Sunday, December 5, 2021

ಕೊರೋನಾ ಮತ್ತು ಕಾಫಿ ಬೆಳೆಗಾರ

Follow Us

Nandini Vishwanath Heddurga
* ನಂದಿನಿ ವಿಶ್ವನಾಥ ಹೆದ್ದುರ್ಗ
ಬರಹಗಾರರು, ಕೃಷಿಕರು
response@134.209.153.225
newsics.com@gmail.com
 
ಹಣದಾಸೆ ಬಿಟ್ಟು ಹಲಸಿನಂತಹ ಕಾಯಿ, ಹಣ್ಣುಗಳನ್ನು ಮೂಕ ಪ್ರಾಣಿಗಳಿಗಾಗಿ ಮೀಸಲಿಟ್ಟರೆ ಅವುಗಳಿಗೂ ಬದುಕು, ನಮಗೂ ತುಸು ನೆಮ್ಮದಿ. ನಮ್ಮ ಉಳಿದ ಬೆಳೆಗಳೂ ಸುರಕ್ಷಿತ. ನಮ್ಮ ಆರೋಗ್ಯವೂ ಸೇಫ್. ಆಲೂರು ತಾಲ್ಲೂಕಿನ ಪ್ರಗತಿಪರ ಕಾಫಿ ಬೆಳೆಗಾರ ಎಮ್.ಈ. ಮಹೇಶ ಅವರಂತೆ ನಾವೂ ಮಾದರಿಯಾಗೋಣ ಎನ್ನುತ್ತಾರೆ, ಅದೇ ಹಾದಿಯಲ್ಲಿ ಸಾಗಿರುವ ನಂದಿನಿ.

===

ಕೊರೋನಾ ಮಹಾಮಾರಿ ಕೋವಿಡ್ 19 ಹೆಸರಿನಲ್ಲಿ ಸಾವಿನ ಪ್ರತಿ ರೂಪವಾಗಿ ಇಡೀ ವಿಶ್ವವನ್ನು ವ್ಯಾಪಿಸುತ್ತಿದೆ. ಮುಂದುವರೆದ, ಮುಂದುವರೆಯುತ್ತಿರುವ, ಹಿಂದುಳಿದ, ಬಡರಾಷ್ಟ್ರ… ಹೀಗೆ ಕೋವಿಡ್ ಎಂಬ ಯಮದೂತನಿಗೆ ಯಾವ ಭಿನ್ನಬೇಧವಿಲ್ಲದೆ ಸರ್ವ ದೇಶಗಳನ್ನೂ ಸಮನಾಗಿ ತನ್ನ ಬೃಹತ್ ತೋಳುಗಳಿಂದ ವ್ಯಾಪಿಸುತ್ತಾ ಬಂದಿದೆ.
ಮನುಷ್ಯ ತನ್ನೆಲ್ಲಾ ಅಹಂಕಾರ, ಅಸೂಯೆ, ಅಸಹನೆಗಳನ್ನು ಬದಿಗೊತ್ತಿ ಕೊರೋನಾ ಎಂದೊಡನೆ ಒಳಗಿಂದೊಳಗೇ ನಖಶಿಖಾಂತ ನಡುಗುತ್ತಿದ್ದಾನೆ.
ಕಾರಣ ಕೊರೋನಾ ವೈರಾಣುವಿನ ಜೀವಿತ ಶೈಲಿ ಮತ್ತು ಹರಡುವ ವೇಗ.
ಸೋಂಕಿತ ವ್ಯಕ್ತಿಯೊಬ್ಬನಿಂದ ಹೊರಚಿಮ್ಮಲ್ಪಟ್ಟ ವೈರಾಣು ತಣ್ಣಗಿನ ಪರಿಸರದಲ್ಲಿ ಎಂಟು ಗಂಟೆಗಳ ಕಾಲ ಜೀವಂತವಿದ್ದು ಅದಕ್ಕೆ ತಾಕಿಸಿಕೊಂಡವರಿಗೆ ಅಂಟುವ ಮಹಾಮಾರಿ. ಜತೆಗೆ ಕೊರೋನಾ ಸೋಂಕು ತಗುಲಿದ ಒಬ್ಬ ಆರೋಗ್ಯವಂತ ವ್ಯಕ್ತಿ ಹದಿನೈದು ದಿನಗಳವರೆಗೆ ವೈರಸ್ಸನ್ನೂ ತನಗೂ ತಿಳಿಯದಂತೆ ಹರಡುತ್ತಲೇ ಇರುತ್ತಾನೆ.
ಇದಕ್ಕಾಗಿಯೇ ಸರ್ಕಾರ ಒಂದು ದಿನದ ಜನತಾ ಕರ್ಫ್ಯೂ ವಿಧಿಸಿ, ಹೊಟೆಲ್ ಬೇಡ, ಪ್ರಯಾಣ ಬೇಡ, ಸಿನೆಮಾ ಬೇಡ, ಮಾಲ್ ಬೇಡ, ಜಾತ್ರೆ ಬೇಡ, ಸಮ್ಮೇಳನ ಬೇಡ, ಉತ್ಸವ ಬೇಡ, ತೇರು ಬೇಡ, ಮದುವೆ, ನಾಮಕರಣ, ಸೀಮಂತ ಬೇಡವೇ ಬೇಡ ಅಂತ ‘ಬೇಡ’ಗಳ ಬೇಡಿ ತೊಡಿಸಿ ಕೊರೋನಾ ವೈರಸ್ಸಿನ ಸೋಂಕು ಸರಪಳಿಯನ್ನು ಮುರಿಯಲೆತ್ನಿಸಿದೆ.
ಒಳ್ಳೆಯ ಕೆಲಸ.
ಆಗಲೇಬೇಕಾದ ತುರ್ತಿನ ಕೆಲಸ.
ಇದಕ್ಕೆ ನಮ್ಮೆಲ್ಲರ ಸಂಪೂರ್ಣ ಸಹಕಾರವಿದೆ.

ಇತ್ತೀಚಿನ ವರ್ಷಗಳಲ್ಲಿ ಹಕ್ಕಿ ಜ್ವರ, ಹಂದಿ ಜ್ವರ, ಹೆಚ್ ಒನ್ ಎನ್ ಒನ್, ಡೆಂಗ್ಯೂ, ಚಿಕೂನ್ಗುನ್ಯಾ ಇನ್ನೂ ಎಂತೆಂತದ್ದೋ ಭಯಾನಕ ಹೆಸರುಗಳ ಜ್ವರಗಳು ಬಂದವು, ಹೋದವು.
ಕೆಲಕಾಲ ಇದ್ದು ಕಾಲನ ಮಹಿಮೆಯನ್ನು ಜಗತ್ತಿಗೆ ತೋರಿಸಿ ಖಾಲಿಯಾದವು. ಕೆಲವು ಅಲ್ಲಲ್ಲಿ ಸಣ್ಣದಾಗಿ ಕುರುಹು ಉಳಿಸಿಕೊಂಡಿವೆ.
ಇದೂ ಹೀಗೆಯೇ‌.
ಒಂದು ವೈರಸ್ಸು ತನ್ನ ಉಳಿಯುವಿಕೆಗೆ ಪರಿಸರ ಸಹಕರಿಸದಿದ್ದಾಗ ತಾನೂ ಹೊರಡುವುದೇ.
ಆದರೆ…
ಅಲ್ಲಿಯವರೆಗೆ ಜಗ ಧಗಧಗ..

