಹ ಭಾಷೆಗಳಲ್ಲಿ ವಿಶ್ವಕೋಶಗಳಿಲ್ಲದ ಸಮಯದಲ್ಲಿ, ಕನ್ನಡದಲ್ಲಿ ಎನ್ಸೈಕ್ಲೊಪಿಡಿಯಾ ಬ್ರಿಟಾನಿಕಾ ಮಟ್ಟದ ವಿಶ್ವಕೋಶದ ಸಂಪುಟಗಳು ಪ್ರಕಟವಾಗಿದ್ದುವು ಎಂಬುದು ಅಂದಿನ ಕನ್ನಡ ಕೆಲಸಗಾರರ ದೂರದೃಷ್ಟಿ ಹಾಗೂ ಕಾರ್ಯನಿಷ್ಠೆಗೆ ಹಿಡಿದ ಕನ್ನಡಿ. ಇಂದು ಕನ್ನಡದಲ್ಲಿ ಅನೇಕ ವಿಶ್ವಕೋಶಗಳು ಬೆಳಕು ಕಂಡಿವೆ. ಕನ್ನಡ ಜಾನಪದ ವಿಶ್ವಕೋಶಗಳು ಬಂದವು(1985). ಕನ್ನಡ ವಿಶ್ವವಿದ್ಯಾಲಯ ಅನೇಕ ವಿಷಯ ವಿಶ್ವಕೋಶಗಳನ್ನು ಪ್ರಕಟಿಸಿದೆ. ನಮ್ಮ ಹೆಮ್ಮೆಯ ಮೈಸೂರು ವಿಶ್ವವಿದ್ಯಾಲಯವೇ ವಿಷಯ ವಿಶ್ವಕೋಶಗಳನ್ನು ಪ್ರಕಟಿಸಿದೆ.

ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಇದನ್ನು ಅಂಕೀಕರಣಗೊಳಿಸುವ ಅಗತ್ಯ ಬಂದಿತು. ಅಂದರೆ ಡಿಜಿಟೈಜೇಷನ್. ಇದನ್ನು ಸಿಡಿ ಮತ್ತು ಡಿವಿಡಿ ರೂಪದಲ್ಲಿ ತರಲು ವಿಶ್ವವಿದ್ಯಾನಿಲಯ ತೀರ್ಮಾನಿಸಿತು. ಆಗ ಒಂದು ಸಂಪಾದಕ ಮಂಡಳಿಯನ್ನು ರಚಿಸಿಕೊಂಡು ಇದಕ್ಕೆ ಬೇಕಾಗಿದ್ದ ವ್ಯವಸ್ಥೆಗಳನ್ನು ಮಾಡಿಕೊಂಡು ಪರಿಷ್ಕರಣೆಗೆ ತೊಡಗಿದ್ದಾಯಿತು. ವಿವರಗಳು ಮುಂದಿನ ಸಂಚಿಕೆಗಳಲ್ಲಿ ಬರುತ್ತವೆ. ಆಂಕಿಕ ವಿಶ್ವಕೋಶವಾದ್ದರಿಂದ ಇದಕ್ಕೆ ಚಿತ್ರಗಳು, ಧ್ವನಿ, ವಿಡಿಯೋ ಹಾಗೂ ಅನಿಮೇಷನ್ಗಳನ್ನು ಸೇರಿಸಬಹುದಾಗಿತ್ತು. ಆದರೆ, ಕಾಲ? 2020 ಅಲ್ಲ, 2004 ಆಗಿತ್ತು! ಒಂದೊಂದು ವಿಡಿಯೋ ತುಣುಕಿಗೂ, ಚಿತ್ರಕ್ಕೂ ಪಟ್ಟಕಷ್ಟ ನೆನಪಿಸಿಕೊಂಡರೆ ಇಂದು ನಗು, ಸಂಕಟ ಎಲ್ಲ ಆಗುತ್ತದೆ. ಇಂದು ಯಾವುದೇ ವಿಷಯದ ಮೇಲೆ ಲಕ್ಷಾಂತರ ವಿಡಿಯೋಗಳು ದೊರೆಯುತ್ತವೆ! ಇದು ತಂತ್ರಜ್ಞಾನ ತಂದ ಬದಲಾವಣೆ. ಇರಲಿ. ಈಗ ವಿಶ್ವಕೋಶಕ್ಕೆ ಮರಳೋಣ. ಅವಶ್ಯ ಸಂಪಾದಕ ಮಂಡಳಿಯೊಂದಿಗೆ ಕಾರ್ಯರಂಗಕ್ಕೆ ಧುಮುಕಲಾಯಿತು. ಎಲ್ಲ ಸಂಪುಟಗಳ ಡಿಟಿಪಿ ಮೊದಲಾಯಿತು. ಆನಂತರ ತಜ್ಞರಿಂದ ಪರಿಷ್ಕರಣೆ. ಬಿಟ್ಟುಹೋಗಿದ್ದ ವಿಷಯಗಳನ್ನು ಪಟ್ಟಿ ಮಾಡಿ ಬರೆಸುವ ಕಾರ್ಯ, ಅವಕ್ಕೆ ಚಿತ್ರಗಳು, ಆಡಿಯೊ ವಿಡಿಯೋಗಳನ್ನು ಹುಡುಕುವ ಕಾರ್ಯ ಏಕಕಾಲಕ್ಕೆ ಆರಂಭವಾಯಿತು!

