Monday, October 2, 2023

ಆಡಿಯೋ ವಿಡಿಯೋ ಯಜ್ಞ!

Follow Us

ವಿಶ್ವಕೋಶ ರಸಯಾತ್ರೆ- 6

* ಕಲ್ಗುಂಡಿ ನವೀನ್
response@134.209.153.225
ksn.bird@gmail.com

ವಿಶ್ವಕೋಶದ ಪಠ್ಯ ಒಂದೆಡೆ ಪರಿಷ್ಕಾರವಾಗಿ ಸಿದ್ಧವಾಗುತ್ತಿರುವಾಗ ಮತ್ತೊಂದೆಡೆ ಆಡಿಯೋ, ವಿಡಿಯೋ ಯಜ್ಞ ಆರಂಭಿಸಿದೆವು.
ವಿಶ್ವಕೋಶದಲ್ಲಿ ಕಪ್ಪುಬಿಳುಪು ಚಿತ್ರಗಳಿದ್ದವು ಹಾಗೂ ಅಂದಿಗೆ ಅದು ಸೂಕ್ತವೂ ಆಗಿತ್ತು. ಆದರೆ ಡಿಜಿಟಲ್ ಆವೃತ್ತಿಗೆ? ಹಾಗಾಗಿ ಚಿತ್ರಗಳ ಹುಡುಕಾಟವೇ ಬಹಳ ದೊಡ್ಡ ಕಾರ್ಯವಾಯಿತು. ನಮ್ಮಲ್ಲಿದ್ದ ಹಿರಿಯ ಸಂಪಾದಕರುಗಳ ನಾಮಬಲವೇ ನಮ್ಮ ಮೂಲಧನ! ಹಿರಿಯ ಛಾಯಾಗ್ರಾಹಕರು ತಮ್ಮ ಚಿತ್ರಗಳನ್ನು ಒದಗಿಸಿದರು. ಸೋಮಶೇಖರ್, ಕೇಸರ್ ಸಿಂಗ್, ಜಿ ಹನುಮಂತ ರಾವ್ ಅಂತಹವರ ಚಿತ್ರಗಳು ವಿಶ್ವಕೋಶಕ್ಕೆ ದಕ್ಕಿದವು. ಕುವೆಂಪು ನಾಟಕದಲ್ಲಿ ಪಾತ್ರ ಮಾಡಿದ ಚಿತ್ರ ಸಹ ಹಿರಿಯರೊಬ್ಬರು ಒದಗಿಸಿದರು. ಅವನ್ನು ವಿಶ್ವಕೋಶದಲ್ಲಿ ನೋಡಬಹುದು.
ಇನ್ನು ಧ್ವನಿ. ಇದಕ್ಕಾಗಿ ದೇಶದ ಹೆಮ್ಮೆಯ ಸಂಸ್ಥೆಯಾದ ಆಕಾಶವಾಣಿಯನ್ನು ಸಂಪರ್ಕಿಸಿದೆವು. ಅಗತ್ಯ ಶುಲ್ಕ ಕೊಟ್ಟೆವು. ಅದೆಂಥ ನಿಧಿ ಸಿಕ್ಕಿತೆಂದರೆ ಅದನ್ನು ಕೇಳಿಯೇ ಅನುಭವಿಸಬೇಕು! ಬೇಂದ್ರೆ, ಗೋಕಾಕ, ಕಣವಿ ಮುಂತಾದವರ ಧ್ವನಿ ಅಲ್ಲಿದೆ. ವಿಶ್ವೇಶ್ವರಯ್ಯನವರ ಧ್ವನಿಯಿದೆ! ಆಕಾಶವಾಣಿಯವರು ಕೊಡುವಾಗಲೇ ಹೇಳಿದ್ದರು. ಸರ್ ಎಂವಿ ಅವರ ಧ್ವನಿ ಮುದ್ರಣವಾಗಿದ್ದು 1962ರಲ್ಲಿ. ಆಗ ಅವರಿಗೆ ನೂರು ವರ್ಷ! ಆಗಿದ್ದ ಮಾಧ್ಯಮದಿಂದ ಇಂದಿನ ಮಾಧ್ಯಮಕ್ಕೆ ಪರಿವರ್ತಿಸಿದ್ದೇವೆ. ಹಾಗಾಗಿ ಆಡಿಯೋ ಗುಣಮಟ್ಟ ಅಷ್ಟು ಚೆನ್ನಾಗಿಲ್ಲ ಎಂದು ನಾವದನ್ನು ಬಳಸಿದೆವು. ಕೆಲವೇ ಪದಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಅದರಲ್ಲಿ. ಆದರೂ ಎಂವಿ ಅವರ ಧ್ವನಿ ಎಂಬುದು ಮುಖ್ಯವಲ್ಲವೆ? ಹಾಗೆಯೇ ಕುವೆಂಪು, ಜ ಕಾರ್ಯಪ್ಪ ಇನ್ನು ಮುಂತಾದ ಘಟಾನುಘಟಿಗಳ ಧ್ವನಿ ವಿಶ್ವಕೋಶದಲ್ಲಿದೆ. ಇಲ್ಲಿ ಇನ್ನೂ ಒಂದು ವಿಷಯವನ್ನು ದಾಖಲಿಸಬೇಕು. ನಾವು ಬಹುಮಾಧ್ಯಮವನ್ನು ಹುಡುಕಲು ತೊಡಗಿದಾಗಲೇ ಒಬ್ಬರು ಬಂದು ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಎಂದು ಕೊಟ್ಟರು! ನಾವು ಮೂರ್ಚೆ ಹೋಗುವುದೊಂದೇ ಬಾಕಿ! ನಮ್ಮ ಸಂಪರ್ಕದಲ್ಲಿದ್ದ ಮೈಸೂರಿನ ರಾಮಕೃಷ್ಣ ಮಠದ ಯತಿಗಳಿಗೆ ತೋರಿಸಿದೆವು. ಅವರು “ಸ್ವಾಮೀಜಿಗಳ (ವಿವೇಕಾನಂದರ) ಯಾವ ಧ್ವನಿಯೂ ಉಳಿದಿಲ್ಲ. ಹಿಂದೆ ಶ್ರೀಮನ್ಮಹಾರಾಜರು ಧ್ವನಿಮುದ್ರಿಸಿ ಇಟ್ಟುಕೊಂಡಿದ್ದರು, ಅದು ಮೈಸೂರು ಅರಮನೆ ಅಗ್ನಿ ಅನಾಹುತಕ್ಕೀಡಾದಾಗ ನಾಶವಾಯಿತು. ಈಗ ಸ್ವಾಮೀಜಿಗಳದ್ದು ಎಂದು ಬರುತ್ತಿರುವುದೆಲ್ಲ ನಕಲಿ” ಎಂದರು, ಕೈಬಿಟ್ಟೆವು.
ಇನ್ನು ವಿಡಿಯೋಗಳು! ತುಂಬ ಕಷ್ಟವಾಗಿದ್ದು ಇವಕ್ಕೆಯೇ! ಆಗ ಯೂಟ್ಯೂಬ್ ಮಾದರಿ ವ್ಯವಸ್ಥೆಯಿರಲಿಲ್ಲ. ಎಷ್ಟೊ ಮುಖ್ಯ ಸಮಾರಂಭಗಳಲ್ಲಿಯೂ ವಿಡಿಯೋ ಮಾಡಿಸುತ್ತಿರಲ್ಲ. ಕೆಲವು ಸಮಾರಂಭಗಳಿಗೆ ನಾನೇ ವಿಡಿಯೋ ಕ್ಯಾಮೆರಾ ತೆಗೆದುಕೊಂಡು ಹೋಗಿ ವಿಡಿಯೋ ಮಾಡಿದೆ. ಈ ವಿಡಿಯೋಗ್ರಫಿಯಿಂದ ಆದ ದುಷ್ಪರಿಣಾಮವೆಂದರೆ ಈಗ ಯಾವ ಚಲನಚಿತ್ರವನ್ನು ನೋಡಿದರೂ ಇದನ್ನು ಹೇಗೆ ಚಿತ್ರೀಕರಿಸಿರಬಹುದು ಎಂದೇ ಯೋಚಿಸುವಂತಾಗುತ್ತದೆ! ನಮ್ಮ ಸರ್ಕಾರದ ದೂರದರ್ಶನ, ಕರ್ನಾಟಕ ವಾರ್ತಾ ಇಲಾಖೆ ಒಳ್ಳೆಯ ವಿಡಿಯೋಗಳನ್ನು ಕೊಟ್ಟಿತು. ಎಂ ಬಿ ಸಿಂಗ್ ಅವರ ಸಂಪರ್ಕದಿಂದ ಅನೇಕ ಸಿನೆಮಾ ನಟರ ವಿಡಿಯೋ ಸಿಕ್ಕತು. ನಟಸಾರ್ವಭೌಮ ಡಾ ರಾಜ್‌ಕುಮಾರ್, ನರಸಿಂಹರಾಜು, ಬಾಲಕೃಷ್ಣ ಹೀಗೆ ಅನೇಕರ ವಿಡಿಯೋ ಅಲ್ಲಿದೆ. ಸಿನೆಮಾ ಎಂದಾಗ ನೆನಪಾಗುವುದು ಅನಕೃ! ಹೌದು! ಏಕೆಂದರೆ ಅನಕೃ ಅವರ ವಿಡಿಯೋ ಇರಲೇ ಇಲ್ಲ! ಕೊನೆಗೆ ತುಂಬಿದ ಕೊಡ ಸಿನೆಮಾದಲ್ಲಿ ಅವರು ಮಾತನಾಡಿದ ದೃಶ್ಯವನ್ನು ಸೇರಿಸಿದ್ದಾಯಿತು. ಹಾಗೆಯೇ ಕಾಳಿಂಗರಾಯರು ಹಾಡುವ ತುಣುಕೂ ಸಹ. ಮೊದಲ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕುವೆಂಪುಅವರ. ಧ್ವನಿಯಲ್ಲಿ ” ಕನ್ನಡಪ್ರಜ್ಞೆ ವಿಶ್ವಪ್ರಜ್ಞೆಯಾಗಬೇಕು…” ಎಂಬುದನ್ನು ಕೇಳಿದಾಗ ರೋಮಾಂಚನವಾಗುತ್ತದೆ.
ವೈದ್ಯಕೀಯ ವಿಡಿಯೋಗಳಿಗಾಗಿ ಸಾಕಷ್ಟು ಹುಡುಕಿದೆವು. ಗಂಗಾರಾಮ್ಸ್‌ನಲ್ಲಿ ವಿಡಿಯೋಗಳಿದ್ದವು. ಆ ವಿಡಿಯೋ ತಯಾರಕರನ್ನು ಅನುಮತಿ ಕೇಳಿದಾಗ ಜಾರಿಕೊಂಡರು! ಅವರಿಗೆ ಅದನ್ನು ಮಾಡುವ ಅನುಮತಿಯಿದ್ದಂತೆ ಕಾಣಲಿಲ್ಲ! ಸರಿ ಬಿಟ್ಟುಬಿಟ್ಟೆವು. ಆನಂತರ ಬೆಳಗಾವಿಯ ಜೆಎನ್‌ಎಂಸಿಯ ಮ್ಯೂಸಿಯಂ ವಿಡಿಯೋಗಳನ್ನು ಬಳಸಿದೆವು. ಅವನ್ನು ಅದರ ಕರ್ತೃ ಡಾ. ನಾಗಲೋಟಿಮಠರೇ ನೀಡಿದರು. ಈ ಕುರಿತು ಮತ್ತೆ ಬರೆಯುತ್ತೇನೆ. ವನ್ಯಸಂರಕ್ಷಣೆ ಕುರಿತಾದ ವಿಡಿಯೋಗಳು ಬೇಕಾದವು. ನನ್ನ ಮಿತ್ರರು ಒದಗಿಸಿಕೊಟ್ಟರು. ಪ್ರಸಿದ್ಧ ವನ್ಯಸಾಕ್ಷ್ಯಚಿತ್ರಕಾರ ಶೇಖರ್ ದತ್ತಾತ್ರಿ ತಮ್ಮ ಸಾಕ್ಷ್ಯಚಿತ್ರಗಳನ್ನು ಬಳಸಲು ಅನುಮತಿ ಕೊಟ್ಟರು. ಇನ್ನೂ ಕೆಲವು ಅತ್ಯುತ್ತಮ ವಿಡಿಯೋಗಳು ದೊರೆತವು.
