ಪುಸ್ತಕಗಳು ಸೃಜನಶೀಲತೆಗೂ ನಾಂದಿ ಹಾಡುತ್ತವೆ.
ಕೊಂಡು ತಂದು ಓದುವ ಪುಸ್ತಕದ ಖುಷಿಯನ್ನು ಎರವಲು ತಂದ ಪುಸ್ತಕ ಕೊಡಲು ಸಾಧ್ಯವಿಲ್ಲ. ಇನ್ಯಾವುದೋ ಕಾರಣಕ್ಕೆ ವ್ಯರ್ಥವಾಗಿ ಹಣ, ಸಮಯ ವ್ಯಯಿಸುವ ಬದಲಾಗಿ ಪುಸ್ತಕಕ್ಕೆ ವಿನಿಯೋಗಿಸಬಹುದು.
♦ ಸುಮಾವೀಣಾ
ಉಪನ್ಯಾಸಕರು, ಹಾಸನ
newsics.com@gmail.com
ಏಕಾಂತವನ್ನು ಬಯಸುವುದು ಮನುಷ್ಯನ ಸಹಜ ಗುಣ. ಇಂಥ ಏಕಾಂಥವನ್ನು ನೀಗಿಸುವುದು ಪುಸ್ತಕಾಬ್ಧಿ. ಮಸ್ತಕದಲ್ಲಿ ಜಡ್ಡುಗಟ್ಟಿದ, ಪೂರ್ವಾಗ್ರಹಪೀಡಿತ ಆಲೋಚನೆಗಳಿಂದ ಹೊರಬರಲು ಪುಸ್ತಕ ಪ್ರೀತಿ ಇರಬೇಕು. ಎಷ್ಟೇ ಒತ್ತಡದ ಬದುಕಿದ್ದರೂ ನವಚೈತನ್ಯವನ್ನು ಉದ್ದೀಪಿಸುವ ಪುಸ್ತಕದ ಓದಿಗೆ ನಮ್ಮ ಸಮಯವನ್ನು ಮೀಸಲಿರಿಸಬೇಕು.
ಶೈಕ್ಷಣಿಕ ಹಿನ್ನೆಲೆಯ ಓದು ಖಂಡಿತ ಓದು ಅಲ್ಲ. ಅಲ್ಲಿ ಅಂಕಗಳೇ ಮಾನದಂಡ. ಕೆಲವು ವೃತ್ತಿಗಳು ಓದುವಿಕೆಯನ್ನು ಅವಲಂಬಿಸಿರುತ್ತವೆ. ಉದಾಹರಣೆಗೆ, ಅಧ್ಯಾಪಕ ವೃತ್ತಿ ವಕೀಲಿ ವೃತ್ತಿ ಇತ್ಯಾದಿ… ಪುಸ್ತಕದ ಓದು ಕೇವಲ ಮನರಂಜನೆಗಾಗಿ ಅಲ್ಲ ತಿಳಿವಳಿಕೆಯ ಜತೆಗೆ ನಮ್ಮ ಪರಂಪರೆಯ ಅಗಾಧತೆಯನ್ನು ಅರ್ಥ ಮಾಡಿಕೊಳ್ಳಲೂ ಕೂಡ. ಕೆಲವು ಪುಸ್ತಕಗಳು ಜನಾಂಗದ ಅಪೂರ್ವ ಇತಿಹಾಸವನ್ನು, ವಿದ್ವತ್ಪ್ರಪಂಚವನ್ನು ಅನಾವರಣ ಮಾಡುತ್ತವೆ. ಉದಾ: ‘ಕವಿರಾಜಮಾರ್ಗ’ ಚಿಂತನೆಗೆ ಗುರಿ ಮಾಡುವ ಈ ಪುಸ್ತಕಗಳು ಸೃಜನಶೀಲತೆಗೂ ನಾಂದಿ ಹಾಡುತ್ತವೆ.
