- ಸುಷ್ಮ ಸಿಂಧು, ಮನಃಶಾಸ್ತ್ರಜ್ಞೆ
response@134.209.153.225
ಬದುಕು ಹೇಗೆ ಪುಟ್ಟಪುಟ್ಟ ಅಚ್ಚರಿಗಳು, ಖುಷಿಗಳು, ಸಾರ್ಥಕ ಕ್ಷಣಗಳ ಗುಚ್ಚವೋ ಅಂತೆಯೇ ಅನಿರೀಕ್ಷಿತ ಸವಾಲುಗಳ ಸರಮಾಲೆಯೂ ಹೌದು. ಜೀವನದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ತಿರುವುಗಳು ನಮ್ಮ ಕ್ಷಮತೆಯನ್ನು ಪ್ರಶ್ನಿಸಿ ಸಾಕಷ್ಟು ಒತ್ತಡಕ್ಕೆ ನೂಕುವುದು ಹೌದಾದರೂ ಸಕಾರಾತ್ಮಕ ಚಿಂತನೆಯನ್ನು ರೂಢಿಸಿಕೊಂಡರೆ ಕಷ್ಟಗಳನ್ನು ಎದುರಿಸಲು ಬೇಕಾದ ಮಾನಸಿಕ ಕಸುವನ್ನು ಸಂಪಾದಿಸಿದಂತೆ.
ಮನ ಮುದುಡಲು ಬಿಡಬಾರದು
ಏನೇ ಸಮಸ್ಯೆಗಳು ಎದುರಾದರೂ ಮನಸ್ಸು ಬಹಳ ಬೇಗನೇ ಬದುಕಿನ ಮೇಲಿನ ವಿಶ್ವಾಸವನ್ನು ಕಳೆದುಕೊಂಡು ದುಃಖದ ಕೂಪಕ್ಕೆ ಬೀಳುವುದು. ತನ್ನನ್ನು ತಾನು ಅತಿಯಾಗಿ ಜರಿಯುವುದು, ಇತರರೊಡನೆ ವಿಪರೀತ ಹೋಲಿಸಿಕೊಳ್ಳುವುದು, ಬದುಕಿನ ಮೇಲಿನ ಆಸ್ಥೆ ಕಳೆದುಕೊಂಡು ಕೈಚೆಲ್ಲಿ ಬಿಡುವುದು ಇವೆಲ್ಲವೂ ನಿರಾಶೆಯಾದಾಗ ಮನ ತೋರುವ ಸಹಜ ಸ್ವಭಾವ. ಆದರೆ ಈ ರೀತಿಯ ಯೋಚನೆಗಳಲ್ಲೇ ಸಂಪೂರ್ಣ ಕಳೆದು ಹೋಗದೆ, ಮನವನ್ನು ಪೂರ್ತಿ ಮುದುಡಲು ಬಿಡದೇ ಸ್ವಲ್ಪಸ್ವಲ್ಪವೇ ಆದರೂ ನೋವನ್ನು ತಹಬದಿಗೆ ತಂದುಕೊಂಡು ಯೋಚನೆಯ ಭಾರವನ್ನು ಕಳೆದು ಹಗುರಗೊಳಿಸುವ ನಮ್ಮ ಯತ್ನ ನಿರಂತರ ಜಾರಿಯಲ್ಲಿರಬೇಕು.