***

ಕೊರೋನಾ ಜತೆಗೆ ಹಕ್ಕಿಜ್ವರವೂ ಅಲ್ಲಲ್ಲಿ ಕಾಣಿಸಿ ಕೋಳಿ ಸಾಕಾಣಿಕೆ ಕೇಂದ್ರಗಳು ತಮ್ಮಲ್ಲಿನ ಕೋಳಿಗಳ ಇಡೀ ಸಮೂಹವನ್ನೇ ಪೂರ್ತಿಯಾಗಿ ಗುಂಡಿ ತೋಡಿ ಮುಚ್ಚಿ ಹಾಕುತ್ತಿರುವುದನ್ನೂ ನಾವು ಅಲ್ಲಲ್ಲಿ ಕೇಳ್ತಿದ್ದೇವೆ… ಕೋಳಿ ಮಾಂಸ ಪ್ರಿಯರು ತುಸು ಪರದಾಡುವಂತಾಗಿರುವುದಂತೂ ಸತ್ಯ.
ಕೋಳಿ ಮಾಂಸದ ಲಭ್ಯತೆ ಇಲ್ಲದೇ ಇದ್ದಾಗ ಅದಕ್ಕೆ ಅತ್ಯಂತ ಸನಿಹವಾದ ಮತ್ತು ಸುಲಭದಲ್ಲಿ ಸಿಗಬಹುದಾದ ಬದಲಿ ಮೂಲ ಎಂದರೆ ಹಲಸಿನ ಬಡುಕು‌ ಅಥವಾ ಹಲಸಿನ ಗುಜ್ಜೆ.
ರುಚಿಯಲ್ಲೂ ತಯಾರಾದ ಮೇಲಿನ ಆಕಾರದಲ್ಲೂ ಕೋಳಿಮಾಂಸಕ್ಕೆ ಅತ್ಯಂತ ಸನಿಹವಾಗಿರುವ ಹಲಸಿನ ಬಡುಕಿಗೆ ಈಗ ಭಾರಿ ಬೆಲೆ. ಕೆಜಿಗೆ 185ರಿಂದ 200ರವರೆಗೆ ಮಾರಾಟವಾದ ಈ ಎಳೆ ಹಲಸು ನಮ್ಮಲ್ಲಿ ಅಂದರೆ ನಮ್ ಸಕಲೇಶಪುರ, ಆಲೂರು, ಚಿಕ್ಕಮಗಳೂರು, ಕೊಡಗಿನ ಕಾಫಿ ಮತ್ತು ಅಡಕೆ ತೋಟಗಳಲ್ಲಿ ಸಾಕಷ್ಟು ಲಭ್ಯತೆಯಿದೆ.
ವ್ಯಾಪಾರಿಗಳು ನಮ್ಮನ್ನು ಇನ್ನಿಲ್ಲದಂತೆ ಹಲಸಿನ ಬಡುಕಿಗಾಗಿ ಎಡತಾಕುತ್ತಿದ್ದಾರೆ.
– ಹಾಗಿದ್ದರೆ ಬೆಳೆಗಾರರು ಈಗ ಏನು ಮಾಡಬೇಕು.?
– ಕಾಫಿಗೂ ಮೆಣಸಿಗೂ ಅಡಕೆಗೂ ಸಿಕ್ಕಿದ ಬೆಲೆ ಅಲ್ಲಲ್ಲಿಗೇ ಸರಿಯಾಗುವುದರಿಂದ ಅಚಾನಕ್ಕು ಸಿಕ್ಕ ಈ ಸದವಕಾಶವನ್ನು ಉಪಯೋಗಿಸಿಕೊಳ್ಳಬೇಕೇ…?
– ಬದಲಿ ಆದಾಯವೆಂದು ಪರಿಗಣಿಸಿ ಈ ಎಳೆ ಹಲಸನ್ನು ಟನ್ನುಗಟ್ಟಲೇ ಕೇಳುವ ವ್ಯಾಪಾರಿಗಳಿಗೆ ಕೊಟ್ಟು ದುಡ್ಡು ಎಣಿಸಬೇಕೆ?
– ಅಥವಾ ಪ್ರತಿವರ್ಷ ಹಲಸಿಗಾಗೇ ಬರುವ ಮಂಗ, ಆನೆ ನವಿಲು, ಹಂದಿ, ಕಡವೆಗಳಿಂದ ಮುಕ್ತಿ ಪಡೆಯಲು ಮುಖ್ಯವಾಗಿ ಆನೆಗಳಿಂದ ಮುಕ್ತಿ ಪಡೆಯಲು ಬಡುಕು ಕೊಟ್ಟು ಕೈ ತೊಳೆದುಕೊಳ್ಳುವುದು ಸೂಕ್ತವಾ…?
ಈ ಕುರಿತು ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಪ್ರಗತಿಪರ ಕಾಫಿ ಬೆಳೆಗಾರರಾದ ಎಮ್.ಈ. ಮಹೇಶ ಅವರು ರಾಜ್ಯದ ಕಾಫಿ ಬೆಳೆಗಾರರಿಗೂ, ಸರ್ಕಾರಕ್ಕೂ, ಅರಣ್ಯ ಇಲಾಖೆಗೂ, ಪ್ರಾಣಿ ದಯಾಸಂಘಕ್ಕೂ ಒಂದು ಮನವಿ ಮಾಡಿಕೊಂಡಿದ್ದಾರೆ.
ಕೊರೋನಾದಿಂದಾಗಿ ರಾಜ್ಯದ ಎಲ್ಲಾ ಭಾಗದಲ್ಲೂ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ ಅಥವಾ ಇಲ್ಲವೇ ಇಲ್ಲ.
ರಾಜ್ಯದ ಬಹಳಷ್ಟು ಪ್ರವಾಸಿತಾಣಗಳಲ್ಲಿ ಮಂಗಗಳು ತಮ್ಮ ನಿತ್ಯದ ಆಹಾರವನ್ನು ಕಂಡುಕೊಳ್ಳುತ್ತಿದ್ದುದೇ ಈ ಪ್ರವಾಸಿಗರೂ ಪ್ರೀತಿಯಿಂದ ಕೊಡುತ್ತಿದ್ದ ಆಹಾರದಿಂದ ಅಥವಾ ಅವರು ತಿಂದು ವ್ಯರ್ಥ ಮಾಡಿದ ಆಹಾರ ಪದಾರ್ಥಗಳಿಂದ.
ಆದರೆ ಪ್ರವಾಸಿಗರೇ ಇಲ್ಲದೆ ಇಲ್ಲಿ ಕಸಿಯಲು, ಪಡೆಯಲು ಆಹಾರವಾದರೂ ಎಲ್ಲಿಂದ ಬರಬೇಕು?
ಕಡುಬೇಸಿಗೆಯ ಈ ದಿನಗಳಲ್ಲಿ ಮರಮುಟ್ಟುಗಳಲ್ಲಿ ಅವಶ್ಯ ಚಿಗುರು, ಹೂವು ಹಣ್ಣೂ ಇಲ್ಲದೆ ಕುಡಿಯುವ ನೀರೂ ಸಿಗದೆ ಅದೆಷ್ಟೋ ಮಂಗಗಳು ಅಸುನೀಗುತ್ತಿವೆ. ಅದೂ ಅಲ್ಲದೆ ಪ್ರವಾಸಿಗರು ಕೊಟ್ಟ ಆಹಾರವನ್ನೇ ತಿಂದ ಈ‌ ಮಂಗಗಳು ತಮ್ಮ ಪಾಲಿನ ಆಹಾರವನ್ನು ಹುಡುಕುವ ಹುಕಿಯನ್ನು ಈಗಾಗಲೇ ಕಳೆದುಕೊಂಡಿವೆ. ಒಂದು ‌ಮೂಲದ ಪ್ರಕಾರ ಪ್ರವಾಸಿ ತಾಣಗಳಲ್ಲಿರುವ ಲಕ್ಷಾಂತರ ಮಂಗಗಳು ಆಹಾರವಿಲ್ಲದೆ ಹಸಿವಿನಿಂದ ಸಾವನ್ನಪ್ಪುತ್ತಿವೆ. ಆರೋಗ್ಯವಿಲ್ಲದ ಆ ಪ್ರಾಣಿಗಳ ದೇಹಕ್ಕೆ ಯಾವುದೇ ಸೋಂಕು ಅತೀ ಸುಲಭವಾಗಿ ಹರಡುತ್ತದೆ. ಅಲ್ಲಿಂದ ಮನುಷ್ಯರಿಗೆ.