ಕೊಂಡು ತಂದು ಓದುವ ಪುಸ್ತಕದ ಖುಷಿಯನ್ನು ಎರವಲು ತಂದ ಪುಸ್ತಕ ಕೊಡಲು ಸಾಧ್ಯವಿಲ್ಲ. ಪುಸ್ತಕದ ಓದು ಗಂಭೀರ ಅನ್ನುವ ಹಾಗಿಲ್ಲ. ಅವರವರ ಮನಸ್ಸಿಗೆ ಹಿಡಿಸುವ ಸಾಹಿತ್ಯವನ್ನು ಓದಬಹುದು. ಇನ್ಯಾವುದೋ ಕಾರಣಕ್ಕೆ ವ್ಯರ್ಥವಾಗಿ ಹಣ, ಸಮಯ ವ್ಯಯಿಸುವ ಬದಲಾಗಿ ಪುಸ್ತಕಕ್ಕೆ ವಿನಿಯೋಗಿಸಬಹುದು.
‘ಗ್ರಂಥಾಲಯ’, ‘ವಾಚನಾಲಯ’, ‘ಪುಸ್ತಕಾಲಯ’ ಎಂಬ ಮಾತುಗಳು ನಮ್ಮಲ್ಲಿವೆ. ಹಾಗೆ ‘ದೇವಾಲಯ’ ಎಂಬ ಮಾತೂ ಅರ್ಥಾತ್ ಏಕಾಗ್ರತೆಯನ್ನು, ಮನಃಶಾಂತಿಯನ್ನು ಮನಸ್ಸಿಗೆ ಪ್ಪಫುಲ್ಲತೆಯನ್ನು ನೀಡುವುದು ಪುಸ್ತಕ . ಇನ್ಯಾರದ್ದೋ ವಿಚಾರವನ್ನು ಹಿಡಿದು ಹಿಂಜಿ, ಜಗ್ಗಿ ವ್ಯಂಗ್ಯ, ಕುತರ್ಕಗಳನ್ನು ಮಾಡುವ ಬದಲಿಗೆ ಹೇಳಿದ್ದನ್ನೇ ಹೇಳುವ ಕುತಂತ್ರಗಳ ಬಲೆ ಹೆಣೆಯುವ ಧಾರಾವಾಹಿಗಳ ಬದಲಿಗೆ, ಫೋನ್ ಹಿಡಿದು ಅನ್ಯರ ಕುರಿತು ಬೆನ್ನ ಹಿಂದೆ ಮಾತನಾಡುವ ಬದಲು ಕುಳಿತು ಪುಸ್ತಕ ಓದುವುದು ಒಳ್ಳೆಯದು.
‘ಅನ್ ಟು ದಲಾಸ್ಟ್’ ಎಂಬ ಪುಸ್ತಕ ಗಾಂಧಿಯನ್ನು, ‘ಉಪನಿಷದ್’ ರವೀಂದ್ರನಾಥ ಠ್ಯಾಗೋರರನ್ನು, ಗುಬ್ಬ ಮಲ್ಹಣನ ಕೃತಿಗಳು, ವಚನಶಾಸ್ತ್ರ ಪಿತಾಮಹ ಫ.ಗು. ಹಳಕಟ್ಟಿಯವರ ಮನಸ್ಸನ್ನು ಬದಲಾಯಿಸಿದಂತೆ ಅನ್ಯ ಸೃಜನಶೀಲ ಪುಸ್ತಕಗಳು ನಮ್ಮನ್ನು ವಿವೇಚನಾಶೀಲರನ್ನಾಗಿ ಮಾಡಬಹುದು.
ಏಪ್ರಿಲ್ 23 ಖ್ಯಾತ ನಾಟಕಕಾರ ವಿಲಿಯಮ ಶೇಕ್ಸ್ಪಿಯರನ ಜನನ ಮರಣದ ದಿನವೂ ಆಗಿದೆ. ಇಂಥ ಮಹಾನ್ ವ್ಯಕ್ತಿಯ ಹಿನ್ನೆಲೆಯಲ್ಲಿ ಆಚರಿಸಿಕೊಂಡು ಬರುತ್ತಿರುವ ಪುಸ್ತಕ ದಿನಾಚರಣೆಯಲ್ಲಿ ಪುಸ್ತಕಗಳು ಹೆಚ್ಚು ಹೆಚ್ಚು ಓದುಗರ ಕೈ ಸೇರುವಂತಾಗಬೇಕು. ಪುಸ್ತಕ ಪ್ರೀತಿ ಹಿರಿ ಕಿರಿಯರಲ್ಲಿ ಬೆಳೆಯಬೇಕು.