ದಿನ ದಿನವೂ ಹೊಸ ಅನುಭವಗಳು ನಮಗೆ. ಅಂತಹ ಒಂದು ಸಂದರ್ಭ ಸಂದರ್ಭದಲ್ಲಿ ನಾಸಾ ಹಾಗೂ ಯೂರೋಪಿಯನ್ ಸ್ಪೇಸ್ ಏಜೆನ್ಸಿ ತಯಾರಿಸಿದ ಹಬಲ್ ಕುರಿತ ಸಾಕ್ಷ್ಯಚಿತ್ರ ದೊರೆಯಿತು. ಇದು ಸಂಪಾದಕರ ನಿಷ್ಠೆಯ ಫಲ! ಇದೊಂದು ಅದ್ಭುತ ವಿಡಿಯೋ. ಆದರೆ ಮೊದಲನೇ ತೊಡಕು ಎಂದರೆ ಇದನ್ನು ಬಳಸಿಕೊಳ್ಳಲು ಅನುಮತಿ ಬೇಕು, ಎರಡನೆಯದು ಅದರಲ್ಲಿನ ಭಾಷೆ ಐರೋಪ್ಯ ಉಚ್ಚಾರದ ಇಂಗ್ಲಿಷ್! ಅನುಮಾನಿಸುತ್ತಲೇ ಅನುಮತಿಗೆ ಪತ್ರ ಬರೆದದ್ದಾಯಿತು. ಮರುಟಪಾಲಿಗೇ ಉತ್ತರಿಸಿದ ನಾಸಾ/ಈಸಾ ಮುಕ್ತ ಪರವಾನಗಿ ಕೊಟ್ಟವು! ಐರೋಪ್ಯ ಉಚ್ಚಾರದ ಇಂಗ್ಲಿಷ್ ಧ್ವನಿಯನ್ನು ಕೇಳಿ ಬರೆದುಕೊಂಡು ಕನ್ನಡಕ್ಕೆ ಅನುವಾದಿಸಿ, ಸ್ಟುಡಿಯೋದಲ್ಲಿ ಉತ್ಸಾಹಿಗಳಾದ ಸುಬ್ರಹ್ಮಣ್ಯ ಅವರ ಧ್ವನಿಯಲ್ಲಿ ರೆಕಾರ್ಡ್ ಮಾಡಿ ಬಳಸಿಕೊಂಡೆವು. ಜಯಶ್ರೀ ಅರವಿಂದ ಅವರು ತಮ್ಮ ಸ್ಟೂಡಿಯೋದಲ್ಲಿ ಇವುಗಳನ್ನು ರೆಕಾರ್ಡ್ ಮಾಡಿಸಿಕೊಟ್ಟರು. ಈಗ ಇವು ಅತ್ಯುತ್ತಮ ವೀಡಿಯೋಗಳಲ್ಲಿ ಕೆಲವು!