ಕಾಡಿಗೆ ಸಮರೋಪಾದಿಯಲ್ಲಿ ಬಿಟ್ಟರೂ ಅರಸಿ ತಿನ್ನುವ ಪ್ರವೃತ್ತಿ ಮರೆತ ಮಂಗಗಳಿಗೆ ಸಾವೇ ಗತಿ.
ಇದೂ ಕೂಡ ಮನುಷ್ಯನೇ ಸೃಷ್ಟಿಸಿದ ವಿಕೃತಿ.
ಆದರೆ..
ಅವುಗಳು ಎಷ್ಟೇ ಇರುಸುಮುರುಸು ಮಾಡಿದರೂ ಜೀವಜಾಲದಲ್ಲಿ ಅವಕ್ಕೂ ಬದುಕುವ ಹಕ್ಕಿದೆ.
ಇಂತುಹುದೇ ಕಾರಣಗಳಿಗಾಗಿ ಕೆಲವು ವಿಶೇಷ ಜಾತಿಯ ಮಂಗಗಳು ಸಂತತಿ ವಿನಾಶದಂಚಿಗೆ ತಲುಪಿದೆ‌.

ಹಾಗಾದರೆ ನಾವೇನು ಮಾಡಬಹುದು…?
– ಮಾಡಿದ ಮಹಾಪಾಪ,ಪ್ರಕೃತಿಗೆ ವಿರುದ್ದವಾಗಿ ಎಸಗಿದ ದುಷ್ಕ್ರತ್ಯಗಳ ಒಟ್ಟು ಮೊತ್ತ ನಮ್ಮ ಎದುರು ಹೀಗೆ ಬಗಬಗೆಯ ರೋಗಗಳ ರೂಪದಲ್ಲಿ ಜಗತ್ತು ವ್ಯಾಪಿಸುತ್ತಿರುವಾಗ ಇನ್ನಾದರೂ ನಾವು ತುಸು ಮಾನವೀಯತೆ ತೋರಬಹುದೇ?
– ಹಣವನ್ನು ಎಣಿಸುವುದೇ ನಮ್ಮ ಬದುಕಾಗುವ ಅವಶ್ಯಕತೆ ಇದೆಯೇ..?
– ನಾವೂ ಬದುಕಿ ಇತರೆ ಜೀವಿಗಳನ್ನೂ ಬದಕಲು ಬಿಡುವುದೇ ಉಳಿದೆಲ್ಲ ಭಕ್ತಿಗಿಂತಲೂ ಮಿಗಿಲಲ್ಲವೇ.?
– ಇದನ್ನೇ ತಾನೇ ನಮ್ಮ ಪೂರ್ವಿಕರು ಪಾಲಿಸಿಕೊಂಡು ಬಂದು ಈ ಪರಿಸರವನ್ನು ಇಷ್ಟು ಸಹಜ ಸುಂದರವಾಗಿ ನಮಗೆ ಬಿಟ್ಟುಕೊಟ್ಟಿರುವುದು?
ಹೀಗಂತ ಆ ಹಿರಿಯ ಬೆಳೆಗಾರರು ಕೇಳುತ್ತಾರೆ.