ಆಲ್ಬರ್ಟ್ ಐನ್ಸ್ಟೈನ್ ಸ್ಮಾರಕ ಸಂಸ್ಥೆಯನ್ನು ಸಂಪರ್ಕಿಸಿ ಆಡಿಯೋ ವಿಡಿಯೋ ಕೇಳಿದೆವು. ಆ ಸಂಸ್ಥೆ ವಿಧಿಸಿದ ಶುಲ್ಕ ಕೊಡಲಾಗದೆ ಬಹಳ ವಿಷಾದದಿಂದ ಆ ವಿಷಯವನ್ನು ಕೈಬಿಡಬೇಕಾಯಿತು. ಆದರೆ ಅನೇಕ ವಿಡಿಯೋಗಳು, ಹೊರಗೆ ಸಿಗದವು ವಿಶ್ವಕೋಶದಲ್ಲಿವೆ. ವಾಯುಪಡೆಯ ವಿಡಿಯೋಗಳನ್ನು ಕುರಿತು ಈಗಾಗಲೇ ಹೇಳಿದೆ. 1971ರ ಯುದ್ಧದಲ್ಲಿ ಪಾಕಿಸ್ತಾನ ಭಾರತಕ್ಕೆ ಶರಣಾದ ಸಂಗತಿಯನ್ನು ಇಂದಿರಾ ಗಾಂಧಿಯವರು ಹೇಳುತ್ತಿರುವ ಧ್ವನಿ ಇದರಲ್ಲಿದೆ. ಇನಸ್ಟ್ರುಮೆಂಟ್ ಆಫ್ ಸರೆಂಡರ್ ಅನ್ನು ಜ. ನಿಯಾಜಿ ಪಾಕಿಸ್ತಾನದ ಪರವಾಗಿ ಹಾಗೂ ಭಾರತದ ಪರವಾಗಿ ಲೆ.ಜ. ಜಗ್ಜಿತ್ ಸಿಂಗ್ ಅರೋರ ಸಹಿ ಮಾಡಿದ ಘಟನೆಯ ವಿಡಿಯೋ ಇದೆ. ಒಟ್ಟಾರೆ ಸುಮಾರು ಎರಡು ಸಿನೆಮಾದಷ್ಟು ವಿಡಿಯೋ ವಿಶ್ವಕೋಶದಲ್ಲಿದೆ.
ಅನಿಮೇಷನ್!:
ಆಗತಾನೆ ಹೆಚ್ಚು ಪ್ರಚಲಿತವಾಗುತ್ತಿದ್ದ ಅನಿಮೇಷನ್‌ಗಳನ್ನು ನೀಡಬೇಕೆಂದು ತೀರ್ಮಾನಿಸಿ ಕೆಲವು ಅನಿಮೇಷನ್‌ಗಳನ್ನು ಸೇರಿಸಲಾಯಿತು. ಇದಕ್ಕೆ ಗುಜ್ಜಾರಪ್ಪ ಅವರ ತಂಡ ತಾಂತ್ರಿಕ ಸಹಾಯ ನೀಡಿತು. ಇವುಗಳಲ್ಲಿ ಕಾವೇರಿ ನದಿ ಹುಟ್ಟುವ ಸ್ಥಳದಿಂದ ತೊಡಗಿ ಸಮುದ್ರ ಸೇರುವವರೆಗಿನ, ಸೂರ್ಯಗ್ರಹಣದ ಹಾಗೂ ಹೃದಯದ ಅನಿಮೇಷನ್‌ಗಳು ಮುಖ್ಯವಾದವು.
ವಿಶ್ವಕೋಶ ದೋಷಾತೀತ ಎಂದೇನಲ್ಲ. ತಪ್ಪುಗಳಿವೆ, ಉಳಿದಿವೆ. ಅವನ್ನು ಕುರಿತೂ ಬರೆಯುವೆ.
ಒಟ್ಟಾರೆ ಅಂದಿನ ಸಂದರ್ಭಕ್ಕೆ ನಮ್ಮ ಸೀಮಿತ ಸಂಪನ್ಮೂಲಗಳಲ್ಲಿ, ತೀವ್ರ ಆರ್ಥಿಕ ಸಂಕಷ್ಟದಲ್ಲಿ ಇಷ್ಟನ್ನು ಮಾಡಲಾಯಿತು ಎಂಬುದು ಸಮಾಧಾನ ಕೊಡುವ ಅಂಶ.