ಇದೇ ಸುಮಾರಿಗೆ ಸರ್ಪತಜ್ಞ ಹಾಗೂ ನಿವೃತ್ತ ವಾಯುಪಡೆ ಅಧಿಕಾರಿಗಳಾದ ಡಿ.ಆರ್. ಪ್ರಹ್ಲಾದ್ ಅವರ ನೆರವಿನಿಂದ ಭಾರತೀಯ ವಾಯುಪಡೆಯ ಅಮೋಘ ಸಿಡಿಯೊಂದು ದೊರೆಯಿತು. ಅದರಲ್ಲಿನ ಅನೇಕ ಭಾಗಗಳನ್ನು ಬಳಸಿಕೊಂಡೆವು. ಪ್ರಹ್ಲಾದ್ ಅವರ ನಿರಂತರ ಪ್ರಯತ್ನ ಹಾಗೂ ಅಂದು ತರಬೇತಿ ಕಮಾಂಡ್ನ ಮುಖ್ಯಸ್ಥರಾಗಿದ್ದ ಏರ್ ಮಾರ್ಷಲ್ ಸುಭಾಷ್ ಎಸ್. ಭೋಜ್ವಾನಿ ಅವರ ಔದಾರ್ಯದಿಂದ ಈ ವಿಶಿಷ್ಟ ವಿಡಿಯೋ ಕ್ಲಿಪ್ಗಳನ್ನು ಬಳಸಿಕೊಳ್ಳಲು ಅನುಮತಿ ಸಿಕ್ಕಿತು! ಬೇರೆ ಬೇರೆ ಮೂಲಗಳಿಂದ ಅನೇಕ ಪಕ್ಷಿಗಳು ಮತ್ತು ಪ್ರಾಣಿಗಳ ವಿಡಿಯೋ ತುಣುಕುಗಳು ದೊರಕಿದವು. ಇನ್ನು, ಕರ್ನಾಟಕ ರಾಜ್ಯದ ವಾರ್ತಾ ಇಲಾಖೆಯು ಸಾಹಿತ್ಯ, ಕಲೆ ಮುಂತಾದವುಗಳಿಗೆ ಸಂಬಂಧಿಸಿದ ವಿಡಿಯೋಗಳ ಹೊಳೆಯನ್ನೇ ಹರಿಸಿತು. ಆಕಾಶವಾಣಿಯು ಅನೇಕ ಧ್ವನಿಗಳನ್ನು ಕಡಿಮೆ ಬೆಲೆಯಲ್ಲಿ ಒದಗಿಸಿತು. ದೂರದರ್ಶನದಿಂದ ಸಹ ವಿಡಿಯೋಗಳನ್ನು ಕೊಳ್ಳಲಾಯಿತು. ಡಾ. ಎಚ್. ಆರ್. ಕೃಷ್ಣಮೂರ್ತಿ, ಹಿರೇಮಠ, ವಿದ್ಯಾಶಂಕರ, ದೂರದರ್ಶನದ ಮಹೇಶ್ ಜೋಶಿ, ಚಂದ್ರಮೌಳಿ ಮತ್ತಿತರರ ಸಹಾಯದಿಂದ ಇಂದು ವಿಶ್ವಕೋಶದಲ್ಲಿ ಬೇಂದ್ರೆ ಹಾಗೂ ಗೋವಿಂದ ಪೈಗಳ ಕಾವ್ಯವಾಚನವಿದೆ, ಗೋಕಾಕ ಮತ್ತು ಕಾರಂತರ ಧ್ವನಿಯಿದೆ, ಅನಕೃ ಅವರ ನಿರರ್ಗಳ ವಾಗ್ಝರಿಯ ಒಂದು ಝಲಕವಿದೆ, ಭಾರತ ರತ್ನ ವಿಶ್ವೇಶ್ವರಯ್ಯನವರ ಧ್ವನಿ ಮತ್ತು ವಿಡಿಯೋ ಇವೆ, ಭಾರತ-ಪಾಕಿಸ್ತಾನದ ಯುದ್ಧದಲ್ಲಿ ಭಾರತಕ್ಕೆ ಶರಣಾದ ಪಾಕಿಸ್ತಾನ, ಅದರ ಕಮಾಂಡರ್ ಜ. ನಿಯಾಜಿ ಶರಣಾಗತಿಯ ಕುರುಹಾಗಿ ತಮ್ಮ ಹುದ್ದೆಯ ಭುಜಕೀರ್ತಿಗಳನ್ನು ಕಳೆದು, ಶರಣಾಗತಿ ಪತ್ರಕ್ಕೆ ಸಹಿ ಹಾಕುತ್ತಿರುವ ದೃಶ್ಯಗಳಿವೆ. ಕಾಳಿಂಗಸರ್ಪದ ಮಿಲನ ದೃಶ್ಯಗಳು ಹಾಗೂ ಅವುಗಳ ಮೊಟ್ಟೆ ಮರಿಗಳ ಸಂರಕ್ಷಣೆಯ ವಿಡಿಯೋ ಇದೆ (ರೋಮ್ ವಿಟ್ಹೇಕರ್ ಅವರ ಕೃಪೆ). ಡಾ.ಎನ್ ಎಸ್ ಲೀಲಾರವರು ಒದಗಿಸಿದ ಸಿಡ್ನಿ ಅಕ್ವೇರಿಯಂ ವಿಡಿಯೋದಲ್ಲಿದ್ದ ಕೆಲವು ನೀರಿನ ಪ್ರಾಣಿಗಳ ವಿಡಿಯೋ ತುಣುಕನ್ನು ಬಳಸಿಕೊಳ್ಳಲು ಸಿಡ್ನಿ ಅಕ್ವೇರಿಯಂ ಅನುಮತಿ ನೀಡಿತು.

