Sunday, December 5, 2021

ಪರ್ಯಾಯ ಶಕ್ತಿ ಮತ್ತು ಮಹಿಳಾ ಸಬಲೀಕರಣ

Follow Us

ವಿಕೇಂದ್ರೀಕೃತ ನವೀಕರಿಸಬಹುದಾದ ಶಕ್ತಿಯ ತಂತ್ರಜ್ಞಾನದ ಮೂಲಕ ಅನೇಕ ಮಹಿಳೆಯರು ಇಂದು ಗ್ರಾಮೀಣ ಪ್ರದೇಶದಲ್ಲಿ ಕಿರು ಉದ್ಯಮಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿದ್ದಾರೆ. ಸೌರಚಾಲಿತ ರೊಟ್ಟಿಯಂತ್ರ, ಹೊಲಿಗೆಯಂತ್ರ, ಫ್ರಿಜ್, ಹಾಲುಕರೆಯುವ ಯಂತ್ರಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಗ್ರಾಮೀಣ ಆರ್ಥಿಕ ಚಟುವಟಿಕೆಗಳನ್ನು ಬಲಗೊಳಿಸಲು ಕಾರಣರಾಗಿದ್ದಾರೆ.
* ಸರಯೂ
response@134.209.153.225
newsics.com@gmail.com