ತೋಟದ ಹಲಸಿನ ಮರದಲ್ಲಿ ಬಡುಕುಗಳನ್ನು ಮಾರಾಟ ಮಾಡುವುದನ್ನು ಈ ಕ್ಷಣದಿಂದ ಸ್ವಯಂಪ್ರೇರಣೆಯಿಂದ ಬಿಟ್ಟು ಬಿಡೋಣ. ತಮ್ಮ ಅಕ್ಕಪಕ್ಕದ ತೋಟಗಳ ಮಾಲೀಕರಿಗೂ ಈ ವಿಚಾರದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ.

ಮೂವತ್ತರಿಂದ ನೂರು ಕೆಜಿಯವರೆಗೂ ಪಕ್ವವಾದ ಮೇಲೆ ತೂಗುವ ಈ ಹಲಸನ್ನು ಹಣಕ್ಕಾಗಿ ಎರಡು ಕೆಜಿ ಇರುವಾಗಲೇ ಕೀಳಿಸಿಕೊಡಬೇಕೇ?
ಹತ್ತು ಮಂಗಗಳ, ಒಂದು ಆನೆಯ, ಇಪ್ಪತ್ತು ನವಿಲಿನ, ಅಸಂಖ್ಯಾತ ಹಕ್ಕಿಗಳ, ಎಷ್ಟೆಷ್ಟೋ ಕಡವೆ, ಕಾಡೆಮ್ಮೆಗಳ ಹೊಟ್ಟೆಗೆ ಒಂದು ಹೊತ್ತಿನ ಮೃಷ್ಟಾನ್ನವಾಗುವ ಹಲಸನ್ನು ಕೇವಲ ಹಣಕ್ಕಾಗಿ, ಬಾಯಿಚಪಲಕ್ಕಾಗಿ ಕೀಳಿಸಿ ಮಾರುವುದೆಷ್ಟು ಸರಿ.
ಮನುಷ್ಯನಿಗಾದರೆ ಬಗೆಬಗೆಯ ತರಕಾರಿಗಳಿವೆ.
ತರಹೇವಾರಿ ಧಾನ್ಯಗಳಿವೆ.
ಕೋಳಿಯಲ್ಲದಿದ್ದರೂ ಮಾಂಸಕ್ಕೆ ಬೇಕಷ್ಟು ಪ್ರಾಣಿಗಳಿವೆ.
ಆದರೆ… ಪ್ರಾಣಿಗಳಿಗೆ.?
ಅದೂ ಈ ದುರಿತ ಕಾಲದಲ್ಲಿ?
ಇನ್ನೇನು ಹಲಸು ಹಣ್ಣಾಗುವ ಕಾಲ…
ಮರದಲ್ಲಿದ್ದರೆ ಆನೆಗೂ, ಹಕ್ಕಿಗೂ, ಮಂಗಕ್ಕೂ ಆಹಾರವಾಗುವ ಹಲಸು…
ನೆಲಕ್ಕೆ ಬಿದ್ದರೆ ಕಡವೆ, ಜಿಂಕೆ ಕಾಡೆಮ್ಮೆ, ಹಂದಿ ಕರಡಿಗಳಿಗೆ ಪುಷ್ಟಿದಾಯಕವಾದ ಆಹಾರ…
ಇನ್ನೂ ಹಣ್ಣು ತಿಂದು ಉಳಿದ ಹಲಸಿನ ಬೀಜಗಳನ್ನೇ ತಮ್ಮ ಆಹಾರವಾಗಿಸಿಕೊಂಡಿರುವ ಮೊಲದ ಜಾತಿಯ ಪ್ರಾಣಿಗಳು ಕೆಲವು ಪಕ್ಷಿಗಳು ಹಲಸಿನ ಗಾಳನ್ನೇ ನೆಚ್ಚಿಕೊಂಡು ಬದುಕುತ್ತವೆ.
ಇದಾವುದೂ ತಿನ್ನಲಿಲ್ಲವೆಂದು ಕೊಂಡರೂ ನೆಲಕ್ಕೆ ಬಿದ್ದ ಹಲಸಿನ ಹಣ್ಣು ಮಣ್ಣಿನೊಂದಿಗೆ ಕಳಿತರೆ ಉತ್ಕೃಷ್ಟ ಗೊಬ್ಬರ..
ಹಲಸಿನ ಮರದ ಬುಡದಲ್ಲಿ ಕಾಫಿ ಮೆಣಸಿನ ಫಸಲು ಇಳುವರಿ ಕೂಡ ಅತ್ಯುತ್ತಮ.
ಹತ್ತಿ‌ಮರವೂ ಹೀಗೆ. ಅದರ ಹಣ್ಣುಗಳು ಪ್ರಾಣಿಗಳಿಗೆ ಅತೀ ಸ್ವಾದಿಷ್ಟ ‌ಮತ್ತು ಪುಷ್ಟಿದಾಯಕ.
ಆದರೆ ಹತ್ತಿಯ ಅತಿ ಬೆಳವಣಿಗೆಯಿಂದ ‌ಮರಗಸಿಯಲ್ಲಿ ಆಗುವ ಖರ್ಚು ನಿಭಾಯಿಸಲು ಶಕ್ಯರಲ್ಲದ ಬೆಳೆಗಾರರು ಹತ್ತಿ ಮರವನ್ನೇ ತೋಟದಿಂದ ಖಾಲಿಯಾಗಿಸುತ್ತಿದ್ದಾರೆ.
ಇರಲಿ, ಹಲಸನ್ನು ಬಹುಪಾಲು ಬೆಳೆಗಾರರು ಉಳಿಸಿಕೊಂಡಿರುವುದು ಅದರ ಮರದ(ಪೀಠೋಪಕರಣ) ಉಪಯೋಗದಿಂದ.
ಅದರ ಜತೆಗಿಷ್ಟು ಪ್ರಕೃತಿಗೆ ಪೂರಕವಾದ ಕೆಲಸವೂ ಆದರೆ ನಮಗೂ ತೃಪ್ತಿ.
ಪ್ರಾಣಿಗಳಿಗೂ ಹಸಿವಿನಿಂದ ಮುಕ್ತಿ.
….
“ಕಾಡಾನೆ ನವಿಲು ಮಂಗಗಳ ಹಾವಳಿಯಿಂದ ಈಗಾಗಲೇ ನಷ್ಟದಲ್ಲಿರುವ ಬೆಳೆಗಾರ ಇನ್ನಷ್ಟು ನಷ್ಟ ಅನುಭವಿಸುತ್ತಿದ್ದಾನೆ.
ಅದರಲ್ಲೂ ತೋಟದಲ್ಲಿ ಇವುಗಳು ಸೇವಿಸುವ ಕಾಡುಜಾತಿಯ ಹಣ್ಣಿನ‌ ಮರವಿದ್ದರೆ ಆ ತೋಟ ಉಳಿದಂತೆಯೇ” ಅನ್ನುವವರೂ ಇದ್ದಾರೆ.
ಆದರೆ ಕಾಡಾನೆ ಜತೆಗೇ ಬದುಕು ಸಾಗಿಸುವ ದುರ್ಬರ ಪರಿಸ್ಥಿತಿ ನಮ್ಮ ಆಲೂರು ತಾಲೂಕಿನ ಹಲವು ಹಳ್ಳಿಗಳದ್ದು. ಅದರಲ್ಲಿ ಎಮ್.ಈ. ಮಹೇಶರವರು ಕೂಡ ಒಬ್ಬರು.
ಅವರ ಅನುಭವದ ಪ್ರಕಾರ ಆನೆಯೊಂದು ಈಗ ಹತ್ತು ವರ್ಷಗಳ ಹಿಂದೆ ತಿಂದುಹೋದ ಹಲಸಿನ ಮರವನ್ನು ತನ್ನ ಜೀವಿತಾವಧಿಯವರೆಗೂ ನೆನಪಿಟ್ಟುಕೊಂಡು ಪ್ರತಿ ಋತುವಿನಲ್ಲೂ ಅಲ್ಲಿ ಒಮ್ಮೆ ನೋಡಿ ಹೋಗುತ್ತದೆ. ಅವುಗಳ ಬಯೋಕ್ಲಾಕ್ ಅಷ್ಟು ಸಶಕ್ತವಾಗಿರುತ್ತದೆ.
ತೋಟದಲ್ಲಿ ವಾಸಿಸುವ ಇತರೆ ಪ್ರಾಣಿಗಳೂ ಹಸಿದು ಮರವನ್ನು ನೋಡಿದಾಗ ಇಲ್ಲದೇ ಹೋದರೆ ಅವುಗಳಿಗಾಗುವ ನಿರಾಸೆಯೆಷ್ಟು?
ಹಸಿವು ಅವುಗಳನ್ನು ಕಂಗೆಡಿಸಿದ್ದರೆ ಮರದಲ್ಲಿ ಹಣ್ಣುಗಳು ಇಲ್ಲದ್ದು ಕಂಡು ಕೆರಳಿ ತೋಟವನ್ನು, ವ್ಯವಸ್ಥೆಯನ್ನೂ ಹಾಳುಗೆಡವಬಹುದು. ಆದರೆ ಹಣ್ಣಿದ್ದರೆ ತನ್ನ ಪಾಡಿಗೆ ತಿಂದು ತನ್ನ ಎಂದಿನ ಹಾದಿಯಲ್ಲಿ ಹಿಂದಿರುಗುತ್ತದೆ.
“ಯಾವುದನ್ನು ಬದಲಾಯಿಸಲಾಗದೋ ಅದಕ್ಕೆ ಹೊಂದಿ, ಪೂರಕವಾಗಿ ನಡೆದುಕೊಳ್ಳಬೇಕಾದ್ದು ಸೃಷ್ಟಿಯ ಸುಪೀರಿಯರ್ ತಳಿಯಾದ ಮನುಷ್ಯ ಮಾತ್ರನಿಗೆ ಇರಬೇಕಾದ ಕಿಂಚಿತ್ ನಡವಳಿಕೆ.”
ಪ್ರತಿ ಜೀವಿಗೂ ಪ್ರಕೃತಿಯ ಒಂದೊಂದು ಫಲ ಅದರ ಆಹಾರ ಸರಪಳಿ..
ನಮ್ಮ ದುರಾಸೆಗೆ ಈ ಆಹಾರ ಸರಪಳಿ ತುಂಡಾಗಬೇಕೆ?
ಮಾತು ಬಾರದ ಮೂಕ ಜೀವಿಗಳು ಹಸಿವಿನಿಂದ ಕಂಗೆಡಬೇಕೇ?
ಕಾಫಿ ತೋಟದಿಂದ ಪುಕ್ಕಟೆ ಎನ್ನುವಂತೆ ಖರೀದಿಸಿದ ಈ ಹಲಸಿನ ಬಡುಕು ಕೇರಳ ತಲುಪಿ ಟನ್ನಿಗೆ ಹದಿನೈದರಿಂದ ಇಪ್ಪತ್ತು ಸಾವಿರದವರೆಗೆ ಮಾರಾಟವಾಗಿ ಕೇವಲ ವ್ಯಾಪಾರಿಗಳ ದುರಾಸೆ ಹೆಚ್ಚಿಸುತ್ತಿದೆಯೇ ಹೊರತು ಮತ್ತೇನೂ ಇಲ್ಲ.