ಕುವೆಂಪು ಅವರ ಕುಪ್ಪಳ್ಳಿ ಮನೆಯನ್ನು ಚಿತ್ರೀಕರಿಸಿ ಬಳಸಿಕೊಳ್ಳಲು, ಪೂರ್ಣಚಂದ್ರತೇಜಸ್ವಿ ಸಹಾಯ ಮಾಡಿದರು. ಕುವೆಂಪು ಟ್ರಸ್ಟ್ನ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಇದಕ್ಕಾಗಿ ಅನುಮತಿ ನೀಡಿದ್ದು ಮಾತ್ರವಲ್ಲದೇ ನಮ್ಮ ಅತಿಥೇಯರೂ ಆದರು. ಅಂತೆಯೇ, ಉಡುಪಿಯ ರಥೋತ್ಸವದ, ಆನೆಯ ಕೌಟುಂಬಿಕ ಜೀವನದ, ಗುಬ್ಬಿ ವೀರಣ್ಣನವರ ಕುರಿತಾದ ವಿಡಿಯೋಗಳಿವೆ!. ನಮ್ಮ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳ ಧ್ವನಿ, ದೃಶ್ಯಗಳಿವೆ. ಉಡುಪಿಯ ಆರ್ಆರ್ಸಿ ಸಂಸ್ಥೆ ಮತ್ತು ಅಲ್ಲಿನ ಡಾ. ಎಸ್ ಎ ಕೃಷ್ಣಯ್ಯ ಅನೇಕ ವಿಡಿಯೋಗಳನ್ನು ಒದಗಿಸಿದರು. ಕನ್ನಡದ ಖ್ಯಾತನಾಮರಾದ ಡಾ.ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ, ಟಿ.ಎಸ್. ನಾಗಾಭರಣ, ಎಚ್.ಎನ್. ನರಹರಿರಾವ್, ಪ್ರೇಮಾ ಕಾರಂತ್, ಮಾಸ್ಟರ್ ಹಿರಣ್ಣಯ್ಯ ಮುಂತಾದವರು ಅಗತ್ಯ ಸಾಮಗ್ರಿಗಳನ್ನು ನೀಡಿದ್ದಲ್ಲದೆ, ಅವುಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ. ಈ ಸಂಖ್ಯೆಯ ವಿಡಿಯೋಗಳು (2007ರ) ಎನ್ಕಾರ್ಟ ವಿಶ್ವಕೋಶದಲ್ಲಿಯೂ ಇಲ್ಲವೆಂದರೆ ಇದು ಕನ್ನಡದ ಹೆಮ್ಮೆಯಲ್ಲವೇ? ಇತರ ಅನೇಕ ಮಹನೀಯರ ಸಹೃದಯತೆ ಹಾಗೂ ಸಹಕಾರಗಳಿಂದ ಈ ಆಂಕಿಕ ವಿಶ್ವಕೋಶವು ಈ ರೂಪ ತಳೆದು ಕನ್ನಡಿಗರಿಗೆ ದೊರೆತಿದೆ. ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯದ ಅನೇಕ ಅಧಿಕಾರಿಗಳ ಸಹಾಯ ಮರೆಯುವಂತೆಯೇ ಇಲ್ಲ. ಒಟ್ಟಾರೆ ಸುಮಾರು ಆರೂವರೆ ಗಂಟೆಗಳ ವಿಡಿಯೋ ಈ ವಿಶ್ವಕೋಶದಲ್ಲಿದೆ!
ಅನಿಮೇಷನ್ಗಳಲ್ಲಿ ಹೃದಯದ ಬಡಿತ, ಕಾವೇರಿ ನದಿ, ಗ್ರಹಣ ಇತ್ಯಾದಿ ೧೮ ಅನಿಮೇಷನ್ಗಳು ಶಾಲಾ ಮಕ್ಕಳಿಗೂ ಸುಲಭವಾಗಿ ಅರ್ಥವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ವ್ಯಂಗ್ಯಚಿತ್ರಕಾರ ಗುಜ್ಜಾರ್ ಸಹಕಾರ ಗಣನೀಯವಾದುದು. .