ಕೊಪ್ಪಳ ಬಳಿಯ ಒಂದು ಕುಗ್ರಾಮ. ಅಲ್ಲಿ ಶಿಕ್ಷಣದ ವ್ಯವಸ್ಥೆ ಸರಿಯಿಲ್ಲದ ಕಾರಣ ಅನಸೂಯ ದಂಪತಿ ಆ ಊರನ್ನೇ ಬಿಟ್ಟು ಕೊಪ್ಪಳಕ್ಕೆ ಬರಲು ನಿರ್ಧರಿಸಿದರು. ಪತಿ ಕೊಪ್ಪಳದಲ್ಲೊಂದು ಸೆಕ್ಯುರಿಟಿ ಗಾರ್ಡ್ ಕೆಲಸ ಹುಡುಕಿಕೊಂಡರು. ಆದರೆ ಅನಸೂಯ ಅವರಿಗೆ ಕೆಲಸ ಸಿಗುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅನಸೂಯ ತನ್ನ ಮನೆಯ ಖರ್ಚನ್ನು ನಿಭಾಯಿಸಲು ಮತ್ತು ಮಕ್ಕಳ ಶಿಕ್ಷಣವನ್ನು ಪೂರ್ತಿಗೊಳಿಸಲು ಉದ್ಯೋಗ ಮಾಡಲೇ ಬೇಕಾದ ಅನಿವಾರ್ಯತೆ ಇತ್ತು. ಪತಿಯ ದುಡಿಮೆಯಿಂದ ಅವರ ಕುಟುಂಬ ಮುನ್ನಡೆಯುವುದು ಕಷ್ಟ ಇತ್ತು. ಇಂಥ ಹೊತ್ತಲ್ಲಿ ಅವರ ಕೈ ಹಿಡಿದದ್ದು ರೊಟ್ಟಿ ಉದ್ಯಮ.
ಉತ್ತರ ಕರ್ನಾಟಕದ ಪ್ರಮುಖ ಆಹಾರವಾದ ರೊಟ್ಟಿಯನ್ನೇ ಅವರು ಉದ್ಯಮವನ್ನಾಗಿಸಿಕೊಂಡರು. ಮೊದಲು ಅವರು ಕೈಯ್ಯಲ್ಲೇ ರೊಟ್ಟಿ ತಟ್ಟಿ ಅಕ್ಕಪಕ್ಕದ ಮನೆಗಳಿಗೆ, ನಂತರ ಊರಿಗೆಲ್ಲ ಕೊಡುತ್ತಿದ್ದರು. ಆದರೆ ಇದರಿಂದ ಅವರಿಗೆ ಆರೋಗ್ಯದ ಸಮಸ್ಯೆ ಕಾಡತೊಡಗಿತು. ಅತಿಯಾದ ದೈಹಿಕ ಶ್ರಮ, ಕೈ ನೋವು, ಬೆನ್ನುನೋವುಗಳಿಂದ ಅವರಿಗೆ ಬೇಡಿಕೆಗನುಗುಣವಾಗಿ ರೊಟ್ಟಿಗಳನ್ನು ಪೂರೈಸಲು ಆಗುತ್ತಿರಲಿಲ್ಲ. ಆಗ ಅವರಿಗೆ ತಿಳಿದದ್ದು ಸೌರಚಾಲಿತ ರೊಟ್ಟಿಯಂತ್ರದ ಕುರಿತು. ಇದಕ್ಕಾಗಿ ಅವರು ಖಾಸಗಿ ಬ್ಯಾಂಕ್ ಒಂದರಲ್ಲಿ ಸಣ್ಣಮಟ್ಟದ ಸಾಲವನ್ನು ಪಡೆದು ರೊಟ್ಟಿ ಯಂತ್ರವನ್ನು ಕೊಂಡರು. ಇದರಿಂದ ರೊಟ್ಟಿ ತಯಾರಿಸಿ ಸ್ಥಳೀಯ ಹೊಟೇಲ್‌ಗಳಿಗೆ ಮಾರುತ್ತಿದ್ದರು.
ಸೌರಚಾಲಿತ ರೊಟ್ಟಿ ಯಂತ್ರ:
ಕೈಯಿಂದ ರೊಟ್ಟಿ ಮಾಡುವುದರಿಂದ ದೈಹಿಕ ಶ್ರಮದ ಜತೆಗೆ ಕೆಲಸ ತುಂಬ ನಿಧಾನಗತಿಯಲ್ಲಿ ಸಾಗುತ್ತಿತ್ತು. ಆದರೆ ಸೋಲಾರ್ ರೊಟ್ಟಿ ಯಂತ್ರದಿಂದ ದೈಹಿಕ ಶ್ರಮವೂ ಕಡಿಮೆ. ಅದೇ ಅವಧಿಯಲ್ಲಿ ಹೆಚ್ಚಿನ ರೊಟ್ಟಿಗಳನ್ನು ತಯಾರಿಸಲು ಸಾಧ್ಯ. ಬೇಡಿಕೆಗನುಗುಣವಾಗಿ ರೊಟ್ಟಿಗಳನ್ನು ಪೂರೈಸಲು ಅವರಿಗೆ ಸಾಧ್ಯವಾಯಿತು. ಇದರಿಂದ ಅವರ ಉದ್ಯಮ ಬೆಳೆಯತೊಡಗಿತು. ಆದಾಯದಲ್ಲೂ ಹೆಚ್ಚಳವಾಯಿತು. ಇಂದು ಅವರ ಪತಿಯ ಆದಾಯಕ್ಕಿಂತಲೂ ನಾಲ್ಕುಪಟ್ಟು ಆದಾಯ ಅನಸೂಯ ಅವರದ್ದಾಗಿದೆ. ಈಗ ಉದ್ಯಮ ಬೆಳೆಯುತ್ತಿದ್ದಂತೆ ಊರಿನ ಇತರ ಮಹಿಳೆಯರಿಗೂ ಕೆಲಸ ನೀಡಿದ್ದಾರೆ.
ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಬೆಳೆಸುವಲ್ಲಿ ಮಹಿಳೆಯರು ತಮ್ಮ ಸಮುದಾಯಗಳಲ್ಲಿ ವಹಿಸುವ ಪಾತ್ರಕ್ಕೆ ಇದೊಂದು ಪ್ರಮುಖ ಉದಾಹರಣೆಯಾಗಿದೆ. ಇಷ್ಟೆಲ್ಲ ಆಗಿಯೂ ಅಸಮಾನತೆಯ ಹಲವಾರು ಅಂಶಗಳು ಸಮಾಜದಲ್ಲಿ ಇಂದಿಗೂ ಇವೆ.
ಇಂಥ ಅಡೆತಡೆಗಳ ನಡುವೆಯೇ ಮಹಿಳೆಯರಿಗೆ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವುದು ತುಂಬ ಮುಖ್ಯವಾದದ್ದು. ವಿಕೇಂದ್ರೀಕೃತ ನವೀಕರಿಸಬಹುದಾದ ಶಕ್ತಿಯ ತಂತ್ರಜ್ಞಾನದ ಮೂಲಕ ಅನೇಕ ಮಹಿಳೆಯರು ಇಂದು ಗ್ರಾಮೀಣ ಪ್ರದೇಶದಲ್ಲಿ ಕಿರು ಉದ್ಯಮಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿದ್ದಾರೆ. ಸೌರಚಾಲಿತ ರೊಟ್ಟಿಯಂತ್ರ, ಹೊಲಿಗೆಯಂತ್ರ, ಫ್ರಿಜ್, ಹಾಲುಕರೆಯುವ ಯಂತ್ರಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಗ್ರಾಮೀಣ ಆರ್ಥಿಕ ಚಟುವಟಿಕೆಗಳನ್ನು ಬಲಗೊಳಿಸಲು ಕಾರಣರಾಗಿದ್ದಾರೆ.
ಸೆಲ್ಕೋ ಸಂಸ್ಥೆಯ ಮಹತ್ವದ ಯೋಜನೆಯೆಂದರೆ ಮಹಿಳಾ ವ್ಯವಹಾರ ಬಂಧುಗಳು. ಅಂದರೆ ವುಮೆನ್ ಬಿಎ. ಇದು ಅನೇಕರಿಗೆ ಉದ್ಯೋಗವನ್ನು ನೀಡಿದೆ.
ಬಿಹಾರದ ಹಳ್ಳಿಯಾದ ಸಮಷ್ಟಿಪುರದಲ್ಲಿ ಸೆಲ್ಕೋ ಫೌಂಡೇಶನ್ ಮಹಿಳಾ ವ್ಯವಹಾರ ಬಂಧು ಯೋಜನೆಯನ್ನು ಪ್ರಾರಂಭಿಸಿತು. ಅಲ್ಲಿ ಸೌರಚಾಲಿತ ಜೀವನಾಧಾರಿತ ಯಂತ್ರಗಳು ಮತ್ತು ದೀಪಗಳನ್ನು ನೀಡಲು ಕಮಿಷನ್ ಆಧಾರದ ಮೆಲೆ ಮಹಿಳೆಯರು ರಾಯಭಾರಿಗಳಾಗಿ ಕೆಲಸಮಾಡುತ್ತಾರೆ. ಈ ಮಹಿಳೆಯರು ಅವರ ಸಮುದಾಯದ ಸ್ಥಿತಿಗತಿಗಳನ್ನು ಬದಲಾಯಿಸುವಲ್ಲಿ ಪ್ರಮುಖರಾಗಿರುತ್ತಾರೆ. ತಮ್ಮ ತಮ್ಮ ಸಂಪರ್ಕಗಳನ್ನು ಬಳಸಿಕೊಂಡು ಅವರು ಸೋಲಾರ್ ಕುರಿತು ಎಲ್ಲರಿಗೆ ತಲುಪಿಸುವ ಕೆಲಸ ಮಾಡುತ್ತಾರೆ.
ಇದೇ ಊರಿನ ಮಹಿಳಾ ವ್ಯವಹಾರ ಬಂಧುವಾದ ಗುಲ್ಷನ್ ಖತೂನ್, ಮೊದಲು ಸೋಲಾರ್ ದೀಪಗಳನ್ನು ತಮ್ಮ ಮನೆಗೇ ಹಾಕಿಸಿಕೊಂಡರು. ‘ನನ್ನ ಮನೆಯಲ್ಲೇ ಸೋಲಾರ್ ದೀಪಗಳನ್ನು ಹಾಕಿಸಿಕೊಂಡಾಗ ಎಲ್ಲರಿಗೂ ಆಶ್ಚರ್ಯ. ಕರೆಂಟ್ ಹೋದಾಗ ಅಕ್ಕಪಕ್ಕದ ಮನೆಗಳಲ್ಲಿ ಕತ್ತಲಿದ್ದರೆ ನಮ್ಮನೆಯಲ್ಲಿ ಮಾತ್ರ ಬೆಳಕಿರುತ್ತಿತ್ತು. ಇದ್ಹೇಗೆ ಸಾಧ್ಯ ಎಂದು. ಆಗ ಅವರಿಗೆ ಸೋಲಾರ್ ಕುರಿತು ಮನವರಿಕೆಯಾಯಿತು. ಈಗ ೨೫ ಮನೆಗಳಿಗೆ ಸೋಲಾರ್ ದೀಪಗಳನ್ನು ಹಾಕಿಸಿದೆ’ ಎನ್ನುತ್ತಾರೆ ಗುಲ್ಷನ್. ತಾವಿದ್ದ ಸ್ವಸಹಾಯ ಸಂಘಗಳಲ್ಲಿ ಸೋಲಾರ್ ಉತ್ಪನ್ನಗಳ ಕುರಿತು ಪ್ರಚುರಪಡಿಸಿದರು. ಜೊತೆಗೆ ಸ್ಥಳೀಯ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯವನ್ನೂ ಒದಗಿಸಿಕೊಟ್ಟರು. ಹೀಗೆ ಸೌರ ಶಕ್ತಿಯ ಕುರಿತು ಪ್ರಚುರಪಡಿಸುತ್ತಿರುವ ಗುಲ್ಷನ್ ಖತೂನ್ ಇದಕ್ಕೂ ಮುಂಚೆ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿದ್ದರು. ಆದರೆ ಈಗ ವುಮನ್ ಬಿಎ ಆದಮೇಲೆ ಆದಾಯವೂ ಹೆಚ್ಚಿದೆ ಜೊತೆಗೆ ಸಮಾಜದಲ್ಲಿ ನನ್ನ ಗೌರವವೂ ಹೆಚ್ಚಿದೆ ಎನ್ನುತ್ತಾರೆ.
ಇವರು ಸೋಲಾರ್ ತಂತ್ರಜ್ಞಾನವನ್ನು ಮಾತ್ರ ಪ್ರಚುರಪಡಿಸುತ್ತಿಲ್ಲ, ಬದಲಾಗಿ ತಳಸಮುದಾಯದವರಿಗೆ ಸೌರಚಾಲಿತ ಜೀವನಾಧಾರಿತ ಯಂತ್ರಗಳನ್ನು ಪರಿಚಯಿಸುವುದರ ಮೂಲಕ ಹಸಿರು ಉದ್ಯಮ ಮಾಡುವಂತೆ ಪ್ರೇರೇಪಣೆಯನ್ನೂ ನೀಡುತ್ತಿದ್ದಾರೆ.
ಅದೇರೀತಿ ಸಿದ್ದಾಪುರದ ಫಾತಿಮಾ ರಫೀಕ್, ಶಿರಸಿ ಬಳಿಯ ವಾನಳ್ಳಿ ಸುತ್ತಮುತ್ತ ಇರುವ ವಲಸೆ ಸಮುದಾಯದ ಒಟ್ಟು 80 ಕುಟುಂಬಗಳಿಗೆ ಸೋಲಾರ್ ದೀಪಗಳನ್ನು ನೀಡಿ ಅವರ ಬದುಕಿಗೆ ಬೆಳಕು ನೀಡಿದ್ದಾರೆ. ಅಲ್ಲಿಯವರೆಗೆ ಅಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಅವರೆಲ್ಲ ಕತ್ತಲಲ್ಲೇ ಬದುಕು ನೂಕಬೇಕಾಗಿತ್ತು. ಅವರ ಬದುಕಿಗೆ ಬೆಳಕು ನೀಡಿದ್ದಲ್ಲದೇ ವುಮನ್ ಬಿಎ ಆಗುವುದರ ಮೂಲಕ ತಮ್ಮ ಆದಾಯವನ್ನೂ ಹೆಚ್ಚಿಸಿಕೊಂಡಿದ್ದಾರೆ ಫಾತಿಮಾ.
ಇಂತಹ ಕ್ರಮಗಳು ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಲ್ಲದೆ ಪರಿಸರ ರಕ್ಷಣೆಗೂ ಕಾರಣವಾಗಿವೆ.

ಮತ್ತಷ್ಟು ಸುದ್ದಿಗಳು

Latest News

ಮುಂಬೈ ಏರ್‌ಪೋರ್ಟ್‌ನಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡೀಸ್‌ಗೆ ತಡೆ

newsics.com ಮುಂಬೈ: ಖ್ಯಾತ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ದುಬೈಗೆ ಹೊರಟಿದ್ದ ಜಾಕ್ವೆಲಿನ್ ಫೆರ್ನಾಂಡೀಸ್ ಅವರನ್ನು ಲುಕೌಟ್ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ತಡೆಯಲಾಗಿದೆ....

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 29,52,708 ಜನ ಗುಣಮುಖರಾಗಿದ್ದಾರೆ. 6 ಜನ ಸೋಂಕಿತರು...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...
- Advertisement -
error: Content is protected !!