ಬದುಕುವ ಮಾರ್ಗ ಶೋಧಿಸಬೇಕು
ಈ ಜೀವನದಲ್ಲಿ ನಮ್ಮ ಕೈ ಮೀರಿದ ಅದೆಷ್ಟೋ ಘಟನೆಗಳು ಜರುಗುತ್ತಿರುತ್ತದೆ. ಒಮ್ಮೊಮ್ಮೆಯಂತೂ ಯಾರದ್ದೋ ಚುಚ್ಚು ಮಾತಿನ, ದುರ್ವರ್ತನೆಯ, ಬೇಜವಾಬ್ದಾರಿಗಳ ಫಲವನ್ನು ನಾವು ಅನುಭವಿಸಬೇಕಾಗಿಬಿಡುತ್ತದೆ. ಎಲ್ಲವುದಕ್ಕೂ ಪರಿತಪಿಸುತ್ತಾ, ನಡೆದುದ್ದಕ್ಕೆಲ್ಲ ತಾನೇ ಹೊಣೆ ಎಂದು ಹಲುಬುವುದು ಅನಗತ್ಯ ಎಂಬುದನ್ನು ಅದೆಷ್ಟು ಬೇಗ ನಾವು ಕಂಡುಕೊಳ್ಳುವೆವೋ ಅಷ್ಟೂ ಒಳ್ಳೆಯದು. ನಮ್ಮ ಆಯ್ಕೆಯನ್ನು ಮೀರಿದ ಪರಿಸ್ಥಿತಿಗೆ ಸಿಲುಕಿದಾಗಲೂ ಈ ಪರಿಸ್ಥಿತಿಗೆ ಪ್ರತಿಕ್ರಿಯಿಸುವ ಆಯ್ಕೆ ಈಗ ನಮ್ಮಲ್ಲೇ ಇದೆ ಎನ್ನುವುದನ್ನು ಆಗಾಗ ನೆನಪಿಸಿಕೊಳ್ಳುತ್ತಿರಬೇಕು. ಒಟ್ಟಾರೆ ಏನೇ ಆದರೂ ಆಯ್ಕೆಗಳೇ ಇಲ್ಲವೆಂದು ನಿಶ್ಚಯಿಸಿ ಜೀವಿಸುವುದರಿಂದ ವಿಮುಖರಾಗುವ ಬದಲು ಬದುಕುವ ಮಾರ್ಗ ಕಂಡುಕೊಳ್ಳುವುದು ಉತ್ತಮ ಆಯ್ಕೆ ಎನ್ನುವುದನ್ನು ಮರೆಯಬಾರದು
ನೋವಿನ ವಿರುದ್ಧ ಸಮರ ಬೇಡ
ಸಕಾರಾತ್ಮಕವಾಗಿ ಇರುವದೆಂದರೆ ದುಃಖ, ನೋವಿನ ಭಾವನೆಗಳನ್ನು ವಿರೋಧಿಸುತ್ತಾ ಅವುಗಳ ಮೇಲೆ ಸಮರ ಸಾರುತ್ತಾ, ನಾನು ಅಳುವುದೇ ಇಲ್ಲ, ಕಷ್ಟಗಳ ಬಗ್ಗೆ ಯೋಚಿಸುವುದೇ ಇಲ್ಲ ಎಂದು ವೇದನೆಯ ಪ್ರವಾಹಕ್ಕೆ ಸಿಲುಕಿದಾಗಲೂ ಸಕಾರಾತ್ಮಕವಾಗಿಯೇ ಇರುತ್ತೇನೆಂದು ಹೊರಟು ನಂತರ ಇದು ಆಗಲಾರದ್ದು, ವ್ಯರ್ಥ ಪ್ರಯತ್ನ ಎಂದು ಕೈಚೆಲ್ಲಿಬಿಡುವುದಲ್ಲ. ನಮಗಾಗುವ ಹಿಂಸೆ, ಸಂಕಟದ ಭಾವಗಳನ್ನು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸುತ್ತ, ಅನುಭವಿಸುತ್ತಾ it’s okay to be sad… ಈ ಘಟನೆಯಿಂದ ನನಗೆ ದುಃಖವಾಗಿದೆ… ಇರಲಿ. ತೊಂದರೆಯಿಲ್ಲ…’ ಎನ್ನುವ ಧೋರಣೆಯಲ್ಲಿ ಕಷ್ಟಕರ ಭಾವನೆಗಳಿಗೆ ತೆರೆದುಕೊಳ್ಳುವುದೂ ಸಕಾರಾತ್ಮಕತೆಯೇ. ಜೊತೆಗೇ ನೋವಿನ ಭಾವಗಳನ್ನು ಸಹಿಸಿ ಮುನ್ನಡೆಯುವುದೇ ಸಕಾರಾತ್ಮಕತೆಯನ್ನು ರೂಢಿಸಿಕೊಳ್ಳುವಲ್ಲಿ ಎದುರಿಸುವ ಪ್ರಮುಖ ಸವಾಲು
ಸಕಾರಾತ್ಮಕತೆ ಅಭ್ಯಾಸವಾಗಬೇಕು
ನಾವು ಎಷ್ಟೇ ಹಸಿವಿನಲ್ಲಿ ಅದೆಷ್ಟೇ ಪ್ರಮಾಣದ ಆಹಾರ ತಿಂದರೂ ಮುಂದಿನ ಹೊತ್ತಿಗೆ ಮತ್ತೆ ಹಸಿವೆ ಮತ್ತೆ ಊಟದ ಚಿಂತೆಯೇ. ಒಂದು ಬಾರಿ ಹೆಚ್ಚು ತಿಂದದ್ದೇ ಜೀವನವಿಡೀ ಸಾಕಾಗದು. ಅಂತೆಯೇ ಸಕಾರಾತ್ಮಕ ಆಲೋಚನೆಗಳೂ ಸಹ. ಒಂದಷ್ಟು ಹೊತ್ತು ಸಕಾರಾತ್ಮಕವಾಗಿ ಯೋಚಿಸಿದರಷ್ಟೇ ಸಾಲದು. ಖಾಲಿಯಾದ ಬ್ಯಾಟರಿಯನ್ನು ಆಗಾಗ ರೀಚಾರ್ಜ್ ಮಾಡುತ್ತಾ, ಹಸಿದ ಹೊಟ್ಟೆಯನ್ನು ಆಗಾಗ ತುಂಬಿಸುತ್ತಾ ಇರುವಂತೆ ಖಿನ್ನವಾದ ಮನಸ್ಸನ್ನು ಅವಾಗವಾಗ್ಗೆ ಧನಾತ್ಮಕಗೊಳಿಸುತ್ತಾ ಪುನಶ್ಚೇತನಗೊಳಿಸಿಕೊಳ್ಳುತ್ತಿರಬೇಕು. ಹಾಗಾದಾಗಲೇ ಸಕಾರಾತ್ಮಕ ಆಲೋಚನೆಯುಳ್ಳ ಬದುಕು ಅಭ್ಯಾಸವಾಗುತ್ತ ಹೋಗುವುದು.