ಈ ವಿಶ್ವಕೋಶದಲ್ಲಿ ಒಟ್ಟು 14791 ಲೇಖನಗಳು, 9610 ಚಿತ್ರಗಳು, 58 ಧ್ವನಿ ತುಣುಕುಗಳು, 18 ಅನಿಮೇಷನ್ಗಳು ಮತ್ತು ಎಲ್ಲಕ್ಕೂ ಹೆಚ್ಚಾಗಿ 382 ವಿಶಿಷ್ಟ ವಿಡಿಯೋಗಳಿವೆ (ಸುಮಾರು ಎರಡು ಮೂರು ಸಿನೆಮಾದಷ್ಟು!). ಕುತೂಹಲಕ್ಕಾಗಿ ಈ ವಿಶ್ವಕೋಶದಲ್ಲಿನ ಪದಗಳನ್ನು ಗಣಿಸಿದಾಗ ಸಿಕ್ಕಸಂಖ್ಯೆ 75,05,585! ಈ ಪದ ಸಮೂಹವನ್ನು ವಿಶೇಷ ಭಾಷಾಸಂಬಂಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಒಟ್ಟಾರೆ ಒಂದು ಡಿಜಿಟಲ್ ವಿಶ್ವಕೋಶವನ್ನು ಜನರ ಕೈಗಿಟ್ಟ ಕೃತಾರ್ಥತೆ ಮೈಸೂರು ವಿವಿ ಹಾಗೂ ಕನ್ನಡ ಗಣಕ ಪರಿಷತ್ತಿಗೆ ಒದಗಿತು. ಶ್ರಮ, ಔದಾರ್ಯವಿಲ್ಲದೆ ಇಂತಹ ದೊಡ್ಡ ಕಾರ್ಯ ಕನಸೇ ಸರಿ! ಬೃಹತ್ ಕಾರ್ಯದಲ್ಲಿ ಸಹಕರಿಸಿದ ಇಂತಹ ಕೆಲವು ವ್ಯಕ್ತಿಗಳು ಘಟನೆಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಾ ಹೋಗುತ್ತೇನೆ, ನನ್ನ ನೆನಪು ಮೂಡಿಸಿದಂತೆ.