ಕಾಫಿ ಸಂಬಂಧಿ ಸಂಘ- ಸಂಸ್ಥೆಗಳು ಈ ನಿಟ್ಟಿನಲ್ಲಿ ವಿಶೇಷ ಪ್ರಚಾರವನ್ನು ತಕ್ಷಣದಲ್ಲೇ ಕೈಗೊಳ್ಳಬೇಕು.
– ಕಾಫಿ ತೋಟದಿಂದ ಈ ದಿನದಿಂದ ಹಲಸಿನ ಬಡುಕು ವ್ಯಾಪಾರಿಗಳ ಪಾಲಾಗಬಾರದು.
– ಮೂರುಕಾಸಿನ ಹಣಕ್ಕೆ ಆಸೆ ಪಟ್ಟು ನಮ್ಮ ಅದ್ಭುತ ಪರಿಸರ, ಪ್ರಾಣಿ ಪಕ್ಷಿ ಗಳ ಹಸಿವಿನ‌ ಮೇಲೆ ಹೊಡೆಯಬಾರದು ಎನ್ನುವುದನ್ನು ಪ್ರತಿ ಬೆಳೆಗಾರನೂ ತಿಳಿದುಕೊಳ್ಳುವಂತೆ ತಿಳಿಹೇಳಬೇಕಾದ್ದು ನಮ್ಮದೇ ಕರ್ತವ್ಯವಲ್ಲವೇ?
– ಎಲ್ಲೋ ಪ್ರವಾಸಿಗರಿಲ್ಲದೆ ಸಾಯುವ ಮಂಗಗಳಿಗೂ ನಮ್ಮ ತೋಟದ ಹಲಸಿಗೂ ಯಾವ ಬಾದರಾಯಣ ಸಂಬಂಧ?
ಎನ್ನುವ ಮಾತನ್ನು ಬೆಳೆಗಾರರು ಈ ಕ್ಷಣ ಚಿತ್ತದಿಂದ ಕಿತ್ತುಹಾಕಿ ಕೊನೇ ಪಕ್ಷ ನಮ್ಮಲ್ಲಿರುವ ಪ್ರಾಣಿಪಕ್ಷಿಗಳನ್ನು ನಾವು ಸಲಹುತ್ತಿದ್ದೇವೆ ಎನ್ನುವ ತೃಪ್ತ ಮನಸ್ಥಿತಿ ನಮ್ಮದಾಗಬಹುದಲ್ಲವೇ.?
– “ಫಲ ಹಂಚಿ ಪಾಪ ಕಳೆ” ಎನ್ನುವ ಹಿರಿಯರ ಮಾತಿನಂತೆ ನಮಗೆ ಕಾಸು ಖರ್ಚಿಲ್ಲದೇ ಒದಗಿ ಬಂದಿರುವ ಈ ‌ಪುಣ್ಯ ಕೆಲಸದಲ್ಲಿ ಪ್ರತಿ ಬೆಳೆಗಾರನೂ ಭಾಗಿಯಾಗಲೇಬೇಕು.
– ಪ್ರಾಣಿಗಳಿಗೆ ಆಹಾರ ಉಳಿಸುವ ಮೂಲಕ ಅವುಗಳ ಆರೋಗ್ಯವನ್ನೂ ಬಲಪಡಿಸಿ ಅವುಗಳಿಗೆ ಸೋಂಕು ಹರಡದಂತೆ ಎಚ್ಚರವಹಿಸಿ ನಾವೂ ಸ್ವಸ್ಥರಾಗುಳಿಯೋಣಾ.
– ಈ ನಿಟ್ಟಿನಲ್ಲಿ ಸರ್ಕಾರ, ಅರಣ್ಯ ಇಲಾಖೆ, ಮತ್ತು ಪ್ರಾಣಿ ದಯಾಸಂಘದವರು ಕಾರ್ಯಪ್ರವೃತ್ತರಾಗಬೇಕು.
ಹೀಗೆ ಲೋಡುಗಟ್ಟಲೇ ಸಾಗಿಸುವ ಹಲಸಿನ ಬಡುಕಿನ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿ ದಂಡ, ಶಿಕ್ಷೆ ನೀಡುವುದರ ಮೂಲಕ ನಮ್ಮ ವನ್ಯಜೀವಿಗಳ ಹಸಿವು ನೀಗಿಸಿದ ಪುಣ್ಯ ಕಾರ್ಯ ನಮ್ಮದಾಗುತ್ತದೆ.