ಪ್ರಫುಲ್ಲಗೊಳಿಸುವ ಮಾರ್ಗಗಳು
ಮನಕ್ಕೆ ವೇದನೆಯ ಕಾರ್ಮೋಡ ಆವರಿಸಿದಾಗ ಅತಿಯಾಗಿ ಯೋಚಿಸುತ್ತಾ ಕೂರುವ ಬದಲು ಹಿತವೆನಿಸುವ, ಉತ್ತಮ ಅಭ್ಯಾಸಗಳಲ್ಲಿ ತೊಡಗಿಕೊಂಡರೆ ಆ ಕ್ಷಣದ ನೋವೂ ನಿವಾರಣೆಯಾಗುವುದು ಜೊತೆಗೆ ಚಿಂತೆಗಳು ಮುತ್ತಿಕೊಂಡಾಗ ಜೊತೆಯಾಗಿದ್ದ ನಕಾರಾತ್ಮಕ ಯೋಚನಾ ಕ್ರಮ ಸರಿದು ಆಲೋಚನೆಗಳು ಸರಿಯಾದ ದಿಕ್ಕಿನಲ್ಲಿ ಸಾಗುವವು.
ಮನಸ್ಸನ್ನು ಚೈತನ್ಯಭರಿತಗೊಳಿಸಿಕೊಳ್ಳಲು ಇರುವ ಮಾರ್ಗಗಳು ಹಲವು. ಸ್ಪೂರ್ತಿದಾಯಕ ಕಥೆಗಳ ಓದು, ಪ್ರಫುಲ್ಲಗೊಳಿಸುವ ಸಿನಿಮಾ, ಉಲ್ಲಸಿತಗೊಳಿಸುವ ಸಂಗೀತ.. ಜೊತೆಗೆ ನಾವೇ ಹಾಡು, ನೃತ್ಯ, ಬರವಣಿಗೆ, ಚಿತ್ರಕಲೆ, ನಟನೆ.. ಹೀಗೆ ಮನಸ್ಸಂತೋಷಕ್ಕೆ ಕಾರಣವಾಗುವ ಹತ್ತುಹಲವು ಕಲಾ ಪ್ರಾಕಾರಗಳಲ್ಲಿ, ಆಸಕ್ತಿಯನ್ನು ಹಿಡಿದಿಡುವ ಉತ್ತಮ ವಿಚಾರಗಳಲ್ಲಿ ತೊಡಗಿಸಿಕೊಂಡರೆ ಮನವು ತನ್ನಿಂದ ತಾನೇ ಹರ್ಷಗೊಂಡು ಬೇಸರಗಳನ್ನು ನಿವಾರಿಸಿಕೊಳ್ಳಲು ಬೇಕಾದ ಮಾರ್ಗ ಶೋಧನೆಗೆ ಸಜ್ಜಾಗುವುದು. ಜೊತೆಗೊಂದಿಷ್ಟು ಧ್ಯಾನ, ಪ್ರಾರ್ಥನೆ.. ತಾನು ಸಮರ್ಥ, ಈ ಸವಾಲನ್ನು ಎದುರಿಸುವ ಸಂಪೂರ್ಣ ಶಕ್ತಿ ತನ್ನಲ್ಲಿದೆ ಎನ್ನುವಂತಹ ಧನಾತ್ಮಕ ಆಲೋಚನೆಗಳನ್ನು ಉಚ್ಚರಿಸುವ ಅಭ್ಯಾಸ ಬೆಳೆಸಿಕೊಂಡರಂತೂ ಮನಸ್ಸು ಹೊಸ ಚೈತನ್ಯವನ್ನು ನಿಸ್ಸಂಶಯವಾಗಿ ತನ್ನದಾಗಿಸಿಕೊಳ್ಳುವುದು.