ಕನ್ನಡ ವಿಶ್ವಕೋಶದ ಡಿವಿಡಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ದೊರೆಯುತ್ತದೆ. ಬೆಲೆ ಐದುನೂರು ರೂ.

ಮತ್ತಷ್ಟು ಸುದ್ದಿಗಳು

vertical

Latest News

ಶ್ರೀರಾಮನ ಆರಾಧನೆಗೆ 3000 ಅರ್ಚಕರ ಹಿಂದಿಕ್ಕಿ ಆಯ್ಕೆಯಾದ ವಿದ್ಯಾರ್ಥಿ ಮೋಹಿತ್

newsics.com ಅಯೋಧ್ಯೆ: ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೇವ ಶ್ರೀರಾಮನ ದೇಗುಲ ಉದ್ಘಾಟನೆಗೆ ದಿನಗಣನೆಯಾಗ್ತಿದೆ. ಭವ್ಯ ಮಂದಿರದಲ್ಲಿ ಪೂಜೆಗಾಗಿ ದೇಶದೆಲ್ಲೆಡೆಯಿಂದ ಈ ಹಿಂದೆಯೇ ಪುರೋಹಿತರ ನೇಮಕ ಮಾಡಲಾಗಿದ್ದು,   ಉತ್ತರಪ್ರದೇಶದ...

3 ದಿನ ವರ್ಚುಯಲ್ ಕಾಲ್: ಉದ್ಯಮಿಗೆ 1.98 ಕೋಟಿ ರೂ. ಪಂಗನಾಮ ಹಾಕಿದ ವಂಚಕರು!

newsics.com ಬೆಂಗಳೂರು: 3 ದಿನಗಳ ಕಾಲ ವರ್ಚುಯಲ್ ಕರೆ ಮಾಡಿದ ಸೈಬರ್ ವಂಚಕರು, 46 ವರ್ಷದ ಉದ್ಯಮಿಯೊಬ್ಬರಿಗೆ 1.98 ಕೋಟಿ ರೂಪಾಯಿ ವಂಚಿಸಿದ್ದಾರೆ. ಮುಂಬೈ ಕ್ರೈಂ ಬ್ರಾಂಚಿನ ಅಧಿಕಾರಿಗಳಂತೆ ನಟಿಸಿ ಉದ್ಯಮಿ ಮನೀಶ್ ಅವರನ್ನು ಬಲೆಗೆ...

84 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ತೋಟ ಕಾಯುವ ಹಮಾಲಿಗೆ ಧಾರೆ ಎರೆಯಲು ನಿರ್ಧರಿಸಿದ ಶ್ರೀಮಂತ!

newsics.com ಫ್ರಾನ್ಸ್: ಫ್ರಾನ್ಸ್ ದೇಶದ ಶ್ರೀಮಂತ 80 ವರ್ಷದ ನಿಕೋಲಾಸ್ ಪ್ಯೂಕ್ ಅವರು ತಮ್ಮ ಎಲ್ಲಾ ಸಂಪತ್ತನ್ನು ತೋಟದ ಹಮಾಲಿಗೆ ಬರೆದಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪ್ಯೂಕ್ ಅವರ ಆಸ್ತಿಯ ವಾರಸುದಾರ ಆಗುತ್ತಿರುವ ಹಮಾಲಿಯ ವಯಸ್ಸು...
- Advertisement -
error: Content is protected !!