ಹಿರಿಯ ಬೆಳೆಗಾರರೊಬ್ಬರ ಪ್ರಾಣಿಗಳ ಹಸಿವಿನ ಕುರಿತಾದ ಆತಂಕಕ್ಕೆ, ಪರಿಸರ ಪ್ರೀತಿಗೆ ನಾವೂ ಕೈಗೂಡಿಸೋಣ.
ಹಣವೇ ಎಲ್ಲವೂ ಅಲ್ಲ.
ನಮ್ಮ ಪಾಪಗಳಿಗೆ ಕಿಂಚಿತ್ತಾದರೂ ಮುಕ್ತಿ ದೊರಕುವ ಬಗೆ ನಮಗೆ, ಬೆಳೆಗಾರರಿಗೆ ಅನಾಯಾಸವಾಗಿ ದೊರಕಿದೆ.
ಹಲಸು ಮರದಲ್ಲೇ ಹಣ್ಣಾಗಲು ಬಿಡೋಣ.
ಪ್ರಾಣಿ ಪಕ್ಷಿಗಳ ಹಸಿವನ್ನಳಿಸೋಣ…!

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...

ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣ ಪತ್ತೆ

newsics.com ಜೈಪುರ: ಮಹಾರಾಷ್ಟ್ರದ ಬಳಿಕ ಇದೀಗ ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಒಂದೇ ಕುಟುಂಬದವರಲ್ಲಿ ಸೋಂಕು ಪತ್ತೆಯಾಗಿದ್ದು, ಇವರು ದಕ್ಷಿಣ ಆಫ್ರಿಕಾದಿಂದ ಬಂದವರು ಎಂದು ತಿಳಿದುಬಂದಿದೆ. ಮುಂಬೈನಲ್ಲಿ ಇಂದು ಒಂದೇ ದಿನ 7 ಜನರಿಗೆ...
- Advertisement -
error: Content is protected !!