ಮತ್ತಷ್ಟು ಸುದ್ದಿಗಳು

vertical

Latest News

ಸಾಮೂಹಿಕ ಪ್ರಾರ್ಥನೆ ವೇಳೆ ಚರ್ಚ್ ಛಾವಣಿ ಕುಸಿತ: 9 ಮಂದಿ ಸಾವು, 50 ಜನರಿಗೆ ಗಾಯ

newsics.com ಸಿಯುಡಾಡ್ ಮಡೆರೊ(ಮೆಕ್ಸಿಕೋ ಸಿಟಿ): ಭಾನುವಾರದ ಸಾಮೂಹಿಕ ಪ್ರಾರ್ಥನೆಯ ಸಮಯದಲ್ಲಿ ಚರ್ಚ್‌ನ ಛಾವಣಿ ಕುಸಿದು 9 ಜನರು ಸಾವನ್ನಪ್ಪಿದ್ದು, ಸುಮಾರು 50 ಜನರು ಗಾಯಗೊಂಡಿದ್ದಾರೆ. ಸುಮಾರು...

ವಿಮಾನದಲ್ಲಿ ಉಸಿರಾಟ ಸ್ಥಗಿತವಾಗಿದ್ದ ಮಗುವಿಗೆ ಮರುಜೀವ ನೀಡಿದ ವೈದ್ಯ, ಐಎಎಸ್ ಅಧಿಕಾರಿ!

newsics.com ನವದೆಹಲಿ: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ವಿಮಾನದಲ್ಲಿದ್ದ ಐಎಎಸ್ ಅಧಿಕಾರಿ ಹಾಗೂ ವೈದ್ಯರೊಬ್ಬರು ಚಿಕಿತ್ಸೆ ನೀಡಿ ಮರುಜೀವ ನೀಡಿದ ಘಟನೆ ರಾಂಚಿ-ದೆಹಲಿ...

ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಅ.1 ರಿಂದ ಜಾರಿ!

newsics.com ಬೆಂಗಳೂರು: ಐದು ವರ್ಷಗಳ ಬಳಿಕ ರಾಜ್ಯದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲಾಗಿದೆ. ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಭಾನುವಾರದಿಂದ (ಅ.1) ಜಾರಿಯಾಗಿದೆ. ಹೊಸ ದರಗಳ ಪ್ರಕಾರ ದಸ್ತಾವೇಜುಗಳ ನೋಂದಣಿಗೆ ನೋಂದಣಿ ಮತ್ತು ಮುದ್ರಾಂಕ...
- Advertisement -
error: Content is protected !!